Friday, June 12, 2009

ಮೇಘ - ಮೇದಿನಿಯರ ಸಮಾಗಮ, ಮನೋರಮಾ...

ವು ಸುಂದರ ಕಲ್ಪನೆಯ ಸಾಲುಗಳಷ್ಟೇ ಅಲ್ಲ. ಜೀವನ ಪ್ರೀತಿಯ ಮಂತ್ರ. ಪಠಿಸಿ ನೋಡಿ....
ಕಾರ್ಗಟ್ಟಿ ಕುಳಿತ ಮೋಡಗಳೆಂದರೆ ಬರಿ ಮೋಡಗಳಲ್ಲ. ಅವು ಬಹುದಿನಗಳಿಂದ ಕಟ್ಟಾ ಬ್ರಹ್ಮಚರ್ಯದಲ್ಲಿ ಕುಳಿತ ಪೌರುಷನ ಪ್ರತೀಕ. ಅಲ್ಲಿ ಸ್ವಲ್ಪವೂ ಲಂಪಟತನವಿಲ್ಲ. ಆತುರಕ್ಕೆ ಬಿದ್ದ ಆಸಾಮಿ ಆತನಲ್ಲವೇ ಅಲ್ಲ. ಹೆಸರು ಮೇಘ. ಮನಸು ಮಾಡಿದರೆ ಎಂಥ ಗಟ್ಟಿಗಿತ್ತಿಯನ್ನೂ ಸಂಭಾಳಿಸಿ ತೃಪ್ತಿಯ ಸೆಲೆ ಹೊಮ್ಮಿಸದೇ ಬಿಡುವವನಲ್ಲ. ಮುನಿಸಿಕೊಂಡು ಕುಳಿತುಬಿಟ್ಟನೆಂದರೆ ಎಂಥ ಬೆತ್ತಲೆಗೂ ಬೆರಗಾಗುವವನಲ್ಲ; ಓಲೈಕೆಗೆ ಒಲಿಯುವವನಲ್ಲ, ಕೋರಿದರೂ ಕೊಸರುವುದಿಲ್ಲ, ಹಠಕ್ಕೆ ಹೆದರುವುದಿಲ್ಲ...ಒಟ್ಟಾರೆ ಅದ್ವಿತೀಯ ಸಂಯಮಿಯಾತ.
ಮೇಘನಿಗೊಬ್ಬಳು ಸಖಿ.... ಪೃಥೆ. ಆಕೆಯಾದರೋ ಸುಂದರಿಯೆಂದರೆ ಅದು ಸವಕಲು ಪದ. ಹಸಿರು ಪತ್ತಲವುಟ್ಟು ತಣ್ಣನೆಯ ತಂಗಾಳಿಗೆ ಬಿಗು ಮೈಯ ಇನ್ನಷ್ಟು ಸೆಟೆಸಿಕೊಂಡು ಕುಳಿತಳೆಂದರೆ ಮೇಘನೊಬ್ಬನನ್ನುಳಿದು ಮತ್ತಾರಿಗೂ ಮಣಿಯಲಾರಳು. ಆಕೆಯ ತುಂಬು ಜವ್ವನ ಕಂಡು ಕರುಬುವ ಇನ್ನೊಬ್ಬ ಸುಂದರಾಂಗ ಸೂರ್ಯ. ದಿನವಿಡೀ ಆಕೆಯತ್ತ ಆಸೆಯ ಕೆಂಗಣ್ಣ ಬೀರುವ ಆತನ ವಿರಹದ ತಾಪಕ್ಕೆ ಈಕೆ ಮುದುಡಿ ಹೋಗುತ್ತಾಳೆ. ಕೊನೆ ಕೊನೆಗಂತೂ ವಿರಹದ ಉತ್ಕಟತೆ ಕೋಪ ತಾಪಕ್ಕೆ ತಿರುಗಿ ವಿಪರೀತ ಪ್ರತಾಪಕ್ಕೆ ಬಿದ್ದರೂ ಭೂಮಿ ಬೆದರುವವಳಲ್ಲ. ಕೊನೆಗೆ ಆತನ ಅದೇ ಕೋಪದಲ್ಲಿ ಕಪ್ಪಿಟ್ಟು ಕಂತಿ ಹೋಗುತ್ತಾನೆ.
