ಮೇಲಿಂದ ತುಂತುರು ಹನಿ ಚೆಲ್ಲುತ್ತಿದ್ದರೆ, ಅದಕ್ಕೆ ಮುಖ ಆನಿಸಿಕೊಂಡು ಇಂಚಿಂಚಾಗಿ ಆಕೆ ನೆನೆಯುತ್ತಿದ್ದಾಳೆ. ಜತೆಗೆ ತಂಗಾಳಿಗೆ ತೊನೆಯುತ್ತಿದ್ದಾಳೆ. ತಲೆ, ಮುಖ, ಎದೆಯ ಹರವನ್ನು ನೆನೆಸಿದ ಹನಿಗಳು ಮೆಲ್ಲಮೆಲ್ಲಗೆ ಜಾರುತ್ತಿವೆ. ಹೊಳೆಯುವ ಆ ಸುಂದರ ಮುಖಕ್ಕೆ ರಾಚಿದ ನೀರು, ಕಡೆದಿಟ್ಟ ಕೊರಳ ಕೆಳಗೆ ಜಾರಿ ಬರುತ್ತಿದ್ದರೆ ನೋಡುತ್ತಿದ್ದವರ ಎದೆಯಲ್ಲಿ ಹತ್ತಾರು ಢಕ್ಕೆ, ಡಮರುಗಗಳ ಡಿಂಡಿಮ. ಏರು ತಗ್ಗುಗಳ ದಾಟಿ ಸೊಂಟದ ಇಳಿಜಾರಲ್ಲಿ ನಿಲ್ಲಲಾಗದೇ ಆ ಹನಿಗಳು ಹಾಗೆಯೇ ಕೆಳಗಿಳಿಯುತ್ತಿವೆ. ತೂರಿ ಬರುವ ತುಂತುರು ಇಡೀ ದೇಹವನ್ನು ತೊಪ್ಪೆಯಾಗಿಸುತ್ತಿದ್ದರೆ ಆಕೆಗೆ ಅದೇನೋ ಆಹ್ಲಾದ. ಸಣ್ಣನೆಯ ಚಳಿಗೆ, ಹನಿಗಳ ಹಿತವಾದ ಸ್ಪರ್ಶಕ್ಕೆ ನಡು ಕಂಡೂ ಕಾಣದಂತೆ ನಡುಗುತ್ತಿದೆ. ನೋಡ ನೋಡುತ್ತಿದ್ದಂತೆ ಹನಿಗಳು ಪಾದಕ್ಕಿಳಿದು ಬಿಟ್ಟಿವೆ. ಈಗ ಆಕೆ ಸಂಪೂರ್ಣ ಒದ್ದೆ, ಒದ್ದೆ... ಆ ಬೆಟ್ಟದಲ್ಲಿ...ಬೆಳದಿಂಗಳಲ್ಲಿ....ಆಕೆ ಹಾಗೆ ನೆನೆಯುತ್ತ...ತೊನೆಯುತ್ತ ನಿಂತಿದ್ದರೆ...ಓಹ್...ಅದೆಂಥ ಅನುಭೂತಿ. ಸಾಕ್ಷಾತ್ ಅಪ್ಸರೆ ಮಜ್ಜನಕ್ಕಿಳಿದಂತೆ...!
