Thursday, February 19, 2009

ನೀರು ಸೂರು: ಜಲ ಚಕ್ರದ ಉಸಿರು

ನೀವದನ್ನು ‘ಜಲಾನಯನ’ ಎಂದೆನ್ನಿ, ಬೇಕಿದ್ದರೆ ‘ಜಲ ಚಾವಣಿ’ ಎಂದು ಕರೆಯಿರಿ ಅಥವಾ ‘ನೀರ ಸೂರು’ ಎಂದರೆ ಕೇಳಲು ಇನ್ನೂ ಹಿತಕರ...ಒಟ್ಟಾರೆ ಸಾಂಪ್ರದಾಯಿಕ ಭಾರತದ ಕೃಷಿಯಲ್ಲಿ ತನ್ನಿಂದ ತಾನೇ ಅಭಿವೃದ್ಧಿ ಹೊಂದುತ್ತಿದ್ದ, ನೀರನ್ನು ಹಿಡಿದಿಟ್ಟುಕೊಂಡು ಬಳಕೆಗೆ ದಕ್ಕಿಸಿಕೊಡುತ್ತಿದ್ದ ನೆಲವಿಂದು, ಆಧುನಿಕ ಹೆಸರಿನಲ್ಲಿ ವೈವಿಧ್ಯಮಯವಾಗಿ ಕರೆಸಿಕೊಳ್ಳುತ್ತಿದೆ. ನೀರ ರಕ್ಷಣೆ ದಿನದ ಕಾಳಜಿಯಾಗದ ಹೊರತೂ ಉಳಿದೆಲ್ಲ ಬಲವಂತದ ಮಾಘಸ್ನಾನ ಎಂಬುದು ಬೇರೆ ಪ್ರಶ್ನೆ.
ಏನೇ ಇದ್ದರೂ, ಇಂದಿನ ಸನ್ನಿವೇಶದ ಅಗತ್ಯ-ಅನಿವಾರ್ಯತೆಗಳು ಹಲವು ಪದ್ಧತಿಗಳನ್ನು ಅನುಸರಣೆಗೆ ತರುತ್ತಿವೆ. ಅದಕ್ಕಾಗಿ ಶಾಸ್ತ್ರಬದ್ಧ ಕ್ರಮಗಳನ್ನು ಗುರುತಿಸಲಾಗುತ್ತಿದೆ. ನಿಗದಿತ ಹೆಸರನ್ನು ಅವು ಪಡೆದುಕೊಳ್ಳುತ್ತಿವೆ.
watershed development-ಜಲಾನಯನ ಅಭಿವೃದ್ಧಿ ಎಂಬುದು ಇದೇ ರೀತಿ ಸರಕಾರ, ಸಮುದಾಯಗಳೆಡರಿಂದಲೂ ಆಧುನಿಕ ಕೃಷಿಯ ಫ್ಯಾಷನ್ ಎಂಬರ್ಥದಲ್ಲಿ ಬಳಕೆಗೆ ಬರುತ್ತಿರುವ ಪದ. ಅದರ ಹೆಸರೇ ಒಂದು ರೀತಿಯಲ್ಲಿ ಅತ್ಯಂತ ಗಂಭೀರ ಅರ್ಥವನ್ನು ಧ್ವನಿಸುತ್ತದೆಯಾದರೂ ಅದು ತೀರಾ ಸರಳ ವಿಧಾನ. ಬೀಳುವ ಮಳೆ, ಅದು ನಿರ್ದಿಷ್ಟ ಗುರಿಯೆಡೆಗೆ ಹರಿದೋಡುವ ಇಲ್ಲವೇ ಇಂಗುವ ಪ್ರದೇಶವನ್ನು ಒಂದೇ ಪದದಲ್ಲಿ ಜಲಚಾವಣಿ ಅಥವಾ ಜಲಾನಯನ ಪ್ರದೇಶ ಎನ್ನಬಹುದು.
ಬೀಳುವ ಮಳೆಗೊಂದು ಸೂರು ಕಟ್ಟಿಕೊಟ್ಟು ನಿಲ್ಲಿಸಿಕೊಂಡರೆ ಅದನ್ನೇ ನೀರಸೂರು ಎನ್ನಬಹುದಲ್ಲವೇ ? ಪ್ರಶ್ನೆ ಏನು ಬಂತು ಅದೇ ಜಲಾನಯನ. ಇಲ್ಲಿ ಚಾವಣಿ, ಸೂರು ಎಂದ ಮಾತ್ರಕ್ಕೆ ನೆಲದ ಮೇಲೊಂದು ನೀರಿಗಾಗಿ ನೆರಳು ನಿರ್ಮಿಸುವುದು ಎಂಬ ಶಬ್ದಶಃ ಅರ್ಥವಲ್ಲ. ನೀರು ವಾಸಿಸಲು-ತಂಗಲು, ತಂಗಿ ಇಂಗಲು ಅನುವು ಮಾಡಿಕೊಟ್ಟರಾಯಿತು; ಅದೇ ನೀರಸೂರು.
ಬಹುಶಃ ಒಣ ಭೂಮಿಯಲ್ಲಿನ ಕೃಷಿಯ ಪರಿಕಲ್ಪನೆ ಸ್ಪಷ್ಟವಾಗುತ್ತ ಹೋದಂತೆಲ್ಲ ಜಲಾನಯನ ಅಭಿವೃದ್ಧಿ ಎಂಬುದೂ ಪ್ರಾಮುಖ್ಯ ಪಡೆದುಕೊಳ್ಳುತ್ತ ಬಂದಿತೇನೋ. ಇಂದು ಜಲಾನಯನ ಅಭಿವೃದ್ಧಿಗಾಗಿಯೇ ಸರಕಾರಗಳು ಕೋಟ್ಯಂತರ ರೂಪಾಯಿ ಚೆಲ್ಲುತ್ತಿದೆ. ಅದಕ್ಕಾಗಿ ಪ್ರತ್ಯೇಕ ಯೋಜನೆ ರೂಪಿಸಿದೆ. ಇಲಾಖೆ, ಅಕಾರಿಗಳು, ಸಿಬ್ಬಂದಿ ಎಲ್ಲವನ್ನೂ ಒದಗಿಸುತ್ತಿದೆ.
ಜಲಾನಯನ ಎಂಬುದು ಪ್ರಮುಖವಾಗಿ ಮೂರು ಹಂತಗಳನ್ನು ಹೊಂದಿರುತ್ತದೆ. ಮೊದಲನೆಯದಾಗಿ ಇಳಿಮೇಡು
(catchment area),ಅಂದರೆ ನೀರು ಹರಿದು ಬರುವ ಪ್ರದೇಶ. ಇನ್ನೊಂದು ಅಚ್ಚಕಟ್ಟು ಪ್ರದೇಶ
(delta area), ಅಂದರೆ ನೀರು ಬಳಕೆಗೆ ಒಳಪಡುವ ಪ್ರದೇಶ. ಕೊನೆಯದಾಗಿ ಹರಿವೀಡು (command area), ಅಂದರೆ ನೀರು ಹರಿದು ಹೋಗುವ ಪ್ರದೇಶ. ಈ ಮೂರೂ ಪ್ರದೇಶವನ್ನು ಒಳಗೊಂಡ ಭೂಮಿಯನ್ನು ನಾವು ಒಂದು ನೀರ ಸೂರು ಎನ್ನಬಹುದು. ಅದು ಎಷ್ಟೇ ದೊಡ್ಡದಿರಬಹುದು, ಚಿಕ್ಕದೂ ಇರಬಹುದು. ಒಟ್ಟಾರೆ ನೀರಿನ ದಿನಚರಿಗೆ ಸಂಬಂಸಿದ ಚಟುವಟಿಕೆಗಳು ಅಲ್ಲಿ ನಡೆಯುತ್ತಿರಬೇಕು. ಸಾಮಾನ್ಯವಾಗಿ ಒಂದು ಜಲಾನಯನಕ್ಕೆ ಹೊಂದಿಕೊಂಡು ಒಂದು ನದಿ, ಹೊಳೆ ಅಥವಾ ಇನ್ನಾವುದೇ ಹರಿವು ಇದ್ದೇ ಇರುತ್ತದೆ. ಅದರ ಸುತ್ತಮುತ್ತಲನ್ನು ಅಚ್ಚುಕಟ್ಟು ಪ್ರದೇಶ ಎಂದು ಗುರುತಿಸಲಾಗುತ್ತದೆ. ನಾವು ನಮ್ಮಂಥವರು ಸೂರು ನಿರ್ಮಿಸಿಕೊಳ್ಳಲು ಸಮತಟ್ಟಾದ, ಮರ-ಗಿಡ, ಬಂಡೆಗಳಿಲ್ಲದ ಜಾಗವನ್ನು ಹುಡುಕುವುದು ಸಹಜ. ಆದರೆ ನೀರು ಇದಕ್ಕಿಂಥ ಸಂಪೂರ್ಣ ಭಿನ್ನ. ಜಲ ಚಾವಣಿ ನಿರ್ಮಾಣ ಸಮತಟ್ಟಾದ ಜಾಗದಲ್ಲಿ ತುಸು ತ್ರಾಸದಾಯಕವೇ ಸರಿ. ಅದೇ ಗುಡ್ಡ ಶ್ರೇಣಿಯಿಂದ ತಳದ ಕಣಿವೆಗೆ ಸೂರುಕಟ್ಟಿ ನೀರು ನಿಲ್ಲಿಸುವುದು ಅತ್ಯಂತ ಸುಲಭ. ನಮ್ಮ ನಮ್ಮ ಮನೆಗಳಿಗೆ ನಮ್ಮದೇ ಆದ ಗುರುತು, ಒಂದು identity ಇರುವುದಿಲ್ಲವೇ ಹಾಗೆಯೇ ಪ್ರತೀ ನೀರ ಸೂರಿಗೂ ಆಯಾ ಭೂ ಪ್ರದೇಶದ ವಿಸ್ತಾರ, ಅಲ್ಲಿನ ವಾತಾವರಣ, ಭೌಗೋಳಿಕ ಲಕ್ಷಣಗಳಿಗನುಗುಣವಾಗಿ ಅದರದೇ ಆದ ಪ್ರತ್ಯೇಕ ವ್ಯಕ್ತಿತ್ವ ನಿರ್ಮಾಣವಾಗಿರುತ್ತದೆ. ಆಯಾ ಪ್ರದೇಶದಲ್ಲಿ ಬೀಳುವ ಮಳೆ ಸರಾಸರಿ, ಭೂಮಿ ಮೇಲ್ಮೈ ಆಕಾರ, ಮಣ್ಣಿನ ಗುಣ ಇವಲ್ಲವನ್ನೂ ಪರಿಗಣಿಸಿಯೇ ಜಲಾನಯನದ ಅಭಿವೃದ್ಧಿಗೆ ಮುಂದಾಗಬೇಕು. ಅದಿಲ್ಲದಿದ್ದರೆ ಕೋಳಿಗೂಡಿನಲ್ಲಿ ಕೋಣನನ್ನು ತಂದು ಕಟ್ಟಿಹಾಕಿದಂತಾದೀತು.
