ಅದ್ಯಾವ ಪುಣ್ಯಾತ್ಮ ಆ ಊರಿಗೆ ‘ಜಲಗಾಂವ್’ ಎಂಬ ಹೆಸರಿಟ್ಟನೋ, ಏನೋ ! ನೀರೆಂಬ ಪದಕ್ಕೇ ಅಪವಾದ ಅದು. ನೀರೊಂದನ್ನು ಬಿಟ್ಟು ಉಳಿದೆಲ್ಲವೂ ಅಲ್ಲಿ ಹೇರಳವಾಗಿದೆ. ಮಳೆ ಸಾಕಷ್ಟು ಬರುವುದಿಲ್ಲ; ಎಂಬುದನ್ನು ಮರೆತು ಬಿಟ್ಟರೆ ಚಳಿ, ಬಿಸಿಲಿಗೆ ಕೊರತೆ ಇಲ್ಲ. ಕೊರತೆಯೇನು ಬಂತು, ಸಾಕು ಸಾಕೆನಿಸುವಷ್ಟು ಅವು ಕಾಡುತ್ತವೆ ಎಂದೇ ಹೇಳ ಬೇಕು. ಋತುಮಾನದಲ್ಲಿ ಎಕ್ಸಟ್ರೀಮ್ ಅನ್ನೋದನ್ನು ನೋಡಬೇಕಿದ್ದರೆ ಜಲಗಾಂವ್‌ಗೆ ಬಂದರಾಯಿತು. ಚಳಿ ಎಂಬುದನ್ನು ನೆನೆಸಿಕೊಂಡೇ ಅಲ್ಲಿನ ಜನ ನಡುಗುತ್ತಾರೆ. ಮೈನಸ್ ೭ ಡಿಗ್ರಿ ಸೆಲ್ಸಿಯಸ್‌ಗೆ ಹೋದರೂ ‘ಈ ವರ್ಷ ಚಳಿ ಕಡಿಮೆ’ ಎಂದುಕೊಳ್ಳುವ ಪರಿಸ್ಥಿತಿ ಬರುತ್ತದೆಂದರೆ ಶಿಶಿರದ ರಾತ್ರಿಗಳು ಅಲ್ಲಿ ಹೇಗಿರುತ್ತವೆ ಎಂಬುದನ್ನು ಊಹಿಸಿಕೊಳ್ಳಿ. ಹಾಗೆಯೇ ‘ಬೇಸಿಗೆ’ ಎಂಬ ಪದವೇ ಚರ್ಮದ ರಂಧ್ರ-ರಂಧ್ರಗಳಲ್ಲಿ ನೀರೊಡೆಸುತ್ತದೆ. ೪೫ ಡಿಗ್ರಿಯನ್ನೂ ಅಲ್ಲಿನವರೂ ಅನಾಯಾಸವಾಗಿ ಸಹಿಸಿಕೊಳ್ಳುವಷ್ಟು ಹೊಂದಿಕೊಂಡು ಬಿಟ್ಟಿದ್ದಾರೆ. ಮಳೆ ಮಾತ್ರ ಹೆಚ್ಚೆಂದರೆ ವಾರ್ಷಿಕ ೬೫೦ರಿಂದ ೭೫೦ ಮಿಲಿ ಮೀಟರ್‌ನಷ್ಟು.
