Monday, January 4, 2010

ಕಾಲದ ಜತೆಗೇ ಮುಗಿಯುತ್ತಿದೆ ನೀರ ಕ್ಯಾಲೆಂಡರ್‌ನ ಪುಟಗಳು

ನೇನೋ ಆಗಿ ಹೋಯಿತು ಬಿಡಿ ಕಳೆದ ವರ್ಷದಲ್ಲಿ, ಬಿದ್ದ ಮಳೆಯೆಷ್ಟೋ, ಹರಿದು ಹೋದದ್ದೆಷ್ಟೋ, ಇಂಗಿದ್ದೆಷ್ಟೋ, ಸಂಗ್ರಹಿಸಿಟ್ಟುಕೊಂಡದ್ದೆಷ್ಟೋ...ಅಂತೂ ಒಂದು ವರ್ಷ ದಾಟಿ ಹೋಗಿದೆ. ಹಾಗೆ ನೋಡಿದರೆ ಹೊಸ ಶತಮಾನದ ಮೊದಲನೇ ದಶಕ ಕೊನೆಯಾಗಲು ಇನ್ನು ಒಂದೇ ವರ್ಷ ಬಾಕಿಯಿದೆ. ನೀರಿನ ವಿಚಾರದಲ್ಲಿ ಈ ಒಂದು ದಶಕದ ಬೆಳವಣಿಗೆಗಳು ಆಶಾದಾಯಕವಾಗಿಯೇನೂ ಕಂಡು ಬಂದಿಲ್ಲ. ಹತ್ತು ವರ್ಷಗಳಲ್ಲಿ ಒಂದೊಂದೇ ಸಣ್ಣ ಸಣ್ಣ ಹೆಜ್ಜೆಗಳನ್ನು ಇಡುತ್ತಾ ಬಂದಿದ್ದರೂ ಸಾಕಿತ್ತು ಇಷ್ಟು ಹೊತ್ತಿಗೆ ಸಾಕು ಸಾಕೆನಿಸುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳಬಹುದಿತ್ತು ನಾವು. ತೀರಾ ನಿರಾಶಾದಾಯಕವೆನಿಸುವ ಚಿತ್ರಣ ನಮ್ಮೆದುರು ತೆರೆದುಕೊಳ್ಳುತ್ತಿದ್ದರೆ ಅದಕ್ಕೆ ನಾವು ಯಾರನ್ನೂ ಹೊಣೆ ಮಾಡಲು ಸಾಧ್ಯವೇ ಇಲ್ಲ.

ಒಂದೆಡೆಯಲ್ಲಿ ಭೂ ಜ್ವರದ ಬಗ್ಗೆ ಗುಲ್ಲೆಬ್ಬಿಸುತ್ತಿರುವಾಗಲೇ ಇನ್ನೊಂದೆಡೆ ಕೈಗಾರಿಕೀಕರಣ, ಯಾಂತ್ರೀಕೃತ ಬದುಕನ್ನೇ ಅಭಿವೃದ್ಧಿಯ ಮಾನದಂಡ ಮಾಡಿಕೊಂಡು ಬೀಗುತ್ತೇವೆ. ಒಂದೆಡೆ ಬ್ರಹ್ಮಾಂಡದ ಹುಟ್ಟಿನ ರಹಸ್ಯ ಭೇದಿಸುವ ಬಿಗ್‌ಬ್ಯಾಂಗ್‌ನತ್ತ ಇನ್ನಿಲ್ಲದ ಕುತೂಹಲದ ನೋಟ ಬೀರುತ್ತಲೇ ಹುಸಿಪ್ರಳಯದ ಚಿತ್ರವಿಚಿತ್ರಗಳನ್ನು ಫ್ಯಾಂಟಸಿ ರೂಪದಲ್ಲಿ ನೋಡಿ ಮನರಂಜನೆ ಪಡೆಯುತ್ತಿದ್ದೇವೆ. ಪ್ರಳಯ ಆಗುತ್ತದೋ ಇಲ್ಲವೋ, ಯಾವತ್ತೋ ಇಲ್ಲವಾದ ಮಾಯನ್ ಜನಾಂಗದ ಕ್ಯಾಲೆಂಡರ್‌ನಲ್ಲಿರುವ ವಾಕ್ಯಗಳು ನಿಜವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ನಿಸ್ಸೀಮ ನಿರ್ಲಕ್ಷ್ಯದ ಪರಿಣಾಮದಿಂದ ಬಿಸಿ ಪ್ರಳಯವನ್ನು ನಾವೀಗಾಗಲೇ ಅನುಭವಿಸುತ್ತಿರುವುದಂತೂ ನಿಜ. ಇನ್ನು ಮೂರು ವರ್ಷಗಳಲ್ಲಿ ಜಗತ್ತೇ ಮುಳುಗಿ ಹೋಗುತ್ತದೆಂಬ ಭ್ರಮೆಗೆ ಅತ್ಯಂತ ಪ್ರಾಮಾಣಿಕವಾಗಿ ನಮ್ಮನ್ನು ಒಡ್ಡಿಕೊಳ್ಳುವ ನಾವು, ನೀರಿನ ವಿಚಾರದಲ್ಲಿ ಹುಟ್ಟಿರುವ ವಾಸ್ತವದ ಆತಂಕದ ಬಗ್ಗೆ ಒಂದಿನಿತೂ ತಲೆಕೆಡಿಸಿಕೊಳ್ಳುವುದೇ ಇಲ್ಲ.


