ಈ ಭೂಮಿಯ ಮೇಲೆ ಬಲಿಷ್ಠರು ಬದುಕುತ್ತಾರೆ.... ಜೀವ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್‌ನ ವಿಕಾಸ ವಾದವನ್ನೊಮ್ಮೆ ನೆನಪು ಮಾಡಿಕೊಳ್ಳಿ. ನೀರಿನ ವಿಚಾರದಲ್ಲಿ ಇದನ್ನೇ ತುಲನೆ ಮಾಡಿಕೊಳ್ಳುವುದಾದರೆ ಅಲ್ಲೂ ಅಷ್ಟೆ; ಬಲಿಷ್ಠರು, ದೊಡ್ಡ ರೈತರು ನೀರು ಪಡೆಯುತ್ತಾರೆ. ಉಳಿದವರು ಕಣ್ಣಿರಿಡುತ್ತಾರೆ.
ಅದೊಂದು ಕಾಲವಿತ್ತು. ಈ ಭೂಮಿಯ ಮೇಲೆ ನೀವು ಕರೆದಲ್ಲಿಗೆ ನೀರು ತಂಟೆ-ತಕರಾರಿಲ್ಲದೇ ಬರುತ್ತಿತ್ತು. ಬೇಕಷ್ಟು ಹೊತ್ತು ನೀವದನ್ನು ಬಳಸಬಹುದಿತ್ತು. ಎಷ್ಟೋ ವೇಳೆ ಬೇಡಬೇಡವೆಂದರೂ ನಿಮ್ಮ ಆಜ್ಞಾಪಾಲಕನಂತೆ ನೀರು ವರ್ತಿಸುತ್ತಿದ್ದರೆ ಅದು ಸಮೃದ್ಧಿಯ ಫಲ. ಅದು ನಿಮಗಂತಲೇ ಅಲ್ಲ, ಎಲ್ಲರಿಗೂ ಹಾಗೆಯೇ ಲಭಿಸುತ್ತಿದ್ದುದರಿಂದ ಅಲ್ಲಿ ಪೈಪೋಟಿ ಎಂಬುದೇ ಇರಲಿಲ್ಲ. ಒಂದು ಹಂತದವರೆಗೆ ಯಾರಲ್ಲೂ ನೀರಿನ ವಿಚಾರದಲ್ಲಿ ಹಕ್ಕು-ಅಕಾರದ ಪ್ರಶ್ನೆ ಮೂಡಿರಲಿಲ್ಲ. ಹೀಗಾಗಿ ಸಹಜವಾಗಿ ಎಲ್ಲರೂ ಎಲ್ಲವನ್ನೂ ಹಂಚಿಕೊಂಡು ಹೋಗುತ್ತಿದ್ದರು. ಯಾರಿಗೂ ಎಗ್ಗು ಸಿಗ್ಗಿಲ್ಲ. ಆಳ-ಅರಿವಿಲ್ಲದ ಇಂಥ ಬಳಕೆ ಎಲ್ಲೋ ಒಂದು ಕಡೆ ದಿಕ್ಕುತಪ್ಪ ತೊಡಗಿದ್ದೇ ಸಾಮೂಹಿಕ ಮನೋಭಾವ ಮರೆಯಾದಾಗ.
