Sunday, March 22, 2009

ನೀರಿನ ‘ಸಮ್’ರಕ್ಷಣೆಯ ಕೆಲವು ಉಪಾಯಗಳು

ಹಾಗೆ ನೋಡಿದರೆ ಬೇಸಿಗೆ, ಬಿಸಿಲನ್ನು ಅದೇಕೆ ಬಯ್ದುಕೊಳ್ಳುತ್ತೇವೋ ಅರ್ಥವಾಗುವುದಿಲ್ಲ. ಎಲ್ಲವನ್ನೂ ನಕಾರಾತ್ಮಕವಾಗಿ ನೋಡುವುದು ನಮಗೆ ಅಭ್ಯಾಸವಾಗಿಬಿಟ್ಟಿದೆಯಿರಬೇಕು. ಯಾವುದನ್ನೂ ಗೊಣಗದೇ ಸ್ವೀಕರಿಸಲು ನಮಗೆ ಬರುವುದೇ ಇಲ್ಲ ಎಂಬಷ್ಟರ ಮಟ್ಟಿಗೆ ನಮ್ಮ ಮೈಂಡ್ ಸೆಟ್ ಅದಕ್ಕೆ ಕೂತುಹೋಗಿದೆ. ಬೇಕಿದ್ದರೆ ನೋಡಿ, ಚಳಿ, ಮಳೆ, ಬಿಸಿಲು ಹೀಗೆ ಯಾವುದೇ ಕಾಲದಲ್ಲಿ ನಾವು ಕೊರಗುವುದುನ್ನು ನಿಲ್ಲಿಸುವುದಿಲ್ಲ. ಅಯ್ಯೋ ಏನು ಮಳೆಯೋ ಏನೋ ? ಮನೆಯೆಲ್ಲ ಕೆಸರು. ಹೊರಗೆ ಹೋಗುವಂತಿಲ್ಲ. ಒಂದು ಕೆಲಸವೂ ಆಗುವುದಿಲ್ಲ....ಎನ್ನುತ್ತೇವೆ. ಚಳಿ ಬಂದರೆ ‘ಥತ್, ಎಂಥ ಚಳಿ. ಮೈ-ಕೈ ಎಲ್ಲ ಮುರುಟಿಹೋಗುತ್ತದೆ. ಈ ಚಳಿ ಯಾವಾಗ ಮುಗಿಯುತ್ತದೋ ಎನಿಸಿಬಿಟ್ಟಿದೆ. ಶೀತ ತಲೆನೋವು...ಬಿಸಿಲು-ಮಳೆಯಾದರೆ ಹೇಗೂ ತಡೆದುಕೊಳ್ಳಬಹುದು’ ಎಂದುಕೊಳ್ಳುತ್ತೇವೆ. ಇನ್ನು ಬೇಸಿಗೆ ಬಂದರಂತೂ ಮುಗಿದೇ ಹೋಯಿತು. ಬೆಂಕಿ ತುಳಿದಂತೆಯೇ ಆಡುತ್ತಿರುತ್ತೇವೆ. ಅಸಲಿಗೆ ಬದಲಾಗಬೇಕಾದದ್ದು ಋತುಮಾನವಲ್ಲ, ನಮ್ಮ ಮನದ ಮೂಲೆಯಲ್ಲಿ ಗೂಡುಕಟ್ಟಿ ಕುಳಿತಿರುವ ನಕಾರಾತ್ಮಕ ಧೋರಣೆ.
ಯಾವುದೇ ಬದಲಾವಣೆಗಳಿರಲಿ ತನ್ನ ಪಾಡಿಗೆ ತಾನು ಆಗುತ್ತಲೇ ಇರುತ್ತದೆ. ಅದು ನಿಯಮ. ಆದರೆ ಅದಕ್ಕೆ ತಕ್ಕ ಬದಲಾವಣೆಗೆ ನಾವು ಸಿದ್ಧರಿರುವುದಿಲ್ಲ. ಬೇಸಿಗೆಯ ವಿಚಾರದಲ್ಲೂ ಅದೇ. ಬಿಸಿಲು ಬಿದ್ದೇ ಬೀಳುತ್ತದೆ, ಕಪಾಳಕ್ಕೆ ಬಾರಿಸುತ್ತದೆ ಎಂಬುದು ಹೊಸತೇನಲ್ಲ. ಹಾಗೆ ಬಾರಿಸಿದಾಗ ಮೈ ಬೆವರುತ್ತದೆ, ನೆಲದ ನೀರಿನ ಪಸೆಯೂ ಆರಿ ಹೋಗುತ್ತದೆ ಎಂಬುದೂ ಗೊತ್ತಿಲ್ಲದ ಸಂಗತಿಯೇನಲ್ಲ. ಆದರೂ ಅದಕ್ಕೆ ತಕ್ಕ ಸಿದ್ಧತೆಯನ್ನು ನಾವು ಮಾಡಿಕೊಂಡಿರುವುದೇ ಇಲ್ಲ. ಆರಿ ಹೋಗುವ ಮುನ್ನ ಒಂದಷ್ಟು ನೀರನ್ನು ಬಾಯಾರಿ ಬಂದಾಗ ಬೇಕಾಗುತ್ತದೆಂದು ಸಂರಕ್ಷಿಸಿಟ್ಟುಕೊಳ್ಳುವುದಿಲ್ಲ. ಏನಾದೀತು ? ಆದರೂ ಎಲ್ಲರಿಗಾದದ್ದು ನಮಗಾಗುತ್ತದೆ ಅಷ್ಟೇ ಅಲ್ಲವೇ ಎಂಬ ಅಸಡ್ಡೆ ಬೇರೆ. ಹೀಗಾಗಿ ನೀರಿದ್ದಾಗ ಬೇಕಿರಲಿ, ಬೇಡದಿರಲಿ, ಬಳಸುತ್ತೇವೆ ಎಂಬುದಕ್ಕಿಂತ ಕಬಳಿಸುತ್ತೇವೆ; ಜೇಬಿನಲ್ಲಿರುವ ದುಡ್ಡಿನಂತೆಯೇ. ಅದಕ್ಕೂ ಆರವಿಲ್ಲ ಭಾರವಿಲ್ಲ. ನೀರನ್ನೂ ಅಷ್ಟೆ, ಆರುವವರೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
ನೀರು ಉಳಿಸಿಕೊಂಡರೆ ಅದು, ನೀರಿನ ಉಳಿವು ಮಾತ್ರವಲ್ಲ. ಕಿಸೆಯ ಕಾಸೂ ಉಳಿಯುತ್ತದೆ. ನೆಲದ ಸಮೃದ್ಧಿ ಉಳಿಯುತ್ತದೆ. ಸುತ್ತಲಿನ ಬಾವಿ ಕೆರೆ, ಕಟ್ಟೆ, ನದಿ, ನಲೆ ಕೊನೆಗೆ ಒಂದಿಡೀ ಸಮಾಜದ ಉಳಿವು ನಾವು ಉಳಿಸುವ ನೀರನ್ನು ಅವಲಂಬಿಸಿರುತ್ತದೆ ಎಂದು ಹೇಳಿದರೆ ಬಹುತೇಕ ನಮಗೆ ಅರ್ಥವೇ ಆಗುವುದಿಲ್ಲ. ಕಾರಣ ಮತ್ತದೇ ನಕಾರಾತ್ಮಕ ಧೋರಣೆ. ಒಂದು ಸಮಾಜದ ಉಳಿವು. ಮುಂದಿನ ತಲೆಮಾರಿಗೆ ಆಸ್ತಿ ಸಂಪಾದಿಸದ್ದಿರೂ, ನಿಮ್ಮ ಮಕ್ಕಳು, ಮೊಮ್ಮಕ್ಕಳು ಬದುಕುತ್ತಾರೆ. ಆದರೆ ನೀರಿನ ಆಕರವನ್ನು ಉಳಿಸಿ, ಸಂರಕ್ಷಿಸದಿದ್ದರೆ...?
ನೀರಿನ ಸಂರಕ್ಷಣೆಯೆಂದರೆ ಎರಡು ರೀತಿ. ಒಂದು ನೀರನ್ನು ಕಡಿಮೆ ಬಳಸಿ ಉಳಿಸುವುದು, ಅದಕ್ಕಿಂತ ಮುಖ್ಯವಾದದ್ದು ಉಳಿದ ನೀರು ಮಲಿನವಾಗದಂತೆ ಕಾಪಾಡುವುದು. ಗಮನಿಸಲೇಬೇಕಾದ ಅಂಶವೆಂದರೆ ನಮಗೆ ನೀರಿಲ್ಲ ಎಂದ ಮಾತ್ರಕ್ಕೆ ಕೊರತೆಯಿದೆ ಎಂದಲ್ಲ. ಇರುವ ನೀರು ಬಳಕೆಗೆ ಯೋಗ್ಯವಾಗಿಲ್ಲ. ನೀರನ್ನು ಸಂರಕ್ಷಿಸುವುದರಿಂದ ಅದು ಮಣ್ಣಿನ ಸಂತೃಪ್ತ ಸ್ಥಿತಿಯನ್ನು ತಡೆದು ನೈರ್ಮಲ್ಯ ವ್ಯವಸ್ಥೆಯ ಆಯುಸ್ಸನ್ನು ಹೆಚ್ಚಿಸುತ್ತದೆ.
ಈ ಎಲ್ಲ ದೃಷ್ಟಿಯಿಂದ ಜಲ ಸಂರಕ್ಷಣೆ ಹಾಗೂ ಸುವ್ಯವಸ್ಥಾಪನೆಯ ದೃಷ್ಟಿಯಿಂದ ಒದಷ್ಟು ಟಿಪ್ಸ್‌ಗಳು ನಿಮಗಾಗಿ...
ಮನೆಗಳಲ್ಲಿ ಮಾಡಬೇಕಾದ್ದು, ಮಾಡಬಹುದಾದದ್ದು
*ಸೋರಿಕೆ ತಡೆಗಟ್ಟಿ:
ನೀರು ಬಳಕೆಯಾಗುವ ಒಂದು ಗಂಟೆ ಮೊದಲು, ನೀರು ಬಳಸಿದ ಒಂದು ಗಂಟೆ ನಂತರ ತೊಟ್ಟಿಗೆ ಅಳವಡಿಸಿರುವ ಮೀಟರ್ ಅನ್ನು ಪರೀಕ್ಷಿಸಿ. ಮೀಟರ್‌ನಲ್ಲಿ ವ್ಯತ್ಯಾಸ ಕಂಡು ಬಂದರೆ ತೊಟ್ಟಿಯಲ್ಲಿ ಸೋರಿಕೆಯಿದೆ ಎಂದೇ ಅರ್ಥ. ತಕ್ಷಣ ಸೂಕ್ತ ಕ್ರಮ ಕೈಗೊಳ್ಳಿ.
*ನಲ್ಲಿಗೆ ಶೀತವಾಗದಿರಲಿ
ಮನೆಯ ಟ್ಯಾಪ್(ನಲ್ಲಿ) ತೊಟ್ಟಿಕ್ಕುತ್ತಿದ್ದರೆ, ಅದರಲ್ಲಿ ಎಷ್ಟು ನೀರು ಹೋದೀತು, ನಾಳೆ ಸರಿಪಡಿಸಿದರಾದೀತು ಎಂದುಕೊಂಡು ಸುಮ್ಮನಿರಬೇಡಿ. ಆ ನಾಳೆ ಬರುವುದೇ ಇಲ್ಲ. ಹಾಗೆ ಹನಿಯುವ ನಲ್ಲಿ ದಿನಕ್ಕೆ ೮೦ ಲೀಟರ್ ನೀರನ್ನು ಪೋಲು ಮಾಡೀತು. ತಕ್ಷಣ ನಲ್ಲಿಯ ವಾಯ್ಸರ್ ಬದಲಿಸಿ. ಅದಕ್ಕೆ ತಗಲುವ ವೆಚ್ಚ ಹೆಚ್ಚೆಂದರೆ ಎರಡು ರೂ.
*ಟಾಯ್ಲೆಟ್‌ನಲ್ಲಿನ ಸೋರಿಕೆ ತಪ್ಪಿಸಿ
ಟಾಯ್ಲೆಟ್‌ನಲ್ಲಿ ಅನವಶ್ಯಕ ನೀರಿನ ಸೋರಿಕೆಯಾಗದಂತೆ ನಿಗಾ ವಹಿಸಿ. ನಿಮಗೆ ಗೊತ್ತಿಲ್ಲದಂತೆಯೂ ಅಲ್ಲಿ ನೀರು ಸೋರಿಕೆಯಾಗುತ್ತಿರಬಹುದು. ಬಳಕೆ ಕಡಿಮೆ ಇರುವ ಸ್ಥಳ ಅದಾಗಿದ್ದರಿಂದ ಅದು ನಿಮ್ಮ ಗಮನಕ್ಕೆ ಬಾರದಿರಬಹುದು. ಅದಕ್ಕಾಗಿ ಶೌಚಾಲಯಕ್ಕೆ ನೀರು ಪೂರೈಕೆಯಾಗುವ ತೊಟ್ಟಿಯಲ್ಲಿ ಒಂದಷ್ಟು ಅಡುಗೆ ಬಣ್ಣ ಹಾಕಿಡಿ. ಫ್ಲಷ್ ಮಾಡದೆಯೂ ಬೇಸಿನ್‌ನಲ್ಲಿ ಬಣ್ಣ ಕಂಡರೆ ಸೋರಿಕೆ ಆಗುತ್ತಿದೆ ಎಂದೇ ಅರ್ಥ.
*ಟಾಯ್ಲೆಟ್ ‘ಕಬು’ ಅಲ್ಲ
ನೆನಪಿಡಿ, ನಿಮ್ಮ ಜೈವಿಕ ತ್ಯಾಜ್ಯ ವಿಸರ್ಜನೆಗೆ ಮಾತ್ರ ಶೌಚಾಲಯವಿರುವುದು. ಸಿಗರೇಟು ತುಂಡು, ಟಿಶ್ಯೂ ಪೇಪರ್, ಸ್ಯಾನಿಟರಿ ನ್ಯಾಪಿಕಿನ್ ಮತ್ತಿತರ ತ್ಯಾಜ್ಯಗಳನ್ನು ಟಾಯ್ಲೆಟ್ ಗೆ ಹಾಕಬೇಡಿ. ಇವುಗಳ ವಿಲೇವಾರಿಗೆ ಏನಿಲ್ಲವೆಂದರೂ ೫ರಿಂದ ೭ ಗ್ಯಾಲನ್ ನೀರು ಪೋಲಾಗುತ್ತದೆ.
* ಬಿಸಿ ನೀರು ಬೇಗ ಬರಲಿ
ಬಚ್ಚಲಿನಲ್ಲಿ ಮೊದಲು ಸ್ನಾನ ಮಾಡುವವರು ಒಂದಷ್ಟು ನೀರು ಪೋಲು ಮಾಡುವುದು ಅನಿವಾರ್ಯವೆಂಬಂತಾಗಿದೆ. ಬಿಸಿ ನೀರಿಗೆ ಮುನ್ನ ಪೈಪ್‌ನಲ್ಲಿದ್ದ ತಣ್ಣೀರು ಹರಿದುಬಿಡುವುದು ಸಹಜ. ಅದನ್ನು ತಪ್ಪಿಸಲು ಪೈಪ್‌ಗಳನ್ನು ಇನ್ಸುಲೇಟ್ ಮಾಡಿಸಿ.
*ಸ್ವಯಂ ಚಾಲಿತ ಷವರ್
ಷವರ್‌ನಡಿಯಲ್ಲಿ ನಿಂತ ಮೇಲೆ ಸ್ನಾನ ಮುಗಿಯುವ ವರೆಗೆ ನೀರನ್ನು ಬಿಟ್ಟುಕೊಳ್ಳುತ್ತಲೇ ಇರುವುದು ಅಭ್ಯಾಸ. ಸೋಪು ಉಜ್ಜಿಕೊಳ್ಳುವಾಗಲೂ ಷವರ್‌ನಲ್ಲಿ ನೀರು ಹೋಗುತ್ತಲೇ ಇರುತ್ತದೆ. ಅದನ್ನು ತಪ್ಪಿಸಲು ಸ್ವಯಂಚಾಲಿತ ಷವರ್ ಅಳವಡಿಸಿಕೊಳ್ಳಿ. ಇದರಿಂದ ನೀವು ಷವರ್‌ನಡಿ ಹೋಗಿ ನಿಂತಾಗ ಮಾತ್ರ ನೀರು ಸುರಿಯುತ್ತದೆ. ಪಕ್ಕಕ್ಕೆ ಬಂದರೆ ತಂತಾನೇ ನೀರು ನಿಂತುಕೊಳ್ಳುತ್ತದೆ.
*ತುಂತುರು ಬಳಕೆ ಇರಲಿ
ಪದೇ ಪದೇ ನೀರು ಬಳಕೆಯಾಗುವ ವಾಷ್ ಬೇಸಿನ್ ಮತ್ತಿತರ ಸ್ಥಳಗಳಲ್ಲಿ ನಲ್ಲಿಗಳಿಗೆ ಕಡ್ಡಾಯವಾಗಿ ತುಂತುರು ಕವಚ ತೊಡಿಸುವುದು ಮರೆಯಬೇಡಿ. ಈಗಂತೂ ನೊರೆಯೆರೆಯುವ ನಲ್ಲಿಗಳೇ ಬಂದಿವೆ. ಕಡ್ಡಾಯವಾಗಿ ಅಂಥವನ್ನೇ ಅಳವಡಿಸಿಕೊಳ್ಳಿ.
*ಹಲ್ಲುಜ್ಜುವಾಗ ನೀರು ನೋಡಿ
ಬೆಳಿಗ್ಗೆ ಎದ್ದು ಹಲ್ಲುಜ್ಜುವಾಗ ಅನೇಕರು ನಿದ್ದೆಗಣ್ಣಿನಲ್ಲಿ ನಲ್ಲಿಯನ್ನು ಬಿಟ್ಟುಕೊಂಡೇ ಇರುತ್ತಾರೆ. ಟೂತ್ ಬ್ರಷ್ ತೊಳೆಯುವಾಗ ಮತ್ತು ಬಾಯಿ ಮುಕ್ಕಳಿಸುವಾಗ ಮಾತ್ರ ನಳ ಆನ್ ಆಗಿದ್ದರೆ ಸಾಕು. ಹಲ್ಲುಜ್ಜಿ ಮುಗಿಯುವವರೆಗೂ ನಳದಲ್ಲಿ ನೀರು ಪ್ರವಹಿಸುವುದು ಬೇಡ.
*ನಳದಿಂದ ರೇಜರ್ ದೂರವಿಡಿ
ಶೇವಿಂಗ್ ಮಾಡಿದ ನಂತರ ರೇಜರ್ ಅನ್ನು ಬಿಸಿ ನೀರಿನಲ್ಲಿ ಮುಳುಗಿಸಿ ತೆಗೆಯಿರಿ. ನಳಕ್ಕೆ ನೇರವಾಗಿ ರೇಜರ್ ಹಿಡಿಯಬೇಡಿ. ಇದರಿಂದ ವಿಪರೀತ ನೀರು ಅನವಶ್ಯಕವಾಗಿ ಪೋಲಾಗುತ್ತದೆ.
* ಪೈಪ್ ಸೋರದಿರಲಿ
ನಿಮ್ಮ ಮನೆಯ ಪೈಪ್, ನಲ್ಲಿಯ ಬುಡ ಸೋರದಂತೆ ಎಚ್ಚರ ವಹಿಸಿ. ಹೀಗೆ ಆಗುವ ಸಣ್ಣ ಸೋರಿಕೆಯಿಂದ ದಿನಕ್ಕೆ ೨೦ ಗ್ಯಾಲನ್ ನೀರು ಪೋಲಾಗುತ್ತದೆ. ದೊಡ್ಡ ಸೋರಿಕೆಯಿಂದ ೧೦೦ ಗ್ಯಾಲನ್‌ವರೆಗೂ ಪೋಲಾಗುತ್ತದೆ ಎಂಬುದು ನೆನಪಿರಲಿ.
*ಬಟ್ಟೆ ತೊಳೆಯಲು ಯಂತ್ರ ಬೇಡ
ಬಟ್ಟೆ ತೊಳೆಯುವ ಯಂತ್ರವನ್ನು ಅಗತ್ಯವಿದ್ದರೆ ಮಾತ್ರ ಬಳಸಿ. ಹಳೆಯ ಯಂತ್ರವನ್ನು ಬದಿಗಿಡಿ. ಮಾರುಕಟ್ಟೆಯಲ್ಲಿ ಸಿಗುತ್ತಿರುವ ನೀರು ಸಂರಕ್ಷಕ, ಆಧುನಿಕ ಯಂತ್ರಗಳನ್ನು ಬಳಸಿ. ವಾಷಿಂಗ್ ಮಷಿನ್ ಭರ್ತಿಯಾಗುವಷ್ಟು ಬಟ್ಟೆಯಿದ್ದಾಗ ಮಾತ್ರ ಚಾಲೂ ಮಾಡಿ. ಒಂದೆರಡಕ್ಕೂ ಮಷಿನ್ ಬಳಕೆ ನೀರಿನ ಬಳಕೆ ಹೆಚ್ಚಿಸುತ್ತದೆ. ಒಮ್ಮ ವಾಷಿಂಗ್ ಮಷಿನ್ ಬಳಸಿದರೆ ಕನಿಷ್ಠ ೨೦ ಲೀ. ನೀರು ವ್ಯಯವಾಗುತ್ತದೆ.
*ಪಾತ್ರೆ ತೊಳೆಯುವಾಗ ನೀರು ಬಿಡಬೇಡಿ
ನಳದ ನೀರು ಬಿಟ್ಟುಕೊಂಡೇ ಪಾತ್ರೆ ತೊಳೆಯುವ ಕೆಟ್ಟ ಅಭ್ಯಾಸ ನಮ್ಮಲ್ಲಿ ಬಹುತೇಕರಿಗಿದೆ. ಸೋಪು ಹಚ್ಚಿ ಪಾತ್ರೆ ತಿಕ್ಕುತ್ತಿರುವಾಗ ನಳದ ನೀರನ್ನು ಪೋಲುಮಾಡಬೇಡಿ. ನಂತರವೂ ಬೇಸಿನ್ ಒಂದರಲ್ಲಿ ನೀರು ತುಂಬಿಸಿಕೊಂಡು ಅದರಲ್ಲಿ ಪಾತ್ರಗಳನ್ನು ಅದ್ದಿ ತೆಗೆದರೆ ಒಳಿತು.
* ತರಕಾರಿ ತೊಳೆಯುವಾಗ...
ಇನ್ನು, ಅಕ್ಕಿ , ತರಕಾರಿ ತೊಳೆಯುವಾಗ, ಅಡುಗೆ ಮನೆಯೊಳಗಣ ಬೇಸಿನ್ ತೊಳೆಯುವಾಗ ನಳದ ನೀರು ಬಿಡುವ ಚಾಳಿಯಿದೆ. ಅದನ್ನು ಕಡಿಮೆ ಮಾಡಿ.
ಹೊಲ ಮತ್ತು ಉದ್ಯಾನವನದಲ್ಲಿ
*ಹುಲ್ಲು ಹೊದಿಕೆಗೆ ಬೇಕಾದರೆ ಮಾತ್ರ ನೀರುಣಿಸಿ
ಹುಲ್ಲಿನ ಹಾಸುಗಳಿಗೆ, ಗಿಡಗಳಿಗೆ ಬೇಕಾದಾಗ ಮಾತ್ರ ನೀರು ಹಾಕಿ. ನಿತ್ಯವೂ ನೀರು ಹಾಕುವುದು ಬೇಡ. ಪಾತ್ರೆ, ಬಟ್ಟೆ ತೊಳೆದ ನೀರನ್ನು ಗಿಡಗಳು ಬೇಡವೆನ್ನುವುದಿಲ್ಲ. ಇದರಿಂದ ನೀರಿನ ಮರು ಬಳಕೆಯಾಗುತ್ತದೆ.
*ಬೇರಿಗೆ ನೀರು
ಗಿಡಗಳ ಬೇರು ಭಾಗಕ್ಕೆ ಮಾತ್ರ ನೀರು ಹಾಕಿ. ಮೇಲ್ಬಾಗಕ್ಕೆ ನೀರುಣಿಸಿದರೆ ಬಿಸಿಲಿನ ಬೇಗೆಗೆ ಬೇಗ ಆವಿಯಾಗುತ್ತದೆ. ಮಾತ್ರವಲ್ಲ, ಒಮ್ಮೆ ನೀರು ಹಾಕುವಾಗ ಸಾಕಷ್ಟು ಉಣಿಸಿ. ಪದೇ, ಪದೇ ನೀರುಣಿಸುವದರಿಂದ ಆವಿಯಾಗಿ ಹೋಗುವ ಪ್ರಮಾಣ ಹೆಚ್ಚಿರುತ್ತದೆ.
* ಬೆಳಗ್ಗೆಯೇ ನೀರುಣಿಸಿ
ಗಿಡಗಳಿಗೆ ಬೆಳಗ್ಗಿನ ಹೊತ್ತು ನೀರು ಹಾಕುವ ರೂಢಿ ಬೆಳೆಸಿಕೊಳ್ಳಿ. ಬಿಸಿಲು ಏರಿದಂತೆ ನೀರು ಹಾಕಿದರೆ, ಹೆಚ್ಚು ನೀರು ಖರ್ಚಾಗುತ್ತದೆ.
*ಹನಿ ಹನಿ, ಇಬ್ಬನಿ
ಹನಿ, ತುಂತುರು ನೀರಾವರಿಯಂಥ ಪದ್ಧತಿಯಲ್ಲಿ ಹೂವಿನ ಗಿಡ, ಹುಲ್ಲು ಹಾಸಿ ಸಮರ್ಥವಾದ ನೀರಾವರಿ ವ್ಯವಸ್ಥೆ ಮಾಡಿ
*ನೀರು ಬೇಡದ ಗಿಡಗಳಿರಲಿ
ನಿಮ್ಮ ಮನೆಯಂಗಳದಲ್ಲಿನ ಉದ್ಯಾನವನದ ಬಣ್ಣ-ಬಣ್ಣದ ಗಿಡಗಳ ನಡುವೆ, ನೀರು ಹೀರದ, ಹೆಚ್ಚಿನ ನೀರು ಬೇಡದ ಗಿಡಗಳಿಗೂ ಸ್ವಲ್ಪ ಜಾಗಕೊಡಿ. ಇದರಿಂದ ನೀರು ಇಂಗುವಿಕೆ ಪ್ರಮಾಣ ಕಡಿಮೆಯಾಗುತ್ತದೆ.
*ವಾಹನ ತೊಳೆಯುವಾಗ ಜಾಗೃತಿಯಿರಲಿ
ಕಾರು ಅಥವಾ ವಾಹನ ತೊಳೆಯುವಾಗ ನೀರಿನ ಕುರಿತು ಗಮನವಿರಲಿ. ಟ್ಯಾಂಕಿನಲ್ಲಿ ನೀರಿದೆ ಎಂದು ಕಾರಿಗೆ ಸುರಿಯಬೇಡಿ. ಪದೇ ಪದೇ ತೊಳೆಯುವ ಬದಲು. ಒದ್ದೆ ಬಟ್ಟೆ ಮಾಡಿ ಒರೆಸಿ.
*ಪೊರಕೆ ಬಳಸಿ
ಮನೆ ಶುಚಿ ಮಾಡುವಾಗ ಕೇವಲ ನೀರು ಸುರಿದರೆ ಕೊಳೆ ಹೋಗುವುದಿಲ್ಲ. ಪೊರಕೆಯಿಂದ ಗುಡಿಸಿಕೊಂಡು ನಂತರ ನೀರು ಸುರಿಯಿರಿ

ಲಾಸ್ಟ್ ‘ಡ್ರಾಪ್’: ಮೈ ಕೊಳೆ ತೊಳೆದುಕೊಳ್ಳುವದಕ್ಕಷ್ಟೇ ಸ್ನಾನ ಸೀಮಿತವಾಗಿರಲಿ. ಬಚ್ಚಲು ನಿಮ್ಮ ಜಲಕ್ರೀಡೆಯ ತಾಣವಾಗದಿರಲಿ. ಮೈಮೇಲೆ ನೀರು ಸುರಿದುಕೊಳ್ಳುತ್ತಿದ್ದರೆ ಆಹ್ಲಾದವೇನೋ ಆಗುತ್ತದೆ. ಹಾಗೆಂದು ಅಗತ್ಯಕ್ಕಿಂತ ಹೆಚ್ಚು ಆಹ್ಲಾದ ಇನ್ನೊಬ್ಬರ ಅಗತ್ಯವನ್ನೇ ಕಿತ್ತುಕೊಂಡೀತು.

2 comments:

Unknown said...

bhadthi e kala keetoytu anno dailog egypt na kaldindanu ideyante. hagagi mundu irutte

chennagide baraha

ಮನಸ್ವಿ said...

ನೀರು ಉಳಿತಾಯಕ್ಕೆ ಸುಲಭ ಮಾರ್ಗಗಳನ್ನು ತಿಳಿಸಿದ್ದೀರಿ ಧನ್ಯವಾದಗಳು.