Friday, September 26, 2008

ನೀರು: ನಗರ- ಹಳ್ಳಿಗಳ ನಡುವೆ ಏಕೀ ಏರುಪೇರು ?



ನಿಮಗೆ ಗೊತ್ತೇ ? ಇಂದು ಪ್ರಾಕೃತಿಕ ಸಂಪನ್ಮೂಲವೆಂಬುದು ಪಕ್ಕಾ ರಾಜಕೀಯ ವಸ್ತು. ಹೇಗೆ ನೋಡಿದರೂ ನೀರಿನಂಥ ಸಂಪನ್ಮೂಲ ಬಳಕೆಯೆಂಬುದು ಸಾಮಾಜಿಕ ಅಥವಾ ಸಾಮುದಾಯಿಕ ವಿಷಯವಾಗಬೇಕಿತ್ತು. ಹೆಚ್ಚೆಂದರೆ ಒಂದು ದೇಶದ ಆರ್ಥಿಕ ವಿಷಯವಾಗಿ ಪರಿಗಣನೆಯಾಗಬಹುದು. ಮೊನ್ನೆ ಮೊನ್ನೆಯವರೆಗೆ ಹಾಗೆಯೇ ಇತ್ತು ಸಹ.
ಆದರಿಂದು ಪರಿಸ್ಥಿತಿ ಬದಲಾಗಿದೆ. ನೀರಿನ ರಾಜಕೀಯ ಸರಕಾರವನ್ನೇ ಬದಲಿಸುತ್ತಿರುವುದು ಹೊಸದೇನಲ್ಲ. ತಮಿಳುನಾಡಿನಲ್ಲಿ ಚುನಾವಣೆ ಬಂತೆಂದರೆ ಒಂದಿಲ್ಲೊಂದು ಜಲ ವಿವಾದ ಹುಟ್ಟಿಕೊಳ್ಳುತ್ತದೆ. ಅದು ಇನ್ನೂ ಹೆಚ್ಚಾಗಿ ರಾಜತಾಂತ್ರಿಕ ವಿಷಯವಾಗಿ ಹೊರಹೊಮ್ಮಿದೆ. ಇದೇಕೆ ಹೀಗೆಂದು ಪ್ರಶ್ನಿಸಿಕೊಂಡರೆ ಮತ್ತದೇ ಬದಲಾದ ಭಾರತದ ಚಿತ್ರಣ ಕಣ್ಣ ಮುಂದೆ ಬಂದು ನಿಲ್ಲುತ್ತದೆ.
೧೯೪೭ರಲ್ಲಿ ಭಾರತದ ಜನಸಂಖ್ಯೆ ಸರಿಸುಮಾರು ೩೫ ಕೋಟಿಯಷ್ಟಿತ್ತು. ಇಂದು ಅದರ ಮೂರು ಪಟ್ಟು ಹೆಚ್ಚಳವಾಗಿದೆ. ಆದರೆ, ನೀರಿನಂಥ ಅಗತ್ಯ ಸೇವೆಯ ಬಳಕೆ ಪ್ರಮಾಣ ಐವತ್ತು ವರ್ಷಗಳಲ್ಲಿ ಏನಿಲ್ಲವೆಂದರೂ ಆಗಿನಕ್ಕಿಂತ ಹತ್ತು ಪಟ್ಟು ಹೆಚ್ಚಿದೆ. ಸಂಪನ್ಮೂಲ ಮಾತ್ರ ಹಿಮ್ಮುಖವಾಗಿ ಸಾಗಿದೆ. ಹೀಗಾಗಿ, ಕಾಳಜಿಯಲ್ಲಿ, ಮನೋಭಾವದಲ್ಲಿ ಬದಲಾವಣೆ ಎಂಬುದು ಕಾಣಲೇ ಇಲ್ಲ. ಬದಲಾಗಿ ಹೊಸ ಹೊಸ ಫ್ಯಾಷನ್‌ಗಳು ಹುಟ್ಟಿಕೊಂಡಿವೆ. ನೀರಿಗೊಂದು ದಿನಾಚರಣೆ, ಪರಿಸರಕ್ಕೊಂದು ಉತ್ಸವ... ಹೀಗೆ ಆಡಂಬರಗಳೇ ಅಂಬರಕ್ಕೇರುತ್ತಿವೆ.
ಭಾವನಾತ್ಮಕ ವಿಚಾರಗಳೇನೇ ಇರಲಿ, ನೀರಿನ ವಿಚಾರದಲ್ಲಿ ಭಾರತದ ಇಂದಿನ ವಾಸ್ತವ ಮಾತ್ರ ಅತ್ಯಂತ ಕರಾಳ ಚಿತ್ರಣವನ್ನು ಕಟ್ಟಿಕೊಡುತ್ತದೆ. ಒಂದೆಡೆ ಮೀತಿಮೀರಿ ಬೆಳೆದಿರುವ ಜನಸಂಖ್ಯೆ, ಅದಕ್ಕನುಗುಣವಾಗಿ ಬದಲಾಗಿರುವ ನಗರಗಳು, ಹೆಚ್ಚಿರುವ ಕೈಗಾರಿಕೆ, ಕೃಷಿ ಪ್ರದೇಶಗಳು, ಪರಿಣಾಮವಾಗಿ ಉದ್ಭವಿಸಿರುವ ಮೂಲ ಸೌಲಭ್ಯಗಳ ಕೊರತೆ. ಇನ್ನೊಂದೆಡೆ ಈ ಎಲ್ಲ ಸಮಸ್ಯೆಗಳನ್ನು ಮರೆತು ‘ಭರವಸೆಗಳ ಲೋಕ’ವನ್ನಷ್ಟೇ ನಿರ್ಮಿಸುತ್ತಿರುವ ಸರಕಾರ. ವಸಾಹತು ಧೋರಣೆಯ ನೆರಳಲ್ಲೇ ಬೆಳೆದ ಭಾರತಕ್ಕೆ ಖಂಡಿತಾ ಇಂದಿನ ಪರಿಸ್ಥಿತಿಯ ಪರಿಣಾಮವಾಗಲೀ, ಮುಂದಾಗಬಹುದಾದ ಅನಾಹುತಗಳ ಕಲ್ಪನೆಯಾಗಲೀ ನಿಲುಕದ ವಿಷಯವೇನಲ್ಲ.
ಇಲ್ಲಿ ನಾವುಣ್ಣುವ ಅನ್ನದ ತುತ್ತಿನ ಗಾತ್ರ ಎಷ್ಟಿರಬೇಕೆಂದು ಹೇಳುವುದರಿಂದಾರಂಭಿಸಿ ನಮ್ಮ ವಿದೇಶಾಂಗ ನೀತಿ ಯಾವ ರೀತಿ ಮಾರ್ಪಾಡು ಹೊಂದಬೇಕೆನ್ನುವವರೆಗೆ ಎಲ್ಲ ವಿಷಯಗಳನ್ನು ವಿಶ್ವಬ್ಯಾಂಕ್ ಅಥವಾ ಅದರ ಹಿಂದಿರುವ ಅಮೆರಿಕ ನಿರ್ಧರಿಸುವ ಮಟ್ಟಿಗೆ ನಾವು ದಾಸ್ಯಕ್ಕೆ ಒಳಗಾಗಿ ಬಿಟ್ಟಿದ್ದೇವೆ.
ಭೂಮಿ ಹುಟ್ಟಿದಾಗಿನಿಂದ ೧೯೧೭ರವರೆಗೆ ಯಾವ ಪ್ರಮಾಣದ ಕಾಡು ನಾಶವಾಗಿತ್ತೋ ಅದರ ಎರಡು ಪಟ್ಟು ಕಾಡು ನಂತರದ ೫೦ ವರ್ಷಗಳಲ್ಲಿ ನಾಶವಾಗಿದೆ. ಹಾಗಾದರೆ ಈ ಪ್ರಮಾಣದಲ್ಲಿ ಸಂಪನ್ಮೂಲದ ನಾಶಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ದೊರಕುವ ಉತ್ತರ ಇನ್ನೂ ಆಶ್ಚರ್ಯ ಹುಟ್ಟಿಸುತ್ತದೆ.
ಈ ಭೂಮಿಯ ಮೇಲೆ ನಡೆದ ಎರಡು ಮಹಾ ಯುದ್ಧಗಳು ಜಗತ್ತಿನ ಚಿತ್ರಣವನ್ನೇ ಬದಲಿಸಿದವು. ಈ ಸಂದರ್ಭದಲ್ಲಿ ಕೈಗಾರಿಕೆ ನಿರೀಕ್ಷೆ ಮೀರಿ ಬೆಳೆಯಿತು. ಆಯುಧಗಳಿಗಾಗಿ ಕಬ್ಬಿಣ ಮತ್ತು ಮರದ ಬಳಕೆಯೂ ಹೆಚ್ಚಿತು. ಇದು ಕಾಡುನಾಶಕ್ಕೆ ಮೂಲವಾಯಿತು. ಇಲ್ಲಿಂದಲೇ ನೈಸರ್ಗಿಕ ಸಂಪನ್ಮೂಲಗಳ ಕೊರತೆಯೂ ಮನುಷ್ಯನನ್ನು ಕಾಡಲಾರಂಭಿಸಿತು. ಮತ್ತು ಇಂಥ ಕೊರತೆಯ ಬಳಿಕವೇ ಸಮುದಾಯದ ಸಂಪನ್ಮೂಲವಾಗಿದ್ದ ನೀರಿನಂಥ ವಿಷಯ ರಾಜಕೀಯ, ಆರ್ಥಿಕ ಮಹತ್ವವನ್ನು ಪಡೆದುಕೊಂಡಿತು.
ಇಂದು ನೀರು ಪೂರೈಕೆಗೆ ಮಾನದಂಡ ನಗರ ಮತ್ತು ಅಲ್ಲಿನ ಹಣವಂತರು. ಬೆಂಗಳೂರಿನಂಥ ನಗರದಲ್ಲಿ ಒಂದು ದಿನ ನೀರು ಬರದಿದ್ದರೆ ಇಡೀ ಸರಕಾರವೇ ಕಾಳಜಿ ತೋರುತ್ತದೆ. ಅದರಲ್ಲೂ ಪ್ರತಿಷ್ಠಿತ ಬಡಾವಣೆಗಳಿಗೆ ನೀರು ಪೂರೈಕೆಯಾಗದಿದ್ದರೆ ಆಡಳಿತ ಕೇಂದ್ರವೇ ಅಲುಗಾಡುತ್ತದೆ. ಹಳ್ಳಿಗಳಲ್ಲಿ ವಾರಗಟ್ಟಲೆ ಮಳೆ ಬಾರದೇ ಬೆಳೆಗಳು ಒಣಗುತ್ತಿದ್ದರೂ ಅದು ಮಾಮೂಲಿನ ಸಂಗತಿಯಾಗಿ ಕಾಣುತ್ತದೆ.
ಹಣವಂತರನ್ನೇ ಮಾನದಂಡವಾಗಿಟ್ಟುಕೊಂಡು ಸಂಪನ್ಮೂಲ ಹಂಚಿಕೆ ಮಾಡುವ ನಮ್ಮ ಪ್ರವೃತ್ತಿ ಖಂಡಿತಾ ಅಪಾಯಕಾರಿ. ನೀವು ಬೇಕಿದ್ದರೆ ನೋಡಿ, ಹಣಕೊಟ್ಟರೆ ಎಷ್ಟು ಬೇಕಾದರೂ ನೀರು ಬಳಸಬಹುದು, ಅದಿಲ್ಲದಿದ್ದರೆ ನೀರು ಸಿಗದು ಎಂಬ ಸ್ಥಿತಿ ನಗರಗಳಲ್ಲಿದೆ. ನಮ್ಮ ಇಂಥ ಸಂಪನ್ಮೂಲ ಹಂಚಿಕೆ ನೀತಿ ಕೂಡ ರಾಜತಾಂತ್ರಿಕ ಹುನ್ನಾರದ ಭಾಗವೇ. ಅಮೆರಿಕ ಅದರ ಸೂತ್ರಧಾರ. ಹೀಗಾಗಿ, ವಿಶ್ವಬ್ಯಾಂಕ್, ವಿಶ್ವವ್ಯಾಪಾರ ಸಂಸ್ಥೆಗಳಂಥ ಏಜೆಂಟರ ಮೂಲಕ ಸಾಲ ಹಂಚುವ ಅದು ಸಾಲ ಪಡೆದ ದೇಶಗಳನ್ನು ಜಾಗತೀಕರಣದ ‘ತದ್ರೂಪಿ ತಯಾರಿಕಾ ಉಪಕರಣ’ವಾಗಿ ಮಾರ್ಪಡಿಸುತ್ತದೆ. ಇಂಥ ತದ್ರೂಪಿ ವೇದಿಕೆಯೇ ನೀರಿನ ಖಾಸಗೀಕರಣ. ಮತ್ತೆ ಇವೆಲ್ಲವೂ ನಗರ ಕೇಂದ್ರಿತ.
ಒಂದು ನಿಮಿಷ ಯೋಚಿಸಿ. ನಮ್ಮ ಗ್ರಾಮೀಣ ಪ್ರದೇಶದ, ರೈತ ಸಮುದಾಯದ ನೀರಿನ ಬಳಕೆ ಪ್ರಮಾಣದಲ್ಲಿ ಇನ್ನೂ ಹೇಳಿಕೊಳ್ಳುವ ಯಾವುದೇ ಬದಲಾವಣೆಗಳು ಆಗಿಲ್ಲ. ಹಾಗಾದರೆ ಬದಲಾಗಬೇಕಾದ್ದು ನಮ್ಮ ಮಟ್ಟಿಗೆ ನಿಜವಾಗಲೂ ಯಾವುದು ? ಆದರೆ ಬದಲಾದದ್ದು ಯಾವುದು ? ಕೃಷಿ ಅವಲಂಬಿತ ಪ್ರದೇಶದ ಬದಲಿಗೆ ಬದಲಾವಣೆಯೆಂಬುದು ಉತ್ಪಾದನಾ-ಸೇವಾ ವಲಯದ ಕಡೆಗೆ ಪ್ರವಹಿಸುತ್ತಿದೆ ಎಂಬುದು ಸತ್ಯ. ಅಲ್ಲಿ ಹಳ್ಳಿಗಳಿಗೆ ನೀರು ಬೇಕಿದ್ದಾಗಲೇ ಇಲ್ಲಿ ನಗರಗಳಲ್ಲಿ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಅನುಮಾನವೇ ಇಲ್ಲ. ಭಾರತದಲ್ಲಿ ನೀರಿನ ವಿಷಯದಲ್ಲಿ ಒಂದಷ್ಟು ಬದಲಾವಣೆ, ಕ್ರಾಂತಿ ಆಗಲೇಬೇಕಿದೆ. ಆದರೆ, ಅದು ಮೂಲಭೂತವಾಗಿ ನಮ್ಮ ಮನೋಭಾವದಲ್ಲಾಗಬೇಕಾದ್ದು. ನೀರನ್ನು ಪೋಲು ಮಾಡುವ ನಮ್ಮ ನಿರ್ಲಕ್ಷ್ಯತನದಲ್ಲಿ ಆಗಬೇಕಾದದ್ದು. ಸ್ವಚ್ಛ, ನಿರ್ದಿಷ್ಟ ನೀರು ಪೂರೈಕೆಯ ಶಿಸ್ತಿನಲ್ಲಿ ಆಗಬೇಕಿರುವುದು. ಆಗ ಮಾತ್ರ ನೀರಿನ ರಾಜಕೀಯ ನಿಲ್ಲಿಸಿ, ನಮ್ಮ ನೀರನ್ನು ನಾವೇ ಕುಡಿಯಲು ಬೇರೆಯವರ ನೀತಿ ನಿರೂಪಣೆಗಾಗಿ ಕಾಯಬೇಕಾದ ಪರಿಸ್ಥಿತಿಯಿಂದ ಹೊರಬರಲು ಸಾಧ್ಯ.

‘ಲಾಸ್ಟ್ ’ಡ್ರಾಪ್:
ಮಳೆಯನ್ನು ದೇವತೆಯೆಂದು ಪೂಜಿಸುವ ಈ ದೇಶದಲ್ಲಿ ೨ ಕೋಟಿಗೂ ಹೆಚ್ಚು ಬಾವಿಗಳು, ಕೊಳವೆ ಬಾವಿಗಳು ನಮ್ಮ ಕೃಷಿ ಸಾಮ್ರಾಜ್ಯವನ್ನು ಆಳುತ್ತಿವೆ. ಹೀಗಿದ್ದೂ ನಮ್ಮ ದೇವರು ಮುನಿಸಿಕೊಳ್ಳದೇ ಇದ್ದಾನೆಯೇ ?

