Wednesday, July 29, 2009

ಬಳಸಿದರೆ ಲಾವಂಚ, ನೀರು ಸ್ವಚ್ಛ, ಸ್ವಚ್ಛ....

ಲೆನಾಡು ಪ್ರದೇಶದಲ್ಲಿ ನೀರಿನ ಲಭ್ಯತೆ ಯಥೇಚ್ಛ ಇದ್ದರೂ, ಅದರ ಬಳಕೆಯ ನಿಟ್ಟಿನಲ್ಲಿ ಸಾಕಷ್ಟು ಜಾಗ್ರತೆ ವಹಿಸುವುದು ಆ ಭಾಗದ ಜನರಲ್ಲಿ ರಕ್ತಗತವಾಗಿ ಬಂದ ಗುಣ.
ನೀರಿನ ಮರುಬಳಕೆ ಅಲ್ಲಿ ಸಾಮಾನ್ಯವಾಗಿ ಕಂಡು ಬರುವ ಅಂಶ. ಒಂದೇ ಉದ್ದೇಶಕ್ಕೆ ನೀರನ್ನು ಬಳಸುವ ಬದಲಾಗಿ ಅದರ ಪರ್ಯಾಯ ಪ್ರಯೋಜನಗಳ ಬಗ್ಗೆ ಜನ ಯೋಚಿಸುತ್ತಾರೆ. ಬಟ್ಟೆ ತೊಳೆದ ನೀರನ್ನು ಬಳಸಿ ಮನೆ ಹಿತ್ತಿಲಲ್ಲಿ ಒಂದಷ್ಟು ಸೊಪ್ಪು ಬೆಳೆಸಿಕೊಳ್ಳುವುದು, ಸ್ನಾನದ ನೀರನ್ನು ತೆಂಗಿನ ಗಿಡಕ್ಕೋ, ಸಣ್ಣಪುಟ್ಟ ಹಣ್ಣು ತರಕಾರಿಗಳ ಅಂಕಣಕ್ಕೋ ಹಾಯಿಸುವುದು, ಅಡುಗೆ ಮನೆಯಲ್ಲಿ ಬಳಸಿ ಬಿಟ್ಟ ನೀರಿನಲ್ಲೇ ಪುಟ್ಟ ಕೈ ತೋಟವೊಂದನ್ನು ಸಲಹುವುದು... ಇಂಥವು ತೀರಾ ಸಹಜ ಸಂಗತಿಗಳು.
ಹೀಗೆ ಯೋಚಿಸುತ್ತಿದ್ದಾಗ ಕೇರಳದ ಮುನ್ನಾರ್‌ನ ಸ್ನೇಹಿತ ಸಿ.ಕೆ. ಮೋಹನ್ ಯಾವಾಗಲೋ ಒಮ್ಮೆ ಹೇಳಿದ್ದ ‘ವೆಟಿವೇರ್’ eಪಕಕ್ಕೆ ಬಂತು. ‘ವೆಟಿವೇರ್’ ಯಾವುದೋ ಅಪರಿಚಿತ ಸಸ್ಯವೇನಲ್ಲ. ನಮ್ಮಲ್ಲಿ ತೀರಾ ಕೌಟುಂಬಿಕ ಸಸ್ಯವಾಗಿ, ಮನೆಮದ್ದಾಗಿ ಬಳಕೆಯಲ್ಲಿರುವ ಲಾವಂಚ ಅಥವಾ ರಾಮಂಚ ಎಂದು ಗುರುತಿಸುವ ಹುಲ್ಲಿನ ಜಾತಿಯ ಸಸ್ಯ. ರೇಷ್ಮೆ ಸೀರೆಗಳು, ಬಟ್ಟೆ ಹಾಳಾಗದಂತೆ, ಜಿರಳೆ ಇತ್ಯಾದಿಗಳು ಒಳಹೋಗದಂತೆ ರಕ್ಷಿಸಲು ಮನೆಯ ಕಬೋರ್ಡ್‌ಗಳಲ್ಲಿ, ಟ್ರಂಕ್‌ಗಳಲ್ಲಿ ನಮ್ಮ ಹಿಂದಿನವರು ಹಾಕಿಡುತ್ತಿದ್ದ ವಿಚಿತ್ರ ಸುವಾಸನೆ ಬೀರುವ ಬೇರುಗಳನ್ನು ನೀವು ನೋಡಿರಬಹುದು. ಸಿಕ್ಕುಸಿಕ್ಕಾಗಿ ಬಲೆಯೋಪಾದಿಯಲ್ಲಿ ಹೆಣೆದುಕೊಂಡಿರುವ ಬೇರುಗಳ ಸಮೂಹ ಪೆಟ್ಟಿಗೆ ತೆಗೆಯುತ್ತಿದ್ದಂತೆ ಘಂ ಎಂದು ಮೂಗಿಗೆ ರಾಚುತ್ತದೆ. ಈ ಕಾರಣಕ್ಕಾಗಿಯೇ ಇದನ್ನು ಕೆಲವೆಡೆ ‘ಮಡಿವಾಳ ಬೇರು’ ಎಂದೂ ಗುರುತಿಸುತ್ತಾರೆ. ಇಂಥದೊಂದು ಬೇರು ಕಲುಷಿತ ನೀರನ್ನು ಶುದ್ಧಗೊಳಿಸುತ್ತದೆ ಎಂಬ ಸಂಗತಿಯೂ ಹೊಸತೇನಲ್ಲ. ಆದರೆ, ತೊಂಬತ್ತರ ದಶಕದ ಆರಂಭದಲ್ಲಿ ಚೀನಾದಲ್ಲಿ ಬೃಹತ್ ಪ್ರಮಾಣದಲ್ಲಿ ನಡೆದ ವೆಟಿವೇರ್ ಪ್ರಯೋಗ ಇದರತ್ತ ಜಗತ್ತಿನ ಗಮನ ಸೆಳೆಯುವಂತಾಯಿತು.
ಹಾಗೆ ನೋಡಿದರೆ, ಭಾರತೀಯ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ, ಸ್ಮೃತಿ-ಪುರಾಣಗಳಲ್ಲಿ ವೆಟಿವೇರ್ ಚಿರಪರಿಚಿತ. ಅಸಲಿಗೆ ರಾಮಂಚ ಎಂಬ ಹೆಸರು ಬಂದದ್ದೇ ನಮ್ಮ ಶ್ರೀರಾಮನಿಂದ ಎನ್ನುತ್ತದೆ ಪೌರಾಣಿಕ ಲೋಕ. ಶ್ರೀರಾಮನ ವನವಾಸದ ಸಂದರ್ಭದಲ್ಲಿ ಆತ ಕುಡಿಯುವ ನೀರನ್ನು ಶುದ್ಧೀಕರಿಸಲು ವೆಟಿವೇರ್ ಹುಲ್ಲನ್ನೇ ಬಳಸಿದ ಪ್ರಸ್ತಾಪ ರಾಮಾಯಣದಲ್ಲಿ ಬರುತ್ತದೆ. ಸುರಪಾಲರ ವೃಕ್ಷಾಯುರ್ವೇದದಲ್ಲಿ ವೆಟಿವೇರ್ ಬಗ್ಗೆ ಸವಿವರವಾಗಿ ದಾಖಲಾಗಿದೆ. ಮಿಶ್ರ ಚಕ್ರಪಾಣಿಯ ‘ವಿಷವವಲ್ಲಭ’ದಲ್ಲಂತೂ ನೀರಿನ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಲಾವಂಚ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ವಿಷದವಾಗಿ ಉಲ್ಲೇಖಿಸಲಾಗಿದೆ. ಅಲ್ಲಿಂದ ಆರಂಭವಾದ ಇದರ ಬಳಕೆ ಗ್ರಾಮೀಣ ಬದುಕಿನಲ್ಲಿ ಹಾಸುಹೊಕ್ಕಾಗಿ ಬಂದಿದೆ. ಮಣ್ಣಿನ ಸವಕಳಿ ತಪ್ಪಿಸಲು ರೈತ ಸಮುದಾಯ ಇದನ್ನು ಪ್ರಬಲ ಅಸ್ತ್ರವಾಗಿ ಬಳಸುತ್ತದೆ. ನದಿ ತೀರದಲ್ಲಿ, ಇಳಿಜಾರು ಪ್ರದೇಶದಲ್ಲಿ, ಹಳ್ಳ-ಕೊಳ್ಳಗಳ ದಂಡೆಯ ಮೇಲೆ ಈ ಹುಲ್ಲಿನ ಪೊದೆ ಸಾಮಾನ್ಯವಾಗಿ ಕಂಡುಬರುತ್ತದೆ. ಕೇರಳ, ತಮಿಳುನಾಡುಗಳಲ್ಲಿ ಕುಡಿಯುವ ನೀರಿನ ಬೊಡ್ಡೆಗೆ ಲಾವಂಚದ ಬೇರಿನ ಒಂದೆರಡು ತುಣುಕುಗಳನ್ನು ಹಾಕುವುದು ಇಂದಿಗೂ ಇದೆ. ಆಯುರ್ವೇದದಲ್ಲಿ ಲಾವಂಚವನ್ನು ಔಷಯ ಸಸ್ಯವಾಗಿ ಬಳಸಲಾಗುತ್ತದೆ. ಇಷ್ಟಿದ್ದರೂ ಇದರ ಬಗ್ಗೆ ಹೇಳಿಕೊಳ್ಳುವಂಥ ಪ್ರಚಾರವೇ ಆಗಿರಲಿಲ್ಲ.
ವೆಟಿವೇರ್‌ನ ಬಗ್ಗೆ ಇಂಥದೊಂದು ಪ್ರಚಾರ ಆರಂಭವಾದದ್ದೇ ಈಗ್ಗೆ ಮೂರು ವರ್ಷಗಳ ಹಿಂದೆ; ಚೀನಾನದಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನವೊಂದರಲ್ಲಿ. ರಿಚರ್ಡ್‌ಗ್ರಿಮ್‌ಷಾ ಎಂಬ ಪ್ರಯೋಗಶೀಲ ಕೃಷಿ ತಜ್ಞನೊಬ್ಬ ಮೊಟ್ಟಮೊದಲ ಬಾರಿಗೆ ಈ ಸಮ್ಮೇಳನದಲ್ಲಿ ವೆಟಿವೇರ್‌ನ ಕ್ರಾಂತಿಕಾರಿಕ ಗುಣಗಳ ಕುರಿತು ಪ್ರಬಂಧ ಮಂಡಿಸಿದ್ದು ಇಷ್ಟಕ್ಕೆಲ್ಲ ನಾಂದಿಯಾಯಿತು. ಅದರ ಬೆಳಕಿನಲ್ಲೇ ಕ್ವೀನ್ಸ್ ಲ್ಯಾಂಡ್‌ನ ಗಣಿ ಮತ್ತು ನೈಸರ್ಗಿಕ ಸಂಪನ್ಮೂಲ ಇಲಾಖೆ ಕೈಗೊಂಡ ಪರಿಸರ ಸ್ನೇಹಿ ಜಲಶುದ್ಧೀಕರಣ ಪ್ರಯೋಗದಲ್ಲಿ ವೆಟಿವೇರ್ ಬಳಕೆ ವ್ಯಾಪಕವಾಗಿರುವುದು ಅರಿವಿಗೆ ಬಂತು. ಅತ್ಯಂತ ಸರಳ, ತೀರಾ ಕಡಿಮೆ ವೆಚ್ಚದಲ್ಲಿ ವೆಟಿವೇರ್ ಬಳಸಿ ನೀರನ್ನು ಶುದ್ಧೀಕರಿಸುವುದು ಕ್ವೀನ್ಸ್ ಲ್ಯಾಂಡ್‌ನ ವೈಶಿಷ್ಟ್ಯ.
ನಗರ ಪ್ರದೇಶದಲ್ಲ್ಲಿ ಉತ್ಪತ್ತಿಯಾಗುವ ಕೊಳಚೆಯನ್ನು ಒಂದೆಡೆ ಹರಿಯುವಂತೆ ಮಾಡಿ ಹೊರವಲಯದ ನಿರ್ದಿಷ್ಟ ಪ್ರದೇಶವೊಂದರಲ್ಲಿ ಬೆಳೆಸಲಾದ ಲಾವಂಚದ ಕಣಕ್ಕೆ ಅದನ್ನು ಹಾಯಿಸಲಾಗುತ್ತದೆ. ಅತ್ಯಂತ ದಟ್ಟವಾಗಿ ಹಬ್ಬಿರುವ ಲಾವಂಚದ ಬೇರುಗಳ ನಡುವೆ ಈ ಕೊಳಚೆ ನೀರು ಹರಿದು ಹೊರಬರುವಷ್ಟರಲ್ಲಿ ತನ್ನ ಬಹುತೇಕ ಕಲ್ಮಶಗಳಿಂದ ಮುಕ್ತವಾಗಿರುತ್ತದೆ. ಅತ್ಯಂತ ವೈeನಿಕವಾಗಿ ದೃಢಪಟ್ಟಿರುವ ಈ ಪ್ರಯೋಗ ಇದೀಗ ಆಸ್ಟ್ರೇಲಿಯಾ, ಚೀನಾ, ಥಾಯ್ಲೆಂಡ್, ವಿಯೆಟ್ನಾಂ ಹಾಗೂ ಸೆನೆಗಲ್‌ಗಳಲ್ಲೂ ಯಶಸ್ವಿಯಾಗಿದೆ.
‘ವೆಟಿವೇರಿಯಾ ಜಿಜನಿಯೋಡೆಸ್’ ಎಂಬ ವೈeನಿಕ ಹೆಸರಿನಲ್ಲಿ ಗುರುತಿಸಲಾಗಿರುವ ಇದು ಹುಲ್ಲಿನ ಜಾತಿಗೆ ಸೇರಿದೆ. ಇದರ ಬೇರುಗಳು ಸುಮಾರು ೩ ಮೀಟರ್ ಆಳಕ್ಕೆ ಇಳಿಯಬಹುದಾದ್ದರಿಂದ ಮಣ್ಣಿನ ಸವಕಳಿ ತಪ್ಪಿಸುವುದರೊಂದಿಗೆ ಅಂತರ್ಜಲ ಮಟ್ಟ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸರಾಸರಿ ೨೦೦ ಮಿ.ಮೀ.ನಿಂದ ೬೦೦೦ ಮಿ.ಮೀ. ಮಳೆ ಬೀಳುವ ಎಲ್ಲ ಪ್ರದೇಶಗಳಲ್ಲಿ ಇದು ಬೆಳೆಯಬಲ್ಲದು. ೪೫ ಡಿಗ್ರಿ ಸೆಲ್ಷಿಯಸ್ ಉಷ್ಣಾಂಶದಲ್ಲೂ ಒಣಗದೆ ಹಸಿರಿನಿಂದ ಕಂಗೊಳಿಸುವ ಲಾವಂಚದ ಬೇರುಗಳು ಚಾಪೆ, ಬೀಸಣಿಗೆ, ಗೃಹಾಲಂಕಾರ ವಸ್ತುಗಳಲ್ಲೂ ಬಳಕೆಯಾಗುತ್ತಿದೆ. ಹೀಗಾಗಿ ಇದು ಒಂದರ್ಥದಲ್ಲಿ ಬಹೂಪಯೋಗಿ.
ಬಹುಶಃ ನಮ್ಮ ಹಳ್ಳಿಗಳ ಇನ್ನೂ ಅದೇಷ್ಟೋ ಮನೆಗಳಲ್ಲಿ ಇಂಥ ಅಸಂಪ್ರದಾಯಿಕ ಪದ್ಧತಿಗಳು ಸದ್ದಿಲ್ಲದೇ ನಡೆದುಕೊಂಡು ಬಂದಿರಬಹುದು. ತೀರಾ ಸಣ್ಣಪುಟ್ಟ ಸಂಗತಿಗಳೂ ಅತ್ಯಂತ ದೊಡ್ಡ ವೈeನಿಕ ಕ್ರಾಂತಿಗೆ ಕಾರಣವಾಗಬಹುದು. ಅಂಥವನ್ನು ಹುಡುಕಿ, ಪ್ರೋತ್ಸಾಹಿಸಿ ವ್ಯಾಪಕ ಬಳಕೆಗೆ ಮುಂದಾಗದಿದ್ದರೆ ನಮ್ಮ ‘ಹಿತ್ತಲ ಗಿಡ ಮದ್ದಲ್ಲ’ ಎಂಬ ನಿರ್ಲಕ್ಷ್ಯ ಧೋರಣೆಯನ್ನು ಬಳಸಿ ನಮ್ಮದೇ ಇನ್ನಷ್ಟು ಸಸ್ಯ, ಪ್ರಯೋಗ, ಪದ್ಧತಿಗಳಿಗೆ ಅಮೆರಿಕದಂಥ ಬಂಡವಾಳಶಾಹಿಗಳು ಪೇಟೆಂಟ್ ಪಡೆಯುವಲ್ಲಿ ಅನುಮಾನವಿಲ್ಲ.

