ಅದು ೧೯೯೫ರ ಮಳೆಗಾಲ. ಜಲಗಾಂವ್ ಸಮೀಪದ, ಆಗಷ್ಟೇ ಖರೀದಿಸಿದ್ದ ಗುಡ್ಡದ ಬುಡಕ್ಕೆ ಹೋಗಿನಿಂತಿದ್ದರು ಭವರ್‌ಲಾಲ್ ಜೈನ್(ಭಾವು). ಸಣ್ಣಗೆ ಮಳೆ ಹನಿಯುತ್ತಿದ್ದಿರಬೇಕು. ಒಂದು ರೀತಿಯಲ್ಲಿ ಆಹ್ಲಾದಕರ ವಾತಾವರಣ. ೮೦೦ ಎಕರೆಗಳಷ್ಟು ವಿಸ್ತಾರದ ಈ ಪ್ರದೇಶಕ್ಕೆ ತಾನೇ ಒಡೆಯ ಎಂಬ ಹೆಮ್ಮೆಯಿಂದ ಬೀಗಬೇಕಿದ್ದ ಮನದಲ್ಲಿ ಏನೋ ಗೊಂದಲ. ಕಾರಣ ಇಲ್ಲದಿಲ್ಲ. ಅದಾದರೂ ಎಂಥ ಭೂಮಿ ? ಕಲ್ಲು ಬೆಳೆದಷ್ಟು ಸಲೀಸಾಗಿ ಅಲ್ಲಿ ಹುಲ್ಲೂ ಬೆಳೆಯುವುದಿಲ್ಲ. ಇಡೀ ಗುಡ್ಡವನ್ನೊಮ್ಮೆ ಅವಲೋಕಿಸಿದರೆ ಅಲ್ಲಲ್ಲಿ ತನ್ನ ಇರುವಿಕೆಯನ್ನು ಹಣುಕಿ ಹಣುಕಿ ತೋರುತ್ತಿರುವ ಬಂಡೆಗಳ ಸಾಲು. ಒಂದೊಂದಕ್ಕೂ ಒಂದೊಂದು ಆಕಾರ. ಅಂಥ ಆಕಾರ-ನಿರ್ವಿಕಾರಗಳ ಹಿಂದೆ ಬೇರು ಬಿಟ್ಟುಕೊಂಡು ಕುಳಿತಿರಬಹುದಾದ ಬಂಡೆಗಳ ಜಾಲವನ್ನು ನೆನಪಿಸಿಕೊಂಡರೆ ಮನ ವಿಕಾರ. ಎಂಥವನೂ ಅರನಾಗಲೇಬೇಕಾದ ಸನ್ನಿವೇಶವದು.
‘ಅದ್ಯಾವ ಧೈರ್ಯ ಮಾಡಿ ಇಂಥ ಭೂಮಿಯನ್ನು ಖರೀದಿಸಿದೆ’ ಎಂಬುದೇ ಅರ್ಥವಾಗದ ಸ್ಥಿತಿ. ಇಲ್ಲಿ ಏನು ಮಾಡಲಾದೀತು ? ಗುಡ್ಡದ ತಲೆಯ ಮೇಲೆ ನಿಂತು ಪುಟ್ಟ ಕಲ್ಲೊಂದನ್ನು ಸುಮ್ಮನೆ ಜಾರಿ ಬಿಟ್ಟರೂ ಸಾಕು ಸೀದಾ ಬುಡಕ್ಕೆ ಹೋಗಿ ಬೀಳುವುದಷ್ಟೇ ಅಲ್ಲ, ಅದು ಓಡಿ ಬರುವ ರಭಸಕ್ಕೆ ಅದೇ ವೇಗದಲ್ಲಿ ಮುಂದಿನ ಗುಡ್ಡದ ತಲೆಗೆ ಹೋಗಿ ನಿಂತಿರುತ್ತದೆ. ಅಷ್ಟೊಂದು ಕಡಿದಾದ ಕಣಿವೆ ಎಂದರೆ ಕಣಿವೆಯೇ ಅದು. ಇನ್ನು ಅಲ್ಲಿ ನೀರು ನಿಂತುಕೊಳ್ಳುವುದು ಸಾಧ್ಯವೇ ಇಲ್ಲ. ಗುಡ್ಡ ಹತ್ತಿ ಇಳಿಯುವುದೇ ದುಸ್ಸಾಹಸವಾಗಿರುವಾಗ ಅಲ್ಲಿ ಬೆಳೆ ತೆಗೆಯುವುದು ದೂರದ ಮಾತೇ ಆಯಿತು. ಹಾಗಾದರೆ ಅದಿನ್ಯಾವ ಪುರುಷಾರ್ಥಕ್ಕೆ ?
