ನೀರಾವರಿ ಯೋಜನೆಗಳ ವೈಫಲ್ಯ ನಮಗೆ ಹೊಸ ವಿಚಾರವಾಗುಳಿದಿಲ್ಲ. ನೂರಾರು ಕೋಟಿ ರೂಪಾಯಿಗಳು ಈವರೆಗೆ ವ್ಯರ್ಥವಾಗಿ ಹರಿದು ಹೋಗಿವೆ. ಎಷ್ಟೋ ಸಂದರ್ಭಗಳಲ್ಲಿ ಯೋಜನೆಗಳ ಕನಿಷ್ಠ ಪ್ರಯೋಜನವೂ ದೊರೆತಿಲ್ಲ. ಹಾಗೆಂದು ಸುಮ್ಮನುಳಿದಿಲ್ಲ, ಹೊಸ ಹೊಸ ಹೆಸರಿನಲ್ಲಿ ಬೃಹತ್ ಯೋಜನೆಗಳ ಘೋಷಣೆ ಮುಂದುವರಿದೇ ಇದೆ.
ವೈಫಲ್ಯಕ್ಕೆ ಕಾರಣಗಳು ಹಲವು. ಅದೆಲ್ಲಕ್ಕಿಂತ ಮಿಗಿಲಾದದ್ದು ನಮ್ಮ ಸನ್ನಿವೇಶದಲ್ಲಿ ನಾವು ರೂಪಿಸುವ ಯೋಜನೆಗಳು ಎಷ್ಟು ಪರಿಣಾಮಕಾರಿ ಎಂಬ ಬಗ್ಗೆ ಯೋಚಿಸುತ್ತಿಲ್ಲ. ನೀರಿನ ನಿರ್ವಹಣೆಯೆಂಬುದು ಯಾವತ್ತೂ ಪುಟ್ಟ ಪ್ರಯತ್ನಗಳನ್ನಷ್ಟೇ ಅಪೇಕ್ಷಿಸುತ್ತದೆ. ಅದಕ್ಕಿಂಥ ಹೊರತಾದದ್ದೆಲ್ಲವೂ ಹೊರೆಯಾಗುವುದರಲ್ಲಿ ಅನುಮಾನವಿಲ್ಲ.
ನಾಲ್ಕು ದಿನಗಳಿಂದ ನಾಡಿನ ಶಿಖರ ಭಾಗದ ಜಿಲ್ಲೆಗಳ ನೀರಿನ ಬವಣೆಯ ಪ್ರತ್ಯಕ್ಷ ದರ್ಶನವಾಗುತ್ತಿದೆ. ಬೀದರ್, ಗುಲ್ಬರ್ಗ, ರಾಯಚೂರಿನಂಥ ಜಿಲ್ಲೆಗಳನ್ನು ಹಿಂದುಳಿದ ಭಾಗಗಳೆಂದು ನಾವು ಮೇಲಿಂದ ಮೇಲೆ ಹೇಳಿಕೊಳ್ಳುತ್ತಲೇ ಬರುತ್ತಿದ್ದೇವೆ. ಆದರೆ, ನೀರು ನಿರ್ವಹಣೆಯಂಥ ಜ್ಞಾನದಲ್ಲಿ ಈ ಭಾಗದ ಜನ ಸಾಸಿದ ಪ್ರಗತಿ ನಿಜಕ್ಕೂ ಹುಬ್ಬೇರಿಸುವಂತೆ ಮಾಡುತ್ತದೆ. ಅದೆಷ್ಟು ವಿಭಿನ್ನ ಪ್ರಯತ್ನಗಳು ? ಇಂಥವು ಇಲ್ಲಿನ ಅನಿವಾರ್ಯತೆ ಎಂಬುದು ಬೇರೆ ಪ್ರಶ್ನೆ. ಆದರೂ ಮಾದರಿಯಾಗಬಲ್ಲ, ಅನುಸರಣೀಯವೆನಿಸುವ ಮಾದರಿಗಳು ಅಜ್ಞಾತವಾಗಿಯೇ ಉಳಿದು ಬಿಡುತ್ತವೆ.