ಇತ್ತ ಮತ್ತೊಬ್ಬ ರಸಿಕ ಶಶಾಂಕ. ಈತನೋ ಬಲು ಚತುರ; ಆದರೆ ಮಹಾ ಚಂಚಲ. ಸುರಸುಂದರಾಂಗ, ಸುಪ್ರಸನ್ನ ವದನ, ಫಕ್ಕನೆ ನೋಡಿದರೆ ಆತನೇ ಮದನ.... ತಿಂಗಳ ಚೆಲ್ಲುತ್ತ ಬೆಂಬತ್ತಿ ಬರುವ ಶಶಾಂಕ, ಇನ್ನೇನು ಪೃಥೆಯ ಮಗ್ಗಲಿಗೆ ಮರಳಬೇಕೆನ್ನುವಷ್ಟರಲ್ಲಿ ನಾಚಿಬಿಡುತ್ತಾನೆ...ನಾಚುತ್ತ, ನಾಚುತ್ತ ಕರಗಿ ಹೋಗುತ್ತಾನೆ. ಹೀಗೆಯೇ ದಿನಗಳುರುಳುತ್ತವೆ. ಇವರೆಲ್ಲರ ಕಾಟ ಪೃಥೆಗೂ ಸಾಕು ಸಾಕಾಗಿ ಹೋಗುತ್ತದೆ. ಕಾದು ಕಂಗಾಲಾಗುತ್ತಾಳೆ. ತನ್ನಿನಿಯ ತಾನಾಗೇ ಬಂದು ಅಬ್ಬರಿಸುತ್ತಾನೆಂದು ನಿರಕಿಸುತ್ತಾಳೆ. ತನ್ನ ತಬ್ಬಿ ಹಿಡಿದು ತಣಿಸಿ ತೆರಳಬಾರದೇ? ಸದಾ ಗರ್ಜಿಸುತ್ತಾ ಬಂದು ಘಟ್ಟಿಸಿ ಹೋಗುವ ಗಗನ ಈಗೇಕೆ ಇತ್ತ ಸುಳಿಯನು ? ಹೀಗಿರುವಾಗಲೊಮ್ಮೆ ಅತ್ತಿಂದಿತ್ತ ಇತ್ತಿಂದತ್ತ ಸುಳಿದಾಡುತ್ತಲೇ ಇರುವ, ಮೇಘನ ಸಖ ಮಾರುತನಲ್ಲಿ ತನ್ನ ವಿರಹ ಸಂದೇಶ ಸಾರಿ ಬಾ ಎಂದು ಕೋರುತ್ತಾಳೆ. ಮೇಘನತ್ತ ದೌಡಾಯಿಸುವ ಆತ ಹಿತನುಡಿಗಳೊಂದಿಗೆ ಆತನ ಮನದಲ್ಲಿ ತಣ್ಣನೆ ಭಾವ ಬಿತ್ತಿ ಬರುತ್ತಾನೆ. ಪೃಥೆಯ ಸ್ಥಿತಿಗೆ ಮರುಗುವ ಮೇಘ ಕರಗಿ ಹೋಗುತ್ತಾನೆ. ಇನ್ನು ಸಂಯಮ ಸಾಧ್ಯವೇ ಇಲ್ಲ; ಎಂಬುದಕ್ಕಿಂತ ಅದರಲ್ಲಿ ಅರ್ಥವಿಲ್ಲ ಎಂದುಕೊಂಡವನೇ ದಡಬಡಿಸಿ ಹೊರಡುತ್ತಾನೆ. ಮಾರುತನ ಸಾರಥ್ಯದಲ್ಲಿ ಮಿಲನ ಮಹೋತ್ಸವಕ್ಕೆ ಮೋಡಗಳ ತೇರನೇರಿ ಹೊರಟ ಮೇಘನಿಗೆ ಮಿಂಚಿನ ಮಂಗಳಾರತಿ, ಸಿಡಿಲಬ್ಬರದ ಮಂತ್ರಘೋಷ, ಗುಡುಗಿನ ವಾದ್ಯ, ಆಲಿಕಲ್ಲಿನ ಸೇಸೆ...ಕಾಮನ ಬಿಲ್ಲಿನ ತೋರಣ...ಒಂದೇ ಎರಡೇ...
