ಸರಿದಷ್ಟೂ ಸೆಳೆವುದಿವಳ
ಬಂಗಾರದ ರೇಸಿಮೆಯೆಳೆ ಸೂಜಿಗಲ್ಲ ಸೂತ್ರವು !
ಹೌದು, ಸಂಗೀತ ಇಷ್ಟವಾಗುವವರಿಗೆಲ್ಲ ಸುಶ್ರಾವ್ಯವಾಗಿ ಹಾಡಲು ಬರುವುದಿಲ್ಲ. ಹಾಗೆಯೇ ಮಳೆಯಿಂದ ತನಿಯೆರಿಸಿಕೊಂಡವರಿಗೆಲ್ಲ ಅದರೊಂದಿಗೆ ಸಂವಾದಿಸಲಾಗುವುದಿಲ್ಲ. ಆದರೆ, ಮೌನಕ್ಕೆ ಮಾತಿಗಿಂತಲೂ ಹೆಚ್ಚಿನ ಶಕ್ತಿ ಇದೆಯೆಂಬುದನ್ನು ಒಪ್ಪಬಹುದಾದರೆ- ದಿನವಿಡೀ ಮುಕ್ಕರಿಕೊಂಡು ನಿಲ್ಲುವ ಮಳೆ ಹನಿಗಳ ಮುಂದೆ ಒಂದಷ್ಟು ಹೊತ್ತು ಮೌನವಾಗಿ ನಿರಕಿಸುತ್ತ ಕುಳಿತರೂ ಸಾಕು, ಅದು ನಮ್ಮ ಮನದ ಮೂಲೆಯನ್ನು ತಡಕಿ ಅದರೊಳಗಿನ ಎಲ್ಲ ದುಗುಡ-ದಡಕಿಗಳನ್ನು ಸ್ತಬ್ಧಗೊಳಿಸದಿದ್ದರೆ ಕೇಳಿ. ಅದರ ಶಕ್ತಿಯೇ ಅಂಥದ್ದು; ಒಂದು ರೀತಿಯಲ್ಲಿ ಅಮ್ಮನ ಮಡಿಲಿನಂತೆ; ಆತ್ಮಸಖಿಯ ಬಿಸಿ ಅಪ್ಪುಗೆಯಂತೆ. ಕಲ್ಲವಿಲಗೊಂಡ ಮನಸನ್ನು ಸಂತೈಸಿ, ಕಲ್ಮಷಗಳ ತೊಳೆದು, ಕಾರ್ಪಣ್ಯಗಳೆಲ್ಲವನ್ನೂ ಕ್ಷಣದಲ್ಲಿ ಮರೆಸಿ ಚೇತರಿಕೆಯ ಚಿಲುಮೆಯನ್ನು ಚಿಮ್ಮಿಸುತ್ತದೆ. ಕುಣಿ ಕುಣಿಯುತ್ತ ತನ್ನ ತೋಳ್ತೆಕ್ಕೆಗೆ ಬಂದವರನ್ನಂತೂ ಹುಚ್ಚೆದ್ದು ಕುಣಿಸಿ, ತಣಿಸಿ ನಿರುಂಬಳ ಭಾವದಲ್ಲಿ ಮೀಯಿಸಿಬಿಡುತ್ತದೆ.
ಅಪರೂಪಕ್ಕೊಮ್ಮೊಮ್ಮೆ ಗೆಳೆಯನಂತಾದಾಗ
ಎದೆಯ ಕಳವಳವೆಲ್ಲ ಕರಗಿದಂತೆ
ಮೊದಲ ಮಳೆ ಬಂದ ಕ್ಷಣ ನೆಲವೆಲ್ಲ ತಂಪಾಗಿ
ಹುಡಿಮಣ್ಣ ಸೌಗಂಧ ಹರಡಿದಂತೆ.....
