Saturday, December 27, 2008

ನೀರ ನೆಮ್ಮದಿಗೆ ಬೇಕು ರಾಷ್ಟ್ರೀಯ ನೀತಿ

ಜೀವನದ ಸಾಧ್ಯತೆಗಳ ವಿಸ್ತರಣೆಗೆ ತೀರಾ ಅಡ್ಡಿಯಾಗಿ ನಿಂತಿರುವ ಪ್ರಮುಖ ಸಂಗತಿಯೆಂದರೆ ನೀರು. ವಿಶ್ವ ಜನ ಸಮುದಾಯ ಎದುರಿಸುತ್ತಿರುವ ಬಡತನ, ಅನಕ್ಷರತೆ, ಸಾಂಕ್ರಾಮಿಕ ರೋಗಗಳು, ಭಯೋತ್ಪಾದನೆ, ಯುದ್ಧ ಭೀತಿಯಂಥ ಹತ್ತು ಹಲವು ಸಮಸ್ಯೆ ಆತಂಕಗಳನ್ನು ಮೀರಿ ನಿಂತಿರುವುದು ಇಂದು ನೀರಿನ ಕೊರತೆ. ಮೂಲಭೂತ ಮಾನವ ಸ್ವಾತಂತ್ರ್ಯಕ್ಕೇ ನೀರಿನ ಸಮಸ್ಯೆ ಧಕ್ಕೆ ತರುತ್ತಿದೆ ಎಂಬ ಸಂಗತಿ ನಮಗೆ ಅರ್ಥವಾಗುತ್ತಿದೆಯೇ ?
ನೀರಿನ ಸಮಸ್ಯೆಗೆ ಮಾನವೀಯ ಮುಖವೊಂದಿದೆ ಎಂಬುದನ್ನು ನಾವು ಮರೆತು ಬಿಡುತ್ತಿ ದ್ದೇವೆ. ನೀರನ್ನು ಪಕ್ಕದ ಬಡಾವಣೆಗೆ ಹೋಗಿಯಾ ದರೂ ತರಬಹುದಲ್ಲ. ಹಾಗಾದರೂ ಸಿಗುತ್ತದಲ್ಲ ಎಂದು ಹೇಳುವುದು ಸುಲಭ. ಆದರೆ ಹಾಗೆ ನೀರು ತರಲಿಕ್ಕಾಗಿಯೇ ಅದೆಷ್ಟೊ ಕೊಳಚೆ ಪ್ರದೇಶದ ಮಕ್ಕ ಳನ್ನು ಶಾಲೆಯಿಂದ ದೂರವಿಡಲಾಗುತ್ತಿದೆ. ಅದೆಷ್ಟೊ ಮಕ್ಕಳು ತಮ್ಮ ಮನೆಯವರಿಂದಲೇ "ಬಾಲ ಕಾರ್ಮಿಕರ’ ಪಟ್ಟ ಕಟ್ಟಿಸಿಕೊಂಡು ಶೋಷಣೆಗೊಳಗಾಗುತ್ತಿವೆ. ಇದನ್ನು ಪ್ರಶ್ನಿಸಿ ಹಿಂಸೆಯನ್ನನುಭವಿಸುತ್ತಿವೆ. ಇದು ನಿಜ ವಾಗಿ ಆ ಮಕ್ಕಳ ಮೂಲಭೂತ ಹಕ್ಕಿನ ಉಲ್ಲಂಘನೆ ಯಲ್ಲವೇ ? ಅದರ ಹೊಣೆ ಹೊರಲು ಸಮಾಜ, ಸರಕಾರಗಳು ಸಿದ್ಧವಿವೆಯೆ?
ನಂಬಲೇಬೇಕು. ಇಂದು ಜಗತ್ತಿನ ಎಷ್ಟೋ ಕೊಳೆಗೇರಿ, ಹಳ್ಳಿ, ನಗರದ ಅದೆಷ್ಟೋ ಬಡಾವಣೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಸರಾಸರಿ ಪ್ರತಿವ್ಯಕ್ತಿಗೆ, ಪ್ರತಿದಿನವೂ ಒಂದು ಬಕೆಟ್ ನೀರು ಸಿಗುವುದೂ ಕಷ್ಟ ಎಂಬಂಥ ಪರಿಸ್ಥಿತಿ ಇದೆ. ಈ ದೇಶದ ಬಡವರಿಗೆ ಹಸಿವನ್ನು ‘ಜಯಿಸಿ’ ಹೇಗೆ ಅಭ್ಯಾಸವಾಗಿ ಹೋಗಿದೆಯೋ ಹಾಗೆಯೇ ನೀರಿನ ಸಮಸ್ಯೆಯ ಜತೆಗೂ ಗುದ್ದಾಡಿ ರೂಢಿಯಾಗಿ ಬಿಟ್ಟಿದೆ. ಹೀಗಾಗಿ, ಅವರಾರೂ ದನಿಯೆತ್ತುತ್ತಿಲ್ಲ.
ಸಣ್ಣ ಲೆಕ್ಕಾಚಾರ. ಬೆಂಗಳೂರಿನ ಒಂದು ಕೊಳೆಗೇರಿಯಲ್ಲಿ ಐವತ್ತು ಮನೆಗಳಿವೆ ಎಂದುಕೊಳ್ಳೋಣ. ಪ್ರತಿ ಮನೆಯಲ್ಲಿ ಸರಾಸರಿ ಐದು ಮಂದಿಯೆಂದರೆ ಒಟ್ಟು ಇನ್ನೂರೈವತ್ತು ಮಂದಿ ಆ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಾರೆ. ಅಷ್ಟು ಜನಕ್ಕೆ ಕನಿಷ್ಠ ತಲಾ ೨೦ ಲೀಟರ್ ಎಂದರೆ ಪ್ರತಿ ದಿನ ೫ ಸಾವಿರ ಲೀಟರ್ ನೀರು ಆ ಬಡಾವಣೆಗೆ ಪೂರೈಕೆಯಾಗಬೇಕು. ಆದರೆ ಬೆಂಗಳೂರಿನ ಎಷ್ಟೊ ಕೊಳೆಗೇರಿಗೆ ನೀರಿನ ಸಂಪರ್ಕವೇ ಇಲ್ಲ. ಬೋರ್‌ವೆಲ್‌ಗಳು, ಬಾವಿಗಳಂತೂ ದೂರದ ಮಾತಾಯಿತು. ಇನ್ನು ಐದು ಸಾವಿರ ಲೀಟರ್ ನೀರು ಅವರಿಗೆ ಹೇಗೆ ದಕ್ಕೀತು?
‘ನೀರು’ ಮಾನವ ಅಭಿವೃದ್ಧಿಯ ಪಂಚಾಂಗ ಕಲ್ಲು ಇದ್ದಂತೆ. ನೀರಿನ ಕೊರತೆ ಎಂಬುದು ಕೇವಲ ಭೌತಿಕ ಸ್ವರೂಪದಲ್ಲಷ್ಟೇ ಉಳಿದಿಲ್ಲ. ಬದಲಾಗಿ ಅದು ಅಸಮಾನತೆ, ಬಡತನದಂಥ ಹತ್ತಾರು ಸಂಕಷ್ಟಗಳಿಗೆ ಪರೋಕ್ಷವಾಗಿ ನಮ್ಮನ್ನು ದೂಡುತ್ತಿದೆ. ವಿಶ್ವದ ಪ್ರತಿ ಆರು ಮಂದಿಯಲ್ಲಿ ಒಬ್ಬ, ಶುದ್ಧ ಹಾಗೂ ಅಗತ್ಯ ಪ್ರಮಾಣದ ನೀರಿನಿಂದ ವಂಚಿತನಾಗುತ್ತಿದ್ದಾನೆ.
ವಿಶ್ವದಲ್ಲಿ ಪ್ರತಿ ವರ್ಷ ೨ ದಶಲಕ್ಷ ಮಕ್ಕಳು ನೀರಿನಿಂದ ಬರುವ ಅತಿಸಾರದಂಥ ರೋಗಗಳಿಗೆ ತುತ್ತಾಗಿ ಸಾಯುತ್ತಿದ್ದಾರೆ. ಭಾರತವೊಂದರಲ್ಲೇ ವರ್ಷಕ್ಕೆ ೪.೫೦ ಲಕ್ಷ ಮಕ್ಕಳನ್ನು ಅತಿಸಾರ ಬಲಿ ತೆಗೆದುಕೊಳ್ಳುತ್ತಿದೆ. ವ್ಯಾಪಕ ನಗರೀಕರಣ, ಕೈಗಾರಿಕಾ ಬೆಳವಣಿಗೆ ನೀರಿಗಾಗಿನ ಪೈಪೋಟಿಯನ್ನು ಹೆಚ್ಚಿಸಿದೆ. ಇದೇ ಪರಿಸ್ಥಿತಿ ಮುಂದುವರಿದರೆ ೨೦೫೦ರ ವೇಳೆಗೆ ದಕ್ಷಿಣ ಏಷ್ಯಾದಲ್ಲಿನ ಕೃಷಿಯೇ ತರ ವಲಯದ ನೀರಿನ ಬೇಡಿಕೆ ಇಂದಿಗಿಂತ ಎಂಟು ಪಟ್ಟು ಹೆಚ್ಚಲಿದೆ.
ವಿಚಿತ್ರವೆಂದರೆ ನಗರ ಪ್ರದೇಶದ ಬಡವರ್ಗದವರು ಕಡಿಮೆ ನೀರನ್ನು ಪಡೆಯುತ್ತಿದ್ದರೂ ಅದಕ್ಕಾಗಿ ಹೆಚ್ಚಿನ ಹಣ ತೆರುತ್ತಿದ್ದಾರೆ. ಅತಿ ಹೆಚ್ಚು ಬಳಕೆ ಮಾಡುತ್ತಿರುವ ಶ್ರೀಮಂತ ವರ್ಗದ ಮಂದಿ ಅತಿ ಕಡಿಮೆ ಬೆಲೆಯಲ್ಲಿ ನೀರು ಪಡೆಯುತ್ತಿದ್ದಾರೆ. ಬೆಂಗಳೂರಿನ ನಿವಾಸಿಗಳ ಪೈಕಿ ಶೇ. ೨೦ರಷ್ಟಿರುವ ಶ್ರೀಮಂತರು ನೀರಿನ ಶುಲ್ಕದಲ್ಲಿ ಹೆಚ್ಚಿನ ಸಬ್ಸಿಡಿ (ಶೇ. ೩೦ರಷ್ಟು )ಯ ಫಲಾನುಭವಿಗಳು. ಆದರೆ ಶೇ. ೫೦ರಷ್ಟಿರುವ ಬಡವರ್ಗದ ಮಂದಿಗೆ ನೀರಿನ ಶುಲ್ಕದಲ್ಲಿ ಶೇ. ೧೦ರಷ್ಟು ಮಾತ್ರ ಸಹಾಯಧನ ದೊರೆಯುತ್ತಿದೆ.
ಅಸಮರ್ಪಕ ವ್ಯವಸ್ಥೆ, ತಾಂತ್ರಿಕತೆಯಲ್ಲಿನ ಹಿನ್ನಡೆ, ನೀತಿ-ನಿರೂಪಣೆಯಲ್ಲಿನ ದೋಷ, ರಾಜಕೀಯ ಇಚ್ಛಾಶಕ್ತಿಯ ಕೊರತೆಗಳ ಫಲಿತಾಂಶ ಇದು. ನೀರಿನ ಬಳಕೆಗೆ ಸಂಬಂಸಿದಂತೆ ಈವರೆಗೂ ನಮ್ಮಲ್ಲಿ ಮಾದರಿ ಎನ್ನಬಹುದಾದ ಯಾವುದೇ ನೀತಿ ನಿಯಮಗಳು ರೂಪಿ ತವಾಗಿಲ್ಲದಿರುವುದು ಸಮಸ್ಯೆಗೆ ಇನ್ನಷ್ಟು ಕಾರಣವಾಗಿದೆ. ಅಂತರ್ಜಲ ಬಳಕೆಗೆ ಕಾನೂನು ನಿಯಂತ್ರಣದ ಕೊರತೆ, ಅನಗತ್ಯ ವಿದ್ಯುತ್ ಸಬ್ಸಿಡಿಯಂಥ ಕಾರಣಗಳಿಂದ ದೇಶದಲ್ಲಿಂದು ಶೇ. ೫೬ರಷ್ಟು ಮಂದಿ ನೀರಿನ ವಿಚಾರದಲ್ಲಿ ‘ಸುಸ್ತಿದಾರ’ರಾಗಿದ್ದಾರೆ. ಅಂತರ್ಜಲ ಠೇವಣಿಯನ್ನು ಹದ್ದು ಮೀರಿ ಬರಿದಾಗಿಸಿದ್ದಲ್ಲದೇ ಖಾತೆಯಲ್ಲಿ ‘ಓವರ್ ಡ್ರಾಫ್ಟ್’ ಸೌಲಭ್ಯವನ್ನೂ ಬಳಸಿ ‘ಜಲ ಬ್ಯಾಂಕ್’ ಅನ್ನೇ ದಿವಾಳಿಗೆ ತಲುಪಿಸಿದ್ದಾರೆ.
ದೇಶದಲ್ಲಿನ ‘ಸಬ್ಸಿಡಿ’ ನೀತಿಯೇ ನಮ್ಮ ನೀರು ಪೂರೈಕೆಯ ಅಸಮಾನತೆಗೆ ಬಹುತೇಕ ಕಾರಣ. ಭಾರತದ ರೈತರಲ್ಲಿ ಶೇ.೧೩ರಷ್ಟು ಮಂದಿ ನೀರಾವರಿ ಸೌಲಭ್ಯವನ್ನು ಅನುಭವಿಸುತ್ತಿದ್ದಾರೆ. ಈ ಪೈಕಿ ಮೂರನೇ ಒಂದು ಭಾಗದಷ್ಟು ರೈತರಿಗೆ ಗರಿಷ್ಠ ಶೇ. ೭೩ರಷ್ಟು ಸಹಾಯಧನ ದೊರೆಯುತ್ತಿದೆ. ಇವರು ವಿದ್ಯುತ್ ಸಬ್ಸಿಡಿಯಲ್ಲೂ ಪಾಲುದಾರರು. ಹೀಗಾಗಿ, ನೀರಿನ ಬಳಕೆ ವಿಚಾರದಲ್ಲಿ ಅವರಲ್ಲಿ ನಿಯಂತ್ರಣವೇ ಇಲ್ಲದಾಗಿದೆ. ಶ್ರೀಮಂತ ರೈತರು ಹೆಚ್ಚಿನ ಹಣ ತೊಡಗಿಸಿ ಆಳದವರೆಗೆ ಬೋರ್‌ವೆಲ್‌ಗಳನ್ನು ಕೊರೆದೂ ನೀರು ಪಡೆಯ ಬಲ್ಲರು. ಇದು ಸಣ್ಣ, ಅತಿಸಣ್ಣ ರೈತರ ನೀರಿನ ಹಕ್ಕನ್ನು ಕಸಿದುಕೊಳ್ಳುತ್ತಿದೆ.
ಹೀಗಾಗಿ, ಕಟ್ಟ ಕಡೆಯ ರೈತರು ನೀರಿನ ಕೊರತೆಯೊಂದಿಗೆ ಅನಿಶ್ಚಿತತೆಯನ್ನು ಅನುಭವಿಸುವಂತಾಗಿದೆ. ಕಾಲುವೆಗಳ ಮೂಲಕ ನೀರು ಪೂರೈಕೆ ವಿಷಯದಲ್ಲೂ ಇದೇ ಅಸಮಾನತೆ ಬಾಸುತ್ತದೆ. ಕಾಲುವೆಯ ಕೊನೆಯ ರೈತ ಕೆಲವೊಮ್ಮೆ ಹಣ ಖರ್ಚು ಮಾಡಿದರೂ (ಶುಲ್ಕ, ತೆರಿಗೆ ಪಾವತಿ) ನೀರು ಸಿಗದೇ ಪರದಾಡುತ್ತಾನೆ. ದುರಂತವೆಂದರೆ ಇಂಥ ‘ಕೊನೆಯ’ ರೈತ ಬಡತನ, ಉತ್ಪಾದನಾ ಕೊರತೆಯಂಥ ಸಮಸ್ಯೆಗಳಿಂದಲೂ ಬಳಲುತ್ತಿರುತ್ತಾನೆ.
ಹಾಗಾದರೆ ಇವಕ್ಕೆಲ್ಲ ಪರಿಹಾರವಿಲ್ಲವೇ ? ಖಂಡಿತಾ ಇದೆ. ನೀರಿನ ಸಮಸ್ಯೆ ಕೊನೆಯಿಲ್ಲದ್ದೇನೂ ಅಲ್ಲ. ಗುಜರಾತಿನಲ್ಲಿ ಇಂದು ೧೦ ಸಾವಿರ ಚೆಕ್‌ಡ್ಯಾಮ್‌ಗಳು ಸಮೃದ್ಧಿಯನ್ನು ಕಟ್ಟಿ ಕೊಡುತ್ತಿವೆ. ಅಲ್ಲಿ ನೀರಿಗಾಗಿ ಸರಿಸುಮಾರು ೫೦ ರೂ.ಗಳಷ್ಟು ಹೂಡಿಕೆ ಮಾಡುವ ರೈತ ಮೂರು ವರ್ಷಗಳಲ್ಲಿ ಒಂದೂವರೆ ಪಟ್ಟು ಹೆಚ್ಚು ಅಂದರೆ ೧೫೦ ರೂ.ಗಳಿಗೂ ಹೆಚ್ಚು ಲಾಭ ಪಡೆಯುತ್ತಿದ್ದಾನೆ. ಗುಜರಾತ್ ನೀರಾವರಿ ವ್ಯವಸ್ಥೆಯಲ್ಲಿನ ಸುಧಾರಣೆ ದೇಶದ ಕೃಷಿ ಉತ್ಪಾದಕತೆಯನ್ನು ಐದು ಪಟ್ಟು ಹೆಚ್ಚಿಸುತ್ತಿದೆ. ಆಂಧ್ರದಲ್ಲಿನ ಕಡಿಮೆ ವೆಚ್ಚದ ಹನಿನೀರಾವರಿ ಯೋಜನೆಗಳು ಉತ್ಪಾದನೆಯನ್ನು ದ್ವಿಗುಣಗೊಳಿಸಿವೆ. ಮಧ್ಯಪ್ರದೇಶ, ಮಹಾರಾಷ್ಟ್ರ ಗಳಲ್ಲೂ ಮಿತ ನೀರು ಬಳಕೆಯ ಕೃಷಿ ಪದ್ಧತಿಗಳು ಅಲ್ಲಿನ ರೈತರನ್ನು ಯಶಸ್ಸಿನೆಡೆಗೆ ಕೊಂಡೊಯ್ದಿವೆ.
ಈ ಎಲ್ಲ ಹಿನ್ನೆಲೆಯನ್ನು ಗಮನಿಸಿದಾಗ ‘ನೀರಿನ ರಾಷ್ಟ್ರೀಯ ನೀತಿ’ಯೊಂದರ ಅಗತ್ಯ ತೀರಾ ತುರ್ತಾ ಗಿದೆ. ಇದರೊಂದಿಗೆ ನೀರಿನ ಶುಲ್ಕ, ಸಬ್ಸಿಡಿ ಇತ್ಯಾದಿಗಳ ಬಗ್ಗೆ ನಮ್ಮ ಸರಕಾರಗಳು ಮರುವಿಮರ್ಶೆ ನಡೆಸುವು ದೊಳಿತು. ನೀರನ್ನು ಯಥೇಚ್ಛ ಬಳಸುತ್ತಿರುವ ಶ್ರೀಮಂತ ವರ್ಗದ ಮೇಲೆ ದುಬಾರಿ ದರ ವಿಸುವ ಮೂಲಕ ನಿಯಂತ್ರಿಸಬೇಕು. ಅದರಿಂದ ಸಂಗ್ರಹವಾಗುವ ಮೊತ್ತ ವನ್ನು ಬಡ ವರ್ಗದ ಜನಕ್ಕೆ ಪೂರಕ ಸಬ್ಸಿಡಿಯಾಗಿ ನೀಡಬೇಕು. ಆಗ ಮಾತ್ರ ಅಸಮಾನತೆ ಹೋಗಲಾಡಿ ಸಲು ಸಾಧ್ಯ.
ನೀರಿನ ವಿಚಾರದಲ್ಲಿ ಪಾರದರ್ಶಕತೆ ಹಾಗೂ ಲೆಕ್ಕಾ ಚಾರದ ಕೊರತೆ, ಸೂಕ್ತ ನಿರ್ವಹಣಾ ನಾಯಕತ್ವದ ಕೊರತೆ, ಮೂಲ ಸೌಕರ್ಯದ ಕೊರತೆ, ಬದ್ಧತೆಯ ಕೊರತೆ, ಯೋಜನೆ ಹಾಗೂ ವ್ಯವಸ್ಥಾಪನೆಯ ಕೊರತೆ ಯಿಂದಾಗಿ ನಮ್ಮಲ್ಲಿ ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ. ಇಷ್ಟೆಲ್ಲ ಕೊರತೆಗಳಿದ್ದೂ ಅತಿಮುಖ್ಯ ಅಗತ್ಯವಾದ ‘ನೀರಿಗೆ’ ನಮ್ಮ ಸರಕಾರಗಳು ಬಜೆಟ್‌ನಲ್ಲಿ ಅತಿ ಕಡಿಮೆ ಹಣ ಮೀಸಲಿಡುತ್ತಿವೆ.
ನಮ್ಮಲ್ಲಿ ನೀರಿಗೆ ಸಂಬಂಸಿದ ವಿಚಾರಗಳು ಹಲವು ಇಲಾಖೆಗಳ ಅಡಿಯಲ್ಲಿ ಹಂಚಿಹೋಗಿವೆ. ಆ ಇಲಾಖೆಗಳ ನಡುವೆ ಸಮನ್ವಯ ಸಾಧನೆ ಆಗುತ್ತಿಲ್ಲ. ಗಣಿ ಮತ್ತು ಭೂಗರ್ಭ ಇಲಾಖೆ, ಅರಣ್ಯ ಮತ್ತು ಪರಿಸರ ಇಲಾಖೆ, ನೀರಾವರಿ ಇಲಾಖೆ, ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ, ವಿದ್ಯುತ್ ಮಂಡಳಿ, ಕೃಷಿ ಇಲಾಖೆ ಹೀಗೆ ಸರಕಾರದ ಎಲ್ಲ ಸಾಂಸ್ಥಿಕ ಸ್ವರೂಪಗಳೂ ಒಗ್ಗೂಡಿ ಕೆಲಸ ಮಾಡುವುದು ‘ಸಮಗ್ರ ರಾಷ್ಟ್ರೀಯ ನೀತಿ’ಯಿಂದ ಮಾತ್ರ ಸಾಧ್ಯ.

