ಲವ್ ಅಟ್ ಫಸ್ಟ್ ಸೈಟ್ ಎನ್ನುತ್ತಾರಲ್ಲ, ಹಾಗೆಯೇ. ನೀವಾಕೆಯನ್ನು ನೋಡಿದ ಮೊದಲ ನೋಟದಲ್ಲೇ ಪ್ರೇಮಪಾಶದಲ್ಲಿ ಬೀಳದಿದ್ದರೆ ಕೇಳಿ. ಅಂಥ ಅದ್ಭುತ ಸೌಂದರ್ಯದ ಖನಿಯಾಕೆ. ಆ ನುಣುಪಾದ ಮೈ ಮಾಟ. ಸೂಕ್ಷ್ಮ ಅವಯವಗಳು. ಸುಂದರ ಬಣ್ಣ. ಆಕರ್ಷಕ ನಿಲುವು. ಕಣ್ತುಂಬಿಕೊಳ್ಳುವ ಹರವು. ಎಲ್ಲೆಲ್ಲಿ ಎಷ್ಟೆಷ್ಟು ಇರಬೇಕೋ ಅಷ್ಟಷ್ಟೇ ನಿಖರವಾಗಿ ಅಳತೆ ಮಾಡಿ ಕೂರಿಸಿದ ಕೌಶಲ್ಯ. ಅದ್ಯಾವ ಗಳಿಗೆಯಲ್ಲಿ ಮೈದಾಳಿ ನಿಂತಳೋ...ಅಬ್ಬ ನೋಡುತ್ತಿದ್ದರೆ ನೋಡುತ್ತಲೇ ನಿಂತುಕೊಳ್ಳಬೇಕೆನಿಸುವ ಆ ಸೌಂದರ್ಯಕ್ಕೆ ಅದೇ ಸಾಟಿ.
ಸಂತೇ ಬೆನ್ನೂರಿನ ಆ ಪುಷ್ಕರಿಣಿಯನ್ನು ನೋಡಿದವರ್‍ಯಾರೂ ಅದನ್ನು ನಿರ್ಜೀವ ಕಟ್ಟಡವೆನ್ನಲು ದೇವರಾಣೆ ಸಾಧ್ಯವಿಲ್ಲ. ಜೀವಂತಿಕೆ ಪುಟಿಪುಟಿದೇಳುತ್ತಲೇ ಇರುವ ಆ ಪುಟ್ಟ ಹೊಂಡದ್ದು ಯಾವ ಕನ್ನಿಕೆಗೆ ಕಡಿಮೆಯಿಲ್ಲದ ವಯ್ಯಾರ. ಎತ್ತರದ ನಿಲುವು, ಬಿತ್ತರದ ಬಿನ್ನಾಣ, ಮಹತ್ತರ ಉದ್ದೇಶ ಸಾಧನೆಯ ಗುರಿಯನ್ನು ಹೊಂದಿರುವ ಆ ಪುಷ್ಕರಿಣಿಯ ಕಂಡೇ ಧನ್ಯರಾಗಬೇಕು. ಹೊಂಡವೆಂದಾಕ್ಷಣ ಒಂದು ಪುಟ್ಟ ಗುಂಡಿ, ಆ ಗುಂಡಿಯೊಳಗೊಂದಿಷ್ಟು ನೀರು, ನೀರಿನೊಳಗಷ್ಟು ಕಸ-ಕಡ್ಡಿ, ಹೂಳು ಇದು ಇದ್ದದ್ದೇ ಬಿಡಿ ಗೋಳು ಎಂದು ಮೂಗುಮುರಿಯುವಂತಿಲ್ಲ. ಸಂತೆಬೆನ್ನೂರಿನ ಈ ಹೊಂಡಕ್ಕೆ ಎಲ್ಲ ಹೊಂಡಗಳಲ್ಲಿರುವ ಭಂಡತನವಿಲ್ಲ. ಬದಲಾಗಿ ಭರಪೂರ ವೈಶಿಷ್ಟ್ಯ, ವೈವಿಧ್ಯಗಳ ಭಂಡಾರವಿದೆ.
