Friday, January 23, 2009

ನಿರ್ಮಿತಿ ಕೇಂದ್ರ: ಮಳೆ ಕೊಯ್ಲಿನ ದಿವ್ಯ ಸಾಕ್ಷಾತ್ಕಾರ

ರೆಂದರೆ ಊರಪ್ಪ. ಅಲ್ಲಿ ಒಂದಷ್ಟು ಮನೆಗಳಿವೆ, ಮನೆ ಎಂದರೆ ಹಂಚಿನದ್ದು, ಹುಲ್ಲಿನದ್ದು, ತಾರಸಿ, ಆಸ್ಬೆಸ್ಟಾಸ್ ಶೀಟ್‌ನದ್ದು....ಎಲ್ಲ ರೀತಿಯದ್ದೂ ಇವೆ. ಒಂದೂರು ಅಂದರೆ ಎಲ್ಲ ರೀತಿಯ, ಎಲ್ಲ ವರ್ಗಗಳ ಮನೆಗಳೂ ಇರುತ್ತವಲ್ಲಾ; ಹಾಗೇ ಇವೆ. ಒಂದೇ ರೀತಿಯ ಮನೆಗಳಿರಲು ಅದೇನು ಆಶ್ರಯ ಕಾಲನಿಯೇ ? ಹಾಗೆಯೇ ಪಕ್ಕದಲ್ಲೇ ಒಂದು ಶಾಲೆಯಿದೆ, ಆಸ್ಪತ್ರೆಯಿದೆ, ಸಮುದಾಯ ಭವನವಿದೆ, ಕಾಕನ ಟೀ ಹೋಟೆಲ್ ಇದೆ, ಊರ ಮುಂದೊಂದು ಪುಟ್ಟ ದೇಗುಲ, ಮಂದಿರ, ಮಸೀದಿ.... ಅಯ್ಯೋ ರಾಮಾ, ಇದೊಳ್ಳೆ ಕತೆಯಾಯಿತಲ್ಲ. ಒಂದು ಹಳ್ಳಿ ಎಂದ ಮೇಲೆ ಇವೆಲ್ಲ ಇರಲೇ ಬೇಕು.
ಇಷ್ಟೇ ಅಲ್ಲ, ಒಂದಷ್ಟು ಹೊಲ ಗದ್ದೆಗಳಿವೆ. ಅದಕ್ಕೆ ಸುತ್ತ ಬೇಲಿ ಹಾಕಿದ್ದಾರೆ. ಆ ಹೊಲದ ನಟ್ಟ ನಡುವೆ ನೀರು ಹರಿಯುವ ಕಾಲುವೆಯಿದೆ. ಹೊಲಕ್ಕೆ ಹೋಗಲು ಪುಟ್ಟ ರಸ್ತೆಯಿದೆ. ಆ ರಸ್ತೆಯ ಪಕ್ಕದಲ್ಲಿ ದನಕರುಗಳು, ಕುರಿ ಮಂದೆ ಮೇಯುತ್ತಿರುತ್ತವೆ. ಹಾಗೆ ಮುಂದಕ್ಕೆ ಸಾಗಿದರೆ ಅಲ್ಲೊಂದು ಪುಟ್ಟ ಅಣೆಕಟ್ಟು, ಅದಕ್ಕೆ ನಾಲ್ಕಾರು ಬಾಗಿಲು, ಅದನ್ನೆತ್ತಿದರೆ ಒಡ್ಡಿನ ಒಳಗಿರುವ ನೀರು ಸೀದ ಹೊಲ ಗದ್ದೆಗಳತ್ತ ಓಡುತ್ತದೆ. ಹೊಲದ ಈ ಪಕ್ಕದಲ್ಲಿ ಒಂದು ಬಯಲು. ಅಲ್ಲೊಂದಿಷ್ಟು ರೈತಾಪಿ ಮಂದಿ ಬೆಳೆದ ಬೆಳೆಯನ್ನು ಒಕ್ಕುತ್ತಿರಬಹುದು....
ಓಹ್, ಯಾರೂ ಕಾಣದ ಊರೆಂದು ಇದನ್ನು ಬಣ್ಣಿಸಲಾಗುತ್ತಿದೆ ಎಂದುಕೊಳ್ಳಬೇಡಿ. ಎಲ್ಲ ಊರಲ್ಲೂ ಇವೆಲ್ಲವೂ ಇದ್ದೇ ಇರುತ್ತವೆ. ಈ ಊರಿನದ್ದು ವಿಶೇಷವೆಂದರೆ ಇದು ಊರೆಂದರೆ ಊರಲ್ಲ, ಮತ್ತೆ ಈ ಊರಿನ ಎಲ್ಲವೂ ಇರುವುದೇ ಇಪ್ಪತ್ತು ಗುಂಟೆ ಪ್ರದೇಶದಲ್ಲಿ !
ಗೋಜಲು ಗೋಜಲೆನಿಸಿದರೆ ತಲೆ ಕೆಡಿಸಿಕೊಳ್ಳಬೇಡಿ. ಮೊದಲೇ ಹೇಳಿದಂತೆ ಇದು ಊರೆಂದರೆ ಊರಲ್ಲ. ಒಂದೂರಿನಲ್ಲಿ ಏನೆಲ್ಲ ಇರಬಹುದೋ ಅವೆಲ್ಲದರ ಪ್ರತಿಕೃತಿಯನ್ನು ಪಕ್ಕಾ ಊರೆಂಬ ಕಲ್ಪನೆ ಬರುವ ಮಾದರಿಯಲ್ಲಿ ನಿರ್ಮಿಸಿಡಲಾಗಿದೆ ವಿಜಾಪುರ ಪಟ್ಟಣದಿಂದ ತುಸು ಹೊರಭಾಗದಲ್ಲಿ. ಹೀಗೆ ಪ್ರತಿಕೃತಿಯನ್ನು ನಿರ್ಮಿಸಿ ನಿಲ್ಲಿಸಲಾಗಿರುವ ಊರಿನ ಹೆಸರು ‘ನಿರ್ಮಿತಿ ಕೇಂದ್ರ’.
ಹೌದು, ಜಿಲ್ಲಾಡಳಿತದ ಇಚ್ಛಾ ಶಕ್ತಿಯ ಫಲವಾಗಿ ೨೦೦೫ರಲ್ಲಿ ಅಸ್ತಿತ್ವ ಪಡೆದ ಈ ನಿರ್ಮಿತಿ ಕೇಂದ್ರ ಇಡೀ ರಾಜ್ಯದಲ್ಲೇ ಇಂಥ ಮೊದಲ ಪ್ರಯತ್ನ. ಎಲ್ಲಕ್ಕಿಂತ ಹೆಚ್ಚಾಗಿ ಮಳೆ ನೀರು ಸಂಗ್ರಹದ ಎಲ್ಲ ಮಾದರಿಗಳೂ ಒಂದೇ ತೆಕ್ಕೆಗೆ ನೋಡ ಸಿಗುವಂತೆ ಮಾಡುವ ಪರಿಕಲ್ಪನೆ ಸಾಕಾರಗೊಂಡದ್ದು ಜಿಲ್ಲಾಕಾರಿ ಮಹಮದ್ ಮೋಸಿನ್ ಅವರ ಬೆಂಬಲದಿಂದಾಗಿ. ಅದಾಗ ವಿಜಾಪುರದಲ್ಲಿ ಅಂದಾಜು ೩ ಲಕ್ಷ ಜನಸಂಖ್ಯೆಗೆ ನೀರು ಪೂರೈಕೆಯಾಗುತ್ತಿದ್ದುದು ಪಟ್ಟಣದ ಸುತ್ತಲಿನ ಮೂರು ಬೃಹತ್ ಕೆರೆಗಳಿಂದ. ಅಲ್ಲಿನ ಮಳೆ ಪ್ರಮಾಣ, ವಾತಾವರಣವನ್ನು ಮತ್ತೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಒಟ್ಟಾರೆ ಒಂದು ಮಳೆಯಿದ್ದರೆ ಮತ್ತೊಂದು ಮಳೆಯಿಲ್ಲ ಎಂಬಂಥ ಪರಿಸ್ಥಿತಿಯಲ್ಲಿ ಇಡೀ ನಗರಕ್ಕೆ ನೀರು ಪೂರೈಕೆ ಸವಾಲಿನ ಸಂಗತಿ. ಇಂಥ ಸನ್ನಿವೇಶದಲ್ಲಿ ಮಳೆ ನೀರು ಸಂಗ್ರಹದಂಥ ಸುಲಭೋಪಾಯದಿಂದ ಪರಿಹಾರ ದೊರಕಬಹುದೆಂಬುದು ಗೊತ್ತಿದ್ದರೂ ಈ ಬಗ್ಗೆ ಜಾಗೃತಿಯ ಕೊರತೆ. ಈ ಬಗೆಗೆ ಅರಿವು ಮೂಡಿಸುವ ಕೆಲಸ ಮೊದಲಾಗಬೇಕೆಂದು ಜಿಲ್ಲಾಡಳಿತ ನಿರ್ಧರಿಸಿದ್ದು ಹೆಮ್ಮೆಯ ಸಂಗತಿ. ನಿರ್ಧಾರದ ಫಲವೇ ಅರ್ಧ ಎಕರೆಯಲ್ಲಿ ತಲೆ ಎತ್ತಿದ್ದು ಮಳೆ ನೀರು ನಿರ್ಮಿತಿ ಕೇಂದ್ರ.
