Wednesday, November 26, 2008

‘ಹನಿ’ಗವನಗಳಿಂದ ನೀರೆಚ್ಚರ ಮೂಡಿಸುವ ಹೀರಾ


‘ಅದು ಯಾವುದೇ ಪ್ರದೇಶವಿರಬಹುದು. ನೀರೊಂದು ಸಮೃದ್ಧವಾಗಿದ್ದರೆ ಶೇ.೧೦ ರಷ್ಟು ಅಭಿವೃದ್ಧಿ ತಂತಾನೇ ಆಗುತ್ತದೆ.’ ಆ ಮಾತಿನಲ್ಲಿ ಖಚಿತತೆ ಇತ್ತು, ಅನುಭವ ತುಂಬಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನೀರಿನ ಬಗೆಗಿನ ಕಳಕಳಿ ಅವರ ಮಾತಿನುದ್ದಕ್ಕೂ ತುಂಬಿ ತುಳುಕುತ್ತಿತ್ತು.
ಇಂದು ಆಳಂದ ತಾಲೂಕಿನ ಪುಟ್ಟ ಗ್ರಾಮ ರುದ್ರವಾಡಿಯನ್ನು ಕೃಷಿ ಹೊಂಡಗಳ ಮೂಲಕ ಸಂಪೂರ್ಣ ನೀರ ಸ್ವಾವಲಂಬಿಯಾಗಿ ಪರಿವರ್ತಿಸಿದ ಆದಿನಾಥ್ ಹೀರಾ ಎಂಬ ಮೋಡಿಗಾರನ ಜತೆ ಮಾತಿಗೆ ಕುಳಿತರೆ ಒಣ ತರ್ಕಗಳು ಇಣುಕುವುದಿಲ್ಲ. ಪೊಳ್ಳು ಆದರ್ಶಗಳು ತಲೆ ಹಾಕುವುದಿಲ್ಲ. ಆತ ಪಕ್ಕಾ ಪ್ರಾಕ್ಟಿಕಲ್. ಒಂದಿಡೀ ತಲೆಮಾರು ನೀರ ಬೇಗುದಿಯಲ್ಲಿ ಬೆಂದ ಬಳಿಕ ಗಳಿಸಿಕೊಂಡ ಬುದ್ಧಿವಂತಿಕೆ, ಕಂಡುಕೊಂಡ ಪರಿಹಾರದ ಪ್ರಾತಿನಿಧಕ ವಾಕ್ಯಗಳಾಗಿ ಹೀರಾ ಬಾಯಿಂದ ಅನುಭವಜನ್ಯ ಮಾತು ಹೊರಹೊಮ್ಮುತ್ತಿದ್ದವು.
ನೀರಿನ ಸಂಕಷ್ಟವೆಂಬುದು ಪಕ್ಕಾ ಸ್ವಯಂಕೃತ ಅಪರಾಧ. ಕಳೆದ ಶತಮಾನದ ೬೦ರ ದಶಕದಲ್ಲಿ ಪರಿಚಯಕ್ಕೆ ಬಂದ ರಸಗೊಬ್ಬರ ಹಾಗೂ ೮೦ ರದಶಕದಲ್ಲಿನ ಬೋರ್‌ವೆಲ್‌ಗಳ ದಾಳಿಯೇ ನೀರಿನ ಕೊರತೆಯ ಸೃಷ್ಟಿಗೆ ಮೂಲ ಕಾರಣ. ಹೇಗೆ ನೋಡಿದರೂ ಕರ್ನಾಟಕದಂಥ ಶ್ರೀಮಂತ ಮಳೆ ಸರಾಸರಿಯನ್ನು ಹೊಂದಿರುವ ರಾಜ್ಯಕ್ಕೆ ನೀರಿನ ಕೊರತೆ ಕಾಡಲು ಸಾಧ್ಯವೇ ಇಲ್ಲ. ನಮ್ಮಲ್ಲಿ ೨ ಸಾವಿರ ಮಿಲಿ ಮೀಟರ್ ನಷ್ಟು ಮಳೆ ಸರಾಸರಿಯಿದೆ. ಕೆರೆ, ಕಟ್ಟೆ, ಹೊಂಡ-ಹೂದಲುಗಳಲ್ಲಿ ಹಿಡಿದಿಟ್ಟುಕೊಂಡು ಬಳಸುವ ಅಪೂರ್ವ ಜ್ಞಾನವಿದೆ. ಅದಿಂದು ಆಧುನಿಕತೆಯ ಭ್ರಮೆಗೆ ಸಿಲುಕಿ ವಿಸ್ಮೃತಿಗೆ ಸರಿದ ಪರಿಣಾಮವೇ ರಾಜ್ಯವನ್ನು ನೀರು ಸಂಕಷ್ಟವಾಗಿ ಕಾಡುತ್ತಿದೆ...
ಸಾಮಾನ್ಯ ರೈತ ಕಂಡುಕೊಂಡಿರುವ ಈ ಸತ್ಯ ಸರಕಾರಕ್ಕೆ ಮನವರಿಕೆಯಾಗಿಲ್ಲ. ಬೆಳೆಗಳಲ್ಲಿನ ವೈವಿಧ್ಯದ ಜತೆಗೆ ಆಯಾ ಪ್ರದೇಶದ ಮಳೆ ಸರಾಸರಿ, ಭೂ ಲಕ್ಷಣಗಳಿಗನುಗುಣವಾಗಿ ಕೃಷಿ ನಿರ್ಧಾರಿತವಾಗುತ್ತಿದ್ದ ಕಾಲವದು. ಬಸಿ ನೀರು ಬಾವಿಗಳ ಮೂಲಕ ಬೆಳೆಗಳಿಗೆ ನೀರು ಪೂರೈಕೆಯಾಗುತ್ತಿತ್ತು. ನೆಲದಡಿಯ ನೀರು ಸುರಕ್ಷಿತವಾಗಿ ತನಿಯನ್ನಿಟ್ಟುಕೊಂಡು ಭೂಮಿಯನ್ನು ತಂಪಾಗಿರಿಸುತ್ತಿತ್ತು. ಮನೆಯಲ್ಲೇ ಕಸ ಕಡ್ಡಿಗಳನ್ನು ತಂದು ಸುರಿದು, ತಿಪ್ಪೆಯಲ್ಲರಳುವ ಸಮೃದ್ಧ ಗೊಬ್ಬರ ಬೆಳೆಗಳನ್ನು ವಿಷವಾಗಿಸುತ್ತಿರಲಿಲ್ಲ. ಗೊಬ್ಬರವೇ ಗಾರಾಗಿ ಭೂಮಿಯನ್ನು ಸುಡುತ್ತಿರಲಿಲ್ಲ. ಅದೆಲ್ಲಿಂದ ಬಂತೋ, ಆಹಾರ ಉತ್ಪಾದನೆಯಲ್ಲಿನ ಕ್ರಾಂತಿಯೆಂಬ ಹುಸಿ ಅಭಿವೃದ್ಧಿ ನಮ್ಮನ್ನು ಆವರಿಸಿಕೊಂಡು ಬಿಟ್ಟಿತು. ೧೯೬೪-೬೫ರಲ್ಲಿ ರಸಗೊಬ್ಬರದ ಪರಿಚಯವಾದ್ದೇ ತಡ, ರೈತರ ಬದುಕಿಗೆ ಕ್ಷಣಿಕ ರಂಗೇರತೊಡಗಿತು. ಸರಕಾರವೇ ಮುಂದೆ ನಿಂತು ರಸಗೊಬ್ಬರ ಪೂರೈಕೆಗೆ ಟೊಂಕ ಕಟ್ಟಿತು. ಅಕಾರಿಗಳು, ವಿಜ್ಞಾನಿಗಳು ಖಾಸಗಿ ಕಂಪನಿಗಳ ಪಿಆರ್‌ಒಗಳಂತೆ ಪ್ರಚಾರಕ್ಕಿಳಿದರು. ಒಂದೆರಡು ವರ್ಷ ಅಷ್ಟೇ. ಬೆಳೆಯೇನೋ ಹುಲುಸಾಗಿ ಬೆಳೆದು ನಿಂತಿತು. ಆದರೆ ಭೂಮಿ ತನ್ನ ಮೇಲ್ಮೈನ ಸತ್ವವನ್ನೇ ಕಳೆದುಕೊಂಡಿತ್ತು. ನಮ್ಮ ನೆಲದಲ್ಲಿದ್ದ ನಿರೋಧಕ ಶಕ್ತಿ ಕಾಣೆಯಾಯಿತು. ಕಂಡೂ ಕಾಣದಿದ್ದ ರೋಗಗಳು ಬೆಳೆಗಳು, ಅದರೊಂದಿಗೆ ಮಾನುಷ್ಯ ದೇಹಕ್ಕೂ ವ್ಯಾಪಿಸಿತು. ಇಂಥದಕ್ಕೇ ಕಾಯುತ್ತಿದ್ದ ಕಂಪನಿಗಳು ಕೀಟ ನಾಶಕಗಳ ದೊಡ್ಡ ದೊಡ್ಡ ಪಟ್ಟಿಯನ್ನೇ ಪೈಪೋಟಿಗೆ ಬಿದ್ದು ಬಿಡುಗಡೆ ಮಾಡಿದವು. ಮತ್ತೆ ಹುಚ್ಚು ಓಟ ಸಾಗಿದ್ದೇ ಸಾಗಿದ್ದು. ರಸಗೊಬ್ಬರ, ಕೀಟ ನಾಶಕಗಳ ಜಂಟಿ ಸವಾರಿಯ ಫಲವಾಗಿ ನಿರೀಕ್ಷಿಸಿದಂತೆ ಮಣ್ಣು ಕುಲಗೆಟ್ಟಿತು. ಈ ನೆಲ ನೀರಿಂಗುವ ಶಕ್ತಿಯನ್ನು ಸಂಪೂರ್ಣ ಕಳೆದುಕೊಂಡಿತ್ತು. ಅದೇ ಸಂದರ್ಭದಲ್ಲಿ ಚೂರು ಮೆಣಸಿನ ಕಾಯಿ ತಿಂದ ಬಾಯಿಯಂಥ ಸ್ಥಿತಿಗೆ ತಲುಪಿದ್ದ ನೆಲಕ್ಕೆ ಎಷ್ಟು ನೀರು ಸುರಿದರೂ ಸಾಲದ ಪರಿಸ್ಥಿತಿ ನಿರ್ಮಾಣವಾಯಿತು. ಕೃಷಿಯ ನೀರಿನ ಅಗತ್ಯ ಒಮ್ಮಿಂದೊಮ್ಮೆಲೆ ಮೂರು ಪಟ್ಟು ಹೆಚ್ಚಿತು... ದುರಂತದ ನಾಂದಿಯನ್ನು ಹೀರಾ ಬಣ್ಣಿಸುತ್ತ ಹೋಗುತ್ತಾರೆ.
ಉತ್ತರ ಕರ್ನಾಟಕದಂಥ ಒಣ ಭೂಮಿಯ ಮೇಲೆ ಬಿದ್ದ ರಾಸಾಯನಿಕಗಳು ಬಲು ಬೇಗನೆ ಇಲ್ಲಿನ ಮಣ್ಣಿನ ಸತ್ವವನ್ನು ಕಳೆದವು. ಬೀಳುತ್ತಿದ್ದ ಅಲ್ಪ ಮಳೆ ಸರಾಸರಿಯಲ್ಲೂ ಸುಸ್ಥಿರ ಕೃಷಿ ಸಾಧ್ಯವೇ ಇಲ್ಲದಂತಾಯಿತು. ಅದೇ ಸನ್ನಿವೇಶದಲ್ಲಿ ಸತತ ಬರ ಅಟಕಾಯಿಸಿಕೊಂಡದ್ದು. ೮೦ರ ದಶಕದ ಆರಂಭ ನೀರು-ಮಣ್ಣಿನ ಮಾಲಿಗೆ ಕರಾಳ ಸಮಯ. ಹನಿ ಕುಡಿಯುವ ನೀರಿಗೂ ಹಾಹಾಕಾರವೆದ್ದ ಸಂದರ್ಭದಲ್ಲಿ ಅನಿವಾರ್ಯತೆಯ ಹೆಸರಲ್ಲಿ ಪರಿಚಿತವಾದ ಬೋರ್‌ವೆಲ್‌ಗಳು ಇಲ್ಲಿನ ರೈತರಲ್ಲಿದ್ದ ಬರ ನಿರೋಧಕ ಜಾಣ್ಮೆಯನ್ನೇ ಕಸಿದುಕೊಂಡು ಬಿಟ್ಟವು. ವಿಶ್ವಸಂಸ್ಥೆಯೇನೋ ರಾಜ್ಯ ಸರಕಾರದ ಬರ ನಿರ್ವಹಣಾ ರೀತಿಯನ್ನು ಕೊಂಡಾಡಿತು. ಆದರೆ ಕುಡಿಯುವ ನೀರು ಪೂರೈಕೆಗೆಂದು ಕಾಲಿಟ್ಟ ಬೋರ್‌ವೆಲ್‌ಗಳು ಮುಂದೊಂದು ದಿನ ಇಲ್ಲಿನ ಖಜಾನೆಗೇ ಸಂಚಕಾರ ತರಬಹುದೆಂಬುದನ್ನು ಯಾರೂ ಊಹಿಸಿರಲಿಲ್ಲ. ಒಟ್ಟಾರೆ ಬೋರ್‌ವೆಲ್‌ಗಳಿಲ್ಲದೇ ಕೃಷಿಯೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಯಿತು. ನಾಲ್ಕೇ ವರ್ಷದಲ್ಲಿ ಅವೂ ಮಾತನಾಡುವುದನ್ನು ನಿಲ್ಲಸಿದವು. ರೈತನಿಗೆ ದಿಕ್ಕೇ ತೋಚದಂತಾಯಿತು. ರುದ್ರವಾಡಿಯೂ ಇದಕ್ಕೆ ಹೊರತಾಗಲಿಲ್ಲ. ಆ ಸನ್ನಿವೇಶವೇ ಮಳೆ ನೀರು ಸಂಗ್ರಹದ ತಮ್ಮ ಆಂದೋಲನಕ್ಕೆ ಪ್ರೇರಣೆಯಾಯಿತು ಎನ್ನುತ್ತಾರೆ ಹೀರಾ.
ಇಂದು ರುದ್ರವಾಡಿಯಲ್ಲೀ ಯಾವುದೇ ಬೋರ್‌ವೆಲ್‌ಗಳು ಬಳಕೆಯಲ್ಲಿಲ್ಲ. ೧ ಕೋಟಿ ಲೀಟರ್‌ಗೂ ಹೆಚ್ಚು ನೀರು ಇಡಿಯಾಗಿ ಗ್ರಾಮದ ಕೃಷಿ ಹೊಂಡಗಳಲ್ಲಿ ಇಂಗುತ್ತಿದೆ. ರೈತರು ರಸಗೊಬ್ಬರ, ಕೀಟ ನಾಶಕ, ಬೋರ್‌ವೆಲ್‌ಗಳ ಬಗ್ಗೆ ಮಾತನಾಡುವುದನ್ನೂ ನಿಲ್ಲಿಸಿದ್ದಾರೆ. ಮಳೆ ನೀರಿಂಗಿಸುವ ಹಬ್ಬ ಊರಲ್ಲಿ ಆಚರಣೆಗೊಳ್ಳುತ್ತಿದೆ.
ಇಷ್ಟಕ್ಕೆಲ್ಲ ಮುಹೂರ್ತ ಕೂಡಿ ಬಂದದ್ದು ಹೀರಾ ಅವರ ಮಗನ ಮದುವೆಯ ಮಂಟಪದಲ್ಲಿ. ತಾನು ಕಂಡುಕೊಂಡ ಸತ್ಯವನ್ನು ಹೀರಾ ತಮ್ಮ ಮಗನ ಮದುವೆಗೆ ಬಂದಿದ್ದ ನೆಂಟರಿಷ್ಟರ ಮುಂದೆ ಸಾರಿದರು. ಮದು ಮಕ್ಕಳ ತಲೆಯ ಮೇಲೆ ನಾಲ್ಕು ಅಕ್ಕಿ ಕಾಳು ಹಾಕಿ ಹೋಗಲು ಬಂದವರ ತಲೆಯಲ್ಲಿ ನೀರಿಂಗಿಸುವ ಜ್ಞಾನವನ್ನು ತುಂಬಿ ಕಳುಹಿಸಿದ ವಿಶಿಷ್ಟ ವ್ಯಕ್ತಿ ಹೀರಾ. ಅದು ೨೦೦೭ರ ಏಪ್ರಿಲ್ ೨೯ರ ರವಿವಾರ, ಮನೆಯಲ್ಲಿ ಮಗನ ಮದುವೆಯ ಆರತಕ್ಷತೆ ಸಮಾರಂಭವೆಂಬುದು ನೀರಿನ ವಿಚಾರ ಸಂಕಿರಣವಗಿ ಪರಿವರ್ತಿತವಾಯಿತು. ಹೀರಾ ತಾವೇ ಬರೆದ ‘ಹನಿ’ಗವನಗಳನ್ನೊಳಗೊಂಡ ನೀರೆಚ್ಚರದ ಪಾಟದ ಕರಪತ್ರಗಳನ್ನು ಅಲ್ಲಿ ಹಂಚಿದರು. ದೇ ಮೊದಲು. ಅಲ್ಲಿಂದ ಧಾರವಾಡ, ಗುಲ್ಬರ್ಗ ಕೃಷಿ ವಿಶ್ವ ವಿದ್ಯಾಲಯ, ಆಳಂದ ಕೃ ಷಿ ಇಲಾಖೆಯ ಮಾರ್ಗದರ್ಶನದಲ್ಲಿ ಇಡೀ ರಾಜ್ಯಾದ್ಯಂತ ಜಲ ಅಭಿಯಾನವನ್ನೇ ಆರಂಭಿಸಿದರು.
ಇಂದು ಆದಿನಾಥ್ ಹೀರಾ ಹತ್ತು ಹಲವು ಜಲಕನಸನ್ನು ಸರಕಾರದ ಮುಂದೆ ಇಟ್ಟಿದ್ದಾರೆ. ನೀರಶ್ರದ್ಧೆ ರೈತನ ಬದುಕಿನ ಭಾಗವಾಗಬೇಕೆಂದು ಪ್ರತಿಪಾದಿಸುತ್ತಾರೆ. ಸರಕಾರ ಕೃಷಿ ಪಂಡಿತ ಪ್ರಶಸ್ತಿ ಕೊಟ್ಟು ತನ್ನ ಕೆಲಸ ಮುಗಿಯಿತೆಂದು ಸುಮ್ಮನೆ ಕುಳಿತಿದೆ. ರಾಜ್ಯದ ಪ್ರತಿ ಗ್ರಾಮವೂ ಒಂದೊಂದು ರುದ್ರವಾಡಿಯಾಗಬೇಕು. ಪ್ರತಿ ಹಳ್ಳಿಯಲ್ಲೂ ಅಲ್ಲಿ ಬೀಳುವ ಮಳೆ ನೀರು ಅಲ್ಲೇ ಸಂಗ್ರಹಗೊಳ್ಳುವ ವ್ಯವಸ್ಥೆ ಬರಬೇಕು. ನೀರು ಗೊಬ್ಬರದ ವಿಚಾರದಲ್ಲಿ ಎಲ್ಲ ಹಳ್ಳಿಗಳೂ ಸ್ವಾವಲಂಬನೆ ಗಳಿಸಿದಾಗ ಮಾತ್ರ ಇಲ್ಲಿನ ಕೃಷಿ ಲಾಭದಾಯಕವಾಗಲು ಸಾಧ್ಯ. ಏಕೆಂದರೆ ೬೦ ವರ್ಷಗಳ ಸ್ವಾತಂತ್ರ್ಯೋತ್ತರ ಭಾರತವನ್ನು ಗಮನಿಸಿದಾಗ, ನಾವು ಈ ದೇಶವನ್ನು ಕೃಷಿ ಪ್ರಧಾನವೆಂದು ಬಣ್ಣಿಸಿಕೊಂಡು ಬರುತ್ತಿದ್ದೇವೆಯೇ ಹೊರತು, ನಿಜವಾಗಿ ಇಲ್ಲಿನ ಕೃಷಿಗೆ ಸಿಗಬೇಕಾದ ಪ್ರಾಧಾನ್ಯ ಸಿಕ್ಕಿಲ್ಲವೆಂಬ ಸತ್ಯ ಗೋಚರಿಸುತ್ತದೆ.
ಕೃಷಿ ಆದ್ಯತೆ ನೀಡುವುದೆಂದರೆ ಕೇವಲ ಬೃಹತ್ ನೀರಾವರಿ ಯೋಜನೆಗಳನ್ನು ರೂಪಿಸುವುದಲ್ಲ. ರಸಗೊಬ್ಬರ ಹಂಚಿಕೆಯ ಹೆಸರಲ್ಲಿ ರಾಜಕೀಯ ಮಾಡುವುದಲ್ಲ. ಎಲ್ಲಕ್ಕಿಂತ ಮೊದಲಿಗೆ ಈ ರಾಜ್ಯದ ಹಳ್ಳಿಗಳ ಪ್ರತೀ ಸರ್ವೆ ನಂಬರ್‌ನಲ್ಲಿ ಒಂದೊಂದು ಕೃಷಿ ಹೊಂಡ ನಿರ್ಮಾಣಗೊಳ್ಳಬೇಕು. ಎಲ್ಲೆಲ್ಲಿ ಬೋರ್‌ವೆಲ್‌ಗಳನ್ನು ಕೊರೆಯಲಾಗುತ್ತದೆಯೋ ಅಲ್ಲೆಲ್ಲ ನೀರಿಂಗಿಸುವ ಕಾರ್ಯ ಕಡ್ಡಾಯವಾಗಬೇಕು. ಬೋರ್‌ವಲ್‌ಗಳಿಗೆ ನಿರ್ಬಂಧ ಕಡ್ಡಾಯ ಪಾಲನೆಯಾಗಬೇಕು. ೨೦೦ರಿಂದ ೫೦೦ಎಕರೆ ವ್ಯಾಪ್ತಿಯಲ್ಲಿ ಒಂದು ಸುವ್ಯವಸ್ಥಿತ ಕೆರೆ ನಿರ್ಮಾಣಗೊಳ್ಳಬೇಕು. ಎರಡು ಸೀಮೆಯ ನಡುವೆ ಒಂದು ಕೆರೆ ಇರಲೇಬೇಕು. ಇಂಥ ಕೆರೆಗಳು ಸಮುದಾಯದ ಆಸ್ತಿಯಾಗಿ ನಿಲ್ಲಬೇಕು...ಇವೆಲ್ಲ ಬೇಕುಗಳನ್ನೂ ಕೃಷಿ ಬೇಡುತ್ತಿದೆ. ಅದು ಪೂರೈಕೆಯಾಗುವುದಾದರೆ ನಮ್ಮ ಕೃಷಿ ಪ್ರಧಾನವೆಂಬ ಹೆಗ್ಗಳಿಕೆಗೊಂದು ಅರ್ಥ ಬರುತ್ತದೆ.
ಇಷ್ಟಾದರೆ ಸಾಕು. ಸರಕಾರ ರೈತನಿಗಾಗಿ ಇನ್ನಾವ ಉಪಕಾರವನ್ನೂ ಮಾಡಬೇಕಿಲ್ಲ. ಉಚಿತ ಕರೆಂಟ್ ಕೊಡಬೇಕಿಲ್ಲ. ಸಬ್ಸಿಡಿಯ ಆಮಿಷ ಒಡ್ಡ ಬೇಕಿಲ್ಲ. ಗೊಬ್ಬರ- ಬಿತ್ತನೆ ಬೀಜದ ಹೆಸರಲ್ಲಿ ಹುಯಿಲೆಬ್ಬಿಸುವ ಅಗತ್ಯವಿಲ್ಲ. ಹೀರಾ ಹೇಳುವ ಮಾತು ನೂರಕ್ಕೆ ನೂರು ಸತ್ಯ. ಏಕೆಂದರೆ ಈ ಭೂಮಿಯಲ್ಲಿ ಇಂದು ಯುದ್ಧ, ಅಪಘಾತ, ನೈಸರ್ಗಿಕ ವಿಕೋಪ, ಇತ್ತೀಚೆಗೆ ಹೆಚ್ಚುತ್ತಿರುವ ಉಗ್ರರ ದಾಳಿ... ಹೀಗೆ ಎಲ್ಲ ಅವಘಡಗಳನ್ನು ಒಟ್ಟು ಮಾಡಿದರೂ ಪ್ರತಿ ದಿನ ಇವುಗಳಿಂದ ಸಾಯುವುದಕ್ಕಿಂತ ಹೆಚ್ಚು ಮಂದಿ ನೀರಿಲ್ಲದೇ ಅಥವಾ ಅಶುದ್ಧ ನೀರಿನಿಂದ ಸಾಯುತ್ತಿದ್ದಾರೆ. ಈಗ ಯೋಚಿಸಿ, ನೀರಿನ ಬಗ್ಗೆ ನಾವು ಎಷ್ಟೊಂದು ಕೇವಲವಾಗಿ ವರ್ತಿಸುತ್ತಿದ್ದೇವೆ ಅಲ್ಲವೇ ?
ಆದಿನಾಥ್ ಹೀರಾ ಬಳಿ ಇಂಥ ಹರಟೆಗೆ ಸಾಕಷ್ಟು ಅವಕಶವಿದೆ. ಅದಕ್ಕಾಗಿ ದೂರವಾಣಿ: ೯೯೭೨೯೯೭೨೬0.


