ಆತನನ್ನು ಹೊಗಳಬೇಕು ಅಂತ ಹೊಗಳುತ್ತಿಲ್ಲ. ಬೇಕಿದ್ದರೆ ನೀವು ಈ ಬಾರಿ ಆತನೇ ಹುಟ್ಟುಹಾಕಿದ ‘ಜಲಸಿರಿ’ ಅನ್ನುವ ನೀರ ಪತ್ರಿಕೆಯಿಂದ ಹೊರತಂದ ಹೊಸವರ್ಷದ ಕ್ಯಾಲೆಂಡರ್ ಅನ್ನು ನೋಡಿ. ಅದೆಷ್ಟು ಮುದ್ದಾಗಿದೆ, ಎಷ್ಟು ಮಾಹಿತಿ ಪೂರ್ಣವಾಗಿದೆ ಎಂದರೆ ಈ ಅಂಕಣದಲ್ಲಿ ಅದರ ಬಗ್ಗೆ ಬರೆಯುತ್ತಿರುವುದಕ್ಕೆ ನನಗೇ ಹೆಮ್ಮೆ ಅನ್ನಿಸುತ್ತಿದೆ.
ಅಷ್ಟಕ್ಕೂ ಮಲ್ಲಿ ಅಂತ ಪ್ರೀತಿಯಿಂದ ಕರೆಯುವ ಈ ನೀರ ನೇಹಿಗನ ಪೂರ್ತಿ ಹೆಸರು ಹೇಳುವುದನ್ನೇ ಮರೆತಿದ್ದೆ. ಆತ ಮಲ್ಲಿಕಾರ್ಜುನ ಹೊಸಪಾಳ್ಯ ಅಂತ. ಸದ್ಯಕ್ಕೆ ತುಮಕೂರಿನಲ್ಲಿ ಧಾನ್ಯ ಅಂತ ಒಂದು ಸಂಸ್ಥೆಯನ್ನು ಮಾಡಿಕೊಂಡು ಕೃಷಿ, ನೀರು ಹೀಗೆ ಒಂದಷ್ಟು ವಿಷಯದ ಬಗ್ಗೆ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿದ್ದಾನೆ. ನಿಮಗೆ ನೆನಪಿರಬಹುದು, ಈಗ್ಗೆ ಕೆಲವು ತಿಂಗಳ ಕೆಳಗೆ ತಲಪರಿಕೆ ಎಂಬ ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆಯೊಂದರ ಬಗ್ಗೆ ಮಧುಗಿರಿ ಸುತ್ತಮುತ್ತ ಒಂದಷ್ಟು ಸಂಶೋಧನೆ ನಡೆಸಿ, ಒಂದಿಡೀ ದಿನ ವಿಚಾರ ಸಂಕಿರಣವನ್ನೂ ಏರ್ಪಡಿಸಿ, ಆ ಬಗ್ಗೆಯೇ ಒಂದು ಸುಂದರ ಹೊತ್ತಗೆಯನ್ನು ಹೊರತಂದಿದ್ದ ಮಲ್ಲಿ. ಅದೇ ಮನುಷ್ಯ ಇವತ್ತು ಹೊಸವರ್ಷಕ್ಕೊಂದು ಹಸಿಹಸಿಯಾದ ಕ್ಯಾಲೆಂಡರ್ ಅನ್ನೂ ಸಂಪಾದಿಸಿ ಅಚ್ಚುಕಟ್ಟಾಗಿ ಅಚ್ಚು ಹಾಕಿಸಿ ನಿಮ್ಮ ಮುಂದಿಟ್ಟಿದ್ದಾನೆ. ಜಲಸಿರಿಯ ಹೆಸರಿನಲ್ಲೇ ದಿನದರ್ಶಿಕೆ ಹೊರ ಬಂದಿದೆ. ಮೊದಲಪುಟವೇ ಅತ್ಯಾಕರ್ಷಕ. ದೂರದ ಗುಜರಾತ್‌ನಲ್ಲಿ ದಾರಿಹೋಕರ ದಾಹ ತಣಿಸಲು ಇಂದಿಗೂ ಗ್ರಾಮೀಣ ಭಾಗದಲ್ಲಿ ಪ್ರಚಲಿತದಲ್ಲಿರುವ ‘ಪ್ಯಾವೋ’ ಎಂಬ ವಿಶಿಷ್ಟ ಪದ್ಧತಿಯ ಅಪರೂಪದ ಚಿತ್ರ ಮುಖಪುಟದಲ್ಲಿ ರಾರಾಜಿಸುತ್ತಿದೆ. ಕರ್ನಾಟಕದ ನೀರ ಸಾಧಕ ಶ್ರೀ ಪಡ್ರೆ ತಮ್ಮ ಗುಜರಾತ್ ಪ್ರವಾಸ ಸಂದರ್ಭದಲ್ಲಿ ತೆಗೆದ ಚಿತ್ರ ಅದು. ವೃದ್ಧೆಯೊಬ್ಬಳು ನಗುನಗುತ್ತಾ ಯುವಕನೊಬ್ಬನಿಗೆ ತಾಮ್ರದ ಚೊಂಬಿನಿಂದ ನೀರನ್ನು ಹನಿಸುತ್ತಿರುವ ದೃಶ್ಯವನ್ನು ಸೆರೆಹಿಡಿಯಲಾಗಿದೆ. ನೀರಿಗೆ ಸಂಬಂಸಿದ ಅದೆಷ್ಟು ಕತೆಗಳನ್ನು, ಅದೆಷ್ಟು ವಿಷಯವನ್ನು ಆ ಒಂದು ಚಿತ್ರ ಹಿಡಿದಿಟ್ಟುಕೊಂಡಿದೆ ಎಂದರೆ, ವೃದ್ಧೆಯ ಆ ಒಂದು ಅಬೋಧ ನಗುವೇ ಸದ್ಯದ ನೀರಿನ ಸನ್ನಿವೇಶಕ್ಕೆ ಸಮಗ್ರ ಪ್ರತಿಮೆಯಾಗಿ ನಿಲ್ಲುತ್ತದೆ. ಅಲ್ಲಿ ಈ ಭೂಮಿಯ ಮೇಲಿನ ಇವತ್ತಿನ ಬಾಯಾರಿಕೆಯಿದೆ. ಪರಂಪರೆಯಿದೆ. ಜಲ ಸಂರಕ್ಷಣೆಯ ಸಂದೇಶವಿದೆ. ನೀರ ಮೌಲ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಎರಡು ತಲೆಮಾರಿನ ನಡುವಿನ ಕೊಂಡಿಯಾಗಿ ಆ ಚಿತ್ರ ನಿಲ್ಲುತ್ತದೆ. ಜಲ ಸಂಪನ್ಮೂಲವನ್ನು ಉಳಿಸಿ ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಸಂದೇಶವನ್ನೂ ಈ ಚಿತ್ರ ಬಿತ್ತರಿಸುತ್ತದೆ.
