Friday, December 18, 2009

ಕೋಟೆ ಕೆರೆ ನೀರನ್ನು ಪೇಟೆಗೆ ಹರಿಸುವ ಯತ್ನ

ದು ಯಾರ ಬಳಿ ಪಂಥಕ್ಕೆ ಬಿದ್ದಿತ್ತೋ ಗೊತ್ತಿಲ್ಲ. ಅಥವಾ ಹೀಗಿದ್ದರೂ ಇರಬಹುದು, ಯಾರೋ ತಮ್ಮ ಸೆಣಸಿಗೆ ಪಣವಾಗಿ ಅದನ್ನು ಇಟ್ಟು ಕಳೆದುಕೊಂಡುಬಿಟ್ಟಿದ್ದರೇನೋ. ಅಂತೂ ನೂರಾರು ವರ್ಷಗಳಿಂದ ಆ ಕಗ್ಗಾಡಿನಲ್ಲದು ದಿವ್ಯ ಅಜ್ಞಾತವನ್ನು ಅನುಭವಿಸುತ್ತ ಕುಳಿತು ಬಿಟ್ಟಿತ್ತು; ಹಾಗೆ ಸುಮ್ಮನೆ. ಯಾರೆಂದರೆ ಯಾರಿಗೂ ಒಂದು ಪುಟ್ಟ ಸುಳಿವನ್ನೂ ಬಿಟ್ಟುಕೊಡದೇ ಕುಳಿತ ಅದರ ಬದುಕು ಇನ್ನೇನು ಹಾಗೆಯೇ ಕಳೆದು ಹೋಗಿಬಿಡುತ್ತಿತ್ತೇನೋ. ಪುಣ್ಯಕ್ಕೆ ಒಂದಷ್ಟು ಕಥೆಗಳ ಹಂದರ ಅದರ ಸುತ್ತ ಬೆಳೆದು, ಬಾಯಿಂದ ಬಾಯಿಗೆ ದಾಟಿಕೊಳ್ಳುತ್ತ, ತಲೆಮಾರಿನಿಂದ ತಲೆಮಾರಿಗೆ ಹರಿದು ಬರುತ್ತಿತ್ತು. ದೊಡ್ಡವರಿಗೆ ಅದೊಂದು ಕುತೂಹಲ, ಚಿಕ್ಕವರಿಗೆ ಅದನ್ನು ಕಾಣುವ ಹಂಬಲ. ಆದರೆ, ಬಹಳಷ್ಟು ವರ್ಷಗಳಿಂದ ಸುತ್ತಮುತ್ತಲಿನ ಹಳ್ಳಿಗರ ಪಾಲಿಗೆ ಅದು ಕಾಡಿನ ಕುಸುಮವೇ ಆಗಿತ್ತು.

ಅದಕ್ಕೂ ಕಾರಣಗಳಿಲ್ಲದಿಲ್ಲ. ಮೊದಲೇ ಹೇಳಿ ಆಯಿತಲ್ಲ, ಆ ಕೆರೆ ಇದ್ದ ತಾಣವೇ ಅಂಥದ್ದು. ಯಾರಿಗೂ ಕಾಣದಂಥ, ಕಂಡರೂ ಕಾಣದೇ ಹೋಗುವಂಥ ಗೌಪ್ಯ ತಾಣದಲ್ಲಿ ಅದು ನಿರ್ಮಾಣಗೊಂಡದ್ದು. ಕೆರೆಗೆ ಹೋಗಬೇಕೆಂಬ ಕಾರಣಕ್ಕೇ ದುರ್ಗಮ ಹಾದಿಯನ್ನು ಸವೆಸಿ ಅಲ್ಲಿಗೆ ಉದ್ದಿಶ್ಯ ಹೋಗಬೇಕೇ ವಿನಾ, ಅದನ್ನು ಬಿಟ್ಟರೆ ಬೇರೆ ಯಾವ ಕಾರಣಕ್ಕೂ ಅದರ ಬಳಿ ಸುಳಿಯುವ ವ್ಯರ್ಥ ಸಾಹಸವನ್ನು ಯಾರೂ ಮಾಡಲಿಕ್ಕಿಲ್ಲ. ಹಾಗಿದ್ದರೆ ಬಹುಶಃ ಗುಡ್ಡದ ಮರುಕಲಲ್ಲಿ ಗುಂಡಿ ಬಿದ್ದ ಜಾಗದಲ್ಲಿ ತಂತಾನೇ ಒಂದಷ್ಟು ನೀರು ನಿಂತುಕೊಂಡು ನಿಸರ್ಗ ಸಹಜವಾಗಿ ಆ ಕೆರೆ ನಿರ್ಮಾಣಗೊಂಡಿರಬಹುದು ಎಂದುಕೊಳ್ಳಲು ಸುತ್ತಲ ಪರಿಸರ ನೋಡಿದರೆ ಹಾಗೆ ಭಾವಿಸಲು ಸಾಧ್ಯವೇ ಇಲ್ಲ.

ಅದಾದರೂ ಎಂಥಾ ಕೆರೆಯಂತೀರಾ ? ನಿರಾಭರಣ ಸುಂದರಿಯಾಗಿಯೂ ಮೊದಲ ನೋಟದಲ್ಲೇ ರಸಿಕರ ಕಣ್ಮನಗಳಿಗೆ ಲಗ್ಗೆ ಇಕ್ಕಿ ಹಿಡಿದಿಟ್ಟುಕೊಳ್ಳುತ್ತದೆ. ಅಂದ ಮೇಲೆ ಸಂಸ್ಕಾರರಹಿತವಾಗಿ ಎಲ್ಲೋ ಹಾದಿ ಬೀದಿಯಲ್ಲಿ ಬಿದ್ದು ಬೆಳೆದು ಬದುಕಿದ್ದ ಕೆರೆಯಂತೂ ಅಲ್ಲವೇ ಅಲ್ಲ. ಅದರ ಮೈಕಟ್ಟೇ ಹಾಗಿದೆ. ಇಣುಕಿದರೆ ಒಂದಳೆತೆಗೆ ಸುಲಭದಲ್ಲಿ ಸಿಗುವುದಂತೂ ಅಸಾಧ್ಯ. ಚತುರ್ಬಾಹುಗಳನ್ನೂ ಇಷ್ಟಗಲಕ್ಕೆ ಚಾಚಿಕೊಂಡು ಸುತ್ತಲ ಸಾಮ್ರಾಜ್ಯವನ್ನು ವ್ಯವಸ್ಥಿತವಾಗಿ ತನ್ನದಾಗಿಸಿಕೊಂಡಿದೆ. ಸುತ್ತ ಒಪ್ಪ ಓರಣವಾಗಿ ಕಲ್ಲು ಪಾವಟಿಕೆಗಳನ್ನು ನಿರ್ಮಿಸಿರುವುದನ್ನು ನೋಡಿದರೆ ಗತ ವೈಭವದ ಕಲ್ಪನೆ ತಂತಾನೇ ಮೂಡುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಶಿಂಗುಮನೆ ಹತ್ತಿರದ ಗುಡ್ಡದ ಮೇಲೆ ಮಲಗಿದ್ದ ಇಂತಿಪ್ಪ ಕೆರೆಯನ್ನು ಎಲ್ಲರೂ ಮರೆತುಬಿಟ್ಟಿದ್ದಾಗಲೇ ವಾಜಗೋಡು ಗ್ರಾಮಪಂಚಾಯಿತಿಯ ಅಧ್ಯಕ್ಷ ಡಿ.ಜಿ.ಹೆಗಡೆಯವರಿಗೆ ಅದೇನು ಪ್ರೇರಣೆಯಾಯಿತೋ ಏನೋ, ಅಂತೂ ಕೆರೆಯನ್ನೊಮ್ಮೆ ನೋಡಿ ಬರಲೇಬೇಕು ಎಂದುಕೊಂಡು ಹೊರಟುಬಿಟ್ಟರು. ಅಜ್ಞಾತಕ್ಕೆ ಕುಳಿತದ್ದು ಸುಲಭಕ್ಕೆ ಕಂಡೀತೇ? ಮೊದಲೇ ಹೇಳಿಯಾಗಿದೆಯಲ್ಲಾ ಅದಿರುವುದು ಕಾಡಿನ ನಟ್ಟನಡುವಿನಲ್ಲಿ, ಬೆಟ್ಟದ ತುತ್ತ ತುದಿಯಲ್ಲಿ ಅಂತ. ಅಷ್ಟನ್ನು ಹರಸಾಹಸ ಮಾಡಿ ಹತ್ತಿಳಿದು ಅಂತೂ ಕೆರೆಯ ಹುಡುಕಾಟಕ್ಕೆ ಬಿದ್ದವರು ಬೇಸತ್ತು ಹಿಂದಿರಬೇಕೆನ್ನುವಾಗಲೂ ಒಂದಷ್ಟು ಮರಮಟ್ಟುಗಳ ಜತೆ ಯಾರೋ ಕೂಕಾಟ ಆಡುತ್ತಿದ್ದ ಅನುಭವ. ಕೆರೆಯ ಬೆನ್ನು ಹತ್ತಿ ಹೋದವರಿಗೂ ಒಮ್ಮೆ ತಾವೂ ಕೂಗು ಹಾಕಿಬಿಡುವ ಪ್ರೇರಣೆ ಅದ್ಯಾಕಾಯಿತೆಂದರೆ ಆ ತಾಣ ಹಾಗಿದೆ ಸ್ವಾಮಿ. ಹಗಲು ಹನ್ನೆರಡರ ಹೊತ್ತಿಗೂ ಇನ್ನೇನು ಗವ್ವನೆ ಕವಿದುಕೊಳ್ಳುಲು ಕತ್ತಲೇ ಸಜ್ಜಾಗುತ್ತಿರುವಂತೆ ಕಂಡರೆ ಅದು ಸುತ್ತಲೂ ಬೆಳೆದ ದಟ್ಟ ಗಿಡಮರಗಳ ಅಪರಾಧವಲ್ಲ. ಕೊನೆಗೂ ಕೆರೆ ಹುಡುಕಿಕೊಂಡು ಹೋದ ವಾಜಗೋಡಿನ ಅಧ್ಯಕ್ಷರು ತಮ್ಮ ತಂಡದೊಂದಿಗೆ ಒಂದು ಕೂಗು ಹಾಕಿದ್ದೇ ತಡ, ಒಂದಕ್ಕೆ ಹತ್ತಾಗಿ, ಹತ್ತಕ್ಕೆ ಮತ್ತೆರ ಇಮ್ಮಡಿಯಾಗಿ ಪ್ರತಿಧ್ವನಿಸಬೇಕಿತ್ತು. ಆದರೆ ಕಾದದ್ದೇ ಬಂತು. ಅಂತ ಕೂಗು ಕತ್ತಲೆಯಲ್ಲಿ ಕಳೆದು ಹೋಯಿತು ಅನ್ನುವುದಕ್ಕಿಂತ ಎಲ್ಲೋ ಆಳದಲ್ಲಿ ಹುದುಗಿಹೋದ ಅನುಭವ.

ಒಂದು ಲೆಕ್ಕದಲ್ಲಿ ಒಳ್ಳೆಯದೇ ಆಯಿತು. ಹಾಗೆ ಧ್ವನಿ ಹುದುಗಿಹೋದದ್ದಾದರೂ ಎಲ್ಲಿ ಎನ್ನುವ ಮತ್ತೊಂದು ಹುಡುಕಾಟವೇ ಕೆರೆಯನ್ನು ಪತ್ತೆ ಮಾಡಿಬಿಡಬೇಕೇ ? ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿತು ಅಂತೇನೋ ಹೇಳುತ್ತಾರಲ್ಲಾ, ಹಾಗೆ ಹುಡುಕುತ್ತಿದ್ದ ಕೆರೆಯೇ ಧ್ವನಿಯನ್ನು ನುಂಗಿಕೊಂಡದ್ದೆಂದು ಅರಿವಾಗಲು ಹೆಗಡೆಯವರಿಗೆ ಹೆಚ್ಚು ಕಾಲ ಹಿಡಿಯಲಿಲ್ಲ. ಫಕ್ಕನೆ ಗುರುತು ಸಿಗುವಂತಿರಲಿಲ್ಲ ಅದು. ಎಂಥಾ ಸ್ಥಿತಿಗೆ ದು ಬಂದು ತಲುಪಿತ್ತೆಂದರೆ ಇದೇ ಕೆರೆಯೆಂದರೆ ಯಾರೂ ನಂಬುವುದೇ ಇಲ್ಲ. ಬೇಕಿದ್ದರೆ ಬಯಲೆನ್ನಿ, ತಗ್ಗೆನ್ನಿ, ಇನ್ನೂ ಸಮಾಧಾನವಿಲ್ಲದಿದ್ದರೆ ಕಾಡಿನೊಂದು ಮಗ್ಗಲೇನೋ ಎಂದು ಸಂಶಯಿಸುವಷ್ಟು ದುಃಸ್ಥಿತಿಗೆ ತಲುಪಿತ್ತದು. ಎಷ್ಟೆಂದರೂ ನೂರಾರು ವರ್ಷಗಳ ಅಜ್ಞಾತದಲ್ಲಿದ್ದದ್ದಲ್ಲವೇ ?

ಕತೆ ಕೇಳಿ ಇಲ್ಲಿ. ಕೆರೆಯೆಂಬೋ ಆ ಕೆರೆ ಎಷ್ಟೋ ವರ್ಷಗಳ ನಂತರ ಹಾಗೆ ಅಜ್ಞಾತಕ್ಕೆ ಬಿದ್ದು, ದುಃಸ್ಥಿತಿಗೆ ಬಂದು ತಲುಪಿದ್ದಲ್ಲ ಎನ್ನುತ್ತದೆ ಸ್ಥಳೀಯ ಇತಿಹಾಸ. ಅದು ಹುಟ್ಟಿದ ದಿನದಿಂದಲೂ ಹಾಗೆ ಕಣ್ಣಾಮುಚ್ಚಾಲೆ ಆಡುತ್ತಲೇ ಬಂದ್ದದ್ದು. ಹಾಗೆಂದು ಕೆರೆಗೇನು ತಾನು ಹಾಗೆಯೇ ಇರಬೇಕೆಂದೇನೂ ಇರಲಿಲ್ಲ. ಆದರೆ ಅದನ್ನು ನಿರ್ಮಿಸಿದ ಉದ್ದೇಶವೇ ಅಂತದ್ದು. ಬೀಳಗಿಯೆಂಬ ರಾಜ ಮನೆತನದ ಕಾಲದಲ್ಲಿ ಸೈನಿಕ ಶಿಬಿರವೊಂದು ಆ ಕಾಡಿನಲ್ಲಿ ಇತ್ತು, ಮತ್ತು ಅಷ್ಟೂ ಸೈನಿಕರ ದಿನದ ದಾಹವನ್ನು ಇಂಗಿಸಲು ಅಲ್ಲಿಯೇ ಆ ಕೆರೆ ನಿರ್ಮಾಣ ಮಾಡಲಾಗಿತ್ತು ಎಂಬ ಅಂಬೋಣ ಸ್ಥಳೀಯರದ್ದು. ಈ ಬಗ್ಗೆ ನಿಖರ ದಾಖಲೆಗಳು ಸಿಗದಿದ್ದರೂ ಕತೆಯ ಬಗೆಗೆ ಇರುವ ಹತ್ತಾರು ಕಥೆಗಳಲ್ಲಿ ಇದು ಸಾಕಷ್ಟು ಸಾಮ್ಯತೆ ಪಡೆಯುತ್ತದೆ. ಏಕೆಂದರೆ ಬಿಳಗಿ ರಾಜರ ರಾಜಧಾನಿ ಸಹ ಇಲ್ಲಿಗೆ ಸುಮಾರು ೮ ಕಿ.ಮೀ. ದೂರದ ಐಸೂರು ಆಗಿತ್ತು. ಪಕ್ಕಾ ಸೈನಿಕರ ಅಡಗುದಾಣದಂತೆ ಕಾಣುವ ಕೆರೆಯ ಪ್ರದೇಶ ಸುಮಾರು ೩೦ ಎಕರೆ ವಿಸ್ತಾರವನ್ನು ಹೊಂದಿದ್ದು, ಗುಡ್ಡದ ಸುತ್ತಲೂ ಕಲ್ಲಿನ ಕಟ್ಟೆ ಕಟ್ಟಲಾಗಿದೆ. ಅದೇ ಗುಡ್ಡದ ಇನ್ನೊಂದು ಮಗ್ಗಲು ಕೆಳದಿ ಹಾಗೂ ಲಿಂಗನಮಕ್ಕಿ ರಾಜರ ಆಳ್ವಿಕೆಗೆ ಒಳಪಟ್ಟಿತ್ತು. ಹೀಗಾಗಿ ಗಡಿ ಕಾವಲು ಪಡೆಯ ತಂಗುದಾಣವಾಗಿರುವ ಎಲ್ಲ ಸಾಧ್ಯತೆ ಇದ್ದು, ಗುಡ್ಡದ ತುಂಬ ಕುದುರೆಯ ಓಡಾಟಕ್ಕೆ ಮಾಡದ್ದಿರಬಹುದಾದ ಪ್ರತ್ಯೇಕ ಮಾರ್ಗದ ಅವಶೇಷಗಳನ್ನು ಈಗಲೂ ಕಾಣಬಹುದು. ಕೋಟೇ ಕೆರೆಯೆಂದು ಕರೆಸಿಕೊಳ್ಳುವ ಈ ಕೆರೆ ಸರಿಸುಮಾರು ೬೦ ಚದರ ಅಡಿಯಷ್ಟು ವಿಸ್ತಾರವನ್ನು ಹೊಂದಿದೆ. ಸುಮಾರು ೩೦ ಎಕರೆ ವಿಸ್ತೀರ್ಣದ ಗುಡ್ಡದಲ್ಲಿ ಈ ಕೆರೆಗೆ ಪೂರಕವಾಗಿ ಇನ್ನೂ ೨೦ ಎಕರೆ ಪ್ರದೇಶಕ್ಕೆ ನೀರಿನ ಸಂಗ್ರಹಕ್ಕೆ ಅನುಕೂಲವಾಗುವಂತೆ ಕಲ್ಲಿನ ಏರಿಯನ್ನು ಕಟ್ಟಲಾಗಿದೆ. ಕೆರೆಗೆ ನೀರು ಕುಡಿಯಲು ಬರುವ ಪ್ರಾಣಿಗಳಿಗೆ ಪ್ರತ್ಯೇಕ ಮಾರ್ಗವನ್ನು ನಿರ್ಮಿಸಲಾಗಿದೆ. ಕೆರೆಯಲ್ಲಿ ಸಂಗ್ರಹಗೊಂಡ ನೀರು ನಾಲೆಯ ಮೂಲಕ ಹರಿದು ಕಾಡಿನ ಇತರ ಪ್ರದೇಶಗಳಿಗೂ ಪೂರೈಕೆಯಾಗುತ್ತದೆ. ಎಲ್ಲ ಕಡೆಗಳಲ್ಲೂ ಕಲ್ಲು ಕಟ್ಟಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಜಲಾನಯನವನ್ನು ವಿನ್ಯಾಸಗೊಳಿಸಲಾಗಿದೆ. ಒಟ್ಟಾರೆ ಅತ್ಯಂತ ವೈಜ್ಞಾನಿಕವಾಗಿ ನಿರ್ಮಿಸಿದ್ದ ಜಲಾಗಾರ ಇದಾಗಿತ್ತು ಎಂಬುದಕ್ಕೆ ಯಾವುದೇ ಅನುಮಾನವಿಲ್ಲ.

ಅದೆಲ್ಲ ಹಾಗಿರಲಿ, ಕೆರೆ ಹುಡುಕಿಕೊಂಡು ಹೋದ ನಮ್ಮ ಗ್ರಾ.ಪಂ. ಅಧ್ಯಕ್ಷರು ಮತ್ತವರ ತಂಡಕ್ಕೆ ನಿಯೇ ಸಿಕ್ಕ ಅನುಭವ. ಸಹಜವಲ್ಲವೇ? ಸುತ್ತಲ ನಾಲ್ಕಾರು ಹಳ್ಳಿಗಳಿಗೆ ಸಾಕಾಗುವಷ್ಟು ಜಲನಿ ಒಂದೇ ಕಡೆಯಲ್ಲಿ ದೊರೆಯುತ್ತದಾದರೆ ಅಭಿವೃದ್ಧಿ ಚಿಂತಕ ನೇತಾರನೊಬ್ಬನಿಗೆ ಅದಕ್ಕಿಂತ ಇನ್ನೇನು ಬೇಕು? ಸರಿ, ಹೂಳು ತುಂಬಿ ಪಾಳು ಬಿದ್ದ ಕೆರೆಯನ್ನು ಸ್ವಚ್ಛಗೊಳಿಸಿ ಇಲ್ಲಿಂದ ಊರವರೆಗೆ ನೀರು ಹರಿಸಿಕೊಂಡುಹೋಗಬೇಕೆಂಬ ಹೆಬ್ಬಯಕೆಯೇನೋ ಅವರಲ್ಲಿ ಮೂಡಿತು ನಿಜ. ಆದರೆ ರಸ್ತೆ ಸಂಪರ್ಕವೇ ಇಲ್ಲದ, ಗುಡ್ಡದ ನೆತ್ತಿಯ ಮೇಲಿರುವ ಆ ಕೆರೆ ಕಾಮಗಾರಿಗೆ ಅಗ್ತಯ ಸಲಕರಣೆಗಳು, ಕೆಲಸಗಾರರನ್ನು ಕರೆ ತರುವುದಾದರೂ ಹೇಗೆ ? ಪ್ರಶ್ನೆ ಕೇಳಿಕೊಳ್ಳುತ್ತ ಕುಳಿತಿದ್ದರೆ ಹೆಚ್ಚೆಂದರೆ ನಾವು ಜ್ಞಾತ ಕೋಟೆಕೆರೆಯನ್ನು ನೋಡಿ ಬಂದಿದ್ದೇವೆ, ಅಷ್ಟಗಲ, ಇಷ್ಟುದ್ದ ಇದೆಯೆಂದು ಬಣ್ಣಿಸಿ ಸಾಹಸ ಮೆರೆದವರಂತೆ ಪೋಸು ಕೊಡಬಹುದಿತ್ತಷ್ಟೆ. ಆದರೆ ಹೆಗಡೆಯವರ ಉದ್ದೇಶ ಅದಾಗಿರಲಿಲ್ಲ. ಏನಾದರೂ ಮಾಡಿ ಈ ಕೆರೆಯಿಂದಸುತ್ತಮುತ್ತಲಿನ ೩೦ ಮನೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು, ಐತಿಹಾಸಿಕ ಕೆರೆಯನ್ನು ಸಂರಕ್ಷಿಸಲೇಬೇಕೆಂಬ ಹಠಕ್ಕೆ ಬಿದ್ದದ್ದ ಅವರ ನೆರವಿಗೆ ಬಂದದ್ದು ಉದ್ಯೋಗಖಾತ್ರಿ ಯೋಜನೆ ಮತ್ತು ಸ್ಥಳೀಯರ ಉತ್ಸಾಹ. ಇಚ್ಛಾಶಕ್ತಿಯ ನಾಯಕತ್ವಕ್ಕೆ ಬೆಂಬಲವಾಗಿ ನಿಂತವರು ತಾಲೂಕು ಕಾರ್ಯನಿರ್ವಹಣಾಕಾರಿ ವಿ.ಎಸ್.ಹೆಗಡೆ.

ಸಾಂಪ್ರದಾಯಿಕ ನೀರಿನ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಯೋಜನೆ ರೂಪುಗೊಂಡಿತ್ತು. ಕೊನೆಗೊಂದು ಶುಭ ಮುಂಜಾವಿನಲ್ಲಿ ಡಿ.ಜಿ.ಹೆಗಡೆಯವರ ನೇತೃತ್ವದ ಉತ್ಸಾಹಿಗಳ ತಂಡ ನೆತ್ತಿಯ ಮೇಲೆ ಬುತ್ತಿ, ಹೆಗಲಲ್ಲಿ ಹಾರೆ ಪಿಕಾಸಿಗಳನ್ನು ಹೊತ್ತು ಗುಡ್ಡ ಹತ್ತಿಯೇಬಿಟ್ಟಿತು. ಅಲ್ಲಿ ಇಲ್ಲಿ ಕಥೆಯಾಗಿ ಜನರ ಬಾಯಲ್ಲಿ ಸುಳಿದಾಡುತ್ತಿದ್ದ ಕೋಟೆ ಕೆರೆ ಅವಸ್ಥಾಂತರಕ್ಕೆ ಸಜ್ಜಾಗಿಯೇ ಬಿಟ್ಟಿತು. ನೋಡ ನೋಡುತ್ತಿದ್ದಂತೆ ಮಂಕರಿಗಳಲ್ಲಿ ತುಂಬಿದ ಮಣ್ಣುನ ಕೆರೆಯ ಒಡಲಿಂದ ಹೊರ ಬರಲಾರಂಭಿಸಿತು. ಇಂದೂ ಕೆರೆ ಕಾಮಗಾರಿ ಪೂರ್ಣಗೊಂಡಿಲ್ಲದಿದ್ದರೂ ಊರವರಲ್ಲಿ ವಿಶ್ವಾಸ ಮೂಡಿದೆ. ನಮ್ಮದೇ ಕೆರೆಯನ್ನು ಅಜ್ಞಾತದಿಮದ ಮುಕ್ತಗೊಳಿಸಿ ಮೂಲಸ್ವರೂಪಕ್ಕೆ ತಂದೇ ತರುವ ಛಲ ಮೂಡಿದೆ. ಕೆಲಸ ಭರದಿಂದ ಸಾಗಿದೆ. ಇನ್ನೇನು ವಾರ, ತಿಂಗಳೊಪ್ಪತ್ತಿನಲ್ಲಿ ಕೋಟೆಕೆರೆಯ ನೀರು ಮನೆಮನೆಗೆ ಹರಿದು ಬಂದು ಸಮೃದ್ಧಿಯ ಹೊಸ ಶಕೆಯನ್ನು ಆರಂಭಿಸುತ್ತದೆ. ಅಪ್ಪ ಡಿ.ಜಿ.ಹೆಗಡೆಯವರ ಉತ್ಸಾಹಪೂರಿತ ಸತ್ಕಾರ್ಯವನ್ನು ಅತ್ಯುತ್ಸಾಹದಿಂದ ಬಣ್ಣಿಸಿಕೊಳ್ಳುತ್ತಿದ್ದಾನೆ, ಈಗಷ್ಟೇ ಧಾರವಾಡದಲ್ಲಿ ಮರಿ ಪತ್ರಕರ್ತನಾಗಿ ಮೂಡುತ್ತಿರುವ ರಾಜೀವ ಹೆಗಡೆ. ಶಿಂಗುಮನೆಯ ಎಲ್ಲ ಯುವಕರೂ ಇದೇ ಭಾವದಲ್ಲಿದ್ದಾರೆ. ಇಂಥದ್ದೊಂದು ನೀರಕಾಯಕಕ್ಕೆ, ಮತ್ತವರ ಉತ್ಸಾಹಕ್ಕೂ ನಾಲ್ಕಾರು ಒಳ್ಳೆಯ ಮಾತುಗಳ ನೀರೆರೆದು ಕಳುಹಿಸಲಾಗಿದೆ. ಎಲ್ಲ ಊರಿನಲ್ಲೂ ಹೀಗೆ ಅಜ್ಞಾತಕ್ಕೆ ಬಿದ್ದರುವ ಕೆರೆಗಳಿರಬಹುದು. ಅದನ್ನು ಹುಡುಕಿ ಬೆಳಕಿಗೆ ತರುವ ಗುಪ್ತಚರರು ಬೇಕಿದ್ದಾರೆ. ಎಲ್ಲಿದ್ದಿರಿ?

‘ಲಾಸ್ಟ್‘ಡ್ರಾಪ್: ಈ ನಾಡಿನ ಕೆರೆಗಳೆಲ್ಲವಕ್ಕೆ ಹಿಂದಿದ್ದ ಮರ್ಯಾದೆಯನ್ನು ಮರಳಿ ದೊರಕಿಸಿಕೊಟ್ಟರೆ ಸಾಕು. ನೀರಿನ ಕೊರೆತೆಯೆಂಬ ಪದವನ್ನು ನಿಘಂಟಿನಿಂದ ನಿಸ್ಸಂಶಯವಾಗಿ ತೆಗೆದು ಹಾಕಬಹುದು.

ಮಳೆ ನಿಂತು ಹೋದ ಮೇಲೂ ಹನಿಗಳು ಉಳಿಯಲಿ

ಭೂಮಿಗೂ ಬವಳಿ ಬಂದಿರಲಿಕ್ಕೆ ಸಾಕು. ಕಳೆದ ವರ್ಷ ಆ ಪಾಟಿ ಕೆಕ್ಕರಿಸಿಕೊಂಡು ನೋಡಿದ್ದ ಸೂರ್ಯ. ಎಲ್ಲೆಲ್ಲೂ ಕಾದು ಕರಕಲಾದ ಪ್ರಕೃತಿ. ಸಾಕಪ್ಪ ಈ ಧಗೆ... ಎನ್ನುತ್ತಿರುವಾಗಲೇ ಆಗಸದ ಮುಖ ಕಪ್ಪಿಡತೊಡಗಿತು. ಇಷ್ಟು ದಿನದ ಸೂರ್ಯನ ಕೋಪಕ್ಕೆ ಮುಯ್ಯಿ ತೀರಿಸಿಕೊಳ್ಳಲು ಬರುತ್ತಿರುವಂತೆ ಸಾಲು ಕರಿಮೋಡಗಳು ದಮುಗುಡುತ್ತ ಮುನ್ನುಗ್ಗಿದವು. ಕೊನೆಗೊಂದಷ್ಟು ದಿನ ಅವುಗಳದೇ ಕಾರುಬಾರು. ಒಲಿದು ಸುರಿದರೆ ಸಮೃದ್ಧಿ, ಮುನಿಸು ತೋರಿದರೆ ಇಡೀ ಬದುಕೇ ಬೋರಲು ಬೀಳುತ್ತದೆ. ಇವೆರಡರ ನಡುವೆ ನಿಸರ್ಗದ ಲೆಕ್ಕಾಚಾರ ತಪ್ಪಿ ಮಳೆಯೇನಾದರೂ ಉಮ್ಮಳಿಸಿ ಕಾರಿಕೊಂಡಿತೆಂದರೆ ಎಲ್ಲೆಲ್ಲೂ ಜಲಪ್ರಳಯ. ಅದೇ ಆಯಿತು, ಕಳೆದ ಮಳೆಗಾಲವೆಂದರೆ. ಒಂದಷ್ಟು ದಿನ ಬರಗಾಲವಾದರೆ ಕೊನೆಗೊಂದಷ್ಟು ದಿನ ಪ್ರವಾಹದ ಆಟೋಪ. ಒಟ್ಟಾರೆ ಅತಿಯಾಗಿ ಸುರಿದರೂ ಸಂಕಷ್ಟ, ಸುರಿಯದೇ ಕಳೆದು ಹೋದರಂತೂ ಕಡುಕಷ್ಟ. ಮಳೆ ಇತಿಮಿತಿಯಲ್ಲಿದ್ದರೆ ಮಾತ್ರ ಬಲು ಇಷ್ಟ.
ಹೌದು, ಆದರೆ ಇಷ್ಟಕಷ್ಟಗಳನ್ನು ಕೇಳುತ್ತ ಕುಳಿತುಕೊಳ್ಳಲು ಮಳೆಯೇನು ಬೀಗರ ಕಡೆಯ ಬಂಧುವೇ ? ಅದರ ಪಾಡಿಗದು ಬರುತ್ತದೆ. ಬಂದದ್ದು ಒಂದಷ್ಟು ಸುರಿಯುತ್ತದೆ. ಸುರಿದದ್ದು ಈ ನೆಲದ ಗುಂಟ ಹರಿಯುತ್ತದೆ. ಹರಿದದ್ದು ಹಾಗೆ ನದಿ ನಾಲೆಗಳ ನೆಂಟಸ್ಥಿಕೆಯಲ್ಲಿ ಸಮುದ್ರ ಸೇರಿ ಬಿಡುತ್ತದೆ. ನಮಗೆ ಗೊತ್ತಿರುವುದು ಇಷ್ಟೆಯೇ. ಇದಕ್ಕೂ ಮಿಕ್ಕಿ ಸುರಿಯುವ ಮಳೆಗೊಂದಿಷ್ಟು ಮಹತ್ವವಿದೆ. ಅದನ್ನು ಅದರ ಪಾಡಿಗೆ ಓಡಿ ಹೋಗಲು ಬಿಡದೇ ಮಾನ ಮರ್ಯಾದೆ ತೋರಿ, ಆಧರಿಸಿ ಮನೆಯ ಮೂಲೆಯಲ್ಲೆಲ್ಲೂ ಮುಚ್ಚಿಟ್ಟುಕೊಂಡರೆ ಮುಂದೊಂದು ದಿನ ಖಂಡಿತಾ ನಮ್ಮ ಋಣವನ್ನು ಉಳಿಸಿಕೊಳ್ಳಲಿಕ್ಕಿಲ್ಲ ಎಂಬ ಸಂಗತಿ ಇನ್ನೂ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ಅದು ಗೊತ್ತಾಗಲೇ ಬೇಕೆಂದಿದ್ದರೆ ಥಾಯ್ಲೆಂಡ್ ಅನ್ನೋ, ಚೀನಾವನ್ನೋ, ಅಷ್ಟೆಲ್ಲ ಬೇಡ ನಮ್ಮ ಗುಜರಾತ್, ರಾಜಸ್ಥಾನದ ಮಂದಿಯನ್ನೋ ಒಮ್ಮೆ ಮಾತನಾಡಿಸಿ ಬರಬೇಕು. ಮಳೆ ನೀರಿಗೆ ಮರ್ಯಾದೆ ತೋರುವ ಬಹಳಷ್ಟು ಮಂದಿ ಅಲ್ಲಿ ಸಿಗುತ್ತಾರೆ.

ಇದೇನೋ ಕಥೆ ಎಂದು ಕೊಳ್ಳಬೇಡಿ. ನೂರಕ್ಕೆ ನೂರು ಸತ್ಯ ಸಂಗತಿಯೆಂದರೆ ಜಗತ್ತಿನ ಇಷ್ಟೂ ರಾಷ್ಟ್ರಗಳಲ್ಲಿ ಯಾವುದಾದರೊಂದು ರಾಷ್ಟ್ರದ ಬಹುತೇಕ ಮಂದಿ ಅತಿಶುದ್ಧ ನೀರು ಕುಡಿಯುತ್ತಿದ್ದರೆ ಅದು ಥಾಯ್ಲೆಂಡಿನವರು. ಸ್ವಚ್ಛ ಮತ್ತು ಸುರಕ್ಷಿತ ನೀರನ್ನು ಕುಡಿದು ‘ಅಭಿವೃದ್ಧಿ ರಾಷ್ಟ್ರ’ವಾಗಿ ತಮ್ಮ ನೆಲದ ಹೆಸರನ್ನು ಬರೆಸಿಕೊಂಡ ಥಾಯ್ಲೆಂಡಿಗರದ್ದು ಜಲಚರಿತೆಯ ಯಶೋಪುಟಗಳು.

ಅದು ಹೋಗಲಿ, ನಮ್ಮ ನೆತ್ತಿಯ ಮೇಲೆ ಕುಳಿತಿರುವ ಚೀನೀಯರೇನು ಕಡಿಮೆಯವರಲ್ಲ. ಕೇವಲ ಎರಡು ವರ್ಷಗಳಲ್ಲಿ ಏನಿಲ್ಲವೆಂದರೂ ೨.೬ ಲಕ್ಷ ಕುಟುಂಬಕ್ಕೆ ಸಾಕೆನಿಸುವಷ್ಟು ನೀರು ಕುಡಿಸಿದ ಹೆಗ್ಗಳಿಕೆ ಚೀನಾದ್ದು. ಅಂಥ ಕ್ರಾಂತಿ ಯಾವುದೋ ಕೋಟ್ಯಂತರ ರೂ.ಗಳನ್ನು ಸುರಿದು ರೂಪಿಸಿದ ನೀರಾವರಿ ಯೋಜನೆಯಿಂದ ಆದದ್ದಲ್ಲ. ಹೊಸತೊಂದು ನದಿ ಹುಟ್ಟಿ ಹರಿದಿದ್ದರಿಂದಾದದ್ದೂ ಅಲ್ಲ. ದೇಶದ ನದಿಗಳನ್ನು ಬೆಸೆದು ಪೂರೈಸಿದ್ದೂ ಅಲ್ಲ. ಕೇವಲ ವರ್ಷದಲ್ಲೊಂದಿಷ್ಟು ದಿನ ಸುರಿದ ಮಳೆಯನ್ನು ಬೊಗಸೆಯೊಡ್ಡಿ ಹಿಡಿದು ಬಾಯಾರಿದ ಬಾಯಿಗೆ ತಂದು ಹನಿಸಿದ ಪರಿಣಾಮದಿಂದಾದದ್ದು. ಇಂದು ಚೀನಾದ ನಾನ್ಸು ಪ್ರಾಂತ್ಯದ ದಾಹ ತೀರಿದ್ದರೆ ಅದು ಅಲ್ಲಿನ ರಸ್ತೆ ರಸ್ತೆಗಳಲ್ಲೂ ಮಾಡಿದ ಮಳೆ ನೀರ ಕೊಯ್ಲಿನ ಫಲ.

ಇದು ಯಾರಿಗೂ ಹೇಳಬೇಡಿ ಎಂಬ ಗುಟ್ಟಿನ ಮಾತಂತೂ ಅಲ್ಲ. ಎಲ್ಲರಿಗೂ ಸಾರಿ ಹೇಳಲೇ ಬೇಕಾದ್ದೆಂದರೆ ಗಾನ್ಸು ಪ್ರಾಂತ್ಯದಲ್ಲಿ ಬೀಳುವ ವಾರ್ಷಿಕ ಸರಾಸರಿ ಮಳೆ ನಮ್ಮ ಬೆಂಗಳೂರಿನಲ್ಲಿ ಸುರಿಯುವ ಪ್ರಮಾಣದ ಅರ್ಧದಷ್ಟೂ ಇಲ್ಲ. ಸಾಲದ್ದಕ್ಕೆ ಅಲ್ಲಿ ಕಳೆದ ನಲವತ್ತು ವರ್ಷಗಳನ್ನು ವರ್ಣಿಸುತ್ತ ಹೋದರೆ ಬರೋಬ್ಬರಿ ೩೬ ವರ್ಷ ಇಷ್ಟೂ ಮಳೆ ಸುರಿಯದೇ ಬರ ಅಟಕಾಯಿಸಿಕೊಂಡಿತ್ತು. ಅಂದರೆ ಅವರು ಕಂಡದ್ದು ಶೇ. ೯೦ರಷ್ಟು ಬರವನ್ನೇ. ಹೀಗಾದರೆ ಅಲ್ಲಿನ ಮೂಲ ಕಸುಬಾದ ಕೃಷಿಯಾದರೂ ಹೇಗೆ ತಾನೇ ಕೈ ಹಿಡಿದೀತು ? ಜನಸಂಖ್ಯೆಯಲ್ಲಿ ನಮ್ಮ ಮೇಲೆ ಪೈಪೋಟಿಗೆ ಬಿದ್ದವರಂತೆ ಸಾಗುತ್ತಿರುವ, ಸರಾಸರಿ ಐದು ಜನರ ಕುಟುಂಬದ ವಾರ್ಷಿಕ ವರಮಾನ ೧೧ ಸಾವಿರ ರೂ. ಮುಟ್ಟಿದ್ದೇ ಆಶ್ಚರ್ಯ. ಕೊನೆಗೂ ಅಲ್ಲಿನ ಜನರ ಸಮಸ್ಯೆಗೊಂದು ಉತ್ತರ ಸಿಕ್ಕಿತೆಂದರೆ ಅದು ಮಳೆನೀರಿನ ಕೊಯ್ಲಿನಿಂದ.

ಕೇವಲ ೪೨೦ ಮಿ.ಮೀ ಮಳೆಯ ಸರಾಸರಿ ಹೊಂದಿರುವ ಗಾನ್ಸುವಿನ ಜನರಿಗೆ ಅಂಥ ಸಾಧನೆ ಸಾಧ್ಯವಾಗುವುದಾದರೆ ವರ್ಷಕ್ಕೆ ೯೦೦ ಮಿ.ಮೀ. ಮಳೆ ಸುರಿಯುವ ಬೆಂಗಳೂರಿನ ಜನರಿಗೇನು ಕೇಡು ಬಡಿದಿದೆ ? ೬೦೦ ರಿಂದ ೮೦೦ ಮಿ.ಮೀ ಮಳೆ ಬರುವ ದಕ್ಷಿಣ ಕರ್ನಾಟಕದಲ್ಲಿ, ಇದರ ದುಪ್ಪಟ್ಟು ದಕ್ಕುವ ಮಲೆನಾಡಿನ ಮನೆಗಳಲ್ಲಿ ಇನ್ನೆಷ್ಟರ ಮಟ್ಟಿಗಿನ ನೀರನ್ನು ಕೂಡಿಡಬಹುದೆಂಬುದನ್ನು ಲೆಕ್ಕಹಾಕಿ !

ಬೇಡಬೇಡವೆಂದರೂ ನಮ್ಮ ರಾಜ್ಯದ ದಕ್ಷಿಣಕ್ಕೆ ಮುಖಮಾಡಿ ನಿಂತು ಮಳೆ ಹಿಡಿದಿಟ್ಟುಕೊಂಡರೆ ಎರಡು ತಿಂಗಳಲ್ಲಿ ಒಂದೇ ಒಂದು ಚದರ ಅಡಿಯಷ್ಟು ಅಗಲದ ಚಾವಣಿಯಲ್ಲಿ ೮೦೦ ಲೀಟರ್ ನೀರು ತುಂಬಿಕೊಂಡೀತು. ಅದನ್ನು ಬಿಡಿ, ಒಂದು ಅಂದಾಜಿಗೆ ಕುಳಿತರೆ ನಮ್ಮ ರಾಜ್ಯದಲ್ಲಿ ನೂರು ಮಿ.ಮೀ. ಮಳೆ ಸುರಿದರೆ ಅದರಲ್ಲಿ ನೆಲದೊಳಗೆ ಇಂಗುವುದು ೮ ರಿಂದ ೧೦ ಮಿ.ಮೀ ನಷ್ಟು ಮಾತ್ರ. ಉಳಿದದ್ದೆಲ್ಲ ಸಮುದ್ರಪಾಲು.

ಈವರೆಗೆ ಹೀಗೆ ಸೋರಿಹೋದ ನೀರಿನ ಬಗೆಗೆ ಏನೂ ಅನ್ನಿಸಿಯೇ ಇಲ್ಲ. ತೀರಾ ಮಳೆ ಅಂಗಳಕ್ಕೆ ನಿಂತರೆ ಗುದ್ದಿಲಿ, ಹಾರೆ, ಪಿಕಾಸು ಹಿಡಿದು ಮಣ್ಣು ಬಿಡಿಸಿಕೊಟ್ಟು ಅದಕ್ಕೆ ದಾರಿ ತೋರಿದ್ದೇವೆ. ಚರಂಡಿ ತುಂಬ ಕೆಂಪು ನೀರು ಹರಿಯುತ್ತಿದ್ದರೆ ಕಾಗದದ ದೋಣಿ ಮಾಡಿ ಬಿಟ್ಟು, ಅದರ ಜತೆಗೇ ಓಡಿಹೋಗಿ ಚಪ್ಪಾಳೆ ತಟ್ಟಿ ಖುಷಿ ಪಡುತ್ತಿದ್ದೇವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆರೆ ತುಂಬಿದ್ದರೆ ಅದರ ಕೋಡಿ ಒಡೆದು, ಕಾಲುವೆಯತ್ತ ತಿರುಗಿಸಿ ‘ಅಬ್ಬಾ, ಅಪಾಯ ತಪ್ಪಿತು’ ಎಂದುಕೊಂಡು ನೆಮ್ಮದಿಯ ನಿದ್ದೆಗೆ ಜಾರಿದ್ದೇವೆ. ಹನಿ ಕಡಿಯದೇ ಸುರಿವ ಮಳೆ ನೋಡುತ್ತ, ಹುರಿಬೀಜ ಮೆಲ್ಲುತ್ತ ಬೆಚ್ಚಗೆ ಕನಸು ಕಂಡಿದ್ದೇವೆಯೇ ಹೊರತು ಒಂದು ಹನಿಯನ್ನೂ ಇಂಗಿಸುವ ಗೋಜಿಗೆ ಹೋಗಿಲ್ಲ, ಅದನ್ನು ನಾಳೆಗಾಗಿ ಹಿಡಿದಿಟ್ಟುಕೊಂಡಿಲ್ಲ.

ಅದೇನೋ ಮಳೆನೀರಿನ ಬಗ್ಗೆ ಮೊದಲಿನಿಂದಲೂ ಕಾಳಜಿ ಎಂಬುದೇ ಇಲ್ಲ. ಅದು ಸುರಿದು, ಹರಿದು ವ್ಯರ್ಥವಾಗುತ್ತಿದ್ದರೂ ನಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಇದ್ದು ಬಿಡುತ್ತೇವೆ. ಬಾವಿಯಲ್ಲಿ ನೀರಿದೆ ಅಥವಾ ನಲ್ಲಿಯಲ್ಲಿ ತಪ್ಪದೇ ನೀರು ಬರುತ್ತಿದೆ ಎಂದಾದರೆ ಮುಗಿಯಿತು. ನೀರನ್ನು ಉಳಿಸುವುದು, ಅದನ್ನು ಸಂಗ್ರಹಿಸುವುದು, ಇಲ್ಲವೇ ಇಂಗಿಸುವುದು ಇತ್ಯಾದಿ " ರಗಳೆ’ ಗಳೆಲ್ಲ ನಮಗೆಕೆ? ಅದನ್ನೇನು ನಮಗೊಬ್ಬರಿಗೇ ಗುತ್ತಿಗೆ ಕೊಟ್ಟಿದ್ದಾರೆಯೇ? ಊರಿಗೆಲ್ಲ ಉಪಯೋಗಕ್ಕೆ ನಾವೊಬ್ಬರೇ ಏಕೆ ನೀರಿಂಗಿಸಬೇಕು? ಇತ್ಯಾದಿ ಪ್ರಶ್ನೆ ಕೇಳಿಕೊಂಡು ನಮ್ಮ ಪಾಡಿಗೆ ನಾವಿದ್ದು ಅಭ್ಯಾಸವಾಗಿಬಿಟ್ಟಿದೆ. ಆದರೆ ಯಾವಾದ ದಟ್ಟ ಮಲೆನಾಡಿನಲ್ಲೂ ನೀರಿಗೂ ತತ್ವಾರ ಆರಂಭವಾಯಿತೋ ಆಗ ಎಚ್ಚೆತ್ತುಕೊಳ್ಳಲಾರಂಭಿಸಿದೆವು. ಬೇಕಿದ್ದರೆ ನೀವೊಮ್ಮೆ ಗಮನಿಸಿ ನೋಡಿ, ನಮಗೆ ಅಂಗಳದಲ್ಲಿ ಒಂದು ಹನಿ ನೀರು ನಿಂತರೂ ಕಿರಿಕಿರಿಯಾಗಲಾರಂಭಿಸುತ್ತದೆ. ಇನ್ನು ನಗರ ಪ್ರದೇಶದಲ್ಲಂತೂ ಒಂದಿಮಚೂ ಬಿಡದೆ ೩೦/೪೦ ಸೈಟಿನ ತುಂಬ ಸಿಮೆಂಟ್ ಮೆತ್ತಿಟ್ಟು " ಓಹ್, ಎಷ್ಟೊಂದು ನಿಟಾಗಿ ಮನೆ ಕಟ್ಟಿಕೊಂಡಿದ್ದೇವೆ ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತೇವೆ. ನೀರಿನ ವಿಚಾರದಲ್ಲಿ ಪ್ರಪ್ರಥಮ ವೈರಿಯೇ ನಮ್ಮ ಮನೊಭಾವ.

