Friday, January 8, 2010

ನೀರೆಚ್ಚರದ ದರ್ಶನ ಮಾಡಿಸುವ ವಿಶಿಷ್ಟ ದಿನದರ್ಶಿಕೆ

ನೀರ ಗೆಳೆಯ ಮಲ್ಲಿ ಬಗ್ಗೆ ಇದಕ್ಕೇ ಒಂಥರಾ ಹೊಟ್ಟೆ ಕಿಚ್ಚು ಬರುತ್ತದೆ. ಆತ ಏನಾದರೂ ಮಾಡುತ್ತಲೇ ಇರುತ್ತಾನೆ ಮತ್ತು ಮಾಡಿದ್ದು ಒಂದಲ್ಲಾ ಒಂದು ರೀತಿಯಲ್ಲಿ ವಿಭಿನ್ನವಾಗಿರುತ್ತದೆ. ನೋಡಿದರೆ ಆ ಮನುಷ್ಯ ಇಷ್ಟೆಲ್ಲ ಕ್ರಿಯೇಟಿವ್ ಇದ್ದಾನೆ ಅನ್ನಿಸಲಿಕ್ಕೇ ಸಾಧ್ಯವಿಲ್ಲ. ಆದರೆ ಆತ ಮಾಡುವ ಕೆಲಸವಿದೆಯಲ್ಲಾ...ನಿಜಕ್ಕೂ ಬೆರಗು ಹುಟ್ಟಿಸುತ್ತದೆ. ಮಾತ್ರವಲ್ಲ ಖಂಡಿತಾ ಸಣ್ಣದೊಂದು ಮತ್ಸರವನ್ನೂ ಮೂಡಿಸುತ್ತದೆ. ಏಕೆಂದರೆ ಆತ ಇದನ್ನೆಲ್ಲ ಮಾಡುತ್ತಿರುವುದು ಯಾವುದೋ ಕಾರ್ಪೊರೇಟ್ ಸಂಸ್ಥೆಯಲ್ಲಿದ್ದುಕೊಂಡಲ್ಲ. ಯಾವುದೋ ಹೈಫೈ ಸಿಟಿಯಲ್ಲಿ ಕುಳಿತಲ್ಲ. ತನ್ನ ಪಾಡಿಗೆ ತಾನು ಹಳ್ಳಿಯ ಮೂಲೆಯೊಂದರಲ್ಲಿ ಸೇರಿಕೊಂಡು, ನೀರು-ನೆರಳು ಅಂತ ಗುದ್ದಾಡುತ್ತಲೇ ತಣ್ಣಗೆ ಒಂದು ಅಚ್ಚರಿಯನ್ನು ನಮ್ಮ ಮುಂದಿಟ್ಟು ಬಿಡುತ್ತಾನೆ.

ಆತನನ್ನು ಹೊಗಳಬೇಕು ಅಂತ ಹೊಗಳುತ್ತಿಲ್ಲ. ಬೇಕಿದ್ದರೆ ನೀವು ಈ ಬಾರಿ ಆತನೇ ಹುಟ್ಟುಹಾಕಿದ ‘ಜಲಸಿರಿ’ ಅನ್ನುವ ನೀರ ಪತ್ರಿಕೆಯಿಂದ ಹೊರತಂದ ಹೊಸವರ್ಷದ ಕ್ಯಾಲೆಂಡರ್ ಅನ್ನು ನೋಡಿ. ಅದೆಷ್ಟು ಮುದ್ದಾಗಿದೆ, ಎಷ್ಟು ಮಾಹಿತಿ ಪೂರ್ಣವಾಗಿದೆ ಎಂದರೆ ಈ ಅಂಕಣದಲ್ಲಿ ಅದರ ಬಗ್ಗೆ ಬರೆಯುತ್ತಿರುವುದಕ್ಕೆ ನನಗೇ ಹೆಮ್ಮೆ ಅನ್ನಿಸುತ್ತಿದೆ.