ಇದೇನಿದು ? ನೀರಿನ ಬಗ್ಗೆ ಬರೆಯುವುದನ್ನು ಬಿಟ್ಟು ‘ವೆಂಕಟ ಇನ್ ಸಂಕಟ’ ಚಿತ್ರದ ಡ್ಯುಯೆಟ್‌ನಲ್ಲಿ ಶರ್ಮಿಳಾ ಮಾಂಡ್ರೆ ಎಂಬ ದಂತದ ಗೊಂಬೆಯನ್ನು ರಮೇಶ್ ಅರವಿಂದ್ ಕೃತಕ ಮಳೆ ಬರಿಸಿ ನೆನಸಿದ ದೃಶ್ಯ ಬಣ್ಣಿಸುತ್ತಿದ್ದಾರೆ ಎಂದುಕೊಳ್ಳಬೇಡಿ. ಜಲಗಾಂವ್‌ನ ಜೈನ್‌ಹಿಲ್‌ನಲ್ಲಿ ಯಾವುದೇ ಹಸಿರು ಹಸಿರು ಸಸಿಯ ಮುದೆ ಹೋಗಿನಿಂತು ನೋಡಿ. ಹನಿ ನೀರಾವರಿಯಡಿ ಅದು ಪಕ್ಕಾ ಶರ್ಮಿಳಾ ಮಾಂಡ್ರೆಯಂತೆಯೇ ನೆನೆಯುತ್ತ ನಿಂತಿರುತ್ತದೆ. ಆಕೆಗಿಂತ ಸುಂದರ ಲತಾ ಕನ್ನಿಕೆಯಾಗಿ ಅಲ್ಲಿನ ಹಸಿರಾಚ್ಛಾದಿತ ಗಿಡ ಮರಗಳು ಕಾಣುತ್ತವೆ. ಅವೆಲ್ಲವೂ ಭವರ್‌ಲಾಲ್ ಜೈನ್ ಎಂಬ ದೇಶಿ ಮೈಕ್ರೋ ನೀರಾವರಿ ಪದ್ಧತಿಯ ಹರಿಕಾರನ ಯಶೋಗಾಥೆಯ ನಾಯಕಿಯರು.
ಹೌದು, ದೇಶಿ ಹನಿ ನೀರಾವರಿ, ತುಂತುರು ನೀರಾವರಿ ಪದ್ಧತಿಯನ್ನಾಧರಿಸಿ ಚಿತ್ರವೊಂದನ್ನು ತೆಗೆಯಲು ಹೊರಟರೆ ಅದಕ್ಕೆ ನಮ್ಮ ಭಾವೂ ಅವರೇ ನಾಯಕರು. ಅವರೇ ನಿರ್ಮಾಪಕ, ನಿರ್ದೇಶಕ, ಸಂಭಾಷಣೆಕಾರ ಎಲ್ಲವೂ ಆಗಿ ನಿಲ್ಲುತ್ತಾರೆ. ಇಂದು ನೂರು ಎಕರೆಯ ಗುಡ್ಡವನ್ನು ಆಕ್ರಮಿಸಿಕೊಂಡು ನಿಂತಿರುವ ಹತ್ತಾರು ಬಗೆಯ ಫಲ, ಪುಷ್ಪ ಸಸ್ಯ ಪ್ರಭೇದಗಳೇ ನಾಯಕಿಯರಾಗುತ್ತಾರೆ. ‘ಜೈನ್ ಇರಿಗೇಶನ್’ ಎಂಬ ಸಾಮ್ರಾಜ್ಯದ ಕಥಾ ಹಂದರ ಬಿಚ್ಚಿಕೊಳ್ಳುವುದು ಸ್ಯಾಂಡಲ್‌ವುಡ್ ಶೈಲಿಯಲ್ಲಿಯೇ. ಸರಕಾರಿ ನೌಕರರಾಗಿ ಆರಾಮದಾಯಕ ಜೀವನ ನಡೆಸುವ ಬದಲು, ಒಬ್ಬ ಉದ್ಯಮಿಯಾಗಿ, ಯಶಸ್ವಿ ಕೃಷಿಕರಾಗಿ, ಭೂ ಪರಿವರ್ತಕರಾಗಿ ಭಾವು ಬೆಳೆದು ನಿಜ ಜೀವನದಲ್ಲೂ ನಾಯಕತ್ವಕ್ಕೇರಿದ ಕಥೆಯನ್ನು ಹಿಂದಿನ ವಾರಗಳಲ್ಲಿ ಈ ಅಂಕಣದಲ್ಲೇ ವಿಷದಪಡಿಸಲಾಗಿದೆ.
