ವಾರದ ನೀರ ದಾಹಕ್ಕೆ ಈ ಬಾರಿ ಇನ್ನೊಂದು ಪಾರಂಪರಿಕ ಸಂರಚನೆ ಸಿಕ್ಕಿದೆ. ಅತ್ಯಂತ ಕುತೂಹಲಕಾರಿ, ಅಷ್ಟೇ ಉಪಯುಕ್ತ ಮಾದರಿ ಈ ತಲಪರಿಗೆಗಳು. ಹೆಸರೇ ತನ್ನ ವಿಶಿಷ್ಟತೆಯಿಂದ ಗಮನಸೆಳೆಯುತ್ತದೆ. ತಕ್ಷಣಕ್ಕೆ ಕೊಪ್ಪರಿಗೆ ಎಂದಂತೆ ಕೇಳಿಸುತ್ತದೆ. ಒಂದು ರೀತಿಯಲ್ಲಿ ಇದು ನೀರ ಕೊಪ್ಪರಿಗೆಯೇ. ಆಕಾರದಲ್ಲೂ ಹೆಚ್ಚೂ ಕಡಿಮೆ ಕೊಪ್ಪರಿಗೆಗಳಂತೆಯೇ ಇರುತ್ತದೆ. ಬೆಟ್ಟ-ಗುಡ್ಡಗಳಿಂದಾವೃತ್ತವಾದ ಪ್ರದೇಶದ ಕೆಳಭಾಗದಲ್ಲಿ ಕಂಡು ಬರುವ ಇವು ಸಾಮಾನ್ಯ ಜಲ ಸಂರಕ್ಷಣೆಯ ಸಾಧಾರಣ ರಚನೆಗಳು.
ತಲಪರಿಗೆಗಳೆಂದಾಕ್ಷಣ ಇದೇನೋ ಐತಿಹಾಸಿಕ ಮಾದರಿಗಳಿರಬಹುದು, ಬೃಹತ್ ಆಕಾರವಿರಬಹುದು ಎಂದೆಲ್ಲ ಊಹಿಸುವುದು ಸಹಜ. ಆದರಿವು ಹಾಗೇನೂ ಅಲ್ಲ. ಪ್ರಮುಖವಾಗಿ ದಕ್ಷಿಣ ಕರ್ನಾಟಕದ, ಅದರಲ್ಲೂ ಆಂದ್ರದ ಗಡಿ ಭಾಗದ ಜಿಲ್ಲೆಗಳಾದ ತುಮಕೂರು, ಕೋಲಾರದಲ್ಲಿ ರೈತರೇ ನಿರ್ಮಿಸಿಕೊಳ್ಳುವ ಪುಟ್ಟ ನೀರ ಪಾತ್ರೆ. ಹೆಚ್ಚೆಂದರೆ ಹತ್ತು ಹದಿನೈದು ಅಡಿ ಆಳವಿರಬಹುದು. ಏನಿಲ್ಲವೆಂದರೂ ಹತ್ತು ಅಡಿಯ ಸುತ್ತಳತೆ ಹೊಂದಿರುವ ಒಂದು ಗುಂಡಿ. ಸದಾ ನೀರಿನಿಂದ ನಳ ನಳಿಸುವ ತಲಪರಿಗೆಗಳು ಹೆಚ್ಚೂ ಕಡಿಮೆ ಕೆರೆಗಳನ್ನೇ ಹೋಲುತ್ತವಾದರೂ ಅದಕ್ಕಿಂತ ಭಿನ್ನ. ಕೆರೆಗಳಿಗೆ ಸುತ್ತಲೂ ಚೌಕಾಕಾರದ ನಿರ್ಮಾಣವಿರುತ್ತದೆ. ತಲಪರಿಗೆಗಳಲ್ಲಿ ಮೂರು ಭಾಗಕ್ಕೆ ಮಾತ್ರ ಕಲ್ಲು ಕಟ್ಟಿ ಭದ್ರ ಮಾಡಿರಲಾಗುತ್ತದೆ. ಒಂದು ಭಾಗ ನೀರ ಹಾದಿಗೆ ತೆರೆದುಕೊಂಡಿರುತ್ತದೆ. ಸಾಮಾನ್ಯ ಕಾಲುವೆಯೊಂದು ತಲಪರಿಗೆಯನ್ನು ಸಂಪರ್ಕಿಸಿರುತ್ತದೆ. ಎತ್ತರದ ಪ್ರದೇಶಗಳಿಂದ ಜಾರಿ ಬರುವ ನೀರು ಈ ಕಾಲುವೆಯ ಮೂಲಕ ತಲಪರಿಗೆಯನ್ನು ತುಂಬಿಕೊಳ್ಳುತ್ತದೆ.
