ನೀವದನ್ನು ‘ಜಲಾನಯನ’ ಎಂದೆನ್ನಿ, ಬೇಕಿದ್ದರೆ ‘ಜಲ ಚಾವಣಿ’ ಎಂದು ಕರೆಯಿರಿ ಅಥವಾ ‘ನೀರ ಸೂರು’ ಎಂದರೆ ಕೇಳಲು ಇನ್ನೂ ಹಿತಕರ...ಒಟ್ಟಾರೆ ಸಾಂಪ್ರದಾಯಿಕ ಭಾರತದ ಕೃಷಿಯಲ್ಲಿ ತನ್ನಿಂದ ತಾನೇ ಅಭಿವೃದ್ಧಿ ಹೊಂದುತ್ತಿದ್ದ, ನೀರನ್ನು ಹಿಡಿದಿಟ್ಟುಕೊಂಡು ಬಳಕೆಗೆ ದಕ್ಕಿಸಿಕೊಡುತ್ತಿದ್ದ ನೆಲವಿಂದು, ಆಧುನಿಕ ಹೆಸರಿನಲ್ಲಿ ವೈವಿಧ್ಯಮಯವಾಗಿ ಕರೆಸಿಕೊಳ್ಳುತ್ತಿದೆ. ನೀರ ರಕ್ಷಣೆ ದಿನದ ಕಾಳಜಿಯಾಗದ ಹೊರತೂ ಉಳಿದೆಲ್ಲ ಬಲವಂತದ ಮಾಘಸ್ನಾನ ಎಂಬುದು ಬೇರೆ ಪ್ರಶ್ನೆ.
ಏನೇ ಇದ್ದರೂ, ಇಂದಿನ ಸನ್ನಿವೇಶದ ಅಗತ್ಯ-ಅನಿವಾರ್ಯತೆಗಳು ಹಲವು ಪದ್ಧತಿಗಳನ್ನು ಅನುಸರಣೆಗೆ ತರುತ್ತಿವೆ. ಅದಕ್ಕಾಗಿ ಶಾಸ್ತ್ರಬದ್ಧ ಕ್ರಮಗಳನ್ನು ಗುರುತಿಸಲಾಗುತ್ತಿದೆ. ನಿಗದಿತ ಹೆಸರನ್ನು ಅವು ಪಡೆದುಕೊಳ್ಳುತ್ತಿವೆ.
watershed development-ಜಲಾನಯನ ಅಭಿವೃದ್ಧಿ ಎಂಬುದು ಇದೇ ರೀತಿ ಸರಕಾರ, ಸಮುದಾಯಗಳೆಡರಿಂದಲೂ ಆಧುನಿಕ ಕೃಷಿಯ ಫ್ಯಾಷನ್ ಎಂಬರ್ಥದಲ್ಲಿ ಬಳಕೆಗೆ ಬರುತ್ತಿರುವ ಪದ. ಅದರ ಹೆಸರೇ ಒಂದು ರೀತಿಯಲ್ಲಿ ಅತ್ಯಂತ ಗಂಭೀರ ಅರ್ಥವನ್ನು ಧ್ವನಿಸುತ್ತದೆಯಾದರೂ ಅದು ತೀರಾ ಸರಳ ವಿಧಾನ. ಬೀಳುವ ಮಳೆ, ಅದು ನಿರ್ದಿಷ್ಟ ಗುರಿಯೆಡೆಗೆ ಹರಿದೋಡುವ ಇಲ್ಲವೇ ಇಂಗುವ ಪ್ರದೇಶವನ್ನು ಒಂದೇ ಪದದಲ್ಲಿ ಜಲಚಾವಣಿ ಅಥವಾ ಜಲಾನಯನ ಪ್ರದೇಶ ಎನ್ನಬಹುದು.
ಬೀಳುವ ಮಳೆಗೊಂದು ಸೂರು ಕಟ್ಟಿಕೊಟ್ಟು ನಿಲ್ಲಿಸಿಕೊಂಡರೆ ಅದನ್ನೇ ನೀರಸೂರು ಎನ್ನಬಹುದಲ್ಲವೇ ? ಪ್ರಶ್ನೆ ಏನು ಬಂತು ಅದೇ ಜಲಾನಯನ. ಇಲ್ಲಿ ಚಾವಣಿ, ಸೂರು ಎಂದ ಮಾತ್ರಕ್ಕೆ ನೆಲದ ಮೇಲೊಂದು ನೀರಿಗಾಗಿ ನೆರಳು ನಿರ್ಮಿಸುವುದು ಎಂಬ ಶಬ್ದಶಃ ಅರ್ಥವಲ್ಲ. ನೀರು ವಾಸಿಸಲು-ತಂಗಲು, ತಂಗಿ ಇಂಗಲು ಅನುವು ಮಾಡಿಕೊಟ್ಟರಾಯಿತು; ಅದೇ ನೀರಸೂರು.