ಅಷ್ಟಕ್ಕೂ ಮಲ್ಲಿ ಅಂತ ಪ್ರೀತಿಯಿಂದ ಕರೆಯುವ ಈ ನೀರ ನೇಹಿಗನ ಪೂರ್ತಿ ಹೆಸರು ಹೇಳುವುದನ್ನೇ ಮರೆತಿದ್ದೆ. ಆತ ಮಲ್ಲಿಕಾರ್ಜುನ ಹೊಸಪಾಳ್ಯ ಅಂತ. ಸದ್ಯಕ್ಕೆ ತುಮಕೂರಿನಲ್ಲಿ ಧಾನ್ಯ ಅಂತ ಒಂದು ಸಂಸ್ಥೆಯನ್ನು ಮಾಡಿಕೊಂಡು ಕೃಷಿ, ನೀರು ಹೀಗೆ ಒಂದಷ್ಟು ವಿಷಯದ ಬಗ್ಗೆ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿದ್ದಾನೆ. ನಿಮಗೆ ನೆನಪಿರಬಹುದು, ಈಗ್ಗೆ ಕೆಲವು ತಿಂಗಳ ಕೆಳಗೆ ತಲಪರಿಕೆ ಎಂಬ ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆಯೊಂದರ ಬಗ್ಗೆ ಮಧುಗಿರಿ ಸುತ್ತಮುತ್ತ ಒಂದಷ್ಟು ಸಂಶೋಧನೆ ನಡೆಸಿ, ಒಂದಿಡೀ ದಿನ ವಿಚಾರ ಸಂಕಿರಣವನ್ನೂ ಏರ್ಪಡಿಸಿ, ಆ ಬಗ್ಗೆಯೇ ಒಂದು ಸುಂದರ ಹೊತ್ತಗೆಯನ್ನು ಹೊರತಂದಿದ್ದ ಮಲ್ಲಿ. ಅದೇ ಮನುಷ್ಯ ಇವತ್ತು ಹೊಸವರ್ಷಕ್ಕೊಂದು ಹಸಿಹಸಿಯಾದ ಕ್ಯಾಲೆಂಡರ್ ಅನ್ನೂ ಸಂಪಾದಿಸಿ ಅಚ್ಚುಕಟ್ಟಾಗಿ ಅಚ್ಚು ಹಾಕಿಸಿ ನಿಮ್ಮ ಮುಂದಿಟ್ಟಿದ್ದಾನೆ. ಜಲಸಿರಿಯ ಹೆಸರಿನಲ್ಲೇ ದಿನದರ್ಶಿಕೆ ಹೊರ ಬಂದಿದೆ. ಮೊದಲಪುಟವೇ ಅತ್ಯಾಕರ್ಷಕ. ದೂರದ ಗುಜರಾತ್‌ನಲ್ಲಿ ದಾರಿಹೋಕರ ದಾಹ ತಣಿಸಲು ಇಂದಿಗೂ ಗ್ರಾಮೀಣ ಭಾಗದಲ್ಲಿ ಪ್ರಚಲಿತದಲ್ಲಿರುವ ‘ಪ್ಯಾವೋ’ ಎಂಬ ವಿಶಿಷ್ಟ ಪದ್ಧತಿಯ ಅಪರೂಪದ ಚಿತ್ರ ಮುಖಪುಟದಲ್ಲಿ ರಾರಾಜಿಸುತ್ತಿದೆ. ಕರ್ನಾಟಕದ ನೀರ ಸಾಧಕ ಶ್ರೀ ಪಡ್ರೆ ತಮ್ಮ ಗುಜರಾತ್ ಪ್ರವಾಸ ಸಂದರ್ಭದಲ್ಲಿ ತೆಗೆದ ಚಿತ್ರ ಅದು. ವೃದ್ಧೆಯೊಬ್ಬಳು ನಗುನಗುತ್ತಾ ಯುವಕನೊಬ್ಬನಿಗೆ ತಾಮ್ರದ ಚೊಂಬಿನಿಂದ ನೀರನ್ನು ಹನಿಸುತ್ತಿರುವ ದೃಶ್ಯವನ್ನು ಸೆರೆಹಿಡಿಯಲಾಗಿದೆ. ನೀರಿಗೆ ಸಂಬಂಸಿದ ಅದೆಷ್ಟು ಕತೆಗಳನ್ನು, ಅದೆಷ್ಟು ವಿಷಯವನ್ನು ಆ ಒಂದು ಚಿತ್ರ ಹಿಡಿದಿಟ್ಟುಕೊಂಡಿದೆ ಎಂದರೆ, ವೃದ್ಧೆಯ ಆ ಒಂದು ಅಬೋಧ ನಗುವೇ ಸದ್ಯದ ನೀರಿನ ಸನ್ನಿವೇಶಕ್ಕೆ ಸಮಗ್ರ ಪ್ರತಿಮೆಯಾಗಿ ನಿಲ್ಲುತ್ತದೆ. ಅಲ್ಲಿ ಈ ಭೂಮಿಯ ಮೇಲಿನ ಇವತ್ತಿನ ಬಾಯಾರಿಕೆಯಿದೆ. ಪರಂಪರೆಯಿದೆ. ಜಲ ಸಂರಕ್ಷಣೆಯ ಸಂದೇಶವಿದೆ. ನೀರ ಮೌಲ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಎರಡು ತಲೆಮಾರಿನ ನಡುವಿನ ಕೊಂಡಿಯಾಗಿ ಆ ಚಿತ್ರ ನಿಲ್ಲುತ್ತದೆ. ಜಲ ಸಂಪನ್ಮೂಲವನ್ನು ಉಳಿಸಿ ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಸಂದೇಶವನ್ನೂ ಈ ಚಿತ್ರ ಬಿತ್ತರಿಸುತ್ತದೆ.


ಇಂಥವೇ ಚಿತ್ರಗಳ ಸರಣಿ ಹನ್ನೆರಡೂ ತಿಂಗಳಿನ ಪುಟಗಳನ್ನು ತುಂಬಿಕೊಂಡಿವೆ. ಒಂದಕ್ಕಿಂತ ಒಂದು ಭಿನ್ನ. ಪುಟದಲ್ಲಿ ನೀರಿಗೆ ಪೂರಕ ಇನ್ನೊಂದು ಪುಟ್ಟ ಚಿತ್ರವನ್ನೂ ಅಳವಡಿಸಲಾಗಿದೆ. ಗಮನಾರ್ಹ ಅಂಶವೆಂದರೆ ಇಂಥ ಚಿತ್ರಗಳ ಆಯ್ಕೆಯದ್ದು. ಗುಣಮಟ್ಟ, ವರ್ಣ ವೈವಿಧ್ಯದ ಜತೆಗೆ ವಿಷಯಾಧಾರಿತವಾದ ಫೋಟೋಗಳಿರುವುದರಿಂದಲೇ ಈ ಕ್ಯಾಲೆಂಡರ್ ಕೇವಲ ಒಂದು ವರ್ಷಕ್ಕೆ ಸೀಮಿತವಾಗದೇ ಯಾವಜ್ಜೀವ ಸಂಗ್ರಾಹ್ಯವೆನಿಸುತ್ತದೆ. ಜನವರಿ, ಫೆಬ್ರವರಿಯಿಂದ ಪುಟ ಬದಲಿಸಿದರೆ ಅಲ್ಲಿ ಚಾವಣಿ ನೀರು ಸಂಗ್ರಹದ ಪ್ರಾಥಮಿಕ ಜ್ಞಾನವನ್ನು ಸಂಪಾದಿಸಿಕೊಡುವ ಫೋಟೊ ಗಮನ ಸೆಳೆಯುತ್ತದೆ. ಚಾನೀಸಂ ಬಗೆಗಿನ ನಿರಕ್ಷರಿಯೂ ಬರಿ ಈ ಚಿತ್ರದಿಂದಲೇ ಪ್ರಯೋಗಕ್ಕೆ ಮುಂದಾಗುವಂತೆ ಇದು ಪ್ರೇರೇಪಿಸುತ್ತದೆ. ಮೂರನೇ ಪುಟದಲ್ಲಿ ಅಂದರೆ ಮೇ-ಜೂನ್‌ನಲ್ಲಿ ಇಂಗುಗುಂಡಿ, ಬಸಿಕಾಲುವೆ ಚಿತ್ರ. ಇವಿಷ್ಟರ ಬಳಿಕ ಮಲ್ಲಿ ಆಯ್ದುಕೊಂಡ ಥೀಮ್ ಜಲ ಮಾಲಿನ್ಯದ್ದು. ಜಲ ಸಂರಕ್ಷಣೆಯಷ್ಟೇ ಪ್ರಮುಖ ಸಂಗತಿ ಮಾಲಿನ್ಯ. ನಂತರ ಸೆಪ್ಟೆಂಬರ್-ಅಕ್ಟೋಬರ್‌ಗೆ ಬರುವ ಹೊತ್ತಿಗೆ ಬರನಿರೋಧಕ ಬೆಳೆಗಳ ಪರಿಚಯ ಸಿಕ್ಕುತ್ತದೆ. ವರ್ಷದ ಕೊನೆಯ ಪುಟದಲ್ಲಿ ತೆರೆದುಕೊಳ್ಳುತ್ತದೆ ಬಾವಿ ಹಾಗೂ ತಲಪರಿಕೆ. ಅದರೊಂದಿಗೇ ಚಿತ್ರದ ಬಗೆಗೆ ಪುಟ್ಟದೊಂದು ಮಾಹಿತಿ. ಒಟ್ಟಾರೆ ಅತ್ಯಂತ ಶಿಸ್ತುಬದ್ಧವಾಗಿ, ಯೋಜಿತ ರೀತಿಯಲ್ಲಿ ನೀರಿಗೆ ಸಂಬಂಸಿದ ವಿವಿಧ ಆಯಾಮಗಳನ್ನು ದಿನದರ್ಶಿಕೆ ಕಟ್ಟಿಕೊಡುತ್ತದೆ. ಶ್ರೀಪಡ್ರೆ, ಮಲ್ಲಿ, ಸೀಮಾ ಕೃಷ್ಣಪ್ರಸಾದ್, ಭೂಷಣ್ ಮಿಡಿಗೇಶಿ, ರವಿಶಂಕರ್ ದೊಡ್ಡಮಾಣಿ, ಹರೀಶ್ ಹಳೆಮನೆ ಹಾಗೂ ಬರ್ಡ್-ಕೆ ಸಂಸ್ಥೆಯ ಅತ್ಯಂತ ಗುಣಮಟ್ಟದ ಫೋಟೋಗಳನ್ನು ಬಳಸಲಾಗಿದೆ.


