ಒಮ್ಮೆ ಯೋಚಿಸಿ ನೋಡಿ, ಒಂದೇ ಒಂದು ಗುಟುಕು ನೀರನ್ನೂ ನೀವು ಹೊರಗೆಲ್ಲಿಯೂ ಧೈರ್ಯವಾಗಿ ಕುಡಿಯುವ ಸ್ಥಿತಿಯಲ್ಲಿಲ್ಲ. ಮನೆ ಬಿಟ್ಟು ಹೊರಬೀಳಬೇಕೆಂದರೆ ಕೈಯಲ್ಲೊಂದು ಬಾಟಲಿ ನೀರನ್ನು ಹಿಡಿದುಕೊಂಡೇ ಹೊರಡಬೇಕಾದ ಪರಿಸ್ಥಿತಿ. ಎಲ್ಲಿಗೇ ಹೋದರೂ ಬೆನ್ನಿನ ಬ್ಯಾಗಿನಲ್ಲಿ ಬಲುಭಾರದ ನೀರಿನ ಬಾಟಲಿಯನ್ನು ಹೊತ್ತುಕೊಂಡೇ ತಿರುಗಬೇಕು. ಇಲ್ಲವೇ ಒಂದೇ ಒಂದು ಲೀಟರ್ ನೀರಿಗೆ ಹತ್ತೋ-ಹನ್ನೆರಡೋ ರೂ. ತೆರಬೇಕು.
ಇದ್ಯಾವ ಕರ್ಮ ? ನಮ್ಮದೇ ನೆಲದಲ್ಲಿ ಒಂದು ಗುಟುಕು ನೀರನ್ನೂ ನೆಮ್ಮದಿಯಾಗಿ ಕುಡಿಯಲು ಆಗುವುದಿಲ್ಲ ಎಂದಾದ ಮೇಲೆ ಅದಕ್ಕೇನರ್ಥ ? ಹೀಗೆ ಹೇಳುವಾಗ ಹಳೆಯ ಗಾದೆಯೊಂದು ನೆನಪಾಗುತ್ತದೆ. ನಮ್ಮೂರಿನ ಆಲದ ಮರ, ಪರಸ್ಥಳದ ನೀರು ಎರಡರ ಬಗ್ಗೆಯೂ ಭಯ ಇದ್ದೇ ಇರುತ್ತದಂತೆ. ಕಾರಣ ತುಂಬ ಸ್ವಾರಸ್ಯಕರವಾಗಿದೆ. ನಮ್ಮೂರಿನ ಆಲದ ಮರದ ಬಗ್ಗೆ ಒಂದಿಲ್ಲೊಂದು ಕಥೆ ನಮ್ಮಲ್ಲೇ ಸೃಷ್ಟಿಯಾಗಿರುತ್ತದೆ. ಅದೇ ಆಲದ ಮರಕ್ಕೆ ಯಾವಾಗಲೋ ಊರಿನ ಯಾರೋ ಒಬ್ಬರು ನೇಣುಬಿಗಿದುಕೊಂಡು ಸತ್ತಿದ್ದರಂತೆ. ಅವರ ದೆವ್ವ ಅದೇ ಆಲದ ಮರದಲ್ಲಿ ಯಾವಾಗಲೂ ವಾಸವಿರುತ್ತದಂತೆ ಎಂತಲೂ....ಯಾವುದೋ ಯಮ-ಯಕ್ಷಿ, ಇಲ್ಲವೇ ಜಟಕ, ಬ್ರಹ್ಮರಾಕ್ಷಸ ಹೀಗೆ ಕಪೋಲ ಕಲ್ಪಿತ ಶಕ್ತಿಯೊಂದು ಅದರಲ್ಲಿ ಇದೆ ಎಂತಲೋ- ಏನೋ ಒಂದು ಸುದ್ದಿ ಎಲ್ಲ ಊರಿನ ಆಲದ ಮರಗಳ ಸುತ್ತಲೂ ಸ್ಥಳೀಯರಲ್ಲಿ ಸುತ್ತಿಕೊಂಡಿರುತ್ತದೆ. ಇಂಥ ಪೂರ್ವಗ್ರಹ ನಮ್ಮ ಮನದಲ್ಲಿ ಇದ್ದೇ ಇರುವುದರಿಂದ ಭಯ ಸಹಜ. ಬೇರೆ ಊರಿನ ಆಲದ ಮರದ ಬಗೆಗಿನ ಕಥೆಗಳು ನಮಗೆ ಗೊತ್ತಿಲ್ಲದ ಕಾರಣ ಧೈರ್ಯವಾಗಿರುತ್ತೇವೆ. ಹಾಗೆಯೇ ನಮ್ಮೂರಿನ, ನಮ್ಮ ಮನೆಯ ನೀರು ಎಂಥದ್ದು ? ಅದರ ಗುಣ ಧರ್ಮಗಳೇನು ? ನಮ್ಮೂರಿನ ಕೆರೆಯ ಆಳವೆಷ್ಟು ? ಅದರಲ್ಲಿ ತುಂಬಿರುವ ನೀರೆಷ್ಟು, ಹೂಳೆಷ್ಟು....? ಇತ್ಯಾದಿ ಎಲ್ಲ ವಿವರಗಳೂ ನಮಗೆ ತಿಳಿದಿರುತ್ತವೆ. ಆದ್ದರಿಂದ ಧೈರ್ಯವಾಗಿ ಅದರೊಂದಿಗೆ ವ್ಯವಹರಿಸುತ್ತೇವೆ. ಆದರೆ, ಪರಸ್ಥಳಕ್ಕೆ ಹೋದಾಗ ಈ ಯಾವ ಮಾಹಿತಿಯೂ ನಮಗೆ ಗೊತ್ತಿರುವುದಿಲ್ಲ. ಅಲ್ಲಿನ ನೀರು ಕುಡಿದರೆ ಎಲ್ಲಿ ಶೀತವಾದೀತೋ.... ಭೇದಿಗಿಟ್ಟುಕೊಂಡೀತೋ... ಹೊಳೆ ಎಷ್ಟು ಅಪಾಯಕಾರಿಯೋ.... ಎಲ್ಲಿ ಸುಳಿ ಇದ್ದೀತೋ... ಎಂಬ ಭಾವನೆಯಲ್ಲಿ ತುಂಬ ಎಚ್ಚರಿಕೆಯಿಂದ ಇರುತ್ತೇವೆ. ಅಪ್ಪಿ ತಪ್ಪಿಯೂ ಕಾಯಿಸದೇ ಇರುವ ನೀರನ್ನು ಕುಡಿಯುವುದಿಲ್ಲ.
ಅದೊಂದು ಕಾಲವಿತ್ತು, ಬಾಯಾರಿಕೆಯಾಯಿತೆಂದರೆ ಎಲ್ಲಿಗೆ ಬೇಕಾದರೂ ಹೋಗಿ ಯಾರದ್ದೋ ಮನೆಯಲ್ಲೋ, ಯಾವುದೋ ದೇವಸ್ಥಾನದಲ್ಲೋ, ಹೋಟೆಲ್‌ನಲ್ಲೋ ಸಂತೃಪ್ತಿಯಿಂದ ನೀರು ಕುಡಿದು ಬರುತ್ತಿದ್ದೆವು. ಯಾವ ಭಯವೂ ಇರುತ್ತಿರಲಿಲ್ಲ. ಹೆಚ್ಚೆಂದರೆ ನೀರು ಕೇಳಿದ ಮನೆಯವರು ನೀರಿನೊಂದಿಗೆ ಒಂದು ಚೂರು ಬೆಲ್ಲವನ್ನೋ, ಮಿಡಿ ಉಪ್ಪಿನ ಕಾಯಿಯನ್ನೋ, ಒಂದು ಚಮಚ ಸಕ್ಕರೆಯನ್ನೋ ನೀಡುತ್ತಿದ್ದರು. ಅದನ್ನು ಬಾಯಿಗಿಟ್ಟುಕೊಂಡು ನೀರು ಕುಡಿದು ದಣಿವಾರಿಸಿಕೊಂಡು ಮುಂದೆ ಹೋಗಬಹುದಿತ್ತು. ನಾವು ಕುಡಿಯುತ್ತಿದ್ದ ನೀರಿನ ಬಗೆಗೆ ಯಾವುದೇ ಅಪನಂಬಿಕೆ ನಮಗಿರಲಿಲ್ಲ. ಈ ಭೂಮಿಯ ಮೇಲಿನ ನೀರೆಲ್ಲ ಒಂದೇ... ಅದು ಸದಾ ಪರಿಶುದ್ಧ. ಅದರಿಂದ ಯಾವುದೇ ಅಪಾಯವಿಲ್ಲ ಎಂಬ ವಿಶ್ವಾಸ ಎಲ್ಲರಲ್ಲಿಯೂ ಇತ್ತು. ಹೀಗಾಗಿ, ಹೋದಲ್ಲೆಲ್ಲ ಬಾಟಲಿ ಬೇತಾಳನನ್ನು ಬೆನ್ನಿಗಂಟಿಸಿಕೊಂಡು ಹೋಗುವ ಅಗತ್ಯ ಇರಲಿಲ್ಲ. ಅದರ ಅನಿವಾರ್ಯತೆಯೂ ಇರಲಿಲ್ಲ. ಎಂಥದೇ ದೂರದ ಹಾದಿಯಾಗಿರಲಿ, ಕುಡಿಯಲು ನೀರು ಸಿಗುವುದಿಲ್ಲ ಎಂಬ ಮಾತೇ ಇರಲಿಲ್ಲ. ಕೊನೇ ಪಕ್ಷ ಅಲ್ಲಲ್ಲಿ ಅರವಂಟಿಗೆಗಳಾದರೂ ಇರುತ್ತಿದ್ದವು. ರಸ್ತೆ ಪಕ್ಕದಲ್ಲಿ ಸಿಲೀಂದ್ರಗಳಾದರೂ ತಣ್ಣನೆಯ ಸಿಹಿನೀರನ್ನು ತುಂಬಿಸಿಟ್ಟುಕೊಂಡು ದಾರಿಹೋಕರನ್ನು ಸತ್ಕರಿಸುತ್ತಿದ್ದವು.
ಹೌದು, ಪಾರಂಪರಿಕ ಭಾರತದ ಇಂಥ ವ್ಯವಸ್ಥೆಗಳು ನಿಜಕ್ಕೂ ಇಂದಿಗೂ ಮಾದರಿ. ಅರವಂಟಿಕೆಗಳನ್ನು, ಸಿಲೀಂದ್ರಗಳನ್ನು ನೆನಪಿಸಿಕೊಂಡರೇ ಸಾಕು, ತಣ್ಣನೆಯ ಅನುಭೂತಿ ಒಡಮೂಡುತ್ತದೆ. ಇನ್ನು ಅವು ನೀಡುವ ಸಾಂತ್ವನ ನಮ್ಮ ಮಾನವೀಯ ಗುಣಧರ್ಮದ ಬಗೆಗೆ ಹೆಮ್ಮೆ ಮೂಡಿಸದೇ ಇರದು. ದುರದೃಷ್ಟವೆಂದರೆ ಇವನ್ನು ನೋಡುವುದು ಹಾಗಿರಲಿ, ಈಗಿನ ತಲೆಮಾರಿಗೆ ಕನಿಷ್ಠ ಇವುಗಳ ಹೆಸರೂ ಗೊತ್ತಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೊಮ್ಮೆ ಅವು ಇಂದಿಗೂ ಅಸ್ತಿತ್ವದಲ್ಲಿದ್ದರೂ ಯಾರೂ ಅದನ್ನು ಬಳಸುತ್ತಿರಲಿಲ್ಲ ಎಂಬುದು ಬೇರೆ ಪ್ರಶ್ನೆ. ಏಕೆಂದರೆ ಜಲ ಮಾಲಿನ್ಯ ಹಾಗೂ ಬಾಟಲಿ ನೀರಿನ ಗೀಳು ನಮ್ಮಲ್ಲಿ ಅಷ್ಟರ ಮಟ್ಟಿಗೆ ಅಪನಂಬಿಕೆಯನ್ನು ಸೃಷ್ಟಿ ಮಾಡಿದೆ.
