ನೆಟ್ಟ ಗಿಡ ಕೊನೆಗೂ ಹೂ ಬಿಟ್ಟಿದೆ. ಇನ್ನೇನು ಹೀಚಾಗಿ, ಕಾಯಾಗಿ, ಫಲ ದೊರೆಯಬಹುದು. ಅದನ್ನು ಸವಿಯಲು ವಿಜಾಪುರದ ಜನತೆ ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ. ಜಿಲ್ಲೆಯ ಮಂದಿಗೆ ಸ್ವರ್ಗ ಮೂರೇ ಗೇಣು ಎಂಬಂತಾಗಿದೆ. ಯಾರಿಗೆ ತಾನೆ ಸಂತಸ ಆಗದಿದ್ದೀತು ? ಸತತ ನಾಲ್ಕು ವರ್ಷಗಳ ಕಾಲ ಯಾವುದಕ್ಕಾಗಿ ಹಗಲಿರುಳೂ ಹೋರಾಡಿದ್ದರೋ, ಯಾವ ಕನಸಿನ ಮೂಟೆ ಹೊತ್ತು ಉರಿ ಬಿಸಿಲಲ್ಲೂ ಶ್ರಮಿಸಿದ್ದರೋ ಅದು ಕೈಗೂಡುವ ಸಮಯ ಬಂದಿದೆ.
ಹೌದು, ರಾಷ್ಟ್ರದಲ್ಲೇ ಮಾದರಿಯಾಗಬಲ್ಲ ‘ಸಮಗ್ರ ಕೆರೆ ತುಂಬುವ ಯೋಜನೆ’ಯ ಕಾಮಗಾರಿಗೆ ನಾಡಿದ್ದು ಭಾನುವಾರವೇ(ಡಿ.೭ರಂದು) ಚಾಲನೆ ಸಿಗಲಿದೆ. ಇದರೊಂದಿಗೆ ಮೊದಲ ಹಂತದಲ್ಲಿ ವಿಜಾಪುರ ಹಾಗೂ ಬಾಗಲಕೋಟ ಜಿಲ್ಲೆಯ ೨೩ ಕೆರೆಗಳು ಹಾಗೂ ೫ ಬಾಂದಾರಗಳು ತುಂಬಲಿವೆ.
ಈ ಕ್ಷಣಕ್ಕಾಗಿ ಅಲ್ಲಿನ ರೈತರು ಅಕ್ಷರಶಃ ತಪಸ್ಸು ನಡೆಸಿದ್ದರು. ಮೂರು ತಿಂಗಳು ಎಡೆಬಿಡದೇ ಹೋರಾಟ ನಡೆಸಿದ್ದರು. ಜಿಲ್ಲೆಯ ಜನರ ಅದೃಷ್ಟ, ಅಪರೂಪಕ್ಕೆಂಬಂತೆ ನಮ್ಮ ರಾಜಕಾರಣಿಗಳು ಸಹ ಪಕ್ಷಭೇದ ಮರೆತು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅಕಾರಿಗಳೂ ಸಹಕರಿಸಲು ಸಿದ್ಧರಾಗಿದ್ದರು. ಆದರೂ ಅಂದುಕೊಂಡದ್ದು ಆಗಲು ಇಷ್ಟು ವರ್ಷ ಬೇಕಾಯಿತು. ಇದೇ ಇರಬಹುದೇ ವ್ಯವಸ್ಥೆ ಅಂದರೆ ?
