Friday, December 12, 2008

ಅಂತರ್ಜಲ ಆಗಿದೆ ಹಾಲಾಹಲ


ನೀರೆಂಬುದು ಬರಿ ನೀರಲ್ಲ. ಅದೊಂದು ಜಾಗೃತ ಪ್ರಜ್ಞೆಯ ಪ್ರತೀಕ. ಅದು ಜೀವಂತಿಕೆಯ ಲಕ್ಷಣ. ಸಾಮುದಾಯಿಕ ಸಂಕೇತ. ಚಲನ ಶೀಲತೆಗೆ ಸಾಕ್ಷಿ. ಕರ್ತಾರನ ಕಸುಬಿನಲ್ಲಿ ಅರಳಿದ ಅತ್ಯಂತ ಕ್ರಿಯಾಶೀಲ ಭಾಗವೊಂದಿದ್ದರೆ ಅದು ನೀರು.
ಮನುಷ್ಯ ಮನುಷ್ಯರನ್ನು ಬಂಸಿಟ್ಟ ಅತ್ಯಂತ ದಟ್ಟವಾದ ಭಾವನೆಯನ್ನು ಹಸಿಹಸಿಯಾಗಿ ಬಣ್ಣಿಸುತ್ತೇವೆ. ಇಲ್ಲಿ ಹಸಿಹಸಿಯಾಗಿದೆ ಎಂಬುದೇ ಜಲದ ಪ್ರತಿಮೆ. ಸುಂದರ ಕಾವ್ಯ ಕನ್ನಿಕೆಯ ರೂಪದಲ್ಲಿ ಮೊದಲ ನೋಟದಲ್ಲೇ ಎಂಥವರನ್ನೂ ಸೆಳೆಯಬಲ್ಲ ಜಲರಾಶಿಗೆ ಮನಸೋಲದ ಮನಸ್ಸುಗಳಿಲ್ಲ. ಮನುಷ್ಯನೊಂದಿಗಿನ ಜಲದ ಸಂಬಂಧದ ಸೆಳೆತ ಅಂಥದ್ದು. ಈ ಪರಿಯ ಚುಂಬಕ ಶಕ್ತಿಯೊಂದು ಈ ಧರೆಯ ಮೇಲೆಯೇ ಇಲ್ಲದಿದ್ದರೆ ? ಎಂಥ ಮೂರ್ಖ ಪ್ರಶ್ನೆ. ಖಂಡಿತ ಹಾಗೊಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಲೂ ಭಯವಾಗುತ್ತದೆ. ಏಕೆಂದರೆ ನೀರಿಲ್ಲದ ಜಗತ್ತಿನಲ್ಲಿ ಮನುಷ್ಯನ ಪ್ರಸ್ತಾಪವೇ ಇರುತ್ತಿರಲಿಲ್ಲ. ಮಾತ್ರವಲ್ಲ ಜೀವ ಕೋಟಿಯ ಪ್ರಮೇಯವೂ ಇಲ್ಲ.
ಇಂಥ ನೀರಿನ ವಿಚಾರದಲ್ಲಿ ತಿದ್ದಿಕೊಳ್ಳಲಾಗದ ತಪ್ಪು ಮಾಡಿ ಆಗಿದೆ. ನೀರಿನ ವಿಚಾರದಲ್ಲಿ ಎಸಗಿದ ಸಾಮೂಹಿಕ ಅಪರಾಧಕ್ಕೆ ಈಗೇನಿದ್ದರೂ ಬೆಲೆತೆರುವುದೊಂದೇ ಮಾರ್ಗ ಉಳಿದಿದೆ ನಮ್ಮ ತಲೆ ಮಾರಿಗೆ. ಆದರೆ, ಹಿಂದೆ ಮಾಡಿದ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಿದರೆ ಮುಂದಿನ ಜನಾಂಗವನ್ನಾದರೂ ಆರೋಗ್ಯಪೂರ್ಣವಾಗಿಟ್ಟು ಹೋಗಬಹುದು.