ಯಾವಾಗ ಬೇಸಿಗೆಯಲ್ಲಿ ನೀರಿನ ಬವಣೆ ಬಂದು ಕಪಾಳಕ್ಕೆ ಬಾರಿಸಿತೋ ಆಗ ನಮಗೆ ಎಚ್ಚರವಾಗಿದೆ. ತಡವಾಗಿಯಾದರೂ ತಪ್ಪಿನ ಅರಿವಾದದ್ದು ಪುಣ್ಯ. ಈಗೀಗ ಮಳೆನೀರು ಕೊಯ್ಲಿನ ಮಾತನಾಡತೊಡಗಿದ್ದೇವೆ. ನೀರಿಂಗಿಸುವ, ಅಂತರ್ಜಲ ಕಾಪಾಡುವ ದಾರಿಗಳನ್ನು ಹುಡುಕಲಾರಂಭಿಸಿದ್ದೇವೆ. ಕುಕ್ಕರಬಸವಿಯಾಗಿ ಕುಳಿತಲ್ಲಿಂದ ಎದ್ದು ಬಂದು ಬಾಗಿಲು ಮುಚ್ಚಲು ಹೊರಡುವುದಾದರೆ ಮೊದಲೊಂದಿಷ್ಟು ಚಾನೀಸಂ, ಮನೀಸಂ, ಬನಿಜಾದಂಥ ಮಾಯಾಮಂತ್ರಗಳನ್ನು ಉಪದೇಶಿಸಬಹುದು. ಈ ಮಂತ್ರಗಳ ಪುನಶ್ಚರಣೆ ಆರಂಭಿಸಿ ಮಳೆಗಾಲದ ಸತತ ನಾಲ್ಕು ತಿಂಗಳು "ಚಾತುರ್ಮಾಸ ವ್ರತ’ ಕೈಗೊಂಡರೆ ಕೊನೆಯಲ್ಲಿ ಮಂತ್ರಸಿದ್ಧಿ ಖಂಡಿತಾ ಸಾಧ್ಯ.

ಎಲ್ಲಕ್ಕಿಂತ ಮೊದಲು ‘ಅಯ್ಯೋ ಮಳೆ ನೀರಿಂದ, ಮಾಡಿನ ಮೇಲೆ ಸುರಿಯುವ ಹನಿಗಳನ್ನು ಸಂಗ್ರಹಿಸಿದರೆ ಎಷ್ಟು ಮಹಾ ನೀರು ಸಿಕ್ಕೀತು ? ಥೂ, ಅ ನೀರನ್ನೆಲ್ಲ ಕುಡಿಯೋ ಅಂಥದ್ದು ನಮಗೇನು ಬಂದಿದೆ? ನಾವ್ಯಾಕೆ, ಅದನ್ನೆಲ್ಲ ಮಾಡಬೇಕು? ಬೋರ್‌ವೆಲ್ ಇದೆ ಬಿಡು, ಅಯ್ಯೋ ನಾವು ಮಲೆನಾಡಿನವರು, ಮುಳುಗಿ ಹೋಗುವಷ್ಟು ನೀರು ನಮ್ಮಲ್ಲೇ ಇದೆ. ಇನ್ನು ಮಳೆ ನೀರನ್ನು ಹಿಡೀತಾ ಕೂತ್ಕೊಳ್ಳೋಖೆ ಬೇರೆ ಕೆಲ್ಸಾ ಇಲ್ವಾ?’ ಇಂಥ ಮನೋಭಾವವನ್ನು ಬದಲಿಸಿಕೊಂಡರೆ ಸಾಕು, ನಮ್ಮನ್ನೀಗ ಕಾಡುತ್ತಿರುವ ನೀರಿನ ಸಮಸ್ಯೆಯ ಮುಕ್ಕಾಲುಪಾಲು ಕರಗಿರುತ್ತದೆ.

‘ಲಾಸ್ಟ್’ಡ್ರಾಪ್: ದೇವರಾಣೆ ಸತ್ಯ, ನೀರಿನ ಬಗ್ಗೆ ಸಕಾರಾತ್ಮಕ ಧೋರಣೆಯೊಂದೇ ಅದರ ಸಮಸ್ಯೆಗಿರುವ ಏಕೈಕ ಪರಿಹಾರ.

ಅರಿವಿನ ‘ದಾಹ’ ಮೂಡದೇ ಅಭಿವೃದ್ಧಿ ಸಾರ್ಥಕವಾಗದು

ವಿಶೇಷ ಗಮನಿಸಿ, ನಮ್ಮಲ್ಲಿ ದೇಶದಲ್ಲಿರುವ ಎಲ್ಲ ಭಾರಿ ಅಣೆಕಟ್ಟುಗಳ ಹಿಂದೆ ಹಿಡಿದಿಟ್ಟ ನೀರಿನಷ್ಟೇ ಪ್ರಮಾಣದ ಅಂತರ್ಜಲ ನೀರಾವರಿಗೆ ಉಪಯೋಗವಾಗುತ್ತಿದೆ. ದೇಶದ ಜನಸಂಖ್ಯೆಯ ಮುಕ್ಕಾಲಕ್ಕೂ ಹೆಚ್ಚು ಪಾಲು ಜೀವನ ನೆಲದಡಿಯ ನೀರನ್ನೇ ಅವಲಂಬಿಸಿದೆ. ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ನೀರಾವರಿ ಯೋಜನೆಗಳ ಹೆಸರನ್ನು ಹೇಳುತ್ತಲೇ ಬಂದಿದ್ದೇವೆ. ಅಂಥ ಯೋಜನೆಯ ಸಂಖ್ಯೆಯೂ ಸಾಕಷ್ಟು ಹೆಚ್ಚಿದೆ. ಇಷ್ಟಾದರೂ, ಕೃಷಿ, ಕೈಗಾರಿಕೆಗಳಿಗೂ ನೆಲದಡಿಯ ನೀರಿನ ಬಳಕೆ ನಿಂತಿಲ್ಲ. ಏನಿದರ ಅರ್ಥ ?

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಭಾರಿ ಅಣೆಕಟ್ಟುಗಳ ಬಳಿಕ ಇತ್ತೀಚೆಗೆ ಬಲಗೊಂಡಿರುವುದು ನದಿಗಳ ಜಾಲದ್ದು. ಇದಕ್ಕಾಗಿ ಸರಕಾರಗಳು ಕೋಟಿಗಟ್ಟಲೆ ಹಣ ಸುರಿಯಲು ಆಸಕ್ತಿ ತೋರಿಸುತ್ತಿವೆ. ಅವರು ಹೇಳುತ್ತಿರುವುದನ್ನು ಕೇಳಿದರೆ ನದಿಗಳನ್ನು ಬೆಸೆದ ಮೇಲೆ ನೆಲದ ಮೇಲೆ ನೀರಿನ ಸಮಸ್ಯೆಯೇ ಇರುವುದಿಲ್ಲ ಎಂದುಕೊಳ್ಳಬೇಕು. ಆದರಿದು ಕಾರ್ಯ ಸಾಧುವೇ ?
ದೇಶದಲ್ಲಿ ಇಂದಿಗೂ ಶೇ. ೫೦ರಷ್ಟು ಭೂಭಾಗಕ್ಕೆ ಅಂತರ್ಜಲ ಬಿಟ್ಟು ಅನ್ಯ ಆಸರೆಯಿಲ್ಲ. ಇದರ ನಡುವೆಯೇ ‘ನೀರು ಸರಬರಾಜು ಯೋಜನೆ’ಎಂಬ ಸರಕಾರಿ ಪ್ರಾಯೋ ಜಿತ ಕಾರ್ಯಕ್ರಮ ಎಗ್ಗಿಲ್ಲದೇ ಸಾಗಿದೆ. ಹಳ್ಳಿ ಹಳ್ಳಿಗಳಿಗೆ (ಕಾಗದದ ಮೇಲೆ) ಇವು ತಲುಪಿವೆ. ದುರಂತವೆಂದರೆ ಇಂಥ ಕಾರ್ಯಕ್ರಮಗಳು ಅನುಷ್ಠಾನಗೊಂಡಿರುವ ಸ್ಥಳಗಳ ನೀರಿಗಾಗಿನ ಹಾಹಾಕಾರ ಉಲ್ಬಣಿಸಿದೆ.
ಗಮನಾರ್ಹ ಸಂಗತಿಯೆಂದರೆ, ಹೀಗೆ ‘ನೀರು ಸರಬರಾಜು’ ಇಲ್ಲದ ಹಳ್ಳಿಯ ಮೂಲೆಗಳಲ್ಲಿ, ಗುಡ್ಡಗಾಡುಗಳಲ್ಲಿ ಇಂದಿಗೂ ಜಲ ಸ್ವಾವಲಂಬನೆ ಅಸ್ತಿತ್ವದಲ್ಲಿದೆ. ಅದು ಕಾನೂನಾಗಲೀ, ಕಾರ್‍ಯಕ್ರಮವಾಗಿಯಾಗಲೀ ಹೇರಿಕೆಯಾ ಗಿಲ್ಲ. ಸಹಜ ಜೀವನವಾಗಿಯೇ ಸಾಗಿದೆ. ಆದ್ದರಿಂದ ನೀರಿನ ವಿಚಾರದಲ್ಲಿ ಸಂಕಷ್ಟವೆಂಬುದನ್ನು ಆ ಮಂದಿ ಅರಿತಿಲ್ಲ.


ಭಾರಿ ನೀರಾವರಿ ಯೋಜನೆಗಳೆಂದರೆ ಅದು ಮತ್ತೊಂದು ರೀತಿಯ ನೀರಿನ ದುರುಪಯೋಗವೆಂಬಂತಾಗಿದೆ. ಲಕ್ಷಾಂತರ ಎಕರೆ ಜಮೀನು ಜೌಗು ಪ್ರದೇಶವಾಗಿ ಪ್ರಯೋಜನಕ್ಕೆ ಬಾರದೆ ಹೋಗುತ್ತಿದೆ. ನೆಲದಲ್ಲಿ ಕ್ಷಾರಾಂಶ ಹೆಚ್ಚುತ್ತಿದೆ. ಉತ್ತಮ ಜಮೀನು ಜವಳು ಭೂಮಿಯಾಗಿ ಕೃಷಿ ಯೋಗ್ಯತೆಯನ್ನೇ ಕಳೆದುಕೊಳ್ಳುತ್ತಿದೆ.


ನಮಗೆ ಇದು ತಿಳಿದಿಲ್ಲವೆಂದಲ್ಲ. ಆದರೂ ಕಾಲುವೆ, ಪೈಪುಗಳಲ್ಲಿ ನೀರು ಬಂದು ಜಮೀನಿಗೆ ತಲುಪಿ ಬಿಡಬೇಕು ಎಂದು ಬಯಸುತ್ತಿದ್ದೇವೆ. ಹೇರಳ ನೀರು ದೊರಕಿಸಿ ಕೊಂಡು ಬಿಡುತ್ತೇವೆಂಬ ಭ್ರಮೆಯಲ್ಲಿ ಕೊಳವೆ ಬಾವಿ ಗಳನ್ನು ಕೊರೆಯುತ್ತಲೇ ಬರುತ್ತಿದ್ದೇವೆ. ನೀರೆತ್ತುವ ಪಂಪುಗಳನ್ನು ಜೋಡಿಸಿ, ಜಲ ಸಂಪತ್ತನ್ನು ಬರಿದು ಮಾಡಿಕೊಂಡು ಕಂಗಾಲಾಗುತ್ತಿದ್ದೇವೆ. ನಮ್ಮ ಯೋಜನೆ ಗಳು, ಅದಾವುದೇ ಆಗಿರಲಿ; ಬಾಳಿಕೆ ಬರಬೇಕು. ಸುಸ್ಥಿರ ವಾಗಬೇಕು. ನೈಜ ಸಾರ್ಥಕತೆ ಪಡೆಯುವುದಾದರೆ ಮುಂದಿನ ಪೀಳಿಗೆಗೂ ದಕ್ಕಬೇಕು.


ಆಧುನಿಕ ತಂತ್ರeನ ಇರಲಿ, ತಪ್ಪಿಲ್ಲ. ಅದು ಇರುವ ಸೌಲಭ್ಯಕ್ಕೆ ಪೂರಕವಾಗುವುದಾದರೆ ಸರಿ. ಇರುವುದನ್ನು ನಾಶ ಮಾಡುವುದೇ ಆದಲ್ಲಿ, ಸಮಸ್ಯೆಗಳಿಗೆ ಉತ್ತರವನ್ನಾ ದರೂ ದೊರಕಿಸಿಕೊಡುವಂತಿರಬೇಕು. ಅದರೊಂದಿಗೆ ಹೊಸ ಸಮಸ್ಯೆಗಳನ್ನೂ ಸೃಷ್ಟಿಸುವುದಾದರೆ ಅದು ಅಭಿವೃದ್ಧಿ ಹೇಗಾದೀತು ?


ಅದು ಹನಿ ನೀರಾವರಿ ಪದ್ಧತಿ ಇರಬಹುದು, ಚಿಮ್ಮು ನೀರಾವರಿ ಪದ್ಧತಿಯಿರಬಹುದು- ಈ ಆಧುನಿಕ ಕ್ರಮಗಳು ವ್ಯತಿರಿಕ್ತ ಪರಿಣಾಮಗಳಿಂದ ಮುಕ್ತ. ಅದು ಬಿಟ್ಟು ಏತದ ಮೂಲಕ ನದಿಯ ದಿಕ್ಕನ್ನೇ ಬದಲಿಸಿಬಿಡುತ್ತೇವೆಂಬ ಭ್ರಮೆಯಲ್ಲಿ ಯಾವ ಪುರುಷಾರ್ಥವಿದೆ ?


ನೀರು ಸ್ವಲ್ಪವೂ ಪೋಲಾಗದಂತೆ ಎಲ್ಲರಿಗೂ ಸಮಾನ ಹಂಚಿಕೆ ಮಾಡುವ ಹಲವಾರು ಉಪಕ್ರಮಗಳು ದೇಶೀಯ ವಾಗಿಯೇ ಅನುಸರಣೆಯಲ್ಲಿವೆ. ಅವುಗಳನ್ನು ಅಭಿವೃದ್ಧಿ ಪಡಿಸಲು, ಸಮಕಾಲೀನ ಸ್ಥಿತಿಗತಿಗಳಿಗನುಗುಣವಾಗಿ ಹೊಂದಿಸಿಕೊಳ್ಳಲು ಹೆಚ್ಚೇನೂ ಶ್ರಮವೂ ಬೇಕಿಲ್ಲ, ಆರ್ಥಿಕ ಹೊರೆಯೂ ಇಲ್ಲ. ಆ ಬಗ್ಗೆ ನಾವು ಈ ವರೆಗೆ ಯೋಚಿಸಿಯೇ ಇಲ್ಲ. ನಮ್ಮದೇನಿದ್ದರೂ ಕೋಟಿಗಳ ಗಾತ್ರದ ಯೋಜನೆಗಳು. ಹರಿವ ನೀರಿನ ಬಳಕೆಗೆ ಹತ್ತಾರು ಸುಲಭ ಮಾರ್ಗಗಳಿವೆ. ಅದಕ್ಕೆ ಬೃಹತ್ ಅಣೆಕಟ್ಟೆಗಳೇ ಆಗಬೇಕೆಂದಿಲ್ಲ.


ನೀವು ನಂಬಬೇಕು. ಇಸ್ರೇಲ್ ಈ ವಿಚಾರದಲ್ಲಿ ಮಾದರಿ. ಅಂಥ ಮರುಭೂಮಿಯಲ್ಲೂ ಅತ್ಯಂತ ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ. ದೇಶದ ಬಳಕೆ ಪೂರೈಸಿಕೊಂಡು ಒಂದಿಡೀ ಯುರೋಪಿಗೆ ಹಣ್ಣು ಹಂಪಲು, ತರಕಾರಿಗಳನ್ನು ರಫ್ತು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅಂತರ್ಜಲ ಬಳಕೆಯ ಹತೋಟಿಯಿಂದ ಅಲ್ಲಿನ ನೀರಾವರಿ ಪ್ರದೇಶ ಒಂದಕ್ಕೆ ಎರಡರಷ್ಟು ಹೆಚ್ಚಿದೆ.


ಚಿಕ್ಕಪುಟ್ಟ ಮಣ್ಣಿನ ದಂಡೆಗಳು ಸಹ ಹರಿಯುವ ನೀರಿನ ಪ್ರಯೋಜನವನ್ನು ಪಡೆಯಲು ಅರ್ಥಿಕ ದೃಷ್ಟಿಯಿಂದ ಲಾಭಕರವಾದವು. ಪರಿಸರ ದೃಷ್ಟಿಯಿಂದ ಅದು ವಿವೇಕ ಯುತ ಮಾರ್ಗ, ಚಂಡೀಗಢ ಸಮೀಪದಲ್ಲಿ ಹೀಗೆ ರಚಿಸಿರುವ ಮೂರು ಚಿಕ್ಕ ಜಲಾಶಯಗಳು ಒಂದು ಗ್ರಾಮದ ಸಂಪತ್ತನ್ನು ಬೇಕಾದಷ್ಟು ಹೆಚ್ಚಿಸಿದೆ. ಅಲ್ಲಿ ಯಾವ ಭೂಮಿಯೂ ಕೊರೆದು ಹೋಗಿಲ್ಲ, ಅರಣ್ಯವೂ ನಾಶವಾಗಿಲ್ಲ. ಪ್ರತಿಯಾಗಿ ಮರುಭೂಮಿಯೂ ಸೃಷ್ಟಿಗೊಂಡಿಲ್ಲ. ಯಾವೊಬ್ಬನನ್ನೂ ಅವನಿದ್ದ ಸ್ಥಳದಿಂದ ಓಡಿ ಸಿಲ್ಲ. ಇದರಿಂದ ನಾವು ಕಲಿಯಲೇ ಬೇಕಾದ ಪಾಠವೆಂದರೆ ನೀವು ಜಲ ಸಂಪತ್ತನ್ನು ರಕ್ಷಿಸುತ್ತೀರಾದರೆ ಅವಶ್ಯವಾಗಿ ರಕ್ಷಿಸಿ. ಅದರ ಬದಲು ಮಹಾ ಮಹಾ ಒಡ್ಡುಗಳನ್ನು ಕಟ್ಟು ತ್ತೀರಾದರೆ ಅವು ಖಂಡಿತವಾಗಿಯೂ ಬೇಡ.


ಹಿಂದೊಂದು ಕಾಲದಲ್ಲಿ ಭಾರತದ ಅಭಿವೃದ್ಧಿಯ ಸಂಕೇತವೇ ಮಹಾ ಒಡ್ಡುಗಳು ಎಂಬ ಭಾವನೆಯಿತ್ತು. ಇಂದು ಅಂಥ ಭ್ರಮೆ ಕಳಚಿ ಹೋಗಿದೆ. ಅವುಗಳ ದುಷ್ಪರಿಣಾಮವನ್ನು ಕುರಿತು ಜನರು ಚಿಂತೆಗೀಡಾಗಿದ್ದಾರೆ. ಹಾಗಿದ್ದರೂ ಇನ್ನೂ ಇನ್ನೂ ಆ ಬಗ್ಗೆ ಧನವ್ಯಯ ಮಾಡು ವುದನ್ನು ಕಾಣುತ್ತಿದ್ದೇವೆ. ಇವತ್ತು ಭಾರತದ ಯಾವತ್ತೂ ಪ್ರಮುಖ ನದಿಗಳಿಗೆ ಒಡ್ಡನ್ನು ಈಗಾಗಲೇ ಕಟ್ಟಿದ್ದಾರೆ. ಅಥವಾ ಕಟ್ಟುತ್ತಿದ್ದಾರೆ. ಆದರೆ ಈ ಮೂಲಕ ಜಲ ಮೂಲ ವಿದ್ಯುತ್ ಉತ್ಪಾದನೆಯ ಲಾಭ ದೊರೆತದ್ದು ತೀರ ಸ್ವಲ್ಪ. ಹೀಗಾಗಿ ಒಡ್ಡುಗಳ ನಿರ್ಮಾಣವೇ ನಮಗೆ ಅಭಿವೃದ್ಧಿಯ ಪ್ರಧಾನ ಚಟುವಟಿಕೆಯಾಗಿ ಕಾಣಿಸುವಂತಿದೆ.


ಆದರೆ ಪರಿಸರ ದೃಷ್ಟಿಯಿಂದ ಈಚೀಚೆಗೆ ಉಂಟಾದ ಅನುಭವಗಳೆಂದರೆ ಈ ಒಡ್ಡುಗಳು ಎಷ್ಟೆಷ್ಟು ದೊಡ್ಡದಾ ಗುತ್ತವೋ, ಪರಿಸರ ವಿನಾಶ ಅಷ್ಟಷ್ಟು ಹೆಚ್ಚಿಗೆ ಆಗುತ್ತದೆ ಎಂದು. ಹೀಗಿರುತ್ತಾ ಪರಿಸರಕ್ಕೆ ಧಕ್ಕೆ ತಾರದಂತೆ ಬೇರೇನೂ ಕೆಲಸ ಮಾಡಲು ಬರಲಾರದೇ-ಎಂಬ ಪ್ರಶ್ನೆ ನಮ್ಮ ಮುಂದಿದೆ. ಬೆಳೆಯುತ್ತಿರುವ ದೇಶದ ಜನಸಂಖ್ಯೆಗೆ ಆಹಾರವನ್ನು ಒದಗಿಸಬೇಕು ಮತ್ತು ಉದ್ಯಮಗಳಿಗೆ ಚೈತನ್ಯವನ್ನು ಒಗಿಸಬೇಕು ಎಂಬ ಸಂಗತಿ ನಿಜವಾದರೂ ಅವುಗಳಿಂದುಂಟಾಗುವ ಹಾನಿಯನ್ನು ತಡೆಯಲು ಪ್ರಯತ್ನಿಸಬೇಡವೇನು?


ಅಭಿವೃದ್ಧಿಯ ವ್ಯಾಖ್ಯಾನದ ಸಂದರ್ಭದಲ್ಲಿ ನಾವು ಪ್ರತಿಪಾದಿಸುತ್ತಿರುವ ಆರ್ಥಿಕ ಸಬಲತೆ, ಆಹಾರ ಸ್ವಾವ ಲಂಬನೆಯ ವಿಚಾರಗಳು ನೀರಿನ ವಿಷಯಕ್ಕೂ ಅನ್ವಯ ವಾಗಬೇಕು. ಸಾಮುದಾಯಿಕ ಪ್ರಯತ್ನಗಳ ಮೂಲಕ ಪ್ರತಿಯೊಬ್ಬನ ನೀರಿನ ಅಗತ್ಯ ಪೂರೈಕೆಯಾಗಬೇಕು. ನೀರು ಸರಕಾರಿ ಯೋಜನೆಯಾಗದೇ ವ್ಯಕ್ತಿಗತ ಕಾಳಜಿಯಾಗ ಬೇಕು. ಶುದ್ಧ ಜಲದ ಹಕ್ಕು ಸಂರಕ್ಷಣೆಗೊಳ್ಳಬೇಕು. ನೀರಿನ ವಿಚಾರದಲ್ಲಿ ‘ಆಡಳಿತ’ ಕೈ ಹಾಕುವುದೇ ಆದರೆ ಸುಸ್ಥಿರ ಪದ್ಧತಿಗಳನ್ನು ಪರಿಚಯಿಸಬೇಕು. ಪಾರಂಪರಿಕ ವಿಧಾನಗಳು ಮಾತ್ರವೇ ನೀರನ್ನು ನೀರಿನ ಸ್ವರೂಪದಲ್ಲಿ ಉಳಿಸಿ ದೇಶವಾಸಿಗಳ ದಾಹ ತಣಿಸಬಹುದೇ ವಿನಃ ಉಳಿದೆಲ್ಲ ಆಧುನಿಕ ತಂತ್ರeನಗಳು ಅದನ್ನು ಇನ್ನಷ್ಟು ಕುಲಗೆಡಿಸುತ್ತದೆ.

‘ಲಾಸ್ಟ್ ’ಡ್ರಾಪ್ :
‘ತಿಳಿನೀಲ ಬಂಗಾರ’ದ ಮೌಲ್ಯ ಜನರ ಮೂಲಭೂತ ತಿಳಿವಿಗೆ ದಕ್ಕದ ಹೊರತೂ ಈ ನೆಲದ ದಾಹ ತೀರಲು ಸಾಧ್ಯವೇ ಇಲ್ಲ.

ನಮ್ಮ ಹಲಸೂರು ಕೆರೆಯೂ, ಲಂಡನ್ನಿನ ಹುಲುಸಾದ ಕೆರೆಯೂ

ಒಂದು ಕಾಲದಲ್ಲಿ ಹಾಗೆ ಒಂದು ಸುತ್ತು ಆ ಕೆರೆಯ ಬಳಸಿ ಹೊರಟರೆ ಅದೆಂಥದೋ ಆಹ್ಲಾದ. ಹಾಗೆಂದು ಇಂದಿನ ಅಜ್ಜಂದಿರೆಲ್ಲ ನೆನಪಿಸಿಕೊಳ್ಳುತ್ತಾರೆ. ಸುಮ್ಮನೆ ಒಮ್ಮೆ ನಿಮ್ಮನೆಯ ಹಿರಿಯರನ್ನು ಕೇಳಿ ನೋಡಿ; ನಿಮ್ಮ ಕಾಲದಲ್ಲಿ ಹಲಸೂರು ಕೆರೆಯೆಂದರೆ ಹೇಗಿತ್ತು ಅಂತ. ಒಮ್ಮೆಲೆ ಅವರು ನೆನಪಿನಾಳಕ್ಕೆ ಜಾರುತ್ತಾರೆ. ಅಷ್ಟೇ ಅವರ ಮುಖದಲ್ಲಿ ಎಂಥದ್ದೋ ಉಲ್ಲಾಸ ಉಕ್ಕುತ್ತದೆ. ನೀವದನ್ನು ಗುರುತಿಸಬಲ್ಲಿರಿ. ಏನೋ ಉತ್ಸಾಹದಲ್ಲಿ ಬಣ್ಣಿಸ ಹೊರಡುತ್ತಾರೆ. ಅಷ್ಟೇ, ಅದು ಕ್ಷಣ ಕಾಲ. ಮತ್ತೆ ಆ ಮುಖದಲ್ಲಿವಿಷಾದದ ಗೆರೆ ಇಣುಕುತ್ತದೆ. ಏನನ್ನೋ ಕಳೆದುಕೊಂಡ ಅನುಭವ. ನಮ್ಮದೆನ್ನುವ ಅನರ್ಘ್ಯವೊಂದು ನಮ್ಮಿಂದ ದೂರಾದ ಭಾವದಲ್ಲಿ ಮಾತಿಗೆ ಶುರುವಿಟ್ಟುಕೊಳ್ಳುತ್ತಾರೆ. ಅಯ್ಯೋ...ಅಂಥ ಕಾಲ ಮತ್ತೆ ಬರುವುದೇ ಇಲ್ಲವೇನೋ...? ಅನುಮಾನದ ಹಿಂದೆಯೂ ಖಚಿತತೆ ಮನೆ ಮಾಡಿದೆ. ಅಂದರೆ ಹಲಸೂರು ಕೆರೆ ಮತ್ತೆ ಹಿಂದಿನಂತಾಗುವುದು ಸಾಧ್ಯವೇ ಇಲ್ಲವೆಂಬುದು ಅವರಿಗೆ ಸ್ಪಷ್ಟವಾಗಿ ಹೋಗಿದೆ.

ಅದೃಷ್ಟಕ್ಕೆ ಹಲಸೂರು ಕೆರೆ ಇಂದಿಗೂ ಹಲಸೂರು ಕೆರೆಯಾಗಿ ಉಳಿದುಕೊಂಡಿದೆ. ಆ ಕೆರೆಯನ್ನು ಇವತ್ತಿಗೂ ಸುತ್ತಿದರೆ ಅದೇ ಗಾಳಿ ತೆರೆಗಳ ಮೇಲಿಂದ ತೇಲಿ ಬರುತ್ತದೆ. ಆದರೆ ಆ ಗಾಳಿಯಗುಂಟ ಕೆಟ್ಟದ್ದೊಂದು ಗಮಲು ಮುಖಕ್ಕೆ ರಾಚುತ್ತದೆ. ಅಲ್ಲಿ ಹಿಂದಿನಂತೆಯೇ ನೀರೂ ಇದ್ದಿರಬಹುದು. ಆದರೆ ಅದನ್ನು ನಗರ ಜೀವನದ ಎಲ್ಲ ಅಪಸವ್ಯಗಳಿಂದ ನಿರ್ಮಾಣಗೊಂಡ ಪೊರೆಯೊಂದು ಆವರಿಸಿಕೊಂಡಿದೆ. ಅಲ್ಲೊಂದಿಷ್ಟು ಮೀನೂ ಸೇರಿದಂತೆ ಹಲವು ವೈವಿಧ್ಯದ ಜಲಚರಗಳು ಆಟ ಆಡಿಕೊಂಡಿದ್ದವು. ಇಂದಿಗೂ ಇವೆ, ಆದರೆ ಬದುಕುಳಿದರೆ ನಾಳೆಯ ಬೆಳಗನ್ನು ಕಂಡೇವು ಎಂಬಂತೆ ಭಯದಲ್ಲಿ ಜೀವ ಹಿಡಿದುಕೊಂಡು ಓಡಾಡುತ್ತಿವೆ. ಸುತ್ತಲೊಂದಿಷ್ಟು ಮರ-ಗಿಡಗಳು, ಪೊದೆ ಗಂಟಿಗಳಿದ್ದವು. ಅವುಗಳ ಹಚ್ಚ ಹಸಿರು ತಿಳಿ ನೀಲ ನೀರಿನಲ್ಲಿ ಪ್ರತಿಫಲಿಸುತ್ತಿತ್ತು. ಇಂದು ಅದೆಲ್ಲಿಗೆ ಹೋದವೆಂಬುದು ಯಾರಿಗೂ ತಿಳಿದಿಲ್ಲ. ಅಂಥ ಮರಗಿಡಗಳಲ್ಲಿ ಕಲರವ ಹೊಮ್ಮಿಸುತ್ತಿದ್ದ ಗಿಳಿವಿಂಡು, ಹಕ್ಕಿ-ಗುಬ್ಬಚ್ಚಿಗಳ ಗುಂಪು ಮಟಾಮಾಯ.


ಏಕೆ ಹೀಗೆ ? ನಮಗೆ ಬೇಕಾದಂತೆ ನಾವಿರುವ ಎಲ್ಲ ಹಕ್ಕೂ ನಮಗಿದೆ. ಅದಕ್ಕಾಗಿ ಅವೆಲ್ಲವನ್ನೂ ಬದಲಿಸಿ ನಾವು ಬದುಕುತ್ತಿದ್ದೇವೆ. ಹಾಗೆಯೇ ನಿಸರ್ಗದ ಇತರ ಸಹ ನಿವಾಸಿಗಳಿಗೂ ನಾವು ಅಂಥ ಹಕ್ಕನ್ನು ಬಿಟ್ಟುಕೊಡಬೇಕೆಂದು ಯಾವತ್ತೂ ನಮಗೆ ಅನ್ನಿಸಿಯೇ ಇಲ್ಲವೇ ? ಇದು ಕೇವಲ ಬೆಂಗಳೂರಿನ ಹಲಸೂರು ಕೆರೆಯೊಂದರ ಕಥೆಯಲ್ಲ. ಅದು ಸ್ಯಾಂಕಿ ಕೆರೆಯಿರಬಹುದು, ಹೆಬ್ಬಾಳದ್ದಿರಬಹುದು, ಗುಲ್ಬರ್ಗದ ಕೆರೆಯಾಗಿರಬಹದು, ಅರಸೀಕೆರೆಯಾಗಿರಲೂಬಹುದು...ಹೀಗೆ ಎಲ್ಲ ಊರಿನ ಎಲ್ಲ ಕೆರೆಗಳ ಕಥೆಯೂ ಇದಕ್ಕಿಂತ ಭಿನ್ನವಾಗಿರಲು ಸಾಧ್ಯವೇ ಇಲ್ಲ. ಕೆರೆಗಳು ಮಾಯವಾಗುತ್ತಿವೆ. ಅದರೊಂದಿಗೆ ಜೀವವೈವಿಧ್ಯವೂ ಇಲ್ಲದಾಗುತ್ತಿದೆ ಎಂಬ ಕಳವಳ ಇಂದು ನಿನ್ನೆಯದಲ್ಲ. ಕೆರೆಗಳನ್ನು ಉಳಿಸುವ ಸರಕಾರದ ಯೋಜನೆಗಳೂ ಅದರ ಸುತ್ತ ಬೇಲಿ, ವಾಯುವಿಹಾರ ಮಾರ್ಗ ರಚಿಸುವಷ್ಟಕ್ಕೆ ಸೀಮಿತ. ಹಾಗಾದರೆ ನಮ್ಮ ಕೆರೆಗಳನ್ನು ಉಳಿಸಲು ಮಾದರಿ ಯಾವುದು ?
ಹಾಗೆ ಯೋಚಿಸುತ್ತ ಅಂತರ್ಜಾಲ ತಾಣವೊಂದರಲ್ಲಿ ಜಾಲಾಡುತ್ತಿದ್ದಾಗ ಕಣ್ಣೆದುರು ಅವತರಿಸಿದ್ದು ‘ಲಂಡನ್ ವೆಟ್ಲ್ಯಾಂಡ್ ಸೆಂಟರ್’ ಬಗೆಗಿನ ಅಕ್ಷರ ಸರಣಿ. ವೆಟ್ಲ್ಯಾಂಡ್, ಇದು ಜನನಿಬಿಡ ನಗರವಾದ ಲಂಡನ್ನ ಹೀತ್ರೊ ವಿಮಾನ ನಿಲ್ದಾಣಕ್ಕೆ ಅತಿ ಸಮೀಪದಲ್ಲೇ ಇದೆ. ಒಂದು ಕಾಲದಲ್ಲಿ ಪಾಳುಬಿದ್ದು, ಒತ್ತುವರಿಗೆ ತುತ್ತಾಗಿದ್ದ ನೆಲ ಇಂದು ನಂದನವನ. ಈ ೧೫೦ ಎಕರೆ ಪ್ರದೇಶ ಈಗ ಕೆರೆಗಳು, ಪುಟ್ಟ ಕೊಳಗಳು, ಸಾವಿರಾರು ಮರಗಿಡಗಳು, ಪಕ್ಷಿ ಪ್ರಾಣಿಗಳ ಸುವ್ಯವಸ್ಥಿತ ಜಾಲ. ೧೮೦ಕ್ಕೂ ಹೆಚ್ಚು ಜಾತಿಯ ಹಕ್ಕಿಗಳ ತಾಣ. ಬೇರ್ಯಾವ ಮೆಟ್ರೊ ನಗರದಲ್ಲೂ ಕಾಣಸಿಗದ ಅಪರೂಪದ ಪಕ್ಷಿ ಸಂಕುಲ ಇಲ್ಲಿದೆ. ಚಿಟ್ಟೆಗಳು, ಕಪ್ಪೆಗಳಂಥ ಉಭಯವಾಸಿಗಳು, ಕೀಟಗಳು, ಮೀನುಗಳು, ಸರೀಸೃಪಗಳು, ಬಾವಲಿಗಳು ಮತ್ತಿತರ ಅಗಾಧ ಜೀವವೈವಿಧ್ಯಕ್ಕೆ ಆಗರ. ಹಲವಾರು ಪರಿಸರ ಪ್ರಶಸ್ತಿಗಳಿಗೆ ಪಾತ್ರ. ಜೀವವಿಜ್ಞಾನಿಗಳ ಸಂಶೋಧನೆ ಹಾಗೂ ಅಧ್ಯಯನಗಳಿಗೆ ನೆಲೆಮನೆ.


ಇದೆಲ್ಲ ಹೇಗೆ ಸಾಧ್ಯವಾಯಿತು ಎಂಬುದೇ ಕುತೂಹಲಕರ. ಮೊದಲು ಎಲ್ಲ ಕೆರೆಗಳ ಹೂಳೆತ್ತಲಾಯಿತು. ಎತ್ತಿದ ಮಣ್ಣನ್ನೇ ಸುತ್ತ ಹರಡಿ ಪರಿಸರಕ್ಕೆ ಹೊಂದುವ ವೈವಿಧ್ಯಮಯ ಹೂವಿನ ಹಾಗೂ ಹಣ್ಣಿನ ಗಿಡಗಳನ್ನು ನೆಡಲಾಯಿತು. ಒತ್ತುವರಿದಾರರನ್ನು ಕಟ್ಟುನಿಟ್ಟಾಗಿ ಹೊರಗಟ್ಟಲಾಯಿತು. ಹೂವು ಹೆಚ್ಚಿದಂತೆ ಚಿಟ್ಟೆಗಳು ವಲಸೆ ಬಂದವು. ಹಣ್ಣಿನ ಗಿಡಗಳು ಫಲ ಬಿಡಲಾರಂಭಿಸಿದಂತೆ ಹಕ್ಕಿಗಳು ಹೆಚ್ಚಿದವು. ನಿಧಾನವಾಗಿ ಸಣ್ಣಪುಟ್ಟ ಉಭಯವಾಸಿಗಳು, ಸರೀಸೃಪಗಳು, ಕೀಟಗಳು, ಬಾವಲಿಗಳು ಪ್ರವೇಶಿಸಿದವು. ಆಹಾರ ಸರಪಣಿಯ ನಿಯಮವನ್ನೇ ಪಾಲಿಸಿ, ಇವುಗಳ ಮೇಲೆ ಜೀವಿಸುವ ಪ್ರಾಣಿ ಪಕ್ಷಿ ಕೀಟಗಳೂ ಹಿಂಬಾಲಿಸಿದವು.


ಇಷ್ಟರ ನಡುವೆ ಎಲ್ಲೂ ಮಾನವನ ಮಧ್ಯಪ್ರವೇಶಕ್ಕೆ ಅವಕಾಶವನ್ನೇ ನೀಡಲಿಲ್ಲ. ಉದ್ಯಾನ ಒಂದು ಹಂತಕ್ಕೆ ಬರುವವರೆಗೂ ಇಲ್ಲಿನ ಕೆಲ ಪ್ರದೇಶಗಳಿಗೆ ವೀಕ್ಷಕರಿಗೆ ಹೋಗಬಿಡುತ್ತಿರಲಿಲ್ಲ. ಈಗಲೂ, ಪಕ್ಷಿಗಳು ಮೊಟ್ಟೆಯಿಡುವ, ಪ್ರಾಣಿಗಳು ಮರಿಹಾಕುವ ಜಾಗಗಳಿಗೆ ಯಾರಿಗೂ ಕಾಲಿಡಲು ಅವಕಾಶವಿಲ್ಲ. ವೀಕ್ಷಕರ ಭೇಟಿ ಇಲ್ಲಿನ ಜೀವಸಂಕುಲಕ್ಕೆ ಯಾವುದೇ ತೊಂದರೆ ನೀಡದಂತೆ ನಡೆದಾರಿಗಳು, ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕೆಲ ಅಪರೂಪದ ಪ್ರಾಣಿ ಪಕ್ಷಿಗಳ ಚಟುವಟಿಕೆಯನ್ನು ಗುಪ್ತ ಕ್ಯಾಮೆರಾದಿಂದ ಶೂಟ್ ಮಾಡಿ ವೀಕ್ಷಕರಿಗೆ ತೋರಿಸುವ ವ್ಯವಸ್ಥೆಯಿದೆ.


ಇಷ್ಟೆಲ್ಲವನ್ನೂ ಓದಿ ಮುಗಿಸುವ ಹೊತ್ತಿಗೆ, ಮತ್ತದೇ ಪ್ರಶ್ನೆ ಎದುರಾದದ್ದು, ಲಂಡನ್ನ ಈ ಉದ್ಯಾನವನ ನಮಗೂ ಮಾದರಿಯಾಗಬಾರದೇಕೆ ?


ಅಸಲಿಗೆ ಭಾರತದ ಬದುಕು ಬರಡಾಗತೊಡಗಿದ್ದೇ ಅಲ್ಲಿ. ನಮ್ಮ ಜನಜೀವನವನ್ನು ತಮ್ಮ ಮಡಿಲಲ್ಲಿ ಇಟ್ಟು ಮಗುವಿನಂತೆ ಪೊರೆಯುತ್ತಿದ್ದ ಕೆರೆಗಳನ್ನು ಕಡೆಗಣ್ಣಿನಲ್ಲೂ ನೋಡುವ ಸೌಜನ್ಯವನ್ನು ನಾವು ತೋರಲಿಲ್ಲ. ಕೊನೇ ಪಕ್ಷ, ಹೊಸ ಕೆರೆಗಳ ನಿರ್ಮಾಣ ಹಾಗಿರಲಿ, ಅಥವಾ ಇರುವ ಕೆರೆಗಳ ಅಭಿವೃದ್ಧಿಯ ಬಗೆಗೆ ಯೋಚಿಸುವುದೂ ಬೇಡ. ಕೊನೇ ಪಕ್ಷ ಇದ್ದ ಕೆರೆಗಳನ್ನು ಇದ್ದ ಹಾಗೆಯೇ ಇಟ್ಟುಕೊಳ್ಳಬೇಕೆಂದೂ ಅನ್ನಿಸದಿರುವುದು ದುರಂತ. ಕೆರೆಗಳು ಅಳಿದವು ಎಂಬುದಕ್ಕೆ ಅತ್ಯಂತ ಪ್ರಮುಖ ಕಾರಣ ಅವುಗಳ ಮೂಲಾಧಾರವಾಗಿದ್ದ ಜಲಾನಯನ ಪ್ರದೇಶವನ್ನು ನಾವು ಅತಿಕ್ರಮಿಸಿಕೊಂಡದ್ದು. ಜಲನಕ್ಷೆಯನ್ನೇ ಮರೆತು ಕಂಡಕಂಡಲ್ಲಿ ಮನೆಗಳು ತಲೆ ಎತ್ತಿದವು. ಖಾಲಿ ಜಾಗ ಕಂಡದ್ದೆಲ್ಲ ನಮ್ಮದೆಂಬ ಹಪಾಹಪಿತನ ಒಂದೆಡೆಯಾದರೆ ಕೆರೆಯ ಸುತ್ತಲ ಜಾಗ ವ್ಯರ್ಥ ಎಂಬ ಮನೋಭಾವ ಇನ್ನೊಂದೆಡೆ ಕೆರೆಗಳಿಗೆ ಮುಳುವಾಯಿತು.


ನೀವು ಒಮ್ಮೆ ಕೆರೆಯ ಸುತ್ತ ಓಡಾಡಿ ನೋಡಿ. ಒಂದು ಅವಲೋಕನಕ್ಕೆ ಸಿಗದ ಎಷ್ಟೋ ಅಂಶಗಳು, ಎರಡು, ಮೂರನೇ ಬಾರಿ ಹೋದಾಗ ಗಮನಕ್ಕೆ ಬರಬಹುದು. ಒಟ್ಟಾರೆ ಆ ಪರಿಸರದ ತೀರಾ ಎತ್ತರದ ಪ್ರದೇಶ ಯಾವುದು, ಇಳಿಜಾರು ಎಲ್ಲಿದೆ, ಮಳೆಗಾಲದಲ್ಲಿ ಮೇಲಿನಿಂದ ಹರಿದು ಬರುವ ನೀರು ಎಲ್ಲಿ ದಿಕ್ಕು ಬದಲಿಸುತ್ತದೆ. ಹಾಗೆ ಹಾದಿ ತಪ್ಪುವ ಅದು ಮುಂದೆ ಎಲ್ಲಿಗೆ ಹೋಗಿ ಸೇರುತ್ತದೆ. ಮನೆಯ ಅಥವಾ ಜಮೀನಿನ ಅತ್ಯಂತ ಸಮೀಪದ ಕೆರೆ, ಕುಂಟೆಗಳಂಥ ಜಲಾಶ್ರಯ ತಾಣ ಯಾವುದು, ಅದಕ್ಕೆ ಮೂಲ ಸೆಲೆ ಎಲ್ಲಿಯದು, ಜಲಕಿಂಡಿಯ ಮುಖ ಎತ್ತ ಕಡೆಗಿದೆ ಎಂಬಿತ್ಯಾದಿ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ. ಇಂದು ಅಲ್ಲೆಲ್ಲ ಜನ ವಸತಿ ತುಂಬಿ ತುಳುಕುತ್ತಿದೆ. ಅಂದ ಮೇಲೆ ಕೆರೆಗಳು ನಳನಳಿಸುತ್ತಲೇ ಇರುವುದೆಂತು ?


ಪ್ರತಿ ಕೆರೆಗೂ ಅದರ ಜಲಾನಯನವನ್ನಾಧರಿಸಿ ಪ್ರತ್ಯೇಕ ಚಿತ್ರ ಬರೆದಿಟ್ಟುಕೊಳ್ಳುತ್ತಿದ್ದುದರಿಂದ ನೀರಿನ ಪ್ರಮಾಣದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅದಕ್ಕೆ ಕಾರಣವೇನು ? ಎಲ್ಲಿ ಲೋಪವಾಗಿದೆ ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತಿತ್ತು. ಇಂದು ಮೂಲಭೂತವಾಗಿ ಜಲನಕ್ಷೆ ಎಂಬುದೇ ಇಲ್ಲ. ಅಂಥ ಯಾವುದೇ ಪ್ರಯತ್ನ ಈಗ ನಡೆಯುತ್ತಿಲ್ಲವಾದ್ದರಿಂದ ನೀರಿನ ಬಳಕೆಯ ಲೆಕ್ಕಾಚಾರವೂ ತಲೆಕೆಳಗಾಗಿದೆ. ನೀರು ಸಹ ಹಾದಿ ತಪ್ಪಿ ಹರಿದು ಹೋಗುತ್ತಿದೆ.