ಇತ್ತ ಪೃಥೆಯೊ ಒಳಗೊಳಗೇ ಪುಳಕಗೊಂಡು ಅರಳಿ ನಿಲ್ಲುತ್ತಾಳೆ. ಅಬ್ಬರಿಸಿ ಬರುವ ಇನಿಯನಿಗಾಗಿ ತನ್ನನ್ನು ತಾನು ತೆರೆದುಕೊಳ್ಳಲು ಸಜ್ಜಾಗುತ್ತಾಳೆ. ಮಾರುತನಿಗಂತೂ ಸಂಭ್ರಮವೋ ಸಂಭ್ರಮ. ಹೊಸ ಜೀವ ಮೊಳೆಯುವ ಅಂತರಂಗದ ಅತ್ಯಪೂರ್ವ ಕ್ಷಣಗಳಿಗೆ ತಾನೊಬ್ಬನೇ ಸಾಕ್ಷಿಯಾಗಬಲ್ಲೆನೆಂಬ ಹಮ್ಮು ಬಿಮ್ಮು. ಅದೇ ಉತ್ಸಾಹದಲ್ಲಿ ಹುಚ್ಚೆದ್ದು ಸುಳಿಯಲಾರಂಭಿಸುತ್ತಾನೆ. ಪ್ರಣಯಿಗಳಿಬ್ಬರನ್ನೂ ತೀಡಿ ತೀಡಿ ಉತ್ತೇಜಿಸುತ್ತಾನೆ. ಮನದ ಮೂಲೆಯಲ್ಲೆಲ್ಲೋ ಮೂರ್ತ ಸ್ವರೂಪ ತಾಳುವ ಮುಂದಿನ ಸುಖದ ಕಲ್ಪನೆಯಲ್ಲಿ ಆಕೆ ಸಣ್ಣಗೆ ಕಂಪಿಸುತ್ತಾಳೆ. ಅದೇ ಯೋಚನೆಯಲ್ಲಿ ಮೈ ಮರೆಯುತ್ತಾಳೆ. ಈ ಕ್ಷಣಕ್ಕಾಗಿಯೇ ಕಾಯುತ್ತಿದ್ದ ತುಂಟ ಮಾರುತ ಆಕೆಯ ಮೇಲಿದ್ದ ಮರಗಿಡಗಳ ಹಸಿರು ಹಚ್ಚಡವನ್ನು ಅಸ್ತವ್ಯಸ್ತಗೊಳಿಸುತ್ತಾನೆ. ಇದಾವುದರ ಪರಿವೆಯಿಲ್ಲದೇ ಮುಗಿಲೆಡೆಗೆ ಮೈಯ್ಯೆತ್ತಿ ನಿಲ್ಲುವ ಆಕೆಯನ್ನು ನೋಡುತ್ತಿದ್ದಂತೆಯೇ ಮೇಘನಲ್ಲೂ ಅದಾವುದೋ ಸಮರೋತ್ಸಾಹ. ಅಂಗಾತ ಮಲಗಿದ ಪೃಥೆಯನ್ನು ಅಬ್ಬರಿಸುತ್ತಲೇ ಆಕ್ರಮಿಸಿಕೊಳ್ಳುವ ಆತ ಮೊದಲಾಗಿ ಘರ್ಷಣೆಗಿಳಿಯುತ್ತಾನೆ. ಅಷ್ಟೆ, ಇನ್ನವರನ್ನು ಹರಿಹರ ಬ್ರಹ್ಮಾದಿಗಳೂ ತಡೆಯಲಸಾಧ್ಯ. ಭಾವೋತ್ಕಟತೆಯ ಮೇರುವನ್ನು ಹತ್ತಿ ನಿಂತು, ಹರ್ಷದ ಹೊನಲಿನಲ್ಲಿ ಜೀಕಲಾರಂಭಿಸಿದರೆ...ಓಹ್...ಅದು ಕೇವಲ ಭೌತಿಕದ ಮಾತಲ್ಲ. ಅಂತರಂಗದ ಸುರಣ, ಒಂದು ಹೃದಯದೊಳಿನ್ನೊಂದರ ಧಾರಣ, ಅವಿನಾ ಭಾವದ ಬಂಧನ, ವಿಶ್ವದ ಎರಡು ಮಹಾಶಕ್ತಿಗಳ ಮಿಲನ.... ಅತ್ಯಂತ ನವಿರುನವಿರಾಗಿ ಆಂತರ್ಯವನ್ನು ಮೀಟಲಾರಂಭಿಸಿದ ಅವರು ಬರಬರುತ್ತಾ ಆಳಕ್ಕಿಳಿಯುತ್ತಾರೆ. ಸುತ್ತೆಲ್ಲ ಗಾಢಾಂಧಕಾರ ಕವಿಯುತ್ತದೆ. ನಾಚುವ ನಲ್ಲೆಯ ಮನ ತನ್ನ ಬಿಟ್ಟು ಕದಲಬಾರದೆಂಬ ಉದ್ದೇಶದಿಂದ ಮೇಘನೇ ತನ್ನ ಬಾಹುಗಳ ಚಾಚಿ ಮರೆಮಾಡಿ, ಅಂಥದ್ದೊಂದು ಮಬ್ಬು ಕತ್ತಲೆಯನ್ನು ನಿರ್ಮಿಸುತ್ತಾನೆ.