ಲಾಸ್ಟ್’ಡ್ರಾಪ್: ಕೃಷಿ ಪ್ರಧಾನವಾದ ಈ ದೇಶದಲ್ಲಿ ಕೃಷಿಗಾಗಿಯೇ ಏಕಿಲ್ಲ ಪ್ರತ್ಯೇಕ ಬಜೆಟ್? ಅಂಥದೊಂದರ ಅಗತ್ಯ ಇಲ್ಲವೇ ? ಖಂಡಿತಾ ಇದೆ. ನಮ್ಮನ್ನಾಳುತ್ತಿರುವ ಪ್ರಜಾ ಪ್ರಭುಗಳೇ ತುಸು ಯೋಚಿಸಿ.

Friday, November 14, 2008

ಹೀರು ಗುಂಡಿಗಳಿಂದ ಹೀರೊ ಆದ ಹೀರಾ

‘ಮಳೆ ನೀರು ನಿಲ್ಲಿಸಿದರೆ ನಿತ್ಯೋತ್ಸವ, ಅದನು ಹರಿಯ ಬಿಟ್ಟರೆ ಮೃತ್ಯೋತ್ಸವ, ಬರಿ ಬರಡೋತ್ಸವ...’
ಹನಿವಚನ ಆ ರೈತನ ಬಾಯಿಂದ ಹೊರಬಿದ್ದಾಗ ಅಚ್ಚರಿಗಿಂತ ಆದದ್ದು ಸಂತಸ, ಪುಟಿದದ್ದು ಉತ್ಸಾಹ, ಕೆರಳಿದ್ದು ಆಸಕ್ತಿ. ಎದುರು ಕುಳಿತಿದ್ದ ಆ ಆಜಾನುಬಾಹು ಒಂದರ ಮೇಲೊಂದರಂತೆ ಹೇಳುತ್ತ ಹೋದರು. ಒಂದಕ್ಕಿಂತ ಒಂದು ಅರ್ಥಪೂರ್ಣ. ಇಂಥ ಹತ್ತಾರು ಚುಟುಕು, ಹನಿವಚನಗಳನ್ನು ಆಲಿಸುತ್ತ ಅನಿರ್ವಚನೀಯ ಆನಂದದ ಅನುಭವದಲ್ಲಿದ್ದಾಗಲೇ ಕುತೂಹಲದ ಎಳೆ, ಪ್ರಶ್ನೆಯ ರೂಪದಲ್ಲಿ ಹೊರಬಿತ್ತು.
‘ಯಾವ ಕವಿಯದ್ದಿವು ?’-ಅಪಹಾಸ್ಯ ಮಾಡುತ್ತಿದ್ದಂತೆನಿಸಿರಬೇಕು. ‘ಏ ಬಿಡ್ರಿ ಸರ, ಇವು ಕವಿಗೋಳದ್ದಲ್ಲರ್ರಿ, ನಂದಾ. ಹಿಂಗ ಗೆಪ್ನ ಬಂದಾಗಲ್ಲ ಬರಕೋತ ಕೂತಿರತೇನಿ. ಯಾಕ, ಚಲೋ ಅನ್ನಿಸ್ಲಿಲ್ಲೇನು ?’ ಮರು ಪ್ರಶ್ನೆ. ಅವು ಬರೀ ಸಾಲುಗಳಾಗಿರಲಿಲ್ಲ. ಅನುಭಾವದ ಅಭಿವ್ಯಕ್ತಿಯೇ ಹನಿವಚನಗಳ ರೂಪ ಪಡೆದಿದ್ದವು.
ಆಳಂದ ಸಮೀಪದ ರುದ್ರವಾಡಿಯ ಆದಿನಾಥ್ ಹೀರಾ ಅವರು ನಾಡಿನ ಎಲ್ಲ ಮೇಧಾವಿ ರೈತರ ಪ್ರತಿನಿಯಾಗಿ ಕಂಡರು ಆ ದಿನ. ಹೀರಾ ಅವರ ಪುಟ್ಟ ಊರಲ್ಲಿ ನಿಜಕ್ಕೂ ನಿತ್ಯೋತ್ಸವ. ಅಲ್ಲಿ ಬೀಳುವ ಪ್ರತಿ ಹನಿ ಮಳೆ ನೀರನ್ನೂ ಅವರು ಹಿಡಿದಿಟ್ಟುಕೊಳ್ಳುತ್ತಾರೆ. ಒಂದೇ ಒಂದು ಮಳೆ ಬಿದ್ದರೆ ಸಾಕು, ಅಲ್ಲಿನ ಮೂರು ಕೃಷಿ ಹೊಂಡಗಳು ಬರೋಬ್ಬರಿ ೧ ಕೋಟಿ ೫ ಸಾವಿರ ಲೀಟರ್ ನೀರನ್ನು ತಮ್ಮೊಡಲಲ್ಲಿ ತುಂಬಿಸಿಕೊಳ್ಳುತ್ತವೆ. ಆ ದಿನದಿಂದಲೇ ಅದು ಇಂಗಲು ಆರಂಭ. ವಾರೊಪ್ಪತ್ತಿನಲ್ಲಿ ಎಲ್ಲವೂ ನಿಧಾನಕ್ಕೆ ನೆಲದ ಕೆಳಕ್ಕೆ ಜಾರಿ ಅಂತರ್ಜಲವೆಂಬ ಸೇಫ್ ಲಾಕರ್‌ನಲ್ಲಿ ಭದ್ರವಾಗಿ ಬಿಡುತ್ತದೆ. ಹೆಚ್ಚುವರಿ ನೀರು ಮಾತ್ರ ಹೊಂಡದ ಮೇಲೆಯೇ ಅಲ್ಲಾಡಿ, ಅಲ್ಲಾಡಿ ತಿಳಿಗೊಂಡು ನಿಂತುಕೊಳ್ಳುತ್ತದೆ. ಮತ್ತೊಂದು ಮಳೆ ಬರುವವರೆಗೆ ಅದು ಬಳಕೆಗೆ ಸಂಪೂರ್ಣ ಉಚಿತ.
ರುದ್ರವಾಡಿಯೆಂದರೆ ಇಂದು ಕೃಷಿ ಹೊಂಡಗಳ ಗ್ರಾಮ. ಮಳೆ ನೀರು ಸಂಗ್ರಹಕ್ಕೆ ಮಾದರಿ ಅಲ್ಲಿನ ಕೃಷಿ, ನೀರಾವರಿ. ಅಷ್ಟೊಂದು ಸಮರ್ಥ ಉದಾಹರಣೆಯಾಗಿ ಗ್ರಾಮ ಬೆಳೆದು ನಿಂತದ್ದು ಹೀರಾರ ಕ್ರಿಯಾಶೀಲತೆ, ಇಚ್ಛಾಶಕ್ತಿ ಹಾಗೂ ನೀರ ಪ್ರೀತಿಯಿಂದಾಗಿ. ಇಂಥ ಗುಣಗಳೇ ಅವರಿಗೆ ೨೦೦೩ರಲ್ಲಿ ಕೃಷಿ ಪಂಡಿತ ಪ್ರಶಸ್ತಿಯನ್ನೂ ತಂದು ಕೊಟ್ಟಿವೆ. ಹಾಗೆಂದು ಅಂಥದ್ದೊಂದು ಪಾಂಡಿತ್ಯ ಆ ಪ್ರಗತಿಪರ ರೈತನಿಗೆ ಜನ್ಮದೊಂದಿಗೇ ಬಂದ ಬಳುವಳಿಯಲ್ಲ. ಯಾವುದೇ ವಿಶ್ವವಿದ್ಯಾಲಯದ ನಾಲ್ಕು ಗೋಡೆಗಳ ಮಧ್ಯೆ ಸಿಕ್ಕದ್ದೂ ಅಲ್ಲ. ಹೊಲವೆಂಬ ಪ್ರಯೋಗಶಾಲೆಯ ಮೂಸೆಯಲ್ಲಿ ನಿರಂತರ ಪರಿಶ್ರಮದಿಂದ ದಕ್ಕಿಸಿಕೊಂಡದ್ದು. ನೀರಿನ ಸಂಕಷ್ಟದಲ್ಲಿ ಬೆಂದ ಬಳಿಕ ನಶಿಸಿದ ಅಜ್ಞಾನದ ಕೊನೆಯಲ್ಲಿ ಗೋಚರಿಸಿದ್ದು. ಬರಡು ಭೂಮಿಯ ಬಿರುಕುಗಳನ್ನು ಬಿಡದೇ ತಡಕಾಡಿ ಉತ್ತರದ ರೂಪದಲ್ಲಿ ಕಂಡುಕೊಂಡದ್ದು.
ಪಾರಂಪರಿಕ ಕೃಷಿ ಬದುಕಿನ ಜಿವಂತಿಕೆಯ ಧನಾತ್ಮಕ ಅಂಶಗಳನ್ನು ಹೀರಾ, ಇಂದು ತಾವು ಮಾತ್ರ ಹೀರಿಕೊಂಡು ಕುಳಿತಿಲ್ಲ. ಸುತ್ತ ಮುತ್ತಲಿನ ಹತ್ತಾರು ರೈತರನ್ನೂ ಈ ನಿಟ್ಟಿನಲ್ಲಿ ಪ್ರೇರೇಪಿಸುತ್ತಿದ್ದಾರೆ. ನೀರಿಲ್ಲದೇ ನಲುಗಿದ ಯಾವುದೇ ಭೂಮಿಯ ನಟ್ಟ ನಡುವೆ ಹೋಗಿ ನಿಂತ ಸ್ಥಳೀಯರಿಗೆ ಬುದ್ಧಿ ಹೇಳುತ್ತಿದ್ದಾರೆ. ಸಭೆ- ಸಮಾರಂಭಗಳಿಗೆ ಹೋಗಿ ಕತೆ-ಕವನಗಳ ಮೂಲಕ ನೀರೆಚ್ಚರ ಮೂಡಿಸುತ್ತಿದ್ದಾರೆ. ವಿಶ್ವ ವಿದ್ಯಾಲಯಗಳಿಗೆ ಹೋಗಿ ಉಪನ್ಯಾಸ ನೀಡುವ ಮಟ್ಟಕ್ಕೆ ಬೆಳೆದಿದ್ದಾರೆ.
ಒಬ್ಬ ಸಾಮಾನ್ಯ ರೈತನಿಗೆ ಇಷ್ಟೆಲ್ಲ ಸಾಸಲಾದದ್ದು ಹೇಗೆ ಎಂದು ಪ್ರಶ್ನಿಸಿದರೆ, ಹೀರಾ ಅಷ್ಟೇ ಮುಗ್ಧವಾಗಿ ‘ಹಂಗೇನಿಲ್ಲ ಸರ, ಚಿಕ್ಕವ್ರ ಇದ್ದಾಗ ಸಾಲಿಗೂ ಹೋಗಲಾರದ ನೀರಿಗಾಗಿ ಎಷ್ಟ್ ಕಷ್ಟ ಬಿದ್ದೇವಿ ಅಂದ್ರ, ಅದಾ ಎಲ್ಲ ಕಲಿಶಿಕೊಟ್ಟು ಬಿಡ್ತು. ಹೊಲ-ಮನಿ ಉಳಿಶಿಕೊಂಬೋ ಜರೂರಿತ್ತಲ್ಲ, ಅದಕ್ಕಾಗಿ ಏನಾದರೊಂದು ಮಾಡಾಬೇಕಿತ್ತು. ಏನೇನಾರ ಮಾಡೋ ಬದ್ಲು, ಅದರಾಗ ಸೋಲು ಉಣ್ಣೊ ಬದ್ಲು, ಮಳಿ ನೀರು ಹಿಡಕೊಳ್ಳೋಕ ಹೊಂಟ್ವಿ. ತಂತಾನ ಹೊಲ-ಮನಿ ಅಷ್ಟೇ ಅಲ್ಲ ಇಡೀ ಊರೇ ನಲಿದಾಡಕ್ಕೆ ಹತ್ಯಿತು.’ ಎಂದುತ್ತರಿಸುತ್ತಾರೆ.
‘ಕತಿ ಹೇಳಕೊಂತ ಹೊಂಟ್ರ ಭಾಳ ಇದಾವು ಬಿಡ್ರೀ ಸಾಹೇಬ್ರ...’ ಎನ್ನುತ್ತಲೇ ಹೀರಾ ತಮ್ಮ ಯಶೋಗಾಥೆಯನ್ನು ಬಿಚ್ಚಿಟ್ಟರು. ಅದು ೧೯೭೨ರ ಸುಮಾರು. ಆಗಿನ್ನೂ ಅವರು ವಿದ್ಯಾರ್ಥಿ ದೆಸೆಯಲ್ಲಿದ್ದರು. ಗುಲ್ಬರ್ಗದ ಶರಣ ಬಸಪ್ಪ ದೇವಾಲಯ ಶಾಲೆಯಲ್ಲಿ ಓದುತ್ತಿದ್ದರು. ಆ ವರ್ಷ ಮಳೆಯೇ ಆಗಲಿಲ್ಲ. ಭೋಸ್ಗಾ ಕೆರೆ ಬತ್ತಿತು. ಗುಲ್ಬರ್ಗ ಕೆರೆಯೂ ಒಣಗಿತು. ಸುತ್ತಲೆಲ್ಲೂ ನೀರಿಲ್ಲದೇ ೧೫ ದಿನ ಶಾಲೆಗೇ ರಜೆ ಘೋಷಿಸಲಾಯಿತು. ಇದೇ ನೀರಿನ ಕೆಲಸಕ್ಕೆ ಪ್ರೇರಣೆ ಒದಗಿಸಿತು.