‘ಲಾಸ್ಟ್’ಡ್ರಾಪ್: ನಿಮ್ಮ ಮನೆಯ ತ್ಯಾಜ್ಯ ನೀರು ಹರಿಯುವ ಕಾಲುವೆಯ ನಡುವೆಯೂ ಒಂದೆರಡು ಲಾವಂಚದ ಸಸಿಯನ್ನು ತಂದು ಬಿಸಾಡಿ, ಸಾಕು. ಅದು ತನ್ನ ಪಾಡಿಗೆ ತಾನು ಬೃಹತ್ ಪೊದೆಯಾಗಿ ಬೆಳೆದು ಮನೆಮನೆಯಲ್ಲೂ ಪುಟ್ಟ ನೀರು ಶುದ್ಧೀಕರಣ ಘಟಕಗಳು ತಲೆಯೆತ್ತಬಹುದು. ಅಷ್ಟರ ಮಟ್ಟಿಗೆ ಅಂತರ್ಜಲದ ಮಾಲಿನ್ಯವನ್ನು ತಡೆಯಬಹುದು.

Sunday, July 19, 2009

ವರುಣನ ಒಲಿಸಲು ನೂರೆಂಟು ಆಚರಣೆ

ಮಳೆ ಎಂದರೇ ಹಾಗೆಯೇ. ಅದು ಬರಬೇಕಾದಾಗ ಬಂದರೇ ಸರಿ. ಇಲ್ಲದಿದ್ದರೆ ಸಂಕಷ್ಟ ಪರಿಪರಿ. ಹೀಗಾಗಿ ಏನಾದರೂ ಮಾಡಿ ಮಳೆಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಅದು ವೈಜ್ಞಾನಿಕವೋ, ನಂಬಿಕೆಯೋ ಎಂಬುದೆಲ್ಲ ನಗಣ್ಯ. ಒಮ್ಮೆ ಮಳೆ ಬಂದರೆ ಸಾಕು ಎಂದುಕೊಳ್ಳುತ್ತೇವೆ.
ಇಂಥ ಅನಿವಾರ್ಯತೆಯ ಪರಿಣಾಮವೇ, ಕಪ್ಪೆಗಳ ಮದುವೆ, ಕತ್ತೆಗಳ ಮೆರವಣಿಗೆ ಮತ್ತಿತರ ಗ್ರಾಮೀಣ ಆಚರಣೆಗಳು. ಮಳೆಗಾಲ ಸುಭಿಕ್ಷುವಾಗಲಿ ಎಂಬ ಕಾರಣಕ್ಕೆ ಹಳ್ಳಿಗಳಲ್ಲಿ ಆಚರಣೆಯಲ್ಲಿರುವ ಕೆಲ ಪದ್ಧತಿಗಳು ಸಾಕಷ್ಟು ಕುತೂಹಲ ಮೂಡಿಸುತ್ತವೆ.
ಜಾನಪದೀಯರಲ್ಲಿ ಬಹುಮುಖ್ಯ ಮಳೆ ಕರೆಯುವ ಆಚರಣೆಯೆಂದರೆ ಜೋಕುಮಾರನ ಆಹ್ವಾನ. ಇಂದಿಗೂ ಉತ್ತರ ಕರ್ನಾಟಕದ ಬಯಲು ಸೀಮೆಯ ಭಾಗದಲ್ಲಿ ಜೋಕುಮಾರ ಹುಟ್ಟಿದ ನಂತರವೇ ಮಳೆ ಬೀಳುತ್ತದೆ ಎಂಬ ನಂಬುಗೆ ಗಟ್ಟಿಯಾಗಿದೆ. ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಜೋಕುಮಾರ ಅಲ್ಲಿನ ಬದುಕಿನಲ್ಲಿ ಹಾಸು ಹೊಕ್ಕಾಗಿದ್ದಾನೆ. ಜೋಕುಮಾರನ ಪದಗಳಲ್ಲೇ ಇದು ಕಂಡು ಬರುತ್ತದೆ. ಜನರನ್ನು ಬರ ಇನ್ನಿಲ್ಲದೇ ಕಾಡುತ್ತಿರುವಾಗ, ಪೈರೆಲ್ಲ ಒಣಗಿ ನಿಂತಾಗ ಶಿವನ ಮೊರೆಯೊಂದೇ ದಾರಿಯಂತೆ. ಆಗ ಶಿವನಾದೇಶದಂತೆ ಜೋಕುಮಾರ ಕಚ್ಚೆ ಹಾಕಿ, ಮೀಸೆ ತಿರುವಿ, ಹೂವು ಮುಡಿದು, ನೀಲಿ ಕುದುರೆ ಹತ್ತಿ, ತನ್ನ ಶಲ್ಯವನ್ನು ಬೀಸುತ್ತಾ ಮಳೆಯನ್ನು ತನ್ನೊಂದಿಗೆ ಕರೆದುಕೊಂಡು ಬರುತ್ತಾನಂತೆ. ಶಿವನೊಲಿದರೆ ಅವನ ಜಟಾಬಂದಿಯಾಗಿರುವ ಗಂಗೆಯ ಕೃಪೆ ಧರೆಯಮೇಲಾದೀತು ಎಂಬ ನಿರೀಕ್ಷೆ ಹಳ್ಳಗರದ್ದು.
ನ್ಯಾಯ, ನೀತಿ, ಧರ್ಮಗಳು ಕಡಿಮೆಯಾಗಾದ ದೇವತೆಗಳು ಮುನಿದು ಧರೆಗೆ ಬರವನ್ನು ಶಾಪದ ರೂಪದಲ್ಲಿ ನೀಡುತ್ತಾನೆ ಎಂಬುದು ಜನಪದರ ಭಾವನೆ. ಹೀಗಾಗಿ ಇಂಥ ಸಂದರ್ಭದಲ್ಲಿ ದೇವರನ್ನೊಲಿಸಿಕೊಳ್ಳಲು ಪುಣ್ಯ ಕಾರ್ಯ, ದೇವತಾ ಪೂಜೆಗಳಲ್ಲಿ ತೊಡಗಿಕೊಳ್ಳುವುದು ಸಾಮಾನ್ಯ. ದಾನ, ಧರ್ಮ, ಅನ್ನ ಸಂತರ್ಪಣೆಯೂ ಇದರಲ್ಲಿ ಸೇರಿವೆ.
ಇನ್ನು ಕೆಲವೆಡೆ ವೈದಿಕ ಪರಂಪರೆಯಲ್ಲಿ ಮಹಾಭಾರತದ ವಿರಾಟಪರ್ವದ ಪಾರಾಯಣದ ಕ್ರಮವಿದೆ. ರಾತ್ರಿಯಿಡೀ ವಿರಾಟಪರ್ವ ಪ್ರಸಂಗದ ನಾಟಕಾಭಿನಯವೂ ಇರುತ್ತದೆ. ವಿರಾಟರಾಜನಿಗೆ ಧರ್ಮರಾಯ ಧರ್ಮ ಬೋಧನೆ ಮಾಡುವ ಭಾಗ ಅದರಲ್ಲಿರುವುದುರಿಂದ ಆ ಧರ್ಮೋಪದೇಶ ಮಳೆ ತರಿಸುತ್ತದೆ ಎಂಬ ಆಶಯ ಇದರ ಹಿಂದಿರಬಹುದು.
ಮತ್ತೊಂದು ವಿಚಿತ್ರ ನಂಬಿಕೆಯೆಂದರೆ ತೊನ್ನಿದ್ದವರನ್ನು ಹೂತರೆ ಮಳೆಯಾಗುವುದಿಲ್ಲ ಎಂಬುದು. ಬರ ಬಿದ್ದ ಸಂದರ್ಭದಲ್ಲಿ ಅಂಥ ಶವಗಳನ್ನು ಮತ್ತೆ ಹೊರತೆಗೆದು ಉಪ್ಪು ಹಾಕಿ ಹೂಳುತ್ತಾರೆ. ಉಪ್ಪು ಹಾಕಿದರೆ ಶವ ಬೇಗ ಕರಗುತ್ತದೆ. ತಕ್ಷಣ ಮಳೆಯಾಗುತ್ತದೆ ಎನ್ನಲಾಗುತ್ತದೆ. ಸಾವಿಗೆ ಸಂಬಂಸಿದ ಮತ್ತೊಂದು ಪದ್ಧತಿಯೆಂದರೆ ಸ್ಮಶಾನದಲ್ಲಿ ದೇವರ ಮೆರವಣಿಗೆ. ಕೆಲವೊಮ್ಮೆ ದೇವರ ಹೊರಡಿಸಿಕೊಂಡು ಸುಡುಗಾಡು ಗುಡ್ಡೆ ಸೋಸಿ ತೊನ್ನಿರುವವರ ಶವ ತೆಗೆದು ಸುಟ್ಟು ಹಿಂತಿರುಗುತ್ತಾರೆ. ಇದೇ ರೀತಿ ಬರಗಾಲ ಬಸಪ್ಪನನ್ನು ಊರಿಂದ ಓಡಿಸುವ ಕ್ರಮವೂ ಇದೆ.
ವಿಗ್ರಹಗಳನ್ನು ನೀರಿನಲ್ಲಿ ಮುಳುಗಿಸಿಡುವುದು, ದೇವರಿಗೆ ಪರ್ಜನ್ಯ ಮಾಡಿಸುವುದು ಇಂದಿಗೂ ಪ್ರಚಲಿತದಲ್ಲಿರುವ ಕ್ರಮ. ದೇವರ ಅಭಿಷೇಕದ ನೀರನ್ನು ಊರ ಮುಂದಿನ ಕೆರೆಗೆ ತಲುಪಿಸುವುದು, ಗ್ರಾಮದ ಓಣಿಗಳಲ್ಲೆಲ್ಲ ತೀರ್ಥ ಹರಿಸುವುದೂ ರೂಢಿಯಲ್ಲಿದೆ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇರಬಹುದು. ಕಾದ ಭೂಮಿಯ ಮೇಲೆ ನೀರು ಹರಿಯುವುದರಿಂದ ಅದು ಆವಿಯಾಗಿ ಉಷ್ಣತೆಯ ಪ್ರಮಾಣ ಕುಸಿಯುವುದಲ್ಲದೇ ಆವಿ ಮೇಲಕ್ಕೆ ಹೋಗಿ ಮೋಡ ತಂಪಾಗಿ ಮಳೆಯಾಗುವ ಸಾಧ್ಯತೆ ಇದೆ.
ಮಲೆನಾಡಿನ ಕೆಲ ಜನಾಂಗಗಳಲ್ಲಿ ಆಚರಣೆಯಲ್ಲಿರುವ ಮಳೆಮಲ್ಲಪ್ಪನ ಆಚರಣೆ ವಿಶೇಷವಾದದ್ದು. ಜೇಡಿ ಮಣ್ಣಿನಿಂದ ಮಳೆರಾಯನ ಮೂರ್ತಿ ಮಾಡಲಾಗುತ್ತದೆ. ಚಿಕ್ಕ ಹುಡುಗರು ಇದನ್ನು ಹೊತ್ತು ಮನೆ ಮನೆಗೆ ತೆರಳುತ್ತಾರೆ. ಮನೆಯೊಡತಿ ಆ ಬಾಲಕರ ತಲೆಗೆ ಒಂದು ಚಮಚ ಎಣ್ಣೆ ಹಾಕಿ, ಆತನ ತಲೆಯ ಮೇಲೆ ಒಂದು ಕೊಡ ನೀರು ಸುರಿದು, ಹಣ, ಅಕ್ಕಿ ಕೊಟ್ಟು ಕಳುಹಿಸುತ್ತಾಳೆ.