ಹಾಗೆ ಆಕ್ರಮಿಸಿಕೊಳ್ಳುವ ಮೇಘನಿಗೆ ತನ್ನನ್ನೊಪ್ಪಿಸಿಕೊಳ್ಳಲು ಇನ್ನಾವುದೂ ಅಡ್ಡಿ ಉಳಿಯಲಿಲ್ಲ ಪೃಥೆಗೆ. ಬಹುದಿನಗಳಿಂದ ಕಾಯುತ್ತಿದ್ದ ಆ ಕ್ಷಣ ಬಂದೇ ಬಿಟ್ಟಿತು. ಅದೇ ಮೊದಲ ಸ್ಪರ್ಶ. ಮೊದಲ ಹನಿಯೊಂದು ಮೇಲಿನಿಂದ ಆಕೆಯ ಒಡಲ ತಾಕಿದ್ದೇ ತಡ....ಅರಳಿ ಒಮ್ಮೆಲೆ ಅಕ್ಕಳಿಸಿ ಬಿಡುತ್ತಾಳೆ. ಅಷ್ಟೇ, ಮನದೊಳಗಣ ಸಂತಸ ಹಿತವಾದ ಪರಿಮಳವಾಗಿ ಸ್ರವಿಸಲಾರಂಭಿಸುತ್ತದೆ. ಧೂಳು-ಹನಿಗಳ ಆ ಮಿಲನದಿಂದ ಹುಟ್ಟಿದ ಅದು...ಓಹ್...ಅದೆಂಥ ಉತ್ತೇಜಕ ಗಂಧ....ಇಬ್ಬರೂ ಇನ್ನಷ್ಟು ಮತ್ತಷ್ಟು ಮುನ್ನುಗ್ಗಿ ನುಗ್ಗಿ ಹೋಗಲು ಅಷ್ಟು ಸಾಲದೇ. ಇವರಿಗೆ ಸಮಯದ ಪರಿವೆಯೇ ಇಲ್ಲ. ಧೋಗುಟ್ಟಿ ಆತ ಸುರಿಯಲಾರಂಭಿಸುತ್ತಾನೆ. ಪೌರುಷದ ಪರಾಕಾಷ್ಠೆಯಲ್ಲಿ ಆತ ಕರಗಿ ನೀರಾಗುತ್ತಾನೆ. ತನ್ನೊಳಗೆ ಕಾಯ್ದುಕೊಂಡಿದ್ದ ಎಲ್ಲವೆಂದರೆ ಎಲ್ಲವನ್ನೂ ಪೃಥೆಯೊಡಲಿಗೆ ಸೊಕ್ಕಿ ಸುರಿದು ಬರಿದು ಬರಿದಾಗುತ್ತಾನೆ. ಇದಕ್ಕಾಗಿಯೇ ಕಾದಿದ್ದವಳಂತೆ ಆಕೆಯೂ ಇನಿತೂ ಬಿಡದಂತೆ ಹೀರುತ್ತಾಳೆ....ಬಹು ಹೊತ್ತಿನವರೆಗೆ ಇವೆರಡೂ ಸಾಗುತ್ತದೆ. ಕೊನೆಗೊಮ್ಮೆ ಆಕೆಯೊಡಲು ತುಂಬಿ ಕೋಡಿಯಾಗಿ ಚೆಲ್ಲುತ್ತದೆ. ಮೇಘನೂ ಎಲ್ಲವನ್ನೂ ಖಾಲಿಯಾಗಿಸಿಕೊಂಡು ನಿರಭ್ರನಾಗುತ್ತಾನೆ. ಆತನ ವಿಜಯದ ನಗೆ ಬೀರುತ್ತಾ ಹೊರಟಾಗಲೇ ಸಣ್ಣಗೆ ನಗುವ ಪೃಥೆ ಇಂಥ ಸೋಲಿನಲ್ಲೇ ತನ್ನ ಗೆಲುವು ಅಡಗಿದೆ ಎಂಬ ಸಂತೃಪ್ತ ಭಾವದಲ್ಲಿ ಮಗ್ಗುಲಾಗುತ್ತಾಳೆ. ಹೊಸ ಭೂಮಿಯ ಮೇಲೆ ಚಿಗುರಲಾರಂಭಿಸುತ್ತದೆ.