Thursday, September 18, 2008

ಮಲಿನ ಜಲ, ಇವರ ಬೆಳವಣಿಗೆಯ ಮೂಲ


ಅದೊಂದು ಕ್ರೀಡಾಕೂಟ. ಸ್ಥಳೀಯ ಮಟ್ಟದಿಂದ ಗೆದ್ದು, ರಾಜ್ಯ ಪ್ರಶಸ್ತಿಗಾಗಿ ನಾನಾ ಪ್ರೌಢಶಾಲೆಗಳ ವಿದ್ಯಾರ್ಥಿಗಳ ತಂಡಗಳು ಕಾದಾಟಕ್ಕೆ ಅಣಿಯಾಗಿದ್ದವು. ಗ್ರಾಮೀಣ ಪ್ರದೇಶದ ಶಾಲೆಗಳಿಂದ ಬಂದಿದ್ದ ಹಲವು ವಿದ್ಯಾರ್ಥಿಗಳು ಅಲ್ಲಿದ್ದರು. ಇನ್ನೇನು ರನ್ನಿಂಗ್ ರೇಸ್‌ಗೆ ಚಾಲನೆ ನೀಡಬೇಕೆನ್ನುವಷ್ಟರಲ್ಲಿ ... ಗುಸುಗುಸು ಆರಂಭವಾಯಿತು. ಜಿಲ್ಲೆಯೊಂದರಿಂದ ಬಂದಿದ್ದ ಶಿಕ್ಷಕರೊಬ್ಬರು ಆಯೋಜಕರ ಬಳಿ ಬಂದು ದೂರನ್ನೂ ನೀಡಿಬಿಟ್ಟರು.
ಅವರ ಆಕ್ಷೇಪ ಇಷ್ಟೇ. ‘ಕೆಲ ನಗರ ಪ್ರದೇಶದ ಶಾಲೆಗಳನ್ನು ಪ್ರತಿನಿಸುತ್ತಿದ್ದ ತಂಡದಲ್ಲಿ ದೊಡ್ಡ ಮಕ್ಕಳಿದ್ದಾರೆ. ಇದರಲ್ಲೇನೋ ಮೋಸವಿದೆ. ಅವರ ವಯಸ್ಸಿನ ಬಗ್ಗೆ ದೃಢೀಕರಣ ದೊರೆತ ಹೊರತೂ ನಮ್ಮ ಮಕ್ಕಳು ಸ್ಪರ್ಧೆಗಿಳಿಯುವುದಿಲ್ಲ....’
ಅಲ್ಲೊಂದು ಪುಟ್ಟ ಪ್ರಹಸನವೇ ನಡೆದು ಹೋಯಿತು. ಕೊನೆಗೆ ನಗರ ಶಾಲೆಗಳದ್ದೊಂದು, ಗ್ರಾಮೀಣ ಶಾಲೆಗಳದ್ದೊಂದು-ಹೀಗೆ ಎರಡು ಗುಂಪುಗಳೇ ಆಗಿ ವಾಕ್ ಸಮರಕ್ಕಿಳಿದರು. ಕೊನೆಗೂ ಶಾಲಾ ದಾಖಲೆಗಳನ್ನೆಲ್ಲ ಪರಿಶೀಲಿಸಿದ ಬಳಿಕ ಎಲ್ಲರೂ ಪ್ರೌಢಶಾಲಾ ಹಂತದ ಮಕ್ಕಳೇ ಎಂಬುದನ್ನು ದೃಢಪಡಿಸಿಕೊಂಡು ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಆದರೂ ಗ್ರಾಮೀಣ ತಂಡದಲ್ಲಿ ಸಂಶಯ ಇದ್ದೇ ಇತ್ತು. ನಗರ ಶಾಲೆಯ ಮಕ್ಕಳೆಲ್ಲ ನೋಡಲು ದೊಡ್ಡವರಂತೆ ಕಾಣುತ್ತಿದ್ದಾರೆ. ದೈಹಿಕ ಬೆಳವಣಿಗೆಗಳೂ ಅವರಲ್ಲಿ ಹೆಚ್ಚಿವೆ. ನಮ್ಮ ಮಕ್ಕಳು ಇನ್ನೂ ಪೀಕಲು. ಒಂದೇ ವಯಸ್ಸಿನ ಎರಡು ಪ್ರದೇಶಗಳ ಮಕ್ಕಳಲ್ಲಿ ಇಷ್ಟೊಂದು ವ್ಯತ್ಯಾಸವಿರಲು ಹೇಗೆ ಸಾಧ್ಯ...?
ನಿಜವಾಗಿ ಅದರಲ್ಲಿ ಮಕ್ಕಳ ತಪ್ಪೇನೂ ಇರಲಿಲ್ಲ. ನಗರದ ಹೆಣ್ಣು ಮಕ್ಕಳು ಹಾಗೆ ಮಿತಿ ಮೀರಿ ಬೆಳೆಯಲು ಕಾರಣವಾದದ್ದು ಅವರು ಕುಡಿಯುತ್ತಿರುವ ನೀರು !
ನೀರಿಗೂ, ದೇಹಗಾತ್ರಕ್ಕೂ ಎತ್ತಣಿಂದೆತ್ತಣ ಸಂಬಂಧ ? ನಗು ತರಿಸುವ ವಿಚಾರದಂತೆ ಕಂಡರೂ ಇದು ಸತ್ಯ. ನಗರ ಪ್ರದೇಶದಲ್ಲಿ ನಾವು ಬಳಸುತ್ತಿರುವ ಮಲಿನ ನೀರು ಮುಂದಿನ ತಲೆಮಾರಿನ ಅಡ್ಡಾದಿಡ್ಡಿ ಬೆಳವಣಿಗೆಗೆ ಕಾರಣವಾಗುತ್ತಿದೆ. ಬೇಕಿದ್ದರೆ ನೋಡಿ. ಪಟ್ಟಣ ಪ್ರದೇಶದಲ್ಲಿನ ಅದರಲ್ಲೂ ಬೆಂಗಳೂರಿನಂಥ ಬೃಹತ್ ನಗರದ ಹೆಣ್ಣುಮಕ್ಕಳು ವಯಸ್ಸಿಗೆ ಮೀರಿ ದೈಹಿಕ ಬೆಳವಣಿಗೆಗಳನ್ನು ತೋರುತ್ತಿದ್ದಾರೆ. ನಗರ ಪ್ರದೇಶದಲ್ಲಿ ಸಿಗುತ್ತಿರುವ ಪೌಷ್ಟಿಕ ಆಹಾರ, ಸೊಫಿಸ್ಟಿಕೇಟೆಡ್ ಜೀವನಕ್ರಮಗಳು ಇದಕ್ಕೆ ಕಾರಣವಾಗುತ್ತಿದೆ ಎಂಬುದರ ಜತೆಗೆ ಅವರು ಕುಡಿಯುತ್ತಿರುವ ನೀರು ಅವರನ್ನು ಹಿಗ್ಗಾಮುಗ್ಗ ಹಿಗ್ಗಿಸುತ್ತಿದೆ ಎಂಬುದು ಇತ್ತೀಚೆಗೆ ಆತಂಕಕ್ಕೆ ಕಾರಣವಾಗುತ್ತಿದೆ.
ತಜ್ಞರು ಹೇಳುವ ಪ್ರಕಾರ ನಗರ ಪ್ರದೇಶಗಳಲ್ಲಿ ಕೆರೆಗಳು, ಚರಂಡಿ, ಕೊಳಚೆ ನೀರು ಹರಿಯುವ ದೊಡ್ಡ ದೊಡ್ಡ ಮೋರಿಗಳ ಪಕ್ಕ ಬೆಳೆಯುವ ಜೊಂಡುಗಳಲ್ಲಿ ಹೆಣ್ಮಕ್ಕಳಲ್ಲಿ ದೈಹಿಕ ಬೆಳವಣಿಗೆಯನ್ನು ಪ್ರಚೋದಿಸುವ ಹಾರ್ಮೋನುಗಳಿಗೆ ಪೂರಕ ಅಂಶಗಳಿವೆ. ಇಂಥ ಹುಲ್ಲುಗಳನ್ನು ತಿನ್ನುವ ಹಸುವಿನ ಹಾಲು, ಇಂಥ ಕಲುಷಿತ ನೀರು ಹಾಯಿಸಿ ಬೆಳೆ ಯುವ ಸೊಪ್ಪು, ತರಕಾರಿಗಳನ್ನು ಸೇವಿಸುವುದರಿಂದ ಹೆಣ್ಣಮಕ್ಕಳು ವಯಸ್ಸಿಗಿಂತ ಹೆಚ್ಚು ಬೆಳೆಯು ತ್ತಿದ್ದಾರೆ ಎನ್ನುತ್ತದೆ ಸಂಶೋಧನೆ.
ನಗರ ತ್ಯಾಜ್ಯಗಳಲ್ಲಿ ಸೇರಿರುವ ಕ್ರೋಮಿಯಂಗಳು, ಬ್ಯಾಟರಿಯಲ್ಲಿನ ರಾಸಾಯನಿಕಗಳು, ಕಂಪ್ಯೂಟರ್ ಬಿಡಿ ಭಾಗಗಳಿಂದ ಹೊರಹೊ ಮ್ಮುವ ರಾಸಾಯನಿಕ ಪ್ರಕ್ರಿಯೆಗಳು ಈ ರೀತಿಯ ‘ಸೊಂಪಾದ ’ ಬೆಳೆಗೆ ಕಾರಣವಾಗುತ್ತಿದೆ.
ಜೈವಿಕ ರೀತಿಯ ಕೃಷಿ ನಮ್ಮ ಪರಂಪರೆ ಎಂಬು ದನ್ನು ಮರೆತಿರುವ ನಾವು ‘ದಿಢೀರ್’ ಲಾಭಗಳಿಕೆಯ ಗುರಿ ತಲುಪಲು ಇಂಥ ವಾಮ ಮಾರ್ಗ ಹಿಡಿಯುತ್ತಿದ್ದೇವೆ. ಬೆಳೆಗಳಿಗೆ ರಾಸಾಯನಿಕ ಪೂರೈಸುವುದರ ಜತೆಗೆ ನಗರ ಪ್ರದೇಶದ ಒಳಚರಂಡಿ ನೀರು ಬಳಸಿ ಆರು ತಿಂಗಳ ಬೆಳೆಯನ್ನು ನಲವತ್ತೇ ದಿನದಲ್ಲಿ ಪಡೆಯಲು ಹವಣಿಸುತ್ತಿರುವ ಪರಿಣಾಮ ವಿದು. ಸ್ವಚ್ಛ, ಸುಸ್ಥಿರ ಕೃಷಿಯ ಬದಲಿಗೆ ‘ಆರ್ಥಿಕತೆ’ ಯ ಸಂಶೋಧನೆಗಳು ಪುರುಷರನ್ನು ಒಂದೆಡೆ ನಿರ್ವೀರ್‍ಯರನ್ನಾಗಿಸುತ್ತಿದ್ದರೆ, ಮಹಿಳೆಯರಿಗೆ ಅನಗತ್ಯ ಕೊಬ್ಬನ್ನು ತಂದೊಡ್ಡುತ್ತಿದೆ.
ಮಲ-ಮೂತ್ರಗಳು ಅತ್ಯುತ್ತಮ ಜೈವಿಕ ಸಾರವೆಂಬುದು ಎಷ್ಟು ಸತ್ಯವೋ ಜಲಮಾಲಿನ್ಯದಲ್ಲಿ ಇವು ತೀರಾ ಗಣನೀಯ ಪಾತ್ರ ವಹಿಸುತ್ತಿವೆ ಎಂಬುದೂ ಸತ್ಯ. ವಿಶ್ವಸಂಸ್ಥೆಯ ತೀರಾ ಇತ್ತೀಚೆಗಿನ ಅಧ್ಯಯನವೊಂದರ ಪ್ರಕಾರ ಅಸಮಪರ್ಕಕ ಶೌಚಾಲಯಗಳಿಂದ ಆಗುತ್ತಿರುವ ಜಲಮಾಲಿನ್ಯದ ಪರಿಣಾಮ, ಅಭಿವೃದ್ಧಿ ಹೊಂದುತ್ತಿರುವ ದೇಶ ಗಳಲ್ಲಿ ಪ್ರತಿ ವರ್ಷ ಸರಾಸರಿ ಐದು ದಶಲಕ್ಷ ಮಂದಿ ಅಕಾಲ ಮರಣಕ್ಕೆ ತುತ್ತಾಗುತ್ತಿದ್ದಾರೆ.
೨೦೦೨ರ ವಿಶ್ವ ಜನಸಂಖ್ಯೆಯ ಶೇ.೪೬ರಷ್ಟು (ಸುಮಾರು ೨.೮೫ ಶತಕೋಟಿ) ಮಂದಿಗೆ ಮೂಲ ಭೂತ ಸೌಕರ್‍ಯಗಳಲ್ಲೊಂದಾದ ನಿರ್ಮಲ ಶೌಚಾಲಯದ ಪರಿಚಯ ಇಲ್ಲ. ದಕ್ಷಿಣ ಏಷ್ಯಾದ ೫೦ ಕೋಟಿ ಮಂದಿಯೂ ಇದರಲ್ಲಿ ಸೇರಿದ್ದಾರೆ ಎನ್ನು ತ್ತದೆ ‘ಲಿಟ್ಲ್ ಗ್ರೀನ್ ಡೇಟಾ ಬುಕ್’ನ ಸಮೀಕ್ಷೆ.
ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಶತಮಾನದ ಅಭಿವೃದ್ಧಿಯ (ವಿಶ್ವಸಂಸ್ಥೆ ನಿಗದಿಪಡಿಸಿದ ಪ್ರಮಾಣದನ್ವಯ) ಗುರಿಯನ್ನು ಖಂಡಿತಾ ಅಭಿವೃದ್ಧಿ ಪರ ದೇಶಗಳಿಂದ ಮುಟ್ಟಲಾಗದು ಎಂದು ಸಮೀಕ್ಷೆಯಲ್ಲಿ ಸುಸ್ಪಷ್ಟವಾಗಿ ತಿಳಿಸಲಾಗಿದೆ. ವಿಶ್ವದ ಅಭಿವದ್ಧಿ ಪರ ದೇಶಗಳ ಪೈಕಿ (ಭಾರತ ಸೇರಿದಂತೆ) ೫೦ಕ್ಕೂ ಹೆಚ್ಚು ದೇಶಗಳು ಇಂಥ ಸಮಸ್ಯೆಯ ಜತೆ ಹೆಣಗುತ್ತಿವೆ. ಇಂಥ ಪ್ರವೃತ್ತಿಯಿಂದ ಹೊರಬರುವುದು ಅವುಗಳ ಪಾಲಿಗೆ ತೀರಾ ಅಗತ್ಯ. ಈ ನಿಟ್ಟಿನಲ್ಲಿ ನೀರು ಪೂರೈಕೆ ಹಾಗೂ ಒಳಚರಂಡಿ ಸೌಕರ್‍ಯ ಕಲ್ಪಿಸಲು ಈವರೆಗಿದ್ದ ಯೋಜನಾ ವೆಚ್ಚ ವನ್ನು ೧೫ ಶತಕೋಟಿ ಅಮೆರಿಕನ್ ಡಾಲರ್‌ನಿಂದ ೩೦ ಶತಕೋಟಿ ಅಮೆರಿಕನ್ ಡಾಲರ್‌ಗೆ (ಸುಮಾರು ೭೫ ಸಾವಿರದಿಂದ ೧,೫೦,೦೦೦ ಕೋಟಿ ರೂ.) ಹೆಚ್ಚಿಸುವಂತೆ ಈ ದೇಶಗಳಿಗೆ ವಿಶ್ವಸಂಸ್ಥೆ ಸೂಚಿಸಿದೆ. ಶೌಚಾಲಯಗಳ ಗುಣಮಟ್ಟ, ಸಾಮರ್ಥ್ಯ ಹಾಗೂ ಸುಸ್ಥಿರತೆಯ ಕೊರತೆಯೇ ಜಲಮಾಲಿನ್ಯಕ್ಕೆ ಅತ್ಯಂತ ಪ್ರಮುಖ ಕಾರಣವೆಂದು ಅಧ್ಯಯನ ಬೊಟ್ಟು ಮಾಡಿದೆ. ಇದಕ್ಕಾಗಿ ಸಂವಿಧಾನಾತ್ಮಕ ನೀತಿ ನಿರೂ ಪಣೆಗಳಿಗೆ ತಿದ್ದುಪಡಿ ತರಲೇಬೇಕೆಂದು ವಿಶ್ವಸಂಸ್ಥೆ ಸೂಚಿಸಿರುವುದು ಸಮಾಧಾನದ ಸಂಗತಿ.
೨೦೦೩ರಲ್ಲಿ ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ನಡೆಸಿದ ಸಮೀಕ್ಷೆಯೂ ಇದನ್ನು ಹೊರ ಗೆಡವಿದೆ. ಭಾರತ ವಾರ್ಷಿಕ ೪೬ ಸಾವಿರ ಟನ್ ಕೀಟನಾಶಕ ಬಳಸುತ್ತಿರುವಾಗ ಇಲ್ಲಿನ ಕೊಳವೇ ಬಾವಿ, ನದಿಗಳಿಂದ ದೊರೆಯುವ ನೀರು ಕೀಟ ನಾಶಕ ಮುಕ್ತ ವಾಗಿರಬೇಕೆಂದರೆ ಹೇಗೆ ಸಾಧ್ಯ ?
ಆಶ್ಚರ್ಯದ ಸಂಗತಿಯೆಂದರೆ ಇಷ್ಟಾದರೂ ಜಲಮಾಲಿನ್ಯಕ್ಕಾಗಿ ಈವರೆಗೆ ಯಾರಿಗೂ ಶಿಕ್ಷೆಯಾಗಿಲ್ಲ. ಹಾಗೆಂದು ಈ ಸಂಬಂಧ ಕಾನೂನೇ ಇಲ್ಲವೆಂದಲ್ಲ. ೧೯೭೪ರಲ್ಲೇ ರಾಜ್ಯದಲ್ಲಿ ಜಲಮಾಲಿನ್ಯ ಹಾಗೂ ನಿಯಂತ್ರಣ ಕಾಯಿದೆ ಜಾರಿಗೊಳಿಸಲಾಗಿದೆ. ಇದರನ್ವಯ ೬ ವರ್ಷಗಳ ಸೆರೆ ಹಾಗೂ ಸಶ್ರಮ ಶಿಕ್ಷೆ ವಿಸಬಹುದು.
ಕಾರ್ಖಾನೆಗಳಿಂದಷ್ಟೇ ಜಲಮಾಲಿನ್ಯವಾಗುತ್ತಿದೆ ಎನ್ನಲಾಗದು. ಏಕೆಂದರೆ ಕಾರ್ಖಾನೆ ತ್ಯಾಜ್ಯಗಳಲ್ಲಿ ಶೇ.೨೦ ಭಾಗ ರಾಸಾಯನಿಕಗಳು ಮಾತ್ರ ನೀರು ಸೇರುತ್ತದೆ. ಉಳಿದ ಶೇ.೮೦ರಷ್ಟು ಕಲ್ಮಶಗಳು ನಗರವಾಸಿಗಳು ಹಾಗೂ ಅವರ ರಾಸುಗಳು ಉತ್ಪತ್ತಿ ಮಾಡುವ ಮಲಮೂತ್ರಗಳಿಂದ ಬಂದಂಥ ವುಗಳು. ಇಂದಿಗೂ ಬೆಂಗಳೂರಿನ ಶೇ.೩೦ ಭಾಗ ಬಡಾವಣೆಗಳಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಸೋಪ್ ಪಿಟ್‌ಗಳ ನಿರ್ಮಾಣ ಅನಿವಾರ್‍ಯ. ಇಂಥ ಲಕ್ಷಾಂತರ ಸೋಪ್‌ಪಿಟ್‌ಗಳಿಂದ ಬಸಿಯುವ ಮಾಲಿನ್ಯ ನೆಲದಾಳಕ್ಕೆ ಇಳಿದು ಭೂಜಲವನ್ನು ಕುಲಷಿತಗೊಳಿಸುತ್ತಿದೆ. ಅಸಂಸ್ಕರಿತ ನೀರು ಕೆರೆಗಳಲ್ಲಿ ನಿಂತು ಇಂಗುತ್ತಿದೆ. ಡೈಲ್ಯೊಷನ್ ವಿಧಾನ ಸ್ವಲ್ಪಮಟ್ಟಿಗೆ ನೀರಿನಲ್ಲಿನ ನೈಟ್ರೇಟ್ ಅಂಶವನ್ನು ಬೇರ್ಪಡಿಸುತ್ತವೆಯಾದರೂ, ಇದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ.
ಈ ನಿಟ್ಟಿನಲ್ಲಿ ನಾವು ಜರ್ಮನಿಯನ್ನು ಶ್ಲಾಘಿಸಲೇಬೇಕು. ಅಲ್ಲಿ ಮೂರೇ ಲೀಟರ್ ನೀರು ಬಳಸುವ ಪಿಂಗಾಣಿಯ ಶೌಚಪಾತ್ರೆ ಅಭಿವೃದ್ಧಿಗೊಳಿಸಲಾಗುತ್ತಿದೆ. ಬರ್ಲಿನ್‌ನ ಅರಬೆಲ್ಲಾ ಹೋಟೆಲ್‌ನಲ್ಲಿ ಅತಿ ಕಡಿಮೆ ನೀರು ಬಳಕೆಯ ಶೌಚಾಲಯ ಪ್ರಯೋಗ ಜಾರಿಗೊಂಡಿದೆ. ಇಲ್ಲಿ ಮೂತ್ರ ಮಾಡುವ ಭಾಗದ ಸ್ವಚ್ಛತೆಗೆ ೨.೫ ಲೀಟರ್ ಹಾಗೂ ಮಲಕ್ಕೆ ೪ ಲೀ. ನೀರನ್ನಷ್ಟೇ ಬಳಸಲಾಗುತ್ತಿದೆ.
ಎಷ್ಟೋ ಬಾರಿ ಇಂಥ ಕಾಳಜಿಗಳು ಪುಟ್ಟ ವಿಚಾರವಾಗಿ ಕಂಡರೂ ಅದೆಷ್ಟೋ ದೀರ್ಘಕಾಲೀನ ಅಪಾಯಗಳಿಂದ ನಮ್ಮನ್ನು ಪಾರುಮಾಡುವಲ್ಲಿ ಅವು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಗಮನಿಸಿಬೇಕು.
‘ಲಾಸ್ಟ್’ ಡ್ರಾಪ್: ಗುಜರಾತಿನಲ್ಲಿರುವ ಒಂದು ರಾಸಾಯನಿಕ ಕಾರ್ಖಾನೆಗೆ ದಿನವೊಂದಕ್ಕೆ ೧೧೭ ಲಕ್ಷ ಬಿಂದಿಗೆ ನೀರು ಬೇಕು. ಇದು ಸುಮಾರು ೧೧ ಲಕ್ಷ ೭೦ ಸಾವಿರ ಗ್ರಾಮೀಣ ಕುಟುಂಬಗಳ ನೀರಿನ ಬೇಡಿಕೆ ನೀಗಿಸಬಲ್ಲುದು.

Wednesday, September 10, 2008

Talaparige- A unique traditional Water bodies

Talapariges, the small traditional water bodies of Karnataka (Mainly Tumkur, Chitradurga, Kolar, Chikkaballapura and part of Bellary) that saved many lives during drought years barely a quarter century ago that are today by and large forgotten. When a mention is made about the traditional water bodies of the state, talaparige rarely finds a place. Unfortunately, no printed documents are available on the life-saving structures.
The word talaparige is used for the point where water springs out from sandy soil. It is also referred to as a swamp or a sweet water spring. talapariges are spring channels, which take advantage of the topography and the sandy nature of the aquifer material. These are particularly common in the Tank beds, Tank command area and sandy beds of rivers like North Pinakini, Jayamangali, Hagari and Suvarnamukhi.
Talaparige looks like a small tank, it is neither a tank nor a well. For a hurried look, it looks like a small pond. Not deep or wide as an open well. It is a unique structure. It is the only source of irrigation for summer crop. Water was taken through a channel and by gravity – without using a motor.
Disappearing rich culture:
Talapariges, once a central part of the rural community have mostly fallen in to disuse today. While some have dried-up due to continuous drought and indifference, others have been encroached upon. Sinking of too many wells adjoining the river and continuous pumping has destroyed the springheads and most of the talapariges have now ceased functioning.
Hence, there is a need to undertake a detailed study of the significance of talapariges and revive this beautiful art and science in nature.
Photo: M. Hosapalaya

ತಲಪರಿಗೆ ಮಾಹಿತಿ ಜನರಿಗೆ ತಲುಪಿಸುವ ಕಾಯಕ

ವಾರದ ನೀರ ದಾಹಕ್ಕೆ ಈ ಬಾರಿ ಇನ್ನೊಂದು ಪಾರಂಪರಿಕ ಸಂರಚನೆ ಸಿಕ್ಕಿದೆ. ಅತ್ಯಂತ ಕುತೂಹಲಕಾರಿ, ಅಷ್ಟೇ ಉಪಯುಕ್ತ ಮಾದರಿ ಈ ತಲಪರಿಗೆಗಳು. ಹೆಸರೇ ತನ್ನ ವಿಶಿಷ್ಟತೆಯಿಂದ ಗಮನಸೆಳೆಯುತ್ತದೆ. ತಕ್ಷಣಕ್ಕೆ ಕೊಪ್ಪರಿಗೆ ಎಂದಂತೆ ಕೇಳಿಸುತ್ತದೆ. ಒಂದು ರೀತಿಯಲ್ಲಿ ಇದು ನೀರ ಕೊಪ್ಪರಿಗೆಯೇ. ಆಕಾರದಲ್ಲೂ ಹೆಚ್ಚೂ ಕಡಿಮೆ ಕೊಪ್ಪರಿಗೆಗಳಂತೆಯೇ ಇರುತ್ತದೆ. ಬೆಟ್ಟ-ಗುಡ್ಡಗಳಿಂದಾವೃತ್ತವಾದ ಪ್ರದೇಶದ ಕೆಳಭಾಗದಲ್ಲಿ ಕಂಡು ಬರುವ ಇವು ಸಾಮಾನ್ಯ ಜಲ ಸಂರಕ್ಷಣೆಯ ಸಾಧಾರಣ ರಚನೆಗಳು.
ತಲಪರಿಗೆಗಳೆಂದಾಕ್ಷಣ ಇದೇನೋ ಐತಿಹಾಸಿಕ ಮಾದರಿಗಳಿರಬಹುದು, ಬೃಹತ್ ಆಕಾರವಿರಬಹುದು ಎಂದೆಲ್ಲ ಊಹಿಸುವುದು ಸಹಜ. ಆದರಿವು ಹಾಗೇನೂ ಅಲ್ಲ. ಪ್ರಮುಖವಾಗಿ ದಕ್ಷಿಣ ಕರ್ನಾಟಕದ, ಅದರಲ್ಲೂ ಆಂದ್ರದ ಗಡಿ ಭಾಗದ ಜಿಲ್ಲೆಗಳಾದ ತುಮಕೂರು, ಕೋಲಾರದಲ್ಲಿ ರೈತರೇ ನಿರ್ಮಿಸಿಕೊಳ್ಳುವ ಪುಟ್ಟ ನೀರ ಪಾತ್ರೆ. ಹೆಚ್ಚೆಂದರೆ ಹತ್ತು ಹದಿನೈದು ಅಡಿ ಆಳವಿರಬಹುದು. ಏನಿಲ್ಲವೆಂದರೂ ಹತ್ತು ಅಡಿಯ ಸುತ್ತಳತೆ ಹೊಂದಿರುವ ಒಂದು ಗುಂಡಿ. ಸದಾ ನೀರಿನಿಂದ ನಳ ನಳಿಸುವ ತಲಪರಿಗೆಗಳು ಹೆಚ್ಚೂ ಕಡಿಮೆ ಕೆರೆಗಳನ್ನೇ ಹೋಲುತ್ತವಾದರೂ ಅದಕ್ಕಿಂತ ಭಿನ್ನ. ಕೆರೆಗಳಿಗೆ ಸುತ್ತಲೂ ಚೌಕಾಕಾರದ ನಿರ್ಮಾಣವಿರುತ್ತದೆ. ತಲಪರಿಗೆಗಳಲ್ಲಿ ಮೂರು ಭಾಗಕ್ಕೆ ಮಾತ್ರ ಕಲ್ಲು ಕಟ್ಟಿ ಭದ್ರ ಮಾಡಿರಲಾಗುತ್ತದೆ. ಒಂದು ಭಾಗ ನೀರ ಹಾದಿಗೆ ತೆರೆದುಕೊಂಡಿರುತ್ತದೆ. ಸಾಮಾನ್ಯ ಕಾಲುವೆಯೊಂದು ತಲಪರಿಗೆಯನ್ನು ಸಂಪರ್ಕಿಸಿರುತ್ತದೆ. ಎತ್ತರದ ಪ್ರದೇಶಗಳಿಂದ ಜಾರಿ ಬರುವ ನೀರು ಈ ಕಾಲುವೆಯ ಮೂಲಕ ತಲಪರಿಗೆಯನ್ನು ತುಂಬಿಕೊಳ್ಳುತ್ತದೆ.
ಹೆಸರಿನಂತೆಯೇ ತಲಪರಿಗೆಯ ಗುಣಗಳೂ ಅತ್ಯಂತ ವೈಶಿಷ್ಟ್ಯಪೂರ್ಣ. ಇವು ಅಂತರ್ಮುಖಿ ಜಲಪಯಣಕ್ಕೊಂದು ಅರ್ಧವಿರಾಮದ ತಾಣ. ಕೃಷಿ ಬದುಕಿನ ಜೀವಾಳವಾಗಿ ನಿಲ್ಲುವ ಇವು ಅತ್ಯಂತ ಶುದ್ಧ ನೀರ ನೆಲೆಗಳು. ಎಷ್ಟೋ ವೇಳೆ ಮೇಲ್ನೋಟಕ್ಕೆ ಅಲ್ಲಿ ನೀರು ಸಿಗಬಹುದೆಂಬುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ತಜ್ಞ ರೈತ ತಲಪರಿಗೆ ನಿರ್ಮಿಸಬಹುದಾದ ತಾಣವನ್ನು ಲೀಲಾಜಾಲವಾಗಿ ಗುರುತಿಸಬಲ್ಲ. ಬೆಟ್ಟ-ಗುಡ್ಡಗಳ, ಬಂಡೆಗಳ ನಡುವಿನಲ್ಲಿ ಇಂಗುವ ನೀರು ಹಾಗೆಯೇ ಕೆಳಗಿಳಿದು ಬಂದು ಅಂತರ್ಗತವಾಗಿ ಪ್ರವಹಿಸುತ್ತಿರುತ್ತದೆ. ಮೇಲ್ಪದರದಲ್ಲಿನ ಮರಳು ಹಾಸು ಇಂಥ ಪ್ರವಾಹವನ್ನು ಮರೆಮಾಚಿರುತ್ತದೆ. ನೀರು ಸುಲಭದಲ್ಲಿ ಆವಿಯಾಗಿ ಹೋಗದಂತೆಯೂ ಮರಳು ತಡೆದಿರುತ್ತದೆ. ಕೆಲವೊಮ್ಮೆ ತುಸು ತಗ್ಗಿನ ಪ್ರದೇಶದಲ್ಲಿ ನೀರೂಟೆಗಳಾಗಿ ಉಕ್ಕ ತೊಡಗುತ್ತದೆ. ತೀರಾ ದೊಡ್ಡ ಗಾತ್ರದಲ್ಲಲ್ಲದಿದ್ದರೂ ಸಣ್ಣಗೆ ನೀರು ಜಿನುಗುತ್ತಿರುತ್ತದೆ. ಅಂಥ ಪ್ರದೇಶವನ್ನು ಗುರುತಿಸಿ ಮರಳನ್ನು ಬಗೆದು ಆಳ ಮಾಡಲಾಗುತ್ತದೆ. ಆಗ ಒಳಗೊಳಗೇ ಹರಿಯುತ್ತಿರುವ ನೀರು ಗುಂಡಿಯಲ್ಲಿ ಪ್ರತ್ಯಕ್ಷವಾಗುತ್ತದೆ.
ಆಂಧ್ರದ ಕೆಲ ಹಳ್ಳಿಗಳಲ್ಲಿ ನೀರಿನ ಹಾದಿಯುದ್ದಕ್ಕೂ ರೈತರು ತಲಪರಿಗೆಗಳನ್ನು ನಿರ್ಮಾಣ ಮಾಡಿಕೊಳ್ಳುವ ಉದಾಹರಣೆಗಳಿವೆ. ಒಂದರ ಪಕ್ಕದಲ್ಲೇ ಒಂದು ಹೊಂಡ ತೋಡಿಕೊಂಡರೂ ಗುಪ್ತಗಾಮಿನಿಯಾಗಿರುವ ನೀರು ಮೇಲಕ್ಕೆ ಉಕ್ಕುತ್ತದೆ. ತುಮಕೂರಿನ ಕೆಲ ಹಳ್ಳಿಗಳಲ್ಲಿ ಕೃಷಿಯಲ್ಲದೇ ಕುಡಿಯುವ ನೀರು ಸೇರಿದಂತೆ ಗೃಹಬಳಕೆಗೆ ಸಂಪೂರ್ಣವಾಗಿ ತಲಪರಿಗೆಗಳನ್ನೇ ಅವಲಂಬಿಸಲಾಗುತ್ತಿತ್ತು. ಕೆಲ ಗ್ರಾಮಗಳಲ್ಲಂತೂ ಮುಂದಿನ ಕೃಷಿ ಕಾರ್ಯಗಳೆಲ್ಲವೂ ನಿರ್ಧಾರವಾಗುತ್ತಿದ್ದುದೇ ತಲಪರಿಗೆಗಳಲ್ಲಿನ ನೀರಿನ ಮಟ್ಟವನ್ನು ಅವಲಂಬಿಸಿ.
ಸಾಮಾನ್ಯವಾಗಿ ಊರಿನ ಹಿರಿಯರು ನೀರಿನ ಅಂಶವಿರುವ ಜಾಗವನ್ನು ಗುರುತಿಸಿ, ಅನುಭವದ ಆಧಾರದ ಮೇಲೆ ತಲಪರಿಗೆಗಳನ್ನು ತೋಡಲು ಸೂಚಿಸುತ್ತಾರೆ. ಇದರ ಸಂಪೂರ್ಣ ಉಸ್ತುವಾರಿ, ನಿರ್ವಹಣೆ ಇಡೀ ಊರಿನದ್ದಾಗಿರುತ್ತದೆ. ಮಳೆಗಾಲಕ್ಕೆ ಮುನ್ನ ಜನವರಿಯ ವೇಳೆಗೆ ತಲಪರಿಗೆಗಳ ಕಾಲುವೆಯನ್ನು ಸ್ವಚ್ಛಗೊಳಿಸುವ ಕಾರ್ಯ ಸಾಮೂಹಿಕವಾಗಿ ನಡೆಯುತ್ತದೆ. ಮನೆಗೊಬ್ಬರಂತೆ ಊರಿನ ಎಲ್ಲರೂ ಸೇರಿ ಮುಂಜಾನೆಯೇ ಸ್ವಚ್ಛತಾ ಕಾರ್ಯಕ್ಕೆ ತೊಡಗುತ್ತಾರೆ ಮಧ್ಯಾಹ್ನದ ವೇಳೆಗೆ ಕೆಲಸ ಮುಗಿಸಲಾಗುತ್ತದೆ. ಹೀಗೆ ವಾರಗಟ್ಟಲೇ ನಡೆದು ತಲಪರಿಗೆಗಳ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ. ಮಳೆಗಾಲದಲ್ಲಿ, ಅಕ್ಕಪಕ್ಕದ ನದಿ, ಹೊಳೆಗಳು ತುಂಬಿ ಹರಿಯುವಾಗ ಈ ಕಾಲುವೆಗಳಲ್ಲೂ ನೀರು ಹರಿಯುತ್ತಿರುತ್ತದೆ. ಬೇಸಿಗೆಯಲ್ಲಿ ಸಂಪೂರ್ಣ ಒಣಗಿ ಹೋಗಿರುತ್ತದೆ. ಆದರೆ ತಲಪರಿಗೆಗಳು ಮಾತ್ರ ತುಂಬಿಯೇ ಇರುತ್ತದೆ. ಒಂದೊಮ್ಮೆ ಇವು ಬತ್ತಿದರೆ ಮುಂದಿನ ಬೇಸಿಗೆ ತ್ರಾಸದಾಯಕ ಎಂದೇ ಅರ್ಥ.
ಇನ್ನು ತಲಪರಿಗೆಗಳು ಇಂಥದ್ದೇ ಆಕಾರದಲ್ಲಿ ಇರಬೇಕೆಂಬುದೇನೂ ಇಲ್ಲ. ಸಾಮಾನ್ಯವಾಗಿ ವೃತ್ತ, ಚೌಕಾಕಾರದಲ್ಲಿರುತ್ತದೆ. ಕೆರೆಯ ಮಧ್ಯಭಾಗದಲ್ಲಿರುವ ತಲಪರಿಗೆಗಳಿಗೆ ಕಲ್ಲು ಕಟ್ಟುವುದು ಸಾಮಾನ್ಯ. ಸ್ಥಳೀಯವಾಗಿ ಸಣ್ಣ ಪ್ರಮಾಣದಲ್ಲಿ ನಿರ್ಮಿಸಿಕೊಳ್ಳುವ ತಲಪರಿಗೆಗಳು ಹೀಗೆಯೇ ಇರಬೇಕೆಂದೇನೂ ಇಲ್ಲ. ಒಂದರ ಮುಂದೊಂದರಂತೆ ಪುಟ್ಟ ಪುಟ್ಟ ತಲಪರಿಗೆಗಳ ಸರಣಿಯೇ ಇರುತ್ತದೆ. ಎಲ್ಲದರಿಂದಲೂ ನಿರಂತರ ನೀರು ಬಳಸುತ್ತಿರುವುದರಿಂದ, ಹೊಸ ನೀರು ಉಕ್ಕುತ್ತಲೇ ಇರುವುದರಿಂದ ಅತ್ಯಂತ ಸ್ವಚ್ಛವಾಗಿರುತ್ತದೆ. ಜತೆಗೆ ಮರಳಿನಡಿಯಿಂದ ಸೋಸಿ ಬರುವುದರಿಂದ ನೀರು ಸಿಹಿಯಾಗಿಯೂ ಇರುತ್ತದೆ.
ಇಂದು ಕೆರೆಗಳೇ ನಾಶವಾಗುತ್ತಿವೆ. ತಲಪರಿಗೆಗಳೂ ಇದಕ್ಕೆ ಹೊರತಲ್ಲ. ಬೋರ್‌ವೆಲ್‌ಗಳ ಯುಗದಲ್ಲಿ ತಲಪರಿಗೆಗಳನ್ನು ನಿರ್ವಹಣೆ ಮಾಡುವ ವ್ಯವಧಾನ ರೈತರಿಗೆ ಉಳಿದಿಲ್ಲ. ಪರಿಣಾಮ ಸಮುದಾಯದ ಸ್ವತ್ತಾಗಿದ್ದ ತಲಪರಿಗೆಗಳು ಕಣ್ಮರೆಯಾಗುತ್ತಿವೆ. ಇಂಥ ಸಂಕೀರ್ಣ ಸಂದರ್ಭದಲ್ಲಿ ತುಮಕೂರಿನ ಗೆಳೆಯ ಮಲ್ಲಿಕಾರ್ಜುನ ಹೊಸಪಾಳ್ಯ ತಮ್ಮ ಜತೆಗಾರರೊಂದಿಗೆ ಈ ಬಗ್ಗೆ ಒಂದಷ್ಟು ಗಂಭೀರ ಅಧ್ಯಯನ ನಡೆಸಿ, ಅದನ್ನು ಅಕ್ಷರ ರೂಪಕ್ಕೂ ಇಳಿಸಿ ಪುಸ್ತಕ ಹೊರತರುತ್ತಿದ್ದಾರೆ. ಮಾತ್ರವಲ್ಲ ನಾಡಿದ್ದು ಭಾನುವಾರ (ಆಗಸ್ಟ್ ೧೦ರಂದು) ಒಂದಿಡೀ ದಿನ ತಲಪರಿಗೆಗಳ ಬಗ್ಗೆಯೇ ಮಾತನಾಡುವ ಕಾರ್ಯಕ್ರಮವನ್ನೂ ವ್ಯವಸ್ಥೆಗೊಳಿಸಿದ್ದಾರೆ. ನಾಡಿನ ಹಲವು ಜಲ ತಜ್ಞರು ಜತೆಗಿರುವ ವಿಶೇಷ ಅನುಭವಕ್ಕಾಗಿ ಕಾಯುತ್ತಿದ್ದೇನೆ. ನಿಮಗೂ ಜತೆಗೂಡುವ ಮನಸ್ಸಿದ್ದರೆ ಮಧುಗಿರಿಗೆ ಬೆಳಗ್ಗೆಯೇ ಬರಬೇಕು. ಅಪೂರ್ವ ಜಲ ಸಂರಕ್ಷಣಾ ಮಾದರಿಗಳನ್ನು ಕಣ್ಣಾರೆ ಕಂಡೂ ಬರಬಹುದು.
‘ಲಾಸ್ಟ್‘ಡ್ರಾಪ್: ತಲಪರಿಗೆಗಳ ಬಗ್ಗೆ ಇನ್ನಷ್ಟು ಮಾಹಿತಿ ಬೇಕಿದ್ದರೆ, ಕಾರ್ಯಾಗಾರಕ್ಕೆ ಬರುವ ಮನಸ್ಸಿದ್ದರೆ ನೀವು ಮಲ್ಲಿಯನ್ನೇ ಸಂಪರ್ಕಿಸಬೇಕು. ಹೇಗಂತೀರಾ, ೯೩೪೨೧ ೮೪೮೫೫ಗೆ ಒಂದು ಕಾಲ್ ಮಾಡಿ, ಸಾಕು.

ನಿಗಾ ಮಾಡಿದಷ್ಟೂ ನೀರುಣಿಸುವ ತಲಪರಿಗೆ

ನಿಜಕ್ಕೂ ಅದು ನಿರೀಕ್ಷೆಗಿಂತ ಸುಂದರ ವ್ಯವಸ್ಥೆ. ಅದೊಂದು ದೃಶ್ಯ ಕಾವ್ಯ. ನಿಸರ್ಗ ಸೃಷ್ಟಿಸಿದ ಅದ್ಭುತ ತಂತ್ರಜ್ಞಾನ. ಪ್ರಕೃತಿ ಬರೆದ ಅವರ್ಣನೀಯ ಚಿತ್ರ. ಆಧುನಿಕತೆಯ ಎಲ್ಲ ವೈಫಲ್ಯದ ನಡುವೆಯೂ ಮೂಡಿದ ಬೆಚ್ಚನೆಯ ಕನಸು. ಸುಭದ್ರ, ಸುಸ್ಥಿರ ಕೃಷಿ ಬದುಕಿಗೆ ಅದೃಷ್ಟವಶಾತ್ ಇನ್ನೂ ಅಲ್ಲಿ-ಇಲ್ಲಿ ಉಳಿದು ಬಂದಿರುವ ಸಮರ್ಥ ವ್ಯವಸ್ಥೆ.
ಹೌದು, ತುಮಕೂರು ಜಿಲ್ಲೆಯ ತಲಪರಿಗೆಗಳನ್ನು ಕಣ್ಣಾರೆ ಕಂಡು ಬಂದ ನಂತರ ಅದರ ಬಗೆಗಿದ್ದ ಇಂಥ ಭಾವನೆಗಳು ನೂರ್ಮಡಿಸಿವೆ. ಶತಶತಮಾನಗಳಿಂದ ಸುತ್ತಲಿನ ಸಮಾಜವನ್ನು ತಾಯಿಯಂತೆ ಸಲುಹಿದ ಅಪೂರ್ವ ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆ (ಜಲಬಂಧು ಶ್ರೀ ಪಡ್ರೆಯವರ ಸುಂದರ ಪದದಲ್ಲಿ ಹೇಳುವುದಾದರೆ -ಪಾರಂಜವ್ಯ)ಯೊಂದು ಕಣ್ಮರೆಯಾಗುತ್ತಿರುವ ಬಗ್ಗೆ ಅಷ್ಟೇ ದೀರ್ಘ ಬೇಸರವೂ ಮೂಡಿದೆ.
ಆಧುನಿಕತೆಯ ಭ್ರಮೆ ನಮ್ಮನ್ನು ಎಂಥ ವಿಸ್ಮೃತಿಗೆ ತಳ್ಳುತ್ತಿದೆ ಎಂಬುದನ್ನು ಕಣ್ಣಾರೆ ಕಂಡೇ ಅರಿಯಬೇಕು. ೮೦ರ ದಶಕದಲ್ಲಿ ಬೋರ್‌ವೆಲ್‌ಗಳ ಬಲೆಗೆ ಬಿದ್ದ ನಾವು ನಾಡಿನ ಅಮೂಲ್ಯ ಇಂಥ ಅದೆಷ್ಟೋ ಪಾರಂಜವ್ಯ ಪ್ರಪಂಚವನ್ನೇ ಮರೆತುಬಿಡುತ್ತಿದ್ದೇವೆ. ಬೆಟ್ಟಗಳ ಸಾಲು ಸಾಲುಗಳ ಸನ್ನಿಯಲ್ಲಿ ನೆಲದಡಿಯ ಜೀವದ್ರವ ಬುಗ್ಗೆಯಾಗಿ ಪುಟಿದೇಳುತ್ತಿದ್ದರೆ, ಅದರ ಮೇಲೆ ತಂಗಾಳಿ ತೇಲಿ ಬರುತ್ತಿದ್ದರೆ ಹೊಲದಲ್ಲಿ, ಬಿರು ಬಿಸಿಲಲ್ಲಿ ಬೆವರು ಹರಿಸುತ್ತ ದುಡಿಯುವ ರೈತ ಹಾಗೆಯೇ ಕಣ್ಮುಚ್ಚಿ ನೆಮ್ಮದಿಯ ನಾಳೆಗಳನ್ನು ನಿಶ್ಚಯಗೊಳಿಸಿಕೊಳ್ಳುತ್ತಾನೆ.
ತಲಪರಿಗೆಗಳೆಂದರೇ ಹಾಗೆ. ಅದು ಇಂದಿನವರೆಗೆ ತನ್ನನ್ನು ನಂಬಿದ ಜೀವವನ್ನು ಒಣಿಗಿಸಿಲ್ಲ, ಅವಲಂಬಿಸಿದ ಬದುಕನ್ನು ಕಮರಿಸಿಲ್ಲ. ಇದು ಇಂದು ನಿನ್ನೆಯ ಮಾತಲ್ಲ. ತಲಪರಿಗೆಯ ತಪ್ಪಲಿನ ಮಂದಿಯೇ ಹೇಳುವಂತೆ ಈ ಭೂಮಿಯ ಮೇಲೆ ಬಾವಿಗಳು ಬರುವ ಮುನ್ನವೇ, ಕಪಿಲೆ, ಏತಗಳು ಏಳುವ ಮುನ್ನವೇ, ರಾಟೆಗಳು ಸದ್ದು ಮಾಡಲು ಕಲಿಯುವ ಮೊದಲೇ, ನದಿ ಕಾಲುವೆಗಳ ಪರಿಚಯ ಆಗುವುದಕ್ಕಿಂತ ಮುಂಚೆಯೇ ತಲಪರಿಗೆಗಳು ನಾಗರಿಕತೆಗೆ ತಂಪೆರೆದಿದ್ದವು. ಅದರ ಗುಣಗಾನವನ್ನು ಫಲಾನುಭವಿ ರೈತನ ಮಾತಲ್ಲೇ ಕೇಳಬೇಕು....
ಮಧುಗಿರಿಯ ಹಿರಿಯ ತಲೆ ಮಾದಪ್ಪನನ್ನು ಕೇಳಿನೋಡಿ, ‘ಅದು ಅಶಂಖದ ನೀರು ಸ್ವಾಮೀ !’ ಎನ್ನುತ್ತಾರೆ. ಹಾಗೆ ಹೇಳುವಾಗಲೊಮ್ಮೆ ಅವರ ಕಣ್ಣಲ್ಲಿ ಪಾರಂಜವ್ಯದ ಬಗೆಗೊಂದು ಹೆಮ್ಮೆಯ ಹೊಳಪು ಪ್ರತಿಫಲಿಸುತ್ತದೆ. ಇದೇನಿದು ಅಶಂಖದ ನೀರು ? ಎಂದು ಪ್ರಶ್ನಿಸಿದರೆ ಬರುವ ಉತ್ತರ ಇನ್ನಷ್ಟು ಕುತೂಹಲವನ್ನು ಹುಟ್ಟಿಸುತ್ತದೆ. ಅಶಂಖ ಎಂದರೆ ಶಂಕೆ ಇಲ್ಲದ್ದು ಎಂದರ್ಥ. ಅಂದರೆ ತಲಪರಿಗೆಯ ನೀರಿನ ಬಗ್ಗೆ ಸಂಶಯವೇ ಬೇಡ. ಕಣ್ಮುಚ್ಚಿ ಅದನ್ನು ಕುಡಿಯಬಹುದು. ಅಷ್ಟೊಂದು ಪರಿಶುದ್ಧ. ಮಾತ್ರವಲ್ಲ, ಅಷ್ಟೂ ರುಚಿಕರ.
ಇದು ಕೇವಲ ಬಾಯಿಮಾತಲ್ಲ. ತಲಪರಿಗೆಯ ನೀರುಂಡವರೆಲ್ಲರ ಅನುಭವವೂ ಇದನ್ನೇ ಸಾರುತ್ತದೆ. ಇನ್ನು ನಮ್ಮ ನಂಬಿಕೆಗಳಲ್ಲಿ, ಪೂಜಾ ವಿವಿಧಾನಗಳಲ್ಲಿ ಶಂಖಕ್ಕೆ ಮಹತ್ವದ ಸ್ಥಾನವಿದೆ. ಶಂಖದ ನೀರೆಂದರೆ ಅದು ತೀರ್ಥಕ್ಕೆ ಸಮಾನ ಎಂಬ ಭಾವನೆ. ಹಾಗೆಯೇ ತಲಪರಿಗೆಯ ನೀರೆಂದರೆ ಶಂಖದ ನೀರಿನಷ್ಟು ಪವಿತ್ರ ಎಂಬುದನ್ನು ವ್ಯಾಖ್ಯಾನಿಸಲು ‘ಅಶಂಖದ ನೀರು’ ಪದ ಬಳಕೆಯಾಗುತ್ತದೆ ಗ್ರಾಮೀಣ ಭಾಗದಲ್ಲಿ.
ತಲಪರಿಗೆಗಳಲ್ಲಿ ನೀರು ಉದ್ಭವಿಸುವ ರೀತಿ ಹಾಗೂ ಭೌಗೋಳಿಕ ಕಾರಣಗಳನ್ನು ಗಮನಿಸಿದರೂ ಈ ಮಾತಿಗೆ ಪುಷ್ಟಿ ದೊರೆಯುತ್ತದೆ. ಎಲ್ಲೋ ಬೆಟ್ಟ ಗುಡ್ಡಗಳ ಮೇಲೆ ಬಿದ್ದ ಮಳೆ ನೀರು ಭೂಮಿಯೊಳಕ್ಕೆ ಇಂಗಿ, ಬಂಡೆಗಳ ಅತಿ ಸೂಕ್ಷ್ಮ ರಂಧ್ರಗಳಲ್ಲಿ ನುಸುಳಿ, ಕೆಳಗಿಳಿದು ಇನ್ನೆಲ್ಲಿಗೋ ಪಯಣ ಹೊರಡುತ್ತದೆ. ಹಾಗೆ ಅಂತರ್ಮುಖಿಯಾಗಿ ಯಾನ ಹೊರಟ ನೀರು ಬೆಟ್ಟಗಳ ತಗ್ಗಿನ ಸಮತಳಕ್ಕೆ ಬಂದಾಗ ಒತ್ತಡಕ್ಕೆ ಒಳಗಾಗುತ್ತದೆ. ಅಂಥ ಒತ್ತಡ ನೀರಿನ ಬುಗ್ಗೆಗಳನ್ನು ಸೃಷ್ಟಿಸುತ್ತದೆ. ಈ ಬುಗ್ಗೆಗಳ ಸುತ್ತ ನಿರ್ಮಿಸುವ ರಚನೆಗಳೇ ತಲಪರಿಗೆಗಳೆನಿಸಿಕೊಂಡು ಸವಿಸವಿ ಅಮೃತಧಾರೆಯನ್ನು ಹನಿಸುತ್ತವೆ.
ತಲಪರಿಗೆಯ ನೀರು ಸಂಜೀವಿನಿ ಎಂಬುದಕ್ಕೆ ಪ್ರತ್ಯಕ್ಷ ನಿದರ್ಶನವನ್ನೂ ನೀರ ಗೆಳೆಯರು ಮುಂದಿಡುತ್ತಾರೆ. ಅದು ಮಧುಗಿರಿ ಸಮೀಪದ ಸಿ.ಕೆ.ಪುರ ಎಂಬ ಹಳ್ಳಿಯೊಂದರ ಮಾತು. ಮೂರು ವರ್ಷದ ಹಿಂದೆ ಮಳೆ ಕಾಣದೇ ಸುತ್ತಮುತ್ತ ಬರ ಬೀಳುವ ಎಲ್ಲ ಲಕ್ಷಣಗಳೂ ಕಂಡಿತ್ತು. ನೀರಿಗಾಗಿ ನಂಬಿದ್ದ ಬೋರ್‌ವೆಲ್‌ಗಳು ಬಾಯ್ದೆರೆದುಕೊಂಡು ಬಿದ್ದಿದ್ದವಂತೆ. ಕೊನೆಗೆ ಯಾರೋ ಒಬ್ಬರಿಗೆ ತಲಪರಿಗೆಗಳ ಬಗ್ಗೆ, ಭೀಕರ ಬರಗಾಲದಲ್ಲೂ ಅದು ಹನಿಸುತ್ತಿದ್ದ ಸವಿನೀರಿನ ಬಗ್ಗೆ ಜ್ಞಾನೋದಯವಾಯಿತಂತೆ. ಸರಿ, ಕಳೆದು ಹೋಗುತ್ತಿದ್ದ ಊರ ಮುಂದಿನ ತಲಪರಿಗೆಯೊಂದನ್ನು ಪುನಶ್ಚೇನಗೊಳಿಸಿ ನೀರ ಬಳಕೆ ಆರಂಭವಾಯಿತು. ಅಚ್ಚರಿ ಕಂಡದ್ದು ಆಗ. ವರ್ಷಗಳಿಂದ ಕೈಕಾಲು ಹಿಡಿದುಕೊಂಡು ಬಿದ್ದಿದ್ದ ಹಿರಿಯರಲ್ಲಿ ಚೇತರಿಕೆ ಕಂಡು ಬಂತು. ಬಹುಕಾಲದಿಂದ ಕಾಡುತ್ತಿದ್ದ ಸಂದುನೋವು ಸದ್ದಿಲ್ಲದೇ ಹಿಂದಾಗಿತ್ತು. ಸಣ್ಣಪುಟ್ಟ ಕಾಯಿಲೆಗಳು ಕಣ್ಮರೆಯಾಗಿದ್ದವು. ಅದು ಬರೀ ಭ್ರಮೆಯಾಗಿರಲಿಲ್ಲ. ನೂರಕ್ಕೆ ನೂರು ಸತ್ಯವಾಗಿತ್ತು. ಇಲ್ಲೇನೂ ಮಾಯಮಂತ್ರ ಆಗಿಲ್ಲ. ಇಂದ್ರಜಾಲ-ಮಹೇಂದ್ರಜಾಲ ನಡೆದಿಲ್ಲ. ಈವರೆಗ ಬಳಸುತ್ತಿದ್ದ ಬೋರ್‌ವೆಲ್ ನೀರು ಫ್ಲೋರೈಡ್ ಎಂಬ ವಿಷವನ್ನು ಕಕ್ಕುತ್ತಿತ್ತು. ಅನಿವಾರ್ಯವಾಗಿ ಅದನ್ನೇ ಕುಡಿಯುತ್ತಿದ್ದ ಮಂದಿ ಹತ್ತು ಹಲವು ಸಂಕಟಗಳಿಗೆ ಒಳಗಾಗಿದ್ದರು. ಯಾವಾಗ ಬೋರ್‌ನ ವಿಷ ಬಿಟ್ಟು ತಲಪರಿಗೆಯ ಅಮೃತವನ್ನು ಕುಡಿಯಲಾರಂಭಿಸಿದರೋ ತಂತಾನೇ ಅಡ್ಡ ಪರಿಣಾಮಗಳು ದೂರಾಗಲಾರಂಭಿಸಿದವು. ಇಂಥ ಹಲವು ಘಟನೆಗಳನ್ನು ತಲಪರಿಗೆಯ ಸುತ್ತಲಿನ ಮಂದಿ ತಲಸ್ಪರ್ಶಿಯಾಗಿ ವಿವರಿಸುತ್ತಾರೆ.
ತಲಪರಿಗೆಯ ಬಗೆಗೊಂದಿಷ್ಟು ಎಚ್ಚರ ಮೂಡಿಸಿದ, ಆಸಕ್ತರನ್ನು ಒಟ್ಟು ಮಾಡಿ, ಪುಟ್ಟ ಪುಸ್ತಕವೊಂದನ್ನು ಹೊರತಂದ ನೀರ ಗೆಳೆಯ ಮಲ್ಲಿಕಾರ್ಜುನ ಹೊಸಪಾಳ್ಯ ಕೊಡುವ ವ್ಯಾಖ್ಯಾನವೂ ಇದಕ್ಕಿಂತ ಭಿನ್ನವಾಗಿಲ್ಲ. ಆದರೆ ಧಾಟಿ ತುಸು ಭಿನ್ನ. ಮಲ್ಲಿ ಪ್ರಕಾರ ‘ನನ್ನ ಬೋರ್‌ವೆಲ್, ನನ್ನ ನೀರು’ ಎನ್ನುವ ಇಂದಿನ ದಿನಗಳಲ್ಲಿ ‘ಇದು ನಮ್ಮ ನೀರು’ ಎಂಬ ಸಾಮುದಾಯಿಕ ಪ್ರಜ್ಞೆಯೊಂದನ್ನು ತಲಪರಿಗೆಗಳು ಜಾಗೃತಿಗೊಳಿಸುತ್ತವೆ. ಈ ಮಾತಿನಲ್ಲಿ ಸಂಶಯಕ್ಕೆ, ಆಕ್ಷೇಪಕ್ಕೆ ಅವಕಾಶವೇ ಇಲ್ಲ.
ಕಳೆದ ಭಾನುವಾರ ಮಧುಗಿರಿಯಲ್ಲಿ ಒಂದಿಡೀ ದಿನ ತಲಪರಿಗೆಯ ಬಗ್ಗೆ ನೀರ ಆಸಕ್ತರು ಕಲೆತು ಚರ್ಚಿಸಿದ್ದಾರೆ. ನಶಿಸಿ ಹೋಗುತ್ತಿರುವ ಈ ನೆಲದ ಜ್ಞಾನದ ಉಳಿವಿನ ನಿಟ್ಟಿನಲ್ಲಿ ಅದೊಂದು ಉತ್ತಮ ಪ್ರಯತ್ನ. ತಲಪರಿಗೆಯ ಬಗ್ಗೆ ಅಲ್ಲಿ ದಕ್ಕಿದ ಒಂದೊಂದು ಅನುಭವಗಳೂ ಹಸಿಹಸಿಯಾಗಿದ್ದವು. ಇಂಥ ಅಪೂರ್ವ ಜಲಸಂರಕ್ಷಣಾ ಪದ್ಧತಿಯ ರಕ್ಷಣೆಯ, ಅದರ ಕುರಿತಾದ ಜಾಗೃತಿಯ ದಿಸೆಯಲ್ಲಿ ರಕ್ಕಸ ಬೋರ್‌ವೆಲ್‌ಗಳ ಈ ಯುಗದಲ್ಲಿ ಕೊನೆಗೂ ಒಂದಷ್ಟು ಸುಮನಸುಗಳು ಹೀಗೆ ಸೇರಿದ್ದು ಆರೋಗ್ಯಕಾರಿ ಬೆಳವಣಿಗೆ. ಈ ದೃಷ್ಟಿಯಿಂದ ಸದ್ದಿಲ್ಲದೇ ಆಂದೋಲನವನ್ನು ಆರಂಭಿಸಿರುವ ನೀರ ನೆಂಟರಾದ ಭೂಷಣ್ ಮಿಡಿಗೇಶಿ ಹಾಗೂ ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಬೆನ್ನು ತಟ್ಟಲೇಬೇಕಿದೆ. ಇದರಿಂದ ಪ್ರೇರಣೆ ಪಡೆದಾದರೂ ನಮ್ಮ ಇಲಾಖೆಗಳು, ಜಿಲ್ಲಾ ಪಂಚಾಯತ್‌ನಂಥ ಸ್ಥಳೀಯ ಸಂಸ್ಥೆಗಳು ಕಣ್ತೆರೆದು, ಅಳಿದುಳಿದ ತಲಪರಿಗೆಗಳ ರಕ್ಷಣೆಗೆ ಮುಂದಾಗಲಿ. ಪುಟ್ಟದಾಗಿ ಆರಂಭವಾಗಿರುವ ಆ ಬಗೆಗಿನ ಅಧ್ಯಯನ ಬೃಹತ್ ಸಂಶೋಧನೆಯ ರೂಪ ಪಡೆಯಲಿ. ಆಗಲಾದರೂ ಬೋರ್‌ವೆಲ್‌ಗಳಲ್ಲಿ ತಲೆ ಸಿಕ್ಕಿಸಿಕೊಂಡು ಕುಳಿತಿರುವ ನಮ್ಮ ಸರಕಾರಗಳಿಗೆ ಸತ್ಯ ದರ್ಶನವಾದೀತು ಎಂಬುದು ಆಶಯ.
"ÇÝÓ…r'vÝű…: ನಾಡಿನ ನೀರೆಚ್ಚರದ ದ್ರೋಣ ಶ್ರೀಪಡ್ರೆ ಕಾರ್ಯಾಗಾರದಲ್ಲಿ ನೆನಪಿಸಿಕೊಂಡ ದಿಲ್ಲಿಯ ಜಲ ಭೀಷ್ಮ ಅನುಪಮ್ ಮಿಶ್ರಾರ ಮಾತು-ಇಂದ್ರನಿಗೆ ಚಿಟಿಕೆಯ ಕೆಲಸ(ಮಳೆ),ಕೊಟ್ಟೀತು ರಾಟೆಗೆ ವರ್ಷದ ಕೆಲಸ(ನೀರಾವರಿ).