ಊರಿಗೆ (ರುದ್ರವಾಡಿ) ಹೋದರೆ ಅಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಕುಡಿಯಲೂ ನೀರಿಲ್ಲದ ಪರಿಸ್ಥಿತಿ. ರಾತ್ರಿ ಎರಡು ಗಂಟೆಗೆ ಊರ ಮುಂದಿನ ೪೦ ಅಡಿ ಆಳದ ಬಾವಿಯ ಮೆಟ್ಟಿಲಿಳಿದು ಕೆಳಗೆ ಹೋಗಿ ಅಲ್ಪ ಸ್ವಲ್ಪ ಸಂಗ್ರಹಗೊಂಡಿದ್ದ ನೀರನ್ನೇ ಲೋಟದಲ್ಲಿ ಕೆರೆದೂ, ಕೆರೆದು ಕೊಡಕ್ಕೆ ತುಂಬಿಸಿಕೊಂಡು ಬರಬೇಕಿತ್ತು. ಮಳೆ ನೀರು ಸಂಗ್ರಹದ ಯೋಚನೆ ಬಂದದ್ದೇ ಆಗ. ಮುಂದಿನ ಮಳೆಯ ಹೊತ್ತಿಗೆ ಹೊಲದ ಪಕ್ಕದಲ್ಲಿ ಹರಿಯುತ್ತಿದ್ದ ಹಳ್ಳಕ್ಕೆ ಒಡ್ಡು ಹಾಕಿ, ಹರಿದು ಹೋಗುತ್ತಿದ್ದ ಮಳೆ ನೀರನ್ನು ನಿಲ್ಲಿಸಿಕೊಳ್ಳಲಾಯಿತು.
ನೀರಿನ ಇಂಥ ಪರದಾಟ ಗುಲ್ಬರ್ಗದ ಶಾಲೆಗೆ ಶರಣು ಹೊಡೆಸಿತು. ಊರಿನ ಪಕ್ಕದ ಹೊದ್ಲೂರು ಶಾಲೆಗೆ ಸೇರಿದ್ದಾಯಿತು. ಪ್ರತಿದಿನ ಶಾಲೆ ಬಿಟ್ಟು ಹೊಲದ ಮೇಲೆಯೇ ಹಾದು ಬರಬೇಕಿತ್ತು. ಆಗೆಲ್ಲ ಕಣ್ಣಿಗೆ ಕತ್ತಲು ಕವಿಯುವವರೆಗೂ ಕಲ್ಲು ಮಣ್ಣು ತಂದು ಹಳ್ಳದ ಒಡ್ಡು ಎತ್ತರಿಸುವ ಕಾರ್ಯ ಮಾಡಲಾಗುತ್ತಿತ್ತು. ಇಲ್ಲಿ ನಿಂತದ್ದು ಬಸಿ ನೀರಾಗಿ ಬಾವಿಗೆ ಬಂದಿಳಿದಾಗ ಸಂತಸವೋ ಸಂತಸ.
೮೦ರ ದಶಕಕ್ಕೆ ಬರುವಷ್ಟರಲ್ಲಿ ಓದು ನಿಲ್ಲಿಸಿ ಸಂಪೂರ್ಣ ಕೃಷಿಯಲ್ಲಿ ತೊಡಗಿಸಿಕೊಂಡಾಗಿತ್ತು. ೮೭ರವರೆಗೂ ಎಲ್ಲವೂ ಸುಸೂತ್ರವಾಗಿ ಸಾಗಿತ್ತು. ೧೯ ಎಕರೆಯ ಜಮೀನಿನಲ್ಲಿ ಮೊದಲೇ ಇದ್ದ ಬಾವಿಯನ್ನು ಇನ್ನಷ್ಟು ಆಳ ಮಾಡಿ ಹೇಗೊ ಬೆಳೆಗಳಿಗೆ ನೀರು ಒದಗಿಸಲಾಗುತ್ತಿತ್ತು. ಆ ವರ್ಷ ಮತ್ತೆ ಅಟಕಾಯಿಸಿಕೊಂಡ ಬರ ‘ಬೋರ್‌ವೆಲ್ ಜಮಾನ’ಕ್ಕೆ ರೈತರನ್ನು ಕೊಂಡೊಯ್ದಿತ್ತು. ಹೀರಾರ ಪಕ್ಕದ ಜಮೀನಿನವ ೩೦೦ ಅಡಿಯ ಬೋರ್ ಕೊರೆಸಿದ್ದೇ ತಡ ಇದ್ದೊಂದು ಬಾವಿಯೂ ಬತ್ತಿತು. ಅನಿವಾರ್ಯವಾಗಿ ಹೀರಾ ಸಹ ಬೋರ್‌ವೆಲ್‌ನ ಮೊರೆ ಹೋದರು. ಅಂತರ್ಜಲ ಹೆಚ್ಚಳ ಉಪಾಯ ಕಂಡದ್ದೇ ಆಗ. ನಾಲೆ ಮಾಡಿ ಮಳೆ ನೀರನ್ನು ಬೋರ್‌ಗೆ ಹರಿಸಲಾಯಿತು. ಆದರೆ ಇದೂ ಹೆಚ್ಚು ದಿನ ಬಾಳಲಿಲ್ಲ. ಮುಂದಿನ ಬೇಸಿಗೆ ಹೊತ್ತಿಗೆ ಪಕ್ಕದ ಬೋರ್‌ವೆಲ್‌ನ ಆಳ ಹೆಚ್ಚಿಸಿದಾಗ ಹೀರಾರ ಬೋರ್‌ವೆಲ್‌ನೊಳಕ್ಕೆ ಇಳಿಯುತ್ತಿದ್ದ ನೀರು ಒಳಗೊಳಗೇ ಪಕ್ಕದ ಜಮೀನಿಗೆ ಹರಿಯತೊಡಗಿತು. ಇವರದ್ದು ಒಣಗಿ ನಿಂತಿತು.
ಅಕ್ಕ ಪಕ್ಕದಲ್ಲಿ ಅಸ್ತಿತ್ವದಲ್ಲಿದ್ದ ಎರಡು ಬೋರ್‌ವೆಲ್‌ಗಳ ನಡುವೆ ಮತ್ತೊಂದು ಬೋರ್ ಕೊರೆಸಿ ಕೆಳಗಿನ ಪದರದಲ್ಲಿದ್ದ ಬಂಡೆಯನ್ನು ಸೋಟಕಗಳಿಂದ ಸಿಡಿಸಲಾಯಿತು.ನೀರೇನೋ ಸಿಕ್ಕಿತು. ಆದರೆ ಇಂಥ ಸಾಹಸಗಳು ಶಾಶ್ವತವಲ್ಲ ಎಂಬುದನ್ನು ಮನಗಾಣಲು ಹೆಚ್ಚು ದಿನ ಹಿಡಿಯಲಿಲ್ಲ. ಏಕೆಂದರೆ ಸುತ್ತ ಮುತ್ತಲೆಲ್ಲ ಬೋರ್‌ಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ನೀರ ಖಜಾನೆಯನ್ನು ಬರಿದು ಮಾಡುವವರ ಸಂಖ್ಯೆ ಹೆಚ್ಚಿತೇ ವಿನಃ ಅದನ್ನು ತುಂಬುವವರಿರಲಿಲ್ಲ. ಅದೇ ವೇಳೆ ಮಳೆಗಾಲದಲ್ಲಿ ಊರ ಮುಂದಿನ ಹಳ್ಳದಲ್ಲಿ ದಂಡಿಯಾಗಿ ಹರಿದು ವ್ಯರ್ಥವಾಗುತ್ತಿತ್ತು.
ಅದು ೨೦೦೨ರ ಸುಮಾರು. ಶಾಲಾ ದಿನಗಳಲ್ಲಿ ಕಂಡಿದ್ದ ನೀರಿಂಗಿಸುವ ಕನಸು ಮತ್ತೆ ನೆನಪಾಯಿತು. ಒಡ್ಡು, ಇಂಗು ಗುಂಡಿಗಳಿಂದ ಮಾತ್ರ ಸಮಸ್ಯೆಗೆ ಕೊನೆ ಹಾಡಲು ಸಾಧ್ಯ ಎಂದು ನಿಶ್ಚಯಿಸಿದ್ದವರಿಗೆ ನೆರವಾದವರು ಜಲಾನಯನ ಅಭಿವೃದ್ಧಿ ಅಕಾರಿ ಮಲ್ಲಾರೆಡ್ಡಿ. ಅದಾಗಲೇ ತಂದೆಯ ಕಾಲದಿಂದ ಅಸ್ತಿತ್ವದಲ್ಲಿದ್ದ ಚೆಕ್ ಡ್ಯಾಮ್ ಸುಭದ್ರವಾಗಿದ್ದುದು ಕಣ್ಣ ಮುಂದಿತ್ತು. ಇಂಥವೇ ಕೃಷಿ ಹೊಂಡಗಳನ್ನು ಮತ್ತಷ್ಟು ಮಾಡಬಾರದೇಕೆ ಎನಿಸಿತು. ೧೫ ಅಡಿ ಅಗಲ, ೮ ಅಡಿ ಆಳ, ೩೦ ಅಡಿಯಷ್ಟು ಉದ್ದದ ಪುಟ್ಟ ಕೆರೆ ಜಮೀನಿನಲ್ಲಿ ನಿರ್ಮಾಣವಾಯಿತು. ಅದರ ಫಲ ಅಕಾರಿಗಳ ಕಣ್ಣನ್ನೂ ತೆರೆಸಿತು. ಗ್ರಾಮಕ್ಕೆ ೩೦ ಕೃಷಿ ಹೊಂಡಗಳು, ೩ ಕೆರೆ, ೨ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಸರಕಾರದಿಂದ ಮಂಜೂರಾತಿ ದೊರೆಯಿತು. ಇಡೀ ಊರವರನ್ನು ಹೀರುಗುಂಡಿಗಳ ನಿರ್ಮಾಣಕ್ಕೆ ಹೀರಾ ಪ್ರೇರೇಪಿಸಿದರು. ಇದೊಂದು ಆಂದೋಲನವಾಯಿತು.
ನೋಡ ನೋಡುತ್ತಿದ್ದಂತೆ ಇಡೀ ಗ್ರಾಮ ಕೃಷಿ ಹೊಂಡಗಳಿಂದಾವೃತವಾಯಿತು. ಮಳೆ ನೀರು ಏನೇ ಹಠ ಮಾಡಿದರೂ ರುದ್ರವಾಡಿಯವರ ಕಾವಲನ್ನು ತಪ್ಪಿಸಿಕೊಂಡು ಹೊರ ಹೋಗದಂತಾಯಿತು. ಕುಳಿತಲ್ಲಿ, ನಿಂತಲ್ಲಿ, ನಡೆದಲ್ಲಿ, ನೆರೆದಲ್ಲಿ ನೀರಿಂಗಿಸುವುದು ಹೇಗೆಂಬುದರ ಬಗ್ಗೆ ಹೀರಾ ಚರ್ಚಿಸಲಾರಂಭಿಸಿದರು. ಓಡಿ ಹೋಗುವ ಮಳೆ ನೀರನ್ನು ಕಟ್ಟಿ ಹಾಕಿ ಇಂಗಿಸಿಕೊಳ್ಳುವುದು ರೈತರ ಸ್ವಭಾವದಂತಾಯಿತು. ರುದ್ರವಾಡಿಯಲ್ಲಿಂದು ಮಳೆ ಸುರಿದರೆ ಸಾಕು. ಅದೊಂದು ಹಬ್ಬ, ಕೋಟಿ ಕೋಟಿ ಲೀಟರ್ ನೀರು ಅಂತರ್ಜಲ ಖಜಾನೆಗೆ ನೇರವಾಗಿ ಹೋಗಿ ಡೆಪಾಸಿಟ್ ಆಗುತ್ತದೆ. ಅದರ ಬಡ್ಡಿಯಲ್ಲೇ ಬೇಸಿಗೆಯನ್ನು ಕಳೆಯುತ್ತಿದ್ದಾರೆ ಜನ. ಯಶಸ್ಸಿನ ಕದ ತೆರೆಯುತ್ತ ಹೋದಂತೆಲ್ಲ ಹೀರಾ ಹೀರೊ ಆದರು. ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂತು. ಖ್ಯಾತಿಯನ್ನು ಪ್ರಯೋಗ, ಪ್ರಯತ್ನಗಳ ಛಾತಿಯಾಗಿ ಪರಿವರ್ತಿಸಿಕೊಂಡರವರು. ರುದ್ರವಾಡಿಯಲ್ಲಿಂದು ಬರದ ರುದ್ರತಾಂಡವ ಇತಿಹಾಸದ ಕತೆಯಾಗಿಯಷ್ಟೇ ಉಳಿದಿದೆ. ಅಂಥ ನೆನಪು ಸಹ ಮಾಸಿ ಹೋಗಲು ಹೆಚ್ಚು ದಿನವಿಲ್ಲ ಎನ್ನುತ್ತಾರೆ ಅವರು ವಿಶ್ವಾಸದಿಂದ.


‘ಲಾಸ್ಟ್’ಡ್ರಾಪ್: ರೋಗಿಯ ನರಕ್ಕೇ ನೇರವಾಗಿ ಔಷಧವನ್ನು ಸಲೈನ್ ಮಾಡಿದರೆ ಬೇಗ ಪರಿಣಾಮ ಸಾಧ್ಯ. ಅಂತೆಯೇ ಆಳ ಗುಂಡಿಗಳ ಮೂಲಕ ಅಂತರ್ಜಲಕ್ಕೆ ನೀರನ್ನು ನೇರವಾಗಿ ಕಳುಹಿಸಬೇಕು. ಆಗ ಮಾತ್ರ ಬರದ ರೋಗ ಬೇಗ ಗುಣವಾದೀತು-ಹೀರಾ ಬಳಿ ಇಂಥ ಅದೆಷ್ಟೋ ನೀರ ನುಡಿ ರತ್ನಗಳಿವೆ.