ಹೆಸರಿನಂತೆಯೇ ತಲಪರಿಗೆಯ ಗುಣಗಳೂ ಅತ್ಯಂತ ವೈಶಿಷ್ಟ್ಯಪೂರ್ಣ. ಇವು ಅಂತರ್ಮುಖಿ ಜಲಪಯಣಕ್ಕೊಂದು ಅರ್ಧವಿರಾಮದ ತಾಣ. ಕೃಷಿ ಬದುಕಿನ ಜೀವಾಳವಾಗಿ ನಿಲ್ಲುವ ಇವು ಅತ್ಯಂತ ಶುದ್ಧ ನೀರ ನೆಲೆಗಳು. ಎಷ್ಟೋ ವೇಳೆ ಮೇಲ್ನೋಟಕ್ಕೆ ಅಲ್ಲಿ ನೀರು ಸಿಗಬಹುದೆಂಬುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ತಜ್ಞ ರೈತ ತಲಪರಿಗೆ ನಿರ್ಮಿಸಬಹುದಾದ ತಾಣವನ್ನು ಲೀಲಾಜಾಲವಾಗಿ ಗುರುತಿಸಬಲ್ಲ. ಬೆಟ್ಟ-ಗುಡ್ಡಗಳ, ಬಂಡೆಗಳ ನಡುವಿನಲ್ಲಿ ಇಂಗುವ ನೀರು ಹಾಗೆಯೇ ಕೆಳಗಿಳಿದು ಬಂದು ಅಂತರ್ಗತವಾಗಿ ಪ್ರವಹಿಸುತ್ತಿರುತ್ತದೆ. ಮೇಲ್ಪದರದಲ್ಲಿನ ಮರಳು ಹಾಸು ಇಂಥ ಪ್ರವಾಹವನ್ನು ಮರೆಮಾಚಿರುತ್ತದೆ. ನೀರು ಸುಲಭದಲ್ಲಿ ಆವಿಯಾಗಿ ಹೋಗದಂತೆಯೂ ಮರಳು ತಡೆದಿರುತ್ತದೆ. ಕೆಲವೊಮ್ಮೆ ತುಸು ತಗ್ಗಿನ ಪ್ರದೇಶದಲ್ಲಿ ನೀರೂಟೆಗಳಾಗಿ ಉಕ್ಕ ತೊಡಗುತ್ತದೆ. ತೀರಾ ದೊಡ್ಡ ಗಾತ್ರದಲ್ಲಲ್ಲದಿದ್ದರೂ ಸಣ್ಣಗೆ ನೀರು ಜಿನುಗುತ್ತಿರುತ್ತದೆ. ಅಂಥ ಪ್ರದೇಶವನ್ನು ಗುರುತಿಸಿ ಮರಳನ್ನು ಬಗೆದು ಆಳ ಮಾಡಲಾಗುತ್ತದೆ. ಆಗ ಒಳಗೊಳಗೇ ಹರಿಯುತ್ತಿರುವ ನೀರು ಗುಂಡಿಯಲ್ಲಿ ಪ್ರತ್ಯಕ್ಷವಾಗುತ್ತದೆ.
ಆಂಧ್ರದ ಕೆಲ ಹಳ್ಳಿಗಳಲ್ಲಿ ನೀರಿನ ಹಾದಿಯುದ್ದಕ್ಕೂ ರೈತರು ತಲಪರಿಗೆಗಳನ್ನು ನಿರ್ಮಾಣ ಮಾಡಿಕೊಳ್ಳುವ ಉದಾಹರಣೆಗಳಿವೆ. ಒಂದರ ಪಕ್ಕದಲ್ಲೇ ಒಂದು ಹೊಂಡ ತೋಡಿಕೊಂಡರೂ ಗುಪ್ತಗಾಮಿನಿಯಾಗಿರುವ ನೀರು ಮೇಲಕ್ಕೆ ಉಕ್ಕುತ್ತದೆ. ತುಮಕೂರಿನ ಕೆಲ ಹಳ್ಳಿಗಳಲ್ಲಿ ಕೃಷಿಯಲ್ಲದೇ ಕುಡಿಯುವ ನೀರು ಸೇರಿದಂತೆ ಗೃಹಬಳಕೆಗೆ ಸಂಪೂರ್ಣವಾಗಿ ತಲಪರಿಗೆಗಳನ್ನೇ ಅವಲಂಬಿಸಲಾಗುತ್ತಿತ್ತು. ಕೆಲ ಗ್ರಾಮಗಳಲ್ಲಂತೂ ಮುಂದಿನ ಕೃಷಿ ಕಾರ್ಯಗಳೆಲ್ಲವೂ ನಿರ್ಧಾರವಾಗುತ್ತಿದ್ದುದೇ ತಲಪರಿಗೆಗಳಲ್ಲಿನ ನೀರಿನ ಮಟ್ಟವನ್ನು ಅವಲಂಬಿಸಿ.