ಇಂದು ಹನಿ ನೀರಾವರಿಯನ್ನು ನೂರಕ್ಕೆ ನೂರು ದೇಶೀಯವಾಗಿಯೇ ಅಭಿವೃದ್ಧಿ ಪಡಿಸಿ ಒಣ ಭೂಮಿಯಲ್ಲೂ ಅಸೀಮ ಜೀವಂತಿಕೆಯನ್ನು ತುಂಬಿದ್ದರೆ ಅದು ಜೈನ್ ಇರಿಗೇಶನ್‌ನ ಸಾಧನೆ ಎನ್ನಬಹುದು. ಹಾಗೆಂದು ಜೈನ್ ಸಮೂಹಕ್ಕಿಂತ ಮೊದಲು ಹನಿ ಅಥವಾ ತುಂತುರು ನೀರಾವರಿಯ ಪರಿಚಯವೇ ಭಾರತದಲ್ಲಿರಲಿಲ್ಲ ಎಂದಲ್ಲ. ಇದ್ದರೂ ಇಷ್ಟೊಂದು ಜನಪ್ರಿಯತೆಯನ್ನು ಗಳಿಸಿರಲಿಲ್ಲ. ಮಾತ್ರವಲ್ಲ, ಬಹುತೇಕ ತಂತ್ರಜ್ಞಾನ, ಉಪಕರಣಗಳೆಲ್ಲವೂ ಜರ್ಮನಿಯಂಥ ದೇಶಗಳಿಂದ ಆಮದಾಗುತ್ತಿತ್ತು. ಮೊದಲ ಬಾರಿಗೆ ಭವರ್‌ಲಾಲ್ ಜೈನ್ ಈ ನೆಲಕ್ಕೆ ನಮ್ಮದೇ ನೀರಾವರಿ ಪದ್ಧತಿಯ ಜ್ಞಾನ ಶಿಸ್ತೊಂದನ್ನು ದಕ್ಕಿಸಿಕೊಡಲು ಮುಂದಾದರು.
ಅದಕ್ಕೆ ಕಾರಣವಾದ ಅಂಶ ಮತ್ತದೇ ಅಭಾವ. ಯಾವಾಗ, ಯಾವುದರ ಅಭಾವ ಕಂಡು ಬರುತ್ತದೆಯೋ ಆಗ ಅದರ ಮೌಲ್ಯ ತಂತಾನೇ ಹೆಚ್ಚುತ್ತ ಹೋಗುತ್ತದೆ. ಅದರ ಬಳಕೆಯಲ್ಲಿ ಜಿಪುಣತನ ಇಣುಕುತ್ತದೆ. ಸಾಧ್ಯವಾದಷ್ಟು ಸಂಗ್ರಹಿಸಿಟ್ಟುಕೊಳ್ಳಬೇಕು ಎಂಬ ಹಪಹಪಿತನ ಮನೆಮಾಡುತ್ತದೆ. ಇನ್ನು ವ್ಯಾಪಾರೀ ಮನೋಭಾವದವರಾದರಂತೂ ಮುಗಿದೇ ಹೋಯಿತು; ಅಪ್ಪಿ ತಪ್ಪಿಯೂ ಅದರ ದುರ್ಬಳಕೆ ಆಗದಂತೆ ಎಚ್ಚರವಹಿಸುತ್ತಾರೆ. ನೀರಿನ ವಿಚಾರದಲ್ಲಿ ಭವರಲಾಲ್ ಕೈಗೊಂಡ ಎಲ್ಲ ಉಪಕ್ರಮದ ಹಿಂದೆ ಇದೇ ವ್ಯಾಪಾರಿ ಮನೋಭಾವ ಇತ್ತೆಂಬುದು ಸತ್ಯವಾದರೂ ಇಂದು ಕೃಷಿಯಲ್ಲಿ ಇರಬಹುದಾದ ಸಾಧ್ಯತೆಗಳೇನಕವನ್ನು ತೋರಿಸಿದ್ದು ಅವರೇ. ಹತ್ತಿರ ಹತ್ತಿರ ಸಾವಿರ ಎಕರೆಯ ಬೋಳು ಬೆಟ್ಟಕ್ಕೆ ಸಂಸ್ಕಾರ ನೀಡಿ, ತಾರಸೀಕರಣ, ಮಳೆ ಕೊಯ್ಲಿನ ಸಾಹಸಗಳನ್ನು ಕೈಗೊಂಡು ಒಂದಷ್ಟು ನೀರನ್ನು ದುಡಿದುಕೊಳ್ಳಲಾರಂಭಿಸಿದ ಮೇಲೆ ಅದನ್ನು ಎಗ್ಗು ಸಿಗ್ಗಿಲ್ಲದೇ ಬಳಸಲು ಮನಸ್ಸು ಬರಲಿಲ್ಲ, ಎಂಬುದಕ್ಕಿಂತ ಅಷ್ಟೊಂದು ವಿಸ್ತಾರದ ನೆಲದ ದಾಹವನ್ನು ತೀರಿಸುವ ಸವಾಲು ಎದುರಾಯಿತು. ಅಂಥ ಅನಿವಾರ್ಯ ಸನ್ನಿವೇಶದಲ್ಲೇ ಭಾವು ಹನಿ ನೀರಾವರಿಯೆಡೆಗೆ ಹಣುಕಿದ್ದು.