ಭಾವು ಯೋಚುಸುತ್ತಲೇ ನಿಂತಿದ್ದರು. ಮಳೆ ಹನಿಯುತ್ತಲೇ ಇತ್ತು. ಆದರೂ ತಲೆ ತಣಿಯುತ್ತಿರಲಿಲ್ಲ. ಏನಾದರೂ ಮಾಡಲೇ ಬೇಕು. ಏನು ಮಾಡಬೇಕು ? ಹೇಗೆ ಮಾಡಬೇಕು ? ಎಲ್ಲಿಂದ ಆರಂಭಿಸಬೇಕು ? ಎಷ್ಟು ಹಣ ಸುರಿಯಬೇಕಾದೀತು ? ಅಷ್ಟು ಮಾಡಿದ ಮೇಲೂ ನಿರೀಕ್ಷಿತ ಫಲ ದೊರಕೀತೇ ? ಪ್ರಶ್ನೆಗಳ ಸರಣಿ ಗಿರಕಿ ಹೋಡೆಯುತ್ತಲೇ ಇತ್ತು.
ತುಂತುರು ನಿಂತಿರಲಿಲ್ಲ. ಭಾವು ಕದಲಲೂ ಇಲ್ಲ. ಮಧ್ಯೆ ಎಲ್ಲಾದರೂ ಸಣ್ಣದೊಂದು ಪರಿಹಾರದ ಸೆಳಕು ಮಿಂಚಿಬಿಡಬಹುದು ಎಂಬ ನಿರೀಕ್ಷೆ ಅವರದ್ದು. ಮಿಂಚದೇ ಉಳಿಯಲಿಲ್ಲ. ಗುಡ್ಡದ ತುಸು ಮೇಲ್ಭಾಗದಲ್ಲಿ ಎನೋ ಹೊಳೆಹೊಳೆದು ಹೋದಂತೆ. ಮಿಂಚೇ ಇರಬೇಕು. ಅಥವಾ ಭ್ರಮೆಯೇ ? ತೋಚಲಿಲ್ಲ. ಮತ್ತೆ ಮತ್ತೆ ಕಣ್ಣರಳಿಸಿ ನೋಡಿದರು. ಮಿಂಚಾಗಿದ್ದರೆ ಒಮ್ಮೆ ಬೆಳಕು ಚೆಲ್ಲಿ ಹೋಗಬೇಕಿತ್ತು. ಆದರದು ಹಾಗಾಗಿಲ್ಲ. ನಿರಂತರ ಬೆಳ್ಳಂಬೆಳ್ಳಗ್ಗಿನ ಗೆರೆ ಎಳೆದಿಟ್ಟಂತೆ. ಏನಿರಬಹುದು ? ಹತ್ತಿರ ಹೋಗಿ ನೋಡಿಬಿಡಬೇಕು. ಕುತೂಹಲ ನಿಲ್ಲಗೊಡಲಿಲ್ಲ. ಉತ್ಸಾಹ ಅದೆಲ್ಲಿಂದ ಬಂತೋ ? ಅದೇ ಭರದಲ್ಲಿ ಹತ್ತ ತೊಡಗಿದರು.