ಬೆಂಗಳೂರಿನಿಂದ ಆಗಸದಲ್ಲಿ ಹಾರುತ್ತ ಹೋದರೆ ಮೂರೂವರೆ, ನಾಲ್ಕು ತಾಸಿನ ಪಯಣ. ಮಹಾರಾಷ್ಟ್ರದ ಆಚೆ ಗಡಿಯಂಚಿನಲ್ಲಿ ಮಧ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಜಿಲ್ಲಾ ಕೇಂದ್ರವದು. ಬಹುಶಃ ಒಂದಷ್ಟು ಉದ್ಯಮ ಬೆಳೆಯದೇ ಹೋಗಿದ್ದರೆ ಇಂದಿಗೂ ಬ್ರಿಟಿಷರ ಕಾಲದ ಪಳೆಯುಳಿಕೆಯಾಗಿ ಉಳಿದುಬಿಡುತ್ತಿತ್ತೇನೋ. ಹೆಸರಿಗೊಂದು ನದಿ ಹರಿಯುತ್ತದೆ ‘ಗಿರ್‍ನಾ’. ಅದರಲ್ಲಿ ನೀರು ಹರಿಯುತ್ತದೆ ಎನ್ನುವುದಕ್ಕಿಂತ ಕಪ್ಪು ಕಲ್ಲಿನ ಚೂರುಗಳು ಹರಿದು ಹೋಗುತ್ತವೆ ಎನ್ನುವಂತಿದೆ. ಆ ನದಿ ಪಾತ್ರದಲ್ಲಿ ನಿಂತು ಒಮ್ಮೆ ಸುತ್ತಲೂ ಕಣ್ಣಾಡಿಸಿದರೆ ಒಂದಷ್ಟು ಬೋಳುಬೋಳು ಬೆಟ್ಟಗಳ ಸಾಲು. ದೂರದ ಬೆಟ್ಟ ಕಣ್ಣಿಗಷ್ಟೇ ಅಲ್ಲ, ಹತ್ತಿರ ಹತ್ತಿ ಹೋಗಿ ನೋಡಿದರೂ ನುಣ್ಣ-ನುಣ್ಣಗೆ. ಬಹುತೇಕ ಹುಲ್ಲಿನ ಎಸಳೂ ಅಲ್ಲಿ ಬದುಕುಳಿಯಲು ಸಾಧ್ಯವಿಲ್ಲ ಎಂಬಷ್ಟರ ಮಟ್ಟಿಗೆ ಒಣಗಿ ಬೋರಿಡುತ್ತವೆ ಆ ಬೆಟ್ಟಗಳು. ಇಷ್ಟೆ, ಅದು ಬಿಟ್ಟರೆ ಎರಡು-ಮೂರು ದಶಕಗಳ ಹಿಂದೆ ಅದರ ಬಗ್ಗೆ ಹೇಳಿಕೊಳ್ಳಲು ಬೇರೇನೂ ಇರಲೇ ಇಲ್ಲ.
ಆದರೂ ಆ ಊರಿಗೆ ಹೆಸರು ಜಲಗಾಂವ್- ನೀರಿನ ಹಳ್ಳಿ. ಅಲ್ಲಿನ ನೆಲದ ಮೇಲೆ ಕಾಲೂರುವವರೆಗೆ ಅಲ್ಲಿ ನೀರು ಸಮೃದ್ಧವಾಗಿರಬಹುದು ಎಂದೇ ಅಂದುಕೊಂಡಿದ್ದರೆ ಅದು ಹೆಸರಿನಲ್ಲಾದ ಮೋಸ. ಬಹುಶಃ ಅದು ‘ಝಳಗಾಂವ್’ ಎಂದಾಗಿದ್ದರೆ ಸರಿಯಾಗುತ್ತಿತ್ತೇನೋ ! ಅಲ್ಲಿನ ಬಿಸಿಲಿನ ಝಳ ನೋಡಿದರೆ ಅದೇ ಸೂಕ್ತ ಹೆಸರು. ಅಂಥ ಉರಿಯುರಿಯಲ್ಲಿ ಇಂದು ತಣ್ಣನೆಯ ಗಾಳಿ ಬೀಸುತ್ತಿದೆ. ತಂಪು ತಂಪು ಬದುಕು ಅರಳುತ್ತಿದೆ. ನೀರು ಮನೆ ಮಾಡಿಕೊಳ್ಳಲು ಆರಂಭಿಸಿದೆ. ಅದರ ಬೆನ್ನಿಗೇ ಹಸಿರು ವಲಸೆ ಬಂದಿದೆ. ನುಣ್ಣನೆಯ ಬೆಟ್ಟದಲ್ಲಿ ಇಂದು ಕುರುಚಲು ಮಾತ್ರವಲ್ಲ, ಬೋಳು ತಲೆಗೆ ಕೂದಲು ಕಸಿ ಮಾಡಿ ನಿಲ್ಲಿಸಿದಂತೆ ಒಂದಷ್ಟು ಮರಗಿಡಗಳೂ ನಲಿದಾಡುತ್ತಿವೆ.