ಜಲ ಚಾವಣಿ ನಿರ್ಮಾಣವೆಂದರೆ ಅದೊಂದು ನೂರಕ್ಕೆ ನೂರು ಸಂಪೂರ್ಣ ಜೈವಿಕ ಪ್ರಕ್ರಿಯೆ. ಭೌತಿಕ ನಿರ್ಮಾಣ ಎಷ್ಟು ಮುಖ್ಯವೋ, ಜೈವಿಕ ಹಾಗೂ ಸಾಂಸ್ಕೃತಿಕ ಅಂಶಗಳನ್ನು ಪರಿಗಣಿಸುವುದೂ ನೀರಿನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅಷ್ಟೇ ಪ್ರಮುಖ ವಿಚಾರವೆನಿಸಿಕೊಳ್ಳುತ್ತದೆ. ನೀರೆಂದರೆ ಅದು ನಿರ್ಜೀವ ಅಲ್ಲವೇ ಅಲ್ಲ. ಭಾವನಾತ್ಮಕ ಒಡನಾಟ ಇಲ್ಲದ ವ್ಯಕ್ತಿಗಳ ನಡುವೆ ಅದು ಎಂದಿಗೂ ವಾಸ ಮಾಡಲೊಪ್ಪುವುದೇ ಇಲ್ಲ. ನೈಸರ್ಗಿಕವಾಗಿ ಅತ್ಯಂತ ಸೂಕ್ಷ್ಮ ಸಂಗತಿಗಳನ್ನೂ ಗಮನಿಸಿದಲ್ಲಿ ಮಾತ್ರ ಜಲಾನಯನವೊಂದರ ಸಮರ್ಥ ಅಭಿವೃದ್ಧಿ ಸಾಧ್ಯ.
ಸಾಮಾನ್ಯವಾಗಿ ಜಲಾನಯನ ಅಭಿವೃದ್ಧಿಯೆಂದರೆ ನದಿ ಅಥವಾ ಹೊಳೆಯಂಥ ಜಲ ಮೂಲದ ಸುತ್ತಲಿನ ಅಚ್ಚುಕಟ್ಟಿನಲ್ಲಿ ನೀರನ್ನು ಉಳಿಸಿಕೊಂಡು ಬಳಕೆ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದು ಎಂಬ ಕಲ್ಪನೆ ಇದೆ. ಆದರೆ ಇದಷ್ಟೇ ಅಲ್ಲ. ಮಳೆ ನೀರಿನ ಸಂಗ್ರಹದ ಜತೆಗೆ, ನೀರಿನ ಸಂರಕ್ಷಣೆ, ಪುನರುಜ್ಜೀವನ ಮತ್ತು ಪರಿಸರ ಹಾಗೂ ಜೀವ ವಲಯದ ನ್ಯಾಯಯುತ ನಿರ್ವಹಣೆ- ಈ ಎಲ್ಲ ಅಂಶಗಳನ್ನೂ ಜಲಾನಯನ ಅಭಿವೃದ್ಧಿ ಒಳಗೊಂಡಿರುತ್ತದೆ. ಆಯ್ದುಕೊಂಡ ಜಾಗದಲ್ಲಿ ಮಣ್ಣಿನ ಸಂಸ್ಕರಣೆಯಿಂದ ಕಾರ್ಯ ಆರಂಭವಾಗುತ್ತದೆ. ನಂತರದ ಹಂತ ನೀರಿನ ಓಟ ತಪ್ಪಿಸಿ, ನಿಲುಗಡೆಗೆ ಅನುವಾಗುವಂತೆ ಭೂಮಿಯ ಮೇಲ್ಮೈ ಅನ್ನು ಮಾರ್ಪಡಿಸುವುದು. ಆ ಬಳಿಕ ಅಲ್ಲಿ ಹಸಿರಿನ ಬೆಳವಣಿಗೆ...ಒಟ್ಟಾರೆ ನೀರು, ಮಣ್ಣು ಹಾಗೂ ಪರಿಸರ ಈ ಮೂರೂ ಅಂಶಗಳ ಸಮಗ್ರ ಸಂರಕ್ಷಣೆಯಾದಾಗ ಮಾತ್ರ ಜಲಾನಯನ ಅಭಿವೃದ್ಧಿ ನೈಜ ಅರ್ಥದಲ್ಲಿ ಆದಂತಾಗುತ್ತದೆ. ಅಂದರೆ ಮಾತ್ರ ಬರ ನಿರ್ವಹಣೆ, ಪ್ರವಾಹದ ನಿಯಂತ್ರಣ ಎರಡೂ ಉದ್ದೇಶ ಈಡೇರುತ್ತದೆ. ಮಣ್ಣಿನ ಸವಕಳಿಯೂ ತಪ್ಪುತ್ತದೆ. ನೀರಿನ ಲಭ್ಯತೆ ಹೆಚ್ಚುತ್ತದೆ. ಮೇವಿನ, ಬೆಳೆಗಳ ಉತ್ಪಾದನಾ ಮಟ್ಟ ಹೆಚ್ಚುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಪನ್ಮೂಲದ ಲಭ್ಯತೆ ಹಾಗೂ ಬಳಕೆಯಲ್ಲಿ ಸಮತೋಲನ ನಿರ್ಮಾಣವಾಗುತ್ತದೆ.
ಪರಿಸರ ವ್ಯವಸ್ಥೆಯಲ್ಲಿ ಮಣ್ಣು ಮತ್ತು ನೀರು ಅತಿ ಮುಖ್ಯ ಪಾತ್ರ ವಹಿಸುತ್ತದೆಂಬುದು ಗೊತ್ತೇ ಇದೆ. ಮನುಷ್ಯ, ಪ್ರಾಣಿ ಹಾಗೂ ಸಸ್ಯ ಈ ಮೂರೂ ಜೀವದ ಅಳಿವು ಉಳಿವು ನೀರು-ಮಣ್ಣನ್ನು ಅವಲಂಬಿಸಿದೆ. ಈ ದೃಷ್ಟಿಯಿಂದ ಈ ಎರಡರ ನಡುವೆ ಸಮತೋಲನ ನಿರ್ಮಾಣ ಮಾಡಿದರೆ ಜಲ ಚಾವಣಿ ಅಭಿವೃದ್ಧಿ ಆದಂತೆಯೇ ಸರಿ. ಭಾರತದಲ್ಲಿ ವರ್ಷಕ್ಕೆ ೧೭.೫ ಕೋಟಿ ಹೆಕ್ಟೇರ್‌ನಷ್ಟು ಪ್ರದೇಶದ ಮಣ್ಣು ಸವಕಳಿಯಾಗುತ್ತಿದೆ. ಜಲಾನಯನ ಅಭಿವೃದ್ಧಿಯ ಅಗತ್ಯ ನಮ್ಮಲ್ಲಿ ಎಷ್ಟು ಅಗತ್ಯ ಎಂಬುದನ್ನು ಇದರಿಂದ ಮನಗಾಣಬಹುದೇ ?
‘ಲಾಸ್ಟ್’ ಡ್ರಾಪ್: ನಾವು ಈ ಭೂಮಿಯ ಮೇಲೆ ಏನು ಮಾಡುತ್ತಿದ್ದೇವೆ ಎಂಬುದು ಆ ನೆಲದ ನೀರಿನಲ್ಲಿ ಪ್ರತಿಫಲಿಸುತ್ತದೆ.

Friday, February 13, 2009

ಭಾವು: ನೀರನ್ನು ಬೆಟ್ಟದಲ್ಲೇ ನಿಲ್ಲಿಸಿದ ಭಗೀರಥ

ಅದು ೧೯೯೫ರ ಮಳೆಗಾಲ. ಜಲಗಾಂವ್ ಸಮೀಪದ, ಆಗಷ್ಟೇ ಖರೀದಿಸಿದ್ದ ಗುಡ್ಡದ ಬುಡಕ್ಕೆ ಹೋಗಿನಿಂತಿದ್ದರು ಭವರ್‌ಲಾಲ್ ಜೈನ್(ಭಾವು). ಸಣ್ಣಗೆ ಮಳೆ ಹನಿಯುತ್ತಿದ್ದಿರಬೇಕು. ಒಂದು ರೀತಿಯಲ್ಲಿ ಆಹ್ಲಾದಕರ ವಾತಾವರಣ. ೮೦೦ ಎಕರೆಗಳಷ್ಟು ವಿಸ್ತಾರದ ಈ ಪ್ರದೇಶಕ್ಕೆ ತಾನೇ ಒಡೆಯ ಎಂಬ ಹೆಮ್ಮೆಯಿಂದ ಬೀಗಬೇಕಿದ್ದ ಮನದಲ್ಲಿ ಏನೋ ಗೊಂದಲ. ಕಾರಣ ಇಲ್ಲದಿಲ್ಲ. ಅದಾದರೂ ಎಂಥ ಭೂಮಿ ? ಕಲ್ಲು ಬೆಳೆದಷ್ಟು ಸಲೀಸಾಗಿ ಅಲ್ಲಿ ಹುಲ್ಲೂ ಬೆಳೆಯುವುದಿಲ್ಲ. ಇಡೀ ಗುಡ್ಡವನ್ನೊಮ್ಮೆ ಅವಲೋಕಿಸಿದರೆ ಅಲ್ಲಲ್ಲಿ ತನ್ನ ಇರುವಿಕೆಯನ್ನು ಹಣುಕಿ ಹಣುಕಿ ತೋರುತ್ತಿರುವ ಬಂಡೆಗಳ ಸಾಲು. ಒಂದೊಂದಕ್ಕೂ ಒಂದೊಂದು ಆಕಾರ. ಅಂಥ ಆಕಾರ-ನಿರ್ವಿಕಾರಗಳ ಹಿಂದೆ ಬೇರು ಬಿಟ್ಟುಕೊಂಡು ಕುಳಿತಿರಬಹುದಾದ ಬಂಡೆಗಳ ಜಾಲವನ್ನು ನೆನಪಿಸಿಕೊಂಡರೆ ಮನ ವಿಕಾರ. ಎಂಥವನೂ ಅರನಾಗಲೇಬೇಕಾದ ಸನ್ನಿವೇಶವದು.