ವಾಹ್, ಪುಟ್ಟದೊಂದು ಝರಿ ! ಹೌದು ಜಲಪಾತವೇ. ಲಾಸ್ಯವಾಡುತ್ತ ಧುಮ್ಮಿಕ್ಕುತ್ತಿದೆ. ಸಣ್ಣಸಣ್ಣಗೆ ತುಂತುರುಗಳ ಸಿಡಿಸುತ್ತ, ಸಮೀಪ ಹೋದವರ ಕೆನ್ನೆಗಳನ್ನು ತಂಪಾಗಿಸುತ್ತ, ನೋಡುತ್ತ ನಿಂತವರ ಇರುವನ್ನೇ ಮರೆಸುತ್ತ, ಕೆಳಗೆ ಹೋಗಿ ನಿಂತರೆ ತಲೆಯನ್ನೇ ಕೊರೆದು ಬಿಡಬಹುದಾದಷ್ಟು ರಭಸದಲ್ಲಿ ಬೀಳುತ್ತಲೇ ಇದೆ. ಆ ಸಂಜೆ, ಆ ತಂಪು ತಂಪು ವಾತಾವರಣ, ಮೈ ಚಳಿ ಹೆಚ್ಚಿಸುವ ಹುಚ್ಚು ಸೌಂದರ್ಯವನ್ನೊಳಗೊಂಡ ಕಿರು ಜಲಪಾತದೆದುರು ನಿಂತರೆ ನಾನು-ನೀವಾಗಿದ್ದರೆ ಅದೆಷ್ಟು ಹೊತ್ತು ಹಾಗೇ ಮೈಮರೆತು ನಿಂತು ಬಿಡುತ್ತಿದ್ದೆವೋ ? ಭಾವೂ ಸಹ ಅಲ್ಲಿ ನಿಂತಿದ್ದರು. ಆದರೆ ಮೈ ಮರೆಯಲಿಲ್ಲ. ಆ ಸೌಂದರ್ಯಕ್ಕೆ ಹುಚ್ಚರಾಗಲಿಲ್ಲ. ಧೋ ಗುಡುವ ಜಲಪಾತದ ಮೊರೆತ ಹರ್ಷದ ಕೇಕೆಯಾಗಿ ಅವರಿಗೆ ಕೇಳಿಸಲಿಲ್ಲ. ನಿಂತಲ್ಲಿ ನಿಲ್ಲಲಾಗದೇ ಸಮತೋಲನ ಕಳೆದುಕೊಂಡು ಇನಿಯನ ತೆಕ್ಕೆಯಿಂದ ತಪ್ಪಿ ಪ್ರಪಾತಕ್ಕೆ ಜಾರುತ್ತಿರುವ ಸುಂದರಿಯೊಬ್ಬಳು ಆ ಕ್ಷಣದಲ್ಲಿ ‘ಕಾಪಾಡಿ’ ಎನ್ನುತ್ತಾ ಆರ್ತನಾದ ಹೊರಡಿಸುತ್ತಿರುವಂತೆ ಅನ್ನಿಸಿತು ಭಾವುಗೆ.
ಹೌದು, ನೂರಕ್ಕೆ ನೂರು ಅದು ನೆರವನ್ನು ನಿರಕಿಸಿದ ನೀರಕನ್ನೆಯ ಆಕ್ರಂದನವೇ ಆಗಿತ್ತು. ಬಿದ್ದ ಜಾಗದಲ್ಲಿ ನಿಲ್ಲಲಾರದೇ, ಬೀಳುತ್ತಲೇ ಸಿಕ್ಕಿ ಸಿಕ್ಕದ್ದನ್ನೆಲ್ಲ ಹಿಡಿದುಕೊಳ್ಳವ ಭರದಲ್ಲಿ ಮತ್ತೆ ಆಯತಪ್ಪಿ, ಹಿಡಿಯ ಹೋದದ್ದನ್ನೂ ಕಳಚಿ ಕೆಳಗೆ ಕಳುಹಿಸುವ ಅಸಾಹಾಯಕ ದೃಶ್ಯ ಭಾವುಗೆ ಕಣ್ಣೆದುರು ಬಂದಿರಬೇಕು. ಜಾರಿ ಬೀಳುತ್ತಿರುವ ಜಲಪಾತವನ್ನೊಮ್ಮೆ, ಅದು ಬಿದ್ದ ಜಾಗದಲ್ಲಿ ಮೂಡಿದ ಕೊರಕಲನ್ನೊಮ್ಮೆ ದಿಟ್ಟಿಸಿದರು. ಈ ಬಾರಿ ‘ಕಾಪಾಡಿ’ ಎಂಬ ಧ್ವನಿ ದ್ವಿಗುಣವಾಯಿತು. ಇದೆಲ್ಲಿಂದ ಬಂತು ಮತ್ತೊಂದು ಸ್ವರ ? ಮತ್ತೆ ಮತ್ತೆ ನೋಡಿದರು. ಅರ್ಥವಾಯಿತು, ಆ ಇನ್ನೊಂದು ಸ್ವರ ಬುಡದಲ್ಲಿದ್ದ ಮಣ್ಣಿನದ್ದು. ನೀರು-ಮಣ್ಣಿನ ಮಿಲನ ಇಬ್ಬರಿಗೂ ಹಿತ ತರುವ ಬದಲು, ಅಲ್ಲಿ ಅಪಾಯವನ್ನು ತಂದಿತ್ತು. ಯುಗಳ ಗೀತೆ ಕಿವಿಗಿಂಪು ತರುವ ಬದಲು ವಿಷಣ್ಣ ಗಾನವಾಗಿ ಮಾರ್ಪಟ್ಟಿತ್ತು.