ಅಸಲಿಗೆ ಇದು ಕೊಳವಲ್ಲ. ಕೊಳದೊಳಗಿರುವ ದೇಗುಲ. ಇಂಥವಕ್ಕೆ ನಮ್ಮ ಇತಿಹಾಸದಲ್ಲಿ ಕೊರತೆಯೇನಿಲ್ಲ. ಕೊಳಕ್ಕೊಂದು ದೇಗುಲವೋ, ದೇಗುಲಕ್ಕೊಂದು ಕೊಳ್ವೋ ಅಂತೂ ಅವೆರಡೂ ಒಟ್ಟೊಟ್ಟಿಗೇ ಇರುವುದನ್ನು ನೋಡಿಕೊಂಡೇ ಬಂದಿದ್ದೇವೆ. ಮನುಷ್ಯನಿಗೆ ಮೊದಲ ಆದ್ಯತೆಯಾದ ಜೀವಜಲಕ್ಕೊಂದು ಮೂಲ ಸೃಷ್ಟಿಸಿ ಅದರ ಪಾವಿತ್ರ್ಯ ರಕ್ಷಣೆಗೆ ದೈವತ್ವವನ್ನು ಆರೋಪಿಸುವುದು ನಮ್ಮ ಪರಂಪರೆಯೇ. ದೇವಸ್ಥಾನ ಕಟ್ಟಿದಾಗ ಅಲ್ಲಿನ ಪೂಜೆ ಪುನಸ್ಕಾರಕ್ಕೆ, ಭಕ್ತರ ಅನುಕೂಲಕ್ಕೆ ಜತೆಗೆ ನೀರಿನ ಆಸರೆಯಾಗಿ ಕಲ್ಯಾಣಿಗಳನ್ನು ನಿರ್ಮಿಸುವ ಪದ್ಧತಿ ನಮ್ಮಲ್ಲಿ ಹಿಂದಿನಿಂದಲೂ ಇದೆ. ಇವುಗಳಿಗೆ ತೀರ್ಥಗಳೆಂದು ಕರೆಯುವುದು ವಾಡಿಕೆ. ಎಲ್ಲ ದಾನಗಳಂತೆಯೇ ಜಲದಾನವೂ ಪುಣ್ಯ ಸಂಚಯವೆಂಬ ನಂಬಿಕೆಯೂ ಅದೆಷ್ಟೋ ಕೆರೆಕಟ್ಟೆಗಳ ನಿರ್ಮಾಣಕ್ಕೆ ಕಾರಣವಾದದ್ದೂ ಇದೆ. ಇದೂ ಅಂಥದ್ದೇ ಒಂದು. ಆದರೆ ವಿಶೇಷ ಇರುವುದು ಇದರ ವಿನ್ಯಾಸದಲ್ಲಿ ಹಾಗೂ ಇದಕ್ಕೆ ಹುಡುಕಿದ ಜಲಮೂಲದಲ್ಲಿ. ಸರಿಸುಮಾರು ಐದು ದಶಕಗಳ ಹಿಂದೆಯೇ ಮಳೆ ನೀರು ಸಂಗ್ರಹಕ್ಕೆ ಇಷ್ಟೊಂದು ವೈಜ್ಞಾನಿಕ ವ್ಯವಸ್ಥೆ ರೂಪಿಸಲಾಗಿತ್ತು ಎಂಬುದು ನಿಜಕ್ಕೂ ಗಮನಾರ್ಹ ಸಂಗತಿಯಾಗುತ್ತದೆ. ಆತನ ಹೆಸರು ಕೆಂಗಪ್ಪ. ವಿಜಯ ನಗರ ಅರಸರ ಪಾಳೆಗಾರ. ಸಂತೇಬೆನ್ನೂರುನ್ನಾಳಿದ ನಾಯಕರ ಪೈಕಿ ಮೊದಲಿಗ. ಆತ ಶಾಲಿವಾಹನ ಶಖೆ ೧೪೮೦ನೇ ಕಾಳಾಯುಕ್ತಿ ಸಂವತ್ಸರದಲ್ಲಿ ಅಂದರೆ ಕ್ರಿ.