ಇಂಥವೇ ಚಿತ್ರಗಳ ಸರಣಿ ಹನ್ನೆರಡೂ ತಿಂಗಳಿನ ಪುಟಗಳನ್ನು ತುಂಬಿಕೊಂಡಿವೆ. ಒಂದಕ್ಕಿಂತ ಒಂದು ಭಿನ್ನ. ಪುಟದಲ್ಲಿ ನೀರಿಗೆ ಪೂರಕ ಇನ್ನೊಂದು ಪುಟ್ಟ ಚಿತ್ರವನ್ನೂ ಅಳವಡಿಸಲಾಗಿದೆ. ಗಮನಾರ್ಹ ಅಂಶವೆಂದರೆ ಇಂಥ ಚಿತ್ರಗಳ ಆಯ್ಕೆಯದ್ದು. ಗುಣಮಟ್ಟ, ವರ್ಣ ವೈವಿಧ್ಯದ ಜತೆಗೆ ವಿಷಯಾಧಾರಿತವಾದ ಫೋಟೋಗಳಿರುವುದರಿಂದಲೇ ಈ ಕ್ಯಾಲೆಂಡರ್ ಕೇವಲ ಒಂದು ವರ್ಷಕ್ಕೆ ಸೀಮಿತವಾಗದೇ ಯಾವಜ್ಜೀವ ಸಂಗ್ರಾಹ್ಯವೆನಿಸುತ್ತದೆ. ಜನವರಿ, ಫೆಬ್ರವರಿಯಿಂದ ಪುಟ ಬದಲಿಸಿದರೆ ಅಲ್ಲಿ ಚಾವಣಿ ನೀರು ಸಂಗ್ರಹದ ಪ್ರಾಥಮಿಕ ಜ್ಞಾನವನ್ನು ಸಂಪಾದಿಸಿಕೊಡುವ ಫೋಟೊ ಗಮನ ಸೆಳೆಯುತ್ತದೆ. ಚಾನೀಸಂ ಬಗೆಗಿನ ನಿರಕ್ಷರಿಯೂ ಬರಿ ಈ ಚಿತ್ರದಿಂದಲೇ ಪ್ರಯೋಗಕ್ಕೆ ಮುಂದಾಗುವಂತೆ ಇದು ಪ್ರೇರೇಪಿಸುತ್ತದೆ. ಮೂರನೇ ಪುಟದಲ್ಲಿ ಅಂದರೆ ಮೇ-ಜೂನ್‌ನಲ್ಲಿ ಇಂಗುಗುಂಡಿ, ಬಸಿಕಾಲುವೆ ಚಿತ್ರ. ಇವಿಷ್ಟರ ಬಳಿಕ ಮಲ್ಲಿ ಆಯ್ದುಕೊಂಡ ಥೀಮ್ ಜಲ ಮಾಲಿನ್ಯದ್ದು. ಜಲ ಸಂರಕ್ಷಣೆಯಷ್ಟೇ ಪ್ರಮುಖ ಸಂಗತಿ ಮಾಲಿನ್ಯ. ನಂತರ ಸೆಪ್ಟೆಂಬರ್-ಅಕ್ಟೋಬರ್‌ಗೆ ಬರುವ ಹೊತ್ತಿಗೆ ಬರನಿರೋಧಕ ಬೆಳೆಗಳ ಪರಿಚಯ ಸಿಕ್ಕುತ್ತದೆ. ವರ್ಷದ ಕೊನೆಯ ಪುಟದಲ್ಲಿ ತೆರೆದುಕೊಳ್ಳುತ್ತದೆ ಬಾವಿ ಹಾಗೂ ತಲಪರಿಕೆ. ಅದರೊಂದಿಗೇ ಚಿತ್ರದ ಬಗೆಗೆ ಪುಟ್ಟದೊಂದು ಮಾಹಿತಿ. ಒಟ್ಟಾರೆ ಅತ್ಯಂತ ಶಿಸ್ತುಬದ್ಧವಾಗಿ, ಯೋಜಿತ ರೀತಿಯಲ್ಲಿ ನೀರಿಗೆ ಸಂಬಂಸಿದ ವಿವಿಧ ಆಯಾಮಗಳನ್ನು ದಿನದರ್ಶಿಕೆ ಕಟ್ಟಿಕೊಡುತ್ತದೆ. ಶ್ರೀಪಡ್ರೆ, ಮಲ್ಲಿ, ಸೀಮಾ ಕೃಷ್ಣಪ್ರಸಾದ್, ಭೂಷಣ್ ಮಿಡಿಗೇಶಿ, ರವಿಶಂಕರ್ ದೊಡ್ಡಮಾಣಿ, ಹರೀಶ್ ಹಳೆಮನೆ ಹಾಗೂ ಬರ್ಡ್-ಕೆ ಸಂಸ್ಥೆಯ ಅತ್ಯಂತ ಗುಣಮಟ್ಟದ ಫೋಟೋಗಳನ್ನು ಬಳಸಲಾಗಿದೆ.
