
ಬರನಾಡ ನೀರಿನ ಬವಣೆ ಹೇಳತೀರದ್ದು, ಹಾಗೆಂದು ಸುಮ್ಮನೆ ಕುಳಿತರಾದೀತೇ ? ಕುಳಿತುಕೊಳ್ಳುವ ಜಾಯಮಾನದವರೂ ಅಲ್ಲ ಅಲ್ಲಿನ ಮಂದಿ. ವಿಜಾಪುರದ ಹುಬನೂರು-ಟಕ್ಕಳಕಿ ರಸ್ತೆಯಲ್ಲಿರುವ ದ್ರಾಕ್ಷೀ ತೋಟದ ಮಾಲೀಕ ಎಸ್.ಎಚ್. ನಾಡಗೌಡರದ್ದೂ ಇದೇ ಸ್ವಭಾವ. ಇದು ತೋಟವೆಂದರೆ ತೋಟವಲ್ಲ. ಖುಲ್ಲಂಖುಲ್ಲ ನಲವತ್ತು ಎಕರೆ ಗುಡ್ಡವನ್ನು ಹಾಗೊಂದು ಸ್ವರೂಪಕ್ಕೆ ಅವರು ತರಲು ಪಟ್ಟ ಶ್ರಮ ಅವರೊಬ್ಬರಿಗೇ ಗೊತ್ತು. ಇಂದು ಸುತ್ತಮುತ್ತಲೆಲ್ಲೂ ಕಾಣಲು ಸಾಧ್ಯವೇ ಇಲ್ಲದ, ಪುಟ್ಟದೊಂದು ಜಲಾಶಯವೇ ಅಲ್ಲಿ ತುಂಬಿ ತುಳುಕುತ್ತಿದೆ. ಈ ಮಳೆಗಾಲದಲ್ಲಿ ಗುಡ್ಡದಿಂದ ಜಾರಿ ಬಂದು ನಿಂತುಕೊಂಡ ನೀರು ನಿಗಿನಿಗಿ ನಲಿದಾಡುತ್ತಿದೆ.
ಆ ಜಮೀನಿಗೆ ನಾಡಗೌಡರು ಮೊಟ್ಟ ಮೊದಲಿಗೆ ಕಾಲಿಟ್ಟಾಗ ಬಂಜಾತಿಬಂಜರು ನೆಲವದು. ದೇವರಾಣೆ ಅಲ್ಲಿ ಒಂದು ಹುಲ್ಲುಕಡ್ಡಿಯನ್ನೂ ಪ್ರಯತ್ನ ಪೂರ್ವಕ ಬೆಳೆದುಕೊಳ್ಳಲು ಸಾಧ್ಯವೇ ಇಲ್ಲದ ಪರಿಸ್ಥಿತಿ. ಏನಾದರಾಗಲಿ ಅಲ್ಲೊಂದಿಷ್ಟು ದ್ರಾಕ್ಷಿ ಹಚ್ಚಲೇಬೇಕೆಂಬ ಹಠಕ್ಕೆ ಬಿದ್ದ ಅವರ ನೆರವಿಗೆ ಬಂದದ್ದು ರಾಷ್ಟ್ರೀಯ ತೋಟಗಾರಿಕೆ ಮಿಷನ್. ಈ ಯೋಜನೆಯಡಿ ಹತ್ತು ಲಕ್ಷ ರೂ.ಗಳು ಮಂಜೂರಾಗುತ್ತಿದ್ದಂತೆ ಬೃಹತ್ ಸಮುದಾಯ ಕೃಷಿ ಹೊಂಡದ ಕನಸು ಚಿಗುರೊಡೆಯಿತು. ವಿಜಾಪುರದ ಕೃಷಿ ಸಹಾಯಕ ಎನ್. ಕುಂಬಾರ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ೭೦ ಮೀಟರ್ ಅಗಲ, ೧೩೦ ಮೀಟರ್ ಉದ್ದ ಹಾಗೂ ಸರಿ ಸುಮಾರು ೬ ಮೀಟರ್ ಆಳದ ಸಮುದಾಯ ಕೆರೆ ಅದೇ ಉತ್ಸಾಹದಲ್ಲಿ ಮೈದಳೆಯಿತು. ಮಳೆಯೂ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿತ್ತು. ಈ ಬಾರಿ ಒಂದಷ್ಟು ನೀರು ತುಂಬಿಕೊಳ್ಳುವುದು ನಿಶ್ಚಿತವಾಗಿತ್ತು. ಆದರೆ ಅಂಥ ನೀರು ಎಷ್ಟು ದಿನ ಅಲ್ಲಿ ನಿಂತುಕೊಂಡೀತು, ಎಲ್ಲಿಯವರೆಗೆ ಬಳಕೆಗೆ ಸಿಕ್ಕೀತು ಎಂಬುದು ಪ್ರಶ್ನೆಯಾಗಿತ್ತು.