‘ನನ್ನ ನೆಲದಲ್ಲಿ ನೀರು ಮಣ್ಣಿಗೆ ವಿಚ್ಛೇದನ ಕೊಡಿಸಲೇ ಬೇಕು’-ಅಲ್ಲೇ ನಿರ್ಧರಿಸಿದರು ಭಾವು. ತುಸು ಭಾರದ ಕಲ್ಲೊಂದನ್ನೆತ್ತಿ ಜಲಪಾತದ ಬುಡಕ್ಕೆ ಹಾಕಿದರು. ಕೊಚ್ಚಿಕೊಂಡು ಹೊರಟ ಮಣ್ಣು ತುಸು ನಿಂತಂತೆನಿಸಿತು. ಇನ್ನೊಂದು, ಮತ್ತೊಂದು, ಮಗದೊಂದು....ಹೀಗೆ ನಾಲ್ಕಾರು ಕಲ್ಲುಗಳು ಜಲಪಾತದ ಬುಡ ಸೇರಿತು. ಆಗಲೇ...ಅದೇ ಕ್ಷಣದಲ್ಲೇ ಅವರ ಸಮಸ್ಯೆಗೆ ಪರಿಹಾರದ ಮಿಂಚು ಹೊಳೆದಿತ್ತು. ಸಮಸ್ಯೆಯ ಮೂಲವೂ ಅರಿವಾಗಿತ್ತು. ಬಿದ್ದ ಮಳೆ ನೀರು ಗುಡ್ಡದಲ್ಲಿ ನಿಲ್ಲುತ್ತಿಲ್ಲ. ಅದನ್ನೊಮ್ಮೆ ನಿಲ್ಲಿಸುವಂತಾದರೆ ಮುಂದಿನದೇನೂ ಸಮಸ್ಯೆಯೇ ಅಲ್ಲ. ಹಾಗಾದರೆ ನಿಲ್ಲಿಸುವುದು ಹೇಗೆ ?
ಯೋಚಿಸುತ್ತಾ ಮನೆ ಸೇರಿದವರಿಗೆ ನಿದ್ದೆ ಸುಳಿಯಲಿಲ್ಲ. ಅದೇ ಗುಂಗಿನಲ್ಲೇ ಬೆಳಗಾಗುವಾಗ ಮತ್ತೆ ಗುಡ್ಡದ ಬುಡಕ್ಕೆ ಬಂದು ನಿಂತಿದ್ದರು. ಈ ಬಾರಿ ಒಬ್ಬರೇ ಬಂದಿರಲಿಲ್ಲ. ಜತೆಗೊಂದಿಷ್ಟು ಮಂದಿಯಿದ್ದರು. ತಜ್ಞರು, ಎಂಜಿನಿಯರ್‌ಗಳು, ಕೃಷಿಕರು, ಅಕಾರಿಗಳು ಸುತ್ತುವರಿದಿದ್ದರು. ತಾರಸೀಕರಣ (ಟೆರೇಸಿಂಗ್)ದ ಯೋಜನೆ ಅಂದೇ ರೂಪುಗೊಂಡಿತ್ತು. ಆದರೆ ಅದು ಅಂದುಕೊಂಡಷ್ಟು ಸುಲಭದ ಮಾತಾಗಿರಲಿಲ್ಲ. ಅದರಲ್ಲೂ ಕ್ರಿಯಾಶೀಲತೆ, ಕಸದಲ್ಲೇ ರಸ ತೆಗೆಯುವ ಸೋಪಜ್ಞತೆ. ಅದು ಭಾವು ಹುಟ್ಟುಗುಣ. ಕಡಿದಾದ ಗುಡ್ಡವನ್ನು ಕಡಿಕಡಿದು ಕರಗಿಸಬೇಕು. ಸಂಪೂರ್ಣ ಸಮತಟ್ಟಾಗಿ ಅಲ್ಲದಿದ್ದರೂ ನೀರು ಸುಲಭದಲ್ಲಿ ಜಾರಿ ಬರದಂತೆ ತಡೆಯುವಷ್ಟಾದರೂ ಮೆಟ್ಟಿಲುಗಳ ರಚನೆ ಆಗಬೇಕು. ಅದೂ ಒಂದು ಕಡೆ ಮಾತ್ರವಲ್ಲ, ಸುತ್ತಲೂ ಇಂಥದ್ದೇ ಸರ್ಕಸ್. ಒಂದೆರಡು ರೂಪಾಯಿಗಳ ಮಾತಲ್ಲ. ವೆಚ್ಚ, ತ್ರಾಸು- ಎರಡರ ಅರಿವೂ ಭಾವೂಗಿತ್ತು. ಅದು ಅಂದುಕೊಂಡದ್ದಕ್ಕಿಂತ ದುಬಾರಿ ಎಂಬುದು ಗಮನಕ್ಕೆ ಬಂದದ್ದು ಕಾರ್ಯ ಕ್ಷೇತ್ರಕ್ಕೆ ಇಳಿದಾಗಲೇ.
ಬುಲ್ಡೋಜರ್, ಟ್ರ್ಯಾಕ್ಟರ್‌ಗಳನ್ನು ಬಳಸಿದರೆ ಮೆಟ್ಟಿಲುಗಳ ರಚನೆ ಎಷ್ಟು ದಿನದ ಕೆಲಸ ಎಂದೆಣಿಸಿದ್ದು ದಿಟವಾಗಲಿಲ್ಲ. ಗುಡ್ಡದ ಇಳಿಜಾರು ಯಂತ್ರಗಳಿಗೆ ಸಹಕರಿಸಲಿಲ್ಲ. ಅವು ಬಂದು ನಿಂತರೆ ತಾನೆ ಗುಡ್ಡವನ್ನು ಕಡಿಯುವುದು? ನಿಲ್ಲಲೇ ತಾಣವಿಲ್ಲ. ಕಾಲ ಹತ್ತು ವರ್ಷ ಹಿಂದಕ್ಕೋಡಿದಂತಾಯಿತು. ಎತ್ತಿನ ಬಂಡಿಗಳು ಬಂದವು, ಕೂಲಿಗಳು ಹಾರೆ, ಪಿಕಾಸಿಗಳೊಂದಿಗೆ ಗುಡ್ಡವನ್ನು ಸುತ್ತುವರಿದರು. ಒಂದೂವರೆ ವರ್ಷಗಳ ಸತತ ಕಾರ್ಯಯಜ್ಞ. ಉತ್ಸಾಹದ ಮಾತುಗಳ ಹವಿಸ್ಸನ್ನು ಕೆಲಸಗಾರರ ಮನಃಕುಂಡಕ್ಕೆ ಸುರಿಯುತ್ತಲೇ ಇದ್ದರು ಭಾವು. ಅಗತ್ಯ, ಅನಿವಾರ್ಯ ಕಡೆಗಳಲ್ಲಿ ಯಂತ್ರಗಳಿಂದಲೂ ಕೆಲಸ ಸಾಗಿತ್ತು. ಕೊನೆಗೊಂದು ದಿನ ನೋಡುವಾಗ ಇಡೀ ಗುಡ್ಡ ಚಕ್ರಾಕಾರದಲ್ಲಿ ಮೆಟ್ಟಿಲುಗಳನ್ನು ಮೈದಾಳಿಕೊಂಡು ನಿಂತಿತ್ತು. ಅಲ್ಲಿ ಕಿತ್ತು ತೆಗೆದ ಕಲ್ಲುಗಳನ್ನೇ ಮೆಟ್ಟಿಲುಗಳು ಕುಸಿಯದಂತೆ ಬದುವಾಗಿ ಬದಿಗೆ ಜೋಡಿಸಲಾಯಿತು. ಪುಟ್ಟ ಪುಟ್ಟ ಜಲ್ಲಿಯಂಥವನ್ನು ಆಯ್ದು ತೆಗೆದು ರಸ್ತೆ ನಿರ್ಮಾಣಕ್ಕೆ ಬಳಸಲಾಯಿತು. ಒಂದಿನಿತೂ ವ್ಯರ್ಥವೆಂಬುದಿಲ್ಲ.