-ಭೂಮಿಯ ಮೇಲಿನ ನೀರೆಲ್ಲ ಹೊಳೆ, ನದಿ, ಸಮುದ್ರಗಳನ್ನು ಸೇರುತ್ತದೆ. ಸಮುದ್ರದ ನೀರು ಆವಿಯಾಗಿ ಮೇಲೆ ಹೋಗುತ್ತದೆ. ಅದರಿಂದ ಆಗಸದಲ್ಲಿ ಮೋಡಗಳು ನಿರ್ಮಾಣವಾಗುತ್ತವೆ. ಅದು ಗಾಳಿಯಲ್ಲಿ ಓಡಾಡುತ್ತಾ ಪರಸ್ಪರ ಘರ್ಷಣೆಗೆ ಒಳಗಾಗುತ್ತದೆ. ಆ ಸಂದರ್ಭದಲ್ಲಿ ಮೋಡಗಳಿಗೆ ತಂಪು ತಾಗಿ ತೇವಾಂಶ ಕರಗಿ ಮಳೆಯಾಗಿ ಸುರಿಯುತ್ತದೆ......ಹೀಗೆ ಮಳೆಯ ಬಗ್ಗೆ ಮಕ್ಕಿಕಾಮಕ್ಕಿ ಎಂಬಂಥ ಶುಷ್ಕ ಭಾವವ ತಳೆಯುವ ಬದಲು ಅದನ್ನು ಮೇಲಿನ ಕಲ್ಪನೆಯಂತೆ ಜೀವ ಪ್ರೀತಿಯ ಸೆಲೆಯಾಗಿ ಭಾವಿಸಬಾರದೇಕೆ ? ಅದರೊಂದಗಿ ಸಂವಾದಕ್ಕಿಳಿಯಬಾರದೇಕೆ. ಹಾಗಾದಲ್ಲಿ ಮಾತ್ರ ಮಳೆಗಾಲವೆಂಬ ಮಹಾ ಸಂಭ್ರಮದ ದಿನಗಳು ರೇಜಿಗೆ ಹುಟ್ಟಿಸುವುದಿಲ್ಲ. ಅಯ್ಯೋ, ಇದೆಂಥ ಕಿರಿಕಿರಿ...ಎಲ್ಲಿ ನೋಡಿದರೂ ಕಿಚಿಪಿಚಿ ಎಂದುಕೊಳ್ಳುವುದಿಲ್ಲ. ಬದಲಿಗೆ ಇಡೀ ಭೂಮಿಯ ಬದುಕೇ ಕಳೆಕಟ್ಟಿ ಹೊಸ ಜೀವನೋತ್ಸಾಹವನ್ನು ಕಟ್ಟಿಕೊಡುತ್ತದೆ. ಎಂಥ ಜುಗುಪ್ಸೆಗೆ ಬಿದ್ದ ಮನಸಿನಲ್ಲೂ ಹೊಸ ಹಸಿರು ಚಿಗುರುತ್ತದೆ.


‘ಲಾಸ್ಟ್‘ಡ್ರಾಪ್: ಇವೆಲ್ಲದರ ಅನುಭವ ಆಗಬೇಕಿದ್ದರೆ, ನಮ್ಮ-ನಿಮ್ಮೆಲ್ಲರ ಊರಿನಲ್ಲೂ ಮೊನ್ನೆಮೊನ್ನೆಯಷ್ಟೇ ಆರಂಭವಾಗಿರುವ ಮಳೆಯ ಮುಂದೆ ಒಬ್ಬರೇ ನಿಂತು ಅದರೊಂದಿಗೆ ಮಾತಿಗೆ ಶುರುವಿಟ್ಟುಕೊಳ್ಳಿ. ಇಂಥ ಅದೆಷ್ಟೋ ರೋಚಕ ಕಥೆಯನ್ನು ಅದೇ ನಿಮಗೆ ಪಿಸುಮಾತಿನಲ್ಲಿ ಹೇಳುತ್ತದೆ. ನನಗದು ಹೇಳಿದ ಇಂಥ ಸಾವಿರ ಕಥೆಗಳಲ್ಲೊಂದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಇನ್ನು ನಿಮ್ಮಿಷ್ಟ....

1 comment:

Unknown said...

radhanna tumba tumba chennagide,
but bhoomi heege baridaagutta hodare, prakruti baridaagutta hodare, innestu dina intaha vaibhava est dina sigalikke sadya?