‘ಲಾಸ್ಟ್’ಡ್ರಾಪ್: ಅದೆಷ್ಟೋ ಘೋರ ಕದನ ಸದ್ದಿಲ್ಲದೇ ನೀರಿಗಾಗಿ ನಡೆಯುತ್ತಲೇ ಇದೆ. ಶಾಂತಿಧೂತರಾಗಿ ಬರಲು ಎಷ್ಟು ಮಂದಿ ಸಿದ್ಧರಿದ್ದಾರೆ ?

Friday, December 19, 2008

ನೀರ ಸಾಗರ ನಿರ್ಮಸಿರುವ ಸಗರ ನಾಯಕರು

ಬೆಟ್ಟದ ನಟ್ಟ ನಡುವೆ ನೀಲಾಕಾಶವನ್ನೇ ನುಂಗಿಕೊಂಡಂತಿರುವ ವಿಶಾಲ ಜಲರಾಶಿಯ ವಜಾಯ ಮೊದಲ ನೋಟದಲ್ಲೇ ನಿಮ್ಮನ್ನು ಸಮ್ಮೋಹನಗೊಳಿಸದಿದ್ದರೆ ದೇವರಾಣೆ. ಕಣ್ಣರಳಿಸಿ ಕೆಕ್ಕರಿಸುವ ಸುಡು ಸೂರ್ಯನಿಗೂ ಸವಾಲೊಡ್ಡಿ ತಂಗಾಳಿಯನ್ನು ತೇಲಿಸಿಕೊಂಡು ಬಂದು ಮೈದಡವುತ್ತಿದ್ದರೆ...ಆಹ್, ಇರವೇ ಮರೆತುಹೋಗಿರುತ್ತದೆ. ಮೊದಲೇ ಮಧುರಾನುಭವ. ಅದಕ್ಕೊಂದು ಪುಟವಿಟ್ಟಂತೆ ಮೆರುಗು ತಂದದ್ದು ಆ ಕೊಳದ ಮೇಲರಳಿ ನಿಂತು ನಗು ಚೆಲ್ಲುವ ತಾವರೆಗಳ ಸಮೂಹ. ಕೊಳದಲ್ಲೇ ರಾಸಕ್ಕಿಳಿದ ಹಕ್ಕಿಗಳ ಹಿಂಡು. ಮೈಮರೆತು ಮಲಗಿರುವ ಪ್ರಕೃತಿಯ ಮಡಿಲಲ್ಲಿ ಮಗುವಾಗಿ ಹುದುಗಿ ಹೋದ ಭಾವನೆ.
ಹೆಸರೇ ತಾವರೆಗೆರೆ. ಮುಗಿಲಗಲಕ್ಕೆ ಪೈಪೋಟಿಗಿಳಿದ, ಬಾನೆತ್ತರಕ್ಕೆ ಏರಿ ನಿಂತ ಬೆಟ್ಟದ ನೆತ್ತಿಯಲ್ಲಿ ನಿಂತು ನಗುವ ಕಾವ್ಯಕನ್ನಿಕೆಯವಳು. ಅದೇ ವಿಶೇಷ. ಬೆಟ್ಟ ಸಾಲುಗಳ ಮೇಲೆ ಸುರಿದು, ಅವುಗಳ ಮೈಯ್ಯಗುಂಟ ಜಾರಿ ಬರುವ ಮಳೆ ಹನಿಗಳ ಹಾಯಗೊಡದೇ ತಟದಲ್ಲಿ ತಡೆದು ನಿಲ್ಲಿಸಿಕೊಂಡು ತನಿಯಾಗಿ ಎರೆಯುವ ಕೆರೆಗಳೇನೂ ನಮಗೆ ಹೊಸದಲ್ಲ. ತಲೆಗೆ ಸುರಿದದ್ದು ಕಾಲಿಗಿಳಿಯಲೇಬೇಕೆಂಬುದು ನಿಯಮ. ಆದರೆ ಅಂಥವೆಲ್ಲಕ್ಕೆ ಅಪವಾದ ಈ ತಾವರೆಗೆರೆ. ಶಿವನ ಜಟೆಯ ಜಡಕಲ್ಲಿ ಸಿಲುಕಿ, ಅಲ್ಲೇ ಬಂದಿಯಾಗಿ ಬಗ್ಗಿ ನೋಡುವ ಗಂಗೆಯಂತೆ, ಸುರಪುರದ ಮಗ್ಗುಲಿಗೇ ಇರುವ ಆ ಮೇರುವಿನ ಮೇಲೆ ತಣ್ಣನೆಯ ಸ್ವರ್ಗ ನಿರ್ಮಿಸಿದ ಜಲ ಹರವದು.
ಆ ಬೆಟ್ಟವಾದರೂ ಎಂಥದ್ದು ? ಏರಿದಷ್ಟೂ ಏದುಸಿರ ತರುವ ಅದರ ಬೃಹದಾಕಾರದೆದುರು ಮನುಷ್ಯ ಇನ್ನಿಲ್ಲದಂತೆ ಕುಬ್ಜನಾಗಿ ಹೋಗಿರುತ್ತಾನೆ. ಅದರ ನೆತ್ತಿಯ ಮೇಲೆ ಮೈದಾಳಿ ಮೈಲುಗಳವರೆಗೆ ಕಾಣಿಸಿಕೊಳ್ಳುವ ಐತಿಹಾಸಿಕ ಕೋಟೆ, ಒಮ್ಮೆ ಒಳಹೊಕ್ಕು ನೋಡಿಯೇ ಬರಬೇಕೆಂಬ ಅದಮ್ಯ ಬಯಕೆಯನ್ನು ಉದ್ದೀಪಿಸುತ್ತದೆ. ಹಾಗೊಮ್ಮೆ ನಿರ್ಧಾರಕ್ಕೆ ಬಂದು ಬೆವರೊರೆಸಿಕೊಳ್ಳುತ್ತ ಬುಡದಿಂದ ಕಾಲು ಹಾದಿಯಲ್ಲಿ ಹತ್ತಲಾರಂಭಿಸಿದರೆ ಉದ್ದಕ್ಕೂ ಜುಳು ಜುಳು ನಿನಾದ. ಕಂಡೂ ಕಾಣದಂತಿರುವ ನೀರ ಸೆಲೆ, ಕಲ್ಲುಗಳ ನಡುವೆ ನುಸುಳುತ್ತ, ಪುಟ್ಟ ಕುವರಿಯಂತೆ ಅಲ್ಲಲ್ಲಿ ನೆಗೆಯುತ್ತ, ಹಬ್ಬಿ ನಿಂತಿರುವ ಹಸಿರು ಕರವೀರದ ಪೊದೆಗಳಲ್ಲಿ ಕಣ್ಣಾಮುಚ್ಚಾಲೆಯಾಡುತ್ತ ಸಾಹಸಿಗರ ಆಯಾಸ ಮರೆಸುತ್ತದೆ. ತೀರಾ ಬಾಯಾರಿ ಬಸವಳಿದು ಬಂದಾಗ ಬೊಗಸೆಯೊಡ್ಡಿ ಹಿಡಿದು ಬಾಯಿಗಿಟ್ಟುಕೊಳ್ಳಬೇಕು. ಜೇನ ಹನಿಯನ್ನೂ ನಾಚಿಸುವ ಸವಿ ಎಂದರೆ, ಅದು ಖಂಡಿತಾ ಉತ್ಪ್ರೇಕ್ಷೆಯಲ್ಲ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಇಡೀ ಬೆಟ್ಟವನ್ನಾವರಿಸಿಕೊಂಡು ನಿಂತಿರುವ ಅಪರೂಪದ ಸಸ್ಯ ವೈವಿಧ್ಯ, ಕುರುಚಲು ಪೊದೆಗಳಲ್ಲಿ ಅಡಗಿ ಕುಳಿತಿರುವ ಔಷಯ ಅಂಶಗಳನ್ನು ಬಳಸಿಕೊಂಡು ಬರುವ ನೀರಿಗೆ ಅಂಥ ಅಮೃತದ ಗುಣ ಬಂದಿದ್ದರೆ ಅದು ಸಹಜ.
ಹಾಗೆ ಸಾವರಿಸಿಕೊಂಡು ಮತ್ತಷ್ಟು ದೂರ ಸಾಗಿದರೆ ಹಸಿವು ಕಾಡೀತು. ಚಿಂತೆ ಬೇಡವೇ ಬೇಡ. ಸೀತಾಫಲದ ಸಮೃದ್ಧ ಸೇವನೆಗೆ ನಯಾಪೈಸೆಯನ್ನೂ ಖರ್ಚು ಮಾಡಬೇಕಿಲ್ಲ. ನಿಸರ್ಗಮಾತೆಯ ನೈಜ ಆತಿಥ್ಯವದು. ಕಳಿತ ಹಣ್ಣುಗಳನ್ನು ಆಯ್ದು ಕೊಯ್ದುಕೊಳ್ಳುವುದೊಂದೇ ನಿಮಗಿರುವ ಕೆಲಸ. ತೊಳೆತೊಳೆಗಳ ಬಿಡಿಸಿ ಬಾಯ್ಗಿಟ್ಟುಕೊಳ್ಳುತ್ತ ಹತ್ತುವ ಹೊತ್ತಿಗೆ ತಂಗಾಳಿ ಅದೆಲ್ಲಿಂದಲೋ ಮೈದಡವಲಾರಂಭಿಸುತ್ತದೆ. ಅದರ ಬೆನ್ನು ಹತ್ತಿ ಮುಂದೆ ಇಣುಕಿದರೆ ಅದೇ, ಅದೇ ತಾವರೆಗೆರೆ.
ಸುತ್ತ ಒಮ್ಮೆ ಕಣ್ಣಾಡಿಸಿದರೆ ಎಷ್ಟು ಎತ್ತರಕ್ಕೆ ಏರಿ ಬಂದಿರಬಹುದೆಂಬ ಅಂದಾಜು ಸಿಗಲು ಹೆಚ್ಚು ಹೊತ್ತು ಬೇಕಾಗುವುದಿಲ್ಲ. ಬದುಕಿನ ಜಂಜಡಗಳೆಲ್ಲವನ್ನೂ ಮೀರಿ ಅಧ್ಯಾತ್ಮದಂಚಿಗೆ ಬಂದು ನಿಂತ ಅನುಭೂತಿ. ಜೀವದ ಅಣು ಅಣುಗಳಲ್ಲೂ ಅದೆಂಥದೋ ಅವ್ಯಕ್ತ ಸಂತಸ ಚಿಮ್ಮಲಾರಂಭಿಸುತ್ತದೆ. ಅದೇ ಕ್ಷಣದಲ್ಲಿ, ಅಷ್ಟು ಎತ್ತರದಲ್ಲಿ ಆ ಪರಿಯ ನೀರ ನಿರಕಿಸಿದ ಪಾರಂಪರಿಕ ಜ್ಞಾನದ ಬಗೆಗೊಂದು ಬೆರಗು ನಿಮಗೆ ಗೊತ್ತಿಲ್ಲದಂತೆಯೇ ನಿಮ್ಮ ಮನದಲ್ಲಿ ಸುಳಿದು ಹೋಗುತ್ತದೆ. ಅಬ್ಬಾ, ಅದೆಂಥ ಅದಮ್ಯ ವಿಶ್ವಾಸ, ಅದೆಷ್ಟು ಖಚಿತ ತಂತ್ರಜ್ಞಾನ, ಆ ಅಚ್ಚುಕಟ್ಟುತನ, ಆ ನೈಪುಣ್ಯ, ಅಂಥ ಸುಸ್ಥಿರತೆ, ಮುಂದಿನ ಹತ್ತು ತಲೆಮಾರುಗಳವರೆಗೂ ಅಳಿಯದೇ ಉಳಿಯಬೇಕೆಂಬ ದೂರಾಲೋಚನೆ... ಒಂದಕ್ಕಿಂತ ಒಂದು ಅಚ್ಚರಿಗಳ ಸಾಲು ಸಾಲು ಆಕ್ರಮಣಕ್ಕೆ ತೊಡಗುತ್ತದೆ. ಸೂಕ್ಷ್ಮ ಅವಲೋಕನಕ್ಕಿಳಿದರೆ ಆ ನೆಲಮೂಲದ ಜ್ಞಾನದ ಬಗ್ಗೆ ಹೆಮ್ಮೆ ಎನಿಸುತ್ತದೆ.
ಇಷ್ಟೆಲ್ಲ ಆಹ್ಲಾದ, ಆಸ್ವಾದ, ಅಚ್ಚರಿಗಳ ಮೂಲವಾಗಿ ನಿಂತವರು ಗುಲ್ಬರ್ಗ ಸಮೀಪದ ಸುರಪುರದ ಗೋಸಲು ವಂಶದ ಅರಸರು. ೧೬೩೬ರಿಂದ ೧೮೫೮ರ ವರೆಗೆ ಈ ಭಾಗದಲ್ಲಿ ಪುಟ್ಟ ಸಾಮ್ರಾಜ್ಯವನ್ನು ಕಟ್ಟಿ ಸಮರ್ಥವಾಗಿ ಆಳಿ ಹೋದ ಸಗರ ದೊರೆಗಳು ಕ್ಷಾತ್ರ ತೇಜಸ್ಸಿನಿಂದಲೂ ಸುಪ್ರಸಿದ್ಧ. ಅದಕ್ಕಿಂತಲೂ ಆ ಕಾಲದಲ್ಲೇ ಅವರು ಅಂಥ ಬಿರುಬಿಸಿಲ ನೆಲದಲ್ಲೂ ಅನುಷ್ಠಾನಗೊಳಿಸಿದ್ದ ಜಲ ಸಂರಕ್ಷಣಾ ಪದ್ಧತಿಗಳು ವಂಶದ ಹೆಸರನ್ನೇ ಹಸಿರಾಗಿಟ್ಟಿದೆ. ನೀರಿನ ಬಗೆಗೆ ಅವರಿಗಿದ್ದ ಅಪೂರ್ವ ಜ್ಞಾನಕ್ಕೆ ಜೋಡಿ ತಾವರೆಕೆರೆ, ಅದರ ಸನಿಹಕ್ಕೆ ಇರುವ ಸುರಪುರದ ಕೋಟೆಯೊಳಗಣ ಮೌನೇಶ್ವರ ಕೊಳ, ಮಂದಾಕಿನೀ ತೀರ್ಥ, ಆನೆ ಹೊಂಡಗಳೇ ಸಾಕ್ಷಿ.