ನೀರಿನ ಆಗರ : ಬಿಡಿ ಈಗಲಾದರೂ ಅನಾದರ

ತಲಪರಿಗೆಗಳ ಬಗ್ಗೆ ಬರೆದಷ್ಟೂ ಇದೆ. ಹೇಳಿ, ಕೇಳಿ ಅದು ಮೊಗೆದಷ್ಟೂ ನೀರುಣಿಸುವ ಆಗರ. ವಿಷಯ, ವಿಸ್ಮಯಗಳ ವಿಚಾರದಲ್ಲೂ ಇದೇ ಅನ್ವಯ. ಹೆಸರು ಕೇಳುತ್ತಿದ್ದಂತೆ ಒಂದು ರೀತಿಯ ಮೆಸ್ಮರಿಸಂಗೆ ಒಳಪಡಿಸುವಂಥದ್ದು. ತಳದಿಂದ ಹುಟ್ಟುವ ನೀರಾದ್ದರಿಂದ ಅದನ್ನು ತಳ-ಪುರಿಗೆ ಎಂದು ಗುರುತಿಸಿದ್ದಿರಬೇಕು.
ಇದಂತಲೇ ಅಲ್ಲ, ಯಾವುದೇ ದೇಸಿ ಜ್ಞಾನಗಳನ್ನು ತೆಗೆದುಕೊಂಡರೂ ಅದು ಬಹುತ್ವದ ನೆಲೆಯಲ್ಲಿಯೇ ವಿಕಾಸಗೊಂಡಿರುತ್ತದೆ. ವೈವಿಧ್ಯವೇ ಅದರ ಮೂಲಗುಣ. ಆಯಾ ಪ್ರದೇಶದ ಮಣ್ಣಿನ ಗುಣ, ಮಳೆಯ ಸರಾಸರಿಯನ್ನಾಧರಿಸಿ ಬೆಳೆದು ಬಂದಿರುವ ಹತ್ತು ಹಲವು ಪಾರಂಜವ್ಯ (ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆ)ಗಳು ಇಂದಿನ ಬಾಟಲಿ ನೀರೆಂಬ ಎಕಮುಖಿ ಸಂಸ್ಕೃತಿಯ ದಾಳಿಯಲ್ಲಿ ವಿಸ್ಮೃತಿಗೆ ಸರಿದಿವೆ.
ನೀರಿನ ವಿಚಾರದಲ್ಲಿ ನಾವಿಂದು ಎಂಥ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ ಎಂದರೆ ಬಾಯಾರಿ ಬಸವಳಿದಿದ್ದರೂ, ಕಣ್ಣೆದುರೇ ಜಲ ರಾಶಿಯಿದ್ದರೂ ಅದನ್ನು ಕುಡಿಯುವ ಧೈರ್ಯ ಮಾಡಲಾರೆವು. ನೀರಿನ ಪರಿಶುದ್ಧತೆಯ ಬಗೆಗೆ ಈ ಪರಿಯ ಶಂಕೆ ನಮ್ಮನ್ನು ಕಾಡುತ್ತಿದೆ. ಇದರ ಪರಿಣಾಮ ಮನೆಯಿಂದ ಹೊರ ಹೊರಟರೆ ಮಣ ಭಾರದ ನೀರಿನ ಬಾಟಲಿಗಳನ್ನು ಹೊತ್ತೊಯ್ಯಲೇ ಬೇಕಾದ ದುರದೃಷ್ಟಕರ ಪರಿಸ್ಥಿತಿಗೆ ಒಳಗಾಗಿದ್ದೇವೆ. ನೀರಿನ ಬಾಟಲಿಗಳೆಂದರೆ ಇಂದಿನ ಜನರ ‘ಬಗಲ ಬಾವು’ ಎಂಬಂತಾಗಿದೆ. ಏಕೆಂದರೆ ನೀರು ನಮಗೆ ಈಗ ದರ್ದು ಆಗಿ ಉಳಿದಿಲ್ಲ, ಬದಲಾಗಿ ಅದೊಂದು ಮಾರಾಟದ ಸರಕಾಗಿದೆ. ಇಂಥ ಪರಿಸ್ಥಿತಿಯ ಲಾಭವನ್ನು ವ್ಯಾಪಾರಿ ಮನೋಭಾವ ಯಶಸ್ವಿಯಾಗಿ ಬಳಸಿಕೊಳ್ಳುತ್ತಿದೆ.
ನಾಗರಿಕತೆಗಳು ಹುಟ್ಟಿದುದೇ ಜಲಸ್ಥಾನಗಳಲ್ಲಿ ಎಂಬುದನ್ನು ಇಂದಿಗೂ ನಾವು ಮಾನವೇತಿಹಾಸದ ಭಾಗವಾಗಿ ಓದುತ್ತಿದ್ದೇವೆ. ಮತ್ತೆ ಅವನ್ನು ಮರೆಯುತ್ತಲೂ ಇದ್ದೇವೆ. ಹಳ್ಳದ ದಂಡೆಯಲ್ಲಿ ಹಳ್ಳಿ, ನದಿ ದಂಡೆಯಲ್ಲಿ ನಗರಗಳು ಬೆಳೆಯುತ್ತಿದ್ದವು ಎಂಬುದು ಸಹಜ ಸಂಗತಿ. ಆದರೆ ಅಂಥ ನಾಗರೀಕತೆಯೇ ಇಂದು ಜಲಮೂಲಕ್ಕೆ, ತಲಪರಿಗೆಯಂಥ ಪಾರಂಜವ್ಯಗಳಿಗೆ ಎರವಾಗುತ್ತಿವೆ ಎಂಬುದು ವ್ಯವಸ್ಥೆಯ ದುರಂತ.
ಪಾರಂಜವ್ಯವೆಂದರೆ ಅವು ಶಾಶ್ವತ ನೀರಿನ ಆಗರ. ಕಾಲಭೇದವಿಲ್ಲದೇ ನಾಗರಿಕತೆಯ ತೃಷೆಯನ್ನು ತಣಿಸಿದ್ದಂಥವು. ಆದರೆ ಇಂದಿನ ನೀರು ಪೂರೈಕೆ ವ್ಯವಸ್ಥೆ ಹಾಗೂ ಸಾಧನಗಳೆರಡೂ ಯಾವತ್ತಿಗೂ ನಮ್ಮಲ್ಲಿ ಭರವಸೆಯನ್ನು ಉಳಿಸಿಯೇ ಇಲ್ಲ. ಹಾಗಿದ್ದರೂ ಅಂಥ ಆಧುನಿಕ ವ್ಯವಸ್ಥೆಗಳ ಮೋಹದಿಂದ ನಾವು ಹೊರಬರುತ್ತಿಲ್ಲ. ತಲಪರಿಗೆಗಳಂಥವುಗಳನ್ನು ಉಳಿಸಿಕೊಳ್ಳಲೇಬೇಕೆಂಬ ಪ್ರಜ್ಞಾವಂತಿಕೆಗೆ ಮರಳಿಲ್ಲ.
ಅಂಥದ್ದರ ನಡುವೆಯೂ ಅಲ್ಲೊಂದು, ಇಲ್ಲೊಂದು ಪಾರಂಜವ್ಯಗಳು ಉದಾಹರಣೆಗಾದರೂ ಉಳಿದಿರುವುದು ಸಮಾಧಾನದ ಸಂಗತಿ. ಕಟ್ಟ, ಕಪಿಲೆ, ಏತ, ಮದಕ, ಕೆರೆ, ಕಟ್ಟೆ , ಗೋಕಟ್ಟೆ, ಕುಂಟೆ, ಬೆಂಚೆ, ಮೆಂಚೆ ಹೀಗೆ ಪಟ್ಟಿ ಮಾಡುತ್ತ ಹೋದರೆ ಪಾರಂಜವ್ಯಗಳ ಸರಣಿಯೇ ನಮ್ಮೆದುರು ತೆರೆದುಕೊಳ್ಳುತ್ತವೆ. ಅವೆಲ್ಲದರ ಕೇಂದ್ರ ಸಮುದಾಯ ಆಗಿರುತ್ತಿತ್ತು ಎಂಬುದು ಗಮನಾರ್ಹ ಸಂಗತಿ. ಸಹಭಾಗಿತ್ವ ಇವುಗಳ ಮುಖ್ಯ ಲಕ್ಷಣ. ಯಾರೋ ಒಬ್ಬರಿಂದ, ಒಬ್ಬರಿಗಾಗಿ- ವ್ಯಕ್ತಿ ಕೇಂದ್ರತ ವ್ಯವಸ್ಥೆಯಾಗಿ ಅವು ಅಸ್ತಿತ್ವ ಪಡೆದವುಗಳಲ್ಲ. ಸುತ್ತಲಿನ ಹತ್ತು ಹಲವು ಕುಟುಂಬಗಳ ಬದುಕಿನ ಆಧಾರವಾಗಿ, ಜೀವನದ ಮೂಲ ಸ್ರೋತವಾಗಿ ನಿಂತ ಮಂತ ಪರಿಕಲ್ಪನೆ ಅವುಗಳ ಹಿಂದಿವೆ. ಅವುಗಳ ನಿರ್ಮಾಣ ಹಾಗೂ ಸಂರಕ್ಷಣೆಗಳೆರಡೂ ಸಮುದಾಯದ ಒಕ್ಕಟ್ಟಿನಲ್ಲೇ ಆಗುತ್ತಿದ್ದವು.
ಮತ್ತೊಂದು ವಿಶೇಷ ಸಂಗತಿಯೆಂದರೆ ಇವೆಲ್ಲವೂ ಮಾನವ ಶ್ರಮದಿಂದಲೇ ಅಸ್ತಿತ್ವ ಪಡೆದಂಥವು. ಯಾವುದೇ ಯಂತ್ರ ಶಕ್ತಿಯ ಕ್ಷಣದ ಅವಾಂತರವಲ್ಲ. ಹೀಗಾಗಿ ನಿರ್ದಿಷ್ಟ ಮಿತಿಯೊಳಗೆ ಅಪಾಯ ರಹಿತವಾಗಿ ರಚನೆಗೊಳ್ಳುತ್ತವೆ. ಮಾತ್ರವಲ್ಲ, ಶಾಶ್ವತ ಫಲ ಕೊಡುತ್ತವೆ. ತಲಪರಿಗೆಗಳನ್ನೇ ತೆಗೆದುಕೊಂಡರೆ ಅವು ಭೀಕರ ಬರಗಾಲದ ಸಂದರ್ಭದಲ್ಲೂ ನೀರು ಪೂರೈಸುತ್ತಿದ್ದವು. ತುಮಕೂರು ಜಿಲ್ಲೆಯೆಂದರೆ ಅದು ನಿಶ್ಚಿತ ಮಳೆ ಸರಾಸರಿಯನ್ನೂ ಹೊಂದಿರದ, ಯಾವುದೇ ನದಿ ಇಲ್ಲದ ಜಿಲ್ಲೆ. ಆದರೂ ತಲಪರಿಗೆಗಳು ಸುಸ್ಥಿತಿಯಲ್ಲಿರುವವರೆಗೆ ಯಾವತ್ತೂ ನೀರಿನ ಕೊರತೆ ಆ ಜಿಲ್ಲೆಯನ್ನು ಬಾಸಿರಲಿಲ್ಲ.
ತಲಪರಿಗೆಯ ನಿರ್ವಹಣೆಗೆಂದೇ ಗ್ರಾಮಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಇರುತ್ತಿತ್ತು ಎನ್ನುತ್ತಾರೆ ಮಧುಗಿರಿಯಲ್ಲಿ ತಲಪರಿಗೆಯೊಂದನ್ನು ಕಾಪಿಟ್ಟುಕೊಂಡು ಬಂದಿರುವ ಬಂಡೆ ರಾಜು. ಅವರಿಗೆ ಇದು ತಲೆತಲಾಂತರದಿಂದ ಬಂದ ಹೊಣೆಯಂತೆ. ಅತ್ಯುತ್ತಮ ರೀತಿಯಲ್ಲಿ ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ ರಾಜು. ಕೆರೆಯ ಮಧ್ಯದಲ್ಲಿರುವ ಈ ತಲಪರಿಗೆಯಿಂದ ಕಾಲುವೆಯ ಮೂಲಕ ನೀರನ್ನು ಹರಿಸಿಕೊಂಡು ಹೋಗಿ ಜಮೀನಿಗೆ ಒದಗಿಸಲಾಗುತ್ತದೆ. ಇಂದಿಗೂ ಸರಿ ಸುಮಾರು ೩೦ ಎಕರೆಯಷ್ಟು ಪ್ರದೇಶಕ್ಕೆ ನೀರಾವರಿ ಆಗುತ್ತಿದೆ.
ಇಂಥ ತಲಪರಿಗೆಗಳು ಜಿಲ್ಲೆಯಲ್ಲಿ ಪ್ರತಿ ಗ್ರಾಮದಲ್ಲೊಂದರಂತೆ ಇದ್ದವು ಎನ್ನುತ್ತಾರೆ ರಾಜು. ಇದನ್ನೇ ಪುಷ್ಟೀಕರಿಸುವ ಭೂಗರ್ಭ ಶಾಸ್ತ್ರಜ್ಞ ಜಯರಾಮ್ ದಕ್ಷಿಣ ಕರ್ನಾಟಕ ಭಾಗದಲ್ಲಿ ಕಂಡುಬರುವ ವಿಶಿಷ್ಟ ರೂಪಾಂತರ ಶಿಲೆಗಳನ್ನೊಳಗೊಂಡ ಬೆಟ್ಟ ಸಾಲುಗಳಿರುವೆಡೆಯಲ್ಲೆಲ್ಲ ತಲಪರಿಗೆಗಳಿದ್ದವು. ಆಂಧ್ರದ ರಾಯಲ ಸೀಮೆಯಿಂದಾರಂಭಿಸಿ ಮಧುಗಿರಿ, ಕೊರಟಗೆರೆ, ತುಮಕೂರು, ಶಿವಗಂಗೆ, ರಾಮನಗರ ಹೀಗೆಯೇ ಮುಂದುವರಿದು ಕೋಲಾರ ಚಿಂತಾಮಣಿಯನ್ನು ದಾಟಿ, ನೀಲಗಿರಿ ಬೆಟ್ಟ ಸಾಲಿನವರೆಗೂ ಇಂಥ ಶಿಲೆಗಳು ಕಾಣಸಿಗುತ್ತವೆ. ಸರಿ ಸುಮಾರು ಇನ್ನೂರು ವರ್ಷಗಳ ಹಿಂದೆ ಬೆಟ್ಟಗಳ ಸಾಲು ಒಡೆದು ಇಂಥ ಶಿಲಾಪದರ ನಿರ್ಮಾಣವಾಗಿದೆ. ನೆಲದಾಳಕ್ಕೆ ಸುಮಾರು ೫೦ರಿಂದ ೬೦ ಮೀಟರ್ ಆಳದಲ್ಲಿ ಬಂಡೆಗಳಲ್ಲಿ ನಿರ್ಮಾಣವಾಗಿರುವ ೨ ಮೀಟರ್ ಅಗಲದ ಬಿರುಕುಗಳೇ ತಲಪರಿಗೆಗಳು ಉದ್ಭವಿಸಲು ಕಾರಣ ಎಂಬುದು ಜಯರಾಮ್ ಅಭಿಮತ.
ಮಳೆಗಾಲದಲ್ಲಿ ಬೆಟ್ಟಗಳ ಮೇಲೆ ಬಿದ್ದು ಹರಿದುಹೋಗುವ ನೀರು ಒಂದಷ್ಟು ಬಂಡೆಗಳ ಪದರಗಳಲ್ಲಿ ಒಳ ನುಗ್ಗುತ್ತದೆ. ಆಳಕ್ಕೆ ಹೋದಂತೆಲ್ಲ ಶಿಲಾಪದರಗಳಲ್ಲಿನ ಮಿಲಿಯಾಂತರ ರಂಧ್ರಗಳಲ್ಲಿ ನುಸುಳಿ ಒಂದು ನಿರ್ದಿಷ್ಟ ಕೇಂದ್ರದಲ್ಲಿ ಸಂತೃಪ್ತ ( ಸ್ಯಾಚುರೇಶನ್) ಸ್ಥಿತಿ ತಲುಪುತ್ತದೆ. ಅಲ್ಲಿ ಭೂಮಿಯ ಪದರಗಳಲ್ಲಿನ ಒತ್ತಡ ತಾಳಲಾರದೇ ದುರ್ಬಲ ಸ್ಥಳದಲ್ಲಿ ನೆಲದಾಳದಿಂದ ಮೇಲಕ್ಕೆ ಉಕ್ಕುತ್ತದೆ. ಅದರ ಸುತ್ತ ಗುಂಡಿ ತೋಡಿಕೊಂಡು ನೀರಿನ ಬಳಕೆಗೆ ಅನುಕೂಲವಾಗುವಂಥ ನಿರ್ಮಾಣಗಳನ್ನು ಮಾಡಿಕೊಳ್ಳಲಾಗುತ್ತದೆ. ಅವೇ ತಲಪರಿಗೆಗಳು ಎಂಬುದು ಜಯರಾಮ್ ವ್ಯಾಖ್ಯಾನ.
ಇಂದು ಜಲಪಾತಳಿ, ಮಳೆ ಸರಾಸರಿ ಎಲ್ಲವೂ ಕುಸಿದಿವೆ. ಸಾಲದ್ದಕ್ಕೆ ಬೋರ್‌ವೆಲ್‌ಗಳ ಸಂಖ್ಯೆ ವೃದ್ಧಿಸಿದೆ. ನಿರ್ವಹಣೆಯ ಶಿಸ್ತೂ ಜನರಲ್ಲಿ ಉಳಿದಿಲ್ಲ. ಇವೆಲ್ಲದರ ಪರಿಣಾಮ ತಲಪರಿಗೆಗಳು ಕಾಣೆಯಾಗುತ್ತಿವೆ ಎನ್ನುತ್ತಾರೆ. ಅವರು. ಹೀಗೆ ಅನಾಯಾಸವಾಗಿ ಸೋಸಿ ಸಿಗುತ್ತಿದ್ದ ಶುದ್ಧನೀರನ್ನು ಬಿಟ್ಟು ಫ್ಲೋರೈಡ್ ಕಕ್ಕುವ ಬೋರ್‌ವೆಲ್‌ಗಳ ಮೊರೆ ಹೋಗಿರುವುದು ಎಷ್ಟು ಸರಿ ? ವಿವೇಚನೆಗೆ ಇದು ಸಕಾಲ.
ÇÝÓ…r "vÝű…': ಶಿವಗಂಗೆ ಬೆಟ್ಟದಲ್ಲಿ ಇರುವ ಅಪರೂಪದ, ವಿಸ್ಮಯ ಹುಟ್ಟಿಸುವ ಒಳಕಲ್ಲು ತೀರ್ಥ ಸಹ ಅತ್ಯುತ್ತಮ ತಲಪರಿಗೆಗಳಲ್ಲಿ ಒಂದು.