ರಾಯಚೂರು ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆಯ ಅಚ್ಚುಕಟ್ಟಿನಲ್ಲಿ ನಿರ್ಮಿಸಿರುವ ಸಮತೋಲನ ಜಲಾಶಯ ನೀರಿನ ಇಂಥ ಸಮರ್ಥ ಬಳಕೆಗೆ ಅತ್ಯುತ್ತಮ ನಿದರ್ಶನ. ಸಾಧ್ಯತೆಗಳ ದೃಷ್ಟಿಯಿಂದ ಹಲವು ಮಜಲುಗಳಲ್ಲಿ ತೆರೆದುಕೊಳ್ಳುವ ಈ ಕಿರು ಜಲಾಶಯ ಭಾರೀ ಮೊತ್ತವನ್ನೇನೂ ಬೇಡಿಲ್ಲ, ನೂರಾರು ಕುಟುಂಬಗಳನ್ನು ಒಕ್ಕಲೆಬ್ಬಿಸಿಲ್ಲ, ಸಾವಿರಾರು ಎಕರೆ ಪ್ರದೇಶವನ್ನು ಮಳುಗಡೆ ಮಾಡಿಲ್ಲ. ಹಾಗೆ ನೋಡಿದರೆ, ಪಯಣ ಹೊರಟ ನೀರನ್ನು ಒಂದಷ್ಟು ತಡೆದು ನಿಲ್ಲಿಸಿ ವಿಶ್ರಾಂತಿಗೆ ಅನುವು ಮಾಡಿಕೊಟ್ಟದ್ದಷ್ಟೇ. ಸುತ್ತಲಿನ ಅಂತರ್ಜಲ ಮಟ್ಟ ತಂತಾನೇ ಮೇಲಕ್ಕೇರಿದೆ. ರಾಯಚೂರಿನಂಥ ನಗರದ ಜನ ಕುಡಿಯುವ ನೀರಿನ ಸಮಸ್ಯೆ ಎಂಬುದನ್ನೇ ಮರೆಯುವಂತಾಗಿದೆ. ಮಾತ್ರವಲ್ಲ ರೈತರ ಜಮೀನುಗಳು ನಗುತ್ತಿವೆ.
ಅದು ೧೯೯೧-೯೨ರ ಅವ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲ. ಸ್ಥಳೀಯ ತುಂಗಭದ್ರಾ ಕಾಡಾ ಅಧ್ಯಕ್ಷರಾಗಿ ಎನ್.ಎಸ್. ಬೋಸರಾಜು ಕಾರ್ಯ ನಿರ್ವಹಿಸುತ್ತಿದ್ದರು. ಹೇಗೆ ಮಾಡಿದರೂ ಕಾಲುವೆಯ ಕೊನೆಯ ಭಾಗದ ರೈತರಿಗೆ ಸೂಕ್ತ ನೀರೊದಗಿಸುವ ಸವಾಲನ್ನು ನಿಭಾಯಿಸುವುದು ಸಾಧ್ಯವಾಗುತ್ತಿರಲಿಲ್ಲ. ಪ್ರತಿ ಸಭೆಯಲ್ಲೂ ಇದೇ ಪ್ರಮುಖ ಚರ್ಚೆ. ಒಟ್ಟಾರೆ ಎಲ್ಲರಿಂದಲೂ ಸೈ ಅನಿಸಿಕೊಳ್ಳುವುದು ತ್ರಾಸಿನ ಸಂಗತಿಯಾಗಿತ್ತು.
ಇಂಥ ಸಂದರ್ಭದಲ್ಲಿ ಬೋಸರಾಜರ ಗಮನ ಸೆಳೆದದ್ದು ಆಂಧ್ರದ ವಿಶಿಷ್ಟಪೂರ್ಣ ‘ಸಮತೋಲನ ಜಲಾಶಯ’. ಗಡಿ ಭಾಗದ ರೈತರು ಅನಾಯಾಸವಾಗಿ ನೀರು ಪಡೆಯುತ್ತಿದ್ದ ಪರಿ ಅಚ್ಚರಿ ಹುಟ್ಟಿಸಿತ್ತು. ಮಾತ್ರವಲ್ಲ ಇಂಥ ಪ್ರಯೋಗವನ್ನು ನಮ್ಮ ರಾಜ್ಯದಲ್ಲೂ ಏಕೆ ಮಾಡಬಾರದೆನ್ನಿಸಿತು. ತಡ ಮಾಡದೇ ೧೦ ಕೋಟಿ ರೂ. ಗಳ ಯೋಜನೆಯೊಂದನ್ನು ತಯಾರಿಸಿ ಸರಕಾರದ ಮುಂದಿಟ್ಟರು. ಸರಕಾರ ಇದನ್ನು ಮುಕ್ತವಾಗಿ ಸ್ವೀಕರಿಸಿಯೂ ಬಿಟ್ಟಿತು. ಎರಡೇ ವರ್ಷದಲ್ಲಿ ಪುಟ್ಟದೊಂದು ಜಲಾಶಯ ಗಣೇಕಲ್ ಎಂಬಲ್ಲಿ ತಲೆ ಎತ್ತಿ ನಿಂತಿತ್ತು. ಅದೇ ಕೊನೆ, ಕಾಲುವೆಯ ಅಂತಿಮ ಭಾಗದ ರೈತರಿಗೆ ಮುಂದೆ ಯಾವತ್ತೂ ನೀರು ಸಮಸ್ಯೆಯಾಗಲೇ ಇಲ್ಲ. ಇಂದು ಭತ್ತ, ಕಬ್ಬು ಸೇರಿದಂತೆ ಪ್ರಮುಖ ನೀರಾವರಿ ಬೆಳೆಗಳನ್ನು ಎಗ್ಗಿಲ್ಲದೇ ಅಲ್ಲಿನ ರೈತರು ಬೆಳೆಯುತ್ತಿದ್ದಾರೆ.