ಎಕ್ಕೆ ಎಲೆಗೆ ಎಣ್ಣೆ ಹಚ್ಚಿ ಕಾಯಿಸಿ, ನಂತರ ನೀರು ತುಂಬಿದ ತಾಮ್ರದ ಚೊಂಬಿನ ಬಾಯಿಗೆ ಅಂಟಿಸಿ ತಲೆಕೆಳಗಾಗಿ ಹಿಡಿದುಕೊಳ್ಳುವ ಆಚರಣೆಯೂ ಇದೆ. ಸಗಣಿ ಉಂಡೆ ಮಾಡಿ ಅದಕ್ಕೆ ಗರಿಕೆಯನ್ನು ಸಿಕ್ಕಿಸಿ ಪೂಜಿಸುವುದೂ ಇದೆ. ಇವೆಲ್ಲವೂ ಮಳೆರಾಯನ ಪ್ರತೀಕ. ಎಲ್ಲ ಸಂಪ್ರದಾಯಗಳು ಮುಗಿದ ಬಳಿಕ ಊರೆಲ್ಲ ಸುತ್ತಿ ಆದ ಮೇಲೆ ಮಲ್ಲಪ್ಪನನ್ನು ಬಾವಿಯಲ್ಲಿ ವಿಸರ್ಜಿಸುತ್ತಾರೆ.
ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಚಂದ್ರಾರಾಧನೆ ವಿಶೇಷ. ಹುಣ್ಣಿಮೆಯ ದಿನ ಅಂಗಳ ಸಾರಿಸಿ, ಕಲಶವಿಟ್ಟು ಅದರ ಸುತ್ತಲೂ ರಂಗುರಂಗಿನ ರಂಗೋಲಿಬಿಡಿಸಿ, ಸಾಕಷ್ಟು ವೈವಿಧ್ಯದ ಹೂವುಗಳಿಂದ ಪೂಜೆ ಮಾಡಲಾಗುತ್ತದೆ. ಪೂಜೆಯ ಬಳಿಕ ಪ್ರಸಾದವಾಗಿ ಅಕ್ಕಿ ಅಥವಾ ರಾಗಿಯ ರೊಟ್ಟಿಯನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ಯಾರಾದರೊಬ್ಬರು (ಸಾಮಾನ್ಯವಾಗಿ ಹುಡುಗರು) ರೊಟ್ಟಿಯನ್ನು ಕದ್ದು ಯಾರಿಗೂ ಸಿಗದಂತೆ ತಪ್ಪಿಸಿಕೊಂಡು ಓಡಿ ಹೋಗಿ ತಿಂದು ಬರುತ್ತಾರೆ. ನಂತರ ಸರತಿಯಲ್ಲಿ ಬಂದು ಪುನಃ ರೊಟ್ಟಿ ಸ್ವೀಕರಿಸುತ್ತಾರೆ. ‘ಕದ್ದ ರೊಟ್ಟಿ ಬೇರೆ, ದೇವರ ಪ್ರಸಾದ ಬೇರೆ’ ಎಂಬ ಗಾದೆ ಮಾತು ಇಲ್ಲಿಂದಲೇ ಹುಟ್ಟಿದ್ದು. ನಂತರ ಎಲ್ಲರೂ ಸೇರಿ ರಂಗವಲ್ಲಿಯ ಸುತ್ತ ಹಾಡಿಕೊಳ್ಳುತ್ತ ಕುಣಿಯುತ್ತಾರೆ. ಚಿಕ್ಕಮಕ್ಕಳ ಮದುವೆ ಆಟವೂ ನಡೆಯುತ್ತದೆ. ಈ ಆಚರಣೆ ಮುಗಿದ ಮರುದಿನ ಮಳೆ ಬಂದೇ ಬರುತ್ತದೆ ಎಂಬ ನಂಬಿಕೆ ಇದೆ.
ಇನ್ನು ಊರ ದೇವರ ಉತ್ಸವ ಮಾಡುವುದು, ವಿಶೇಷ ರಥೋತ್ಸವಗಳನ್ನು ಹಮ್ಮಿಕೊಳ್ಳುವುದು, ದೇವರಿಗೆ ಓಕುಳಿ ಮಾಡಿಸುವುದರಿಂದಲೂ ಮಳೆ ಬರುತ್ತದೆ ಎಂಬ ಲೋಕೋಕ್ತಿ ಇದೆ. ಒಟ್ಟಾರೆ ಮಳೆ ಕರೆಯುವುದರಲ್ಲಿ ಕಲ್ಯಾಣೋತ್ಸವಕ್ಕೆ ವಿಶೇಷ ಪ್ರಾಧಾನ್ಯ.
ಕತ್ತೆಯ ಮೆರವಣಿಗೆಯ ಹಿಂದೆ ಒಂದು ಸ್ವಾರಸ್ಯಕರ ಕಥೆಯೇ ಇದೆ. ಒಮ್ಮೆ ಊರವರೆಲ್ಲ ಕತ್ತೆಯ ಮೇಲೆ ಶಿವನ ವಿಗ್ರಹವಿಟ್ಟು ಮೆರವಣಿಗೆ ಮಾಡುತ್ತಿದ್ದರಂತೆ. ಜನ ಶಿವನಮೂರ್ತಿ ಹೊತ್ತ ಕತ್ತೆಗೆ ನಮಸ್ಕರಿಸುತ್ತಿದ್ದರು. ಜನರ ಭಕ್ತಿ ಶಿವನಿಗೆಂಬುದನ್ನರಿಯ ಗಾರ್ದಭ ಗರ್ವ ದಿಂದ ಹೊರಟಾಗ ಶಿವನ ವಿಗ್ರಹ ಕೆಳಗೆ ಬಿದ್ದುಹೋಯಿತಂತೆ. ಇದರಿಂದ ಕೆರಳಿದ ಶಿವ ಕತ್ತೆಗೆ ‘ನಿನ್ನದು ಹೀನಾಯ ಬದುಕಾಗಲಿ’ ಎಂದು ಶಾಪ ಕೊಟ್ಟು ಬಿಟ್ಟಿನಂತೆ. ಪಶ್ಚಾತ್ತಾಪದಿಂದ ಕತ್ತೆ ಪುನಃ ಶಿವನ ಮೊರೆಹೋದಾಗ ಕರುಣಾಳು ಶಿವ ಒಲಿದು ‘ಮಳೆ ಬಾರದಿದ್ದಾಗ ಒಂದು ಸಂದರ್ಭದಲ್ಲಿ ಮಾತ್ರ ಭೂಲೋಕದ ಜನ ನಿನ್ನ ಪೂಜಿಸುವಂತಾಗಲಿ’ ಎಂಬ ವರಕೊಟ್ಟನಂತೆ. ಅಂದಿನಿಂದ ಮಳೆಗಾಗಿ ಕತ್ತೆ ಮೆರವಣಿಗೆ ಪ್ರಚಲಿತಕ್ಕೆ ಬಂತು ಎನ್ನುತ್ತದೆ ಒಂದು ದಂತ ಕತೆ.
ಮಳೆ ಕೈಕೊಟ್ಟಾಗ ಆರಾಧನೆಯ ಪರಾಕಾಷ್ಠೆ ಎಂಬಂತೆ ವಿಚಿತ್ರ ನಡಾವಳಿಗಳು ರೂಢಿಯಲ್ಲಿವೆ. ಶಿವನಿಗೆ ಕಾರ ಹಚ್ಚುವುದು ಒಂದು ತೆರೆನಾದರೆ, ಮಳೆ ದೇವನನ್ನು ಮೂದಲಿಸುವ ಪರಿ ಇನ್ನೊಂದು. ಉತ್ತರ ಕರ್ನಾಟಕದ ಹಲವೆಡೆ ಮಳೆದೇವ ಮಲ್ಲಪ್ಪನನ್ನು ಬಿಸಿಲಲ್ಲಿ ಒಣಹಾಕುತ್ತಾರೆ. ಬಿಸಿಲ ತಾಪ ತಡೆಯಲಾರದೇ ದೇವ ಒಲಿದು ಮಳೆ ಸುರಿಸುತ್ತಾನೆಂಬ ನಂಬಿಕೆ ಇದರ ಹಿಂದಿರಬಹುದು. ಇನ್ನು ‘ಗುಳ್ಳವ್ವನ ಆಚರಣೆ ’ ಎಂಬುದರಲ್ಲಿ ಮುಳ್ಳುಕಂಟಿಯಲ್ಲಿ ಮಳೆದೇವರನ್ನು ಎಸೆದು ಬರಲಾಗುತ್ತದೆ. ಕೋಲಾರ ಜಿಲ್ಲೆಯ ಹಲವೆಡೆ ಕೆರೆಯ ಅದೇವತೆ ದುಗ್ಗಮ್ಮನಿಗೆ ಕಲ್ಲು ಹೊಡೆಯಲಾಗುತ್ತದೆ. ದೇಗುಲದ ಬಾವಿಗೆ ಸಗಣಿ ಕರಡುವುದು, ದೇವರ ವಿಗ್ರಹಕ್ಕೆ ತಿಗಣೆ, ಚೇಳುಗಳನ್ನು ಬಿಡುವ ಪರಮ ವಿಚಿತ್ರಗಳೂ ಇಂಥ ನಂಬಿಕೆಗಳ ಭಾಗವಾಗಿವೆ.
ಮಾಟ, ಮಂತ್ರಗಳ ಮೂಲಕ ಮಳೆ ಬರಿಸುವ ನಂಬಿಕೆಗಳೂ ಚಾಲ್ತಿಯಲ್ಲಿವೆ. ಮಾಟಗಾತಿಯ ಮನೆಯ ಮುಂದೆ ಕಲ್ಲು ರಾಶಿ ಹಾಕುವುದು, ಬಸುರಿ ಕಪ್ಪೆಯನ್ನು ಸಿಗಿದು ಊರ ಮುಂದೆ ನೇತಾಡಿಸುವುದು ಸಹ ಇವು ಗಳಲ್ಲಿ ಒಂದು. ಆಫ್ರಿಕಾದ ನೈಲ್ ನದಿಯ ಪ್ರದೇಶದಲ್ಲಿ ಮಾಂತ್ರಿಕರು ತೊಗಟೆ ಸುಲಿದ ಕೋಲಿನಿಂದ ಮಳೆ ತರಿಸುತ್ತಾರಂತೆ.
ನಮ್ಮಲ್ಲಿ ಹಲವೆಡೆ ಕೊಂಬು, ಕಹಳೆ, ತಮಟೆ ಬಾರಿಸಿ ಮಳೆ ಕರೆಯುವುದೂ ರೂಢಿಯಲ್ಲಿದೆ. ಏನೇ ಇರಲಿ, ಇಂಥವುಗಳ ಅಧ್ಯಯನ, ಸಂಶೋಧನೆಗಳು ಸಾಂಸ್ಥಿಕ ಮಟ್ಟದಲ್ಲಿ ನಡೆಯದಿರುವುದು ದುರಂತ. ಅಂಥ ಪ್ರಯತ್ನಗಳು ಮಳೆ ಕುರಿತಾದ ಇನ್ನಷ್ಟು ಹೊಸ ಹೊಳಹುಗಳನ್ನು ತೆರೆದಿಟ್ಟಾವು.