ಗಡ್ಡಿ ಪಿಡ್ಡನಾಯಕನೆಂಬುವವನಿಂದ ಸ್ಥಾಪನೆಗೊಂಡ ಸಗರ ಸಾಮ್ರಾಜ್ಯದೆಲ್ಲೆಡೆ ಅತ್ಯುತ್ತಮ ನೀರಾವರಿ ವ್ಯವಸ್ಥೆಯಿದ್ದ ಕುರುಹುಗಳು ಕಂಡು ಬರುತ್ತವೆ. ಇಂದಿನ ಗುಲ್ಬರ್ಗ ಜಿಲ್ಲೆಗೆ ಸೇರಿದ ಸುರಪುರ, ಶಹಾಪುರ ಮತ್ತು ಜೇವರ್ಗಿ ಈ ಮೂರೂ ತಾಲೂಕುಗಳ ಗಡಿಯಾದ ಕೃಷ್ಣಾ, ಭೀಮಾ ನದಿಗಳ ಹರಿವಿನ ವ್ಯಾಪ್ತಿಯೊಳಗಿನ ಪ್ರದೇಶವನ್ನು ಸಗರ ನಾಡೆಂದು ಗುರುತಿಸಿದರೆ, ತಾವರೆಗೆರೆ ಹಾಗೂ ಪಕ್ಕದ ಕೋಟೆ ಅದರ ಉಚ್ಛ್ರಾಯ ಸ್ಥಿತಿಯ ದ್ಯೋತಕ. ಮೂಲತಃ ಬೇಡ ವಂಶದವರಾದ ಸಗರ ಅರಸರಲ್ಲಿ ಮುಮ್ಮಡಿ ಪಾಮನಾಯಕ ಹಾಗೂ ನಾಲ್ವಡಿ ವೆಂಕಟಪ್ಪ ನಾಯಕರು ಸುಪ್ರಸಿದ್ಧರು. ೧೬೩೬ರ ಸುಮಾರಿಗೆ ಸಾಮ್ರಾಜ್ಯ ಸ್ಥಾಪನೆಯ ಸಂದರ್ಭದಲ್ಲೇ ಕೋಟೆಯನ್ನು ಕಟ್ಟಿಸಿದ ದಾಖಲೆಗಳು ಸಿಗುತ್ತವಾದರೂ ಕೆರೆಯ ನಿರ್ಮಾಣದ ಬಗೆಗೆ ಖಚಿತತೆ ಇಲ್ಲ. ಆದರೂ ಕಿಲ್ಲೆಯೊಂದಿಗೇ ಕೆರೆಯ ನಿರ್ಮಾಣವೂ ಆಗಿರುವ ಸಾಧ್ಯತೆ ಇದೆ.
‘ವಾಗಿನಗಿರಿ’ಯೆಂಬ ಐತಿಹಾಸಿಕ ಹೆಸರಿನೊಂದಿಗೆ ಗುರುತಿಸುವ ಕೋಟೆಯೊಳಗೆ ವ್ಯವಸ್ಥಿತ ನಗರವಿದ್ದ ಕುರುಹುಗಳು ಇಂದಿಗೂ ಕಂಡುಬರುತ್ತದೆ. ವಿಶಾಲ ಅರಮನೆ ಗತವೈಭವದ ಪ್ರತೀಕ. ೫೦೦ ಕುದುರೆ, ೪ ಸಾವಿರ ಕಾಲಾಳುಗಳನ್ನೊಳಗೊಂಡ ಶಸ್ತ್ರ ಸಜ್ಜಿತ ಸೈನ್ಯ ಕೋಟೆಯ ಕಾವಲಿಗಿತ್ತೆನ್ನುತ್ತದೆ ಇತಿಹಾಸ. ರಾಜನ ಜತೆ ೩೭ ಪ್ರಮುಖರು, ೬ ಸಾವಿರ ಬೇಡರು, ೩ ಸಾವಿರ ಗೊಲ್ಲರು ಈ ಕೋಟೆಯೊಳಗಣ ನಗರದಲ್ಲಿದ್ದರೆನ್ನಲಾಗಿದೆ. ಇಷ್ಟೂ ಜನವಸತಿ, ಅವರ ಕುಟುಂಬದ ದೈನಂದಿನ ಬಳಕೆಗೆ ಬೆಟ್ಟದ ಮೇಲಿನ ಆ ಪುಟ್ಟ ಪ್ರದೇಶದಲ್ಲಿ ವರ್ಷವಿಡೀ ನೀರಿನ ಪೂರೈಕೆ ಸಣ್ಣ ಮಾತೇನೂ ಆಗಿರಲಿಲ್ಲ. ಆದರೆ ಆ ಕೆರೆಯ ಅಗಾಧತೆ, ಅದರ ನಿರ್ಮಾಣದಲ್ಲಿನ ಜಾಣ್ಮೆಯನ್ನು ಕಂಡಾಗ ಎಷ್ಟೇ ಜನರಿದ್ದರೂ, ಯಾವ ಕಾಲಕ್ಕೂ ನೀರು ಸಮಸ್ಯೆಯೇ ಅಲ್ಲವೆನ್ನುವುದು ದೃಢಗೊಳ್ಳುತ್ತದೆ. ಸುತ್ತಲಿನ ಬೆಟ್ಟ ಸಾಲುಗಳ ಮೇಲೆ ಬಿದ್ದ ಮಳೆ ನೀರೆಲ್ಲವೂ ಅನಾಯಾಸವಾಗಿ ಕೆರೆಯಂಗಳಕ್ಕೇ ಬಂದು ಸೇರುವಂತೆ ಎಚ್ಚರಿಕೆಯಿಂದ ಸೂಕ್ತ ಜಾಗದ ಆಯ್ಕೆ ಮಾಡಲಾಗಿದೆ. ಒಂದೊಮ್ಮೆ ವರ್ಷಗಳವರೆಗೆ ಮಳೆ ಬಾರದಿದ್ದಲ್ಲಿ ದೊಡ್ಡ ಕೆರೆಯ ಮೇಲ್ಭಾಗ ಒಣಗಿದರೂ ಅಂತರ್ಜಲಕ್ಕೆ ಧಕ್ಕೆಯಾಗದಂತೆ ಕೆರೆಯನ್ನು ಇಳಿಜಾರಾಗಿ ನಿರ್ಮಿಸಲಾಗಿದೆ. ಒಡಲಾಳದಲ್ಲಿ ಇಂಗಿದ ನೀರು ಗುಡ್ಡದ ಒಂದು ಪಕ್ಕಕ್ಕೆ ಜಾರಿ ಹಾದಿಯ ಉದ್ದಕ್ಕೂ ಪುಟ್ಟ ಸೆಲೆಯಾಗಿ ಜಿನುಗುತ್ತಿರುತ್ತದೆ. ಕೊನೆಯಲ್ಲಿ ಬೆಟ್ಟದ ತಪ್ಪಲಿನಲ್ಲಿ ಬಂದು ಶೇಖರಣೆಗೊಳ್ಳುತ್ತದೆ. ದೊಡ್ಡ ಕೆರೆಯ ಪಕ್ಕದಲ್ಲೇ ಇನ್ನೊಂದು, ತಾವರೆಗೆರೆಯ ಪುಟ್ಟ ಪ್ರತಿರೂಪವಿದೆ. ಆಪತ್ಕಾಲದ ನೀರಾಗಿ ಇದು ಬಳಕೆಯಾಗುತ್ತಿರುವ ಸಾಧ್ಯತೆ ಇದೆ.
ಇದಕ್ಕಿಂತಲೂ ಗಮನ ಸೆಳೆಯುವ ಅಂಶವೆಂದರೆ ಕೋಟೆಯೊಳಗೆ ಸಂಪೂರ್ಣ ಶಿಲಾಮಯವಾದ ಪ್ರದೇಶದಲ್ಲಿ ತಣ್ಣಗೆ ಕುಳಿತ ಮಂದಾಕಿನಿ ತೀರ್ಥ. ಬಂಡೆಯನ್ನೇ ಕೊರೆದು ಪುಟ್ಟ ಕೊಳದ ಆಕೃತಿಯನ್ನು ನಿರ್ಮಿಸಲಾಗಿದೆ. ಕೋಟೆಯ ಒಳಭಾಗದಲ್ಲಿ ಬಿದ್ದ ಮಳೆ ನೀರೆಲ್ಲವೂ ಬಂಡೆಗಳ ಸೂಕ್ಷ್ಮ ರಂಧ್ರಗಳಲ್ಲಿ ಇಂಗಿ ಈ ಕೊಳದ ಒಡಲಲ್ಲಿ ಶೇಖರಗೊಳ್ಳುವಂತೆ ಮಾಡಲಾಗಿದೆ. ಹೆಚ್ಚುವರಿ ನೀರು ಸಹ ಹೊರಗೆಲ್ಲೂ ಜಾರಿ ಹೋಗದಂತೆ ಜಾಗ್ರತೆ ವಹಿಸಲಾಗಿದೆ. ಪಕ್ಕದಲ್ಲೇ ಹನುಮಂತ ದೇವರಗುಡಿಯಿದ್ದು ನೀರಿನ ಪಾವಿತ್ರ್ಯವನ್ನು ಹೆಚ್ಚಿಸಿದೆ. ಇಂದಿಗೂ ಕೊಳದ ತುಂಬ ನೀರು ಲಾಸ್ಯವಾಡುತ್ತದೆ. ಇಷ್ಟೇ ಅಲ್ಲ. ಕೋಟೆಯ ಸುತ್ತಲೂ ಕಲ್ಲಿನ ಗೋಡೆಯ ಮೇಲೆ, ಬಂಡೆಗಳ ಗುಂಟ ಇಳಿದು ಬರುವ ನೀರು ವ್ಯರ್ಥವಾಗದಂತೆ ತಡೆದು ಅಲ್ಲಿ ಕೊರೆದು ಪುಟ್ಟ ಪುಟ್ಟ ಕಾಲುವೆಗಳನ್ನು ರಚಿಸಿ ಒಂದೆಡೆ ನಿಲ್ಲುವಂತೆ ಮಾಡಲಾಗಿದೆ. ಒಂದೇ, ಎರಡೇ... ಮಳೆ ನೀರುಕೊಯ್ಲಿನ ಸಮರ್ಥ ಮಾದರಿಯಾಗಿ ಇಡೀ ಕೋಟೆಯಾವರಣ ನಿಲ್ಲುತ್ತದೆ.
ಕೋಟೆಯೆಲ್ಲ ಸುತ್ತಾಡಿ ಬಂದರೆ ಒಂದು ಪಾರ್ಶ್ವದಲ್ಲಿ ಕಣ್ಸೆಳೆಯುವಂತೆ ಮಾಡುವುದು ಆನೆ ಹೊಂಡ. ಸೈನ್ಯದಲ್ಲಿದ್ದ ಸದೃಢ ಗಜ ದಳಕ್ಕೆ ನೀರು ಪೂರೈಸುವ ದೃಷ್ಟಿಯಿಂದಲೇ ಸುಮಾರು ಇಪ್ಪತ್ತು ಅಡಿ ಉದ್ದ ಹತ್ತು ಅಡಿ ಅಗಲದ ಕೊಳ ಮಾಡಲಾಗಿದೆ. ಮೂವತ್ತಕ್ಕೂ ಹೆಚ್ಚು ಅಡಿ ಆಳವಿರುವ ಈ ಕೊಳದಲ್ಲಿ ಇಂದಿಗೂ ಮುಕ್ಕಾಲುಭಾಗ ನೀರು ನಿಂತಿದೆ.
ಇಷ್ಟೆಲ್ಲಕ್ಕೂ ಜಲಮೂಲ ಮಳೆ ಎಂದರೆ ಅಚ್ಚರಿಪಡಬೇಕಿಲ್ಲ. ಆ ಪ್ರದೇಶದ ಮಳೆ ಸರಾಸರಿ, ಭೂ ಲಕ್ಷಣ ಇತ್ಯಾದಿ ಎಲ್ಲ ಅಂಶಗಳನ್ನು ಪರಿಗಣಿಸಿ ಕರಾರುವಾಕ್ ಲೆಕ್ಕಾಚಾರದಲ್ಲಿ ಈ ಎಲ್ಲವನ್ನೂ ನಿರ್ಮಿಸಿರುವುದು ಕಂಡಾಗ ಅಂದಿನ ಅರಸರಲ್ಲಿ ಇರಬಹುದಾದ ಜ್ಞಾನ ಸಂಪತ್ತಿನ ಬಗೆಗೆ ಹೆಮ್ಮೆ ಮೂಡದೇ ಇರದು. ಮೂರು ಶತಮಾನಗಳ ಬಳಿಕವೂ, ಇಂದಿನ ಬೃಹತ್ ನೀರಾವರಿ ಯೋಜನೆಗಳ ಅಬ್ಬರದ ನಡುವೆಯೂ ಸಾಟಿಯಿಲ್ಲದೇ ನಿಂತಿರುವ ಪಾರಂಪರಿಕ ಈ ನೀರ ಜ್ಞಾನವನ್ನು ಸಂರಕ್ಷಿಸಿಕೊಂಡು ಹೋಗುವುದರ ಜತೆಗೆ ಹೆಚ್ಚಿನ ಅಧ್ಯಯನಕ್ಕೆ ಮುಂದಾದಲ್ಲಿ ಗುಲ್ಬರ್ಗದಂಥ ಜಿಲ್ಲೆಗಳ ಹಲವು ಸಮಸ್ಯೆಗಳಿಗೆ ಪರಿಹಾರದ ಹೊಳಹು ಕಾಣುವುದರಲ್ಲಿ ಸಂಶಯವಿಲ್ಲ. ಹ್ಯಾಟ್ಸ್ ಆಫ್ ಸಗರ ನಾಯಕರೇ !
ಲಾಸ್ಟ್’ಡ್ರಾಪ್: ನೀರೆಂದರೆ ಅದು ಪ್ರೀತಿಯ ಸೆಲೆ. ಪ್ರವಹಿಸುವುದು ಅದರ ಹುಟ್ಟುಗುಣ. ಹಂಚಿದಷ್ಟೂ ಹೆಚ್ಚೀತು ಸವಿ. ಗೌರವಿಸಿದರೆ ಗರ್ವ. ನಿರ್ಲಕ್ಷಿಸಿದರೆ ನಿರ್ನಾಮ.

Friday, December 12, 2008

ಅಂತರ್ಜಲ ಆಗಿದೆ ಹಾಲಾಹಲ


ನೀರೆಂಬುದು ಬರಿ ನೀರಲ್ಲ. ಅದೊಂದು ಜಾಗೃತ ಪ್ರಜ್ಞೆಯ ಪ್ರತೀಕ. ಅದು ಜೀವಂತಿಕೆಯ ಲಕ್ಷಣ. ಸಾಮುದಾಯಿಕ ಸಂಕೇತ. ಚಲನ ಶೀಲತೆಗೆ ಸಾಕ್ಷಿ. ಕರ್ತಾರನ ಕಸುಬಿನಲ್ಲಿ ಅರಳಿದ ಅತ್ಯಂತ ಕ್ರಿಯಾಶೀಲ ಭಾಗವೊಂದಿದ್ದರೆ ಅದು ನೀರು.
ಮನುಷ್ಯ ಮನುಷ್ಯರನ್ನು ಬಂಸಿಟ್ಟ ಅತ್ಯಂತ ದಟ್ಟವಾದ ಭಾವನೆಯನ್ನು ಹಸಿಹಸಿಯಾಗಿ ಬಣ್ಣಿಸುತ್ತೇವೆ. ಇಲ್ಲಿ ಹಸಿಹಸಿಯಾಗಿದೆ ಎಂಬುದೇ ಜಲದ ಪ್ರತಿಮೆ. ಸುಂದರ ಕಾವ್ಯ ಕನ್ನಿಕೆಯ ರೂಪದಲ್ಲಿ ಮೊದಲ ನೋಟದಲ್ಲೇ ಎಂಥವರನ್ನೂ ಸೆಳೆಯಬಲ್ಲ ಜಲರಾಶಿಗೆ ಮನಸೋಲದ ಮನಸ್ಸುಗಳಿಲ್ಲ. ಮನುಷ್ಯನೊಂದಿಗಿನ ಜಲದ ಸಂಬಂಧದ ಸೆಳೆತ ಅಂಥದ್ದು. ಈ ಪರಿಯ ಚುಂಬಕ ಶಕ್ತಿಯೊಂದು ಈ ಧರೆಯ ಮೇಲೆಯೇ ಇಲ್ಲದಿದ್ದರೆ ? ಎಂಥ ಮೂರ್ಖ ಪ್ರಶ್ನೆ. ಖಂಡಿತ ಹಾಗೊಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಲೂ ಭಯವಾಗುತ್ತದೆ. ಏಕೆಂದರೆ ನೀರಿಲ್ಲದ ಜಗತ್ತಿನಲ್ಲಿ ಮನುಷ್ಯನ ಪ್ರಸ್ತಾಪವೇ ಇರುತ್ತಿರಲಿಲ್ಲ. ಮಾತ್ರವಲ್ಲ ಜೀವ ಕೋಟಿಯ ಪ್ರಮೇಯವೂ ಇಲ್ಲ.
ಇಂಥ ನೀರಿನ ವಿಚಾರದಲ್ಲಿ ತಿದ್ದಿಕೊಳ್ಳಲಾಗದ ತಪ್ಪು ಮಾಡಿ ಆಗಿದೆ. ನೀರಿನ ವಿಚಾರದಲ್ಲಿ ಎಸಗಿದ ಸಾಮೂಹಿಕ ಅಪರಾಧಕ್ಕೆ ಈಗೇನಿದ್ದರೂ ಬೆಲೆತೆರುವುದೊಂದೇ ಮಾರ್ಗ ಉಳಿದಿದೆ ನಮ್ಮ ತಲೆ ಮಾರಿಗೆ. ಆದರೆ, ಹಿಂದೆ ಮಾಡಿದ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಿದರೆ ಮುಂದಿನ ಜನಾಂಗವನ್ನಾದರೂ ಆರೋಗ್ಯಪೂರ್ಣವಾಗಿಟ್ಟು ಹೋಗಬಹುದು.
ವಿಶ್ವಾದ್ಯಂತ ಪ್ಲೋರೋಸಿಸ್‌ನ ರಕ್ಕಸ ಸಾಮ್ರಾಜ್ಯ ಸ್ಥಾಪನೆಯಾಗಿದೆ. ಸ್ವಾತಂತ್ರ್ಯೋತ್ತರ ಭಾರತಕ್ಕೆ ರೋಗಗಳೇನೂ ಹೊಸದಲ್ಲ. ಸಾಂಕ್ರಾಮಿಕಗಳು, ಸಾಮೂಹಿಕ ರೋಗ ಲಕ್ಷಣಗಳ ಸಾಲಿಗೆ ಹೊಸ ಸೇರ್ಪಡೆ ಪ್ಲೋರೋಸಿಸ್. ಆದರಿದು ಸ್ವಯಂಕೃತ. ಅಂತರ್ಜಲದ ಮಿತಿ ಮೀರಿದ ಬಳಕೆ, ನೀರು ನಿರ್ವಹಣೆಯಲ್ಲಿನ ಇನ್ನಿಲ್ಲದ ಬೇಜವಾಬ್ದಾರಿ, ಜಲ ಮಾಲಿನ್ಯದ ಪರಮಾವ ತಲುಪಿದ ಪರಿಣಾಮ ಇಂದು ೧೫ ರಾಜ್ಯಗಳಲ್ಲಿನ ೧೫೦ಕ್ಕೂ ಹೆಚ್ಚು ಜಿಲ್ಲೆಯ ಕೋಟ್ಯಂತರ ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ. ಎರಡು ಅಲುಗಿನ ಪ್ಲೋರೀನ್ ಮನುಷ್ಯ ಜೀವನದ ಬೆಳವಣಿಗೆ ಎಷ್ಟು ಅಗತ್ಯವೋ ಅಷ್ಟೇ ಮಾರಕ.
ಅಂತರ್ಜಲವೇ ಅಕ ಪ್ಲೋರೈಡ್‌ನ ತವರು. ಅಭಿವೃದ್ಧಿಯ ಹುಚ್ಚುವೇಗಕ್ಕೆ ಸಿಲುಕಿ, ಬೋರ್‌ವೆಲ್‌ಗಳ ಹುಸಿ ಪ್ರಗತಿಯನ್ನು ಆರೋಪಿಸಿಕೊಳ್ಳುವ ಭರದಲ್ಲಿ ನಾವೆಲ್ಲಿ ಎಡವಿದ್ದೇವೆ ಎಂಬುದು ತಿಳಿಯದೇ ಹೋದದ್ದು ದುರಂತ. ಬರಗಾಲ ಪೀಡಿಸಿದ್ದನ್ನೇ ನೆಪಮಾಡಿಕೊಂಡು ಆರಂಭಿಸಿದ ಬೋರ್‌ವೆಲ್‌ಗಳ ಕ್ರಾಂತಿ ಈ ಮಟ್ಟಿಗಿನ ದುರಂತಕ್ಕೆ ಮುನ್ನುಡಿಯಾಗುತ್ತದೆ ಎಂಬುದನ್ನು ಯಾರೊಬ್ಬರೂ ಗ್ರಹಿಸಿರಲೇ ಇಲ್ಲ.
ಪ್ಲೋರೀನ್ ಯುಕ್ತ ನೀರು ತಂದಿತ್ತಿರುವ ಸಂಕಟ ಒಂದೆರಡು ಬಗೆಯದ್ದಲ್ಲ. ಭಾರತದಲ್ಲಂತೂ ಯಾವ ರಾಜ್ದಲ್ಲಿ ಇದಿಲ್ಲ ಎಂಬುದನ್ನೇ ಹೇಳಲಾಗುವುದಿಲ್ಲ. ಏಕೆಂದರೆ ಎಲ್ಲರೂ ಅಂತರ್ಜಲದ ಮೇಲೆ ಪಾರುಪತ್ಯ ಸಾಸಲು ಪೈಪೋಟಿಗೆ ಬಿದ್ದವರೇ. ಪರಿಣಾಮ ಕುಡಿಯುವ ನೀರೇ ವಿಷವಾಗಿ ಬಾಳುವೆಯನ್ನೇ ಸಂಕಷ್ಟಕ್ಕೆ ದೂಡಿದೆ. ಬಡಕಲು ದೇಹ, ಪೀಚಲು ಕೈಕಾಲು, ಬಾಗಿದ ಮೂಳೆಗಳು, ಕಸುವು ಕಳೆದುಕೊಂಡ ರಟ್ಟೆ, ಬಣ್ಣಗೆಟ್ಟ ಹಲ್ಲು, ಎದ್ದು ನಿಲ್ಲಲೂ ತ್ರಾಣವಿಲ್ಲದ ದೇಹವೆಂದರೆ ಮೂಳೆಯ ಹಂದರ. ಒಟ್ಟಾರೆ ಬದುಕಿದ್ದಾಗಲೇ ನರಕದರ್ಶನ.
ಬದುಕಲು ಬಿಡದ, ಸಾವೂ ಸುಳಿಯಗೊಡದ ಪ್ಲೋರೋಸಿಸ್, ಮನುಷ್ಯ ದೇಹ ಹೊಕ್ಕರೆ ಮತ್ತೆಂದೂ ಜಾಗಬಿಟ್ಟು ಕದಲದು. ನಮ್ಮ ಮೇಲೆ ನಾವೇ ಕದನ ಸಾರುವ ದೈನೇಸಿ ಸ್ಥಿತಿಗೆ ತಲುಪಿಸಿಬಿಡುವ ಈ ಭಯಂಕರ ಕಾಯಲೆ ಪೀಡಿತರ ಕೂಗು ಅಂತರ್ಜಲದಂತೆ ಬತ್ತಿ ಹೋಗುತ್ತಿದೆ. ಇದೇ ಕಾರಣಕ್ಕಾಗಿಯೋ ಎನೋ, ಆಡಳಿತಾರೂಢರಿಂದ ಹಿಡಿದು ಜಾಗತಿಕ ಮಟ್ಟದವರೆಗೆ ಪರಿಹಾರ ದ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳೇ ಸಾಗುತ್ತಿಲ್ಲ. ಮನುಕುಲದ ಮೇಲೆ ಸವಾರಿ ಹೊರಟಿರುವ ಕ್ಯಾನ್ಸರ್, ಏಡ್ಸ್‌ಗಿಂತಲೂ ವ್ಯಾಪಕವಾಗಿರುವ ಪ್ಲೋರೋಸಿಸ್ ವಿರುದ್ಧ ಕನಿಷ್ಠ ಆಂದೋಲನವೂ ರೂಪುಗೊಂಡಿಲ್ಲ.
ಸಾರ್ವಜನಿಕ ಆರೋಗ್ಯದ ಬಗೆಗಿನ ಇಂಥ ನಿಷ್ಕಾಳಜಿಯೇ ನೀರಿನ ವಿಚಾರದಲ್ಲೂ ಮುಂದುವರಿದಿದೆ. ಜಗದೆಲ್ಲೆಡೆ ಹಾಹಾಕಾರವೆದ್ದಿರುವಾಗಲೂ ಶುದ್ಧ ನೀರು ಮರೀಚಿಕೆಯಾಗಿಯೇ ಸಾಗುತ್ತಿದೆ. ಈ ಹಂತದಲ್ಲಿ ಒಮ್ಮ ನಮ್ಮನ್ನು ನಾವೇ ಚಿವುಟಿಕೊಂಡು ಎಚ್ಚರಿಸಿಕೊಳ್ಳಬೇಕಾಗಿದೆ. ಏಕೆಂದರೆ ಈ ಧರೆಯ ಮೇಲಿನ ಬಹುತೇಕ ಕಾಯಿಲೆಗಳು ಅಶುದ್ಧ ನೀರಿನದೇ ಬಳಿವಳಿ. ಇದಕ್ಕಿಂಥ ಮುಖ್ಯ ಸಂಗತಿಯೆಂದರೆ ನೀರು ಕಾಲಿಯಾದರೆ ಮಳೆಯಿಂದ ತುಂಬಿಸಿಕೊಳ್ಳಬಹುದು. ಆದರೆ ಇರುವ ಅಂತರ್ಜಲ ಮಲಿನವಾದರೆ ಇನ್ನೆಂದೂ ಅದು ಶುದ್ಧಗೊಳ್ಳದು. ಇಂಥ ಎಚ್ಚರ ಮಾತ್ರ ಮನುಕುಲವನ್ನು ರಕ್ಷಿಸಬಲ್ಲುದು.
ಕಲುಷಿತ, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಲವಣಾಂಶವಿರುವ ನೀರನ್ನು ಸೇವಿಸಿ ಜಗತ್ತಿನ ಸರಿಸುಮಾರು ೧೨೫ ಕೋಟಿ ಮಂದಿ ಫ್ಲೋರೋಸಿ ಸ್‌ನಂಥ ಜಲಸಂಬಂ ರೋಗಗಳಿಂದ ಬಳಲುತ್ತಿ ದ್ದಾರೆ. ಭಾರತವೂ ಇಂಥ ರೋಗಗಳಿಂದ ಮುಕ್ತ ವಾಗಿಲ್ಲ. ರಾಜ್ಯದ ಅಂತರ್ಜಲವೂ ಈಗಾಗಲೇ ಫ್ಲೋರೈಡ್ ನೈಟ್ರೇಟ್‌ಗಳಂಥ ಖನಿಜಗಳಿಂದ ಬಳಕೆಗೆ ಅಯೋಗ್ಯವಾಗಿರುವುದು ಹೊಸ ಸಂಗತಿಯೇನಲ್ಲ.
ವೈಜ್ಞಾನಿಕವಾಗಿ ನೀರಿನಲ್ಲಿ ೧.೫೦ ಮಿಲಿ ಗ್ರಾಂಗಿಂತ ಹೆಚ್ಚಿನ ಫ್ಲೋರೈಡ್ ಅಂಶ ಇರಕೂಡದು. ಇದು ಮನುಷ್ಯನ ಮೂಳೆಗಳ ಮೇಲೆ ತೀವ್ರತರ ಪರಿಣಾಮವನ್ನುಂಟು ಮಾಡುವ ಫ್ಲೋರೋನೆಸ್‌ಗೆ ಕಾರಣವಾಗುತ್ತದೆ. ಇದಕ್ಕಿಂತ ಅಪಾಯಕಾರಿ ನೈಟ್ರೀಟ್. ಈ ವಿಷಕಾರಿ ಲವಣ ಬೆರೆತ ನೀರನ್ನು ನಿರಂತರ ಸೇವಿಸುವುದರಿಂದ ಮೆತೆಗ್ಲೋಬೋ ಮಿನಿಯ (ಮಕ್ಕಳ ನೀಲಿರೋಗ) ಎಂಬ ರೋಗ ಬರುವ ಸಾಧ್ಯತೆ ಇದೆ. ಇದು ಕ್ಯಾನ್ಸರ್‌ಕಾರಕವೂ ಹೌದು.
ಕ್ಯಾಲ್ಸಿಯಂ ಮತ್ತು ಮೆಗ್ನಿಷಿಯಂಗಳು ಕಾರ್ಬೊ ನೇಟ್ ಹಾಗೂ ಬೈಕಾರ್ಬೋನೇಟ್ ಗಳಾಗಿ ರೂಪಾಂತರಗೊಂಡಾಗ ಅದು ನೀರಿಗೆ ಗಡಸುತನ ವನ್ನು ಬಳುವಳಿಯಾಗಿ ನೀಡುತ್ತದೆ. ಸ್ನಾನ ಮಾಡಿದ ಮೇಲೂ ಮೈಯೆಲ್ಲಾ ಅಂಟು ಅಂಟೆಂದು ಅನ್ನಿಸಿದರೆ ಅಂಥ ನೀರಿನಲ್ಲಿ ಈ ರೂಪಾಂತರವಾಗಿದೆ ಎಂದೇ ಅರ್ಥ. ಇದಕ್ಕೆ ಕ್ಲೋರೈಡ್ ಮತ್ತು ಸಲೇಟ್‌ಗಳು ಸೇರಿದರೆ, ಶಾಶ್ವತ ಗಡಸುತನ ಕಾಣಿಸಿಕೊಳ್ಳುತ್ತದೆ. ೨೦೦ ಮಿ.ಗ್ರಾಂಗಿಂತ ಹೆಚ್ಚಿನ ಕಬ್ಬಿಣದ ಅಂಶ ಇರುವ ನೀರು ಸೇವನೆ ಮೂತ್ರಕೋಶಕ್ಕೆ ಹಾನಿಕಾರಕ. ಜತೆಎಗ ಜಠರದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಇಂದು ನೀರಿನ ಸಮಸ್ಯೆಯೆಂದರೆ ಕೇವಲ ಅಭಾವವಷ್ಟೇ ಅಲ್ಲ. ಅದು ಜಲಮಾಲಿನ್ಯವನ್ನು ಒಳಗೊಂಡಿದೆ ಎಂಬುದು ಗಮನಾರ್ಹ ಸಂಗತಿ. ನೀರಿನ ಕೊರತೆಯನ್ನು ತುಂಬಿ ಬಿಡಬಹುದು. ಕುಸಿದ ಅಂತರ್ಜಲದ ಮಟ್ಟವನ್ನು ಮರು ಪೂರಣದ ಮೂಲಕ ಏರಿಸಲೂಬಹುದು. ಆದರೆ, ಒಮ್ಮೆ ಕಲುಷಿತಗೊಂಡ ನೀರನ್ನು ಶುದ್ಧಗೊಳಿ ಸುವುದು ಕಷ್ಟ ಸಾಧ್ಯ. ಸ್ವಸ್ಥ ವ್ಯವಸ್ಥಾಪನೆಯೊಂದೇ ಇದಕ್ಕಿರುವ ಏಕೈಕ ಪರಿಹಾರ.
ಜಲಮಾಲಿನ್ಯವೆಂದರೆ ಒಂದು ರೀತಿಯಲ್ಲಿ ಏಡ್ಸ್‌ರೋಗವಿದ್ದಂತೆ. ಅದು ಬಂದ ನಂತರ ಗುಣ ಪಡಿಸಲು ಹೆಣಗುವುದಕ್ಕಿಂತ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದೇ ಮುಖ್ಯ.

‘ಲಾಸ್ಟ್’ಡ್ರಾಪ್: ಜಲಮಾಲಿನ್ಯವೆಂಬುದು ಮನೆಗೆ ಬಿದ್ದ ಬೆಂಕಿ. ಅಲ್ಲಿ ಇನ್ನು ಬದುಕುವ ಅವಕಾಶವೇ ಇಲ್ಲ.

Wednesday, December 10, 2008

ವಿಜಾಪುರದ ಕೆರೆ ತುಂಬುತ್ತಿದೆ, ಹೋರಾಟದ ನೆಲ ಹಸಿಯಾಗುತ್ತಿದೆ

ನೆಟ್ಟ ಗಿಡ ಕೊನೆಗೂ ಹೂ ಬಿಟ್ಟಿದೆ. ಇನ್ನೇನು ಹೀಚಾಗಿ, ಕಾಯಾಗಿ, ಫಲ ದೊರೆಯಬಹುದು. ಅದನ್ನು ಸವಿಯಲು ವಿಜಾಪುರದ ಜನತೆ ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ. ಜಿಲ್ಲೆಯ ಮಂದಿಗೆ ಸ್ವರ್ಗ ಮೂರೇ ಗೇಣು ಎಂಬಂತಾಗಿದೆ. ಯಾರಿಗೆ ತಾನೆ ಸಂತಸ ಆಗದಿದ್ದೀತು ? ಸತತ ನಾಲ್ಕು ವರ್ಷಗಳ ಕಾಲ ಯಾವುದಕ್ಕಾಗಿ ಹಗಲಿರುಳೂ ಹೋರಾಡಿದ್ದರೋ, ಯಾವ ಕನಸಿನ ಮೂಟೆ ಹೊತ್ತು ಉರಿ ಬಿಸಿಲಲ್ಲೂ ಶ್ರಮಿಸಿದ್ದರೋ ಅದು ಕೈಗೂಡುವ ಸಮಯ ಬಂದಿದೆ.
ಹೌದು, ರಾಷ್ಟ್ರದಲ್ಲೇ ಮಾದರಿಯಾಗಬಲ್ಲ ‘ಸಮಗ್ರ ಕೆರೆ ತುಂಬುವ ಯೋಜನೆ’ಯ ಕಾಮಗಾರಿಗೆ ನಾಡಿದ್ದು ಭಾನುವಾರವೇ(ಡಿ.೭ರಂದು) ಚಾಲನೆ ಸಿಗಲಿದೆ. ಇದರೊಂದಿಗೆ ಮೊದಲ ಹಂತದಲ್ಲಿ ವಿಜಾಪುರ ಹಾಗೂ ಬಾಗಲಕೋಟ ಜಿಲ್ಲೆಯ ೨೩ ಕೆರೆಗಳು ಹಾಗೂ ೫ ಬಾಂದಾರಗಳು ತುಂಬಲಿವೆ.
ಈ ಕ್ಷಣಕ್ಕಾಗಿ ಅಲ್ಲಿನ ರೈತರು ಅಕ್ಷರಶಃ ತಪಸ್ಸು ನಡೆಸಿದ್ದರು. ಮೂರು ತಿಂಗಳು ಎಡೆಬಿಡದೇ ಹೋರಾಟ ನಡೆಸಿದ್ದರು. ಜಿಲ್ಲೆಯ ಜನರ ಅದೃಷ್ಟ, ಅಪರೂಪಕ್ಕೆಂಬಂತೆ ನಮ್ಮ ರಾಜಕಾರಣಿಗಳು ಸಹ ಪಕ್ಷಭೇದ ಮರೆತು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅಕಾರಿಗಳೂ ಸಹಕರಿಸಲು ಸಿದ್ಧರಾಗಿದ್ದರು. ಆದರೂ ಅಂದುಕೊಂಡದ್ದು ಆಗಲು ಇಷ್ಟು ವರ್ಷ ಬೇಕಾಯಿತು. ಇದೇ ಇರಬಹುದೇ ವ್ಯವಸ್ಥೆ ಅಂದರೆ ?
ಹೋಗಲಿ ಬಿಡಿ, ಅಂತೂ ವಿಜಾಪುರದ ಕೆರೆ ತುಂಬಲು ಮುಹೂರ್ತ ಕೂಡಿ ಬಂತಲ್ಲ ಎಂಬುದೇ ಸಮಾಧಾನ. ಈ ಸಮಾಧಾನದ ಹಿಂದೆ ಪತ್ರಿಕೆಯದ್ದೊಂದು ಪಾಲೂ ಇದೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳಲೇಬೇಕು. ಕೆರೆತುಂಬುವ ಹೋರಾಟಕ್ಕೆ ಪೂರಕವಾಗಿ ‘ವಿಕ’ ಪುಟ್ಟದೊಂದು ಅಕ್ಷರ ಅಭಿಯಾನವನ್ನೇ ನಡೆಸಿತ್ತು. ತಿಂಗಳುಗಳ ಕಾಲ ಹೋರಾಟದ ಪ್ರತಿ ಹೆಜ್ಜೆ ಹೆಜ್ಜೆಗಳನ್ನೂ ದಾಖಲಿಸಿತ್ತು. ಯೋಜನೆಯ ಮೇಲೊಂದು ‘ಅವಲೋಕನ’ವನ್ನೇ ಮಾಡಿ ವಿವರ ಕಟ್ಟಿಕೊಡಲಾಗಿತ್ತು. ಹೀಗೆ ಜನರ ದನಿಯಾಗಿ ದುಡಿದದ್ದೂ ಸಾರ್ಥಕವೆನಿಸುತ್ತಿದೆ. ಈ ಹಂತದಲ್ಲಿ ಮತ್ತೊಮ್ಮೆ ಜಿಲ್ಲೆಯ ಸ್ಥಿತಿ, ಯೋಜನೆಯ ರೂಪುರೇಷೆ, ಅದರ ಅಗತ್ಯ ಇತ್ಯಾದಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತಿದೆ.
ಸತತ ಬರಗಾಲಕ್ಕೆ ತುತ್ತಾಗುವ ಬಾಗಲಕೋಟ, ವಿಜಾಪುರ ಅವಳಿ ಜಿಲ್ಲೆಯಲ್ಲಿ ಕೃಷ್ಣಾ, ಭೀಮೆ, ಡೋಣಿ, ಮಲಪ್ರಭಾ ಹಾಗೂ ಘಟಪ್ರಭಾ - ಹೀಗೆ ಪಂಚ ನದಿಗಳು ಹರಿಯುತ್ತವೆ. ಹಾಗಾದರೆ ಇಲ್ಲಿಗೆ ನೀರಿನ ಬರವೆಂಬುದೇ ಇರಲಿಕ್ಕಿಲ್ಲ ಎಂದುಕೊಂಡರೆ ತಪ್ಪಾದೀತು. ಏಕೆಂದರೆ ಬೇಸಿಗೆ ಬಂತೆಂದರೆ ಇಲ್ಲಿ ಕುಡಿಯುವ ಹನಿ ನೀರಿಗೂ ಹಾಹಾಕಾರ ಸೃಷ್ಟಿಯಾಗುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಅವಳಿ ಜಿಲ್ಲೆಯ ಜನ ಭೂಮಿ ತ್ಯಾಗ ಮಾಡಿದರೂ ನೀರಿನ ಸಮಸ್ಯೆ ತಪ್ಪಿಲ್ಲ. ಇನ್ನೂ ವಿಚಿತ್ರವೆಂದರೆ ಪಕ್ಕದ ಮಹಾರಾಷ್ಟ್ರದಲ್ಲಿ ಗುಡುಗಲಾರಂಭಿಸಿದರೆ ವಿಜಾಪುರದ ಮಂದಿಯ ಎದೆ ನಡುಗಲಾರಂಭಿಸುತ್ತದೆ. ಅಲ್ಲಿ ಮಳೆ ಸುರಿದರಂತೂ ಮುಗಿದೇ ಹೋಯಿತು. ಪ್ರವಾಹದಿಂದ ಉಕ್ಕೇರುವ ಡೋಣಿ, ಭೀಮೆಯರು ಖುಲ್ಲಂಖುಲ್ಲಾ ಇಡೀ ಜಿಲ್ಲೆಯ ಬದುಕನ್ನೇ ಮುಳುಗಿಸಿ ಬಿಡುತ್ತಾರೆ. ಅಲ್ಲಿನ ಪ್ರವಾಹದ ನೀರು ಜಿಲ್ಲೆಯೊಳಗೆ ನುಗ್ಗಿ ನಾಚಾರ ಎಬ್ಬಿಸಿ ಬಿಡುತ್ತದೆ. ಇನ್ನು ನಮ್ಮದೇ ಕೃಷ್ಣಾ ನದಿಯಿಂದ ಪ್ರತಿ ವರ್ಷ ೬೦೦ ಟಿಎಂಸಿ ನೀರು ವ್ಯರ್ಥವಾಗಿ ಹರಿದುಹೋಗುತ್ತದೆ. ಇಷ್ಟಾದರೂ ವಿಜಾಪುರದಲ್ಲಿ ಗಂಟಲು ನೆನೆಸಲೂ ನೀರಿರುವುದಿಲ್ಲ.
ಇಂಥ ವಿಚಿತ್ರ ಸನ್ನಿವೇಶದಲ್ಲಿ ಹುಟ್ಟಿಕೊಂಡಿದ್ದೇ ಕೆರೆ ತುಂಬಿಸುವ ಯೋಜನೆ. ವ್ಯರ್ಥವಾಗಿ ಸಮುದ್ರ ಸೇರುವ, ಹೊತ್ತಲ್ಲದ ಹೊತ್ತಲ್ಲಿ ಬಂದು ಜನಜೀವನವನ್ನೇ ತೊಳೆದುಕೊಂಡು ಹೋಗಿ ಬಿಡುವ ಪ್ರವಾಹದ ನೀರನ್ನೇ ಬಳಸಿಕೊಳ್ಳಬಾರದೇಕೆ ಎಂಬ ಯೋಚನೆ ಹುಟ್ಟಿಕೊಂಡದ್ದು ಆಗಿನ ತಿಕೋಟಾ (ಈಗ ಬಬಲೇಶ್ವರ) ಶಾಸಕ ಎಂ.ಬಿ. ಪಾಟೀಲರಿಗೆ. ತಜ್ಞರಾಗಿ ಅಧ್ಯಯನ ಕೈಗೊಂಡು ಅದಕ್ಕೊಂದು ಸ್ಪಷ್ಟ ನೀಲ ನಕ್ಷೆ ರೂಪಿಸಿಕೊಟ್ಟವರು ಬಿಎಲ್‌ಡಿಇ ಸಂಸ್ಥೆಯ ಪ್ರೊ. ಹುಗ್ಗಿ.
ಎರಡೂ ನದಿಗಳ ಪ್ರವಾಹದ ನೀರಿನಲ್ಲಿ ೨.೫ ಟಿಎಂಸಿಯಷ್ಟನ್ನು ಎತ್ತಿ ವಿಜಾಪುರ ಬಾಗಲಕೋಟ ಅವಳಿ ಜಿಲ್ಲೆಗಳ ಎಲ್ಲ ಕೆರೆಗಳಲ್ಲಿ ತುಂಬಿಸುವ, ಆ ಮೂಲಕ ಇಡೀ ವರ್ಷ ಸಮೃದ್ಧ ನೀರನ್ನು ಕಾಣುವ, ರಾಷ್ಟ್ರದಲ್ಲೇ ಮಾದರಿ ಯೋಜನೆಯೊಂದು ರೂಪುಗೊಂಡಿತು. ಯೋಜನೆ ಕಾರ್ಯಸಾಧ್ಯವೆಂಬುದನ್ನು ಅರಿತ ಜಿಲ್ಲೆಗಳ ರೈತರು ಇದರ ಅನುಷ್ಠಾನಕ್ಕೆ ದನಿ ಎತ್ತಿದರು. ವಿಜಾಪುರದ ೯೭, ಬಾಗಲಕೋಟದ ೬೭ ಕೆರೆಗಳನ್ನು ತುಂಬಿಸುವುದು ಉದ್ದೇಶ. ಮೊದಲ ಹಂತದಲ್ಲಿ ವಿಜಾಪುರ ಜಿಲ್ಲೆಯ ತಿಕೋಟಾ ಪ್ಯಾಕೇಜ್‌ನ ೧೬ ಕೆರೆಗಳು, ೫ ಬಾಂದಾರಗಳು ಹಾಗೂ ಬಾಗಲಕೋಟ ಜಿಲ್ಲೆಯ ೮ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಕಳೆದ ಸೆ.೯ರಂದೇ ತಿಕೋಟಾದಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಚಾಲನೆ ಸಿಗಬೇಕಿತ್ತು. ಇದಕ್ಕೆಂದು ಅದ್ಧೂರಿ ಸಿದ್ಧತೆಯೂ ನಡೆದಿತ್ತು. ಆದರೆ, ರಾಜಕೀಯ ಬೆಳವಣಿಗೆ, ಬರದ ಜಿಲ್ಲೆಯ ರೈತರಿಗೆ ಬರೆ ಹಾಕಿತ್ತು.
ಏತನ್ಮಧ್ಯೆ ಟೆಂಡರ್ ಪ್ರಕ್ರಿಯೆ ಸಹ ಪೂರ್ಣಗೊಂಡು, ಬೆಂಗಳೂರಿನ ಎಸ್‌ಪಿಎಂಎಲ್ ಕಂಪನಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಿತ್ತು. ಆದರೆ, ದರ ನಿಗದಿಯಾಗುವಾಗ ಟೆಂಡರ್ ಆದ ಹಣದ ಮೇಲೆ ಶೇ.೨೬ರಷ್ಟನ್ನು ಹೆಚ್ಚುವರಿಯಾಗಿ (ಎಸ್.ಆರ್.ರೇಟ್‌ಗಿಂತ) ನೀಡಬೇಕೆಂದು ಕಂಪನಿ ಪಟ್ಟು ಹಿಡಿದಿತ್ತು. ಇದಕ್ಕೊಪ್ಪದ ತಾಂತ್ರಿಕ ಸಲಹೆಗಾರರು ಎಸ್.ಆರ್. (ಷೆಡ್ಯೂಲ್ ರೇಟ್) ದರಕ್ಕಿಂತ ಶೆ.೧೦ರಷ್ಟು ಹಣ ನೀಡುವುದಾಗಿ ಘೋಷಿಸಿದರು. ಪರಿಣಾಮ ಎಸ್‌ಎಂಪಿಎಲ್‌ನವರು ಹಿಂದೆ ಸರಿದರು. ಇದರಿಂದಾಗಿ ಕಂಗಾಲಾದ ರೈತರು ಆಕ್ರೋಶಗೊಂಡಿದ್ದರು. ಆದರೀಗ ೩ನೇ ಬಾರಿ ಟೆಂಡರ್ ನಡೆದು, ಹೈದರಾಬಾದ್‌ನ ಜೆವಿಪಿಆರ್‌ಎಸ್ ಕಂಪನಿಯವರಿಗೆ ೩ ವರ್ಷಗಳ ಕಾಲಮಿತಿಯೊಂದಿಗೆ ಕಾಮಗಾರಿ ವಹಿಸಲಾಗುತ್ತಿದೆ. ೧೦೯ ಕೋಟಿ ರೂ. ಯೋಜನೆ ವೆಚ್ಚ ಆಗಲಿದೆ.
ಬಹುಶಃ ನಿಗದಿತ ಅವಯಲ್ಲಿ ಪೂರ್ಣಗೊಂಡರೆ ಅತಿ ಕಡಿಮೆ ವೆಚ್ಚದಲ್ಲಿ ಗರಿಷ್ಠ ನೀರಾವರಿಯಾಗುವ ರಾಷ್ಟ್ರದ ಪ್ರಥಮ ಯೋಜನೆ ಇದೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅಷ್ಟಕ್ಕೂ ನೀರು ತುಂಬಿಸುವುದು ಹೇಗೆ ? ಪ್ರಶ್ನೆ ಸಹಜ. ಎರಡೂ ಜಿಲ್ಲೆಯ ಕೆರೆಗಳಿಗೆ ಹಿರೇಪಡಸಲಗಿ ಬಳಿ ಕೃಷ್ಣಾ ನದಿಯಿಂದ ನೀರನ್ನು ಲಿಫ್ಟ್ ಮಾಡಲಾಗುತ್ತದೆ. ಒಟ್ಟು ೧.೦೯ ಟಿಎಂಸಿ ನೀರನ್ನು ಕೆರೆಗಳಿಗೆ ತುಂಬಿಸಲಾಗುತ್ತದೆ. ಮೊದಲ ಹಂತದಲ್ಲಿ ಕೃಷ್ಣಾ ನದಿಯಿಂದ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದುಹೋಗುವ ೨.೩೪ ಕ್ಯೂಸೆಕ್ ನೀರನ್ನು ಜೂನ್-ಡಿಸೆಂಬರ್ ಅವಯಲ್ಲಿ ಒಟ್ಟು ೨ ಬಾರಿ ಹಿರೇಪಡಸಲಗಿಯಿಂದ (ರೈಸಿಂಗ್ ಮೇನ್) ಕಲಬೀಳಗಿಯವರೆಗೆ (ಒಟ್ಟು ೧೭.೫ ಕಿ.ಮೀ. ದೂರ) ತರಲಾಗುತ್ತದೆ. ಕಲಬೀಳಗಿಯಲ್ಲಿ ವಿತರಣಾ ಛೇಂಬರ್ ನಿರ್ಮಿಸಿ ೨ ಪೈಪ್‌ಲೈನ್‌ಗಳ (ನಾಗರಾಳ ಮತ್ತು ಕುಮಟೆ) ಮೂಲಕ ನೀರು ಸರಬರಾಜು ಮಾಡಲಾಗುತ್ತದೆ.
ವಿಜಾಪುರ ಜಿಲ್ಲೆಗೆ ನಾಗರಾಳದಿಂದ ನೀರು ತಂದು ರಾಂಪುರದಲ್ಲಿ ಗುರುತ್ವಾಕರ್ಷಣೆಯ ಮೂಲಕವೇ ಸಂಪ್ ಮಾಡಲಾಗುತ್ತದೆ. ಅಲ್ಲಿಂದ ಬಾಬಾನಗರಕ್ಕೆ ೫.೫ ಕಿ.ಮೀ.ವರೆಗೆ ನೀರು ತಂದು, ಅಲ್ಲೆರಡು ವಿತರಣಾ ಛೇಂಬರ್ ನಿರ್ಮಿಸಿ ಕನಮಡಿ, ಲೋಗಾಂವ ಟಕ್ಕಳಕಿ ಮತ್ತಿತರ ಕೆರೆಗಳಿಗೆ ತುಂಬಿಸಲಾಗುತ್ತದೆ.
ಇದಲ್ಲದೇ ಬಾಗಲಕೋಟ ಜಿಲ್ಲೆಯ ಕೆರೆಗಳಿಗೆ, ಹಿರೇಪಡಸಲಗಿಯಿಂದ ನಟ್ಕಲ್ ಕೆರೆಗೆ ನೇರವಾಗಿ ನೀರು ತುಂಬಿಕೊಂಡು ಕೊಂಡೊಯ್ಯಲಾಗುತ್ತದೆ. ಕುಮಟೆ ಪೈಪ್‌ಲೈನ್‌ನಿಂದ ಜಿಲ್ಲೆಯ ಉಳಿದ ೬ ಕೆರೆಗಳನ್ನು ತುಂಬಿಸಬಹುದೆಂಬುದು ಈಗಿನ ಚಿಂತನೆ.
ಮೊದಲ ಹಂತದಲ್ಲಿ ನೀರು ಲಿಫ್ಟ್ ಮಾಡಲು ೪ ವರ್ಟಿಕಲ್ ಟರ್ಬೈನ್ ಪಂಪ್‌ಗಳು (೧,೮೦೦ ಎಚ್‌ಪಿ) ೨೪ ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ. ೨ನೇ ಹಂತದ ನೀರು ಲಿಫ್ಟ್ ಮಾಡಲು ೩ ಸೆಂಟ್ರಿಫ್ಯೂಗಲ್ ಪಂಪ್‌ಗಳನ್ನು (೪೦೦ ಎಚ್‌ಪಿ) ಬಳಸಲಾಗುತ್ತದೆ.
ಇಷ್ಟಾಗಿದ್ದೇ ಆದಲ್ಲಿ ಕೆರೆಗಳು ತುಂಬಿ ಅಂತರ್ಜಲ ಮಟ್ಟ ತಂತಾನೇ ವೃದ್ಧಿಸುತ್ತದೆ. ೩,೪೨೩ ಹೆಕ್ಟೇರ್ ಪ್ರದೇಶಕ್ಕೆ ನೇರ ನೀರಾವರಿ ಆಗಲಿದೆ. ಪಾತಾಳಕ್ಕಿಳಿದ ಬೋರ್‌ವೆಲ್‌ಗಳು ಮರು ಪೂರಣ ಹೊಂದಲಿವೆ. ಜನ, ಜಾನುವಾರುಗಳಿಗೆ ಕುಡಿಯಲು ಶುದ್ಧ ಹಾಗೂ ರಾಸಾಯನಿಕ ಮುಕ್ತ ನೀರು ಸಿಗಲಿದೆ. ಅವಳಿ ಜಿಲ್ಲೆಯ ತೋಟಗಾರಿಕೆ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ೫೦ ಸಾವಿರ ಜನರಿಗೆ ದಿನಕ್ಕೆ ೮೦ ಲೀಟರ್‌ನಂತೆ ವರ್ಷವಿಡೀ ಕಣ್ಮುಚ್ಚಿಕೊಂಡು ಕುಡಿಯುವ ನೀರು ಕೊಡಬಹುದು.
ಪ್ರತಿ ವರ್ಷ ಸರಕಾರ ಕುಡಿಯುವ ನೀರಿಗಾಗಿಯೇ ಕೋಟ್ಯಂತರ ರೂ. ಖರ್ಚು ಮಾಡುತ್ತಿರುವುದು ನಮ್ಮ ಕಣ್ಣಮುಂದೆಯೇ ಇದೆ. ನಮ್ಮ ಎಲ್ಲ ನೀರಾವರಿ ಯೋಜನೆಗಳೂ ವಿಫಲಗೊಂಡಿರುವುದಕ್ಕೆ ಕಾರಣವೇ ಪಕ್ಕಾ ನೀರಿನ ಮೂಲಗಳಿಲ್ಲದಿರುವುದು. ನೆದರ್‌ಲೆಂಡ್, ಡೆನಿಡಾ, ಜಿ.ಪಂ. ನೆರವಿನ ಕೋಟ್ಯಂತರ ರೂ.ವೆಚ್ಚದ ಯೋಜನೆಗಳು ನೆಲಕಚ್ಚಿದ್ದೂ ಹೀಗಾಗಿಯೇ. ಆದರೆ, ಕೆರೆ ತುಂಬುವ ಯೋಜನೆ ಅತ್ಯಂತ ವೈಜ್ಞಾನಿಕ. ಇದಕ್ಕೆ ಆಧಾರ ಈ ಯೋಜನೆಗೆ ಜಲಮೂಲ ನಿಗದಿಯಾಗಿದೆ. ಅವಳಿ ಜಿಲ್ಲೆಯ ಬಹುತೇಕ ಕುಡಿಯುವ ನೀರಿನ ಯೋಜನೆಯ ಮೂಲಗಳು ಕೆರೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿರುವುದರಿಂದ ಸ್ವಾಭಾವಿಕವಾಗಿಯೇ ಕುಡಿಯುವ ನೀರಿನ ಯೋಜನೆಗಳಿಗೆ ಯೋಗ್ಯ ಮೂಲ ಸಿಕ್ಕಂತಾಗುತ್ತದೆ.
ಆರ್ಥಿಕವಾಗಿಯೂ ಇದು ಕಾರ್ಯ ಸಾಧು, ಲಾಭದಾಯಕ. ಒಮ್ಮೆ ಕೆರೆ ತುಂಬಿದರೆ ಈ ವರೆಗೆ ಅವಳಿ ಜಿಲ್ಲೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ, ಉದ್ಯೋಗ ಸೃಜನೆಗಾಗಿ ಮಾಡುತ್ತಿದ್ದ ೫೦ ರಿಂದ ೧೦೦ ಕೋಟಿ ರೂ. ವೆಚ್ಚವನ್ನು ಅರ್ಧಕ್ಕರ್ಧ ಕಡಿತಗೊಳಿಸಬಹುದು. ಕೇವಲ ಮೀನುಗಾರಿಕೆಯಿಂದಲೇ ಪ್ರತಿ ಕೆರೆಯಿಂದ ವಾರ್ಷಿಕ ೧ ಲಕ್ಷ ರೂ.ನಿವ್ವಳ ಆದಾಯ ಲಭಿಸಬಹುದೆಂದೂ ಲೆಕ್ಕ ಹಾಕಲಾಗಿದೆ. ಒಟ್ಟಾರೆ ಯೋಜನೆಗೆ ಖರ್ಚು ಮಾಡಿದ ಮೊತ್ತಕ್ಕಿಂತಲೂ ವಾರ್ಷಿಕ ಎರಡೂವರೆ ಪಟ್ಟು (ಬಿ.ಸಿ. ರೇಶ್ಯೊ ೨.೫) ಹೆಚ್ಚು ಆದಾಯ ಬರುತ್ತದೆ.
ಇನ್ನಾದರೂ ಆ ಭಾಗದ ಮಂದಿ ರಾಸಾಯನಿಕ ಮುಕ್ತ ನೀರು ಕುಡಿದು ಫ್ಲೋರೋಸಿಸ್‌ನಂಥ ರೋಗಗಳನ್ನು ದೂರವಿಟ್ಟಾರು ಎಂಬ ನಿರೀಕ್ಷೆಗೆ ರೆಕ್ಕೆ ಬಂದಿದೆ. ಕೊನೆಗೂ ರೈತರ ಸಂಕಷ್ಟದ ದಿನಗಳು ದೂರವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜಿಲ್ಲೆಯ ಮಣ್ಣು ಹಾಗೂ ಹವಾಗುಣ ಎಲ್ಲ ಬೆಳೆಗಳಿಗೂ ಅತ್ಯುತ್ತಮವಾಗಿದ್ದು. ಇಲ್ಲಿನ ರೈತರಿಗೆ ಬೊಗಸೆ ನೀರು ಕೊಟ್ಟರೆ, ವಿಜಾಪುರ ‘ಕರ್ನಾಟಕದ ಕ್ಯಾಲಿಫೋರ್ನಿಯಾ’ ಆಗುವುದರಲ್ಲಿ ಸಂಶಯವಿಲ್ಲ. ಅಷ್ಟಾಗಲಿ. ನೀರಿನ ವಿಚಾರದಲ್ಲಾದರೂ ನಮ್ಮ ನಾಯಕರು ರಾಜಕೀಯ ಲಾಭ ಹುಡುಕುವ ಶುಷ್ಕ ಮನದಿಂದ ಹೊರಬರಲಿ ಎನ್ನೋಣವೇ ?