ಸಿಂಧು, ಜೈನ ಸಾಗರ, ಜೈನ್‌ಉಪಸಾಗರ, ಜೈನ್ ಜಲನಿ, ಕ್ಷೀರ ಸಾಗರ, ಜೈನ್ ಜಲಾಗಾರ, ಜೈನ್ ಜಲಾಶಯ, ಮಹಾಸಾಗರ- ಹೀಗೆ ತಲೆಯಿಂದ ಬುಡದವರೆಗೆ ಎಂಟು ಬಾಂದಾರಗಳು ನಿರ್ಮಾಣವಾಗಿದ್ದವು. ಅಲ್ಲಿ ಬಿದ್ದ ನೀರು ಅಲ್ಲಲ್ಲೇ ಇಂಗಿ, ಇಳಿದು ಬಂದು ಬಾಂದಾರಗಳಿಗೆ ಸೇರುವಂತೆ ಅತ್ಯಂತ ವೈಜ್ಞಾನಿಕವಾಗಿ ವ್ಯವಸ್ಥೆಗೊಳಿಸಲಾಗಿತ್ತು. ಒಂದೊಂದೇ ಮೆಟ್ಟಿಲುಗಳ ಮೇಲೆ ಪುಟ್ಟಪುಟ್ಟ ಸಸಿಗಳು ಮೊಳೆಯಲಾರಂಭಿಸಿದ್ದವು. ಜತೆಜತೆಗೇ ಕೃಷಿ ಆರಂಭವಾಯಿತು. ಮೊದಲಿಗೆ ಹುಣಸೆ, ಪೇರಲ, ಸೀತಾಫಲಗಳ ಸಾಲು. ಇವುಗಳಿಗೆ ಸಾಥ್ ನೀಡಿದ್ದು ಹುಲ್ಲು. ಮಣ್ಣು ಸವಕಳಿ ತಡೆಯುವ ಪ್ರಥಮ ಹೊಣೆ ಇವುಗಳದ್ದು. ಬದುಗಳ ಅಂಚಿನಲ್ಲಿ ಸೇರಿಕೊಂಡಿತ್ತು ಬಿದಿರು. ನಂತರದ ಹಂತದಲ್ಲಿ ಮಾವು ಬೇವುಗಳ ಸರದಿ. ಹಾಗೆಯೇ ಬಂದದ್ದು ದಾಳಿಂಬೆ, ಸಪೋಟಾ, ಬಾಳೆ...ಪಟ್ಟಿ ಬೆಳೆಯುತ್ತ ಹೋಯಿತು. ವರ್ಷೊಪ್ಪತ್ತಿನಲ್ಲಿ ಹಸಿರು ಹೆಸರಾಯಿತು.