‘ಲಾಸ್ಟ್’ಡ್ರಾಪ್: ಭಾರತದಲ್ಲಿ ಕೃಷಿಯೆಂಬುದು ಮಳೆಯನ್ನೇ ಬಹುತೇಕ ಅವಲಂಬಿಸಿರುವುದೂ ಆಚರಣೆ, ನಂಬಿಕೆಗಳ ಹೆಚ್ಚಳಕ್ಕೆ ಕಾರಣವಿರಬಹುದು.

Friday, July 10, 2009

ಮೋಡ ಬಿತ್ತನೆಗೆ ಮಳೆ ಉದುರೀತೆ ?

ಒಂದಂತೂ ಸತ್ಯ. ಅದು ವೈಜ್ಞಾನಿಕ ನಂಬಿಕೆಗಳೇ ಇರಬಹುದು. ಜಾನಪದೀಯವೇ ಇರಬಹುದು. ಮಳೆಯ ವಿಚಾರದಲ್ಲಿ ನಂಬಿಕೆ ಎನ್ನುವುದು ನಂಬಿಕೆಯಷ್ಟೇ. ಮಳೆ, ಬರಗಾಲ, ಅತಿವೃಷ್ಟಿ ಹೀಗೆ ಪ್ರಕೃತಿಯ ವ್ಯಾಪಾರವನ್ನು ಬದಲಿಸುವ, ನಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುವ ಯಾವುದೇ ಶಕ್ತಿ ಸಾಮರ್ಥ್ಯಗಳೂ ಈವರೆಗೆ ಮನುಕುಲಕ್ಕೆ ದಕ್ಕಿಲ್ಲ ಎಂಬುದೇ ಸತ್ಯ. ಆ ನಿಟ್ಟಿನಲ್ಲಿ ಒಂದಷ್ಟು ಪ್ರಯತ್ನಗಳಾಗಿರಬಹುದು ಅಷ್ಟೆ.
ಅದಿಲ್ಲದಿದ್ದರೆ ಅತ್ಯಂತ ವೈಜ್ಞಾನಿಕ ಎಂದು ಹೇಳಿಕೊಳ್ಳುವ, ಕೋಟ್ಯಂತರ ರೂ.ಗಳನ್ನು ಸುರಿದು ಮಾಡುವ ಮೋಡಬಿತ್ತನೆಯಿಂದ ನಮಗೆ ಬೇಕೆಂದಾಗಲೆಲ್ಲ, ಬೇಕೆನಿಸಿದಲ್ಲೆಲ್ಲ ಮಳೆ ಸುರಿಸಿಕೊಳ್ಳಲು ಸಾಧ್ಯವಾಗಿಲ್ಲವೇಕೆ ? ಶತಮಾನಗಳಿಂದಲೂ ಮಳೆಯನ್ನು ಕಟ್ಟಿ ಕರೆತರುವ ನಿಟ್ಟಿನಲ್ಲಿ ಪ್ರಯತ್ನಗಳು ಆಗುತ್ತಲೇ ಇವೆ. ಒಂದೆರಡಲ್ಲ ಇಂಥ ನೂರಾರು ಪ್ರಯೋಗಗಳಿಗೆ ಈ ಭೂಮಂಡಲ ಸಾಕ್ಷಿಯಾಗಿದೆ. ಒಂದೊಮ್ಮೆ ಅವೆಲ್ಲವೂ ಸಾಕಾರಗೊಂಡಿದ್ದರೆ ಕಾರ್ಪೊರೇಷನ್ ವಾಲ್ವ್ ತಿರುಗಿಸಿಕೊಂಡು ನೀರು ಬಿಟ್ಟುಕೊಳ್ಳುವ ಹಾಗೆ ಆಗಸಕ್ಕೊಂದು ಪೈಪ್‌ಲೈನ್ ಎಳೆದು ಅಲ್ಲಿಂದ ಬೇಕಾದಾಗಲೆಲ್ಲ ಮಳೆ ನೀರನ್ನು ನಮ್ಮ ಮನೆಯಂಗಳಕ್ಕೆ ಮಾತ್ರ ಹಾಯಿಸಿಕೊಂಡು ಬಿಡುತ್ತಿದ್ದೆವೇನೋ. ಅಜ್ಜಿ ಪುಣ್ಯಕ್ಕೆ ಅದೊಂದು ಮಾತ್ರ ಅಜೀಬಾತ್ ದಕ್ಕದೇ ಹೋಗಿದೆ. ಇಲ್ಲದಿದ್ದರೆ ಅಂತರ್ಜಲಕ್ಕೆ ಒದಗಿರುವ ಸ್ಥಿತಿಯೇ ಇಂದು ನಭದ ನೀರಿನ ವಿಚಾರದಲ್ಲೂ ನಿರ್ಮಾಣವಾಗಿರುತ್ತಿತ್ತು. ಮೇಲಿಂದ ಮೋಡ, ಮಳೆಯುಳಿಸಿ ಎಂಬ ಅಭಿಯಾನಗಳೊಂದಿಗೆ ಒಂದಷ್ಟು ಎನ್‌ಜಿಒಗಳು ಹುಟ್ಟಿಕೊಂಡಿರುತ್ತಿದ್ದವು. ಅದಕ್ಕೆ ವಿಶ್ವಸಂಸ್ಥೆಯ ಮಟ್ಟದಲ್ಲೊಂದು ಜಾಗತಿಕ ಸಮ್ಮೇಳನವೇರ್ಪಟ್ಟಿರುತ್ತಿತ್ತು. ಭೀಷಣ ಭಾಷಣಗಳು ಎಲ್ಲೆಡೆ ಮೊಳಗಿರುತ್ತಿದ್ದವು. ಫಾರಿನ್ ಫಂಡ್‌ಗಳು ಎಲ್ಲೆಂದರಲ್ಲಿ ನೀರಿಗಿಂತ ಹೆಚ್ಚಾಗಿ ಹರಿದಾಡುತ್ತಿದ್ದವು...... ಸದ್ಯ, ಬಚಾವ್ ಆಗಿದ್ದೇವೆ, ಇವೆಲ್ಲ ಆಗಿಲ್ಲ ಬಿಡಿ.
ಆದರೆ, ೧೯೪೬ರಲ್ಲಿ ಮೊಟ್ಟ ಮೊದಲ ಬಾರಿಗೆ ನಡೆದ ಪ್ರಯೋಗವೊಂದು ಇಡೀ ವಿಶ್ವದ ಗಮನವನ್ನೇ ಸೆಳೆದದ್ದು ನಿಜ. ಅಮೆರಿಕದ ವಿನ್ಸೆಂಟ್ ಶೇಫರ್ ಎಂಬಾತ ಮೋಡಗಳನ್ನು ತಡೆದು ನಿಲ್ಲಿಸಿ ಮಳೆ ಸುರಿಸಿಕೊಳ್ಳುವ ತಾತ್ಕಾಲಿಕ ಪ್ರಯೋಗವೊಂದರಲ್ಲಿ ಸ್ವಲ್ಪ ಮಟ್ಟಿಗಿನ ಯಶಸ್ಸನ್ನು ಕಂಡುಕೊಂಡ. ಆಗಸವೆಂಬೋ ಬಯಲಲ್ಲಿ ಮೋಡಗಳ ಬೀಜ ಬಿತ್ತಿ ಮಳೆಯ ಬೆಳೆಯನ್ನು ತೆಗೆದ ಆತನ ಈ ಸಾಧನೆಯ ಹಿಂದೆ ಅತ್ಯಂತ ಕುತೂಹಲಕಾರಿ ಕಥೆಯೊಂದು ತೆರೆದುಕೊಳ್ಳುತ್ತದೆ. ಶೇಫರ್ ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯ. ಬಡ ಕುಟುಂಬದ ಹಿನ್ನೆಲೆಯಿಂದ ಬಂದವನು. ಹೆಚ್ಚಿಗೆ ಓದಲಾಗಲಿಲ್ಲ. ಅವನು ಓದಿದ್ದರೆ ಸೋದರಿಯರನ್ನು ಓದಿಸಲಾಗುತ್ತಿರಲಿಲ್ಲ. ಓದಿಗೂ, ಜ್ಞಾನಕ್ಕೂ, ಸಾಧನೆಗೂ ಅರ್ಥಾತ್ ಸಂಬಂಧವಿಲ್ಲ ಬಿಡಿ. ಶೇಫರ್ ವಿಚಾರದಲ್ಲೂ ಹೀಗೆಯೇ ಆದದ್ದು. ೧೫ನೇ ವರ್ಷಕ್ಕೆ ಶಾಲೆ ಬಿಟ್ಟವನು ಹೊಟ್ಟೆ ಪಾಡಿಗೆ ಸೇರಿಕೊಂಡದ್ದು ಎಲೆಕ್ಟ್ರಿಕಲ್ ಸಂಸ್ಥೆಯೊಂದರಲ್ಲಿ ಆಪರೇಟರ್ ಆಗಿ. ಬಿಡುವಿನ ವೇಳೆಯನ್ನು ಸುಮ್ಮನೆ ಕಳೆಯುವ ಜಾಯಮಾನದವನಲ್ಲ ಶೇಫರ್. ಹೂದೋಟ ಬೆಳೆಸುವುದು ನೆಚ್ಚಿನ ಹವ್ಯಾಸ. ಜತೆಗೊಂದಿಷ್ಟು ಓದು. ಒಂದು ರೀತಿಯಲ್ಲಿ ಆತ ಪುಸ್ತಕದ ಹುಳು. ಪುಸ್ತಕ ಇಲ್ಲದಿದ್ದರೆ ಮನೆಯ ಮುಂದಿನ ಚಿಕ್ಕ ಜಾಗದಲ್ಲಿ ಏನಾದರೊಂದು ಮಾಡುತ್ತ ಇದ್ದಾನೆಂದೇ ಅರ್ಥ. ಅಂತೂ ಹತ್ತಾರು ಬಗೆಯ ಹೂಗಿಡಗಳನ್ನು ಬೆಳೆಸಿದವನಿಗೆ ಅದಕ್ಕೆ ತಕ್ಕಷ್ಟು ನೀರೊದಗಿಸಲಾಗದ ಕೊರಗು ಇದ್ದೇ ಇತ್ತು. ಮಳೆ ಬಂದಾಗಲೆಲ್ಲ ಗಿಡಗಳು ಚಿಗಿತುಕೊಳ್ಳುತ್ತಿದ್ದವು. ಮಳೆ ಹೋದ ಮೇಲೆ ಮತ್ತದೇ ಕತೆ.
ಈತ ಕೆಲಸ ಮಾಡುತ್ತಿದ ಎಲೆಕ್ಟ್ರಿಕಲ್ ಸಂಸ್ಥೆಯಲ್ಲೇ ಖ್ಯಾತ ವಿಜ್ಞಾನಿ, ನೊಬೆಲ್ ಪುರಸ್ಕೃತ ಇರ್ವಿಂಗ್ ಮ್ಯುರ್ ಉನ್ನತ ಸಂಶೋಧನೆಯೊಂದರಲ್ಲಿ ತೊಡಗಿದ್ದರು. ಅವರು ಸದಾ ಪುಸ್ತಕದೊಳಗೆ ಮುಖ ತೂರಿಸಿಕೊಂಡಿರುತ್ತಿದ್ದುದು ಶೇಫರ್‌ನಲ್ಲಿ ಎಂಥದೋ ಅಸೂಯೆ ಹುಟ್ಟಿಸುತ್ತಿತ್ತು. ಯಾವಾಗಾದರೊಮ್ಮೆ ಈತ ಕತ್ತೆತ್ತಿ ತನ್ನನ್ನು ನೋಡಬಾರದೇ ? ತನ್ನನ್ನು ಜತೆಗೆ ಕರೆದು ಒಂದಷ್ಟು ಕೆಲಸ ಹೇಳಬಾರದೇ ಎನ್ನಿಸುತ್ತಿತ್ತು ಆತನಿಗೆ. ಕೊನೆಗೂ ಆ ದಿನ ಬಂತು. ಮ್ಯುರ್‌ಗೆ ಶೇಫರ್‌ನ ಕಾರ್ಯದಕ್ಷತೆ, ಪ್ರಾಮಾಣಿಕತೆ ಇಷ್ಟವಾಯಿತು. ಕೊನೆಯವರೆಗೂ ಮ್ಯುರ್ ಸಂಶೋಧನೆಗೆ ಉಪಕರಣಗಳನ್ನು ಒದಗಿಸಿದ್ದು ಶೇಫರ್‌ನೇ. ಕೊನೆಕೊನೆಗೆ ಎಷ್ಟರ ಮಟ್ಟಿಗೆ ಮ್ಯುರ್ ಆತನನ್ನು ಅವಲಂಬಿಸಿದರೆಂದರೆ ಅದು ಸಂಶೋಧನೆಯಿರಲಿ, ಮತ್ಯಾವುದೇ ಕೆಲಸವಿರಲಿ ಶೇಫರ್ ಬೆನ್ನ ಹಿಂದೆ ಇರಲೇಬೇಕು ಎನ್ನುವಂತಾಯಿತು.