ಕೆರೆಯೆಂದರೆ ಅದೊಂದು ಜೀವಂತ ತಾಣ. ಅಲ್ಲಿ ನೂರಕ್ಕೆ ನೂರು ಸಂಪೂರ್ಣ ಜೈವಿಕ ಪ್ರಕ್ರಿಯೆ ಸಾಗುತ್ತಿರುತ್ತದೆ. ಭೌತಿಕ ನಿರ್ಮಾಣ ಎಷ್ಟು ಮುಖ್ಯವೋ, ಜೈವಿಕ ಹಾಗೂ ಸಾಂಸ್ಕೃತಿಕ ಅಂಶಗಳನ್ನು ಪರಿಗಣಿಸುವುದೂ ನೀರಿನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅಷ್ಟೇ ಪ್ರಮುಖ ವಿಚಾರವೆನಿಸಿಕೊಳ್ಳುತ್ತದೆ. ನೈಸರ್ಗಿಕವಾಗಿ ಅತ್ಯಂತ ಸೂಕ್ಷ್ಮ ಸಂಗತಿಗಳನ್ನೂ ಗಮನಿಸಿದಲ್ಲಿ ಮಾತ್ರ ಕೆರೆಯೊಂದರ ಸಮರ್ಥ ಅಭಿವೃದ್ಧಿ ಸಾಧ್ಯ.


‘ಲಾಸ್ಟ್’ ಡ್ರಾಪ್: ನೀರೆಂದರೆ ಅದು ನಿರ್ಜೀವ ಅಲ್ಲವೇ ಅಲ್ಲ. ಭಾವನಾತ್ಮಕ ಒಡನಾಟ ಇಲ್ಲದ ವ್ಯಕ್ತಿಗಳ ನಡುವೆ ಅದು ಎಂದಿಗೂ ವಾಸ ಮಾಡಲೊಪ್ಪುವುದೇ ಇಲ್ಲ.

Tuesday, November 17, 2009

ನೀರು ಗುಟುಕರಿಸುವ ಮುನ್ನ ತಿಳಿಯಿರಿ ಒಂದು ತೊಟಕು

ಮಣ್ಣು ಯಾರಿಗೆ ಗೊತ್ತಿಲ್ಲ ? ಹಾಗೆಯೇ ನೀರು, ಮಳೆ, ಮೋಡ, ಕಲ್ಲು ಇವೆಲ್ಲವೂ ಗೊತ್ತು. ಹಾಗಾದರೆ ಈಗ ಹೇಳಿ ಮಣ್ಣು ಅಂದರೇನು ? ಅಯ್ಯೋ...ಇದೊಳ್ಳೆ ಕತೆಯಾಯ್ತಲ್ಲಾ ? ಮಣ್ಣು ಅಂದರೆ ಮಣ್ಣು ಅನ್ನಬಹುದು. ಹಾಗಂದರೇನು ಅಂತ ಹೇಳುವುದು ಕಷ್ಟ. ಬೇಕಿದ್ದರೆ ಇದು ಅಂತ ತೋರಿಸಬಹುದಪ್ಪಾ....ಹಾಗೆಯೇ ಇತರ ವಿಷಯಗಳ ಬಗೆಗೂ ಸಹ. ಅಂಥ ನೀರು, ಮಣ್ಣು ಇತ್ಯಾದಿಗಳಲ್ಲಿ ಹಲವು ಬಗೆಗಳೂ ಉಂಟು. ಬಹುತೇಕ ಸಂದರ್ಭದಲ್ಲಿ ನಮಗೆ ಈ ವ್ಯತ್ಯಾಸಗಳು ಗೊತ್ತೇ ಆಗಿರುವುದಿಲ್ಲ. ಆದರೆ ನೀರಿನ ಬಗೆಗೆ ತಿಳಿದುಕೊಳ್ಳುವ ಮುನ್ನ ಇಂಥ ವ್ಯತ್ಯಾಸಗಳನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ.

ಬೇಕಿದ್ದರೆ ನೋಡಿ, ಜೀವನ ಎಂಬುದರ ಬಗ್ಗೆ ತಿಳಿಯುವಾಗ ಬದುಕಿಗೆ ಸಂಬಂಸಿ ಹಲವು ಸಂಗತಿಗಳನ್ನು ಅರಿಯಲೇಬೇಕಾಗುತ್ತದೆ. ಹಾಗೆಯೇ ನೀರು. ಅದು ಜೀವನದ ಮೂಲದ್ರವ್ಯ. ಜೀವನದ ಚೈತನ್ಯಾಧಾರ. ಹೀಗಾಗಿ ಜೀವನದ ಅರಿವಿಗೆ ನೀರಿನ, ಅದಕ್ಕೆ ಸಂಬಂಸಿದ ಹಲವು ಸಂಗತಿಗಳನ್ನು ನಾವು ಅರಿತುಕೊಳ್ಳುವುದು ಪ್ರಾಥಮಿಕ ಅಗತ್ಯವಾಗುವುದಿಲ್ಲವೇ ?


ನೀರಿನ ಬಗ್ಗೆ ಮಾತನಾಡುವಾಗ, ಅದರ ಕುರಿತ ಬರಹಗಳನ್ನು ಓದುವಾಗ, ತಜ್ಞರ ಮಾತುಗಳನ್ನು ಆಲಿಸುವಾಗ-ಹಲವು ಸಂದರ್ಭಗಳಲ್ಲಿ ಅನೇಕ ಪದಗಳು ಬಳಕೆಯಾಗುತ್ತಲೇ ಇರುತ್ತವೆ. ಅನೇಕ ಬಾರಿ ಅವುಗಳ ಸರಿಯಾದ ಅರ್ಥವೇ ನಮಗೆ ತಿಳಿದಿರುವುದಿಲ್ಲ. ಆದರೆ ಇವುಗಳಿಲ್ಲದೆ ನೀರಿನ ವಿಚಾರ ಮಾತನಾಡಲೂ ಆಗುವುದಿಲ್ಲ. ನೀರಿನ ಬಗೆಗೆ ತಿಳಿದುಕೊಳ್ಳುವ ಮೊದಲು ಅಂಥ ಹಲವು ನಿತ್ಯಬಳಕೆಯ ಹಾಗೂ ಪಾರಿಭಾಷಿಕ ಪದಗಳ ಕುರಿತು ಒಂದಷ್ಟು ಹೇಳುವ ಪ್ರಯತ್ನ ಈ ವಾರದ ಅಂಕಣದಲ್ಲಿದೆ.


ಮೇಲ್ಮಣ್ಣು: ಹೆಸರೇ ಸೂಚಿಸುತ್ತದೆ. ಮೇಲೆ ಇರುವ ಮಣ್ಣು. ಆದರೆ ಎಷ್ಟು ಮೇಲೆ ಎಂಬುದು ಪ್ರಶ್ನೆ. ಮಣ್ಣಿನ ಮೇಲು ಬದಿಯ ೧.೫ ಮೀಟರ್‌ನ ಪದರ. ಇದು ಹಳ್ಳಿ, ಕೃಷಿ ಜಮೀನುಗಳಲ್ಲಿ ಸರಿ. ಆದರೆ ನಗರಗಳ ವಿಚಾರಕ್ಕೆ ಬಂದಾಗ ಸರಿಹೊಂದದು. ನಗರಗಳಲ್ಲಿ ಕಟ್ಟಡ ನಿರ್ಮಾಣದ ಸಂದರ್ಭ ಸುತ್ತಮುತ್ತಲಿನ ಜಮೀನಿನ ಮೇಲ್ಮೈ ಮಣ್ಣು ಅವುಗಳ ಅವಶೇಷಗಳಿಂದ ತುಂಬಿರುತ್ತದೆ. ಹೀಗಾಗಿ ಇಲ್ಲಿ ಮೇಲ್ಮಣ್ಣನ್ನು ಗುರುತಿಸುವುದು ಕಷ್ಟ.


ಕೆಳ ಮಣ್ಣು: ನೆಲಮಟ್ಟಕ್ಕಿಂತ ೧.೫ ಮೀಟರ್ ನಂತರದ ಮಣ್ಣು. ಅದೇನೋ ಸರಿ ಇದನ್ನು ಗುರುತಿಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮರಳು, ಜೇಡಿ, ಆವೆ, ಸಣ್ಣಕಲ್ಲುಗಳು ಅಥವಾ ಬಂಡೆ ಇತ್ಯಾದಿಗಳ ಶೇಕಡಾವಾರು ಪ್ರಮಾಣಕ್ಕನುಸರಿಸಿ ಕೆಳಮಣ್ಣಿನ ರಚನೆ, ವೈವಿಧ್ಯ, ಗುಣವಿಂಗಡಣೆ ಸಾಧ್ಯ. ಸಾಮಾನ್ಯವಾಗಿ ಸ್ಥಳದಲ್ಲಿ ಕಟ್ಟಡ ನಿರ್ಮಿಸುವ ಮುನ್ನ, ಯಾವ ಬಗೆಯ ತಳಪಾಯ ಹಾಕಬೇಕು ಎಂಬುದನ್ನು ನಿರ್ಧರಿಸಲು ಈ ಪರೀಕ್ಷೆಯನ್ನು ೭ರಿಂದ ೧೦ ಮೀಟರ್ ಕೆಳಗಿನ ಮಣ್ಣಿನವರೆಗೂ ಮಾಡಲಾಗುತ್ತದೆ.


ಮೇಲ್ಮೈ ಜಲ: ಕೆಳಮಣ್ಣಿನಲ್ಲಿ ಉಂಟಾಗುವ ರಂಧ್ರಗಳಲ್ಲಿ ಶೇಖರವಾಗುವ, ಇನ್ನಷ್ಟು ತಳದವರೆಗೆ ಇಳಿಯಬಲ್ಲ, ಮೇಲ್ಮೈ ಹಂತದವರೆಗೆ ಒಸರುವ ನೀರು. ಇದನ್ನು ಬಾವಿ ಅಥವಾ ಬೋರ್‌ವೆಲ್‌ಗಳ ಮೂಲಕ ಸಂಗ್ರಹಿಸಬಹುದು.


ಜಲಜಶಿಲೆ: ಮೇಲ್ಮೈ ಮಣ್ಣಿಗಿಂತ ಕೆಳಗಿರುವ, ನೀರನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳುವ ಹಾಗೂ ನೀರಿನ ಸಂಚಾರಕ್ಕೆ ಹಾದಿ ಮಾಡಿಕೊಡುವ, ಹಾಗಾಗಿಯೇ ನೀರಿನ ಮೂಲ ಎನಿಸಿಕೊಂಡಿರುವ ಮಣ್ಣು ಅಥವಾ ಬಂಡೆಯ ಪದರ.


ಮೇಲ್ಮೈ ಜಲ ಮಟ್ಟ: ಕೆಳ ಮಣ್ಣಿನ ಮೇಲುಭಾಗದಲ್ಲಿರುವ ನೀರಿನ ಮಟ್ಟ. ಇದು ಒಂದು ಪ್ರದೇಶದಲ್ಲಿ ಎಲ್ಲ ಕಡೆಗೂ ಸಮಾನವಾಗಿರಬೇಕೆಂದೇನಿಲ್ಲ. ಕೆಳಮಣ್ಣಿನ ಗುಣಧರ್ಮ ಹಾಗೂ ನೀರಿನ ಬಳಕೆಯ ಪ್ರಮಾಣಕ್ಕನುಸರಿಸಿ ಇದು ಏರುಪೇರಾಗಬಹುದು.


ಬಾವಿ: ಮೇಲ್ಮೈ ಜಲ ಮಟ್ಟ ದೊರೆಯುವವರೆಗೆ ತೋಡಲಾದ ಗುಂಡಿ. ಮರಳು ಅಥವಾ ಜೇಡಿ ಮಣ್ಣಿನಲ್ಲಾದರೆ, ತೋಡಿದ ಬಾವಿಯ ಬದಿ ಕುಸಿಯದಂತೆ ಇಟ್ಟಿಗೆ ಅಥವಾ ಕಾಂಕ್ರೀಟ್‌ನ ರಿಂಗ್ ನಿರ್ಮಿಸುವುದು ಅಗತ್ಯ. ಕಲ್ಲು ಬಂಡೆ ಇದ್ದರೆ ಅಂಥ ರಿಂಗ್ ಅನಗತ್ಯ. ಸಾಮಾನ್ಯವಾಗಿ ಈ ಗುಂಡಿ ವೃತ್ತಾಕಾರದಲ್ಲಿದ್ದು, ೩ರಿಂದ ೧೨ ಅಡಿ ತ್ರಿಜ್ಯ ಹೊಂದಿರುತ್ತದೆ ಹಾಗೂ ೪೫ ಅಡಿಗಿಂತ ಆಳವಾಗಿರುವುದಿಲ್ಲ.


ಸಾಮಾನ್ಯವಾಗಿ, ಬಾವಿಯ ನೀರಿನ ಗುಣಮಟ್ಟ ಬೋರ್‌ವೆಲ್ ನೀರಿಗಿಂತ ಉತ್ತಮವಾಗಿರುತ್ತದೆ. ಆದರೆ ಕೆಲವೆಡೆ, ಬಂಡೆಗಳಿರುವ ಪ್ರದೇಶದಲ್ಲಿ ಬೋರ್‌ವೆಲ್ ನೀರು ಬಾವಿಯದಕ್ಕಿಂತ ಚೆನ್ನಾಗಿರುತ್ತದೆ. ಇದಕ್ಕೆ ‘ತೆರೆದ ಬಾವಿ’ ಅಂತ ಯಾಕೆನ್ನುತ್ತಾರೆ ಅಂದರೆ, ಪಂಪ್ ತಂತ್ರಜ್ಞಾನ ಆವಿಷ್ಕಾರವಾಗುವ ಮೊದಲು ರಾಟೆ-ಹಗ್ಗ ಬಳಸಿ ಬಾವಿಯಿಂದ ನೀರೆತ್ತುತ್ತಿದ್ದರು. ಕೆಲವೆಡೆ ಬಾವಿಯ ಬದಿಯಲ್ಲಿ ಸಣ್ಣ ಮೆಟ್ಟಲು ಅಳವಡಿಸಿ ಕೆಳಗಿಳಿದು ನೀರು ಹೊರುವುದೂ ಇತ್ತು. ಇಂದು ಎಲ್ಲ ಕಡೆ ಪಂಪ್ ಇರುವುದರಿಂದ, ಬಾವಿಗಳನ್ನು ತೆರೆದೇ ಇರಬೇಕಾದ ಅಗತ್ಯವೇನೂ ಇಲ್ಲ. ಇಂದು ಮನುಷ್ಯರ ಹಾಗೂ ವಾಹನಗಳ ಓಡಾಟಕ್ಕೆ ಭಂಗ ಬಾರದಂತೆ ಅವುಗಳ ಮೇಲೆ ಗಟ್ಟಿಯಾದ ಕವರ್ ಹೊದಿಸಬಹುದು.


ಕೊಳವೆ ಬಾವಿ: ಸಾಮಾನ್ಯವಾಗಿ ಬಾವಿಗಳಿಗಿಂತ ಹೆಚ್ಚು ಆಳಕ್ಕೆ ಮಣ್ಣಿನಲ್ಲಿ ಕೊರೆದಿರುವ, ೫ರಿಂದ ೧೦ ಇಂಚು ತ್ರಿಜ್ಯವಿರುವ ವೃತ್ತಾ ಕಾರದ ರಂಧ್ರ. ಇದು ಮಣ್ಣಿನ ನಾನಾ ಪದರಗಳಿಂದ ನೀರನ್ನು ಸಂಗ್ರಹಿಸಬಲ್ಲದು. ಸಾಮಾನ್ಯ ಮಣ್ಣಿನಲ್ಲಿ ಇವನ್ನು ರಿಗ್ ಬಳಸಿ, ಬಂಡೆಮಣ್ಣಿನಲ್ಲಿ ನ್ಯೂಮಾಟಿಕ್ ರಿಗ್ ಬಳಸಿ ಕೊರೆಯಲಾಗುತ್ತದೆ. ರಂಧ್ರದೊಳಗೆ ಮಣ್ಣು ಕುಸಿಯದಂತೆ ಪಿವಿಸಿ ಕೇಸಿಂಗ್ ಪೈಪ್ ಇಳಿಸಲಾಗುತ್ತದೆ. ಬಂಡೆಮಣ್ಣಿನಲ್ಲಿ ಕೇಸಿಂಗ್ ಅಗತ್ಯವಿಲ್ಲ. ನಾನಾ ಪದರಗಳಿಗೆ ತಕ್ಕಂತೆ ಈ ಕೇಸಿಂಗ್ ಪೈಪಿನಲ್ಲಿ ತೂತುಗಳಿರುತ್ತವೆ. ಹಿಂದೆ ಕಬ್ಬಿಣದ ಕೇಸಿಂಗ್ ಪೈಪ್‌ಗಳನ್ನು ಬಳಸಲಾಗುತ್ತಿತ್ತು.


ಟ್ಯೂಬ್‌ವೆಲ್: ಇದು ಕೂಡ ಬೋರ್‌ವೆಲ್. ಆದರೆ ಹೆಚ್ಚು ಆಳವಾಗಿರುವುದಿಲ್ಲ.


ಬಳಕೆ ಬಾವಿ/ಬಳಕೆ ಬೋರ್‌ವೆಲ್: ನೀರನ್ನು ಬಳಕೆಗೆ ಪಡೆಯಲಾಗುತ್ತಿರುವ ಬಾವಿ ಅಥವಾ ಕೊಳವೆಬಾವಿ.


ಮರುಪೂರಣ ಬಾವಿ: ಜಲ ಮಟ್ಟ ಬಾವಿಯ ತಳಕ್ಕಿಂತಲೂ ಇಳಿದುಹೋಗಿರುವುದರಿಂದ ನೀರು ಖಾಲಿಯಾಗಿ, ಬಳಕೆಗೆ ಉಪಯೋಗವಾಗದ ಬಾವಿ. ಹೀಗಾಗಿ ಇದರಲ್ಲಿ ಮಳೆ ನೀರು ಮಾತ್ರ ನಿಲ್ಲುತ್ತದೆ. ಕೆಲ ಕಾಲಾನಂತರ, ಜಲಮಟ್ಟ ಏರಿದಾಗ ಈ ಬಾವಿ ಬಳಕೆಯೋಗ್ಯವಾಗಬಹುದು.


ಇಂಗು ಗುಂಡಿ: ಮಳೆ ನೀರನ್ನು ಇಂಗಿಸಲು ಅನುಕೂಲ ಹಾಗೂ ಅಗತ್ಯಕ್ಕೆ ತಕ್ಕಷ್ಟು ಆಳಕ್ಕೆ ಹಾಗೂ ಅಗಲಕ್ಕೆ ಮಣ್ಣಿನಲ್ಲಿ ಕೊರೆದಿರುವ ಗುಂಡಿ. ಮಳೆ ನೀರು ಇಲ್ಲಿ ಸಂಗ್ರಹಗೊಂಡು, ನಿಂತು, ಇಂಗಿ ಜಲ ಮಟ್ಟವನ್ನು ತಲುಪುತ್ತದೆ. ಬಾವಿಗಿದ್ದಂತೆ ಇದಕ್ಕೂ ಇಟ್ಟಿಗೆ ಅಥವಾ ಕಾಂಕ್ರೀಟಿನ ಲೈನಿಂಗ್ ಇರಬಹುದು. ಅಗತ್ಯಬಿದ್ದಾಗ ಇದನ್ನೇ ಆಳಕ್ಕೆ ತೋಡಿ, ಬಾವಿಯಂತೆಯೂ ಬಳಸಲು ಸಾಧ್ಯ.


ಮರುಪೂರಣ ಕೊಳವೆ ಬಾವಿ: ಸಮರ್ಪಕವಾಗಿ ನಿರ್ಮಿಸಲಾದ ಕೊಳವೆ ಬಾವಿ- ಇದರ ಮುಖ್ಯ ಉದ್ದೇಶ ಕೆಳಮಣ್ಣಿಗೆ ಮಳೆ ನೀರನ್ನು ತಲುಪಿಸುವುದು. ಮರುಪೂರಣ ಬಾವಿಯಂತೆ ಇದು ಕೂಡ ಜಲ ಮಟ್ಟವನ್ನು ಮುಟ್ಟಿರಬಹುದು ಅಥವಾ, ಅದಕ್ಕೆ ನೀರೂಡಿಸಲು ಅಗತ್ಯವಾದ ಪದರದ ತನಕ ಇರಬಹುದು. ಕೆಲ ಕಾಲದ ಬಳಿಕ, ಜಲಮಟ್ಟವು ಇದರ ತಳಭಾಗವನ್ನು ದಾಟಿ ಮೇಲೆ ಬಂದರೆ ಆಗ ಇದನ್ನು ಬಳಕೆಯೋಗ್ಯವಾಗಿ ಮಾಡಬಹುದು.


ಇಂಗು ರಂಧ್ರ: ನೀರನ್ನು ಹೀರಿಕೊಳ್ಳಲು ಅಗತ್ಯವಾದಷ್ಟು ಆಳಕ್ಕೆ ಮಣ್ಣಿನಲ್ಲಿ ಕೊರೆಯಲಾದ ೫ರಿಂದ ೧೦ ಇಂಚು ತ್ರಿಜ್ಯವುಳ್ಳ ರಂಧ್ರ. ಚಿಕ್ಕ ಕಲ್ಲುಗಳು ಹಾಗೂ ಇದ್ದಲನ್ನು ಇದರಲ್ಲಿ ತುಂಬಿಸಲಾಗುತ್ತದೆ. ಇದರೊಳಗೆ ನೀರು ಕಲ್ಲು ಹಾಗೂ ಇದ್ದಿಲಿನ ನಡುವೆ ಹರಿದು ಇಂಗುತ್ತದೆ. ಕಲ್ಲುಗಳ ಬದಲು ರಂಧ್ರಗಳುಳ್ಳ ಪಿವಿಸಿ ಪೈಪನ್ನೂ ಬಳಸಬಹುದು. ರಂಧ್ರದ ಬಾಯಿ ೨-೩ ಅಡಿಯಷ್ಟು ಅಗಲವಿದ್ದಾಗ, ಶುದ್ಧ ಮರಳು ಹಾಕಿ ಮುಚ್ಚಬಹುದು.


ರೋಗ ಜೀವಾಣು: ಕೆಲ ನಮೂನೆಯ ಬ್ಯಾಕ್ಟೀರಿಯಾಗಳು ಹಾಗೂ ವೈರಸ್‌ಗಳು ಕುಡಿಯುವ ನೀರು ಶುದ್ಧವಾಗಿಲ್ಲದಿದ್ದಾಗ ಅವುಗಳ ಮೂಲಕ ಮಾನವನ ಜೀರ್ಣಾಂಗ ವ್ಯವಸ್ಥೆಯೊಳಗೆ ಪ್ರವೇಶಿಸಿ ರೋಗವನ್ನುಂಟುಮಾಡಬಲ್ಲವು. ಉದಾಹರಣೆಗೆ: ಕಾಲರಾ, ವಾಂತಿ ಭೇದಿ, ಟೈಫಾಯಿಡ್, ಜಾಂಡೀಸ್ ಇತ್ಯಾದಿ.


ಸೀವೇಜ್ (ಕಪ್ಪು ನೀರು): ನಮ್ಮ ಶೌಚಾಲಯಗಳಿಂದ ಕಲ್ಮಶಸಹಿತ ಹರಿಯುವ ನೀರು.


ಸಲ್ಲೇಜ್ (ಬೂದು ನೀರು): ನಾವು ಸ್ನಾನಕ್ಕೆ, ಬಟ್ಟೆ-ಪಾತ್ರೆ-ವಾಹನ- ನೆಲ ತೊಳೆಯಲು ಬಳಸಿದ ನೀರು. ಈ ನೀರು, ಸೀವೇಜ್‌ನಷ್ಟು ಹಾನಿಕಾರಕ ರೋಗ ಜೀವಾಣುಗಳನ್ನು ಹೊಂದಿರುವುದಿಲ್ಲ. ಆದ್ದರಿಂದ ಇದನ್ನು ಸಂಸ್ಕರಿಸುವುದು ಸುಲಭ.


ಸೀವರೇಜ್: ಇದು ಬಳಸಿದ ನೀರನ್ನು (ಸಾಮಾನ್ಯವಾಗಿ ಸೀವೇಜ್) ಸಂಸ್ಕರಣಾ ಘಟಕಕ್ಕೆ ಕೊಂಡೊಯ್ಯುವ, ಮನೆ-ರಸ್ತೆ-ಬೀದಿಯಲ್ಲಿ ಹಬ್ಬಿರುವ ಭೂಗತ ಪೈಪ್‌ಗಳ ಜಾಲ. ಇದು ಪಂಪಿಂಗ್ ಸ್ಟೇಶನ್‌ಗೆ, ಅಲ್ಲಿಂದ ಸೀವೇಜ್ ಸಂಸ್ಕರಣಾ ಘಟಕಕ್ಕೆ ಹರಿದು ನಂತರ ಸುರಕ್ಷಿತವಾಗಿ ಹರಿಯಬಿಡಲಾಗುತ್ತದೆ. ಇಂದು ಸಲ್ಲೇಜ್ ಕೂಡ ಸೀವೇಜ್ ಜತೆಗೆ ಸೇರಿಕೊಳ್ಳುತ್ತದೆ.


ಸವಳು ನೀರು: ಕುಡಿಯಲು ಬೇಕಾದ ಗುಣಮಟ್ಟಕ್ಕಿಂತ ಹೆಚ್ಚು ಪ್ರಮಾಣದ ಲವಣಾಂಶ ಕರಗಿರುವ ನೀರು. ತುಸು ಶುದ್ಧೀಕರಿಸಿದರೆ ಇದನ್ನು ಕುಡಿಯಲು, ಅಡುಗೆ ಮಾಡಲು ಬಳಸಬಹುದು.


ಸಲೈನ್ ವಾಟರ್: ಇದು ಸವಳು ನೀರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಲವಣಾಂಶ ಬೆರೆತಿರುವ ನೀರು. ಇದನ್ನು ಕುಡಿಯುವುದು, ಬಟ್ಟೆ ತೊಳೆಯುವುದು, ಅಡುಗೆ ಮಾಡುವುದು ಸಾಧ್ಯವಿಲ್ಲ.

‘ಲಾಸ್ಟ್’ಡ್ರಾಪ್: ನೀರು ಅಷ್ಟು ಸುಲಭದಲ್ಲಿ ಅರ್ಥವಾಗುವ ಸಂಗತಿಯಲ್ಲ. ಹೇಳಿ ಕೇಳಿ ಅದು ನೀರು. ಈವರೆಗೆ ಅದರ ಆಳ-ವಿಸ್ತಾರ ಗಳನ್ನು ಪೂರ್ತಿ ಅರಿತವರಿಲ್ಲ. ಒಂದಷ್ಟು ಹನಿಗಳನ್ನು ಗುಟುಕರಿಸಬಹುದಷ್ಟೇ.

ಕುಡಿಯೋ ನೀರಿಗಿನ್ನು ಕಾಸು ಕೊಡೋದು ಅನಿವಾರ್ಯ

ಆಂದ್ರ ಪ್ರದೇಶದ ಹಳ್ಳಿ ಜನತೆ ಇನ್ನು ಮುಂದೆ ಬಾಯಾರಿದಾಗ ಎಲ್ಲಿ ಬೇಕಾದರೂ ಪುಗಸಟ್ಟೆ ನೀರು ಕುಡಿಯುವಂತಿಲ್ಲ. ಲೀಟರ್‌ಗೆ ೧೦ ಪೈಸೆಯಂತೆ ಪಾವತಿಸಬೇಕು. ಅದೇನು ಮಹಾ, ನಾವು ಲೀಟರ್‌ಗೆ ೧೦ ರೂಪಾಯಿ ಕೊಟ್ಟು ಬಿಸ್ಲೇರಿ ನೀರು ಕುಡಿಯುತ್ತಿಲ್ಲವೆ ? ಎಂದು ಕೆಲವರು ಕೇಳಬಹುದು. ಅದರೆ ಹಾಗಲ್ಲ ಇದು. ಖಾಸಗಿ ಕಂಪನಿಗಳು ಗ್ರಾಮೀಣ ಜಲಮೂಲಗಳಿಂದಲೇ ಎತ್ತಿದ ಕಚ್ಚಾ ನೀರನ್ನು ಶುದ್ಧೀಕರಿಸಿ(?) ಕ್ಯಾನುಗಳಲ್ಲಿ ತುಂಬಿ ಜನರಿಗೆ ಮಾರುತ್ತವೆ. ಈಗಾಗಲೇ ಇಂಥ ಐದು ಕಂಪೆನಿಗಳ ಹೆಸರನ್ನು ಆಂಧ್ರ ಸರಕಾರ ಪಟ್ಟಿ ಮಾಡಿದೆ. ತಮ್ಮೂರಿನ ಜಲವನ್ನೇ ೨೦ ಲೀಟರ್‌ನ ಕ್ಯಾನ್‌ಗೆ ೧೦ ರೂಪಾಯಿಯಂತೆ ತೆತ್ತು ಕೊಂಡುಕೊಳ್ಳುವ ಹಣೆಬರಹ ಜನರದು.

ದೇಶದ ನಗರಗಳು ದಿನದಿಂದ ದಿನಕ್ಕೆ ಬೆಳೆಯುತ್ತಿದೆ, ಸಹಜವಾಗಿ ಅಲ್ಲಿನ ನೀರಿನ ಬೇಡಿಕೆ ಸಹ. ಇದನ್ನು ಪೂರೈಸಲು ನಾವು ಅದೆಷ್ಟೇ ಖರ್ಚಾಗಲಿ, ಅದೆಷ್ಟು ದೂರದಿಂದಲೇ ಆಗಲಿ ನೀರು ತಂದೇ ತರುತ್ತೇವೆಂಬ ಪಣ ತೊಟ್ಟು ಬಿಟ್ಟಿದ್ದೇವೆ. ಹೀಗಾಗಿಯೇ ಬೆಂಗಳೂರಿಗೆ ನಾವು ಸುಮಾರು ೧೦೦ ಕಿ.ಮೀ.ಗಿಂತಲೂ ದೂರದಿಂದ ಕಾವೇರಿಯನ್ನು ಎಳೆದು ತರುತ್ತಿದ್ದೇವೆ. ದಿಲ್ಲಿಗೆ ನೀರು ಪೂರೈಕೆಯಾಗುತ್ತಿರುವುದು ೩೦೦ ಕಿ.ಮೀ. ದೂರದ, ಹಿಮಾಲಯದ ತಪ್ಪಲಿನ ತೆಹ್ರಿ ಅಣೆಕಟ್ಟೆಯಿಂದ. ಹೈದರಾಬಾದ್‌ಗೆ ೧೦೫ ಕಿ.ಮೀ. ದೂರವಿರುವ, ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ನಾಗಾರ್ಜುನ ಸಾಗರ ದಿಂದ. ಉದಯಪುರಕ್ಕೆ ಜೈಸಮಂದ್ ಸರೋವರದಿಂದ ಪೂರೈಸಲಾಗುತ್ತಿತ್ತಾದರೂ ಅದೀಗ ಬತ್ತಿಹೋಗಿದೆ.


ವಿಚಿತ್ರವೆಂದರೆ ನಗರ ಪ್ರದೇಶದ ಬಡವರ್ಗದವರು ಕಡಿಮೆ ನೀರನ್ನು ಪಡೆಯುತ್ತಿದ್ದರೂ ಅದಕ್ಕಾಗಿ ಹೆಚ್ಚಿನ ಹಣ ತೆರುತ್ತಿದ್ದಾರೆ. ಅತಿ ಹೆಚ್ಚು ಬಳಕೆ ಮಾಡುತ್ತಿರುವ ಶ್ರೀಮಂತ ವರ್ಗದ ಮಂದಿ ಅತಿ ಕಡಿಮೆ ಬೆಲೆಯಲ್ಲಿ ನೀರು ಪಡೆಯುತ್ತಿದ್ದಾರೆ. ಬೆಂಗಳೂರಿನ ನಿವಾಸಿಗಳ ಪೈಕಿ ಶೇ. ೨೦ರಷ್ಟಿರುವ ಶ್ರೀಮಂತರು ನೀರಿನ ಶುಲ್ಕದಲ್ಲಿ ಹೆಚ್ಚಿನ ಸಬ್ಸಿಡಿ (ಶೇ. ೩೦ರಷ್ಟು )ಯ ಫಲಾನುಭವಿಗಳು. ಆದರೆ ಶೇ. ೫೦ರಷ್ಟಿರುವ ಬಡವರ್ಗದ ಮಂದಿಗೆ ನೀರಿನ ಶುಲ್ಕದಲ್ಲಿ ಶೇ. ೧೦ರಷ್ಟು ಮಾತ್ರ ಸಹಾಯಧನ ದೊರೆಯುತ್ತಿದೆ.
ಹಣವಂತರನ್ನೇ ಮಾನದಂಡವಾಗಿಟ್ಟುಕೊಂಡು ಸಂಪನ್ಮೂಲ ಹಂಚಿಕೆ ಮಾಡುವ ನಮ್ಮ ಪ್ರವೃತ್ತಿ ಖಂಡಿತಾ ಅಪಾಯಕಾರಿ. ನೀವು ಬೇಕಿದ್ದರೆ ನೋಡಿ, ಹಣಕೊಟ್ಟರೆ ಎಷ್ಟು ಬೇಕಾದರೂ ನೀರು ಬಳಸಬಹುದು, ಅದಿಲ್ಲದಿದ್ದರೆ ನೀರು ಸಿಗದು ಎಂಬ ಸ್ಥಿತಿ ನಗರಗಳಲ್ಲಿದೆ. ನಮ್ಮ ಇಂಥ ಸಂಪನ್ಮೂಲ ಹಂಚಿಕೆ ನೀತಿ ಕೂಡ ರಾಜತಾಂತ್ರಿಕ ಹುನ್ನಾರದ ಭಾಗವೇ. ಅಮೆರಿಕ ಅದರ ಸೂತ್ರಧಾರ. ಹೀಗಾಗಿ, ವಿಶ್ವಬ್ಯಾಂಕ್, ವಿಶ್ವವ್ಯಾಪಾರ ಸಂಸ್ಥೆಗಳಂಥ ಏಜೆಂಟರ ಮೂಲಕ ಸಾಲ ಹಂಚುವ ಅದು ಸಾಲ ಪಡೆದ ದೇಶಗಳನ್ನು ಜಾಗತೀಕರಣದ ‘ತದ್ರೂಪಿ ತಯಾರಿಕಾ ಉಪಕರಣ’ವಾಗಿ ಮಾರ್ಪಡಿಸುತ್ತದೆ. ಇಂಥ ತದ್ರೂಪಿ ವೇದಿಕೆಯೇ ನೀರಿನ ಖಾಸಗೀಕರಣ. ಮತ್ತೆ ಇವೆಲ್ಲವೂ ನಗರ ಕೇಂದ್ರಿತ.


ಒಂದು ನಿಮಿಷ ಯೋಚಿಸಿ. ನಮ್ಮ ಗ್ರಾಮೀಣ ಪ್ರದೇಶದ, ರೈತ ಸಮುದಾಯದ ನೀರಿನ ಬಳಕೆ ಪ್ರಮಾಣದಲ್ಲಿ ಇನ್ನೂ ಹೇಳಿಕೊಳ್ಳುವ ಯಾವುದೇ ಬದಲಾವಣೆಗಳೂ ಆಗಿಲ್ಲ. ಬದಲಾದದ್ದೆಂದರೆ ಅವರ ನೀರಿನ ಬವಣೆಯಲ್ಲಿ ಮಾತ್ರ. ಹಾಗೆಂದು ಅದು ತಪ್ಪಿದೆ ಎಂದಲ್ಲ. ಅದರ ಸ್ವರೂಪ ಬದಲಾಗಿದೆ. ಇದಕ್ಕೊಂದು ತಾಜಾ ಉದಾಹರಣೆಯೆಂದರೆ ಆಂಧ್ರಪ್ರದೇಶದ ಈ ಬೆಳವಣಿಗೆ. ಇದಕ್ಕೆ ಕಾರಣ ಅಲ್ಲಿನ ಗ್ರಾಮೀಣ ಜಲಮೂಲಗಳು ಸ್ವಚ್ಛವಾಗಿಲ್ಲದಿರುವುದು. ಹೆಚ್ಚಿನ ಕಡೆ ಜಲಮೂಲಗಳೇ ರೋಗರುಜಿನ, ಸಾಂಕ್ರಾಮಿಕಗಳ ತವರಾಗಿವೆ. ಶೇ.೬೦ ಭಾಗ ಗ್ರಾಮೀಣ ಜನತೆಗೆ ಪ್ರತಿದಿನ ಸ್ವಚ್ಛ ಕುಡಿಯುವ ನೀರು ದೊರೆಯುವುದೇ ಕಷ್ಟವಾಗಿದೆಯಂತೆ.


ಈಗ ಇಲ್ಲಿನ ಹಳ್ಳಿಗರ ಪರಿಸ್ಥಿತಿ ಹೇಗಿದೆ ನೋಡಿ: ಸಿಗುವ ಅತ್ಯಲ್ಪ ನೀರನ್ನು ನಿತ್ಯಕಾರ್‍ಯಗಳಿಗೆ ಉಪಯೋಗಿಸಬೇಕು. ಅದನ್ನೇ ಕುಡಿಯಬೇಕು. ಹಳ್ಳಿಯಲ್ಲಿ ಜಲಮೂಲ ಇಲ್ಲವಾದರೆ ಖಾಸಗಿಯವರು ಸರಬರಾಜು ಮಾಡುವ ನೀರನ್ನು ೨೦ ಲೀಟರ್‌ಗೆ ೧೦ ರೂ. ತೆತ್ತು ಕೊಂಡುಕೊಳ್ಳಬೇಕು. ಇದು ಕೂಡ ಶುದ್ಧವಾಗಿರುತ್ತದೆ ಎಂಬ ಭರವಸೆಯೇನಿಲ್ಲ. ಇದಕ್ಕಿಂತ ಹೊಸ ಯೋಜನೆ ಅನುಕೂಲಕರವಲ್ಲವೆ ? ಎಂದು ಸರಕಾರಿ ಅಕಾರಿಗಳು ಪ್ರಶ್ನಿಸುತ್ತಾರೆ. ಇದು ನಮ್ಮ ಉತ್ತರ ಕರ್ನಾಟಕದ ಹಳ್ಳಿಗರ ಪರಿಸ್ಥಿತಿಯಂತೆಯೇ ಕಾಣಿಸುತ್ತದೆ.


ಮೇಲ್ನೋಟಕ್ಕೆ ಈ ಯೋಜನೆ ಆಕರ್ಷಕವಾಗಿಯೇ ಇದೆ. ೨೦ ಲೀಟರ್ ಶುದ್ಧ ನೀರನ್ನು ೨ ರೂ.ಗೆ ಜನರಿಗೆ ನೀಡಲಾಗುತ್ತದೆ. ಪರಿಶಿಷ್ಟ ಜನಾಂಗದವರಿಗೆ ಇದರರ್ಧ ಬೆಲೆಗೆ. ಕೊಳಕು ನೀರಿನಿಂದ ಉಂಟಾಗುವ ತೊಂದರೆ ಇನ್ನಿಲ್ಲ.
ಆದರೆ ಯೋಜನೆಯ ಬಗ್ಗೆ ಅನುಮಾನದ ಅಲೆ ಎದ್ದಿದೆ. ಯೋಜನೆ ಜಾರಿಗೆ ಮುನ್ನ ಗ್ರಾಮ ಪಂಚಾಯತು, ನೀರಾವರಿ ತಜ್ಞರು, ನಾಗರಿಕ ಸಂಘಟನೆಗಳ ಜತೆ ಸಮಾಲೋಚಿಸಿಲ್ಲ. ಒಪ್ಪಂದ ಗ್ರಾಮ ಪಂಚಾಯತು ಹಾಗೂ ಖಾಸಗಿ ಕಂಪನಿಯ ನಡುವೆ ನಡೆಯಬೇಕು. ಇಲ್ಲಿ ಹಾಗಾಗಿಲ್ಲ. ಖಾಸಗಿ ಕಂಪೆನಿ ಇಲ್ಲಿ ಜನರಿಗೆ ನೇರವಾಗಿ ಉತ್ತರದಾಯಿಯಲ್ಲ.


ಇನ್ನು ಲೀಟರ್‌ಗೆ ೧೦ ಪೈಸೆ ಎಂಬ ದರ ಎಲ್ಲಿಯವರೆಗೆ ನಡೆಯುತ್ತದೆ ಎಂಬ ಬಗ್ಗೆ ಖಾತ್ರಿಯಿಲ್ಲ. ಒಪ್ಪಂದದಲ್ಲಿ, ದರ ಹಾಗೇ ಇರುತ್ತದೆಯೇ ಅಥವಾ ಹೆಚ್ಚಾಗುತ್ತದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಕಂಪನಿಗಳು ದರವನ್ನು ಸಿಕ್ಕಾಪಟ್ಟೆ ಏರಿಸಿದರೆ ಬಡಜನತೆ ಎಲ್ಲಿಗೆ ಹೋಗಬೇಕು ? ಜಲಶುದ್ಧೀಕರಣಕ್ಕೆ ಪ್ರಸ್ತಾವಿಸಲಾದ ರಿವರ್ಸ್ ಆಸ್ಮಾಸಿಸ್ ತಂತ್ರಜ್ಞಾನದ ಬಗ್ಗೆ ಕೂಡ ತಜ್ಞರಿಗೆ ಒಳ್ಳೆಯ ಅಭಿಪ್ರಾಯವಿಲ್ಲ. ಊರಿಗೊಂದು ಕೆರೆ- ಬಾವಿಯಿರಬೇಕು, ಅದನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ತಿಳಿವಳಿಕೆ ನಮಗಿಲ್ಲದೇ ಹೋದದ್ದೇ ಈಗ ನಮ್ಮ ಬುಡಕ್ಕೆ ಬಂದಿದೆ ನೋಡಿ. ನಮ್ಮ ರಾಜ್ಯದಲ್ಲೂ ಇಂಥ ಪರಿಸ್ಥಿತಿ ತಲೆದೋರಬಹುದೆ ?
ಇದಕ್ಕಿರುವ ಒಂದೇ ಪರಿಹಾರ-ನಮ್ಮ ಸಾಂಪ್ರದಾಯಿಕ ನೀರು ನಿರ್ವಹಣಾ ಶಾಸ್ತ್ರವನ್ನು ಆಧರಿಸಿ, ಆಧುನಿಕ ಅಗತ್ಯಕ್ಕನುಗುಣವಾಗಿ ನಮ್ಮದೇ ಮಾದರಿಯನ್ನು ರೂಪಿಸಿಕೊಳ್ಳುವುದು. ಮಾದರಿ ಎಂಬುದು ಬೇರೆ ಇಲ್ಲದಿದ್ದಾಗ ನಮಗೆ ಬೇಕಾದಂತೆ ನಾವು ಪದ್ಧತಿಗಳನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯ ಹೊಂದಿರುತ್ತೇವೆ. ಅದನ್ನು ಬಿಟ್ಟು ಬೇರೆ ದೇಶಗಳಲ್ಲಿ ವಿಫಲವಾಗಿರುವ ಖಾಸಗೀಕರಣದಂಥ ಪ್ರಯೋಗಗಳಿಗೆ ನಮ್ಮಲ್ಲಿ ವೇದಿಕೆ ಒದಗಿಸುವುದು ಎಷ್ಟು ಔಚಿತ್ಯ ಪೂರ್ಣ?
ಕೃಷಿಯಂಥ ಕ್ಷೇತ್ರದಲ್ಲೂ ನಾವು ನೀರು ಪೂರೈಕೆಗೆ ಸುಸ್ಥಿರವಲ್ಲದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಹೋಗಿ ತಪ್ಪು ಮಾಡಿದ್ದೇವೆ. ೨೦ ಕೋಟಿಗೂ ಹೆಚ್ಚು ಬಾವಿಗಳು, ಕೊಳವೆ ಬಾವಿಗಳು ನಮ್ಮ ಕೃಷಿ ಸಾಮ್ರಾಜ್ಯವನ್ನು ಆಳುತ್ತಿವೆ. ಕೃಷಿ ನೀರಾವರಿಗೆ ಬಹುತೇಕ ನಾವು ಅಂತರ್ಜಲವನ್ನೇ ಅವಲಂಬಿಸುವ ಪರಿಪಾಠ ಬೆಳೆಸಿಕೊಂಡು ಬಿಟ್ಟಿದ್ದೇವೆ. ಭೂಮಿಯ ಮೇಲ್ಜಲದ ಬಳಕೆ, ಅಂತರ್ಜಲ ಮಟ್ಟದಲ್ಲಿನ ಏರಿಕೆಯ ನಿಟ್ಟಿನಲ್ಲಿ ‘ಹೂಡಿಕೆ’ ಮಾಡುವ ಬದಲು ಯೋಜನೆ’ಗಳ ಮೇಲಿನ ವೆಚ್ಚವನ್ನು ಹೆಚ್ಚಿಸುತ್ತಿದ್ದೇವೆ. ವಿತರಣೆಯಲ್ಲಿನ ಸೋರಿಕೆ, ನಿರ್ವಹಣಾ ದೋಷವನ್ನು ನಿಯಂತ್ರಿಸುವ ಬದಲು ನೀರಿಗೆ ‘ಶುಲ್ಕ’ ಹಾಕಲು ಚಿಂತಿಸುತ್ತಿದ್ದೇವೆ. ಪರ್ಯಾಯ ಬೆಳೆ ಪದ್ಧತಿಯ ಬದಲಿಗೆ ಕೃಷಿ ಉತ್ಪಾದನೆ ಹೆಚ್ಚಿಸಲು ರಸಗೊಬ್ಬರ, ವಿದೇಶಿ ತಳಿಗಳ ಮೊರೆಹೋಗಿದ್ದೇವೆ.
ನೀರಿನ ಮೌಲ್ಯವರಿಯದೇ ಬಳಕೆಗಿಳಿದಿರುವ, ಪೋಲು ಮಾಡುತ್ತಿರುವ ನಮ್ಮ ಇಂಥ ಧೋರಣೆ ಬದಲಾಗಬೇಕು. ಅತಿ ಹೆಚ್ಚು ನೀರಿನ ಬಳಕೆ ಪ್ರದೇಶ ಅತಿ ಹೆಚ್ಚು ನೀರು ಪೋಲಾಗುವ ತಾಣವೆಂಬ ಸ್ಥಿತಿ ಬದಲಾಗಬೇಕು. ಫ್ರಾನ್ಸ್, ಬ್ರಿಟನ್‌ಗಳ ಖಾಸಗೀಕರಣದ ಬದಲು ತಲಾ ೨೦೦ ಲೀಟರ್ ನೀರು ಬಳಕೆಯಿದ್ದ ಪ್ರದೇಶದಲ್ಲಿ ತಲಾ ನೂರರಿಂದ ನೂರಾ ಹತ್ತು ಲೀ. ನೀರಿನ ಬಳಕೆಗೆ ತಗ್ಗಿಸುವ ನಗರಗಳು ಮಾದರಿಯಾಗಬೇಕು. ಅಂಥದೊಂದು ಕ್ರಾಂತಿಯ ಭೀಮನೆಗೆತ ಸಾಧ್ಯವಾದರೆ ಅದು ನಿಜವಾದ ಬದಲಾವಣೆ.