ವರ್ಷದ ಆರಂಭದಲ್ಲಿಯೇ ನಿರಾಸೆಯನ್ನು ಬಿತ್ತಬೇಕೆಂದೇನೂ ಇಲ್ಲ. ಆದರೆ ಅಂಥದ್ದೊಂದು ಸಂಕೀರ್ಣ ಸನ್ನಿವೇಶದ ಚಿತ್ರಣವನ್ನು ಇಂದೇ ನಮ್ಮ ಮುಂದೆ ತಂದುಕೊಳ್ಳದಿದ್ದರೆ ಮುಂದಿನ ೩೬೫ದಿನಗಳಲ್ಲಿ ಒಮ್ಮೆಯೂ ಸಕಾರಾತ್ಮಕ ಕಾರ್ಯ ಅನುಷ್ಠಾನ ನಮ್ಮಿಂದ ಖಂಡಿತಾ ಸಾಧ್ಯವಾಗುವುದೇ ಇಲ್ಲ. ಕಳೆದ ಶತಮಾನದ ಕೊನೆಯಲ್ಲೇ (೧೯೯೭) ಜಲಸ್ಥಿತಿ ಅಧ್ಯಯನ ಕೈಗೊಂಡ ವೈದ್ಯನಾಥನ್ ಸಮಿತಿ ಘನಘೋರ ಚಿತ್ರಣವನ್ನು ದೇಶದ ಮುಂದಿಟ್ಟಿದೆ. ೨೦೫೦ರ ಸುಮಾರಿಗೆ ಜಗತ್ತಿನೆಲ್ಲೆಡೆ ಹನಿಗಾಗಿ ಹಾಹಾಕಾರವೇಳಲಿದೆ, ಜಲಸಮರದಲ್ಲಿ ಮನುಷ್ಯ ಮೃಗವಾಗಿ ವರ್ತಿಸುತ್ತಾನೆ. ಇದು ಖಂಡಿತಾ ಊಹಾಚಿತ್ರವಲ್ಲ. ಜಾಗತಿಕ ಜನಸಂಖ್ಯೆಗೆ ಪ್ರತಿ ದಿನ ಸರಾಸರಿ ೨.೩೦ ಲಕ್ಷದಷ್ಟು ಶಿಶುಗಳು ಕೂಡಿಕೊಳ್ಳುತ್ತಿವೆ ಎಂದರೆ ಆ ಹೊತ್ತಿಗೆ ದೇಶಕ್ಕೆ ೨೭೮೮ ಶತಕೋಟಿ ಕ್ಯೂಬಿಕ್ ಲೀಟರ್ ನೀರಿನ ಅಗತ್ಯ ಸೃಷ್ಟಿಯಾಗುತ್ತದೆ. ಸದ್ಯದ ಅಂದಾಜಿನ ಪ್ರಕಾರ ೧೪೦೩ ಶತಕೋಟಿ ಕ್ಯೂಬಿಕ್ ಲೀಟರ್ ನೀರು ಲಭ್ಯವಾಗಲಿದೆ. ಹೀಗಾಗಿ ಉಳಿದವರ ಪಾಲಿಗೆ ಕಾದಾಟ ಅನಿವಾರ್‍ಯವಲ್ಲವೇ ? ವೈದ್ಯನಾಥನ್ ನಿಜ ಹೇಳಿದ್ದಾರೆ.