ಅಪರೂಪದ ಅನುಭವವನ್ನು ಬಣ್ಣಿಸುವಾಗಲೂ ಕವಿ ಮತ್ತೆ ಮಳೆ ಹನಿಗಳನ್ನೇ ಉಪಮೆಯಾಗಿ ಬಳಸುತ್ತಾನೆ. ಹಾಗೆ ನೋಡಿದರೆ, ಮಳೆಯೆಂಬುದು ನಿಸರ್ಗವನ್ನಷ್ಟೇ ಚಿಗುರಿಸುವುದಿಲ್ಲ; ಇಡೀ ಭೂಮಂಡಲದ ಜೀವ ಕೋಟಿಯ ಪುನರುತ್ಥಾನಕ್ಕೇ ಮೂಲ ಕಾರಣವಾಗುತ್ತದೆ. ಅಂಥ ಜೀವ ಸ್ರೋತಕ್ಕೆ ಬೇರಾವುದೂ ಪರ್ಯಾಯವಾಗಲು ಸಾಧ್ಯವೇ ಇಲ್ಲ. ಬೇಕಿದ್ದರೆ ನೀವೊಮ್ಮೆ ಇದನ್ನು ಪ್ರಯೋಗಕ್ಕಿಟ್ಟು ನೋಡಿ.ಒಂದು ಸಸಿಗೆ ಸಾಕು ಸಾಕೆನಿಸುವಷ್ಟು ನೀರುಣಿಸಿದರೂ ಅದು ಹೆಚ್ಚೆಂದರೆ ಚಿಗಿತು ನಿಲ್ಲಬಹುದು. ಆದರೆ ಜೀವ ಚೈತನ್ಯದೊಂದಿಗೆ ಅದು ನಳನಳಿಸಬೇಕಿದ್ದರೆ ಮಳೆ ಹನಿಗಳೊಂದಿಗೆ ಲಾಸ್ಯವಾಡಲೇ ಬೇಕು. ಮಳೆ ಬಂದು ನಿಂತ ಮರುಕ್ಷಣದ ಆಹ್ಲಾದವೇ ಬೇರೆ. ಮರ-ಗಿಡಗಳಷ್ಟೇ ಅಲ್ಲ, ನಮ್ಮೊಳಗೂ ಅದೆಂಥದೋ ಪುಳಕ ತುಂಬಿ ತುಳುಕಲಾರಂಭಿಸಿರುತ್ತದೆ.
ಒಂದೊಂದು ಮಳೆಯದ್ದು ಒಂದೊಂದು ಪರಿ. ಆರಂಭದಲ್ಲೇ ಕಣ್ಣಾ ಮುಚ್ಚಾಲೆಯಾಟವಾಡುವ ಅಶ್ವಿನಿಯದ್ದು ತುಂಟತನ. ಕಾದು ಕುಳಿತ ಧರಣಿಯನ್ನು ತಣಿಸುವ ಧಾವಂತ ಭರಣಿಯದ್ದು. ಕೃಷಿ ಕೃತ್ಯಗಳಿಗೆ ಅನುವು ಮಾಡಿಕೊಡುವವಳು ಕೃತ್ತಿಕೆ. ರೋಹಿಣಿ ಒಮ್ಮೊಮ್ಮೆ ರಚ್ಚೆ ಹಿಡಿದು ಕೂರುವ ಮಗುವಿನಂತೆ, ಹಿಡಿದಳೆಂದರೆ ರಾಚಿ ಹೋಗಿಬಿಡುತ್ತಾಳೆ. ಮೃಗಶಿರಾ ಹೆಸರಿಗೆ ತಕ್ಕಂತೆ ಎಲ್ಲ ಜೀವಸಂಕುಲದ ನೆತ್ತಿ ತಣಿಸದಿರಳು. ಧೋಗುಡುತ್ತ ಆಗಸದಿಂದ ಧುಮ್ಮಿಕ್ಕಿ ಬರುವ ಅಬ್ಬರದ ಆರಿದ್ರೆಯದ್ದೊಂದು ಪರಿ. ಅದು ಪಕ್ಕಾ ಹಠಮಾರಿ ಹೆಣ್ಣು. ಉದುಗುದುಗಿ ಸುರಿದು ಈ ಇಳೆಯೊಳಗಿನ ಎಲ್ಲ ಕಲ್ಮಷಗಳನ್ನೂ ಉಡುಗಿಸಿ ಹೋಗಿಬಿಡುತ್ತದೆ...