ಹೋಗಲಿ ಬಿಡಿ, ಅಂತೂ ವಿಜಾಪುರದ ಕೆರೆ ತುಂಬಲು ಮುಹೂರ್ತ ಕೂಡಿ ಬಂತಲ್ಲ ಎಂಬುದೇ ಸಮಾಧಾನ. ಈ ಸಮಾಧಾನದ ಹಿಂದೆ ಪತ್ರಿಕೆಯದ್ದೊಂದು ಪಾಲೂ ಇದೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳಲೇಬೇಕು. ಕೆರೆತುಂಬುವ ಹೋರಾಟಕ್ಕೆ ಪೂರಕವಾಗಿ ‘ವಿಕ’ ಪುಟ್ಟದೊಂದು ಅಕ್ಷರ ಅಭಿಯಾನವನ್ನೇ ನಡೆಸಿತ್ತು. ತಿಂಗಳುಗಳ ಕಾಲ ಹೋರಾಟದ ಪ್ರತಿ ಹೆಜ್ಜೆ ಹೆಜ್ಜೆಗಳನ್ನೂ ದಾಖಲಿಸಿತ್ತು. ಯೋಜನೆಯ ಮೇಲೊಂದು ‘ಅವಲೋಕನ’ವನ್ನೇ ಮಾಡಿ ವಿವರ ಕಟ್ಟಿಕೊಡಲಾಗಿತ್ತು. ಹೀಗೆ ಜನರ ದನಿಯಾಗಿ ದುಡಿದದ್ದೂ ಸಾರ್ಥಕವೆನಿಸುತ್ತಿದೆ. ಈ ಹಂತದಲ್ಲಿ ಮತ್ತೊಮ್ಮೆ ಜಿಲ್ಲೆಯ ಸ್ಥಿತಿ, ಯೋಜನೆಯ ರೂಪುರೇಷೆ, ಅದರ ಅಗತ್ಯ ಇತ್ಯಾದಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತಿದೆ.
ಸತತ ಬರಗಾಲಕ್ಕೆ ತುತ್ತಾಗುವ ಬಾಗಲಕೋಟ, ವಿಜಾಪುರ ಅವಳಿ ಜಿಲ್ಲೆಯಲ್ಲಿ ಕೃಷ್ಣಾ, ಭೀಮೆ, ಡೋಣಿ, ಮಲಪ್ರಭಾ ಹಾಗೂ ಘಟಪ್ರಭಾ - ಹೀಗೆ ಪಂಚ ನದಿಗಳು ಹರಿಯುತ್ತವೆ. ಹಾಗಾದರೆ ಇಲ್ಲಿಗೆ ನೀರಿನ ಬರವೆಂಬುದೇ ಇರಲಿಕ್ಕಿಲ್ಲ ಎಂದುಕೊಂಡರೆ ತಪ್ಪಾದೀತು. ಏಕೆಂದರೆ ಬೇಸಿಗೆ ಬಂತೆಂದರೆ ಇಲ್ಲಿ ಕುಡಿಯುವ ಹನಿ ನೀರಿಗೂ ಹಾಹಾಕಾರ ಸೃಷ್ಟಿಯಾಗುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಅವಳಿ ಜಿಲ್ಲೆಯ ಜನ ಭೂಮಿ ತ್ಯಾಗ ಮಾಡಿದರೂ ನೀರಿನ ಸಮಸ್ಯೆ ತಪ್ಪಿಲ್ಲ. ಇನ್ನೂ ವಿಚಿತ್ರವೆಂದರೆ ಪಕ್ಕದ ಮಹಾರಾಷ್ಟ್ರದಲ್ಲಿ ಗುಡುಗಲಾರಂಭಿಸಿದರೆ ವಿಜಾಪುರದ ಮಂದಿಯ ಎದೆ ನಡುಗಲಾರಂಭಿಸುತ್ತದೆ. ಅಲ್ಲಿ ಮಳೆ ಸುರಿದರಂತೂ ಮುಗಿದೇ ಹೋಯಿತು. ಪ್ರವಾಹದಿಂದ ಉಕ್ಕೇರುವ ಡೋಣಿ, ಭೀಮೆಯರು ಖುಲ್ಲಂಖುಲ್ಲಾ ಇಡೀ ಜಿಲ್ಲೆಯ ಬದುಕನ್ನೇ ಮುಳುಗಿಸಿ ಬಿಡುತ್ತಾರೆ. ಅಲ್ಲಿನ ಪ್ರವಾಹದ ನೀರು ಜಿಲ್ಲೆಯೊಳಗೆ ನುಗ್ಗಿ ನಾಚಾರ ಎಬ್ಬಿಸಿ ಬಿಡುತ್ತದೆ. ಇನ್ನು ನಮ್ಮದೇ ಕೃಷ್ಣಾ ನದಿಯಿಂದ ಪ್ರತಿ ವರ್ಷ ೬೦೦ ಟಿಎಂಸಿ ನೀರು ವ್ಯರ್ಥವಾಗಿ ಹರಿದುಹೋಗುತ್ತದೆ. ಇಷ್ಟಾದರೂ ವಿಜಾಪುರದಲ್ಲಿ ಗಂಟಲು ನೆನೆಸಲೂ ನೀರಿರುವುದಿಲ್ಲ.