ಕೆರೆಯೆಂಬೋ ಕೆರೆ ಏಕಾಏಕೀ ಉದ್ಭವವಾಗುವಂಥದ್ದಲ್ಲ. ಗುಂಡಿ ತೋಡಿ ಬಿಟ್ಟಾಕ್ಷಣ ಅಲ್ಲಿ ಸದಾಕಾಲ ನೀರು ನಿಂತು ನಲಿದಾಡುತ್ತದೆ ಎನ್ನಲಿಕ್ಕಾಗುವುದಿಲ್ಲ. ಹೇಳೀಕೇಳಿ ಅದು ವಿಜಾಪುರದಂಥ ಬೆಂಗಾಡು. ಸಾಮಾನ್ಯವಾಗಿ ಒಂದು ಕೆರೆಯಲ್ಲಿ ಪೂರ್ತಿ ನೀರು ನಿಂತುಕೊಳ್ಳಲು ಕನಿಷ್ಠವೆಂದರೂ ಐದರಿಂದ ಹತ್ತು ವರ್ಷಗಳೇ ಬೇಕಾಗುತ್ತದೆ. ಮಾತ್ರವಲ್ಲ ಅದು ಮಣ್ಣಿನ ಗುಣವನ್ನು ಅವಲಂಬಿಸಿರುತ್ತದೆ. ಆ ಜಾಗದಲ್ಲಿ ಯಾವ ಪ್ರಮಾಣದಲ್ಲಿ ಮಳೆಯಾಗುತ್ತದೆ. ಎಷ್ಟು ನೀರನ್ನು ಮಣ್ಣು ಹೀರಿಕೊಳ್ಳುತ್ತದೆ. ಎಷ್ಟು ವೇಗವಾಗಿ ನೀರು ಇಂಗುತ್ತದೆ. ತೇವಾಂಶವನ್ನು ಎಷ್ಟು ಕಾಲ ಹಿಡಿದಿಟ್ಟುಕೊಳ್ಳುತ್ತದೆ ಇತ್ಯಾದಿ ಅಂಶಗಳನ್ನು ಒಂದು ಹೊಸ ಕೆರೆ ನಿರ್ಮಾಣದ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ಒಂದು ಜಾಗದಲ್ಲಿ ಕೆರೆ ಸಹಜವಾಗಿ ನಿರ್ಮಾಣಗೊಂಡಿದೆ ಎಂದರೆ ಸುತ್ತಮುತ್ತಲ ಅಂತರ್ಜಲ ಮಟ್ಟ ಸಾಕಷ್ಟು ಎತ್ತರದಲ್ಲಿದೆ ಎಂಬುದು ಗಮನಾರ್ಹ ಸಂಗತಿ. ಹಾಗಾಗಲು ಅಲ್ಲಿನ ಮಣ್ಣು ಗರಿಷ್ಠ ನೀರನ್ನು ಕುಡಿದು
saturation ಮಟ್ಟವನ್ನು ತಲುಪಿರಬೇಕು. ಹಾಗೆ ನೀರು ಇಂಗುತ್ತ, ಇಂಗುತ್ತ... ಹೋದಂತೆಲ್ಲ, ಮತ್ತೆ ಇಂಗಲು ಉಳಿದಿಲ್ಲ ಎಂಬ ಹಂತದಲ್ಲಿ ಕೆರೆಯ ಅಂಗಳದಲ್ಲಿನ ಮಣ್ಣು ಅಂಟು ಗುಣವನ್ನು ಪಡೆದುಕೊಳ್ಳುತ್ತದೆ. ಮೇಲೊಂದಿಷ್ಟು ಪಾಚಿಯಂಥ ಜಲ ಸಸ್ಯಗಳ ಅಭಿವೃದ್ಧಿಯಾಗುತ್ತದೆ. ಅವು