ತಲಪರಿಗೆ ಕೆಲಸಕ್ಕೆ ಮನೆಗೊಂದಾಳು, ಬರದಿದ್ದರೆ ಊರೇ ಹಾಳು


ಅದು ಚುಮು ಚುಮು ಮುಂಜಾವು. ಆ ಹಳ್ಳಿಯಲ್ಲಿ ಸೂರ್ಯ ಕಣ್ಣು ಬಿಡಲು ಇನ್ನೂ ಒಂದು ಗಂಟೆ ಇದೆ ಎನ್ನುವಾಗಲೇ ತಮಟೆಯ ಸದ್ದು ಮೊಳಗಲಾರಂಭಿಸಿದೆ. ಹಲಗೆ ಹೊಡೆಯುತ್ತ ವ್ಯಕ್ತಿಯೊಬ್ಬ ಊರ ಬೀದಿಬೀದಿಯಲ್ಲಿ ಸಾಗುತ್ತಿದ್ದಾನೆ. ‘ಕೇಳ್ರಪ್ಪೋ ಕೇಳ್ರಿ, ..........ರಲ್ಲಿ ಇವತ್ತು ತಲಪುರಗೆ ಕೆಲ್ಸಕ್ಕೆ ಗಮಕಾರ್ರು ಕರ್‍ದಿದಾರೆ. ಪ್ರತಿ ಮನೆಯಿಂದ ಒಂದೊಂದಾಳು ಮೂಡು ಹುಟ್ಟೋಕೆ ಮೊದಲು, ಮಾರಮ್ಮನ ದೇವಸ್ಥಾನದ ಮುಂದಿನ ಕಟ್ಟೆಗೆ ಬಂದು ಸೇರ್‍ಕೋಬೇಕು....’
ಹಲಗೆಯವನ ಧ್ವನಿ ಕೇಳುತ್ತಿದ್ದಂತೆ ಒಂದೊಂದೇ ಮನೆಯವರು ಎದ್ದು ಲಗುಬಗೆಯಿಂದ ಸಜ್ಜಾದರು. ಮನೆ ಹೆಂಗಸರು ಒಲೆ ಹೊತ್ತಿಸಿ ಎಸರು ಇಟ್ಟರೆ, ಗಂಡಸರು ಹಾರೆ, ಗುದ್ದಲಿ, ಮಚ್ಚು ಇತ್ಯಾದಿ ಹತ್ಯಾರ ಹುಡುಕಿಕೊಳ್ಳಲಡಿಯಿಟ್ಟರು. ಅರ್ಧಗಂಟೆಯೊಳಗೆ ಚಾ ಕುಡಿದು, ಬುತ್ತಿ ಕಟ್ಟಿಕೊಂಡ ಈರ, ವೆಂಕ, ನಾಣಿ, ಸೀನ, ದೊಡ್ಡೇಗೌಡ...ಹೀಗೆ ಒಬ್ಬೊಬ್ಬರಾಗಿ ಮನೆಯಿಂದ ಹೊರಬಿದ್ದು ರಸ್ತೆಗುಂಟ ಗೌಜೆಬ್ಬಿಸಲಾರಂಭಿಸಿದರು.
‘ಏ ಬಸ್ಯಾ, ಹೊತ್ತು ಹುಟ್ಟೋಕಾಯ್ತು ಏಳಲೇ, ತಲಪುರಗೆ ಕೆಲ್ಸ ಐತೆ, ಬಾರ್‍ಲ. ಇಲ್ಲಾ ನಿನ್ ಜನಾನಾದ್ರೂ ಕಳ್ಸು. ಇಲ್ಲಾಂದ್ರ ದಂಡ ಕಟ್ಟಬೇಕಾಯ್ತದೆ ನೋಡು’ ಎಂದ ಈರಣ್ಣ. ಅವನ ದನಿ ಕೇಳಿದ ಬಸ್ಯಾ ಒಳಗಿಂದಲೇ ಕೂಗಿದ. ‘ಇಲ್ಲಲೇ ಈರಣ್ಣ, ನಂಗಿವತ್ತು ಮೈಗೆ ಹುಸಾರಿಲ್ಲ. ತಗ್ಗಿನ ಮನೆ ಗುತ್ಯನ್ನ ಮಯ್ಯಾಳಿಗೆ ಹೇಳಿದೀನಿ. ಬತ್ತಾನೆ ಬಿಡು’ ಎಂದ.
ಹೀಗೆ ಸಂಭಾಷಣೆ ಸಾಗುತ್ತ ಹಾದಿ ಮುಗಿಯುವ ಹೊತ್ತಿಗೆಲ್ಲ ಮಾರಮ್ಮನ ಗುಡಿ ಮುಂದೆ ಸೇರಿರುತ್ತಾರೆ. ಗಮಕಾರ ರಂಗಣ್ಣ ಕಟ್ಟೆ ಮ್ಯಾಲೆ ನಿಂತು ತಲೆ ಎಣಿಸುತ್ತಿರುತ್ತಾನೆ. ಒಬ್ಬೊಬ್ಬರನ್ನಾಗಿ ಹೆಸರಿಡಿದು ಕರೆದು ಹಸಗೆ ಹಂಚುತ್ತಿದ್ದಾನೆ. ಎಲ್ಲರೂ ಬಂದು ಸೇರುತ್ತಿದ್ದಂತೆ ಎಲ್ಲ ಹಸಗೆ ಹಂಚಿ ಮುಗಿಯುತ್ತದೆ. ಸರಿ ಇನ್ನೇನಿದ್ದರೂ ತಲಪರಿಗೆ ಬಳಿ ಹೋಗಿ ಮಾರು ಹಾಕಿಕೊಡುವುದಷ್ಟೇ ಬಾಕಿ. ಅದೆಲ್ಲವೂ ಮುಗಿದು ಕೆಲಸ ಆರಂಭಿಸುವಷ್ಟರಲ್ಲಿ ಮಲ್ಲನೆ ಮೂಡಣ ಕೆಂಪಗಾಗ ತೊಡಗುತ್ತದೆ. ಹೊತ್ತು ಏರಿದಂತೆಲ್ಲ ಕೆಲಸದ ಭರಾಟೆಯೂ ಹೆಚ್ಚುತ್ತದೆ. ನಡು ನೆತ್ತಿಗೆ ಸೂರ್ಯ ಬರುವುದರೊಳಗೆ ಒಂದು ಹಂತದ ಕೆಲಸ ಮುಗಿಸಲಾಗುತ್ತದೆ.
ಪಾರಂಪರಿಕ ಜಲವ್ಯವಸ್ಥೆಗಳಲ್ಲಿ ಅತ್ಯಂತ ಅಮೂಲ್ಯ ಮಾದರಿಗಳಲ್ಲಿ ಒಂದಾದ ತಲಪರಿಗೆಗಳ ನಿರ್ವಹಣೆಯ ರೀತಿಯೇ ಇಂಥದ್ದು. ಅದು ಊರೊಟ್ಟಿನ ಶ್ರಮವನ್ನು ಬೇಡುತ್ತದೆ. ಗ್ರಾಮಸ್ಥರೂ ಅದನ್ನು ತಮ್ಮ ಕರ್ತವ್ಯದ ಭಾಗವೆಂದು ತಿಳಿದು ಅಷ್ಟೇ ಆಸ್ಥೆಯಿಂದ ಮಾಡಲು ಮುಂದಾಗುತ್ತಾರೆ.
ಮಧುಗಿರಿ ಸಮೀಪದ ಚೋಳೇನಹಳ್ಳಿಯಲ್ಲಿ ಜೀವಂತ ತಲಪರಿಗೆಯೊಂದನ್ನು ಇಂದಿಗೂ ನಿರ್ವಹಿಸುತ್ತಿರುವ ಗಮಕಾರ, ಬಂಡೆ ರಂಗರಾಜು ಅವರು ಇಡೀ ಪ್ರಕ್ರಿಯೆಯನ್ನು ವಿವರಿಸುತ್ತ ಹೋದರೆ ನಿಜಕ್ಕೂ ಕೌತುಕ ಮೂಡುತ್ತದೆ. ಮಧುಗಿರಿಯ ಆ ಪುಟ್ಟ ತಲಪರಿಗೆ ಇಂದಿಗೂ ೩೦ ಎಕರೆಯಷ್ಟು ಜಮೀನಿಗೆ ನೀರುಣಿಸುತ್ತ ನಲಿಯುತ್ತಿದೆ. ಇಡೀ ಗ್ರಾಮದ ಜೀವಾಳವಾಗಿ ನಿಂತಿರುವ ಇದು ಈವರೆಗೆ ಬತ್ತಿದ ಉದಾಹರಣೆಯೇ ಇಲ್ಲ. ಪ್ರತಿವರ್ಷ ಊರಿನ ಎಲ್ಲರೂ ಸೇರಿ ಕಾಲುವೆ ಸ್ವಚ್ಛಗೊಳಿಸುತ್ತಾರೆ. ಯಾವುದೇ ಭೇದವಿಲ್ಲದೇ ಎಲ್ಲ ಜಮೀನಿನ ಧಣಿಗಳೂ ಕೆಲಸಕ್ಕೆ ಬರುತ್ತಾರೆ. ತಲಪರಿಗೆ ಕೆಲಸವೆಂದರೆ ಅದೊಂದು ಹಬ್ಬವಿದ್ದಂತೆ ಎಂಬುದು ಅವರ ಹೆಮ್ಮೆಯ ಮಾತು.
ವರ್ಷವಿಡೀ ನೀರಿನ ಹಂಚಿಕೆ, ತಲಪರಿಗೆ ನಿರ್ವಹಣೆ, ಕಾಲುವೆಗಳ ಸ್ವಚ್ಛತೆ ಇತ್ಯಾದಿಗಳೆಲ್ಲದರ ನಿರ್ವಹಣೆಯನ್ನು ಊರಿನಲ್ಲಿ ಪಾರಂಪರಿಕವಾಗಿ ಬಂದ ಒಂದು ಮನೆಯವರಿಗೆ ನೀಡಿರುತ್ತಾರೆ. ಅಂಥವರನ್ನು ‘ಗಮಕಾರ’ ಎಂದು ಕರೆಯಲಾಗುತ್ತದೆ. ಚೋಳೇನಹಳ್ಳಿಯ ಈ ನಿರ್ದಿಷ್ಟ ತಲಪರಿಗೆಯ ಮಟ್ಟಿಗೆ ಹೇಳುವುದಾದರೆ ಬಂಡೆ ರಂಗರಾಜು ಗಮಕಾರರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಮಕಾರರು ಕರೆದರೆ ಪ್ರತಿ ಜಮೀನಿನವರೂ ಕೆಲಸಕ್ಕೆ ಬರುವುದು ಕಡ್ಡಾಯ. ಊರಿನ ಮುಖಂಡ, ಗೌಡರಿಗೂ ಇದರಿಂದ ವಿನಾಯ್ತಿ ಇಲ್ಲ. ಒಂದೊಮ್ಮೆ ಅನಿವಾರ್ಯ ಕಾರಣಗಳಿಂದ ಯಾವುದೇ ಒಂದು ಮನೆಯವರಿಗೆ ಬರಲಾಗಲಿಲ್ಲ ಎಂದರೆ ಬದಲಿ ಆಳನ್ನಾದರೂ ಕಳುಹಿಸಿಕೊಡಬೇಕು. ಎರಡೂ ಇಲ್ಲವೆಂದರೆ ದಿನಕ್ಕೆ ನೂರು ರೂ. ದಂಡವನ್ನು ವಿಸಲಾಗುತ್ತದೆ. ಬೆಳಗ್ಗೆ ೭ ಗಂಟೆಗೆ ಕೆಲಸಕ್ಕೆ ಹಾಜರಿರಲೇ ಬೇಕು. ತಡವಾಗಿ ಬಂದರೆ ಅಂದರೆ ಕೆಲಸ ಆರಂಭವಾದ ಮೇಲೆ ಬಂದರೆ ೧೨೫ ರೂ. ದಂಡ ವಿಸಲಾಗುತ್ತದೆ. ಮಧ್ಯದಲ್ಲಿ ಕೆಲಸ ಬಿಟ್ಟು ಹೋದರೂ ಈ ಪ್ರಮಾಣ ಇನ್ನೂ ಹೆಚ್ಚು. ಅಂಥವರ ಜೇಬಿಗೆ ಸಾವಿರ ರೂ. ತ್ಯಾಮಾನ ಬಂತೆಂದೇ ಅರ್ಥ. ಹೀಗೆ ಸಂಗ್ರಹವಾಗುವ ಹಣವನ್ನು ಉಳಿಯಾಳು ದಂಡ ಎಂದು ಕರೆಯಲಾಗುತ್ತದೆ. ಇದನ್ನು ಸಂಗ್ರಹಿಸಿಟ್ಟು, ಮಳೆಗಾಲದಲ್ಲಿ (ಸಾಮಾನ್ಯವಾಗಿ)ಶ್ರಾವಣದಲ್ಲಿ ನಡೆಯುವ ಗಂಗೆ ಪೂಜೆ, ಊರೊಟ್ಟಿನ ಹಬ್ಬ , ಸಂತರ್ಪಣೆ ಇತ್ಯಾದಿಗಳಿಗೆ ಬಳಸಲಾಗುತ್ತದೆ.
ಸಾಮಾನ್ಯವಾಗಿ ನವೆಂಬರ್‌ನಿಂದ ಜೂನ್ ನಡುವಿನ ಅವಯಲ್ಲಿ ತಲಪರಿಗೆ ಕೆಲಸ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ರೈತರ ಕೆಲಸಗಳೂ ಮುಗಿದಿರುತ್ತದೆ. ಜತೆಗೆ ಮಳೆಗೆ ಮುನ್ನ ಕಾಲುವೆ ಇತ್ಯಾದಿಗಳನ್ನು ದುರಸ್ತಿಗೊಳಿಸಿಕೊಳ್ಳಬೇಕೆಂಬ ಉದ್ದೇಶವೂ ಇದರ ಹಿಂದಿದೆ. ಊರಿನವರನ್ನು ನಾಲ್ಕು ನಾಲ್ಕು ಜನರ ಒಂದೊಂದು ತಂಡವಾಗಿ ವಿಂಗಡಿಸಲಾಗುತ್ತದೆ. ಇಂಥ ತಂಡಗಳಿಗೆ ಕಾಲುವೆ ಒಟ್ಟು ಉದ್ದದಲ್ಲಿ ಒಂದೊಂದು ಮಾರಿನಂತೆ ಕೆಲಸ ವಹಿಸಿಕೊಡುತ್ತಾರೆ ಗಮಕಾರರು. ಇದಕ್ಕೆ ಹಸಗೆ ಹಾಕಿ ಕೊಡುವುದು ಎನ್ನುತ್ತಾರೆ. ಅಷ್ಟು ಕೆಲಸ ಮುಗಿಸುವುದು ಅವರ ಜವಾಬ್ದಾರಿ. ಇಷ್ಟಾಗಿಯೂ ಉಳಿಯುವ ಹೆಚ್ಚುವರಿ ಮಂದಿಗೆ ಕಾಲುವೆಯಲ್ಲಿ ಅಕ್ಕ ಪಕ್ಕ ಬೆಳೆದ ಜಾಲಿ ಇತ್ಯಾದಿ ಪೊದೆಗಳನ್ನು ಕಡಿಯುವುದು, ಬೇರುಗಳು ಕಾಲುವೆಗೆ ಬಂದಿದ್ದರೆ ಅದನ್ನು ತೆಗೆದು ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವುದು ಇತ್ಯಾದಿ ಕೆಲಸ ವಹಿಸಲಾಗುತ್ತದೆ. ಇದಕ್ಕೂ ಲೆಕ್ಕವಿರುತ್ತದೆ. ಪ್ರತಿಯೊಬ್ಬರೂ ತಾವೆಷ್ಟು ಪೊದೆ ತೆಗೆದಿದ್ದೇವೆ, ಬೇರು ಕಿತ್ತಿದ್ದೇವೆ ಎಂಬುದನ್ನು ಕೊನೆಯಲ್ಲಿ ತೋರಿಸಬೇಕು.
ಸಾಮಾನ್ಯವಾಗಿ ಊರಿನ ರೈತರೇ ಸಭೆ ಸೇರಿ ಗಮಕಾರರನ್ನು ನೇಮಿಸುತ್ತಾರೆ. ಆತ ನಿಷ್ಪಕ್ಷಪಾತಿಯಾಗಿ ವರ್ತಿಸಬೇಕಾಗುತ್ತದೆ. ನೀರಿನ ಹಂಚಿಕೆಯಲ್ಲೂ ನಿಗದಿತ ಮಾನದಂಡ ಅನುಸರಿಸಲಾಗುತ್ತದೆ. ಈ ವಿಚಾರದಲ್ಲಿ ಇನ್ನೊಂದು ಕುತೂಹಲದ ಪದ್ಧತಿ ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತದೆ. ತಲಪರಿಗೆಯಿಂದ ರೈತರ ಜಮೀನಿಗೆ ನೀರು ಹರಿಯುವ ಕಾಲುವೆಯ ಆರಂಭದಲ್ಲಿ ಒಂದು ಮರವನ್ನು ಗುರುತಿಸಿರುತ್ತಾರೆ. ಅದರ ಕೊಂಬೆಗೆ ಮಧ್ಯಮ ಗಾತ್ರದ ಮಡಕೆಯೊಂದನ್ನು ತೂಗುಹಾಕಲಾಗುತ್ತದೆ. ಅದರ ತಳ ಭಾಗದಲ್ಲಿ ಸಣ್ಣ ರಂಧ್ರವನ್ನು ಮಾಡಲಾಗಿರುತ್ತದೆ. ಕಾಲುವೆಯಿಂದ ನೀರು ಹರಿಸಲಾರಂಭಿಸಿದ ತಕ್ಷಣ ಆ ಮಡಕೆಗೆ ನೀರು ತುಂಬಲಾಗುತ್ತದೆ. ಕೆಳಗಿನ ರಂಧ್ರದಿಂದ ನೀರು ಸೋರುತ್ತ ಹೋಗಿ ಮಡಕೆ ಸಂಪೂರ್ಣ ಖಾಲಿಯಾಗುವವರೆಗೂ ಕಾಲುವೆಯಿಂದ ಜಮೀನಿಗೆ ನೀರು ಹೋಗುತ್ತದೆ. ನಂತರ ಇನ್ನೊಂದು ಜಮೀನಿಗೆ ನೀರನ್ನು ತಿರುಗಿಸಲಾಗುತ್ತದೆ. ಒಂದು ಎಕರೆಗೆ ಒಂದು ಮಡಕೆ ನೀರು ಸೋರಿ ಹೋಗುವವರೆಗೆ ನೀರು. ಆಯಾ ವರ್ಷದ ಮಳೆ, ತಲಪರಿಗೆಯಲ್ಲಿ ಸಂಗ್ರಹವಾದ ನೀರಿನ ಪ್ರಮಾಣ ಇತ್ಯಾದಿಗಳನ್ನು ಅವಲಂಬಿಸಿ ಮಡಕೆಯ ಗಾತ್ರ ನಿರ್ಧಾರವಾಗುತ್ತದೆ.
ಒಟ್ಟಾರೆ ಸಂಪೂರ್ಣ ಗ್ರಾಮಸ್ಥರೇ ರೂಪಿಸಿಕೊಂಡ ವ್ಯವಸ್ಥೆಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ, ಯಾವುದೇ ಗೊಂದಲವಿಲ್ಲದೇ ನೀರು ನಿರ್ವಹಣೆ ಮಾಡುವುದು ಕಂಡಾಗ ಅಚ್ಚರಿಯಾಗದೇ ಇರದು. ದೇಸಿ ಜ್ಞಾನದ ಬಗೆಗೆ ಅವ್ಯಕ್ತ ಹೆಮ್ಮೆಯೂ ಮೂಡುತ್ತದೆ. ಇಂಥ ಅದೆಷ್ಟೋ ಗ್ರಾಮೀಣ ನೆಲಮೂಲದ ಜ್ಞಾನದ ಜಾಗವನ್ನು ತಾಂತ್ರಿಕತೆಯ ಹೆಸರಿನ ಅವೈಜ್ಞಾನಿಕ ಮಾನದಂಡಗಳು ಆಕ್ರಮಿಸಿಕೊಂಡಿವೆ. ಅತ್ತ ದೇಸಿ ಜ್ಞಾನವೂ ಹೊಸ ತಲೆಮಾರಿಗೆ ಉಳಿದಿಲ್ಲ, ಇತ್ತ ಆಧುನಿಕ ಜ್ಞಾನವೂ ಸುಸ್ಥಿರವಾಗಿಲ್ಲ ಎಂಬುದು ಪರಿಸ್ಥಿತಿಯ ದುರಂತ.
‘ಲಾಸ್ಟ್’ಡ್ರಾಪ್: ಭಾರತದ ನೀರಭೀಷ್ಮ ಅನುಪಮ ಮಿಶ್ರಾ ಈ ಹಿನ್ನೆಲೆಯಲ್ಲೇ ಹೇಳಿದ ಮಾತೊಂದನ್ನು ನೆನಪಿಸಿಕೊಳ್ಳಲೇ ಬೇಕು. ಬೋರ್‌ವೆಲ್‌ಗಳು ಸದಾಕಾಲ ಶುದ್ಧ, ಸುರಕ್ಷಿತ ನೀರು ಕೊಡುವುದಿದ್ದರೆ ಖಂಡಿತಾ ಅದನ್ನು ವೈಜ್ಞಾನಿಕ, ಆಧುನಿಕ ಸೌಲಭ್ಯವೆಂದು ಒಪ್ಪಿಕೊಳ್ಳುತ್ತೇನೆ. ಎಂಥ ಮಾರ್ಮಿಕ ಮಾತು.

ಕೆರೆ ತುಂಬ ನೀರು, ಗಂಗೆಗಿಷ್ಟು ಖೀರು!