ಇಂದು ಪೈಪ್, ಪಿನ್, ವಾಯ್ಷರ್‌ಗಳಿಂದ ಹಿಡಿದು ತಂತ್ರಜ್ಞಾನ, ಅನುಷ್ಠಾನದ ವರೆಗೆ ಎಲ್ಲವೂ ಸರ್ವತಂತ್ರ ಸ್ವತಂತ್ರ. ನಿಮ್ಮ ಜಮೀನಿನಂಗಳಕ್ಕೆ ಬಂದು ಜೈನ್ ಸಿಬ್ಬಂದಿ ಸೌಲಭ್ಯವನ್ನು ಅಳವಡಿಸಿಕೊಟ್ಟು ಹೋಗುತ್ತಾರೆ. ಮಾತ್ರವಲ್ಲ ನೀರ ನೆಮ್ಮದಿಯ ಹತ್ತು ಹಲವು ಮಾರ್ಗೋಪಾಯದ ಬಗ್ಗೆ ವಿಪುಲ ಮಾಹಿತಿಯ ಧಾರೆಯನ್ನೂ ನಿಮ್ಮ ಮನದಂಗಳಕ್ಕೂ ಹರಿಸುತ್ತಾರೆ. ಭಾವು ಮಾತುಗಳಲ್ಲೇ ಹೇಳುವುದಾದರೆ ಹರಿ ನೀರಾವರಿಯೆಂದರೆ ಭಕ್ಷ್ಯ ಭೋಜ್ಯಗಳನ್ನು ಹೊಟ್ಟೆ ಬಿರಿಯೆ ತಿಂದು ವಾಕರಿಕೆ ಹುಟ್ಟಿಸಿಕೊಂಡು, ಆದರೂ ಬಿಡದೇ ಹೇಗಾದರೂ ಮಾಡಿ ಒಂದಷ್ಟು ಮೈದುಂಬಿಕೊಂಡು ಬಿಡಬೇಕು ಎಂಬ ಹೆಬ್ಬಯಕೆ ಇದ್ದಂತೆ. ಆದರೆ ಹನಿ ನೀರಾವರಿಯೆಂದರೆ ಅದು ಬಿನ್ನಾಣಗಿತ್ತಿಯ ಮೈ ಮಾಟ ರೂಪಿಸುವ ಜಾಣತನದ ಡಯೆಟಿಂಗ್. ಮಾಡೆಲ್‌ಗಳು ಕ್ಯಾಲೋರಿ ಲೆಕ್ಕದಲ್ಲಿ ಪೌಷ್ಟಿಕಾಂಶಯುಕ್ತ ಗುಣಮಟ್ಟದ ಆಹಾರ ಸೇವಿಸಿದಂತೆಯೆ, ಇಲ್ಲಿ ನೀರು-ಗೊಬ್ಬರ ಎಲ್ಲವೂ ಲೆಕ್ಕಾಚಾರದ ಪ್ರಕಾರವೇ ಪೂರೈಕೆಯಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಔಷಧವನ್ನು ನೇರವಾಗಿ ನರಕ್ಕೇ ಸಲೈನ್ ಮಾಡಿದಂತೆ, ಸಸಿಗಳಿಗೆ ಅಗತ್ಯ ನೀರನ್ನು ನೇರವಾಗಿ ಬೇರುಗಳಿಗೇ ಪೂರೈಸುವುದು ಹನಿ ನೀರಾವರಿ ಪದ್ಧತಿಯ ಲಾಭವೂ ಹೌದು, ವೈಶಿಷ್ಟ್ಯವೂ ಹೌದು.