ಯಾವ ದೃಷ್ಟಿಯಿಂದ ನೋಡಿದರೂ ಅದು ಪಕ್ಕಾ ಹಳ್ಳಿಯೇ. ಅಷ್ಟೊಂದು ಸುಂದರವಾಗಿ ಮತ್ತು ಅಷ್ಟೇ ನೈಜವಾಗಿ ಜನ ಜೀವನವೊಂದನ್ನು ಅಲ್ಲಿ ಚಿತ್ರಿಸಲಾಗಿದೆ. ಆರಂಭದಲ್ಲಿಯೇ ಎದುರಾಗುತ್ತದೆ ತಿರುವುಮುರುವಾಗಿ ಬಿಚ್ಚಿಕೊಂಡಿರುವ ಬೃಹತ್ ಛತ್ರಿ(ಞಚ್ಟಿಛ್ಝ್ಝಿZ). ಅದು ಮಳೆ ನೀರು ಕೊಯ್ಲಿನ ಸಂಕೇತ. ಸ್ವಾಗತ ಕಮಾನನ್ನೇ ಅಷ್ಟು ಅರ್ಥಪೂರ್ಣವಾಗಿ ನಿರ್ಮಿಸಲಾಗಿದೆ. ಅಲ್ಲಿ ಕೈ ಮಗಿದು ಪುಟ್ಟ ಅಚ್ಚರಿಯೊಂದಿಗೆ ಒಳ ಹೊಕ್ಕರೆ ಇಂಥ ಹತ್ತು ಹಲವು ಪುಟ್ಟ ಪುಟ್ಟ ಬೆರಗುಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಬಾಗಿಲಿನಲ್ಲೇ ಒಂದು ಸುಂದರ ಕೈತೋಟ. ಹಾಗೆ ಬಲಕ್ಕೆ ತಿರುಗಿಕೊಂಡರೆ ಈಗ ನಿಜವಾಗಿ ಊರೊಳಕ್ಕೆ ಕಾಲಿಟ್ಟಿರುತ್ತೀರಿ. ಊರ ಮುಂದೆ ದೇವಸ್ಥಾನದ ದರ್ಶನವೇ ಮೊದಲು. ಅಲ್ಲಿ ದೇವರೂ ಮಳೆ ಕೊಯ್ಲಿಗೆ ಸಾಕ್ಷಿ. ದೇಗುಲದ ಸೂರಿನ ಅಂಚಿಗೆ ಪೈಪ್‌ಗಳನ್ನು ಜೋಡಿಸಿ ಬೀಳುವ ಮಳೆಯನ್ನೇ ಹಿಡಿದಿಟ್ಟು ಅಭಿಷೇಕ ಮಾಡಬಾರದೇಕೆ ? ಎನ್ನುವಂತಿದೆ ಮಾದರಿ. ಸರಿ, ಚಿಕ್ಕ ಹಾದಿಯಲ್ಲಿ ಮುಂದೆ ಸಾಗಿದರೆ ಸಮುದಾಯ ಕೇಂದ್ರಿತ ಸೇವಾ ಸಂಸ್ಥೆಗಳ ಒಂದೊಂದೇ ಕಟ್ಟಡಗಳು ಎದುರಾಗುತ್ತವೆ. ಅದು ಆಸ್ಪತ್ರೆ, ಶಾಲೆ, ಬ್ಯಾಂಕ್, ಸೊಸೈಟಿ ಯಾವುದೇ ಇರಬಹುದು. ಎಲ್ಲವೂ ಅದದೇ ಶೈಲಿಯ, ಅದರದ್ದೇ ಕಲ್ಪನೆ ಮೂಡಿಸುವ ಆದರೆ, ಆಕಾರದಲ್ಲಿ ತುಸು ಚಿಕ್ಕದಾದ ಕಟ್ಟಡಗಳು. ಹೊರ ಊರಿಗೂ, ನಿರ್ಮಿತಿ ಕೇಂದ್ರದ ಒಳಗೂ ಇರುವ ಒಂದೇ ವ್ಯತ್ಯಾಸವೆಂದರೆ ಈ ಎಲ್ಲ ಕಟ್ಟಡಗಳ ಚಾವಣಿಯಂಚಿಗೆ ಸೀಳಿದ ಪೈಪುಗಳನ್ನು ಜೋಡಿಸಲಾಗಿದೆ. ಅವೆಲ್ಲವೂ ಒಂದೋ ಕೆಳಗಿರುವ ಟ್ಯಾಂಕ್‌ಗೋ, ಸಂಪ್‌ಗೋ, ಇಲ್ಲವೇ ಬೋರ್‌ವೆಲ್‌ನ ಬಾಯಿಗೋ ಸಂಪರ್ಕಿತವಾಗಿರುತ್ತವೆ.
ಇಷ್ಟರಲ್ಲಿ ಬೇಸರವಾಯಿತೋ ಚಿಂತೆ ಬೇಡ, ಎದುರಿರುವ ಕಾಕನ ಟೀ ಸ್ಟಾಲ್ ಹೊಕ್ಕರಾಯಿತು. ಅದು ಸಹ ಮಳೆ ನೀರು ಕೊಯ್ಲಿನ ಸಂದೇಶ ಸಾರುತ್ತ ನಿಂತಿದೆ. ದಣಿವಾರಿಸಿಕೊಂಡು ಮುಂದೆ ಹೊರಟರೆ, ಬೋರಜ್ಜ, ತಿಮ್ಮ, ಲಕುಮಿ, ಕಾಳ...ಹೀಗೆ ಒಬ್ಬೊಬ್ಬರದೇ ಮನೆಗಳು ಸಾಲಿಗೆ ಸಿಗುತ್ತವೆ. ಒಂದಕ್ಕಿಂತ ಒಂದು ಭಿನ್ನ. ಅವೆಲ್ಲವೂ ಅದೆಷ್ಟು ಸಹಜವಾಗಿದೆ ಎಂದರೆ ಒಮ್ಮೆ ಒಳ ಹೊಕ್ಕು ಬಂದು ಬಿಡೋಣ ಯಾರಾದರೂ ಇದ್ದಿರಬಹುದು, ಮಾತಾಡಿಸೋಣ ಎಂದುಕೊಳ್ಳಲೇ ಬೇಕು. ಒಂದು ಮನೆಯೆದುರು ಪುಟ್ಟ ಕರುವೊಂದು ಆಡುತ್ತಿದ್ದರೆ, ಮತ್ತೊಂದು ಮನೆಯ ಪಡಸಾಲೆಯಲ್ಲಿ ಕುಳಿತು ಅವುಗಳ ಆಟವನ್ನು ನೋಡುತ್ತಿದ್ದಾನೆ. ಎಲ್ಲದರಲ್ಲೂ ಎಷ್ಟೊಂದು ಜೀವಂತಿಕೆ ಇದೆಯೆಂದರೆ ಒಮ್ಮೆ ಮುಟ್ಟಿ ಖಚಿತಪಡಿಸಿಕೊಂಡು ಬಿಡೋಣ ಅನಿಸದಿರದು. ಅದಿರಲಿ, ಈ ಎಲ್ಲ ಮನೆಗಳಲ್ಲೂ ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಯಾವ್ಯಾವ ರೀತಿಯ ಚಾವಣಿಗಳಲ್ಲಿ ಹೇಗೆ ಹೇಗೆ ಮಳೆ ನೀರನ್ನು ಹಿಡಿದುಕೊಳ್ಳಬಹುದು ಎಂಬುದರ ಪ್ರಾತ್ಯಕ್ಷಿಕೆ ಇದರ ಉದ್ದೇಶ.
ನಂತರ ನಿಮ್ಮೆದುರು ತೆರೆದುಕೊಳ್ಳುವುದು ಜಲ ಸಂರಕ್ಷಣಾ ಕ್ರಮಗಳನ್ನು ಸಾರುವ ಬೇರೆ ಬೇರೆ ಮಾದರಿಗಳು. ಹೊಲಗಳಲ್ಲಿ ಬದು ಹೇಗಿರಬೇಕು, ಕೃಷಿ ಹೊಂಡದ ಉದ್ದ-ಅಗಲ-ಆಳ ಎಷ್ಟಿರಬೇಕು, ಚೆಕ್ ಡ್ಯಾಂ ಅಂದರೇನು, ಅದರಿಂದೇನು ಉಪಯೋಗ, ಬೋರ್‌ವೆಲ್ ಪುನಶ್ಚೇತನ ಹೇಗೆ ಸಾಧ್ಯ, ತೆರೆದ ಬಾವಿಗಳಿಂದ ಅಂತರ್ಜಲ ಸಂರಕ್ಷಣೆ ಹೇಗಾಗುತ್ತದೆ, ಕಾಲುವೆಗಳಲ್ಲಿ ನೀರಿಂಗಿಸಲು ಸಾಧ್ಯವೇ....ಹೀಗೆ ಬಹುತೇಕ ಎಲ್ಲವನ್ನೂ ಪ್ರಾಯೋಗಿಕವಾಗಿ ಮಾಡಿ ಅಲ್ಲಿ ತೋರಿಸಲಾಗಿದೆ. ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವ, ಕೌತುಕ ಹೆಚ್ಚಿಸಿ ಹಿಡಿದಿಟ್ಟುಕೊಳ್ಳುವಷ್ಟು ಆಕರ್ಷಣೀಯವಾಗಿ ನಿರ್ಮಿಸಿರುವುದು ವಿಶೇಷ.
ಇಷ್ಟಕ್ಕೇ ಮುಗಿಯುವುದಿಲ್ಲ, ಅಲ್ಲೊಂದು ಮಳೆ ನೀರ ನಾಯಕ ಶಿವನ ಸುಂದರ ಮೂರ್ತಿ ಎಲ್ಲದರ ಸಂಕೇತವಾಗಿ ನಿಂತಿದೆ. ಅದರ ಸಮ್ಮುಖ ವಿಶಾಲ ಹೊಲಗದ್ದೆಗಳ ಮಾದರಿ. ಅದರ ಮಗ್ಗುಲಲ್ಲೇ ಮತ್ತೊಂದು ವಿಜಾಪುರವನ್ನು ತಂದಿಟ್ಟಿರುವಂತೆ, ಸಮಗ್ರ ಚಿತ್ರಣ ನೀಡುವ ಮಾದರಿ. ಅಲ್ಲಿ ಗುಂಬಜ್ ಇದೆ, ತಾಲಾಬ್‌ಗಳಿವೆ, ಬಾವಡಿಗಳಿವೆ, ಕಾವಲು ಗೋಪುರ, ಹರಿನೀರ ಹಿಡಿದು ತರುವ ಕಾಲುವೆಗಳು, ಅವನ್ನು ಅಲ್ಲಲ್ಲಿಯೇ ಇಂಗಿಸುವ ಗುಂಡಿಗಳು, ಅಲ್ಲಿಂದ ಬಾವಡಿಗಳಿಗೆ ನೀರು ತಂದುಕೊಡುವ ಸುರಂಗ....ಒಟ್ಟಾರೆ ಅದರ ಮುಂದೆ ನಿಂತುಕೊಂಡರೆ ಆದಿಲ್‌ಶಾಹಿಗಳ ನೀರಾವರಿ ವ್ಯವಸ್ಥೆಯ ಪರಿಕಲ್ಪನೆ ಒಡಮೂಡದಿರದು.
ಅದರ ಪಕ್ಕದಲ್ಲೊಂದಿಷ್ಟು ಗೊಂಬೆಗಳು. ಕೆಲವು ಬಾನಿಗೆ ಬೊಗಸೆಯೊಡ್ಡಿ ನಿಂತಿದ್ದರೆ, ಇನ್ನು ನಾಲ್ಕಾರು ಮಹಿಳೆಯರು ಬೀಳುವ ಮಳೆ ಹಿಡಿಯಲು ಸೆರಗು ಮುಂದೆ ಮಾಡಿ ನಿಂತಿದ್ದಾರೆ. ಬೃಹತ್ ಕೊಡದ ಸುತ್ತ ನಿಂತಿರುವ ರೈತಾಪಿ ಮಂದಿ...ಎಲ್ಲವೂ ಚೆಂದ, ಚೆಂದ. ಉದ್ದಕ್ಕೂ ಅಲ್ಲಿಲ್ಲಿ ನೀರೆಚ್ಚರದ ಸಂದೇಶ ಸಾರುವ ಗೋಡೆ ಬರಹಗಳು. ನೀರಿನ ಈ ಲೋಕವನ್ನು ಸುತ್ತಿ ಮುಗಿಸುವ ಹೊತ್ತಿಗೆ ಮನವೆಲ್ಲ ತಣಿದಿರುತ್ತದೆ.
ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಜಿ.ಎನ್. ಮಲಜಿ ಅವರು ಹೇಳುವ ಪ್ರಕಾರ ‘ ೧೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ನಿರ್ಮಿತಿ ಕೇಂದ್ರ ಸಂಪೂರ್ಣ ನೀರ ಸ್ವಾವಲಂಬಿಯಾಗಿದೆ. ಇಲ್ಲಿನ ಕಟ್ಟಡಗಳ ಮೇಲೆ ಬಿದ್ದ ಮಳೆ ನೀರಿನಿಂದಲೇ ಇಲ್ಲಿನ ಬೋರ್‌ವೆಲ್ ಪುನಶ್ಚೇತನಗೊಂಡಿದೆ. ಪ್ರತಿದಿನ ಕನಿಷ್ಠ ೨೦೦ರಿಂದ ೩೦೦ ಮಂದಿ ಕೇಂದ್ರಕ್ಕೆ ಭೇಟಿ ಕೊಡುತ್ತಿದ್ದು, ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಲ್ಲಿ ಸಾಕಷ್ಟು ಯಶಸ್ಸು ಕಾಣಲಾಗಿದೆ.’
ಒಂದೆಡೆ ಬರ ಪೀಡಿತ ಪ್ರದೇಶ, ಇನ್ನೊಂದೆಡೆ ಸಮೃದ್ಧ ಗ್ರಾಮ- ಹೀಗೆ ಎರಡೂ ಕಲ್ಪನೆಗಳಿಗೆ ಇಲ್ಲಿ ರೂಪ ಕೊಡಲಾಗಿದೆ. ಮಾತ್ರವಲ್ಲ ಕೇಂದ್ರದ ಸುತ್ತಲಿನ ಖಾಲಿ ಜಾಗದಲ್ಲಿ ಪುಟ್ಟ ಪುಟ್ಟ ಒಡ್ಡುಗಳನ್ನು ನಿರ್ಮಿಸುವ ಮೂಲಕ ಪ್ರಾಯೋಗಿಕವಾಗಿಯೂ ಮಳೆ ನೀರು ಸಂಗ್ರಹವನ್ನು ಮಾಡಲಾಗುತ್ತಿದೆ. ಈ ಪ್ರದೇಶಗಳಲ್ಲಿ ಂದು ಮಳೆಗೆ ಕನಿಷ್ಠ ೨೦ ಲಕ್ಷ ಲೀಟರ್ ನೀರು ಸಂಗ್ರಹವಾಗುತ್ತಿದೆ. ಎನ್ನುತ್ತಾರೆ ಮಲಜಿ ಸಾಹೇಬರು.
ಇಲ್ಲಿ ಭೇಟಿ ನೀಡಿ ಹೋಗುವ ರೈತರಿಗೆ ಅವರ ಹೊಲಕ್ಕೇ ಹೋಗಿ ಮಳೆ ನೀರು ಕೊಯ್ಲಿನ ಅನುಷ್ಠಾನಕ್ಕೆ ಉಚಿತ ಸಲಹೆ, ತಾಂತ್ರಿಕ ಮಾರ್ಗದರ್ಶನವನ್ನು ಮಾಡಲಾಗುತ್ತದೆ. ಇಂಥ ಪ್ರಯತ್ನ ಬಾಗಲಕೋಟದಲ್ಲೂ ಆಗಿದ್ದು, ಪ್ರತಿ ಜಿಲ್ಲೆಯಲ್ಲೂ ಒಂದೊಂದು ಮಳೆ ನಿರ್ಮಿತಿ ಕೇಂದ್ರ ನಿರ್ಮಾಣವಾಗಬೇಕು ಎಂಬುದು ಮಲಜಿಯವರ ಆಶಯ. ಒಂದೇ ಮಾತಿನಲ್ಲಿ ಹೇಳುವುದಾದರೆ ಬಿದ್ದ ಮಳೆಯನ್ನು ಎಲ್ಲೆಲ್ಲಿ ಹೇಗೆಲ್ಲ ಹಿಡಿದಿಟ್ಟುಕೊಂಡು ಬಳಸಬಹುದು ಎಂಬುದರ ಸ್ಪಷ್ಟ ಚಿತ್ರಣ ದೊರೆಯಬೇಕೆಂದರೆ ವಿಜಾಪುರದ ಈ ಮಳೆ ನಿರ್ಮಿತಿ ಕೇಂದ್ರಕ್ಕೊಮ್ಮೆ ಭೇಟಿ ನೀಡಿದರೆ ಸಾಕು. ಉಳಿದೆಲ್ಲವನ್ನೂ ತಿಳಿಸಿಕೊಡಲು ಮಲಜಿಯವರು ನಿಮಗಾಗಿ ಕಾದಿರುತ್ತಾರೆ. ಹೋಗುವಾಗೊಮ್ಮೆ ಫೋನ್ ಮಾಡಿ ಹೋಗುವುದಾದರೆ ದೂರವಾಣಿ ಸಂಖ್ಯೆ ಬರೆದಿಟ್ಟುಕೊಳ್ಳಿ-೯೪೪೮೨೮೭೩೪೮.
‘ಲಾಸ್ಟ್’ಡ್ರಾಪ್: ನೀರೆನ್ನುವುದು ವಾಸ್ತವ. ಆದರೆ, ಅದರ ಸನ್ನಿಯಲ್ಲಿ ಹೋಗಿ ಕುಳಿತರೆ ಎಂಥ ಸುಂದರ ಕಲ್ಪನೆಗಳಿಗೆ ಬೇಕಾದರೂ ಅದು ವಸ್ತುವಾಗಬಹುದು.

Saturday, January 17, 2009

ತಾಲಾಬ್: ನೀರಿನ ಸಮಸ್ಯೆಗೆ ಆದಿಲ್‌ಶಾಹಿಗಳ ಜವಾಬ್

ಲ್ಲಿಲ್ಲಿ ಪುಟ್ಟ ಗೋಪುರಗಳು, ಅರ್ಧಂಬರ್ಧ ಕುಸಿದು ಕುಳಿತಿರುವ ಕಟ್ಟಡದ ಅವಶೇಷಗಳು, ತೀರಾ ಹತ್ತಿರ ಹೋದರೆ ಕಂಡೂ ಕಾಣದಂತಿರುವ ಕಾಲುವೆ, ಸುರಂಗ ಇತ್ಯಾದಿ, ಮತ್ತೆಲ್ಲೋ ಹೋಗಿ ನೋಡಿದರೆ ಅತ್ತ ಕಟ್ಟಿದ ಕೆರೆಯೂ ಅಲ್ಲದ ಇತ್ತ ನೈಸರ್ಗಿಕ ಹೊಂಡವೂ ಅಲ್ಲದ ಮಾದರಿಗಳು... ಮತ್ತೆ ಅದರಿಂದ ಹೊರಟ ಕಾಲು ಹಾದಿಯ ನಮೂನೆ...ಕುತೂಹಲಕ್ಕೆ ಒಂದಷ್ಟು ನೀರು ತಂದು ಗೋಪುರದ ಬುಡದಲ್ಲೆಲ್ಲೋ ಸುರಿದರೆ ಒಂದಷ್ಟು ಹೊತ್ತಿನಲ್ಲಿ ಮಾಯವಾಗಿರುತ್ತದೆ. ಅದೆಲ್ಲಿ ಹೋಯಿತೆಂದು ಹುಡುಕುತ್ತ ಬೆನ್ನು ಹತ್ತಿ ಹೋದರೆ ಮತ್ತೆಲ್ಲೋ ಪುಟ್ಟ ಹೊಂಡಕ್ಕೆ ಬಂದು ನಿಂತಿರುತ್ತದೆ.
ಇದು ಒಟ್ಟಾರೆ ವಿಜಾಪುರದ ಐತಿಹಾಸಿಕ ನೀರು ಪೂರೈಕೆ ವ್ಯವಸ್ಥೆಗೆ ಕೊಡಬಹುದಾದ ವ್ಯಾಖ್ಯಾನ. ಮೇಲ್ನೋಟಕ್ಕೆ ಎಲ್ಲವೂ ಗೋಜಲು ಗೋಜಲೆನಿಸಿದರೂ, ಅತ್ಯಂತ ಕರಾರುವಾಕ್ ತಂತ್ರಜ್ಞಾನವಿದು. ನೀವು ಇಡೀ ವಿಜಾಪುರದ ಯಾವುದೇ ಭಾಗಕ್ಕೆ ಹೋದರೂ ಮುಸ್ಲಿಂ ವಾಸ್ತು ಶೈಲಿಯ ಒಂದಲ್ಲಾ ಒಂದು ರಚನೆ ಕಾಣ ಬರುತ್ತವೆ. ಯಾವುದೋ ಮಸೀದಿಯೋ, ಪ್ರಾರ್ಥನಾ ಸ್ಥಳವೋ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಈ ಪೈಕಿ ಕೆಲವೇ ಕೆಲವನ್ನು ಹೊರತುಪಡಿಸಿದರೆ ಬಹುತೇಕ ಎಲ್ಲವೂ ನೀರಿಗೆ ಸಂಬಂಸಿದ ನಿರ್ಮಾಣಗಳೇ.
ಬಾವಡಿಗಳಿಂದಲೇ ತುಂಬಿ ಹೋಗಿರುವ ವಿಜಾಪುರದಲ್ಲಿ ಅದು ಮಾತ್ರವಲ್ಲ, ಆದಿಲ್‌ಶಾಹಿಗಳ ನೀರ ಪ್ರೇಮಕ್ಕೆ ಸಾಕ್ಷಿಯಾಗಿರುವ ಬಾವಡಿಗಳ ಸಂಖ್ಯೆಯ ದುಪ್ಪಟ್ಟು ತಾಲಾಬ್‌ಗಳೂ ಗಮನ ಸೆಳೆಯುತ್ತವೆ. ಬಹುಶಃ ವಿಶ್ವದ ಯಾವ ಪುರಾತನ ನಗರದಲ್ಲೂ ಇಷ್ಟು ಸುವ್ಯವಸ್ಥಿತ ನೀರಾವರಿ ವ್ಯವಸ್ಥೆ ಇರಲು ಸಾಧ್ಯವೇ ಇಲ್ಲ. ಈ ಮಾತು ಬರೀ ಉತ್ಪ್ರೇಕ್ಷೆಯಲ್ಲ. ಏಕೆಂದರೆ ಸುತ್ತಮುತ್ತಲೇ ಒಂದಲ್ಲ, ಎರಡಲ್ಲ, ಐದು ನದಿಗಳು ಬೇಡಬೇಡವೆಂದರೂ ಮಳೆಗಾಲದಲ್ಲಿ ಉಕ್ಕೇರುತ್ತವೆ. ಆದರೇನು, ದ್ರಾಕ್ಷಿ ಸ್ವರ್ಗ ವಿಜಾಪುರದ ಮಂದಿಗೆ ಈ ನೀರು ಹುಳಿದ್ರಾಕ್ಷಿಯೇ ಸರಿ. ಅದು ಎಂದಿಗೂ ಕುಡಿಯಲು ಎಟುಕುವುದೇ ಇಲ್ಲ. ಇದರ ಜತೆಗೆ ಕಾಡುವ ರಣ ಬಿಸಿಲು, ಸದಾ ಶುಭ್ರವಾಗಿಯೇ ನಗುವ ಮುಗಿಲು. ಪರಿಣಾಮ ಒಣಗಿ ಬಾಯ್ದೆರೆದೇ ಇರುವ ನೆಲ.