ವಿಶ್ವಾದ್ಯಂತ ಪ್ಲೋರೋಸಿಸ್‌ನ ರಕ್ಕಸ ಸಾಮ್ರಾಜ್ಯ ಸ್ಥಾಪನೆಯಾಗಿದೆ. ಸ್ವಾತಂತ್ರ್ಯೋತ್ತರ ಭಾರತಕ್ಕೆ ರೋಗಗಳೇನೂ ಹೊಸದಲ್ಲ. ಸಾಂಕ್ರಾಮಿಕಗಳು, ಸಾಮೂಹಿಕ ರೋಗ ಲಕ್ಷಣಗಳ ಸಾಲಿಗೆ ಹೊಸ ಸೇರ್ಪಡೆ ಪ್ಲೋರೋಸಿಸ್. ಆದರಿದು ಸ್ವಯಂಕೃತ. ಅಂತರ್ಜಲದ ಮಿತಿ ಮೀರಿದ ಬಳಕೆ, ನೀರು ನಿರ್ವಹಣೆಯಲ್ಲಿನ ಇನ್ನಿಲ್ಲದ ಬೇಜವಾಬ್ದಾರಿ, ಜಲ ಮಾಲಿನ್ಯದ ಪರಮಾವ ತಲುಪಿದ ಪರಿಣಾಮ ಇಂದು ೧೫ ರಾಜ್ಯಗಳಲ್ಲಿನ ೧೫೦ಕ್ಕೂ ಹೆಚ್ಚು ಜಿಲ್ಲೆಯ ಕೋಟ್ಯಂತರ ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ. ಎರಡು ಅಲುಗಿನ ಪ್ಲೋರೀನ್ ಮನುಷ್ಯ ಜೀವನದ ಬೆಳವಣಿಗೆ ಎಷ್ಟು ಅಗತ್ಯವೋ ಅಷ್ಟೇ ಮಾರಕ.
ಅಂತರ್ಜಲವೇ ಅಕ ಪ್ಲೋರೈಡ್‌ನ ತವರು. ಅಭಿವೃದ್ಧಿಯ ಹುಚ್ಚುವೇಗಕ್ಕೆ ಸಿಲುಕಿ, ಬೋರ್‌ವೆಲ್‌ಗಳ ಹುಸಿ ಪ್ರಗತಿಯನ್ನು ಆರೋಪಿಸಿಕೊಳ್ಳುವ ಭರದಲ್ಲಿ ನಾವೆಲ್ಲಿ ಎಡವಿದ್ದೇವೆ ಎಂಬುದು ತಿಳಿಯದೇ ಹೋದದ್ದು ದುರಂತ. ಬರಗಾಲ ಪೀಡಿಸಿದ್ದನ್ನೇ ನೆಪಮಾಡಿಕೊಂಡು ಆರಂಭಿಸಿದ ಬೋರ್‌ವೆಲ್‌ಗಳ ಕ್ರಾಂತಿ ಈ ಮಟ್ಟಿಗಿನ ದುರಂತಕ್ಕೆ ಮುನ್ನುಡಿಯಾಗುತ್ತದೆ ಎಂಬುದನ್ನು ಯಾರೊಬ್ಬರೂ ಗ್ರಹಿಸಿರಲೇ ಇಲ್ಲ.
ಪ್ಲೋರೀನ್ ಯುಕ್ತ ನೀರು ತಂದಿತ್ತಿರುವ ಸಂಕಟ ಒಂದೆರಡು ಬಗೆಯದ್ದಲ್ಲ. ಭಾರತದಲ್ಲಂತೂ ಯಾವ ರಾಜ್ದಲ್ಲಿ ಇದಿಲ್ಲ ಎಂಬುದನ್ನೇ ಹೇಳಲಾಗುವುದಿಲ್ಲ. ಏಕೆಂದರೆ ಎಲ್ಲರೂ ಅಂತರ್ಜಲದ ಮೇಲೆ ಪಾರುಪತ್ಯ ಸಾಸಲು ಪೈಪೋಟಿಗೆ ಬಿದ್ದವರೇ. ಪರಿಣಾಮ ಕುಡಿಯುವ ನೀರೇ ವಿಷವಾಗಿ ಬಾಳುವೆಯನ್ನೇ ಸಂಕಷ್ಟಕ್ಕೆ ದೂಡಿದೆ. ಬಡಕಲು ದೇಹ, ಪೀಚಲು ಕೈಕಾಲು, ಬಾಗಿದ ಮೂಳೆಗಳು, ಕಸುವು ಕಳೆದುಕೊಂಡ ರಟ್ಟೆ, ಬಣ್ಣಗೆಟ್ಟ ಹಲ್ಲು, ಎದ್ದು ನಿಲ್ಲಲೂ ತ್ರಾಣವಿಲ್ಲದ ದೇಹವೆಂದರೆ ಮೂಳೆಯ ಹಂದರ. ಒಟ್ಟಾರೆ ಬದುಕಿದ್ದಾಗಲೇ ನರಕದರ್ಶನ.