‘ಅದ್ಯಾವ ಧೈರ್ಯ ಮಾಡಿ ಇಂಥ ಭೂಮಿಯನ್ನು ಖರೀದಿಸಿದೆ’ ಎಂಬುದೇ ಅರ್ಥವಾಗದ ಸ್ಥಿತಿ. ಇಲ್ಲಿ ಏನು ಮಾಡಲಾದೀತು ? ಗುಡ್ಡದ ತಲೆಯ ಮೇಲೆ ನಿಂತು ಪುಟ್ಟ ಕಲ್ಲೊಂದನ್ನು ಸುಮ್ಮನೆ ಜಾರಿ ಬಿಟ್ಟರೂ ಸಾಕು ಸೀದಾ ಬುಡಕ್ಕೆ ಹೋಗಿ ಬೀಳುವುದಷ್ಟೇ ಅಲ್ಲ, ಅದು ಓಡಿ ಬರುವ ರಭಸಕ್ಕೆ ಅದೇ ವೇಗದಲ್ಲಿ ಮುಂದಿನ ಗುಡ್ಡದ ತಲೆಗೆ ಹೋಗಿ ನಿಂತಿರುತ್ತದೆ. ಅಷ್ಟೊಂದು ಕಡಿದಾದ ಕಣಿವೆ ಎಂದರೆ ಕಣಿವೆಯೇ ಅದು. ಇನ್ನು ಅಲ್ಲಿ ನೀರು ನಿಂತುಕೊಳ್ಳುವುದು ಸಾಧ್ಯವೇ ಇಲ್ಲ. ಗುಡ್ಡ ಹತ್ತಿ ಇಳಿಯುವುದೇ ದುಸ್ಸಾಹಸವಾಗಿರುವಾಗ ಅಲ್ಲಿ ಬೆಳೆ ತೆಗೆಯುವುದು ದೂರದ ಮಾತೇ ಆಯಿತು. ಹಾಗಾದರೆ ಅದಿನ್ಯಾವ ಪುರುಷಾರ್ಥಕ್ಕೆ ?
ಭಾವು ಯೋಚುಸುತ್ತಲೇ ನಿಂತಿದ್ದರು. ಮಳೆ ಹನಿಯುತ್ತಲೇ ಇತ್ತು. ಆದರೂ ತಲೆ ತಣಿಯುತ್ತಿರಲಿಲ್ಲ. ಏನಾದರೂ ಮಾಡಲೇ ಬೇಕು. ಏನು ಮಾಡಬೇಕು ? ಹೇಗೆ ಮಾಡಬೇಕು ? ಎಲ್ಲಿಂದ ಆರಂಭಿಸಬೇಕು ? ಎಷ್ಟು ಹಣ ಸುರಿಯಬೇಕಾದೀತು ? ಅಷ್ಟು ಮಾಡಿದ ಮೇಲೂ ನಿರೀಕ್ಷಿತ ಫಲ ದೊರಕೀತೇ ? ಪ್ರಶ್ನೆಗಳ ಸರಣಿ ಗಿರಕಿ ಹೋಡೆಯುತ್ತಲೇ ಇತ್ತು.
ತುಂತುರು ನಿಂತಿರಲಿಲ್ಲ. ಭಾವು ಕದಲಲೂ ಇಲ್ಲ. ಮಧ್ಯೆ ಎಲ್ಲಾದರೂ ಸಣ್ಣದೊಂದು ಪರಿಹಾರದ ಸೆಳಕು ಮಿಂಚಿಬಿಡಬಹುದು ಎಂಬ ನಿರೀಕ್ಷೆ ಅವರದ್ದು. ಮಿಂಚದೇ ಉಳಿಯಲಿಲ್ಲ. ಗುಡ್ಡದ ತುಸು ಮೇಲ್ಭಾಗದಲ್ಲಿ ಎನೋ ಹೊಳೆಹೊಳೆದು ಹೋದಂತೆ. ಮಿಂಚೇ ಇರಬೇಕು. ಅಥವಾ ಭ್ರಮೆಯೇ ? ತೋಚಲಿಲ್ಲ. ಮತ್ತೆ ಮತ್ತೆ ಕಣ್ಣರಳಿಸಿ ನೋಡಿದರು. ಮಿಂಚಾಗಿದ್ದರೆ ಒಮ್ಮೆ ಬೆಳಕು ಚೆಲ್ಲಿ ಹೋಗಬೇಕಿತ್ತು. ಆದರದು ಹಾಗಾಗಿಲ್ಲ. ನಿರಂತರ ಬೆಳ್ಳಂಬೆಳ್ಳಗ್ಗಿನ ಗೆರೆ ಎಳೆದಿಟ್ಟಂತೆ. ಏನಿರಬಹುದು ? ಹತ್ತಿರ ಹೋಗಿ ನೋಡಿಬಿಡಬೇಕು. ಕುತೂಹಲ ನಿಲ್ಲಗೊಡಲಿಲ್ಲ. ಉತ್ಸಾಹ ಅದೆಲ್ಲಿಂದ ಬಂತೋ ? ಅದೇ ಭರದಲ್ಲಿ ಹತ್ತ ತೊಡಗಿದರು.
ವಾಹ್, ಪುಟ್ಟದೊಂದು ಝರಿ ! ಹೌದು ಜಲಪಾತವೇ. ಲಾಸ್ಯವಾಡುತ್ತ ಧುಮ್ಮಿಕ್ಕುತ್ತಿದೆ. ಸಣ್ಣಸಣ್ಣಗೆ ತುಂತುರುಗಳ ಸಿಡಿಸುತ್ತ, ಸಮೀಪ ಹೋದವರ ಕೆನ್ನೆಗಳನ್ನು ತಂಪಾಗಿಸುತ್ತ, ನೋಡುತ್ತ ನಿಂತವರ ಇರುವನ್ನೇ ಮರೆಸುತ್ತ, ಕೆಳಗೆ ಹೋಗಿ ನಿಂತರೆ ತಲೆಯನ್ನೇ ಕೊರೆದು ಬಿಡಬಹುದಾದಷ್ಟು ರಭಸದಲ್ಲಿ ಬೀಳುತ್ತಲೇ ಇದೆ. ಆ ಸಂಜೆ, ಆ ತಂಪು ತಂಪು ವಾತಾವರಣ, ಮೈ ಚಳಿ ಹೆಚ್ಚಿಸುವ ಹುಚ್ಚು ಸೌಂದರ್ಯವನ್ನೊಳಗೊಂಡ ಕಿರು ಜಲಪಾತದೆದುರು ನಿಂತರೆ ನಾನು-ನೀವಾಗಿದ್ದರೆ ಅದೆಷ್ಟು ಹೊತ್ತು ಹಾಗೇ ಮೈಮರೆತು ನಿಂತು ಬಿಡುತ್ತಿದ್ದೆವೋ ? ಭಾವೂ ಸಹ ಅಲ್ಲಿ ನಿಂತಿದ್ದರು. ಆದರೆ ಮೈ ಮರೆಯಲಿಲ್ಲ. ಆ ಸೌಂದರ್ಯಕ್ಕೆ ಹುಚ್ಚರಾಗಲಿಲ್ಲ. ಧೋ ಗುಡುವ ಜಲಪಾತದ ಮೊರೆತ ಹರ್ಷದ ಕೇಕೆಯಾಗಿ ಅವರಿಗೆ ಕೇಳಿಸಲಿಲ್ಲ. ನಿಂತಲ್ಲಿ ನಿಲ್ಲಲಾಗದೇ ಸಮತೋಲನ ಕಳೆದುಕೊಂಡು ಇನಿಯನ ತೆಕ್ಕೆಯಿಂದ ತಪ್ಪಿ ಪ್ರಪಾತಕ್ಕೆ ಜಾರುತ್ತಿರುವ ಸುಂದರಿಯೊಬ್ಬಳು ಆ ಕ್ಷಣದಲ್ಲಿ ‘ಕಾಪಾಡಿ’ ಎನ್ನುತ್ತಾ ಆರ್ತನಾದ ಹೊರಡಿಸುತ್ತಿರುವಂತೆ ಅನ್ನಿಸಿತು ಭಾವುಗೆ.