ಪುನರ್ವಸು ಪುಷ್ಯೆಯರದ್ದು ಯಾವತ್ತೂ ಜತೆಯಾಟ. ಗ್ರಾಮೀಣ ಭಾಗದಲ್ಲಿ, ಅದರಲ್ಲೂ ಮಲೆನಾಡಿನಲ್ಲಿ ಅಣ್ಣತಮ್ಮನ ಮಳೆಯೆಂದೇ ಗುರುತಿಸುವ ಇವೆರಡೂ ಮುನಿಸಿಕೊಂಡು ಕುಳಿತವೆಂದರೆ ಆ ವರ್ಷ ಅರೆ ಹೊಟ್ಟೆಯೇ ಗತಿ. ಆಶ್ಲೇಷಾ ಆದರಿಸುವವಳಾದರೆ, ಮಘಾ ಮೊಗೆಮೊಗೆದು ಸುರಿಯುತ್ತಾಳೆ. ಪುಬ್ಬಾ ಉಬ್ಬುಬ್ಬಿ ಉಕ್ಕುವವಳು. ಉತ್ತರೆ ನಮ್ಮ ಬದುಕಿಗೆ ಉತ್ತರದಾಯಿ. ಹಸ್ತೆಯದ್ದು ಯಾವಾಗಲೂ ಅಭಯ ಹಸ್ತ. ಚಿತ್ತ ಚಿತ್ತೈಸಿದರೆ ಇನ್ನು ಚಿಂತೆಯಿಲ್ಲ. ಸ್ವಾತಿಯ ಆಗಮನದ ಹೊತ್ತಿಗೆ ನಿಸರ್ಗದಲ್ಲೊಂದು ಹೊಸ ಚೈತನ್ಯ ಮೊಳೆಯಲಾರಂಭಿಸುತ್ತದೆ. ಅಷ್ಟರಲ್ಲಿ ಇಳಾ ದೇವಿ ಹೊಸ ಹೆಣ್ಣು ಮೈಕೈ ತುಂಬಿ ನಿಂತುಕೊಂಡಂತೆ ಭಾಸವಾಗುತ್ತಿರುತ್ತಾಳೆ. ಹೀಗೆ ಮಳೆ ಮಹಾ ನಕ್ಷತ್ರಗಳು ಒಂದೊಂದೂ ಒಂದೊಂದು ವೈಶಿಷ್ಟ್ಯದೊಂದಿಗೆ ಗಮನ ಸೆಳೆಯುತ್ತವೆ.
ಅದು ಮನೆಯಂಗಳದಲ್ಲಿ ಹುಟ್ಟಿಸುವ ಬೆರಗುಗಳನ್ನು ಮನದಂಗಳದಲ್ಲಿ ತುಂಬಿಕೊಂಡರೆ ಮಾತ್ರ ಮಳೆಯ ನೈಜ ಮೌಲ್ಯವನ್ನು ಅರಿಯಲು ಸಾಧ್ಯ. ಅದಿಲ್ಲದಿದ್ದರೆ ಮಳೆಗಾಲ ಶುರುವಿಟ್ಟುಕೊಂಡಾಕ್ಷಣ ಗೊಣಗಲಾರಂಭಿಸುವುದು ಸಹಜ. ‘ಥೂ.... ಇದೆಂಥಾ ಪಿರಿಪಿರಿ ಮಳೆ...