‘ಲಾಸ್ಟ್’ಡ್ರಾಪ್ :
ಆಧುನಿಕ ಸವಾಲಿನ ಹಿನ್ನೆಲೆಯಲ್ಲಿ ನೀರಿಗೆ ಬೆಲೆ ಕಟ್ಟಬೇಕಾದ್ದು ಅನಿವಾರ್ಯ. ಆದರೆ ಭೌತಿಕವಾಗಿ ನೀರನ್ನೇ ಆ ಬೆಲೆಗೆ ಕೊಂಡುಬಿಡುತ್ತೇವೆಂಬುದು ಖಂಡಿತಾ ದಾರ್ಷ್ಟ್ಯ.

ಜಲ ಸಂರಕ್ಷಣೆ: ಗುಜರಾತಿನ ಎಲ್ಲರೂ ಸರದಾರರೇ

ಒಂದು ತಿಳಿದುಕೊಳ್ಳಿ, ಗುಜರಾತ್ ಮೂಲದ ಯಾವುದೇ ನಾಯಕರಿರಬಹುದು. ನೀರಿನ ವಿಷಯದಲ್ಲಿ ಅವರ ಕಳಕಳಿ ಉಳಿದೆಲ್ಲ ರಾಜ್ಯದವರಿಗಿಂತ ಯಾವತ್ತೂ ಒಂದು ಹಿಡಿ ಹೆಚ್ಚೇ ಇರುತ್ತದೆ. ಸ್ಥಳೀಯ ಭೌಗೋಳಿಕ ಸನ್ನಿವೇಶ, ತಲೆತಲಾಂತರದಿಂದ ಗುಜ್ಜುಗಳನ್ನು ಬಿಡದೇ ಕಾಡುತ್ತಿರುವ ಬರಗಾಲ, ನರ್ಮದೆಯಂಥ ನದಿಯನ್ನು ಸಂರಕ್ಷಿಸಿಕೊಳ್ಳುವ ಸವಾಲು ಇವೆಲ್ಲವೂ ಇದಕ್ಕೆ ಕಾರಣವಿರಬಹುದು.


ಗುಜರಾತ್- ರಾಷ್ಟ್ರಪಿತ ಗಾಂಜಿಯವರ ಜನ್ಮಭೂಮಿ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ನೀರಿನ ಬಗೆಗಿನ ಕಾಳಜಿಗೆ ಗಾಂಜಿಯವರೂ ಹೊರತಲ್ಲ ಎಂಬುದನ್ನು ಬೇರೆ ಹೇಳಬೇಕಿಲ್ಲ. ಗ್ರಾಮ ಸ್ವರಾಜ್ಯದ ಕಲ್ಪನೆಯ ಭಾಗವಾಗಿ ದೇಶದ ಲಕ್ಷಾಂತರ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಸಮರ್ಥ ಪೂರೈಕೆಯನ್ನು ಪ್ರತಿಪಾದಿಸಿದ್ದರು ಅವರು.


ಅದು ಅಹಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಮಹಾವೇಶನದ ಸಂದರ್ಭ. ಗಾಂಜಿ ಸೇರಿದಂತೆ ದೇಶದ ಮುಂಚೂಣಿ ನಾಯಕರೆಲ್ಲರೂ ಸೇರಿದ್ದರು. ಬೆಳಗಿನ ಕಲಾಪದ ಬಳಿಕ ಎಲ್ಲರೂ ಊಟಕ್ಕೆ ತೆರಳಿದ್ದರು. ಊಟದ ಸಂದರ್ಭದಲ್ಲಿ ಆರಂಭವಾದ ಯಾವುದೋ ಚರ್ಚೆ ಉದ್ದಕ್ಕೂ ಸಾಗಿತ್ತು. ಊಟ ಮುಗಿಸಿ ಎದ್ದ ಗಾಂಜಿ ಮಾತನಾಡುತ್ತಲೇ ಕೈ ತೊಳೆಯಲು ಹೋದರು. ಪಕ್ಕದಲ್ಲೇ ಇದ್ದ ನೆಹರೂ ಚೊಂಬಿನಲ್ಲಿ ಅವರಿಗೆ ನೀರು ಹನಿಸುತ್ತಿದ್ದರು. ಮಾತಿನ ಭರದಲ್ಲಿ ಇಡೀ ತಂಬಿಗೆಯ ನೀರು ಮುಗಿದು ಹೋದದ್ದು ಬಾಪೂಜಿ ಗಮನಕ್ಕೆ ಬರಲೇ ಇಲ್ಲ. ಕೈ ತೊಳೆದು ಮುಗಿದಿರಲಿಲ್ಲ. ನೆಹರೂ ಮತ್ತೊಂದು ಬಾರಿ ಚೊಂಬಿನಲ್ಲಿ ನೀರು ತಂದು ಹನಿಸಲು ಆರಂಭಿಸಿದರು. ತಟ್ಟನೆ ಎಚ್ಚೆತ್ತ ಗಾಂಜಿ ‘ಅಯ್ಯಯ್ಯೋ ಒಂದು ಚೊಂಬು ನೀರು ಖಾಲಿ ಮಾಡಿಬಿಟ್ಟೆನಲ್ಲಾ’ ಎಂದು ಉದ್ಗರಿಸಿದರು.


ತಕ್ಷಣ ನೆಹರೂ ‘ಅದಕ್ಕೇನಂತೆ ಅಹಮದಾಬಾದ್‌ನಲ್ಲಿ ನೀರಿಗೇನೂ ಕೊರತೆ ಇಲ್ಲ. ಯಮುನೆ ತುಂಬಿ ಹರಿಯುತ್ತಿದ್ದಾಳೆ. ಇನ್ನೂ ಒಂದು ಚೊಂಬು ನೀರು ಬಳಸಿ’ಎಂದರು. ಇದಕ್ಕೆ ಗಾಂಜಿ ಪ್ರತಿಕ್ರಿಯೆ ನೋಡಿ-‘ಯಮುನೆ, ನರ್ಮದೆಯರು ಇದ್ದಾರೆಂಬುದೇನೋ ನಿಜ. ಆದರೆ ಅವರು ಇರುವುದು ನನ್ನೊಬ್ಬನ ಅಗತ್ಯ ಪೂರೈಸಲಲ್ಲವಲ್ಲ ?’


ಗಾಂಜಿಯವರ ಈ ಮಾತಿನ ಹಿಂದೆ ಹತ್ತಾರು ಸಂದೇಶಗಳಿವೆ. ಇದು ಅವರೊಬ್ಬರ ಪ್ರತಿಪಾದನೆಯಲ್ಲ. ಗುಜರಾತ್‌ನ ಬಹುತೇಕರು ಇಂಥ ಮನೋಭಾವದೊಂದಿಗೇ ನೀರಿನ ಬಳಕೆಗೆ ಮುಂದಾಗುತ್ತಿರುವುದರಿಂದ ಅಲ್ಲಿ ನೀರಾವರಿಯಲ್ಲಿ ಕಳೆದೊಂದು ದಶಕದಲ್ಲಿ ಊಹೆಗೂ ಮೀರಿದ ಪ್ರಗತಿ ಸಾಧ್ಯವಾಗಿದೆ. ಗುಜರಾತನಲ್ಲಿ ಯಶಸ್ವಿಯಾದ ಮಹತ್ವದ ನೀರಾವರಿ ಯೋಜನೆಯೊಂದರ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಈ ಮಾತು ಸತ್ಯವೆನಿಸುತ್ತದೆ.


ಹಲವಾರು ವಿವಾದಗಳಿಂದ ಭಾರೀ ಸುದ್ದಿ ಮಾಡಿದ ಸರದಾರ್ ಸರೋವರ ಯೋಜನೆ ಗೊತ್ತೇ ಇದೆ. ಇದೂ ಸಹ ಅದೇ ಅಣೆಕಟ್ಟೆಯಿಂದ ನೀರು ಪೂರೈಸುವ ಯೋಜನೆಯೇ. ಆದರೆ ಇಲ್ಲಿ ಯಾವುದೇ ವಿವಾದ ಇಲ್ಲ. ನರ್ಮದಾ- ಮಾಹಿ ನದಿಗಳಿಂದ ಕುಡಿಯುವ ನೀರು ತೆಗೆದುಕೊಂಡು ಹೋಗಲಾಗಿದೆ.


ಇದರಲ್ಲೇನು ವಿಶೇಷ ? ಖಂಡಿತಾ ವಿಶೇಷವಿದೆ. ಅಸ್ತಿತ್ವದಲ್ಲಿರುವ ಯೋಜನೆಯಿಂದಲೇ ಹೆಚ್ಚುವರಿ ನೀರನ್ನು ಸಮರ್ಪಕವಾಗಿ ಬಳಸಿಕೊಂಡದ್ದೇ ಇದರ ಹೆಗ್ಗಳಿಕೆ. ಮೂಲ ಸರದಾರ ಸರೋವರ ಯೋಜನೆ ಇರುವುದು ಭರೂಚ್ ಜಿಲ್ಲೆಯ ನವಗಾಂವ್ ಎಂಬಲ್ಲಿ. ಈ ಅಣೆಯಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಸುಮಾರು ೩೫೭೧ ಎಂಎಲ್‌ಡಿಯಷ್ಟು ನೀರು ನಿಗದಿಯಾಗಿದೆ. ಇಲ್ಲಿಂದ ಸುಮಾರು ೩೫ ಕಿ. ಮೀ. ದೂರದ ನರ್ಮದಾ ಮುಖ್ಯ ಕಾಲುವೆಗೆ ನೀರನ್ನು ಪಂಪ್ ಮಾಡಲಾಗುತ್ತದೆ. ಆ ಕಾಲುವೆ ತಿಂಬ ಹಳ್ಳಿಯ ಬಳಿ ಮಾಹಿಯ ಕಾಲುವೆಗೆ ಸಂಪರ್ಕಿಸುತ್ತದೆ. ಅಲ್ಲಿಂದ ಮತ್ತೆ ಪ್ರಯಾಣ ಮುಂದುವರಿಸುವ ನೀರು ಕನೇವಲ್ ಹಾಗೂ ಪರೇಜ್ ಎಂಬ ಎರಡು ಬೃಹತ್ ಕೆರೆಗಳ ಒಡಲು ಸೇರುತ್ತದೆ. ಅಲ್ಲಿಗೇ ನೀರಿನ ಯಾನ ನಿಲ್ಲುವುದಿಲ್ಲ. ಮತ್ತೆ ಅಲ್ಲಿಂದ ನೀರನ್ನು ಭಾವನಗರ, ಅಮ್ರೇಲಿ ಹಾಗೂ ರಾಜಕೋಟ್ ಜಿಲ್ಲೆಗಳಿಗೆ, ೪೫೦ ಕಿ.ಮೀ ಉದ್ದದ ಸೌರಾಷ್ಟ್ರ ಪೈಪ್‌ಲೈನ್ ಯೋಜನೆಯ ಮೂಲಕ ಏತದಿಂದ ಕೊಂಡೊಯ್ಯಲಾಗುತ್ತದೆ. ಅಹಮದಾಬಾದ್‌ಗೂ ಇದೇ ನೀರನ್ನು ಕುಡಿಯಲು ಒದಗಿಸಲಾಗುತ್ತಿದೆ.


ಇವಿಷ್ಟು ಯೋಜನೆ. ನಿಜವಾಗಿ ಇಲ್ಲಿ ಸರ್ದಾರ್ ಸರೋವರದಿಂದ ನೀರು ಸರಿಸುಮಾರು ೨೮೦ ಕಿ. ಮೀ. ನಷ್ಟು ದೂರದ ಪ್ರಯಾಣ ಬೆಳೆಸುತ್ತದೆ. ಉದ್ದಕ್ಕೂ ಇರುವ ಸಣ್ಣಪುಟ್ಟ ಕೆರೆಗಳನ್ನು ತುಂಬಿಯೇ ನೀರು ಮುಂದಕ್ಕೆ ಹೋಗುವಂತೆ ಯೋಜಿಸಲಾಗಿದೆ. ಜತೆಗೆ ಕನೇವಲ್ ಹಾಗೂ ಪರೇಜ್ ಕೆರೆಗಳೂ ತುಂಬುವುದರಿಂದ ಸಾವಿರಾರು ಹೆಕ್ಟೇರ್ ಪ್ರದೇಶದ ಅಂತರ್ಜಲ ಮಟ್ಟದಲ್ಲಿ ಅನಾಯಾಸವಾಗಿ ಏರಿಕೆ ಕಂಡು ಬಂದಿದೆ.


ವೈಜ್ಞಾನಿಕ, ದೂರದೃಷ್ಟಿಯಿಂದ ರೂಪಿಸಲಾಗಿರುವ ಯೋಜನೆಗಳು ಹೇಗೆ ಉಪಯುಕ್ತವಾಗುತ್ತವೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ ಎನ್ನುತ್ತಾರೆ ಪ್ರೊ. ಹುಗ್ಗಿ. ಅಂದಾಜು ೧೨೦೦ ಕ್ಯೂಸೆಕ್ ನೀರಿನ ಪಂಪಿಂಗ್ ಸಂದರ್ಭದಲ್ಲೇ ಮಧ್ಯದಲ್ಲಿ ತುಸು ತಿರುವು ತೆಗೆದುಕೊಂಡು ಮೂರು ಪುಟ್ಟ ಪುಟ್ಟ ಒಡ್ಡುಗಳನ್ನು ನಿರ್ಮಿಸಲಾಗಿದೆ. ಇಂಥ ಇನ್ನೂ ಕೆಲವು ಪುಟ್ಟ ಪುಟ್ಟ ನಿರ್ಮಾಣ, ಪ್ರಯತ್ನಗಳಿಂದ ನದಿಯಲ್ಲಿನ ಪ್ರವಾಹದ ನೀರನ್ನೇ ಯಶಸ್ವಿಯಾಗಿ ಬಳಸಿಕೊಳ್ಳಲಾಗಿದೆ.


ದೇಶದಲ್ಲಿ ಇಂದಿಗೂ ಶೇ. ೫೦ರಷ್ಟು ಭೂಭಾಗಕ್ಕೆ ಅಂತರ್ಜಲ ಬಿಟ್ಟು ಅನ್ಯ ಆಸರೆಯಿಲ್ಲ. ಇದರ ನಡುವೆಯೇ ‘ನೀರು ಸರಬರಾಜು ಯೋಜನೆ’ಎಂಬ ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಎಗ್ಗಿಲ್ಲದೇ ಸಾಗಿದೆ. ಹಳ್ಳಿ ಹಳ್ಳಿಗಳಿಗೆ (ಕಾಗದದ ಮೇಲೆ) ಇವು ತಲುಪಿವೆ. ದುರಂತವೆಂದರೆ ಇಂಥ ಕಾರ್ಯಕ್ರಮಗಳು ಅನುಷ್ಠಾನಗೊಂಡಿರುವ ಸ್ಥಳಗಳ ನೀರಿಗಾಗಿನ ಹಾಹಾಕಾರ ಉಲ್ಬಣಿಸಿದೆ. ಗಮನಾರ್ಹ ಸಂಗತಿಯೆಂದರೆ, ಹೀಗೆ ‘ನೀರು ಸರಬರಾಜು’ ಇಲ್ಲದ ಹಳ್ಳಿಯ ಮೂಲೆಗಳಲ್ಲಿ, ಗುಡ್ಡಗಾಡುಗಳಲ್ಲಿ ಇಂದಿಗೂ ಜಲ ಸ್ವಾವಲಂಬನೆ ಅಸ್ತಿತ್ವದಲ್ಲಿದೆ. ಅದು ಕಾನೂನಾಗಲೀ, ಕಾರ್‍ಯಕ್ರಮವಾಗಿಯಾಗಲೀ ಹೇರಿಕೆಯಾಗಿಲ್ಲ. ಸಹಜ ಜೀವನವಾಗಿಯೇ ಸಾಗಿದೆ. ಆದ್ದರಿಂದ ನೀರಿನ ವಿಚಾರದಲ್ಲಿ ಸಂಕಷ್ಟವೆಂಬುದನ್ನು ಆ ಮಂದಿ ಅರಿತಿಲ್ಲ. ಅದನ್ನೇ ಮೋದಿಯವರು ಗುಜರಾತ್‌ನ ಎಲ್ಲ ಹಳ್ಳಿಗಳಿಗೆ ದಕ್ಕಿಸಿಕೊಟ್ಟಿದ್ದಾರೆ.


ನೀವು ನಂಬಬೇಕು. ಇಸ್ರೇಲ್ ಈ ವಿಚಾರದಲ್ಲಿ ಮಾದರಿ. ಅಂಥ ಮರುಭೂಮಿಯಲ್ಲೂ ಅತ್ಯಂತ ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ. ದೇಶದ ಬಳಕೆ ಪೂರೈಸಿಕೊಂಡು ಒಂದಿಡೀ ಯುರೋಪಿಗೆ ಹಣ್ಣು ಹಂಪಲು, ತರಕಾರಿಗಳನ್ನು ರಫ್ತು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅಂತರ್ಜಲ ಬಳಕೆಯ ಹತೋಟಿಯಿಂದ ಅಲ್ಲಿನ ನೀರಾವರಿ ಪ್ರದೇಶ ಒಂದಕ್ಕೆ ಎರಡರಷ್ಟು ಹೆಚ್ಚಿದೆ. ಮೋದಿ ಅದನ್ನೇ ಗುಜರಾತ್‌ನಲ್ಲೂ ಮಾಡುತ್ತಿರುವುದು, ಬೇಕಿದ್ದರೆ ಹೋಗಿ ನೋಡಿ ಬನ್ನಿ.

‘ಲಾಸ್ಟ್’ಡ್ರಾಪ್: ಸಾಕಷ್ಟು ವಿವಾದ, ಅಡ್ಡಿ ಆತಂಕಗಳ ನಡುವೆಯೂ ನೀರಾವರಿಯ ವಿಚಾರದಲ್ಲಿ ನಮಗಿಂತ ಹತ್ತಾರು ಹೆಜ್ಜೆ ಮುಂದೆ ಹೋಗಿರುವ ಗುಜರಾತ್, ಇಂಥ ಇಚ್ಛಾ ಶಕ್ತಿಯಿಂದ ಮಾತ್ರ ಭೀಕರ ಬರಕ್ಕೂ ಎದೆಯೊಡ್ಡಿ ನಿಂತಿದೆ. ಬಂಡವಾಳ ಕ್ರಾಂತಿಯನ್ನೂ ಸಾಸಿದೆ.


Wednesday, October 28, 2009

ಗೋವಿಂದರಾವ್ ಅವರೇ, ಯೋಚಿಸಿ ತಪ್ಪೇನಿಲ್ಲ, ಆದರೆ ಒಳ್ಳೆಯದನ್ನೂ ಯೋಚಿಸಿ


ಕಳೆದ ಐದು ವರ್ಷಗಳಿಂದ ‘ನೀರು-ನೆರಳು’ ಅಂಕಣದಡಿ ೨೩೩ ಲೇಖನಗಳನ್ನು ಬರೆದಿದ್ದೇನೆ. ಈ ಅಂಕಣದ ಓದುಗರೆಲ್ಲರಿಗೂ ಖಂಡಿತ ಗೊತ್ತಿದೆ. ನಾನು ನೆಲ-ಜಲ, ಹಸಿರು-ಉಸಿರಿನ ಆಚೆ ಏನನ್ನೂ ಬರೆಯುವುದಿಲ್ಲ ಅಂತ. ಕಳೆದ ವಾರ ಗುಜರಾತ್ ಮುಖ್ಯಮಂತ್ರಿ ಮೋದಿಯವರ ಬಗ್ಗೆ ಅಂಕಣ ಬರೆಯಲು ಕುಳಿತಾಗಲೂ ಲೇಖನದ ಯಾವ ಭಾಗದಲ್ಲೂ ರಾಜಕೀಯ ಸುಳಿಯದಂತೆ, ತತ್ತ್ವ-ಸಿದ್ಧಾಂತಗಳೆಂಬ ಹಾಳೂಮೂಳುಗಳು ಸೋಂಕದಂತೆ ಎಚ್ಚರವಹಿಸಿದೆ. ನನ್ನ ಇಡೀ ಲೇಖನ ಕೃಷಿ ಕ್ಷೇತ್ರದಲ್ಲಿ ಮೋದಿ ಸಾಸಿರುವ ಆಮೋಘ ಅಭಿವೃದ್ಧಿಯ ಮೇಲಷ್ಟೇ ಬೆಳಕು ಚೆಲ್ಲಿತ್ತು. ಮತ್ತೆ ನೀವು ನನ್ನನ್ನು ಪ್ರಶ್ನಿಸಿದರೂ ಮೋದಿಯವರ ಬಗ್ಗೆ ‘ಚಲನಶೀಲ ಚಿಂತಕ’ ಮತ್ತದೇ ವಿಶೇಷಣ ಬಳಸುತ್ತೇನೆ ! ಹೌದು, ಅನುಮಾನವೇ ಇಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ನೋಡಿದಾಗ ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಆ ಪದವೇ ಅತ್ಯಂತ ಸೂಕ್ತ. ಇಂಥ ಪದವನ್ನು ಮೋದಿಯವರಿಗೆ ಬಿಟ್ಟರೆ ಸದ್ಯಕ್ಕೆ ದೇಶದ ಮತ್ಯಾವ ಮುಂಖ್ಯಮಂತ್ರಿಗೂ ಬಳಸಬೇಕೆನಿಸುತ್ತಿಲ್ಲ. ಗುಜರಾತ್‌ನಲ್ಲಿ ಬೇರೇನಾಗಿದೆಯೋ, ಇಲ್ಲವೋ ಗೊತ್ತಿಲ್ಲ. ನೀರಾವರಿ ಮತ್ತು ಕೃಷಿಯ ವಿಚಾರದಲ್ಲಿ ಆಗಿರುವ ಕ್ರಾಂತಿಯನ್ನು ಹೋಗಿ ನೋಡಿದ ವಿವೇಚನಾವಂತರೆಲ್ಲರೂ ಈ ವಿಶೇಷಣವನ್ನು ಒಪ್ಪುತ್ತಾರೆ.


ಹಾಗಂತ ನಾನು ಸುಖಾಸುಮ್ಮನೆ ಹೇಳುತ್ತಿಲ್ಲ !!
ಗುಜರಾತ್‌ಗೆ ಹೋಗಿ, ಅಲ್ಲಿನ ಪ್ರಗತಿಯನ್ನು ಕಣ್ಣಾರೆ ಕಂಡು, ಕೃಷಿ, ನೆಲ, ಜಲದ ಬಗ್ಗೆ ಕಳೆದ ೧೦ ವರ್ಷಗಳಲ್ಲಿ ನಾನು ಮಾಡಿರುವ ಅಧ್ಯಯನದಿಂದ ಅಲ್ಲಿನ ಅಭಿವೃದ್ಧಿಯನ್ನು ಅಳೆದು-ತೂಗಿ ನೋಡಿದ ಮೇಲೆಯೇ ಮೋದಿಯವರ ಸಾಧನೆಯ ಬಗ್ಗೆ ಒಂದಿಷ್ಟು ಮೆಚ್ಚುಗೆಯ ಮಾತುಗಳನ್ನು ಆಡಿದ್ದೇನೆ. ಯಾರೋ ಬರೆದ ಪೂರ್ವಗ್ರಹಪೀಡಿತ ಪುಸ್ತಕಗಳನ್ನು ಆಧಾರವಾಗಿಟ್ಟುಕೊಂಡು, ಅದೇ ಸತ್ಯವೆಂಬಂತೆ ನಾನೆಂದೂ, ಏನನ್ನೂ ಬರೆದವನಲ್ಲ.


ಅಕ್ಟೋಬರ್ ೨೧ರಂದು ‘ವಿಜಯ ಕರ್ನಾಟಕ’ ದ ಸಂಪಾದಕೀಯ ಪುಟದಲ್ಲಿ ‘ಕರ್ನಾಟಕವನ್ನು ಗುಜರಾತ್ ಮಾಡುವುದಕ್ಕೆ ಮುಂಚೆ ಕೊಂಚ ಯೋಚಿಸೋಣ’ ಎಂಬ ಶೀರ್ಷಿಕೆಯಡಿ ಜಿ.ಕೆ. ಗೋವಿಂದರಾವ್ ಬರೆದಿರುವ ಲೇಖನದಲ್ಲಿ ಉಲ್ಲೇಖಿಸಿರುವ ಅಂಶಗಳ ‘ಮೂಲ’ಗಳಾದರೂ ಯಾವುವು? ಲೇಖನದ ಕೊನೆಯಲ್ಲಿ ಅವರ ಗುಜರಾತ್ eನದ ಗುಟ್ಟನ್ನು ಅವರೇ ಬಹಿರಂಗಪಡಿಸಿದ್ದಾರೆ-ಗ್ರಂಥಋಣ: ಗುಜರಾತಿನ ನಿವೃತ್ತ ಡಿ.ಜಿ.ಪಿ. ಆರ್.ಬಿ. ಶ್ರೀಕುಮಾರ್ ಅವರ ‘ಧರ್ಮದ ಹೆಸರಿನಲ್ಲಿ’, ಹರ್ಷ ಮಂದೆರ್ ಅವರ 'Fear & Forgiveness', ಸಿದ್ಧಾರ್ಥ್ ವರದರಾಜನ್ ಸಂಪಾದಿಸಿದ ಕೃತಿ ‘ಗುಜರಾತ್’, ಅರುಂಧತಿರಾಯ್ ಅವರ 'Listening to Grasshoppers' ಮತ್ತು ಶ್ರಮಿಕ್ ಪ್ರತಿಷ್ಠಾನದ 'Modi slapped'!!


ಈ ಶ್ರೀಕುಮಾರ್, ಸಿದ್ಧಾರ್ಥ್ ವರದರಾಜನ್, ಅರುಂಧತಿರಾಯ್ ಯಾರು ? ಗುಜರಾತ್ ಹಿಂಸಾಚಾರದ ತನಿಖೆ ನಡೆಸಿದ ನ್ಯಾಯಾಂಗೀಯ ಆಯೋಗಗಳ ಮುಖ್ಯಸ್ಥರೇ ಅಥವಾ ಸತ್ಯಾಸತ್ಯತೆಯನ್ನು ಪರಾಮರ್ಶಿಸಿ ನ್ಯಾಯದಾನ ಮಾಡುವ ಜಡ್ಜ್‌ಗಳೇ ? ಡಿಜಿಪಿ ಶ್ರೀಕುಮಾರ್ ಅವರನ್ನೇ ತೆಗೆದುಕೊಳ್ಳಿ. ಗುಜರಾತ್ ಹಿಂಸಾಚಾರ ನಡೆದಿದ್ದು ೨೦೦೨ ಫೆಬ್ರವರಿ ೨೭ರ ನಂತರ. ಆಗ ಹಿರಿಯ ಪೊಲೀಸ್ ಅಕಾರಿಯಾಗಿದ್ದ ಡಿಜಿಪಿ ಆರ್.ಬಿ. ಶ್ರೀಕುಮಾರ್, ‘ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಮುಖ್ಯಮಂತ್ರಿ ಮೋದಿ ನನಗೆ ಸೂಚನೆ ನೀಡಿದ್ದರು’ ಎಂದು ಆರೋಪಿಸಿದರು, ಕೊನೆಗೆ ಕೋರ್ಟ್ ಮುಂದೆಯೂ ಅಹವಾಲು ಇಟ್ಟರು. ಆದರೆ ಯಾವಾಗ ? ೨೦೦೭ರಲ್ಲಿ!! ಹಿಂಸಾಚಾರ ನಡೆದಿದ್ದು ೨೦೦೨ರಲ್ಲಿ, ಮೋದಿ ವಿರುದ್ಧ ಶ್ರೀಕುಮಾರ್ ಆರೋಪ ಮಾಡಿದ್ದು ೨೦೦೭ರಲ್ಲಿ !! ಅದುವರೆಗೂ ಏಕೆ ತೆಪ್ಪಗಿದ್ದರು ? ಒಬ್ಬ ಪೊಲೀಸ್ ಅಕಾರಿಯಾಗಿ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕಾಗಿದ್ದು ಕರ್ತವ್ಯ. ಒಂದು ವೇಳೆ, ಮೋದಿಯವರು ಅಂಥದ್ದೊಂದು ಸೂಚನೆ ನೀಡಿದ್ದರೆ ಕೂಡಲೇ ನ್ಯಾಯಾಂಗದ ಮುಂದೆ ಅದನ್ನು ಅರಿಕೆ ಮಾಡಿಕೊಳ್ಳಬಹುದಿತ್ತಲ್ಲವೆ ? ಕನಿಷ್ಠ ಮಾಧ್ಯಮಗಳ ಮುಂದೆಯಾದರೂ ಬಾಯ್ಬಿಡಬಹುದಿತ್ತಲ್ಲವೆ ? ಏಕೆ ಸುಮ್ಮನೆ ಕುಳಿತಿದ್ದರು ? ಆದರೆ ಸತ್ಯವಿಷ್ಟೇ- ಯಾವಾಗ ಡಿಜಿಪಿ ಶ್ರೀಕುಮಾರ್‌ಗೆ ಐಜಿ ಸ್ಥಾನ ದಕ್ಕುವುದಿಲ್ಲ ಎಂದು ಗೊತ್ತಾಯಿತೋ ಆ ಕೂಡಲೇ ಸೆಕ್ಯುಲರ್ ಬ್ರಿಗೇಡ್ ಸೇರಿಕೊಂಡು ಇಂಥದ್ದೊಂದು ಆರೋಪ ಮಾಡತೊಡಗಿದರು !! ಇನ್ನು ಸಿದ್ಧಾರ್ಥ್ ವರದರಾಜನ್. ಆತ ಹೇಳಿ-ಕೇಳಿ ಸಿಪಿಎಂ ಮತ್ತು ಸಿಪಿಐ ಮುಖವಾಣಿಯಂತಿರುವ, ಕೆಲವೊಮ್ಮೆ ಚೀನಾದ ಮುಖವಾಣಿಯಂತೆಯೂ ವರ್ತಿಸುವ ‘ದಿ ಹಿಂದೂ’ ಪತ್ರಿಕೆಯ ವಿಶೇಷ ವರದಿಗಾರ ಹಾಗೂ ಅಂಕಣಕಾರ. ಆತನಿಂದ ಅದ್ಯಾವ ನಿಷ್ಪಕ್ಷಪಾತವನ್ನು ನಿರೀಕ್ಷಿಸಲು ಸಾಧ್ಯ? ಸುಪ್ರಿಂ ಕೋರ್ಟ್‌ನಿಂದಲೇ ಛೀಮಾರಿ ಹಾಕಿಸಿಕೊಂಡಿದ್ದ ಅರುಂಧತಿ ರಾಯ್ ಅವರ ‘ಘನತೆ’ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾ?


ಇಂಥವರನ್ನು ಉಲ್ಲೇಖಿಸಿ, ಅವರು ಉಗುಳಿದ್ದನ್ನೇ ತೀರ್ಥವೆಂಬಂತೆ ಕೈಯಲ್ಲೆತ್ತಿಕೊಂಡು ಕನ್ನಡಿಗರ ತಲೆಮೇಲೆ ಪ್ರೋಕ್ಷಣೆ ಮಾಡಲು ಹೊರಟಿದ್ದೀರಲ್ಲಾ ಗೋವಿಂದರಾವ್ ಅವರೇ ನಿಮಗೆ ಸ್ವಂತ ಅಭಿಪ್ರಾಯವೇ ಇಲ್ಲವೆ ? ನೀವು ಹೊಸದೇನನ್ನೂ ಮಾಡಿಲ್ಲ ಬಿಡಿ ಸಾರ್. ನಿಮ್ಮ ಆದರ್ಶಪುರುಷರಾಗಿರುವ ಕಮ್ಯುನಿಸ್ಟರು ಈ ಕೆಲಸವನ್ನು ಸ್ವಾತಂತ್ರ್ಯ ಬಂದಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ರೋಮಿಲಾ ಥಾಪರ್, ಆರ್.ಎಸ್. ಶರ್ಮಾ, ಇರ್ಫಾನ್ ಹಬೀಬ್, ರವೀಂದರ್ ಕುಮಾರ್, ಸುಮಿತ್ ಸರ್ಕಾರ್ ಮುಂತಾದ ಕಮ್ಯುನಿಸ್ಟ್ ಇತಿಹಾಸಕಾರರು ಬಾಯಿಗೆ ಬಂದಿದ್ದನ್ನು ಬರೆಯುತ್ತಾರೆ. ಉಳಿದ ಕಮ್ಯುನಿಸ್ಟರು ಅದೇ ಆಧಾರವಾಗಿಟ್ಟುಕೊಂಡು ವಿಶ್ವವಿದ್ಯಾಲಯಗಳಲ್ಲಿ ಸಾರ್ವಕಾಲಿಕ ಸತ್ಯವೆಂಬಂತೆ ಬೋಸುತ್ತಾರೆ. ಅವರೆಂತಹ ಹಿಸ್ಟಾರಿಯನ್‌ಗಳೆಂದರೆ ಬಾಬರ್, ಔರಂಗಜೇಬನಂತವರಲ್ಲಿ ಧರ್ಮಸಹಿಷ್ಣುತೆ ಹುಡುಕಿ, ಬರೆದು ಕೊಂಡಾಡುತ್ತಾರೆ. ನಂತರ ಉಳಿದ ಭಟ್ಟಂಗಿಗಳು ಅದನ್ನೇ ‘ಕೋಟ್ ’ ಮಾಡಿ ಉಳಿದವರ ಕಣ್ಣಿಗೆ ಮಂಕುಬೂದಿ ಎರಚುತ್ತಾರೆ. ನೀವು ಮಾಡಿದ್ದೂ ಅದನ್ನೇ.
ಹಾಗಂತ ಹೇಳಲೇಬೇಕಾಗಿದೆ.


ನೀವೆಂದಾದರೂ ಗುಜರಾತ್‌ಗೆ ಹೋಗಿ, ನೋಡಿ ಬಂದು ಬರೆದಿದ್ದರೆ ಅಲ್ಪ-ಸ್ವಲ್ಪವಾದರೂ ಸತ್ಯವಿರಬಹುದೇನೋ ಎಂದು ನಾವೂ ಒಪ್ಪಿಕೊಳ್ಳಬಹುದಿತ್ತು. ಆದರೆ ಮಾಡಿದ್ದೇನು ? ‘ಆರ್ಮ್‌ಚೇರ್ ಎಕ್ಸ್‌ಫರ್ಟ್’ ಕೆಲಸವನು ! ಕುಳಿತಲ್ಲೇ ನಿಮ್ಮ ಆಂತರ್ಯಕ್ಕೆ ಹತ್ತಿರದವರು ಬರೆದ ಪುಸ್ತಕಗಳನ್ನು ಆಧಾರವಾಗಿಟ್ಟುಕೊಂಡು ಗೀಚಿದಿರಿ ಅಷ್ಟೇ. ಆದರೆ ನಾನೆಂದೂ ಕುಳಿತಲ್ಲೇ ಬರೆದವನಲ್ಲ.
‘ಈ ನಿಟ್ಟಿನಲ್ಲಿ, ಪ್ರಾಸಂಗಿಕವಾಗಿ, ಜಗತ್ತಿನ ಅತ್ಯಂತ ಅಭಿವೃದ್ಧಿಗೊಂಡ ರಾಷ್ಟ್ರಗಳತ್ತ ಒಂದು ಕ್ಷಣ ಗಮನಹರಿಸುವುದು ಅವಶ್ಯವೆನಿಸುತ್ತದೆ. ಮೊದಲ ಮಹಾಯುದ್ಧದಿಂದ ಜರ್ಝರಿತವಾಗಿಹೋಗಿದ್ದ ಜರ್ಮನಿ ರಾಷ್ಟ್ರವನ್ನು ಹಿಟ್ಲರ್ ಹನ್ನೆರಡೇ ವರ್ಷಗಳಲ್ಲಿ ನಾಗಾಲೋಟದ ವೇಗದಲ್ಲಿ ಅಭಿವೃದ್ಧಿಗೊಳಿಸಿ ಜಗತ್ತನ್ನೇ ಬೆದರಿಸುವಂಥ ಸ್ಥಿತಿಗೆ ಏರಿಸಿದ. ಅವನು ಸಾಸಿದ ಈ ಬಗೆಯ ‘ಅಭಿವೃದ್ಧಿ’ಯನ್ನು ಇಂದು ನಾವು ಮಾದರಿಯಾಗಿ ಒಪ್ಪಲು ಸಾಧ್ಯವೆ ? ಸ್ಟಾಲಿನ್ ರಷ್ಯಾ ಅಥವಾ ಮಾವೋವಿನ ಚೈನಾದ ವಿಷಯಗಳಲ್ಲಿ ಆ ರಾಷ್ಟ್ರಗಳಲ್ಲಿ ನಡೆದ ನೈಜ ಘಟನೆಗಳಿಗೆ ಬಹು ಪ್ರeಪೂರ್ವಕವಾಗಿ ಕುರುಡಾದವರು ಮಾತ್ರ ಆ ಬಗೆಯ ಅಭಿವೃದ್ಧಿಯನ್ನು ಕೊಂಡಾಡಬಲ್ಲರು. ಈ ಮುರೂ ರಾಷ್ಟ್ರಗಳಲ್ಲಿ ಲಕ್ಷಾಂತರ ಜನಗಳ ಗೋರಿಗಳ ಮೇಲೆ ರಾಷ್ಟ್ರವನ್ನು ‘ಬಲಿಷ್ಠ’ಗೊಳಿಸಲಾಯಿತು. ಹೋಗಲಿ, ಪ್ರಜಾಪ್ರಭುತ್ವ ರಾಷ್ಟ್ರವೆಂದು ಬೀಗುವ, ಈಗಲಂತೂ ಏಕಮೇವಾದ್ವಿತೀಯ- ಚಿಂತಕ ನೋಮ್ ಚೋಮ್‌ಸ್ಕಿ ಹೇಳುವಂತೆ- 'Rogue Stute' ಆಗಿರುವ ಅಮೆರಿಕದ ಕತೆಯೇನು ? ತನ್ನ ರಾಷ್ಟ್ರದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಭರಾಟೆಯಲ್ಲಿ ಅಮೆರಿಕ, ಮಿಕ್ಕೆಲ್ಲ ಚಿಕ್ಕ ದೊಡ್ಡ ರಾಷ್ಟ್ರಗಳ ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಗಳಿಕೆಯಲ್ಲಿ ಯತ್ನಗಳನ್ನೂ, ಹೋರಾಟಗಳನ್ನೂ ದಮನ ಮಾಡುವುದು ಅಥವಾ ಪ್ರಜಾಪ್ರಭುತ್ವ ತರುತ್ತೇನೆಂಬ ಅಪ್ಪಟ ಸುಳ್ಳಿನ ಮುಖವಾಡದಲ್ಲಿ ಲಕ್ಷಾಂತರ ಜನಗಳನ್ನು ಸುಟ್ಟು ಬೂದಿ ಮಾಡುವುದು, ತನ್ಮೂಲಕ ನಿರಂತರ ಯುದ್ಧ ಸ್ಥಿತಿಯನ್ನು ನಿರ್ಮಾಣ ಮಾಡಿ ತನ್ನ ರಾಷ್ಟ್ರದ ಯುದ್ಧೋಪಕರಣ ಉತ್ಪಾದನಾ ಉದ್ಯಮವನ್ನು ಅಭಿವೃದ್ಧಿಗೊಳಿಸಿ, ತನ್ನ ಬೊಕ್ಕಸ ತುಂಬಿಸಿಕೊಳ್ಳುವುದು- ಇದೇ ಪರಿಪಾಠವನ್ನು ಅನುಸರಿಸುತ್ತಿದೆ. ಪ್ರಪ್ರಥಮ ಅಣುಬಾಂಬ್ ಸೊಟಿಸಿ ಕೋಟ್ಯಂತರ ಜನರನ್ನು ಆಹುತಿ ತೆಗೆದುಕೊಂಡು ಅಭಿವೃದ್ಧಿಶೀಲತೆಯ ಭಯಂಕರ ನಿಜಸ್ವರೂಪವನ್ನು ಅನಾವರಣಗೊಳಿಸಿದ್ದು ಅಮೆರಿಕ ರಾಷ್ಟ್ರವೇ.’


ಹಾಗಂತ ಬರೆದಿದ್ದೀರಲ್ಲಾ ಅದರ ಅರ್ಥವೇನು ಸ್ವಾಮಿ ?
ಏಕೆ ಗೋಜಲು ಗೋಜಲಾಗಿ ಬರೆಯುತ್ತೀರಿ ? ಅಸಂಬದ್ಧ ಉದಾಹರಣೆ ಕೊಡುತ್ತೀರಿ? ಹಿಟ್ಲರ್ ಹನ್ನೆರಡೇ ವರ್ಷಗಳಲ್ಲಿ ನಾಗಾಲೋಟದಲ್ಲಿ ಜರ್ಮನಿಯನ್ನು ಅಭಿವೃದ್ಧಿಪಡಿಸಿದ ಅಂತ ನಿಮಗೆ ಹೇಳಿಕೊಟ್ಟಿದ್ದು ಯಾರು ? ಹಿಟ್ಲರ್ ಅಕಾರಕ್ಕೆ ಬಂದಿದ್ದು ೧೯೩೩ರಲ್ಲಿ. ಅಲ್ಲಿಂದ ೧೯೩೯ರವರೆಗೂ ಆತ ಮಾಡಿದ್ದು ಯುದ್ಧಸಿದ್ಧತೆಯನ್ನೇ ಹೊರತು ಮತ್ತೀನೆನನ್ನೂ ಅಲ್ಲ. ೧೯೩೮ರಲ್ಲಿ ಆಸ್ಟ್ರೀಯಾವನ್ನು ಕಬಳಿದ ಹಿಟ್ಲರ್ ಅಲ್ಲಿನ ಆಗಾಧ ಖನಿಜ ಸಂಪನ್ಮೂಲವನ್ನು ಲೂಟಿ ಹೊಡೆದು ಯುದ್ಧಕ್ಕೆ ಸನ್ನದ್ಧನಾದನೇ ಹೊರತು ಆತ ಯಾವ ಪ್ರಗತಿ, ಅಭಿವೃದ್ಧಿಯನ್ನೂ ಮಾಡಿದವನಲ್ಲ. ತಂತ್ರeನದ ವಿಷಯದಲ್ಲಿ ಜರ್ಮನ್ನರು ೧೫ನೇ ಶತಮಾನದಲ್ಲೇ ಹೆಸರು ಮಾಡಿದ್ದರು. ಹಿಟ್ಲರ್ ಮಾಡಿದ್ದೇನೂ ಇಲ್ಲ. ಇನ್ನು ಅದ್ಯಾವ ದೃಷ್ಟಿಯಲ್ಲಿ ಹಿಟ್ಲರ್, ಸ್ಟಾಲಿನ್, ಲೆನಿನ್, ಮಾವೋಗಳನ್ನು ಮೋದಿ ವಿಷಯದಲ್ಲಿ ಎಳೆದು ತರುತ್ತೀರಿ?


ಹಿಟ್ಲರ್‌ನ ಹೋಲೋಕಾಸ್ಟ್‌ನಲ್ಲಿ ಸತ್ತವರ ಸಂಖ್ಯೆ ೧೧ ದಶಲಕ್ಷ(೧.೧ ಕೋಟಿ), ಸ್ಟಾಲಿನ್ ನೀತಿಗೆ ಬಲಿಯಾಗಿದ್ದು ೨೦ ದಶಲಕ್ಷ, ಲೆನಿನ್ ಬಲಿತೆಗೆದುಕೊಂಡಿದ್ದು ೨೦ ಲಕ್ಷ, ಮಾವೋನಿಂದಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆಯನ್ನು ೪೦ರಿಂದ ೨೦ ದಶಲಕ್ಷ ಎಂದು ಅಂದಾಜು ಮಾಡಲಾಗಿದೆ ! ಅವರಿಗೆ ಹೋಲಿಸುವಂತಹ ಯಾವ ಪಾತಕವನ್ನು ಮೋದಿ ಮಾಡಿದ್ದಾರೆ ? ಒಬ್ಬ ಶಾಸಕನೂ ಆಗಿರದಿದ್ದ, ರಾಜಕೀಯದ ಯಾವುದೇ ಅನುಭವ ಇಲ್ಲದೆ ಮೋದಿ ಮುಖ್ಯಮಂತ್ರಿಯಾಗಿದ್ದು ೨೦೦೧, ಅಕ್ಟೋಬರ್ ೭ರಂದು. ಗುಜರಾತ್ ಹಿಂಸಾಚಾರ ಆರಂಭವಾಗಿದ್ದು ೨೦೦೨, ಫೆಬ್ರವರಿ ೨೭ರಂದು. ಅಕಾರಕ್ಕೆ ಬಂದು ಐದು ತಿಂಗಳೂ ಆಗಿರಲಿಲ್ಲ. ಅಂತಹ ವ್ಯಕ್ತಿ ಹಿಂಸಾಚಾರವನ್ನು ತಡೆಗಟ್ಟುವುದರಲ್ಲಿ ಸ್ವಲ್ಪ ಎಡವಿರಬಹುದೇ ಹೊರತು, ಕೊಲೆಪಾತಕಿಯಾಗಿರಲು ಸಾಧ್ಯವಿಲ್ಲ. ಅಷ್ಟಕ್ಕೂ ಗುಜರಾತ್ ಹಿಂಸಾಚಾರದಲ್ಲಿ ಮಡಿದವರ ಸಂಖ್ಯೆಯೆಷ್ಟು? ಮುಸ್ಲಿಮರು ೭೯೦, ಹಿಂದೂಗಳು ೨೫೪ !! ಕೋಟಿ ಕೋಟಿ ಜನರನ್ನು ಕೊಲೆಗೈದವರಿಗೂ ಮೋದಿಗೂ ವ್ಯತ್ಯಾಸವೇ ಇಲ್ಲವೆ? ಮಹಾರಾಷ್ಟ್ರ ಮತ್ತು ಆಂಧ್ರದಲ್ಲಿ ಕಳೆದ ೧೦ ವರ್ಷಗಳಲ್ಲಿ ೫೦ ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ? ಏಕೆ ಅವರೆಲ್ಲ ನೇಣಿಗೆ ಶರಣಾದರು? ಅವರ ಸಾವಿಗೆ ಮಹಾರಾಷ್ಟ್ರ ಮತ್ತು ಆಂಧ್ರ ಸರಕಾರದ ಹೊಣೆಗೇಡಿತನ, ಸಂವೇzsದನಾರಹಿತ ನೀತಿ, ನಿರ್ಲಕ್ಷ್ಯಗಳು ಕಾರಣವಲ್ಲವೆ? ರೈತರ ಸಾವಿಗೆ ನೇರ ಹಾಗೂ ಪರೋಕ್ಷ ಹೊಣೆಗಾರರಲ್ಲವೆ ? ಅಂದರೆ ಆಂಧ್ರ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನೂ ಸಾಮೂಹಿಕ ಸಾವಿಗೆ ಕಾರಣೀಭೂ ತರನ್ನಾಗಿ ಮಾಡಬಹುದಲ್ಲವೆ?