ಆ ಸಡಗರಕ್ಕೆ ಸಾಟಿಯೇ ಇಲ್ಲ. ಕೆರೆ ತುಂಬಿತೆಂದರೆ ಅದು ಎಲ್ಲ ಸಂಭ್ರಮಕ್ಕಿಂತ ಮಿಗಿಲು. ಅಲ್ಲೊಂದು ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತದೆ. ಗ್ರಾಮ ಕರ್ನಾಟಕದಲ್ಲಿ ಅದಕ್ಕೆ ತನ್ನದೇ ಆದ ವೈಶಿಷ್ಟ್ಯವಿರುತ್ತದೆ. ಒಂದೊಂದು ಭಾಗದಲ್ಲಿ ಒಂದೊಂದು ತೆರನಾದ ಆಚರಣೆಗಳು. ಅಂಥ ಆಚರಣೆಗಳಲ್ಲಿನ ವೈವಿಧ್ಯಗಳಲ್ಲಿ ಗಂಗೆ ಪೂಜೆಯೂ ಒಂದು.
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಅದರಲ್ಲೂ ಮೈಸೂರು ಕರ್ನಾಟಕ ಭಾಗದಲ್ಲಿ ಶ್ರಾವಣದಲ್ಲಿ ಗಂಗೆ ಪೂಜೆ ನೆರವೇರುತ್ತದೆ. ಹಳ್ಳಿಗರು ಸ್ಥಳೀಯವಾಗಿ ಅವರದೇ ಆದ ಸಂಪ್ರದಾಯವೊಂದನ್ನು ಪಾಲಿಸಿಕೊಂಡು ಬಂದಿರುತ್ತಾರೆ. ಕೆರೆ ದಂಡೆಯಲ್ಲಿ ಹಸಿರು ಚಪ್ಪರ ಹಾಕಿ. ಊರವರೆಲ್ಲ ಅಲ್ಲಿ ಸೇರಿ ಹಬ್ಬಾಚರಣೆ ಮಾಡುವುದು ಅದರ ಪ್ರಮುಖ ಅಂಗ. ಸಮೃದ್ಧ ಮಳೆಯಾಗಿ ಕೆರ ತುಂಬಿ ಕೋಡಿ ಬಿದ್ದ ಬಳಿಕ ಪುರೋಹಿತರ ಬಳಿ ಗಮಕಾರ ಊರಿನ ಗೌಡರ ಜತೆಗೂಡಿ ಮುಹೂರ್ತ ಕೇಳಲು ಹೋಗುತ್ತಾನೆ. ಅದೇ ವಾರದಲ್ಲಿ ಪ್ರಶಸ್ತ ದಿನವೊಂದನ್ನು ಪುರೋಹಿತರು ಸೂಚಿಸುತ್ತಾರೆ. ಅಂದು ಗಂಗೆ ಪೂಜೆ ನೆರವೇರಿಸುವುದು ನಿಕ್ಕಿಯಾದ ಮೇಲೆ ಗಮಕಾರ ಊರಿನ ತುಂಬೆಲ್ಲ ತಮಟೆ ಸಾರಿಸುತ್ತಾನೆ. ಊರೊಟ್ಟಿನ ಕೆಲಸಕ್ಕೆ ಬಂದು ಸೇರಿದ್ದವರೆಲ್ಲರ ಮನೆಗೆ ಹಸಗೆ ಹೋಗುತ್ತದೆ.
ಈ ಕೆರೆ ಹಬ್ಬದಲ್ಲಿ ತೋಟಿ, ತಳವಾರ, ನೀರಗಂಟಿ ಹಾಗೂ ಗಮಕಾರರಿಗೆ ಹೆಚ್ಚಿನ ಪ್ರಾಶಸ್ತ್ಯ. ಗಮಕಾರನೇ ಮುಂದೆ ನಿಂತು ಎಲ್ಲವನ್ನೂ ನೆರವೇರಿಸಬೇಕು. ಗಂಗೆ ಪೂಜೆಯಲ್ಲಿ ಆತನದ್ದೇ ಪಾರುಪತ್ಯ. ವರ್ಷವಿಡೀ ಕೆರಯನ್ನು ಕಣ್ಣಲ್ಲಿ ಕಣ್ಣಿಟ್ಟು ತಳವಾರ ಕಾದಿರುತ್ತಾನೆ. ತೋಟಿ ಕೆರೆಯ ಉಸ್ತುವಾರಿ ನೋಡಿಕೊಂಡಿರುತ್ತಾನೆ. ನೀರಗಂಟಿ ಊರಿನ ಜಮೀನಿಗೆ ಸಮನಾಗಿ ನೀರ ಹಂಚಿಕೆ ಮಾಡಿರುತ್ತಾನೆ. ಗಮಕಾರರು ಜಲಮೂಲದ ನಿರ್ವಹಣೆಯ ಹೊಣೆ ನಿಭಾಯಿಸಿರುತ್ತಾರೆ. ಒಟ್ಟಿನಲ್ಲಿ ಎಲ್ಲರೂ ಕೂಡಿ ಊರಿಗೆ ನೀರಿನ ಕೊರತೆ ಬಾಸದಂತೆ ಎಚ್ಚರವಹಿಸಿರುತ್ತಾರೆ. ಅಂಥವರಿಗೊಂದು ಕೃತಜ್ಞತಾ ಸಮರ್ಪಣೆಯ ಕಾರ್ಯ ಗಂಗೆ ಪೂಜೆಯ ಸಂದರ್ಭದಲ್ಲಿ ನೆರವೇರುತ್ತದೆ.
ತೋಟಿ, ತಳವಾರ, ನೀರಗಂಟಿ ಹೀಗೆ ಕೆರೆಗೆ ಸಂಬಂಸಿದ ಸಿಬ್ಬಂದಿಯನ್ನು ಅವರ ಕುಟುಂಬವನ್ನು ಇಡೀ ಊರವರು ಸೇರಿ ಸಾಕುತ್ತಾರೆ. ಅವರಿಗೆ ಜೀವನಾಧಾರವಾಗಿ ಬೇರೆ ಜಮೀನಾಗಲೀ, ವೃತ್ತಿಯಾಗಲೀ ಇರುವುದಿಲ್ಲ. ಕೆರೆ ತುಂಬಿದ ದಿನದಿಂದಲೇ ಅವರ ವರ್ಷದ ಕಸುಬು ಆರಂಭವಾಗುತ್ತದೆ. ಪ್ರತಿದಿನ ಮಧ್ಯಾಹ್ನ ಗಮಕಾರರ ಮನೆಯಿಂದಲೇ ಅವರಿಗೆ ಊಟ ಕಳುಹಿಸಿಕೊಡಲಾಗುತ್ತದೆ. ಕೆಲವೆಡೆ ಇಡೀ ಊರವರೂ ಒಂದೊಂದು ದಿನ ಒಬ್ಬೊಬ್ಬರ ಮನೆಯಂತೆ ಪಾಳಿಯ ಮೇಲೆ ಊಟ ಕಳುಹಿಸಿಕೊಡುವುದೂ ಉಂಟು. ಇದಲ್ಲದೇ ವರ್ಷದ ಜೀವನ ನಿರ್ವಹಣೆಗೆ ಜಮೀನು ಮಾಲಿಕರು ಕಾಳು ಕಡ್ಡಿ ಕೊಡುವ ಪದ್ಧತಿಯೂ ಇದೆ. ಸಾಮಾನ್ಯವಾಗಿ ಎಕರೆಯೊಂದಕ್ಕೆ ಒಂದು ಹೊರೆ ಹುಲ್ಲು, ಎರಡು ಮೊರದಷ್ಟು ಕಾಳು ಕೊಡುವುದು ರೂಢಿ. ಇನ್ನು ಊರಿನ ಯಾವುದೇ ಮನೆಯಲ್ಲಿ ಮದುವೆ ಮುಂಜಿಯಂಥ ಶುಭ ಕಾರ್ಯ ನಡೆದಾಗ ಆಯಾ ಮನೆಯಿಂದ ಕುಟುಂಬದ ಸದಸ್ಯರಿಗೆ ತಂದಂತೆ ಕೆರೆಗೆ ಸಂಬಂಸಿದ ತೋಟಿ, ತಳವಾರ ಇತ್ಯಾದಿಯವರಿಗೂ ಹೊಸಬಟ್ಟೆ ತರುತ್ತಾರೆ. ಪ್ರತಿಯೊಬ್ಬರೂ ಅತ್ಯಂತ ಅಕ್ಕರೆಯಿಂದ ಇವರನ್ನು ತಮ್ಮ ಕುಟುಂಬ ಸದಸ್ಯರಂತೆಯೇ ಕಾಣುವುದು ವಿಶೇಷ.
ಇನ್ನು ಗಂಗೆ ಪೂಜೆಯ ದಿನದಲ್ಲಂತೂ ಇವರಿಗೆ ವಿಶೇಷ ಸಮ್ಮಾನ. ಊರವರೆಲ್ಲ ಸೇರಿ ಕಾಣಿಕೆ, ಸಿಹಿತಿಂಡಿ, ಹೊಸ ಬಟ್ಟೆಗಳನ್ನು ನೀಡಿ ಆದರಿಸುತ್ತಾರೆ. ಆ ದಿನ ಬೆಳಗ್ಗೆ ಬೇಗನೆದ್ದು ಊರಿಗೆ ಊರೇ ಸಂಭ್ರಮಕ್ಕೆ ಅಣಿಯಾಗುತ್ತದೆ. ಸಂಬಂಕರು, ನೆಂಟರಿಷ್ಟರು, ಸ್ನೇಹಿತರು, ಬೇರೆಯೂರಿಗೆ ಮದುವೆಯಾಗಿ ಹೋದ ಹೆಣ್ಣುಮಕ್ಕಳು ಹೀಗೆ ಎಲ್ಲರನ್ನೂ ಕೆರೆ ಹಬ್ಬಕ್ಕೆ ಆಹ್ವಾನಿಸಲಾಗುತ್ತದೆ. ಸೂರ್ಯೋದಯಕ್ಕೆ ಮುನ್ನ ಕೆರೆಯ ದಂಡೆಗೆ ಎಲ್ಲರೂ ಹೊಸ ಬಟ್ಟೆಯುಟ್ಟು ಬಂದು ಸೇರುತ್ತಾರೆ. ಊರ ಮುಂದಿನ ಗಂಗಮ್ಮನ ಗುಡಿಯಿಂದ ದೇವರ ವಿಗ್ರಹವನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕೆರೆಗೆ ತರಲಾಗುತ್ತದೆ. ಅಲ್ಲಿ ತೂಬಿನ ಕಟ್ಟೆಯ ಮೇಲೆ ಅದನ್ನು ಪ್ರತಿಷ್ಠಾಪಿಸಲಾಗುತ್ತದೆ. ಕೆರೆ ದಂಡೆಯುದ್ದಕ್ಕೂ ಹಸಿರು ಚಪ್ಪರದಲ್ಲಿ ಊರವರು ಬಂದು ನೆರೆಯುತ್ತಿದ್ದಂತೆಯೇ ಪುರೋ ಹಿತರು ವೇದಘೋಷಗಳೊಂದಿಗೆ ಪೂಜೆ ಆರಂಭಿಸುತ್ತಾರೆ. ಊರ ಗೌಡರು ಹಾಗೂ ವಿಶೇಷವಾಗಿ ಗಮಕಾರ ದಂಪತಿ ಗಂಗೆಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಗಂಗೆಗೆ ಮೊದಲ ಬಾಗಿನವನ್ನು ಈ ಎರಡೂ ಕುಟುಂಬದವರು ಅರ್ಪಿಸುತ್ತಾರೆ. ನಂತರದ ಸರದಿ ಊರಿನವರದ್ದು. ಒಬ್ಬೊಬ್ಬರಾಗಿ ಬಂದು ಅರಿಷಿಣ, ಕುಂಕುಮ, ಬಳೆ, ಹೂವು ಇತ್ಯಾದಿಗಳನ್ನೊಳಗೊಂಡ ಬಾಗಿನವನ್ನು ಭಕ್ತಿ ಪೂರ್ವಕವಾಗಿ ಕೆರೆಗೆ ಅರ್ಪಿಸುತ್ತಾರೆ.
ಇಷ್ಟೆಲ್ಲ ಮುಗಿಯುವ ವೇಳೆಗೆ ಹೊತ್ತು ನೆತ್ತಿಯ ಮೇಲೆ ಬಂದಿರುತ್ತದೆ. ಚಪ್ಪರದಡಿಯಲ್ಲಿ ಊರವರೆಲ್ಲ ಸೇರಿ ತಯಾರಿಸಿದ ಅಡುಗೆಯ ಪರಿಮಳ ಪಸರಿಸುತ್ತಿರುತ್ತದೆ. ವಿವಿಧ ಬಗೆಯ ಭಕ್ಷ್ಯಗಳು ಬಾಯಲ್ಲಿ ನೀರೂರಿಸುತ್ತಿರುತ್ತವೆ. ಗಂಗಮ್ಮನಿಗೆ ನೈವೇದ್ಯ ಆಗುತ್ತಿದ್ದಂತೆ ಸಾರ್ವಜನಿಕ ಸಂತರ್ಪಣೆ. ಯಾರೊಬ್ಬರೂ ಊಟವಿಲ್ಲದೇ ಹೋಗುವಂತೆಯೇ ಇಲ್ಲ. ಸಂಜೆಯವರೆಗೂ ಅನ್ನ ಸಂತರ್ಪಣೆ ಮುಂದುವರಿಯುತ್ತದೆ. ನಂತರ ಕೆರೆ ದಂಡೆಯಲ್ಲೇ ವಿವಿಧ ಆಟೋಟ ಸ್ಪರ್ಧೆ. ಹೆಂಗಸರು ಮಕ್ಕಳ ಭೇದವಿಲ್ಲದಂತೆ ಎಲ್ಲರೂ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಇಷ್ಟೆಲ್ಲ ಮುಗಿಯುವಾಗ ಹೊತ್ತು ಕಂತಲಾರಂಭಿಸಿರುತ್ತದೆ. ಮತ್ತೆ ಮೆರವಣಿಗೆಗೆ ಸಜ್ಜು. ಬೆಳಗ್ಗೆ ತಂದು ಕೆರೆ ತೂಬಿನ ಕಟ್ಟೆಯ ಮೇಲೆ ಪ್ರತಿಷ್ಠಾಪಿಸಲಾಗಿದ್ದ ಗಂಗಮ್ಮನ ಮೂರ್ತಿಯನ್ನು ಅಷ್ಟೇ ಸಂಭ್ರಮದಲ್ಲಿ ಮತ್ತೆ ಗುಡಿಗೆ ಕೊಂಡೊಯ್ದು ಇಟ್ಟು ವರ್ಷವೆಲ್ಲ ಉತ್ತಮ ಬೆಳೆ ಬರಲಿ ಎಂದು ಪ್ರಾರ್ಥಿಸಿ, ಪ್ರಸಾದ ಪಡೆದು ಎಲ್ಲರೂ ಮನೆಗಳಿಗೆ ಹಿಂತಿರುಗುತ್ತಾರೆ.
ಇದು ಕೆರೆಯ ಅಂಗಳದಲ್ಲೇ ನಡೆಯುವ ಪೂಜಾ ಕ್ರಮವಾದರೆ ಇನ್ನು ಕೆಲವೆಡೆ ಊರವರೆಲ್ಲ ಸೇರಿ ಸಮೀಪದ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಕ್ರಮವೂ ಇದೆ. ಮಳೆಗಾಲ ಆರಂಭವಾಗುತ್ತಿದೆ ಎನ್ನುವಾಗಲೇ ಊರ ಪ್ರಮುಖರೆಲ್ಲ ದೇವರ ಸನ್ನಿಗೆ ತೆರಳಿ ಹೂವು ಕೇಳುವ ಪದ್ಧತಿ ವಿಶೇಷವಾದ್ದು. ಅದರಲ್ಲೂ ಮಳೆ ಸರಿಯಾಗಿ ಆಗದೇ, ಬರದ ಸೂಚನೆ ಇರುವಾಗ ದೇವರಲ್ಲಿ ಹೂವು ಕೇಳುವುದಕ್ಕೆ ಅತ್ಯಂತ ಹೆಚ್ಚಿನ ಮಹತ್ವ. ಇಲ್ಲೂ ಸಹ ಊರ ಪ್ರಮುಖರು ಸೇರಿ ವಿಚಾರ ವಿಮರ್ಶೆ ನಡೆಸುತ್ತಾರೆ. ಪುರೋಹಿತರನ್ನು ಕೇಳಿ ಉತ್ತಮ ದಿನವೊಂದನ್ನು ಗುರುತಿಸಿಕೊಳ್ಳುತ್ತಾರೆ. ಅಂದು ಗೌಡರ ಮುಂದಾಳತ್ವದಲ್ಲಿ ಗಮಕಾರ ಮತ್ತಿತರರು ದೇವರ ಸನ್ನಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆನಂತರ ಮಹಾ ಮಂಗಳಾರತಿಯಾಗುತ್ತಿದ್ದಂತೆ ಮಳೆ, ಬೆಳೆಯ ಬಗ್ಗೆ ದೇವರಲ್ಲಿ ಪ್ರಾರ್ಥನೆ ಸಲ್ಲಸಿ, ಪ್ರಶ್ನೆಯನ್ನಿಡುತ್ತಾರೆ. ಹೂವು ಕೇಳುವುದು ಅಂದರೆ ಇದೇ. ಪೂಜೆಯಿಂದ ಸಂಪ್ರೀತನಾಗಿ ದೇವರು ಪ್ರಸಾದದ ಹೂವನ್ನು ಬೀಳಿಸಿದರೆ ಆ ವರ್ಷ ಮಳೆ ಬೆಳೆ ಸರಿಯಾಗಿ ಆಗುತ್ತದೆ ಎಂಬುದು ನಂಬುಗೆ. ಒಂದೊಮ್ಮೆ ಹೂವು ಬೀಳದಿದ್ದರೆ ಮಳೆ ಬರಲಿಕ್ಕಿಲ್ಲ, ಕೆರೆ ತುಂಬುವುದಿಲ್ಲ. ಎಂದು ಭಾವಿಸುತ್ತಾರೆ. ಅಂಥ ಸಂದರ್ಭದಲ್ಲೇ ಮೊದಲೇ ಮುನ್ನೆಚ್ಚರಿಕೆ ಕ್ರಮವಾಗಿ ಕೆರೆಯಲ್ಲಿ ಉಳಿದ ನೀರನ್ನು ಎಚ್ಚರಿಕೆಯಿಂದ ಬಳಸುವ ಸೂತ್ರವನ್ನು ಗಮಕಾರರು ಸಿದ್ಧಪಡಿಸುತ್ತಾರೆ.
ಹೆಚ್ಚು ನೀರು ಬೇಡದ ಬೆಳೆಯನ್ನು ಬೆಳೆಯಬೇಕೆಂದು ಆ ವರ್ಷ ಫರ್ಮಾನು ಹೊರಡಿಸಲಾಗುತ್ತದೆ. ಜತೆಗೆ ಇದ್ದ ಎಲ್ಲ ಜಮೀನಿನಲ್ಲೂ ಬೆಳೆ ಬೆಳೆಯುವಂತಿಲ್ಲ. ಜಮೀನಿನ ಪ್ರಮಾಣ ಕ್ಕನುಗುಣವಾಗಿ ಬೆಳೆ ನಿಗದಿಯಾಗುತ್ತದೆ. ಇದನ್ನು ಮೀರಿ ಬೆಳೆ ಬೆಳೆದರೆ ಅದಕ್ಕೆ ಕೆರೆಯಿಂದ ನೀರು ಒದಗಿಸಲಾಗುವುದಿಲ್ಲ. ಮಾತ್ರವಲ್ಲ ದಂಡ ವಿಸಲಾಗುತ್ತದೆ. ಕೆರೆ ಕೆಲಸಕ್ಕೆ ಬರದ, ನಿಯಮ ಉಲ್ಲಂಘಿಸಿದ ಮನೆಯವರು ಹೀಗೆ ಕಟ್ಟುವ ದಂಡದ ಹಣವನ್ನು ಉಳಿಯಾಳು ದುಡ್ಡು ಎಂದು ಪ್ರತ್ಯೇಕವಾಗಿ ತೆಗೆದಿಟ್ಟುಕೊಂಡು ಕೆರೆ ಪೂಜೆಯ ಸಂದರ್ಭದಲ್ಲಿ ಸಂತರ್ಪಣೆ ಇತ್ಯಾದಿ ವೆಚ್ಚಗಳಿಗೆ ಬಳಸಲಾಗುತ್ತದೆ.
ಇನ್ನು ಮಲೆನಾಡ ಕಡೆಗಳಲ್ಲಿ ಗಂಗಾಷ್ಟಮಿ ಪೂಜೆಯೆಂಬ ವಿಶೇಷ ಆಚರಣೆಯನ್ನೂ ನಡೆಸಲಾಗುತ್ತದೆ. ಆಶ್ವಯುಜ, ಕಾರ್ತೀಕ ಶುದ್ಧ ಅಷ್ಟಮಿಯಂದು ಪ್ರತಿ ಮನೆಮನೆಗಳಲ್ಲಿ ಗಂಗೆ ಪೂಜೆಯನ್ನು ನೆರವೇರಿಸಲಾಗುತ್ತದೆ. ಮನೆಯ ಹೆಣ್ಣುಮಕ್ಕಳು ನಸುಕಿನಲ್ಲೇ ಎದ್ದು ಬಾವಿ ಕಟ್ಟೆಗೆ ತೆರಳಿ, ಸುತ್ತೆಲ್ಲ ಹೂವುಗಳಿಂದ ಅಲಂಕರಿಸಿ ನೀರು ಸೇದಿ ತುಂಬಿ ಅಲ್ಲೇ ಪೂಜೆ ಸಲ್ಲಿಸಿ ಬರುತ್ತಾರೆ. ಅಲ್ಲಿಂದ ಕೊಡಗಳಲ್ಲಿ ಮನೆಗೆ ತಂದಿಟ್ಟುಕೊಳ್ಳುವ ನೀರನ್ನು ವರ್ಷವಿಡೀ ತೀರ್ಥದ ರೂಪದಲ್ಲಿ ಬಳಸಲಾಗುತ್ತದೆ.
ಇಂಥ ಅದೆಷ್ಟೋ ಆಚರಣೆಗಳು ಇಂದಿಗೂ ಗ್ರಾಮೀಣ ನಂಬಿಕೆಗಳನ್ನು ಶ್ರೀಮಂತವಾಗಿಟ್ಟಿವೆ. ಮಾತ್ರವಲ್ಲ ಸಮು ದಾಯದ ಒಗ್ಗಟ್ಟಿನ ಪ್ರತೀಕವಾಗಿ ನಿಲ್ಲುತ್ತವೆ. ಎಲ್ಲರೂ ಹೊಂದಾಣಿಕೆಯಿಂದ ನೀರಿನ ಅಳತೆಪೂರ್ವಕ ಬಳಕೆಗೆ ಇಲ್ಲೊಂದು ಅಲಿಖಿತ ಸಂವಿಧಾನ ನಿರ್ಮಾಣವಾಗುತ್ತದೆ. ದೇವರ ಸನ್ನಿಯಲ್ಲಿ ಇದಕ್ಕೆ ತಾವು ಬದ್ಧವೆಂದು ಪ್ರಮಾಣ ಮಾಡುವುದು ವಿಶೇಷ. ಎಂಥ ಸನ್ನಿವೇಶದಲ್ಲೂ ಇದನ್ನು ಉಲ್ಲಂಘಿಸುವುದಿಲ್ಲ. ನೀರೆಂಬುದನ್ನು ನಿರ್ಜೀವ ಸರಕೆಂದು ಎಂದಿಗೂ ನಮ್ಮವರು ಭಾವಿಸಿಲ್ಲ. ಅದಕ್ಕೊಂದು ದೈವತ್ವದ ಸ್ವರೂಪ ನೀಡಿ ಗೌರವಿಸಿಕೊಂಡು ಬಂದಿರುವುದರಿಂದಲೇ ಅಪವ್ಯಯ, ಅಪಸವ್ಯಗಳಿಗೆ ಇಲ್ಲಿ ಅವಕಾಶವಿರಲಿಲ್ಲ. ಅದರಿಂದ ಆಧುನಿಕತೆಯ ದಾಳಿಗೆ ಸಿಲುಕಿ ಇಂಥ ಆಚರಣೆಗಳೂ ಮರೆಯಾ ಗುತ್ತಿದೆ. ಪರಿಣಾಮ ಸಂಕಷ್ಟಗಳೂ ಹೆಚ್ಚಿವೆ.
‘ಲಾಸ್ಟ್ ಡ್ರಾಪ್’: ನೀರೆಂಬುದು ಹಳ್ಳಿಗಳ ಬದುಕಿನಲ್ಲಿ ಹಾಸುಹೊಕ್ಕಾದ ವಿಷಯ. ಗಂಗೆ ಪೂಜೆಯಿಲ್ಲದೇ ಯಾವುದೇ ಶುಭ ಕಾರ್ಯ ಊರಿನಲ್ಲಿ ನೆರವೇರುವುದೇ ಇಲ್ಲ. ಅಂಥ ನೀರ ಪ್ರೀತಿಯೇ ಅವರನ್ನು ಇಂದಿಗೂ ಸಮೃದ್ಧವಾಗಿ ಪೊರೆಯುತ್ತಿದೆ.