ಹೌದು, ನೂರಕ್ಕೆ ನೂರು ಅದು ನೆರವನ್ನು ನಿರಕಿಸಿದ ನೀರಕನ್ನೆಯ ಆಕ್ರಂದನವೇ ಆಗಿತ್ತು. ಬಿದ್ದ ಜಾಗದಲ್ಲಿ ನಿಲ್ಲಲಾರದೇ, ಬೀಳುತ್ತಲೇ ಸಿಕ್ಕಿ ಸಿಕ್ಕದ್ದನ್ನೆಲ್ಲ ಹಿಡಿದುಕೊಳ್ಳವ ಭರದಲ್ಲಿ ಮತ್ತೆ ಆಯತಪ್ಪಿ, ಹಿಡಿಯ ಹೋದದ್ದನ್ನೂ ಕಳಚಿ ಕೆಳಗೆ ಕಳುಹಿಸುವ ಅಸಾಹಾಯಕ ದೃಶ್ಯ ಭಾವುಗೆ ಕಣ್ಣೆದುರು ಬಂದಿರಬೇಕು. ಜಾರಿ ಬೀಳುತ್ತಿರುವ ಜಲಪಾತವನ್ನೊಮ್ಮೆ, ಅದು ಬಿದ್ದ ಜಾಗದಲ್ಲಿ ಮೂಡಿದ ಕೊರಕಲನ್ನೊಮ್ಮೆ ದಿಟ್ಟಿಸಿದರು. ಈ ಬಾರಿ ‘ಕಾಪಾಡಿ’ ಎಂಬ ಧ್ವನಿ ದ್ವಿಗುಣವಾಯಿತು. ಇದೆಲ್ಲಿಂದ ಬಂತು ಮತ್ತೊಂದು ಸ್ವರ ? ಮತ್ತೆ ಮತ್ತೆ ನೋಡಿದರು. ಅರ್ಥವಾಯಿತು, ಆ ಇನ್ನೊಂದು ಸ್ವರ ಬುಡದಲ್ಲಿದ್ದ ಮಣ್ಣಿನದ್ದು. ನೀರು-ಮಣ್ಣಿನ ಮಿಲನ ಇಬ್ಬರಿಗೂ ಹಿತ ತರುವ ಬದಲು, ಅಲ್ಲಿ ಅಪಾಯವನ್ನು ತಂದಿತ್ತು. ಯುಗಳ ಗೀತೆ ಕಿವಿಗಿಂಪು ತರುವ ಬದಲು ವಿಷಣ್ಣ ಗಾನವಾಗಿ ಮಾರ್ಪಟ್ಟಿತ್ತು.
‘ನನ್ನ ನೆಲದಲ್ಲಿ ನೀರು ಮಣ್ಣಿಗೆ ವಿಚ್ಛೇದನ ಕೊಡಿಸಲೇ ಬೇಕು’-ಅಲ್ಲೇ ನಿರ್ಧರಿಸಿದರು ಭಾವು. ತುಸು ಭಾರದ ಕಲ್ಲೊಂದನ್ನೆತ್ತಿ ಜಲಪಾತದ ಬುಡಕ್ಕೆ ಹಾಕಿದರು. ಕೊಚ್ಚಿಕೊಂಡು ಹೊರಟ ಮಣ್ಣು ತುಸು ನಿಂತಂತೆನಿಸಿತು. ಇನ್ನೊಂದು, ಮತ್ತೊಂದು, ಮಗದೊಂದು....ಹೀಗೆ ನಾಲ್ಕಾರು ಕಲ್ಲುಗಳು ಜಲಪಾತದ ಬುಡ ಸೇರಿತು. ಆಗಲೇ...ಅದೇ ಕ್ಷಣದಲ್ಲೇ ಅವರ ಸಮಸ್ಯೆಗೆ ಪರಿಹಾರದ ಮಿಂಚು ಹೊಳೆದಿತ್ತು. ಸಮಸ್ಯೆಯ ಮೂಲವೂ ಅರಿವಾಗಿತ್ತು. ಬಿದ್ದ ಮಳೆ ನೀರು ಗುಡ್ಡದಲ್ಲಿ ನಿಲ್ಲುತ್ತಿಲ್ಲ. ಅದನ್ನೊಮ್ಮೆ ನಿಲ್ಲಿಸುವಂತಾದರೆ ಮುಂದಿನದೇನೂ ಸಮಸ್ಯೆಯೇ ಅಲ್ಲ. ಹಾಗಾದರೆ ನಿಲ್ಲಿಸುವುದು ಹೇಗೆ ?
ಯೋಚಿಸುತ್ತಾ ಮನೆ ಸೇರಿದವರಿಗೆ ನಿದ್ದೆ ಸುಳಿಯಲಿಲ್ಲ. ಅದೇ ಗುಂಗಿನಲ್ಲೇ ಬೆಳಗಾಗುವಾಗ ಮತ್ತೆ ಗುಡ್ಡದ ಬುಡಕ್ಕೆ ಬಂದು ನಿಂತಿದ್ದರು. ಈ ಬಾರಿ ಒಬ್ಬರೇ ಬಂದಿರಲಿಲ್ಲ. ಜತೆಗೊಂದಿಷ್ಟು ಮಂದಿಯಿದ್ದರು. ತಜ್ಞರು, ಎಂಜಿನಿಯರ್‌ಗಳು, ಕೃಷಿಕರು, ಅಕಾರಿಗಳು ಸುತ್ತುವರಿದಿದ್ದರು. ತಾರಸೀಕರಣ (ಟೆರೇಸಿಂಗ್)ದ ಯೋಜನೆ ಅಂದೇ ರೂಪುಗೊಂಡಿತ್ತು. ಆದರೆ ಅದು ಅಂದುಕೊಂಡಷ್ಟು ಸುಲಭದ ಮಾತಾಗಿರಲಿಲ್ಲ. ಅದರಲ್ಲೂ ಕ್ರಿಯಾಶೀಲತೆ, ಕಸದಲ್ಲೇ ರಸ ತೆಗೆಯುವ ಸೋಪಜ್ಞತೆ. ಅದು ಭಾವು ಹುಟ್ಟುಗುಣ. ಕಡಿದಾದ ಗುಡ್ಡವನ್ನು ಕಡಿಕಡಿದು ಕರಗಿಸಬೇಕು. ಸಂಪೂರ್ಣ ಸಮತಟ್ಟಾಗಿ ಅಲ್ಲದಿದ್ದರೂ ನೀರು ಸುಲಭದಲ್ಲಿ ಜಾರಿ ಬರದಂತೆ ತಡೆಯುವಷ್ಟಾದರೂ ಮೆಟ್ಟಿಲುಗಳ ರಚನೆ ಆಗಬೇಕು. ಅದೂ ಒಂದು ಕಡೆ ಮಾತ್ರವಲ್ಲ, ಸುತ್ತಲೂ ಇಂಥದ್ದೇ ಸರ್ಕಸ್. ಒಂದೆರಡು ರೂಪಾಯಿಗಳ ಮಾತಲ್ಲ. ವೆಚ್ಚ, ತ್ರಾಸು- ಎರಡರ ಅರಿವೂ ಭಾವೂಗಿತ್ತು. ಅದು ಅಂದುಕೊಂಡದ್ದಕ್ಕಿಂತ ದುಬಾರಿ ಎಂಬುದು ಗಮನಕ್ಕೆ ಬಂದದ್ದು ಕಾರ್ಯ ಕ್ಷೇತ್ರಕ್ಕೆ ಇಳಿದಾಗಲೇ.
ಬುಲ್ಡೋಜರ್, ಟ್ರ್ಯಾಕ್ಟರ್‌ಗಳನ್ನು ಬಳಸಿದರೆ ಮೆಟ್ಟಿಲುಗಳ ರಚನೆ ಎಷ್ಟು ದಿನದ ಕೆಲಸ ಎಂದೆಣಿಸಿದ್ದು ದಿಟವಾಗಲಿಲ್ಲ. ಗುಡ್ಡದ ಇಳಿಜಾರು ಯಂತ್ರಗಳಿಗೆ ಸಹಕರಿಸಲಿಲ್ಲ. ಅವು ಬಂದು ನಿಂತರೆ ತಾನೆ ಗುಡ್ಡವನ್ನು ಕಡಿಯುವುದು? ನಿಲ್ಲಲೇ ತಾಣವಿಲ್ಲ. ಕಾಲ ಹತ್ತು ವರ್ಷ ಹಿಂದಕ್ಕೋಡಿದಂತಾಯಿತು. ಎತ್ತಿನ ಬಂಡಿಗಳು ಬಂದವು, ಕೂಲಿಗಳು ಹಾರೆ, ಪಿಕಾಸಿಗಳೊಂದಿಗೆ ಗುಡ್ಡವನ್ನು ಸುತ್ತುವರಿದರು. ಒಂದೂವರೆ ವರ್ಷಗಳ ಸತತ ಕಾರ್ಯಯಜ್ಞ. ಉತ್ಸಾಹದ ಮಾತುಗಳ ಹವಿಸ್ಸನ್ನು ಕೆಲಸಗಾರರ ಮನಃಕುಂಡಕ್ಕೆ ಸುರಿಯುತ್ತಲೇ ಇದ್ದರು ಭಾವು. ಅಗತ್ಯ, ಅನಿವಾರ್ಯ ಕಡೆಗಳಲ್ಲಿ ಯಂತ್ರಗಳಿಂದಲೂ ಕೆಲಸ ಸಾಗಿತ್ತು. ಕೊನೆಗೊಂದು ದಿನ ನೋಡುವಾಗ ಇಡೀ ಗುಡ್ಡ ಚಕ್ರಾಕಾರದಲ್ಲಿ ಮೆಟ್ಟಿಲುಗಳನ್ನು ಮೈದಾಳಿಕೊಂಡು ನಿಂತಿತ್ತು. ಅಲ್ಲಿ ಕಿತ್ತು ತೆಗೆದ ಕಲ್ಲುಗಳನ್ನೇ ಮೆಟ್ಟಿಲುಗಳು ಕುಸಿಯದಂತೆ ಬದುವಾಗಿ ಬದಿಗೆ ಜೋಡಿಸಲಾಯಿತು. ಪುಟ್ಟ ಪುಟ್ಟ ಜಲ್ಲಿಯಂಥವನ್ನು ಆಯ್ದು ತೆಗೆದು ರಸ್ತೆ ನಿರ್ಮಾಣಕ್ಕೆ ಬಳಸಲಾಯಿತು. ಒಂದಿನಿತೂ ವ್ಯರ್ಥವೆಂಬುದಿಲ್ಲ.