‘ಪ್ರಪ್ರಥಮ ಅಣುಬಾಂಬ್ ಸೊಟಿಸಿ ಕೋಟ್ಯಂತರ ಜನರನ್ನು ಆಹುತಿ ತೆಗೆದುಕೊಂಡು ಅಭಿವೃದ್ಧಿಶೀಲತೆಯ ಭಯಂಕರ ನಿಜಸ್ವರೂಪವನ್ನು ಅನಾವರಣಗೊಳಿಸಿದ್ದು ಅಮೆರಿಕ ರಾಷ್ಟ್ರವೇ’ ಎಂದು ಯಾಕ್ರೀ ಹಸಿ ಹಸಿ ಸುಳ್ಳು ಹೇಳುತ್ತೀರಿ ?! ೧೯೪೫ರಲ್ಲಿ ಅಮೆರಿಕ ಸೋಟಿಸಿದ ಅಣುಬಾಂಬ್‌ಗೆ ಸಿಲುಕಿ ಹಿರೋಷಿಮಾದಲ್ಲಿ ಸತ್ತವರು ೧.೪ ಲಕ್ಷ, ನಾಗಾಸಾಕಿಯಲ್ಲಿ ಸುಟ್ಟು ಕರಕಲಾದವರು ೮೦ ಸಾವಿರ. ಒಟ್ಟಾರೆ ೨ಲಕ್ಷದ ೨೦ ಸಾವಿರ. ಏಕೆ ‘ಕೋಟ್ಯಂತರ’ ಎಂದು ಸುಳ್ಳು ಬರೆಯುತ್ತೀರಿ? ಖಂಡಿತ Words are free, But ಅವುಗಳನ್ನು ಬಳಸುವಾಗ ಎಚ್ಚರಿಕೆ ಇರಬೇಕು ಅಲ್ಲವೆ ‘ಡಾಕ್ಟರ್’ ಗೋವಿಂದರಾವ್ ?!


“ನಮಗೆ ಅವಶ್ಯವಿರುವುದು ಸರ್ವಾಂಗೀಣ ಅಭಿವೃದ್ಧಿ. ಸರ್ವಾಂಗೀಣ ಅಭಿವೃದ್ಧಿಯೇ ಪ್ರಗತಿ. ಮನುಷ್ಯನ ಮನಸ್ಸನ್ನು ಮುಟ್ಟುವಂಥ, ಅರಳಿಸುವಂಥ, ಬೆಳೆಸುವಂಥ, ಮನುಷ್ಯ ಸಂಬಂಧಗಳನ್ನು ಆಪ್ತಗೊಳಿಸುವಂಥ, ಜೀವಪ್ರೇಮವನ್ನು ಹುಟ್ಟಿಸುವಂಥ ಅಭಿವೃದ್ಧಿಯೇ ಪ್ರಗತಿ." ನೀವೇ ಬರೆದಿದ್ದೀರಿ. ನಾನು ಬೆಳಕು ಚೆಲ್ಲಿರುವುದೂ ಗುಜರಾತ್‌ನಲ್ಲಿ ಕಂಡುಬರುತ್ತಿರುವ ಅಂತಹ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆಯೇ. ನರ್ಮಾದಾ ನದಿಯ ನೀರು ಹಿಂದೂಗಳ ಜತೆಗೆ ಮುಸ್ಲಿಮರ ಮನೆ, ಹೊಲ, ಗದ್ದೆಗಳನ್ನೂ ಹದಮಾಡುತ್ತಿದೆ. ಏಕೆ ನಿಮ್ಮ ಎದೆಯಲ್ಲಿರುವ ತಾರತಮ್ಯದ ವಿಷಬೀಜವನ್ನು ಬಿತ್ತಲು ಹೊರಟಿದ್ದೀರಿ?!
ಛೇ ಛೇ!

ಈ ಬಾರಿ ಲಾಸ್ಟ್ ‘ಡ್ರಾಪ್’ ಅಲ್ಲ, ಪಂಚ್: ಬಹುಶಃ ನನ್ನ ಲೇಖನ ಸಂಪೂರ್ಣ ಓದುವ ಮೊದಲೇ, ಕೇವಲ ತಲೆಬರಹ ನೋಡಿ ಗೋವಿಂದ ರಾಯರು ಪ್ರತಿ ಕ್ರಿಯಿಸಿರಬಹುದು ಎನಿಸುತ್ತದೆ. ಇಲ್ಲದಿದ್ದರೆ ಅಭಿವೃದ್ಧಿಯ ವಿಷಯಕ್ಕೆ ಕೋಮುವಾದದಂಥ ಸಲ್ಲದ ಬಣ್ಣ ಹಚ್ಚುವ ಕಸರತ್ತು ಮಾಡುತ್ತಿರಲಿಲ್ಲ.

ಅಭಿವೃದ್ಧಿಗೆ ಯಾವ ಇಸಂ ಸ್ವಾಮೀ, ರಾಯರೇ ?


ಲನಶೀಲ ಚಿಂತಕ, ಮತ್ತದೇ ವಿಶೇಷಣ ಬಳಸುತ್ತಿದ್ದೇನೆ. ಹೌದು, ಅನುಮಾನವೇ ಇಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ನೋಡಿದಾಗ ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಆ ಪದವೇ ಅತ್ಯಂತ ಸೂಕ್ತ. ಇಂಥ ಪದವನ್ನು ಮೋದಿಯವರಿಗೆ ಬಿಟ್ಟರೆ ಸದ್ಯಕ್ಕೆ ದೇಶದ ಮತ್ಯಾವ ಮುಖ್ಯಮಂತ್ರಿಗೂ ಬಳಸಬೇಕೆನಿಸುತ್ತಿಲ್ಲ. ಗುಜರಾತ್‌ನಲ್ಲಿ ಬೇರೇನಾಗಿದೆಯೋ, ಇಲ್ಲವೋ ಗೊತ್ತಿಲ್ಲ. ನೀರಾವರಿ ಮತ್ತು ಕೃಷಿಯ ವಿಚಾರದಲ್ಲಿ ಆಗಿರುವ ಕ್ರಾಂತಿಯನ್ನು ಹೋಗಿ ನೋಡಿದ ವಿವೇಚನಾವಂತರೆಲ್ಲರೂ ಈ ವಿಶೇಷಣವನ್ನು ಒಪ್ಪುತ್ತಾರೆ. ಉಳಿದವರ ಬಗೆಗೆ ನನ್ನಲ್ಲಿ ಅತ್ಯಂತ ಅಸಹಾಯಕ ಮರುಕವಷ್ಟೇ ಹುಟ್ಟುತ್ತದೆ. ಮೋದಿಯವರ ಕೃಷಿ ಕ್ರಾಂತಿಯ ಬಗೆಗೆ ಬರೆಯುವ ಮುನ್ನ ಸ್ವತಃ ಗುಜರಾತ್‌ಗೆ ಹೋಗಿ ನೋಡಿ ಬಂದು ಬರೆದದ್ದೇ ವಿನಃ ಬೇರೆಯವರ ಯಾವುದೋ ಮೂರ್‍ನಾಲ್ಕು ಲೇಖನಗಳನ್ನು ಉಲ್ಲೇಖಿಸಿ ನಾಲ್ಕು ಗೋಡೆಯ ಮಧ್ಯೆ ಕುಳಿತು ಬರೆದದ್ದು ಅಲ್ಲ ಎಂಬುದನ್ನು ಮನಗಾಣಲೇ ಬೇಕು.
ಅಲ್ಲ, ನನ್ನ ಪ್ರಶ್ನೆ ಇಷ್ಟೆ, ಮೋದಿಯವರ ಹೆಸರು ಹೇಳಿದಾಕ್ಷಣ ಇವರೇಕೆ ಹೀಗೆ ಮೈಮೇಲೆ ದೆವ್ವ ಬಂದವರಂತೆ ಆಡುತ್ತಾರೆ ಅರ್ಥವೇ ಆಗುತ್ತಿಲ್ಲ ? ಅಷ್ಟಕ್ಕೂ ಕಳೆದ ವಾರ ಈ ಅಂಕಣದ ( ಕರ್ನಾಟಕವನ್ನು ಮತ್ತೊಂದು ಗುಜರಾತ್ ಮಾಡಿ, ಪ್ಲೀಸ್...) ಆರಂಭದಲ್ಲೇ ಸ್ಪಷ್ಟಪಡಿಸಿದ್ದೇನೆ. ‘ಮೋದಿ ಎಂದ ತಕ್ಷಣವೇ ಕೇವಲ ಹಿಂದೂ-ಮುಸ್ಲಿಂ ಪ್ರಕರಣವನ್ನೇ ನಮ್ಮ ಮಾದ್ಯಮಗಳು ಬಿಂಬಿಸುತ್ತವೆ. ಈ ದೇಶದ ಜೀವಾಳವೆನಿಸಿರುವ ಕೃಷಿಯಲ್ಲಾದ ಕ್ರಾಂತಿ ಸುದ್ದಿಯಾಗುವುದಿಲ್ಲ ಏಕೆ?’ ಎಂಬುದು ಅಂದಿನ ಬರಹದ ಮೂಲಭೂತ ಪ್ರಶ್ನೆಯಾಗಿತ್ತು. ಕೃಷಿ ಮತ್ತು ನೀರಾವರಿಯಲ್ಲಿ ಮೋದಿಯವರು ಕೈಗೊಂಡಿರುವ ನೈಜ ಕ್ರಾಂತಿಯ ಬಗೆಗೇ ಇಡೀ ಲೇಖನದುದ್ದಕ್ಕೂ ವಿವರಣೆ ಒದಗಿಸಲಾಗಿತ್ತು. ಕಾಮಾಲೆ ಕಣ್ಣಿನ ಸನ್ಮಾನ್ಯ ಜಿ.ಕೆ.ಗೋವಿಂದರಾವ್ ಅವರಂಥ ಅತ್ಯಂತ ಜಾತ್ಯತೀತ ಹಾಗೂ ಬುದ್ಧಿಜೀವಿ ( ಈ ಎರಡೂ ಪದಗಳಿಗೆ ನನಗಿನ್ನೂ ಅರ್ಥ ದೊರಕಿಲ್ಲ) ವ್ಯಕ್ತಿಗಳಿಗೆ ಇದೇಕೆ ಅರ್ಥವೇ ಆಗಿಲ್ಲ ? ಬಹುಶಃ ನನ್ನ ಲೇಖನ ಸಂಪೂರ್ಣ ಓದುವ ಮೊದಲೇ, ಕೇವಲ ತಲೆಬರಹ ನೋಡಿ ಅವರು ( ಅ.೨೧ರ ಸಂಚಿಕೆಯಲ್ಲಿ ಪ್ರಕಟವಾದ-‘ಕರ್ನಾಟಕವನ್ನು ಗುಜರಾತ್ ಮಾಡುವ ಮುಂಚೆ ಕೊಂಚ ಯೋಚಿಸೋಣ’ )ಪ್ರತಿಕ್ರಿಯಿಸಿರಬಹುದು ಎನಿಸುತ್ತದೆ. ಇಲ್ಲದಿದ್ದರೆ ಅಭಿವೃದ್ಧಿಯ ವಿಷಯಕ್ಕೆ ಕೋಮುವಾದದಂಥ ಸಲ್ಲದ ಬಣ್ಣ ಹಚ್ಚುವ ಕಸರತ್ತು ಮಾಡುತ್ತಿರಲಿಲ್ಲ.
ಸ್ವಾಮಿ ಗೋವಿಂದರಾಯರೇ, ನಿಮ್ಮ ಹಿರಿತನ, ಪ್ರತಿಭೆಯ ಬಗೆಗೆ ಖಂಡಿತಾ ಗೌರವವಿದೆ. ಆದರೆ ಬೌದ್ಧಿಕತೆ, ಜಾತ್ಯತೀತತೆ ಎಂಬುದು ನಿಮ್ಮಂಥವರಿಗೆ ಮಾತ್ರ ಮಾರಾಟವಾಗಿದೆ ಎಂಬ ನಿಮ್ಮಗಳ ಧೋರಣೆಯ ಬಗ್ಗೆ ಮಾತ್ರ ನನ್ನ ಆಕ್ಷೇಪವಿದೆ. ಕಳೆದ ಐದು ವರ್ಷಗಳಿಂದ ಈ ಅಂಕಣದಲ್ಲಿ ನೀರಿನ ಬಗೆಗೆ ಬರೆಯುತ್ತ ಬರಲಾಗಿದೆ. ಈಗಲೂ ಈ ಅಂಕಣ ನೀರಿಗೇ ಮೀಸಲು. ಅನಿವಾರ್ಯವಾಗಿ ಈ ವಾರ ನಿಮ್ಮಂಥವರ ಲೇಖನಕ್ಕೆ ಪ್ರತಿಕ್ರಿಯಿಸಬೇಕಾಗಿ ಬಂದಿದೆ. ಇಲ್ಲದಿದ್ದರೆ ಖಂಡಿತಾ, ಇದು ಅಭಿವೃದ್ಧಿಪರ ವಿಷಯಗಳಿಗೆ, ನೀರಿನ ಯಶೋಗಾಥೆಗಳಿಗೆ ಸೀಮಿತವೇ ಹೊರತು, ಯಾರನ್ನೋ ಟೀಕಿಸಲು, ಅಗ್ಗದ ಭಾಷಾ ಪ್ರೌಢಿಮೆ ಮೆರೆಯಲು ಅಲ್ಲ. ಈ ಕುರಿತು ಓದುಗರ ಕ್ಷಮೆಯನ್ನೂ ಯಾಚಿಸಿ, ಮೋದಿಯವರು ನೀರಾವರಿಯಲ್ಲಿ ಕೈಗೊಂಡ ಇನ್ನಷ್ಟು ಮಹೋನ್ನತ ಕಾರ್ಯಗಳನ್ನು ವಿವರಿಸುತ್ತೇನೆ. ಸಾಧ್ಯವಾದರೆ ದಯವಿಟ್ಟು ನಿಮ್ಮ ಜಾತ್ಯತೀತತೆಯ ಮುಖವಾಡ ಕಳಚಿಟ್ಟು ಓದಿ ಅರ್ಥ ಮಾಡಿಕೊಳ್ಳಿ.
ದೇಶದಲ್ಲಿ ಇಂದಿಗೂ ಶೇ. ೫೦ರಷ್ಟು ಭೂಭಾಗಕ್ಕೆ ಅಂತರ್ಜಲ ಬಿಟ್ಟು ಅನ್ಯ ಆಸರೆಯಿಲ್ಲ. ಇದರ ನಡುವೆಯೇ ‘ನೀರು ಸರಬರಾಜು ಯೋಜನೆ’ಎಂಬ ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಎಗ್ಗಿಲ್ಲದೇ ಸಾಗಿದೆ. ಹಳ್ಳಿ ಹಳ್ಳಿಗಳಿಗೆ (ಕಾಗದದ ಮೇಲೆ) ಇವು ತಲುಪಿವೆ. ದುರಂತವೆಂದರೆ ಇಂಥ ಕಾರ್ಯಕ್ರಮಗಳು ಅನುಷ್ಠಾನಗೊಂಡಿರುವ ಸ್ಥಳಗಳ ನೀರಿಗಾಗಿನ ಹಾಹಾಕಾರ ಉಲ್ಬಣಿಸಿದೆ. ಗಮನಾರ್ಹ ಸಂಗತಿಯೆಂದರೆ, ಹೀಗೆ ‘ನೀರು ಸರಬರಾಜು’ ಇಲ್ಲದ ಹಳ್ಳಿಯ ಮೂಲೆಗಳಲ್ಲಿ, ಗುಡ್ಡಗಾಡುಗಳಲ್ಲಿ ಇಂದಿಗೂ ಜಲ ಸ್ವಾವಲಂಬನೆ ಅಸ್ತಿತ್ವದಲ್ಲಿದೆ. ಅದು ಕಾನೂನಾಗಲೀ, ಕಾರ್‍ಯಕ್ರಮವಾಗಿಯಾಗಲೀ ಹೇರಿಕೆಯಾಗಿಲ್ಲ. ಸಹಜ ಜೀವನವಾಗಿಯೇ ಸಾಗಿದೆ. ಆದ್ದರಿಂದ ನೀರಿನ ವಿಚಾರದಲ್ಲಿ ಸಂಕಷ್ಟವೆಂಬುದನ್ನು ಆ ಮಂದಿ ಅರಿತಿಲ್ಲ. ಅದನ್ನೇ ಮೋದಿಯವರು ಗುಜರಾತ್‌ನ ಎಲ್ಲ ಹಳ್ಳಿಗಳಿಗೆ ದಕ್ಕಿಸಿಕೊಟ್ಟಿದ್ದಾರೆ.
ನೀವು ನಂಬಬೇಕು. ಇಸ್ರೇಲ್ ಈ ವಿಚಾರದಲ್ಲಿ ಮಾದರಿ. ಅಂಥ ಮರುಭೂಮಿಯಲ್ಲೂ ಅತ್ಯಂತ ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ. ದೇಶದ ಬಳಕೆ ಪೂರೈಸಿಕೊಂಡು ಒಂದಿಡೀ ಯುರೋಪಿಗೆ ಹಣ್ಣು ಹಂಪಲು, ತರಕಾರಿಗಳನ್ನು ರಫ್ತು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅಂತರ್ಜಲ ಬಳಕೆಯ ಹತೋಟಿಯಿಂದ ಅಲ್ಲಿನ ನೀರಾವರಿ ಪ್ರದೇಶ ಒಂದಕ್ಕೆ ಎರಡರಷ್ಟು ಹೆಚ್ಚಿದೆ. ಮೋದಿ ಅದನ್ನೇ ಗುಜರಾತ್‌ನಲ್ಲೂ ಮಾಡುತ್ತಿರುವುದು, ಬೇಕಿದ್ದರೆ ಹೋಗಿ ನೋಡಿ ಬನ್ನಿ.

ಕರ್ನಾಟಕವನ್ನು ಗುಜರಾತ್ ಮಾಡುವುದಕ್ಕೆ ಮುಂಚೆ ಕೊಂಚ ಯೋಚಿಸೋಣ

ಗ ಎಲ್ಲ ರಾಜಕಾರಣಿಗಳ ಬಾಯಲ್ಲೂ ಅಭಿವೃದ್ಧಿಮಂತ್ರ ಪಠಣವಾಗುತ್ತಿದೆ. ಪ್ರಜಾಪ್ರಭುತ್ವ, ಜಾತ್ಯತೀತತೆ ಎಂಬೆಲ್ಲ ಮೌಲ್ಯಗಳನ್ನು ಮೂಲೆಗೆ ತಳ್ಳಲಾಗಿದೆ.
ಸದ್ಯಕ್ಕೆ ಕರ್ನಾಟಕದ ಬಿಜೆಪಿ ಸರಕಾರಕ್ಕೆ “ಅಭಿವೃದ್ಧಿ" ಎಂಬುದಕ್ಕೆ ನೈಜ ವ್ಯಾಖ್ಯಾನ ಕಟ್ಟಿಕೊಟ್ಟ ನರೇಂದ್ರ ಮೋದಿ ಎಂಬ ಚಲನಶೀಲ, ಚಿಂತಕ ಮುಖ್ಯಮಂತ್ರಿ (೧೬-೧೦-೦೯ರ ರಾಧಾಕೃಷ್ಣ ಭಡ್ತಿ ಅವರ ‘ಕರ್ನಾಟಕವನ್ನು ಇನ್ನೊಂದು ಗುಜರಾತು ಮಾಡಿ, ಪ್ಲೀಸ್’ ಲೇಖನ) ಅಭಿವೃದ್ಧಿಪಥದಲ್ಲಿ ದಾಪುಗಾಲಿಟ್ಟು ನಡೆಯುತ್ತಿರುವ ಆರಾಧ್ಯದೈವ ಎಂದೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದ ಸಚಿವರು ಮೋದಿ ಅವರಿಂದ ‘ಶ್ರದ್ಧೆಯಿಂದ ಪಾಠ ಕೇಳಿ ಬಂದರು.’
ಒಂದು ರಾಜ್ಯವಾಗಲಿ, ಒಂದು ನಾಡಾಗಲಿ ಸರ್ವವಿಧದಲ್ಲಿಯೂ ಅಭಿವೃದ್ಧಿಗೊಳ್ಳಬೇಕು ಎಂಬುದರ ಬಗ್ಗೆ ಯಾರದೂ ತಕರಾರಿಲ್ಲ. ಆದರೆ ‘ಅಭಿವೃದ್ಧಿ’ ಶಬ್ದ ಬಳಸಿದಾಗ ಅದಕ್ಕೆ ನಾವು ಹಚ್ಚುವ ಅರ್ಥವೆಷ್ಟು? ಆ ಶಬ್ದಕ್ಕೆ ಇರುವ ವ್ಯಾಪ್ತಿಯೆಷ್ಟು? ಮತ್ತು ಅಭಿವೃದ್ಧಿಯೇ ಪ್ರಗತಿ ಕೂಡ ಹೌದೆ! ಈ ಎರಡು ಶಬ್ದಗಳ ಪರಸ್ಪರ ಸಂಬಂಧವೇನು? ಇವುಗಳನ್ನು ನಾವು ಎಚ್ಚರಿಕೆಯಿಂದ ತಿಳಿಯಬೇಕು ಮತ್ತು ಯಾವುದೇ ರೀತಿಯ ಒಳ್ಳೆಯ ಪಾಠವನ್ನಾಗಲಿ ನಾವು ಕಲಿಯುತ್ತಲೇ ಇರಬೇಕಾದ ಅವಶ್ಯಕತೆಯನ್ನು ಯಾರೂ ನಿರಾಕರಿಸಲಾರರು. ಆದರೆ ಯಾರಿಂದ ಪಾಠ ಕಲಿಯುತ್ತಿದ್ದೇವೆ ಮತ್ತು ಅವರದೇ ನಂಬಿಕೆಗಳನ್ನು ಕಾರ್ಯರೂಪಕ್ಕೆ ಅಳವಡಿಸುವಾಗ ಅವರು ತೋರುತ್ತಿರುವ ರೀತಿ ಯಾವುದು ಎಂಬುದು ಬಹುಮುಖ್ಯವಾಗುತ್ತದೆ. ವಿಶೇಷ ವಾಗಿ ಆ ವ್ಯಕ್ತಿ ರಾಜಕಾರಣದಲ್ಲಿದ್ದು, ರಾಜ್ಯದ ಆಡಳಿತದ ಮುಂಚೂಣಿ ಯಲ್ಲಿದ್ದಾಗ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತದೆ.
ಈ ನಿಟ್ಟಿನಲ್ಲಿ, ಪ್ರಾಸಂಗಿಕವಾಗಿ, ಜಗತ್ತಿನ ಅತ್ಯಂತ ಅಭಿವೃದ್ಧಿ ಗೊಂಡ ರಾಷ್ಟ್ರಗಳತ್ತ ಒಂದು ಕ್ಷಣ ಗಮನಹರಿಸುವುದು ಅವಶ್ಯವೆನಿಸುತ್ತದೆ. ಮೊದಲ ಮಹಾಯುದ್ಧದಿಂದ ಜರ್ಝರಿತ ವಾಗಿಹೋಗಿದ್ದ ಜರ್ಮನಿ ರಾಷ್ಟ್ರವನ್ನು ಹಿಟ್ಲರ್ ಹನ್ನೆರಡೇ ವರ್ಷಗಳಲ್ಲಿ ನಾಗಾಲೋಟದ ವೇಗದಲ್ಲಿ ಅಭಿವೃದ್ಧಿಗೊಳಿಸಿ ಜಗತ್ತನ್ನೇ ಬೆದರಿಸುವಂಥ ಸ್ಥಿತಿಗೆ ಏರಿಸಿದ. ಅವನು ಸಾಸಿದ ಈ ಬಗೆಯ ‘ಅಭಿವೃದ್ಧಿ’ಯನ್ನು ಇಂದು ನಾವು ಮಾದರಿಯಾಗಿ ಒಪ್ಪಲು ಸಾಧ್ಯವೆ? ಸ್ಟಾಲಿನ್‌ನ ರಷ್ಯಾ ಅಥವಾ ಮಾವೋವಿನ ಚೀನಾದ ವಿಷಯಗಳಲ್ಲಿ ಆ ರಾಷ್ಟ್ರಗಳಲ್ಲಿ ನಡೆದ ನೈಜ ಘಟನೆಗಳಿಗೆ ಬಹು ಪ್ರeಪೂರ್ವಕವಾಗಿ ಕುರುಡಾದವರು ಮಾತ್ರ ಆ ಬಗೆಯ ಅಭಿವೃದ್ಧಿಯನ್ನು ಕೊಂಡಾಡಬಲ್ಲರು. ಈ ಮೂರೂ ರಾಷ್ಟ್ರಗಳಲ್ಲಿ ಲಕ್ಷಾಂತರ ಜನರ ಗೋರಿಗಳ ಮೇಲೆ ರಾಷ್ಟ್ರವನ್ನು ‘ಬಲಿಷ್ಠ’ಗೊಳಿಸಲಾಯಿತು. ಹೋಗಲಿ, ಪ್ರಜಾಪ್ರಭುತ್ವ ರಾಷ್ಟ್ರವೆಂದು ಬೀಗುವ, ಈಗಲಂತೂ ಏಕಮೇವಾದ್ವಿತೀಯ- ಚಿಂತಕ ನೋಮ್ ಚೋಮ್‌ಸ್ಕಿ ಹೇಳುವಂತೆ- ’Rogue State' ಆಗಿರುವ ಅಮೆರಿಕದ ಕತೆಯೇನು? ತನ್ನ ರಾಷ್ಟ್ರದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಭರಾಟೆಯಲ್ಲಿ ಅಮೆರಿಕ, ಮಿಕ್ಕೆಲ್ಲ ಚಿಕ್ಕ ದೊಡ್ಡ ರಾಷ್ಟ್ರಗಳ ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಗಳಿಕೆಯಲ್ಲಿ ಯತ್ನಗಳನ್ನೂ, ಹೋರಾಟಗಳನ್ನೂ ದಮನ ಮಾಡುವುದು ಅಥವಾ ಪ್ರಜಾಪ್ರಭುತ್ವ ತರುತ್ತೇನೆಂಬ ಅಪ್ಪಟ ಸುಳ್ಳಿನ ಮುಖವಾಡದಲ್ಲಿ ಲಕ್ಷಾಂತರ ಜನರನ್ನು ಸುಟ್ಟು ಬೂದಿ ಮಾಡುವುದು, ತನ್ಮೂಲಕ ನಿರಂತರ ಯುದ್ಧ ಸ್ಥಿತಿಯನ್ನು ನಿರ್ಮಾಣ ಮಾಡಿ ತನ್ನ ರಾಷ್ಟ್ರದ ಯುದ್ಧೋಪಕರಣ ಉತ್ಪಾದನಾ ಉದ್ಯಮವನ್ನು ಅಭಿವೃದ್ಧಿಗೊಳಿಸಿ, ತನ್ನ ಬೊಕ್ಕಸ ತುಂಬಿಸಿಕೊಳ್ಳುವುದು-ಇದೇ ಪರಿಪಾಠವನ್ನು ಅನುಸರಿಸುತ್ತಿದೆ. ಪ್ರಪ್ರಥಮ ಅಣುಬಾಂಬ್ ಸೋಟಿಸಿ ಕೋಟ್ಯಂತರ ಜನರನ್ನು ಆಹುತಿ ತೆಗೆದುಕೊಂಡು ಅಭಿವೃದ್ಧಿಶೀಲತೆಯ ಭಯಂಕರ ನಿಜಸ್ವರೂಪವನ್ನು ಅನಾವರಣಗೊಳಿಸಿದ್ದು ಅಮೆರಿಕ ರಾಷ್ಟ್ರವೇ.
ಅಭಿವೃದ್ಧಿ ಎಂಬುದು ಮಾನವೀಯ ಮೌಲ್ಯಗಳನ್ನು ಹೊಂದಿರದಿ ದ್ದರೆ ಅದು ಕೇವಲ ಇಂದ್ರಿಯಗಳಿಗೆ ಮಾತ್ರ ತಾಗುವಂತಾಗಿ, ಐಂದ್ರಿಕಭೋಗವೇ ಅಭಿವೃದ್ಧಿಯ ಲಕ್ಷಣ ಎಂಬ ಆತ್ಮಹಾನಿಕರ ಭ್ರಮೆಯನ್ನು ಹುಟ್ಟಿಸಿಬಿಡುತ್ತದೆ. ಈಗ ಜಗತ್ತಿನಾದ್ಯಂತ ಆಗುತ್ತಿರು ವುದೇ ಇದು. ಪ್ರಜಾತಂತ್ರದ, ಸಮಾನತೆಯ, ಸರ್ವಜನ ಹಿತದೃಷ್ಟಿಯ ವಿರೋ ನಿಲುವು ಇದು.
ನಮಗೆ ಅವಶ್ಯವಿರುವುದು ಸರ್ವಾಂಗೀಣ ಅಭಿವೃದ್ಧಿ. ಸರ್ವಾಂಗೀಣ ಅಭಿವೃದ್ಧಿಯೇ ಪ್ರಗತಿ. ಮನುಷ್ಯನ ಮನಸ್ಸನ್ನು ಮುಟ್ಟುವಂಥ, ಅರಳಿಸುವಂಥ, ಬೆಳೆಸುವಂಥ, ಮನುಷ್ಯ ಸಂಬಂಧ ಗಳನ್ನು ಆಪ್ತಗೊಳಿಸುವಂಥ, ಜೀವಪ್ರೇಮವನ್ನು ಹುಟ್ಟಿಸುವಂಥ ಅಭಿವೃದ್ಧಿಯೇ ಪ್ರಗತಿ.
* * *
ಈ ‘ಚಲನಶೀಲ ಚಿಂತಕ’ ಮೋದಿಯವರ ಅಭಿವೃದ್ಧಿ ರೀತಿಯನ್ನು ನೋಡೋಣ. ಗುಜರಾತೆಂದರೆ ಈಗ ಕನಿಷ್ಠ ಎರಡು ಗುಜರಾತ್‌ಗಳಿವೆ. ಒಂದು, ನಗರ ಕೇಂದ್ರಗಳಲ್ಲಿರುವ ಬಹುಸಂಖ್ಯಾತರ, ಹಣವಂತರ, ಉಚ್ಚವರ್ಗಗಳ ಗುಜರಾತ್. ಇನ್ನೊಂದು, ಗ್ರಾಮಾಂತರ ಪ್ರದೇಶಗಳ, ಬಹುಪ್ರಮುಖವಾಗಿ ಅಲ್ಪಸಂಖ್ಯಾತರ, ನಿರ್ಗತಿಕರ, ಆದಿವಾಸಿಗಳ ಗುಜರಾತ್.
ಗುಜರಾತಿನ ಕೆಲವು ಗ್ರಾಮಗಳ ಪ್ರವೇಶದಲ್ಲಿ ‘ಹಿಂದೂ ರಾಷ್ಟ್ರ ವಾದ ಗುಜರಾತಿನ ಹಿಂದೂ ಗ್ರಾಮಕ್ಕೆ ಸ್ವಾಗತ’ ಎಂಬ ಬೃಹತ್ ಬ್ಯಾನರ್‌ಗಳನ್ನು ಹಾಕಲಾಗಿದೆ.
ಒಂದು ಕಾಲದಲ್ಲಿ ಮೊಹರಂ ಹಬ್ಬದ ವೇಳೆ ಮೆರವಣಿಗೆಯಲ್ಲಿ ಕೊಂಡೊಯ್ಯುವ ತಾಬೂತ್ ಕೆಳಗೆ ಹಿಂದೂ ಮಹಿಳೆಯರು ತಮ್ಮ ಮಕ್ಕಳು ಹಾದುಹೋದರೆ ಅವರು ದೀರ್ಘಾಯುಷಿಗಳಾಗುತ್ತಾರೆ ಎಂಬ ನಂಬಿಕೆಯಲ್ಲಿ ಹಾಗೆ ಹಾದುಹೋಗಲು ಅವಕಾಶ ಪಡೆಯುತ್ತಿದ್ದರು. ಈಗ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವಾಗ ತಮ್ಮ ಮಕ್ಕಳನ್ನು ಮುಸ್ಲಿಂ ಮಕ್ಕಳ ಪಕ್ಕದಲ್ಲಿ ಕೂಡಿಸಬಾರದು ಎಂಬ ಕಟ್ಟಪ್ಪಣೆ ಮಾಡುತ್ತಾರೆ.
ಮುಸ್ಲಿಂ ಯುವಕರಿಗೆ ಉದ್ಯೋಗ ನೀಡುವುದಿಲ್ಲ; ಅವರ ವ್ಯಾಪಾರ ಮಳಿಗೆಗಳಿಗೆ ಹೋಗುವುದಿಲ್ಲ; ಅವರ ಆಟೊಗಳಲ್ಲಿ ಕೂಡುವುದಿಲ್ಲ.
ಮುಸ್ಲಿಂ ಅಪ್ಪ ಅಮ್ಮಂದಿರು ಮಕ್ಕಳು ಅಕಸ್ಮಾತ್- ಮನೆಯಲ್ಲಿ ಎಷ್ಟೇ ಎಚ್ಚರಿಸಿದ್ದರೂ- ರಸ್ತೆಯಲ್ಲಿ ತಮ್ಮನ್ನು ‘ಅಮ್ಮಿ’ ‘ಅಬ್ಬ’ ಎಂದು ಕರೆದು ಎಲ್ಲಿ ತಮ್ಮ ಗುರುತು ಬಹಿರಂಗವಾಗಿಬಿಡುತ್ತದೋ ಎಂಬ ಆತಂಕದಲ್ಲಿ ಪ್ರತಿಕ್ಷಣ ಕಳೆಯುತ್ತಾರೆ.
೨೦೦೨ರಲ್ಲಿ ಆರಂಭವಾದ ಹತ್ಯಾಕಾಂಡದ ಮಿನಿಸ್ವರೂಪಗಳು ಈಗಲೂ ನಡೆಯುತ್ತಿವೆ. ೧,೭೦,೦೦೦ ನಿರಾಶ್ರಿತರ ಶಿಬಿರ ಗಳನ್ನು ಕಿತ್ತುಹಾಕಿರುವುದರಿಂದ, ಕೊಳಚೆ ಪ್ರದೇಶಗಳಲ್ಲಿ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇಡೀ ಜನಾಂಗವನ್ನು ಎರಡನೆದರ್ಜೆ ನಾಗರಿಕರಾಗಿ ಕಾಣಬೇಕೆಂಬ ಅಘೋಷಿತ ಆದೇಶವಿದೆ.
ಈ ಎಲ್ಲದರಲ್ಲಿ ಗುಜರಾತಿನ ಪ್ರತಿ ಬಹುಸಂಖ್ಯಾತ ನಾಗರಿಕನೂ ಭಾಗವಹಿಸುತ್ತಿದ್ದಾನೆಂದಲ್ಲ. ಸಂಘಪರಿವಾರದ ಸ್ವಯಂಘೋಷಿತ ಧರ್ಮರಕ್ಷಕ ಪಡೆಯ ಗೂಢಚಾರರು ಪ್ರತಿಯೊಂದನ್ನೂ ಗಮನಿಸುತ್ತಿದ್ದಾರೆ. ಬಾಯಿಬಿಟ್ಟರೆ ಎಷ್ಟು ಅಪಾಯ ಎಂದು ಎಲ್ಲರಿಗೂ ತಿಳಿದಿದೆ. ತಮ್ಮ ಮನಸ್ಸಿಗೆ ಒಪ್ಪಿಗೆಯಾಗಿದ್ದನ್ನು ಸಂದರ್ಭದ ಒತ್ತಡಗಳಿಗೆ ಸಿಲುಕಿ ಹೇಗೆ ತಾವು ಮಾಡಲೇಬೇಕಾಗಿ ಬಂದಿದೆ ಎಂದು ಜನ ಗುಟ್ಟಾಗಿ, ಅನಾಮಿಕರಾಗಿ ಉಳಿದು ಹೇಳಿಕೊಳ್ಳುತ್ತಾರೆ.
ಇನ್ನು ‘ಚಲನಶೀಲ ಚಿಂತಕ’ ಮೋದಿಯವರೇ ಹೇಗೆ ನಡೆದು ಕೊಳ್ಳುತ್ತಿದ್ದಾರೆ! ಚುನಾವಣೆಗಳಲ್ಲಿ ‘ನಾವೈದು, ನಮಗಿಪ್ಪತ್ತೈದು’ ಎಂಬ ಘೋಷಣೆ ಜನಪ್ರಿಯಗೊಳಿಸಿದ್ದಾರೆ. ‘ನಿರಾಶ್ರಿತರ ಶಿಬಿರ ಗಳನ್ನು ತೆರೆದು ಅವುಗಳು ಶಿಶು ಉತ್ಪಾದನಾ ಕೇಂದ್ರಗಳನ್ನಾಗಿ ಮಾಡಬೇಕೆ?’ ಎಂದು ಸವಾಲು ಎಸೆಯುತ್ತಾರೆ. ಪೊಲೀಸರು ಮುಸ್ಲಿಮರ ಮನೆಬಾಗಿಲುಗಳನ್ನು ಮಧ್ಯರಾತ್ರಿ ಬಡಿದು ಯುವಕರನ್ನು ಎಳೆದೊಯ್ಯುವುದು, ಮಿಕ್ಕವರ ಮೇಲೆ ಹಲ್ಲೆ ನಡೆಸುವುದು ನಡೆದೇ ಇದೆ. ೨೦೦೨ರ ಹತ್ಯಾಕಾಂಡವಾದಾಗ ಪೊಲೀಸರ ಸಭೆ ಕರೆದು ‘ಮೂರು ದಿವಸ ನಿಷ್ಕ್ರಿಯರಾಗಿರಬೇಕೆಂದು’ ಆದೇಶ ನೀಡಿದುದು ಈಗ ಜಗತ್ತಿಗೇ ಗೊತ್ತಿರುವ ಸತ್ಯ.
ಇದು ಗುಜರಾತಿನ ಮತ್ತೊಂದು ಮತ್ತು ನಿಜ ಸ್ವರೂಪ. ಇದನ್ನು ನಿರ್ಲಕ್ಷಿಸಿ ಟಾಟಾಗಳು, ಅಂಬಾನಿಗಳು ಮೆಚ್ಚುವ ಗುಜರಾತ್. ಥಳಕಿನ ಗುಜರಾತ್, ತೋರಿಕೆಯ ಗುಜರಾತ್. ಇಂದ್ರಲೋಕವನ್ನೇ ಸೃಷ್ಟಿಸಿದರೂ ಅದು ಮನುಷ್ಯರು, ಸಾಮಾನ್ಯರು ನೆಮ್ಮದಿಯಿಂದ ಬದುಕಬೇಕಾದ ಲೋಕವಾಗಬೇಕೇ ಹೊರತು ಗರಿಗರಿ ಉಡುಪಿನ ಕಾರ್ಪೊರೇಟ್ ಜಗತ್ತಿನ ಬಕಾಸುರರಿಗಷ್ಟೇ ಅಲ್ಲ.
ಅಂಥ ಪ್ರಗತಿಯಾಗುವುದು ರಾತ್ರೋರಾತ್ರಿಯಾಗಲಿ, ಶೂನ್ಯದಲ್ಲಿಯಾಗಲಿ ಸಾಧ್ಯವಿಲ್ಲ. ಮನುಷ್ಯ ಸಂದರ್ಭದಲ್ಲಿ ನಿಧಾನಗತಿಯಲ್ಲಿ ಮಾತ್ರ ಸಾಧ್ಯ. ಸದ್ಯದ ನೆರೆಹಾವಳಿಯ ಸಂದರ್ಭದಲ್ಲಿ ಅಹೋರಾತ್ರಿ ಕಳಕಳಿಯಿಂದ ಮೆಚ್ಚುಗೆಯ ರೀತಿಯಲ್ಲಿ ಶ್ರಮಿಸುತ್ತಿರುವ ಯಡಿಯೂರಪ್ಪನವರಿಗೆ ಇದು ಸ್ವಂತ ಅನುಭವಕ್ಕೆ ಬಂದಿರಬೇಕು.
ತಂತ್ರeನ ಯುಗ ಕಲಿಸಿದ ವೇಗದ ಭ್ರಮೆಯನ್ನು ಮನುಷ್ಯನ ಮನಸ್ಸಿನ ಲೋಕಕ್ಕೆ ದಾಳಿಯಿಡಿಸಲು ಸಾಧ್ಯವಿಲ್ಲ ಎಂದೇ ಗಾಂಜಿಯವರು ‘One Step enough for me' ಎಂದು ಹೇಳುತ್ತಿದ್ದುದು. ಆದರೆ ಆ ’step’ ಒಂದೊಂದೇ ಆದರೂ ನಿಲ್ಲದಂತೆ ಇಡುತ್ತಲೇ ಇರಬೇಕು; ಮುಂದುವರಿಯುತ್ತಲೇ ಇರಬೇಕು, ಗಡಿಯಾರದ ಮುಳ್ಳಿನ ತರಹ; ಪ್ರಗತಿಯೂ ಸಾಧ್ಯವಾಗುವ ಅಭಿವೃದ್ಧಿಮಾರ್ಗ ಇದು.
ಆದರೆ ಗುಜರಾತಿನ ಸದ್ಯದ ಅಭಿವೃದ್ಧಿಗತಿ ನೋಡಿದರೆ ನನಗೆ ಒಮ್ಮಿಂದೊಮ್ಮೆಗೇ, ಈ ವೈeನಿಕ ಶರವೇಗದ ಯುಗದಲ್ಲೂ ಗರ್ಭಿಣಿ ದಿಢೀರ್ ಹೆರುವುದಿಲ್ಲವಲ್ಲ ಎಂಬ ಪರಿತಾಪದಲ್ಲಿ ಬಲವಂತದ ಹೆರಿಗೆ ಮಾಡಿಸುವ ರೀತಿಗೆ ಭಿನ್ನವಲ್ಲ. ಹೆಣ್ಣಿಗೆ ಆ ಒಂಬತ್ತು ತಿಂಗಳುಗಳೆಂದರೆ (ಐಟಿ,ಬಿಟಿ ಹೆಣ್ಣುಮಕ್ಕಳಿಗೂ ಸೇರಿದ ಹಾಗೆ) ಕನಸು, ಸಂಭ್ರಮ, ಆತಂಕ, ನಿರೀಕ್ಷೆ ಹಾಗೂ ಪ್ರಕೃತಿಯ ಅದ್ಭುತ ನಿಗೂಢ ಸೃಷ್ಟಿಕ್ರಿಯೆಯಲ್ಲಿ ಸ್ವಯಂ ಭಾಗವಹಿಸುತ್ತಿರುವ ಪುಳಕ- ಎಲ್ಲ ಸೇರಿರುತ್ತದೆ. ಅದು ಹೆಣ್ಣಿನ ವ್ಯಕ್ತಿತ್ವದ ಪ್ರಗತಿ, ಸರ್ವಾಂಗೀಣ ವಿಕಾಸ. ಇದೇ ಮನುಷ್ಯಲೋಕವನ್ನೂ ಒಳಗೊಳ್ಳುವುದು.
ಬದಲಾಗಿ ಭಡ್ತಿಯವರು ಹೇಳುವ ಹಾಗೆ ಮೋದಿಯವರ ಅಭಿವೃದ್ಧಿಪಾಠವನ್ನೇ ಕರಗತ ಮಾಡಿಕೊಂಡು ಕರ್ನಾಟಕವನ್ನು ಇನ್ನೊಂದು ಗುಜರಾತ್ ಮಾಡಿದರೆ, ಬಹುಶಃ ಅವರು ಹೇಳುವ ಹಾಗೆ ‘ಯಡಿಯೂರಪ್ಪನವರು ಕನಿಷ್ಠ ಇನ್ನೂ ಮೂರು ಅವಗೂ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಆ ದೇವರಿಂದಲೂ ಸಾಧ್ಯವಿಲ್ಲ’ ಎನ್ನುವುದಾದರೆ, ದೇವರೂ ಕೈಬಿಡುವುದು ಖಂಡಿತವಾದರೆ ಮನುಷ್ಯರು ತಮ್ಮ ಆತ್ಮಸ್ಥೈರ್ಯ, ಮನುಷ್ಯಪ್ರೀತಿ, ಭವಿಷ್ಯಪ್ರe ಇವುಗಳನ್ನು ನೆಚ್ಚಿ ಮುಂದುವರಿಯಬೇಕು ಅಷ್ಟೆ.
(ಗ್ರಂಥಋಣ: ಗುಜರಾತಿನ ನಿವೃತ್ತ ಡಿ.ಜಿ.ಪಿ. ಆರ್.ಬಿ. ಶ್ರೀಕುಮಾರ್ ಅವರ ‘ಧರ್ಮದ ಹೆಸರಿನಲ್ಲಿ’, ಹರ್ಷ ಮಂದೆರ್ ಅವರ ’'Fear & Forgiveness', ಸಿದ್ಧಾರ್ಥ್ ವರದರಾಜನ್ ಸಂಪಾದಿಸಿದ ಕೃತಿ ‘ಗುಜರಾತ್’, ಅರುಂಧತಿರಾಯ್ ಅವರ 'Listening to Grasshoppers' ಮತ್ತು ಶ್ರಮಿಕ್ ಪ್ರತಿಷ್ಠಾನದ ’Modi slapped’)
-ಜಿ.ಕೆ.ಗೋವಿಂದ ರಾವ್

ಕರ್ನಾಟಕವನ್ನು ಇನ್ನೊಂದು ಗುಜರಾತ್ ಮಾಡಿ, ಪ್ಲೀಸ್...

