Thursday, October 2, 2008

‘ಬರನಾಡ’ಗೌಡರು ಸೃಷ್ಟಿಸಿದ ಮಲೆನಾಡು

‘ಆಗದು ಎಂದು, ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ....ಸಾಗದು ಕೆಲಸವು ಎಂದೆಂದು...’
ಅದೊಂದು ಬೋಳು ಗುಡ್ಡ. ಬಂಡೆ, ಕುರುಚಲು ಪೊದೆಗಳನ್ನು ಬಿಟ್ಟರೆ ಅಲ್ಲಿ ಬೇರೇನೂ ಕಾಣಲು ಸಿಗುವುದಿಲ್ಲ. ನಾಯಕನ ಎಂಟ್ರಿ ಆಗುವುದೇ ಅಲ್ಲಿಂದ. ಸುಶ್ರಾವ್ಯ ಹಾಡು ಮುಗಿಯುವುದರೊಳಗೆ ಅದೇ ಗುಡ್ಡ ಹಸಿರಿನಿಂದ ನಳ ನಳಿಸುತ್ತಿರುತ್ತದೆ. ಅಂಥ ಬರಡು ಭೂಮಿಯಲ್ಲೂ ನೀರಿನ ಬುಗ್ಗೆ ಉಕ್ಕುತ್ತದೆ. ಸೊಂಪಾಗಿ ಬೆಳೆದ ಭತ್ತ, ಕಬ್ಬು, ಜೋಳ ತೊನೆದಾಡುತ್ತದೆ....ಎಲ್ಲವೂ ಹೆಚ್ಚೆಂದರೆ ಐದಾರು ನಿಮಿಷದಲ್ಲಿ ಪರಿವರ್ತನೆಯ ಪರಾಕಾಷ್ಠೆ ತಲುಪಿರುತ್ತದೆ.
ಡಾ.ರಾಜ್‌ಕುಮಾರ್ ಅಭಿನಯದ ‘ಬಂಗಾರದ ಮನುಷ್ಯ’ ಚಿತ್ರ ನೆನಪಿಗೆ ಬಂದಿರಬೇಕು. ಥೇಟಾನು ಥೇಟು ಅದೇ ರೀತಿ ವಾಸ್ತವದಲ್ಲೂ ಬೋಳುಗುಡ್ಡ ಹಸಿರಾಗಿಬಿಟ್ಟರೆ, ಬೆಂಗಾಡು ಹಸಿರ ಬಸಿರು ಹೊತ್ತು ನಿಂತರೆ, ಬದುಕು ಬಂಗಾರವಾಗಲು ಇನ್ನೇನು ಬೇಕು ? ‘ಅದೆಲ್ಲ ಎಲ್ಲಿ ಸಾಧ್ಯ ? ಹೇಳೀ, ಕೇಳಿ ಅದು ಅಣ್ಣಾವ್ರ ಚಿತ್ರ ಬಿಡಿ.’ ಹಾಗೆನ್ನುವ ಪ್ರಶ್ನೆ ಇಲ್ಲವೇ ಇಲ್ಲ. ಇವೆಲ್ಲವೂ ಸಾಧ್ಯವಾಗಿದೆ. ದೇವರಾಣೆಗೂ ಸತ್ಯ. ನೂರಕ್ಕೆ ನೂರು ಬಂಗಾರದ ಮನುಷ್ಯದಲ್ಲಿಯಂತೆಯೇ ಒಂದಿಡೀ ಬೋಳುಗುಡ್ಡ ಇಂದು ದ್ರಾಕ್ಷಿ ತೋಟವಾಗಿದೆ. ಆದರೆ ಕೇವಲ ಆರು ನಿಮಿಷದ ಹಾಡಿನೊಳಗಲ್ಲ. ಆರು ವರುಷದ ಸತತ ಪರಿಶ್ರಮದ ಬಳಿಕ. ಅಂದು ಬಹುಶಃ ನಾಡಗೌಡರು ಕೈ ಕಟ್ಟಿ ಕುಳಿತಿದ್ದರೆ ಇವಾವುವೂ ಆಗುತ್ತಿರಲಿಲ್ಲ ಎಂಬುದಂತೂ ಸತ್ಯ.