ಇವಿಷ್ಟಕ್ಕೆ ಮುಗಿದು ಹೋಗಿದ್ದರೆ ಈ ಕ್ಯಾಲೆಂಡರ್ ಹತ್ತರ ಜತೆ ಹನ್ನೊಂದಾಗಿ ಬಿಡುತ್ತಿತ್ತೇನೋ. ವಿಶೇಷವಿರುವುದು, ಅದು ರೈತ ಸ್ನೇಹಿಯಾಗಿ ನಿಲ್ಲುವುದರಲ್ಲಿ. ಎಲ್ಲ ಕ್ಯಾಲೆಂಡರ್‌ಗಳಲ್ಲಿ ಹಬ್ಬ ಹರಿದಿನಗಳು, ಸರಕಾರಿ ರಜಾ ದಿನಗಳೇ ವಿಜೃಂಭಿಸುವುದು ಸಾಮಾನ್ಯ. ಆದರಿದು ಇದಲ್ಲ. ಅಂಥ ಮಾಹಿತಿಯೂ ಅದರಲ್ಲಿದೆ. ಅದಕ್ಕಿಂತ ಹೆಚ್ಚಾಗಿ ಯಾವ ಮಳೆ ಯಾವಾಗ ಆರಂಭವಾಗುತ್ತದೆ. ಎಷ್ಟು ಹೊತ್ತಿಗೆ ಉತ್ತರಾಷಾಢ ಮಳೆ ಇಳೆಗಿಳಿಯುತ್ತದೆ. ಅಮಾವಾಸ್ಯೆ ಯಾವತ್ತು. ಕೊಯ್ಲಿಗೆ ಸೂಕ್ತ ದಿನ ಯಾವುದು ಎಂಬಿತ್ಯಾದಿ ಮಾಹಿತಿ ಇದರ ಪುಟಪುಟಗಳಲ್ಲೂ ಸಮೃದ್ಧ. ಬಹುಶಃ ಈ ವರೆಗಿನ ಯಾವ ದಿನದರ್ಶಿಕೆಯಲ್ಲೂ (ಪಂಚಾಂಗ ಬಿಟ್ಟು ) ಇಂಥ ಮಾಹಿತಿ ಕೊಟ್ಟ ಉದಾಹರಣೆ ಇಲ್ಲ.
ಮಲ್ಲಿ ಮೊದಲ ಪುಟದಲ್ಲೇ ಹೇಳಿಕೊಂಡಿರುವಂತೆ ಇದು ಜನಸಾಮಾನ್ಯರಲ್ಲಿ ನೀರೆಚ್ಚರ ಮೂಡಿಸಲು ಮಾಡಿರುವ ಪುಟ್ಟ ಪ್ರಯತ್ನ. ಆದರೆ ಅದರ ಪರಿಣಾಮ ಖಂಡಿತಾ ಪುಟ್ಟದಲ್ಲ. ಇದರ ಹಿಂದಿನ ಪರಿಶ್ರಮವೂ ಸಹ ಪುಟ್ಟದಲ್ಲ. ವರ್ಷ ಪೂರ್ತಿ ಬಳಸುವ, ನಿತ್ಯ ಸಂಗಾತಿಯಾಗಿರುವ ಕ್ಯಾಲೆಂಡರ್, ಜಲ ಸಂರಕ್ಷಣೆಯ ವಿಚಾರಗಳನ್ನು ಬಿತ್ತರಿಸಲು ಅತ್ಯುತ್ತಮ ಮಾಧ್ಯಮ ಎನ್ನುವುದರಲ್ಲಿ ಎರಡನೇ ಮಾತೇ ಇಲ್ಲ. ಜನರ ಅಗತ್ಯವನ್ನು ನೀರಿನ ವಿಚಾರದಲ್ಲಿ ಮಲ್ಲಿ ಯಶಸ್ವಿಯಾಗಿ ಎನ್‌ಕ್ಯಾಶ್ ಮಾಡಿಕೊಂಡಿದ್ದಾರೆ.