ಪಾತ್ರವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಸುತ್ತಲೂ ಆ ಕೆರೆಯದ್ದೇ ಆದ ಒಂದು ಜೀವಪ್ರಪಂಚ ನಿರ್ಮಾಣವಾಗುತ್ತದೆ. ಅಲ್ಲೊಂದಿಷ್ಟು ಗಿಡ ಮರಗಳು ಬೆಳೆಯುತ್ತವೆ. ಅದರತ್ತ ಒಂದಷ್ಟು ಪ್ರಾಣಿ ಪಕ್ಷಿಗಳು ಆಕರ್ಷಿತವಾಗುತ್ತವೆ. ಸುತ್ತ ಬೀಳುವ ಮಳೆ ನೀರು ಈ ಕೆರೆಯನ್ನೇ ತನ್ನ ಪಯಣದ ಗುರಿಯಾಗಿಸಿಕೊಂಡು ಹರಿದು ಬಂದು ಸೇರಲಾರಂಭಿಸುತ್ತದೆ. ಕೊನೆಗೂ ಅಲ್ಲೊಂದು ದಿನ ಜೀವಂತಿಕೆಯ ಎಲ್ಲ ಲಕ್ಷಣಗಳೂ ಪರಿಪೂರ್ಣ ಗೋಚರಗೊಂಡು ‘ಸಾಮ್ರಾಜ್ಯ’ ಸ್ಥಾಪನೆಯಾಗುತ್ತದೆ.
ಇಷ್ಟೊಂದು ಸುದೀರ್ಘ ಪ್ರಕ್ರಿಯೆಗೆ ನಾಂದಿ ಹಾಡುವುದು ಸುಲಭದ ಮಾತಲ್ಲ; ಅದೂ ವಿಜಾಪುರದ ಸೊಕ್ಕಿನ ನೆಲಗುಣದಲ್ಲಿ. ಕೆಕ್ಕರಿಸುವ ಬೇಸಿಗೆಯನ್ನು ಕಂಡಾಗ ಆ ನೆಲ ಚುಂಗು ಬಂದಂತೆ ಆಡಲಾರಂಭಿಸುತ್ತದೆ. ಅದೆಷ್ಟೇ ದಟ್ಟ ತೇವಾಂಶವಿದ್ದರೂ ಪೈಪೋಟಿಗೆ ಬಿದ್ದು ಆಪೋಶನ ತೆಗೆದುಕೊಂಡು ಬಿಡುತ್ತದೆ ಅಲ್ಲಿನ ಮಣ್ಣು, ಹಾಗೂ ಉಳಿದದ್ದು ಅಂಥ ಬಿಸಿಲಿಗೆ ಆವಿಯಾಗದೇ ಇರಲು ಸಾಧ್ಯವೇ ಇಲ್ಲ. ಈ ಎಲ್ಲದರ ನಡುವೆ ನಾಡಗೌಡರು ತಾವು ನಿರ್ಮಿಸಿದ ಕೃಷಿ ಹೊಂಡದಲ್ಲಿ ನೀರು ನಿಲ್ಲಿಸಿಕೊಳ್ಳಬೇಕು. ಅದರಿಂದಲೇ ಮೇಲಿನ ಗುಡ್ಡದಲ್ಲಿ ನಾಟಿ ಮಾಡಿದ ದ್ರಾಕ್ಷಿ ದಂಟುಗಳನ್ನು ಚಿಗುರಿಸಿಕೊಳ್ಳಬೇಕು. ಅಷ್ಟಕ್ಕೇ ಮುಗಿಯುವುದಿಲ್ಲ, ಅದರಿಂದಲೇ ದ್ರಾಕ್ಷಿ ಗೊಂಚಲುಗಳು ಹುಳಿ ಕಳೆದುಕೊಂಡು ಕಳಿಯಬೇಕು.