ಶ. ೧೫೫೮ರಲ್ಲಿ ಇದನ್ನು ನಿರ್ಮಸಿದನೆನ್ನುತ್ತದೆ ಇತಿಹಾಸ. ಮೊದಲಿಗೆ ಕಟ್ಟಿದ್ದು ಆತ ದೇಗುಲವನ್ನೇ. ಅದಾದರೂ ಪುಟ್ಟದೇನಲ್ಲ. ಬರೋಬ್ಬರಿ ೬೪ ಅಂಕಣಗಳ ದೇವಸ್ಥಾನ. ಅಲ್ಲಿ ತನ್ನ ಮಲೆದೈವ ಶ್ರೀರಾಮಚಂದ್ರ ದೇವರನ್ನು ಪ್ರತಿಷ್ಠೆ ಮಾಡಿ ಅದರ ಮುಂದೆ ಶ್ರೀರಾಮತೀರ್ಥವೆಂಬ ಈ ನಮ್ಮ ಸುಂದರಿಯನ್ನು ಕರೆತಂದು ಕುಳ್ಳಿರಿಸಿದನಂತೆ ಎಂದು ಸುಮತೀದ್ರ ನಾಡಿಗರು ಕೊಳದ ಬಗ್ಗೆ ಬರೆದ ಲೇಖನದಲ್ಲಿ ನಮೂದಿಸುತ್ತಾರೆ.
ಇತಿಹಾಸದ ಕಥೆ ಏನೇ ಇರಲಿ. ನೈಸರ್ಗಿಕ ಮಳೆ ನೀರು ಸಂಗ್ರಹಕ್ಕಾಗಿ ನಿರ್ಮಿಸುವ ಹೊಂಡಕ್ಕೂ ಇಂಥದ್ದೊಂದು ಸೌಂದರ್ಯವನ್ನು ಕಲ್ಪಿಸುತ್ತಾರೆಂದರೆ ಕೆಲಸದ ಬಗೆಗೆ ಅವರಿಗಿದ್ದ ನಿಷ್ಠೆ. ಅದರ ಹಿಂದಿರುವ ಕ್ರಿಯಾಶೀಲತೆಯನ್ನು ಎಂಥವರೂ ಮೆಚ್ಚಲೇಬೇಕು. ವಾಸ್ತು ವಿಷಯಕ್ಕೆ ಬಂದರೆ ಇದು ಧ್ವಜಾಯವಂತೆ. ೨೩.೫ ಅಡಿ ಉದ್ದ ೨೪೫ ಅಡಿ ಅಗಲವಿದೆ. ನೆಲಮಟ್ಟದಿಂದ ಸುಮಾರು ೪೦ ಅಡಿ ಆಳ ಇದೆ. ಸುತ್ತಲೂ ಕೆಂಪು ಕಣಶಿಲೆ (ಗ್ರಾನೈಟ್)ಯಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಇಷ್ಟು ಬೃಹತ್ ಕೊಳದ ಕೊನೆಯವರೆಗೂ ಇಳಿಯಲು ೫೪ ದೊಡ್ಡಮೆಟ್ಟಿಲುಗಳನ್ನು ಕಲ್ಪಿಸಲಾಗಿದೆ. ಸುತ್ತಲೂ ಉಳಿದ ಭಾಗದಲ್ಲಿ ೪೪ ಚಿಕ್ಕಪಾವಟಿಗಳು ಇವೆ. ಕೊಳದ ಎಂಟು ದಿಕ್ಕಿನಲ್ಲೂ ಂದರಮಂಟಪಗಳನ್ನು ಹಿಂದೂ ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿತ್ತು. ಈಗದು ಬಹುತೇಕ ನಾಶವಾಗಿದ್ದು, ಆರು ಮಂಟಪಗಳು ಮಾತ್ರ ಉಳಿದಿವೆ. ಇದರ ಗೋಪುರಗಳು ಹಂಪಿಯ ಕಮಲ ಮಹಲ್, ಅಶ್ವಶಾಲೆ, ಗಜಶಾಲೆಯ ಗೋಪುರಗಳು, ವಿಠಲಮಂದಿರದ ಹತ್ತಿರವಿರುವ ಪುಷ್ಕರಣಿಯ ಮಂಟಪದ ಗೋಪುರಗಳನ್ನು ಹೋಲುತ್ತವೆ.