ಇವಿಷ್ಟಕ್ಕೆ ಮುಗಿದು ಹೋಗಿದ್ದರೆ ಈ ಕ್ಯಾಲೆಂಡರ್ ಹತ್ತರ ಜತೆ ಹನ್ನೊಂದಾಗಿ ಬಿಡುತ್ತಿತ್ತೇನೋ. ವಿಶೇಷವಿರುವುದು, ಅದು ರೈತ ಸ್ನೇಹಿಯಾಗಿ ನಿಲ್ಲುವುದರಲ್ಲಿ. ಎಲ್ಲ ಕ್ಯಾಲೆಂಡರ್‌ಗಳಲ್ಲಿ ಹಬ್ಬ ಹರಿದಿನಗಳು, ಸರಕಾರಿ ರಜಾ ದಿನಗಳೇ ವಿಜೃಂಭಿಸುವುದು ಸಾಮಾನ್ಯ. ಆದರಿದು ಇದಲ್ಲ. ಅಂಥ ಮಾಹಿತಿಯೂ ಅದರಲ್ಲಿದೆ. ಅದಕ್ಕಿಂತ ಹೆಚ್ಚಾಗಿ ಯಾವ ಮಳೆ ಯಾವಾಗ ಆರಂಭವಾಗುತ್ತದೆ. ಎಷ್ಟು ಹೊತ್ತಿಗೆ ಉತ್ತರಾಷಾಢ ಮಳೆ ಇಳೆಗಿಳಿಯುತ್ತದೆ. ಅಮಾವಾಸ್ಯೆ ಯಾವತ್ತು. ಕೊಯ್ಲಿಗೆ ಸೂಕ್ತ ದಿನ ಯಾವುದು ಎಂಬಿತ್ಯಾದಿ ಮಾಹಿತಿ ಇದರ ಪುಟಪುಟಗಳಲ್ಲೂ ಸಮೃದ್ಧ. ಬಹುಶಃ ಈ ವರೆಗಿನ ಯಾವ ದಿನದರ್ಶಿಕೆಯಲ್ಲೂ (ಪಂಚಾಂಗ ಬಿಟ್ಟು ) ಇಂಥ ಮಾಹಿತಿ ಕೊಟ್ಟ ಉದಾಹರಣೆ ಇಲ್ಲ.


ಮಲ್ಲಿ ಮೊದಲ ಪುಟದಲ್ಲೇ ಹೇಳಿಕೊಂಡಿರುವಂತೆ ಇದು ಜನಸಾಮಾನ್ಯರಲ್ಲಿ ನೀರೆಚ್ಚರ ಮೂಡಿಸಲು ಮಾಡಿರುವ ಪುಟ್ಟ ಪ್ರಯತ್ನ. ಆದರೆ ಅದರ ಪರಿಣಾಮ ಖಂಡಿತಾ ಪುಟ್ಟದಲ್ಲ. ಇದರ ಹಿಂದಿನ ಪರಿಶ್ರಮವೂ ಸಹ ಪುಟ್ಟದಲ್ಲ. ವರ್ಷ ಪೂರ್ತಿ ಬಳಸುವ, ನಿತ್ಯ ಸಂಗಾತಿಯಾಗಿರುವ ಕ್ಯಾಲೆಂಡರ್, ಜಲ ಸಂರಕ್ಷಣೆಯ ವಿಚಾರಗಳನ್ನು ಬಿತ್ತರಿಸಲು ಅತ್ಯುತ್ತಮ ಮಾಧ್ಯಮ ಎನ್ನುವುದರಲ್ಲಿ ಎರಡನೇ ಮಾತೇ ಇಲ್ಲ. ಜನರ ಅಗತ್ಯವನ್ನು ನೀರಿನ ವಿಚಾರದಲ್ಲಿ ಮಲ್ಲಿ ಯಶಸ್ವಿಯಾಗಿ ಎನ್‌ಕ್ಯಾಶ್ ಮಾಡಿಕೊಂಡಿದ್ದಾರೆ.
ಭೇಷ್ ಎಂದು ಬೆನ್ನು ತಟ್ಟಲು ಇವಿಷ್ಟೇ ಕಾರಣಗಳಲ್ಲ. ಕ್ಯಾಲೆಂಡರ್‌ನ ಪ್ರತಿಪುಟವನ್ನೂ ಮಗುಚಿಹಾಕಲು ಹೊರಟರೆ ಅಲ್ಲೊಂದು ಪುಟ್ಟ ಪಠ್ಯವೇ ಅನಾವರಣಗೊಳ್ಳುತ್ತದೆ. ನೀರಿನ ಪ್ರಾಥಮಿಕ ಮಾಹಿತಿಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಕ್ಯಾಲೆಂಡರ್‌ನ ಹಿಂಭಾಗದಲ್ಲಿ ಅಳವಡಿಸಲಾಗಿದೆ. ಅಲ್ಲೊಂದಿಷ್ಟು ಅಂಕಿ-ಅಂಶಗಳು ಇವೆ. ಕಿವಿಮಾತಿದೆ. ಅರಿಯದ ಅದೆಷ್ಟೋ ಮಾಹಿತಿ ಸಂಚಯವಿದೆ. ಜಲ ಸಂರಕ್ಷಣೆಯ ಕುರಿತಾದ ಟಿಪ್ಸ್‌ಗಳಿವೆ. ಜತೆಗೆ ಕಪ್ಪುಬಿಳುಪು ಪೂರಕ ಚಿತ್ರಗಳೂ ಇವೆ. ಬಹುಶಃ ಏನಿಲ್ಲ ಎಂಬುದನ್ನು ಕೇಳಿಕೊಳ್ಳಬೇಕಾಗುತ್ತದೆ. ಇನ್ನೂ ಗಮನಾರ್ಹ ಸಂಗತಿಯೆಂದರೆ ಕ್ಯಾಲೆಂಡರ್‌ನ ಮುಖಪುಟದಲ್ಲೇನಿದೆಯೋ ಅದಕ್ಕೆ ಸಂಬಂಸಿದ ಒಂದಷ್ಟು ಪೂರಕ ಮಾಹಿತಿಯೇ ಆ ಪುಟದ ಹಿಂಭಾಗದಲ್ಲಿ ಲಭ್ಯವಿರುತ್ತದೆ. ಅಂದರೆ ಚಾವಣಿ ನೀರು ಸಂಗ್ರಹದ ಚಿತ್ರವುಳ್ಳ ಪುಟದ ಹಿಂಭಾಗ ಚಾವಣಿ ನೀರಿನ ಸಂಗ್ರಹ ಅಂದರೇನು ? ಅದನ್ನು ಅಳವಡಿಸಿಕೊಳ್ಳುವುದು ಹೇಗೆ ? ಅದರಿಂದೇನು ಪ್ರಯೋಜನ ಎಂಬಿತ್ಯಾದಿ ವಿವರಗಳು ಬೇಡವೆಂದರೂ ನಿಮ್ಮನ್ನು ಓದಲು ಪ್ರೇರೇಪಿಸುತ್ತವೆ. ಒಟ್ಟಾರೆ ಪ್ರತಿ ಪುಟದಲ್ಲೂ ನೀರಿನ ವಿವಿಧ ಆಯಾಮಗಳ ಪರಿಚಯ ನಿಮಗೆ ಲಭ್ಯ. ಆಡು ಭಾಷೆಗೆ ಒತ್ತು ಕೊಟ್ಟಿರುವುದು ಕ್ಯಾಲೆಂಡರ್‌ನ ವಸ್ತುವಿಗೆ ಇನ್ನಷ್ಟು ಮೆರುಗು ತಂದಿದೆ. ಎಲ್ಲವಕ್ಕೆ ಮುಕುಟವಿಡುವುದು ಪ್ರತಿ ಪುಟದ ಬಾಟಮ್ ಲೈನ್. ನೀರಿನ ಬಗ್ಗೆ ಪ್ರಸಿದ್ಧರ ನುಡಿಮುತ್ತುಗಳಲ್ಲಿ ಅತ್ಯಂತ ಮೌಲ್ಯಯುತವಾದುದನ್ನು ಆಯ್ದು ನಿಮಗಾಗಿ ಕೊಡಲಾಗಿದೆ. ಇನ್ನೇನು ಬೇಕು ಹೇಳಿ.


ಹೇಗೆ ನೋಡಿದರೂ ಮಲ್ಲಿಯ ಈ ಕೆಲಸವನ್ನು ಹೊಗಳದೇ ಇರಲು ಸಾಧ್ಯವೇ ಇಲ್ಲ. ಒಂದು ಸಾಂಸ್ಥಿಕ ವಲಯದಲ್ಲಿ, ವಿಶ್ವವಿದ್ಯಾಲಯದ ಮಟ್ಟದಲ್ಲಿ, ಸರಕಾರಿ ಇಲಾಖೆಯ ಸ್ತರದಲ್ಲಿ ಆಗಬೇಕಿರುವ ಕೆಲಸವನ್ನು ವ್ಯಕ್ತಿಯಾಗಿ ಗೆಳೆಯ ಮಲ್ಲಿ ಮಾಡಿದ್ದಾನೆ. ಯಾವ್ಯಾವುದೋ ಬೀಚ್‌ನಲ್ಲಿ ಬಟ್ಟೆಗೇ ಅಪಮಾನ ಮಾಡುವ ರೀತಿಯಲ್ಲಿ ಕಂಗೊಳಿಸುವ ‘ತೊಗಲು ಬೊಂಬೆ’ಗಳ ಚಿತ್ರವನ್ನು ಹಾಕಿ, ಡಾಲರ್‌ಗಳ ಲೆಕ್ಕದಲ್ಲಿ ಕ್ಯಾಲೆಂಡರ್ ಬಿಕರಿ ಮಾಡುವವರ ನಡುವೆ, ದೇವರ ಚಿತ್ರಗಳನ್ನು ಅಚ್ಚು ಮಾಡಿ ತಮ್ಮ ಹೆಸರನ್ನು ಜಾಹೀರುಗೊಳಿಸಿಕೊಳ್ಳುವವರ ನಡುವೆ ಜಲಸಿರಿಯ ದಿನದರ್ಶಿಕೆ ಎಷ್ಟೋ ಎತ್ತರಕ್ಕೆ ನಿಲ್ಲುತ್ತದೆ. ನಮ್ಮ ನಡುವಿನ ಬದುಕಿನ ಹಸಿಹಸಿ ಚಿತ್ರಣದೊಂದಿಗೆ ಇಷ್ಟವೂ ಆಗುತ್ತದೆ. ಹ್ಯಾಟ್ಸ್ ಆಫ್ ಮಲ್ಲಿ.