ಇಂಥ ಭೌಗೋಳಿಕ ಲಕ್ಷಣ, ವಾತಾವರಣವನ್ನು ಹೊಂದಿರುವ ವಿಜಾಪುರಕ್ಕೆ ಕೊರತೆಯಾಗದಂತೆ ನೀರು ಪೂರೈಸುವುದು ಸಣ್ಣ ಮಾತೇನಲ್ಲ. ಅದೊಂದು ಸಾಹಸ. ಅಂಥ ಸಾಹಸ ಸಿದ್ಧಿಸುವುದು ನಿಖರ ಅಭ್ಯಾಸ, ನಿಶ್ಚಿತ ಮನೋಶಕ್ತಿ, ನಿರಂಕುಶ ಜ್ಞಾನದಿಂದ ಮಾತ್ರ. ಆದಿಲ್‌ಶಾಹಿ ಅರಸರಿಗೆ ಇದು ಸಿದ್ಧಿಸಿತ್ತು ಎನ್ನುವಾಗ ಎದುರಿಗೆ ಕಾಣುತ್ತವೆ. ಬಾವಡಿಗಳು, ತಾಲಾಬ್‌ಗಳು.
ಇದು ಬಾವಡಿಗಿಂತ ಭಿನ್ನವಾಗಿರುವ ನೀರಾವರಿ ವ್ಯವಸ್ಥೆ. ತಾಲಾಬ್ ಎಂದರೆ ಹಿಂದಿಯಲ್ಲಿ ಕೆರೆ ಎಂದರ್ಥ. ಆ ಕಾಲದಲ್ಲಿ ತಾಲಾಬ್‌ಗಳು ಅದೆಷ್ಟು ನವನವೀನ ತಂತ್ರಜ್ಞಾನದಿಂದ ನಿರ್ಮಾಣವಾಗಿದ್ದವೆಂಬುದಕ್ಕೆ ಇಂದಿಗೂ ಅವು ಅನ್ವಯವಾಗುವಂತೆಯೇ ಇದೆ. ಬೇಗಂ ತಾಲಾಬ್ ಒಂದನ್ನು ನೋಡಿದರೆ ಸಾಕು, ಅವರಲ್ಲಿದ್ದಿರಬಹುದಾದ ತಾಂತ್ರಿಕ ಪ್ರಗತಿ ಅರಿವಾಗುತ್ತದೆ.
ನಗರದಿಂದ ಸರಿಸುಮಾರು ನಾಲ್ಕೈದು ಕಿ.ಮೀ. ಸಾಗಿಹೋದರೆ ಸುಂದರ ಜಲರಾಶಿ ಕಣ್ಸೆಳೆಯುತ್ತದೆ. ಅನುಮಾನವೇ ಇಲ್ಲ, ಅಷ್ಟು ಸುಂದರವಾಗಿದೆ ಎಂದರೆ ಅದೇ ಬೇಗಂತಾಲಾಬ್. ಇತಿಹಾಸಕ್ಕೆ ಹೋದರೆ ಕ್ರಿ.ಶ. ೧೬೫೧ರಲ್ಲಿ ಮಹಮ್ಮದ ಆದಿಲ್‌ಷಾ ಇದನ್ನು ಕಟ್ಟಿಸಿದನಂತೆ. ಆಗಿನ ಅತ್ಯಾಧುನಿಕ ನೀರಾವರಿ ವ್ಯವಸ್ಥೆಯ ಮೊದಲ ಹೆಜ್ಜೆ ಇದೆನ್ನಬಹುದು. ಇದಕ್ಕಿಂತ ಮೊದಲು ಇವನ ತಾತ, ಮೊದಲ ಆಲಿ ಆದಿಲ್‌ಷಾ ‘ತೊರವಿ’ ಯೋಜನೆ ಅನುಷ್ಠಾನಗೊಳಿಸಿದ್ದ. ಹಾಗೆ ನೋಡಿದರೆ ಇದು ಸಹ ಅತ್ಯಂತ ಸಮರ್ಥ ವ್ಯವಸ್ಥೆಯೇ. ಆದರೆ ನಗರ ಬೆಳೆಯುತ್ತ ಹೋದಂತೆಲ್ಲ ನೀರಿನ ಬೇಡಿಕೆ ಪೂರೈಸಲು ದು ಸಾಲದಾಯಿತು. ಕೊನೆಗೆ ಮಹಮ್ಮದ ಆದಿಲ್‌ಷಾ ಬೇಗಂ ತಾಲಾಬ್ ಅನ್ನು ರೂಪಿಸಿದ. ಈ ಕೆರೆಗೆ ನೀರಿನ ಮೂಲವೂ ಅಷ್ಟೇ ಸದೃಢವಾಗಿದೆ. ಒಂದು ರೀತಿಯಲ್ಲಿ ಇದು ಸರಣಿ ನೀರಾವರಿ ವ್ಯವಸ್ಥೆ. ಸಾರವಾಡ ಮತ್ತು ಖ್ವಾಜಾಪುರದಿಂದ ಹಳ್ಳಗಳ ನೀರು ಹಂತಹಂತಗಳನ್ನು ದಾಟಿ ಈ ತಾಲಾಬ್‌ಗೆ ಬಂದು ಸೇರುತ್ತದೆ. ತಾಲ್‌ಬ್‌ನ ಬಲಮೂಲೆಯಲ್ಲಿ ಕಲ್ಲಿನ ಒಂದು ಚಿಕ್ಕ ಕೊಠಡಿಯ ಮಾದರಿ ಇದೆ. ಅದರ ಒಳಗೆ ಪ್ರವೇಶಿಸಿದರೆ ಕೆಳಗೊಂದು ನೆಲಮಾಳಿಗೆ ರೀತಿ ಇದೆ. ಯಾವುದಕ್ಕಾಗಿ ಇದರ ರಚನೆಯಾಗಿತ್ತು ಎಂಬುದು ಗೊತ್ತಾಗದಿದ್ದರೂ ಅದು ತಾಲಾಬ್‌ಗೆ ಬರುವ ಜಲಮಾರ್ಗವಾಗಿದ್ದರಬಹುದೆಂದು ಊಹಿಸಬಹುದು.
ಬಹುತೇಕ ಹೂಳಿನಿಂದ ತುಂಬಿ ಹೋಗಿರುವ ಈ ನೆಲಮಾಳಿಗೆಯಲ್ಲಿ ಅಲ್ಲಲ್ಲಿ ಮಣ್ಣಿನ ಕೊಳವೆಯ ಅವಶೇಷ ದೊರಕುತ್ತದೆ. ನಗರದೊಳಗೆ ನೀರು ಬಂದ ನಂತರ ಕೋಟೆಯ ಒಳಗೆ ಅದನ್ನು ಸಂಗ್ರಹಿಸಲು ಚೌಕೋನಾಕಾರದ, ಸುಮಾರು ೨೫ ರಿಂದ ೪೦ ಅಡಿ ಎತ್ತರದ ಗೋಪುರಗಳನ್ನು ಕಟ್ಟಿದ್ದರು. ಆದಿಲ್‌ಶಾಹಿಗಳ ಚತುರಮತಿಯನ್ನು ಎಷ್ಟು ಹೊಗಳಿದರೂ ಸಾಲದೆಂಬುದು ಇದಕ್ಕಾಗಿಯೇ. ಬರೀ ಕೆರೆ, ಕೊಳವೆಗಳನ್ನು ಕಟ್ಟಿ ಬಿಟ್ಟಿದ್ದರೆ ಸಾಕಿತ್ತು. ಆದರೆ ಅಷ್ಟಕ್ಕೇ ಬಿಡಲಿಲ್ಲ. ಅದನ್ನೊಂದಿಷ್ಟು ಚೆಂದ ಮಾಡಿದರು. ಮೇಲೊಂದು ಗೋಪುರವನ್ನಿಟ್ಟರು. ನೋಡಿದರೆ ಮನೆ ಸೆಳೆಯುವಂತೆ, ಪೂಜ್ಯ ಭಾವನೆ ಬರುವಂತೆ ರೂಪಿಸಿದರು. ಇದರಿಂದ ನೀರಿನ ಮಾಲಿನ್ಯವನ್ನು ತಡೆದರು. ಇಷ್ಟೇ ಇದರ ಹಿಂದಿನ ಉದ್ದೇಶವಲ್ಲ ಎಂಬುದು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ. ಎತ್ತರದಲ್ಲಿರುವ ಈ ಗೋಪುರಗಳು ಹೂಳನ್ನು ತಡೆಯಲು ಸಹಾಯಕವಾಗಿವೆ. ಮಣ್ಣಿನ ಕೊಳವೆಗಳಲ್ಲಿ ಕೆಸರು ತುಂಬಿ ನೀರಿನ ಹರಿವಿಗೆ ಧಕ್ಕೆ ಬಾರದಂತೆ, ಕೊಳವೆಗಳ ಮುಖಾಂತರ ಕೊಳೆ ಕೆಸರು ಬಂದರೂ ಅದು ತಳಭಾಗದಲ್ಲಿ ಉಳಿದು ತಿಳಿ ನೀರು ಎತ್ತರದಿಂದ ವಿತರಣೆ ಆಗುವಂತೆ ಇದನ್ನು ರೂಪಿಸಲಾಗಿದೆ. ಈ ಗೋಪುರಕ್ಕೆ ಸಂಪರ್ಕವಿರುವ ನಾಲೆ ಇನ್ನೂ ಜೀವಂತವಿದೆ ಎಂಬುದಕ್ಕೆ ತೀರಾ ಇತ್ತೀಚೆಗೆ ಅದಕ್ಕೆ ನಲ್ಲಿ ಜೋಡಿಸಿ ನೀರು ಪಡೆಯುತ್ತಿರುವುದೇ ನಿದರ್ಶನ.
ಸದ್ಯಕ್ಕೆ ಸಣ್ಣ ನೀರಾವರಿ ಇಲಾಖೆಗೆ ಈ ಕೆರೆ ಸೇರಿದ್ದು ನಿರ್ವಹಣೆಯಿಲ್ಲದೇ ಬೇಸಿಗೆಯಲ್ಲಿ ಆರುತ್ತಿದೆ. ಈ ನಡುವೆ ಒಮ್ಮೆ ಹೂಳು ತೆಗೆಸಿದ ಶಾಸ್ತ್ರ ಮಾಡಿದ್ದರೂ ಒಟ್ಟು ೨೩-೩೫ ಮಿಲಿಯನ್ ಕ್ಯುಸೆಕ್ ಸಾಮರ್ಥ್ಯವಿರುವ ಜಲಕೊಂಡದ ಪೂರ್ಣ ಪ್ರಯೋಜನ ಪಡೆದುಕೊಳ್ಳಾಗುತ್ತಿಲ್ಲ. ಇನ್ನೂ ನಗರ ವ್ಯವಸ್ಥೆಯ ಅಪಸವ್ಯಗಳು ಕೆರೆಯನ್ನು ಕುಲಗೆಡಿಸುತ್ತಿಲ್ಲ ಎಂಬುದೇ ಸಮಾಧಾನದ ಸಂಗತಿ.