ಇಂಥ ವಿಚಿತ್ರ ಸನ್ನಿವೇಶದಲ್ಲಿ ಹುಟ್ಟಿಕೊಂಡಿದ್ದೇ ಕೆರೆ ತುಂಬಿಸುವ ಯೋಜನೆ. ವ್ಯರ್ಥವಾಗಿ ಸಮುದ್ರ ಸೇರುವ, ಹೊತ್ತಲ್ಲದ ಹೊತ್ತಲ್ಲಿ ಬಂದು ಜನಜೀವನವನ್ನೇ ತೊಳೆದುಕೊಂಡು ಹೋಗಿ ಬಿಡುವ ಪ್ರವಾಹದ ನೀರನ್ನೇ ಬಳಸಿಕೊಳ್ಳಬಾರದೇಕೆ ಎಂಬ ಯೋಚನೆ ಹುಟ್ಟಿಕೊಂಡದ್ದು ಆಗಿನ ತಿಕೋಟಾ (ಈಗ ಬಬಲೇಶ್ವರ) ಶಾಸಕ ಎಂ.ಬಿ. ಪಾಟೀಲರಿಗೆ. ತಜ್ಞರಾಗಿ ಅಧ್ಯಯನ ಕೈಗೊಂಡು ಅದಕ್ಕೊಂದು ಸ್ಪಷ್ಟ ನೀಲ ನಕ್ಷೆ ರೂಪಿಸಿಕೊಟ್ಟವರು ಬಿಎಲ್‌ಡಿಇ ಸಂಸ್ಥೆಯ ಪ್ರೊ. ಹುಗ್ಗಿ.
ಎರಡೂ ನದಿಗಳ ಪ್ರವಾಹದ ನೀರಿನಲ್ಲಿ ೨.೫ ಟಿಎಂಸಿಯಷ್ಟನ್ನು ಎತ್ತಿ ವಿಜಾಪುರ ಬಾಗಲಕೋಟ ಅವಳಿ ಜಿಲ್ಲೆಗಳ ಎಲ್ಲ ಕೆರೆಗಳಲ್ಲಿ ತುಂಬಿಸುವ, ಆ ಮೂಲಕ ಇಡೀ ವರ್ಷ ಸಮೃದ್ಧ ನೀರನ್ನು ಕಾಣುವ, ರಾಷ್ಟ್ರದಲ್ಲೇ ಮಾದರಿ ಯೋಜನೆಯೊಂದು ರೂಪುಗೊಂಡಿತು. ಯೋಜನೆ ಕಾರ್ಯಸಾಧ್ಯವೆಂಬುದನ್ನು ಅರಿತ ಜಿಲ್ಲೆಗಳ ರೈತರು ಇದರ ಅನುಷ್ಠಾನಕ್ಕೆ ದನಿ ಎತ್ತಿದರು. ವಿಜಾಪುರದ ೯೭, ಬಾಗಲಕೋಟದ ೬೭ ಕೆರೆಗಳನ್ನು ತುಂಬಿಸುವುದು ಉದ್ದೇಶ. ಮೊದಲ ಹಂತದಲ್ಲಿ ವಿಜಾಪುರ ಜಿಲ್ಲೆಯ ತಿಕೋಟಾ ಪ್ಯಾಕೇಜ್‌ನ ೧೬ ಕೆರೆಗಳು, ೫ ಬಾಂದಾರಗಳು ಹಾಗೂ ಬಾಗಲಕೋಟ ಜಿಲ್ಲೆಯ ೮ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಕಳೆದ ಸೆ.೯ರಂದೇ ತಿಕೋಟಾದಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಚಾಲನೆ ಸಿಗಬೇಕಿತ್ತು. ಇದಕ್ಕೆಂದು ಅದ್ಧೂರಿ ಸಿದ್ಧತೆಯೂ ನಡೆದಿತ್ತು. ಆದರೆ, ರಾಜಕೀಯ ಬೆಳವಣಿಗೆ, ಬರದ ಜಿಲ್ಲೆಯ ರೈತರಿಗೆ ಬರೆ ಹಾಕಿತ್ತು.