ಬದುಕಲು ಬಿಡದ, ಸಾವೂ ಸುಳಿಯಗೊಡದ ಪ್ಲೋರೋಸಿಸ್, ಮನುಷ್ಯ ದೇಹ ಹೊಕ್ಕರೆ ಮತ್ತೆಂದೂ ಜಾಗಬಿಟ್ಟು ಕದಲದು. ನಮ್ಮ ಮೇಲೆ ನಾವೇ ಕದನ ಸಾರುವ ದೈನೇಸಿ ಸ್ಥಿತಿಗೆ ತಲುಪಿಸಿಬಿಡುವ ಈ ಭಯಂಕರ ಕಾಯಲೆ ಪೀಡಿತರ ಕೂಗು ಅಂತರ್ಜಲದಂತೆ ಬತ್ತಿ ಹೋಗುತ್ತಿದೆ. ಇದೇ ಕಾರಣಕ್ಕಾಗಿಯೋ ಎನೋ, ಆಡಳಿತಾರೂಢರಿಂದ ಹಿಡಿದು ಜಾಗತಿಕ ಮಟ್ಟದವರೆಗೆ ಪರಿಹಾರ ದ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳೇ ಸಾಗುತ್ತಿಲ್ಲ. ಮನುಕುಲದ ಮೇಲೆ ಸವಾರಿ ಹೊರಟಿರುವ ಕ್ಯಾನ್ಸರ್, ಏಡ್ಸ್‌ಗಿಂತಲೂ ವ್ಯಾಪಕವಾಗಿರುವ ಪ್ಲೋರೋಸಿಸ್ ವಿರುದ್ಧ ಕನಿಷ್ಠ ಆಂದೋಲನವೂ ರೂಪುಗೊಂಡಿಲ್ಲ.
ಸಾರ್ವಜನಿಕ ಆರೋಗ್ಯದ ಬಗೆಗಿನ ಇಂಥ ನಿಷ್ಕಾಳಜಿಯೇ ನೀರಿನ ವಿಚಾರದಲ್ಲೂ ಮುಂದುವರಿದಿದೆ. ಜಗದೆಲ್ಲೆಡೆ ಹಾಹಾಕಾರವೆದ್ದಿರುವಾಗಲೂ ಶುದ್ಧ ನೀರು ಮರೀಚಿಕೆಯಾಗಿಯೇ ಸಾಗುತ್ತಿದೆ. ಈ ಹಂತದಲ್ಲಿ ಒಮ್ಮ ನಮ್ಮನ್ನು ನಾವೇ ಚಿವುಟಿಕೊಂಡು ಎಚ್ಚರಿಸಿಕೊಳ್ಳಬೇಕಾಗಿದೆ. ಏಕೆಂದರೆ ಈ ಧರೆಯ ಮೇಲಿನ ಬಹುತೇಕ ಕಾಯಿಲೆಗಳು ಅಶುದ್ಧ ನೀರಿನದೇ ಬಳಿವಳಿ. ಇದಕ್ಕಿಂಥ ಮುಖ್ಯ ಸಂಗತಿಯೆಂದರೆ ನೀರು ಕಾಲಿಯಾದರೆ ಮಳೆಯಿಂದ ತುಂಬಿಸಿಕೊಳ್ಳಬಹುದು. ಆದರೆ ಇರುವ ಅಂತರ್ಜಲ ಮಲಿನವಾದರೆ ಇನ್ನೆಂದೂ ಅದು ಶುದ್ಧಗೊಳ್ಳದು. ಇಂಥ ಎಚ್ಚರ ಮಾತ್ರ ಮನುಕುಲವನ್ನು ರಕ್ಷಿಸಬಲ್ಲುದು.
ಕಲುಷಿತ, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಲವಣಾಂಶವಿರುವ ನೀರನ್ನು ಸೇವಿಸಿ ಜಗತ್ತಿನ ಸರಿಸುಮಾರು ೧೨೫ ಕೋಟಿ ಮಂದಿ ಫ್ಲೋರೋಸಿ ಸ್‌ನಂಥ ಜಲಸಂಬಂ ರೋಗಗಳಿಂದ ಬಳಲುತ್ತಿ ದ್ದಾರೆ. ಭಾರತವೂ ಇಂಥ ರೋಗಗಳಿಂದ ಮುಕ್ತ ವಾಗಿಲ್ಲ. ರಾಜ್ಯದ ಅಂತರ್ಜಲವೂ ಈಗಾಗಲೇ ಫ್ಲೋರೈಡ್ ನೈಟ್ರೇಟ್‌ಗಳಂಥ ಖನಿಜಗಳಿಂದ ಬಳಕೆಗೆ ಅಯೋಗ್ಯವಾಗಿರುವುದು ಹೊಸ ಸಂಗತಿಯೇನಲ್ಲ.