ಬಹುಶಃ ಒಣ ಭೂಮಿಯಲ್ಲಿನ ಕೃಷಿಯ ಪರಿಕಲ್ಪನೆ ಸ್ಪಷ್ಟವಾಗುತ್ತ ಹೋದಂತೆಲ್ಲ ಜಲಾನಯನ ಅಭಿವೃದ್ಧಿ ಎಂಬುದೂ ಪ್ರಾಮುಖ್ಯ ಪಡೆದುಕೊಳ್ಳುತ್ತ ಬಂದಿತೇನೋ. ಇಂದು ಜಲಾನಯನ ಅಭಿವೃದ್ಧಿಗಾಗಿಯೇ ಸರಕಾರಗಳು ಕೋಟ್ಯಂತರ ರೂಪಾಯಿ ಚೆಲ್ಲುತ್ತಿದೆ. ಅದಕ್ಕಾಗಿ ಪ್ರತ್ಯೇಕ ಯೋಜನೆ ರೂಪಿಸಿದೆ. ಇಲಾಖೆ, ಅಕಾರಿಗಳು, ಸಿಬ್ಬಂದಿ ಎಲ್ಲವನ್ನೂ ಒದಗಿಸುತ್ತಿದೆ.
ಜಲಾನಯನ ಎಂಬುದು ಪ್ರಮುಖವಾಗಿ ಮೂರು ಹಂತಗಳನ್ನು ಹೊಂದಿರುತ್ತದೆ. ಮೊದಲನೆಯದಾಗಿ ಇಳಿಮೇಡು
(catchment area),ಅಂದರೆ ನೀರು ಹರಿದು ಬರುವ ಪ್ರದೇಶ. ಇನ್ನೊಂದು ಅಚ್ಚಕಟ್ಟು ಪ್ರದೇಶ
(delta area), ಅಂದರೆ ನೀರು ಬಳಕೆಗೆ ಒಳಪಡುವ ಪ್ರದೇಶ. ಕೊನೆಯದಾಗಿ ಹರಿವೀಡು (command area), ಅಂದರೆ ನೀರು ಹರಿದು ಹೋಗುವ ಪ್ರದೇಶ. ಈ ಮೂರೂ ಪ್ರದೇಶವನ್ನು ಒಳಗೊಂಡ ಭೂಮಿಯನ್ನು ನಾವು ಒಂದು ನೀರ ಸೂರು ಎನ್ನಬಹುದು. ಅದು ಎಷ್ಟೇ ದೊಡ್ಡದಿರಬಹುದು, ಚಿಕ್ಕದೂ ಇರಬಹುದು. ಒಟ್ಟಾರೆ ನೀರಿನ ದಿನಚರಿಗೆ ಸಂಬಂಸಿದ ಚಟುವಟಿಕೆಗಳು ಅಲ್ಲಿ ನಡೆಯುತ್ತಿರಬೇಕು. ಸಾಮಾನ್ಯವಾಗಿ ಒಂದು ಜಲಾನಯನಕ್ಕೆ ಹೊಂದಿಕೊಂಡು ಒಂದು ನದಿ, ಹೊಳೆ ಅಥವಾ ಇನ್ನಾವುದೇ ಹರಿವು ಇದ್ದೇ ಇರುತ್ತದೆ. ಅದರ ಸುತ್ತಮುತ್ತಲನ್ನು ಅಚ್ಚುಕಟ್ಟು ಪ್ರದೇಶ ಎಂದು ಗುರುತಿಸಲಾಗುತ್ತದೆ. ನಾವು ನಮ್ಮಂಥವರು ಸೂರು ನಿರ್ಮಿಸಿಕೊಳ್ಳಲು ಸಮತಟ್ಟಾದ, ಮರ-ಗಿಡ, ಬಂಡೆಗಳಿಲ್ಲದ ಜಾಗವನ್ನು ಹುಡುಕುವುದು ಸಹಜ. ಆದರೆ ನೀರು ಇದಕ್ಕಿಂಥ ಸಂಪೂರ್ಣ ಭಿನ್ನ. ಜಲ ಚಾವಣಿ ನಿರ್ಮಾಣ ಸಮತಟ್ಟಾದ ಜಾಗದಲ್ಲಿ ತುಸು ತ್ರಾಸದಾಯಕವೇ ಸರಿ. ಅದೇ ಗುಡ್ಡ ಶ್ರೇಣಿಯಿಂದ ತಳದ ಕಣಿವೆಗೆ ಸೂರುಕಟ್ಟಿ ನೀರು ನಿಲ್ಲಿಸುವುದು ಅತ್ಯಂತ ಸುಲಭ. ನಮ್ಮ ನಮ್ಮ ಮನೆಗಳಿಗೆ ನಮ್ಮದೇ ಆದ ಗುರುತು, ಒಂದು identity ಇರುವುದಿಲ್ಲವೇ ಹಾಗೆಯೇ ಪ್ರತೀ ನೀರ ಸೂರಿಗೂ ಆಯಾ ಭೂ ಪ್ರದೇಶದ ವಿಸ್ತಾರ, ಅಲ್ಲಿನ ವಾತಾವರಣ, ಭೌಗೋಳಿಕ ಲಕ್ಷಣಗಳಿಗನುಗುಣವಾಗಿ ಅದರದೇ ಆದ ಪ್ರತ್ಯೇಕ ವ್ಯಕ್ತಿತ್ವ ನಿರ್ಮಾಣವಾಗಿರುತ್ತದೆ. ಆಯಾ ಪ್ರದೇಶದಲ್ಲಿ ಬೀಳುವ ಮಳೆ ಸರಾಸರಿ, ಭೂಮಿ ಮೇಲ್ಮೈ ಆಕಾರ, ಮಣ್ಣಿನ ಗುಣ ಇವಲ್ಲವನ್ನೂ ಪರಿಗಣಿಸಿಯೇ ಜಲಾನಯನದ ಅಭಿವೃದ್ಧಿಗೆ ಮುಂದಾಗಬೇಕು. ಅದಿಲ್ಲದಿದ್ದರೆ ಕೋಳಿಗೂಡಿನಲ್ಲಿ ಕೋಣನನ್ನು ತಂದು ಕಟ್ಟಿಹಾಕಿದಂತಾದೀತು.
ಜಲ ಚಾವಣಿ ನಿರ್ಮಾಣವೆಂದರೆ ಅದೊಂದು ನೂರಕ್ಕೆ ನೂರು ಸಂಪೂರ್ಣ ಜೈವಿಕ ಪ್ರಕ್ರಿಯೆ. ಭೌತಿಕ ನಿರ್ಮಾಣ ಎಷ್ಟು ಮುಖ್ಯವೋ, ಜೈವಿಕ ಹಾಗೂ ಸಾಂಸ್ಕೃತಿಕ ಅಂಶಗಳನ್ನು ಪರಿಗಣಿಸುವುದೂ ನೀರಿನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅಷ್ಟೇ ಪ್ರಮುಖ ವಿಚಾರವೆನಿಸಿಕೊಳ್ಳುತ್ತದೆ. ನೀರೆಂದರೆ ಅದು ನಿರ್ಜೀವ ಅಲ್ಲವೇ ಅಲ್ಲ. ಭಾವನಾತ್ಮಕ ಒಡನಾಟ ಇಲ್ಲದ ವ್ಯಕ್ತಿಗಳ ನಡುವೆ ಅದು ಎಂದಿಗೂ ವಾಸ ಮಾಡಲೊಪ್ಪುವುದೇ ಇಲ್ಲ. ನೈಸರ್ಗಿಕವಾಗಿ ಅತ್ಯಂತ ಸೂಕ್ಷ್ಮ ಸಂಗತಿಗಳನ್ನೂ ಗಮನಿಸಿದಲ್ಲಿ ಮಾತ್ರ ಜಲಾನಯನವೊಂದರ ಸಮರ್ಥ ಅಭಿವೃದ್ಧಿ ಸಾಧ್ಯ.
