ಇಂಥ ಅವೆಷ್ಟೋ ಚಿಕ್ಕ ಪುಟ್ಟ ಸಂಗತಿಗಳನ್ನು ದಿನ ನಿತ್ಯ ನೋಡುತ್ತಿರುತ್ತೇವೆ. ಅದೇನೂ ವಿಶೇಷವೆಂದು ನಮಗೆ ಕಾಣುವುದೇ ಇಲ್ಲ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಇಂಥವು ಎಲ್ಲರಿಗೂ ಮಾಮೂಲಿ ಸಂಗತಿಯಾಗಿರುತ್ತದೆ. ಆದರೆ, ಇದರ ಹಿಂದಿನ ಕಳಕಳಿ ಹಾಗೂ ಅವುಗಳ ನಿರ್ವಹಣೆ ಸಣ್ಣ ಮಾತೇನಲ್ಲ.
ಅದೊಂದು ಬಿರು ಬಿಸಿಲಿನ ಮಧ್ಯಾಹ್ನ. ರಣಗುಡುತ್ತಿದೆ ವಾತಾವರಣ. ಒಮ್ಮೆ ಹೊರ ಬಿದ್ದರೆ ಮಾರು ದೂರ ನಡೆಯುವಷ್ಟರಲ್ಲಿ ಎಲ್ಲಿ ನೀರು ಸಿಕ್ಕೀತೋ ಎಂದು ಹುಡುಕುವಂತಾಗುತ್ತದೆ. ಏನು ಕುಡಿದರೂ ಸಮಾಧಾನವಿಲ್ಲ. ಮಜ್ಜಿಗೆ, ಎಳನೀರು, ಶರಬತ್ತು ಹೀಗೆ ಸಿಕ್ಕಸಿಕ್ಕದ್ದನ್ನು ಕುಡಿದು ಹೊಟ್ಟೆ ಕೊಳಗುಡುತ್ತಿದ್ದರೂ ಬಾಯಾರಿಕೆ ಮಾತ್ರ ತಣಿಯುವುದಿಲ್ಲ. ಸಾಕಪ್ಪಾ, ಈ ತಿರುಗಾಟ ಎಂಬಷ್ಟರಮಟ್ಟಿಗೆ ಬಿಸಿಲು ಬಾರಿಸುತ್ತಿದ್ದರೂ ಅನಿವಾರ್ಯತೆ ಹೆಜ್ಜೆಯನ್ನು ಕಿತ್ತಿಡುವಂತೆ ಮಾಡುತ್ತಿರುವಾಗಲೇ ಕಣ್ಣಿಗೆ ಬಿದ್ದದ್ದು ಮನೆಯೊಂದರ ಮುಂದೆ ಗುಂಪುಗುಂಪಾಗಿದ್ದ ಜಾನುವಾರುಗಳ ಹಿಂಡು. ಮೊದಲ ಬಾರಿಗೆ ಏನೋ ತರಕಾರಿ ಸಿಪ್ಪೆಯನ್ನೋ, ಬಾಳೆ ಎಲೆಯನ್ನೋ ಮನೆಯವರು ತಂದು ಹಾಕಿರಬಹುದು. ಅದನ್ನು ತಿನ್ನಲು ದನಕರುಗಳು ಬಂದಿವೆ ಎಂದುಕೊಂಡರೆ ಅದಲ್ಲ. ಒಂದೆರಡು ಕ್ಷಣಗಳಾಗಿರಬಹುದು, ಗೇಟ್ ದಾಟಿ ಬಂದ ಮಧ್ಯವಯಸ್ಕ ಗೃಹಿಣಿಯೊಬ್ಬರು ಸೊಂಟದ ಮೇಲಿಟ್ಟುಕೊಂಡು ಬಂದ ಕೊಡದಿಂದ ನೀರು ಸುರಿದರು. ನೋಡ ನೋಡುತ್ತಲೇ ದನಕರುಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಅದೆಲ್ಲಿದ್ದವೋ...ಸಣ್ಣದು, ಪುಟ್ಟದು, ದೊಡ್ಡದು, ಕಂದು ಬಣ್ಣದ್ದು, ಕಪ್ಪು ಬಿಳಿ ಹಂಡ ಹಂಡದ್ದು, ಒಂದರ ಹಿಂದೊಂದರಂತೆ ತಮ್ಮ ಪಾಡಿಗೆ ತಾವು ಬಂದು ನೀರು ಕುಡಿದು, ಅಲ್ಲೇ ಒಂದಷ್ಟು ಗಂಜಲ ಹೊಯ್ದು, ಸಗಣಿ ಹಾಕಿ, ಪರಸ್ಪರ ಮೈ ನೆಕ್ಕಿಕೊಳ್ಳುತ್ತ ಸಂಪ್ರೀತಿಯಿಂದ ಹೋಗುತ್ತಲೇ ಇವೆ. ಆಕೆ ಕೊಡದಲ್ಲಿ ನೀರು ತಂದು ಸುರಿಯುತ್ತಲೇ ಇದ್ದಾರೆ....ಅವು ಬರುತ್ತಲೇ ಇವೆ....ಆಕೆ ನೀರು ಹಾಕುತ್ತಲೇ ಇದ್ದಾರೆ...