ಕಾಸಿಲ್ಲ, ಕೊಸರಿಲ್ಲ, ಪುಕ್ಕಟೆ ಸಿಕ್ಕದ್ದಕ್ಕೆ ಮೌಲ್ಯವಿದ್ದೀತೆ? ಬಳಸಿದರೂ ಸರಿ,ಬಸಿದು ಹೋದರೂ ಸರಿ. ಮನದ ಎಲ್ಲೋ ಒಂದು ಮೂಲೆಯಲ್ಲಿ ನೀರಿನ ಕುರಿತಾದ ನಿರ್ಲಕ್ಷ್ಯ ಆರಂಭವಾದಾಗ ಸಂಪನ್ಮೂಲವೂ ಸಹಜವಾಗಿ ಸೊರಗತೊಡಗಿತು. ಎಲ್ಲಿಯವರೆಗೆ ವಿನಯ ಇದ್ದೀತು ? ಯಾರಿಗೆ ಅಂತ ನಿಷ್ಠೆ ತೋರೀತು ? ನೀರಿನ ಮುನಿಸು ಆರಂಭವಾದದ್ದೇ ಆಗ. ಜಲಸಂಪನ್ಮೂಲದ ಸಮಾನ ಹಂಚಿಕೆಯ ಪರಿಕಲ್ಪನೆಗೆ ಯಾವಾಗ ಧಕ್ಕೆ ಬರಲಾರಂಭಿಸಿತೋ ಅದರ ಬೆನ್ನಲ್ಲೇ ಮೊಳೆಯಿತು ಮತ್ಸರ; ಬೆಳೆಯಿತು ಪೈಪೋಟಿ. ‘ಹೇಗಾದರೂ ಮಾಡಿ ಎಲ್ಲವನ್ನೂ ನಾನೇ ಹಿಡಿದಿಟ್ಟುಕೊಂಡುಬಿಡಬೇಕು. ಮಿಕ್ಕವರಿಗೆ ಸಿಕ್ಕರೆಷ್ಟು ? ಬಿಟ್ಟರೆಷ್ಟು ?’ ಒಮ್ಮ ಇಂಥ ಮನೋಭಾವಕ್ಕೆ ಮನುಷ್ಯ ಬಂದು ನಿಲ್ಲುತ್ತಿದ್ದಂತೆಯೇ ಡಾರ್ವಿನ್ನನ ವಾದಕ್ಕೆ ಹುರುಳು ಬಂದದ್ದಿರಬೇಕು.
ಏನೋ, ಎಂತೂ ? ಒಟ್ಟಿನಲ್ಲಿ ನೀರೆಂಬುದು ಸಿಕ್ಕವರಿಗೆ ಸೀರುಂಡೆ ಎಂಬಂತಾಗಿ ಕೃಷಿಕರ ಸಮೂಹದಲ್ಲಿ ಒಡಕಿನ ಬೀಜ ಮೊಳೆದು, ವೈಮನಸ್ಯದ ಫಸಲು ಸಮೃದ್ಧವಾಗತೊಡಗಿತು. ಇದು ಊರೂರಿನ ಕತೆಯಾಯಿತು. ಸಾಂಪ್ರದಾಯಿಕ ನೀರಾವರಿ ಪದ್ಧತಿಗಳು ಕಣ್ಮರೆಯಾದ ಮೇಲಂತೂ ಜಲ ಮೂಲದಿಂದ ದೂರ ಇರುವವರು, ಸಣ್ಣ ರೈತರು ನೀರನ್ನು ಕೇಳುವಂತೆಯೇ ಇಲ್ಲ ಎಂಬಂಥ ಪರಿಸ್ಥಿತಿ ತಲೆದೋರಿತು. ಇದರ ಒಟ್ಟಾರೆ ಪರಿಣಾಮ ಆದದ್ದು ಕೃಷಿ ಇಳುವರಿಯ ಮೇಲೆ. ಬೃಹತ್ ನೀರಾವರಿ ಯೋಜನೆಗಳಿಂದಲೂ ಇದಕ್ಕೆ ಪರಿಹಾರ ದೊರಕುವುದಿಲ್ಲ ಎಂಬುದನ್ನು ಕಾಲುವೆ ವ್ಯವಸ್ಥೆಯ ವೈಫಲ್ಯ ಸಾಬೀತುಪಡಿಸಿತು.