‘ಲಾಸ್ಟ್’ ಡ್ರಾಪ್: ನಿಮ್ಮ ಮನೆಯ ಗೋಡೆಯೂ ಇಂಥದ್ದೊಂದು ಮೌಲ್ಯಯುತ ಕ್ಯಾಲೆಂಡರ್ ಹೊತ್ತು ಬೀಗಬೇಕು ಎನ್ನಿಸಿದರೆ ಒಂದು ಕರೆ ಮಾಡಲು ಮಲ್ಲಿಕಾರ್ಜುನ್ ದೂರವಾಣಿ: ೯೪೮೦೬ ೯೦೬೦೧, ೯೩೪೨೧ ೮೪೮೫೫.

Monday, January 4, 2010

ಕಾಲದ ಜತೆಗೇ ಮುಗಿಯುತ್ತಿದೆ ನೀರ ಕ್ಯಾಲೆಂಡರ್‌ನ ಪುಟಗಳು

ನೇನೋ ಆಗಿ ಹೋಯಿತು ಬಿಡಿ ಕಳೆದ ವರ್ಷದಲ್ಲಿ, ಬಿದ್ದ ಮಳೆಯೆಷ್ಟೋ, ಹರಿದು ಹೋದದ್ದೆಷ್ಟೋ, ಇಂಗಿದ್ದೆಷ್ಟೋ, ಸಂಗ್ರಹಿಸಿಟ್ಟುಕೊಂಡದ್ದೆಷ್ಟೋ...ಅಂತೂ ಒಂದು ವರ್ಷ ದಾಟಿ ಹೋಗಿದೆ. ಹಾಗೆ ನೋಡಿದರೆ ಹೊಸ ಶತಮಾನದ ಮೊದಲನೇ ದಶಕ ಕೊನೆಯಾಗಲು ಇನ್ನು ಒಂದೇ ವರ್ಷ ಬಾಕಿಯಿದೆ. ನೀರಿನ ವಿಚಾರದಲ್ಲಿ ಈ ಒಂದು ದಶಕದ ಬೆಳವಣಿಗೆಗಳು ಆಶಾದಾಯಕವಾಗಿಯೇನೂ ಕಂಡು ಬಂದಿಲ್ಲ. ಹತ್ತು ವರ್ಷಗಳಲ್ಲಿ ಒಂದೊಂದೇ ಸಣ್ಣ ಸಣ್ಣ ಹೆಜ್ಜೆಗಳನ್ನು ಇಡುತ್ತಾ ಬಂದಿದ್ದರೂ ಸಾಕಿತ್ತು ಇಷ್ಟು ಹೊತ್ತಿಗೆ ಸಾಕು ಸಾಕೆನಿಸುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳಬಹುದಿತ್ತು ನಾವು. ತೀರಾ ನಿರಾಶಾದಾಯಕವೆನಿಸುವ ಚಿತ್ರಣ ನಮ್ಮೆದುರು ತೆರೆದುಕೊಳ್ಳುತ್ತಿದ್ದರೆ ಅದಕ್ಕೆ ನಾವು ಯಾರನ್ನೂ ಹೊಣೆ ಮಾಡಲು ಸಾಧ್ಯವೇ ಇಲ್ಲ.

ಒಂದೆಡೆಯಲ್ಲಿ ಭೂ ಜ್ವರದ ಬಗ್ಗೆ ಗುಲ್ಲೆಬ್ಬಿಸುತ್ತಿರುವಾಗಲೇ ಇನ್ನೊಂದೆಡೆ ಕೈಗಾರಿಕೀಕರಣ, ಯಾಂತ್ರೀಕೃತ ಬದುಕನ್ನೇ ಅಭಿವೃದ್ಧಿಯ ಮಾನದಂಡ ಮಾಡಿಕೊಂಡು ಬೀಗುತ್ತೇವೆ. ಒಂದೆಡೆ ಬ್ರಹ್ಮಾಂಡದ ಹುಟ್ಟಿನ ರಹಸ್ಯ ಭೇದಿಸುವ ಬಿಗ್‌ಬ್ಯಾಂಗ್‌ನತ್ತ ಇನ್ನಿಲ್ಲದ ಕುತೂಹಲದ ನೋಟ ಬೀರುತ್ತಲೇ ಹುಸಿಪ್ರಳಯದ ಚಿತ್ರವಿಚಿತ್ರಗಳನ್ನು ಫ್ಯಾಂಟಸಿ ರೂಪದಲ್ಲಿ ನೋಡಿ ಮನರಂಜನೆ ಪಡೆಯುತ್ತಿದ್ದೇವೆ. ಪ್ರಳಯ ಆಗುತ್ತದೋ ಇಲ್ಲವೋ, ಯಾವತ್ತೋ ಇಲ್ಲವಾದ ಮಾಯನ್ ಜನಾಂಗದ ಕ್ಯಾಲೆಂಡರ್‌ನಲ್ಲಿರುವ ವಾಕ್ಯಗಳು ನಿಜವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ನಿಸ್ಸೀಮ ನಿರ್ಲಕ್ಷ್ಯದ ಪರಿಣಾಮದಿಂದ ಬಿಸಿ ಪ್ರಳಯವನ್ನು ನಾವೀಗಾಗಲೇ ಅನುಭವಿಸುತ್ತಿರುವುದಂತೂ ನಿಜ. ಇನ್ನು ಮೂರು ವರ್ಷಗಳಲ್ಲಿ ಜಗತ್ತೇ ಮುಳುಗಿ ಹೋಗುತ್ತದೆಂಬ ಭ್ರಮೆಗೆ ಅತ್ಯಂತ ಪ್ರಾಮಾಣಿಕವಾಗಿ ನಮ್ಮನ್ನು ಒಡ್ಡಿಕೊಳ್ಳುವ ನಾವು, ನೀರಿನ ವಿಚಾರದಲ್ಲಿ ಹುಟ್ಟಿರುವ ವಾಸ್ತವದ ಆತಂಕದ ಬಗ್ಗೆ ಒಂದಿನಿತೂ ತಲೆಕೆಡಿಸಿಕೊಳ್ಳುವುದೇ ಇಲ್ಲ.