ಏನೇ ಆದರೂ ಬಾವಡಿಗಳಂತೆಯೇ ತಾಲಾಬ್‌ಗಳ ಮಹತ್ವದ ಬಗ್ಗೆಯೂ ನಿರ್ಲಕ್ಷ್ಯ ಮನೆ ಮಾಡಿದ್ದು ಸತ್ಯ. ಯಾವರೀತಿಯಿಂದಲೂ ಸುಸ್ಥಿರವಲ್ಲದ, ಅಂತರ್ಜಲವನ್ನು ಆರಿಸುತ್ತಿರುವ ಕೊಳವೆ ಬಾವಿಗಳು, ಸಾವಿರಾರು ಕೋಟಿ ರೂ. ಸುರಿದು ರೂಪಿಸುವ ಅವೈಜ್ಞಾನಿಕ ನೀರಾವರಿ ಯೋಜನೆಗಳನ್ನು ಅವಲಂಬಿಸುವ ಬದಲು ಇಂಥ ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆಯ ಬಗೆಗಿನ ಅನಾದರ ಬಿಟ್ಟು, ಸಂರಕ್ಷಿಸಿಕೊಳ್ಳುವ ಆ ಮೂಲಕ ಮುಂದಿನ ತಲೆಮಾರಿಗೆ ಮಹದುಪಕಾರ ಮಾಡುವ ಬುದ್ಧಿ ನಮಗೆ ಬಂದರೆ ಅಷ್ಟು ಸಾಕು. ನೀರಿನ ವಿಚಾರದಲ್ಲಿ ಅದಕ್ಕಿಂತ ದೊಡ್ಡ ಕಾರ್ಯ ಮತ್ತೊಂದಿಲ್ಲ.

‘ಲಾಸ್ಟ್’ಡ್ರಾಪ್:
ನೀರನ್ನು ಕಂಡು ಉಲ್ಲಸಿತನಾಗದ ಜೀವಿ ಈ ಭೂಮಿಯ ಮೇಲೆ ಇಲ್ಲ. ಎಂಥ ರಚ್ಚೆ ಹಿಡಿದ ಮಗುವನ್ನೂ ಒಮ್ಮೆ ನೀರ ಬಳಿ ಕರೆದೊಯ್ದು ನಿಲ್ಲಿಸಿ. ಅದು ಅಳು ನಿಲ್ಲಿಸದಿದ್ದರೆ ದೇವರಾಣೆ. ಅದು ನೀರಿಗಿರುವ ಪ್ರೇಮ ಶಕ್ತಿ.

Friday, January 9, 2009

ಬಾಡಿವೆ ಬಾವಡಿ: ಸಂರಕ್ಷಣೆಗೆ ಈಗಲಾದರೂ ಗಮನ ಕೊಡಿ


ಮ್ಮ ತಲೆಮಾರಿನ ಮಂದಿಗೆ ಏನಾಗಿದೆ ಎಂಬುದೇ ಅರ್ಥವಾಗುವುದಿಲ್ಲ. ಶತಮಾನಗಳಿಂದ ನಲುಗದೇ ನಿಂತಿದ್ದ ಅತ್ಯಪೂರ್ವ ಜಲನಿಯೊಂದರ ಬಗೆಗಿನ ನಮ್ಮ ದಿವ್ಯ ನಿರ್ಲಕ್ಷ್ಯವನ್ನು ಕಂಡಾಗ ಇಂಥದ್ದೊಂದು ವಿಷಾದದ ಸ್ವರ ತಂತಾನೇ ಹೋರಬೀಳುತ್ತದೆ.
ಇದನ್ನು ಏನೆಂದು ಅರ್ಥೈಸಬೇಕು ? ನಿರ್ಲಕ್ಷ್ಯವೋ, ನಿರ್ಲಜ್ಜತನವೋ, ನೀರ ನಿರಕ್ಷರತೆಯೋ? ಅಂತೂ, ತೀರಾ ಇತ್ತೀಚೆಗೆ ಅಂದರೆ ಕೇವಲ ಒಂದು ದಶಕದಲ್ಲಿ ನಾಡಿನ ಅನರ್ಘ್ಯ ರತ್ನ ವಿಜಾಪುರದ ಬಾವಡಿಗಳು ಅಕ್ಷರಶಃ ಬಾಡಿಹೋಗಲಾರಂಭಿಸಿವೆ. ಇದನ್ನು ಹೀಗೆ ಹೇಳಿದರೆ ಅರಿವಾಗುವುದಿಲ್ಲ. ಈ ಯುಗದಲ್ಲಿ ಅಂಥದೊಂದರ ಮರು ನಿರ್ಮಾಣ ಸಾಧ್ಯವೇ ಇಲ್ಲವೆಂಬ ಸನ್ನಿವೇಶದಲ್ಲಿ ಬಾವಡಿಗಳ ದುಸ್ಥಿತಿಯನ್ನು ಕಣ್ಣಾರೆ ಕಂಡರೆ ನಮ್ಮ ಅಜ್ಞಾನದ ಬಗ್ಗೆಯೇ ಮರುಕ ಹುಟ್ಟದಿರದು.
ವಿಜಾಪುರದ ದೊಡ್ಡ ಬಾವಡಿಗಳ ಪೈಕಿ ಚಾಂದ್ ಬಾವಡಿಯ ಮುಂದೆ ಹೋಗಿ ನಿಂತು ‘ಇದು ನಮ್ಮ ಐತಿಹಾಸಿಕ ನಿರ್ಮಾಣಗಳಲ್ಲಿ ಒಂದು. ಇಡೀ ನಗರಕ್ಕೆ ಇಲ್ಲಿಂದ ನೀರು ಪೂರೈಕೆಯಾಗುತ್ತಿತ್ತು. ಆದಿಲ್‌ಶಾಹಿ ಅರಸರ ದೂರದೃಷ್ಟಿ ಹಾಗೂ ಕ್ರೀಯಾಶೀಲತೆಗೆ ಇದು ಮಾದರಿ’ ಎಂಬರ್ಥದ ವ್ಯಾಖ್ಯಾನ ಕೊಡಲು ಮುಂದಾಗಿ ನೋಡೋಣ. ಖಂಡಿತಾ ಮೊದಲ ಬಾರಿಗೆ ಅದನ್ನು ಸಂದರ್ಶಿಸುತ್ತಿರುವವರ ಮುಖದಲ್ಲಿ ಪುಟ್ಟ ವ್ಯಂಗ್ಯ ಮಿಶ್ರಿತ ನಗೆ ತೇಲಿ ಹೋಗದಿದ್ದರೆ ಕೇಳಿ. ತಪ್ಪು ಸಂದರ್ಶಕರದ್ದಲ್ಲ. ಹಾಗೆಯೇ ಇದೆ ಇಂದಿನ ಚಾಂದ್ ಬಾವಡಿಯ ಸ್ಥಿತಿ. ಪಕ್ಕಾ ಪಾಲಿಕೆಯ ಕಸದ ತೊಟ್ಟಿ. ಒಂದು ಕಾಲದಲ್ಲಿ ತಿಳಿ ನೀರ ಕೊಳವಾಗಿ ಥಳಥಳಿಸುತ್ತಿದ್ದ ಬಾವಡಿಯಲ್ಲಿಂದು ಕಸ, ಕಡ್ಡಿ ಆದಿಯಾಗಿ ಸುತ್ತಲಿನ ಎಲ್ಲ ತ್ಯಾಜ್ಯ, ಹೊಲಸು ತುಂಬಿ ತುಳುಕುತ್ತಿದೆ. ಮೂರು ಶತಮಾನಗಳ ಕಾಲ ಜೀವಂತಿಕೆಯ ಸಂಕೇತವಾಗಿ ಹೆಮ್ಮೆಯಿಂದ ಬೀಗುತ್ತಿದ್ದ ನಿರ್ಮಾಣ ಕೊನೆಗೂ ದಿನ ಎಣಿಸುವ ಸ್ಥಿತಿಗೆ ಬಂದಿದ್ದರೆ ಅದು ನಾವೇ ಮಾಡುತ್ತಿರುವ ಕಗ್ಗೊಲೆ.
ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕಾಗಿದ್ದ, ಮುಂದಿನ ಹಲವು ತಲೆಮಾರುಗಳವರೆಗೆ ಅದನ್ನು ಕಾಪಿಟ್ಟು ಹೋಗಬೇಕಿದ್ದ ನಮ್ಮ ಸೋದರರೇ ಅದರ ಮೇಲೆ ಮನಬಂದಂತೆ ಅತ್ಯಾಚಾರವೆಸಗುತ್ತಿರುವಾಗಲೂ ಒಂದು ಪುಟ್ಟ ವಿಷಾದದ ಛಾಯೆಯೂ ನಮ್ಮ ಮನದಲ್ಲಿ ಸುಳಿದುಹೋಗುತ್ತಿಲ್ಲ ಎಂದರೆ ಅದೆಷ್ಟು ಭಂಡತನಕ್ಕೆ ಬಿದ್ದಿದ್ದೇವೆಂಬುದನ್ನು ಕಲ್ಪಿಸಿಕೊಳ್ಳಿ. ಅನುಮಾನವೇ ಇಲ್ಲ. ಇಷ್ಟಕ್ಕೆಲ್ಲ ಕಾರಣ ನಮ್ಮ ಮನೋಭಾವ. ಮನೆಯ ಬಾವಿಯನ್ನು ಮುಚ್ಚಿ ಬೋರ್‌ವೆಲ್‌ಗಳನ್ನು ಕೊರೆಯುತ್ತಿರುವಾಗ, ಕೆರೆಗಳನ್ನು ಕಂತಿಸಿ ಬಡಾವಣೆಗಳನ್ನು ಎಬ್ಬಿಸುತ್ತಿರುವಾಗ, ಹರಿಯುವ ನದಿ, ನಾಲೆಗಳನ್ನು ನಾಚಾರೆಬ್ಬಿಸಿಬಿಡುತ್ತಿರುವಾಗ ಬಾವಡಿಗಳಂಥವುಗಳ ಮೌಲ್ಯವಾದರೂ ಹೇಗೆ ಅರ್ಥವಾದೀತು ?