ವಿಜಾಪುರದಿಂದ ಏಳೆಂಟು ಕಿಮೀ. ದೂರದಲ್ಲಿರುವ ಧನ್ನರಗಿ ದಾಟಿ ಜಾಲಗೇರಿಗೆ ಹೋಗಿ ನಿಂತರೆ, ಅದೊಂದು ಸವಿ ಸ್ವರ್ಗ. ದ್ರಾಕ್ಷಿ ಗೊಂಚಲುಗಳ ಮೇಲಿಂದ ಬೀಸಿ ಬರುವ ತಂಗಾಳಿಗೆ ಮೈಯೊಡ್ಡಿ ಆ ಗುಡ್ಡದಲ್ಲಿ ನಿಂತರಂತೂ ಸೈ, ನಿಲುವನ್ನೇ ಮರೆಸಿಬಿಡುವ ಆಹ್ಲಾದ. ಒಂದು ಕಾಲದಲ್ಲಿ, ಅಷ್ಟೆಲ್ಲ ಏಕೆ ? ನಾಲ್ಕು ವರ್ಷಗಳ ಹಿಂದೆ ಇದೇ ನೆಲ ಗಾರಿಡುತ್ತಿತ್ತು, ಮಳೆ ನಿಂತ ಮರು ವಾರವೇ ಭೂಮಿಗೆ ಭೂಮಿಯೇ ಅಂಗಾರೆದ್ದು ಹೋಗಿದೆಯೇನೋ ಎಂಬಷ್ಟರ ಮಟ್ಟಿಗೆ ಒಣಗಿ ಬಾಯ್ಕಳೆದು ನಿಂತಿರುತ್ತಿತ್ತು... ಎಂದೆಲ್ಲ ಹೇಳಿದರೆ ಸುತಾರಾಂ ನೀವು ಒಪ್ಪಲಿಕ್ಕಿಲ್ಲ. ಅಂಥ ಸಂದಿಗ್ಧ ನಮ್ಮನ್ನೂ ಕಾಡಿದ್ದು ಸುಳ್ಳಲ್ಲ. ಆದರೆ ಪಕ್ಕದಲ್ಲೇ ಅಂಥ ಸ್ಥಿತಿಗೆ ಇಂದಿಗೂ ಸಾಕ್ಷಿಯಾಗಿ ನಿಂತಿರುವ ಬೇರೆ ಜಮೀನು ನೋಡಿದರೆ ಯಾವುದೂ ಉತ್ಪ್ರೇಕ್ಷೆಯಲ್ಲ ಎಂಬ ವಾಸ್ತವ ದರ್ಶನ ಆಗುತ್ತ ಹೋಗುತ್ತದೆ.
ಜಾಲಗೇರಿಯ ಎಸ್. ಎಚ್. ನಾಡಗೌಡರು ಜಿಲ್ಲೆಯಲ್ಲಿ ತಕ್ಕಮಟ್ಟಿಗೆ ಸ್ಥಿತಿವಂತ ರೈತ. ಆರೆಂಟು ವರ್ಷದ ಕೆಳಗೆ ಯಾವುದಕ್ಕೂ ಇರಲಿ, ಕೊನೆಗೆ ಜಾನುವಾರುಗಳ ಮೇವಿಗಾದರೂ ಆದೀತು ಎಂದುಕೊಂಡು ೪೦ ಎಕರೆಯ ಈ ಗುಡ್ಡವನ್ನು ಖರೀದಿಸಿದ್ದರು. ಅದನ್ನು ಬಿಟ್ಟು ಬೇರಾವ ಮಹತ್ವಾಕಾಂಕ್ಷೆಯೂ ಆಗ ಇರಲಿಲ್ಲ. ವಿಜಾಪುರಕ್ಕೆ ಅಡರುವ ಬಿಸಿಲು, ಮೇಲಿಂದ ಮೇಲೆ ಅಮರಿಕೊಳ್ಳುವ ಬರಗಾಲ, ಇನ್ನಿಲ್ಲದಂತೆ ಕೈಕೊಡುವ ಮಳೆ, ಇವೆಲ್ಲದರ ಜತೆಗೇ ರೈತನೊಂದಿಗೆ ಜೂಜಿಗಿಳಿಯುವ ಮಾರುಕಟ್ಟೆ ಪರಿಸ್ಥಿತಿ ಗೊತ್ತಿದ್ದವರಾರೂ ಇದಕ್ಕಿಂತ ಹೆಚ್ಚಿನ ನಿರೀಕ್ಷೆಗಳನ್ನು ಒಣ ಭೂಮಿಯ ಮೇಲೆ ಇಟ್ಟುಕೊಳ್ಳಲಾಗುವುದಿಲ್ಲ, ನಾಡಗೌಡರೂ ಹಾಗೆಯೇ ಇದ್ದರು.