ವರ್ಷದ ಆರಂಭದಲ್ಲಿಯೇ ನಿರಾಸೆಯನ್ನು ಬಿತ್ತಬೇಕೆಂದೇನೂ ಇಲ್ಲ. ಆದರೆ ಅಂಥದ್ದೊಂದು ಸಂಕೀರ್ಣ ಸನ್ನಿವೇಶದ ಚಿತ್ರಣವನ್ನು ಇಂದೇ ನಮ್ಮ ಮುಂದೆ ತಂದುಕೊಳ್ಳದಿದ್ದರೆ ಮುಂದಿನ ೩೬೫ದಿನಗಳಲ್ಲಿ ಒಮ್ಮೆಯೂ ಸಕಾರಾತ್ಮಕ ಕಾರ್ಯ ಅನುಷ್ಠಾನ ನಮ್ಮಿಂದ ಖಂಡಿತಾ ಸಾಧ್ಯವಾಗುವುದೇ ಇಲ್ಲ. ಕಳೆದ ಶತಮಾನದ ಕೊನೆಯಲ್ಲೇ (೧೯೯೭) ಜಲಸ್ಥಿತಿ ಅಧ್ಯಯನ ಕೈಗೊಂಡ ವೈದ್ಯನಾಥನ್ ಸಮಿತಿ ಘನಘೋರ ಚಿತ್ರಣವನ್ನು ದೇಶದ ಮುಂದಿಟ್ಟಿದೆ. ೨೦೫೦ರ ಸುಮಾರಿಗೆ ಜಗತ್ತಿನೆಲ್ಲೆಡೆ ಹನಿಗಾಗಿ ಹಾಹಾಕಾರವೇಳಲಿದೆ, ಜಲಸಮರದಲ್ಲಿ ಮನುಷ್ಯ ಮೃಗವಾಗಿ ವರ್ತಿಸುತ್ತಾನೆ. ಇದು ಖಂಡಿತಾ ಊಹಾಚಿತ್ರವಲ್ಲ. ಜಾಗತಿಕ ಜನಸಂಖ್ಯೆಗೆ ಪ್ರತಿ ದಿನ ಸರಾಸರಿ ೨.೩೦ ಲಕ್ಷದಷ್ಟು ಶಿಶುಗಳು ಕೂಡಿಕೊಳ್ಳುತ್ತಿವೆ ಎಂದರೆ ಆ ಹೊತ್ತಿಗೆ ದೇಶಕ್ಕೆ ೨೭೮೮ ಶತಕೋಟಿ ಕ್ಯೂಬಿಕ್ ಲೀಟರ್ ನೀರಿನ ಅಗತ್ಯ ಸೃಷ್ಟಿಯಾಗುತ್ತದೆ. ಸದ್ಯದ ಅಂದಾಜಿನ ಪ್ರಕಾರ ೧೪೦೩ ಶತಕೋಟಿ ಕ್ಯೂಬಿಕ್ ಲೀಟರ್ ನೀರು ಲಭ್ಯವಾಗಲಿದೆ. ಹೀಗಾಗಿ ಉಳಿದವರ ಪಾಲಿಗೆ ಕಾದಾಟ ಅನಿವಾರ್‍ಯವಲ್ಲವೇ ? ವೈದ್ಯನಾಥನ್ ನಿಜ ಹೇಳಿದ್ದಾರೆ.


ನೀರಿನ ಸಮಸ್ಯೆ ಇಡೀ ಮಾನವ ಕುಲದ ಸವಾಲು. ಪಾಶ್ಚಿಮಾತ್ಯ ದೇಶಗಳು ವಿಮಾನದಲ್ಲಿ ನೀರು ಸರಬರಾಜು ಮಾಡಲು ಗ್ಲೋಬಲ್ ಟೆಂಡರ್‌ಗಳನ್ನು ಆಹ್ವಾನಿಸಿವೆ. ವಿಶ್ವಬ್ಯಾಂಕ್‌ನ ಮಾಹಿತಿಯೊಂದರ ಪ್ರಕಾರ ಅಭಿವೃದ್ಧಿಶೀಲ ದೇಶಗಳಲ್ಲಿ ೭೦೦ ಶತಕೋಟಿ ಡಾಲರ್‌ಗಳ ಬಂಡವಾಳದೊಂದಿಗೆ ವಾಟರ್ ಮಾರ್ಕೆಟ್ ಆರಂಭಿಸುವುದು ತಕ್ಷಣದ ಅಗತ್ಯ. ಶುಭ್ರ ಜಲಕ್ಕೆ ೧೫೦ ಸಾವಿರ ಕೋಟಿ ಡಾಲರ್‌ಗಳನ್ನು ವೆಚ್ಚ ಮಾಡುವುದು ತೀರಾ ಅನಿವಾರ್‍ಯ.


ಇವೆಲ್ಲವನ್ನು ಗಮನಿಸಿದಾಗ ಒಟ್ಟಾರೆ ಜಲ ಜಾಗೃತಿಯಲ್ಲಿನ ತಲೆಮಾರಿನ ವೈಫಲ್ಯ ಗ್ರಹಿಸಬಹುದು. ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಿರುವ ಕೆಲ ಕಂಪನಿಗಳು ತನ್ನಿಂತಾನೇ ನೀರನ್ನು ವ್ಯಾಪಾರದ ವಸ್ತುವನ್ನಾಗಿಸಿವೆ. ವಸ್ತುಸ್ಥಿತಿಯ ಬಿಸಿ ಜನಸಾಮಾನ್ಯರಿಗೆ ತಟ್ಟಿದಷ್ಟು, ಆಡಳಿತಾರೂಢರಿಗೆ ತಟ್ಟಿಲ್ಲ. ಮಣ್ಣು, ನೀರು, ಪರಿಸರ ಸಂರಕ್ಷಣೆಯ ಕುರಿತಾದ ಸಮಗ್ರ ಚಿಂತನೆ ನಡೆದೇ ಇಲ್ಲ. ಕೆರೆಗಳಂತೂ ಶೇ.೮೦ರಷ್ಟು ನಾಮಾವಶೇಷವಾಗಿವೆ. ಇನ್ನು ಪರಿಸರವಾದಿಗಳು ಮತ್ತು ಸ್ವಯಂ ಸೇವಾಸಂಸ್ಥೆಗಳು ಮಳೆಗಾಲದಲ್ಲಿ ವನಮಹೋತ್ಸವ ಆಚರಿಸುವುದು ಹಾಗೂ ರಸ್ತೆಬದಿಯ ಮರಗಳನ್ನು ಕಡಿಯುವುದರ ವಿರುದ್ಧ ಕೂಗೆಬ್ಬಿಸುವುದಷ್ಟೇ ಪರಿಸರ ಸೇವೆ ಎಂದುಕೊಂಡಂತಿದೆ.