ನೀರಿನ ಸಮಸ್ಯೆ ಇಡೀ ಮಾನವ ಕುಲದ ಸವಾಲು. ಪಾಶ್ಚಿಮಾತ್ಯ ದೇಶಗಳು ವಿಮಾನದಲ್ಲಿ ನೀರು ಸರಬರಾಜು ಮಾಡಲು ಗ್ಲೋಬಲ್ ಟೆಂಡರ್‌ಗಳನ್ನು ಆಹ್ವಾನಿಸಿವೆ. ವಿಶ್ವಬ್ಯಾಂಕ್‌ನ ಮಾಹಿತಿಯೊಂದರ ಪ್ರಕಾರ ಅಭಿವೃದ್ಧಿಶೀಲ ದೇಶಗಳಲ್ಲಿ ೭೦೦ ಶತಕೋಟಿ ಡಾಲರ್‌ಗಳ ಬಂಡವಾಳದೊಂದಿಗೆ ವಾಟರ್ ಮಾರ್ಕೆಟ್ ಆರಂಭಿಸುವುದು ತಕ್ಷಣದ ಅಗತ್ಯ. ಶುಭ್ರ ಜಲಕ್ಕೆ ೧೫೦ ಸಾವಿರ ಕೋಟಿ ಡಾಲರ್‌ಗಳನ್ನು ವೆಚ್ಚ ಮಾಡುವುದು ತೀರಾ ಅನಿವಾರ್‍ಯ.


ಇವೆಲ್ಲವನ್ನು ಗಮನಿಸಿದಾಗ ಒಟ್ಟಾರೆ ಜಲ ಜಾಗೃತಿಯಲ್ಲಿನ ತಲೆಮಾರಿನ ವೈಫಲ್ಯ ಗ್ರಹಿಸಬಹುದು. ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಿರುವ ಕೆಲ ಕಂಪನಿಗಳು ತನ್ನಿಂತಾನೇ ನೀರನ್ನು ವ್ಯಾಪಾರದ ವಸ್ತುವನ್ನಾಗಿಸಿವೆ. ವಸ್ತುಸ್ಥಿತಿಯ ಬಿಸಿ ಜನಸಾಮಾನ್ಯರಿಗೆ ತಟ್ಟಿದಷ್ಟು, ಆಡಳಿತಾರೂಢರಿಗೆ ತಟ್ಟಿಲ್ಲ. ಮಣ್ಣು, ನೀರು, ಪರಿಸರ ಸಂರಕ್ಷಣೆಯ ಕುರಿತಾದ ಸಮಗ್ರ ಚಿಂತನೆ ನಡೆದೇ ಇಲ್ಲ. ಕೆರೆಗಳಂತೂ ಶೇ.೮೦ರಷ್ಟು ನಾಮಾವಶೇಷವಾಗಿವೆ. ಇನ್ನು ಪರಿಸರವಾದಿಗಳು ಮತ್ತು ಸ್ವಯಂ ಸೇವಾಸಂಸ್ಥೆಗಳು ಮಳೆಗಾಲದಲ್ಲಿ ವನಮಹೋತ್ಸವ ಆಚರಿಸುವುದು ಹಾಗೂ ರಸ್ತೆಬದಿಯ ಮರಗಳನ್ನು ಕಡಿಯುವುದರ ವಿರುದ್ಧ ಕೂಗೆಬ್ಬಿಸುವುದಷ್ಟೇ ಪರಿಸರ ಸೇವೆ ಎಂದುಕೊಂಡಂತಿದೆ.