ಅದೊಂದು ದಿನ ವಿಜಾಪುರದ ಗ್ರಾಮಸೇವಕ ಎನ್. ಎಚ್. ಕುಂಬಾರ್ ಕ್ಷೇತ್ರ ಪ್ರವಾಸಕ್ಕೆ ಬಂದಿದ್ದರು. ‘ಈ ಭೂಮಿಯನ್ನೇಕೆ ನೀವು ಅಭಿವೃದ್ಧಿಪಡಿಸಬಾರದು ? ಇಲ್ಲಿ ಏಕೆ ಒಂದಷ್ಟು ಬೆಳೆ ಬೆಳೆಯಬಾರದು ?’ ಎಂದು ನಾಡಗೌಡರನ್ನು ಪ್ರಶ್ನಿಸಿದರಂತೆ. ಅವರು ಗಂಭೀರವಾಗಿಯೇ ನೀಡಿದ ಸಲಹೆ ಗೌಡರಿಗೆ ಹಾಸ್ಯವಾಗಿ ತೋರಿರಬೇಕು. ನಕ್ಕರು. ಆದರೆ ಕುಂಬಾರ್ ನಗಲಿಲ್ಲ. ಆತ ಅಕ್ಷರಶಃ ಗ್ರಾಮ ಸೇವೆಗೆ ನಿಂತ ಪ್ರಾಮಾಣಿಕ ವ್ಯಕ್ತಿ. ಒಣ ಭೂಮಿ ಅಭಿವೃದ್ಧಿಯೆಂಬುದು ಸಣ್ಣ ಪುಟ್ಟ ರೈತರಿಂದ ಆಗುವ ಕೆಲಸವಲ್ಲ ಎಂಬುದನ್ನು ಅನುಭವದಿಂದ ಮನಗಂಡಿದ್ದರವರು. ಅಷ್ಟಕ್ಕೇ ಬಿಡುವವರಲ್ಲ. ರಚ್ಚೆ ಹಿಡಿದು ಗೌಡರಿಗೆ ಕೃಷಿಯ ಹುಚ್ಚು ಹಿಡಿಸಿದರು.
ಕೊನೆಗೂ ಯೋಜನೆ ನಾಡಗೌಡರ ತಲೆ ಹೊಕ್ಕಿತು. ಅಷ್ಟೆ, ಮುಂದಲ್ಲಿ ಮಾತಿಗೆ ಜಾಗವಿರಲಿಲ್ಲ. ಗೌಡರ ನಾಡು ಅಸ್ತಿತ್ವ ಪಡೆಯಲಾರಂಭಿಸಿತು. ವಿದ್ಯಾರಣ್ಯರಾಗಿ ಕುಂಬಾರರಿದ್ದರು. ಹಸಿರ ಸಾಮ್ರಾಜ್ಯಕಟ್ಟಲು ಮೊದಲು ಬೇಕಿದ್ದುದೇ ನೀರು. ಅದನ್ನೆಲ್ಲಿಂದ ತರುವುದು ? ಪ್ರಶ್ನೆಗೆ ಉತ್ತರ ಕೊಡುತ್ತಿತ್ತು ಇಳಿಜಾರು ಮೇಲ್ಮೈ. ಏನಿಲ್ಲವೆಂದರೂ ೧೩೦ ಅಡಿ ಎತ್ತರದಲ್ಲಿರುವ ಜಮೀನಿನ ತಲೆಕಟ್ಟಿನಲ್ಲಿ ಒಂದು ಹನಿ ನೀರು ಬಿದ್ದರೂ ಅದು ಗೌಡರ ಮಾಲೀಕತ್ವದ ಕೊನೆಯ ಪ್ರದೇಶಕ್ಕೇ ಬಂದು ನಿಲ್ಲಬೇಕು. ಹಾಗಿದೆ ಭೂ ರಚನೆ. ಅಂದ ಮೇಲೆ ಮಳೆಗಾಲದಲ್ಲಿ ಬೀಳುವ ಸರಾಸರಿ ೫೦೦ ಮಿ.ಮೀ. ಮಳೆಯನ್ನೇಕೆ ಹೀಗೆಯೇ ಜಾರಿಸಿಕೊಂಡು ಬಂದು ಕೆಳಭಾಗದಲ್ಲಿ ಹಿಡಿದಿಟ್ಟುಕೊಳ್ಳಬಾರದು ? ಯೋಚನೆ, ಯೋಜನೆಯಾಯಿತು. ಯೋಜನೆ ಕಾರ್ಯರೂಪಕ್ಕಿಳಿಯಲು ಕನಿಷ್ಠ ಕೆಲವು ಲಕ್ಷಗಳನ್ನಾದರೂ ಸುರಿಯಬೇಕಿತ್ತು.