ಮೊನ್ನೆ ಮೊನ್ನೆಯಷ್ಟೇ ನಮ್ಮ ಆಡಳಿತಾರೂಢ ಬಿಜೆಪಿಯ ಎಲ್ಲ ನಾಯಕರೂ ಸುತ್ತೂರಿನಲ್ಲಿ ಹೋಗಿ ಕುಳಿತು ಚಿಂತನ ಮಂಥನ ನಡೆಸಿದ್ದು ಹಳೆಯ ಸುದ್ದಿ. ಸಂಪುಟದ ಅಷ್ಟೂ ಸದಸ್ಯರೂ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಅಲ್ಲಿ ಹೋಗಿ ಕುಳಿತು ಶ್ರದ್ಧೆಯಿಂದ ಪಾಠ ಕೇಳಿ ಬಂದರು. ಪಾಠ ಮಾಡಲು ಬಂದವರಾದರೂ ಎಂಥವರು ? ಈ ದೇಶದಲ್ಲಿ ಅಭಿವೃದ್ಧಿ ಎಂಬುದಕ್ಕೆ ನೈಜ ವ್ಯಾಖ್ಯಾನವನ್ನು ಕಟ್ಟಿಕೊಟ್ಟ ನರೇಂದ್ರ ಮೋದಿ ಎಂಬ ಚಲನಶೀಲ ಚಿಂತಕ.


ಪ್ರತಿಪಕ್ಷಗಳು ಎಂದಿನಂತೆಯೇ ಹುಯಿಲೆಬ್ಬಿಸಿದವು ಬಿಡಿ. ಅವತ್ತು ಬಿಜೆಪಿ ಸರಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮೋದಿ ಬಂದಿದ್ದಾಗಲೇ ‘ರಾಜ್ಯವನ್ನು ಬಿಜೆಪಿಯವರು ಇನ್ನೊಂದು ಗುಜರಾತ್ ಮಾಡಲು ಹೊರಟಿದ್ದಾರೆ’ ಎಂದು ಅಲವತ್ತುಕೊಂಡವರು ಇವತ್ತು ಸುಮ್ಮನಿದ್ದಾರೆಯೇ ? ಅವರು ಯಾವ ಅರ್ಥದಲ್ಲಿ ಕರ್ನಾಟಕ ಇನ್ನೊಂದು ಗುಜರಾತ್ ಆಗುತ್ತದೆ ಎನ್ನುತ್ತಿದ್ದಾರೋ ಗೊತ್ತಿಲ್ಲ. ಆದರೆ ಒಂದೊಮ್ಮೆ ನಮ್ಮ ಸರಕಾರ ರಾಜ್ಯವನ್ನು ಇನ್ನೊಂದು ಗುಜರಾತ್ ಮಾಡಿದರೆ ಯಡಿಯೂರಪ್ಪ ಅವರು ಕನಿಷ್ಠ ಇನ್ನೂ ಮೂರು ಅವ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಆ ದೇವರಿಂದಲೂ ಸಾಧ್ಯವಿಲ್ಲ.ಇನ್ನು ಬಿಜೆಪಿಯವರೂ ಅಷ್ಟೇ, ಅಕಾರಕ್ಕೆ ಬರುತ್ತಿದ್ದಂತೆಯೇ ಮೋದಿ ಮಾದರಿ ಎನ್ನಲು ಆರಂಭಿಸಿದ್ದರು. ಈಗಲೂ ಅದೇ ಜಪ ಮುಂದುವರಿಸಿದ್ದಾರೆ. ಮೋದಿ ಮಾದರಿ ಎಂದ ಮಾತ್ರಕ್ಕೆ ಅಥವಾ ಚಿಂತನ ಸಭೆಗೆ ಅವರನ್ನು ಕರೆಸಿ ಭಾಷಣ ಕೇಳಿಸಿಕೊಂಡ ಮಾತ್ರಕ್ಕೆ ಕರ್ನಾಟಕವನ್ನು ಗುಜರಾತ್ ಮಾಡಲು ದೇವರಾಣೆ ಸಾಧ್ಯವಿಲ್ಲ ಎಂಬುದು ಸದ್ಯದ ಸಂಪುಟದ ಕಾರ್ಯ ವೈಖರಿ ನೋಡಿದರೇ ಅರ್ಥ ಆಗುತ್ತದೆ. ಅಷ್ಟಕ್ಕೂ ಮೋದಿ ಮಾದರಿ ಅಂದರೇನು ? ಇನ್ನೊಂದು ಗುಜರಾತ್ ಆಗುವುದು ಹೇಗೆ ? ಎಂಬುದನ್ನು ಕೇಳಿ ನೋಡಿ, ಬಹುಶಃ ಆಡಳಿತಾರೂಢರಿಗೂ ಗೊತ್ತಿದ್ದಂತಿಲ್ಲ. ಪ್ರತಿಪಕ್ಷದವರಿಗೂ ತಿಳಿದಿಲ್ಲ. ಗೊತ್ತಾಗಲು ಅವರೊಮ್ಮೆ ಇಂದಿನ ಗುಜರಾತ್ ಅನ್ನು ಹೋಗಿ ನೋಡಿಕೊಂಡೇ ಬರಬೇಕು.ಬಿಟ್ಹಾಕಿ, ಒಂದೊಮ್ಮೆ ಕರ್ನಾಟಕ ಇನ್ನೊಂದು ಗುಜರಾತ್ ಆದರೆ ನಮ್ಮ ಪಾಲಿಗೆ ಅದಕ್ಕಿಂತ ಪುಣ್ಯ ಮತ್ತೊಂದಿಲ್ಲ. ಏಕೆಂದರೆ ಈವರೆಗೆ ಕೇವಲ ಕೃಷಿ ಕ್ಷೇತ್ರವೊಂದರಲ್ಲೇ ಮೋದಿ ಮಾಡಿರುವ ಮೋಡಿ ನೋಡಿ ನಿಜಕ್ಕೂ ಬೆರಗು ಹುಟ್ಟುತ್ತದೆ. ದುರಂತವೆಂದರೆ ಮೋದಿ ಎಂದ ತಕ್ಷಣವೇ ಹಿಂದು-ಮುಸ್ಲಿಂ ಪ್ರಕರಣವನ್ನಷ್ಟೇ ನಮ್ಮ ಮಾಧ್ಯಮಗಳೂ ಬಿಂಬಿಸುತ್ತವೆ. ಹೆಚ್ಚೆಂದರೆ ಅಲ್ಲಿನ ಕೈಗಾರಿಕೆಗಳ ಬೆಳವಣಿಗೆಗಳ ಬಗೆಗೆ ಹೇಳಲಾಗುತ್ತದೆ. ಪ್ರಶ್ನೆ ಏನೆಂದರೆ ಅಭಿವೃದ್ಧಿ ಎಂದರೆ ಕೇವಲ ಕೈಗಾರಿಕೆಗಳೇ ? ಐಟಿ-ಬಿಟಿ ಕಂಪನಿಗಳಷ್ಟೇ ಅಭಿವೃದ್ಧಿಗೆ ಮಾನದಂಡವೇ ? ಈ ದೇಶದ ಜೀವಾಳವೆನಿಸಿರುವ ಕೃಷಿಯಲ್ಲಿ ಮೋದಿಯವರು ನಡೆಸಿರುವ ಕ್ರಾಂತಿ ಸುದ್ದಿಯಾಗುವುದೇ ಇಲ್ಲ ಏಕೆ ?ಬಹುಶಃ ವಾಸ್ತವ ಗೊತ್ತಾದರೆ ನಮ್ಮ ರಾಜಕಾರಣಿಗಳು, ಮಾಧ್ಯಮಗಳು ಹೀಗೆ ವರ್ತಿಸಲು ಸಾಧ್ಯವೇ ಇಲ್ಲ. ಮೋದಿಯವರ ಯಶಸ್ಸಿನ ಗುಟ್ಟು ನಿಜವಾಗಿ ಅಡಗಿರುವುದೇ ಅವರು ಕೃಷಿ ಕ್ಷೇತ್ರದಲ್ಲಿ ಮಾಡಿದ ಕ್ರಾಂತಿಯಲ್ಲಿ. ೨೦೦೦ನೇ ಇಸವಿಯಿಂದ ಈವರೆಗೆ ಗುಜರಾತ್‌ನಲ್ಲಾಗಿರುವ ಕೃಷಿ ಬೆಳವಣಿಗೆ ದೇಶದಲ್ಲೇ ಒಂದು ಮಹತ್ವದ ಮೈಲುಗಲ್ಲು. ಆ ರಾಜ್ಯದಲ್ಲಿ ೨೦೦೦-೦೧ ಹಾಗೂ ೨೦೦೭-೦೮ ರ ನಡುವಿನ ಅವಯ ವಾರ್ಷಿಕ ಕೃಷಿ ಬೆಳವಣಿಗೆ ಶೇ ೯.೬ರಷ್ಟು. ಗಮನಾರ್ಹ ಸಂಗತಿಯೆಂದರೆ ಇದು ಒಟ್ಟಾರೆ ಇಡೀ ದೇಶದ ಕೃಷಿ ಬೆಳವಣಿಗೆಯ ಪ್ರಮಾಣಕ್ಕಿಂತ ದುಪ್ಪಟ್ಟು ಹೆಚ್ಚು. ಮಾತ್ರವಲ್ಲ, ಈವರೆಗೆ ನಾವೇನು ನಮ್ಮ ಮಹತ್ವದ ಸಾಧನೆ ಎಂದು ಪಂಜಾಬ್‌ನ ಹಸಿರು ಕ್ರಾಂತಿಯ ಬಗೆಗೆ ಬೆನ್ನು ತಟ್ಟಿಕೊಳ್ಳುತ್ತ ಬಂದಿದ್ದೆವಲ್ಲಾ, ಅದಕ್ಕಿಂತಲೂ ಮಿಗಿಲು. ಇನ್ನೂ ಮುಖ್ಯ ಸಂಗತಿಯೆಂದರೆ, ಈವರೆಗೆ ಕೃಷಿ ಕ್ಷೇತ್ರದ ಇತಿಹಾಸದಲ್ಲೇ ಜಗತ್ತಿನ ಯಾವ ಪ್ರದೇಶದಲ್ಲೂ ಇಂಥ ಬೆಳವಣಿಗೆ ದಾಖಲಾಗಿಲ್ಲ. ಸ್ವಾಮಿ, ಇಲ್ಲಿ ಕೇಳಿ. ಇಂಥ ಬೆಳವಣಿಗೆ ಸಾಧ್ಯವಾದದ್ದು ಯಾವುದೋ ಸಮೃದ್ಧ ನೀರಾವರಿ ಇರುವ ರಾಜ್ಯದಲ್ಲಿ ಅಲ್ಲ; ಸತತ ಬರಪೀಡಿತವೆಂಬ ಕುಖ್ಯಾತಿಗೆ ಪಾತ್ರವಾದ ಗುಜರಾತ್‌ನಲ್ಲಿ ಎಂಬುದನ್ನು ಮರೆಯಬೇಡಿ. ಅದರಲ್ಲೂ ಈ ಕ್ರಾಂತಿಗೆ ಮೋದಿಯವರು ಮುನ್ನುಡಿ ಬರೆದದ್ದೇ ೨೦೦೦ನೇ ಇಸವಿಯಲ್ಲಿ ಗುಜರಾತ್ ಅನ್ನು ಬಿಟ್ಟೂ ಬಿಡದೇ ಕಾಡಿದ ಬೀಕರ ಬರಗಾಲದಲ್ಲೇ ಎಂಬುದನ್ನು ಮರೆಯಬೇಡಿ.ಎಲ್ಲ ಅಪಪ್ರಚಾರ, ಸೋ ಕಾಲ್ಡ್ ಮಾಧ್ಯಮಭೀರುಗಳ ‘ಸವಿಗನಸು’ಗಳ ನಡುವೆಯೂ ಮೋದಿ ಸರಕಾರ ಮತ್ತೆ ಮತ್ತೆ ಆರಿಸಿ ಬರುತ್ತಿದೆ. ಏಕೆಂದರೆ ಇಂದಿಗೂ ಗುಜರಾತ್ ನಿರ್ಣಾಯಕ ಮತದಾರರಿರುವುದು ಗ್ರಾಮೀಣ ಭಾಗದಲ್ಲೇ, ಅದರಲ್ಲೂ ಮುಖ್ಯವಾಗಿ ಕೃಷಿಕರು. ಅವರಿಗೆ ಏನು ಬೇಕೆಂಬುದು ಮೋದಿಯವರಿಗೆ ಗೊತ್ತು ಎಂಬುದು ಅವರ ಟೀಕಾಕಾರರಿಗೆ ಗೊತ್ತಿಲ್ಲ.ಗುಜರಾತ್‌ನ ಶೇ. ೭೦ರಷ್ಟು ಪ್ರದೇಶ ಬರಪೀಡಿತ. ಬಹುತೇಕ ಜಿಲ್ಲೆಗಳು, ಒಂದೋ ಅದು ಒಣ ಪ್ರದೇಶವಾಗಿರುತ್ತದೆ, ಇಲ್ಲವೇ ಅರೆ ಒಣ ಪ್ರದೇಶವಾಗಿರುತ್ತದೆ. ಸಂಪೂರ್ಣ ನೀರಾವರಿ ಪ್ರದೇಶ ಎಂಬುದು ಅಲ್ಲಿ ತೀರಾ ವಿರಳ. ಇಲ್ಲವೇ ಇಲ್ಲ ಎಂದರೂ ತಪ್ಪಿಲ್ಲ. ಸರದಾರ್ ಸರೋವರ್ ಯೋಜನೆಯ ಬಗೆಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಮೋದಿ ವಿರೋಗಳು ಎಂದಿನಂತೆ ಅದನ್ನೂ ಬಿಡದೇ ಟೀಕಿಸಿದ್ದಾರೆ. ಆ ಯೋಜನೆ ಈವರೆಗೆ ಕೇವಲ ೦.೧ ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ನೀರಾವರಿ ಒದಗಿಸಲು ಸಫಲವಾಗಿದೆ. ಆ ರಾಜ್ಯದ ಶೇ. ೮೨ರಷ್ಟು ಕೃಷಿ ನಿಂತಿರುವುದೇ ಬೋರ್‌ವೆಲ್‌ಗಳ ಮೇಲೆ. ೧೯೯೦ರ ಮಧ್ಯಭಾಗದಲ್ಲಿ ಅಂತರ್ಜಲ ಮಟ್ಟ ತೀರಾ ಅಪಾಯಕಾರಿ ಸನ್ನಿವೇಶವನ್ನು ತಲುಪಿತ್ತು. ಅಂಥ ಸಂದರ್ಭದಲ್ಲಿ ಅಲ್ಲಿ ಮಳೆ ಕೊಯ್ಲು ವಿಕೇಂದ್ರೀಕರಣದ ಸಾಹಸಕ್ಕೆ ಮುಂದಾಗಲಾಯಿತು. ಚೆಕ್ ಡ್ಯಾಮ್‌ಗಳು, ಗ್ರಾಮೀಣ ಕೆರೆಗಳ ಪುನರುತ್ಥಾನ ಹಾಗೂ ಬೋರಿ ಬಂಡ್( ಮರಳು ಚೀಲಗಳಿಂದ ಒಡ್ಡುಕಟ್ಟುವುದು)ಗಳ ನಿರ್ಮಾಣ ಗಣನೀಯವಾಗಿ ನಡೆಯಿತು. ೨೦೦೭ರ ಹೊತ್ತಿಗೆ ಇದು ತಾರಕಕ್ಕೇರಿತು. ಪ್ರತಿಪಕ್ಷ ಕಾಂಗ್ರೆಸ್ ಆ ಬಾರಿಯ ಚುನಾವಣೆಯಲ್ಲಿ ‘ಚೆಕ್ ದೆ ಗುಜರಾತ್’ ಘೋಷಣೆಯೊಂದಿಗೆ ಕಣಕ್ಕಿಳಿದರೆ ಮೋದಿ ‘ಚೆಕ್ ಡ್ಯಾಮ್ ಗುಜರಾತ್’ ಘೋಷಣೆ ಮೊಳಗಿಸಿದರು. ಅದೇ ಚೆಕ್ ಡ್ಯಾಮ್ ಮೋದಿಯವರನ್ನು ಮತ್ತೆ ಅಕಾರಕ್ಕೆ ತಂದಿತು.ಒಂದು ಅಧ್ಯಯನದ ಪ್ರಕಾರ ೨೦೦೦ದಲ್ಲಿ ೧೦,೭೦೦ ಚೆಕ್‌ಡ್ಯಾಮ್‌ಗಳು ನಿರ್ಮಾಣವಾಗಿದ್ದವು. ಅದರಿಂದ ಬರ ಪೀಡಿತ ೩೨ ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಯಾಗಿತ್ತು. ಆದರೆ, ನಂತರದ ವರ್ಷಗಳಲ್ಲಿ ಮೋದಿ ಆಡಳಿತದಲ್ಲಿ ಅದರ ಹತ್ತುಪಟ್ಟು ಹೆಚ್ಚು ಚೆಕ್‌ಡ್ಯಾಮ್‌ಗಳು ತಲೆ ಎತ್ತಿವೆ. ಸೌರಾಷ್ಟ್ರ ಮತ್ತು ಕುಛ್ ವಲಯದ ಕೃಷಿ ಬೆಳವಣಿಗೆಗೆ ಇದು ಮಹತ್ವದ ಕೊಡುಗೆಯನ್ನು ನೀಡಿದೆ. ಹೈನು ಉದ್ಯಮ ಬೆಳವಣಿಗೆಗೂ ಇದು ಕಾರಣವಾಯಿತು. ಹನಿ ನೀರಾವರಿಗೆ ಸಾಲ, ಸಹಾಯಧನ ಸೌಲಭ್ಯ ಹೆಚ್ಚಿಸಲಾಯಿತು. ಒಟ್ಟು ವೆಚ್ಚದ ಶೇ.೫ ರಷ್ಟನ್ನು ಮಾತ್ರ ರೈತರು ಪಾವತಿಸಿದರು. ಸರಕಾರಿ ಮಾಲೀಕತ್ವದ ಕಂಪನಿಗಳು ಶೇ.೫೦ ರಷ್ಟು ಹಣವನ್ನು ಸಬ್ಸಿಡಿ ರೂಪದಲ್ಲಿ ಪಾವತಿಸಿದವು. ಉಳಿದ ಮೊತ್ತಕ್ಕೆ ಸಾಲಸೌಲಭ್ಯ ಒದಗಿಸಲಾಯಿತು. ಹೀಗೆ ಒಂದು ಲಕ್ಷ ಎಕರೆಗೂ ಹೆಚ್ಚು ಜಮೀನು ನೀರಾವರಿ ಸೌಲಭ್ಯಕ್ಕೆ ಒಳಪಟ್ಟಿತು. ಹನಿ ನೀರಾವರಿಗೆ ಅತಿ ಹೆಚ್ಚು ಬಲವನ್ನು ತಂದು ಕೊಟ್ಟದ್ದು ಸರದಾರ್ ಸರೋವರ್ ಯೋಜನೆ.ಗ್ರಾಮೀಣ ರಸ್ತೆಗಳ ಸುಧಾರಣೆ ಸಹ ಸಣ್ಣ ಸಂಗತಿಯೇನಲ್ಲ. ದೇಶದ ಅತ್ಯುತ್ತಮ ರಸ್ತೆ ಸಂಪರ್ಕ ಹೊಂದಿರುವ ಕೆಲವೇ ರಾಜ್ಯಗಳಲ್ಲಿ ಗುಜರಾತ್ ಸಹ ಒಂದು. ಶೇ.೯೮.೭ ಹಳ್ಳಿಗಳು ಪಕ್ಕಾ ರಸ್ತೆಗಳನ್ನು ಹೊಂದಿವೆ. ಇನ್ನು ಮೋದಿಯವರ ಜ್ಯೋತಿಗ್ರಾಮ ಯೋಜನೆ ನಿಜಕ್ಕೂ ದೇಶದ ಎಲ್ಲ ರಾಜ್ಯಗಳಿಗೂ ಮಾದರಿ. ಪಂಪ್ ಸೆಟ್ ಹಾಗೂ ಮನೆ ಬಳಕೆಗೆ ಪ್ರತ್ಯೇಕ ಫೀಡರ್ ಅನ್ನು ಈ ಯೋಜನೆಯಡಿ ಒದಗಿಸಲಾಗಿದೆ. ಇದರಿಂದ ಮನೆ ಬಳಕೆಗೆ ನಿರಂತರ ವಿದ್ಯುತ್ ಪೂರೈಕೆ ಹಾಗೂ ಕೃಷಿಗೆ ದಿನದ ಎಂಟು ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗಿದೆ. ಕೃಷಿ ಮಾತ್ರವಲ್ಲ ಗ್ರಾಮೀಣಾಭಿವೃದ್ಧಿಯ ಸಾಧನೆಗೂ ಇದು ಪೂರಕವಾಗಿದೆ.ಇನ್ನು ಕೃಷಿ ಉದ್ಯಮದ ಅಭಿವೃದ್ಧಿಯದು ಬೇರೆಯದೇ ಆದ ಅಧ್ಯಾಯ. ಸಂಶೋಧನೆಯ ಅನುಕೂಲಕ್ಕೆ ಗುಜರಾತ್ ಕೃಷಿ ವಿಶ್ವ ವಿದ್ಯಾಲಯವನ್ನು ನಾಲ್ಕು ಪ್ರತ್ಯೇಕ ವಿವಿಗಳನ್ನಾಗಿ ವಿಂಗಡಿಸಲಾಗಿದೆ. ಕೃಷಿ ಸಂಶೋದನೆಗಳು ರೈತರ ಹೊಲದಲ್ಲಿಯೇ ನಡೆಯುತ್ತವೆ. ಕೃಷಿ ತಾಂತ್ರಿಕತೆ ನೇರವಾಗಿ ರೈತರನ್ನು ತಲುಪುತ್ತಿವೆ. ಅಕಾರಿಗಳು ರೈತರು ಕೂರೆಂದರೆ ಕೂರುತ್ತಾರೆ, ನಿಲ್ಲೆಂದರೆ ನಿಲ್ಲುತ್ತಾರೆ. ನೈಜ ಅರ್ಥದಲ್ಲಿ ಗ್ರಾಮಗಳ, ರೈತರ ಸ್ವಾವಲಂಬನೆ ಜಾರಿಯಾಗಿದೆ. ರೈತ ಸಬಲೀಕರಣ ಎಂಬುದಕ್ಕೆ ಅಕ್ಷರಶಃ ಅರ್ಥ ಕಟ್ಟಿಕೊಟ್ಟಿದ್ದಾರೆ ಮೋದಿ. ಬೃಹತ್ ನೀರಾವರಿ ಯೋಜನೆಗಳಿಗಿಂತ ಪುಟ್ಟ ಪುಟ್ಟ ಉಪಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಈಗ ಹೇಳಿ ಕರ್ನಾಟಕ ಮತ್ತೊಂದು ಗುಜರಾತ್ ಆಗಬೇಕಿಲ್ಲವೇ ? ಯಾರು ಏನೇ ಬಡಬಡಿಸಲಿ. ಹಾಗೊಮ್ಮೆ ಮಾಡಿ ಪುಣ್ಯ ಕಟ್ಟಿಕೊಳ್ಳಿ ಯಡಿಯೂರಪ್ಪನವರೇ, ಪ್ಲೀಸ್ ! ಅದು ನಿಮ್ಮಿಂದ ಸಾಧ್ಯವೇ ?‘ಲಾಸ್ಟ್’ಡ್ರಾಪ್: ನಮ್ಮ ಹಸಿರು ಕ್ರಾಂತಿ ಆಹಾರ ಸ್ವಾವಲಂಬನೆ ಎಂಬುದು ನಿಜವಾಗಿ ಅತಿ ದೊಡ್ಡ ಭ್ರಾಂತಿ. ಅದು ಅಸಲಿಗೆ ನಮ್ಮ ಕೃಷಿ ವೈವಿಧ್ಯದ ಅಪಹರಣಕ್ಕೆ ಅಮೆರಿಕ ವಿಶ್ವಮಟ್ಟದಲ್ಲಿ ಹೂಡಿದ್ದ ಹುನ್ನಾರ. ಅದಕ್ಕೆ ನಾವು ಯಶಸ್ವಿಯಾಗಿ ಬಲಿಯಾಗಿದ್ದೇವೆ.

Friday, October 2, 2009

ಹಸಿರ ತೋಟದ ಸಿರಿಗೆ ಅವಳೆ ನೆರಿಗೆ

ನಿಮಗೆ ಅವಳೆ ಗೊತ್ತಾ ? ಅವಳೆ ಎಂದರೆ ಅವಳಲ್ಲ. ಇವಳು ಬೇರೆಯೇ. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅವಳೆ ಬೇರೆ, ನೀವಂದುಕೊಂಡಿರುವ ಅವಳು ಬೇರೆ. ಈ ನೆಲದ ಪರಂಪರೆ ರೂಪಿಸಿದ ನೀರ ತಂತ್ರಜ್ಞಾನದ ಒಂದು ಭಾಗ ಅವಳೆ. ಅಡಕೆ ತೋಟದ ಸಾಲಿನ ನಡು ನಡುವೆ, ಮುಗ್ಧವಾಗಿ ಮೈ ಚೆಲ್ಲಿ ಮಲಗಿರುವ ಅವಳೆ, ವಾರಕ್ಕೊಮ್ಮೆಯೋ, ಎರಡು ಬಾರಿಯೋ ತನಿತನಿಯಾಗಿ ನಲಿಯುತ್ತಾಳೆ. ಹಸಿಹಸಿಯಾಗಿ ನಗುತ್ತಾಳೆ. ಜತೆಗಾರರಿಗೆ ಸುಖವುಣ್ಣಿಸಿದ ಸಂತೃಪ್ತಿಯಲ್ಲಿ ಮತ್ತೆ ಮೈಮರೆತು ಮಲಗುತ್ತಾಳೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಹೊನ್ನಾವರ, ಭಟ್ಕಳ ತಾಲೂಕುಗಳಲ್ಲಿ ಅಡಕೆ ತೋಟಕ್ಕೆ ನೀರು ಹಾಯಿಸಲು ಒಂದು ವಿಶಿಷ್ಟ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಇದಕ್ಕೆ ನೀರಬಾರಿ ಅಥವಾ ನೀರು ತೋಕುವುದು(ಸೋಕುವುದು-ಎರಚುವುದು) ಎನ್ನಲಾಗುತ್ತದೆ. ಹೀಗೆ ನೀರು ತೋಕಲು ಅಡಕೆ ಮರಗಳ ಸಾಲಿನ ನಡುನಡುವೆ ನಿರ್ಮಿಸಲಾಗುವ ಪುಟ್ಟ ಕಾಲುವೆಗಳನ್ನೇ ಅವಳೆ ಎಂದು ಗುರುತಿಸಲಾಗುತ್ತದೆ. ಇಂಥ ಅವಳೆಗಳು ಅಡಕೆ ತೋಟದ ಪಾಲಿಗೆ ಜೀವವಾಹಿನಿಗಳಿದ್ದಂತೆ. ಮನುಷ್ಯನ ದೇಹದಲ್ಲಿರುವ ನರಗಳಂತೆಯೇ ಇವು ಕಾರ್ಯನಿರ್ವಹಿಸುತ್ತವೆ. ಜೀವ ದ್ರವವನ್ನು ಉತ್ಪತ್ತಿ ಮಾಡುವುದು ಇವುಗಳ ಕೆಲಸವಲ್ಲ. ಆದರೆ ಅದು ತಲುಪಬೇಕಾದ ಸ್ಥಳಕ್ಕೆ ಕೊಂಡೊಯ್ದು ಬಿಡುವುದು ಅವಳೆಯ ಹೊಣೆಗಾರಿಕೆ.


ಅವಳೆಗಳು ಭಾರೀ ಆಳವಾಗೇನೂ ಇರುವುದಿಲ್ಲ. ಅಡಕೆ ಮರಗಳ ಸಾಲಿನ ನಡುವೆ ಹೆಚ್ಚೆಂದರೆ, ಎರಡು ಅಡಿ ಅಗಲ, ಎರಡರಿಂದ ಮೂರು ಇಂಚು ಗಾತ್ರಕ್ಕೆ ತಗ್ಗು ಮಾಡಿರಲಾಗುತ್ತದೆ. ಸಾಮಾನ್ಯವಾಗಿ ಚಿಕ್ಕಚಿಕ್ಕ ಕಲ್ಲಿನ ಹರಳುಗಳನ್ನು ಇದರಲ್ಲಿ ತುಂಬಿರುತ್ತಾರೆ. ಕಲ್ಲುಗೊಜ್ಜು ಅಥವಾ ಕಡಿ ಎಂದು ಕರೆಯಲಾಗುವ ಜಂಬಿಟ್ಟಿಗೆಯ ಪುಟ್ಟಪುಟ್ಟ ಕಲ್ಲಿನ ತುಣುಕುಗಳು ಅವಳೆಗಳಲ್ಲಿ ತುಂಬಿರುವುದರಿಂದ ನೀರು ಸರಾಗವಾಗಿ ಹರಿದು ಹೋಗುತ್ತದೆ. ಜತೆಗೆ ನೀರನ್ನು ಮರಗಳಿಗೆ ಎರಚುವ ಸಂದರ್ಭದಲ್ಲಿ ಮಣ್ಣು ಸವಕಳಿಯಾಗುವುದನ್ನು ಇವು ತಪ್ಪಿಸುತ್ತವೆ.


ನೀರಬಾರಿಯೆಂದರೆ ಅಡಕೆ ಬೆಳೆಗಾರರಿಗೆ ಅದೊಂದು ಸಂಭ್ರಮ. ಕುಟುಂಬದ ಸದಸ್ಯರೆಲ್ಲರೂ ಉತ್ಸಾಹದಿಂದ ಈ ಕೃಷಿ ಕಾರ್ಯದಲ್ಲಿ ತಮ್ಮ ಶ್ರಮ ವ್ಯಯಿಸುತ್ತಾರೆ. ಎರಡು ಅಥವಾ ಮೂರು ಕುಟುಂಬಗಳ ತೋಟಕ್ಕೆ ಒಂದರಂತೆ ಮಧ್ಯದಲ್ಲಿ ಒಂದು ಕೆರೆ, ಹೊಂಡ ಅಥವಾ ಬಾವಿ ಇರುತ್ತದೆ. ಅದರ ದಂಡೆಯ ಮೇಲೆ ಅಡಕೆ ಮರದಿಂದ ನಿರ್ಮಿಸಿದ ಏತದ ತುದಿಯಲ್ಲಿ ಜೊಟ್ಟೆಯನ್ನು ಜೋಡಿಸಿರುತ್ತಾರೆ. ಜೊಟ್ಟೆಯೆಂದರೆ ಸಾಮಾನ್ಯವಾಗಿ ತಾಮ್ರದಿಂದ ಮಾಡಿದ ನಾಲ್ಕೈದು ಕೊಡ ನೀರು ಹಿಡಿಸಬಹುದಾದ ಅಗಲ ಬಾಯಿಯ ಒಂದು ಪಾತ್ರೆ. ಇದರ ಬಗ್ಗೆ ಹಿಂದೆಯೇ ಈ ಅಂಕಣದಲ್ಲೇ ಬರೆಯಲಾಗಿತ್ತು. ಹೊಂಡದ ನೀರನ್ನು ಜೊಟ್ಟೆಯಲ್ಲಿ ಎತ್ತಿ ಅವಳೆಯ ಬುಡಕ್ಕೆ ಸುರಿಯಲಾಗುತ್ತದೆ. ತೋಟದ ಉದ್ದಕ್ಕೂ ಚಾಚಿಕೊಂಡಿರುವ ಹಲವು ಅವಳೆಗಳು ತಲೆಯಲ್ಲಿ ಮುಖ್ಯ ಅವಳೆಯನ್ನು ಸಂಪರ್ಕಿಸುತ್ತವೆ. ಇದರ ಬುಡ ನೇರವಾಗಿ ಹೊಂಡದ ದಂಡೆಗೆ ಬಂದು ಸೇರಿರುತ್ತದೆ. ಇಲ್ಲಿಯೇ ಜೊಟ್ಟೆಯನ್ನು ಅಳವಡಿಸಲಾಗಿರುತ್ತದೆ. ಜೊಟ್ಟೆಯಲ್ಲಿ ಎತ್ತಿ ಸುರಿದ ನೀರನ್ನು ಮುಖ್ಯ ಅವಳೆಯಲ್ಲಿ ಹರಿಸಿಕೊಂಡು ಬಂದು ಒಂದೊಂದಾಗಿ ಕಿರು ಅವಳೆಗೆ ತಿರುಗಿಸಿಕೊಳ್ಳಲಾಗುತ್ತದೆ.


ವಿಶೇಷವಿರುವುದು ನೀರನ್ನು ತಿರುಗಿಸಿಕೊಳ್ಳುವಲ್ಲಿ. ಮುಖ್ಯ ಅವಳೆಯಲ್ಲಿ ಹರಿದು ಬರುವ ನೀರು ಮುಂದೆ ಹೋಗದಂತೆ ತಡೆದು, ತಮಗೆ ಬೇಕಾದ ಕಿರು ಅವಳೆಗೆ ಹರಿಸಿಕೊಂಡು ಹೋಗಲು ಕೃಷಿಕರೇ ರೂಪಿಸಿಕೊಳ್ಳುವ ‘ಕಟ್ನ’ವನ್ನು ಬಳಸಲಾಗುತ್ತದೆ. ಇದು ಸ್ಥಳೀಯವಾಗಿ ದೊರೆಯುವ ತ್ಯಾಜ್ಯ ವಸ್ತುಗಳಿಂದಲೇ ತಯಾರಾಗುತ್ತದೆ. ತೋಟದಲ್ಲಿ ಗೊನೆಬಿಟ್ಟು ಮುಗಿದ ಬಾಳೆಮರದ ರೆಂಬೆ, ಅಡಕೆ ಮರದ ಒಳಗಿನ ತಿರುಳು ಇವನ್ನು ಬಳಸಿ ಅವಳೆಯ ಅಗಲ, ಎತ್ತರಕ್ಕೆ ತಕ್ಕಂತೆ ಸುತ್ತಿ ಸಿಂಬೆ ಮಾಡಿರಲಾಗುತ್ತದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಎತ್ತಿಕೊಂಡು ಸಾಗಿಸಲು ಸುಲಭವಾಗುವಂತೆ ಬಾಳೆ ದಾರದಲ್ಲಿ ಹಿಡಿಕೆಯನ್ನು ರಚಿಸಿಕೊಂಡಿರುತ್ತಾರೆ. ನೀರನ್ನು ತಿರುಗಿಸಿಕೊಳ್ಳುವ ಕಿರು ಅವಳೆಯ ತುಸು ಮುಂದೆ ಇದನ್ನು ಅಡ್ಡಡ್ಡಲಾಗಿ ಇಡಲಾಗುತ್ತದೆ. ನೀರು ತಂತಾನೇ ಬೇಕೆಂಬಲ್ಲಿಗೆ ತಿರುಗಿಕೊಳ್ಳುತ್ತದೆ. ಕಟ್ನದ ಕೆಲಸ ಇಷ್ಟಕ್ಕೇ ಸೀಮಿತಗೊಳ್ಳುವುದಿಲ್ಲ. ನೀರನ್ನು ಮರಕ್ಕೆ ತೋಕುವಾಗ ಅನುಕೂಲವಾಗುವಂತೆ ನಿಲ್ಲಿಸಿಕೊಳ್ಳಲೂ ಕಟ್ನವನ್ನು ಬಳಸಲಾಗುತ್ತದೆ. ಅವಳೆಯಲ್ಲಿ ನೀರು ಹರಿದು ಬರುತ್ತಿದ್ದಂತೆ ಇನ್ನೊಂದು ಪುಟ್ಟ ಕಟ್ನವನ್ನು ಅಡ್ಡಕ್ಕೆ ಹಾಕಿ ಅದಕ್ಕೆ ಲಂಬವಾಗಿ ನಿಲ್ಲುವ ವ್ಯಕ್ತಿ, ಒಂದು ಕಾಲಲ್ಲಿ ಕಟ್ನವನ್ನು ಮೆಟ್ಟಿ ಹಿಡಿದುಕೊಳ್ಳುತ್ತಾನೆ. ಇನ್ನೊಂದು ಕಾಲು ನೀರು ಹರಿದುಬರುವ ಕಡೆ ಪಕ್ಕಕ್ಕೆ ಇರುತ್ತದೆ. ನೀರು ಬಂದು ಶೇಖರವಾಗುತ್ತಿದ್ದಂತೆಯೇ ಬಗ್ಗಿ ಹಾಳೆಯಿಂದ ನೀರನ್ನು ಮರದ ಬುಡಕ್ಕೆ ತೋಕುತ್ತಾನೆ.


ಇಲ್ಲಿ ಹಾಳೆಯೆಂಬುದೂ ಇನ್ನೊಂದು ವಿಶಿಷ್ಟ ಸಲಕರಣೆ. ಮರವನ್ನು ಕೆತ್ತಿ ಒಂದು ಅಡಿ ಅಗಲ, ಒಂದೂವರೆ ಅಡಿ ಉದ್ದದ ಬಟ್ಟಲಾಕಾರದ ರಚನೆಯನ್ನು ಮಾಡಿಕೊಂಡಿರುತ್ತಾರೆ. ನೀರಿನಲ್ಲಿ ತಾಳಿಕೆ ಬರುವಂಥ, ಒಣಗಿದ ಹಗುರ ಜಾತಿಯ ನಿರ್ದಿಷ್ಟ ಮರಗಳನ್ನೇ ಹಾಳೆ ಮಾಡಲು ಬಳಸಲಾಗುತ್ತದೆ. ಕಬ್ಬಣದ ತಗಡಿನಿಂದ ಹಾಳೆ ತಯಾರಿಸುವುದೂ ಉಂಟು. ಇಂಥ ಹಾಳೆಗಳನ್ನು ಕೈಯಲ್ಲಿ ಹಿಡಿದು ಅವಳೆಯಲ್ಲಿ ಬರುವ ನೀರು ಮೊಗೆದು ಅಡಕೆ ಮರದ ಬುಡಕ್ಕೇ ತಲುಪುವಂತೆ ತೋಕಲಾಗುತ್ತದೆ. ಒಂದೊಂದು ಬಾರಿ ಹೀಗೆ ತೋಕಿದಾಗಲೂ ೧೦ರಿಂದ ೧೫ ಲೀಟರ್‌ನಷ್ಟು ನೀರು ಮರಕ್ಕೆ ಹೋಗಿ ತಲುಪುತ್ತದೆ. ರಪರಪನೆ ನೀರು ತೋಕುತ್ತಿದ್ದಾಗ ತೋಟದ ಮೇಲೆ ನಿಂತು ಕೇಳಿದರೆ ಎಲ್ಲೋ ಪ್ರವಾಹದ ಅಲೆಗಳು ಬಂದು ಅಪ್ಪಳಿಸುತ್ತಿದ್ದಂತೆ ಕೇಳಿಸುತ್ತದೆ.
ಬಿಸಿಲೇರಿದ ಸಂದರ್ಭದಲ್ಲಿ ನೀರ ಬಾರಿ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಸಂಪೂರ್ಣ ಮಾನವ ಶ್ರಮದಿಂದಲೇ ನಡೆಯುವ ಪ್ರಕ್ರಿಯೆ ಇದಾಗಿರುವುದರಿಂದ ಬಿಸಿಲಿನಲ್ಲಿ ಹೆಚ್ಚು ಹೊತ್ತು ದುಡಿಯಲಾಗುವುದಿಲ್ಲ. ಹೀಗಾಗಿ ಬೆಳಗಿನ ಜಾವ ನಾಲ್ಕು ಗಂಟೆಗೇ ನೀರಬಾರಿ ಆರಂಭವಾಗುತ್ತದೆ. ಬಿಸಿಲು ಕಣ್ಣು ಬಿಡುವ ವೇಳೆಗೆ ಒಂದು ಹಂತಕ್ಕೆ ಕೆಲಸ ನಿಲ್ಲಿಸಿಬಿಡಲಾಗುತ್ತದೆ. ನಂತರ ಸಂಜೆ ನಾಲ್ಕಕ್ಕೆ ಶುರುವಿಟ್ಟುಕೊಂಡು ಕತ್ತಲು ಕವಿಯುವವರೆಗೂ ನೀರು ತೋಕುವ ಕೆಲಸ ಸಾಗುತ್ತದೆ.


ಮಳೆಗಾಲ ಮುಗಿದು ಒಂದು ಒಂದೂವರೆ ತಿಂಗಳಿಗೆಲ್ಲಾ ಅವಳೆಯಲ್ಲಿ ನೀರು ಹರಿಸಲು ಆರಂಭವಾಗುತ್ತದೆ. ತೋಯ್ ಹಾಳೆಯಲ್ಲಿ ಹೀಗೆ ನೀರು ತೋಕುವ ಕೆಲಸ ವರ್ಷದ ೭ ತಿಂಗಳೂ ನಡೆದಿರುತ್ತದೆ. ಇದರಿಂದ ಬೆಟ್ಟು ನೆಲದಲ್ಲೂ ನೀರಿನಂಶವನ್ನು ಕಾಪಾಡುವುದು ಅತ್ಯಂತ ಸುಲಭ. ನೀರು ಅವಳೆಯಲ್ಲಷ್ಟೇ ಹರಿದು ನೇರವಾಗಿ ಗಿಡದ ಬುಡಕ್ಕೇ ಪೂರೈಕೆಯಾಗುವುದರಿಂದ ಮಿತವ್ಯಯದ ಸಾಧನೆಯಾಗುತ್ತದೆ. ಮಳೆಗಾಲದಲ್ಲಿ ಈ ಅವಳೆಗಳಲ್ಲೇ ನೀರು ಇಂಗುತ್ತದೆ. ಹೀಗಾಗಿ ತೋಟದ ತುಂಬ ನೆಲದಲ್ಲಿ ತನಿ ನಿಂತಿರುತ್ತದೆ. ಇದಕ್ಕಿಂತ ಮುಖ್ಯ ವಿಷಯವೆಂದರೆ ಇಂಥ ಪ್ರತಿ ಅವಳೆ ಕೊನೆಯಾಗುವ ಜಾಗದಲ್ಲಿ ತೋಟದ ಅಂಚಿನಲ್ಲಿ ವೃತ್ತಾಕಾರದಲ್ಲಿ ಇಂಗು ಗುಂಡಿಯ ಮಾದರಿಯನ್ನು ಮಾಡಿರಲಾಗುತ್ತದೆ. ಉದ್ದಕ್ಕೆ ಹರಿದು ಬರುವ, ಮರಕ್ಕೆ ತೋಕಿ ಉಳಿಯುವ ಹೆಚ್ಚುವರಿ ನೀರು ಪೋಲಾಗದೆ ಇಲ್ಲಿಯೇ ನಿಂತು ಇಂಗುತ್ತದೆ. ಮಳೆಗಾಲದಲ್ಲೂ ಹೀಗೆಯೇ ಆಗಿ ಅಂತರ್ಜಲ ಮಟ್ಟ ಏರುತ್ತದೆ.


ಇಂದು ನೀರು ತೋಕುವ ಪದ್ಧತಿಯೇ ಕಣ್ಮರೆಯಾಗಿದೆ. ಅವಳೆಗಳಿದ್ದ ಸ್ಥಳದಲ್ಲಿ ಸ್ಪಿಂಕ್ಲರ್‌ನ ಪೈಪಿನ ಜಾಲ ಬಂದಿದೆ. ಜೊಟ್ಟೆಯ ಬದಲು ಪಂಪು ಬಂದಿದೆ. ಅತ್ಯಂತ ಸಣ್ಣ ಹಿಡುವಳಿದಾರರೂ ಪಂಪ್ ಖರೀದಿಸಿ ಅದರಿಂದ ತೋಟಕ್ಕೆ ನೀರು ಹಾಯಿಸುತ್ತಿದ್ದಾರೆ. ಕುಶಲ ಕರ್ಮಿಗಳ ಕೊರತೆ, ಮಾನವ ಸಂಪನ್ಮೂಲದ ಅಲಭ್ಯತೆ, ಸೋಮಾರಿತನ, ಯಂತ್ರದ ದಾಳಿ ಇವೆಲ್ಲದರ ಪರಿಣಾಮ ಅವಳೆಗಳ ಹೆಸರೇ ಅಳಿಸಿ ಹೋಗುತ್ತಿದೆ. ಮಳೆಗಾಲದಲ್ಲಿ ಮಣ್ಣು ಬಂದು ಕುಳಿತು, ಅವುಗಳ ನಿರ್ವಹಣೆಯೂ ಇಲ್ಲದೇ ಎಲ್ಲೋ ಕೆಲವರ ತೋಟಗಳಲ್ಲಿ ಮಾತ್ರ ಅವಳೆಗಳ ಪಳೆಯುಳಿಕೆ ಉಳಿದುಕೊಂಡಿದ್ದರೂ ಅವುಗಳ ಕ್ಷಮತೆ ಕಡಿಮೆಯಾಗಿದೆ. ಇದರ ನೇರ ಪರಿಣಾಮ ನೀರು-ನೆರಳಿನ ಮೇಲಾಗುತ್ತಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದ್ದರೆ, ತೋಟಗಳು ಮೊದಲಿನ ಹಸುರು-ಹೊದಲು ಕಳೆದುಕೊಂಡು ಬರಸುತ್ತಿವೆ. ನಿತ್ಯ ಹರಿದ್ವರ್ಣ ತೋಟಗಳು ಇದೀಗ ಮಳೆಗಾಲದಲ್ಲೂ ತಮ್ಮ ವೈಭವವನ್ನು ಮರಳಿ ಗಳಿಸಿಕೊಳ್ಳುತ್ತಿಲ್ಲ. ‘ಅವಳೇನು ಮಹಾ...’ ಎಂಬ ನಮ್ಮಗಳ ಅಹಂಕಾರದ ಧೋರಣೆಗೆ ಅವಳೇ ತಕ್ಕ ಶಾಸ್ತಿ ಮಾಡಿದ್ದಾಳೆ.