ವಾಸ್ತುಶಿಲ್ಪದ ದೃಷ್ಟಿಯಿಂದ ಅತ್ಯಂತ ಮಹತ್ವವೆನಿಸುವ ಬಾವಡಿಗಳು ಅದೊಂದೇ ಕಾರಣಕ್ಕೆ ಸಂರಕ್ಷಣೀಯ ಎನಿಸಿಕೊಳ್ಳುವುದಿಲ್ಲ. ಒಂದಿಡೀ ಆಡಳಿತಾವಯಲ್ಲಿನ ನೀರಾವರಿ ವ್ಯವಸ್ಥೆ, ಯಾವಜ್ಜೀವ ಜಲ ಸಂರಕ್ಷಣಾ ಪಾಠವಾಗಿ ಅವು ನಿಂತಿವೆ. ಎಲ್ಲಿ ಬಿದ್ದ ನೀರು ಎಲ್ಲಿಗೆ ಹರಿದು ಹೋದೀತು; ಎಲ್ಲಿ ಅದನ್ನು ಹಿಡಿದಿಟ್ಟುಕೊಂಡರೆ ಜೀವವ ಪೊರೆದೀತು; ಎಲ್ಲಿಂದೆಲ್ಲಿಗೆ ನೀರ ಸಂಪರ್ಕವನ್ನು ಕಲ್ಪಿಸಿದರೆ ಸುಸ್ಥಿರ ವ್ಯವಸ್ಥೆಯಾಗಿ ಉಳಿದೀತು ಎಂಬಿತ್ಯಾದಿ ಅತಿ ಸೂಕ್ಷ್ಮ ತಂತ್ರಜ್ಞಾನವನ್ನು ಆದಿಲ್‌ಶಾಹಿ ಅರಸರು ಬಾವಡಿಗಳ ಮೂಲಕ ಕಟ್ಟಿ ಕೊಟ್ಟಿದ್ದರು. ಅಂದು-ಇಂದಿನ ಪ್ರಶ್ನೆಯಲ್ಲ, ಎಂದೆಂದಿಗೂ ಅನ್ವಯವಾಗಬಲ್ಲ ಜಲ ಸಂರಕ್ಷಣಾ ಶಾಸ್ತ್ರವೊಂದನ್ನು ಅಳಿಸಿಹೋಗದಂಥ ಅಕ್ಷರಗಳಲ್ಲಿ ಬಾವಡಿಗಳೆಂಬ ಹೆಸರಲ್ಲಿ ಮೂಡಿಸಿಕೊಟ್ಟಿದ್ದರು. ಆದರೇನು ಪ್ರಯೋಜನ ? ಅಂಥದನ್ನು ಅಳಿಸಲೇಬೇಕೆಂಬ ಹಠಕ್ಕೆ ಬಿದ್ದವರಂತೆ ವರ್ತಿಸುತ್ತಿದ್ದೇವೆ. ವ್ಯಾಘ್ರ ನಖಕ್ಕೆ ಸಿಲುಕಿದ ಮಿಕ ನಲುಗದೇ ಉಳಿದೀತೇ ? ಸಾಕ್ಷೀಪ್ರಜ್ಞೆಯನ್ನೇ ಕಳೆದುಕೊಂಡ ಅಸ್ವಸ್ಥ ಮನಸ್ಸೊಂದಕ್ಕೆ ಎಂದಿಗೂ ಮಾನವೀಯತೆಯ ಬೋಧನೆ ರುಚಿಸುವುದಿಲ್ಲ. ಬಾವಡಿಗಳ ಸಂರಕ್ಷಣೆಯ ಬಗೆಗೆ ಹೇಳ ಹೊರಟರೆ ಬಹುಶಃ ನೂರಕ್ಕೆ ನೂರು ಇದೇ ಆದೀತು.
ಅವಾದರೂ ಒಂದೆರಡು ದಿನಗಳಲ್ಲಿ ನಿರ್ಮಾಣವಾದದ್ದಲ್ಲ. ಅಷ್ಟಕ್ಕೂ ಅವು ಕೇವಲ ಕಲ್ಲು ಮಣ್ಣುಗಳಿಂದಾದ ನಿರ್ಜೀವ ಕಟ್ಟಡವಲ್ಲ. ಒಂದೊಂದಕ್ಕೂ ಒಂದೊಂದು ಹಿನ್ನೆಲೆಯಿದೆ. ಒಂದೊಂದರ ಮುಂದೆ ಹೋಗಿ ನಿಂತರೂ ಒಂದೊಂದು ಕಥೆ ಬಿಚ್ಚಿಕೊಳ್ಳುತ್ತದೆ. ಪ್ರೀತಿಯ ಮಡದಿಯ ಮರೆಯಲಾಗದೇ ಮಂದಿಗೆ ಆಕೆಯ ಹೆಸರಲ್ಲಿ ತಂಪೆರೆಯಲು ನಿರ್ಧರಿಸಿದ್ದರಬಹುದು, ಜೀವನದಲ್ಲಿ ಹೊಸ ಜೀವವೊಂದು ಮೂಡಿಸಿದ ಸಂತೃಪ್ತಿಯ ಫಲವಾಗಿ ಸತ್ಕಾರ್ಯಕ್ಕೆ ಮನ ಮಾಡಿದ್ದಿರಬಹುದು, ಅನಿರೀಕ್ಷಿತವಾಗೆರಗಿದ ಆಘಾತದ ಸಂದರ್ಭದಲ್ಲಿ ಅಲ್ಲೋಲಕಲ್ಲೋಲಗೊಂಡ ಮನಕ್ಕೆ ಪುಟ್ಟ ಸಂತೈಕೆಯಾಗಿ ಬಾವಡಿಗಳು ನಿಂತಿದ್ದಿರಬಹುದು, ಆಡಳಿತಾರೂಢರ ಕರ್ತವ್ಯದ ಭಾಗವಾಗಿ, ಆಳ್ವಿಕೆಗೊಳಗಾದವರ ಆಗ್ರಹದ ಮೇರೆಗೆ, ಅಗತ್ಯ, ಅನಿವಾರ್ಯತೆ.... ಹೀಗೆ ಕಾರ್‍ಯಕಾರಣಗಳು ಏನೇ ಇದ್ದರೂ ಆದಿಲ್‌ಶಾಹಿಗಳು ಕಟ್ಟಿ ನಿಲ್ಲಿಸಿದ ಬಾವಡಿಗಳು ಮಾತ್ರ ಉದ್ದೇಶವನ್ನು ಮೀರಿ ಸಾರ್ಥಕ್ಯವನ್ನು ಮೆರೆದಿವೆ ಎಂಬುದು ಸತ್ಯ.
ಇಂಥ ಭಾವಖನಿಗಳನ್ನು ಇಷ್ಟು ನಿರ್ಭಾವುಕವಾಗಿ ನಾವು ಉಸಿರುಕಟ್ಟಿಸಿ ಕೊಲ್ಲುತ್ತಿದ್ದೇವೆಂದರೆ ಆಧುನಿಕತೆಯ ಕುಳಿರ್ಗಾಳಿಗೆ ಸಿಲುಕಿ ಮನಸುಗಳು, ಅದರೊಳಗಣ ವಿವೇಚನೆ, ಪ್ರಜ್ಞೆ, ಪ್ರಯತ್ನಶೀಲತೆಗಳು ಅದೆಷ್ಟು ಮರಗಟ್ಟಿಹೋಗಿದ್ದಿರಬಹುದು ?
ತಾಜ್‌ಬಾವಡಿ, ಚಾಂದ್‌ಬಾವಡಿ ಮತ್ತು ಇಬ್ರಾಹಿಂಪುರ ಬಾವಡಿ. ವಿಜಾಪುರ ಹೆಸರು ಹೇಳಿಸುವ ಮೂರು ಮುತ್ತುಗಳು. ಇದ್ದುದರಲ್ಲಿ ಇಬ್ರಾಹಿಂಪುರ ಬಾವಡಿ, ಲಂಗರ್ ಬಾವಡಿ, ಅಜಗರ್ ಬಾವಡಿ, ಮುಖಾರಿ ಮಸ್ಜಿದ್ ಬಾವಡಿ, ಮಾಸ್ ಬಾವಡಿ ಸ್ವಲ್ಪಮಟ್ಟಿಗೆ ಸುಸ್ಥಿತಿಯಲ್ಲಿವೆ ಎನ್ನಬಹುದು. ಇವುಗಳಲ್ಲಿ ಒಂದಷ್ಟು ನಿಸ್ವಾರ್ಥಿ ಜಲಚರಗಳು ಜೀವಂತವಾಗಿವೆ ಎಂಬ ಕಾರಣಕ್ಕೆ ಇಲ್ಲಿನ ನೀರು ಬಳಕೆಯೋಗ್ಯವೆನಿಸುತ್ತಿವೆ.
ಇಷ್ಟಕ್ಕೂ ಅಷ್ಟು ವರ್ಷದಿಂದ ದಿಟ್ಟವಾಗಿ ನಿಂತಿದ್ದ ಬಾವಡಿಗಳ ಬುಡದಲ್ಲಿ ಇಂದು ಆಗುತ್ತಿರುವುದೇನು ? ಯಾರೋ ಹೊರಗಿನಿಂದ ದಂಡೆತ್ತಿ ಬಂದು ದರಿದ್ರ ಸ್ಥಿತಿಯನ್ನು ಇಲ್ಲಿ ನಿರ್ಮಾಣ ಮಾಡುತ್ತಿಲ್ಲ. ಅಸೀಮ ಅಲಕ್ಷ್ಯ ಒಂದೆಡೆಯಾದರೆ ಅರಿವಿನ ಕೊರತೆ ಇನ್ನೊಂದೆಡೆ. ಬಾವಡಿಗಳ ಬುಡದಲ್ಲಿದ್ದವರೇ ದರೊಳಗಣ ನೀರನ್ನು ಬಗ್ಗಡಗೊಳಿಸುತ್ತಿದ್ದಾರೆ. ಒಂದು ಕಾಲದಲ್ಲಿ ಅತ್ಯಂತ ಪವಿತ್ರ ತಾಣವಾಗಿ ಗುರುತಿಸಿಕೊಂಡಿದ್ದ ಬಾವಡಿಯ ಸನ್ನಿಯಲ್ಲೇ ಇಂದು ಎಲ್ಲ ‘ಮಹತ್ಕಾರ್ಯ’ಗಳೂ ನಡೆಯುತ್ತಿವೆ ಎಂದರೆ ಇಂಥ ತಿಳಿಗೇಡಿತನಕ್ಕೆ ಏನೆನ್ನಬೇಕು.
ಅಲ್ಲಿಯೇ ಪಾತ್ರೆ, ಬಟ್ಟೆ ತೊಳೆಯಲಾಗುತ್ತಿದೆ. ಬೆಳ್ಳಬೆಳಗ್ಗೆ ಹೋಗಿ ನೋಡಿದರೆ ಕೆಲ ಬಾವಡಿಗಳ ಸುತ್ತ ಚಣ್ಣ ಬಿಟ್ಟು ಸಣ್ಣ ಮಕ್ಕಳು ಓಡಾಡುತ್ತಿರುತ್ತಾರೆ ಎಂದರೆ ಪರಿಸ್ಥಿತಿಯ ಅರ್ಥ ಆಗಬಹುದು. ಮನೆಯಲ್ಲಿ ತುಂಬಿದ ಕಸದ ಬುಟ್ಟಿಯಿಂದ ಹಿಡಿದು ಗಣೇಶ ವಿಗ್ರಹಗಳ ವಿಸರ್ಜನೆಯವರೆಗೆ ಎಲ್ಲಕ್ಕೂ ಬಾವಡಿಗಳೇ ಬಳಕೆಯಾಗುತ್ತಿವೆ. ಅಪರೂಪಕ್ಕೊಮ್ಮೆ ನಗರಾಡಳಿತಕ್ಕೆ ಎಚ್ಚರಾಗಿ ಹೂಳೆತ್ತಿಸುವ ಶಾಸ್ತ್ರವೂ ನಡೆಯುತ್ತದಾದರೂ ನಿರ್ವಹಣೆಯ ಬಗ್ಗೆ ಮತ್ತದೇ ನಿರ್ಲಕ್ಷ್ಯ.