ಈ ನಡುವೆ, ಎರಡನೇ ಮಹಾಯುದ್ಧ ಘೋಷಣೆಯಾಗಿ ಇಡೀ ವಿಶ್ವ ಇಬ್ಭಾಗವಾಗಿತ್ತು. ‘ಗ್ಯಾಸ್ ಮಾಸ್ಕ್’ ಗೆ ಎಲ್ಲೆಲ್ಲೂ ಬೇಡಿಕೆ. ಜತೆಗೊಂದಿಷ್ಟು ಕಾರ್ಯಾಚರಣೆಗಾಗಿ ಹೊಗೆಯುಗುಳುವ ರಾಸಾಯನಿಕಗಳ ಸೃಷ್ಟಿಗೆ ಸೇನೆ ಕೋರಿತ್ತು. ಮ್ಯುರ್, ಶೇಫರ್ ಇಬ್ಬರಿಗೂ ಕೆರೆದುಕೊಳ್ಳಲೂ ಪುರುಸೊತ್ತಿಲ್ಲ. ಜತೆ ಜತೆಯೇ ದುಡಿಯುತ್ತಿದ್ದರೂ ಶೇಫರ್‌ನ ತುಡಿತ, ತಾನೇ ಏನಾದರೂ ಸಾಸಬೇಕು; ಹೊಸತೊಂದನ್ನು ಮಾಡಿ ತೋರಿಸಿ ಭೇಷ್ ಎನ್ನಿಸಿಕೊಳ್ಳಬೇಕೆಂಬುದು. ಯೋಚನೆಗೇನೂ ಬರವಿರಲಿಲ್ಲ. ಆದರೆ, ಯುದ್ಧಭೂಮಿಯಲ್ಲಿ ಮನುಷ್ಯ ನಿರ್ಮಿತ ಭೀಕರ ಬರಗಾಲ. ಆಗಸದಲ್ಲಿ ಕಟ್ಟಿದ ಹಿಮವನ್ನು ಉದ್ದೇಶಪೂರ್ವಕ ನಿವಾರಿಸಲಾಗುತ್ತಿತ್ತು. ಹೀಗಾಗಿ, ಸುಡುಸುಡು ಸುಡುತ್ತಿತ್ತು ಭೂಮಿ. ಅಂಥ ತಾಪಮಾನದಲ್ಲಿ ಗಿಡಗಳ ಕತೆ ಏನಾಯಿತೋ ಎಂಬ ಚಿಂತೆಯೂ ನಡು ನಡುವೆ ಕಾಡುತ್ತಿತ್ತು. ಯುದ್ಧಭೂಮಿಗೆ ವಿಮಾನದಲ್ಲಿ ವೀಕ್ಷಣೆಗಾಗಿ ಮ್ಯುರ್ ಜತೆ ಹೋಗುತ್ತಿದ್ದಾಗಲೆಲ್ಲ ಹಾದು ಹೋಗುವ ಮೋಡಗಳನ್ನು ಕಂಡು ಹೊಟ್ಟೆ ಉರಿಸಿಕೊಳ್ಳುತ್ತಿದ್ದ ಶೇಫರ್. ಈ ಮೋಡಗಳೇಕೆ ಇಲ್ಲಿಯೇ ನಿಂತು ಮಳೆ ಸುರಿಸಬಾರದು. ತನ್ನ ಗಿಡಗಳಿಗೆ ನೀರುಣಿಸಬಾರದು ಎಂದುಕೊಳ್ಳುತ್ತಿದ್ದ. ‘ಎಲ್ಲಿ ಓಡುವಿರಿ, ನಿಲ್ಲಿ ಮೋಡಗಳೆ, ನಾಲ್ಕು ಹನಿಯ ಚೆಲ್ಲಿ’ ಎಂದು ಹಾಡಿಕೊಳ್ಳುತ್ತಿದ್ದನೇನೋ.
ಅಂಥದೇ ಒಂದು ದಿನ ಮ್ಯುರ್ ಜತೆ ವಿಮಾನದಲ್ಲಿ ಹೊರಟಿದ್ದ. ಎಂದಿನಂತೆ ಯುದ್ಧ ಭೂಮಿಯ ಮೇಲಿನ ಹಿಮ ನಿವಾರಣೆಯ ಕೆಲಸ ಮಾಡುತ್ತಿದ್ದರವರು. ಅದಿಲ್ಲದಿದ್ದರೆ ಸೈನಿಕರ ವೈಮಾನಿಕ ದಾಳಿಗೆ ಅದು ಅಡ್ಡಿ ಉಂಟು ಮಾಡುತ್ತಿತ್ತು. ಇಂಗಾಲದ ಡೈ ಆಕ್ಸೈಡ್ ಅವರ ಸಂಶೋಧನೆಯಲ್ಲಿ ಬಳಕೆಯಾಗುತ್ತಿತ್ತು. ಇಂಗಾಲದ ಡೈ ಆಕ್ಸೈಡ್ ಹಿಮವನ್ನು ಕರಗಿಸುತ್ತದಾದರೆ ಮೋಡಗಳನ್ನೇಕೆ ಕರಗಿಸಬಾರದು ಎಂಬ ಪ್ರಶ್ನೆ ಶೇಫರ್‌ನ ತಲೆಯಲ್ಲಿ ಸುಳಿದು ಹೋಯಿತು. ಸಮಯ ಸಿಕ್ಕಾಗ ತಣ್ಣಗೆ ಹೀಗೊಂದು ಪ್ರಯೋಗ ಮಾಡಿ ಬಿಡಬೇಕು ಎಂದು ಕಾಯುತ್ತಿದ್ದ. ಆವತ್ತು ಮೆಸಾಚ್ಯುಸೆಟ್ಸ್‌ನ ಪಶ್ಚಿಮದ ಗ್ರೆಲಾಕ್ ಪರ್ವತ ಶ್ರೇಣಿಯ ಮೇಲೆ ಹಾರುತ್ತಿತ್ತು ವಿಮಾನ. ಮೋಡಗಳು ಭರದಿಂದ ಓಡುತ್ತಿದ್ದವು. ಸುಮ್ಮನೆ ಕುಳಿತಿದ್ದ ಶೇಫರ್‌ಗೆ ಏನೋ ಚಡಪಡಿಕೆ. ಮ್ಯುರ್‌ರತ್ತ ನೋಡಿದ. ಅವರು ದೂರದರ್ಶಕದಿಂದ ಮೋಡಗಳತ್ತ ಕಣ್ಣು ನೆಟ್ಟು ಕುಳಿತಿದ್ದರು. ಇದೇ ಸುಸಮಯವೆಂದುಕೊಂಡ ಶೇಫರ್ ಸಂಶೋಧನೆಗಾಗಿ ಸಂಗ್ರಹಿಸಿಟ್ಟಿದ್ದ ಇಂಗಾಲದ ಡೈ ಆಕ್ಸೈಡ್ ಅನ್ನು ಓಡುವ ಮೋಡಗಳ ಮೇಲೆ ಚೆಲ್ಲಿಯೇ ಬಿಟ್ಟ. ಹತ್ತೇ ನಿಮಿಷ... ಮ್ಯುರ್ ನೋಡುತ್ತಲೇ ಇದ್ದರು. ಅದೇ ಮೋಡಗಳು... ಕರಗಿದವು. ಕರಕರಗಿ ಹನಿಗಳಾದವು. ಹನಿಗಳು ಹಾರುತ್ತಾ ಭೂಮಿಯತ್ತ ಭರದಿಂದ ನುಗ್ಗಿದವು. ಹೌದು, ಮಳೆ ಸುರಿದುಹೋಗಿತ್ತು. ಅದೇ ಮೋಡಬಿತ್ತನೆಯ ಸಂಶೋಧನೆಗೆ ಕಾರಣವಾಯಿತು.
ನಂತರದ ದಿನಗಳಲ್ಲಿ ಬರ್ನಾರ್ಡ್ ವೋನೆಗಟ್ ಎಂಬುವವರು ಇದನ್ನೇ ಉನ್ನತೀಕರಿಸಿ ಸಿಲ್ವರ್ ಅಯೋಡೈಡ್ ಬಳಕೆಯನ್ನು ಮೋಡಬಿತ್ತನೆಯಲ್ಲಿ ಜಾರಿಗೆ ತಂದರು. ಆ ಬಳಿಕ ಇಂಥ ಒಂದಿಲ್ಲೊಂದು ಪ್ರಯೋಗಗಳು ನಡೆಯುತ್ತಲೇ ಇವೆ. ಇದೀಗ ಮಳೆ ಬಾರದಿದ್ದರೂ ಮೋಡಬಿತ್ತನೆ ಮಾಡುತ್ತೇವೆ. ಕಾಳ್ಗಿಚ್ಚು, ಭೀಕರ ಅಗ್ನಿ ದುರಂತಗಳ ಸಂದರ್ಭದಲ್ಲೂ ಮೋಡಬಿತ್ತನೆಗೆ ಮುಂದಾಗಿದ್ದೇವೆ. ವಿಶ್ವದ ಸರಿಸುಮಾರು ಐವತ್ತಕ್ಕೂ ಹೆಚ್ಚು ದೇಶಗಳಲ್ಲಿ ಇಂಥ ತಾತ್ಕಾಲಿಕ ಮಳೆ ಸುರಿಸಿಕೊಳ್ಳುವಿಕೆ ನಡೆದೇ ಇದೆ. ಚೀನಾದಲ್ಲಂತೂ ಇದು ಎಷ್ಟು ಜನಪ್ರಿಯ ಎಂದರೆ ಒಂದು ಪ್ರಾಂತ್ಯದ ಮೋಡಗಳನ್ನು ಇನ್ನೊಂದು ಪ್ರಾಂತ್ಯದವರು ಕದ್ದು ಹೋಗುತ್ತಿದ್ದಾರೆ. ಅದಕ್ಕಾಗಿ ಕಾವಲು ಏರ್ಪಾಡೂ ನಡೆದಿದೆ. ಬಹುಶಃ ನಮ್ಮಲ್ಲಾಗಿದ್ದರೆ ಮೋಡಗಳಿಗೊಂದೊಂದು ಹೆಸರಿಟ್ಟು ಅದಕ್ಕಾಗಿ ಅಕ್ಕ ಪಕ್ಕದ ರಾಜ್ಯಗಳು ಕಿತ್ತಾಟಕ್ಕಿಳಿದು, ಇಷ್ಟರಲ್ಲಾಗಲೇ ನ್ಯಾಯಾಕರಣವೂ ರಚನೆಯಾಗಿರುತ್ತಿತ್ತೇನೋ. ಇಷ್ಟೆಲ್ಲ ಇದ್ದರೂ ಮೋಡ ಬಿತ್ತನೆ ಮಾಡಿದ ತಕ್ಷಣ ಇಂತಲ್ಲೇ, ಇಂತಿಷ್ಟೇ ಮಳೆ ಸುರಿದೇ ಬಿಡುತ್ತದೆಂಬ ಖಚಿತತೆ ಇಲ್ಲ. ಎಷ್ಟಾದರೂ ಅದು ಪ್ರಕೃತಿಯ ಭಾಗವಲ್ಲವೇ ? ಪ್ರಕೃತಿ ಎಂದಾದರೂ ತನ್ನ ಗುಟ್ಟು ಬಿಟ್ಟುಕೊಟ್ಟಿದ್ದಿದೆಯೇ?