ಏತನ್ಮಧ್ಯೆ ಟೆಂಡರ್ ಪ್ರಕ್ರಿಯೆ ಸಹ ಪೂರ್ಣಗೊಂಡು, ಬೆಂಗಳೂರಿನ ಎಸ್‌ಪಿಎಂಎಲ್ ಕಂಪನಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಿತ್ತು. ಆದರೆ, ದರ ನಿಗದಿಯಾಗುವಾಗ ಟೆಂಡರ್ ಆದ ಹಣದ ಮೇಲೆ ಶೇ.೨೬ರಷ್ಟನ್ನು ಹೆಚ್ಚುವರಿಯಾಗಿ (ಎಸ್.ಆರ್.ರೇಟ್‌ಗಿಂತ) ನೀಡಬೇಕೆಂದು ಕಂಪನಿ ಪಟ್ಟು ಹಿಡಿದಿತ್ತು. ಇದಕ್ಕೊಪ್ಪದ ತಾಂತ್ರಿಕ ಸಲಹೆಗಾರರು ಎಸ್.ಆರ್. (ಷೆಡ್ಯೂಲ್ ರೇಟ್) ದರಕ್ಕಿಂತ ಶೆ.೧೦ರಷ್ಟು ಹಣ ನೀಡುವುದಾಗಿ ಘೋಷಿಸಿದರು. ಪರಿಣಾಮ ಎಸ್‌ಎಂಪಿಎಲ್‌ನವರು ಹಿಂದೆ ಸರಿದರು. ಇದರಿಂದಾಗಿ ಕಂಗಾಲಾದ ರೈತರು ಆಕ್ರೋಶಗೊಂಡಿದ್ದರು. ಆದರೀಗ ೩ನೇ ಬಾರಿ ಟೆಂಡರ್ ನಡೆದು, ಹೈದರಾಬಾದ್‌ನ ಜೆವಿಪಿಆರ್‌ಎಸ್ ಕಂಪನಿಯವರಿಗೆ ೩ ವರ್ಷಗಳ ಕಾಲಮಿತಿಯೊಂದಿಗೆ ಕಾಮಗಾರಿ ವಹಿಸಲಾಗುತ್ತಿದೆ. ೧೦೯ ಕೋಟಿ ರೂ. ಯೋಜನೆ ವೆಚ್ಚ ಆಗಲಿದೆ.