ಅತ್ಯಂತ ಸರಳ ತಂತ್ರವೊಂದು ಇಷ್ಟೆಲ್ಲವನ್ನೂ ಸಾಧ್ಯವಾಗಿಸಿದ್ದು ಅಚ್ಚರಿ ಹುಟ್ಟಿಸುತ್ತಿದೆ. ಇಂದು ಗಣೆಕಲ್‌ನ ಸುತ್ತಮುತ್ತ ಹಸಿರು ಛಾಯೆ ಆವರಿಸಿದೆ. ಅಲ್ಲಿ ಮಾಡಿದ್ದಿಷ್ಟೇ. ತುಂಗಭದ್ರಾ ಎಡದಂಡೆ ಕಾಲುವೆಯ ಮೂಲಕ ರೈತರ ಜಮೀನಿಗೆ ನೀರು ಹರಿಸಲಾಗುತ್ತಿತ್ತು. ಎಲ್ಲೆಡೆಯಂತೆಯೇ ಕಾಲುವೆಯ ಆರಂಭದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ೨೨೦ಕಿ.ಮೀ. ಉದ್ದದ ಕಾಲುವೆಯ ಕೊನೆಯ ಭಾಗಕ್ಕೆ ನೀರು ತಲುಪುವಷ್ಟರಲ್ಲಿ ಅದು ಸೋತು ಸೊರಗಿ ಹೋಗಿಬಿಡುತ್ತಿತ್ತು. ಸುದೀರ್ಘ ಪಯಣದಿಂದ ತ್ರಾಣವೇ ಇಲ್ಲದಂತಾಗುತ್ತಿತ್ತು ನೀರಿಗೆ. ಅದಕ್ಕೊಂದಿಷ್ಟು ಶಕ್ತಿ ತುಂಬಲು ವಿರಾಮ ಅಗತ್ಯವೆಂಬುದನ್ನು ಮನಗಂಡ ಕಾಡಾ, ವಿಶ್ರಾಂತಿ ತಾಣವೊಂದರ ನಿರ್ಮಾಣಕ್ಕೆ ಯೋಜಿಸಿತು. ಕಾಲುವೆಯ ೩ನೇ ಡ್ರಾಪ್‌ನಲ್ಲಿ ನೀರು ಒಳಹೊಕ್ಕು ಒಂದಷ್ಟು ನಿಂತು ಮುಂದೆ ಹರಿಯುವಂತೆ ಮಾಡಲು ಉದ್ದೇಶಿಸಲಾಯಿತು. ಅದಕ್ಕಾಗಿ ಪುಟ್ಟದೊಂದು ಜಲಾಶಯ ನಿರ್ಮಿಸಿ, ಕಾಲುವೆಯ ಮಧ್ಯೆ ೧.೪ ನೇ ಮೈಲಿಯ ಬಳಿ ನೀರು ಒಳ ಬರುವಂತೆ ಮಾಡಲಾಯಿತು. ಸುಮಾರು ೩೮೦೦ ಕ್ಯೂಸೆಕ್ ನೀರನ್ನು ಜಲಾಶಯಕ್ಕೆ ಹರಿಸಿದ ಬಳಿಕ ಮತ್ತೆ ಪುನಃ ಕಾಲುವೆಯ ೧.೮ನೇ ಮೈಲಿನ ಬಳಿ ಹೊರ ಹೋಗುವಂತೆ ವ್ಯವಸ್ಥೆಗೊಳಿಸಲಾಯಿತು.