‘ಲಾಸ್ಟ್’ಡ್ರಾಪ್: ಭಾರತದಲ್ಲಿ ಮೊದಲ ಬಾರಿಗೆ ಮೋಡ ಬಿತ್ತನೆಗಿಳಿದ ಹೆಗ್ಗಳಿಕೆ ಕರ್ನಾಟಕದ್ದು. ೨೦೦೩ರಲ್ಲಿ ಎಚ್.ಕೆ.ಪಾಟೀಲ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಆಪರೇಷನ್ ವರುಣ ಹೆಸರಲ್ಲಿ ಗದಗ, ಧಾರವಾಡ ಸುತ್ತಮುತ್ತ ಮೋಡಬಿತ್ತನೆ ನಡೆಯಿತಾದರೂ ಅಷ್ಟು ಯಶ ಕಂಡಿರಲಿಲ್ಲ.

Friday, July 3, 2009

ಕಾವೇರಿ ಕಾನನದಲ್ಲಿ ಇಸ್ಕಾನ್‌ನ ಚೈತನ್ಯ ಕೃಷಿ

ಕಾವೇರಿ ತಟದ ಆ ಹಸಿರ ಮಡಿಲಲ್ಲಿ ಸಸ್ಯ ಶಾಮಲೆಯ ಹಾಸ, ಕೃಷ್ಣ ರಾಧೆಯರ ವಿಲಾಸ. ಕಾದು ಕಂಗೆಟ್ಟು ಹೋಗಿದ್ದ ಬಂಜರು ಮರುಭೂಮಿಯಲ್ಲಿ ಇಂದು ಹಸಿರ ಸಾಮ್ರಾಜ್ಯದ ವಿಕಾಸ. ನವನವೋನ್ಮೇಲಿತ ಶಾಲಿನಿಯಾಗಿ ನಲಿದಾಡುತ್ತಿರುವ ಪ್ರಕೃತಿಯ ನಟ್ಟ ನಡುವೆ ಶ್ಯಾಮನ ಇಂಪು, ಇಂಪು ಮುರಲೀಗಾನ ತೇಲಿ ಬರುತ್ತಿರುತ್ತದೆ. ಅಂಥ ಇನಿದನಿಗೆ ಮೇಳೈಸಿ ಕೇಳುವ ಕರುಗಳ ಕಿರುಗೆಜ್ಜೆಯ ನಾದ. ವನದ ತುಂಬೆಲ್ಲ ಕುಣಿದಾಡುವ ಕರಿಗಣ್ಣಿನ ಆ ಕರುವನ್ನು ಮಮತೆಯಿಂದ ಗೋ ಮಾತೆ ಅಂಬಾ...ಎಂದು ಕರೆವಾಗಲಂತೂ ಮಾತೃತ್ವವೇ ಮೈವೆತ್ತಿ ಬಂದು ನಿಂತ ಅನುಭವ.


ಅಲ್ಲಿ ಜೀವನ ಪ್ರೇಮದ ಆದರ್ಶವಿದೆ. ಸುಸ್ಥಿರ ಬದುಕನ್ನು ಕಟ್ಟಿಕೊಡುವ ವಿಶ್ವಾಸವಿದೆ. ಸಾಧನೆಗೆ ಅಡಿಗಲ್ಲಾಗುವ ಆತ್ಮ ಸ್ಥೈರ್ಯವಿದೆ. ಜೀವನ್ಮುಖಿ ಚೈತನ್ಯ ಧಾರೆಯ ಪ್ರವಾಹವೇ ಇದೆ. ಇಡೀ ಬದುಕನ್ನು ದೇಶೀಯ ತಳಹದಿಯಲ್ಲೇ ಕಟ್ಟಿಕೊಳ್ಳಬೇಕೆಂಬ ಹವಣಿಕೆಗೆ ಸೂಕ್ತ ಮಾರ್ಗದರ್ಶನವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲೆಲ್ಲೂ ಮಾರ್ದನಿಸುವ ಸಕಾರಾತ್ಮಕ ದನಿಯಿದೆ. ಅದೆಲ್ಲವನ್ನೂ ತನ್ನ ಕೊಳಲನಾದದ ಮೋಡಿಗೊಳಗಾಗಿಸಿಟ್ಟುಕೊಂಡಿರುವ ರಾಧಾರಮಣನಿದ್ದಾನೆ. ಒಟ್ಟಾರೆ ಶ್ರೀರಂಗಪಟ್ಟಣದ ಸಮೀಪದ ಮಹದೇವಪುರವೆಂಬ ಆ ಚಿಕ್ಕ ಹಳ್ಳಿ ಪಕ್ಕಾ ಬೃಂದಾವನದ ಪ್ರತಿರೂಪ.



ಒಂದು ಕಾಲದಲ್ಲಿ ಕಾವೇರಿಯ ಪ್ರವಾಹಕ್ಕೆ ಸಿಲುಕಿ ತನ್ನೆಲ್ಲ ಸ್ವಂತಿಕೆಯನ್ನು ನದಿಯ ಹರಿವಿಗರ್ಪಿಸಿಕೊಂಡು ಸಂಪೂರ್ಣ ಬೆತ್ತಲಾಗಿಹೋಗಿದ್ದ ಆ ನೆಲಕ್ಕೊಂದಿಷ್ಟು ಹಸಿರ ಉಡುಗೆಯನ್ನು ಉಡಿಸಿದ್ದು ಸುಲಭದ ಮಾತೇನಲ್ಲ. ಇಸ್ಕಾನ್ ಸಂಸ್ಥಾಪಕ ಶ್ರೀಲ ಪ್ರಭುಪಾದರ ಸಿದ್ಧಾಂತ ಪ್ರತಿಪಾದನೆಯೊಂದಿಗೆ ೧೯೯೪ ರಲ್ಲಿ ಅಲ್ಲಿಗೆ ಜಯಚೈತನ್ಯ ಪ್ರಭು ಎಂಬ ಕೃಷಿ ಮಾಂತ್ರಿಕ ಕಾಲಿಟ್ಟಾಗ, ಆ ೮೦ ಎಕರೆ ಪ್ರದೇಶದಲ್ಲಿ ಕಂಡದ್ದು ಬರೀ ಮರಳಿನ ರಾಶಿಯನ್ನೇ. ಅದು ಬಿಟ್ಟರೆ ಆಗಾಗ ಮೈಕಾಯಿಸಿಕೊಳ್ಳಲು ನದಿಯಿಂದ ಮೇಲೆದ್ದು ಬಂದು ದಡದ ಮೇಲೆ ಮಲಗಿರುತ್ತಿದ್ದ ಒಂದಷ್ಟು ಮೊಸಳೆಗಳಷ್ಟೇ. ಆ ನೆಲದಲ್ಲಿ ಇನ್ನೇನು ಬೆಳೆದೀತು ? ಪ್ರಶ್ನೆಯನ್ನಷ್ಟೇ ಕೇಳಿಕೊಂಡು ಜಯ ಚೈತನ್ಯ ಪ್ರಭು ಕುಳಿತಿದ್ದರೆ ಮಹದೇವಪುರ ಇಂದಿನ ಮಹತ್ತರ ಸಾಧನೆಗೆ ಸಾಕ್ಷಿಯಾಗಿರುತ್ತಿರಲಿಲ್ಲ.
ಅಲ್ಲಿದ್ದ ಮೊದಲ ಸವಾಲೆಂದರೆ, ರೋಗಪೀಡಿತವಾಗಿ ಹೋಗಿದ್ದ ನೀರು-ಮಣ್ಣಿಗೆ ಸಂಸ್ಕಾರ ಕೊಡುವುದು. ಸಮುದ್ರದ ನೆಂಟಸ್ತನ ಉಪ್ಪಿಗೆ ಬರ ಎಂಬ ಮಾತಿಲ್ಲವೇ-ಹಾಗೆಯೇ ಪಕ್ಕದಲ್ಲೇ ಕಾವೇರಿಯ ಹರಿವಿದೆ, ಆದರೆ ನೆಲಕ್ಕೆ ಹಾಯಿಸಿಕೊಳ್ಳಲು ವ್ಯವಸ್ಥೆಯಿಲ್ಲ. ವಿಶಾಲ ಭೂ ಪ್ರದೇಶವೇನೋ ಇದೆ. ಆದರೆ ಅದು ಸಂಪೂರ್ಣ ಫಲವತ್ತತೆಯನ್ನು ಕಳೆದುಕೊಂಡು ಬೆಂಗಾಡಾಗಿ ಪರಿವರ್ತನೆಯಾಗಿಹೋಗಿದೆ. ನೀರು-ಮಣ್ಣುಗಳ ಸುದೀರ್ಘ ಮೈಥುನದ ಫಲವಾಗಿ ಎರಡೂ ಜೀವ ಚೈತನ್ಯವನ್ನೇ ಕಳೆದುಕೊಂಡಿದ್ದವು. ಎರಡಕ್ಕೂ ವಿಚ್ಛೇದನ ಕೊಡಿಸಿ ಪ್ರತ್ಯೇಕವಾಗಿಯೇ ಅವೆರಡಕ್ಕೂ ಸ್ವಂತ ಅಸ್ತಿತ್ವವನ್ನು ದಕ್ಕಿಸಿಕೊಡಲು ಸಾಧ್ಯವಾದರೆ ಮಾತ್ರ ಅಂದುಕೊಂಡದ್ದನ್ನು ಸಾಸಬಹುದು ಎಂಬುದನ್ನು ಮನಗಂಡರು ಜಯಚೈತನ್ಯರು. ತಾವು ಮಾಡಬೇಕೆಂದುಕೊಂಡಿದ್ದಕ್ಕೆ ಇಸ್ಕಾನ್‌ನ ಮೂಲಕ ಒಂದು ಸಾಂಸ್ಥಿಕ ಸ್ವರೂಪವನ್ನು ಕೊಟ್ಟು ‘ಬಸಿಲ್’ (ಭಕ್ತಿವೇದಾಂತ ಅಕಾಡೆಮಿ ಫಾರ್ ಸಸ್ಟೆನೆಬಲ್ ಇಂಟಿಗ್ರೇಟೆಡ್ ಲಿವಿಂಗ್) ಅನ್ನು ಹುಟ್ಟುಹಾಕಿದರು. ಪ್ರಭುಪಾದರು ಪ್ರತಿಪಾದಿಸಿದ್ದ ಗೋವು ಮತ್ತು ಭೂ ಆಧಾರಿತ ಆರ್ಥಿಕತೆಗೊಂದು ಮಾದರಿಯನ್ನು ನಿಲ್ಲಿಸುವುದು ಸಂಸ್ಥೆಯ ಮೂಲ ಉದ್ದೇಶವಾಗಿತ್ತು.