ಬೆಳಗ್ಗಿನಿಂದ ಹಿಡಿದದ್ದು ಬಿಡಲೇ ಇಲ್ಲ. ಯಾವ ಕೆಲಸ ಕಾರ್ಯಗಳೂ ಇಲ್ಲದಾಗಿದೆ...’ ಇಂಥ ಸಿಡಿಮಿಡಿಗಳಿಗೆ ನಾವುಗಳೂ ಎಷ್ಟೋ ಬಾರಿ ಸಾಕ್ಷಿಯಾಗಿದ್ದೇವೆ. ಯೋಚಿಸಿ ನೋಡಿ, ಒಂದೊಮ್ಮೆ ಅಂಥ ಸಣ್ಣನೆಯ ಸಾಂತ್ವನ ಈ ಧರೆಗೆ ದಕ್ಕದೇ ಹೋದರೆ ಅಂತರ್ಜಲ ಪುನಶ್ಚೇತನಗೊಳ್ಳಲು ಸಾಧ್ಯವೇ ? ಕೆಲವೊಮ್ಮೆ ಬಿಟ್ಟೂ ಬಿಡದೇ ವಾರಗಟ್ಟಲೇ ಸುರಿಯುವ ಮಳೆಯನ್ನು ಕಂಡಾಗ ‘ಇದೆಂಥ ದರಿದ್ರ ಮಳೆ. ಹೊರಗೆ ಕಾಲಿಡಲೂ ಅವಕಾಶ ಕೊಡ್ತಿಲ್ಲ....ಸಾಕಪ್ಪಾ ಸಾಕು. ಯಾವಾಗ ಮುಗಿಯುತ್ತೋ ಈ ಮಳೆಗಾಲ...’ ಎಂದು ನಮ್ಮೊಳಗೇ ಬಯ್ದುಕೊಂಡದ್ದಿದೆ. ಈ ರೀತಿ ಸಾಕಪ್ಪಾ ಸಾಕು ಎಂದೆನಿಸಿದಾಕ್ಷಣ ಮಳೆ ನಿಂತು ಹೋಗಿ ಬಿಟ್ಟರೆ ನಮ್ಮ ನಿಮ್ಮ ಗತಿಯೇನಾದೀತು ಕಲ್ಪಿಸಿಕೊಳ್ಳಿ. ಇಂಥ ಜಿಟಿಜಿಟಿ, ಪಿರಿಪಿರಿ, ತುಂತುರು, ತಾರಾಮಾರಿ ಮಳೆಗಳೆಲ್ಲವೂ ನಮಗೆ ಬೇಕೇಬೇಕು ಎಂದುಕೊಳ್ಳುವ ಆತ್ಮೀಯ ಭಾವ ನಮ್ಮಲ್ಲಿ ಒಂದು ಕ್ಷಣವಾದರೂ ಮೂಡದಿರುವುದು ಏಕೊ ? ಧೋಗುಡುವ ದುಮ್ಮು ಮಳೆ, ಮುಗಿಲು ಕಳಚಿ ಬೀಳುವಂತಿರುವ ಮುಸಲಧಾರೆ, ಕರ್ಕಷವೆನಿಸುವ ಕುಂಭದ್ರೋಣ, ಹುಚ್ಚು ಮಳೆ, ಹೆಚ್ಚು ಮಳೆ....ಒಟ್ಟಾರೆ ಮಳೆಯ ರಭಸ ರಂಪಾಟಗಳೆಲ್ಲವೂನಮ್ಮ ಬದುಕಿನ ಇತರೆಲ್ಲ ಅನಿವಾರ್ಯತೆಗಳಂತೆಯೇ ಎಂಬುದಕ್ಕಿಂತ ಅದಿಲ್ಲದೇ ನಾವಿಲ್ಲವೆಂಬ ಸತ್ಯವನ್ನು ಅರಗಿಸಿಕೊಂಡರೆ ಮಳೆ ಹಿತವಾಗುತ್ತ ಹೋಗುತ್ತದೆ.