‘ಜಲಗಾಂವ್’ನ ಹೆಸರನ್ನು ಅನ್ವರ್ಥಗೊಳಿಸಲಾರಂಭಿಸಿದ್ದು ರೈತ ಕುಟುಂಬದ ಹಿನ್ನೆಲೆಯಲ್ಲಿ ಹುಟ್ಟಿದ ಒಂದು ಕಾಲದ ಸೀಮೆ ಎಣ್ಣೆ ವ್ಯಾಪಾರಿ, ಇಂದಿನ ಸಾವಿರಾರೂ ಕೋಟಿ ರೂ. ಮೌಲ್ಯದ ‘ಜೈನ್ ಇರಿಗೇಷನ್’ ಎಂಬ ಸಾಮ್ರಾಜ್ಯದ ಅಪತಿ ! ನೀರಿಗಾಗಿನ ರೈತರ ಪರದಾಟಕ್ಕೊಂದು ಕೊನೆಗಾಣಿಸಲೇಬೇಕೆಂಬ ಅಸೀಮ ಇಚ್ಛಾ ಶಕ್ತಿಯ ಫಲ ಇಂದು ಕೊಯ್ಲಿಗೆ ಬರುತ್ತಿದೆ ಎಂಬುದನ್ನು ಕಂಡರೆ ನೀರ ಪ್ರೇಮಿಗಳ ರೋಮ ರೋಮಗಳೂ ನಿಗುರಿ ನಿಲ್ಲುತ್ತವೆ. ಅದರ ಹಿಂದಿರಬಹುದಾದ ಭವರ್‌ಲಾಲ್ ಜೈನ್ ಎಂಬ ೭೦ರ ಯುವಕನ ಕ್ರಿಯಾಶೀಲತೆಗೆ ಅವರ ತಲೆ ಬಾಗುತ್ತದೆ.
ಸುಮ್ಮನೆ ಹೇಳುವುದಲ್ಲ. ಶುಭ್ರ ಶ್ವೇತ ವಸ್ತ್ರಧಾರಿ, ಅಷ್ಟೇ ಬೆಳ್ಳಂಬೆಳ್ಳಗಿನ ಮನಸ್ಸಿನ ಆ ಸರಳ ವ್ಯಕ್ತಿ ಇಷ್ಟೆಲ್ಲ ಸಾಸಿದ್ದು ಎಲ್ಲವೂ ಇಟ್ಟುಕೊಂಡಲ್ಲ. ಇಂದು ಜಲಗಾಂವ್‌ನ ಜೈನ್ ಹಿಲ್ಸ್‌ಗೆ ಹಚ್ಚ ಹಸಿರು ಹಚ್ಚಡ ಹೊದಿಸಿ ಮಲಗಿಸಿದ್ದು ಹಣದ ಥೈಲಿಯನ್ನು ಬಗಲಲ್ಲಿಟ್ಟುಕೊಂಡಲ್ಲ. ಹಾಗೆ ನೋಡಿದರೆ ‘ಭಾವು’ ( ಜೈನ್ ಸಮೂಹದ ನೌಕರರು, ಸುತ್ತಲಿನ ರೈತರು ಅವರನ್ನು ಪ್ರೀತಿಯಿಂದ ಹಾಗೆಯೇ ಕರೆಯುತ್ತಾರೆ, ಮರಾಠಿಯಲ್ಲಿ ಬಾವು ಎಂದರೆ ಅಣ್ಣ ಎಂದರ್ಥ) ಸರಕಾರ ತಿಂಗಳ-ತಿಂಗಳು ಕೊಡುವ ಪಗಾರ, ಕಾರು, ಮುಂಬೈನಲ್ಲೊಂದು ಬಂಗಲೆ, ಫೋನು, ಫ್ಯಾನಿನ ನಡುವೆ ತಣ್ಣಗಿದ್ದು ಬಿಡಬಹುದಿತ್ತು. ಮಹಾರಾಷ್ಟ್ರ ನಾಗರಿಕ ಸೇವೆಗೆ ಆಯ್ಕೆಯಾಗಿದ್ದ ಭಾವುಗೆ ತಮ್ಮ ಕರ್ತೃತ್ವ ಶಕ್ತಿಗೆ ಅದು ತೀರಾ ಚಿಕ್ಕದೆನಿಸಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ತಾವು ಹುಟ್ಟಿ ಬೆಳೆದ ನೆಲದ ಬದುಕನ್ನು ಹಸಿಹಸಿಯಾಗಿ ಕಟ್ಟಿ ನಿಲ್ಲಿಸಬೇಕೆಂಬ ಅದಮ್ಯ ಕನಸು ಅವರನ್ನು ಕೂರಗೊಡಲಿಲ್ಲ. ಸರಕಾರಿ ಸೇವೆಯನ್ನು ಎಡಗೈಯಿಂದ ತಳ್ಳಿ, ದುಮುಕಿದ್ದು ವ್ಯಾಪಾರಕ್ಕೆ. ಅವರೇ ಹೇಳಿಕೊಳ್ಳುವಂತೆ ಹೇಳಿಕೇಳಿ ಅವರದ್ದು ಮಾರ್‍ವಾಡಿ ಮನೋಭಾವ. ವ್ಯಾಪಾರದ ಹೊರತಾಗಿ ಉಳಿದ್ಯಾವುದೂ ಆ ಮನಸ್ಸಿಗೆ ರುಚಿಸುವುದಿಲ್ಲವಂತೆ.
ಎಣ್ಣೆ-ನೀರಿಗೆ ಎಲ್ಲಿಗೆಲ್ಲಿಯ ಸಂಬಂಧ ? ಇಂದು ಜೈನ್ ಹಿಲ್ಸ್‌ನಲ್ಲಿ ನೀರ ನಿರ್ವಹಣೆಯ ಪಕ್ಕಾ ಮಾದರಿಯನ್ನು ಕಟ್ಟಿ ನಿಲ್ಲಿಸಿರುವ ಭಾವು, ಮೊದಲಿಗೆ ಆರಂಭಿಸಿದ್ದು ಸೀಮೆ ಎಣ್ಣೆ ವ್ಯಾಪಾರವನ್ನು, ಅದೂ ಅಮ್ಮನಿಂದ ಸಾಲವಾಗಿ ಪಡೆದ ಐದು ಸಾವಿರ ರೂ.ಗಳ ನೆರವಿನೊಂದಿಗೆ. ರೈತನ ಮಗನಾಗಿ ಹುಟ್ಟಿದ್ದು ಅವರನ್ನು ಮಣ್ಣಿನ ಪ್ರೀತಿಯೆಡೆಗೆ ಸಹಜವಾಗಿ ಸೆಳೆಯುತ್ತಲೇ ಇತ್ತು. ಅದು ೧೯೭೨-೭೪ರ ಅವ. ಪರಂಪರಾನುಗತವಾಗಿ ಬಂದಿದ್ದ ಜಮೀನಿನಲ್ಲಿ ಒಂದಷ್ಟು ಕೃಷಿ ಕಾಯಕವನ್ನೂ ಜತೆಗೂಡಿಸಿಕೊಂಡರು. ಹೈಬ್ರಿಡ್ ಹತ್ತಿ, ಖಾರ ಖಾರ ಮೆಣಸಿನ ಕಾಯಿ, ಝಗಮಗಿಸುವ ಜೋಳ...ಇವೇ, ಆ ಗಾರು ಬಿದ್ದೆದ್ದ ನೆಲದಲ್ಲಿ ಅಂಥವನ್ನುಳಿದು ಬೇರೇನು ಬೆಳೆಯಲು ಸಾಧ್ಯ ? ಅದಕ್ಕಾದರೂ ಒಂದಷ್ಟು ನೀರು ಬೇಕಲ್ಲ ?