ಈ ಹಂತದಲ್ಲೇ ಚುಂಚದೇನಹಳ್ಳಿ ಗ್ರಾಮಸ್ಥರಿಗೆ ಜ್ಞಾನೋದಯವಾದ್ದದು. ಸಮುದಾಯ ಆಧಾರಿತ ನೀರಾವರಿ ವ್ಯವಸ್ಥೆಯ ಅನುಷ್ಠಾನಕ್ಕೆ ಇಂಬು ನೀಡಿದ್ದು ಜೈನ್ ಇರಿಗೇಷನ್. ಕಾಲವೆಗೆ ಪರ್ಯಾ ಯವಾಗಿ ಪಿವಿಸಿ ಹಾಗೂ ಎಚ್‌ಡಿಪಿಐ ಪೈಪ್‌ಗಳು ಬಂದಿಳಿದವು. ಕೊಲಾರ ಜಿಲ್ಲೆಯಲ್ಲಿ ಮೊದಲಿಗೆ ರೈತರ ಸಮೂಹವೊಂದು ವ್ಯವಸ್ಥಿತ ಸಂಘಟಿತ ಸ್ವರೂಪವನ್ನು ಪಡೆಯಿತೆನ್ನುವಾಗ ಸಮಸ್ಯೆಗಳಿಗೆ ಪರಿಹಾರ ಮಾರ್ಗ ತಂತಾನೆ ರೂಪುಗೊಳ್ಳತೊಡಗಿತು.
ಕೋಲಾರ ಜಿಲ್ಲೆಯ ಈ ಪುಟ್ಟ ಹಳ್ಳಿಗೆ ಇದ್ದ ಜಲ ಮೂಲವೆಂದರೆ ವೇಣುಗೋಪಾಲಸ್ವಾಮಿ ಕೆರೆ. ನೋಡಲು ಕೆರೆ ಚಿಕ್ಕದೇನಲ್ಲ. ನೀರೂ ಇತ್ತು. ನಿರ್ವಹಣೆಯಲ್ಲಿಯೇ ಎಡವಿದ್ದಿರಬೇಕು. ಒಟ್ಟಾರೆ ಆಸುಪಾಸಿನವರಿಗೆ ಸಿಕ್ಕ ನೀರಿನ ಕನಿಷ್ಠ ಪಾಲೂ ಕೊನೆಯ ಭಾಗದವರಿಗೆ ಸಿಗುತ್ತಿರಲಿಲ್ಲ ಎಂಬುದು ವಾಸ್ತವ. ಊರಿನಲ್ಲಿರುವ ೫೬ ಕುಟುಂಬದವರೂ ಒಗ್ಗೂಡತೊಡಗಿದರು. ಎಲ್ಲರಿಗೂ ಅಗತ್ಯಕ್ಕೆ ತಕ್ಕ ನೀರು ಸಿಗಬೇಕು. ಚಿಂತನೆಗೆ ಬೆಂಬಲವಾಗಿ ನಿಂತಿತು ರಾಜ್ಯ ಸರಕಾರ. ಯೋಜನೆಯಲ್ಲಿ ಕೈ ಜೋಡಿಸಿದ್ದು ಕೃಷಿ ವಿಶ್ವವಿದ್ಯಾಲಯ. ಎಲ್ಲಕ್ಕೂ ಒಮ್ಮತವೇ ಬುನಾದಿ.