ಬಹುಶಃ ನಿಗದಿತ ಅವಯಲ್ಲಿ ಪೂರ್ಣಗೊಂಡರೆ ಅತಿ ಕಡಿಮೆ ವೆಚ್ಚದಲ್ಲಿ ಗರಿಷ್ಠ ನೀರಾವರಿಯಾಗುವ ರಾಷ್ಟ್ರದ ಪ್ರಥಮ ಯೋಜನೆ ಇದೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅಷ್ಟಕ್ಕೂ ನೀರು ತುಂಬಿಸುವುದು ಹೇಗೆ ? ಪ್ರಶ್ನೆ ಸಹಜ. ಎರಡೂ ಜಿಲ್ಲೆಯ ಕೆರೆಗಳಿಗೆ ಹಿರೇಪಡಸಲಗಿ ಬಳಿ ಕೃಷ್ಣಾ ನದಿಯಿಂದ ನೀರನ್ನು ಲಿಫ್ಟ್ ಮಾಡಲಾಗುತ್ತದೆ. ಒಟ್ಟು ೧.೦೯ ಟಿಎಂಸಿ ನೀರನ್ನು ಕೆರೆಗಳಿಗೆ ತುಂಬಿಸಲಾಗುತ್ತದೆ. ಮೊದಲ ಹಂತದಲ್ಲಿ ಕೃಷ್ಣಾ ನದಿಯಿಂದ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದುಹೋಗುವ ೨.೩೪ ಕ್ಯೂಸೆಕ್ ನೀರನ್ನು ಜೂನ್-ಡಿಸೆಂಬರ್ ಅವಯಲ್ಲಿ ಒಟ್ಟು ೨ ಬಾರಿ ಹಿರೇಪಡಸಲಗಿಯಿಂದ (ರೈಸಿಂಗ್ ಮೇನ್) ಕಲಬೀಳಗಿಯವರೆಗೆ (ಒಟ್ಟು ೧೭.೫ ಕಿ.ಮೀ. ದೂರ) ತರಲಾಗುತ್ತದೆ. ಕಲಬೀಳಗಿಯಲ್ಲಿ ವಿತರಣಾ ಛೇಂಬರ್ ನಿರ್ಮಿಸಿ ೨ ಪೈಪ್‌ಲೈನ್‌ಗಳ (ನಾಗರಾಳ ಮತ್ತು ಕುಮಟೆ) ಮೂಲಕ ನೀರು ಸರಬರಾಜು ಮಾಡಲಾಗುತ್ತದೆ.
ವಿಜಾಪುರ ಜಿಲ್ಲೆಗೆ ನಾಗರಾಳದಿಂದ ನೀರು ತಂದು ರಾಂಪುರದಲ್ಲಿ ಗುರುತ್ವಾಕರ್ಷಣೆಯ ಮೂಲಕವೇ ಸಂಪ್ ಮಾಡಲಾಗುತ್ತದೆ. ಅಲ್ಲಿಂದ ಬಾಬಾನಗರಕ್ಕೆ ೫.೫ ಕಿ.ಮೀ.ವರೆಗೆ ನೀರು ತಂದು, ಅಲ್ಲೆರಡು ವಿತರಣಾ ಛೇಂಬರ್ ನಿರ್ಮಿಸಿ ಕನಮಡಿ, ಲೋಗಾಂವ ಟಕ್ಕಳಕಿ ಮತ್ತಿತರ ಕೆರೆಗಳಿಗೆ ತುಂಬಿಸಲಾಗುತ್ತದೆ.
ಇದಲ್ಲದೇ ಬಾಗಲಕೋಟ ಜಿಲ್ಲೆಯ ಕೆರೆಗಳಿಗೆ, ಹಿರೇಪಡಸಲಗಿಯಿಂದ ನಟ್ಕಲ್ ಕೆರೆಗೆ ನೇರವಾಗಿ ನೀರು ತುಂಬಿಕೊಂಡು ಕೊಂಡೊಯ್ಯಲಾಗುತ್ತದೆ. ಕುಮಟೆ ಪೈಪ್‌ಲೈನ್‌ನಿಂದ ಜಿಲ್ಲೆಯ ಉಳಿದ ೬ ಕೆರೆಗಳನ್ನು ತುಂಬಿಸಬಹುದೆಂಬುದು ಈಗಿನ ಚಿಂತನೆ.
ಮೊದಲ ಹಂತದಲ್ಲಿ ನೀರು ಲಿಫ್ಟ್ ಮಾಡಲು ೪ ವರ್ಟಿಕಲ್ ಟರ್ಬೈನ್ ಪಂಪ್‌ಗಳು (೧,೮೦೦ ಎಚ್‌ಪಿ) ೨೪ ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ. ೨ನೇ ಹಂತದ ನೀರು ಲಿಫ್ಟ್ ಮಾಡಲು ೩ ಸೆಂಟ್ರಿಫ್ಯೂಗಲ್ ಪಂಪ್‌ಗಳನ್ನು (೪೦೦ ಎಚ್‌ಪಿ) ಬಳಸಲಾಗುತ್ತದೆ.
ಇಷ್ಟಾಗಿದ್ದೇ ಆದಲ್ಲಿ ಕೆರೆಗಳು ತುಂಬಿ ಅಂತರ್ಜಲ ಮಟ್ಟ ತಂತಾನೇ ವೃದ್ಧಿಸುತ್ತದೆ. ೩,೪೨೩ ಹೆಕ್ಟೇರ್ ಪ್ರದೇಶಕ್ಕೆ ನೇರ ನೀರಾವರಿ ಆಗಲಿದೆ. ಪಾತಾಳಕ್ಕಿಳಿದ ಬೋರ್‌ವೆಲ್‌ಗಳು ಮರು ಪೂರಣ ಹೊಂದಲಿವೆ. ಜನ, ಜಾನುವಾರುಗಳಿಗೆ ಕುಡಿಯಲು ಶುದ್ಧ ಹಾಗೂ ರಾಸಾಯನಿಕ ಮುಕ್ತ ನೀರು ಸಿಗಲಿದೆ. ಅವಳಿ ಜಿಲ್ಲೆಯ ತೋಟಗಾರಿಕೆ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ೫೦ ಸಾವಿರ ಜನರಿಗೆ ದಿನಕ್ಕೆ ೮೦ ಲೀಟರ್‌ನಂತೆ ವರ್ಷವಿಡೀ ಕಣ್ಮುಚ್ಚಿಕೊಂಡು ಕುಡಿಯುವ ನೀರು ಕೊಡಬಹುದು.
ಪ್ರತಿ ವರ್ಷ ಸರಕಾರ ಕುಡಿಯುವ ನೀರಿಗಾಗಿಯೇ ಕೋಟ್ಯಂತರ ರೂ. ಖರ್ಚು ಮಾಡುತ್ತಿರುವುದು ನಮ್ಮ ಕಣ್ಣಮುಂದೆಯೇ ಇದೆ. ನಮ್ಮ ಎಲ್ಲ ನೀರಾವರಿ ಯೋಜನೆಗಳೂ ವಿಫಲಗೊಂಡಿರುವುದಕ್ಕೆ ಕಾರಣವೇ ಪಕ್ಕಾ ನೀರಿನ ಮೂಲಗಳಿಲ್ಲದಿರುವುದು. ನೆದರ್‌ಲೆಂಡ್, ಡೆನಿಡಾ, ಜಿ.ಪಂ. ನೆರವಿನ ಕೋಟ್ಯಂತರ ರೂ.ವೆಚ್ಚದ ಯೋಜನೆಗಳು ನೆಲಕಚ್ಚಿದ್ದೂ ಹೀಗಾಗಿಯೇ. ಆದರೆ, ಕೆರೆ ತುಂಬುವ ಯೋಜನೆ ಅತ್ಯಂತ ವೈಜ್ಞಾನಿಕ. ಇದಕ್ಕೆ ಆಧಾರ ಈ ಯೋಜನೆಗೆ ಜಲಮೂಲ ನಿಗದಿಯಾಗಿದೆ. ಅವಳಿ ಜಿಲ್ಲೆಯ ಬಹುತೇಕ ಕುಡಿಯುವ ನೀರಿನ ಯೋಜನೆಯ ಮೂಲಗಳು ಕೆರೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿರುವುದರಿಂದ ಸ್ವಾಭಾವಿಕವಾಗಿಯೇ ಕುಡಿಯುವ ನೀರಿನ ಯೋಜನೆಗಳಿಗೆ ಯೋಗ್ಯ ಮೂಲ ಸಿಕ್ಕಂತಾಗುತ್ತದೆ.