ಕೃಷಿ-ಕೃಷಿಕ-ಕೃಷಿ ಭೂಮಿಯ ನಡುವಿನ ಬಂಧವನ್ನು ಗಟ್ಟಿಗೊಳಿಸಬೇಕೆಂಬ ಹೆಬ್ಬಯಕೆ ಹುಟ್ಟಿದ್ದೇ ಆವಾಗ. ಚಿಂತನೆ ಅನುಕ್ಷಣದ ಚಿಂತೆಯಾಗತೊಡಗಿತು. ಏನಾದರೂ ಮಾಡಲೇಬೇಕು; ಅದು ಅತೃಪ್ತ ಸಾಧಕನೊಬ್ಬನ ಛಲ. ಮಾಡಿಯೇ ತೀರುತ್ತೇನೆ; ಅದರ ಹಿಂದೆ ಪಡಮೂಡಿದ ಫಲ. ಜಮೀನಲ್ಲೊಂದು ಬಾವಿ, ಅದರಲ್ಲೊಂದಿಷ್ಟು ನೀರೂ ಬಿತ್ತೆನ್ನಿ. ಹೆಚ್ಚೇನೂ ಫಲ ನೀಡಲಿಲ್ಲ. ಆಗ ಆದದ್ದು ಸತ್ಯದ ದರ್ಶನ- ಇದು ಈ ಭಾಗದ ಎಲ್ಲ ರೈತನ ಬವಣೆ. ಸಾಂಪ್ರದಾಯಿಕ ಮಳೆಯಾಧಾರಿತ ನೀರಾವರಿಯಿಂದ ಭಿನ್ನ ಪದ್ಧತಿಯೊಂದನ್ನು ಕಂಡುಕೊಳ್ಳಬೇಕೆಂದು ಹೊರಟದ್ದು ಮಥನದ ಅಂತಿಮ ಘಟ್ಟದಲ್ಲಿ ಹೊಳೆದ ಜ್ಞಾನದ ಬೆಳಕು. ತಲೆಮಾರುಗಳ ಸುದೀರ್ಘ ಅನುಭವದ ಆಧಾರದಲ್ಲಿ ಪ್ರಸ್ತುತ ಸನ್ನಿವೇಶದ ವಾಸ್ತವದ ಮೇಲೆ ಬಾವು, ಭವ್ಯ ಭವಿಷ್ಯ ಬರೆಯಲು ಹೊರಟು ನಿಂತಿದ್ದರು ಜೋಡೆತ್ತಿನ ಗಾಡಿಯ ಮೇಲೆ.
೧೯೮೭-೮೮ರ ಅವ, ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಭವರ್‌ಲಾಲ್ ಭಾವು, ಖಾಂದೇಶ್ ವಲಯದಲ್ಲಿ ಹನಿ ನೀರಾವರಿ ಸಂಬಂಧ ಖಾಸಗೀ ಸಂಸ್ಥೆಯೊಂದನ್ನು ಹುಟ್ಟು ಹಾಕಿದರು. ಅವರಿಗೆ ಚೆನ್ನಾಗಿ ಗೊತ್ತಿತ್ತು, ಒಂದೇ ನೆಗೆತದಲ್ಲಿ ರೈತರಲ್ಲಿ ಈ ಬಗ್ಗೆ ನಂಬಿಕೆ ಹುಟ್ಟಿಸಲು ಸಾಧ್ಯವಿಲ್ಲ ಎಂಬುದು. ಅದಕ್ಕಾಗಿ ಜಲಗಾಂವ್ ಸಮೀಪ ಪ್ರಾತ್ಯಕ್ಷಿಕೆ ಘಟಕವೊಂದನ್ನು ಸ್ಥಾಪಿಸಿದರು. ಇನ್ನೂ ಸಮಾಧಾನವಾಗಲಿಲ್ಲ. ಎಲ್ಲವೂ ರೈತರಿಗೆ ಅರ್ಥವಾಗಬೇಕಿದ್ದರೆ ಬೋಳು ಬೆಟ್ಟದ ಮೇಲೊಂದು ಬೆಟ್ಟದಷ್ಟೇ ದೊಡ್ಡ ಸಾಧನೆಯನ್ನು ಮಾಡಿಯೇ ತೋರಿಸಬೇಕು. ದಕ್ಷಿಣ ಜಲಗಾಂವ್‌ನ ಪುಟ್ಟದೊಂದು ಹಳ್ಳಿ ಶಿರ್ಸೋಳಿ. ಖುಲ್ಲಂಖುಲ್ಲ ಸಾವಿರ ಎಕರೆಯಷ್ಟು ವಿಸ್ತಾರದ ಒಂದಿಡೀ ಗುಡ್ಡವನ್ನು ಖರೀದಿಸಿಯೇ ಬಿಟ್ಟರು. ಎಲ್ಲರೂ ದೇವರಾಣೆ ಈ ಮನುಷ್ಯನಿಗೆ ತಲೆ ಕೆಟ್ಟಿರಬೇಕೆಂದುಕೊಂಡಿದ್ದರೆ ಅಂದುಕೊಂಡವರ ಅಪರಾಧ ಏನೂ ಇಲ್ಲ. ಹಾಗಿತ್ತು ಆ ಗುಡ್ಡ. ಭೂತಗಾಜು ಹಾಕಿ ಹುಡುಕಿದರೂ ಅಲ್ಲಿ ನೀರ ಪಸೆಯೂ ಸಿಗುವುದಿಲ್ಲ ಎಂಬ ಸ್ಥಿತಿಯಲ್ಲಿದ್ದ ಆ ನೆಲವನ್ನು ಕೊಂಡುಕೊಂಡಾದರೂ ಏನು ಮಾಡುತ್ತಾರೆ ಎಂಬುದು ಸಹಜ ಪ್ರಶ್ನೆ.
ಇಂಥ ನೂರು ಪ್ರಶ್ನೆಗಳಿಗೆ ಉತ್ತರ ಕೊಡುವ ವಿಶ್ವಾಸವನ್ನು ತುಂಬಿಕೊಂಡೇ ಭಾವು, ಈ ಗುಡ್ಡಕ್ಕೆ ಕಾಲಿಟ್ಟಿದ್ದರು. ಆದರೆ ಅಂಥ ಯಶಸ್ಸಿನ ಬೆಟ್ಟ ಹತ್ತುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಏಕೆಂದರೆ ಕನಿಷ್ಠ ಎತ್ತಿನ ಬಂಡಿ ಹೋಗಬಲ್ಲ ಹಾದಿಯೂ ಅಲ್ಲಿರಲಿಲ್ಲ. ೬೦೦ ರಿಂದ ೯೫೦ ಅಡಿ ಎತ್ತರದ ಆ ಗುಡ್ಡ ಶ್ರೇಣಿಯಲ್ಲಿ ಮಾಡಬೇಕಿದ್ದ ಮೊದಲ ಕೆಲಸ, ಬೀಳುವ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಬೇಕಿದ್ದುದು. ಯಶೋಗಾಥೆಯ ಮೊದಲ ಅಧ್ಯಾಯ ಆರಂಭವಾಗುವುದೇ ಇಲ್ಲಿಂದ. ಮೊದಲಿಗೆ ಸುಮಾರು ೨೦೦ರಿಂದ ೪೦೦ ಲೀಟರ್ ಸಾಮರ್ಥ್ಯದ ಪುಟ್ಟ ಪಾಳು ಬಾವಿಯೊಂದು ಅಲ್ಲಿ ಕಂಡು ಬಂತು. ಅದನ್ನೊಂದಿಷ್ಟು ಸ್ವಚ್ಛಗೊಳಿಸಿಕೊಂಡರೂ ಹೇಳಿಕೊಳ್ಳುವಂಥ ನೀರು ಸಿಗಲಿಲ್ಲ. ಕೊರೆದ ಬೋರ್‌ವೆಲ್ ಹೆಚ್ಚು ದಿನ ಮಾತಾಡಲಿಲ್ಲ. ಇಂಥವುಗಳಿಂದ ಅಂದುಕೊಂಡಿದ್ದನ್ನೆಲ್ಲ ಸಾಸಲಾಗುವುದಿಲ್ಲ ಎಂಬ ಅರಿವೂ ಇತ್ತು.