‘ಲಾಸ್ಟ್’ಡ್ರಾಪ್: ಜಲ ಕಣ್ಬಿಟ್ಟರೆ ನೆಲ ನಕ್ಕೀತು, ಜಲದ ಕಣ್ಣು ಕಟ್ಟಿದರೆ ಜನ ನೆಲ ನೆಕ್ಕಬೇಕಾದೀತು.

Friday, December 5, 2008

National Urban Sanitation Policy

The Government of India, Ministry of Urban Development recently released the National Urban Sanitation Policy.
We attach the document below, as well as key excerpts. We request you to add your comments below regarding the provisions of the Sanitation Policy.
Click here to view the National Urban Sanitation Policy
The document is quite comprehensive and detailed. It lays out a vision for urban sanitation in India. It instructs states to come up with their own detailed state-level urban sanitation strategies and City Sanitation Plans. It moots the idea of totally sanitised and open-defecation cities as a target and the setting up of a multi-stakeholder City Sanitation Task Force to achieve this. Environmental considerations, public health implications and reaching the unserved and urban poor are given significant emphasis in the policy. Funding options are laid out including direct central and state support including through existing schemes, public-private partnerships, and external funding agencies. It directs that atleast 20% of the funds should be earmarked towards servicing the urban poor. The Center also plans to institute awards to the best performing cities, reminiscent of the Nirmal Gram Puraskar awards for villages.
Important Excerpts from the Policy
Sanitation Statistics
12.04 million (7.87 %) Urban households do not have access to latrines and defecate in the open. 5.48 million (8.13%) Urban households use community latrines and 13.4 million households (19.49%) use shared latrines. 12.47 million (18.5%) households do not have access to a drainage network. 26.83 million (39.8%) households are connected to open drains. The status in respect of the urban poor is even worse. The percentage of notified and non-notified slums without latrines is 17 percent and 51 percent respectively. More than 37% of the total human excreta generated in urban India, is unsafely disposed. This imposes significant public health and environmental costs to urban areas that contribute more than 60% of the country’s GDP. Impacts of poor sanitation are especially significant for the urban poor (22% of total urban population), women, children and the elderly. The loss due to diseases caused by poor sanitation for children under 14 years alone in urban areas amounts to Rs. 500 Crore at 2001 prices (Planning Commission-United Nations International Children Emergency Fund (UNICEF), 2006). Inadequate discharge of untreated domestic/municipal wastewater has resulted in contamination of 75 percent of all surface water across India.The Millennium Development Goals (MDGs) enjoin upon the signatory nations to extend access to improved sanitation to at least half the urban population by 2015, and 100% access by 2025. This implies extending coverage to households without improved sanitation, and providing proper sanitation facilities in public places to make cities open-defecation free.

The vision for Urban Sanitation in India is
All Indian cities and towns become totally sanitized, healthy and liveable and ensure and sustain good public health and environmental outcomes for all their citizens with a special focus on hygienic and affordable sanitation facilities for the urban poor and women.

Environmental and Health Considerations
100 % of human excreta and liquid wastes from all sanitation facilities including toilets must be disposed of safely. In order to achieve this goal, the following activities shall be undertaken:a. Promoting proper functioning of network-based sewerage systems and ensuring connections of households to them wherever possible;b. Promoting recycle and reuse of treated waste water for non potable applications wherever possible will be encouraged.c. Promoting proper disposal and treatment of sludge from on-site installations (septic tanks, pit latrines, etc.);d. Ensuring that all the human wastes are collected safely confined and disposed of after treatment so as not to cause any hazard to public health or the environment.

Integrated Low Cost Sanitation Scheme
Ministry of Housing and Poverty Alleviation (HUPA) is administering a Centrally Sponsored Scheme for Integrated Low Cost Sanitation (ILCS). Under this scheme, central subsidy to the extent of 75%, state subsidy to the extent of 15% and beneficiary contribution to the extent of 10% is provided for. The main objective of the scheme is to convert around 6 lakh dry latrines into low cost pour flush latrines by 31st March 2010. 75% of the central allocation will be used for conversion and the remaining 25% will be used for construction of new toilets for EWS households who have no toilets in urban areas

State Sanitation Strategies and City Sanitation Plans
a. States will be encouraged to prepare State Level Sanitation Strategies within a period of 2 years. Chapter on Draft Framework for Developing State Sanitation Strategies gives an outline of the strategy (Annexure I);
b. Identified cities will be urged to prepare model City Sanitation Plans within a period of 2 years. Chapter on Draft Framework for a City Sanitation Plan gives an outline of the plan (Annexure II);
c. Providing assistance for the preparation of Detailed Project Report (DPR) as per city sanitation plan as soon as requests for funding are received;

Urban Poor
Every urban dweller should be provided with minimum levels of sanitation, irrespective of the legal status of the land in which he/she is dwelling, possession of identity proof or status of migration. However, the provision of basic services would not entitle the dweller to any legal right to the land on which he/she is residing. At least 20% of the funds under the sanitation sector should be earmarked for the urban poor. The issues of cross subsidiary the urban poor and their involvement in the collection of O&M charges should be considered.

City Sanitation Task Force
a) Constitute a multi-stakeholder City Sanitation Task Force comprising representatives from
• Agencies directly responsible for sanitation including on-site sanitation, sewerage, water supply, solid waste, drainage, etc including the different divisions and departments of the ULB, PHED, etc;
• Agencies indirectly involved in or impacted by sanitation conditions including representatives from the civil society, colonies, slum areas, apartment buildings, etc,
• Eminent persons and practitioners in civic affairs, health, urban poverty,
• Representatives from shops and establishments,
• Representatives of other large institutions in the city (e.g. Cantonment Boards, Govt. of India or State Govt. Enterprise campuses, etc.),
• NGOs working on water and sanitation, urban development and slums, health and environment,
• Representatives of unions of safai karamcharis, sewerage sanitary workers, recycling agents / kabaris, etc
• Representatives from private firms/contractors formally or informally working in the sanitation sector (e.g. garbage collectors, septic tank de-sludging firms etc.)
• Representatives from educational and cultural institutions
• Any other significant or interested stakeholders
The City Sanitation Task Force will be responsible for Launching the City 100% Sanitation Campaign

Baseline Survey
In parallel with the preparatory steps, the ULB / Implementing Agency will collate the information on sanitation that exists with the ULB itself and other agencies in the city. This will include demographic, institutional, technical, social and financial information. In addition, it will commission a private agency or an NGO or both to carry out primary data collection on the missing items – the surveys will use a mix of structured and participatory techniques. All the data collected must be amenable to linking to an existing or proposed Geographic Information Systems (GIS) for the city.

Awards Scheme
In order to rapidly promote sanitation in urban areas of the country (as provided for in the National Urban Sanitation Policy and goals 2008), and to recognize excellent performance in this area, the Government of India intends to institute an annual award scheme for cities. The award is based on the premise that improved public health and environmental standards are the two outcomes that cities must seek to ensure for urban citizens. In doing so, governments in states and urban areas will need to plan and implement holistic city-wide sanitation plans, thereby put in place processes that help reach outputs pertaining to safe collection, disposal and disposal (including conveyance, treatment, and/or re-use without adverse impacts on the environment in and around the cities). It may be noted that the awards will not recognize mere inputs, hardware or expenditure incurred in urban sanitation but assess how these lead to achievements of intermediate milestones toward the final result of 100 % safe disposal of wastes from the city on a sustainable basis. Cities will need to raise the awareness of city stakeholders (households, establishments, industries, municipal functionaries, media, etc.) since improved sanitation can ensure improved public health and environmental outcomes only if considerable changes in behaviour and practice take place across the spectrum of society