ಆರ್ಥಿಕವಾಗಿಯೂ ಇದು ಕಾರ್ಯ ಸಾಧು, ಲಾಭದಾಯಕ. ಒಮ್ಮೆ ಕೆರೆ ತುಂಬಿದರೆ ಈ ವರೆಗೆ ಅವಳಿ ಜಿಲ್ಲೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ, ಉದ್ಯೋಗ ಸೃಜನೆಗಾಗಿ ಮಾಡುತ್ತಿದ್ದ ೫೦ ರಿಂದ ೧೦೦ ಕೋಟಿ ರೂ. ವೆಚ್ಚವನ್ನು ಅರ್ಧಕ್ಕರ್ಧ ಕಡಿತಗೊಳಿಸಬಹುದು. ಕೇವಲ ಮೀನುಗಾರಿಕೆಯಿಂದಲೇ ಪ್ರತಿ ಕೆರೆಯಿಂದ ವಾರ್ಷಿಕ ೧ ಲಕ್ಷ ರೂ.ನಿವ್ವಳ ಆದಾಯ ಲಭಿಸಬಹುದೆಂದೂ ಲೆಕ್ಕ ಹಾಕಲಾಗಿದೆ. ಒಟ್ಟಾರೆ ಯೋಜನೆಗೆ ಖರ್ಚು ಮಾಡಿದ ಮೊತ್ತಕ್ಕಿಂತಲೂ ವಾರ್ಷಿಕ ಎರಡೂವರೆ ಪಟ್ಟು (ಬಿ.ಸಿ. ರೇಶ್ಯೊ ೨.೫) ಹೆಚ್ಚು ಆದಾಯ ಬರುತ್ತದೆ.
ಇನ್ನಾದರೂ ಆ ಭಾಗದ ಮಂದಿ ರಾಸಾಯನಿಕ ಮುಕ್ತ ನೀರು ಕುಡಿದು ಫ್ಲೋರೋಸಿಸ್‌ನಂಥ ರೋಗಗಳನ್ನು ದೂರವಿಟ್ಟಾರು ಎಂಬ ನಿರೀಕ್ಷೆಗೆ ರೆಕ್ಕೆ ಬಂದಿದೆ. ಕೊನೆಗೂ ರೈತರ ಸಂಕಷ್ಟದ ದಿನಗಳು ದೂರವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜಿಲ್ಲೆಯ ಮಣ್ಣು ಹಾಗೂ ಹವಾಗುಣ ಎಲ್ಲ ಬೆಳೆಗಳಿಗೂ ಅತ್ಯುತ್ತಮವಾಗಿದ್ದು. ಇಲ್ಲಿನ ರೈತರಿಗೆ ಬೊಗಸೆ ನೀರು ಕೊಟ್ಟರೆ, ವಿಜಾಪುರ ‘ಕರ್ನಾಟಕದ ಕ್ಯಾಲಿಫೋರ್ನಿಯಾ’ ಆಗುವುದರಲ್ಲಿ ಸಂಶಯವಿಲ್ಲ. ಅಷ್ಟಾಗಲಿ. ನೀರಿನ ವಿಚಾರದಲ್ಲಾದರೂ ನಮ್ಮ ನಾಯಕರು ರಾಜಕೀಯ ಲಾಭ ಹುಡುಕುವ ಶುಷ್ಕ ಮನದಿಂದ ಹೊರಬರಲಿ ಎನ್ನೋಣವೇ ?
‘ಲಾಸ್ಟ್’ಡ್ರಾಪ್: ಜಲ ಕಣ್ಬಿಟ್ಟರೆ ನೆಲ ನಕ್ಕೀತು, ಜಲದ ಕಣ್ಣು ಕಟ್ಟಿದರೆ ಜನ ನೆಲ ನೆಕ್ಕಬೇಕಾದೀತು.
ಸಮ್ಮನಸ್ಸಿಗೆ ಶರಣು
4 months ago
1 comment:
abba idella nijaana ? alla katheya ?
Post a Comment