ನೀರಿಗಾಗಿ ಎರಡು ಆಯ್ಕೆಗಳು ಭಾವು ಮುಂದಿದ್ದವು. ಮೊದಲನೆಯದು ಗಿರ್‍ನಾ ನದಿಯಿಂದ ಐದು ಕಿ.ಮೀ. ವರೆಗೆ ನೀರನ್ನು ಏತದ ಮೂಲಕ ತರುವುದು. ಇನ್ನೊಂದು ಇಡೀ ಗುಡ್ಡವನ್ನೇ ಮಳೆ ನೀರು ಸಂಗ್ರಹಾಗಾರವನ್ನಾಗಿ ಪರಿವರ್ತಿಸುವುದು. ಗಿರ್‍ನಾ ನದಿ ದಂಡೆಯ ನಜ್ಗಿರಿ ಎಂಬಲ್ಲಿ ಸುಸಜ್ಜಿತ ಪಂಪ್ ಹೌಸ್ ನಿರ್ಮಿಸಿ ಮೊದಲನೆ ಆಯ್ಕೆಯ ಅನುಷ್ಠಾನಕ್ಕೆ ಎಲ್ಲವೂ ಸಜ್ಜಾಯಿತು. ನೀರೂ ಬಂತು. ಆದರೆಷ್ಟು ದಿನ. ಎತ್ತಿಕೊಂಡು ಬರಲು ನದಿಯಲ್ಲಾದರೂ ನೀರು ಬೇಡವೇ ?
೧೯೯೦ ರ ಸುಮಾರಿಗೆ ಜೈನ್ ಹಿಲ್‌ನಲ್ಲಿ ಆರಂಭವಾದದ್ದು ನಿಜವಾದ ನೀರ ಸಾಮ್ರಾಜ್ಯ ಕಟ್ಟುವ ಕಾಯಕ. ಇಡೀ ಗುಡ್ಡವನ್ನು ‘ಲ್ಯಾಂಡ್ ಶೇಪಿಂಗ್‘(ಟೆರೇಸಿಂಗ್-ತಾರಸೀಕರಣ) ಎಂಬ ಅತ್ಯಂತ ವೈಜ್ಞಾನಿಕ, ಅಷ್ಟೇ ಕಠಿಣ ಪ್ರಕ್ರಿಯೆಗೆ ಒಳಪಡಿಸಲಾಯಿತು. ಇಳಿಜಾರು ಮೈಯನ್ನು ಕಡಿದೂ ಕಡಿದು ಮೆಟ್ಟಿಲುಗಳ ಮಾದರಿಯಲ್ಲಿ ತಲೆಯಿಂದ ಬುಡದವರೆಗೆ ಪರಿವರ್ತಿಸಲಾಯಿತು. ಅಲ್ಲಲ್ಲಿ ಮೆಟ್ಟಿಲುಗಳ ಮೇಲಿ ಬಿದ್ದಿಳಿದು ಬರುವ ಮಳೆ ನೀರನ್ನು ಹಿಡಿದಿಟ್ಟುಕೊಂಡು ಇಂಗಿಸಲು ಜಲಪಾತ್ರೆಗಳ ( ಬಾಂದಾರಗಳ ಮಾದರಿಯಲ್ಲಿ) ನಿರ್ಮಾಣ. ಮೊದಲಿಗೆ ಪುಟ್ಟ ಪುಟ್ಟ ಬಾಂದಾರಗಳ ರಚನೆ. ತಾರಸೀಕರಣದ ಫಲವನ್ನುಂಡು ಮೊದಲು ತುಂಬಿಕೊಂಡದ್ದು ಇಂದು ಜೈನ್ ಸಾಗರ ಎಂದು ಗುರುತಿಸಿಕೊಳ್ಳುವ ೧೨.೫ ಕೋಟಿ ಲೀಟರ್ ಸಾಮರ್ಥ್ಯದ ಬಾಂದಾರ. ೧೯೯೩ ರಿಂದ ನಾಲ್ಕು ವರ್ಷಗಳ ಅವಯಲ್ಲಿ ಇಂಥ ಪುಟ್ಟ, ದೊಡ್ಡ ಇನ್ನೂ ನಾಲ್ಕು ಬಾಂದಾರಗಳನ್ನು ನಿರ್ಮಿಸಲಾಯಿತು. ಅಲ್ಲಿ ತುಂಬಿಕೊಳ್ಳುವ ನೀರನ್ನು ಮೇಲೆತ್ತಿ ಗುಡ್ಡದ ನೆತ್ತಿಯ ಮೇಲೆ ನಿರ್ಮಿಸಲಾದ ೩.೨೫ ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕ್‌ನಲ್ಲಿ ಸಂಗ್ರಹಿಸಿಕೊಳ್ಳುವಂತೆ ವ್ಯವಸ್ಥೆಗೊಳಿಸಲಾಯಿತು. ಆ ಟ್ಯಾಂಕ್‌ನಿಂದ ಇಡೀ ಗುಡ್ಡಕ್ಕೆ ಹನಿ ನೀರಾವರಿಯ ಪೈಪ್‌ನ ನರಜಾಲವನ್ನು ಬೆಸೆಯಲಾಯಿತು.