Thursday, December 4, 2008

ಹಸಿರೆಲ್ಲವೂ ಹಸನಲ್ಲ, ಅತಿ ನೀರಿನ ಕೃಷಿ ತರವಲ್ಲ

ಸ್ತೆಯಲ್ಲಿ ಹಾಗೆ ಸಾಗುತ್ತಿದ್ದರೆ ಅಬ್ಬಾ, ಅದೆಂಥ ಪುಳಕ ! ಇಕ್ಕೆಲಗಳಲ್ಲೂ ಸಾಲು ಸಾಲು ಹೊಲ, ಹಸಿರು ಹಚ್ಚಡ ಹೊದ್ದುಕೊಂಡು ಹಿತವಾದ ತಂಗಾಳಿಯನ್ನು ವಿಶಿಷ್ಟ ಸೊಗಡಿನೊಂದಿಗೆ ಹೋತ್ತು ತರುತ್ತಿದ್ದರೆ ಇರುವೇ ಮರೆತು ಹೋಗುತ್ತದೆ. ಆಹ್, ಅದೊಂದು ಅವರ್ಣನೀಯ ಸುಗಂಧ. ಈ ಬೆಂಗಳೂರಿನ ರೇಜಿಗೆ ಹುಟ್ಟಿಸುವ ವಾತಾವರಣ, ಹೊಗೆ, ಕಲುಷಿತ ನೀರು, ನೆಮ್ಮದಿಯಾಗಿ ಒಂದು ತುತ್ತು ತಿನ್ನಲೂ ಸಾಧ್ಯವಾಗದ ಕೆಲಸದ ಒತ್ತಡ... ಎಲ್ಲದರಿಂದ ದೂರ, ನಾಡಿನ ಭತ್ತದ ಕಣಜವೆಂದೇ ಕರೆಯುವ ಗಂಗಾವತಿಯ ಉದ್ದಗಲಕ್ಕೂ ಒಂದಿಡೀ ದಿನ ಸುತ್ತು ಹೊಡೆದಾಗ ಖಂಡಿತಾ ಅತ್ಯಮೋಘ ಅನುಭವ ಲೋಕದಲ್ಲಿ ಕಳೆದು ಹೋದದ್ದು ಸುಳ್ಳಲ್ಲ.
ಹಳ್ಳಿಗಳಲ್ಲಿ ಇನ್ನೂ ಉಳಿದುಕೊಂಡಿರುವ ಮುಗ್ಧ ಜನಜೀವನ, ಆಹ್ಲಾದಕರ ವಾತಾವರಣ, ಸಂಪ್ರದಾಯಗಳ ಸೊಗಡುಗಳನ್ನು ಮನಸೋಇಚ್ಛೆ ಅನುಭವಿಸುವ ಅವಕಾಶ ರುವ ಸಮಾಜ. ಒಳಗೊಳಗೇ ಪುಳಕಿತ ಗೊಳ್ಳುತ್ತ ಓಡಾಡಿದ್ದೆ.
ಆದರೆ ಅಂಥ ಹಸಿರು ರಾಶಿ ತಾನು ನಿಂತ ನೆಲವ್ನೇ ನುಂಗಿ ನೀರು ಕುಡಿಯುತ್ತಿದೆ ಎಂಬ ಆಘಾತಕಾರಿ ಸಂಗತಿ ಅರಿವಾದಾಗ ಎಲ್ಲ ಭಾವನೆಗಳೂ ಕಮರಿ ಹೋದವು. ಹೌದು, ಮಲೆನಾಡ್ಲೂ ಕಾಣದಷ್ಟು ಸಮೃದ್ಧ ಹೊಲದ ಸಾಲು ಇಲ್ಲಿ ಸಾಧ್ಯವಾದದ್ದು ಹೇಗೆ ಎಂಬ ಸಂದೇಹವೇ ಎಲ್ಲ ಆತಂಕ್ಕೆ ಮೂಲವಾಯಿತು. ನೀರಾವರಿ ಯೋಜನೆಗಳ ಸಾಫಲ್ಯ ಹೀಗೂ ಹಾದಿ ತಪ್ಪಿಸಬಹುದು ಎಂಬುದಕ್ಕೆ ರಾಯಚೂರು, ಕೊಪ್ಪಳ, ಗುಲ್ಬರ್ಗ ಪ್ರದೇಶದಲ್ಲಿಯ ಕೃಷಿಯೇ ನಿದರ್ಶನ . ಹಾಗೆ ನೋಡಿದರೆ ಅದು ತೀರಾ ಒಣ ಭೂಮಿ. ಯಾವಾಗ ಬೃಹತ್ ಯೋಜನೆಗಳು ಎದ್ದು ನಿಂತವೋ, ಕಾಲುವೆಗಳಲ್ಲಿ ನೀರು ತುಂಬಿ ಬರಲು ಆರಂಭವಾಯಿತೋ ಆಗಲೇ ಈ ಭಾಗದಲ್ಲಿ ಕೃಷಿಯ ಅಪಸವ್ಯಗಳೆಲ್ಲವೂ ನಾಂದಿ ಕಟ್ಟಿಕೊಂಡವು. ಹಲವು ವರ್ಷಗಳಿಂದ ಬರಡು ಬಿದ್ದಿದ್ದ, ಅತಿ ಕಡಿಮೆ ನೀರಿನಲ್ಲಿ ಮಾತ್ರ ಬೆಳೆಯಬಹುದಾದ ಬೆಳೆಗಳಿಗೆ ಮಾತ್ರ ನೆಲೆಯೊದಗಿಸಿದ್ದ ಆ ಭೂಮಿಯಲ್ಲಿ ಇದ್ದಕ್ಕಿದ್ದಂತೆ ನೀರುಕ್ಕತೊಡಗಿತು. ಮಾಡದೆ ಬಿಟ್ಟಿದ್ದ ಮಕ್ಕಿ ಗದ್ದೆಗಳಲೆಲ್ಲ ಭತ್ತದ ಸಸಿ ಕಂಡವು. ಅದೇ ಲಾಗಾಯ್ತಿನ ಸಂಪ್ರದಾಯ, ಭತ್ತ ಬಿಟ್ಟರೆ ಬೇರೇನೂ ಬೆಳೆಯುವುದೇ ಇಲ್ಲ ಎಂಬಂತಾಗಿ ಬಿಟ್ಟಿತು ರೈತರ ಮನೋಭಾವ.
ಆ ಭಾಗದಲ್ಲಿದ್ದಷ್ಟು ದಿನವೂ ಇಂಥ ಗದ್ದೆಗಳಗುಂಟ ಓಡಾಡುವುದು, ಅಲ್ಲಿನ ರೈತಾಪಿಗಳೊಂದಿಗೆ ಹರಟೆಗಿಟ್ಟುಕೊಳ್ಳುವುದನ್ನು ತಪ್ಪಿಸಿಕೊಳ್ಳಲೇ ಇಲ್ಲ. ಪಕ್ಕದ ಕಾಲುವೆಗಳಲ್ಲೇ ಜುಳುಜುಳು ನೀರ ನಿನಾದ ಸಾಥ್ ನೀಡಿತ್ತು. ಅಲ್ಲಲ್ಲಿ ‘ಹೊಡೆ ’ಹೊರಟಿದ್ದು, ಬಹುತೇಕ ಫಸಲು ಬೆಳೆದು ನಿಂತಿದ್ದವು. ತಿಂಗಳಾರು ದಿನದಲ್ಲಿ ಕೊಯ್ಲಿಗೆ ಬರುವಂಥವೂ ಇದ್ದವು. ಆದರೆ ಇಂಥ ಹಸಿರ ರಾಶಿಯೇ ಸುತ್ತಲಿನ ಭೂಮಿಗೆ ನಂಜಾಗಿ ಕಾಡುತ್ತಿದೆ ಎಂಬ ಅರಿವು ಆ ಮುಗ್ಧ ಜನರಿಗಿಲ್ಲ.
ನಿಜ, ಅಂದು ಆ ಬಿರು ಬಿಸಿಲಿನಲ್ಲೂ, ಮೈದಡವುತ್ತಿದ್ದ ಶುದ್ಧ ಗಾಳಿ ಇಂದು ಹಾಗೆ ಉಳಿದಿಲ್ಲ. ನೀರು ಅಂದಿನಷ್ಟು ನಿರ್ಮಲವಾಗಿಲ್ಲ. ಒಂದರ್ಥದಲ್ಲಿ ನಗರದಲ್ಲಿ ಹೊರಸೂಸುವ ಕಪ್ಪು ಹೊಗೆ, ವಾಸನೆ ಬಡಿಯುವ ನೀರಿಗಿಂತಲೂ ಹೆಚ್ಚಿನ ಮಾಲಿನ್ಯ ಇಂದು ಆ ಹಸಿರ ರಾಶಿಯ ಫಲವಾಗಿ ಕಾಣಿಸಿಕೊಂಡಿದೆ. ಇದಕ್ಕೆ ಕಾರಣ ‘ಹದವರಿಯದ ಕೃಷಿ, ಮಿತಿ ಮೀರಿದ ಫಸಲಿನ ಆಸೆ’ ಎಂದರೆ ಬಹುಶಃ ಎಲ್ಲರೂ ನಂಬಲಾರರು.
ಒಂದೆಡೆ ಹಳ್ಳಿಗಳ ಆ ನಿರ್ಮಲ ಬದುಕಿನ ಮೇಲೆ ನೈಟ್ರಸ್ ಆಕ್ಸೈಡ್, ಮೀಥೇನ್, ಇಂಗಾಲದ ಡೈಆಕ್ಸೈಡ್, ಅಮೋನಿಯಾಗಳಂಥ ವಿಷಾನಿಲಗಳು ಕರಾಳ ಹಸ್ತ ಚಾಚಿವೆ. ಇವು ನಗರ ಬದುಕಿನಲ್ಲಿ ಕಾಣುವ ಮಾಲಿನ್ಯಕ್ಕಿಂತ ತೀರಾ ಅಪಾಯಕಾರಿ. ಇನ್ನೊಂದೆಡೆ ನೀರಿನ ಅಬ್ಬರ ತಾಳಲಾರದೇ, ತನ್ನ ಭೌಗೋಳಿಕ ಗುಣಕ್ಕೆ ಮೀರಿದ ಕೃಷಿ ಪದ್ಧತಿಯಿಂದ ಅಲ್ಲಿನ ನೆಲ ಸಂಪೂರ್ಣ ಜವಳೆದ್ದು ಹೋಗಿದೆ. ಒಂದು ಬೆಳೆ ಮುಗಿದರೆ ಮತ್ತೆ ಮೂರು ವರ್ಷ ಬೆಳೆತೆಗೆಯಲು ಸಾಧ್ಯವೇ ಇಲ್ಲ, ಭತ್ತ ಬಿಟ್ಟು ಬೇರೇನನ್ನೂ ಬೆಳೆಯಾಗುವುದೇ ಇಲ್ಲ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ.
ಏನಿದಕ್ಕೆ ಕಾರಣ ? ಉತ್ತರ-‘ಹಸಿರುಕ್ರಾಂತಿ’ಯ ಹೆಸರಲ್ಲಿ ನಾವಿಂದು ಅಳವಡಿಸಿ ಕೊಂಡಿರುವ ಉತ್ಪಾದನಾಧಾರಿತ ಕೃಷಿ. ಪರ್ಯಾಯ ಬೆಳೆಗಳಿದ್ದ ತಾಣದಲ್ಲಿ ಏಕ ಬೆಳೆ ಪದ್ಧತಿ ಕಾಲಿಟ್ಟಿದೆ. ಹೀಗಾಗಿ ಭೂಮಿ ನಿಸ್ಸಾರವಾಗುತ್ತಿದೆ. ಸಾಲದ್ದಕ್ಕೆ ಬರೋಬ್ಬರಿ ನಾಲ್ಕು ತಿಂಗಳು ನೀರು ಕಟ್ಟಿ ನಿಲ್ಲಿಸಿಯೇ ಭತ್ತ ಬೆಳೆಯಬೇಕೆಂಬ ಹುಚ್ಚು ನಂಬಿಕೆ ನೀರಿಳಿಯದ ಗಂಟಲಿಗೆ ಕಡುಬು ತುರುಕುದಂತೆ ಆಗುತ್ತಿದೆ. ಭೂಮಿಗಿರುವ ನೀರಿನ ಧಾರಣಾ ಸಾಮರ್ಥ್ಯಕ್ಕಿಂತಲೂ ಹೆಚ್ಚು ನೀರನ್ನು ನಿಲ್ಲಿಸುತ್ತಿರುವುದರಿಂದ ಇಡೀ ಪ್ರದೇಶದ ಮಣ್ಣಿನಲ್ಲಿ ಕ್ಯಾಲ್ಷಿಯಂ ಅಂಶ ಕಾಣೆಯಾಗಿ ಜವಳು ಉಕ್ಕುತ್ತಿದೆ.
ಇನೊಂದು ಗಮನಾರ್ಹ ಸಂಗತಿಯೆಂದರೆ, ನೀರು ನಿಲ್ಲಿಸಿ ಬೆಳೆಯಲಾದ ಭತ್ತದ ಗದ್ದೆಗಳಲ್ಲಿ ತೆನೆ ಬಲಿಯಲಾರಂಭಿಸುತಿದ್ದಂತೆ ನೀರನ್ನು ಬತ್ತಲು ಬಿಡಲಾಗುತ್ತದೆ. ಪೂರ್ಣ ಬೆಳೆ ಕಟಾವಿಗೆ ಬರುವ ಹೊತ್ತಿಗೆ ಗದ್ದೆಗಳೂ ಬತ್ತಿರುತ್ತವೆ. ಹೀಗೆ ಬತ್ತಿದ ಗದ್ದೆಗಳಲ್ಲಿ ಹುಟ್ಟುವುದೇ ಈ ನೈಟ್ರಸ್ ಆಕ್ಸೈಡ್ ಎಂಬ ಭಯಂಕರ ಕಾರ್ಕೋಟಕ. ಸಾಮಾನ್ಯವಾಗಿ ಭತ್ತ, ನಾಟಿ ಮಾಡುವ ಮೇಲಿಂದ ಮೇಲೆ ಹೊಲವನ್ನು ಉತ್ತಿ, ನೀರು ಆವಿಯಾಗದ ವ್ಯವಸ್ಥೆ ಸೃಷ್ಟಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಣ್ಣಿನಲ್ಲಿರುವ ನೈಸರ್ಗಿಕ ರಂಧ್ರಗಳು ಮುಚ್ಚಿಹೋಗುತ್ತವೆ. ಕೃಷಿ ಸಂದರ್ಭದಲ್ಲಿ ನೀರು ನಿಲ್ಲಿಸಿದಾಗ ಅದರಲ್ಲಿ ‘ಪಿಎಚ್’ ಅಂಶ ಕುಸಿದು ಆಮ್ಲಯುಕ್ತವಾಗುತ್ತದೆ. ಹೊಲದ ಪಕ್ಕದಲ್ಲಿ ನಮಗೆ ರಾಚುವ ವಿಚಿತ್ರ ಸುವಾಸನೆ ಇದರದ್ದೇ ಫಲ. ಈ ವಾತಾವರಣದಲ್ಲಿ ‘ಆಮ್ಲಜನಕ ರಹಿತ’ ಬ್ಯಾಕ್ಟೀರಿಯಾಗಳು ಯಥೇಚ್ಛ ಉತ್ಪಾದನೆ ಯಾಗುವುದರೊಂದಿಗೆ ಇಂಗಾಲ ಮತ್ತು ಸಾರಜನಕಗಳು ಮತ್ತಷ್ಟು ಕುಸಿದು ನೈಟ್ರಸ್ ಆಕ್ಸೈಡ್ ಪ್ರಾಬಲ್ಯ ಸಾಸುತ್ತದೆ.
ಜುಲೈನಿಂದ ಡಿಸೆಂಬರ್ ಅವಯಲ್ಲಿ ಈ ವಿಷದ ಪ್ರಮಾಣ ಇತ್ತೀಚೆಗೆ ತೀರಾ ಹೆಚ್ಚುತ್ತಿದೆ. ಇದರೊಂದಿಗೆ ಸಾಂಪ್ರದಾಯಿಕ ತಳಿಗಳನ್ನು ಬಿಟ್ಟು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನೇ ಅವಲಂಬಿಸುವ ಹೊಸ ತಳಿಗಳ ಮೊರೆಹೋಗಿದ್ದೇವೆ. ಇದು ವಾಯುವನ್ನಷ್ಟೇ ಅಲ್ಲದೆ ಭೂಮಿ, ಜಲವನ್ನೂ ಮಲಿನ ಗೊಳಿಸುತ್ತಿದೆ. ಒಟ್ಟಾರೆ ಡೈನಾಮಿಕ್ಸ್ (ನಿಸರ್ಗ ಬಲಕ್ರಿಯೆ) ಏರುಪೇರಿಗೆ ನಮ್ಮ ಕೃಷಿಯ ಕೊಡುಗೆ ತೀರಾ ಗಣನೀಯ.
ಮೊದಲಿನಿಂದಲೂ ಭಾರತದಲ್ಲಿ ಅದರಲ್ಲೂ ದಕ್ಷಿಣ ರಾಜ್ಯ ಗಳಲ್ಲಿ ಭತ್ತದ ಕೃಷಿ ಹೆಚ್ಚು. ಸರಾಸರಿ ವರ್ಷಕ್ಕೆ ೪೩೦೦ ಕೋಟಿ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಎರಡು ಕೋಟಿಗೂ ಹೆಚ್ಚು ಮಂದಿ ಭತ್ತದ ಕೃಷಿಯನ್ನು ಅವಲಂಬಿಸಿದ್ದಾರೆ. ಇಷ್ಟೊಂದು ಪ್ರಮಾಣದ ಗದ್ದೆಗಳು ಹೊರ ಸೂಸಬಹುದಾದ ನೈಟ್ರಸ್ ಆಕ್ಸೈಡ್‌ನ ಮಟ್ಟ ಎಷ್ಟಿರಬಹುದು. ಅವು ಇನ್ನೆಷ್ಟು ಮಂದಿಯ ಉಸಿರು ಕಟ್ಟಿಸಬಹುದು, ಆ ಪ್ರದೇಶ ಗಳಲ್ಲಿ ಬಳಸುವ ರಾಸಾಯನಿಕ ಗೊಬ್ಬರ, ಕೀಟನಾಶಕಗಳು ಎಷ್ಟು ಮಂದಿಯ ಪ್ರಾಣಕ್ಕೆ ಕುತ್ತು ತರಬಹುದೆಂಬುದನ್ನು ಊಹಿಸಬಹುದು.
ಇದಕ್ಕಿರುವ ಪರಿಹಾರವೆಂದರೆ ಆಯಾ ಪ್ರದೇಶದ ಹವಾಗುಣಕ್ಕನುಗುಣ ಬೆಳೆ ನಮ್ಮ ಕೃಷಿಯಲ್ಲಿ ಮುಂದುವರಿಯಬೇಕು. ಭತ್ತ ಬೆಳೆದರೂ ನೀರಾವರಿಯಾಗಿದೆಯೆಂಬ ಒಂದೆ ಕಾರಣಕ್ಕೆ ನೀರು ನಿಲ್ಲಿಸಿಯೇ ಭತ್ತ ಬೆಳೆಯಬೇಕೆಂಬ ನಮ್ಮ ವಿಚಿತ್ರ (ಮೂಢ) ನಂಬಿಕೆಯನ್ನು ಬದಲಿಸಿಕೊಳ್ಳಲೇಬೇಕು. ಕೃಷಿ ಅಭಿವೃದ್ಧಿಗೆ ನಾವು ನೀಡುತ್ತಿರುವ ಅನಗತ್ಯ, ಅವೈಜ್ಞಾನಿಕ ವ್ಯಾಖ್ಯಾನವನ್ನು ನಿಲ್ಲಿಸಬೇಕು. ಈ ಸಂಬಂಧ ರೈತರಲ್ಲಿ ಜಾಗೃತಿಯಾಗಬೇಕು. ಜೈವಿಕ, ಕೃಷಿ ವ್ಯವಸ್ಥೆಯೊಂದಿಗೆ ಕಡಿಮೆ ನೀರಿನಲ್ಲಿ ಆರ್ಥಿಕ ದೃಷ್ಟಿಕೋನದ ಮಿಶ್ರ ಬೇಸಾಯಕ್ಕೆ ಆದ್ಯತೆ ನೀಡಬೇಕು.
ಎಲ್ಲೆಡೆ ನೀರು ಸಮಸ್ಯೆಯಾಗಿ ಕಾಡುತ್ತಿರುವಾಗಲೇ, ಹೊಸ ಪರಿಹಾರೋಪಾಯಗಳ ಹುಡುಕಾಟ ಆರಂಭವಾಗಿದೆ. ಈ ಹುಡುಕಾಟದಲ್ಲಿ ನಮಗೆ ಕಂಡದ್ದೆಲ್ಲವೂ ಪಾರಂಪರಿಕ ಪದ್ಧತಿಗಳಿಂದ ಹೊರತಾದ, ದೇಸಿ ತಂತ್ರಜ್ಞಾನವನ್ನು ಸಾರಾಸಗಟು ನಿರಾಕರಿಸುವ, ಆಧುನಿಕ ಭೂಯಿಷ್ಟ ಅವಸ್ಥಾಂತರಗಳೇ. ಕಾಲ ಬದಲಾದಂತೆಲ್ಲ, ಅಗತ್ಯಗಳ ವ್ಯಾಪ್ತಿ ವಿಸ್ತಾರವಾದಂತೆಲ್ಲ ಒಂದಷ್ಟು ಬದಲಾವಣೆ ಅಗತ್ಯವೂ ಹೌದು ಅನಿವಾರ್ಯವೂ ಹೌದು. ಒಪ್ಪಿಕೊಳ್ಳೋಣ. ಹಾಗೆಂದು ಹಿಂದಿನ ಯಾವುದರಲ್ಲೂ ಇದಕ್ಕೆ ‘ಉತ್ತರ’ ದೊರಕುವುದೇ ಇಲ್ಲವೆಂಬ ಹಠಕ್ಕೆ ತಗುಲಿಕೊಂಡು ವರ್ತಿಸುವುದು ನೀರಿನ ಮಟ್ಟಿಗೆ ತೀರಾ ಅರ್ಥಹೀನ. ಹಾಗೇ ವರ್ತಿಸಿದ ಫಲವೇ ಈ ಜಿಲ್ಲೆಗಳಲ್ಲಿ ಕಾಣುತ್ತಿರುವ ನೀರಾವರಿಯ ದುರ್ಬಳಕೆ. ದನ್ನು ತಕ್ಷಣ ತಡೆಯದಿದ್ದರೆ ಇಡೀ ಪ್ರದೇಶದ ಮಣ್ಣು ನಿಷ್ಪ್ರಯೋಜಕವಾಗುವ ಜತೆಗೆ, ನೀರೂ ಕುಲಗೆಟ್ಟು ಹೋಗುತ್ತದೆ. ಮಾತ್ರವಲ್ಲ ಹಳ್ಳಿಗರು ಉಸಿರಾಟಕ್ಕೆ ಪರದಾಡಬೇಕಾದ ಸ್ಥಿತಿ ಕಟ್ಟಿಟ್ಟದ್ದೇ !

‘ಲಾಸ್ಟ್ ’ಡ್ರಾಪ್ : ಅತಿ ಹೆಚ್ಚು ನೀರಿನ ಬಳಕೆ ಪ್ರದೇಶ ಅತಿ ಹೆಚ್ಚು ನೀರು ಪೋಲಾಗುವ ತಾಣವೆಂಬ ಸತ್ಯ ನಮಗೆ ಅರಿವಾಗಬೇಕಿದೆ.