ಕುತೂಹಲಕ್ಕೆ ಇಣುಕಿದರೆ ಮನೆಯೆದುರು ಅರ್ಧ ಮಣ್ಣಿನೊಳಗೆ ಹೂತು ಇನ್ನರ್ಧ ಮೇಲಿಣುಕಿ ನೋಡುತ್ತಿರುವಂತಿರುವ ನೀರಿನ ಟ್ಯಾಂಕ್. ಅದೇನು ಟ್ಯಾಂಕ್ ಎಂದರೆ ಗ್ಯಾಲನ್‌ಗಟ್ಟಲೇ ನೀರು ಹಿಡಿಸಬಹುದಾದದ್ದೇನೂ ಅಲ್ಲ. ಮೂರ್‍ನಾಲ್ಕು ಕೊಡ, ಹೆಚ್ಚೆಂದರೆ ಹತ್ತು ಬಿಂದಿಗೆ ನೀರಷ್ಟೇ ಹಿಡಿಸಬಹುದು. ಆದರೆ, ಅದರ ಆಕಾರವೇ ಗಮನ ಸೆಳೆಯುವಂತಿದೆ. ಸುಂದರವಾಗಿದೆ. ಸಾಲದ್ದಕ್ಕೆ ಮನೆಯವರು ಅದರ ಸುತ್ತಲೂ ನೀಟಾಗಿ ಗಾರೇ ಹಾಕಿ, ಬಣ್ಣ ಹಚ್ಚಿ, ಮೇಲೊಂದೆರಡು ರಂಗೋಲಿ ಎಳೆ ಎಳೆದು ಅಂದಗೊಳಿಸಿದ್ದಾರೆ. ಫಕ್ಕನೆ ನೆನಪಿಗೆ ಬಂದದ್ದು ಮಲೆನಾಡಿನ ನೀರ ಬಾನಿ. ಅರೆ ಇನ್ನೂ ಇವು ಉಳಿದಿವೆಯೇ ಅನ್ನಿಸಿತು.
ಈಗ ಯೋಚಿಸಿ ನೋಡಿ, ಇಂಥ ನೀರಿನ ಬಾನಿಗಳಲ್ಲಿ ಏನಿದೆ ಅಂಥ ವಿಶೇಷ ಎನ್ನಬಹುದು. ಹಳ್ಳಿಗಳಲ್ಲಿ ಸಾಮಾನ್ಯ ಎಲ್ಲರ ಮನೆಗಳೆದುರು ಜಾನುವಾರುಗಳ ಉಪಯೋಗಕ್ಕಾಗಿ ಇಂಥ ಪುಟ್ಟ ಪುಟ್ಟ ತೊಟ್ಟಿಗಳನ್ನು ನಿರ್ಮಿಸಿಯೇ ಇರುತ್ತಾರೆ....ಹಾಗೆನ್ನುವುದಕ್ಕಿಂತ ನಿರ್ಮಿಸಿರುತ್ತಿದ್ದರು ಎನ್ನುವುದೇ ಸೂಕ್ತವೇನೋ? ಇಂದಿನ ದಿನಗಳಲ್ಲಿ ಅಪರೂಪಕ್ಕೊಮ್ಮೆ ಇದು ಕಾಣ ಸಿಗುತ್ತಿದೆ ಎನ್ನುವುದೇ ವಿಶೇಷ. ನೀರಿನ ಸಾಂಪ್ರದಾಯಿಕ ರಚನೆಗಳಲ್ಲಿ ಇಂಥ ಬಾನಿಗಳೂ ಒಂದು. ಹಲವು ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತಿದ್ದ ಇವು ನಗರೀಕರಣದ ಇಂದಿನ ಯಾಂತ್ರಿಕ ಯುಗದಲ್ಲಿ ತೀರಾ ಅಪರೂಪವಾಗಿದ್ದಂತೂ ಸತ್ಯ.
ಬಾನಿ, ಮರಿಗೆ, ಕಲ್ಲು ಕವುಳಿಗೆ, ಗೋ ತೊಟ್ಟಿ, ಕಲ್ಮರಿಗೆ ಎಂಬಿತ್ಯಾದಿ ಹೆಸರುಗಳಿಂದ ಮಲೆನಾಡ ಭಾಗದಲ್ಲಿ ಗುರುತಿಸಲಾಗುವ ಇಂಥ ಸಂರಚನೆಗಳ ಹಿಂದೆ ಉತ್ಕಟ ಮಾನವೀಯ ಕಳಕಳಿ, ಭಾರತೀಯ ಸಂಸ್ಕೃತಿ, ಈ ನೆಲದ ಪರಂಪರೆ ಪ್ರತಿಫಲಿಸುತ್ತಿರುತ್ತದೆ. ಹಳ್ಳಿಗಳಲ್ಲಿ ಇವುಗಳನ್ನು ಕಲ್ಲಿನಿಂದಲೇ ನಿರ್ಮಿಸುವುದು ಪದ್ಧತಿ. ಇದು ಬಾನಿಯ ವಿಶೇಷತೆಯೂ ಹೌದು. ಸಾಮಾನ್ಯವಾಗಿ ಒಂದೇ ಕಲ್ಲಿನಲ್ಲಿ ಕಡೆದು ಹೊಂಡ ಮಾಡಿ ಪಾತ್ರೆಯಾಕಾರದಲ್ಲಿ ಇವುಗಳನ್ನು ನಿರ್ಮಿಸಿರುತ್ತಾರೆ. ಜಾನುವಾರುಗಳು ನೀರು ಕುಡಿಯುವ ಭರದಲ್ಲಿ ಒಂದಕ್ಕೊಂದು ತಿಕ್ಕಾಟ ನಡೆಸುವಾಗ ಮಣ್ಣಿನ ಅಥವಾ ಇನ್ನಾವುದೇ ವಸ್ತುಗಳಿಂದ ನಿರ್ಮಿಸಿದ ತೊಟ್ಟಿಗಳು ನಾಶವಾಗುವ ಸಾಧ್ಯತೆಗಳಿರುವುದರಿಂದ ಕಲ್ಲಿನಿಂದಲೇ ಕಡೆದು ಮಾಡುವುದು ರೂಢಿ. ಜತೆಗೆ ಬಿಸಿಲು, ಗಾಳಿ-ಮಳೆಯೆನ್ನದೇ ಸರ್ವಕಾಲಕ್ಕೂ ತಾಳಿಕೆ ಬರಲಿ ಎಂಬ ಉದ್ದೇಶವೂ ಇರಬಹುದು. ಒಟ್ಟಾರೆ ನುಣುಪಾಗಿ ಕೆತ್ತಿ, ವೈವಿಧ್ಯಮಯ ಆಕಾರಕ್ಕೆ ತಂದು ಮನೆಯ ಮುಂಭಾಗದಲ್ಲಿ ಅರ್ಧ ಭಾಗ ಹೂತಿರಲಾಗಿರ್‍ತುದೆ. ಇದರಲ್ಲೂ ಕಲಾತ್ಮಕತೆ ಮೆರೆದಿರುವ ಉದಾಹರಣೆಗಳೂ ಇವೆ. ತೊಟ್ಟಿಯ ಮೇಲ್ಭಾಗದಲ್ಲಿ ಹೊರಗೆ ಸುತ್ತಲೂ ಬಳ್ಳಿಗಳನ್ನು ಕೆತ್ತಿ ಅಲಂಕಾರ ಮಾಡಿರುತ್ತಾರೆ. ತೊಟ್ಟಿಯೆಂದಾಕ್ಷಣ ಎಲ್ಲವೂ ಒಂದೇ ಆಕಾರದಲ್ಲಿರಬೇಕೆಂದೇನೂ ಇಲ್ಲ. ಒಂದು ವೃತ್ತಾಕಾರ, ಒಂದು ಚೌಕ, ಇನ್ನೊಂದು ಆಯತ...