ಸಾಮಾನ್ಯವಾಗಿ ಊರಿನ ಹಿರಿಯರು ನೀರಿನ ಅಂಶವಿರುವ ಜಾಗವನ್ನು ಗುರುತಿಸಿ, ಅನುಭವದ ಆಧಾರದ ಮೇಲೆ ತಲಪರಿಗೆಗಳನ್ನು ತೋಡಲು ಸೂಚಿಸುತ್ತಾರೆ. ಇದರ ಸಂಪೂರ್ಣ ಉಸ್ತುವಾರಿ, ನಿರ್ವಹಣೆ ಇಡೀ ಊರಿನದ್ದಾಗಿರುತ್ತದೆ. ಮಳೆಗಾಲಕ್ಕೆ ಮುನ್ನ ಜನವರಿಯ ವೇಳೆಗೆ ತಲಪರಿಗೆಗಳ ಕಾಲುವೆಯನ್ನು ಸ್ವಚ್ಛಗೊಳಿಸುವ ಕಾರ್ಯ ಸಾಮೂಹಿಕವಾಗಿ ನಡೆಯುತ್ತದೆ. ಮನೆಗೊಬ್ಬರಂತೆ ಊರಿನ ಎಲ್ಲರೂ ಸೇರಿ ಮುಂಜಾನೆಯೇ ಸ್ವಚ್ಛತಾ ಕಾರ್ಯಕ್ಕೆ ತೊಡಗುತ್ತಾರೆ ಮಧ್ಯಾಹ್ನದ ವೇಳೆಗೆ ಕೆಲಸ ಮುಗಿಸಲಾಗುತ್ತದೆ. ಹೀಗೆ ವಾರಗಟ್ಟಲೇ ನಡೆದು ತಲಪರಿಗೆಗಳ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ. ಮಳೆಗಾಲದಲ್ಲಿ, ಅಕ್ಕಪಕ್ಕದ ನದಿ, ಹೊಳೆಗಳು ತುಂಬಿ ಹರಿಯುವಾಗ ಈ ಕಾಲುವೆಗಳಲ್ಲೂ ನೀರು ಹರಿಯುತ್ತಿರುತ್ತದೆ. ಬೇಸಿಗೆಯಲ್ಲಿ ಸಂಪೂರ್ಣ ಒಣಗಿ ಹೋಗಿರುತ್ತದೆ. ಆದರೆ ತಲಪರಿಗೆಗಳು ಮಾತ್ರ ತುಂಬಿಯೇ ಇರುತ್ತದೆ. ಒಂದೊಮ್ಮೆ ಇವು ಬತ್ತಿದರೆ ಮುಂದಿನ ಬೇಸಿಗೆ ತ್ರಾಸದಾಯಕ ಎಂದೇ ಅರ್ಥ.
ಇನ್ನು ತಲಪರಿಗೆಗಳು ಇಂಥದ್ದೇ ಆಕಾರದಲ್ಲಿ ಇರಬೇಕೆಂಬುದೇನೂ ಇಲ್ಲ. ಸಾಮಾನ್ಯವಾಗಿ ವೃತ್ತ, ಚೌಕಾಕಾರದಲ್ಲಿರುತ್ತದೆ. ಕೆರೆಯ ಮಧ್ಯಭಾಗದಲ್ಲಿರುವ ತಲಪರಿಗೆಗಳಿಗೆ ಕಲ್ಲು ಕಟ್ಟುವುದು ಸಾಮಾನ್ಯ. ಸ್ಥಳೀಯವಾಗಿ ಸಣ್ಣ ಪ್ರಮಾಣದಲ್ಲಿ ನಿರ್ಮಿಸಿಕೊಳ್ಳುವ ತಲಪರಿಗೆಗಳು ಹೀಗೆಯೇ ಇರಬೇಕೆಂದೇನೂ ಇಲ್ಲ. ಒಂದರ ಮುಂದೊಂದರಂತೆ ಪುಟ್ಟ ಪುಟ್ಟ ತಲಪರಿಗೆಗಳ ಸರಣಿಯೇ ಇರುತ್ತದೆ. ಎಲ್ಲದರಿಂದಲೂ ನಿರಂತರ ನೀರು ಬಳಸುತ್ತಿರುವುದರಿಂದ, ಹೊಸ ನೀರು ಉಕ್ಕುತ್ತಲೇ ಇರುವುದರಿಂದ ಅತ್ಯಂತ ಸ್ವಚ್ಛವಾಗಿರುತ್ತದೆ. ಜತೆಗೆ ಮರಳಿನಡಿಯಿಂದ ಸೋಸಿ ಬರುವುದರಿಂದ ನೀರು ಸಿಹಿಯಾಗಿಯೂ ಇರುತ್ತದೆ.