ಎಲ್ಲಕ್ಕಿಂತ ಹೆಚ್ಚಾಗಿ ಸದಾ ತುಂಬಿರುತ್ತಿದ್ದ ಬಾವಡಿಗಳ ನೀರಿನ ಮಟ್ಟ ಇತ್ತೀಚಿನ ದಿನಗಳಲ್ಲಿ ಕುಸಿಯುತ್ತಿದೆ. ಇದಕ್ಕೆ ಮುಖ್ಯ ಕಾರಣ, ಬಾವಡಿಗಳಿಗೆ ನೀರು ಹರಿದು ಬರುತ್ತಿದ್ದ ಮಾರ್ಗವೇ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಬಹುತೇಕ ಕಡೆಗಳಲ್ಲಿ ಒತ್ತುವರಿ ಬಾಸುತ್ತಿದೆ. ಗುಡ್ಡ, ಬಯಲುಗಳಿಂದ ನೀರನ್ನು ಬಾಚಿ ತಂದು ಬಾವಡಿಗಳಿಗೆ ಬಿಡುತ್ತಿದ್ದ ಸುರಂಗಳೂ ನಿರ್ವಹಣೆಯಿಲ್ಲದೇ ಸೊರಗಿವೆ. ಇಂಥ ಎಷ್ಟೋ ವ್ಯವಸ್ಥೆಗಳು ಕಳೆದು ಹೋಗಿದೆ. ಜತೆಗೆ ಬಾವಡಿಗಳ ಪಕ್ಕದಲ್ಲೇ ಬೋರ್‌ವೆಲ್ ರಕ್ಕಸರ ಹಾವಳಿ ಹೆಚ್ಚಿದೆ. ಅಂಗೈನಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಹುಡುಕುವುದು ಎಂದರೆ ಇದೇ ಏನು ? ನಮ್ಮನ್ನು ಕವಿದ ವಿಚಿತ್ರ ವಿಸ್ಮೃತಿ ಇನ್ನಾದರೂ ಸರೀಯದಿದ್ದಲ್ಲಿ ಬಾವಡಿಗಳು ನೆನಪಿನಲ್ಲಷ್ಟೇ ಉಳಿಯುವ ದಿನಗಳು ದೂರವಿಲ್ಲ.

‘ಲಾಸ್ಟ್’ ಡ್ರಾಪ್: ಪ್ರಪಂಚದ ಪ್ರೀತಿಯ ದ್ಯೋತಕವೆನಿಸಿದ ತಾಜ್‌ಮಹಲು ನಮಗೆ ಅತ್ಯಮೂಲ್ಯ. ಅಂಥದೇ ಪ್ರೀತಿಯ ಮತ್ತೊಂದು ಪ್ರತೀಕ ನಮ್ಮ ತಾಜ್ ಬಾವಡಿ ಬಗೆಗೇಕಿಲ್ಲ ಅಂಥ ಕಾಳಜಿ ?


Wednesday, January 7, 2009

ಶತಮಾನ ಕಳೆದರೂ ಬಾಡದ ಬಾವಡಿಗಳು

ಸೂಕ್ಷ್ಮ ಕುಸುರಿ, ಅಲ್ಲಿ ಮೆರೆದ ಜಾಣ್ಮೆ, ಆ ಕಟ್ಟಡದ ನಿರ್ಮಾಣದಲ್ಲಿನ ಅಚ್ಚುಕಟ್ಟುತನ, ಅಲ್ಲಿನ ತಂತ್ರಜ್ಞಾನ, ನೀರು ತುಂಬಿ ತುಳುಕುವ ಅದರ ಸೌಂದರ್ಯ, ಭವ್ಯ ನಿಲುವು, ಎಂಥವರನ್ನು ಹಿಡಿದು ನಿಲ್ಲಿಸುವ ವಿನ್ಯಾಸ...ಒಂದೇ ಎರಡೇ ? ವಿಜಾಪುರದ ಬಾವಡಿಗಳೆಂದರೆ, ಅವಕ್ಕೆ ಅವೇ ಸಾಟಿ.
ರಾಜ್ಯವನ್ನಾಳಿದ ಪ್ರಮುಖ ರಾಜಮನೆತನಗಳಲ್ಲೊಂದಾದ ಆದಿಲ್‌ಷಾಹಿ ಅರಸರ ಕಾಲದಲ್ಲಿ ಅತ್ಯಪೂರ್ವ ಕೊಡುಗೆಗಳಿವು. ಆಗಿನ ಕಾಲಕ್ಕೆ ಪ್ರಮುಖ ನೀರಿನ ಮೂಲವಾಗಿದ್ದವುಗಳು. ವಿಶೇಷವೆಂದರೆ ನಿರ್ಮಾಣಗೊಂಡ ದಿನ ತುಂಬಿ ನಿಂತ ಬಾವಡಿಗಳು ಮೂರು ನಾಲ್ಕು ಶತಮಾನಗಳ ನಂತರ ಇಂದಿಗೂ ಅದೇ ಪೂರ್ಣತೆಯನ್ನು ಕಾಯ್ದುಕೊಂಡಿದೆ.
ನೀರು ಪೂರೈಕೆ ಯಾವುದೇ ನಾಗರಿಕತೆಯ ಪ್ರಥಮ ಆದ್ಯತೆಯೆಂಬುದರಲ್ಲಿ ಎರಡನೇ ಮಾತಿಲ್ಲ. ಆದಿಲ್‌ಶಾಹಿಗಳು ವಿಜಾಪುರದಂಥ ನಗರ ಕಟ್ಟಿದಾಗಲೂ ಈ ಬಗ್ಗೆ ಸಹಜವಾಗಿಯೇ ಯೋಚಿಸಿ ಬಾವಡಿಗಳನ್ನು ಪರಿಚಯಿಸಿದರು. ಆದರೆ ಅದು ಕೇವಲ ನೀರು ಪೂರೈಕೆ ವ್ಯವಸ್ಥೆಯೊಂದೇ ಆಗಿರಲಿಲ್ಲ. ಬದಲಾಗಿ ತಮ್ಮ ಕ್ರಿಯಾಶೀಲತೆಯ ದ್ಯೋತಕವಾಗಿ ಇಂಥದ್ದೊಂದು ವ್ಯವಸ್ಥೆ ನಿಲ್ಲುವಂತೆ ಮಾಡಿದ್ದು ಮಾತ್ರವಲ್ಲ, ನಾಡಿನ ಸಾಂಸ್ಕೃತಿಕ ಕೇಂದ್ರವನ್ನಾಗಿ ಜಲ ಸನ್ನಿಯನ್ನು ಬದಲಿಸಿದರು. ಜಲ ಸಂಗ್ರಹಣೆಯ ಬಗೆಗೆ ಅವರಿಗಿದ್ದ ಬದ್ಧತೆ ಹಾಗೂ ಜ್ಞಾನ ಬೆರಗು ಮೂಡಿಸುವಂಥದ್ದು. ಇದರ ಪರಿಣಾಮವೇ ನೀರು ಪೂರೈಕೆಯ ತಾಣವೆಂಬುದು ಕೇವಲ ಜಡ ನಿರ್ಮಾಣವಾಗಿಯಷ್ಟೇ ಉಳಿಯದೇ ಸಕಲ ಜೀವಂತಿಕೆಯೂ ಅಲ್ಲಿ ಪ್ರತಿಫಲಿಸುವಂತೆ ನೋಡಿಕೊಂಡರು. ಹೀಗಾಗಿಯೇ ಬಾವಡಿಗಳು ಇಂದಿಗೂ ದೃಶ್ಯ ಸೌಂದರ್ಯದ ಖನಿಗಳಾಗಿ ಗಮನ ಸೆಳೆಯುತ್ತವೆ.
ನಗರದ ಹೃದಯ ಭಾಗಗಳಲ್ಲಿ ನಿರ್ಮಾಣಗೊಂಡು ಆಯಾಯಾ ಪ್ರದೇಶಗಳಿಗೆ ಅಲ್ಲಲ್ಲೇ ನೀರು ಪೂರೈಸಲು ಅನುಕೂಲವಾಗುವಂತೆ ಬಾವಡಿಗಳನ್ನು ಯೋಜಿಸಲಾಗಿದೆ. ಇಂಥ ಬಾವಡಿಗಳಿಗೆ ನೀರು ಬಂದು ಸೇರುವ ಪರಿಯೇ ರೋಚಕ. ಊರ ಹೊರಗಿನ ತ್ತರದ ಪ್ರದೇಶ, ಬಯಲು, ಗುಡ್ಡ-ಮೇಡುಗಳಲ್ಲಿ ಬಿದ್ದ ಮಳೆ ನೀರು ವ್ಯರ್ಥವಾಗದೇ ಸುರಂಗಗಳ ಮೂಲಕ ಲ್ಲಿಗೆ ಬಂದು ಸೇರುತ್ತದೆ. ಇಲ್ಲಿಂದ ಮತ್ತೆ ಭೂಗತ ಕಾಲುವೆಗಳಲ್ಲಿ ಒತ್ತಡ ಬಳಸಿ ಜನಜೀವನಕ್ಕೆ ಪೂರೈಸಲಾಗುತ್ತಿತ್ತು.