ಸರಿಸುಮಾರು ಆರು ಹೆಕ್ಟೇರ್‌ನಷ್ಟು ವಿಸ್ತೀರ್ಣದ ಕೆರೆಯಿಂದ ಎಲ್ಲ ಜಮೀನಿಗೂ ನೀರು ಸಮಾನವಾಗಿ ಹಂಚಿಕೆಯಾಗಬೇಕೆನ್ನುವಾಗ ಏನಿಲ್ಲವೆಂದರೂ ೪೦ ಲಕ್ಷ ರೂಪಾಯಿಗಳಷ್ಟು ದೊಡ್ಡ ಮೊತ್ತದ ಹೂಡಿಕೆ ಅನಿವಾರ್ಯವಾಯಿತು. ಯೋಜನೆಯಂತೆ ಪೈಪ್ ಜಾಲದ ಜತೆಗೆ ಆಧುನಿಕ ನೀರಾವರಿ ತಂತ್ರಜ್ಞಾನದ ಅಳವಡಿಕೆ, ಪಂಪ್‌ಸೆಟ್‌ಗಳ ಖರೀದಿ, ಇಂಧನ ಹೀಗೆ ಪ್ರತಿಯೊಂದರ ಮರುಸೃಷ್ಟಿಯಾ ಗಬೇಕಿತ್ತು. ಅಚ್ಚುಕಟ್ಟಿನಲ್ಲಿ ೮ ಬೋರ್‌ವೆಲ್‌ಗಳೂ ಇದ್ದವು. ಅವುಗಳಿಗೆ ತಲಾ ೩ ಎಚ್‌ಪಿ ಸಾಮರ್ಥ್ಯದ ಮೂರು ಪಂಪ್‌ಸೆಟ್‌ಗಳನ್ನು ಅಳವಡಿಸಲಾಯಿತು. ಇದಕ್ಕೆ ೧೫ ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಪ್ಯಾನಲ್‌ಗಳಿಂದ ಇಂಧನ ಪೂರೈಕೆಗೆ ಯೋಜಿಸಲಾಯಿತು. ಪಂಪ್‌ನಿಂದ ನೀರೆತ್ತಿ ಪೈಪ್‌ಗಳಲ್ಲಿ ಜಮೀನುಗಳ ಬುಡಕ್ಕೆ ಕೊಂಡೊಯ್ದು ಬಿಡುವಷ್ಟಕ್ಕೆ ಯೋಜನೆ ಸೀಮಿತವಾಗಲಿಲ್ಲ. ಯಾವ ಜಮೀನಿಗೆ ಎಂಥ ನೀರಾವರಿ ಪದ್ಧತಿ ಸರಿ ಹೊಂದೀತು ? ಯಾವ ಜಮೀನಿಗೆ ಯಾವ ಬೆಳೆ ಸರಿ ಹೊಂದೀತು ? ಯಾರ ಆದ್ಯತೆ ಯಾವುದು ? ನೀರಿನ ಅಗತ್ಯವೆಷ್ಟು ? ಈ ಎಲ್ಲ ಅಂಶಗಳನ್ನೂ ಪರಿಗಣಿಸಿಯೇ ನೀರಿನ ಹಂಚಿಕೆಗೆ ಮುಂದಾಗಲಾಯಿತು. ಅದರನ್ವಯ ಸುಮಾರು ೨೨ ಎಕರೆಯಷ್ಟು ಜಮೀನಿಗೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಲಾಯಿತು. ಎರಡು ಹೆಕ್ಟೇರ್‌ನಲ್ಲಿ ತುಂತುರು ನೀರಾವರಿಗೆ ಆದ್ಯತೆ ನೀಡಲಾಯಿತು. ಉಳಿದ ಕೃಷಿ ಭೂಮಿಗೆ ಬೆಳೆಯನ್ನವಲಂಬಿಸಿ ಹರಿ ನೀರಾವರಿ ಒದಗಿಸಲಾಯಿತು.
‘ವೇಣುಗೋಪಾಲಸ್ವಾಮಿ ಕೆರೆ ಯೋಜನೆ ಸಂಘ ಮೂರು ವರ್ಷದ ಹಿಂದೆ ಸಮುದಾಯ ಆಧಾರಿತ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಇಳಿಯುವ ಮುನ್ನ ಚುಂಚದೇನಹಳ್ಳಿಯಲ್ಲಿ ನೀರಿನ ಲಭ್ಯತೆಯೆಂದರೆ ಅದು ಅಕ್ಷರಶಃ ಜೂಜು. ಎಂಥದೇ ಬೆಳೆ ಹಾಕಿದರೂ ತೊಡಗಿಸಿದ ಬಂಡವಾಳ ಬಂದೇ ಬಿಡುತ್ತದೆ ಎನ್ನುವ ವಿಶ್ವಾಸವಿರಲಿಲ್ಲ. ಕಾಲುವೆಯಲ್ಲಿ ಹರಿದು ಬರುವ ನೀರು ಇದ್ದಕ್ಕಿದ್ದಂತೆಯೇ ಕಣ್ಮರೆಯಾಗುತ್ತಿತ್ತು. ಇದೀಗ ಕೆರೆಯಿಂದ ಹೊರಬಿಟ್ಟ ನೀರು ಏನಾದರೂ ಪೋಲಂತೂ ಆಗುವುದಿಲ್ಲ ಎಂಬ ಭರವಸೆ ಬಂದಿದೆ ’ ಎನ್ನುತ್ತಾರೆ ಕೆರೆ ಸಂಘದ ಅಧ್ಯಕ್ಷ ನಾರಾಯಣಪ್ಪ.