Wednesday, November 12, 2008

ನೀರು-ಮಣ್ಣು , ಕುಲಗೆಡುತ್ತಿರುವ ಧರಣಿ ಮೇಲಿನ ಹೊನ್ನು

‘ಕ್ಷಮಯಾ ಧರಿತ್ರಿ’ ಭೂಮಿಯನ್ನು ಮನದುಂಬಿ ಹೀಗೆ ಸ್ಮೃತಿ ಪುರಾಣಗಳಲ್ಲಿ ಮಾತೃತ್ವದ ಸ್ಥಾನಕ್ಕೇರಿಸಿದ್ದೇವೆ ನಾವು ಭಾರತೀಯರು. ಆದರೆ, ಭೂ ಮಾತೆಯ ಅಂಥ ಕ್ಷಮಾ ಗುಣವೇ ಇಂದು ಆಕೆಯನ್ನು ದೌರ್ಜನ್ಯ ಸಂಕೋಲೆಯಲ್ಲಿ ಬಿಗಿದಿಟ್ಟಿದೆ.
ನಿಜ, ನಮ್ಮ ಪಾಲಿಗೆ ಭೂಮಿಯಂತಲೇ ಅಲ್ಲ; ನಮ್ಮ ಸುತ್ತಮುತ್ತಲಿನ ಪರಿಸರವೆಲ್ಲವೂ ದೈವಸ್ವರೂಪಿಯೇ. ನೆಲ, ಜಲ, ಗಾಳಿ, ಆಕಾಶ ಹೀಗೆ ಒಂದೊಂದಕ್ಕೆ ಒಂದೊಂದು ಪರಿಕಲ್ಪನೆಯನ್ನು ಆರೋಪಿಸಿ, ಸಂರಕ್ಷಿಸಿಕೊಂಡು ಬಂದವರು ನಾವು. ಹೀಗಾಗಿ ಪ್ರಕೃತಿಯ ವ್ಯಾಪಾರವೆಲ್ಲವೂ ನಮಗೆ ದೈವಲೀಲೆಯಾಗಿಯೇ ಕಂಡಿದೆ.
ಆದರೆ, ನೀರು ಭೂಮಿಯಂಥ ನೈಸರ್ಗಿಕ ಸಂಪನ್ಮೂಲ ಬಳಕೆಯೆಂಬುದು ಹಿಂದಿನಂತೆ ಕೇವಲ ಸಾಮಾಜಿಕ ಅಥವಾ ಸಾಮುದಾಯಿಕ ವಿಷಯವಾಗಿ ಉಳಿದಿಲ್ಲ. ಬದಲಾಗಿ ಅದಿಂದು ರಾಜಕೀಯ, ಆರ್ಥಿಕ ಇನ್ನೂ ಹೆಚ್ಚಾಗಿ ರಾಜತಾಂತ್ರಿಕ ವಿಷಯವಾಗಿ ಹೊರಹೊಮ್ಮಿದೆ. ಇದೇಕೆ ಹೀಗೆಂದು ಪ್ರಶ್ನಿಸಿಕೊಂಡರೆ ಮತ್ತದೇ ಬದಲಾದ ಭಾರತದ ಚಿತ್ರಣ ಕಣ್ಣ ಮುಂದೆ ಬಂದು ನಿಲ್ಲುತ್ತದೆ.
೧೯೪೭ರಲ್ಲಿ ಭಾರತದ ಜನಸಂಖ್ಯೆ ಸರಿಸುಮಾರು ೩೫ ಕೋಟಿಯಷ್ಟಿತ್ತು. ಇಂದು ಅದರ ಮೂರೂವರೆ ಪಟ್ಟು ಹೆಚ್ಚಳವಾಗಿದೆ. ಆದರೆ ನಿಸರ್ಗ ಸಂಪನ್ಮೂಲಗಳ ಬಳಕೆ ಪ್ರಮಾಣ ಐವತ್ತು ವರ್ಷಗಳಲ್ಲಿ ಏನಿಲ್ಲವೆಂದರೂ ಆಗಿನಕ್ಕಿಂತ ಹತ್ತು ಪಟ್ಟು ಹೆಚ್ಚಿದೆ. ಸಂಪನ್ಮೂಲ ಮಾತ್ರ ಹಿಮ್ಮುಖವಾಗಿ ಸಾಗಿದೆ. ಇನ್ನು ಕಾಡಿನ ವಿಚಾರಕ್ಕೆ ಬಂದರೆ ಅತ್ಯಂತ ರೋಚಕ ವಿಷಯ ಬಯಲಿಗೆ ಬರುತ್ತದೆ. ಮನುಕುಲವೆಂಬುದರ ಪರಿಣಾಮ ಅದು ಅತಿವೃಷ್ಟಿಯೇ ಇರಲಿ, ಅನಾವೃಷ್ಟಿಯೇ ಇರಲಿ ಯಾವುದನ್ನೂ ನಾವು ದೂರುತ್ತಿರಲಿಲ್ಲ. ಅದನ್ನೊಂದು ಸಂಕಷ್ಟವನ್ನಾಗಿ ಮರುಗುತ್ತಿರಲಿಲ್ಲ. ಇದರ ಜತೆಗೆ ಪ್ರಾಕೃತಿಕ ವ್ಯವಸ್ಥೆಯ ಸಂರಕ್ಷಣೆಯೆಂಬುದನ್ನು ನಾವು ದಿನಚರಿಯ ಭಾಗವಾಗಿ ಪರಿಗಣಿಸುವ ಪರಿಪಾಠ ಬೆಳೆಸುತ್ತಿದ್ದೆವು.
ಭಾವನಾತ್ಮಕ ವಿಚಾರಗಳೇನೆ ಇರಲಿ, ನೀರು-ಮಣ್ಣಿನ ವಿಚಾರದಲ್ಲಿ ಭಾರತದ ಇಂದಿನ ವಾಸ್ತವ ಮಾತ್ರ ಅತ್ಯಂತ ಕರಾಳ ಚಿತ್ರಣವನ್ನು ಕಟ್ಟಿಕೊಡುತ್ತದೆ. ಬದಲಾಗಿರುವ ನಗರಗಳು, ಹೆಚ್ಚಿರುವ ಕೈಗಾರಿಕೆ, ಕೃಷಿ ಪ್ರದೇಶಗಳು, ಪರಿಣಾಮವಾಗಿ ಉದ್ಭವಿಸಿರುವ ಮೂಲಭೂತ ಸೌಲಭ್ಯಗಳ ಕೊರತೆ...ಪಟ್ಟಿ ಬೆಳೆಯುತ್ತದೆ. ಇದರ ಪರಿಣಾಮ ? ಭೂಮಿ ಹುಟ್ಟಿದಾಗಿನಿಂದ ೧೯೧೭ರವರೆಗೆ ಯಾವ ಪ್ರಮಾಣದ ಕಾಡು ನಾಶವಾಗಿತ್ತೋ ಅದರ ಎರಡು ಪಟ್ಟು ಕಾಡು ನಂತರದ ಕೇವಲ ೫೦ ವರ್ಷಗಳಲ್ಲಿ ನಾಶವಾಗಿದೆ. ಹಾಗಾದರೆ ಈ ಪ್ರಮಾಣದಲ್ಲಿ ಸಂಪನ್ಮೂಲದ ನಾಶಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ದೊರಕುವ ಉತ್ತರ ಇನ್ನೂ ಆಶ್ಚರ್ಯ ಹುಟ್ಟುತ್ತದೆ.
ಈ ಭೂಮಿಯ ಮೇಲೆ ನಡೆದ ಎರಡು ಮಹಾ ಯುದ್ಧಗಳು ಜಗತ್ತಿನ ಚಿತ್ರಣವನ್ನೇ ಬದಲಿಸಿದವು. ಈ ಸಂದರ್ಭದಲ್ಲಿ ಕಬ್ಬಿಣ, ಕೈಗಾರಿಕೆ ನಿರೀಕ್ಷೆ ಮೀರಿ ಬೆಳೆಯಿತು. ಆಯುಧಗಳಿಗಾಗಿ ಕಬ್ಬಿಣ ಮತ್ತು ಮರದ ಬಳಕೆಯೂ ಹೆಚ್ಚಿತು. ಇದು ಕಾಡುನಾಶಕ್ಕೆ ಮೂಲವಾಯಿತು. ಇಲ್ಲಿಂದಲೇ ಹೆಚ್ಚಿತು ನೈಸರ್ಗಿಕ ಸಂಪನ್ಮೂಲಗಳ ಕೊರತೆಯೂ ಮನುಷ್ಯನನ್ನು ಕಾಡಲಾರಂಭಿಸಿತು. ಮಾತ್ರವಲ್ಲ, ಸಮುದಾಯದ ಸಂಪನ್ಮೂಲವಾಗಿದ್ದ ನೀರಿನಂಥ ವಿಷಯ ರಾಜಕೀಯ, ಆರ್ಥಿಕ ಮಹತ್ವವನ್ನು ಪಡೆದುಕೊಂಡಿತು.
ಇಂಥದೊಂದು ಸಂದರ್ಭಕ್ಕಾಗಿಯೇ ಕಾಯುತ್ತಿದ್ದ ವಸಾಹತುಶಾಹಿಗಳು ನಮ್ಮ ನೀರಾವರಿ ಹಾಗೂ ಕೃಷಿ ಪದ್ಧತಿಯನ್ನೇ ಬದಲಿಸಿಬಿಟ್ಟರು. ಇಂದು ‘ಸಾರ್ವಜನಿಕ ನಲ್ಲಿ’ ಅಥವಾ ಸಾರ್ವಜನಿಕ ನೀರು ಪೂರೈಕೆಯೆಂಬ ಕಲ್ಪನೆಯೇ ಖಾಸಗಿಯವರ ದೃಷ್ಟಿಯಲ್ಲಿ ‘ನೀರಿನ ಪೋಲು’ ಎನಿಸಿಕೊಂಡಿರುವುದು ವಿಪರ್ಯಾಸ.
ನಮ್ಮ ಇಂಥ ಭಾವನೆ ಕೂಡ ಅಮೆರಿಕದಂಥ ದೇಶಗಳ ಹುನ್ನಾರದ ಭಾಗವೇ. ಏಕೆಂದರೆ ಅಮೆರಿಕ ಮಾತನಾಡುತ್ತಿರುವುದು ‘ಆಹಾರ ಭದ್ರತೆ’ಯ ಬಗೆಗೇ ವಿನಃ ಬೇರೆ ದೇಶಗಳ ‘ಆಹಾರ ಸಾರ್ವಭೌಮತೆ’ ಅದಕ್ಕೆ ಬೇಕಿಲ್ಲ. ಕೃಷಿಯೆಂತಲೇ ಅಲ್ಲ, ಯಾವುದೇ ಒಂದು ದೇಶ ನಿರ್ದಿಷ್ಟ ವಿಷಯದಲ್ಲಿ ಸಾರ್ವಭೌಮತ್ವ ಸಾಸುವುದು ಅಮೆರಿಕಕ್ಕೆ ಬೇಕಿಲ್ಲ. ಹೀಗಾಗಿ ವಿಶ್ವಬ್ಯಾಂಕ್, ವಿಶ್ವವ್ಯಾಪಾರ ಸಂಸ್ಥೆಗಳಂಥ ಏಜೆಂಟರ ಮೂಲಕ ಸಾಲ ಹಂಚುವ ಅದು ಸಾಲ ಪಡೆದ ದೇಶಗಳನ್ನು ಜಾಗತೀಕರಣದ ‘ತದ್ರೂಪಿ ತಯಾರಿಕಾ ಉಪಕರಣ’ವಾಗಿ ಮಾರ್ಪಡಿಸುತ್ತದೆ. ಇಂಥ ತದ್ರೂಪಿ ವೇದಿಕೆಯೇ ನೀರಿನ ಖಾಸಗೀಕರಣ. ಬಹುರಾಷ್ಟ್ರೀಯ ಕಂಪನಿಗಳು ನೇರವಾಗಿ ನಮ್ಮ ಅಂತರ್ಜಲಕ್ಕೆ ಬೋರ್‌ವೆಲ್‌ಗಳ ಹೆಸರಲ್ಲಿ ಕನ್ನ ಕೊರೆದು ದೋಚುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಇತ್ತೀಚಿನ ದಿನಗಳಲ್ಲಿ ‘ಅಂತರ್ಜಲ ಬತ್ತಿ ಹೋಗುತ್ತಿದೆ’ ಎಂಬ ಕೂಗು ಮಾಮೂಲು ಎಂಬಂತಾಗಿದೆ. ಏಕಕಾಲಕ್ಕೆ ಜಗತ್ತಿನೆಲ್ಲೆಡೆ ಎದ್ದ ನೀರಿಗಾಗಿನ ಹಾಹಾ ಕಾರಕ್ಕೆ ಉತ್ತರವಾಗಿ ಕಂಡದ್ದು ಭೂಗರ್ಭದೊಳಗೆ ಅಡಗಿ ಕುಳಿತಿದ್ದ ಈ ಗುಪ್ತನಿ. ಅದನ್ನು ಹುಡುಕಿದ್ದೂ ಆಯಿತು. ಅದರ ಗುಂಟ ಕನ್ನ ಕೊರೆದದ್ದೂ ಆಯಿತು. ಕೆಲವೆಡೆ ಬರಿದಾಗಿಸಿದ್ದೂ ಆಯಿತು. ನಂತರದ ಹೊಸ ಕೂಗು ‘ಅಂತರ್ಜಲ ಬತ್ತಿ ಹೋಗುತ್ತಿದೆ....
ನಿಜವಾಗಿ ಈ ನೀರು ಎಂಥದ್ದು, ಎಲ್ಲಿಂದ ಬಂತು. ಯಾಕೆ ಅಲ್ಲಿ ಅಡಗಿತ್ತು ? ಎಂಬೆಲ್ಲ ಅಂಶಗಳ ಅರಿವಿದ್ದರೆ ಖಂಡಿತಾ ನಾವಿಂದು ಈ ಪ್ರಮಾಣದಲ್ಲಿ ಅದನ್ನು ಬರಿದಾಗಿಸುತ್ತಿರಲಿಲ್ಲವೇನೊ ! ಈ ಜಗತ್ತಿನ ಎಲ್ಲ ನೀರಿನ ಮೂಲಾಧಾರವೂ ಮಳೆಯೇ ಎಂಬುದು ಬಹುಮುಖ್ಯ ಸಂಗತಿ. ನೆಲದೊಳಗೆ ಬಹುಕಾಲದಿಂದ ಅಡಗಿ ಕುಳಿತ ಅಂತರ್ಜಲಕ್ಕೂ ಕೂಡ ಇದೇ ಮಳೆಯೇ ಮೂಲ.
ಸಾಮಾನ್ಯವಾಗಿ, ಬಾವಿಹೊಂಡ ತೋಡಿದಾಗ ‘ಜಲ ಸಿಕ್ಕಿತು’, ‘ಒರತೆ ಕಂಡಿತು’ ಎನ್ನುವುದನ್ನು ಕೇಳಿದ್ದೇವೆ. ಹೀಗೆ ಸಿಕ್ಕುವುದೇ ವಿಶ್ರಾಂತಿಗೆ ಕುಳಿತಿದ್ದ ಜಲ. ಎಷ್ಟೋ ಜನರ ಕಲ್ಪನೆಯಲ್ಲಿ ಇದೇ ಅಂತರ್ಜಲ ಎಂಬುದಿದೆ. ನಿಜವಾಗಿ ಇದು ಅಂತರ್ಜಲವಲ್ಲ. ಭೂಗರ್ಭ ಶಾಸ್ತ್ರಜ್ಞ ಸುಭಾಷ್‌ಚಂದ್ರ ಅವರು ವಿವರಿಸುವಂತೆ ಇದು ಪೂರಕ ಜಲ ಸಂಪನ್ಮೂಲ. ಅಂದರೆ ಡೈನಾಮಿಕ್ ರಿಸೋರ್ಸ್.
ಭೂಮಿಯ ಮೇಲ್ಪದರದ ೨೦೦ ಅಡಿಯ ಆಸು ಪಾಸಿನಲ್ಲಿ ನಮಗೆ ಸಿಗುವ ಜಲವೆಲ್ಲವೂ ಇಂಥ ಪೂರಕ ಸಂಪನ್ಮೂಲವೇ. ಇದು ಒಂದೇ ತೆರನಾಗಿ ಇರುವುದಿಲ್ಲ. ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ, ನೀರಿಳಿ ಯುವ ಮಟ್ಟವನ್ನು ಅವಲಂಬಿಸಿ ಬದಲಾಗುತ್ತಿರುತ್ತದೆ.
ನಿಜವಾದ ಅಂತರ್ಜಲವೆಂದರೆ ಅದು "ಸ್ಥಿರ’ ಅಥವಾ ‘ಶಾಶ್ವತ’ ಸಂಪನ್ಮೂಲ ಅಥವಾ ಸ್ಟ್ಯಾಟಿಕ್ ರಿಸೋರ್ಸ್. ಡೈನಾಮಿಕ್ ವಲಯವನ್ನು ದಾಟಿ ಕಷ್ಟಪಟ್ಟು, ಸಂದಿ ಗೊಂದಿಗಳನ್ನು ತದಡಿ, ತಡೆಕಾಡಿ ಕೆಳಗಿಳಿಯುವ ನೀರು ಭೂಮಿಯ ಮೇಲ್ಮೈನಿಂದ ಸಾವಿರಾರು ಅಡಿಗಳನ್ನು ದಾಟಿ ತನ್ನ ಇರುವನ್ನು ಕಂಡುಕೊಂಡಿರುತ್ತದೆ. ಪೂರಕ ಜಲವೆಂದರೆ ಕೃತಕವಾಗಿ ಮಾನವ ನಿರ್ಮಿತ ಹೊಂಡ, ತಗ್ಗುಗಳಲ್ಲಿ ಸಂಗ್ರಹಗೊಂಡದ್ದೂ ಆಗಬಹುದು. ಆದರೆ, ಸ್ಥಿರ ಜಲ ಸಂಪನ್ಮೂಲ ಪ್ರಕೃತಿಯ ಪರಮೋಚ್ಚ ಶಕ್ತಿಯ ಬಳಕೆಯ ಫಲವಾಗಿ ಕೆಲವು ಸಾವಿರ ವರ್ಷಗಳ ನಿರಂತರ ಪಯಣದ ಬಳಿಕ, ಯಾವುದೇ ಕೃತಕ, ಬಾಹ್ಯ ಬಲಪ್ರಯೋಗವಿಲ್ಲದೇ ಸಂಗ್ರಹಿತಗೊಳ್ಳುವಂಥದ್ದು.
ಇಂಥ ಸ್ಥಿರ ಸಂಪನ್ಮೂಲವಾದ ಅಂತರ್ಜಲ ಮಟ್ಟ ಕುಸಿದರೆ ಪುನಃ ಮೊದಲಿನ ಸ್ಥಿತಿಗೆ ಬರಲು ಸುದೀರ್ಘ ಸಮಯ ಅಂದರೆ ತಲೆಮಾರುಗಳೇ ಬೇಕಾಗಬಹುದು. ಆದರೂ ಅದೇ ನಿರ್ದಿಷ್ಟ ಪ್ರದೇಶ ದಲ್ಲಿ ಸಂಗ್ರಹಗೊಳ್ಳಬೇಕೆಂಬುದೇನೂ ಇಲ್ಲ. ಏಕೆಂದರೆ ಸ್ಥಿತ್ಯಂತರ ಭೂಮಿಯ ಸಹಜ ಗುಣ. ಇಂಥ ಭೂಸ್ಥಿತ್ಯಂತರದ ಸಂದರ್ಭದಲ್ಲಿ ಮೊದಲು ನೀರಿದ್ದ ಜಾಗವನ್ನು ಗಟ್ಟಿ ಪ್ರದೇಶ ಆಕ್ರಮಿಸಿಕೊಂಡು ಬಿಡಬಹುದು.
ಇದೆಲ್ಲಕ್ಕಿಂತ ಮುಖ್ಯವಾಗಿ ಭೂಮಿಯ ಮೇಲೆ ವಾರ್ಷಿಕ ನೂರು ಮಿಲಿಮೀಟರ್ ಮಳೆ ಸುರಿದರೆ ಅಂತರ್ಜಲ ಸೇರುವ ನೀರಿನ ಪ್ರಮಾಣ ೩ರಿಂದ ೫ ಮಿಲಿಮೀಟರ್ ಮಾತ್ರ. ನದಿ, ಸರೋವರಗಳ ಭಾಗದಲ್ಲಿ ೧೨ ರಿಂದ ೨೦ ಮಿಲಿಮೀಟರ್‌ನವರೆಗೆ ಇರುತ್ತದೆ. ಅಂದರೆ ಅತ್ಯಂತ ಕನಿಷ್ಠ ಭಾಗ ನೀರು ಮಾತ್ರ ಒಳಗೆ ಸಂಗ್ರಹಗೊಂಡಿರುತ್ತದೆ. ಅದರಲ್ಲೂ ಬಹುಪಾಲು ಭೂಮಿಯ ಮೇಲ್ಪದರದಲ್ಲಿ ಅಂದರೆ ಶಿಥಿಲ ವಲಯದಲ್ಲಿಗೆ ನಿಲ್ಲುತ್ತದೆ. ಮತ್ತೊಂದಿಷ್ಟು ಸಚ್ಛಿದ್ರ ಶಿಲಾ ವಲಯವೆಂದು ಕರೆಯುವ ಎರಡನೇ ಭಾಗಕ್ಕೆ ಹೋಗುತ್ತದೆ. ಇಲ್ಲಿ ತೀರಾ ಅಪರೂಪಕ್ಕೆ ಕಾಣಸಿಗುವ ಶಿಲಾ ಸೀಳುಗಳ ಮೂಲಕ ಹಲವು ಸಂವತ್ಸರಗಳ ಬಳಿಕ ತೀರಾ ಕನಿಷ್ಠ ಪ್ರಮಾಣದ ನೀರು ಆಳಕ್ಕಿಳಿಯುತ್ತದೆ. ಹೀಗಾಗಿಯೇ ಇದನ್ನು ‘ಆಪತ್ಕಾಲದ ನೀರು’ ಎಂದು ಕರೆಯಲಾಗುತ್ತದೆ. ಇದರ ಕೆಳಗೆ ಜಲವಿಲ್ಲದ, ಗಟ್ಟಿ ಕಲ್ಲಿನ ಒಣ ವಲಯವಿರುತ್ತದೆ. ಈಗ ನಾವು ಬೋರ್ ವೆಲ್‌ಗಳ ಮೂಲಕ ಬರಿದಾಗಿಸುತ್ತಿರುವುದು ಇಂಥ ನೀರನ್ನು.