‘ಲಾಸ್ಟ್’ಡ್ರಾಪ್: ಮಲೆನಾಡಿನ ಗ್ರಾಮಗಳು ಇಂಥ ಹತ್ತು ಹಲವು ನೀರಸ್ನೇಹಿ ಪಾರಂಪರಿಕ ಜ್ಞಾನವನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ. ಒಂದಕ್ಕಿಂತ ಒಂದು ಭಿನ್ನ, ಕುತೂಹಲಕಾರಿ. ಆದರೆ ಅವುಗಳ ಬಗೆಗಿನ ಕುತೂಹಲವನ್ನು ನಾವು ಕಳೆದುಕೊಂಡಿದ್ದರಿಂದ ಅಪೂರ್ವಜ್ಞಾನದ ಕೊಂಡಿಯೊಂದು ಕಳಚಿಹೋಗುತ್ತಿದೆ.

Friday, September 25, 2009

ಬಿರಾದಾರ ಚಮತ್ಕಾರ: ಕಲ್ಲರಳಿ ಹಣ್ಣಾಯಿತು

ಸುಮ್ಮನೆ ಕಲ್ಪಿಸಿಕೊಳ್ಳಿ, ಇಡೀ ಒಂದು ಎಕರೆ ಜಮೀನನ್ನು ಅಗೆದಾಡಿದರೂ ಸರಿಯಾಗಿ ಒಂದು ಟ್ರ್ಯಾಕ್ಟರ್ ತುಂಬುವಷ್ಟು ಮಣ್ಣೂ ಅಲ್ಲಿ ಸಿಗುವಂತಿರಲಿಲ್ಲ.ಆ ಭೂಮಿ ಇನ್ನೆಷ್ಟು ಬರಡಾಗಿದ್ದಿರಬೇಕು ? ಇನ್ನು ಅಲ್ಲಿ ಏನು ಬೆಳೆಯಲು ಸಾಧ್ಯ ? ಭೂಮಿಯ ಮೇಲ್ಭಾಗವೇ ಹೀಗಿದೆ ಎಂದ ಮೇಲೆ ಅಲ್ಲಿ ನೀರಿನ ಪಸೆ ಇದ್ದೀತೆ ? ಮಳೆ ಬಂದಾಗೊಮ್ಮೆ ನೆಲ ತೇವವಾದಂತೆ ಕಂಡರೂ ಎರಡು ದಿನಗಳ ಮಾತಷ್ಟೇ. ಬಿದ್ದಷ್ಟೇ ವೇಗದಲ್ಲೇ ನೀರು ಜಾರಿ ಹೋಗುತ್ತಿತ್ತು. ಇನ್ನೆಲ್ಲಿಯ ಅಂತರ್ಜಲ ? ಇಂಥ ಭೂಮಿಯನ್ನು ಕೇಳುವವರಾರು ? ಎಕರೆಗೆ ಒಂದೆರಡು ಸಾವಿರ ರೂ. ಮೌಲ್ಯವೂ ಹುಟ್ಟುತ್ತಿರಲಿಲ್ಲ.

ಅದೇನು ಹುಚ್ಚು ಧೈರ್ಯಕ್ಕೆ ಬಿದ್ದಿದ್ದರೋ ವಿಠ್ಠಲ ಗೌಡ ಬಿರಾದಾರ ಅವರು; ಬರೋಬ್ಬರಿ ಇಪ್ಪತ್ತು ಎಕರೆ ಭೂಮಿಯನ್ನು ಬೆಲೆ ಕಟ್ಟಿ ಖರೀದಿಸಿಯೇಬಿಟ್ಟರು. ಅದೂ ತಾವು ಪಡೆದ ಸ್ವಯಂ ನಿವೃತ್ತಿ ಯೋಜನೆಯಿಂದ ಬಂದ ಹಣದಲ್ಲಿ. ರೇಷ್ಮೆ ಇಲಾಖೆ ನೌಕರರಾಗಿದ್ದು, ಜೀವನಕ್ಕಾಗಿ ಉಳಿಸಿಕೊಂಡಿದ್ದ ಹಣದಲ್ಲಿ ಇಂಥ ಬರಡು ಭೂಮಿಯನ್ನು ಖರೀದಿಸಿ ಸಾಸುವುದಾದರೂ ಏನನ್ನು ? ನೋಡಿದವರ ಮನದಲ್ಲಿ ಪ್ರಶ್ನೆಗಳೆದ್ದದ್ದು ಸಹಜ. ಆದರೆ ವಿಠ್ಠಲ ಗೌಡರ ಮನದಲ್ಲಿ ಶಂಕೆ ಇರಲಿಲ್ಲ. ಅವರಲ್ಲಿದ್ದುದು ಆತ್ಮ ವಿಶ್ವಾಸ, ಮಣ್ಣಿನ ಮೇಲಿನ ಪ್ರೀತಿ, ಸಾಧನೆಯ ಛಲ. ಭವಿಷ್ಯದ ಸುಂದರ ಕನಸುಗಳ ಮೂಟೆ ಹೊತ್ತು ಸುತ್ತಾಡಿದರು. ಹಾಗೆ ಸುತ್ತಾಡುವಾಗ ಕಣ್ಣಿಗೆ ಬಿದ್ದುದು ಜಮೀನಿನ ಸುತ್ತಲು ಹೂಳು ತುಂಬಿ ಕುಳಿತಿದ್ದ ಕೆರೆಗಳು. ತಮ್ಮ ಕೆಲಸ ಆರಂಭವಾಗಬೇಕಿದ್ದುದು ಈ ಕೆರೆಗಳಿಂದ ಎಂದು ನಿರ್ಧರಿಸಿದವರೇ ಕೆರೆಯಲ್ಲಿ ತುಂಬಿರಬಹುದಾದ ಹೂಳು, ಅದರ ನೀರಿನ ಸಾಮರ್ಥ್ಯ, ತಾವು ಕೊಂಡ ಜಮೀನಿನಲ್ಲಿ ಬೆಳೆಯಬಹುದಾದ ಬೆಳೆ ಇನ್ನಿತರ ಅಂಶಗಳ ಲೆಕ್ಕಾಚಾರಕ್ಕೆ ಮೊದಲಿಟ್ಟರು.

ಅದು ೧೯೮೩-೮೪ರ ಸಮಯ. ವಿಜಾಪುರದ ರಾಷ್ಟ್ರೀಯ ಹೆದ್ದಾರಿ೧೩ರ ಪಕ್ಕದಲ್ಲಿ, ಸೊಲ್ಲಾಪುರ ಮಾರ್ಗದಲ್ಲಿ ಸುಮಾರು ೨೦ ಕಿ.ಮೀ. ಸಾಗಿದರೆ ತಿಡಗುಂದಿ ಗ್ರಾಮ ಸಿಗುತ್ತದೆ. ಅಲ್ಲೇ, ಗೌಡರು ಖರೀದಿಸಿದ್ದ ಬಂಜರು ಭೂಮಿ ನಿಡುಸುಯ್ಯುತ್ತ ಬಿದ್ದುಕೊಂಡಿತ್ತು. ಭೂಮಿ ಖರೀದಿಯಿಂದ ಕೈಯ್ಯಲ್ಲಿದ್ದ ಕಾಸು ಖಾಲಿಯಾಗಿದ್ದರೂ, ಕಸುವು ಉಳಿದಿತ್ತು. ಸಾಲ ಮಾಡಿದರೂ ತೀರಿಸಬಲ್ಲೆನೆಂಬ ನಂಬಿಕೆ ಆಸೀಮವಾಗಿತ್ತು. ಅದನ್ನು ಆಧರಿಸಿಯೇ ಕೃಷಿ ಸಾಲಕ್ಕೆ ಕೈ ಹಾಕಿದರು. ಬಂದ ೧.೨೫ ಕೋಟಿ ರೂ.ಗಳಲ್ಲಿ ಮಾಡಿದ ಮೊದಲ ಕೆಲಸ, ಕೆರೆಗಳ ಹೂಳು ತೆಗೆಸಿದ್ದು. ಬೊಮ್ಮನಹಳ್ಳಿ ಕೆರೆ, ಮಕಣಾಪುರ ಕೆರೆ, ದೊಮ್ಮನಾಳು ಕೆರೆ, ಕೊಟ್ನಾಲ್ ಕೆರೆಯನ್ನು ಸ್ವಚ್ಛ ಮಾಡಲಾಯಿತು. ೧ ಜೆಸಿಬಿ, ೪ ಟಿಪ್ಪರ್, ೬ ಟ್ರ್ಯಾಕ್ಟರ್‌ಗಳು ನಿರಂತರ ಸದ್ದುಮಾಡಿದವು. ಸತತ ಒಂದೂವರೆ ವರ್ಷ ನೂರಕ್ಕೂ ಹೆಚ್ಚು ಕಾರ್ಮಿಕರು ದುಡಿದರು. ಬಂದ ಮಣ್ಣನ್ನು ಹೊರಚೆಲ್ಲದೇ ತಮ್ಮ ಹೊಸ ಜಮೀನಿಗೆ ಸಾಗಿಸಿದ್ದೇ ಬಿರಾದಾರ್ ಮಾಡಿದ ಬುದ್ಧಿವಂತಿಕೆ.

ವರ್ಷದಲ್ಲಿ ಸುತ್ತಲಿನ ಚಿತ್ರಣವೇ ಬದಲಾಗಿತ್ತು. ಕಲ್ಲು ಬಂಡೆಗಳಿಂದಲೇ ತುಂಬಿ ಹೋಗಿದ್ದ ಗೌಡರ ಜಮೀನು ಮೊದಲು ಬಾರಿಗೆ ಹೆಣ್ಣಾಗಿ ನಿಂತಿತ್ತು. ಎಕರೆಗೆ ೮೦೦ರಿಂದ ಸಾವಿರ ಟ್ರ್ಯಾಕ್ಟರ್‌ನಷ್ಟು ಮಣ್ಣು ಜಮೀನಿಗೆ ಬಂದು ಬಿದ್ದಿತ್ತು. ಖಾಲಿ ತಟ್ಟೆಯಂತಾಗಿದ್ದ ಕೆರೆಗಳು ಬಟ್ಟಲುಗಳಾಗಿ ಪರಿವರ್ತನೆಗೊಂಡು ಮುಂದಿನ ಮಳೆಗಾಲದಲ್ಲಿ ನೀರು ತುಂಬಿಕೊಂಡವು. ಆ ಕೆರೆಗಳ ಮಧ್ಯದಲ್ಲಿದ್ದ ಗೌಡರ ಜಮೀನಿನಡಿಯ ನೀರಿನ ಮಟ್ಟ ತಂತಾನೇ ಏರುತ್ತ ಸಾಗಿತು. ಹೀಗೆ ಅಭಿವೃದ್ಧಿಪಡಿಸಿದ ಜಮೀನು ನೂರು ಎಕರೆಯ ಗಡಿಯನ್ನು ದಾಟಿತ್ತು. ಇಷ್ಟಾಗುವಾಗ ನಾಲ್ಕಾರು ವರ್ಷ ಕಳೆದುಹೋಗಿವೆ. ಅಸಲಿಗೆ ಕೃಷಿ ಅಂಬೋದು ಶುರುವಿಟ್ಟುಕೊಂಡದ್ದೇ ೧೯೯೧ರಲ್ಲಿ. ಕಡಿಮೆ ನೀರಿನ ಬೇಡಿಕೆಯಲ್ಲಿ ಹೆಚ್ಚು ಇಳುವರಿ, ಬೇಗ ಫಸಲು ಹಾಗೂ ಗುಣಮಟ್ಟದ ಬೆಳೆ- ಈ ನಾಲ್ಕನ್ನೂ ಸಾಸಿದಾಗ ಮಾತ್ರ ತಮ್ಮ ಕೃಷಿ ಸಾರ್ಥಕವಾದೀತು ಎಂದುಕೊಂಡಿದ್ದವರು ಬಿರಾದಾರ್ ಸಾಹೇಬರು. ಇಷ್ಟು ಮಾಡಿದವರು ಅಷ್ಟು ಮಾಡದಿದ್ದಾರೆಯೇ ? ಸೂಕ್ತ ಬೆಳೆಯ ಹುಡುಕಾಟದಲ್ಲಿದ್ದಾಗ ಸಿಕ್ಕಿದ್ದು ಅಮೆರಿಕದ ಕಾಡು ಜಾತಿಯ ದ್ರಾಕ್ಷಿ ಬಳ್ಳಿ ರೂಸ್ಟಾಕ್. ಇದಕ್ಕೆ ದೇಶಿ ತಳಿಯನ್ನು ಕಸಿಕಟ್ಟಿ ಸಾಲಿಗೆ ಕೂರಿಸಿದರು. ಒಂದು ಎಕರೆಯಿಂದ ಆರಂಭವಾದ ದ್ರಾಕ್ಷಿ ೫೦ ಎಕರೆಗೆ ಏರಿತು. ನಿಜವಾದ ಸವಾಲು ಎದುರಾದದ್ದು ಈಗ. ಮಳೆ ಎಂದಿನ ವರಸೆ ತೋರಿಸಿತ್ತು. ಎರಡು ಬಾವಿ, ೫ ಬೋರ್‌ವೆಲ್‌ಗಳ ನೀರು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿತ್ತು.

ಅರ್ಧಕ್ಕರ್ಧ ಬೆಳೆ ಒಣಗಿ ನಿಂತಾಗ ಧೈರ್ಯಗೆಡಲಿಲ್ಲ ಗೌಡರು. ಹುಡುಕಾಟವೇ ಸಮಸ್ಯೆಗೆ ಪರಿಹಾರ ಎಂಬುದರ ಅರಿವು ಅವರಿಗೆ ಚೆನ್ನಾಗಿ ಆಗಿತ್ತು. ಎಲ್ಲದಕ್ಕೂ ಉತ್ತರ ಇದ್ದೇ ಇದೆ. ಅದಕ್ಕಾಗಿ ಅಲೆಯಲಾರಂಭಿಸಿದಾಗ ಕಣ್ಣಿಗೆ ಬಿದ್ದುದು ಮಹಾರಾಷ್ಟ್ರದ ರೈತರು ಅನುಸರಿಸುತ್ತಿದ್ದ ‘ಡಿಫ್ಯೂಜರ್ ಪದ್ಧತಿ’. ಪುಟ್ಟ ಪುಟ್ಟ ಮಡಿಕೆಗಳನ್ನು ಗಿಡದ ಬುಡದಲ್ಲಿ ಹುಗಿದು, ಅದರ ಮೂಲಕ ನೀರು ಹನಿಸಿದಲ್ಲಿ ಈಗ ಬೇಕಿದ್ದ ನೀರಿನ ಶೇ.೩೦ರಷ್ಟು ನೀರಿನಲ್ಲೇ ಇನ್ನೂ ಹೆಚ್ಚಿನ ಫಸಲನ್ನು ಪಡೆಯಬುದೆಂಬುದನ್ನು ಕಂಡುಕೊಂಡರು. ಹನಿ ನೀರಾವರಿಯಾದರೆ ಎಕರೆಗೆ ೨೦ ಸಾವಿರ ರೂ. ಖರ್ಚಾಗುತ್ತದೆ. ಡಿಫ್ಯೂಜರ್‌ನಲ್ಲಿ ೧೫ ಸಾವಿರ ಸಾಕು. ಐದು ಸಾವಿರ ರೂ. ಉಳಿಯುತ್ತದೆ ಮಾತ್ರವಲ್ಲ, ನೀರೂ ದುಬಾರಿಯಾಗುವುದಿಲ್ಲ. ಮತ್ತೇಕೆ ತಡ ? ಮಹಾರಾಷ್ಟ್ರದಿಂದ ೧೨ ರೂ.ಗೆ ಒಂದರಂತೆ ಚೀನಿ ಮಣ್ಣಿನಿಂದ ತಯಾರಿಸಿರುವ ವಿಶಿಷ್ಟ ಮಡಕೆಗಳನ್ನು ತರಿಸಲಾಯಿತು. ಸುಮಾರು ೩ ಲೀಟರ್ ನೀರು ಹಿಡಿಸಬಹುದಾದ ೮ ಇಂಚು ಎತ್ತರದ ಈ ಮಡಕೆಗಳನ್ನು ಗಿಡದ ಬುಡದಲ್ಲಿ ನಾಲ್ಕು ಇಂಚಿನವರೆಗೆ ಗುಂಡಿ ತೆಗೆದು ಹುಗಿಯಲಾಯಿತು. ಇವುಗಳ ಬಾಯಿಗೆ ಹನಿ ನೀರಾವರಿಯ ಪೈಪ್‌ಗಳನ್ನು ಜೋಡಿಸಿ ನೀರು ಹಾಯಿಸಲಾಯಿತು. ತಳದಲ್ಲಿರುವ ನಾಲ್ಕೈದು ಪುಟ್ಟ ರಂಧ್ರಗಳ ಮೂಲಕ ಗಿಡದ ಬೇರಿಗೇ ನೇರವಾಗಿ ನೀರು ಹೋಗುವಂತಾಯಿತು. ೨೫ರಿಂದ ೩೦ ವರ್ಷ ಬಾಳಿಕೆ ಬರುವ ಈ ಮಡಕೆಗಳಿಂದ ಬೇರಿಗೆ ನೇರವಾಗಿ ನೀರು ಸರಬರಾಜಾಗುವುದರಿಂದ ಭಾಷ್ಪೀಭವನವನ್ನು ತಪ್ಪಿಸಿದಂತಾಗಿತ್ತು. ಮೇಲಕ್ಕೆ ನೀರು ಚೆಲ್ಲಿ ವ್ಯರ್ಥವಾಗುವುದು ನಿಂತಿತಲ್ಲದೇ ಕಳೆ ನಿಯಂತ್ರಣಕ್ಕೆ ಬಂತು. ೩ರಿಂದ ೪ ದಿನಗಳಿಗೊಮ್ಮೆ ನೀರು ಪೂರೈಸಿದರೂ ಸಾಗುತ್ತಿತ್ತು. ಜತೆಗೆ ಗೊಬ್ಬರ, ಸೂಕ್ಷ್ಮ ಜೀವ ಪೋಷಕಾಂಶಗಳನ್ನು ನೀರಿನ ಜತೆಯಲ್ಲೇ ಪೂರೈಸಲಾಗುವುದರಿಂದ ಮಾನವಶ್ರಮವೂ ಉಳಿತಾಯವಾಗಲಾರಂಭಿಸಿತು.

ಅಂದುಕೊಂಡದ್ದನ್ನು ಬಿರಾದಾರರು ಸಾಸಿಯಾಗಿತ್ತು. ಕಡಿಮೆ ನೀರಿನಲ್ಲಿ ಶಾಶ್ವತ ಪರಿಹಾರ ಸಿಕ್ಕಿತ್ತು. ಅವರೇ ಹೇಳುವಂತೆ ತಮ್ಮ ‘ಜೀವವಾಹಿನಿ’ ಪದ್ಧತಿಯಡಿ ಎಕರೆಗೆ ೧೦ರಿಂದ ೧೪ ಲಕ್ಷ ಲೀಟರ್ ನೀರು ಸಾಕಾಗುತ್ತಿದೆ. ಕಣ್ಣಾ ಮುಚ್ಚಾಲೆ ಆಡುವ ವಿದ್ಯುತ್ ಅನ್ನು ನಂಬಿ ಕೂರುವ ಪ್ರಮೇಯವೂ ಇಲ್ಲ. ಒಟ್ಟಾರೆ ಇಂದು ವಿಠ್ಠಲ ಗೌಡರ ಬರಡು ನೆಲವಷ್ಟೇ ಹಸುರಾಗಿಲ್ಲ. ಅವರ ೫೦ ಜನರ ಅವಿಭಕ್ತ ಕುಟುಂಬದ ಬದುಕೂ ಹಸನಾಗಿದೆ. ಈಗಾಗಲೇ ೩೫ ಎಕರೆಯಲ್ಲಿ ಎಕರೆಗೆ ೩ರಿಂದ ೪ ಟನ್ ಇಳುವರಿ ಬರುವ, ವೈನ್‌ಗೆ ಬಳಸುವ ದ್ರಾಕ್ಷಿ ಫಲ ಬರುತ್ತಿದೆ. ಒಂದಷ್ಟು ಸ್ಥಳೀಯ ಹಣ್ಣುಗಳಿವೆ. ೪೦ ಎಕರೆ ಪ್ರದೇಶದಲ್ಲಿ ಎಕರೆಗೆ ೫ರಿಂದ ೬ ಟನ್ ಇಳುವರಿ ಬರುವ ರಫ್ತು ಗುಣಮಟ್ಟದ ದ್ರಾಕ್ಷಿ ಬೆಳೆಯಲಾಗುತ್ತಿದೆ. ಕೃಷಿ ಎಂದಿಗೂ ಬಿರಾದಾರ್ ಪಾಲಿಗೆ ಸ್ವಾರ್ಥವಲ್ಲ. ಅದರ ಉಪಯೋಗ ಸರ್ವರಿಗೂ ಸಲ್ಲಬೇಕು. ಆಗಲೇ ಅದು ಸಾರ್ಥಕ. ಈ ಮಾತನ್ನು ಪುನರುಚ್ಚರಿಸುತ್ತಲೇ ಸುಮಾರು ೫೦ ಎಕರೆ ಪ್ರದೇಶದಲ್ಲಿ ‘ವನಶ್ರೀ’ ಕಾಡನ್ನು ಬೆಳೆಸುತ್ತಿದ್ದಾರೆ.

ಗೌಡರ ಸಾಧನೆಗೆ ರಾಷ್ಟ್ರಪತಿ ಅಬ್ದುಲ್ ಕಲಾಂ, ರಾಜ್ಯಪಾಲರು, ದೇಶವಿದೇಶಗಳ ವಿಜ್ಞಾನಿಗಳು ಮೆಚ್ಚುಗೆ ಸೂಚಿಸಿ ಪುರಸ್ಕರಿಸಿದ್ದಾರೆ. ಚೀನಾ, ಇಸ್ರೇಲ್, ಆಸ್ಟ್ರೇಲಿಯಾ, ಕೆನಡಾ, ಮತ್ತಿತರ ದೇಶಗಳಿಂದ ನಿಯೋಗದಲ್ಲಿ ರೈತರು ಬಂದು ಮಾಹಿತಿ ಪಡೆದು ಹೋಗಿದ್ದಾರೆ. ವಿಠ್ಠಲಗೌಡರು ಸರಕಾರಿ ಕೆಲಸಬಿಟ್ಟು ಕೃಷಿಗೆ ಇಳಿದಾಗ ಸ್ವಂತದ್ದೆನ್ನುವ ಕೇವಲ ಒಂದು ಎಕರೆ ಬರಡು ಭೂಮಿಯಿತ್ತು. ಇಂದು ಇನ್ನೂರು ಎಕರೆಯಷ್ಟು ಸಮೃದ್ಧ ಹಸುರು ನೆಲದೊಡೆಯ. ಇದಾದದ್ದು ಮಾಂತ್ರಿಕ ಶಕ್ತಿಯಿಂದಲ್ಲ, ಯಾವುದೋ ಕಾಣದ ತಂತ್ರಜ್ಞಾನದಿಂದಲ್ಲ, ಇಷ್ಟೆಲ್ಲ ಸಾಧ್ಯವಾಗಿದ್ದರೆ ಅದು ಸ್ವಾವಲಂಬಿ ಮನೋಭಾವದಿಂದ. ಈ ನೆಲದ ಆರಾಧನೆಯಲ್ಲಿ ತೋರಿದ ಶ್ರದ್ಧೆಯಿಂದ. ಹೆಮ್ಮೆಯಿಂದ ಬಿಮ್ಮನೆ ಬೀಗುತ್ತಿದ್ದಾರೆ ಬಿರಾದಾರ್. ಭಲೇ ಎನ್ನೋಣವೇ ?

‘ಲಾಸ್ಟ್’ಡ್ರಾಪ್: ವಿಠ್ಠಲ ಗೌಡರು ನಾಲ್ಕು ಕೆರೆಗಳ ಹೂಳೆತ್ತಿಸಿದ ಫಲ ಅವರಿಗೆ ಮಾತ್ರ ದೊರೆಯಲಿಲ್ಲ. ಸುತ್ತಲಿನ ೧೦ ಹಳ್ಳಿಗಳ ಕುಡಿಯುವ ನೀರಿನ ಬವಣೆ ಶಾಶ್ವತವಾಗಿ ತಪ್ಪಿದೆ. ಅವರ ಬದುಕು ತಣ್ಣಗಿರಲು ಇಷ್ಟು ಸಾಲದೇ ?

Friday, September 18, 2009

ಎಲ್‌ನೀನೊ ಅಲ್ಲಿ ನಾನು ಎನ್ನುತ್ತಿರುವ ಬರ

ಷ್ಟಕ್ಕೂ ಬರ ಅಂದರೇನು ? ಮೂಲಭೂತ ಪ್ರಶ್ನೆ. ತಕ್ಷಣಕ್ಕೆ ಉತ್ತರ ಹೊಳೆಯದೇ ತಡಕಾಡುವಂತಾಗುತ್ತದೆ. ಬರ ಅಂದರೆ ಬರನಪ್ಪಾ. ಹಾಗೆಂದರೇನು ಅಂದರೆ; ಬೇಕಿದ್ದರೆ ಬರಗಾಲ ಬಂದಾಗ ಏನಾಗುತ್ತದೆ ಎಂಬುದನ್ನು ಹೇಳಬಹುದು. ಮಳೆ ಬರುವುದಿಲ್ಲ, ಬೆಳೆ ಬೆಳೆಯುವುದಿಲ್ಲ, ಕೆರೆ-ಬಾವಿಗಳೆಲ್ಲ ಬತ್ತಿ ಹೋಗುತ್ತದೆ, ಕುಡಿಯಲೂ ನೀರಿರುವುದಿಲ್ಲ, ಜಾನುವಾರುಗಳಿಗೆ ಮೇವು ನಾಸ್ತಿ, ಕೊನೆಗೆ ಬಡವರಿಗೆ ತಿನ್ನಲು ಅನ್ನವೂ ಇರುವುದಿಲ್ಲ. ಒಟ್ಟಾರೆ ಎಲ್ಲೆಲ್ಲೂ ಭೀಕರ ಕ್ಷಾಮ. ಹಾಗಾದರೆ ನಾವು ಅದನ್ನು ಬರಗಾಲ ಎಂದು ಕರೆಯಬಹುದು.

ಅರೆ ಮತ್ತೆ ಸಂದೇಹವೇ ? ಹೌದು, ಮೂಡಲೇಬೇಕಲ್ಲ. ಒಮ್ಮೆ ಬರ ಅನ್ನೋದು, ಇನ್ನೊಂದು ಬಾರಿ ಕ್ಷಾಮ ಅನ್ನೋದು. ಏನಿದು ? ಎರಡರಲ್ಲಿ ಯಾವುದು ಸರಿ ? ಬರವೋ, ಕ್ಷಾಮವೋ ?- ಅಂದರೆ ಎರಡೂ ಸರಿ ಅನ್ನಬೇಕಾಗುತ್ತದೆ. ಹಾಗಾದರೆ ಬರ, ಕ್ಷಾಮ ಎರಡೂ ಒಂದೇನಾ ? ಖಂಡಿತಾ ಅಲ್ಲ. ಹಾಗಾದರೆ ಬರಕ್ಕೂ ಕ್ಷಾಮಕ್ಕೂ ವ್ಯತ್ಯಾಸ ಏನು ? ಇದೊಳ್ಳೆ ಕತೆ. ನೀವು ಮತ್ತೆ ಮೊದಲಿನ ಪ್ರಶ್ನೆಗೇ ಬಂದು ನಿಂತಂತಾಯಿತು. ಕೇಳಿದ ಸ್ವರೂಪ ಸ್ವಲ್ಪ ಬೇರೆ ಅಷ್ಟೆ.

ಇರಲಿ, ಒಂದೊಂದಾಗಿ ಅಥ ಮಾಡಿಕೊಳ್ಳುತ್ತ ಹೋಗೋಣ. ಇವೆಲ್ಲವನ್ನೂ ಒತ್ತಟ್ಟಿಗೆ ಇಡಿ. ಸ್ವಲ್ಪ ಬೇರೇನಾದರೂ ಯೋಚಿಸೋಣ. ನಿಮ್ಮ ಮನೆಯಲ್ಲಿ ಊಟದ ಸಮಯ. ಎಲ್ಲರದ್ದೂ ಊಟವಾಗಿ ಇನ್ನೇನು ಪಾತ್ರೆ ಎಲ್ಲ ಸ್ವಚ್ಛಗೊಳಿಸುತ್ತಿರುವಾಗ ಗೇಟಿನ ಬಳಿ- ‘ಅಮ್ಮಾ, ತಾಯಿ. ಹೊಟ್ಟೆಗೇನಾದ್ರು ಹಾಕಿ ತಾಯಿ...’ ಅಂತ ಕೂಗಿದ್ದು ಕೇಳಿಸುತ್ತದೆ. ಬಾಗಿಲು ತೆರೆದು ನೋಡಿದರೆ ಹಣ್ಣು ಹಣ್ಣು ಮುದುಕನೊಬ್ಬ, ಬಡಕಲು ದೇಹ ಹೊತ್ತು ನಿಲ್ಲಲೂ ತ್ರಾಣವಿಲ್ಲದೇ ಕೀರಲು ಧ್ವನಿಯಲ್ಲಿ ಕರೆಯುತ್ತಿರುತ್ತಾನೆ. ಆತನ ದೈನ್ಯ ಸ್ಥಿತಿ ನೋಡಲಾರದೇ ಒಂದಷ್ಟು ಅನ್ನ ತಂದು ಆತನ ತಾಟಿಗೆ ಹಾಕುತ್ತೀರಿ. ಅಷ್ಟೆ, ಅದನ್ನು ಏನು ಅಂತಲೂ ನೋಡದೇ ಗಬಗಬನೆ ತಿಂದು ಮುಗಿಸುತ್ತಾನೆ ಆತ. ‘ಛೆ...ಒಳ್ಳೆ ಬರಗೆಟ್ಟು ಬಂದವನಂತೆ ತಿಂದುಬಿಟ್ಟ’ ಎಂದು ಅಂದುಕೊಳ್ಳುತ್ತಾ ಕನಿಕರದಿಂದ ಒಳಗೆ ಬರುತ್ತೀರಿ. ಈಗ ಹೇಳಿ, ಬರಗೆಟ್ಟು ಬಂದದ್ದು ಅಂದರೆ ಏನು ? ಅಂದರೆ ಅನ್ನವೇ ಇಲ್ಲದವನಂತೆ ಎಂದರ್ಥ. ಹ್ಞಾ...ಇಲ್ಲಿಯೂ ಅದೇ ಅರ್ಥ. ಬರ ಅಂದರೆ ಇಲ್ಲದ್ದು. ಮಳೆಯೇ ಇಲ್ಲದ, ನೀರೇ ಇಲ್ಲದ ಸ್ಥಿತಿಯನ್ನು ನಾವು ಬರ ಎಂದು ಗುರುತಿಸುತ್ತೇವೆ. ಇಂಥ ಬರವನ್ನು ಮೂರು ರೀತಿಯಲ್ಲಿ ಗುರುತಿಸಲಾಗುತ್ತದೆ. ಮೊದಲನೆಯದು ಹವಾಮಾನ ಸಂಬಂ ಬರ, ಎರಡನೆಯದು ಜಲ ಬರ. ಕೊನೆಯದು ಕೃಷಿ ಬರ.

ಹವಾಮಾನ ಸಂಬಂ ಬರ ಸ್ಥಿತಿ ನಿರ್ಮಾಣವಾಗಲು ಹತ್ತಾರು ಕಾರಣಗಳಿವೆ. ಮುಖ್ಯವಾಗಿ ಆ ಪ್ರದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಸರಾಸರಿ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗಿ ನೀರಿನ ಕೊರತೆ ತಲೆದೋರುತ್ತದೆ. ಇಡೀ ರಾಷ್ಟ್ರ ಬಹುತೇಕ ಒಂದು ರೀತಿಯ ಮಾನ್ಸೂನ್ ಧರ್ಮವನ್ನು ಹೊಂದಿರುತ್ತದೆ. ಹಾಗಿದ್ದೂ ಪ್ರದೇಶದಿಂದ ಪ್ರದೇಶಕ್ಕೆ ಅದರಲ್ಲೂ ಒಂದಷ್ಟು ವ್ಯತ್ಯಸ್ತವಾಗುವುದನ್ನು ಕಾಣುತ್ತೇವೆ. ಅದನ್ನು ಆಧರಿಸಿ ನೋಡಿದಾಗ ಕೆಲ ವರ್ಷಗಳಲ್ಲಿ ಸಾಮಾನ್ಯ ಮಳೆಯ ಪ್ರಮಾಣಕ್ಕಿಂತಲೂ ಕಡಿಮೆ ಲಭ್ಯತೆ ಕಂಡುಬರುತ್ತದೆ. ಹೀಗೆ ಹೆಚ್ಚು ಕಡಿಮೆಯಾಗುವುದನ್ನು ವಾಡಿಕೆಗಿಂತ ಕಡಿಮೆ, ವಾಡಿಕೆಗಿಂತ ಹೆಚ್ಚು, ವಾಡಿಕೆಗಿಂತ ತೀರಾ ಕಡಿಮೆ, ಕೊರತೆ-ಇತ್ಯಾದಿ ಹಂತಗಳಲ್ಲಿ ಗುರುತಿಸುತ್ತೇವೆ. ವಾಡಿಕೆ ಮಳೆಯಲ್ಲಿ ಕೊರತೆ ಕಂಡು ಬಂದರೆ ಆಗ ಬರಸ್ಥಿತಿಯನ್ನು ಘೋಷಿಸಲಾಗುತ್ತದೆ.

ಜಲ ಬರ ಎಂದರೆ ಮೇಲ್ಜಲದಲ್ಲಿನ ತೀವ್ರ ಕುಸಿತ. ಕೆರೆ, ಹಳ್ಳ-ಕೊಳ್ಳ ಎಲ್ಲವೂ ಒಣಗಿ ಹೋಗಿರುತ್ತದೆ. ಇದರಿಂದಾಗಿ ಭೂಮಿಯ ಮೇಲ್ಭಾಗದ ನೀರಿನ ಪಸೆ ಸಂಪೂರ್ಣ ಬತ್ತಿ ಹೋಗಿ, ಎಲ್ಲೆಡೆ ಗಾರುಗಾರು ಕಾಣಿಸುತ್ತದೆ. ನದಿ ಪಾತ್ರಗಳಲ್ಲಿ ಮರಳುರಾಶಿ, ಕಲ್ಲುಗಳು ಮಾತ್ರವೇ ಇಣುಕುತ್ತಿರುತ್ತವೆ. ಇನ್ನು ಕೃಷಿ ಬರ. ಮಣ್ಣಿನಲ್ಲಿರುವ ತೇವಾಂಶವೂ ಬತ್ತಿ ಹೋಗಿ ನೆಲ ಬಿರುಕು ಬಿಡಲಾರಂಭಿಸುತ್ತದೆ. ಇದರ ಪರಿಣಾಮ ಕೃಷಿ ಹಿನ್ನಡೆ ಅನುಭವಿಸುತ್ತದೆ. ಉತ್ಪಾದನೆ ಕುಸಿಯುತ್ತದೆ. ಆಹಾರದ ಕೊರತೆ ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ೧೯೮೭, ೧೯೭೯, ೧೯೭೨ರಲ್ಲಿ ಇಂಥ ಬರ ಕಾಣಿಸಿಕೊಂಡಿತ್ತು. ಈ ವರ್ಷ ಪುನಃ ದೇಶದಲ್ಲಿ ಬರದ ಘೋಷಣೆಯಾಗಿದ್ದು ಶೇ.೧೦ರಷ್ಟು ಪ್ರದೇಶದಲ್ಲಿ ತೀವ್ರ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ. ಶೇ.೧೯ರಷ್ಟು ಪ್ರದೇಶದಲ್ಲಿ ಪರಿವರ್ತಿತ ಬರವನ್ನು ಗುರುತಿಸಲಾಗಿದೆ. ದೇಶದ ಶೇ.೨೦ಕ್ಕೂ ಹೆಚ್ಚು ಪ್ರದೇಶದಲ್ಲಿ ಬರ ಕಾಣಿಸಿಕೊಂಡರೆ ಅದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗುತ್ತದೆ. ಈ ಬಾರಿ ಅಂಥದ್ದೇ ಸ್ಥಿತಿಯನ್ನು ಘೋಷಿಸಲಾಗಿದ್ದು ಎಲ್‌ನಿನೋ ಪರಿಣಾಮದ ಫಲವಿದು ಎಂಬ ನಿರ್ಧಾರಕ್ಕೆ ಬರಲಾಗಿದೆ. ಎಲ್‌ನಿನೋ ದಕ್ಷಿಣ ಕಂಪನದ ಕಾರಣದಿಂದ ದೇಶಾದ್ಯಂತ ಮಳೆಯಲ್ಲಿ ಏರು ಪೇರಾಗಿದ್ದು, ಪ್ರಮುಖ ೭೦ಕ್ಕೂ ಹೆಚ್ಚು ಜಲಾನಯನ ಪ್ರದೇಶ ಒಣಗಿ ನಿಂತಿದೆ. ಇದರಿಂದ ಅಂತರ್ಜಲದ ಮಟ್ಟದಲ್ಲೂ ತೀವ್ರ ಕುಸಿತ ಕಂಡು ಬಂದಿದೆ.

ಇದ್ಯಾವುದು ಹೊಸ ಪದ ಎಲ್‌ನಿನೊ ? ಇಲ್ಲಿನ ನೀರಿಗೂ ಎಲ್ಲಿಯದೋ ಎಲ್‌ನಿನೋಗೂ ಏನು ಸಂಬಂಧ ? ಪ್ರಶ್ನೆ ಸಹಜವಾದದ್ದೇ. ‘ಎಲ್ ನಿನೋ- ದಕ್ಷಿಣ ಕಂಪನ’(ಇಎನ್‌ಎಸ್‌ಒ) ಎಂದರೆ ಪೆಸಿಫಿಕ್ ಸಮುದ್ರ ಹಾಗೂ ವಾತಾವರಣದಲ್ಲಿ ಕಾಲಮಾನಕ್ಕನುಸರಿಸಿ ಉಂಟಾಗುವ ಪಲ್ಲಟ. ಇದರಲ್ಲೇ ಎರಡು ಬಗೆ- ಎಲ್ ನಿನೋ ಹಾಗೂ ಲಾ ನಿನಾ. ಮೊದಲನೆಯದರಲ್ಲಿ ವಾತಾವರಣ ಬೆಚ್ಚಗಾದರೆ, ಎರಡನೆಯದರಲ್ಲಿ ವಾತಾವರಣ ತಣ್ಣಗಾಗುತ್ತದೆ. ಇದು ಮೂರರಿಂದ ಎಂಟು ವರ್ಷಕ್ಕೊಮ್ಮೆ ನಡೆಯುವ ಸಹಜ ವಿದ್ಯಮಾನ. ಸ್ಪಾನಿಶ್ ಭಾಷೆಯಲ್ಲಿ ಎಲ್ ನಿನೋ ಅಂದರೆ ‘ಗಂಡು ಮಗು’, ಲಾ ನಿನಾ ಅಂದರೆ ‘ಹೆಣ್ಣು ಮಗು’.
ಪ್ರತಿ ಎಲ್‌ನಿನೋಗೂ ಅದರದೇ ಆದ ಪರಿಣಾಮಗಳಿರುತ್ತವೆ. ಈ ಅವಯಲ್ಲಿ ಜಗತ್ತಿನ ಹಲವಾರು ಕಡೆ ನೆರೆ, ಪ್ರವಾಹ, ಬರ ಮತ್ತಿತರ ಪರಿಸರ ವೈಪರೀತ್ಯಗಳು ಸಂಭವಿಸುತ್ತವೆ. ಪೆಸಿಫಿಕ್ ಸಾಗರಕ್ಕೆ ಸಮೀಪವಾಗಿರುವ ದೇಶಗಳು ಇದರ ಭಾರಿ ಪರಿಣಾಮಕ್ಕೆ ತುತ್ತಾಗುತ್ತವೆ. ಅದರಲ್ಲೂ ಕೃಷಿ, ಮೀನುಗಾರಿಕೆಗಳ ಮೇಲೆ ಅವಲಂಬಿಸಿದ ಅಭಿವೃದ್ಧಿಶೀಲ ದೇಶಗಳ ಮೇಲಾಗುವ ಪರಿಣಾಮ ಅನೂಹ್ಯ.

ಎಲ್‌ನಿನೋವನ್ನು ಅಳೆಯುವುದು ಹೇಗೆ ? ಅದಕ್ಕೂ ಕ್ರಮವಿದೆ. ಆಸ್ಟ್ರೇಲಿಯಾದ ತಾಹಿತಿ ಮತ್ತು ಡಾರ್ವಿನ್ ಪ್ರದೇಶಗಳ ವಾತಾವರಣದ ಒತ್ತಡದ ವ್ಯತ್ಯಾಸ, ಅಥವಾ ಪೆಸಿಫಿಕ್ ಧ್ರುವ ಕೇಂದ್ರ ಮತ್ತು ಪೂರ್ವ ಪೆಸಿಫಿಕ್‌ನ ಮೇಲ್ಮೈ ಜಲಗಳ ಉಷ್ಣತೆಯ ವ್ಯತ್ಯಾಸವೇ ಇದರ ಅಳತೆ. ಮೂರರಿಂದ ಎಂಟು ವರ್ಷಕ್ಕೊಮ್ಮೆ ಯಾವಾಗ ಬೇಕಾದರೂ ಸಂಭವಿಸುವ ಈ ಎಲ್ ನಿನೋದ ಮೂಲ ಕಾರಣಗಳನ್ನು ಕಂಡು ಹಿಡಿಯಲು ಪ್ರಯತ್ನ ನಡೆದೇ ಇದೆ.

ಹಿಂದೂ ಸಾಗರ, ಇಂಡೊನೇಷ್ಯಾ, ಆಸ್ಟ್ರೇಲಿಯಾದ ಮೇಲ್ಮೈ ಒತ್ತಡದಲ್ಲಿ ಹೆಚ್ಚಳ, ಕೇಂದ್ರ ಮತ್ತು ಪೂರ್ವ ಪೆಸಿಫಿಕ್ ಸಮುದ್ರದ ವಾಯುಭಾರದಲ್ಲಿ ಕುಸಿತ, ದಕ್ಷಿಣ ಪೆಸಿಫಿಕ್‌ನ ವಾಣಿಜ್ಯ ಮಾರುತಗಳು ದುರ್ಬಲಗೊಳ್ಳುವುದು ಅಥವಾ ಪೂರ್ವದತ್ತ ಚಲಿಸುವುದು, ಪೆರುವಿನ ಬಳಿ ಬೆಚ್ಚಗಿನ ಮಾರುತ, ಉತ್ತರ ಪೆರುವಿನ ಮರುಭೂಮಿಯಲ್ಲಿ ಮಳೆ, ಹಿಂದೂ ಸಾಗರ ಮತ್ತು ಪಶ್ಚಿಮ ಪೆಸಿಫಿಕ್‌ನಿಂದ ಪೂರ್ವ ಪೆಸಿಫಿಕ್‌ನತ್ತ ಬಿಸಿನೀರಿನ ಪ್ರವಾಹದ ಹರಿವು- ಇವೆಲ್ಲ ಎಲ್‌ನಿನೋದ ಪ್ರಾಥಮಿಕ ಲಕ್ಷಣಗಳು.

ಎಲ್ಲಿಂದ ಎಲ್ಲಿಗೋ ಹೋಗುತ್ತಿದ್ದೇವೆ ಅನ್ನುತ್ತೀರಾ ? ಕ್ಷಾಮವೆನ್ನುವುದನ್ನು ಮರೆತೇಬಿಟ್ಟೆವು ಎಂಬುದು ನಿಮ್ಮ ಆಕ್ಷೇಪ ತಾನೆ ? ಅಲ್ಲಿಗೇ ಬರೋಣ. ಇಂಥ ಎಲ್ಲ ಪರಿಸ್ಥಿತಿಯಲ್ಲಿ ಉದ್ಭವಿಸುವ ಆಹಾರದ ಕೊರತೆಯನ್ನು, ತಿನ್ನಲೂ ಗತಿಯಿಲ್ಲ, ಜೀವಗಳು ಹಸಿವಿಗೆ ಆಹುತಿಯಾಗುತ್ತಿವೆ; ಮನುಷ್ಯರು ಹಸಿದ ಹೊಟ್ಟೆಯಲ್ಲೇ ಪ್ರಾಣ ಬಿಡುವ ಸಂದರ್ಭ ಎದುರಾದರೆ ಅದನ್ನು ಕ್ಷಾಮ ಎಂದು ಕರೆಯಲಾಗುತ್ತದೆ. ಈವರೆಗೆ ದೇಶದಲ್ಲಿ ಐದು ಬಾರಿ ಭೀಕರ ಕ್ಷಾಮ ತಲೆದೋರಿದೆ. ೧೬೩೦-೩೨ರಲ್ಲಿ ಗುಜರಾತ್ ಹಾಗೂ ದಕ್ಷಿಣ ಪ್ರಸ್ಥಭೂಮಿಯನ್ನು ಮೊದಲ ಬಾರಿಗೆ ಅತ್ಯಂತ ಕರಾಳ ಕ್ಷಾಮ ಕಾಡಿತ್ತು. ೧೭೭೦ರಲ್ಲಿನ ಬಂಗಾಲದ ಕ್ಷಾಮವೂ ವಿಶ್ವಾದ್ಯಂತ ಸುದ್ದಿ ಮಾಡಿತ್ತು. ೧೭೮೩-೮೪ರ ಅವಯಲ್ಲಿ ದೇಶವನ್ನು ಮತ್ತೊಂದು ಕ್ಷಾಮ ನಲುಗಿಸಿತು. ಉತ್ತರ ಮತ್ತು ಮಧ್ಯ ಭಾರತದ ಪ್ರದೇಶಗಳಾದ ಈಗಿನ ದಿಲ್ಲಿ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ಕಾಶ್ಮೀರ ಮತ್ತು ಪಂಜಾಬ್ ಪ್ರಾತ್ಯದಲ್ಲಿ ಹಸಿವಿನಿಂದ ನೂರಾರು ಮಂದಿ ಆಗ ಅಸುನೀಗಿದ್ದರು. ೧೭೯೧-೯೨ರಲ್ಲಿ ಕಾಣಿಸಿಕೊಂಡ ಕ್ಷಾಮವನ್ನು ದೋಜಿಬರ ಎಂದೇ ಕರೆಯಲಾಯಿತು. ಹೆಸರೇ ಅದರ ಭೀಕರತೆಗೆ ಸಾಕ್ಷಿ. ಹಸಿವಿನಿಂದ ಪ್ರಾಣ ಕಳೆದುಕೊಂಡ ಜೀವಿಗಳ ತಲೆಬುರುಡೆ ಆಗಿನ ಎಲ್ಲೆಡೆಯ ಸಾಮಾನ್ಯ ದೃಶ್ಯವಾಗಿತ್ತಂತೆ. ಹೈದರಾಬಾದ್ ಹಾಗೂ ದಕ್ಷಿಣ ಮರಾಠಾ ಪ್ರಾಂತ್ಯಗಳಲ್ಲಿ ತೀವ್ರ ಜೀವಹಾನಿ ಸಂಭವಿಸಿತ್ತೆಂಬುದು ದಾಖಲಾಗಿದೆ. ತೀರಾ ಇತ್ತೀಚೆಗೆ ದಾಖಲಾದದ್ದು ೧೯೪೩ರ ಬಂಗಾಳದ ಕ್ಷಾಮ.