ಸಿಂಧು, ಜೈನ ಸಾಗರ, ಜೈನ್‌ಉಪಸಾಗರ, ಜೈನ್ ಜಲನಿ, ಕ್ಷೀರ ಸಾಗರ, ಜೈನ್ ಜಲಾಗಾರ, ಜೈನ್ ಜಲಾಶಯ, ಮಹಾಸಾಗರ- ಹೀಗೆ ತಲೆಯಿಂದ ಬುಡದವರೆಗೆ ಎಂಟು ಬಾಂದಾರಗಳು ನಿರ್ಮಾಣವಾಗಿದ್ದವು. ಅಲ್ಲಿ ಬಿದ್ದ ನೀರು ಅಲ್ಲಲ್ಲೇ ಇಂಗಿ, ಇಳಿದು ಬಂದು ಬಾಂದಾರಗಳಿಗೆ ಸೇರುವಂತೆ ಅತ್ಯಂತ ವೈಜ್ಞಾನಿಕವಾಗಿ ವ್ಯವಸ್ಥೆಗೊಳಿಸಲಾಗಿತ್ತು. ಒಂದೊಂದೇ ಮೆಟ್ಟಿಲುಗಳ ಮೇಲೆ ಪುಟ್ಟಪುಟ್ಟ ಸಸಿಗಳು ಮೊಳೆಯಲಾರಂಭಿಸಿದ್ದವು. ಜತೆಜತೆಗೇ ಕೃಷಿ ಆರಂಭವಾಯಿತು. ಮೊದಲಿಗೆ ಹುಣಸೆ, ಪೇರಲ, ಸೀತಾಫಲಗಳ ಸಾಲು. ಇವುಗಳಿಗೆ ಸಾಥ್ ನೀಡಿದ್ದು ಹುಲ್ಲು. ಮಣ್ಣು ಸವಕಳಿ ತಡೆಯುವ ಪ್ರಥಮ ಹೊಣೆ ಇವುಗಳದ್ದು. ಬದುಗಳ ಅಂಚಿನಲ್ಲಿ ಸೇರಿಕೊಂಡಿತ್ತು ಬಿದಿರು. ನಂತರದ ಹಂತದಲ್ಲಿ ಮಾವು ಬೇವುಗಳ ಸರದಿ. ಹಾಗೆಯೇ ಬಂದದ್ದು ದಾಳಿಂಬೆ, ಸಪೋಟಾ, ಬಾಳೆ...ಪಟ್ಟಿ ಬೆಳೆಯುತ್ತ ಹೋಯಿತು. ವರ್ಷೊಪ್ಪತ್ತಿನಲ್ಲಿ ಹಸಿರು ಹೆಸರಾಯಿತು.
ಕಷ್ಟಪಟ್ಟು ಕೂಡಿಟ್ಟ ನೀರು, ಒಂದು ಹನಿಯೂ ವ್ಯರ್ಥವಾಗಬಾರದು. ಭಾವು ನೀರಿನ ವಿಚಾರದಲ್ಲಿ ಪಕ್ಕಾ ಮಾರ್ವಾಡಿ. ಕಂಜೂಸ್ ಅಂದರೆ ಕಂಜೂಸ್ (ಅವರೇ ಹೇಳಿಕೊಂಡ ಮಾತು). ಅದಕ್ಕಾಗಿಯೇ ಗುಡ್ಡದ ತುಂಬೆಲ್ಲ ಪೈಪ್ ಹಂದರವನ್ನು ಹರವಿದರು. ಸುತ್ತಲೂ ಹನುಮಂತನ ಬಾಲದಂತೆ ಸುತ್ತಿಕೊಂಡ ಪೈಪ್‌ಗೆ ಅಲ್ಲಲ್ಲಿ ಮರ-ಗಿಡಗಳ ಬುಡಕ್ಕೆ ಸೂಜಿ ಚುಚ್ಚಿ ಬಿಟ್ಟರು. ಬಾಂದಾರಗಳಲ್ಲಿ ತುಂಬಿಕೊಂಡ ನೀರನ್ನು ಮೇಲೆತ್ತಿ ತುಂಬಿಕೊಳ್ಳಲು ತಲಾ ೩.೨೫ ಹಾಗೂ ೨.೭೨ ಲಕ್ಷ ಲೀಟರ್ ಸಾಮರ್ಥ್ಯದ ಎರಡು ಬೃಹತ್ ಟ್ಯಾಂಕ್‌ಗಳನ್ನು ನಿರ್ಮಿಸಲಾಯಿತು. ಅಲ್ಲಿಂದಲೇ ಎಲ್ಲ ಪೈಪ್ ಜಾಲಕ್ಕೆ ಸಂಪರ್ಕ. ಹನಿ ಹನಿಯಾಗಿ ಸಂಗ್ರಹಿಸಿದ ನೀರನ್ನು ಹನಿ ನೀರಾವರಿಯ ಯಶಸ್ವೀ ಪ್ರಯೋಗದ ಮೂಲಕ ಬಳಸಿ ಇಡೀ ಜೈನ್ ಹಿಲ್ ಅನ್ನು ಹಸಿರಾಗಿಸಿದ ಭಾವು ಇಂದು ಇಂಥ ಹತ್ತು ಹಲವು ಹೊಸ ಪ್ರಯೋಗಗಳ ಹರಿಕಾರರಾಗಿ ಹೊರಹೊಮ್ಮಿದ್ದಾರೆ. ಜಲಗಾಂವ್‌ನ ಜೈನ್ ಹಿಲ್ಸ್ ಇಂದು ಮಳೆ ನೀರು ಸದ್ಬಳಕೆ, ತಾರಸೀಕರಣ, ನೀರಿನ ನಿರ್ವಹಣೆ, ಯಶಸ್ವೀ ಕೃಷಿ ಹೀಗೆ ಹಲವು ದೃಷ್ಟಿಯಿಂದ ಅಧ್ಯಯನ ಯೋಗ್ಯ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಿದೆ. ದೇಶದ ಮೂಲೆ ಮೂಲೆಗಳಿಂದ ರೈತರು ಬಂದು ಯಶೋಗಾಥೆಯನ್ನು ಕಣ್ಣಾರೆ ಕಂಡು, ತರಬೇತಿಯನ್ನೂ ಪಡೆದು ಹೊಸ ಕನಸಿನೊಂದಿಗೆ ತಮ್ಮೂರಿಗೆ ಮರಳುತ್ತಿದ್ದಾರೆ, ಕಂಡ ಕನಸನ್ನು ತಂತಮ್ಮ ನೆಲದಲ್ಲಿ ಬಿತ್ತಿ ನೀರ ಸ್ವಾವಲಂಬನೆಯ ಫಸಲನ್ನು ಪಡೆಯುತ್ತಿದ್ದಾರೆ. ಈಗ ಮತ್ತೆ ಜೈನ್ ಹಿಲ್ ತುಂತುರು ಮಳೆಗಾಗಿ ಕಾಯುತ್ತಿದೆ. ಭಾವೂ ಆ ಕ್ಷಣಕ್ಕಾಗಿ ನಿರಕಿಸುತ್ತಿದ್ದಾರೆ.

‘ಲಾಸ್ಟ್’ ಡ್ರಾಪ್: ಪುಟ್ಟ ಕನಸು, ದಿಟ್ಟ ಕ್ರಾಂತಿ-ಭವರ್ ಲಾಲ್ ಸಾರಥ್ಯದ ಜೈನ್ ಇರಿಗೇಶನ್‌ನ ಯಶೋಗಾಥೆಯ ಹಿಂದಿನ ಪ್ರೇರಣಾ ವಾಕ್ಯವಿದು. ನೀರೆಚ್ಚರಕ್ಕೆ ಹೊಂದುವ ಈ ಮಾತು ಎಷ್ಟೊಂದು ಅರ್ಥಪೂರ್ಣ !

Friday, February 6, 2009

‘ಭಾವು’ಕತೆಯ ಫಲ:ಹಸಿರಾದ ಜಲಗಾಂವ್ ನೆಲ

ದ್ಯಾವ ಪುಣ್ಯಾತ್ಮ ಆ ಊರಿಗೆ ‘ಜಲಗಾಂವ್’ ಎಂಬ ಹೆಸರಿಟ್ಟನೋ, ಏನೋ ! ನೀರೆಂಬ ಪದಕ್ಕೇ ಅಪವಾದ ಅದು. ನೀರೊಂದನ್ನು ಬಿಟ್ಟು ಉಳಿದೆಲ್ಲವೂ ಅಲ್ಲಿ ಹೇರಳವಾಗಿದೆ. ಮಳೆ ಸಾಕಷ್ಟು ಬರುವುದಿಲ್ಲ; ಎಂಬುದನ್ನು ಮರೆತು ಬಿಟ್ಟರೆ ಚಳಿ, ಬಿಸಿಲಿಗೆ ಕೊರತೆ ಇಲ್ಲ. ಕೊರತೆಯೇನು ಬಂತು, ಸಾಕು ಸಾಕೆನಿಸುವಷ್ಟು ಅವು ಕಾಡುತ್ತವೆ ಎಂದೇ ಹೇಳ ಬೇಕು. ಋತುಮಾನದಲ್ಲಿ ಎಕ್ಸಟ್ರೀಮ್ ಅನ್ನೋದನ್ನು ನೋಡಬೇಕಿದ್ದರೆ ಜಲಗಾಂವ್‌ಗೆ ಬಂದರಾಯಿತು. ಚಳಿ ಎಂಬುದನ್ನು ನೆನೆಸಿಕೊಂಡೇ ಅಲ್ಲಿನ ಜನ ನಡುಗುತ್ತಾರೆ. ಮೈನಸ್ ೭ ಡಿಗ್ರಿ ಸೆಲ್ಸಿಯಸ್‌ಗೆ ಹೋದರೂ ‘ಈ ವರ್ಷ ಚಳಿ ಕಡಿಮೆ’ ಎಂದುಕೊಳ್ಳುವ ಪರಿಸ್ಥಿತಿ ಬರುತ್ತದೆಂದರೆ ಶಿಶಿರದ ರಾತ್ರಿಗಳು ಅಲ್ಲಿ ಹೇಗಿರುತ್ತವೆ ಎಂಬುದನ್ನು ಊಹಿಸಿಕೊಳ್ಳಿ. ಹಾಗೆಯೇ ‘ಬೇಸಿಗೆ’ ಎಂಬ ಪದವೇ ಚರ್ಮದ ರಂಧ್ರ-ರಂಧ್ರಗಳಲ್ಲಿ ನೀರೊಡೆಸುತ್ತದೆ. ೪೫ ಡಿಗ್ರಿಯನ್ನೂ ಅಲ್ಲಿನವರೂ ಅನಾಯಾಸವಾಗಿ ಸಹಿಸಿಕೊಳ್ಳುವಷ್ಟು ಹೊಂದಿಕೊಂಡು ಬಿಟ್ಟಿದ್ದಾರೆ. ಮಳೆ ಮಾತ್ರ ಹೆಚ್ಚೆಂದರೆ ವಾರ್ಷಿಕ ೬೫೦ರಿಂದ ೭೫೦ ಮಿಲಿ ಮೀಟರ್‌ನಷ್ಟು.