ಈಗ ಯೋಚಿಸಿ. ಇದು ಒಂದೊಮ್ಮೆ ಬರಿದಾದರೆ ನಮಗೆ ಮತ್ತೆಲ್ಲಿಂದ ನೀರು ಸಿಕ್ಕೀತು? ಮೊದಲೆಲ್ಲ ನೀರಿ ಗಾಗಿ ನಾವು "ಆಕಾಶ’ದೆಡೆ ಮುಖಮಾಡಿ ನಿಲ್ಲುತ್ತಿದ್ದೆವು. ಯಾವಾಗ ಮಳೆ ಪ್ರಮಾಣ ಕಡಿಮೆಯಾಯಿತೋ ಆಗ ಭೂಮಿಯೊಳಕ್ಕೆ ಕೊರೆಯಲಾರಂಭಿಸಿದೆವು. ಈಗ ಆಕಾಶ, ಭೂಮಿ ಎರಡರಲ್ಲೂ ನೀರಿಲ್ಲ. ಮುಂದಿನ ಗತಿಯೇನು? ಯೋಚಿಸಲೇಬೇಕಾದ ಸಂದರ್ಭ ಬಂದಿದೆ. ಆದರೂ ನಾವು ಯೋಚಿಸುತ್ತಿಲ್ಲ. ಮೌಢ್ಯ ವೆಂದರೆ ಇದೇ ಅಲ್ಲವೇ?
೧೯೬೬ರಲ್ಲೇ ಅಂತರ್ಜಲದ ಸಮೀಕ್ಷೆ ಆರಂಭವಾಯಿತು. ನಂತರ ಅಂತರ್ಜಲದ ಬಳಕೆ ಕುರಿತು ಕಾನೂನು ರೂಪಿಸುವ ಯೋಜನೆ ಮಾಡಿದೆವು. ಈಗ ೨೫೦ ಅಡಿಗಿಂತ ಕೆಳಗಿನ ನೀರು ಬಳಕೆಗೆ ನಿರ್ಬಂಧವಿದೆ. ಆದರೆ ಖಾಸಗಿಯಾಗಿ ಬೋರ್‌ವೆಲ್ ಕೊರೆಯುವವರಿಗೆ ಇದಾವುದೂ ಇಲ್ಲ. ೧೯೮೮ರಲ್ಲೇ ಈ ಸಂಬಂಧ ನಿಷೇಧ ಹೇರುವ ಕಾನೂನಿನ ಕರಡು ಸದನದ ಮುಂದೆ ಬಂದಿದ್ದರೂ ಈವರೆಗೆ ಅದು ಅಂಗೀಕಾರವಾಗಿಲ್ಲ. ಹೀಗಾಗಿ ನಾವು ಬೋರ್ ಕೊರೆಯುವುದನ್ನೂ ನಿಲ್ಲಿಸಿಲ್ಲ. ೮೦ರ ದಶಕವೊಂದರಲ್ಲೇ ದೇಶದಲ್ಲಿ ಸುಮಾರು ೩೦ ಲಕ್ಷಕ್ಕೂ ಹೆಚ್ಚು ಬೋರ್‌ವೆಲ್ ಕೊರೆಯಲಾಯಿತು.
ಹೌದು, ಬೇಸಿಗೆ ಬರುತ್ತಿದೆ. ನೆಲ-ಬಯಲು, ಗುಡ್ಡ- ಗುಡಾರಗಳೆನ್ನದೇ ಬಿಸಿಲ ಝಳಕ್ಕೆ ಸಿಕ್ಕು ಗಾರುಗಾರಾಗಿರುತ್ತದೆ. ಇಂಥ ಸನ್ನಿವೇಶದಲ್ಲಿ ಮೇಲ್ಮಣ್ಣಿನ ಸಂರಕ್ಷಣೆಯ ಬಗ್ಗೆ ಯೋಚಿಸಲೇಬೇಕಿದೆ.
ಮೇಲ್ಮಣ್ಣಿನ ಮಹತ್ವದ ಬಗ್ಗೆ ಹೇಳುವುದಾದರೆ, ನಿಸರ್ಗದ ವ್ಯಾಪಾರವನ್ನಾಧರಿಸಿ ಒಂದಿಂಚು ಉತ್ತಮ ಮೇಲ್ಮಣ್ಣು ರಚನೆಯಾಗಬೇಕೆಂದರೆ ಏನಿಲ್ಲವೆಂದರೂ ಒಂದು ಸಾವಿರ ವರ್ಷವಾದರೂ ಬೇಕು. ಮೇಲ್ಮಣ್ಣು ರಚನೆಯಲ್ಲಿ ಸೂಕ್ಷ್ಮಾಣು ಜೀವಿಯ ಪಾತ್ರ ಬಹುಮುಖ್ಯ. ತೀರಾ ಕೆಳಗಿರುವ ಕರಿಶಿಲೆ ಪದರ ವಿಭಜಿಸಿ ಕೆಳ ಮಣ್ಣಿನ ಮೇಲ್ಭಾಗ ರಚನೆಯಾಗುತ್ತದೆ. ಇದಕ್ಕೆ ಸೂಕ್ಷಾ ಣುಗಳು ಸಾವಯವ ತ್ಯಾಜ್ಯಗಳನ್ನು ವಿಭಜಿಸಿ ಸೇರಿಸಿದಾಗ ಮೇಲ್ಮಣ್ಣು ರಚನೆಯಾಗುತ್ತದೆ. ಒಮ್ಮೆ ಇವು ನಾಶವಾದರೆ ಪರಿಪೂರ್ಣ ಪುನರುತ್ಥಾನ ಸಾಧ್ಯ ವಾಗದು. ಇದರಿಂದ ಮೇಲ್ಮಣ್ಣಿನ ರಚನೆ ಕಾರ್‍ಯವೂ ಸ್ಥಗಿತ ಗೊಳ್ಳುತ್ತದೆ. ಸಮರ್ಥ ಮೇಲ್ಮಣ್ಣು ಇಲ್ಲದೆಡೆ ಸಸ್ಯವೂ ಬೆಳೆಯುವುದಿಲ್ಲ. ಹೀಗಾಗಿ ನೀರು ಭೂಮಿಯೊಳಕ್ಕೆ ಇಂಗುವ ಪ್ರಮಾಣವೂ ಕುಸಿಯುತ್ತ ಕ್ರಮೇಣ ಆ ಪ್ರದೇಶ ಬರಡಾಗುತ್ತದೆ.
ಸಾಮಾನ್ಯವಾಗಿ ಗೆದ್ದಲಿನಂಥ ಜೀವಿಗಳು ಬೆಳಕಿನಲ್ಲಿ ತಮ್ಮ ಚಟುವಟಿಕೆಗಳನ್ನು ನಡೆಸುವುದಿಲ್ಲ. ಆದ್ದರಿಂದ ಬೆಳಕು ಬರದಂತೆ ತಡೆಯಲು ಕೆಳಭಾಗದಿಂದ ಮಣ್ಣಿನ ಕಣಗಳನ್ನು ಕೊರೆದು ತಂದು ಮೇಲೆ ಗೂಡಿನಾಕಾರ ರಚಿಸಿಕೊಂಡಿರುತ್ತವೆ. ಹೀಗೆ ನೆಲ ಕೊರೆಯುವಾಗ ಅದು ಬೇರೆ ಬೇರೆ ದಿಕ್ಕಿನಲ್ಲಿ ಸಾಗಿ ಮಣ್ಣಿನ ಪದರು ತನ್ನಿಂದ ತಾನೇ ಹೂದಲಾಗುತ್ತದೆ. ಇದರಿಂದ ಮಳೆಗಾಲದಲ್ಲಿ ನೀರಿಂಗುವ ಪ್ರಕ್ರಿಯೆ ಇನ್ನೂ ಸುಲಭ. ಅದರಲ್ಲೂ ಗೆದ್ದಲುಗಳು ತನಿ ಮುಟ್ಟುವವರೆಗೂ ನೆಲವನ್ನು ಕೊರೆದಿರುತ್ತವೆ. ಹೀಗಾಗಿ ಇವು ಅಂತರ್ಜಲಕ್ಕೆ ನಿರ್ಮಿಸಿದ ಹೆದ್ದಾರಿ. ಈ ಹಿನ್ನೆಲೆಯಲ್ಲಿ ಇವೆಲ್ಲದರ ರಕ್ಷಣೆಗ ನಾವು ಟೊಂಕ ಕಟ್ಟಲೇಬೇಕು.
ಇನ್ನೂ ಕೃಷಿಯ ವಿಚಾರಕ್ಕೆ ಬಂದರೆ ಮೇಲ್ನೋಟಕ್ಕೆ ಅತ್ಯಂತ ಸುಂದರವಾಗಿ, ಹಚ್ಚ ಹಸುರಿನಿಂದ ಕಂಗೊಳಿಸುವ ಹೊಲ-ಗದ್ದೆಗಳು ಆಂತ ರ್ಯದಲ್ಲಿ ವಿನಾಶದ ಗುಣಗಳನ್ನು ಅಡಗಿಸಿಟ್ಟುಕೊಂಡಿವೆ ಎಂಬುದನ್ನು ಒಮ್ಮೆಲೆ ನಂಬಲಾಗದಿದ್ದರೂ ನಿಜ.
ಬೆಳೆಗಳಲ್ಲಿನ ಸಮತೋಲನದ ವಿಷಯದಲ್ಲಿ ನಾವು ಅತ್ಯಂತ ನಿರ್ಲಕ್ಷ್ಯವಹಿಸಿರುವುದೇ ಇದಕ್ಕೆ ಅತ್ಯಂತ ಪ್ರಮುಖ ಕಾರಣ. ಒಣಭೂಮಿಗೆ ಮಾತ್ರ ಹೊಂದಿಕೊಳ್ಳುವಂಥ ಶುಂಠಿಯಂಥ ಬೆಳೆಗಳು ಮಲೆನಾಡಿಗೂ ಕಾಲಿಟ್ಟಿವೆ. ಇದರ ಒಂದು ಮುಖ ಭೂಮಿಯನ್ನು ಬಂಜರಾಗಿಸುವುದಾ ದರೆ, ಇನ್ನೊಂದೆಡೆ ಶುದ್ಧ ನೀರಾವರಿ ಬೆಳೆಗಳು ಬಯಲು ಪ್ರದೇಶಕ್ಕೆ ವಲಸೆ ಹೋಗಿ ಅಲ್ಲಿ ಅವಾಂತರ ಸೃಷ್ಟಿಸುತ್ತಿವೆ. ಆಯಾ ಭೂ ಲಕ್ಷಣಗಳಿಗನುಗುಣವಾಗಿ ಬೆಳೆಗಳೂ ನಿರ್ಧರಿತವಾಗಿರುತ್ತವೆ. ಅಂಥ ವಿವೇಚನೆಯನ್ನು ಮೀರಿ ಬೆಳೆ ಆಯ್ಕೆ ಮಾಡಿಕೊಂಡಾಗ ಸಹಜವಾಗಿಯೇ ಪ್ರಕೃತಿಯ ಸಮತೋಲನ ತಪ್ಪುತ್ತದೆ.
ಅನುಮಾನವೇ ಇಲ್ಲ ಪ್ರಾಕೃತಿಕ ಸಮತೋಲನ ರಕ್ಷಣೆ ಯಲ್ಲಿ ಸಸ್ಯ ಪ್ರಭೇದಗಳ ಪಾತ್ರ ಅತ್ಯಂತ ಹಿರಿದು. ದ್ಯುತಿ ಸಂಶ್ಲೇಷಣ ಕ್ರಿಯೆಯ ಮೂಲಕ ಆಹಾರ ತಯಾರಿಸಿ ಕೊಳ್ಳುವ ಸಂದರ್ಭದಲ್ಲಿ ವಾತಾವರಣದಲ್ಲಿನ ಇಂಗಾಲಾಮ್ಲವನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ ಎಂಬುದನ್ನು ಪ್ರಾಥಮಿಕ ಶಾಲೆಗಳಲ್ಲೇ ಕಲಿತಿದ್ದೇವೆ. ಇದೇ ಸಮತೋಲನ. ಆದರಿಂದು ಇದನ್ನೂ ಮೀರಿ ಬಹುರೂಪಿ ಬೆಳೆಗಳ ಯೋಜನೆಗಳ ಸಂದರ್ಭ ದಲ್ಲಿ, ಹೈಬ್ರೀಡ್ ತಳಿಗಳ ಹೆಸರಲ್ಲಿ ವ್ಯವಸಾಯಕ್ಕಿಳಿದಿದ್ದು ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಸುರಿಯದೇ ಕೃಷಿ ಮುಗಿಯುವುದೇ ಇಲ್ಲವೆಂಬ ಪರಿಸ್ಥಿತಿಗೆ ಬಂದು ತಲುಪಿದ್ದೇವೆ.
ಹಸುರು ಕ್ರಾಂತಿಯ ಓಟದಲ್ಲಿ ದಿನದಿಂದ ದಿನಕ್ಕೆ ಕೃಷಿ ಭೂಮಿ ವಿಸ್ತಾರಗೊಳ್ಳುತ್ತಿದೆ. ಮಾತ್ರವಲ್ಲ, ಇಳುವರಿಗಾಗಿ ಹೊಸ ಹೊಸ ತಳಿಗಳನ್ನು ಪರಿಚಯಿಸು ತ್ತಿದ್ದೇವೆ. ಮನಸ್ವೇಚ್ಛೆ ರಾಸಾಯನಿಕಗಳನ್ನು ಬಳಸುತ್ತಿದ್ದೇವೆ. ಸಾಂಪ್ರದಾಯಿಕ ತಳಿಗಳು ಕಣ್ಮರೆಯಾಗಿವೆ. ಅತಿ ಹೆಚ್ಚು ನೀರು ಬೇಡುವ (ನಿಜವಾಗಿ ಭತ್ತಕ್ಕೆ ಅಷ್ಟೊಂದು ನೀರು ಬೇಕಾಗಿಯೇ ಇಲ್ಲ. ಆ ಪ್ರಶ್ನೆ ಬೇರೆ) ಭತ್ತವನ್ನು ಒಣ ಭೂಮಿಯಲ್ಲೂ ಬೆಳೆಯಲು ಹವಣಿಸಿದ್ದೇವೆ. ಹೀಗಾಗಿ ನೀರು ಉಳಿಸಲು, ತೇವಾಂಶ ರಕ್ಷಣೆಗೆ ಮತ್ತೆ ಮತ್ತೆ ಯಂತ್ರಗಳಿಂದ ಭೂಮಿಯನ್ನು ಆಳದವರೆಗೆ ಉಳುಮೆ ಮಾಡುತ್ತಿರುವುದರಿಂದ ಭೂ ರಂಧ್ರಗಳು ಮುಚ್ಚಿ ಹೋಗಿ ಮಣ್ಣಿನಲ್ಲಿ ‘ಪಿಎಚ್’ ಅಂಶ ಕಡಿಮೆಯಾಗತೊಡಗಿದೆ. ಇದರಿಂದ ಭತ್ತದ ಗದ್ದೆಗಳಲ್ಲಿ ನಿಂತ ನೀರು ಆಮ್ಲಯುಕ್ತ ವಾಗಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತಿವೆ. ಇವು ನಿರಂತರವಾಗಿ ನೈಟ್ರಸ್ ಆಕ್ಸೈಡ್ ಕಾರುತ್ತಿರುತ್ತವೆ. ಈ ಹಂತದಲ್ಲಿ ಇಂಗಾಲ ಮತ್ತು ಸಾರಜನಕದ ಸಮತೋಲನ ತಪ್ಪಿ ವಾತಾವರಣಕ್ಕೆ ಆತಂಕ ಎದುರಾಗುತ್ತದೆ. ಇದರೊಂದಿಗೆ ಇಳುವರಿ ಹೆಚ್ಚಳಕ್ಕೆ ಬಳಸುವ ರಾಸಾಯನಿಕಗಳು ಅಮೋನಿಯಾವೆಂಬ ಕಾರ್ಕೋಟಕವನ್ನು ಹೊರಸೂಸುತ್ತವೆ. ಇದು ಇಡೀ ವಾತಾವರಣವನ್ನೇ ಬೆಂಕಿಯುಂಡೆಯಾಗಿಸುತ್ತಿದೆ.
ಅಲ್ಲಿಗೆ ‘ಹಸುರು ಮನೆ ಅನಿಲ’ವೆಂಬುದಷ್ಟನ್ನೂ ನಾವು ನಮ್ಮ ಬಗಲಲ್ಲೇ ಇಟ್ಟುಕೊಂಡು ಬರುತ್ತಿದ್ದೇವೆ ಎಂದಂತಾಯಿತು. ಅಷ್ಟಕ್ಕೂ ಏನಿದು ‘ಹಸುರು ಮನೆ’ ಪರಿಣಾಮ? ಭೂಮಿಯ ಮೇಲಿನ ಎಲ್ಲ ಬೆಳವಣಿಗೆಗಳಿಗೆ ಸೂರ್ಯ ಕಿರಣಗಳೇ ಕಾರಣವೆಂಬುದು ಗೊತ್ತು. ಆದರೆ ಸೂರ್ಯನಿಂದ ಹೊರಹೊಮ್ಮುವ ‘ಅತಿ ನೇರಳೆ ಕಿರಣ’ಗಳು ನೇರವಾಗಿ ಭೂಮಿಯನ್ನು ತಲುಪಿದರೆ ಇಲ್ಲಿನ ಜೀವಿಗಳಲ್ಲಿನ ಡಿಎನ್‌ಎ (ಜೀವಕೋಶಗಳ ಹಂದರ)ಯನ್ನು ಸಂಪೂರ್ಣ ಹೀರಿಬಿಡುತ್ತವೆ. ಇಂಥ ವಿಷಯುಕ್ತ ಕಿರಣಗಳಿಂದ ನಮ್ಮನ್ನು ರಕ್ಷಿಸಲೋಸುಗವೇ ಓಜೋನ್ ಎಂಬ ಅನಿಲ ಪರದೆಯನ್ನು ನಿಸರ್ಗ, ವಾತಾವರಣದಂಚಿನ ‘ಸ್ಟ್ರಾಟೋಸ್ಪಿಯರ್’ ಎಂದು ಗುರುತಿಸುವ ಜಾಗದಲ್ಲಿ ಕಟ್ಟಿಟ್ಟಿದೆ. ಇದು ಸೂರ್ಯನಿಂದ ಹೊರಸೂಸುವ ಅಪಾಯಕಾರಿ ಕಿರಣಗಳನ್ನು ಅರ್ಧದಲ್ಲೇ ತಡೆದು ಹಿಂದಕ್ಕೆ ಕಳುಹಿಸುತ್ತದೆ. ದುರಂತ ವೆಂದರೆ ಭೂಮಿಯಲ್ಲಿ ಉತ್ಪತ್ತಿಯಾಗುವ ಇಂಗಾಲದ ಡೈ ಆಕ್ಸೈಡ್, ಮೀಥೇನ್, ನೈಟ್ರಸ್ ಆಕ್ಸೈಡ್ ಹಾಗೂ ಅಮೋನಿಯಾಗಳು ನೇರವಾಗಿ ‘ಸ್ಟ್ರಾಟೋಸ್ಪಿಯರ್’ ನ ಸನಿಹಕ್ಕೆ ಹೋಗಿನಿಂತು, ಓಜೋನ್ ಪದರದೊಂದಿಗೆ ಜಗಳಕ್ಕೆ ನಿಂತು ಅಪಾಯಕಾರಿ ಕಿರಣಗಳನ್ನು ಭೂಮಿಯತ್ತ ಸ್ವಾಗತಿಸಿಕೊಳ್ಳುತ್ತವೆ. ಇದೇ ‘ಗ್ರೀನ್ ಹೌಸ್’ ಪರಿಣಾಮ. ಒಂದು ಸಲ ಭೂಮಿಯ ವಾತಾವರಣದೊಳಕ್ಕೆ ಇಂಥ ಕಿರಣಗಳು ಪ್ರವೇಶಿಸಿದರೆ ಸಾಕು ಇಲ್ಲಿ ದಾಂಧಲೆ ಆರಂಭಿಸು ತ್ತವೆ. ವಾತಾವರಣದಲ್ಲಿನ ಉಷ್ಣಾಂಶ ಏರು ಪೇರಾಗುತ್ತದೆ. ಸಮುದ್ರ ಉಕ್ಕೇರುತ್ತದೆ. ಇಷ್ಟಾದರೆ ಮುಂದೆ ಏನು ಬೇಕಾದರೂ ಆಗಬಹುದು.
ಈಗ ಯೋಚಿಸಿ, ಅತಿ ನೀರು ಬಳಕೆಯ ಕೃಷಿ, ರಾಸಾಯನಿಕಗಳ ಮಿತಿ ಮೀರಿದ ಬಳಕೆ, ಅಂತರ್ಜಲದ ಅಪಹರಣ, ಕಾಡು ನಾಶ ಒಂದೇ ಎರಡೇ... ಭೂತಾಯಿಯ ಮೇಲೆ ನಾವು ನಡೆಸುತ್ತಿರುವ ದೌರ್ಜನ್ಯಕ್ಕೆ ಕೊನೆಯಿದೆಯೇ ? ಇಷ್ಟಾದರೂ ಆಕೆ ಕ್ಷಮಯಾ ಧರಿತ್ರಿ !

Thursday, November 6, 2008

ಬೊಮ್ಮಾಯಿಯವರೇ, ಒಮ್ಮೆ ತುಂಗಭದ್ರಾ ನಾಲೆ ನೋಡಿ ಪ್ಲೀಸ್ !


ಹಬ್ಬಾಸ್, ಕೊನೆಗೂ ನಮ್ಮ ಜಲಸಂಪನ್ಮೂಲ ಸಚಿವರೊಬ್ಬರು ತಮ್ಮ ಕೆಲಸವನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿದೆ. ಅಪರೂಪಕ್ಕೆಂಬಂತೆ, ಅಪರೂಪ ಏನು ಬಂತು; ಇದೇ ಮೊದಲ ಬಾರಿಗೆ ರಾಜ್ಯದ ಸಚಿವರೊಬ್ಬರು ಕೃಷ್ಣಾ ನದಿ ನೀರಿನ ಹಂಚಿಕೆ ಸಂಬಂಧ ಪ್ರಾಕಾರದ ವಿಚಾರಣೆಯಲ್ಲಿ ಇಡೀದಿನ ಪಾಲ್ಗೊಂಡು ಇಚ್ಛಾಶಕ್ತಿ ಪ್ರದರ್ಶಿಸಿದ್ದಾರೆ.
ನೀರಾವರಿ ಖಾತೆಯೆಂದರೆ ನಮ್ಮ ರಾಜಕಾರಣಿಯಲ್ಲಿ ‘ಸಮೃದ್ಧ ಒಳ ಹರಿವು’ ನಿಶ್ಚಿತ ಎಂಬ ಮನೋಭಾವವೇ ಹೆಚ್ಚಿರುವುದು ಹೊಸ ಸಂಗತಿಯೇನಲ್ಲ. ಆ ನಡುವೆಯೂ ಹಿಂದೆ ಎಚ್.ಕೆ.ಪಾಟೀಲ್, ಈಶ್ವರಪ್ಪ ಈ ಖಾತೆಯಲ್ಲಿ ಒಂದಷ್ಟು ಭರವಸೆ ಮೂಡಿಸಿದ್ದರು. ಆದರೆ ಅವರು ಹೇಳಿದ್ದರಲ್ಲಿ ಇಂಗಿದ್ದಕ್ಕಿಂತ ಹರಿದದ್ದೇ ಹೆಚ್ಚು. ಬಿಡಿ, ಮಿತಿಗಳಿರಬಹುದು. ಇದೀಗ ನೀರಿನ ಸಂಕಷ್ಟ ಎಂಬುದೇನೆಂಬುದನ್ನು ಖುದ್ದು ಅನುಭವಿಸಿ ಅರಿತ ಪ್ರದೇಶದ ಹಿನ್ನೆಲೆಯವರಾದ್ದರಿಂದಲೋ ಏನೋ, ಅಂತೂ ಬಸವರಾಜ ಬೊಮ್ಮಾಯಿ ಅವರಾದರೂ ಏನಾದರೂ ಮಾಡಿಯಾರು ಎಂಬ ನಿರೀಕ್ಷೆ ನಾಡಿಗರಲ್ಲಿ ಮೂಡಲಾರಂಭಿಸಿದೆ.
ದಿಲ್ಲಿಯಲ್ಲಿ ದಿನವಿಡೀ ಕೋರ್ಟ್ ಕಟಕಟೆಯಲ್ಲಿ ನಿಂತಿದ್ದ ಮಾತ್ರಕ್ಕೆ ಯೋಜನೆಗಳೆಲ್ಲ ತಂತಾನೇ ಅನುಷ್ಠಾನಗೊಂಡುಬಿಡುವುದಿಲ್ಲ ಬೊಮ್ಮಾಯಿಯವರೇ ! ಈ ಅರಿವು ತಮಗೂ ಇದ್ದಿರಬಹುದು. ಈ ಐದೂವರೆ ದಶಕದಲ್ಲಿ ರಾಜ್ಯದ ನೀರಾವರಿ ಎಂಬುದು ಬಹುತೇಕ ಒಡೆದ ಕಾಲುವೆ. ಒಂದು ಕಡೆ ಕಟ್ಟಿದರೆ, ಇನ್ನೊಂದು ಕಡೆ ಬಾಯ್ಬಿಟ್ಟುಕೊಳ್ಳುತ್ತದೆ. ತೀರಾ ಮೊನ್ನೆ ಮೊನ್ನೆ ಬಳ್ಳಾರಿ, ಕೊಪ್ಪಳ ಭಾಗಗಳಲ್ಲಿ ಸಂಚರಿಸಿದಾಗ ಹಾದಿಯುದ್ದಕ್ಕೂ ಅಲ್ಲಲ್ಲಿ ತುಂಗಭದ್ರಾ ಕಾಲುವೆಗಳ ದುಃಸ್ಥಿತಿಯ ದರ್ಶನವಾಯಿತು. ಹೂಳು ತುಂಬಿ, ಬಹುತೇಕ ದಂಡೆಗಳೆಲ್ಲ ಕುಸಿದು, ಪಾಚಿಗಟ್ಟಿ, ಗಿಡ-ಗಂಟಿಗಳು ಬೆಳೆದು ನಿಂತಿರುವ ನಿರ್ವಹಣೆಯಿಲ್ಲದ ಕಾಲುವೆಯ ಸ್ಥಿತಿ ಕಂಡಾಗ ನಮ್ಮ ನೀರಾವರಿ ಯೋಜನೆಗಳೂ ಹೀಗೆಯೇ ಇವೆಯಲ್ಲ ಎಂದೆನಿಸಿದ್ದು ಸುಳ್ಳಲ್ಲ.
ಸನ್ಮಾನ್ಯ ಸಚಿವರೇ, ಹೀಗೆ ಒಮ್ಮೆ ಕಣ್ಣಾಡಿಸಿ ನೋಡಿ. ನಮ್ಮಲ್ಲಿ ಎಷ್ಟೊಂದು ನೀರಾವರಿಯ ಅವಕಾಶಗಳಿವೆ. ನೀವು, ನಿಮ್ಮಂಥವರು ರೂಪಿಸಿ, ಕೆಲವನ್ನು ಅರ್ಧಂಬರ್ಧ ಮಾಡಿ ಬಿಟ್ಟು ಹೋಗಿರುವ ಎಷ್ಟೋ ಯೋಜನೆಗಳು ನಾಡಿನುದ್ದಕ್ಕೂ ನಿಂತಿವೆ. ಇವೆಲ್ಲವೂ ಸಾಕಾರಗೊಂಡದ್ದೇ ಆದಲ್ಲಿ (ಅಂಥ ಇಚ್ಛಾಶಕ್ತಿ ಸರಕಾರಕ್ಕೆ ಪುಣ್ಯವಶಾತ್ ಬಂದರೆ, ಅಕಾರಿಗಳೂ ಅಪ್ಪಿತಪ್ಪಿ ಕೆಲಸ ಮಾಡಿಬಿಟ್ಟರೆ) ಈ ನೆಲಕ್ಕೆ ಬರವೆಂದರೆ ಏನೆಂಬುದೇ ಗೊತ್ತಾಗಲಿಕ್ಕಿಲ್ಲ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶವೆಂದರೆ ಬರೀ ಒಡೆದ ಕಾಲುವೆಯ ಚಿತ್ರಣವೇ ಕಾಣುತ್ತದೆ. ಬಹುಶಃ ಇವುಗಳ ರಿಪೇರಿಗೆ ಮಾಡಿದ ಖರ್ಚಿನಲ್ಲಿ ಹತ್ತಾರು ಅಣೆಕಟ್ಟುಗಳನ್ನು ಕಟ್ಟಿ ಬಿಡಬಹುದಿತ್ತೇನೋ. ಕೆ.ಸಿ.ರೆಡ್ಡಿ, ಟಾರ್ ಸ್ಟೀಲ್ ಫೌಂಡೇಷನ್ ತಜ್ಞರು, ಕ್ಯಾಪ್ಟನ್ ರಾಜಾರಾವ್ ಸಮಿತಿ-ಹೀಗೆ ಕಳೆದ ಎರಡೂವರೆ ದಶಕಗಳಲ್ಲಿ ಐದು ತಜ್ಞರ ಸಮಿತಿಗಳು ರಚನೆಗೊಂಡು, ಅವೆಲ್ಲ ಶಿಫಾರಸು ಸಲ್ಲಿಸಿವೆ. ಆದರೆ ಎಡ-ಬಲದಂಡೆ ನಾಲೆಗಳು ಹಾಗೆಯೇ ಸೋರುತ್ತಿವೆ. ವರದಿ ಸರಕಾರದೆದುರು ಧೂಳು ತಿನ್ನುತ್ತಿದೆ.
ಕೊನೆಯ ಬಾರಿಗೆ ತಜ್ಞ ಚಿನಿವಾಲ ನೇತೃತ್ವದ ಸಮಿತಿ ವರದಿ ಸಲ್ಲಿಸಿತ್ತು. ಅಷ್ಟರಲ್ಲಿ ಧರ್ಮಸಿಂಗ್ ಸರಕಾರ ಉರುಳಿಬಿತ್ತು. ಒಟ್ಟಾರೆ ೮೪೦ ಕೋಟಿ ರೂ. ವಿನಿಯೋಗಿಸಿ ೪ ವರ್ಷಗಳಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಸಮಗ್ರ ಆಧುನೀಕರಣ ಕಾಮಗಾರಿ ಪೂರ್ಣಗೊಳಿಸಬೇಕೆಂದು ತಜ್ಞರು ಶಿಫಾರಸು ಮಾಡಿ ಎರಡೂವರೆ ವರ್ಷಗಳಾದವು. ದುರಂತವೆಂದರೆ ನಂತರ ಜಲಸಂಪನ್ಮೂಲ ಸಚಿವರಾದ ಈಶ್ವರಪ್ಪನವರು ಈ ವರದಿಯತ್ತ ಕಣ್ಣೆತ್ತಿಯೂ ನೋಡಲಿಲ್ಲ. ಎಡ, ಬಲ ಹಾಗೂ ಬಲ ಭಾಗದ ಕೆಳದಂಡೆ ಮುಖ್ಯ ಕಾಲುವೆಗಳ ಒಳ ಮೈ ಸಂಪೂರ್ಣ ಜೀರ್ಣಗೊಂಡು ಹೋಗಿದೆ. ಇವುಗಳ ನವೀಕರಣ ಆಗಬೇಕು. ಉದ್ದಕ್ಕೂ ಬೆಳೆದ ಜೊಂಡು, ಹೂಳುಗಳ ವಿಲೇವಾರಿ ಆಗಬೇಕು. ಉಪ ಕಾಲುವೆಗಳು ಹಾಗೂ ತೂಬುಗಳು ಸರಿಯಾಗಬೇಕು. ಹೊಲಗಾಲುವೆಗಳಿಂದಲೇ ವರ್ಷಕ್ಕೆ ಏನಿಲ್ಲವೆಂದರೂ ೨೫ ಟಿಎಂಸಿ ನೀರು ಪೋಲಾಗುತ್ತಿದೆ. ಇದನ್ನು ಸರಿಪಡಿಸಬೇಕು. ಕಾಲುವೆಯ ಅಚ್ಚುಕಟ್ಟಿನವರ ನಡುವೆ ಸಾಮರಸ್ಯ ಮೂಡಿಸಬೇಕು...ಒಂದೇ ಎರಡೇ...ಕೆಲಸದ ಹೊರೆಯೇ ಈ ಒಂದು ಯೋಜನೆಯ ಅಚ್ಚುಕಟ್ಟಿಲ್ಲಿದೆ.
ಸಚಿವರೇ, ದಯಮಾಡಿ ನೀವೇ ಒಮ್ಮೆ ಅಲ್ಲಿಗೆ ಹೋಗಿ ನೋಡಿ ಬನ್ನಿ. ಆಗ ಮಾತ್ರ ಅರ್ಥವಾದೀತು ಅಲ್ಲಿನ ಕಾಲುವೆಗಳ ದುಃಸ್ಥಿತಿ. ಕಾಲುವೆಯ ಪರಿಸ್ಥಿತಿ ಹೀಗಾದರೆ ಇನ್ನು ತುಂಗಭದ್ರಾ ಜಲಾಶಯದ ಸ್ಥಿತಿ ಹೇಗಿರಬೇಡ ? ಖಂಡಿತಾ ಅದೂ ನಿರ್ವಹಣೆಯನ್ನು ಬೇಡುತ್ತಿದೆ. ಜಲಾಶಯದಲ್ಲಿ ೩೧ ಟಿಎಂಸಿ ಅಡಿಯಷ್ಟು ಬರಿ ಹೂಳೇ ತುಂಬಿದೆ. ಅದನ್ನು ತೆಗೆದು ಸೂಕ್ತವಾಗಿ ವಿಲೇವಾರಿ ಮಾಡಿದರೆ ಅರ್ಧ ಸಮಸ್ಯೆ ಪರಿಹಾರವಾದೀತು. ಇದಕ್ಕೆ ಪೂರಕವಾಗಿ ತುಂಗಭದ್ರಾ ಎಡ-ಬಲದಂಡೆ ವ್ಯಾಪ್ತಿಯಲ್ಲಿ ಸಮತೋಲನ ಜಲಾಶಯಗಳನ್ನು ನಿರ್ಮಿಸುವುದು ಸೂಕ್ತ.
ಇದಿಷ್ಟಾದರೆ, ಇನ್ನು ಮುಂಡರಗಿ ಹಾಗೂ ಗದಗ, ಬಳ್ಳಾರಿ ಜಿಲ್ಲೆ ಹೂವಿನಹಡಗಲಿ, ಕೊಪ್ಪಳ ತಾಲೂಕುಗಳ ೧.೧೮ ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸಲಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆ ಮುಕ್ಕಾಲು ಭಾಗದಿಂದ ಮೇಲೆ ಏರುತ್ತಲೇ ಇಲ್ಲ. ೬೩ ಕೋಟಿ ರೂ. ವೆಚ್ಚದಲ್ಲಿ ೧೯೯೨ರಲ್ಲಿ ಪ್ರಾರಂಭವಾದ ಯೋಜನೆಯ ವೆಚ್ಚ ಇಂದು ಮೂರುಪಟ್ಟಿಗೂ ಹೆಚ್ಚು ಮೀರಿದೆ. ಇನ್ನಾದರೂ ಸಿಂಗಟಾಲೂರು ವಿಸ್ತೃತ ಏತ ನೀರಾವರಿ ಯೋಜನೆ ತ್ವರಿತ ಅನುಷ್ಠಾನಗೊಳ್ಳಬೇಕು.