ಅವರ ಮಾತಿನಲ್ಲಿ ಸತ್ಯವಿದೆ. ನಿರ್ವಹಣೆಯಿಲ್ಲದ ಕಾಲುವೆಯಲ್ಲಿ ಸೋರಿಕೆಯೂ ಹೆಚ್ಚಿತ್ತು. ಜತೆಗೆ ಬೇಸಿಗೆಯಲ್ಲಿ ಬಹುತೇಕ ನೀರು ಆವಿಯಾಗಿ, ಅಲ್ಲಲ್ಲಿ ಇಂಗಿಯೇ ಹೋಗಿಬಿಡುತ್ತಿತ್ತು. ಅದೂ ಸಾಲದೆಂಬಂತೆ ಆರಂಭದ ರೈತರು ತಮಗೆ ಬೇಕೆಂದಾಗಲೆಲ್ಲ ನೀರು ತಿರುಗಿಸಿಕೊಂಡು ಮನಸ್ಸಿಗೆ ಬಂದಂತೆ ಬಳಸುತ್ತಿದ್ದರು. ನೀರಿನ ಬಳಕೆ, ಬೆಳೆಪದ್ಧತಿಯಲ್ಲೂ ವೈಜ್ಞಾನಿಕತೆಯಿರಲಿಲ್ಲ. ಇಂಥದಕ್ಕೆ ಕೊನೆ ಹಾಡಿದ್ದೇ ಯೋಜನೆಯ ಮೊದಲ ಯಶಸ್ಸು. ವಿವೇಚನಾಯುತ ನೀರಿನ ಬಳಕೆಯ ಬಗ್ಗೆ ರೈತರಿಗೆ ಸೂಕ್ತ ತರಬೇತಿ ನೀಡುವುದರೊಂದಿಗೆ ಉಳಿತಾಯ ಸಾಧನೆ ಮಾಡಿದ್ದು ಇನ್ನೊಂದು ಘಟ್ಟ. ಸೋರಿಕೆ, ದುಂದು ತಡೆದು, ಸಮಾನ ಹಂಚಿಕೆಗೆ ಅನುವು ಮಾಡಿಕೊಟ್ಟದ್ದು ಇನ್ನೊಂದು ಸಾಧನೆ. ಅಂತಿಮವಾಗಿ ಚುಂಚದೇನಹಳ್ಳಿಯಲ್ಲಿ ಇದೀಗ ನೀರ ನೆಮ್ಮದಿ ಕಾಣಿಸಿದೆ. ಒಂದು ಬೆಳೆ ತೆಗೆಯುತ್ತಿದ್ದ ಜಮೀನಿನಲ್ಲಿ ಎರಡು ಬೆಳೆ ಸಾಧ್ಯವಾಗುತ್ತಿದೆ. ಸ್ವಲ್ಪ ಬುದ್ಧಿವಂತಿಕೆ ಬಳಸಿದರೆ ಮೂರು ಬೆಳೆಯನ್ನೂ ತೆಗೆಯುವುದು ಕಷ್ಟವಾಗಲಿಕ್ಕಿಲ್ಲ. ಇನ್ನೇನು ಬೇಕು ?
‘ಲಾಸ್ಟ್’ಡ್ರಾಪ್: ನೀರುಳಿದರೆ ನಾವು, ನೀರಳಿದರೆ ಅದು ನಮ್ಮ ಸಾವು.
ಸಮ್ಮನಸ್ಸಿಗೆ ಶರಣು
4 months ago