ಇದರಿಂದ ನೀರು ಹರಿವಿನ ವೇಗವನ್ನು ಕಾಯ್ದುಕೊಳ್ಳುವುದು ಸಾಧ್ಯವಾಯಿತು. ಒಂದಷ್ಟು ಹೊತ್ತು ನಿಂತು ಮತ್ತೆ ಮುಂದಕ್ಕೆ ಕಾಲುವೆಯಲ್ಲಿ ಹರಿಯುವ ನೀರು ತನ್ನ ಎಂದಿನ ವೇಗವನ್ನು ತಂತಾನೇ ವೃದ್ಧಿಸಿಕೊಳ್ಳುತ್ತಿತ್ತು.
೩೩ ಅಡಿ ಆಳದ ಈ ಜಲಾಶಯ ನಿರ್ಮಾಣದಿಂದ ೧೬ ಸಾವಿರ ಎಕರೆ ಪ್ರದೇಶ ಮುಳುಗಡೆಯಾಗಿದ್ದು ನಿಜ. ಆದರೆ, ಸುಮಾರು ೫೦ ಸಾವಿರ ಎಕರೆಯಷ್ಟು ಕೃಷಿ ಭೂಮಿ ನೀರಾವರಿಗೆ ಒಳಪಟ್ಟಿದೆ ಎಂಬುದು ಗಮನಾರ್ಹ. ಮಾತ್ರವಲ್ಲ ಇಡೀ ರಾಯಚೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಸುಲಲಿತವಾಯಿತು. ಎಕರೆಗೆ ೧೦ ಸಾವಿರ ರೂ.ಗಳಂತೆ ಆಗಿನ ಕಾಲದಲ್ಲಿ ನೀಡಿದ ಪರಿಹಾರವೂ ಸೇರಿದಂತೆ ೨೨ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಬೋಸರಾಜು.
ಒಂದು ಪುಟ್ಟ ಜಲಾಶಯ ಈ ಭಾಗದಲ್ಲಿ ಕಾಯ್ದುಕೊಂಡಿರುವ ನೀರಿನ ಸಮತೋಲನವನ್ನು ಗಮನಿಸಿದರೆ ಅದಕ್ಕೆ ಬೆಲೆ ಕಟ್ಟಲಾಗುವುದೇ ಇಲ್ಲ. ಸಂಪೂರ್ಣ ಗುರುತ್ವಾಕರ್ಷಣ ಶಕ್ತಿಯಿಂದಲೇ ಜಲಾಶಯಕ್ಕೆ ನೀರು ತುಂಬಲಾಗುತ್ತದೆ. ಅದೇ ತತ್ತ್ವದಡಿಯಲ್ಲಿ ನೀರನ್ನು ಕಾಲುವೆಯ ಕೊನೆಯ ಭಾಗದವರೆಗೂ ಹರಿಸಲಾಗುತ್ತದೆ. ಯಾವುದೇ ಇಂಧನ ಬಳಕೆಯ ಪ್ರಶ್ನೆಯೇ ಇಲ್ಲ. ನಮ್ಮ ಬಹುತೇಕ ಏತನೀರಾವರಿ ಯೋಜನೆಗಳು ಇಂಧನದ ಕೊರತೆಯಿಂದಲೇ ವಿಫಲವಾಗಿವೆ, ವಿಫಲವಾಗುತ್ತಿವೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ. ಅವೈಜ್ಞಾನಿಕ, ದೂರದೃಷ್ಟಿ ಇಲ್ಲದ ಯೋಜನೆUಳು ಹೀಗಾಗುವುದು ಸಾಮಾನ್ಯ.
ನೀರಾವರಿ ಯೋಜನೆಗಳ ವಿಚಾರದಲ್ಲಂತೂ ದೂರದೃಷ್ಟಿ ಅತ್ಯಂತ ಅಗತ್ಯದ ಸಂಗತಿ. ಬದಲಾಗುವ ಪರಿಸ್ಥಿತಿಗೆ ಅನುಗುಣವಾಗಿ ಎಲ್ಲ ಕಾಲಕ್ಕೂ ಉಪಯುಕ್ತವಾಗಬಲ್ಲ, ಆರ್ಥಿವಾಗಿಯೂ ಸಮರ್ಥನೀಯವೆನಿಸಬಲ್ಲ ಯೋಜನೆಗಳು ಮಾತ್ರ ಯಶಸ್ಸುಗಳಿಸಲು ಸಾಧ್ಯ.