ಈ ಭಾಗದಲ್ಲಿ ‘ಬೇಕು’ಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕೃಷ್ಣಾ ಬಿ ಸ್ಕೀಮ್‌ನಡಿ ಹಂಚಿಕೆಯಾಗುವ ನೀರಿನಲ್ಲಿ ಕುಷ್ಟಗಿ, ಯಲಬುರ್ಗಾ ತಾಲೂಕುಗಳಿಗೆ ಪಾಲು ನೀಡಲು ಮನ ಮಾಡಬೇಕು. ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಕೂಡ್ಲಿಗಿ ತಾಲೂಕು ಗಡಿ ಹಳ್ಳಿಗಳ ಸೇರಿಸಬೇಕು. ನಾರಾಯಣಪೂರ ಬಲದಂಡೆ ಮುಖ್ಯ ಕಾಲುವೆಯ ಪರಿಶೀಲನೆಗೆ ಮುಂದಾಗಬೇಕು. ಕಾಲುವೆಯನ್ನು ೯೫ ರಿಂದ ೧೫೭ನೇ ಕಿ.ಮೀ.ಗೆ ವಿಸ್ತರಿಸಬೇಕು. ತುಂಗಭದ್ರಾ ಎಡದಂಡೆ ಹಾಗೂ ನಾರಾಯಣಪುರ ಬಲದಂಡೆ ಮಧ್ಯೆ ಸಂಪರ್ಕ ಕಾಲುವೆ ನಿರ್ಮಿಸಬೇಕು. ನಂದವಾಡಗಿ ಹಾಗೂ ರಾಯಚೂರು ಬೃಹತ್ ಏತ ನೀರಾವರಿ ಯೋಜನೆಗಳನ್ನು ಆರಂಭಿಸಬೇಕು. ರಾಜೋಳಿಬಂಡಾ ತಿರುವು ಯೋಜನೆಯ ಅಣೆಕಟ್ಟೆ ಎತ್ತರ ಹೆಚ್ಚಿಸಬೇಕು....ಉಫ್, ಎನೆಲ್ಲ ಆಗಬೇಕಿದೆ ನೋಡಿ.
ಅಲ್ಲಿಂದ ಸ್ಪಲ್ಪ ಬಾಗಲಕೋಟ- ವಿಜಾಪುರದತ್ತ ಹೊರಳಿದರೆ ಹೇಳಿಕೊಳ್ಳಲಿಕ್ಕೆ ವಿಶ್ವವಿಖ್ಯಾತ ಆಲಮಟ್ಟಿ ಜಲಾಶಯ ನಿಂತಿದೆ. ಅದರ ಭವ್ಯತೆ, ಅಗಾಧತೆಯ ಎದುರು ಎಂಥವರೂ ಮೂಕವಿಸ್ಮಿತರಾಗಬೇಕು. ಆದರೇನು, ಅವಳಿ ಜಿಲ್ಲೆಗಳಿಗೆ ಇದರ ಮೂಲಕ ಸಮಗ್ರ ನೀರಾವರಿಯಾಗಬೇಕೆಂಬ ದಶಕದ ಕನಸು ಕೂಡಿ ಬರಲೇ ಇಲ್ಲ.
ಹೌದು, ಜಿಲ್ಲೆಯ ಅಂದಾಜು ೮.೨೦ ಲಕ್ಷ ಹೆಕ್ಟೇರ್ ಕೃಷಿಭೂಮಿಯ ಪೈಕಿ ೬ ಲಕ್ಷ ಹೆಕ್ಟೇರ್‌ಗೆ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಿಂದ ನೀರುಣಿಸಬಹುದಾದ ಯಾವುದೇ ಯೋಜನೆ ಪೂರ್ಣಗೊಂಡಿಲ್ಲ. ಮುಳವಾಡ, ಚಿಮ್ಮಲಗಿ, ಗುತ್ತಿಬಸವಣ್ಣ ಏತ ನೀರಾವರಿ ಹಾಗೂ ಆಲಮಟ್ಟಿ ಎಡದಂಡೆ ಕಾಲುವೆ ಯೋಜನೆಗಳು ಎಷ್ಟು ದಿನಗಳಿಂದ ನನೆಗುದಿಗೆ ಬಿದ್ದಿವೆ ಗೊತ್ತೆ ? ಅಷ್ಟಾಗಿಯೂ ಕೃಷ್ಣಾ ‘ಬಿ’ ಸ್ಕೀಂ ನೀರು ನಮಗೆ ಬಿಸಿಲ್ಗುದುರೆ ಆಗುತ್ತಲೇ ಇದೆ. ಬಾಗಲಕೋಟ ಜಿಲ್ಲೆಯ ಮರೋಳ ಏತ ನೀರಾವರಿ ಯೋಜನೆ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಕೊನೆ ಪಕ್ಷ ಕೆರೆತುಂಬುವ ಯೋಜನೆಯನ್ನಾದರೂ ಅನುಷ್ಠಾನಗೊಳಿಸಿ ಎಂದು ಅವಳಿ ಜಿಲ್ಲೆಗಳವರು ಕೇಳುತ್ತ ಬಂದು ಐದಾರು ವರ್ಷಗಳೇ ಕಳೆದವು. ಮೇಲಿಂದ ಮೇಲೆ ಯೋಜನೆಯ ಟೆಂಡರ್ ರದ್ದಾಗುತ್ತಲೇ ಇದೆಯೇ ವಿನಃ ಕೆರೆ ತುಂಬಲು ಮುಹೂರ್ತ ಬಂದಿಲ್ಲ.
ಬೊಮ್ಮಾಯಿಯವರೇ, ಇದೆಲ್ಲ ಬಿಟ್ಟು ನಿಮ್ಮ ಅಕ್ಕ ಪಕ್ಕದ ಜಿಲ್ಲೆಗಳತ್ತ ಬಂದರೆ ಮಲಪ್ರಭಾ, ಘಟಪ್ರಭಾ, ಹಿಪ್ಪರಗಿ, ದೂಧಗಂಗಾ, ಹರಿನಾಲಾ, ಕಳಸಾ-ಬಂಡೂರಿ ನಾಲಾ ತಿರುವು ಮತ್ತು ಮಾರ್ಕಂಡೇಯ ಹೀಗೆ ಯೋಜನೆಗಳ ಸರಣಿಯೇ ನಿಮಗಾಗಿ ಕಾಯುತ್ತಿದೆ. ಹಿರಣ್ಯಕೇಶಿ, ಬಳ್ಳಾರಿ ನಾಲಾ, ಶ್ರೀ ರಾಮೇಶ್ವರ ಮತ್ತು ಜವಳುಹಳ್ಳ ಹೀಗೆ ಯಾವುದೂ ಪೂರ್ಣಗೊಂಡಿಲ್ಲ.
ಮಹಾದಾಯಿ ನದಿ ಕೊಳ್ಳದಲ್ಲಿ ಬರೋಬ್ಬರಿ ೨೦೦ ಟಿಎಂಸಿ ನೀರಿದೆ. ಇದಕ್ಕಿರುವ ಗೋವಾದ ತಗಾದೆ ತಣ್ಣಗಾಗಿಸುವ ನಿಟ್ಟಿನಲ್ಲಿ ಒಂದಷ್ಟು ಪ್ರಯತ್ನ ಮಾಡುತ್ತಿದ್ದೀರಿ. ಅದು ಚುರುಕುಗೊಳ್ಳಬೇಕು. ೪.೪. ಕಿಮೀ ಉದ್ದದ ಕಳಸಾ ನಾಲೆಯಿಂದ ೩ ಟಿಎಂಸಿ ನೀರು ಸಿಗಲಿದೆ. ೪.೯ ಕಿಮೀ ಉದ್ದದ ಬಂಡೂರಿ ನಾಲಾ ಜೋಡಣೆಯಿಂದ ೩.೫೬ ಟಿಎಂಸಿ ನೀರು ದೊರೆಯುತ್ತದೆ. ಯೋಜನೆ ಅನುಷ್ಠಾನಗೊಂಡರೆ ಬೆಳಗಾವಿ, ಸವದತ್ತಿ, ಬೈಲಹೊಂಗಲ, ರಾಮದುರ್ಗ, ಹುಬ್ಬಳ್ಳಿ-ಧಾರವಾಡ, ನವಲಗುಂದ, ನರಗುಂದ, ಬದಾಮಿ ಒಳಗೊಂಡು ನಾಲ್ಕು ಜಿಲ್ಲೆಗಳ ೧೨ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂಬುದನ್ನು ಮತ್ತೆ ನೆನಪಿಸಬೇಕಿಲ್ಲ.
ಅಲ್ಲಿಂದ ಇನ್ನೂ ಕೆಳಗಿಳಿದರೆ ನೀರಾವರಿ ವಿಷಯದಲ್ಲಿ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗೆ ವಂಚನೆಯಾಗಿದೆ ಎಂಬುದನ್ನು ಒಪ್ಪಲೇ ಬೇಕು. ದಶಕ ಕಳೆದರೂ ತುಂಗಾ ಮೇಲ್ದಂಡೆ ಯೋಜನೆ ದಡ ಹತ್ತುತ್ತಲೇ ಇಲ್ಲ. ಯೋಜನೆಯಿಂದ ಜಿಲ್ಲೆಯ ೯೦ ಸಾವಿರ ಎಕರೆಗೂ ಹೆಚ್ಚು ಭೂಮಿ ನೀರಾವರಿಗೆ ಒಳಪಡಲಿದೆ. ಹೀಗೆಯೇ ಬ್ಯಾಡಗಿ ತಾಲೂಕಿನ ಗುಡ್ಡದ ಮಲ್ಲಾಪುರ ಯೋಜನೆ, ಹಾನಗಲ್ಲದ ಬಸಾಪುರ ಏತ ನೀರಾವರಿ ಯೋಜನೆ, ಶಿಗ್ಗಾವಿಯ ನಾಗನೂರು ಕೆರೆ ನೀರಾವರಿ ಯೋಜನೆ, ಸವಣೂರಿನ ಮೋತಿ ತಲಾಬ ಯೋಜನೆಗಳು ನನೆಗುದಿಗೆ ಬಿದ್ದಿವೆ.
ಹಿರಿಯೂರಿನ ವಾಣಿ ವಿಲಾಸ ಸಾಗರಕ್ಕೆ ಬಚಾವತ್ ಎ ಸ್ಕೀಂನಲ್ಲಿ ನೀರು ಹರಿಸಿ ಶಾಶ್ವತ ನೀರಾವರಿ ಕಲ್ಪಿಸಬೇಕೆಂಬ ಬೇಡಿಕೆಯಾಗಲೀ, ಈ ಸಂಬಂಧ ನಡೆಯುತ್ತಿರುವ ಧರಣಿ, ಪ್ರತಿಭಟನೆಗಳಾಗಲೀ ಹೊಸ ಸರಕಾರದ ಗಮನಕ್ಕೆ ಬಂದಂತಿಲ್ಲ. ಹಿರಿಯೂರು ತಾಲೂಕಿನ ಧರ್ಮಪುರ ಕೆರೆಗೆ ಫೀಡರ್ ಕಾಲುವೆ ನಿರ್ಮಿಸಿ ‘ಸುವರ್ಣಮುಖಿ’ಯಿಂದ ನೀರು ಹರಿಸಿದರೆ ಸಾಕು, ಬರಡು ಭೂಮಿಯಲ್ಲಿ ಬಂಗಾರ ಬೆಳೆದೀತು.
ಉಡುವಳ್ಳಿ ಕೆರೆಯ ಪೂರಕನಾಲೆ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ೨೨ ಕೆರೆ ಏತ ನೀರಾವರಿ, ಚನ್ನಗಿರಿ ತಾಲೂಕಿನ ಉಬ್ರಾಣಿ ಏತ ನೀರಾವರಿ ಹಾಗೂ ಹರಪನಹಳ್ಳಿ ತಾಲೂಕಿನ ಗರ್ಭಗುಡಿ ಬ್ಯಾರೇಜ್ ಯೋಜನೆ ಪೂರ್ಣಗೊಂಡರೆ ದಾವಣಗೆರೆ ಜಿಲ್ಲೆ ಸುಭಿಕ್ಷವಾಗುತ್ತದೆ. ದಾವಣಗೆರೆ, ಹರಪನಹಳ್ಳಿ ಹಾಗೂ ಜಗಳೂರು ತಾಲೂಕಿನ ೨೨ ಕೆರೆಗಳಿಗೆ ಭದ್ರಾ ನದಿಯಿಂದ ನೀರುಣಿಸುವ ಕಾಮಗಾರಿ ಆಡಳಿತಾತ್ಮಕ ಮಂಜೂರಿಯಿಂದ ಮುಂದೆ ಹೋಗಿಲ್ಲ. ೯೧೫ ಕೋಟಿ ರೂ. ವೆಚ್ಚದಲ್ಲಿ ಆರಂಭಿಸಿದ ಭದ್ರಾ ಜಲಾಶಯ ನಾಲೆ ಆಧುನೀಕರಣದ ಶೇ.೭೨ ಕಾಮಗಾರಿ ಬಾಕಿ ಇದೆ. ಮಧ್ಯ ಕರ್ನಾಟಕದಿಂದ ಮೇಲೆಯೇ ಇಷ್ಟೆಲ್ಲ ಇದೆ. ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಭಾಗಗಳದ್ದು ಇನ್ನೊಂದು ಬೃಹತ್ ಅಧ್ಯಾಯ.
ಸನ್ಮಾನ್ಯ ಸಚಿವರೇ, ಸಿಕ್ಕ ಐದು ವರ್ಷಗಳ ಅಕಾರಾವಯಲ್ಲಿ ಈ ಮೇಲಿನ ಪಟ್ಟಿಯಲ್ಲಿ ಹೊಸದೇನನ್ನೂ ಮಾಡುವುದು ಬೇಡ. ಕೊನೇ ಪಕ್ಷ , ಇದ್ದುದನ್ನು ಸರಿ ಮಾಡಲು ಮುಂದಾದರೆ. ನಿಮ್ಮನ್ನು ನಾಡಿನ ಜನ ಕೊನೆತನಕ ತಣ್ಣಗೆ ನೆನೆದಾರು.