ಇಂತಿಪ್ಪ ಮಳೆ ವೈಭವವನ್ನು ಸ್ವಾಗತಿಸಲು ಅಸಲಿಗೆ ನಾವು ಸಜ್ಜಾಗಿಯೇ ಇರುವುದಿಲ್ಲ. ಆ ಬಗೆಗೆ ಮೊದಲಿಂದಲೂ ನಮ್ಮೊಳಗೊಂದು ದಿವ್ಯ ನಿರ್ಲಕ್ಷ್ಯ ಮನೆಮಾಡಿಕೊಂಡು ಕುಳಿತಿರುವುದೇಕೋ ? ಅದರ ಪರಿಣಾಮವೇ ಬಹುಶಃ ಇಂಥ ಗೊಣಗಾಟಗಳು ಮಳೆಯೆಂದಾಕ್ಷಣ ನಮ್ಮಲ್ಲಿ ಮೂಡುತ್ತದೆ. ಅದನ್ನು ಹೊರಚೆಲ್ಲಿ ಅಮೃತಧಾರೆಯನ್ನು ಮೊಗೆಮೊಗೆದು ಸವಿಯುವ ಮನೋಭಾವದೊಂದಿಗೆ ಅದರ ಸನಿಹಕ್ಕೆ ತೋಳ್ಬಿಚ್ಚಿ ನಡೆದೊಮ್ಮೆ ನೋಡಿ...ಆಹ್, ಅದೆಂಥಾ ಅವರ್ಣನೀಯ ಆನಂದ ನಿಮ್ಮದಾದೀತು...!
ಮಳೆಯೆಂಬುದು ಒಮ್ಮೊಮ್ಮೆ ಅಮ್ಮನ ಜೋಗುಳ. ಅಣ್ಣನೊಂದಿಗಿನ ಜಗಳ. ಅಕ್ಕನ ಜತೆಯಾಟದ ಕೇಕೆ. ಅಪ್ಪನ ಆಪ್ತತೆ. ಪ್ರಿಯತಮೆಯ ತೆಕ್ಕೆಯಲ್ಲಿ ಉಸುರುವ ಪಿಸುಮಾತು. ಮಳೆಯಲ್ಲೊಮ್ಮೆ ಮನಬಿಚ್ಚಿ ಮಿಂದು ನೋಡಿ. ಅದರಲ್ಲಿ ಅವಳ ಪ್ರೀತಿಯಿದೆ, ಅವನ ಆಸೆಯಿದೆ. ಇವಳ ಹುಸಿ ಮುನಿಸಿದೆ. ಅವನ ಸಹನೆಯಿದೆ. ಇವಳೆದೆಯ ರಾಗಕ್ಕೆ ಅವನ ತಾಳದ ಸಾಥ್.... ಶ್! ಏಕಾಂತದಲ್ಲಿ ಕಿವಿಗೊಟ್ಟು ಮಳೆಹನಿಗಳ ಪಟಪಟವನ್ನಾಲಿಸಿ ನೋಡಿ. ನಿಮಗಿಷ್ಟವಾಗದಿದ್ದರೆ ನನ್ನಾಣೆ !
ಲಾಸ್ಟ್ ‘ಡ್ರಾಪ್’: ಬದುಕಿನೆಲ್ಲ ಸಂತಸದ ರಾಗ-ತಾಳಗಳಿಗೆ ಮಳೆಯೆಂಬುದೇ ಪಲ್ಲವಿ. ಅಲ್ಲಿಯೇ ಶ್ರುತಿ ತಪ್ಪಿದರೆ ಮುಂದಿನದಾವುದೂ ಸುಶ್ರಾವ್ಯವಾಗಲು ಸಾಧ್ಯವೇ ಇಲ್ಲ. ಇಂದೇ, ಈ ಕ್ಷಣವೇ ಮಳೆಯ ಚಿಟಪಟಕ್ಕೆ ನೀವೂ ಸ್ವರ ಸೇರಿಸಿ ಹಾಡಿಕೊಳ್ಳಲಾರಂಭಿಸಿ...ನಿಮ್ಮೊಳಗೊಬ್ಬ ಕವಿ ಮೂಡಿ ಬರಬಹುದು. ಗಾಯಕ ಜಾಗೃತನಾಗಬಹುದು. ಯಾರಿಲ್ಲದಿದ್ದರೂ ಮುಗ್ಧ ಮನದ ಮಾನವೀಯ ತಂತುವೊಂದು ಮೋಳೆಯುವುದಂತೂ ನಿಶ್ಚಿತ.