ಇಂಥ ಕಾರಣಗಳಿಂದಾಗಿ ಗಣೇಕಲ್ ಜಲಾಶಯ ಸಾರ್ವಕಾಲಿಕ ಎನಿಸುತ್ತದೆ. ಅದರಲ್ಲೂ ಉತ್ತರ ಕರ್ನಾಟಕದಂಥ ಪ್ರದೇಶದಲ್ಲಿ ಈ ಪರಿಯ ನೀರಿನ ಪ್ರಯೋಗಶೀಲತೆಗೆ ಸರಕಾರಗಳು ಹೆಚ್ಚಿನ ಒತ್ತು ನೀಡುವುದು ಅಗತ್ಯವಿದೆ. ಇದೇ ಮಾದರಿಯನ್ನು ನಾಡಿನ ಇತರ ನದಿ, ಕಾಲುವೆಗಳ ಅಚ್ಚು ಕಟ್ಟು ಪ್ರದೇಶದಲ್ಲೂ ಅನುಸರಿಸುವುದು ಉತ್ತಮ. ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂಥ ಸಮತೋಲನ ಜಲಾಶಯಗಳ ನಿರ್ಮಾಣಕ್ಕೆ ಉತ್ತಮ ಅವಕಾಶಗಳಿವೆ. ಮಾತ್ರವಲ್ಲ. ಗಣೇಕಲ್‌ನಿಂದಲೇ ಇನ್ನೂ ೫೦ ಎಕರೆಗೆ ಹೆಚ್ಚುವರಿಯಾಗಿ ನೀರಾವರಿ ಒದಗಿಸುವ ಸಾಧ್ಯತೆಗಳಿವೆ. ನಾರಾಯಣಪುರ ಬಲದಂಡೆ ಕಾಲುವೆಯನ್ನು ಇಲ್ಲಿಗೆ ತಂದು ಸಂಪರ್ಕಿಸಿದರೆ ಎರಡು ಜಿಲ್ಲೆಗಳಲ್ಲಿ ನೀರಿನ ಸಮಸ್ಯೆಂಬುದೇ ಇರುವುದಿಲ್ಲ. ಇದಕ್ಕೆ ಭಾರೀ ಪ್ರಯಾಸಪಡಬೇಕಾದ ಅಗತ್ಯವೂ ಇಲ್ಲ. ಈಗಾಗಲೇ ೯೫ ಮೈಲಿಯವರೆಗೆ ಬಂದಿರುವ ನಾರಾಯಣಪುರ ಬಲದಂಡೆ ಕಾಲುವೆಯನ್ನು ಇನ್ನು ಕೇವಲ ೧೩ ಮೈಲುಗಳವರೆಗೆ ತಂದು ಜೋಡಿಸಿದರಾಯಿತು.
ಕೃಷ್ಣಾ ನದಿ ನೀರು ಹಂಚಿಕೆಯನ್ವಯ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲಾಗದೇ ಕುಳಿತಿರುವಾಗ ಇಂಥ ಪುಟ್ಟ ಪುಟ್ಟ ಪ್ರಯತ್ನಗಳತ್ತ ಸರಕಾರಗಳು ಗಮನ ಹರಿಸಿದರೊಳಿತು. ನದಿ ನೀರು ಹಂಚಿಕೆಯಲ್ಲಿ ಅನಗತ್ಯ ವಿವಾದಗಳನ್ನು ಎದುರಿಸುವ ಬದಲು, ಶ್ರೀಮಂತ ಅಂತರ್ಜಲ ಸೃಷ್ಟಿಸುವ ಇಂಥ ಸುಲಭ ಮಾರ್ಗಗಳನ್ನು ನಾವು ಕಂಡುಕೊಳ್ಳಬಾರದೇಕೆ ?
‘ಲಾಸ್ಟ್’ಡ್ರಾಪ್: ಹೀಗೊಂದು ಲೆಕ್ಕಾಚಾರ. ವರ್ಷಕ್ಕೆ ೮,೭೬೦ ಗಂಟೆಗಳು. ಇದರಲ್ಲಿ ೪ ತಿಂಗಳು ಮಳೆಗಾಲ. ಅದರಲ್ಲೂ ನಮ್ಮ ಸನ್ನಿವೇಶದಲ್ಲಿ ಒಟ್ಟೂ ಮಳೆ ಸುರಿಯುವುದು ಸರಾಸರಿ ೧೦೦ ಗಂಟೆ ಮಾತ್ರ. ಇದನ್ನು ಹಿಡಿದಿಟ್ಟುಕೊಂಡರೆ ಮಾತ್ರ ಉಳಿದ ೮,೬೬೦ ಗಂಟೆಯ ಬಳಕೆಗೆ ನೀರು ಸಿಕ್ಕೀತು.
ಸಮ್ಮನಸ್ಸಿಗೆ ಶರಣು
3 months ago