‘ಲಾಸ್ಟ್’ಡ್ರಾಪ್: ಸಚಿವರೇ, ಇದಾವುದು ಆಗದಿದ್ದರೂ ತುಂಗಭದ್ರಾ ನಾಲೆಯ ದುಸ್ಥಿತಿಯನ್ನೊಮ್ಮೆ ನೋಡಿ ಬನ್ನಿ ಪ್ಲೀಸ್, ಅಷ್ಟಾದರೂ ಮಾಡುತ್ತೀರಲ್ವಾ?

Sunday, November 2, 2008

ಬಾವಿಗಳ ಬಗೆಗೇಕೆ ಈ ಭೇದ ಭಾವ ?

ಗುಲ್ಬರ್ಗ ನಗರವನ್ನು ಇಂದು ನೀವು ಪ್ರವೇಶಿಸಿದರೆ ಅಲ್ಲೊಂದು ಯುದ್ಧದ ಮರುದಿನದ ಚಿತ್ರಣ ತೆರೆದುಕೊಳ್ಳುತ್ತದೆ. ದಂಡು ದಾಳಿಗೊಳಗಾಗಿ ಸಂಪೂರ್ಣ ಅಸ್ತವ್ಯಸ್ತಗೊಂಡ ನಗರವೊಂದು ಹೇಗಿರಬಹುದೋ ನೂರಕ್ಕೆ ನೂರು ಅದೇ ದೃಶ್ಯ. ಮುಖ್ಯರಸ್ತೆಯಲ್ಲಿ ಸಾಗಿದರೆ ಅರ್ಧಂಬರ್ಧ ಕುಸಿದ ಕಟ್ಟಡಗಳು, ಎಲ್ಲೆಂದರಲ್ಲಿ ಮಣ್ಣು-ಇಟ್ಟಿಗೆಗಳ, ಕಸ-ಕಡ್ಡಿಯ ರಾಶಿ....ರಸ್ತೆ ವಿಸ್ತರಣೆಯ ಹೆಸರದಕ್ಕೆ. ನಗರೀಕರಣದ ಇನ್ನೊಂದು ಮುಖವಿದು. ಅಂಗಡಿ-ಮುಂಗಟ್ಟು, ಮನೆ-ಮಠ, ಗುಡಿ-ಗುಂಡಾರ ಹೀಗೆ ಎಲ್ಲವೂ ರಸ್ತೆಗಾಗಿ ಹಿಂದಕ್ಕೆ ಸರಿದು ನಿಂತಿವೆ.
ಬಿಡಿ, ಆಧುನಿಕ ಅನಿವಾರ್ಯಗಳಿಗೆ ಯಾರೂ ಹೊರತಲ್ಲ. ವಿಷಯ ಅದಲ್ಲ. ಇಷ್ಟೆಲ್ಲ ಭರಾಟೆಯ ನಡುವೆ ಸುಂದರ, ಪುರಾತನ ಬಾವಿಯೊಂದರ ಕೀರಲು ಸ್ವರ ಯಾರಿಗೂ ಕೇಳಿಸುತ್ತಲೇ ಇಲ್ಲ ಎಂಬುದು ಬೇಸರದ ಸಂಗತಿ. ಹಾಗೆ ನೋಡಿದರೆ ಗುಲ್ಬರ್ಗದಲ್ಲಿ ಬಾವಿಗಳು ಚೀರಲು ಆರಂಭಿಸಿ ಸಾಕಷ್ಟು ವರ್ಷಗಳೇ ಆಗಿ ಹೋದವು. ಹಾಗೆನ್ನುವುದಕ್ಕಿಂತ ಇಡೀ ನಗರಕ್ಕೆ ನೀರಾಶ್ರಯವಾಗಿ ನಿಂತಿದ್ದ ನೂರಾರು ಬಾವಿಗಳಲ್ಲಿ ಇಂದು ಉಳಿದಿರುವವು ಎಂಟತ್ತು ಅಷ್ಟೇ. ಹಾಗೆ ಅಳಿದುಳಿದವಲ್ಲಿ ಲಾಲ್‌ಗೇರಿ ಬಡಾವಣೆಯಲ್ಲಿರುವ ಈ ಬಾವಿಗೊಂದು ವಿಶೇಷ ಮಹತ್ವವಿದೆ. ಅಲ್ಲಿನವರು ಅದನ್ನು ಗುರುತಿಸಿದ್ದಾರೋ, ಇಲ್ಲವೋ ಗೊತ್ತಿಲ್ಲ. ಅದು ಸಾಮಾನ್ಯ ಬಾವಿಯಂತೂ ಅಲ್ಲ.
ಒಂದಿಡೀ ನಗರವನ್ನೇ ಎತ್ತಿ ಪಕ್ಕಕ್ಕೆ ಸರಿಸಿ ಅತ್ಯಾಧುನಿಕ ರಸ್ತೆ ಮಾಡ ಹೊರಟಿರುವಾಗ ಒಂದು ಪುಟ್ಟ ಬಾವಿಯನ್ನು ನೋಡುತ್ತ ಕುಳಿತುಕೊಳ್ಳಲಾದೀತೇ ? ಎಂಬ ಧೊರಣೆ ಬಹುತೇಕ ಎಲ್ಲರಲ್ಲೂ ಇದ್ದಂತಿದೆ. ಈ ಬಗ್ಗೆ ಗೆಳೆಯ ರವೀಂದ್ರ ದೇಸಾಯಿಗೆ ಏನೋ ಹಳಹಳಿ. ಇನ್ನೇನು ವಾರೊಪ್ಪತ್ತಿನಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡು ಬಿಡಬಹುದಾದ ಆ ಬಾವಿಯ ಅಂತಿಮ ದರ್ಶನವನ್ನಾದರೂ ಪಡೆದುಕೊಂಡು ಬರೋಣವೆಂದುಕೊಂಡು ದೇಸಾಯಿಯವರ ಬೆನ್ನುಹಿಡಿದು ಹೊರಟದ್ದೇ ತಪ್ಪಾಯಿತೇನೋ? ಕೊನೇ ಪಕ್ಷ ಅದನ್ನು ಸ್ಮಾರಕವನ್ನಾಗಿಯಾದರೂ ಉಳಿಸಿಕೊಳ್ಳಲಾಗುತ್ತಿಲ್ಲವಲ್ಲ ಎಂಬ ಅಪರಾಧ ಪ್ರಜ್ಞೆ ಕಾಡಲಾರಂಭಿಸಿದೆ.
ನಾಡಿನ ಯಾವುದೇ ಮೂಲೆಗೆ ಹೋಗಿ ನೋಡಿ. ಬಾವಿಗಳಿಲ್ಲದ ಊರು ಸಿಗುವುದೇ ಇಲ್ಲ. ಪಾರಂಪರಿಕ ನೀರು ನಿರ್ವಹಣಾ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ಬಾವಿಗಳಿಗೆ ಅದರದೇ ಆದ ಮಹತ್ವವಿದೆ. ಶತಶತಮಾನಗಳಿಂದ ಜನಜೀವನವನ್ನು ಪೊರೆಯುತ್ತಿರುವ ಬಾವಿಗಳ ಬಗ್ಗೆ ಅದೇಕೋ ಒಂದು ದಿವ್ಯ ನಿರ್ಲಕ್ಷ್ಯ ಭಾವ ನಮ್ಮಲ್ಲಿ ಮನೆ ಮಾಡುತ್ತಿದೆ.
ಬಾವಿಗಳ ಇತಿಹಾಸ ಹುಡುಕುತ್ತ ಹೊರಟರೆ ಕನಿಷ್ಠ ಸಾವಿರ ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ನಾಗರಿಕತೆಯ ಅನಿವಾರ್ಯಗಳಲ್ಲಿ ಒಂದಾಗಿದ್ದ ಬಾವಿಗಳನ್ನು ಅವಲಂಬಿಸಿಯೇ ಕೃಷಿ ಸೇರಿದಂತೆ ಎಲ್ಲ ದೈನಂದಿನ ಚಟುವಟಿಕೆಗಳು ನಡೆಯುತ್ತಿದ್ದವು ಎಂದರೆ ಇಂದಿನ ಬೃಹತ್ ನೀರಾವರಿ ಯೋಜನೆಗಳ ದಿನಗಳಲ್ಲಿ ಅಚ್ಚರಿ ಎನಿಸಬಹುದು. ಒಂದು ಊರೆಂದರೆ ಅಲ್ಲೊಂದು ಕೆರೆ, ಅದರ ಸುತ್ತಮುತ್ತ ಕನಿಷ್ಠ ನೂರು ಬಾವಿಗಳು ನಿರ್ಮಾಣಗೊಂಡಿರುತ್ತಿದ್ದವು. ಹೆಚ್ಚೆಂದರೆ ೨೫ ರಿಂದ ೩೦ ಅಡಿಗಳ ಆಳದಲ್ಲಿ ಬಾವಿಗಳಿಂದ ನೀರೆತ್ತಿ ಉಪಯೋಗಿಸಲಾಗುತ್ತಿತ್ತು. ತೀರಾ ಇತ್ತೀಚಿನ ದಿನಗಳವರೆಗೂ ಇದೇ ಪರಿಸ್ಥಿತಿ ಇತ್ತು. ಬಹುಶಃ ೮೦ರ ದಶಕದಲ್ಲಿ ರಾಜ್ಯವನ್ನು ಬಿಟ್ಟೂ ಬಿಡದೇ ಕಾಡಿದ ಬರದ ಬಳಿಕ ಬಾವಿಗಳಿಗೂ ಗ್ರಹಚಾರ ಆರಂಭವಾಯಿತೇನೊ ?
೧೯೮೦ರ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಸುಮಾರು ೪ ಲಕ್ಷ ಬಾವಿಗಳಿದ್ದವು. ಈ ಪೈಕಿ ಮೂರೂವರೆ ಲಕ್ಷದಷ್ಟು ನೀರಾವರಿಗೋಸ್ಕರವೇ ತೋಡಿದ್ದು. ಉಳಿದ ಐವತ್ತು ಸಾವಿರ ಬಾವಿಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಒಂದು ಕಾಲದಲ್ಲಿ ಗುಲ್ಬರ್ಗ ಸುತ್ತಮುತ್ತಲಿನ ಬಾವಿಗಳು ಅತ್ಯಂತ ಪ್ರಖ್ಯಾತವಾಗಿದ್ದವು. ಜಿಲ್ಲೆಯ ಶಹಾಪುರ, ಸುರಪುರಗಳು ರಾಜಾಡಳಿತರ ಕಾಲಕ್ಕೆ ಒಳಪಟ್ಟ ಸಂದರ್ಭದಲ್ಲಿ ಅತ್ಯಂತ ವೈಜ್ಞಾನಿಕವಾಗಿ ಬಾವಿಗಳ ನಿರ್ಮಾಣ ನಡೆದಿದ್ದವು ಎನ್ನುತ್ತದೆ ಇತಿಹಾಸ. ಅಲ್ಲಿನ ಸುಣ್ಣದ ಕಲ್ಲುಗಳು ನೀರನ್ನು ಹೀರಿಕೊಳ್ಳುವ ವಿಶೇಷ ಗುಣಗಳನ್ನು ಹೊಂದಿವೆ. ಇಂಥ ಕಲ್ಲುಗಳನ್ನು ಅಗೆದು ತೆಗೆಯುತ್ತ ಹೋದರೆ ಅವುಗಳ ಕೆಳಗೆ ಸಮೃದ್ಧ ನೀರ ಸೆಲೆ ನಲಿದಾಡುತ್ತದೆ. ಇದನ್ನೇ ಕಂಡುಕೊಂಡಿದ್ದ ಆಗಿನ ಆಳರಸರು, ನೂರಾರು ಬಾವಿಗಳನ್ನು ನಿರ್ಮಿಸಿ ನೀರು ನಿರ್ವಹಣೆಯಲ್ಲಿ ಜಾಣ್ಮೆ ಮೆರೆದಿದ್ದುದು ಕಂಡು ಬರುತ್ತದೆ. ಪಕ್ಕದ ಲಿಂಗಸುಗೂರು ಪ್ರದೇಶವಂತೂ ಬಾವಿಗಳಿಗೆ ಹೆಸರುವಾಸಿ. ಅಲ್ಲಿ ಆಗಿ ಹೋದ ಮನ್ನೇಸಾಬನೆಂಬ ಸಾಮಂತ ಸಾವಿರಕ್ಕೂ ಹೆಚ್ಚು ಬಾವಿಗಳನ್ನು ಏಕ ಕಾಲಕ್ಕೆ ತೋಡಿಸಿದ್ದನಂತೆ. ಇವು ಪಾರಂಪರಿಕ ಬದುಕಿನಲ್ಲಿ ಬಾವಿಗಳಿಗಿದ್ದ ಮಹತ್ವಕ್ಕೆ ಸಾಕ್ಷಿ.
ಜಿಲ್ಲೆಯ ಯಾವುದೇ ಭಾಗಕ್ಕೆ ಹೋದರೂ ಅತ್ಯಂತ ಸುವ್ಯವಸ್ಥಿತವಾಗಿ ಕಲ್ಲುಗಳಿಂದ ಕಟ್ಟಿರುವ ಸುಂದರ ಬಾವಿಗಳ ನಿರ್ಮಾಣ ಗಮನ ಸೆಳೆಯುತ್ತದೆ. ಗುಲ್ಬರ್ಗದ ಲಾಲ್‌ಗೇರಿಯಲ್ಲಿರುವ ಈ ಪುಟ್ಟ ಬಾವಿಯೂ ಇವೆಲ್ಲದರ ಪ್ರತೀಕದಂತಿದೆ. ಸುಮಾರು ಮೂವತ್ತು ಅಡಿ ಉದ್ದ, ಹತ್ತು ಅಡಿ ಅಗಲದ ಈ ಸುಂದರ ಬಾವಿಗೆ ಸುತ್ತಲೂ ಸದೃಢ ಕಲ್ಲು ನಿರ್ಮಾಣವನ್ನು ಮಾಡಲಾಗಿದೆ. ನಾಲ್ಕೈದು ಅಡಿಗೆಲ್ಲ ನೀರು ಎಟಕುವಂತಿದ್ದರೂ ಕೆಳಭಾಗದವರೆಗೂ ಕಲ್ಲಿನ ಅಟ್ಟಣಿಗೆಗಳನ್ನು ಕಟ್ಟಲಾಗಿದೆ. ಬಾವಿಯ ಗೋಡೆಯ ಮೇಲಿರುವ ಹೊಯ್ಸಳರ ರಾಜ ಮುದ್ರೆಯ ಪ್ರತಿಕೃತಿ ಅದರ ಇತಿಹಾಸವನ್ನು ಸಾರುತ್ತಿದೆ. ಬಾವಿಯನ್ನು ಎಷ್ಟು ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದರೆ ಸುತ್ತ ಮುತ್ತಲಿನ ಯಾವುದೇ ಪ್ರದೇಶದಲ್ಲಿ ಮಳೆಯಾದರೂ ಅಲ್ಲಲ್ಲಿಯೇ ಇಂಗುವ ನೀರು, ಸೆಲೆಯ ರೂಪದಲ್ಲಿ ಇಲ್ಲಿಗೇ ನೇರವಾಗಿ ಸಂಪರ್ಕಿಸುತ್ತದೆ. ಮಾತ್ರವಲ್ಲ ಆಗಿನ ಕಾಲದಲ್ಲಿಯೇ ಬಾವಿಯೊಳಗಿಂದ ಪೈಪ್ ಜಾಲವನ್ನು ನಿರ್ಮಿಸಿ ನಗರದೊಳಕ್ಕೆ ಕೊಂಡೊಯ್ಯಲಾಗಿದೆ. ಸಮೀಪದ ಷಣ್ಮುಖ ದೇವರ ಗುಡಿಯಲ್ಲಿ ಇದಕ್ಕೆ ಪುರಾವೆ ಸಿಗುತ್ತದೆ.
ಹೇಗೆ ನೋಡಿದರೂ, ಅಂದಿನ ತಂತ್ರಜ್ಞರ ಜಾಣ್ಮೆಗೆ ತಲೆದೂಗಲೇಬೇಕು; ಹಾಗಿದೆ ಬಾವಿ. ಒಂದು ರೀತಿಯಲ್ಲಿ ಈಜುಕೊಳದಂತೆ ಕಂಡರೂ ಆಗಿನ ಅರ್ಧ ನಗರಕ್ಕೆ ನೀರು ಪೂರೈಸಬಲ್ಲ ಸಾಮರ್ಥ್ಯ ಈ ಬಾವಿಗಿತ್ತು. ಸುತ್ತಲಿನವರು ಹೇಳುವ ಪ್ರಕಾರ ಈವರೆಗೆ ಅದರಲ್ಲಿ ನೀರು ಬತ್ತಿದ್ದೇ ಗೊತ್ತಿಲ್ಲ. ೭೬ರ ಸುಮಾರಿಗೆ ಇಡೀ ನಗರದಲ್ಲಿ ನೀರಿನ ಹಾಹಾಕಾರವೆದ್ದಾಗಲೂ ಈ ಬಾವಿಯಲ್ಲಿ ಅರ್ಧ ಅಡಿಗಳಷ್ಟು ಮಾತ್ರ ನೀರಿನ ಪ್ರಮಾಣ ಕುಸಿದಿತ್ತು. ಇಂಥ ಬಾವಿ ಇದೀಗ ರಸ್ತೆ ವಿಸ್ತರಣೆಯ ನೆಪದಲ್ಲಿ ಧ್ವಂಸಗೊಳ್ಳುತ್ತಿದೆ. ಸ್ವಲ್ಪ ಮನಸ್ಸು ಮಾಡಿದರೂ ಈ ಅಪರೂಪದ ಖನಿಯನ್ನು ಉಳಿಸಿಕೊಳ್ಳುವುದು ಕಷ್ಟವೇನಲ್ಲ. ತುಸುವೇ ರಸ್ತೆಯನ್ನು ತಿರುಗಿಸಿಕೊಂಡು ಹೋದರೂ ಇದು ಇನ್ನೂ ಅದೆಷ್ಟೋ ತಲೆಮಾರಿಗೆ ನೀರುಣಿಸಬಲ್ಲುದು. ಆದರೆ ಅದರ ಪಕ್ಷಪಾತಿಯಾಗಿ ಲಾಬಿ ಮಾಡುವವರಿಲ್ಲ.
ಇದಂತಲೇ ಅಲ್ಲ. ಬಾವಿಗಳ ಬಗ್ಗೆ ಇಂಥ ಅನಾದರ ಗುಲ್ಬರ್ಗದಲ್ಲಿ ಹೊಸತಲ್ಲ. ಒಂದು ಕಾಲದಲ್ಲಿ ಇಡೀ ಗುಲ್ಬರ್ಗಕ್ಕೆ ನೀರು ಪೂರೈಸುತ್ತಿದ್ದ ಅಲ್ಲಿನ ಶಾಂತಿನಗರದ ಬಾವಿಯ ಇಂದಿನ ಸ್ಥಿತಿ ನೋಡಿದರೆ ನಮ್ಮ ಅಜ್ಞಾನಕ್ಕೆ ನಗಬೇಕೋ, ಅಳಬೇಕೋ ಅರ್ಥವಾಗದು. ಸುಮಾರು ೩ ಎಕರೆಯಷ್ಟು ವಿಸ್ತೀರ್ಣದಲ್ಲಿ ಮೈಚಾಚಿದ್ದ ಅದ್ಭುತ ಸಂರಚನೆಯ ಈ ಬಾವಿ ಇಂದು ಕಸ ಚೆಲ್ಲುವ ಮೈದಾನವಾಗುಳಿದಿದೆ. ನಗರದ ಕೈಗಾರಿಕಾ ಬಡಾವಣೆಯಲ್ಲಿರುವ ಇನ್ನೊಂದು ಬೃಹತ್ ಬಾವಿಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕೇವಲ ಹತ್ತು ಅಡಿಗೆಲ್ಲ ನೀರು ಸಿಗುವಂತಿರುವ ಸಮೃದ್ಧ ಅಂತರ್ಜಲದಿಂದ ತುಂಬಿರುವ ಈ ಬಾವಿಯನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ.
ಇದು ಬೃಹತ್ ಬಾವಿಗಳ ಕಥೆಯಾದರೆ, ಇನ್ನು ಸೇಂಟ್ ಮೇರೀಸ್ ಶಾಲೆಯ ಸಮೀಪದ ಕಾರ್ಪೊರೇಷನ್ ಬಾವಿ, ಕಸದ ತೊಟ್ಟಿಯಾಗಿ ಪರಿವರ್ತನೆಯಾಗಿ ಅವಸಾನದ ಅಂಚಿನಲ್ಲಿರುವ ಶರಣನಗರ ಸಮೀಪದ ಜನತಾ ಲೇಔಟ್‌ನ ಬಾವಿ ಹೀಗೆ...ಹೆಸರಿಗೆ ಉಳಿದಿರುವ ಕೆಲವೇ ಬಾವಿಗಳೂ ಭೂಗತವಾಗುತ್ತಿವೆ. ನೂರಾರು ಕೋಟಿ ರೂ.ಗಳನ್ನು ಸುರಿದು ಬೆಣ್ಣೆತೊರಾದಿಂದ, ಭೀಮಾ ನದಿಯಿಂದ ಪೈಪ್ ಜೋಡಿಸಿಕೊಂಡು ಬಂದು ಗುಲ್ಬರ್ಗ ನಗರಕ್ಕೆ ನೀರು ಪೂರೈಸಲಾಗುತ್ತಿದೆ. ಹೆಚ್ಚೆಂದರೆ ಇವೆಲ್ಲ ಆಗಿ ಒಂದೆರಡು ದಶಕಗಳಾಗಿರಬಹುದು. ಅದಕ್ಕೂ ಮುನ್ನ ಗುಲ್ಬರ್ಗದ ಮಂದಿ ನೀರನ್ನೇ ಕುಡಿದಿರಲಿಲ್ಲವೇ ? ಅಂದು ತಂಪೆರೆದು ಜೀವನ ಪೊರೆದ ಅಮೂಲ್ಯ ಬಾವಿಗಳನ್ನು ಅಲ್ಲಿನವರು ಮರೆತರೇಕೆ ? ರಸ್ತೆ ವಿಸ್ತರಣೆಗೆ ಬಂದಿರುವ ಜೆಸಿಬಿ, ಬುಲ್ಡೋಜರ್‌ಗಳ ಶಬ್ದದಲ್ಲಿ ಇಂಥ ಪ್ರಶ್ನೆಗಳು ಲೀನವಾಗಿ ಹೋಗುತ್ತಿವೆ ಅಲ್ಲಿ.


‘ಲಾಸ್ಟ್’ಡ್ರಾಪ್: ರಾಜ್ಯದಲ್ಲಿ ಅತ್ಯಕ ಬಾವಿಗಳಿರುವ ಜಿಲ್ಲೆ ಕೋಲಾರ. ಅಲ್ಲಿ ೬೦ ಸಾವಿರಕ್ಕೂ ಹೆಚ್ಚು ಬಾವಿಗಳಿವೆ.