ಹೇಗೆ ಮಾಡಿದರೂ ಒಂದೆರಡು ವರ್ಷಗಳಲ್ಲಿ ನೀರು ನಿಲ್ಲಿಸಿಕೊಳ್ಳಲು ಸಾಧ್ಯವಿಲ್ಲ. ನೀರಿಲ್ಲದೇ ದ್ರಾಕ್ಷಿ ಬೆಳೆ ಉಳಿಸಿಕೊಳ್ಳಲಾಗುವುದಿಲ್ಲ. ಏನು ಮಾಡುವುದೆಂಬ ಚಿಂತನೆಯಲ್ಲಿದ್ದಾಗಲೇ ಕೆರೆಯ ಮೇಲ್ಪದರಕ್ಕೆ ಪ್ಲಾಸ್ಟಿಕ್ ಹೊದೆಸಿಬಿಟ್ಟರೆ ಹೇಗೆ ? ಎಂಬ ಯೋಚನೆ ಬಂತು. ಉದ್ದ ಅಗಲಗಳನ್ನು ಅಳೆದು ಅರ್ಧ ಹೊಂಡಕ್ಕೆ ಮುಚ್ಚಲು ಅಗತ್ಯ ಪ್ಲಾಸ್ಟಿಕ್‌ನ ಅಳತೆ ತೆಗೆದೇ ಬಿಟ್ಟರು ನಾಡಗೌಡರು. ಬರೋಬ್ಬರಿ ೩೦೦ ಮೈಕ್ರಾನ್‌ನಷ್ಟು ವಿಸ್ತಾರದ ಪ್ಲಾಸ್ಟಿಕ್ ಹಾಳೆಗೆ ಆರ್ಡರ್ ಮಾಡಿಯೂ ಬಿಟ್ಟರೂ. ಪಕ್ಕದ ಮಹಾರಾಷ್ಟ್ರದಿಂದ ಅದು ಲಾರಿಯಲ್ಲಿ ಬಂದು ಇಳಿದೂ ಬಿಟ್ಟಿತು.
ಅದನ್ನು ಇಡಿಯಾಗಿ ಏಕಕಾಲಕ್ಕೆ ಕೆರೆಗೆ ಹೊದೆಸುವುದು ಹೇಗೆ ಎಂಬುದು ಮುಂದಿನ ಸಮಸ್ಯೆ. ಬಟಾ ಬಯಲಲ್ಲಿ ಬೀಸುವ ಗಾಳಿ ಒಂದು ಕಡೆ, ಯಮ ಭಾರ ಇನ್ನೊಂದೆಡೆ. ಎಲ್ಲವನ್ನೂ ಅಳೆದೂಸುರಿದು ಸರಿ ಸುಮಾರು ನೂರಾಹತ್ತು ಮಂದಿಯನ್ನು ಒಟ್ಟಿಗೆ ಸೇರಿಸಿ ಎಲ್ಲರೂ ಸೇರಿ ಅದನ್ನು ಹೊದೆಸುವ ನಿರ್ಧಾರವಾಯಿತು. ಕೆರೆಯಂಗಳದ ಮಧ್ಯದಲ್ಲಿ ಬೃಹತ್ ಪ್ಲಾಸ್ಟಿಕ್ ಸುರುಳಿಯನ್ನು ತಂದು ಚೆಲ್ಲಲಾಯಿತು. ಎರಡು ಸಾಲಿನಲ್ಲಿ ಜನರನ್ನು ನಿಲ್ಲಿಸಿ ಎರಡೂ ಕಡೆಯಿಂದ ಒಟ್ಟಿಗೇ ವಿಭಿನ್ನ ದಿಕ್ಕಿನಲ್ಲಿ ಪ್ಲಾಸ್ಟಿಕ್ ಹಾಳೆಯನ್ನು ಎಳೆದುಕೊಂಡು ಹೊರಡಲಾಯಿತು. ಕೊನೆಗೂ ಮೂರು ಗಂಟೆಯ ಪರಿಶ್ರಮದ ಬಳಿಕ ಕೆರೆಯಂಗಳಕ್ಕೆ ಅಂಗಿ ತೊಡಿಸಲಾಗಿತ್ತು.