ಇಂದು ಕೆರೆಗಳೇ ನಾಶವಾಗುತ್ತಿವೆ. ತಲಪರಿಗೆಗಳೂ ಇದಕ್ಕೆ ಹೊರತಲ್ಲ. ಬೋರ್‌ವೆಲ್‌ಗಳ ಯುಗದಲ್ಲಿ ತಲಪರಿಗೆಗಳನ್ನು ನಿರ್ವಹಣೆ ಮಾಡುವ ವ್ಯವಧಾನ ರೈತರಿಗೆ ಉಳಿದಿಲ್ಲ. ಪರಿಣಾಮ ಸಮುದಾಯದ ಸ್ವತ್ತಾಗಿದ್ದ ತಲಪರಿಗೆಗಳು ಕಣ್ಮರೆಯಾಗುತ್ತಿವೆ. ಇಂಥ ಸಂಕೀರ್ಣ ಸಂದರ್ಭದಲ್ಲಿ ತುಮಕೂರಿನ ಗೆಳೆಯ ಮಲ್ಲಿಕಾರ್ಜುನ ಹೊಸಪಾಳ್ಯ ತಮ್ಮ ಜತೆಗಾರರೊಂದಿಗೆ ಈ ಬಗ್ಗೆ ಒಂದಷ್ಟು ಗಂಭೀರ ಅಧ್ಯಯನ ನಡೆಸಿ, ಅದನ್ನು ಅಕ್ಷರ ರೂಪಕ್ಕೂ ಇಳಿಸಿ ಪುಸ್ತಕ ಹೊರತರುತ್ತಿದ್ದಾರೆ. ಮಾತ್ರವಲ್ಲ ನಾಡಿದ್ದು ಭಾನುವಾರ (ಆಗಸ್ಟ್ ೧೦ರಂದು) ಒಂದಿಡೀ ದಿನ ತಲಪರಿಗೆಗಳ ಬಗ್ಗೆಯೇ ಮಾತನಾಡುವ ಕಾರ್ಯಕ್ರಮವನ್ನೂ ವ್ಯವಸ್ಥೆಗೊಳಿಸಿದ್ದಾರೆ. ನಾಡಿನ ಹಲವು ಜಲ ತಜ್ಞರು ಜತೆಗಿರುವ ವಿಶೇಷ ಅನುಭವಕ್ಕಾಗಿ ಕಾಯುತ್ತಿದ್ದೇನೆ. ನಿಮಗೂ ಜತೆಗೂಡುವ ಮನಸ್ಸಿದ್ದರೆ ಮಧುಗಿರಿಗೆ ಬೆಳಗ್ಗೆಯೇ ಬರಬೇಕು. ಅಪೂರ್ವ ಜಲ ಸಂರಕ್ಷಣಾ ಮಾದರಿಗಳನ್ನು ಕಣ್ಣಾರೆ ಕಂಡೂ ಬರಬಹುದು.
‘ಲಾಸ್ಟ್‘ಡ್ರಾಪ್: ತಲಪರಿಗೆಗಳ ಬಗ್ಗೆ ಇನ್ನಷ್ಟು ಮಾಹಿತಿ ಬೇಕಿದ್ದರೆ, ಕಾರ್ಯಾಗಾರಕ್ಕೆ ಬರುವ ಮನಸ್ಸಿದ್ದರೆ ನೀವು ಮಲ್ಲಿಯನ್ನೇ ಸಂಪರ್ಕಿಸಬೇಕು. ಹೇಗಂತೀರಾ, ೯೩೪೨೧ ೮೪೮೫೫ಗೆ ಒಂದು ಕಾಲ್ ಮಾಡಿ, ಸಾಕು.
ಸಮ್ಮನಸ್ಸಿಗೆ ಶರಣು
4 months ago
No comments:
Post a Comment