ಭೇಷ್ ಎಂದು ಬೆನ್ನು ತಟ್ಟಲು ಇವಿಷ್ಟೇ ಕಾರಣಗಳಲ್ಲ. ಕ್ಯಾಲೆಂಡರ್‌ನ ಪ್ರತಿಪುಟವನ್ನೂ ಮಗುಚಿಹಾಕಲು ಹೊರಟರೆ ಅಲ್ಲೊಂದು ಪುಟ್ಟ ಪಠ್ಯವೇ ಅನಾವರಣಗೊಳ್ಳುತ್ತದೆ. ನೀರಿನ ಪ್ರಾಥಮಿಕ ಮಾಹಿತಿಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಕ್ಯಾಲೆಂಡರ್‌ನ ಹಿಂಭಾಗದಲ್ಲಿ ಅಳವಡಿಸಲಾಗಿದೆ. ಅಲ್ಲೊಂದಿಷ್ಟು ಅಂಕಿ-ಅಂಶಗಳು ಇವೆ. ಕಿವಿಮಾತಿದೆ. ಅರಿಯದ ಅದೆಷ್ಟೋ ಮಾಹಿತಿ ಸಂಚಯವಿದೆ. ಜಲ ಸಂರಕ್ಷಣೆಯ ಕುರಿತಾದ ಟಿಪ್ಸ್‌ಗಳಿವೆ. ಜತೆಗೆ ಕಪ್ಪುಬಿಳುಪು ಪೂರಕ ಚಿತ್ರಗಳೂ ಇವೆ. ಬಹುಶಃ ಏನಿಲ್ಲ ಎಂಬುದನ್ನು ಕೇಳಿಕೊಳ್ಳಬೇಕಾಗುತ್ತದೆ. ಇನ್ನೂ ಗಮನಾರ್ಹ ಸಂಗತಿಯೆಂದರೆ ಕ್ಯಾಲೆಂಡರ್‌ನ ಮುಖಪುಟದಲ್ಲೇನಿದೆಯೋ ಅದಕ್ಕೆ ಸಂಬಂಸಿದ ಒಂದಷ್ಟು ಪೂರಕ ಮಾಹಿತಿಯೇ ಆ ಪುಟದ ಹಿಂಭಾಗದಲ್ಲಿ ಲಭ್ಯವಿರುತ್ತದೆ. ಅಂದರೆ ಚಾವಣಿ ನೀರು ಸಂಗ್ರಹದ ಚಿತ್ರವುಳ್ಳ ಪುಟದ ಹಿಂಭಾಗ ಚಾವಣಿ ನೀರಿನ ಸಂಗ್ರಹ ಅಂದರೇನು ? ಅದನ್ನು ಅಳವಡಿಸಿಕೊಳ್ಳುವುದು ಹೇಗೆ ? ಅದರಿಂದೇನು ಪ್ರಯೋಜನ ಎಂಬಿತ್ಯಾದಿ ವಿವರಗಳು ಬೇಡವೆಂದರೂ ನಿಮ್ಮನ್ನು ಓದಲು ಪ್ರೇರೇಪಿಸುತ್ತವೆ. ಒಟ್ಟಾರೆ ಪ್ರತಿ ಪುಟದಲ್ಲೂ ನೀರಿನ ವಿವಿಧ ಆಯಾಮಗಳ ಪರಿಚಯ ನಿಮಗೆ ಲಭ್ಯ. ಆಡು ಭಾಷೆಗೆ ಒತ್ತು ಕೊಟ್ಟಿರುವುದು ಕ್ಯಾಲೆಂಡರ್‌ನ ವಸ್ತುವಿಗೆ ಇನ್ನಷ್ಟು ಮೆರುಗು ತಂದಿದೆ. ಎಲ್ಲವಕ್ಕೆ ಮುಕುಟವಿಡುವುದು ಪ್ರತಿ ಪುಟದ ಬಾಟಮ್ ಲೈನ್. ನೀರಿನ ಬಗ್ಗೆ ಪ್ರಸಿದ್ಧರ ನುಡಿಮುತ್ತುಗಳಲ್ಲಿ ಅತ್ಯಂತ ಮೌಲ್ಯಯುತವಾದುದನ್ನು ಆಯ್ದು ನಿಮಗಾಗಿ ಕೊಡಲಾಗಿದೆ. ಇನ್ನೇನು ಬೇಕು ಹೇಳಿ.