ಅಸಲು ಸೌಂದರ್ಯವಿರುವುದು ಪುಷ್ಕರಣಿಯ ಮಧ್ಯ ಭಾಗದಲ್ಲಿ ನಿರ್ಮಿಸಿರುವ ೨೧ ಅಡಿ ಅಗಲ, ೨೧ ಅಡಿ ಉದ್ದದ ವಸಂತಮಂಟಪದಲ್ಲಿ. ಇದರ ಭವ್ಯತೆಯನ್ನು ಹೇಳಿಮುಗಿಯುವುದಿಲ್ಲ ಬಿಡಿ. ಕಲ್ಲಿನತೇರಿನಂತೆ ಕಾಣುವ ಈ ಮಂಟಪ ನಾಲ್ಕು ದಿಕ್ಕಿನಿಂದ ಒಂದೇ ರೀತಿಯಿದೆ. ಒಟ್ಟು ೫ ಅಂತಸ್ತುಗಳಿವೆ. ಕಲ್ಲುಬಂಡೆಯ ಮೇಲೆ ಭದ್ರವಾದ ನಿರ್ಮಣ. ಕೆಳ ಅಂತಸ್ತು (ನೆಲಮಹಡಿ) ಸರಳಗೋಡೆ. ನಂತರ ರಹಸ್ಯಮಹಡಿ, ಮೂರನೆಯದ್ದು ವೀಕ್ಷಣಾಮಹಡಿ, ಅದರ ಮೇಲೆ ಉಯ್ಯಾಲೆಮಹಡಿ, ಕೊನೆಯಲ್ಲಿ ಗೋಪುರಮಹಡಿ, ನೆಲಮಹಡಿಗೆ ಒಂದನೇ ಅಂತಸ್ತಿನಲ್ಲಿ ಮಧ್ಯದಿಂದ ಮಾತ್ರ ಒಳಗೆ ಹೋಗಬಹುದು. ಆದರೆ ಈಗ ಇದನ್ನು ಮುಚ್ಚಲಾಗಿದೆ. ರಕ್ಷಣಾ ಮಹಡಿ ಒಳಗಿಂದ ನೆಲಮಹಡಿಗೆ ಹೋಗಿ ಅಲ್ಲಿಂದ ಪೂರ್ವದಿಕ್ಕಿನ ಸುರಂಗಮಾರ್ಗದ ಮೂಲಕ ಹೊರಗೆ ಹೋಗುವಂತೆ ವ್ಯವಸ್ಥೆ ಇತ್ತಂತೆ. ಎರಡನೇ ಮಹಡಿಯಲ್ಲಿ ಬಾಲ್ಕಾನಿ ಇದೆ. ವೀಕ್ಷಣಾ ಗ್ಯಾಲರಿಯಾಗಿ ಇದನ್ನು ಉಪಯೋಗಿಸಬಹುದು. ವೀಕ್ಷಣಾ ಮಹಡಿ ಮಧ್ಯೆ ಕಮಾನಿನ ಗೂಡಿನ ತರಹ ರಚಿಸಲಾಗಿದೆ. ಬಾಲ್ಕನಿಗಳಿಗೆ ಬೋದಿಕೆಗಳನ್ನು ಆಧಾರಮಾಡಿ, ತುದಿಯಲ್ಲಿ ಮೆಲಾರ್ನ್‌ನಿಂದ ಅಲಂಕರಿಸಲಾಗಿದೆ. ಮೂರನೇ ಮಹಡಿಯಲ್ಲಿ ಹಿಂದೆ ವಸಂತಕಾಲದಲ್ಲಿ ಪುಷ್ಕರಣಿ ಸುತ್ತ ತೆಪ್ಪದಲ್ಲಿ ದೇವರನ್ನು ಕೂಡಿಸಿ, ಸುತ್ತಿಸಿ ನಂತರ ಉಯ್ಯಾಲೆ ಮಂಟಪದಲ್ಲಿ ದೇವರನ್ನು