ಗೌಡರ ನೆರವಿಗೆ ಬಂದದ್ದು ಬ್ಯಾಂಕ್. ಸಾಲ ಸಿಕ್ಕದ್ದೇ ತಡ ಗುಡ್ಡ ಮೃದುವಾಗತೊಡಗಿತು. ಲ್ಯಾಂಡ್ ಶೇಪಿಂಗ್ ಕರಾರುವಕ್ಕಾಗಿ ಜಾರಿಯಾಗುತ್ತಿತ್ತು. ಇಡೀ ಜಮೀನನ್ನು ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿತ್ತು. ಮೇಲ್ಭಾಗ, ಮಧ್ಯಭಾಗದಲ್ಲಿ ಎರಡು ಒಡ್ಡುಗಳು, ಎರಡನೇ ಒಡ್ಡಿಗೆ ಹೊಂದಿಕೊಂಡಂತೆಯೇ ಕೆಳ ಭಾಗದಲ್ಲಿ ಸುಮಾರು ೬೦ ಅಡಿಯ ಬೃಹತ್ ಬಾವಿ. ಮೇಲಿಂದ ಕೆಳಗಿರುವಂತೆಯೇ, ಒಡ್ಡುಗಳ ಎರಡೂ ಪಕ್ಕದಲ್ಲೂ ಇಳಿಜಾರು ನಿರ್ಮಿಸಿ ಕಣಿವೆಯ ಮಾದರಿಗೆ ತರಬೇಕು. ಅಕ್ಕ ಪಕ್ಕ ಬೆಳೆ ಬೆಳೆಯಬೇಕು. ಯೋಜನೆ ಹೀಗಿತ್ತು. ೧೫ ಕಾರ್ಮಿಕರು, ಎರಡು ಜೆಸಿಬಿ ಸತತ ೯ ತಿಂಗಳು ಕೆಲಸ ಮಾಡಿದ ಮೇಲೆ ಎಲ್ಲವೂ ಒಂದು ಹಂತಕ್ಕೆ ಬಂದು ನಿಂತಿತು.