ವಿಜಾಪುರ ನಗರದಲ್ಲಿ ಇಂದಿಗೂ ಸಣ್ಣ ಪುಟ್ಟವುಗಳು ಸೇರಿ ೩೦ಕ್ಕೂ ಹೆಚ್ಚು ಬಾವಡಿಗಳು ಅಸ್ತಿತ್ವದಲ್ಲಿವೆ. ಈ ಪೈಕಿ ತಾಜ್ ಬಾವಡಿ ಹಾಗೂ ಚಾಂದ್ ಬಾವಡಿ, ಇಬ್ರಾಹಿಂ ಬಾವಡಿಗಳು ಪ್ರಮುಖ. ಆಕಾರ ಹಾಗೂ ಸೌಂದರ್ಯದ ದೃಷ್ಟಿಯಿಂದಲೂ ಇವಕ್ಕೆ ವಿಶಿಷ್ಟ ಸ್ಥಾನ. ದರಲ್ಲೂ ತಾಜ್ ಬಾವಡಿಯೆಂದರೆ ಅದು ಸುಂದರ ಕಾವ್ಯ. ವಾಸ್ತು ಭಿನ್ನತೆಯಿಂದ ಬೇರೆ ಬೇರೆ ಹೆಸರಿನಿಂದ ಇಲ್ಲಿನ ಬಾವಡಿಗಳನ್ನು ಗುರುತಿಸಲಾಗುತ್ತದೆ. ಇಬ್ರಾಹಿಂಪುರ ಬಾವಡಿ, ನಗರ್ ಬಾವಡಿ, ಮಾಸ್ ಬಾವಡಿ, ಆಲಿಖಾನ್ ಬಾವಡಿ, ಚಾಂದ್ ಬಾವಡಿ, ಅಗಜರ್ ಬಾವಡಿ, ದೌಲತ್ ಕೋಠಿ ಬಾವಡಿ, ಬಸ್ರಿ ಬಾವಡಿ, ಸಂದಲ್ ಬಾವಡಿ, ಮುಖಾರಿ ಮಸ್ಜಿದ್ ಬಾವಡಿ, ಸೋನಾರ್ ಬಾವಡಿ... ಹೀಗೆ ಮಂದಿಯ ಬದುಕಿನ ಅವಿಭಾಜ್ಯ ಅಂಗವಾಗಿ ಒಂದೊಂದೂ ಗುರುತಿಸಿಕೊಂಡಿವೆ. ಬಹುಶಃ ಬಾವಡಿಗಳಿಲ್ಲದ ವಿಜಾಪುರವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ನಮ್ಮ ಬಾವಿಗಿಂಥ ತ್ಯಂತ ಭಿನ್ನ ರಚನೆಯನ್ನು ಬಾವಡಿಗಳು ಹೊಂದಿರುತ್ತವೆ. ಬಾವಿಯಂತೆ ಇವು ವೃತ್ತಾಕಾರದಲ್ಲಿರುವುದಿಲ್ಲ. ಬಾರೀ ಆಳವೂ ಇರವುದಿಲ್ಲ. ಕೆರೆ, ಬಾವಿ, ಕಟ್ಟೆ, ಕೊಳ, ಸರೋವರ ಹೀಗೆ ಎಲ್ಲಕ್ಕಿಂಥ ಭಿನ್ನವಾದ ಬಾವಡಿಗಳಿಗೆ ಇಂಥ ವೈಶಿಷ್ಟ್ಯ ದಗಿಸಿಕೊಟ್ಟದ್ದು ಅದರ ವಾಸ್ತು ರಚನೆ. ಬಹುತೇಕ ಚೌಕಾಕಾರದಲ್ಲಿರುವ ಬಾವಡಿಯನ್ನು ನೋಡಿದರೆ ಹೊರಗಿನಿಂದ ಮಂದಿರದಂತೆ ಭಾಸವಾಗುತ್ತದೆ. ಸುತ್ತಲೂ ಗೋಡೆಗಳಿರುತ್ತವೆ. ಇದಕ್ಕೆ ಹೊಂದಿಕೊಂಡಂತೆ ಮುಂಭಾಗದಲ್ಲಿ ಕುಸುರಿಯನ್ನೊಳಗೊಂಡ ಪ್ರವೇಶ ಕಮಾನಿರುತ್ತದೆ. ಅದರ ಎರಡೂ ಮಗ್ಗುಲಿಗೆ ಪುಟ್ಟ ಕಾವಲು ಕೊಠಡಿಯಂಥ ಜಾಗವಿರುತ್ತದೆ. ಅದನ್ನು ದಾಟಿ ಒಳ ಪ್ರವೇಶಿಸಿದರೆ ಸುತ್ತಲೂ ಆವರಣ. ಅದರ ನಂತರ ನೀರಿಗಿಳಿಯಲು ಅನುಕೂಲವಾಗುವಂತೆ ನಾಲ್ಕೂ ಭಾಗದಲ್ಲಿ ಮೆಟ್ಟಿಲುಗಳಿರುತ್ತವೆ. ಒಂದು ರೀತಿಯಲ್ಲಿ ಬಾವಡಿಗಳ ಕೇಂದ್ರಭಾಗ ಕಲ್ಯಾಣಿಯನ್ನು ನೆನಪಿಸುತ್ತದೆ. ಪ್ರವೇಶದ್ವಾರದ ಎದುರು ಇರುವ ಗೋಡೆಯಲ್ಲಿ ಸುಂದರ ಕಮಾನುಗಳು, ಕುಸುರಿ ಕೆತ್ತನೆಯ ಕೆಲಸ ಕಂಡುಬರುತ್ತವೆ. ಎಲ್ಲವೂ ಹೀಗೆಯೇ ಇದ್ದು ಬಿಡುತ್ತದೆ ಎನ್ನಲು ಬಾರದಿದ್ದರೂ ಒಟ್ಟಾರೆಯಾಗಿ ಬಹುತೇಕ ಬಾವಡಿಗಳ ರಚನೆ ಹೀಗೆಯೇ. ಆದರೂ ಪ್ರತಿಯೊಂದರಲ್ಲೂ ಒಂದಲ್ಲಾ ಒಂದು ಕ್ರಿಯಾಶೀಲ ಪ್ರಯೋಗವನ್ನೂ ಮಾಡಿಯೇ ಮಾಡಿರಲಾಗಿರುತ್ತದೆ.
ಇಂಥ ಬಾವಡಿಗಳ ನಿರ್ಮಾಣಕ್ಕೂ ಒಂದು ನಿಮಿತ್ತ ಇತಿಹಾಸವಿರುವುದು ವಿಶೇಷ. ಚಾಂದ್ ಬಾವಡಿಯನ್ನು ಕ್ರಿ.ಶ. ೧೫೪೯ರಲ್ಲಿ ಆಲಿ ಆದಿಲ್ ಷಾ ತನ್ನ ರಾಣಿ ಚಾಂದ್‌ಬೀಬಿಯ ಗೌರವಾರ್ಥ ಕಟ್ಟಿಸಿದನೆನ್ನುತ್ತದೆ ಇತಿಹಾಸ. ವಿಜಾಪುರ ನಗರದ ‘ಶಹಪುರ ಅಗಸಿ’ಯ ಸಮೀಪವೇ ನಿರ್ಮಾಣಗೊಂಡಿರುವ ಇದು ೧೪೪ ಅಡಿ ಅಗಲ ೧೫೬ ಅಡಿ ಉದ್ದವಿದೆ. ಬಹುತೇಕ ಚಚ್ಚೌಕ. ಸುತ್ತಲೂ ಕಲ್ಲಿನ ಮೆಟ್ಟಿಲುಗಳನ್ನು ಕಟ್ಟಿದ್ದು, ಮೇಲೆ ವಿಸ್ತಾರವಿದ್ದು ಕಳೆಗೆ ಹೋಗುತ್ತ ಕಿರಿದಾಗಿದೆ. ಆರಂಭದಲ್ಲಿ ದೊಡ್ಡ ಕಮಾನಿದೆ. ಅಲ್ಲದೇ ಇತರ ಮೂರು ಕಡೆ ಚಿಕ್ಕ ಚಿಕ್ಕ ಕಮಾನುಗಳಿವೆ. ನೀರಿನ ಸುತ್ತಲೂ ನಾಲ್ಕು ಅಡಿ ಅಗಲದ ಹಜಾರವಿದೆ.
ಚಾಂದ್ ಬಾವಡಿಯ ನಂತರದ ಶತಮಾನದಲ್ಲಿ ನಿರ್ಮಾಣಗೊಂಡದ್ದು ತಾಜ್ ಬಾವಡಿ. ಎರಡನೆಯ ಇಬ್ರಾಹಿಂ ಆದಿಲ್‌ಷಾ ಪತ್ನಿ ತಾಜ್ ಸುಲ್ತಾನಳ ಹೆಸರಿನಲ್ಲಿ ಕ್ರಿ.ಶ. ೧೬೯೦ರಲ್ಲಿ ಇದು ತಲೆ ಎತ್ತಿತು. ಬಾವಡಿಗಳ ಸಾಮ್ರಾಟನಂತಿರುವ ಇದರ ಗಾತ್ರ, ಸೌಂದರ್ಯ ಮತ್ತು ಭವ್ಯತೆಗೆ ಇನ್ನೊಂದು ಸಮ ಇಲ್ಲ. ನಗರದ ಮುಖ್ಯ ಭಾಗದಲ್ಲಿರುವ ಇದಕ್ಕೆ ೩೫ ಅಡಿ ಎತ್ತರದ ಭವ್ಯ ಕಮಾನು ಸ್ವಾಗತ ಕೋರುತ್ತದೆ. ಎರಡೂ ಕಡೆ ಗೋಪುರಗಳಿವೆ. ಬಾವಡಿಯ ಒಳಭಾಗದ ಹಿಂದಿನ ಗೋಡೆಗೆ ಹೊಂದಿಕೊಂಡಂತೆ ವಿಶಾಲ ಹಜಾರವಿದೆ. ಉಳಿದ ಮೂರು ಬದಿ ಓಡಾಡಲು ಅನುಕೂಲವಾಗುವಂಥ ವಿಸ್ತಾರದ ಪ್ರದೇಶ ಹಾಗೂ ಪುಟ್ಟ ಪುಟ್ಟ ಕೊಠಡಿಯಂಥ ನಿರ್ಮಾಣವಿದೆ. ಇಲ್ಲಿ ಗ್ಯಾಲರಿಗಳನ್ನೂ ನಿರ್ಮಿಸಲಾಗಿದೆ. ಇಲ್ಲಿ ನಿಂತು ಇಡೀ ಬಾವಡಿಯನ್ನು ವೀಕ್ಷಿಸಬಹುದು. ಎರಡೂ ಮಗ್ಗುಲಿಗೆ ಮೆಟ್ಟಿಲುಗಳಿವೆ೧೨೦ ಅಡಿ ಉದ್ದ, ೧೦೦ ಅಡಿ ಅಗಲ ಹಾಗೂ ೫೩ ಅಡಿ ಆಳದ ಇದರ ಕೆತ್ತನೆ ಕೆಲಸವನ್ನು ಎಷ್ಟು ಹೊಗಳಿದರೂ ಸಾಲದು.
ಇಬ್ರಾಹಿಂ ಬಾವಡಿಯೂ ಭವ್ಯತೆಯ ದೃಷ್ಟಿಯಿಂದ ಕಡಿಮೆ ಏನೂ ಇಲ್ಲ. ಎಲ್ಲ ಬಾವಡಿಗಳೂ ಸುಂದರವಾಗಿಯೇ ಇದೆಯಾದರೂ ಕಾಲಮಾನದ ಬಗೆಗೆ ನಿಖರ ಮಾಹಿತಿ ಸಿಗುವುದಿಲ್ಲ. ಹಾಗೆ ನೋಡಿದರೆ ಈಗಿನದಕ್ಕಿಂತ ಹೆಚ್ಚಿನ ಜನಸಂಖ್ಯೆ ಆದಿಲ್‌ಶಾಹಿ ಆಡಳಿತ ಕಾಲದಲ್ಲಿದ್ದುದು ಕಂಡು ಬರುತ್ತದೆ. ಇಷ್ಟೆಲ್ಲಕ್ಕೂ ನೀರು ಪೂರೈಕೆಗೆ ಬಾವಡಿಗಳೇ ಆಧಾರವಾಗಿದ್ದವೂ ಎಂಬುದಂತೂ ಸ್ಪಷ್ಟ. ಇಂದಿಗೂ ಕೆಲ ಬಾವಡಿಗಳಿಂದ ನಗರಕ್ಕೆ ನೀರು ಸರಬರಾಜಾಗುತ್ತದೆ. ದುರಂತವೆಂದರೆ ಬಹುತೇಕ ಬಾವಡಿಗಳು ನಿರ್ಲಕ್ಷ್ಯಕ್ಕೊಳಗಾಗಿವೆ. ತಮ್ಮ ಸಹಜ ಸೌಂದರ್ಯ ಕಳೆದುಕೊಳ್ಳುತ್ತಿವೆ. ಆಧುನಿಕಾಸುರರು ಬಾವಡಿಗಳ ಮೌಲ್ಯವನ್ನೇ ಮರೆತಿದ್ದಾರೆ ಎಂಬುದಂತೂ ಸತ್ಯ.

‘ಲಾಸ್ಟ್’ ಡ್ರಾಪ್ : ನೀರೆಂದರೆ ಭಾವನೆಗಳ ಪ್ರವಾಹ. ಅದು ಬತ್ತಿದರೆ ಬದುಕಿಗೆ ಅರ್ಥವಿರದು.