ಕುಳ್ಳಿರಿಸಿ ಉತ್ಸವ ಮಾಡುತ್ತಿದ್ದರಂತೆ. ನಂತರ ಗೋಪುರ ಮಹಡಿ. ಇದರ ಗೋಪುರವನ್ನು ಕುಂಬಳಕಾಯಿಯಂತೆ ನಿರ್ಮಿಸಲಾಗಿದೆ. ಕೊಣೆಯ ಗೋಪುರ ಮಹಡಿಯಲ್ಲಿನ ಸೂಕ್ಷ್ಮ ಕುಸರಿಯೇ ಇಡೀ ಪುಷ್ಕರಿಣಿಗೆ ಕಳಶವಿಟ್ಟಂತಾಗಿ ಗಮನ ಸೆಳೆಯುತ್ತದೆ. ಮಂಟಪದ ನೆಲಮಹಡಿ ಆರು ಅಡಿ ಎತ್ತರವಿದ್ದು, ಉಳಿದ ಮಹಡಿಗಳು ತಲಾ ೧೦ ಅಡಿ ವಿಸ್ತಾರವಿದ್ದು, ಸಂಪೂರ್ಣ ತಳದಿಂದ ಗೋಪುರದವರೆಗೆ ಇದರ ಎತ್ತರ ಸುಮಾರು ೬೦ ಅಡಿ ಇದೆ. ಈ ಮಂಟಪದಿಂದ ನೀರು ಹೊರಗೆ ಚಿಮ್ಮುವ ವ್ಯವಸ್ಥೆ ಇತ್ತಂತೆ. ಹಾಗಾಗಿ ಇದಕ್ಕೆ ಸ್ಥಳೀಯರು ಕಾರಂಜಿ ಮಂಟಪ ಎಂದೂ ಇದನ್ನು ಕರೆಯುತ್ತಾರೆ.
ವಿಶೇಷ ವೆಂದರೆ ಏನಿಲ್ಲವೆಂದರೂ ಈ ಮಂಟಪ ನಿರ್ಮಿಸಿ ೫೦೦ಗಳಾಗಿವೆ. ಮಳೆ ಗಾಳಿ ಬಿಸಿಲೆನ್ನದೇ ಇದು ನಿಂತಿದೆ. ಇಂದಿಗೂ ಒಂದಿನಿತೂ ಇದಕ್ಕೆ ಧಕ್ಕೆ ಗಿಲ್ಲ. ಪುಷ್ಕರಣಿಯಲ್ಲಿ ಸುತ್ತಲಿನ ಒಂದೇ ಸಾಲಿನ ಮೆಟ್ಟಿಲಿನಲ್ಲಿ ಒಂದೇ ಸಮತಟ್ಟದಲ್ಲಿ ನೀರು ನಿಲ್ಲುವಂತೆ ರಚಿಸಿರುವುದು ಅಂದಿನ ತಾಂತ್ರಿಕ ನೈಪುಣ್ಯಕ್ಕೆ ಸಾಕ್ಷಿ. ಇನ್ನೊಂದು ಗಮನಿಸಲೇ ಬೇಕಾದ ಸಂಗತಿಯೆಂದರೆ ಇಡೀ ಹೊಂಡ ಇರುವುದು ಕಲ್ಲು ಬಂಡೆಯ ಮೇಲೆ. ಹೇಗೆ ನೋಡಿದರೂ ಇಲ್ಲಿ ನೀರಿನ ಸೆಲೆ ಸಿಗಲು ಸಾಧ್ಯವಿಲ್ಲ. ಮಳೆಯೊಂದೇ ಇದಕ್ಕೆ ಆಧಾರ. ಮಳೆಗಾಲದಲ್ಲಿ ಪಕ್ಕದ ಜಮೀನು, ಭೂಮಿಯಲ್ಲಿ ಬಿದ್ದ ನೀರು, ಈ ಪುಷ್ಕರಣಿಯ ದಕ್ಷಿಣಕ್ಕಿರುವ ಅಗಲವಾದ ಮಣ್ಣಿನ ಗುಂಡಿಗೆ(ಆನೆಹೊಂಡ ) ಬಂದು ಶೇಖರವಾಗುತ್ತದೆ. ಅಲ್ಲಿಂದ ಕತ್ತರಿಯಂತೆ ನಿರ್ಮಿಸಿರುವ ತೂಬಿನಲ್ಲಿ ಬಂದು ಅಲ್ಲಿ ಶುದ್ಧೀಕರಣ ಪ್ರಕ್ರಿಯೆಗೊಳಪಡುತ್ತದೆ. ನಂತರ ದಕ್ಷಿಣ ದಿಕ್ಕಿನಲ್ಲಿರುವ ಕಲಾತ್ಮಕ ಜಲಹರಿ ಮಂಟಪದ ಮೂಲಕ ಪುಷ್ಕರಣಿಗೆ ನೀರು ಬರುತ್ತದೆ. ಹೆಚ್ಚಾದ ನೀರು ಈಶಾನ್ಯ ದಿಕ್ಕಿನ ಮಂಟಪದ ತೂಬಿನ ಮಂಟಪದ ಮೂಲಕ ಹೊರಹೋಗುವ ವ್ಯವಸ್ಥೆ ಮಾಡಿದ್ದಾರೆ. ಈಗ ಹೂಳು ತುಂಬಿ ಈ ತೂಬು ಕಾರ್ಯ ನಿರ್ವಹಿಸುತ್ತಿಲ್ಲ.
ಇಲ್ಲಿನ ಪುಷ್ಕರಣಿಯ ಎಲ್ಲಾ ಮಂಟಪಗಳಲ್ಲೂ ವಿವಿಧ ದೇವತಾ ಮೂರ್ತಿಗಳು, ಹೂವಿನ ಬಳ್ಳಿ, ನಿರ್ಮಾತೃಗಳ ಉಬ್ಬುಶಿಲ್ಪಗಳು ಶ್ರೀರಾಮ, ಆಂಜನೇಯ, ವೆಂಕಟೇಶ, ಗೋಪಾಲಕೃಷ್ಣ, ಗಣಪತಿ, ಶಿವಪಾರ್ವತಿ, ಸೂರ್ಯ, ಆಯಾ ದಿಕ್ಪಾಲಕರ ಮಂಟಪದಲ್ಲಿ ಅಷ್ಟ ದಿಕ್ಪಾಲಕರಾದ ಈಶಾನ್ಯ, ಇಂದ್ರ, ಯಮ, ವಾಯು, ಕುಬೇರರ ಉಬ್ಬುಶಿಲ್ಪಗಳು, ನಾಗದೇವತೆಗಳು, ಮೃಗಪುರುಷ ಇತ್ಯಾದಿ ವಿಗ್ರಹಗಳಿವೆ. ಒಟ್ಟಿನಲ್ಲಿ ಈ ಪುಷ್ಕರಣಿ ದಕ್ಷಿಣ ಭಾರತದ ಸುಂದರ ಪುಷ್ಕರಣಿಯಲೊಂದು ಎನ್ನಲಡ್ಡಿಯಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ಮಳೆ ಸಂಗ್ರಹದ ತಾಂತ್ರಿಕತೆ ಇಂದಿನ ಆಧುನಿಕ ಯುಗಕ್ಕೂ ಮಾದರಿ.
ಸಮ್ಮನಸ್ಸಿಗೆ ಶರಣು
3 months ago
No comments:
Post a Comment