ಬೆಂಗಳೂರಿನಿಂದ ಆಗಸದಲ್ಲಿ ಹಾರುತ್ತ ಹೋದರೆ ಮೂರೂವರೆ, ನಾಲ್ಕು ತಾಸಿನ ಪಯಣ. ಮಹಾರಾಷ್ಟ್ರದ ಆಚೆ ಗಡಿಯಂಚಿನಲ್ಲಿ ಮಧ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಜಿಲ್ಲಾ ಕೇಂದ್ರವದು. ಬಹುಶಃ ಒಂದಷ್ಟು ಉದ್ಯಮ ಬೆಳೆಯದೇ ಹೋಗಿದ್ದರೆ ಇಂದಿಗೂ ಬ್ರಿಟಿಷರ ಕಾಲದ ಪಳೆಯುಳಿಕೆಯಾಗಿ ಉಳಿದುಬಿಡುತ್ತಿತ್ತೇನೋ. ಹೆಸರಿಗೊಂದು ನದಿ ಹರಿಯುತ್ತದೆ ‘ಗಿರ್‍ನಾ’. ಅದರಲ್ಲಿ ನೀರು ಹರಿಯುತ್ತದೆ ಎನ್ನುವುದಕ್ಕಿಂತ ಕಪ್ಪು ಕಲ್ಲಿನ ಚೂರುಗಳು ಹರಿದು ಹೋಗುತ್ತವೆ ಎನ್ನುವಂತಿದೆ. ಆ ನದಿ ಪಾತ್ರದಲ್ಲಿ ನಿಂತು ಒಮ್ಮೆ ಸುತ್ತಲೂ ಕಣ್ಣಾಡಿಸಿದರೆ ಒಂದಷ್ಟು ಬೋಳುಬೋಳು ಬೆಟ್ಟಗಳ ಸಾಲು. ದೂರದ ಬೆಟ್ಟ ಕಣ್ಣಿಗಷ್ಟೇ ಅಲ್ಲ, ಹತ್ತಿರ ಹತ್ತಿ ಹೋಗಿ ನೋಡಿದರೂ ನುಣ್ಣ-ನುಣ್ಣಗೆ. ಬಹುತೇಕ ಹುಲ್ಲಿನ ಎಸಳೂ ಅಲ್ಲಿ ಬದುಕುಳಿಯಲು ಸಾಧ್ಯವಿಲ್ಲ ಎಂಬಷ್ಟರ ಮಟ್ಟಿಗೆ ಒಣಗಿ ಬೋರಿಡುತ್ತವೆ ಆ ಬೆಟ್ಟಗಳು. ಇಷ್ಟೆ, ಅದು ಬಿಟ್ಟರೆ ಎರಡು-ಮೂರು ದಶಕಗಳ ಹಿಂದೆ ಅದರ ಬಗ್ಗೆ ಹೇಳಿಕೊಳ್ಳಲು ಬೇರೇನೂ ಇರಲೇ ಇಲ್ಲ.
ಆದರೂ ಆ ಊರಿಗೆ ಹೆಸರು ಜಲಗಾಂವ್- ನೀರಿನ ಹಳ್ಳಿ. ಅಲ್ಲಿನ ನೆಲದ ಮೇಲೆ ಕಾಲೂರುವವರೆಗೆ ಅಲ್ಲಿ ನೀರು ಸಮೃದ್ಧವಾಗಿರಬಹುದು ಎಂದೇ ಅಂದುಕೊಂಡಿದ್ದರೆ ಅದು ಹೆಸರಿನಲ್ಲಾದ ಮೋಸ. ಬಹುಶಃ ಅದು ‘ಝಳಗಾಂವ್’ ಎಂದಾಗಿದ್ದರೆ ಸರಿಯಾಗುತ್ತಿತ್ತೇನೋ ! ಅಲ್ಲಿನ ಬಿಸಿಲಿನ ಝಳ ನೋಡಿದರೆ ಅದೇ ಸೂಕ್ತ ಹೆಸರು. ಅಂಥ ಉರಿಯುರಿಯಲ್ಲಿ ಇಂದು ತಣ್ಣನೆಯ ಗಾಳಿ ಬೀಸುತ್ತಿದೆ. ತಂಪು ತಂಪು ಬದುಕು ಅರಳುತ್ತಿದೆ. ನೀರು ಮನೆ ಮಾಡಿಕೊಳ್ಳಲು ಆರಂಭಿಸಿದೆ. ಅದರ ಬೆನ್ನಿಗೇ ಹಸಿರು ವಲಸೆ ಬಂದಿದೆ. ನುಣ್ಣನೆಯ ಬೆಟ್ಟದಲ್ಲಿ ಇಂದು ಕುರುಚಲು ಮಾತ್ರವಲ್ಲ, ಬೋಳು ತಲೆಗೆ ಕೂದಲು ಕಸಿ ಮಾಡಿ ನಿಲ್ಲಿಸಿದಂತೆ ಒಂದಷ್ಟು ಮರಗಿಡಗಳೂ ನಲಿದಾಡುತ್ತಿವೆ.
‘ಜಲಗಾಂವ್’ನ ಹೆಸರನ್ನು ಅನ್ವರ್ಥಗೊಳಿಸಲಾರಂಭಿಸಿದ್ದು ರೈತ ಕುಟುಂಬದ ಹಿನ್ನೆಲೆಯಲ್ಲಿ ಹುಟ್ಟಿದ ಒಂದು ಕಾಲದ ಸೀಮೆ ಎಣ್ಣೆ ವ್ಯಾಪಾರಿ, ಇಂದಿನ ಸಾವಿರಾರೂ ಕೋಟಿ ರೂ. ಮೌಲ್ಯದ ‘ಜೈನ್ ಇರಿಗೇಷನ್’ ಎಂಬ ಸಾಮ್ರಾಜ್ಯದ ಅಪತಿ ! ನೀರಿಗಾಗಿನ ರೈತರ ಪರದಾಟಕ್ಕೊಂದು ಕೊನೆಗಾಣಿಸಲೇಬೇಕೆಂಬ ಅಸೀಮ ಇಚ್ಛಾ ಶಕ್ತಿಯ ಫಲ ಇಂದು ಕೊಯ್ಲಿಗೆ ಬರುತ್ತಿದೆ ಎಂಬುದನ್ನು ಕಂಡರೆ ನೀರ ಪ್ರೇಮಿಗಳ ರೋಮ ರೋಮಗಳೂ ನಿಗುರಿ ನಿಲ್ಲುತ್ತವೆ. ಅದರ ಹಿಂದಿರಬಹುದಾದ ಭವರ್‌ಲಾಲ್ ಜೈನ್ ಎಂಬ ೭೦ರ ಯುವಕನ ಕ್ರಿಯಾಶೀಲತೆಗೆ ಅವರ ತಲೆ ಬಾಗುತ್ತದೆ.
ಸುಮ್ಮನೆ ಹೇಳುವುದಲ್ಲ. ಶುಭ್ರ ಶ್ವೇತ ವಸ್ತ್ರಧಾರಿ, ಅಷ್ಟೇ ಬೆಳ್ಳಂಬೆಳ್ಳಗಿನ ಮನಸ್ಸಿನ ಆ ಸರಳ ವ್ಯಕ್ತಿ ಇಷ್ಟೆಲ್ಲ ಸಾಸಿದ್ದು ಎಲ್ಲವೂ ಇಟ್ಟುಕೊಂಡಲ್ಲ. ಇಂದು ಜಲಗಾಂವ್‌ನ ಜೈನ್ ಹಿಲ್ಸ್‌ಗೆ ಹಚ್ಚ ಹಸಿರು ಹಚ್ಚಡ ಹೊದಿಸಿ ಮಲಗಿಸಿದ್ದು ಹಣದ ಥೈಲಿಯನ್ನು ಬಗಲಲ್ಲಿಟ್ಟುಕೊಂಡಲ್ಲ. ಹಾಗೆ ನೋಡಿದರೆ ‘ಭಾವು’ ( ಜೈನ್ ಸಮೂಹದ ನೌಕರರು, ಸುತ್ತಲಿನ ರೈತರು ಅವರನ್ನು ಪ್ರೀತಿಯಿಂದ ಹಾಗೆಯೇ ಕರೆಯುತ್ತಾರೆ, ಮರಾಠಿಯಲ್ಲಿ ಬಾವು ಎಂದರೆ ಅಣ್ಣ ಎಂದರ್ಥ) ಸರಕಾರ ತಿಂಗಳ-ತಿಂಗಳು ಕೊಡುವ ಪಗಾರ, ಕಾರು, ಮುಂಬೈನಲ್ಲೊಂದು ಬಂಗಲೆ, ಫೋನು, ಫ್ಯಾನಿನ ನಡುವೆ ತಣ್ಣಗಿದ್ದು ಬಿಡಬಹುದಿತ್ತು. ಮಹಾರಾಷ್ಟ್ರ ನಾಗರಿಕ ಸೇವೆಗೆ ಆಯ್ಕೆಯಾಗಿದ್ದ ಭಾವುಗೆ ತಮ್ಮ ಕರ್ತೃತ್ವ ಶಕ್ತಿಗೆ ಅದು ತೀರಾ ಚಿಕ್ಕದೆನಿಸಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ತಾವು ಹುಟ್ಟಿ ಬೆಳೆದ ನೆಲದ ಬದುಕನ್ನು ಹಸಿಹಸಿಯಾಗಿ ಕಟ್ಟಿ ನಿಲ್ಲಿಸಬೇಕೆಂಬ ಅದಮ್ಯ ಕನಸು ಅವರನ್ನು ಕೂರಗೊಡಲಿಲ್ಲ. ಸರಕಾರಿ ಸೇವೆಯನ್ನು ಎಡಗೈಯಿಂದ ತಳ್ಳಿ, ದುಮುಕಿದ್ದು ವ್ಯಾಪಾರಕ್ಕೆ. ಅವರೇ ಹೇಳಿಕೊಳ್ಳುವಂತೆ ಹೇಳಿಕೇಳಿ ಅವರದ್ದು ಮಾರ್‍ವಾಡಿ ಮನೋಭಾವ. ವ್ಯಾಪಾರದ ಹೊರತಾಗಿ ಉಳಿದ್ಯಾವುದೂ ಆ ಮನಸ್ಸಿಗೆ ರುಚಿಸುವುದಿಲ್ಲವಂತೆ.