ಮೈಕ್ರೊ ನೀರಾವರಿ ಪದ್ಧತಿಯ ಅತಿಮುಖ್ಯ, ಆರೋಗ್ಯಕಾರಿ ಲಕ್ಷಣವೆಂದರೆ ನೀರು-ಮಣ್ಣು ಎರಡರ ಆರೋಗ್ಯವೂ ಸಂರಕ್ಷಣೆಯಾಗುವುದು. ಹರಿ ನೀರಾವರಿಯಿಂದ ನೇರ ಧಕ್ಕೆಗೊಳಗಾಗುವುದು ಮೇಲ್ಮಣ್ಣು. ಒಂದೇ ಅದು ಕೊಚ್ಚಿಹೋಗಿ ಸಾರರಹಿತವಾಗಿಬಿಡುತ್ತದೆ. ಇಲ್ಲವೇ ಅಕ ನೀರು ನಿಂತು ಕ್ಷಾರದ ಪ್ರಮಾಣ ಹೆಚ್ಚಿ ಭೂಮಿ ಜವಳಾಗಿ ಪರಿವರ್ತನೆಯಾಗುತ್ತದೆ. ಜೈನ್ ಪದ್ಧತಿಯಲ್ಲಿ ನೀರಿನೊಂದಿಗೇ ದ್ರಾವಣದ ರೂಪದಲ್ಲಿ ಗೊಬ್ಬರವನ್ನೂ ಪೂರೈಸಲಾಗುತ್ತದೆ. ಇದರಿಂದ ಮಾನವ ಶ್ರಮ ಹಾಗೂ ಸಮಯ ಎರಡರ ಉಳಿತಾಯವೂ ಆಗುತ್ತದೆ. ಗೊಬ್ಬರ ನೀರಿನೊಂದಿಗೆ ನೇರವಾಗಿ ಬೇರುಗಳನ್ನೇ ತಲುಪುವುದರಿಂದ ಉಳಿತಾಯ ಸಾಧ್ಯವಾಗುತ್ತದಲ್ಲದೇ ಉತ್ತಮ ಇಳುವರಿ ಪಡೆಯಲೂ ಸಾಧ್ಯವಾಗುತ್ತದೆ. ಬೆಳೆಯ ಗುಣಮಟ್ಟ ವೃದ್ಧಿಸುತ್ತದೆ. ಬೇಗ ಕೊಯ್ಲಿಗೂ ಬರುತ್ತದೆ ಎನ್ನುತ್ತಾರೆ ಸಂಸ್ಥೆಯ ನಿರ್ದೆಶಕರೊಬ್ಬರಲ್ಲಾದ ಅಮಿತ್ ಜೈನ್.