ಸಾಮಾನ್ಯವಾಗಿ ಜಲಾನಯನ ಅಭಿವೃದ್ಧಿಯೆಂದರೆ ನದಿ ಅಥವಾ ಹೊಳೆಯಂಥ ಜಲ ಮೂಲದ ಸುತ್ತಲಿನ ಅಚ್ಚುಕಟ್ಟಿನಲ್ಲಿ ನೀರನ್ನು ಉಳಿಸಿಕೊಂಡು ಬಳಕೆ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದು ಎಂಬ ಕಲ್ಪನೆ ಇದೆ. ಆದರೆ ಇದಷ್ಟೇ ಅಲ್ಲ. ಮಳೆ ನೀರಿನ ಸಂಗ್ರಹದ ಜತೆಗೆ, ನೀರಿನ ಸಂರಕ್ಷಣೆ, ಪುನರುಜ್ಜೀವನ ಮತ್ತು ಪರಿಸರ ಹಾಗೂ ಜೀವ ವಲಯದ ನ್ಯಾಯಯುತ ನಿರ್ವಹಣೆ- ಈ ಎಲ್ಲ ಅಂಶಗಳನ್ನೂ ಜಲಾನಯನ ಅಭಿವೃದ್ಧಿ ಒಳಗೊಂಡಿರುತ್ತದೆ. ಆಯ್ದುಕೊಂಡ ಜಾಗದಲ್ಲಿ ಮಣ್ಣಿನ ಸಂಸ್ಕರಣೆಯಿಂದ ಕಾರ್ಯ ಆರಂಭವಾಗುತ್ತದೆ. ನಂತರದ ಹಂತ ನೀರಿನ ಓಟ ತಪ್ಪಿಸಿ, ನಿಲುಗಡೆಗೆ ಅನುವಾಗುವಂತೆ ಭೂಮಿಯ ಮೇಲ್ಮೈ ಅನ್ನು ಮಾರ್ಪಡಿಸುವುದು. ಆ ಬಳಿಕ ಅಲ್ಲಿ ಹಸಿರಿನ ಬೆಳವಣಿಗೆ...ಒಟ್ಟಾರೆ ನೀರು, ಮಣ್ಣು ಹಾಗೂ ಪರಿಸರ ಈ ಮೂರೂ ಅಂಶಗಳ ಸಮಗ್ರ ಸಂರಕ್ಷಣೆಯಾದಾಗ ಮಾತ್ರ ಜಲಾನಯನ ಅಭಿವೃದ್ಧಿ ನೈಜ ಅರ್ಥದಲ್ಲಿ ಆದಂತಾಗುತ್ತದೆ. ಅಂದರೆ ಮಾತ್ರ ಬರ ನಿರ್ವಹಣೆ, ಪ್ರವಾಹದ ನಿಯಂತ್ರಣ ಎರಡೂ ಉದ್ದೇಶ ಈಡೇರುತ್ತದೆ. ಮಣ್ಣಿನ ಸವಕಳಿಯೂ ತಪ್ಪುತ್ತದೆ. ನೀರಿನ ಲಭ್ಯತೆ ಹೆಚ್ಚುತ್ತದೆ. ಮೇವಿನ, ಬೆಳೆಗಳ ಉತ್ಪಾದನಾ ಮಟ್ಟ ಹೆಚ್ಚುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಪನ್ಮೂಲದ ಲಭ್ಯತೆ ಹಾಗೂ ಬಳಕೆಯಲ್ಲಿ ಸಮತೋಲನ ನಿರ್ಮಾಣವಾಗುತ್ತದೆ.
ಪರಿಸರ ವ್ಯವಸ್ಥೆಯಲ್ಲಿ ಮಣ್ಣು ಮತ್ತು ನೀರು ಅತಿ ಮುಖ್ಯ ಪಾತ್ರ ವಹಿಸುತ್ತದೆಂಬುದು ಗೊತ್ತೇ ಇದೆ. ಮನುಷ್ಯ, ಪ್ರಾಣಿ ಹಾಗೂ ಸಸ್ಯ ಈ ಮೂರೂ ಜೀವದ ಅಳಿವು ಉಳಿವು ನೀರು-ಮಣ್ಣನ್ನು ಅವಲಂಬಿಸಿದೆ. ಈ ದೃಷ್ಟಿಯಿಂದ ಈ ಎರಡರ ನಡುವೆ ಸಮತೋಲನ ನಿರ್ಮಾಣ ಮಾಡಿದರೆ ಜಲ ಚಾವಣಿ ಅಭಿವೃದ್ಧಿ ಆದಂತೆಯೇ ಸರಿ. ಭಾರತದಲ್ಲಿ ವರ್ಷಕ್ಕೆ ೧೭.೫ ಕೋಟಿ ಹೆಕ್ಟೇರ್‌ನಷ್ಟು ಪ್ರದೇಶದ ಮಣ್ಣು ಸವಕಳಿಯಾಗುತ್ತಿದೆ. ಜಲಾನಯನ ಅಭಿವೃದ್ಧಿಯ ಅಗತ್ಯ ನಮ್ಮಲ್ಲಿ ಎಷ್ಟು ಅಗತ್ಯ ಎಂಬುದನ್ನು ಇದರಿಂದ ಮನಗಾಣಬಹುದೇ ?
‘ಲಾಸ್ಟ್’ ಡ್ರಾಪ್: ನಾವು ಈ ಭೂಮಿಯ ಮೇಲೆ ಏನು ಮಾಡುತ್ತಿದ್ದೇವೆ ಎಂಬುದು ಆ ನೆಲದ ನೀರಿನಲ್ಲಿ ಪ್ರತಿಫಲಿಸುತ್ತದೆ.
ಸಮ್ಮನಸ್ಸಿಗೆ ಶರಣು
4 months ago