ಕಷ್ಟಪಟ್ಟು ಕೂಡಿಟ್ಟ ನೀರು, ಒಂದು ಹನಿಯೂ ವ್ಯರ್ಥವಾಗಬಾರದು. ಭಾವು ನೀರಿನ ವಿಚಾರದಲ್ಲಿ ಪಕ್ಕಾ ಮಾರ್ವಾಡಿ. ಕಂಜೂಸ್ ಅಂದರೆ ಕಂಜೂಸ್ (ಅವರೇ ಹೇಳಿಕೊಂಡ ಮಾತು). ಅದಕ್ಕಾಗಿಯೇ ಗುಡ್ಡದ ತುಂಬೆಲ್ಲ ಪೈಪ್ ಹಂದರವನ್ನು ಹರವಿದರು. ಸುತ್ತಲೂ ಹನುಮಂತನ ಬಾಲದಂತೆ ಸುತ್ತಿಕೊಂಡ ಪೈಪ್‌ಗೆ ಅಲ್ಲಲ್ಲಿ ಮರ-ಗಿಡಗಳ ಬುಡಕ್ಕೆ ಸೂಜಿ ಚುಚ್ಚಿ ಬಿಟ್ಟರು. ಬಾಂದಾರಗಳಲ್ಲಿ ತುಂಬಿಕೊಂಡ ನೀರನ್ನು ಮೇಲೆತ್ತಿ ತುಂಬಿಕೊಳ್ಳಲು ತಲಾ ೩.೨೫ ಹಾಗೂ ೨.೭೨ ಲಕ್ಷ ಲೀಟರ್ ಸಾಮರ್ಥ್ಯದ ಎರಡು ಬೃಹತ್ ಟ್ಯಾಂಕ್‌ಗಳನ್ನು ನಿರ್ಮಿಸಲಾಯಿತು. ಅಲ್ಲಿಂದಲೇ ಎಲ್ಲ ಪೈಪ್ ಜಾಲಕ್ಕೆ ಸಂಪರ್ಕ. ಹನಿ ಹನಿಯಾಗಿ ಸಂಗ್ರಹಿಸಿದ ನೀರನ್ನು ಹನಿ ನೀರಾವರಿಯ ಯಶಸ್ವೀ ಪ್ರಯೋಗದ ಮೂಲಕ ಬಳಸಿ ಇಡೀ ಜೈನ್ ಹಿಲ್ ಅನ್ನು ಹಸಿರಾಗಿಸಿದ ಭಾವು ಇಂದು ಇಂಥ ಹತ್ತು ಹಲವು ಹೊಸ ಪ್ರಯೋಗಗಳ ಹರಿಕಾರರಾಗಿ ಹೊರಹೊಮ್ಮಿದ್ದಾರೆ. ಜಲಗಾಂವ್‌ನ ಜೈನ್ ಹಿಲ್ಸ್ ಇಂದು ಮಳೆ ನೀರು ಸದ್ಬಳಕೆ, ತಾರಸೀಕರಣ, ನೀರಿನ ನಿರ್ವಹಣೆ, ಯಶಸ್ವೀ ಕೃಷಿ ಹೀಗೆ ಹಲವು ದೃಷ್ಟಿಯಿಂದ ಅಧ್ಯಯನ ಯೋಗ್ಯ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಿದೆ. ದೇಶದ ಮೂಲೆ ಮೂಲೆಗಳಿಂದ ರೈತರು ಬಂದು ಯಶೋಗಾಥೆಯನ್ನು ಕಣ್ಣಾರೆ ಕಂಡು, ತರಬೇತಿಯನ್ನೂ ಪಡೆದು ಹೊಸ ಕನಸಿನೊಂದಿಗೆ ತಮ್ಮೂರಿಗೆ ಮರಳುತ್ತಿದ್ದಾರೆ, ಕಂಡ ಕನಸನ್ನು ತಂತಮ್ಮ ನೆಲದಲ್ಲಿ ಬಿತ್ತಿ ನೀರ ಸ್ವಾವಲಂಬನೆಯ ಫಸಲನ್ನು ಪಡೆಯುತ್ತಿದ್ದಾರೆ. ಈಗ ಮತ್ತೆ ಜೈನ್ ಹಿಲ್ ತುಂತುರು ಮಳೆಗಾಗಿ ಕಾಯುತ್ತಿದೆ. ಭಾವೂ ಆ ಕ್ಷಣಕ್ಕಾಗಿ ನಿರಕಿಸುತ್ತಿದ್ದಾರೆ.
‘ಲಾಸ್ಟ್’ ಡ್ರಾಪ್: ಪುಟ್ಟ ಕನಸು, ದಿಟ್ಟ ಕ್ರಾಂತಿ-ಭವರ್ ಲಾಲ್ ಸಾರಥ್ಯದ ಜೈನ್ ಇರಿಗೇಶನ್‌ನ ಯಶೋಗಾಥೆಯ ಹಿಂದಿನ ಪ್ರೇರಣಾ ವಾಕ್ಯವಿದು. ನೀರೆಚ್ಚರಕ್ಕೆ ಹೊಂದುವ ಈ ಮಾತು ಎಷ್ಟೊಂದು ಅರ್ಥಪೂರ್ಣ !
ಸಮ್ಮನಸ್ಸಿಗೆ ಶರಣು
4 months ago
No comments:
Post a Comment