ಸ್ಟಾಕ್ ಹೋಂನಲ್ಲಿ ನಡೆದ ವಿಶ್ವ ಸಮ್ಮೇಳನವೊಂದರ ಚರ್ಚೆಯ ಫಲಿತಾಂಶದ ಪ್ರಕಾರ ಸದ್ಯದ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿ ದಿನಕ್ಕೆ ಕನಿಷ್ಠ ೫೦ ಲೀಟರ್ ನೀರು ಬಳಸುತ್ತಿದ್ದಾನೆ. ಮುಂದುವರಿದ ದೇಶಗಳಲ್ಲಿ ಈ ಪ್ರಮಾಣ ೮೫೦ರಿಂದ ಸಾವಿರ ಲೀಟರ್. ಬಡರಾಷ್ಟ್ರಗಳಲ್ಲಿ ೨೦ರಿಂದ ೭೦ ಲೀಟರ್‌ಗಳು. ಭಾರತ ಮತ್ತು ಚೀನಾದ ಮಂದಿಗೆ ತಲಾ ೨೨.೬೩ ಲೀ ಮಾತ್ರ ನೀರು ದೊರೆಯುತ್ತಿದೆ. ಮನುಷ್ಯನಿಗೆ ಪ್ರತಿದಿನ ಸರಾಸರಿ ೨.೮ ಲೀ. ಶುದ್ಧ ನೀರು ಅಗತ್ಯವೆಂದು ಆರೋಗ್ಯಶಾಸ್ತ್ರ ಹೇಳುತ್ತದೆ. ಅದರಲ್ಲಿ ೧.೫ ಲೀ ನೀರು ನಾವು ತೆಗೆದುಕೊಳ್ಳುವ ಆಹಾರ ಪದಾರ್ಥಗಳಿಂದ ದೊರೆಯುತ್ತದೆಂದಾದರೂ ಉಳಿದ ೧.೩ ಲೀ ನೀರನ್ನು ನೇರವಾಗಿ ಸೇವಿಸಬೇಕಾದ್ದು ಅನಿವಾರ್ಯ. ಈ ಪ್ರಮಾಣದಲ್ಲಿ ನೋಡ ಹೋದರೆ ನಮ್ಮ ದೇಶದಲ್ಲಿ ಶೇ.೧೨ ಜನರಿಗೆ ಮಾತ್ರ ಶುದ್ಧ ನೀರು ದೊರೆಯುತ್ತಿದೆ.


ಅದು ಹಾಗಿರಲಿ, ಇತ್ತೀಚೆಗೆ ಕೇಳಿಬರುತ್ತಿರುವ ಇನ್ನೊಂದು ಸುದ್ದಿ. ಸಮುದ್ರದ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು. ಭೂಮಂಡಲದ ಮೇಲಿನ ಉಷ್ಣಾಂಶದಿಂದ ಸಮುದ್ರ ಉಕ್ಕೇರುತ್ತಿದೆ. ನಿಜ. ಸಮುದ್ರ ಕಳೆದ ಕೆಲ ಶತಮಾನಕ್ಕೆ ಹೋಲಿಸಿದರೆ ಇಂದು ಸಾಕಷ್ಟು ಮುಂದೆ ಬಂದಿದೆ. ಸಮುದ್ರದ ಮಟ್ಟ ಏರತೊಡಗಿದೆ. ಭೂಮಿಯ ಮೇಲಿನ ಶಾಖಕ್ಕೆ ಹಿಮಗಡ್ಡೆಗಳು ಕರಗಿ ನೀರಾಗಿ ಹರಿಯುತ್ತಿವೆ. ಹೀಗಾಗಿ ಸಮುದ್ರ ನೀರಿನ ಮಟ್ಟವೂ ಏರುತ್ತಿದೆ. ಜತೆ ಸಮುದ್ರದ ಮೇಲ್ಮೈಸಹ ಶಾಖಕ್ಕೆ ಅಗಲಗೊಳ್ಳುತ್ತಿದೆ.