ಮೊದಲ ಮಳೆಯನ್ನೇ ನಾಡಗೌಡರು ಹಿಡಿದಿಟ್ಟುಕೊಂಡು ಬಳಸಲಾರಂಭಿದ್ದಾರೆ. ಅದೇ ಸಂದರ್ಭದಲ್ಲಿ ಪ್ಲಾಸ್ಟಿಕ್‌ನ ಕೆಳಭಾಗಕ್ಕೆ ನುಸುಳುವ ನೀರು ಇಂಗುತ್ತಿದೆ. ಹೀಗೆ ನಾಲ್ಕಾರು ವರ್ಷಗಳವರೆಗೆ ಈ ಪ್ಲಾಸ್ಟಿಕ್ ಬಾಳಿಕೆ ಬರುವ ನಿರೀಕ್ಷೆಯಿದೆ. ಅಷ್ಟರಲ್ಲಿ ಅಲ್ಲೊಂದು ಜೀವಸಾಮ್ರಾಜ್ಯ ಸ್ಥಾಪನೆಯಾಗಿ ಶಾಶ್ವತ ಕೆರೆ ತಲೆ ಎತ್ತುವಂತಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ನಾಡಗೌಡರು. ಅವರ ವಿಶ್ವಾಸ ದಿಟವಾಗುವ ಎಲ್ಲ ಲಕ್ಷಣಗಳೂ ಎರಡು ವರ್ಷಗಳಲ್ಲೇ ಕಾಣುತ್ತಿದೆ. ಹಾಗಾಗಲಿ ಎನ್ನೋಣವೇ.
2 comments:
ನೀರ್‍ಸಾಧಕರಿಗೆ ಸ್ವಾಗತ ಬ್ಲಾಗ್‌ಲೋಕಕ್ಕೆ
ಬನ್ನಿ ಬನ್ನಿ ಭಡ್ತಿ
ಇದು ಮುಂಬಡ್ತಿ ಯಾ..? ಹಿಂಬಡ್ತಿಯಾ..?
ಅಂತ ನನಗೆ ತಿಳಿಯಲಿಲ್ಲ. ನನಗೆ ನಾನು ಬರೆದದ್ದು ಪ್ರಕಟಿಸುವರಿಲ್ಲ ಅಂತ
ಇಲ್ಲಿ ಬಂದೆ
ನೀವೋ ಬರೆದಿದ್ದೆಲ್ಲಾ ಪ್ರಕಟವಾಗುತ್ತದೆ ಆದರೂ.. ಬಂದಿರಲ್ಲ
ಗ್ರೇಟ್ ಭಡ್ತಿ..
ಆದರೂ ಬ್ಲಾಗ್ ನ ಹೆಸರು ಪಕ್ಕನೆ ಓಡಿದರೆ ಮೀರ್ ಸಾಧಕನನ್ನು ನೆನಪಿಸಿಬಿಡುತ್ತದೆ
ವೆಲ್ಕಂ
Post a Comment