ಕೃಷಿಯ ಬಹುದೊಡ್ಡ ಸಮಸ್ಯೆ ಕಳೆ ನಿಯಂತ್ರಣದ್ದು. ಏನೇ ಮಾಡಿದರೂ ಬೆಳೆಯ ನಡುವೆ ಅದಕ್ಕಿಂತ ಹುಲುಸಾಗಿ ಬೆಳೆದು ನಿಲ್ಲುವ ಕಳೆಯನ್ನು ಹದ್ದುಬಸ್ತಿನಲ್ಲಿಡಲು ರೈತ ಹೆಣಗಾಡಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣ ನೀರು ಹಾಗೂ ಗೊಬ್ಬರ ಗಿಡದ ಬುಡಕ್ಕಷ್ಟೇ ಬೀಳದೇ ಸುತ್ತೆಲ್ಲಕ್ಕೂ ಹರಡಿ ಹೋಗುತ್ತದೆ. ಆದರೆ ಹನಿ ನೀರಾವರಿಯಲ್ಲಿ ಖಾಲಿ ಜಾಗಕ್ಕೆ ಪ್ರಾಮುಖ್ಯ ಇಲ್ಲ. ಹೀಗಾಗಿ ಕಳೆ ಹುಟ್ಟುವುದೇ ಕಡಿಮೆ. ಹರಿ ನೀರಾವರಿಗಿಂತ ಹನಿ ಪದ್ಧತಿಯಲ್ಲಿ ಶೇ. ೩೦ರಿಂದ ಶೇ ೬೮ರಷ್ಟು ನೀರಿನ ಉಳಿತಾಯ ಸಾಧ್ಯವಾಗುತ್ತದೆ. ಇದರಿಂದ ಬೆಳೆಯಲ್ಲಿನ ರೋಗ ನಿಯಂತ್ರಣವೂ ಸಾಧ್ಯವಾಗುತ್ತದೆ ಎಂಬುದು ಇನ್ನೊಂದು ವೈಶಿಷ್ಟ್ಯ. ಏಕೆಂದರೆ ತೇವಾಂಶ ಹೆಚ್ಚಿದ್ದ ನೆಲದಲ್ಲಿ ರೋಗಗಳ ಸಾಧ್ಯತೆ ಹೆಚ್ಚು. ಇನ್ನು ಕೀಟಗಳು ಮೊಟ್ಟೆಯಿಟ್ಟು, ಬೆಳವಣಿಗೆ ಕಾಣುವುದು ಎಲೆಗಳಲ್ಲಿ ಎಂಬುದು ಗೊತ್ತೇ ಇದೆ. ಅದೂ ನೀರು ಬೀಳುತ್ತಿರುವ ಎಲೆಗಳಲ್ಲಿ ಇದರ ಸಾಧ್ಯತೆ ಅಕ. ಹನಿ ನೀರಾವರಿ ಪದ್ಧತಿಯಲ್ಲಿ ಎಲೆಯ ಮೇಲೆ ನೀರು ಬೀಳುವ ಪ್ರಶ್ನೆಯೇ ಇಲ್ಲ. ಹೀಗಾಗಿ ಕೀಟಗಳ ಸಂತಾನ ವೃದ್ಧಿ ಕಷ್ಟದಾಯಕವಾಗುತ್ತದೆ.
ಇನ್ನು ಇಂಧನ ಉಳಿತಾಯ, ಎಲ್ಲರಿಗೂ ನೀರಿನ ಸಮಾನ ಹಂಚಿಕೆ, ಇಳಿಜಾರು ಭೂಮಿಯಲ್ಲೂ ಕೃಷಿಯ ಸಾಧ್ಯತೆ....ಹೀಗೆ ಅನುಕೂಲಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಂಥ ಎಲ್ಲ ಸಾಧ್ಯತೆಯ ಬಗ್ಗೆ ಅರಿವು ಮೂಡಿಸಿ ಭಾರತದಲ್ಲಿ ಅದರಲ್ಲೂ ದಕ್ಷಿಣದ ರಾಜ್ಯಗಳಲ್ಲಿ ಪುಟ್ಟದೊಂದು ಆಂದೋಲನವನ್ನೇ ಹುಟ್ಟುಹಾಕಿ ಬೃಹತ್ ಉದ್ದಿಮೆಯಾಗಿ ಬೆಳೆದು ನಿಂತಿರುವ ಜೈನ್ ಸಮೂಹ ತನ್ನೊಂದಿಗೆ ಕೃಷಿಕನನ್ನೂ ಸೊಂಪಾಗಿಸಿದೆ. ಸ್ವಯಂಚಾಲಿತ ನೀರು ಪೂರೈಕೆಯಂಥ ಹೊಸ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸಿದೆ. ಭಲೇ ಭಾವೂಜಿ !
‘ಲಾಸ್ಟ್’ಡ್ರಾಪ್: ಸೌಂದರ್ಯಕ್ಕೆ ಎರಡು ಹೆಸರುಗಳು ನೀರು-ನೀರೆ. ನೀರೊಳಗೇ ನೀರೆಯಿದ್ದರೆ ಆಕೆಯೇ ಅಪ್ಸರೆ !
ಸಮ್ಮನಸ್ಸಿಗೆ ಶರಣು
4 months ago
No comments:
Post a Comment