ಸಮುದ್ರ, ನದಿ, ನೀರು, ಮಳೆ ಇತ್ಯಾದಿಗಳ ಬಗ್ಗೆ ಇಂದು ನಾವೆಷ್ಟು ಅಜ್ಞಾನಿಗಳಾಗಿದ್ದೇವೆ ಎಂದರೆ ಇಂದಿಗೂ ಅವುಗಳ ವಿಚಾರದಲ್ಲಿ ಆಗುತ್ತಿರುವ ಒಂದೊಂದೂ ಬೆಳವಣಿಗೆಗಳಿಗೆ ಒಂದಿಲ್ಲೊಂದು ನಂಬಿಕೆಗಳ ಲೇಪ ಹಚ್ಚುತ್ತಿದ್ದೇವೆ. ಭೌಗೋಳಿಕ ಸಮತೋಲನ, ಭೂಮಿಯ ಮೇಲಿನ ಉಷ್ಣಾಂಶ ರಕ್ಷಣೆಯ ದೃಷ್ಟಿಯಿಂದ ಸಮುದ್ರದ ಪಾತ್ರ ಅತ್ಯಂತ ಪ್ರಮುಖವಾದದ್ದು ಎಂಬುದನ್ನು ಏನು ಮಾಡಿದರೂ ನಾವು ಒಪ್ಪಿಕೊಳ್ಳತ್ತಲೇ ಇಲ್ಲ. ಒಂದೊಮ್ಮೆ ನದಿಯ ನೀರು ಪ್ರತಿ ವರ್ಷ ನಿರ್ದಿಷ್ಟ ಪ್ರಮಾಣದಲ್ಲಿ ಸಮುದ್ರ ಸೇರದೇ ಹೋಗಿದ್ದರೆ ಏನಾಗಬಹುದಿತ್ತೆಂಬುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಏಕೆಂದರೆ ಸಮುದ್ರದ ಮುನ್ನುಗ್ಗುವಿಕೆ ತಡೆಯಲ್ಲಿ ಭೂ ಭಾಗದಿಂದ ಒಂದಷ್ಟು ಸಿಹಿ ನೀರಿನ ಒತ್ತಡ ಅಗತ್ಯ. ಆದರೆ ಹೀಗೆ ಸಮುದ್ರ ಸೇರುತ್ತಿರುವ ಸಿಹಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.


ಇದೇ ಸಂದರ್ಭದಲ್ಲಿ ಸಮುದ್ರದಲ್ಲಿನ ಅಸಮತೋಲವನ್ನು ನಾವು ಗಣನೆಗೆ ತೆಗೆದುಕೊಳ್ಳೇಕಿದೆ. ಮಿತಿ ಮೀರಿದ ಕೈಗಾರಿಕಾ ಚಟುವಟಿಕೆಗಳಿಂದಾಗಿ ಬೃಹತ್ ಪ್ರಮಾಣದ ಇಂಗಾಲದ ಡೈಆಕ್ಸೈಡ್ ವಾತಾವರಣವನ್ನು ಸೇರುತ್ತಿದೆ. ಕಲ್ಮಶ ಅನಿಲವನ್ನು ಸಾಕಷ್ಟು ಪ್ರಮಾಣದಲ್ಲಿ ಸಮುದ್ರ ಹೀರಿಕೊಳ್ಳುತ್ತಿದೆ. ಪರಿಣಾಮ ಸಮುದ್ರದ ನೀರು ಹಿಂದೆಂದಿಗಿಂಗಲೂ ಹೆಚ್ಚು ಆಮ್ಲೀಯವಾಗುತ್ತಿದೆ. ಇದು ‘ಸಮುದ್ರ ಜೀವನ ಕ್ರಮ’ಕ್ಕೇ ಅಪಾಯವನ್ನು ತಂದೊಡ್ಡಿದೆ ಎಂಬುದು ಆತಂಕಕಾರಿ.
ಹಸಿರುಮನೆಯ ಅನಿಲದ ಪರಿಣಾಮ ಇಂದು ನೇರವಾಗಿ ಸಮುದ್ರದ ಮೇಲಾಗುತ್ತಿದೆ. ಇದು ಭೂಮಿಯ ಉಷ್ಣಾಂಶವನ್ನು ಹೆಚ್ಚಿಸುವುದರ ಜತೆಗೇ ಸಾಗರದ ಸಮತೋಲನವನ್ನು ಹದಗೆಡಿಸಿದೆ. ಗಂಟೆಗೆ ಒಂದು ದಶಲಕ್ಷ ಟನ್‌ಗಳಷ್ಟು ಇಂಗಾಲಾಮ್ಲ ಸಮುದ್ರದ ಸೇರುತ್ತಿದೆ ಎಂದರೆ ಅಲ್ಲಿನ ಜೀವ ವೈವಿಧ್ಯದ ಸ್ಥಿತಿ ಹೇಗಾಗಿರಬೇಡ.