ಅರವಂಟಿಗೆಗಳದ್ದಂತೂ ಅತ್ಯಂತ ಗಮನಾರ್ಹ, ಅಷ್ಟೇ ಮೌಲಿಕ ಸೇವೆ. ಮಾತ್ರವಲ್ಲ ಅದು ತನ್ನದೇ ವಿಶಿಷ್ಟ ಕಾರ್ಯ ಶೈಲಿಯನ್ನೂ ಹೊಂದಿರುತ್ತಿತ್ತು. ಊರಿನ ಮುಖ್ಯಸ್ಥರು, ಧನಿಕರು ತಮ್ಮೂರಿನ ಮುಖ್ಯ ರಸ್ತೆಯ ಕೊನೆಯಲ್ಲಿ ವಿಶಾಲ ಛತ್ರವೊಂದನ್ನು ನಿರ್ಮಿಸಿರುತ್ತಿದ್ದರು. ಎಷ್ಟೋ ವೇಳೆ ಒಬ್ಬರೇ ಅಥವಾ ಊರಿನ ಎಲ್ಲರೂ ಕೂಡಿ ಇದನ್ನು ನಿರ್ವಹಿಸುತ್ತಿದ್ದರು. ಛತ್ರದ ಹೊರ ಜಗಲಿಯಲ್ಲಿ ಎರಡು ಮೂರು ಹೂಜಿಗಳಲ್ಲಿ ಸದಾ ಶುದ್ಧ ಕುಡಿಯುವ ನೀರನ್ನು ತುಂಬಿಡಲಾಗುತ್ತಿತ್ತು. ದಾರಿ ಹೋಕರಿಗೆ ನೀರು ಕುಡಿದು ದಣಿವಾರಿಸಿಕೊಳ್ಳಲು ವಿಶಾಲ ಹಜಾರದಲ್ಲಿ ಚಾಪೆ ಹಾಸಿರಲಾಗಿರುತ್ತಿತ್ತು. ನೀರಿನ ಜತೆಗೆ ಪಾನಕ, ಮಜ್ಜಿಗೆಗಳನ್ನು ಹಂಚುತ್ತಿದ್ದುದೂ ಉಂಟು. ನಿಗದಿತ ಸಮಯದಲ್ಲಿ ಇಲ್ಲಿ ಊಟ, ತಿಂಡಿಯ ವ್ಯವಸ್ಥೆಯನ್ನೂ ಏರ್ಪಡಿಸಲಾಗಿರುತ್ತಿತ್ತು. ಏನಿಲ್ಲವೆಂದರೂ ನೀರು-ನೆರಳುಗಳಿಗಂತೂ ತ್ಯಾಮಾನವಿರುತ್ತಿರಲಿಲ್ಲ. ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಯಿಂದಲೇ ನೋಡುವ ಇಂದಿನ ದಿನಗಳಲ್ಲಿ ಅಂಥ ಧರ್ಮ ಬುದ್ಧಿಯನ್ನಾಗಲೀ, ಶುದ್ಧ ಆತಿಥ್ಯವನ್ನಾಗಲೀ ನಿರೀಕ್ಷಿಸುವುದೇ ಅಪರಾಧವಾದೀತು.