ವೈಜ್ಞಾನಿಕವಾಗಿ ನೀರಿನಲ್ಲಿ ೧.೫೦ ಮಿಲಿ ಗ್ರಾಂಗಿಂತ ಹೆಚ್ಚಿನ ಫ್ಲೋರೈಡ್ ಅಂಶ ಇರಕೂಡದು. ಇದು ಮನುಷ್ಯನ ಮೂಳೆಗಳ ಮೇಲೆ ತೀವ್ರತರ ಪರಿಣಾಮವನ್ನುಂಟು ಮಾಡುವ ಫ್ಲೋರೋನೆಸ್‌ಗೆ ಕಾರಣವಾಗುತ್ತದೆ. ಇದಕ್ಕಿಂತ ಅಪಾಯಕಾರಿ ನೈಟ್ರೀಟ್. ಈ ವಿಷಕಾರಿ ಲವಣ ಬೆರೆತ ನೀರನ್ನು ನಿರಂತರ ಸೇವಿಸುವುದರಿಂದ ಮೆತೆಗ್ಲೋಬೋ ಮಿನಿಯ (ಮಕ್ಕಳ ನೀಲಿರೋಗ) ಎಂಬ ರೋಗ ಬರುವ ಸಾಧ್ಯತೆ ಇದೆ. ಇದು ಕ್ಯಾನ್ಸರ್‌ಕಾರಕವೂ ಹೌದು.
ಕ್ಯಾಲ್ಸಿಯಂ ಮತ್ತು ಮೆಗ್ನಿಷಿಯಂಗಳು ಕಾರ್ಬೊ ನೇಟ್ ಹಾಗೂ ಬೈಕಾರ್ಬೋನೇಟ್ ಗಳಾಗಿ ರೂಪಾಂತರಗೊಂಡಾಗ ಅದು ನೀರಿಗೆ ಗಡಸುತನ ವನ್ನು ಬಳುವಳಿಯಾಗಿ ನೀಡುತ್ತದೆ. ಸ್ನಾನ ಮಾಡಿದ ಮೇಲೂ ಮೈಯೆಲ್ಲಾ ಅಂಟು ಅಂಟೆಂದು ಅನ್ನಿಸಿದರೆ ಅಂಥ ನೀರಿನಲ್ಲಿ ಈ ರೂಪಾಂತರವಾಗಿದೆ ಎಂದೇ ಅರ್ಥ. ಇದಕ್ಕೆ ಕ್ಲೋರೈಡ್ ಮತ್ತು ಸಲೇಟ್‌ಗಳು ಸೇರಿದರೆ, ಶಾಶ್ವತ ಗಡಸುತನ ಕಾಣಿಸಿಕೊಳ್ಳುತ್ತದೆ. ೨೦೦ ಮಿ.ಗ್ರಾಂಗಿಂತ ಹೆಚ್ಚಿನ ಕಬ್ಬಿಣದ ಅಂಶ ಇರುವ ನೀರು ಸೇವನೆ ಮೂತ್ರಕೋಶಕ್ಕೆ ಹಾನಿಕಾರಕ. ಜತೆಎಗ ಜಠರದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಇಂದು ನೀರಿನ ಸಮಸ್ಯೆಯೆಂದರೆ ಕೇವಲ ಅಭಾವವಷ್ಟೇ ಅಲ್ಲ. ಅದು ಜಲಮಾಲಿನ್ಯವನ್ನು ಒಳಗೊಂಡಿದೆ ಎಂಬುದು ಗಮನಾರ್ಹ ಸಂಗತಿ. ನೀರಿನ ಕೊರತೆಯನ್ನು ತುಂಬಿ ಬಿಡಬಹುದು. ಕುಸಿದ ಅಂತರ್ಜಲದ ಮಟ್ಟವನ್ನು ಮರು ಪೂರಣದ ಮೂಲಕ ಏರಿಸಲೂಬಹುದು. ಆದರೆ, ಒಮ್ಮೆ ಕಲುಷಿತಗೊಂಡ ನೀರನ್ನು ಶುದ್ಧಗೊಳಿ ಸುವುದು ಕಷ್ಟ ಸಾಧ್ಯ. ಸ್ವಸ್ಥ ವ್ಯವಸ್ಥಾಪನೆಯೊಂದೇ ಇದಕ್ಕಿರುವ ಏಕೈಕ ಪರಿಹಾರ.
ಜಲಮಾಲಿನ್ಯವೆಂದರೆ ಒಂದು ರೀತಿಯಲ್ಲಿ ಏಡ್ಸ್‌ರೋಗವಿದ್ದಂತೆ. ಅದು ಬಂದ ನಂತರ ಗುಣ ಪಡಿಸಲು ಹೆಣಗುವುದಕ್ಕಿಂತ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದೇ ಮುಖ್ಯ.

‘ಲಾಸ್ಟ್’ಡ್ರಾಪ್: ಜಲಮಾಲಿನ್ಯವೆಂಬುದು ಮನೆಗೆ ಬಿದ್ದ ಬೆಂಕಿ. ಅಲ್ಲಿ ಇನ್ನು ಬದುಕುವ ಅವಕಾಶವೇ ಇಲ್ಲ.

4 comments:

Unknown said...

ಇನ್ನ್ ಬದುಕುವ ಬಗೆಯೇ ಇಲ್ಲ ಅವ್ಯಕ್ತ ಭಯ ಮೂಡಿಸಬೇಡಿ ಮಾರಾಯ್ರೆ. ಏನೋ ಹೇಗೋ ಬದುಕೋಣ

Pejathaya said...
This comment has been removed by the author.
Pejathaya said...

ಜಲ ಮಾಲಿನ್ಯ ಅದೆಷ್ಟು ಘೋರ!
ಜಲ ಮಾಲಿನ್ಯವನ್ನು ಮನುಷ್ಯನು ತನ್ನ ಅಮೂಲ್ಯವಾದ ವ್ಯಕ್ತಿತ್ವ ಮತ್ತು ಶೀಲಗಳನ್ನು ಕಳೆದು ಕೊಳ್ಳುವುದಕ್ಕೆ ಹೋಲಿಸಬಹುದು.

ಜಲಮಾಲಿನ್ಯವಾದರೆ ಅದು ಸರಿ ಪಡಿಸಲಾರದ ನಷ್ಟ.

ಉತ್ತಮ ಲೇಖನ. ಇದೇ ರೀತಿಯ ಉತ್ತಮ ಲೇಖನಗಳನ್ನು ಬರೆಯುತ್ತಾ ಇರಿ ನೀರ್ ಸಾಧಕರೇ!
ವಂದನೆಗಳು

- ಪೆಜತ್ತಾಯ ಎಸ್. ಎಮ್.ೆ

LOKESH said...

ಉತ್ತಮವಾದ ಬರವಣಿಗೆ.