ಪರಿಸರದ ನಡುವಿನ ಬದುಕನ್ನು ಅರ್ಥಮಾಡಿಕೊಳ್ಳಲು ಒಂದು ವಾರಗಳವರೆಗೆ ಆಲ್ಲೇ ವಾಸವಿದ್ದು ಅಧ್ಯಯನ ನಡೆಸಿದ ಜೆಸಿ ಪ್ರಭು ಅವರಿಗೆ, ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಪುನರುತ್ಥಾನವೇ ಆದ್ಯತೆಯಾಗಬೇಕೆಂಬುದನ್ನು ಅರಿಯಲು ತಡವಾಗಲಿಲ್ಲ. ಅತ್ಯಂತ ದುರ್ಬಲ ಮಣ್ಣಿಗೆ ಸಾವಯವ ಸಂಸ್ಕಾರ ನೀಡಲು ಮುಂದಾದರು. ಸೂರ್ಯನತ್ತ ನಿರ್ಭಿಡೆಯಿಂದ ಬೆತ್ತಲಾಗಿ ಅಂಗಾತ ಮಲಗಿದ್ದ ಭೂಮಿಗೆ ಒಂದಷ್ಟು ಸಂಕೋಚ ಕಲಿಸಬೇಕಾಗಿತ್ತು. ಅದಕ್ಕಾಗಿ ಗ್ಲಿರಿಸಿಡಿಯಾ (ಗೊಬ್ಬರದ ಗಿಡ)-ಬಾಳೆ ಸೇರಿದಂತೆ ಅತ್ಯಂತ ಸುಲಭದಲ್ಲಿ, ವೇಗವಾಗಿ ಬೆಳೆಯುವ ಸಸಿಗಳನ್ನು ಬೆಳೆಸಲಾಯಿತು. ಜತೆಗೊಂದಿಷ್ಟು ಬೆಂಬಲ ನೀಡಿದ್ದು ಗೋವಿನ ತ್ಯಾಜ್ಯ. ಮೊದಲೇ ಹೇಳಿದಂತೆ ಪಕ್ಕದಲ್ಲೇ ಕಾವೇರಿಯಿದ್ದಳೂ ಆಕೆಯ ಅನುಗ್ರಹ ಪಡೆಯಲು ಆರಂಭಿಕ ಐದು ವರ್ಷಗಳಲ್ಲಿ ವಿದ್ಯುತ್ ಸೌಲಭ್ಯವಿಲ್ಲ. ಎಲ್ಲವೂ ಏತದ ಮೂಲಕವೇ ಆಗಬೇಕು. ಜಮೀನಿನ ಎತ್ತರ ಪ್ರದೇಶಕ್ಕೆ ನೀರನ್ನು ಎತ್ತಿ ತುಂಬಿಸಿಕೊಂಡು ಅಲ್ಲಿಂದ ಗುರುತ್ವಾಕರ್ಷಣ ತತ್ತ್ವದಲ್ಲಿ ಎಲ್ಲೆಡೆಗೆ ಹನಿಹನಿಯಾಗಿ ಹನಿಸಲಾಗುತ್ತಿತ್ತು. ಈ ಹಂತದಲ್ಲಿ ಕಾಡಿದ್ದು ಮಣ್ಣು ಜನ್ಯ ರೋಗಗಳು. ಶಿಲೀಂಧ್ರ, ವೈರಸ್ ಮತ್ತಿತರ ಸೂಕ್ಷ್ಮಾಣುಗಳನ್ನು ನಿಯಂತ್ರಿಸಲು ಅನುಸರಿಸಿದ್ದು ಪರ್ಯಾಯ ಕ್ರಿಮಿನಾಶಕ ಪದ್ಧತಿಯನ್ನು. ಸ್ಥಳೀಯ ಕಳೆಗಳು, ಬೇವು, ಗೋಮೂತ್ರ, ಗೋಮಂi, ಬೂದಿ ಇತ್ಯಾದಿಗಳನ್ನೇ ಬಳಸಿ ರೋಗನಿವಾರಣೆ ಮಾಡಲಾಯಿತು. ಅಷ್ಟರಲ್ಲಾಗಲೇ ಮರಳ ರಾಶಿಯ ಮೇಲೊಂದಿಷ್ಟು ಮುಚ್ಚಿಗೆ ಬಂದು ಭೂಮಿ ಹಸಿರಾಗತೊಡಗಿತ್ತು. ಅಂದು ಆರಂಭವಾದ ಸ್ವಾವಲಂಬಿ ಮಂತ್ರ ಇಂದಿಗೂ ಅಲ್ಲಿನ ಕೃಷಿಯ ಬೀಜಮಂತ್ರವಾಗಿದೆ ಎನ್ನುತ್ತಾರೆ ಜೆಸಿ ಪ್ರಭು.



ಜೀವ ಚೈತನ್ಯ ಕೃಷಿಗೆ ಶುರುವಿಟ್ಟುಕೊಳ್ಳುವ ಹೊತ್ತಿಗೆ ಐದು ವಸಂತಗಳು ಸರಿದು ಹೋಗಿದ್ದವು. ಭಾರತೀಯ ಪರಂಪರಾನುಗತ, ಈ ನೆಲದ ಕೃಷಿ ನಂಬಿಕೆಗಳಿಗೆ ವೈಜ್ಞಾನಿಕ ಆಧಾರಗಳನ್ನು ಕೊಟ್ಟು ಅದರ ಬೇರುಗಳನ್ನು ಬಲಗೊಳಿಸುವ ಕೃಷಿ ಸಾಧ್ಯವಾಗುವುದಾದರೆ ಬಸಿಲ್‌ನ ಸ್ಥಾಪನೆಗೊಂದು ಅರ್ಥ ಬಂದೀತು ಎಂದುಕೊಂಡರಂತೆ ಜೆಸಿ ಪ್ರಭು. ಅದಕ್ಕಾಗಿ ಅವರು ಆರಂಭಿಸಿದ್ದು ಪಂಚಾಂಗ ಆಧಾರಿತ ಕೃಷಿಯನ್ನು. ಹುಣ್ಣಿಮೆಗೆದುರಾಗಿ ಬೀಜಗಳ ಬಿತ್ತನೆ, ಅಮಾವಾಸ್ಯೆ ಮುಂದಿಟ್ಟುಕೊಂಡು ಕೀಟನಾಶಕಗಳ ಸಿಂಪಡಣೆಗಳೇ ಮುಂತಾದ ಗ್ರಾಮೀಣ ಜನಜೀವನದಲ್ಲಿ ಇಂದಿಗೂ ಉಳಿದುಕೊಂಡು ಬಂದಿರುವ ನಂಬಿಕೆಗಳಿಗೆ ಶಾಸ್ತ್ರಾಧಾರದ ಬಲವನ್ನು ತುಂಬಿದರು. ಮಾತ್ರವಲ್ಲ ಅದನ್ನು ಪ್ರಯೋಗಳ ಮೂಲಕ ಸಾಬೀತು ಪಡಿಸಿದರು. ಕಾಸ್ಮಿಕ್ ಶಕ್ತಿಯನ್ನಾಧರಿಸಿದ ಕೃಷಿ ಇಂದಿಗೂ ಬಸಿಲ್‌ನ ಮೂಲಾಧಾರ. ಇಂಥ ಮಳೆ ನಕ್ಷತ್ರದಲ್ಲೇ ಬಿತ್ತನೆ ಮಾಡಬೇಕು. ಇಂಥ ರಾಶಿಯಲ್ಲೇ ಅದಕ್ಕೆ ಬೀಜೋಪಚಾರ ಮಾಡಬೇಕು. ಈ ತಿಥಿಯಂದೇ ನೆಲವನ್ನು ಹದಗೊಳಿಸಬೇಕು. ನಿಗದಿತ ವಾರಗಳಂದೇ ಭೂಮಿಯನ್ನು ಉತ್ತಬೇಕು ಎಂಬುದೂ ಸೇರಿದಂತೆ ‘ಕೃಷಿ ಧರ್ಮ’ಕ್ಕೊಂದು ಹೊಸ ವ್ಯಾಖ್ಯಾನವನ್ನು ಆಧುನಿಕ ಜಗತ್ತಿನಲ್ಲಿ ಕಟ್ಟಿಕೊಡುವ ಪ್ರಯತ್ನ ಆದದ್ದು ವಿಶೇಷ. ಪ್ರತಿಯೊಂದು ಗಿಡಕ್ಕೂ ಅದರದ್ದೇ ಆದ ಪ್ರಾಕೃತಿಕ ಧರ್ಮವನ್ನು ಬೆಸೆಯಲಾಯಿತು. ಹೀಗೆ ಆರಂಭ ವಾದ ಸ್ವಾವಲಂಬಿ, ಸುಸ್ಥಿರ ಕೃಷಿ ಕಾಯಕ ೧೯೯೮ರಿಂದ ೨೦೦೫ರ ಅವಯಲ್ಲಿ ಮಾದರಿಯಾಗಿ ರೂಪುಗೊಂಡಿತು.