ಇನ್ನು ಸಿಲೀಂದ್ರಗಳು ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ಪಳೆಯುಳಿಕೆಗಳಾಗಿ ಕಾಣಸಿಗುತ್ತವಾದರೂ ಅದರಲ್ಲಿ ಕಸ ಕಡ್ಡಿಗಳು ಮಾತ್ರವೇ ತುಂಬಿಕೊಂಡಿರಲು ಸಾಧ್ಯ. ಅವುಗಳ ವಿನ್ಯಾಸವೇ ಗಮನ ಸೆಳೆಯುವಂಥದ್ದು. ಸಿಲೀಂದ್ರ ಎಂದು ಕರೆಯಲಾಗುವ ನಾಲ್ಕು ಕಲ್ಲು ಕಂಬಗಳ ಮೇಲೆ ಕಲ್ಲಿನಿಂದಲೇ ನಿರ್ಮಿಸಿರುವ ಚೌಕಾಕಾರದ ತೊಟ್ಟಿ ಹಿಂದೆಲ್ಲ ಗ್ರಾಮಾಂತರ ಭಾಗದಲ್ಲಿ ಸಾಮಾನ್ಯವಾಗಿತ್ತು. ಇದರಲ್ಲಿ ನೀರನ್ನು ತುಂಬಿಸಿಡಲಾಗುತ್ತಿತ್ತು. ಈ ನೀರು ದಾರಿಹೋಕರ ನೀರಡಿಕೆ ನೀಗಿಸುತ್ತಿತ್ತು. ದೇವಸ್ಥಾನ, ಅಶ್ವತ್ಥಕಟ್ಟೆ , ಬಸ್ ನಿಲ್ದಾಣ, ಜಾತ್ರೆ ನಡೆಯುವ ಸ್ಥಳದಲ್ಲಿ ಕಡ್ಡಾಯವಾಗಿರುತ್ತಿದ್ದ ಈ ನೀರಿನ ವ್ಯವಸ್ಥೆಯ ಸದುಪಯೋಗವನ್ನು ನೂರಾರು ಮಂದಿ ಪಡೆದುಕೊಳ್ಳುತ್ತಿದ್ದರು.
ಗ್ರಾಮದ ಪ್ರತಿಯೊಂದು ಮನೆಯವರೂ ಸರತಿಯ ಮೇರೆಗೆ ಸಿಲೀಂದ್ರಕ್ಕೆ ನೀರು ತುಂಬಿಸುತ್ತಿದ್ದರು. ಬಿಸಿಲಲ್ಲಿ ಬಾಯಾರಿ ಬಂದವರು ನೀರು ಕುಡಿದು ಸಂತೃಪ್ತರಾಗಿ ಹರಸಿದರೆ ಪುಣ್ಯ ಬರುತ್ತದೆ ಎಂಬ ನಂಬಿಕೆಯಿಂದಾಗಿ ನೀರು ತುಂಬಲು ಪೈಪೋಟಿ ನಡೆಯುತ್ತಿತ್ತು. ಕೆಲವು ಕಡೆಗಳಲ್ಲಿ ಮಣ್ಣಿನಿಂದಲೂ ಇಂಥ ಸಿಲೀಂದ್ರಗಳನ್ನು ನಿರ್ಮಿಸಿರಲಾಗುತ್ತಿತ್ತು. ಬಿಸಿಲ ಝಳಕ್ಕೆ ನೀರು ಸಿಲೀಂದ್ರದ ಮಣ್ಣಿನ ಹೊರಮೈ ಮೂಲಕ ಸಣ್ಣಗೆ ಆವಿಯಾಗಿ ಹೋಗುತ್ತಿದ್ದುದರಿಂದ ಒಳಗಿನ ನೀರು ಪಕ್ಕಾ ಫ್ರಿಜ್‌ನ ನೀರಿನಂತೆ ತಣ್ಣಗಿರುತ್ತಿತ್ತು. ಜತೆಗೆ ಮಣ್ಣಿನ ಕಂಪೂ ಸೇರಿಕೊಂಡು ಹಿತವಾಗಿರುತ್ತಿತ್ತು. ಇನ್ನು ಕೆಲವು ಕಡೆ ಸಿಲೀಂದ್ರಗಳಿಗೆ ತುಳಸಿ ದಳ, ಲಾವಂಚದ ಬೇರು, ಅತ್ತಿ ಮರದ ಚಕ್ಕೆ ಇತ್ಯಾದಿಗಳನ್ನು ಹಾಕಿಡುತ್ತಿದ್ದುದೂ ಉಂಟು. ಇದರಿಂದ ನೀರು ರುಚಿಕರವಾಗಿರುತ್ತಿತ್ತಲ್ಲದೇ ಔಷಯ ಗುಣಗಳಿಂದ ಆರೋಗ್ಯಕ್ಕೂ ಹಿತ ನೀಡುತ್ತಿತ್ತು. ಇವು ಭಾರತೀಯತೆಯ ಔದಾರ್ಯ ಮಾತ್ರವಲ್ಲ, ಇಲ್ಲಿನ ಜೀವನ ಶಿಸ್ತಿನ ಪ್ರತೀಕವೂ ಆಗಿತ್ತು.
ಸಮಾಜ ವ್ಯವಸ್ಥೆಯ ಪ್ರಾತಿನಿಕ ಕುರುಹಾಗಿ ಬಿಂಬಿತವಾಗುತ್ತಿದ್ದ ಇಂಥ ಪಾರಂಪರಿಕ ವ್ಯವಸ್ಥೆಗಳು ಇಂದು ವಿಶ್ವಕೋಶದಲ್ಲಿ ಮಾತ್ರ ಉಳಿದುಕೊಂಡಿದ್ದರೆ ಅದು ನಮ್ಮದೇ ಅಪರಾಧ. ಅಂಥ ಮುಗ್ಧತೆ ನಮಗಿನ್ನು ಬರಲು ಸಾಧ್ಯವೇ ? ಒಂದೊಮ್ಮೆ ಬಲವಂತವಾಗಿ ರೂಢಿಸಿಕೊಂಡರೂ ಅಷ್ಟೇ ಮುಗ್ಧವಾಗಿ ಅದರಲ್ಲಿನ ನೀರು ಕುಡಿದುಹೋಗುವ ಧೈರ್ಯ ಹಾಗೂ ನೀರಿನ ಶುದ್ಧತೆ-ಎರಡೂ ಖಂಡಿತಾ ಮರಳಿಬರಲು ಸಾಧ್ಯವೇ ಇಲ್ಲವೆಂಬಷ್ಟರ ಮಟ್ಟಿಗೆ ನಾವು ಮುಂದುವರಿದಿದ್ದೇವೆ; ಅಭಿವೃದ್ಧಿಪರರಾಗಿದ್ದೇವೆ ?!
‘ಲಾಸ್ಟ್’ಡ್ರಾಪ್: ಸಿಲೀಂದ್ರಗಳಂಥ ಹತ್ತು ಹಲವು ದೇಶಿ ಸಂಸ್ಕೃತಿಯನ್ನು ನುಂಗಿ ನೀರು ಕುಡಿದಿರುವ ಬಾಟಲಿ ನೀರಿನ ಕಂಪನಿಗಳ ಹುನ್ನಾರಕ್ಕೊಂದು ಮನದೊಳಗೇ ಕ್ಕಾರ ಕೂಗಿಕೊಂಡು, ಇನ್ನೆಂದೂ ಅದನ್ನು ಕುಡಿಯುವುದಿಲ್ಲ ಎಂಬ ದೃಢ ನಿರ್ಧಾರ ಮಾಡುವುದು ನಮ್ಮಿಂದಾಗದೇ ? ಒಮ್ಮೆ ಪ್ರಶ್ನಿಸಿಕೊಳ್ಳಿ, ಪ್ಲೀಸ್...
ಸಮ್ಮನಸ್ಸಿಗೆ ಶರಣು
4 months ago
No comments:
Post a Comment