Tuesday, September 9, 2008

ತಲಪರಿಗೆ ಕೆಲ್ಸ:ಹೆಮ್ಮೆ ಮೂಡುವ ಊರೊಟ್ಟಿನ ಹಬ್ಬ


ತಲಪರಿಗೆ ಕೆಲಸಕ್ಕೆ ಮನೆಗೊಂದಾಳು, ಬರದಿದ್ದರೆ ಊರೇ ಹಾಳು
ಅದು ಚುಮು ಚುಮು ಮುಂಜಾವು. ಆ ಹಳ್ಳಿಯಲ್ಲಿ ಸೂರ್ಯ ಕಣ್ಣು ಬಿಡಲು ಇನ್ನೂ ಒಂದು ಗಂಟೆ ಇದೆ ಎನ್ನುವಾಗಲೇ ತಮಟೆಯ ಸದ್ದು ಮೊಳಗಲಾರಂಭಿಸಿದೆ. ಹಲಗೆ ಹೊಡೆಯುತ್ತ ವ್ಯಕ್ತಿಯೊಬ್ಬ ಊರ ಬೀದಿಬೀದಿಯಲ್ಲಿ ಸಾಗುತ್ತಿದ್ದಾನೆ. ‘ಕೇಳ್ರಪ್ಪೋ ಕೇಳ್ರಿ, ..........ರಲ್ಲಿ ಇವತ್ತು ತಲಪುರಗೆ ಕೆಲ್ಸಕ್ಕೆ ಗಮಕಾರ್ರು ಕರ್‍ದಿದಾರೆ. ಪ್ರತಿ ಮನೆಯಿಂದ ಒಂದೊಂದಾಳು ಮೂಡು ಹುಟ್ಟೋಕೆ ಮೊದಲು, ಮಾರಮ್ಮನ ದೇವಸ್ಥಾನದ ಮುಂದಿನ ಕಟ್ಟೆಗೆ ಬಂದು ಸೇರ್‍ಕೋಬೇಕು....’
ಹಲಗೆಯವನ ಧ್ವನಿ ಕೇಳುತ್ತಿದ್ದಂತೆ ಒಂದೊಂದೇ ಮನೆಯವರು ಎದ್ದು ಲಗುಬಗೆಯಿಂದ ಸಜ್ಜಾದರು. ಮನೆ ಹೆಂಗಸರು ಒಲೆ ಹೊತ್ತಿಸಿ ಎಸರು ಇಟ್ಟರೆ, ಗಂಡಸರು ಹಾರೆ, ಗುದ್ದಲಿ, ಮಚ್ಚು ಇತ್ಯಾದಿ ಹತ್ಯಾರ ಹುಡುಕಿಕೊಳ್ಳಲಡಿಯಿಟ್ಟರು. ಅರ್ಧಗಂಟೆಯೊಳಗೆ ಚಾ ಕುಡಿದು, ಬುತ್ತಿ ಕಟ್ಟಿಕೊಂಡ ಈರ, ವೆಂಕ, ನಾಣಿ, ಸೀನ, ದೊಡ್ಡೇಗೌಡ...ಹೀಗೆ ಒಬ್ಬೊಬ್ಬರಾಗಿ ಮನೆಯಿಂದ ಹೊರಬಿದ್ದು ರಸ್ತೆಗುಂಟ ಗೌಜೆಬ್ಬಿಸಲಾರಂಭಿಸಿದರು.
‘ಏ ಬಸ್ಯಾ, ಹೊತ್ತು ಹುಟ್ಟೋಕಾಯ್ತು ಏಳಲೇ, ತಲಪುರಗೆ ಕೆಲ್ಸ ಐತೆ, ಬಾರ್‍ಲ. ಇಲ್ಲಾ ನಿನ್ ಜನಾನಾದ್ರೂ ಕಳ್ಸು. ಇಲ್ಲಾಂದ್ರ ದಂಡ ಕಟ್ಟಬೇಕಾಯ್ತದೆ ನೋಡು’ ಎಂದ ಈರಣ್ಣ. ಅವನ ದನಿ ಕೇಳಿದ ಬಸ್ಯಾ ಒಳಗಿಂದಲೇ ಕೂಗಿದ. ‘ಇಲ್ಲಲೇ ಈರಣ್ಣ, ನಂಗಿವತ್ತು ಮೈಗೆ ಹುಸಾರಿಲ್ಲ. ತಗ್ಗಿನ ಮನೆ ಗುತ್ಯನ್ನ ಮಯ್ಯಾಳಿಗೆ ಹೇಳಿದೀನಿ. ಬತ್ತಾನೆ ಬಿಡು’ ಎಂದ.
ಹೀಗೆ ಸಂಭಾಷಣೆ ಸಾಗುತ್ತ ಹಾದಿ ಮುಗಿಯುವ ಹೊತ್ತಿಗೆಲ್ಲ ಮಾರಮ್ಮನ ಗುಡಿ ಮುಂದೆ ಸೇರಿರುತ್ತಾರೆ. ಗಮಕಾರ ರಂಗಣ್ಣ ಕಟ್ಟೆ ಮ್ಯಾಲೆ ನಿಂತು ತಲೆ ಎಣಿಸುತ್ತಿರುತ್ತಾನೆ. ಒಬ್ಬೊಬ್ಬರನ್ನಾಗಿ ಹೆಸರಿಡಿದು ಕರೆದು ಹಸಗೆ ಹಂಚುತ್ತಿದ್ದಾನೆ. ಎಲ್ಲರೂ ಬಂದು ಸೇರುತ್ತಿದ್ದಂತೆ ಎಲ್ಲ ಹಸಗೆ ಹಂಚಿ ಮುಗಿಯುತ್ತದೆ. ಸರಿ ಇನ್ನೇನಿದ್ದರೂ ತಲಪರಿಗೆ ಬಳಿ ಹೋಗಿ ಮಾರು ಹಾಕಿಕೊಡುವುದಷ್ಟೇ ಬಾಕಿ. ಅದೆಲ್ಲವೂ ಮುಗಿದು ಕೆಲಸ ಆರಂಭಿಸುವಷ್ಟರಲ್ಲಿ ಮಲ್ಲನೆ ಮೂಡಣ ಕೆಂಪಗಾಗ ತೊಡಗುತ್ತದೆ. ಹೊತ್ತು ಏರಿದಂತೆಲ್ಲ ಕೆಲಸದ ಭರಾಟೆಯೂ ಹೆಚ್ಚುತ್ತದೆ. ನಡು ನೆತ್ತಿಗೆ ಸೂರ್ಯ ಬರುವುದರೊಳಗೆ ಒಂದು ಹಂತದ ಕೆಲಸ ಮುಗಿಸಲಾಗುತ್ತದೆ.
ಪಾರಂಪರಿಕ ಜಲವ್ಯವಸ್ಥೆಗಳಲ್ಲಿ ಅತ್ಯಂತ ಅಮೂಲ್ಯ ಮಾದರಿಗಳಲ್ಲಿ ಒಂದಾದ ತಲಪರಿಗೆಗಳ ನಿರ್ವಹಣೆಯ ರೀತಿಯೇ ಇಂಥದ್ದು. ಅದು ಊರೊಟ್ಟಿನ ಶ್ರಮವನ್ನು ಬೇಡುತ್ತದೆ. ಗ್ರಾಮಸ್ಥರೂ ಅದನ್ನು ತಮ್ಮ ಕರ್ತವ್ಯದ ಭಾಗವೆಂದು ತಿಳಿದು ಅಷ್ಟೇ ಆಸ್ಥೆಯಿಂದ ಮಾಡಲು ಮುಂದಾಗುತ್ತಾರೆ.
ಮಧುಗಿರಿ ಸಮೀಪದ ಚೋಳೇನಹಳ್ಳಿಯಲ್ಲಿ ಜೀವಂತ ತಲಪರಿಗೆಯೊಂದನ್ನು ಇಂದಿಗೂ ನಿರ್ವಹಿಸುತ್ತಿರುವ ಗಮಕಾರ, ಬಂಡೆ ರಂಗರಾಜು ಅವರು ಇಡೀ ಪ್ರಕ್ರಿಯೆಯನ್ನು ವಿವರಿಸುತ್ತ ಹೋದರೆ ನಿಜಕ್ಕೂ ಕೌತುಕ ಮೂಡುತ್ತದೆ. ಮಧುಗಿರಿಯ ಆ ಪುಟ್ಟ ತಲಪರಿಗೆ ಇಂದಿಗೂ ೩೦ ಎಕರೆಯಷ್ಟು ಜಮೀನಿಗೆ ನೀರುಣಿಸುತ್ತ ನಲಿಯುತ್ತಿದೆ. ಇಡೀ ಗ್ರಾಮದ ಜೀವಾಳವಾಗಿ ನಿಂತಿರುವ ಇದು ಈವರೆಗೆ ಬತ್ತಿದ ಉದಾಹರಣೆಯೇ ಇಲ್ಲ. ಪ್ರತಿವರ್ಷ ಊರಿನ ಎಲ್ಲರೂ ಸೇರಿ ಕಾಲುವೆ ಸ್ವಚ್ಛಗೊಳಿಸುತ್ತಾರೆ. ಯಾವುದೇ ಭೇದವಿಲ್ಲದೇ ಎಲ್ಲ ಜಮೀನಿನ ಧಣಿಗಳೂ ಕೆಲಸಕ್ಕೆ ಬರುತ್ತಾರೆ. ತಲಪರಿಗೆ ಕೆಲಸವೆಂದರೆ ಅದೊಂದು ಹಬ್ಬವಿದ್ದಂತೆ ಎಂಬುದು ಅವರ ಹೆಮ್ಮೆಯ ಮಾತು.
ವರ್ಷವಿಡೀ ನೀರಿನ ಹಂಚಿಕೆ, ತಲಪರಿಗೆ ನಿರ್ವಹಣೆ, ಕಾಲುವೆಗಳ ಸ್ವಚ್ಛತೆ ಇತ್ಯಾದಿಗಳೆಲ್ಲದರ ನಿರ್ವಹಣೆಯನ್ನು ಊರಿನಲ್ಲಿ ಪಾರಂಪರಿಕವಾಗಿ ಬಂದ ಒಂದು ಮನೆಯವರಿಗೆ ನೀಡಿರುತ್ತಾರೆ. ಅಂಥವರನ್ನು ‘ಗಮಕಾರ’ ಎಂದು ಕರೆಯಲಾಗುತ್ತದೆ. ಚೋಳೇನಹಳ್ಳಿಯ ಈ ನಿರ್ದಿಷ್ಟ ತಲಪರಿಗೆಯ ಮಟ್ಟಿಗೆ ಹೇಳುವುದಾದರೆ ಬಂಡೆ ರಂಗರಾಜು ಗಮಕಾರರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಮಕಾರರು ಕರೆದರೆ ಪ್ರತಿ ಜಮೀನಿನವರೂ ಕೆಲಸಕ್ಕೆ ಬರುವುದು ಕಡ್ಡಾಯ. ಊರಿನ ಮುಖಂಡ, ಗೌಡರಿಗೂ ಇದರಿಂದ ವಿನಾಯ್ತಿ ಇಲ್ಲ. ಒಂದೊಮ್ಮೆ ಅನಿವಾರ್ಯ ಕಾರಣಗಳಿಂದ ಯಾವುದೇ ಒಂದು ಮನೆಯವರಿಗೆ ಬರಲಾಗಲಿಲ್ಲ ಎಂದರೆ ಬದಲಿ ಆಳನ್ನಾದರೂ ಕಳುಹಿಸಿಕೊಡಬೇಕು. ಎರಡೂ ಇಲ್ಲವೆಂದರೆ ದಿನಕ್ಕೆ ನೂರು ರೂ. ದಂಡವನ್ನು ವಿಸಲಾಗುತ್ತದೆ. ಬೆಳಗ್ಗೆ ೭ ಗಂಟೆಗೆ ಕೆಲಸಕ್ಕೆ ಹಾಜರಿರಲೇ ಬೇಕು. ತಡವಾಗಿ ಬಂದರೆ ಅಂದರೆ ಕೆಲಸ ಆರಂಭವಾದ ಮೇಲೆ ಬಂದರೆ ೧೨೫ ರೂ. ದಂಡ ವಿಸಲಾಗುತ್ತದೆ. ಮಧ್ಯದಲ್ಲಿ ಕೆಲಸ ಬಿಟ್ಟು ಹೋದರೂ ಈ ಪ್ರಮಾಣ ಇನ್ನೂ ಹೆಚ್ಚು. ಅಂಥವರ ಜೇಬಿಗೆ ಸಾವಿರ ರೂ. ತ್ಯಾಮಾನ ಬಂತೆಂದೇ ಅರ್ಥ. ಹೀಗೆ ಸಂಗ್ರಹವಾಗುವ ಹಣವನ್ನು ಉಳಿಯಾಳು ದಂಡ ಎಂದು ಕರೆಯಲಾಗುತ್ತದೆ. ಇದನ್ನು ಸಂಗ್ರಹಿಸಿಟ್ಟು, ಮಳೆಗಾಲದಲ್ಲಿ (ಸಾಮಾನ್ಯವಾಗಿ)ಶ್ರಾವಣದಲ್ಲಿ ನಡೆಯುವ ಗಂಗೆ ಪೂಜೆ, ಊರೊಟ್ಟಿನ ಹಬ್ಬ , ಸಂತರ್ಪಣೆ ಇತ್ಯಾದಿಗಳಿಗೆ ಬಳಸಲಾಗುತ್ತದೆ.
ಸಾಮಾನ್ಯವಾಗಿ ನವೆಂಬರ್‌ನಿಂದ ಜೂನ್ ನಡುವಿನ ಅವಯಲ್ಲಿ ತಲಪರಿಗೆ ಕೆಲಸ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ರೈತರ ಕೆಲಸಗಳೂ ಮುಗಿದಿರುತ್ತದೆ. ಜತೆಗೆ ಮಳೆಗೆ ಮುನ್ನ ಕಾಲುವೆ ಇತ್ಯಾದಿಗಳನ್ನು ದುರಸ್ತಿಗೊಳಿಸಿಕೊಳ್ಳಬೇಕೆಂಬ ಉದ್ದೇಶವೂ ಇದರ ಹಿಂದಿದೆ. ಊರಿನವರನ್ನು ನಾಲ್ಕು ನಾಲ್ಕು ಜನರ ಒಂದೊಂದು ತಂಡವಾಗಿ ವಿಂಗಡಿಸಲಾಗುತ್ತದೆ. ಇಂಥ ತಂಡಗಳಿಗೆ ಕಾಲುವೆ ಒಟ್ಟು ಉದ್ದದಲ್ಲಿ ಒಂದೊಂದು ಮಾರಿನಂತೆ ಕೆಲಸ ವಹಿಸಿಕೊಡುತ್ತಾರೆ ಗಮಕಾರರು. ಇದಕ್ಕೆ ಹಸಗೆ ಹಾಕಿ ಕೊಡುವುದು ಎನ್ನುತ್ತಾರೆ. ಅಷ್ಟು ಕೆಲಸ ಮುಗಿಸುವುದು ಅವರ ಜವಾಬ್ದಾರಿ. ಇಷ್ಟಾಗಿಯೂ ಉಳಿಯುವ ಹೆಚ್ಚುವರಿ ಮಂದಿಗೆ ಕಾಲುವೆಯಲ್ಲಿ ಅಕ್ಕ ಪಕ್ಕ ಬೆಳೆದ ಜಾಲಿ ಇತ್ಯಾದಿ ಪೊದೆಗಳನ್ನು ಕಡಿಯುವುದು, ಬೇರುಗಳು ಕಾಲುವೆಗೆ ಬಂದಿದ್ದರೆ ಅದನ್ನು ತೆಗೆದು ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವುದು ಇತ್ಯಾದಿ ಕೆಲಸ ವಹಿಸಲಾಗುತ್ತದೆ. ಇದಕ್ಕೂ ಲೆಕ್ಕವಿರುತ್ತದೆ. ಪ್ರತಿಯೊಬ್ಬರೂ ತಾವೆಷ್ಟು ಪೊದೆ ತೆಗೆದಿದ್ದೇವೆ, ಬೇರು ಕಿತ್ತಿದ್ದೇವೆ ಎಂಬುದನ್ನು ಕೊನೆಯಲ್ಲಿ ತೋರಿಸಬೇಕು.
ಸಾಮಾನ್ಯವಾಗಿ ಊರಿನ ರೈತರೇ ಸಭೆ ಸೇರಿ ಗಮಕಾರರನ್ನು ನೇಮಿಸುತ್ತಾರೆ. ಆತ ನಿಷ್ಪಕ್ಷಪಾತಿಯಾಗಿ ವರ್ತಿಸಬೇಕಾಗುತ್ತದೆ. ನೀರಿನ ಹಂಚಿಕೆಯಲ್ಲೂ ನಿಗದಿತ ಮಾನದಂಡ ಅನುಸರಿಸಲಾಗುತ್ತದೆ. ಈ ವಿಚಾರದಲ್ಲಿ ಇನ್ನೊಂದು ಕುತೂಹಲದ ಪದ್ಧತಿ ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತದೆ. ತಲಪರಿಗೆಯಿಂದ ರೈತರ ಜಮೀನಿಗೆ ನೀರು ಹರಿಯುವ ಕಾಲುವೆಯ ಆರಂಭದಲ್ಲಿ ಒಂದು ಮರವನ್ನು ಗುರುತಿಸಿರುತ್ತಾರೆ. ಅದರ ಕೊಂಬೆಗೆ ಮಧ್ಯಮ ಗಾತ್ರದ ಮಡಕೆಯೊಂದನ್ನು ತೂಗುಹಾಕಲಾಗುತ್ತದೆ. ಅದರ ತಳ ಭಾಗದಲ್ಲಿ ಸಣ್ಣ ರಂಧ್ರವನ್ನು ಮಾಡಲಾಗಿರುತ್ತದೆ. ಕಾಲುವೆಯಿಂದ ನೀರು ಹರಿಸಲಾರಂಭಿಸಿದ ತಕ್ಷಣ ಆ ಮಡಕೆಗೆ ನೀರು ತುಂಬಲಾಗುತ್ತದೆ. ಕೆಳಗಿನ ರಂಧ್ರದಿಂದ ನೀರು ಸೋರುತ್ತ ಹೋಗಿ ಮಡಕೆ ಸಂಪೂರ್ಣ ಖಾಲಿಯಾಗುವವರೆಗೂ ಕಾಲುವೆಯಿಂದ ಜಮೀನಿಗೆ ನೀರು ಹೋಗುತ್ತದೆ. ನಂತರ ಇನ್ನೊಂದು ಜಮೀನಿಗೆ ನೀರನ್ನು ತಿರುಗಿಸಲಾಗುತ್ತದೆ. ಒಂದು ಎಕರೆಗೆ ಒಂದು ಮಡಕೆ ನೀರು ಸೋರಿ ಹೋಗುವವರೆಗೆ ನೀರು. ಆಯಾ ವರ್ಷದ ಮಳೆ, ತಲಪರಿಗೆಯಲ್ಲಿ ಸಂಗ್ರಹವಾದ ನೀರಿನ ಪ್ರಮಾಣ ಇತ್ಯಾದಿಗಳನ್ನು ಅವಲಂಬಿಸಿ ಮಡಕೆಯ ಗಾತ್ರ ನಿರ್ಧಾರವಾಗುತ್ತದೆ.
ಒಟ್ಟಾರೆ ಸಂಪೂರ್ಣ ಗ್ರಾಮಸ್ಥರೇ ರೂಪಿಸಿಕೊಂಡ ವ್ಯವಸ್ಥೆಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ, ಯಾವುದೇ ಗೊಂದಲವಿಲ್ಲದೇ ನೀರು ನಿರ್ವಹಣೆ ಮಾಡುವುದು ಕಂಡಾಗ ಅಚ್ಚರಿಯಾಗದೇ ಇರದು. ದೇಸಿ ಜ್ಞಾನದ ಬಗೆಗೆ ಅವ್ಯಕ್ತ ಹೆಮ್ಮೆಯೂ ಮೂಡುತ್ತದೆ. ಇಂಥ ಅದೆಷ್ಟೋ ಗ್ರಾಮೀಣ ನೆಲಮೂಲದ ಜ್ಞಾನದ ಜಾಗವನ್ನು ತಾಂತ್ರಿಕತೆಯ ಹೆಸರಿನ ಅವೈಜ್ಞಾನಿಕ ಮಾನದಂಡಗಳು ಆಕ್ರಮಿಸಿಕೊಂಡಿವೆ. ಅತ್ತ ದೇಸಿ ಜ್ಞಾನವೂ ಹೊಸ ತಲೆಮಾರಿಗೆ ಉಳಿದಿಲ್ಲ, ಇತ್ತ ಆಧುನಿಕ ಜ್ಞಾನವೂ ಸುಸ್ಥಿರವಾಗಿಲ್ಲ ಎಂಬುದು ಪರಿಸ್ಥಿತಿಯ ದುರಂತ.
‘ಲಾಸ್ಟ್’ಡ್ರಾಪ್: ಭಾರತದ ನೀರಭೀಷ್ಮ ಅನುಪಮ ಮಿಶ್ರಾ ಈ ಹಿನ್ನೆಲೆಯಲ್ಲೇ ಹೇಳಿದ ಮಾತೊಂದನ್ನು ನೆನಪಿಸಿಕೊಳ್ಳಲೇ ಬೇಕು. ಬೋರ್‌ವೆಲ್‌ಗಳು ಸದಾಕಾಲ ಶುದ್ಧ, ಸುರಕ್ಷಿತ ನೀರು ಕೊಡುವುದಿದ್ದರೆ ಖಂಡಿತಾ ಅದನ್ನು ವೈಜ್ಞಾನಿಕ, ಆಧುನಿಕ ಸೌಲಭ್ಯವೆಂದು ಒಪ್ಪಿಕೊಳ್ಳುತ್ತೇನೆ. ಎಂಥ ಮಾರ್ಮಿಕ ಮಾತು.