ಎಣ್ಣೆ-ನೀರಿಗೆ ಎಲ್ಲಿಗೆಲ್ಲಿಯ ಸಂಬಂಧ ? ಇಂದು ಜೈನ್ ಹಿಲ್ಸ್‌ನಲ್ಲಿ ನೀರ ನಿರ್ವಹಣೆಯ ಪಕ್ಕಾ ಮಾದರಿಯನ್ನು ಕಟ್ಟಿ ನಿಲ್ಲಿಸಿರುವ ಭಾವು, ಮೊದಲಿಗೆ ಆರಂಭಿಸಿದ್ದು ಸೀಮೆ ಎಣ್ಣೆ ವ್ಯಾಪಾರವನ್ನು, ಅದೂ ಅಮ್ಮನಿಂದ ಸಾಲವಾಗಿ ಪಡೆದ ಐದು ಸಾವಿರ ರೂ.ಗಳ ನೆರವಿನೊಂದಿಗೆ. ರೈತನ ಮಗನಾಗಿ ಹುಟ್ಟಿದ್ದು ಅವರನ್ನು ಮಣ್ಣಿನ ಪ್ರೀತಿಯೆಡೆಗೆ ಸಹಜವಾಗಿ ಸೆಳೆಯುತ್ತಲೇ ಇತ್ತು. ಅದು ೧೯೭೨-೭೪ರ ಅವ. ಪರಂಪರಾನುಗತವಾಗಿ ಬಂದಿದ್ದ ಜಮೀನಿನಲ್ಲಿ ಒಂದಷ್ಟು ಕೃಷಿ ಕಾಯಕವನ್ನೂ ಜತೆಗೂಡಿಸಿಕೊಂಡರು. ಹೈಬ್ರಿಡ್ ಹತ್ತಿ, ಖಾರ ಖಾರ ಮೆಣಸಿನ ಕಾಯಿ, ಝಗಮಗಿಸುವ ಜೋಳ...ಇವೇ, ಆ ಗಾರು ಬಿದ್ದೆದ್ದ ನೆಲದಲ್ಲಿ ಅಂಥವನ್ನುಳಿದು ಬೇರೇನು ಬೆಳೆಯಲು ಸಾಧ್ಯ ? ಅದಕ್ಕಾದರೂ ಒಂದಷ್ಟು ನೀರು ಬೇಕಲ್ಲ ?
ಕೃಷಿ-ಕೃಷಿಕ-ಕೃಷಿ ಭೂಮಿಯ ನಡುವಿನ ಬಂಧವನ್ನು ಗಟ್ಟಿಗೊಳಿಸಬೇಕೆಂಬ ಹೆಬ್ಬಯಕೆ ಹುಟ್ಟಿದ್ದೇ ಆವಾಗ. ಚಿಂತನೆ ಅನುಕ್ಷಣದ ಚಿಂತೆಯಾಗತೊಡಗಿತು. ಏನಾದರೂ ಮಾಡಲೇಬೇಕು; ಅದು ಅತೃಪ್ತ ಸಾಧಕನೊಬ್ಬನ ಛಲ. ಮಾಡಿಯೇ ತೀರುತ್ತೇನೆ; ಅದರ ಹಿಂದೆ ಪಡಮೂಡಿದ ಫಲ. ಜಮೀನಲ್ಲೊಂದು ಬಾವಿ, ಅದರಲ್ಲೊಂದಿಷ್ಟು ನೀರೂ ಬಿತ್ತೆನ್ನಿ. ಹೆಚ್ಚೇನೂ ಫಲ ನೀಡಲಿಲ್ಲ. ಆಗ ಆದದ್ದು ಸತ್ಯದ ದರ್ಶನ- ಇದು ಈ ಭಾಗದ ಎಲ್ಲ ರೈತನ ಬವಣೆ. ಸಾಂಪ್ರದಾಯಿಕ ಮಳೆಯಾಧಾರಿತ ನೀರಾವರಿಯಿಂದ ಭಿನ್ನ ಪದ್ಧತಿಯೊಂದನ್ನು ಕಂಡುಕೊಳ್ಳಬೇಕೆಂದು ಹೊರಟದ್ದು ಮಥನದ ಅಂತಿಮ ಘಟ್ಟದಲ್ಲಿ ಹೊಳೆದ ಜ್ಞಾನದ ಬೆಳಕು. ತಲೆಮಾರುಗಳ ಸುದೀರ್ಘ ಅನುಭವದ ಆಧಾರದಲ್ಲಿ ಪ್ರಸ್ತುತ ಸನ್ನಿವೇಶದ ವಾಸ್ತವದ ಮೇಲೆ ಬಾವು, ಭವ್ಯ ಭವಿಷ್ಯ ಬರೆಯಲು ಹೊರಟು ನಿಂತಿದ್ದರು ಜೋಡೆತ್ತಿನ ಗಾಡಿಯ ಮೇಲೆ.
೧೯೮೭-೮೮ರ ಅವ, ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಭವರ್‌ಲಾಲ್ ಭಾವು, ಖಾಂದೇಶ್ ವಲಯದಲ್ಲಿ ಹನಿ ನೀರಾವರಿ ಸಂಬಂಧ ಖಾಸಗೀ ಸಂಸ್ಥೆಯೊಂದನ್ನು ಹುಟ್ಟು ಹಾಕಿದರು. ಅವರಿಗೆ ಚೆನ್ನಾಗಿ ಗೊತ್ತಿತ್ತು, ಒಂದೇ ನೆಗೆತದಲ್ಲಿ ರೈತರಲ್ಲಿ ಈ ಬಗ್ಗೆ ನಂಬಿಕೆ ಹುಟ್ಟಿಸಲು ಸಾಧ್ಯವಿಲ್ಲ ಎಂಬುದು. ಅದಕ್ಕಾಗಿ ಜಲಗಾಂವ್ ಸಮೀಪ ಪ್ರಾತ್ಯಕ್ಷಿಕೆ ಘಟಕವೊಂದನ್ನು ಸ್ಥಾಪಿಸಿದರು. ಇನ್ನೂ ಸಮಾಧಾನವಾಗಲಿಲ್ಲ. ಎಲ್ಲವೂ ರೈತರಿಗೆ ಅರ್ಥವಾಗಬೇಕಿದ್ದರೆ ಬೋಳು ಬೆಟ್ಟದ ಮೇಲೊಂದು ಬೆಟ್ಟದಷ್ಟೇ ದೊಡ್ಡ ಸಾಧನೆಯನ್ನು ಮಾಡಿಯೇ ತೋರಿಸಬೇಕು. ದಕ್ಷಿಣ ಜಲಗಾಂವ್‌ನ ಪುಟ್ಟದೊಂದು ಹಳ್ಳಿ ಶಿರ್ಸೋಳಿ. ಖುಲ್ಲಂಖುಲ್ಲ ಸಾವಿರ ಎಕರೆಯಷ್ಟು ವಿಸ್ತಾರದ ಒಂದಿಡೀ ಗುಡ್ಡವನ್ನು ಖರೀದಿಸಿಯೇ ಬಿಟ್ಟರು. ಎಲ್ಲರೂ ದೇವರಾಣೆ ಈ ಮನುಷ್ಯನಿಗೆ ತಲೆ ಕೆಟ್ಟಿರಬೇಕೆಂದುಕೊಂಡಿದ್ದರೆ ಅಂದುಕೊಂಡವರ ಅಪರಾಧ ಏನೂ ಇಲ್ಲ. ಹಾಗಿತ್ತು ಆ ಗುಡ್ಡ. ಭೂತಗಾಜು ಹಾಕಿ ಹುಡುಕಿದರೂ ಅಲ್ಲಿ ನೀರ ಪಸೆಯೂ ಸಿಗುವುದಿಲ್ಲ ಎಂಬ ಸ್ಥಿತಿಯಲ್ಲಿದ್ದ ಆ ನೆಲವನ್ನು ಕೊಂಡುಕೊಂಡಾದರೂ ಏನು ಮಾಡುತ್ತಾರೆ ಎಂಬುದು ಸಹಜ ಪ್ರಶ್ನೆ.