ಸ್ಟಾಕ್ ಹೋಂನಲ್ಲಿ ನಡೆದ ವಿಶ್ವ ಸಮ್ಮೇಳನವೊಂದರ ಚರ್ಚೆಯ ಫಲಿತಾಂಶದ ಪ್ರಕಾರ ಸದ್ಯದ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿ ದಿನಕ್ಕೆ ಕನಿಷ್ಠ ೫೦ ಲೀಟರ್ ನೀರು ಬಳಸುತ್ತಿದ್ದಾನೆ. ಮುಂದುವರಿದ ದೇಶಗಳಲ್ಲಿ ಈ ಪ್ರಮಾಣ ೮೫೦ರಿಂದ ಸಾವಿರ ಲೀಟರ್. ಬಡರಾಷ್ಟ್ರಗಳಲ್ಲಿ ೨೦ರಿಂದ ೭೦ ಲೀಟರ್‌ಗಳು. ಭಾರತ ಮತ್ತು ಚೀನಾದ ಮಂದಿಗೆ ತಲಾ ೨೨.೬೩ ಲೀ ಮಾತ್ರ ನೀರು ದೊರೆಯುತ್ತಿದೆ. ಮನುಷ್ಯನಿಗೆ ಪ್ರತಿದಿನ ಸರಾಸರಿ ೨.೮ ಲೀ. ಶುದ್ಧ ನೀರು ಅಗತ್ಯವೆಂದು ಆರೋಗ್ಯಶಾಸ್ತ್ರ ಹೇಳುತ್ತದೆ. ಅದರಲ್ಲಿ ೧.೫ ಲೀ ನೀರು ನಾವು ತೆಗೆದುಕೊಳ್ಳುವ ಆಹಾರ ಪದಾರ್ಥಗಳಿಂದ ದೊರೆಯುತ್ತದೆಂದಾದರೂ ಉಳಿದ ೧.೩ ಲೀ ನೀರನ್ನು ನೇರವಾಗಿ ಸೇವಿಸಬೇಕಾದ್ದು ಅನಿವಾರ್ಯ. ಈ ಪ್ರಮಾಣದಲ್ಲಿ ನೋಡ ಹೋದರೆ ನಮ್ಮ ದೇಶದಲ್ಲಿ ಶೇ.೧೨ ಜನರಿಗೆ ಮಾತ್ರ ಶುದ್ಧ ನೀರು ದೊರೆಯುತ್ತಿದೆ.


ಅದು ಹಾಗಿರಲಿ, ಇತ್ತೀಚೆಗೆ ಕೇಳಿಬರುತ್ತಿರುವ ಇನ್ನೊಂದು ಸುದ್ದಿ. ಸಮುದ್ರದ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು. ಭೂಮಂಡಲದ ಮೇಲಿನ ಉಷ್ಣಾಂಶದಿಂದ ಸಮುದ್ರ ಉಕ್ಕೇರುತ್ತಿದೆ. ನಿಜ. ಸಮುದ್ರ ಕಳೆದ ಕೆಲ ಶತಮಾನಕ್ಕೆ ಹೋಲಿಸಿದರೆ ಇಂದು ಸಾಕಷ್ಟು ಮುಂದೆ ಬಂದಿದೆ. ಸಮುದ್ರದ ಮಟ್ಟ ಏರತೊಡಗಿದೆ. ಭೂಮಿಯ ಮೇಲಿನ ಶಾಖಕ್ಕೆ ಹಿಮಗಡ್ಡೆಗಳು ಕರಗಿ ನೀರಾಗಿ ಹರಿಯುತ್ತಿವೆ. ಹೀಗಾಗಿ ಸಮುದ್ರ ನೀರಿನ ಮಟ್ಟವೂ ಏರುತ್ತಿದೆ. ಜತೆ ಸಮುದ್ರದ ಮೇಲ್ಮೈಸಹ ಶಾಖಕ್ಕೆ ಅಗಲಗೊಳ್ಳುತ್ತಿದೆ.


ಸಮುದ್ರ, ನದಿ, ನೀರು, ಮಳೆ ಇತ್ಯಾದಿಗಳ ಬಗ್ಗೆ ಇಂದು ನಾವೆಷ್ಟು ಅಜ್ಞಾನಿಗಳಾಗಿದ್ದೇವೆ ಎಂದರೆ ಇಂದಿಗೂ ಅವುಗಳ ವಿಚಾರದಲ್ಲಿ ಆಗುತ್ತಿರುವ ಒಂದೊಂದೂ ಬೆಳವಣಿಗೆಗಳಿಗೆ ಒಂದಿಲ್ಲೊಂದು ನಂಬಿಕೆಗಳ ಲೇಪ ಹಚ್ಚುತ್ತಿದ್ದೇವೆ. ಭೌಗೋಳಿಕ ಸಮತೋಲನ, ಭೂಮಿಯ ಮೇಲಿನ ಉಷ್ಣಾಂಶ ರಕ್ಷಣೆಯ ದೃಷ್ಟಿಯಿಂದ ಸಮುದ್ರದ ಪಾತ್ರ ಅತ್ಯಂತ ಪ್ರಮುಖವಾದದ್ದು ಎಂಬುದನ್ನು ಏನು ಮಾಡಿದರೂ ನಾವು ಒಪ್ಪಿಕೊಳ್ಳತ್ತಲೇ ಇಲ್ಲ. ಒಂದೊಮ್ಮೆ ನದಿಯ ನೀರು ಪ್ರತಿ ವರ್ಷ ನಿರ್ದಿಷ್ಟ ಪ್ರಮಾಣದಲ್ಲಿ ಸಮುದ್ರ ಸೇರದೇ ಹೋಗಿದ್ದರೆ ಏನಾಗಬಹುದಿತ್ತೆಂಬುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಏಕೆಂದರೆ ಸಮುದ್ರದ ಮುನ್ನುಗ್ಗುವಿಕೆ ತಡೆಯಲ್ಲಿ ಭೂ ಭಾಗದಿಂದ ಒಂದಷ್ಟು ಸಿಹಿ ನೀರಿನ ಒತ್ತಡ ಅಗತ್ಯ. ಆದರೆ ಹೀಗೆ ಸಮುದ್ರ ಸೇರುತ್ತಿರುವ ಸಿಹಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.