ಅಂಥ ಇನ್ನೊಂದು ಸ್ಥಿತಿ ನಿರ್ಮಾಣವಾಗದಿರಲು ಇರುವ ಏಕೈಕ ಮಾರ್ಗ ನೀರಿನ ಹೊಣೆಯರಿತ ನಿರ್ವಹಣೆ. ಪುಣ್ಯಕ್ಕೆ ಮಳೆ ಎಂಬುದು ಇನ್ನೂ ಭೂಮಿಯ ಮೇಲಿದೆ. ಹಾಗಾಗಿ ಆತಂಕ ಬೇಡ. ಬಿದ್ದಷ್ಟು ಮಳೆಯನ್ನು ಓಡಿಹೋಗಲು ಬಿಡದೇ ಬಿದ್ದ ಸ್ಥಳದಲ್ಲೇ ಉಳಿಸಿಕೊಳ್ಳಲು ಸಾಧ್ಯವಾದರೆ ಬರ, ಕ್ಷಾಮಗಳು ಸವಕಲು ಪದಗಳಾಗುತ್ತವೆ.

‘ಲಾಸ್ಟ್’ಡ್ರಾಪ್: ಬರವೆಂಬುದು ನಿಸರ್ಗದ ಸಾಮಾನ್ಯ ವ್ಯಾಪಾರಗಳಲ್ಲಿ ಒಂದು. ಅದನ್ನು ಬರಬೇಡ ಎನ್ನುವುದು ವಿಹಿತವಲ್ಲ. ಬದಲಾಗಿ ಅದನ್ನು ಭರಿಸುವ ಮಾರ್ಗ ಅರಿತರೆ ಅದೆಂದೂ ನಮಗೆ ಭಾರವಾಗದು.

Saturday, September 12, 2009

ಇದು ನಾವೇ ‘ಬರ’ಮಾಡಿಕೊಂಡಿರುವ ಸಮಸ್ಯೆ

ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಮಳೆ ಎಂಬ ಪದ ಕೇಳಿದರೆ ಸಾಕು ನಡುಗಲಾರಂಭಿಸುವ, ಸದಾ ಪ್ರವಾಹ ಸಂತ್ರಸ್ತ ಎಂಬ ಪಟ್ಟ ಕಟ್ಟಿಕೊಂಡಿರುವ ರಾಜ್ಯ ಅಸ್ಸಾಂ ಕೂಡಾ ಈ ವರ್ಷ ಬರಗಾಲಕ್ಕೆ ತುತ್ತಾಗಿದೆ. ಅದರಲ್ಲೂ ಬರಪೀಡಿತವೆಂದು ಘೋಷಿಸಿಕೊಂಡ ದೇಶದ ಮೊಟ್ಟ ಮೊದಲ ರಾಜ್ಯವೇ ಅದು. ಅಸ್ಸಾಂನಲ್ಲಿಯೇ ಬರಬಿದ್ದುಹೋಗಿದೆ ಎಂದ ಮೇಲೆ ಇಡೀ ದೇಶಕ್ಕೇ ಬರ ಬಂದಿದೆ ಎಂಬುದಕ್ಕೆ ಬೇರೆ ಪುರಾವೆ ಬೇಕಿಲ್ಲ. ಕೇಂದ್ರ ಅಧ್ಯಯನ ತಂಡದ ಪ್ರಕಾರವೇ ದೇಶದ ೧೦ ರಾಜ್ಯಗಳ ೧೮,೨೪೬ಕ್ಕೂ ಹೆಚ್ಚು ಜಿಲ್ಲೆಗಳು ಬರಪೀಡಿತವಾಗಿವೆ.

ಬರವೇನೂ ದೇಶಕ್ಕೆ ಹೊಸತಲ್ಲ ಬಿಡಿ. ಅದನ್ನು ನಾವು ಅನುಭವಿಸಿಕೊಂಡೇ ಬಂದಿದ್ದೇವೆ. ೧೮೯೧ರಿಂದ ಈ ವರೆಗೆ ದೇಶ ೨೨ ಬಾರಿ ಅತ್ಯಂತ ಭೀಕರ ಬರಗಾಲಕ್ಕೆ ತುತ್ತಾಗಿದೆ. ಆದರೆ ಆಗೆಲ್ಲ ಸಾಮಾನ್ಯವಾಗಿ ಒಣ ಪ್ರದೇಶವೆಂದು ಗುರುತಿಸಿರುವ ಕಡೆಗಳಲ್ಲೇ ಮಳೆ ಕೈಕೊಟ್ಟಿತ್ತು. ಈ ವರ್ಷ ಹಾಗಲ್ಲ. ಈಗಿನ ಬರವೆಂದರೆ ಒಂದು ರೀತಿಯಲ್ಲಿ ವಿಚಿತ್ರ. ಉತ್ತಮ ನೀರಾವರಿ ಪ್ರದೇಶವೆಂದು ಗುರುತಿಸಲಾಗಿರುವ ಅಥವಾ ಯಾವಾಗಲೂ ಸಾಕಷ್ಟು ಮಳೆ ಪಡೆಯುತ್ತಿದ್ದ ರಾಜ್ಯಗಳೇ ಬರಕ್ಕೆ ತುತ್ತಾಗಿವೆ. ನೋಡಿ ಬೇಕಿದ್ದರೆ, ಮಳೆಯ ಕೊರತೆಯೆಂದರೆ ಏನೆಂಬುದನ್ನೂ ಬಲ್ಲದ ಬಿಹಾರದಲ್ಲಿ ಈ ಬಾರಿ ಮುಂಗಾರು ಹಿಂದಡಿಯಿಟ್ಟಿದೆ. ಪಂಚ ನದಿಗಳ ಬೀಡು ಪಂಜಾಬ್, ಹರಿಯಾಣಗಳಂಥ ರಾಜ್ಯದಲ್ಲಿಯೇ ನೆಲ ಬಿರುಕುಬಿಟ್ಟಿದೆ. ಹೆಚ್ಚೆಂದರೆ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲ ಭಾಗ, ಕೇರಳ, ಒರಿಸ್ಸಾ ಬಿಟ್ಟರೆ ದೇಶದ ಬಹುತೇಕ ರಾಜ್ಯಗಳು ವರುಣನ ಅವಕೃಪೆಗೆ ಈಡಾಗಿವೆ.


ಹಿಂದೆಲ್ಲ ಬರ ಬಾರಿಸಿದಾಗ ಆಹಾರಕ್ಕೆ ಹಾಹಾಕಾರವೆದ್ದಿತ್ತು. ರೈತರು ವರ್ಷದ ತುತ್ತಿನ ಚೀಲಕ್ಕೆ ದಾರಿಯಾದರೆ ಸಾಕು, ಜಾನುವಾರುಗಳಿಗೆ ಒಂದಷ್ಟು ಮೇವು, ಕುಡಿಯಲು ನೀರು ಕೊಟ್ಟರೆ ಅದೇ ಪುಣ್ಯ ಎನ್ನುತ್ತಿದ್ದರು. ಆದರೆ ಈ ಬಾರಿಯ ಬರದಲ್ಲಿ ರೈತರ ಬೇಡಿಕೆಯೇ ಬೇರೆ. ಸಕಾಲಕ್ಕೆ ಮಳೆ ಬಂದಿಲ್ಲ. ಬಿತ್ತಿದ ಬೆಳೆಗಳಿಗೆ ನೀರಿಲ್ಲದಾಗಿದೆ. ಹೀಗಾಗಿ ಅಂತರ್ಜಲ ಎತ್ತಿ ಬೆಳೆ ಉಳಿಸಿಕೊಳ್ಳಲು ಹೆಚ್ಚಿನ ವಿದ್ಯುತ್ ನೀಡುವಂತೆ ಸರಕಾರಕ್ಕೆ ಮೊರೆಯಿಡುತ್ತಿದ್ದಾರೆ ರೈತರು.


ಆತಂಕ ಇರುವುದು ದೇಶ ಬರಪೀಡಿತವಾಗಿದೆ ಎಂಬುದರಲ್ಲಿ ಅಲ್ಲ. ಹೇಳಿ-ಕೇಳಿ ಬರಗಾಲ ಎಂಬುದು ಅಭಿವೃದ್ಧಿ ಅಥವಾ ಹೊಸದೊಂದು ಕ್ರಾಂತಿಗೆ ನಿಸರ್ಗ ಬರೆಯುವ ಮುನ್ನುಡಿ. ಯುದ್ಧ, ಬರಗಾಲಗಳಿಲ್ಲದೇ ಹೋದರೆ ಯಾವುದೇ ಪ್ರದೇಶ ಅಭಿವೃದ್ಧಿ ಹೊಂದಲು ಸಾಧ್ಯವೇ ಇಲ್ಲ ಎಂಬ ತಮ್ಮ ವಾದಕ್ಕೆ ರಜನೀಶ್‌ರು ಪುಟಗಟ್ಟಲೇ ಪುರಾವೆಯನ್ನು ಪೇರಿಸಿಟ್ಟಿದ್ದಾರೆ. ಕುರುಕ್ಷೇತ್ರ ಯುದ್ಧದ ಬಳಿಕವೇ ಭರತಖಂಡ ವಿಶ್ವದಲ್ಲಿಯೇ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಾದದ್ದು ಎಂಬುದು ರಜನೀಶ್‌ರ ವಾದ. ಅದೇನೇ ಇರಲಿ. ಭೀಕರ ಬರಗಾಲದ ಬಳಿಕ ಕ್ರಾಂತಿಯಾಗಿದ್ದಕ್ಕೆ ಬೋರ್‌ವೆಲ್‌ಗಳ ವಿಚಾರದಲ್ಲಿ ನಮ್ಮ ಸಾಧನೆ(?)ಗಿಂತ ಬೇರೆ ಉದಾಹರಣೆ ಬೇಕಿಲ್ಲ. ಅದರ ಪರಿಣಾಮವೇ ಇಂದು ನಮಗೆ ಅತ್ಯಲ್ಪ ಮಳೆ ಕೊರತೆಯನ್ನು ಎದುರಿಸುವ ತಾಳ್ಮೆ, ಜಾಣ್ಮೆಗಳೆರಡೂ ಉಳಿದಿಲ್ಲ. ಹೀಗಾಗಿಯೇ ಇಂದು ರೈತರಿಗೆ ನೀರಿನ ಕೊರತೆಗಿಂತಲೂ ವಿದ್ಯುತ್ ಕೊರತೆ ಹೆಚ್ಚಾಗಿ ಕಾಣಿಸುತ್ತಿದೆ.
ಅಮೆರಿಕದ ಅಂತರಿಕ್ಷ ಸಂಸ್ಥೆ ನಾಸಾ ನಡೆಸಿದ ಉಪಗ್ರಹ ಅಧ್ಯಯನದ ಪ್ರಕಾರ ೨೦೦೨-೦೮ರ ಅವಯಲ್ಲಿ ಭಾರತದಲ್ಲಿ ಅದರಲ್ಲೂ ದೇಶದ ಉತ್ತರ ಭಾಗದಲ್ಲಿನ ಅಂತರ್ಜಲ ಮಟ್ಟ ಗಣನೀಯ ಕುಸಿತವನ್ನು ಕಂಡಿದೆ. ಸಾಕಷ್ಟು ಮಳೆ ಸರಾಸರಿಯನ್ನು ಹೊಂದಿರುವ ಈಶಾನ್ಯ ಭಾರತದಲ್ಲೂ ಅಂತರ್ಜಲ ಮಟ್ಟ ವರ್ಷಕ್ಕೆ ನಾಲ್ಕು ಸೆಂಟಿಮೀಟರ್‌ನಷ್ಟು ಕುಸಿಯುತ್ತಿದೆ ಎಂಬುದು ನಿಜಕ್ಕೂ ಆತಂಕಕಾರಿ ಸಂಗತಿ. ಈ ಅವಯಲ್ಲಿ ೧೦೯ ಕ್ಯೂಬಿಕ್ ಕಿಲೋಮೀಟರ್‌ಗೂ ಹೆಚ್ಚು ಅಂತರ್ಜಲ ಬರಿದಾಗಿದೆ. ಇದನ್ನು ತಡೆಯದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಈ ಪ್ರದೇಶದ ೧೧೪ ದಶಲಕ್ಷಕ್ಕೂ ಹೆಚ್ಚು ಮಂದಿ ಗಂಭೀರ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುವ ಆತಂಕವಿದೆ. ದೇಶದ ಪ್ರಮುಖ ೮೧ಕ್ಕೂ ಹೆಚ್ಚು ಜಲಮೂಲಗಳು ಈ ಬಾರಿ ನೀರಿನ ಕೊರತೆಯನ್ನು ಎದುರಿಸುತ್ತಿವೆ.

ಇದಾವುದಕ್ಕೂ ನಾವು ಚಿಂತೆ ಮಾಡಬೇಕಾದ್ದಿರಲಿಲ್ಲ. ಭಾರತದಂಥ ದೇಶಕ್ಕೂ ಬರ ಭಾರವೆನಿಸಲು ಇನ್ನೊಂದು ಕಾರಣವಿದೆ. ನಾವು ವೈವಿಧ್ಯಮಯ ಕೃಷಿ ಪದ್ಧತಿಯನ್ನು ಲಾಗಾಯ್ತಿನಿಂದಲೂ ಅನುಸರಿಸಿಕೊಂಡು ಬಂದವರು. ಯಾವಾಗ ಹಸಿರು ಕ್ರಾಂತಿ ಎಂಭ ಭ್ರಮೆ ನಮಲ್ಲಿ ಹೊಕ್ಕಿತೋ ಅಂದಿನಿಂದ ಪರ್ಯಾಯ ಬೆಳೆಗಳ ಗೊಡವೆಗೇ ಹೋಗಿಲ್ಲ. ನೀರಾವರಿ ಯೋಜನೆಗಳು ರೂಪಿತವಾಗುವುದೇ ನಮ್ಮಲ್ಲಿ ಭತ್ತ, ಕಬ್ಬಿನಂಥ ಹೆಚ್ಚು ನೀರು ಬೇಡುವ ಬೆಳೆಗಳಿಗಾಗಿ ಎಂಬಂತಾಗಿ ಬಿಟ್ಟಿದೆ. ಕಡಿಮೆ ನೀರಿನಿಂದಲೂ ಬೆಳೆಯಬಹುದಾದ ಬೆಳೆಗಳ ಅವಗಣನೆಯೇ ರೈತರನ್ನು, ಪರೋಕ್ಷವಾಗಿ ದೇಶವನ್ನು ಬರದ ಸಂಕಷ್ಟಕ್ಕೆ ಈಡು ಮಾಡಿದೆ. ಇದು ಸಹಜವಾಗಿಯೇ ಅಂತರ್ಜಲವನ್ನು ಅಪಾಯದ ಮಟ್ಟಕ್ಕೆ ಕೊಂಡೊಯ್ಯುತ್ತಿದೆ.


ಅಂತರ್ಜಲ ಆರಿ ಹೋಗುತ್ತಿದೆ ಎನ್ನುವ ಹೊತ್ತಿಗೇ, ಇದಕ್ಕಿಂತಲೂ ಭೀಕರ ಇನ್ನೊಂದು ಸಮಸ್ಯೆ ನಮ್ಮೆದುರು ಧುತ್ತನೆ ನಿಂತಿದೆ. ಅದು ನೀರಿನ ಆವಿಯುದ್ದು. ಹೌದು, ಭಾರತದ ಬಹುತೇಕ ನೀರು ವೃಥಾ ಆವಿಯಾಗಿ ಹೋಗುತ್ತಿದೆ. ನಮ್ಮ ಪ್ರಮುಖ ಜಲ ಮೂಲ ಅಂದರೆ ಅದು ಮಳೆ ಹಾಗೂ ಹಿಮಾಲಯ ಶ್ರೇಣಿಯಲ್ಲಿನ ಮಂಜುಗಡ್ಡೆಗಳು. ಮಂಜು ಗಡ್ಡೆ ಕರಗುವುದರಿಂದ ವಾರ್ಷಿಕ ಎಷ್ಟು ನೀರು ದೊರೆಯುತ್ತದೆ ಎಂಬುದಕ್ಕೆ ನಿಖರ ಅಂಕಿ ಅಂಶಗಳು ಲಭ್ಯವಿಲ್ಲ. ೪೩ ಸಾವಿರ ಚದರ ಕಿ.ಮೀ.ನಷ್ಟು ಪ್ರದೇಶ ಮಂಜುಗಡ್ಡೆಗಳಿಂದ ಆವೃತವಾಗಿದೆ. ಇದರಿಂದ ಅಂದಾಜು ೩,೮೭೦ ಕ್ಯೂಬಿಕ್ ಕಿ.ಮೀ.ನಷ್ಟು ನೀರು ವರ್ಷಕ್ಕೆ ಸಿಗುತ್ತಿದೆ. ಇದರಲ್ಲಿ ಭಾರತಕ್ಕೆ ಲಭ್ಯವಿರುವುದು ಸುಮಾರು ೧೦ ಸಾವಿರ ಚದರ ಕಿ.ಮೀ.ಪ್ರದೇಶದ ೨೦೦ ಕ್ಯೂಬಿಕ್ ಕಿ.ಮೀ.ನಷ್ಟು ನೀರು ಮಾತ್ರ. ಒಟ್ಟಾರೆ ಮಳೆ ಮತ್ತು ಮಂಜಿನಿಂದ ನಾವು ಅಂದಾಜು ೪ ಸಾವಿರ ಶತಕೋಟಿ ಕ್ಯೂಬಿಕ್ ಮೀಟರ್‌ನಷ್ಟು ನೀರನ್ನು ಪಡೆಯುತ್ತಿದ್ದೇವೆ. ಇದರಲ್ಲಿ ಶೇ.೫೦ರಷ್ಟು ಆವಿಯಾಗಿ ಹೋಗುತ್ತದೆ. ೧೯೧೨ರಿಂದ ೧೯೬೪ ಹಾಗೂ ೧೯೬೫ರಿಂದ ೨೦೦೬ ಅವಯಲ್ಲಿ ದೇಶದ ಮಳೆ ಸರಾಸರಿ ಶೇ. ೪ರಷ್ಟು ಕುಸಿದಿದೆ. ಆದರೆ ಆ ಪೈಕಿ ಬಳಕೆಗೆ ದಕ್ಕುತ್ತಿರುವ ಮಳೆ ನೀರಿನ ಪ್ರಮಾಣ ಶೇ. ೧೨ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಮಳೆ ಸಂಗ್ರಹ ಹಾಗೂ ಬಳಕೆಯ ನಿಟ್ಟಿನಲ್ಲಿ ನಮ್ಮ ನಿರ್ಲಕ್ಷ್ಯ ಇದಕ್ಕೆ ಮೊದಲ ಪ್ರಮುಖ ಕಾರಣವಾಗಿದ್ದರೆ, ಮಳೆ ಸುರಿಯುವ ಒಟ್ಟೂ ಅವಯಲ್ಲಿನ ಕುಸಿತವೂ ಇನ್ನೊಂದು ಮುಖ್ಯ ಕಾರಣ. ಇದರ ಒಟ್ಟಾರೆ ಪ್ರತಿಫಲನ ಬರ ಎದುರಿಸುವಲ್ಲಿನ ನಮ್ಮ ವೈಫಲ್ಯದಲ್ಲಿ ಕಾಣುತ್ತಿದೆ.


ವಿಶೇಷ ಗೊತ್ತೆ ? ದೇಶದ ಒಟ್ಟಾರೆ ಕೃಷಿಯ ಶೇ. ೬೦ರಷ್ಟು ಒಣ ಭೂಮಿಯಲ್ಲೇ ನಡೆಯುತ್ತಿದೆ. ಈ ದೃಷ್ಟಿಯಿಂದ ಅತ್ಯಂತ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ, ಬರನಿರೋಧಕ ಬೆಳೆಗಳ ಬಗ್ಗೆಯೇ ನಾವು ಹೆಚ್ಚು ಯೋಚಿಸುವುದು ಅನಿವಾರ್ಯ. ಹಾಗೆನ್ನುವಾಗ ಬರದಂಥ ಸಂದರ್ಭದಲ್ಲಿ ನಮಗೆ ಉತ್ತರವಾಗಿ ನಿಲ್ಲಬಲ್ಲವು ನವಣೆ, ಸಜ್ಜೆ ಇತ್ಯಾದಿಗಳು ಮಾತ್ರ. ಭತ್ತವನ್ನು ನಾವು ವಾರ್ಷಿಕ ೧೨೦೦ರಿಂದ ೧೩೦೦ ಮಿ.ಮೀ. ಮಳೆ ಸರಾಸರಿ ಇರುವ ಪ್ರದೇಶದಲ್ಲಿ ಮಾತ್ರ ಬೆಳೆಯಬಹುದು. ಆದರೆ ನವಣೆ, ಸಜ್ಜೆ, ಜವೆ, ಜೋಳ ಇತ್ಯಾದಿಗಳಿಗೆ ೩೫೦ರಿಂದ ೫೦೦ ಮಿ.ಮೀ. ಮಳೆ ಸರಾಸರಿ ಇದ್ದರೆ ಸಾಕು. ಇದು ಗೊತ್ತಿದ್ದೂ ನಾವು ಬರ ಬಂದಾಗಲೂ ಅಂತರ್ಜಲವನ್ನು ಹೀರಿಯಾದರೂ ಸರಿ ಭತ್ತವನ್ನೇ ಬೆಳೆಯುತ್ತೇವೆ ಎಂಬ ಹಠಕ್ಕೆ ಬೀಳುತ್ತೇವೋ ಗೊತ್ತಿಲ್ಲ. ಧಾನ್ಯಗಳ ಸಸಿಗಳ ಬೇರು ಅತ್ಯಂತ ಆಳಕ್ಕೆ ಇಳಿಯಬಲ್ಲ ಶಕ್ತಿಯನ್ನು ಹೊಂದಿವೆ. ಅದೇ ರೀತಿ ಇದರ ದಟ್ಟ ಹರವು ವಾತಾವರಣದಲ್ಲಿ ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳಬಲ್ಲದು. ಭತ್ತದ ಕಣಜವೆಂದು ಕರೆಸಿಕೊಳ್ಳುವ ಪಂಜಾಬ್‌ನಲ್ಲಿ ಸಹ ೧೯೬೦ಕ್ಕೂ ಮುನ್ನ ಭತ್ತ ಪ್ರಚಲಿತದಲ್ಲಿರಲಿಲ್ಲ. ಅಂಥದ್ದೊಂದು ಬದಲಾವಣೆ ಬಂದದ್ದು ೭೦ರ ದಶಕದಲ್ಲಿ. ಆಹಾರ ಸ್ವಾವಲಂಬನೆಯ ಸಾಧನೆಗೆ ಸರಕಾರ ಹೆಚ್ಚಿನ ಒತ್ತು ಕೊಡಲಾರಂಭಿಸಿದ್ದೇ ಕೃಷಿಗೆ ನೀರಿನ ಬೇಡಿಕೆ ಹೆಚ್ಚಲು ಕಾರಣವಾಯಿತು ಎಂಬುದರಲ್ಲಿ ಎರಡು ಮಾತಿಲ್ಲ.
ಈಗ ಹೇಳಿ, ನಿಜವಾಗಿಯೂ ಬರದಿಂದ ನಮಗೆ ಸಂಕಷ್ಟ ಒದಗಿದೆಯೇ ಅಥವಾ ಅದನ್ನು ನಿರ್ವಹಿಸುವಲ್ಲಿ ನಾವು ಎಡವುತ್ತಿದ್ದೇವೆಯೇ ?


‘ಲಾಸ್ಟ್’ಡ್ರಾಪ್: ಸರಕಾರ ಪಡಿತರ ವ್ಯವಸ್ಥೆಯಡಿ ೨-೩ ರೂ.ಗಳಿಗೆ ಅಕ್ಕಿ ಕೊಡಲು ಮುಂದಾಗುತ್ತಿದೆ. ಹೀಗಿರುವಾಗ ಸಹಜವಾಗಿ ಭತ್ತಕ್ಕೆ ಬೇಡಿಕೆ ಹೆಚ್ಚುತ್ತದೆ. ರೈತರೂ ಅದನ್ನೇ ಬೆಳೆಯುತ್ತಾರೆ. ಇದಕ್ಕಿಂತ ದುಬಾರಿ ದವಸ ಧಾನ್ಯಗಳ ಕೃಷಿಗೆ ಯಾರು ಮನಸ್ಸು ಮಾಡುತ್ತಾರೆ ? ಒಣ ಭೂಮಿ ಕೃಷಿ ಸೊರಗುತ್ತಿರುವುದಕ್ಕೆ ಬೇರೆ ಕಾರಣ ಬೇಕಿಲ್ಲ ತಾನೆ ?

Friday, September 4, 2009

ಹುಲಿಬನ: ಜಲ ಸಮೃದ್ಧತೆಯ ಸಾಂಕೇತಿಕ ತಾಣ

ಅದು ದಟ್ಟ ಕಾನನದ ನಡುವಿನ ಒಂದು ಊರು. ಊರು ಅನ್ನುವುದಕ್ಕಿಂತ ಲೆಕ್ಕ ಮಾಡಿ ಮೂರು ಮನೆಗಳಿರುವ ಒಂದು ತಾಣ. ಅದೂ ಅಣ್ಣ ತಮ್ಮಂದಿರದ್ದೇ. ಕಾಡು ಹಾದಿಯಲ್ಲೇ ಒಂದೂವರೆ ಕಿ.ಮೀ.ಗೂ ಹೆಚ್ಚು ದೂರ ನಡೆದುಕೊಂಡು ಹೋಗಬೇಕು. ಬಸ್ ಇರಲಿ, ಕೊನೇ ಪಕ್ಷ ದ್ವಿಚಕ್ರವಾಹನವೂ ನೆಟ್ಟಗೆ ಹೋಗುವುದಿಲ್ಲ. ಮಳೆಗಾಲದಲ್ಲಿ ‘ಕಾಲೇಶ್ವರ ಎಕ್ಸ್‌ಪ್ರೆಸ್’ ನಿಮಗಾಗಿ ಸಿದ್ಧವಿರುತ್ತದೆ. ಬೇರೆ ಮಾರ್ಗವೇ ಇಲ್ಲ. ಹೀಗೆ ನಡೆದುಕೊಂಡೇ ಹೋಗುತ್ತಿದ್ದರೆ ರಸ್ತೆಯೆಂದು ಗುರುತಿಸಿಕೊಂಡಿರುವ ಕಿರು ದಾರಿಯ ಪಕ್ಕದಲ್ಲೇ ಒಂದು ಬೃಹತ್ ಕಾರೇ ಮರ ಕಾಣಿಸುತ್ತದೆ. ಅದರ ಬುಡದಲ್ಲೊಂದು ಜೀರ್ಣಾವಸ್ಥೆಯಲ್ಲಿರುವ ಕಟ್ಟೆ. ಆ ಕಟ್ಟೆಯ ಮೇಲೊಂದು ಹುಲಿಯ ಕಲ್ಲಿನ ವಿಗ್ರಹ. ಅದಕ್ಕೊಂದಿಷ್ಟು ಅರಿಷಿಣ, ಕುಂಕುಮ. ಯಾವತ್ತೋ ಹಾಕಿದ್ದ ಹೂವಿನ ಹಾರ ಒಣಗಿ ವಿಗ್ರಹಕ್ಕೆ ಮೆತ್ತಿಕೊಂಡಿದೆ. ಪಕ್ಕದಲ್ಲೇ ಶ್ರದ್ಧಾಳುಗಳು ಊದಿನ ಕಡ್ಡಿ ಹಚ್ಚಿದ್ದಕ್ಕೆ ಸಾಕ್ಷಿಯಾಗಿ ಅರ್ಧ ಉರಿದುಳಿದ ಒಂದಷ್ಟು ಕಡ್ಡಿಗಳು ರಾರಾಜಿಸುತ್ತಿವೆ.

ಅಚ್ಚರಿಯಾದರೂ ಸತ್ಯ. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಹುಲಿ ಕಟ್ಟೆಗಳು ಅಲ್ಲಲ್ಲಿ ಪೂಜೆಗೊಳ್ಳುತ್ತಿವೆ. ಎಷ್ಟೋ ಊರುಗಳನ್ನು ಹುಲಿಯ ಹೆಸರಿನಿಂದಲೇ ಗುರುತಿಸಲಾಗುತ್ತಿದೆ. ಮಲೆನಾಡಿನ ಭಾಗಗಳಲ್ಲಂತೂ ತಾಲೂಕಿಗೊಂದರಂತೆ ಹುಲಿಮನೆಯೋ, ಹುಲಿಕಟ್ಟೆಯೋ, ಹುಲ್ಕಲ್ಲೋ, ಹುಲಿಕಾಡೋ, ಹುಲದೇವರಬನವೋ ಒಂದಲ್ಲಾ ಒಂದು ಇಂಥದ್ದೇ ಹೆಸರಿನ ಊರು ಇದ್ದೇ ಇರುತ್ತದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹುಲಿಕಲ್ ಘಾಟಿ ಸಾಕಷ್ಟು ಪ್ರಸಿದ್ಧ.


ನಂಬಿಕೆಗಳ ಪ್ರಶ್ನೆ ಏನೇ ಇರಲಿ. ನಾವು ಭಾರತೀಯರಿಗೆ ಪ್ರಕೃತಿಯ ಎಲ್ಲ ಅಂಶಗಳೂ ಪೂಜನೀಯ. ಹೀಗಿರುವಾಗ ಪ್ರಕೃತಿಯ ಸೃಷ್ಟಿಗಳಲ್ಲಿ ಒಂದಾದ ಹುಲಿಯೂ ದೇವರಾದದ್ದರಲ್ಲಿ ಅಚ್ಚರಿಯಿಲ್ಲ. ಪ್ರಶ್ನೆ ಅದಲ್ಲ. ಹುಲಿ ಕಟ್ಟೆಯಂಥವುಗಳು ನಿರ್ದಿಷ್ಟ ಪ್ರದೇಶದಲ್ಲೇ ಏಕೆ ಇವೆ ? ಕಾಡಿನ ಯಾವುದೇ ಪ್ರದೇಶದಲ್ಲಿ ಹುಲಿ ವಾಸ ಮಾಡಬಹುದು. ಅಲ್ಲೆಲ್ಲಾ ಹುಲಿ ದೇವರುಗಳನ್ನು ಗ್ರಾಮೀಣರು ಪ್ರತಿಷ್ಠಾಪಿಸಿಲ್ಲವೇಕೆ ? ಇಂಥ ಹುಡುಕಾಟಕ್ಕೆ ಇಳಿದಾಗ ಕುತೂಹಲಕಾರಿ ಸಂಗತಿಯೊಂದು ಹೊರಬಂತು. ಬರೀ ಪೂಜೆಗಾಗಿಯೇ ಇಂಥ ಕಟ್ಟೆಗಳನ್ನು ಕಟ್ಟಿದ್ದಲ್ಲ. ಹೀಗೆ ಹುಲಿ ಕಟ್ಟೆಗಳು ಇರುವ ತಾಣಗಳೆಲ್ಲ ಅತ್ಯಂತ ದಟ್ಟ ಜಲಮೂಲವನ್ನು ಹೊಂದಿದ್ದವು. ಕಾಲ ಕ್ರಮೇಣ ನಾಗರಿಕತೆಯ ದಾಳಿಗೆ ಸಿಲುಕಿ ಅರಣ್ಯವೂ ನಾಶವಾಯಿತು, ಹುಲಿ ಸಂತತಿಗಳೂ ಕ್ಷೀಣಿಸುತ್ತ ಬಂದು ಕಟ್ಟೆಗಳಷ್ಟೇ ಉಳಿದುಕೊಂಡಿವೆ.


ಹುಲಿಗಳಂತಲೇ ಅಲ್ಲ, ಸಾಮಾನ್ಯವಾಗಿ ಕಾಡು ಪ್ರಾಣಿಗಳು ಜಲಮೂಲದ ಸಮೀಪದಲ್ಲೇ ವಾಸಿಸುತ್ತವೆ. ಅದರಲ್ಲೂ ಹುಲಿಯದ್ದು ಅತ್ಯಂತ ವಿಶಿಷ್ಟ ಸ್ವಭಾವ. ಅದು ನೀರಿಗಾಗಿಯಷ್ಟೇ ಅಲ್ಲ, ನೀರನ್ನು ಹುಡುಕಿಕೊಂಡು ಬರುವ ಪ್ರಾಣಿಗಳ ಬೇಟೆಯ ಉದ್ದೇಶದಿಂದಲೂ ಜಲಮೂಲದ ಸಮೀಪದಲ್ಲೇ ತನ್ನ ವಾಸ ಸ್ಥಳವನ್ನು ಗುರುತಿಸಿಕೊಂಡಿರುತ್ತಿತ್ತು. ಹೀಗೆ ಹುಲಿ ಸಂತತಿ ದಟ್ಟವಾಗಿದ್ದ ಕಡೆಗಳಲ್ಲೆಲ್ಲ ಹಿಂದಿನವರು ಅದನ್ನು ಗುರುತಿಸಲು ಸುಲಭವಾಗಲಿ ಎಂಬ ದೃಷ್ಟಿಯಿಂದ ಇಂಥ ಕಟ್ಟೆಗಳನ್ನು ಕಟ್ಟಿ ಪೂಜೆಯ ವ್ಯವಸ್ಥೆ ಮಾಡಿರುತ್ತಿದ್ದರು.


ಇನ್ನೂ ವಿಶೇಷವೆಂದರೆ, ಹೀಗೆ ಸ್ಥಳ ನಿಗದಿಗೆ ಮುನ್ನ ಅತ್ಯಂತ ನಿಖರ ಸಮೀಕ್ಷೆಯನ್ನೂ ಮಾಡಲಾಗುತ್ತಿತ್ತು. ಆ ಭಾಗದ ಅರಣ್ಯ ಪ್ರದೇಶ, ಅಲ್ಲಿರಬಹುದಾದ ಪ್ರಾಣಿ ಸಂಕುಲ, ಜೀವ-ಸಸ್ಯ ವೈವಿಧ್ಯ ಇತ್ಯಾದಿ ಅಂಶಗಳೆಲ್ಲವನ್ನೂ ತಮ್ಮದೇ ವಿಶಿಷ್ಟ ಕ್ರಮಗಳಿಂದ ಲೆಕ್ಕಹಾಕಲಾಗುತ್ತಿತ್ತು. ಈ ಎಲ್ಲ ಅಂಕಿ-ಅಂಶಗಳನ್ನು ಆಧರಿಸಿ ಜಲಮೂಲದ ಸಾಮರ್ಥ್ಯವನ್ನು ಅಳೆಯಲಾಗುತ್ತಿತ್ತು. ಇಷ್ಟೇ ಅಲ್ಲ ಇದನ್ನು ಅವಲಂಬಿಸಿಯೇ ಮುಂದಿನ ಒಂದು ವರ್ಷ ಊರಿನ ಹೊಳೆ, ಕೆರೆ, ಕಟ್ಟೆಗಳಲ್ಲಿರಬಹುದಾದ ನೀರಿನ ಪ್ರಮಾಣವನ್ನು ಲೆಕ್ಕ ಹಾಕಿ ಕೃಷಿ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು.


ಈ ಎಲ್ಲವನ್ನು ಗಮನಿಸಿದಾಗ ಪ್ರಾಣಿ ಗಣತಿ, ಮರಗಳ ಗಣತಿ ಇವೆಲ್ಲವೂ ಗ್ರಾಮೀಣ ಭಾಗದಲ್ಲಿ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿತ್ತು ಎಂಬ ಸಂಗತಿ ಹುಬ್ಬೇರಿಸುತ್ತದೆ. ನೀರಿನ ವಿಚಾರದಲ್ಲಂತೂ ಅತ್ಯಂತ ಕರಾರುವಾಕ್ ಲೆಕ್ಕಾಚಾರ ಹಿಂದಿನ ಗ್ರಾಮೀಣರದ್ದಾಗಿತ್ತು. ಈಗಿನ ಆಧುನಿಕ ಪ್ರಾಣಿ ಗಣತಿ ಪದ್ಧತಿಯೂ ಇದೇ ಆಧಾರದಲ್ಲಿಯೇ ಅಭಿವೃದ್ಧಿಗೊಂಡದ್ದೆಂದು ಹೇಳಬಹುದು. ಯಾವುದೇ ಒಂದು ಪ್ರದೇಶದ ಜನಸಂಖ್ಯೆಯನ್ನು ಅತ್ಯಂತ ಸುಲಭವಾಗಿ, ಅಷ್ಟೇ ನಿಖರವಾಗಿ ಎಣಿಸಿ ಹೇಳಿಬಿಡಬಹುದು. ಆದರೆ, ಕಾಡು ಪ್ರಾಣಿಗಳ ಸಂಖ್ಯೆಯನ್ನು ಹಾಗೆ ಎಣಿಸಲು ಸಾಧ್ಯವೇ ಇಲ್ಲ. ಏಕೆಂದರೆ ಪ್ರಾಣಿಗಳು ಒಂದು ಕಡೆ ನಿಲ್ಲುವುದೇ ಇಲ್ಲ. ಸದಾ ಸಂಚರಿಸುತ್ತಿರುತ್ತವೆ. ಮತ್ತೊಂದು ಸಂಗತಿಯೆಂದರೆ ಒಂದು ವರ್ಗದ ಪ್ರಾಣಿಗಳು ಸಾಮಾನ್ಯವಾಗಿ ಆಕಾರ, ಸ್ವರೂಪ, ಗಾತ್ರದಲ್ಲಿ ಒಂದೇ ರೀತಿಯಿರುತ್ತವೆ. ಇನ್ನು ಹುಲಿಯಂಥ ಪ್ರಾಣಿಗಳ ಹೆಜ್ಜೆ ಗುರುತಿನ ಗಣತಿ ವಿಶ್ವಾಸಾರ್ಹವಲ್ಲ. ಅದೇ ರೀತಿ ನೀರಿನ ಲೆಕ್ಕ ತೆಗೆಯುವುದೂ ಸುಲಭವಲ್ಲ. ಹರಿಯುವಿಕೆ, ಇಂಗುವುದು ಹಾಗೂ ಆವಿಯಾಗುವುದು ನೀರಿನ ಮೂಲಭೂತ ಗುಣ. ಹೀಗಿರುವಾಗ ಆಯಾ ಪ್ರದೇಶದ ಪ್ರಾಣಿಗಳ ಸಂಖ್ಯೆ ಎಷ್ಟು? ನೀರಿನ ಪ್ರಮಾಣವೇನು ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟವೇ ಸರಿ.


ಈಗೆಲ್ಲ ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಒಂದು ಚದರ ಕಿ.ಮೀ.ನಲ್ಲಿ ಇಂತಿಷ್ಟು ಪ್ರಾಣಿಗಳಿವೆ ಎಂದು ಅಂದಾಜು ಮಾಡಲಾಗುತ್ತದೆ. ಸಾಮಾನ್ಯವಾಗಿ ಸಂರಕ್ಷಿತ ಅರಣ್ಯ ಪ್ರದೇಶದ ಮಧ್ಯಭಾಗ (ಕೋರ್ ಜೋನ್)ದಲ್ಲಿ ಕಾಲ್ಪನಿಕ ಚೌಕಗಳನ್ನು ಹಾಕಿಕೊಳ್ಳಲಾಗುತ್ತದೆ. ಕಾಡಿನ ಮರಗಳ ಮೇಲೆ ಗುರುತು ಮಾಡಿಯೋ, ನೆಲದಲ್ಲಿ ಅಲ್ಲಲ್ಲಿ ಕಲ್ಲುಗಳನ್ನು ನೆಡುವ ಮೂಲಕವೋ ಇಂಥ ಚೌಕಗಳನ್ನು ನಿರ್ಮಿಸಲಾಗುತ್ತದೆ. ಸ್ಥಳೀಯರನ್ನೊಳಗೊಂಡ ಗುಂಪುಗಳಲ್ಲಿ ಇಂಥ ಗುರುತುಗಳನ್ನುನುಸರಿಸಿ ನಿಶ್ಶಬ್ದವಾಗಿ ಅಲ್ಲಲ್ಲಿ ತಂಗಿ ಪ್ರಾಣಿ-ಪಕ್ಷಿಗಳನ್ನು ಗುರುತುಹಾಕಿಕೊಳ್ಳುತ್ತಾರೆ. ಕಾಂಪಾಸ್‌ನ ಸಹಾಯದಿಂದ ಪ್ರಾಣಿ ಕಂಡುಬಂದ ಕೋನ ಹಾಗೂ ರೇಂಜ್ ಫೈಂಡರ್ ಎಂಬ ಉಪಕರಣದ ಗೆರೆಯಿಂದ ಪ್ರಾಣಿಗಿರುವ ದೂರವನ್ನು ಅಳೆದು ತಮ್ಮ ಮಾಹಿತಿ ಕಲೆಹಾಕುತ್ತಾರೆ. ಇವೆಲ್ಲವನ್ನೂ ಕ್ರೋಡೀಕರಿಸಿ ಆಯಾ ಪ್ರದೇಶದ ಪ್ರಾಣಿಗಳ ಸಾಂದ್ರತೆ ಅರಿಯಲಾಗುತ್ತದೆ. ಇದನ್ನು ‘ಸೀಳು ದಾರಿ ಗಣತಿ’ ಎಂದು ಗುರುತಿಸಲಾಗುತ್ತದೆ.


ಇದಕ್ಕೆ ಸಾಕಷ್ಟು ನಿರ್ಬಂಧಗಳಿರುತ್ತವೆ. ಅದರದ್ದೇ ಆದ ನಿಯಮಗಳಿರುತ್ತದೆ. ಗುಂಪಿನಲ್ಲಿ ಹೆಚ್ಚು ಜನರಿರಬಾರದು. ದಾರಿಯಲ್ಲಿ ಮಾತಾಡುವಂತಿಲ್ಲ. ಶಬ್ದ ಮಾಡುವಂತಿಲ್ಲ. ಸನ್ನೆಗಳಲ್ಲೇ ಸಂವಹನ ಸಾಸಬೇಕು. ಎಷ್ಟೋ ವೇಳೆ ಕಾಡಿನ ಸದ್ದು ಮೋಸ ಮಾಡುವ ಸಾಧ್ಯತೆಯಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಕಾಡಿನ ಬಗೆಗೆ ಅನುಭವವಿರಬೇಕು. ಸ್ಥಳದ ಪರಿಚಯವಿರಬೇಕು. ಅದಿಲ್ಲದಿದ್ದರೆ ಹಾದಿ ತಪ್ಪಿ, ಎಲ್ಲೆಲ್ಲೋ ಹೋಗಿ ಬಿಡುವ ಅಪಾಯವಿರುತ್ತದೆ. ಪ್ರಾಣಿಗಳ ಸ್ವಭಾವ, ಅವುಗಳ ಜೀವನ ಕ್ರಮ, ನಡೆ ಇತ್ಯಾದಿಗಳ ಮಾಹಿತಿಯೂ ತಿಳಿದಿರಬೇಕು. ಒಟ್ಟಾರೆ ಇದು ಸಾಕಷ್ಟು ಸೂಕ್ಷ್ಮ, ತಾಳ್ಮೆ ಬೇಡುವ ಪ್ರಕ್ರಿಯೆಯಷ್ಟೇ ಅಲ್ಲ. ಅಷ್ಟೇ ಚೇತೋಹಾರಿ ಅನುಭವ. ಮಾತ್ರವಲ್ಲ ಕೆಲವೊಮ್ಮೆ ಅಪಾಯಕಾರಿ ಸಾಹಸವೂ ಹೌದು.


ಇಂದು ವೈಜ್ಞಾನಿಕ ಬೆಳವಣಿಗೆಗಳ ಉತ್ತುಂಗದಲ್ಲಿರುವ ನಾವು ಬದುಕಿನ ತೀರಾ ಅನಿವಾರ್ಯಗಳಾದ ಜೀವ ಅಧ್ಯಯನದ ಬಗೆಗೆ ಎಲ್ಲೋ ಒಂದು ಕಡೆ ನಿರ್ಲಕ್ಷ್ಯ ವಹಿಸಿರುವಂತೆ ಕಂಡು ಬರುತ್ತಿದೆ. ನಮ್ಮ ಪರಿಸರದಲ್ಲಿ ಪ್ರತಿ ದಿನ, ಪ್ರತಿ ಕ್ಷಣವೂ ಬದಲಾವಣೆ, ಬೆಳವಣಿಗೆಗಳಾಗುತ್ತಿದೆ. ಇದನ್ನು ಗುರುತಿಸುವಲ್ಲಿನ ನಮ್ಮ ವೈಫಲ್ಯವೇ, ನೀರಿನ ಕೊರತೆಯಂಥ ಸಮಸ್ಯೆಗಳಿಗೆ ಕಾರಣವಾಗಿದೆ. ಇನ್ನಾದರೂ ಹುಲಿಕಟ್ಟೆಯಂಥವುಗಳನ್ನು ಮೂಢ ನಂಬಿಕೆಯೆಂದು ಉಡಾಫೆ ಮಾಡುವ ಬದಲಿಗೆ, ಅವುಗಳ ಬಗೆಗೆ ಸಾಂಸ್ಥಿಕ ಅಧ್ಯಯನಕ್ಕೆ ತೊಡಗುವುದು ಒಳಿತು.


‘ಲಾಸ್ಟ್’ಡ್ರಾಪ್: ಮೂಲಭೂತ ಅವಶ್ಯಕತೆಗಳ ಲಭ್ಯತೆಯನ್ನು ಗುರುತಿಸುವ ಸಾಮರ್ಥ್ಯ ಪ್ರಾಣಿ-ಪಕ್ಷಿಗಳಲ್ಲಿ ನಮಗಿಂಥ ಕನಿಷ್ಠ ಹತ್ತುಪಟ್ಟು ಹೆಚ್ಚು ಇರುತ್ತದೆ. ಕೊನೇ ಪಕ್ಷ ಅದನ್ನು ಗ್ರಹಿಸುವ ಸೂಕ್ಷ್ಮತೆ ನಮ್ಮದಾದರೆ ಬದುಕು ಈಗಿನ ನೂರು ಪಟ್ಟು ಸುಲಲಿತ.