ಈಗ ಎಲ್ಲವೂ ಸುಸೂತ್ರ. ಮೇಲೆ ಬಿದ್ದ ಮಳೆ ನೀರು ಮೆಟ್ಟಿಲು ಸಂರಚನೆಗಳಲ್ಲಿ ಅಷ್ಟಿಷ್ಟು ಇಂಗುತ್ತಾ ಬಾಂದಾರಗಳಲ್ಲಿ ಸಂಗ್ರಹಗೊಳ್ಳುತ್ತದೆ. ಅಲ್ಲಿಂದ ಪಂಪ್‌ನಿಂದ ಮೇಲಿನ ಟ್ಯಾಂಕ್‌ಗೆ ಹೋಗುತ್ತೆ. ಟ್ಯಾಂಕ್‌ನಿಂದ ಗುರುತ್ವಾಕರ್ಷಣ ಕ್ರಿಯೆಗೊಳಪಟ್ಟು ಪೈಪ್ ಜಾಲಗಳಲ್ಲಿ ಹೊಕ್ಕು ಹನಿ ಹನಿಯಾಗಿ ಇಡೀ ಗುಡ್ಡಕ್ಕೆ ಚಿಮ್ಮುತ್ತದೆ. ಇನ್ನು ಹಸಿರಾಗದೇ ಉಳಿದೀತೆ ಬೋಳುಗುಡ್ಡ. ಇಂದು ಜೈನ್ ಹಿಲ್‌ನಲ್ಲಿ ಏನಿದೆ, ಏನಿಲ್ಲ ಎಂದು ಕೇಳಿ. ಮಾವು, ಬೇವು, ಪೇರಲ, ಚಿಕ್ಕು, ದಾಳಿಂಬೆ, ಸೀತಾಫಲ, ಹೂವು, ತರಕಾರಿ...ಎಲ್ಲವೆಂದರೆ ಎಲ್ಲವೂ ನಳನಳಿಸುತ್ತಿವೆ. ಎಲ್ಲಕ್ಕಿಂತ ಹೆಚ್ಚಾಗಿ ದೂರಕ್ಕೆ ನಿಂತು ನೋಡಿದರೂ ಬೆಟ್ಟದ ಹಸಿರು ಕಣ್ಣಿಗೆ ಕುಕ್ಕುತ್ತದೆ. ಭಾವು, ಆ ಸ್ವರ್ಗ ಸದೃಶ ಭೂಮಿಯಲ್ಲಿ, ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿಯೂ ತಣ್ಣನೆಯ ನಗೆ ಚೆಲ್ಲುತ್ತ ಓಡಾಡಿಕೊಂಡಿದ್ದಾರೆ. ನಗುವಿನ ಹಿಂದಿನ ಹೆಮ್ಮೆಯ ಬೆಳಕು ಇಡೀ ವಾತಾವರಣದಲ್ಲಿ ಪ್ರತಿಫಲಿಸುತ್ತಿದೆ.
ಲಾಸ್ಟ್‌ಡ್ರಾಪ್: ಭವರ್ ಲಾಲ್ ಜೈನ್‌ರದ್ದು ಹನಿ ಹನಿ ಕಾ ಪ್ರೇಮ್ ಕಹಾನಿ ಎನ್ನಬಹುದೇ ?
ಸಮ್ಮನಸ್ಸಿಗೆ ಶರಣು
3 months ago
No comments:
Post a Comment