ಇದೇ ಸಂದರ್ಭದಲ್ಲಿ ಸಮುದ್ರದಲ್ಲಿನ ಅಸಮತೋಲವನ್ನು ನಾವು ಗಣನೆಗೆ ತೆಗೆದುಕೊಳ್ಳೇಕಿದೆ. ಮಿತಿ ಮೀರಿದ ಕೈಗಾರಿಕಾ ಚಟುವಟಿಕೆಗಳಿಂದಾಗಿ ಬೃಹತ್ ಪ್ರಮಾಣದ ಇಂಗಾಲದ ಡೈಆಕ್ಸೈಡ್ ವಾತಾವರಣವನ್ನು ಸೇರುತ್ತಿದೆ. ಕಲ್ಮಶ ಅನಿಲವನ್ನು ಸಾಕಷ್ಟು ಪ್ರಮಾಣದಲ್ಲಿ ಸಮುದ್ರ ಹೀರಿಕೊಳ್ಳುತ್ತಿದೆ. ಪರಿಣಾಮ ಸಮುದ್ರದ ನೀರು ಹಿಂದೆಂದಿಗಿಂಗಲೂ ಹೆಚ್ಚು ಆಮ್ಲೀಯವಾಗುತ್ತಿದೆ. ಇದು ‘ಸಮುದ್ರ ಜೀವನ ಕ್ರಮ’ಕ್ಕೇ ಅಪಾಯವನ್ನು ತಂದೊಡ್ಡಿದೆ ಎಂಬುದು ಆತಂಕಕಾರಿ.
ಹಸಿರುಮನೆಯ ಅನಿಲದ ಪರಿಣಾಮ ಇಂದು ನೇರವಾಗಿ ಸಮುದ್ರದ ಮೇಲಾಗುತ್ತಿದೆ. ಇದು ಭೂಮಿಯ ಉಷ್ಣಾಂಶವನ್ನು ಹೆಚ್ಚಿಸುವುದರ ಜತೆಗೇ ಸಾಗರದ ಸಮತೋಲನವನ್ನು ಹದಗೆಡಿಸಿದೆ. ಗಂಟೆಗೆ ಒಂದು ದಶಲಕ್ಷ ಟನ್‌ಗಳಷ್ಟು ಇಂಗಾಲಾಮ್ಲ ಸಮುದ್ರದ ಸೇರುತ್ತಿದೆ ಎಂದರೆ ಅಲ್ಲಿನ ಜೀವ ವೈವಿಧ್ಯದ ಸ್ಥಿತಿ ಹೇಗಾಗಿರಬೇಡ.


ಇನ್ನೂರು ವರ್ಷಗಳ ಹಿಂದೆ ಆರಂಭವಾದ ಕೈಗಾರಿಕೀಕರಣ ಪರಿಣಾಮ ಈ ಶತಮಾನದ ಕೊನೆಯ ವೇಳೆಗೆ ಸಮುದ್ರದಲ್ಲಿನ ಆಮ್ಲ ಮಟ್ಟವನ್ನು ಈಗಿನದಕ್ಕಿಂತ ಎರಡೂವರೆಯಷ್ಟು ಹೆಚ್ಚಿಸಲಿದೆ. ಇದು ಜಲಚರ ಮಾತ್ರವಲ್ಲ ಸಮುದ್ರ ತಳದಲ್ಲಿನ ಸ್ಪಂಜಿನಂತಹ ಜೀವಪದರಕ್ಕೆ ಹಾನಿ ತರಲಿದೆ. ಈಗಾಗಲೇ ಸಮುದ್ರ ತಳದ ಸ್ಪಂಜಿನ ಪದರಗಳಿಂದ ಕ್ಯಾನ್ಸರ್, ಏಡ್ಸ್‌ನಂತಹ ಮಾಹಾಮಾರಿಗಳ ನಿರೋಧಕ ಔಷಧದ ಸಂಶೋಧನೆ ಆರಂಭವಾಗಿದೆ. ಅದರ ಫಲ ದೊರಕುವ ವೇಳೆ ಇಡೀ ಸಮುದ್ರವೇ ಕುಲಗೆಟ್ಟು ಹೋಗಿದ್ದರೆ ?
ಭೂಮಿಯ ಉಷ್ಣಾಂಶ, ನದಿ, ನೀರು, ಹರಿವು, ಸಮುದ್ರ ಇವೆಲ್ಲವೂ ಪರಸ್ಪರ ಪೂರಕ ವ್ಯವಸ್ಥೆಗಳು. ಇವುಗಳಲ್ಲಿ ಯಾವುದೇ ಒಂದಕ್ಕೆ ಧಕ್ಕೆಯಾದರೂ ಇಡೀ ವ್ಯವಸ್ಥೆ ಏರುಪೇರಾಗಿ ಮಾನವನ ಬದುಕು ಅಸಹನೀಯವಾಗಲಿದೆ. ಹೊಸ ವರ್ಷದ ಮೊದಲ ಸಂಕಲ್ಪ ಇದೇ ಆಗಲಿ ಎಂಬುದು ಆಶಯ- ಇಡೀ ವರ್ಷ ನಿಸರ್ಗದ ಸಹಜ ವ್ಯಾಪಾರಗಳಿಗೆ ಒಂದಿನಿತೂ ಧಕ್ಕೆ ತಾರದಂತೆ ನಡೆದುಕೊಳ್ಳುತ್ತೇವಾದರೆ ಪ್ರಳಯದ ಕುರಿತಾದ ಇನ್ನೂ ಹತ್ತು ಚಿತ್ರಗಳು ಬಂದರೂ ಅದನ್ನು ನಿಶ್ಚಿಂತೆಯಿಂದ ನೋಡಿ ಎಂಜಾಯ್ ಮಾಡಬಹುದು.
ಲಾಸ್ಟ್‘ಡ್ರಾಪ್’: ಹಣ ಇಲ್ಲದಿದ್ದರೆ ನಾವು ತಿಂಗಳುಗಟ್ಟಲೆ ಹೇಗೋ ಬದುಕಬಲ್ಲೆವು. ನೀರಿಲ್ಲದಿದ್ದರೆ ಒಂದು ವಾರವೂ ಬದುಕಲಾರೆವು. ಒಂದು ರೂಪಾಯಿ ಖರ್ಚುಮಾಡುವ ಮುನ್ನ ಹತ್ತು ಸಲ ಯೋಚಿಸುವ ನಾವು, ಒಂದು ಹನಿ ನೀರು ಖರ್ಚು ಮಾಡುವ ಮುನ್ನ ಯಾಕೆ ಕೊಂಚ ಯೋಚಿಸಬಾರದು ?