ಒಟ್ಟಾರೆ ನಿರ್ಮಿಸಿದವನ ಕ್ರಿಯಾಶೀಲತೆಗಳಿಗನುಗುಣವಾಗಿ ಮರಿಗೆಗಳು ವಿವಿಧ ಆಕಾರ ತಳೆದಿರುತ್ತವೆ. ಎಲ್ಲದರಲ್ಲೂ ಒಂದೇ ಸಾಮ್ಯತೆಯೆಂದರೆ ಸಾಮಾನ್ಯವಾಗಿ ಎಲ್ಲದರ ಬಾಯಿಯೂ ಅಗಲವಾಗಿರುತ್ತದೆ. ಮೂರ್‍ನಾಲ್ಕು ಹಸುಗಳು ಬಂದರೂ ಒಟ್ಟಿಗೇ ಬಂದು ನೀರು ಕುಡಿದು ಹೋಗಲು ಅನುಕೂಲವಾಗಲಿ ಎಂಬುದು ಇದರ ಉದ್ದೇಶ.
ದಿನಾಲೂ ಬೆಳಗ್ಗೆ ಎದ್ದು ಬಾಗಿಲು ತೊಳೆದು ರಂಗೋಲಿ ಹಾಕಿ ಮುಗಿಯುತ್ತಿದ್ದಂತೆ ಇದಕ್ಕೂ ನಾಲ್ಕು ಕೊಡ ನೀರು ತುಂಬಿಸಿಡುವುದು ಮನೆಯೊಡತಿಗೆ ಅಭ್ಯಾಸ. ನಂತರದ ಸರದಿ ಕುಟುಂಬದ ಇತರ ಸದಸ್ಯರದ್ದು. ಬಿಡುವಾದಾಗಲೆಲ್ಲ ಒಬ್ಬರಲ್ಲ ಮತ್ತೊಬ್ಬರು ಹೊರಬಂದು ಈ ಮರಿಗೆಗಳ ಮೇಲೊಂದು ಇಣುಕು ಹಾಕಿ ಹೋಗುತ್ತಾರೆ. ಒಟ್ಟಾರೆ ಯಾವುದೇ ಸಂದರ್ಭದಲ್ಲೂ ಇವು ಖಾಲಿಯಾಗಿರದಂತೆ ಜಾಗ್ರತೆ ವಹಿಸುತ್ತಾರೆ. ಬಿಸಿಲ ಝಳದಲ್ಲಿ ಬಳಲಿ ಬೆಂಡಾಗಿ ಬರುವ ಜಾನುವಾರುಗಳಿಗೆ ಎಂಥ ಸಂದರ್ಭದಲ್ಲೂ ನೀರು ಸಿಗದೇ ಹೋಗಬಾರದು ಎಂಬ ಕಾಳಜಿಯನ್ನೂ ಮನೆಯವರೆಲ್ಲರೂ ಅನಾಯಾಸವಾಗಿ ರೂಢಿಸಿಕೊಂಡಿರುತ್ತಾರೆ. ಜಾನುವಾರುಗಳು ಬೆಳ್ಳಂಬೆಳಗ್ಗೆ ಮೇವು ಹುಡುಕುತ್ತ ಹೊರ ಬಿದ್ದರೆ ಮನೆಗೆ ಬಂದು ಸೇರುವುದು ಇನ್ನು ಸಂಜೆಯೇ. ಬೆಟ್ಟ ಗುಡ್ಡಗಳನ್ನು ಸುತ್ತಿ ಸುಳಿದಾಡಿ ಬರುವಾಗ ಅವು ಬಾಯಾರಿ ಬೆಂಡಾಗಿರುತ್ತವೆ. ಜತೆಗೆ ನೀರಿಗಾಗಿಯೂ ಅಲೆದಾಡುವಂತಾಗಬಾರದು ಎಂಬ ಸದುದ್ದೇಶದಿಂದ ಇಂಥ ಬಾನಿಗಳನ್ನು ಮನೆಯ ಮುಂದೆ ನಿರ್ಮಿಸಿಟ್ಟು ಅನುಕೂಲ ಮಾಡಿರುತ್ತಾರೆ.
ಬಹುತೇಕ ಗ್ರಾಮೀಣ ಭಾಗದಲ್ಲಿ ಇಂಥ ಬಾನಿಗಳ ಬಗ್ಗೆ ಪೂಜ್ಯ ಭಾವನೆಯೂ ಇರುತ್ತದೆ. ಗೋವುಗಳೆಂದರೆ ಮೂವತ್ತಮೂರು ಕೋಟಿ ದೇವತೆಗಳ ಆವಾಸಸ್ಥಾನ. ಹೀಗಾಗಿ, ಅವುಗಳಿಗೆ ನೀರುಣಿಸುವುದೆಂದರೆ ಅದು ಪುಣ್ಯ ಸಂಚಯದ ಕಾರ್ಯ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಇಂಥ ಬಾನಿಗಳು ಯಾವತ್ತಿಗೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳುತ್ತಾರೆ. ರಂಗೋಲಿ ಹಾಕಿ, ಅರಿಷಿಣ, ಕುಂಕುಮ ಹಚ್ಚಿ ಮುಂಜಾನೆ ಪೂಜಿಸಿರುತ್ತಾರೆ. ಕಲ್ಲು ಮರಿಗೆ ಇಡದ ಮನೆಯೆಂದರೆ ಅದು ಪಕ್ಕಾ ಜಿಪುಣಾಗ್ರೇಸರರ ಮನೆಯೆಂದೇ ಗುರುತಿಸಲಾಗುತ್ತದೆ.
ನಂಬಿಕೆಗಳ ಪ್ರಶ್ನೆ ಏನೇ ಇರಲಿ, ಮೂಕ ಪ್ರಾಣಿಗಳಿಗಾಗಿ ನೀರಿಟ್ಟು ಸಲಹುವ ನಮ್ಮ ಗ್ರಾಮೀಣ ಭಾಗದ ಜನರ ಇಂಥ ಉತ್ತಮ ನಡವಳಿಕೆ, ನಿಸ್ವಾರ್ಥ ಮನೋಭಾವ, ಎಲ್ಲ ಜೀವಿಗಳ ಬಗೆಗೂ ತೋರುವ ಕಳಕಳಿ, ಅದರಲ್ಲೂ ವೈವಿಧ್ಯವನ್ನು ತೋರುವ ಕ್ರಿಯಾಶೀಲತೆ -ಇಂಥವು ವಿಶ್ವದ ಬೇರೆಲ್ಲೂ ಕಾಣಸಿಗುವುದಿಲ್ಲ. ನಿಜಕ್ಕೂ ಮೇರಾ ಭಾರತ್ ಮಹಾನ್ ಎನಿಸುವುದು ಇಂಥ ಕಾರಣಗಳಿಗಾಗಿಯೇ. ಈಗ ಹೇಳಿ, ಇವು ನೋಡಿ ಹಾಗೆಯೇ ಹೋಗಿ ಬಿಡುವ ಪುಟ್ಟ ಸಂಗತಿಯೇ ? ನಾವು ಭಾರತೀಯರು ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರುತ್ತಿದ್ದೇವೆ ಎಂಬ ಮಾತ್ರಕ್ಕೆ ಇಂಥ ಸೌಜನ್ಯ, ಸಜ್ಜನಿಕೆಯ ನಡೆಯನ್ನು ಕಳೆದುಕೊಳ್ಳಬೇಕೇ ?
‘ಲಾಸ್ಟ್’ಡ್ರಾಪ್: ಕಲ್ಲೂ ಕರಗಿ ಮರಿಗೆಗಳ ರೂಪ ತಾಳಿ ಮೂಕ ಪ್ರಾಣಿಗಳಿಗೆ ಸ್ಪಂದಿಸುತ್ತವೆ ಎಂದ ಮೇಲೆ ಮಾನವರಾಗಿ ನಮಗೆ ಮರಿಗೆಗಳನ್ನು ತುಂಬಿಸಿಡುವಷ್ಟಾದರೂ ಮೃದು ಮನಸ್ಸು ಇಲ್ಲದಿದ್ದರೆ ಹೇಗೆ ?
ಸಮ್ಮನಸ್ಸಿಗೆ ಶರಣು
3 months ago