ಇನ್ನೂರು ವರ್ಷಗಳ ಹಿಂದೆ ಆರಂಭವಾದ ಕೈಗಾರಿಕೀಕರಣ ಪರಿಣಾಮ ಈ ಶತಮಾನದ ಕೊನೆಯ ವೇಳೆಗೆ ಸಮುದ್ರದಲ್ಲಿನ ಆಮ್ಲ ಮಟ್ಟವನ್ನು ಈಗಿನದಕ್ಕಿಂತ ಎರಡೂವರೆಯಷ್ಟು ಹೆಚ್ಚಿಸಲಿದೆ. ಇದು ಜಲಚರ ಮಾತ್ರವಲ್ಲ ಸಮುದ್ರ ತಳದಲ್ಲಿನ ಸ್ಪಂಜಿನಂತಹ ಜೀವಪದರಕ್ಕೆ ಹಾನಿ ತರಲಿದೆ. ಈಗಾಗಲೇ ಸಮುದ್ರ ತಳದ ಸ್ಪಂಜಿನ ಪದರಗಳಿಂದ ಕ್ಯಾನ್ಸರ್, ಏಡ್ಸ್‌ನಂತಹ ಮಾಹಾಮಾರಿಗಳ ನಿರೋಧಕ ಔಷಧದ ಸಂಶೋಧನೆ ಆರಂಭವಾಗಿದೆ. ಅದರ ಫಲ ದೊರಕುವ ವೇಳೆ ಇಡೀ ಸಮುದ್ರವೇ ಕುಲಗೆಟ್ಟು ಹೋಗಿದ್ದರೆ ?
ಭೂಮಿಯ ಉಷ್ಣಾಂಶ, ನದಿ, ನೀರು, ಹರಿವು, ಸಮುದ್ರ ಇವೆಲ್ಲವೂ ಪರಸ್ಪರ ಪೂರಕ ವ್ಯವಸ್ಥೆಗಳು. ಇವುಗಳಲ್ಲಿ ಯಾವುದೇ ಒಂದಕ್ಕೆ ಧಕ್ಕೆಯಾದರೂ ಇಡೀ ವ್ಯವಸ್ಥೆ ಏರುಪೇರಾಗಿ ಮಾನವನ ಬದುಕು ಅಸಹನೀಯವಾಗಲಿದೆ. ಹೊಸ ವರ್ಷದ ಮೊದಲ ಸಂಕಲ್ಪ ಇದೇ ಆಗಲಿ ಎಂಬುದು ಆಶಯ- ಇಡೀ ವರ್ಷ ನಿಸರ್ಗದ ಸಹಜ ವ್ಯಾಪಾರಗಳಿಗೆ ಒಂದಿನಿತೂ ಧಕ್ಕೆ ತಾರದಂತೆ ನಡೆದುಕೊಳ್ಳುತ್ತೇವಾದರೆ ಪ್ರಳಯದ ಕುರಿತಾದ ಇನ್ನೂ ಹತ್ತು ಚಿತ್ರಗಳು ಬಂದರೂ ಅದನ್ನು ನಿಶ್ಚಿಂತೆಯಿಂದ ನೋಡಿ ಎಂಜಾಯ್ ಮಾಡಬಹುದು.
ಲಾಸ್ಟ್‘ಡ್ರಾಪ್’: ಹಣ ಇಲ್ಲದಿದ್ದರೆ ನಾವು ತಿಂಗಳುಗಟ್ಟಲೆ ಹೇಗೋ ಬದುಕಬಲ್ಲೆವು. ನೀರಿಲ್ಲದಿದ್ದರೆ ಒಂದು ವಾರವೂ ಬದುಕಲಾರೆವು. ಒಂದು ರೂಪಾಯಿ ಖರ್ಚುಮಾಡುವ ಮುನ್ನ ಹತ್ತು ಸಲ ಯೋಚಿಸುವ ನಾವು, ಒಂದು ಹನಿ ನೀರು ಖರ್ಚು ಮಾಡುವ ಮುನ್ನ ಯಾಕೆ ಕೊಂಚ ಯೋಚಿಸಬಾರದು ?

No comments: