ರಸ್ತೆಯಲ್ಲಿ ಹಾಗೆ ಸಾಗುತ್ತಿದ್ದರೆ ಅಬ್ಬಾ, ಅದೆಂಥ ಪುಳಕ ! ಇಕ್ಕೆಲಗಳಲ್ಲೂ ಸಾಲು ಸಾಲು ಹೊಲ, ಹಸಿರು ಹಚ್ಚಡ ಹೊದ್ದುಕೊಂಡು ಹಿತವಾದ ತಂಗಾಳಿಯನ್ನು ವಿಶಿಷ್ಟ ಸೊಗಡಿನೊಂದಿಗೆ ಹೋತ್ತು ತರುತ್ತಿದ್ದರೆ ಇರುವೇ ಮರೆತು ಹೋಗುತ್ತದೆ. ಆಹ್, ಅದೊಂದು ಅವರ್ಣನೀಯ ಸುಗಂಧ. ಈ ಬೆಂಗಳೂರಿನ ರೇಜಿಗೆ ಹುಟ್ಟಿಸುವ ವಾತಾವರಣ, ಹೊಗೆ, ಕಲುಷಿತ ನೀರು, ನೆಮ್ಮದಿಯಾಗಿ ಒಂದು ತುತ್ತು ತಿನ್ನಲೂ ಸಾಧ್ಯವಾಗದ ಕೆಲಸದ ಒತ್ತಡ... ಎಲ್ಲದರಿಂದ ದೂರ, ನಾಡಿನ ಭತ್ತದ ಕಣಜವೆಂದೇ ಕರೆಯುವ ಗಂಗಾವತಿಯ ಉದ್ದಗಲಕ್ಕೂ ಒಂದಿಡೀ ದಿನ ಸುತ್ತು ಹೊಡೆದಾಗ ಖಂಡಿತಾ ಅತ್ಯಮೋಘ ಅನುಭವ ಲೋಕದಲ್ಲಿ ಕಳೆದು ಹೋದದ್ದು ಸುಳ್ಳಲ್ಲ.
ಹಳ್ಳಿಗಳಲ್ಲಿ ಇನ್ನೂ ಉಳಿದುಕೊಂಡಿರುವ ಮುಗ್ಧ ಜನಜೀವನ, ಆಹ್ಲಾದಕರ ವಾತಾವರಣ, ಸಂಪ್ರದಾಯಗಳ ಸೊಗಡುಗಳನ್ನು ಮನಸೋಇಚ್ಛೆ ಅನುಭವಿಸುವ ಅವಕಾಶ ರುವ ಸಮಾಜ. ಒಳಗೊಳಗೇ ಪುಳಕಿತ ಗೊಳ್ಳುತ್ತ ಓಡಾಡಿದ್ದೆ.
ಆದರೆ ಅಂಥ ಹಸಿರು ರಾಶಿ ತಾನು ನಿಂತ ನೆಲವ್ನೇ ನುಂಗಿ ನೀರು ಕುಡಿಯುತ್ತಿದೆ ಎಂಬ ಆಘಾತಕಾರಿ ಸಂಗತಿ ಅರಿವಾದಾಗ ಎಲ್ಲ ಭಾವನೆಗಳೂ ಕಮರಿ ಹೋದವು. ಹೌದು, ಮಲೆನಾಡ್ಲೂ ಕಾಣದಷ್ಟು ಸಮೃದ್ಧ ಹೊಲದ ಸಾಲು ಇಲ್ಲಿ ಸಾಧ್ಯವಾದದ್ದು ಹೇಗೆ ಎಂಬ ಸಂದೇಹವೇ ಎಲ್ಲ ಆತಂಕ್ಕೆ ಮೂಲವಾಯಿತು. ನೀರಾವರಿ ಯೋಜನೆಗಳ ಸಾಫಲ್ಯ ಹೀಗೂ ಹಾದಿ ತಪ್ಪಿಸಬಹುದು ಎಂಬುದಕ್ಕೆ ರಾಯಚೂರು, ಕೊಪ್ಪಳ, ಗುಲ್ಬರ್ಗ ಪ್ರದೇಶದಲ್ಲಿಯ ಕೃಷಿಯೇ ನಿದರ್ಶನ . ಹಾಗೆ ನೋಡಿದರೆ ಅದು ತೀರಾ ಒಣ ಭೂಮಿ. ಯಾವಾಗ ಬೃಹತ್ ಯೋಜನೆಗಳು ಎದ್ದು ನಿಂತವೋ, ಕಾಲುವೆಗಳಲ್ಲಿ ನೀರು ತುಂಬಿ ಬರಲು ಆರಂಭವಾಯಿತೋ ಆಗಲೇ ಈ ಭಾಗದಲ್ಲಿ ಕೃಷಿಯ ಅಪಸವ್ಯಗಳೆಲ್ಲವೂ ನಾಂದಿ ಕಟ್ಟಿಕೊಂಡವು. ಹಲವು ವರ್ಷಗಳಿಂದ ಬರಡು ಬಿದ್ದಿದ್ದ, ಅತಿ ಕಡಿಮೆ ನೀರಿನಲ್ಲಿ ಮಾತ್ರ ಬೆಳೆಯಬಹುದಾದ ಬೆಳೆಗಳಿಗೆ ಮಾತ್ರ ನೆಲೆಯೊದಗಿಸಿದ್ದ ಆ ಭೂಮಿಯಲ್ಲಿ ಇದ್ದಕ್ಕಿದ್ದಂತೆ ನೀರುಕ್ಕತೊಡಗಿತು. ಮಾಡದೆ ಬಿಟ್ಟಿದ್ದ ಮಕ್ಕಿ ಗದ್ದೆಗಳಲೆಲ್ಲ ಭತ್ತದ ಸಸಿ ಕಂಡವು. ಅದೇ ಲಾಗಾಯ್ತಿನ ಸಂಪ್ರದಾಯ, ಭತ್ತ ಬಿಟ್ಟರೆ ಬೇರೇನೂ ಬೆಳೆಯುವುದೇ ಇಲ್ಲ ಎಂಬಂತಾಗಿ ಬಿಟ್ಟಿತು ರೈತರ ಮನೋಭಾವ.
ಆ ಭಾಗದಲ್ಲಿದ್ದಷ್ಟು ದಿನವೂ ಇಂಥ ಗದ್ದೆಗಳಗುಂಟ ಓಡಾಡುವುದು, ಅಲ್ಲಿನ ರೈತಾಪಿಗಳೊಂದಿಗೆ ಹರಟೆಗಿಟ್ಟುಕೊಳ್ಳುವುದನ್ನು ತಪ್ಪಿಸಿಕೊಳ್ಳಲೇ ಇಲ್ಲ. ಪಕ್ಕದ ಕಾಲುವೆಗಳಲ್ಲೇ ಜುಳುಜುಳು ನೀರ ನಿನಾದ ಸಾಥ್ ನೀಡಿತ್ತು. ಅಲ್ಲಲ್ಲಿ ‘ಹೊಡೆ ’ಹೊರಟಿದ್ದು, ಬಹುತೇಕ ಫಸಲು ಬೆಳೆದು ನಿಂತಿದ್ದವು. ತಿಂಗಳಾರು ದಿನದಲ್ಲಿ ಕೊಯ್ಲಿಗೆ ಬರುವಂಥವೂ ಇದ್ದವು. ಆದರೆ ಇಂಥ ಹಸಿರ ರಾಶಿಯೇ ಸುತ್ತಲಿನ ಭೂಮಿಗೆ ನಂಜಾಗಿ ಕಾಡುತ್ತಿದೆ ಎಂಬ ಅರಿವು ಆ ಮುಗ್ಧ ಜನರಿಗಿಲ್ಲ.
ನಿಜ, ಅಂದು ಆ ಬಿರು ಬಿಸಿಲಿನಲ್ಲೂ, ಮೈದಡವುತ್ತಿದ್ದ ಶುದ್ಧ ಗಾಳಿ ಇಂದು ಹಾಗೆ ಉಳಿದಿಲ್ಲ. ನೀರು ಅಂದಿನಷ್ಟು ನಿರ್ಮಲವಾಗಿಲ್ಲ. ಒಂದರ್ಥದಲ್ಲಿ ನಗರದಲ್ಲಿ ಹೊರಸೂಸುವ ಕಪ್ಪು ಹೊಗೆ, ವಾಸನೆ ಬಡಿಯುವ ನೀರಿಗಿಂತಲೂ ಹೆಚ್ಚಿನ ಮಾಲಿನ್ಯ ಇಂದು ಆ ಹಸಿರ ರಾಶಿಯ ಫಲವಾಗಿ ಕಾಣಿಸಿಕೊಂಡಿದೆ. ಇದಕ್ಕೆ ಕಾರಣ ‘ಹದವರಿಯದ ಕೃಷಿ, ಮಿತಿ ಮೀರಿದ ಫಸಲಿನ ಆಸೆ’ ಎಂದರೆ ಬಹುಶಃ ಎಲ್ಲರೂ ನಂಬಲಾರರು.
ಒಂದೆಡೆ ಹಳ್ಳಿಗಳ ಆ ನಿರ್ಮಲ ಬದುಕಿನ ಮೇಲೆ ನೈಟ್ರಸ್ ಆಕ್ಸೈಡ್, ಮೀಥೇನ್, ಇಂಗಾಲದ ಡೈಆಕ್ಸೈಡ್, ಅಮೋನಿಯಾಗಳಂಥ ವಿಷಾನಿಲಗಳು ಕರಾಳ ಹಸ್ತ ಚಾಚಿವೆ. ಇವು ನಗರ ಬದುಕಿನಲ್ಲಿ ಕಾಣುವ ಮಾಲಿನ್ಯಕ್ಕಿಂತ ತೀರಾ ಅಪಾಯಕಾರಿ. ಇನ್ನೊಂದೆಡೆ ನೀರಿನ ಅಬ್ಬರ ತಾಳಲಾರದೇ, ತನ್ನ ಭೌಗೋಳಿಕ ಗುಣಕ್ಕೆ ಮೀರಿದ ಕೃಷಿ ಪದ್ಧತಿಯಿಂದ ಅಲ್ಲಿನ ನೆಲ ಸಂಪೂರ್ಣ ಜವಳೆದ್ದು ಹೋಗಿದೆ. ಒಂದು ಬೆಳೆ ಮುಗಿದರೆ ಮತ್ತೆ ಮೂರು ವರ್ಷ ಬೆಳೆತೆಗೆಯಲು ಸಾಧ್ಯವೇ ಇಲ್ಲ, ಭತ್ತ ಬಿಟ್ಟು ಬೇರೇನನ್ನೂ ಬೆಳೆಯಾಗುವುದೇ ಇಲ್ಲ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ.
ಏನಿದಕ್ಕೆ ಕಾರಣ ? ಉತ್ತರ-‘ಹಸಿರುಕ್ರಾಂತಿ’ಯ ಹೆಸರಲ್ಲಿ ನಾವಿಂದು ಅಳವಡಿಸಿ ಕೊಂಡಿರುವ ಉತ್ಪಾದನಾಧಾರಿತ ಕೃಷಿ. ಪರ್ಯಾಯ ಬೆಳೆಗಳಿದ್ದ ತಾಣದಲ್ಲಿ ಏಕ ಬೆಳೆ ಪದ್ಧತಿ ಕಾಲಿಟ್ಟಿದೆ. ಹೀಗಾಗಿ ಭೂಮಿ ನಿಸ್ಸಾರವಾಗುತ್ತಿದೆ. ಸಾಲದ್ದಕ್ಕೆ ಬರೋಬ್ಬರಿ ನಾಲ್ಕು ತಿಂಗಳು ನೀರು ಕಟ್ಟಿ ನಿಲ್ಲಿಸಿಯೇ ಭತ್ತ ಬೆಳೆಯಬೇಕೆಂಬ ಹುಚ್ಚು ನಂಬಿಕೆ ನೀರಿಳಿಯದ ಗಂಟಲಿಗೆ ಕಡುಬು ತುರುಕುದಂತೆ ಆಗುತ್ತಿದೆ. ಭೂಮಿಗಿರುವ ನೀರಿನ ಧಾರಣಾ ಸಾಮರ್ಥ್ಯಕ್ಕಿಂತಲೂ ಹೆಚ್ಚು ನೀರನ್ನು ನಿಲ್ಲಿಸುತ್ತಿರುವುದರಿಂದ ಇಡೀ ಪ್ರದೇಶದ ಮಣ್ಣಿನಲ್ಲಿ ಕ್ಯಾಲ್ಷಿಯಂ ಅಂಶ ಕಾಣೆಯಾಗಿ ಜವಳು ಉಕ್ಕುತ್ತಿದೆ.
ಇನೊಂದು ಗಮನಾರ್ಹ ಸಂಗತಿಯೆಂದರೆ, ನೀರು ನಿಲ್ಲಿಸಿ ಬೆಳೆಯಲಾದ ಭತ್ತದ ಗದ್ದೆಗಳಲ್ಲಿ ತೆನೆ ಬಲಿಯಲಾರಂಭಿಸುತಿದ್ದಂತೆ ನೀರನ್ನು ಬತ್ತಲು ಬಿಡಲಾಗುತ್ತದೆ. ಪೂರ್ಣ ಬೆಳೆ ಕಟಾವಿಗೆ ಬರುವ ಹೊತ್ತಿಗೆ ಗದ್ದೆಗಳೂ ಬತ್ತಿರುತ್ತವೆ. ಹೀಗೆ ಬತ್ತಿದ ಗದ್ದೆಗಳಲ್ಲಿ ಹುಟ್ಟುವುದೇ ಈ ನೈಟ್ರಸ್ ಆಕ್ಸೈಡ್ ಎಂಬ ಭಯಂಕರ ಕಾರ್ಕೋಟಕ. ಸಾಮಾನ್ಯವಾಗಿ ಭತ್ತ, ನಾಟಿ ಮಾಡುವ ಮೇಲಿಂದ ಮೇಲೆ ಹೊಲವನ್ನು ಉತ್ತಿ, ನೀರು ಆವಿಯಾಗದ ವ್ಯವಸ್ಥೆ ಸೃಷ್ಟಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಣ್ಣಿನಲ್ಲಿರುವ ನೈಸರ್ಗಿಕ ರಂಧ್ರಗಳು ಮುಚ್ಚಿಹೋಗುತ್ತವೆ. ಕೃಷಿ ಸಂದರ್ಭದಲ್ಲಿ ನೀರು ನಿಲ್ಲಿಸಿದಾಗ ಅದರಲ್ಲಿ ‘ಪಿಎಚ್’ ಅಂಶ ಕುಸಿದು ಆಮ್ಲಯುಕ್ತವಾಗುತ್ತದೆ. ಹೊಲದ ಪಕ್ಕದಲ್ಲಿ ನಮಗೆ ರಾಚುವ ವಿಚಿತ್ರ ಸುವಾಸನೆ ಇದರದ್ದೇ ಫಲ. ಈ ವಾತಾವರಣದಲ್ಲಿ ‘ಆಮ್ಲಜನಕ ರಹಿತ’ ಬ್ಯಾಕ್ಟೀರಿಯಾಗಳು ಯಥೇಚ್ಛ ಉತ್ಪಾದನೆ ಯಾಗುವುದರೊಂದಿಗೆ ಇಂಗಾಲ ಮತ್ತು ಸಾರಜನಕಗಳು ಮತ್ತಷ್ಟು ಕುಸಿದು ನೈಟ್ರಸ್ ಆಕ್ಸೈಡ್ ಪ್ರಾಬಲ್ಯ ಸಾಸುತ್ತದೆ.
ಜುಲೈನಿಂದ ಡಿಸೆಂಬರ್ ಅವಯಲ್ಲಿ ಈ ವಿಷದ ಪ್ರಮಾಣ ಇತ್ತೀಚೆಗೆ ತೀರಾ ಹೆಚ್ಚುತ್ತಿದೆ. ಇದರೊಂದಿಗೆ ಸಾಂಪ್ರದಾಯಿಕ ತಳಿಗಳನ್ನು ಬಿಟ್ಟು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನೇ ಅವಲಂಬಿಸುವ ಹೊಸ ತಳಿಗಳ ಮೊರೆಹೋಗಿದ್ದೇವೆ. ಇದು ವಾಯುವನ್ನಷ್ಟೇ ಅಲ್ಲದೆ ಭೂಮಿ, ಜಲವನ್ನೂ ಮಲಿನ ಗೊಳಿಸುತ್ತಿದೆ. ಒಟ್ಟಾರೆ ಡೈನಾಮಿಕ್ಸ್ (ನಿಸರ್ಗ ಬಲಕ್ರಿಯೆ) ಏರುಪೇರಿಗೆ ನಮ್ಮ ಕೃಷಿಯ ಕೊಡುಗೆ ತೀರಾ ಗಣನೀಯ.
ಮೊದಲಿನಿಂದಲೂ ಭಾರತದಲ್ಲಿ ಅದರಲ್ಲೂ ದಕ್ಷಿಣ ರಾಜ್ಯ ಗಳಲ್ಲಿ ಭತ್ತದ ಕೃಷಿ ಹೆಚ್ಚು. ಸರಾಸರಿ ವರ್ಷಕ್ಕೆ ೪೩೦೦ ಕೋಟಿ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಎರಡು ಕೋಟಿಗೂ ಹೆಚ್ಚು ಮಂದಿ ಭತ್ತದ ಕೃಷಿಯನ್ನು ಅವಲಂಬಿಸಿದ್ದಾರೆ. ಇಷ್ಟೊಂದು ಪ್ರಮಾಣದ ಗದ್ದೆಗಳು ಹೊರ ಸೂಸಬಹುದಾದ ನೈಟ್ರಸ್ ಆಕ್ಸೈಡ್‌ನ ಮಟ್ಟ ಎಷ್ಟಿರಬಹುದು. ಅವು ಇನ್ನೆಷ್ಟು ಮಂದಿಯ ಉಸಿರು ಕಟ್ಟಿಸಬಹುದು, ಆ ಪ್ರದೇಶ ಗಳಲ್ಲಿ ಬಳಸುವ ರಾಸಾಯನಿಕ ಗೊಬ್ಬರ, ಕೀಟನಾಶಕಗಳು ಎಷ್ಟು ಮಂದಿಯ ಪ್ರಾಣಕ್ಕೆ ಕುತ್ತು ತರಬಹುದೆಂಬುದನ್ನು ಊಹಿಸಬಹುದು.
ಇದಕ್ಕಿರುವ ಪರಿಹಾರವೆಂದರೆ ಆಯಾ ಪ್ರದೇಶದ ಹವಾಗುಣಕ್ಕನುಗುಣ ಬೆಳೆ ನಮ್ಮ ಕೃಷಿಯಲ್ಲಿ ಮುಂದುವರಿಯಬೇಕು. ಭತ್ತ ಬೆಳೆದರೂ ನೀರಾವರಿಯಾಗಿದೆಯೆಂಬ ಒಂದೆ ಕಾರಣಕ್ಕೆ ನೀರು ನಿಲ್ಲಿಸಿಯೇ ಭತ್ತ ಬೆಳೆಯಬೇಕೆಂಬ ನಮ್ಮ ವಿಚಿತ್ರ (ಮೂಢ) ನಂಬಿಕೆಯನ್ನು ಬದಲಿಸಿಕೊಳ್ಳಲೇಬೇಕು. ಕೃಷಿ ಅಭಿವೃದ್ಧಿಗೆ ನಾವು ನೀಡುತ್ತಿರುವ ಅನಗತ್ಯ, ಅವೈಜ್ಞಾನಿಕ ವ್ಯಾಖ್ಯಾನವನ್ನು ನಿಲ್ಲಿಸಬೇಕು. ಈ ಸಂಬಂಧ ರೈತರಲ್ಲಿ ಜಾಗೃತಿಯಾಗಬೇಕು. ಜೈವಿಕ, ಕೃಷಿ ವ್ಯವಸ್ಥೆಯೊಂದಿಗೆ ಕಡಿಮೆ ನೀರಿನಲ್ಲಿ ಆರ್ಥಿಕ ದೃಷ್ಟಿಕೋನದ ಮಿಶ್ರ ಬೇಸಾಯಕ್ಕೆ ಆದ್ಯತೆ ನೀಡಬೇಕು.
ಎಲ್ಲೆಡೆ ನೀರು ಸಮಸ್ಯೆಯಾಗಿ ಕಾಡುತ್ತಿರುವಾಗಲೇ, ಹೊಸ ಪರಿಹಾರೋಪಾಯಗಳ ಹುಡುಕಾಟ ಆರಂಭವಾಗಿದೆ. ಈ ಹುಡುಕಾಟದಲ್ಲಿ ನಮಗೆ ಕಂಡದ್ದೆಲ್ಲವೂ ಪಾರಂಪರಿಕ ಪದ್ಧತಿಗಳಿಂದ ಹೊರತಾದ, ದೇಸಿ ತಂತ್ರಜ್ಞಾನವನ್ನು ಸಾರಾಸಗಟು ನಿರಾಕರಿಸುವ, ಆಧುನಿಕ ಭೂಯಿಷ್ಟ ಅವಸ್ಥಾಂತರಗಳೇ. ಕಾಲ ಬದಲಾದಂತೆಲ್ಲ, ಅಗತ್ಯಗಳ ವ್ಯಾಪ್ತಿ ವಿಸ್ತಾರವಾದಂತೆಲ್ಲ ಒಂದಷ್ಟು ಬದಲಾವಣೆ ಅಗತ್ಯವೂ ಹೌದು ಅನಿವಾರ್ಯವೂ ಹೌದು. ಒಪ್ಪಿಕೊಳ್ಳೋಣ. ಹಾಗೆಂದು ಹಿಂದಿನ ಯಾವುದರಲ್ಲೂ ಇದಕ್ಕೆ ‘ಉತ್ತರ’ ದೊರಕುವುದೇ ಇಲ್ಲವೆಂಬ ಹಠಕ್ಕೆ ತಗುಲಿಕೊಂಡು ವರ್ತಿಸುವುದು ನೀರಿನ ಮಟ್ಟಿಗೆ ತೀರಾ ಅರ್ಥಹೀನ. ಹಾಗೇ ವರ್ತಿಸಿದ ಫಲವೇ ಈ ಜಿಲ್ಲೆಗಳಲ್ಲಿ ಕಾಣುತ್ತಿರುವ ನೀರಾವರಿಯ ದುರ್ಬಳಕೆ. ದನ್ನು ತಕ್ಷಣ ತಡೆಯದಿದ್ದರೆ ಇಡೀ ಪ್ರದೇಶದ ಮಣ್ಣು ನಿಷ್ಪ್ರಯೋಜಕವಾಗುವ ಜತೆಗೆ, ನೀರೂ ಕುಲಗೆಟ್ಟು ಹೋಗುತ್ತದೆ. ಮಾತ್ರವಲ್ಲ ಹಳ್ಳಿಗರು ಉಸಿರಾಟಕ್ಕೆ ಪರದಾಡಬೇಕಾದ ಸ್ಥಿತಿ ಕಟ್ಟಿಟ್ಟದ್ದೇ !
‘ಲಾಸ್ಟ್ ’ಡ್ರಾಪ್ : ಅತಿ ಹೆಚ್ಚು ನೀರಿನ ಬಳಕೆ ಪ್ರದೇಶ ಅತಿ ಹೆಚ್ಚು ನೀರು ಪೋಲಾಗುವ ತಾಣವೆಂಬ ಸತ್ಯ ನಮಗೆ ಅರಿವಾಗಬೇಕಿದೆ.
ಸಮ್ಮನಸ್ಸಿಗೆ ಶರಣು
4 months ago
No comments:
Post a Comment