ಇಂಥ ನೂರು ಪ್ರಶ್ನೆಗಳಿಗೆ ಉತ್ತರ ಕೊಡುವ ವಿಶ್ವಾಸವನ್ನು ತುಂಬಿಕೊಂಡೇ ಭಾವು, ಈ ಗುಡ್ಡಕ್ಕೆ ಕಾಲಿಟ್ಟಿದ್ದರು. ಆದರೆ ಅಂಥ ಯಶಸ್ಸಿನ ಬೆಟ್ಟ ಹತ್ತುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಏಕೆಂದರೆ ಕನಿಷ್ಠ ಎತ್ತಿನ ಬಂಡಿ ಹೋಗಬಲ್ಲ ಹಾದಿಯೂ ಅಲ್ಲಿರಲಿಲ್ಲ. ೬೦೦ ರಿಂದ ೯೫೦ ಅಡಿ ಎತ್ತರದ ಆ ಗುಡ್ಡ ಶ್ರೇಣಿಯಲ್ಲಿ ಮಾಡಬೇಕಿದ್ದ ಮೊದಲ ಕೆಲಸ, ಬೀಳುವ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಬೇಕಿದ್ದುದು. ಯಶೋಗಾಥೆಯ ಮೊದಲ ಅಧ್ಯಾಯ ಆರಂಭವಾಗುವುದೇ ಇಲ್ಲಿಂದ. ಮೊದಲಿಗೆ ಸುಮಾರು ೨೦೦ರಿಂದ ೪೦೦ ಲೀಟರ್ ಸಾಮರ್ಥ್ಯದ ಪುಟ್ಟ ಪಾಳು ಬಾವಿಯೊಂದು ಅಲ್ಲಿ ಕಂಡು ಬಂತು. ಅದನ್ನೊಂದಿಷ್ಟು ಸ್ವಚ್ಛಗೊಳಿಸಿಕೊಂಡರೂ ಹೇಳಿಕೊಳ್ಳುವಂಥ ನೀರು ಸಿಗಲಿಲ್ಲ. ಕೊರೆದ ಬೋರ್‌ವೆಲ್ ಹೆಚ್ಚು ದಿನ ಮಾತಾಡಲಿಲ್ಲ. ಇಂಥವುಗಳಿಂದ ಅಂದುಕೊಂಡಿದ್ದನ್ನೆಲ್ಲ ಸಾಸಲಾಗುವುದಿಲ್ಲ ಎಂಬ ಅರಿವೂ ಇತ್ತು.
ನೀರಿಗಾಗಿ ಎರಡು ಆಯ್ಕೆಗಳು ಭಾವು ಮುಂದಿದ್ದವು. ಮೊದಲನೆಯದು ಗಿರ್‍ನಾ ನದಿಯಿಂದ ಐದು ಕಿ.ಮೀ. ವರೆಗೆ ನೀರನ್ನು ಏತದ ಮೂಲಕ ತರುವುದು. ಇನ್ನೊಂದು ಇಡೀ ಗುಡ್ಡವನ್ನೇ ಮಳೆ ನೀರು ಸಂಗ್ರಹಾಗಾರವನ್ನಾಗಿ ಪರಿವರ್ತಿಸುವುದು. ಗಿರ್‍ನಾ ನದಿ ದಂಡೆಯ ನಜ್ಗಿರಿ ಎಂಬಲ್ಲಿ ಸುಸಜ್ಜಿತ ಪಂಪ್ ಹೌಸ್ ನಿರ್ಮಿಸಿ ಮೊದಲನೆ ಆಯ್ಕೆಯ ಅನುಷ್ಠಾನಕ್ಕೆ ಎಲ್ಲವೂ ಸಜ್ಜಾಯಿತು. ನೀರೂ ಬಂತು. ಆದರೆಷ್ಟು ದಿನ. ಎತ್ತಿಕೊಂಡು ಬರಲು ನದಿಯಲ್ಲಾದರೂ ನೀರು ಬೇಡವೇ ?
೧೯೯೦ ರ ಸುಮಾರಿಗೆ ಜೈನ್ ಹಿಲ್‌ನಲ್ಲಿ ಆರಂಭವಾದದ್ದು ನಿಜವಾದ ನೀರ ಸಾಮ್ರಾಜ್ಯ ಕಟ್ಟುವ ಕಾಯಕ. ಇಡೀ ಗುಡ್ಡವನ್ನು ‘ಲ್ಯಾಂಡ್ ಶೇಪಿಂಗ್‘(ಟೆರೇಸಿಂಗ್-ತಾರಸೀಕರಣ) ಎಂಬ ಅತ್ಯಂತ ವೈಜ್ಞಾನಿಕ, ಅಷ್ಟೇ ಕಠಿಣ ಪ್ರಕ್ರಿಯೆಗೆ ಒಳಪಡಿಸಲಾಯಿತು. ಇಳಿಜಾರು ಮೈಯನ್ನು ಕಡಿದೂ ಕಡಿದು ಮೆಟ್ಟಿಲುಗಳ ಮಾದರಿಯಲ್ಲಿ ತಲೆಯಿಂದ ಬುಡದವರೆಗೆ ಪರಿವರ್ತಿಸಲಾಯಿತು. ಅಲ್ಲಲ್ಲಿ ಮೆಟ್ಟಿಲುಗಳ ಮೇಲಿ ಬಿದ್ದಿಳಿದು ಬರುವ ಮಳೆ ನೀರನ್ನು ಹಿಡಿದಿಟ್ಟುಕೊಂಡು ಇಂಗಿಸಲು ಜಲಪಾತ್ರೆಗಳ ( ಬಾಂದಾರಗಳ ಮಾದರಿಯಲ್ಲಿ) ನಿರ್ಮಾಣ. ಮೊದಲಿಗೆ ಪುಟ್ಟ ಪುಟ್ಟ ಬಾಂದಾರಗಳ ರಚನೆ. ತಾರಸೀಕರಣದ ಫಲವನ್ನುಂಡು ಮೊದಲು ತುಂಬಿಕೊಂಡದ್ದು ಇಂದು ಜೈನ್ ಸಾಗರ ಎಂದು ಗುರುತಿಸಿಕೊಳ್ಳುವ ೧೨.೫ ಕೋಟಿ ಲೀಟರ್ ಸಾಮರ್ಥ್ಯದ ಬಾಂದಾರ. ೧೯೯೩ ರಿಂದ ನಾಲ್ಕು ವರ್ಷಗಳ ಅವಯಲ್ಲಿ ಇಂಥ ಪುಟ್ಟ, ದೊಡ್ಡ ಇನ್ನೂ ನಾಲ್ಕು ಬಾಂದಾರಗಳನ್ನು ನಿರ್ಮಿಸಲಾಯಿತು. ಅಲ್ಲಿ ತುಂಬಿಕೊಳ್ಳುವ ನೀರನ್ನು ಮೇಲೆತ್ತಿ ಗುಡ್ಡದ ನೆತ್ತಿಯ ಮೇಲೆ ನಿರ್ಮಿಸಲಾದ ೩.೨೫ ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕ್‌ನಲ್ಲಿ ಸಂಗ್ರಹಿಸಿಕೊಳ್ಳುವಂತೆ ವ್ಯವಸ್ಥೆಗೊಳಿಸಲಾಯಿತು. ಆ ಟ್ಯಾಂಕ್‌ನಿಂದ ಇಡೀ ಗುಡ್ಡಕ್ಕೆ ಹನಿ ನೀರಾವರಿಯ ಪೈಪ್‌ನ ನರಜಾಲವನ್ನು ಬೆಸೆಯಲಾಯಿತು.
ಈಗ ಎಲ್ಲವೂ ಸುಸೂತ್ರ. ಮೇಲೆ ಬಿದ್ದ ಮಳೆ ನೀರು ಮೆಟ್ಟಿಲು ಸಂರಚನೆಗಳಲ್ಲಿ ಅಷ್ಟಿಷ್ಟು ಇಂಗುತ್ತಾ ಬಾಂದಾರಗಳಲ್ಲಿ ಸಂಗ್ರಹಗೊಳ್ಳುತ್ತದೆ. ಅಲ್ಲಿಂದ ಪಂಪ್‌ನಿಂದ ಮೇಲಿನ ಟ್ಯಾಂಕ್‌ಗೆ ಹೋಗುತ್ತೆ. ಟ್ಯಾಂಕ್‌ನಿಂದ ಗುರುತ್ವಾಕರ್ಷಣ ಕ್ರಿಯೆಗೊಳಪಟ್ಟು ಪೈಪ್ ಜಾಲಗಳಲ್ಲಿ ಹೊಕ್ಕು ಹನಿ ಹನಿಯಾಗಿ ಇಡೀ ಗುಡ್ಡಕ್ಕೆ ಚಿಮ್ಮುತ್ತದೆ. ಇನ್ನು ಹಸಿರಾಗದೇ ಉಳಿದೀತೆ ಬೋಳುಗುಡ್ಡ. ಇಂದು ಜೈನ್ ಹಿಲ್‌ನಲ್ಲಿ ಏನಿದೆ, ಏನಿಲ್ಲ ಎಂದು ಕೇಳಿ. ಮಾವು, ಬೇವು, ಪೇರಲ, ಚಿಕ್ಕು, ದಾಳಿಂಬೆ, ಸೀತಾಫಲ, ಹೂವು, ತರಕಾರಿ...ಎಲ್ಲವೆಂದರೆ ಎಲ್ಲವೂ ನಳನಳಿಸುತ್ತಿವೆ. ಎಲ್ಲಕ್ಕಿಂತ ಹೆಚ್ಚಾಗಿ ದೂರಕ್ಕೆ ನಿಂತು ನೋಡಿದರೂ ಬೆಟ್ಟದ ಹಸಿರು ಕಣ್ಣಿಗೆ ಕುಕ್ಕುತ್ತದೆ. ಭಾವು, ಆ ಸ್ವರ್ಗ ಸದೃಶ ಭೂಮಿಯಲ್ಲಿ, ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿಯೂ ತಣ್ಣನೆಯ ನಗೆ ಚೆಲ್ಲುತ್ತ ಓಡಾಡಿಕೊಂಡಿದ್ದಾರೆ. ನಗುವಿನ ಹಿಂದಿನ ಹೆಮ್ಮೆಯ ಬೆಳಕು ಇಡೀ ವಾತಾವರಣದಲ್ಲಿ ಪ್ರತಿಫಲಿಸುತ್ತಿದೆ.
ಲಾಸ್ಟ್‌ಡ್ರಾಪ್: ಭವರ್ ಲಾಲ್ ಜೈನ್‌ರದ್ದು ಹನಿ ಹನಿ ಕಾ ಪ್ರೇಮ್ ಕಹಾನಿ ಎನ್ನಬಹುದೇ ?