ಹೇಗೆ ನೋಡಿದರೂ ಮಲ್ಲಿಯ ಈ ಕೆಲಸವನ್ನು ಹೊಗಳದೇ ಇರಲು ಸಾಧ್ಯವೇ ಇಲ್ಲ. ಒಂದು ಸಾಂಸ್ಥಿಕ ವಲಯದಲ್ಲಿ, ವಿಶ್ವವಿದ್ಯಾಲಯದ ಮಟ್ಟದಲ್ಲಿ, ಸರಕಾರಿ ಇಲಾಖೆಯ ಸ್ತರದಲ್ಲಿ ಆಗಬೇಕಿರುವ ಕೆಲಸವನ್ನು ವ್ಯಕ್ತಿಯಾಗಿ ಗೆಳೆಯ ಮಲ್ಲಿ ಮಾಡಿದ್ದಾನೆ. ಯಾವ್ಯಾವುದೋ ಬೀಚ್‌ನಲ್ಲಿ ಬಟ್ಟೆಗೇ ಅಪಮಾನ ಮಾಡುವ ರೀತಿಯಲ್ಲಿ ಕಂಗೊಳಿಸುವ ‘ತೊಗಲು ಬೊಂಬೆ’ಗಳ ಚಿತ್ರವನ್ನು ಹಾಕಿ, ಡಾಲರ್‌ಗಳ ಲೆಕ್ಕದಲ್ಲಿ ಕ್ಯಾಲೆಂಡರ್ ಬಿಕರಿ ಮಾಡುವವರ ನಡುವೆ, ದೇವರ ಚಿತ್ರಗಳನ್ನು ಅಚ್ಚು ಮಾಡಿ ತಮ್ಮ ಹೆಸರನ್ನು ಜಾಹೀರುಗೊಳಿಸಿಕೊಳ್ಳುವವರ ನಡುವೆ ಜಲಸಿರಿಯ ದಿನದರ್ಶಿಕೆ ಎಷ್ಟೋ ಎತ್ತರಕ್ಕೆ ನಿಲ್ಲುತ್ತದೆ. ನಮ್ಮ ನಡುವಿನ ಬದುಕಿನ ಹಸಿಹಸಿ ಚಿತ್ರಣದೊಂದಿಗೆ ಇಷ್ಟವೂ ಆಗುತ್ತದೆ. ಹ್ಯಾಟ್ಸ್ ಆಫ್ ಮಲ್ಲಿ.
‘ಲಾಸ್ಟ್’ ಡ್ರಾಪ್: ನಿಮ್ಮ ಮನೆಯ ಗೋಡೆಯೂ ಇಂಥದ್ದೊಂದು ಮೌಲ್ಯಯುತ ಕ್ಯಾಲೆಂಡರ್ ಹೊತ್ತು ಬೀಗಬೇಕು ಎನ್ನಿಸಿದರೆ ಒಂದು ಕರೆ ಮಾಡಲು ಮಲ್ಲಿಕಾರ್ಜುನ್ ದೂರವಾಣಿ: ೯೪೮೦೬ ೯೦೬೦೧, ೯೩೪೨೧ ೮೪೮೫೫.