ಇಂದು ಕಾವೇರಿ ತಟದ ಬಸಿಲ್ ಆವರಣದಲ್ಲಿ ಬೆಳೆಯದ ಬೆಳೆಗಳಿಲ್ಲ. ಮಂಡ್ಯ ಸುತ್ತ ಮುತ್ತಲ ಪ್ರದೇಶದ ಸಾಂಪ್ರದಾಯಿಕ ಬೆಳೆಗಳಾದ ಭತ್ತ, ಕಬ್ಬುಗಳಲ್ಲದೇ ಇತರೆಲ್ಲ ಪ್ರಯೋಗಗಳೂ ಯಶಸ್ವಿಯಾಗಿದೆ. ಹಣ್ಣು- ಹೂವು-ತರಕಾರಿಗಳು ಹೇರಳವಾಗಿವೆ. ತೆಂಗು-ಕಂಗುಗಳು ಕಂಗೊಳಿಸುತ್ತಿವೆ. ಎಲಕ್ಕಿ, ಲವಂಗ, ಜಾಯಿಕಾಯಿ, ಕಾಳು ಮೆಣಸುಗಳಿಂದ ಹಿಡಿದು, ವೆನಿಲ್ಲಾದವರೆಗೆ ಎಲ್ಲ ರೀತಿಯ ವಾಣಿಜ್ಯ ಬೆಳೆಗಳಿಗೂ ಆ ಭೂಮಿ ತವರಾಗಿದೆ. ಎಲ್ಲಕ್ಕಿಂತ ವಿಶೇಷವೆಂದರೆ ಈ ವರೆಗೆ ಇಡೀ ತೋಟದೊಳಕ್ಕೆ ಹೊರಗಿನ ಒಂದೇ ಒಂದು ಕಣಕ್ಕೂ ಪ್ರವೇಶ ನೀಡಿಲ್ಲ. ಅಲ್ಲಿ ಇದ್ದ, ಬಿದ್ದ ವಸ್ತುಗಳಿಂದಲೇ ಕೃಷಿ ಸಾಗುತ್ತಿದೆ. ಅಲ್ಲಿ ಯಾವುದೂ ತ್ಯಾಜ್ಯವೆಂಬುದಿಲ್ಲ. ಕೀಟನಾಶಕ, ರಸಗೊಬ್ಬರಗಳನ್ನು ಮುಟ್ಟಿಸಿಯೂ ಇಲ್ಲ.



ಇದೆಲ್ಲ ಒಂದು ಹಂತಕ್ಕೆ ಬಂದು ನಿಲ್ಲುವ ಹೊತ್ತಿಗೆ ಬಸಿಲ್‌ನ ಗುರಿ ಹೊರಳಿದ್ದು ರೈತರ ತರಬೇತಿಯೆಡೆಗೆ. ಪ್ರಯೋಗಗಳ ಫಲಿತಾಂಶ ರೈತರನ್ನು ತಲುಪದಿದ್ದರೆ ಅದಕ್ಕೆ ಅರ್ಥವೇ ಇಲ್ಲವೆಂದುಕೊಂಡು ಜೆಸಿ ಪ್ರಭು, ೨೦೦೧ರಲ್ಲಿ ರೈತರ ತರಬೇತಿ ಹಾಗೂ ಮಾಹಿತಿ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ೮ ವರ್ಷಗಳಲ್ಲಿ ದೇಶಾದ್ಯಂತದ ಅದರಲ್ಲೂ ಕರ್ನಾಟಕ, ತಮಿಳುನಾಡು, ಕೇರಳದ ೩೫೦೦ಕ್ಕೂ ಹೆಚ್ಚು ರೈತರು ತೋಟಕ್ಕೆ ಬಂದು ತರಬೇತಿ ಪಡೆದುಹೋಗಿದ್ದಾರೆ. ಹೊಸ, ಹೊಸ ಪ್ರಯೋಗಗಳು ಆಗಿವೆ. ಇಷ್ಟಕ್ಕೇ ಬಸಿಲ್ ಸೀಮಿತಗೊಂಡಿಲ್ಲ. ಇಲ್ಲಿ ತರಬೇತಿ ಪಡೆದು ಸಾವಯವ ಕೃಷಿಕರಾಗಿ ಹೊರಬಂದ ರೈತರಿಗೆ ಪ್ರಮಾಣಪತ್ರ ನೀಡುವ, ಆ ಮೂಲಕ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯನ್ನು ದೊರಕಿಸಿಕೊಡುವ ಕಾರ್ಯವನ್ನೂ ಮಾಡುತ್ತಿದೆ. ಬೆಂಗಳೂರು ಕೃಷಿ ವಿವಿ ಸೇರಿದಂತೆ ಇತರ ಅಂತಾರಾಷ್ಟ್ರೀಯ ಏಜೆನ್ಸಿಗಳ ಮೂಲಕವೂ ಪ್ರಮಾಣಿಕರಿಸಿ ರೈತರ ಶ್ರಮಕ್ಕೊಂದು ಗೌರವ ತಂದುಕೊಡಲಾಗುತ್ತಿದೆ. ರೈತರ ಗುಂಪುಗಳನ್ನು ರಚಿಸಿ ಅವರನ್ನು ಆರ್ಥಿಕವಾಗಿ ಸಬಲಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಸಾಸಲಾಗಿದೆ. ಸಬ್ಸಿಡಿ ಸಂಸ್ಕೃತಿಯನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಿ ರೈತರ ಬೆಳೆಗಳಿಗೆ ಸೂಕ್ತ, ನ್ಯಾಯ ಸಮ್ಮತ ಮಾರುಕಟ್ಟೆ ದೊರಕಿಸಿಕೊಟ್ಟು ಆ ಮೂಲಕ ಸ್ವಾವಲಂಬಿ ರೈತ ಸಮಾಜದ ನಿರ್ಮಾಣ ಮಾಡುವುದೇ ಬಸಿಲ್‌ನ ಗುರಿ ಎನ್ನುತ್ತಾರೆ ಜಯಚೈತನ್ಯ ಪ್ರಭು.



ಬೆಳೆಗಾರರು ಮತ್ತು ಬಳಕೆದಾರರ ನಡುವೆ ಸೇತುವೆಯೊಂದನ್ನು ನಿರ್ಮಿಸಿ ಹೊಸದೊಂದು ಪಥವನ್ನು ಪ್ರವರ್ತಿಸುವುದು ಮುಂದಿರುವ ಗುರಿ. ನೀರು- ಮಣ್ಣು- ಗಾಳಿ ಸೇರಿದಂತೆ ಪ್ರಕೃತಿಯನ್ನು ಅತಿ ಹೆಚ್ಚು ಮಾಲಿನ್ಯಕ್ಕೊಳಪಡಿಸುತ್ತಿರುವವರು ನಗರಿಗರೇ. ಹೀಗಾಗಿ ಅವರು ರೈತರ ಉತ್ಪನ್ನಗಳನ್ನು ಹೆಚ್ಚಿನ ಬೆಲೆಕೊಟ್ಟು ಕೊಂಡುಕೊಳ್ಳುವ ಮೂಲಕ ಇದಕ್ಕೆ ಪರಿಹಾರ ಒದಗಿಸಬೇಕೆಂಬ ಪ್ರತಿಪಾದನೆ ಅವರದ್ದು. ಮೊದಲಿಂದಲೂ ಕೃಷಿ ಆಧಾರಿತ ಕೈಗಾರಿಕೆಗಳು ಭಾರತದಲ್ಲಿ ಬರಲೇ ಇಲ್ಲ. ಇದರ ಪರಿಣಾಮ ಇಡೀ ಕೈಗಾರಿಕೀಕರಣವೇ ವೈಫಲ್ಯದ ಹಾದಿ ಹಿಡಿದಿದೆ ಎನ್ನುವ ಪ್ರಭುಜಿ, ಇದಕ್ಕಾಗಿಯೇ ಬಸಿಲ್ ನೂತನ ಸಮುದಾಯ ಬೆಂಬಲಿತ ಕೃಷಿಯನ್ನು ಪರಿಚಯಿಸುತ್ತಿದೆ ಎನ್ನುತ್ತಾರೆ. ಈ ಕಾರ್ಯಕ್ರಮದಲ್ಲಿ ಬಳಕೆದಾರರು ಹಾಗೂ ಬೆಳೆಗಾರರ ಗುಂಪುಗಳನ್ನು ಒಂದೇ ವೇದಿಕೆಯಡಿ ತರುವ ಪ್ರಯತ್ನ ಮಾಡಲಾಗುತ್ತಿದೆ. ಮೊದಲೇ ನಿಗದಿಪಡಿಸಿದ ಬೆಲೆಗೆ ಬಳಕೆದಾರರ ಬೇಡಿಕೆಗನುಗುಣ ಬೆಳೆಯನ್ನು ಬೆಳೆದು ಕೊಡುವ ಒಪ್ಪಂದವನ್ನು ರೈತ ಈ ವೇದಿಕೆಯಲ್ಲಿ ಮಾಡಿಕೊಳ್ಳುತ್ತಾನೆ. ಇದರಿಂದ ಬಳಕೆದಾರರಿಗೂ ಗುಣಮಟ್ಟದ ಉತ್ಪನ್ನಗಳು ದೊರೆಯುತ್ತವೆ. ಬೆಳೆಗಾರನೂ ಮಾರುಕಟ್ಟೆ ಅಸ್ಥಿರತೆಯಿಂದ ಹೊರಬಂದು ಉತ್ತಮ ಬೆಲೆಯನ್ನು ಪಡೆಯಲು ಸಾಧ್ಯ ಎಂಬುದು ಅವರ ಪ್ರತಿಪಾದನೆ. ಇಂಥ ಹತ್ತು ಹಲವು ಕ್ರಿಯಾಶೀಲತೆಗೆ ಆ ಮನಮೋಹಕ ಸಾವಯವ ತೋಟ ಮಾದರಿಯಾಗಿ ನಿಂತಿದೆ.



ಸ್ವಾವಲಂಬನೆಯ ಗೀತಾಸಾರವನ್ನು ಸಾರುತ್ತಾ ಕೃಷ್ಣ ಪರಮಾತ್ಮ ಮಾತ್ರ ಆ ಸುಂದರ ಬೃಂದಾವನದ ನೆತ್ತಿಯ ಮೇಲಿನ ಮಂದಿರದಲ್ಲಿ ರಾಧೆಯೊಡನೆ ಮುರಲೀಗಾನ ನಿರತನಾಗಿದ್ದಾನೆ. ತೋಟದ ಒಳಹೊಕ್ಕಾಕ್ಷಣ ಅಂಥ ದಿವ್ಯ ಅನುಭೂತಿ ಪ್ರತಿಯೊಬ್ಬರದೂ ಆಗುತ್ತದೆ. ನೀವೊಮ್ಮೆ ಅದನ್ನು ಅನುಭವಿಸಬೇಕೆಂದುಕೊಂಡರೆ ಯಾವುದಕ್ಕೂ ಇರಲಿ ದೂರವಾಣಿ ಬರೆದಿಟ್ಟುಕೊಳ್ಳಿ: ೦೮೨೩೬-೨೫೦೩೯೩



‘ಲಾಸ್ಟ್’ಡ್ರಾಪ್: ಭಾರತದಲ್ಲಿ ಕೃಷಿಯೆಂದರೆ ಅದು ಕೇವಲ ವೃತ್ತಿಯಲ್ಲ. ಅದು ಬದುಕಷ್ಟೇ ಅಲ್ಲ. ಅದೊಂದು ಜೀವನ ಧರ್ಮ. ಅದೇ ಇಲ್ಲಿನ ಸಂಸ್ಕೃತಿಯ ಮರ್ಮ. ಇಂದಿಗೂ ಭಾರತವೊಂದೇ ಜಗತ್ತಿಗೆ ಸ್ವಚ್ಛ ಹಾಗೂ ಸ್ವಾವಲಂಬಿ ಕೃಷಿಯ ಮಾದರಿಯಾಗಿ ನಿಲ್ಲುತ್ತದೆ.