೨೦೦೫ರ ಮಳೆ ಆರಂಭ. ನಾಡಗೌಡರ ನಿರೀಕ್ಷೆ ಹುಸಿಯಾಗಲಿಲ್ಲ. ೭೦ ಮೀಟರ್ ಅಗಲ, ೨೦೦ ಮೀಟರ್ ಉದ್ದ, ೪ ಮೀಟರ್ ಎತ್ತರದ ಮೊದಲನೇ ಒಡ್ಡು ಸದ್ದಿಲ್ಲದೇ ತುಂಬಿಕೊಳ್ಳಲಾರಂಭಿಸಿತ್ತು. ಜಮೀನಿನ ಯಾವ ಭಾಗದಲ್ಲೇ ಮಳೆ ಬೀಳಲಿ. ಅದು ಮೊದಲಿನ ಈ ಒಡ್ಡಿಗೇ ಇಳಿದು ಬರುವಂತೆ ಭೂಮಿಯನ್ನು ಎರಡೂ ಬದಿ ಇಳಿಜಾರು ಗೊಳಿಸಲಾಗಿದೆ. ಹೀಗಾಗಿ ಒಂದು ಹನಿಯೂ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಜುಲೈ ವೇಳೆಗೆಲ್ಲ ಮೊದಲನೇ ಒಡ್ಡು ತುಂಬಿ ಅಲ್ಲೊಂದು ಬೃಹತ್ ಸರೋವರದಂತೆ ಕಂಗೊಳಿಸುತ್ತಿತ್ತು. ಮುಂದಿನ ಹದಿನೈದೇ ದಿನದಲ್ಲಿ ಅದಕ್ಕೂ ಮಿಕ್ಕಿದ ನೀರು ಕೆಳಜಾರಿ ಎರಡನೇ ಒಡ್ಡೂ ತುಂಬಿಕೊಂಡಿತು. ಅಷ್ಟೇ ಕೆಳಗಿನ ಬಾವಿಯಲ್ಲಿ ನೀರಿಣುಕಲು ಹೆಚ್ಚು ದಿನ ಹಿಡಿಯಲಿಲ್ಲ. ಎಂಥ ನೀರಾವರಿ ಜಮೀನಿನಲ್ಲೂ ಬಾವಿಗಳು ಹಾಗೆ ತುಂಬಿರುವುದಿಲ್ಲ. ಅಷ್ಟೊಂದು ಸಮೃದ್ಧ, ಶುದ್ಧ ಸಟಿಕದಂಥ ನೀರು. ನಾಡಗೌಡರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಇಂದು ಬದುಗಳ ಎರಡೂ ಇಳಿಜಾರಿನ ೧೫ ಎಕರೆಯಲ್ಲಿ ಬೆಳೆಯುತ್ತಿರುವ ದ್ರಾಕ್ಷಿ ದೂರದೂರದ ದೇಶಗಳಿಗೆ ರಫ್ತಾಗುತ್ತಿದೆ. ಥಾಮ್ಸನ್ ಜತೆಗೆ ವೈನ್‌ಗೆ ಬೇಕಾದ ಗರಿಷ್ಠ ಗುಣಮಟ್ಟದ ದ್ರಾಕ್ಷಿಯ ಬೆಳೆ ಪ್ರಯೋಗವೂ ಸಫಲವಾಗಿದೆ. ಬಾವಿಯಲ್ಲಿ ಈಗಲೂ ೩೫ ಅಡಿ ನೀರಿದೆ. ಒಡ್ಡುಗಳಲ್ಲಿ ಶೇ. ೫೦ ರಷ್ಟು ನೀರು ನಿಂತಿದ್ದು, ನಿಧಾನವಾಗಿ ಇಂಗಿ ಬಾವಿಗಿಳಿಯುತ್ತಿದೆ. ‘ಈ ವರ್ಷ ಹೇಗೆ ಮಾಡಿದರೂ ಜಮೀನಿಗೆ ನೀರಿನ ಕೊರತೆಯಾಗುವುದಿಲ್ಲ. ಜತೆಗೆ ಕೃಷಿಯಲ್ಲೂ ನೀರಿನ ಮಿತ ಬಳಕೆಯ ಹಲವು ವಿಧಾನಗಳನ್ನು ಅಳವಡಿಸಿದ್ದೇವೆ. ಮೊದಲ ಬಂಡ್ ತುಂಬ ನೀರು ನಿಂತರೆ ೫ ಕೋಟಿ ಲೀಟರ್ ಸಂಗ್ರಹವಾದಂತಾಗುತ್ತದೆ. ಎರಡೂ ಬಂಡ್ ತುಂಬಿದರೆ ಇಡೀ ೪೦ ಎಕರೆಯಲ್ಲಿ ಬೆಳೆ ತೆಗೆಯುವುದಷ್ಟೇ ಅಲ್ಲ, ಭತ್ತವನ್ನೂ ಬೆಳೆಯಬಹುದಾದಷ್ಟು ನೀರಾಗುತ್ತದೆ’ ಎನ್ನುತ್ತಾರೆ ನಾಡಗೌಡರು.
‘ಈಗಾಗಲೇ ಒಂದು ಕೋಟಿ ಕೈಬಿಟ್ಟಿದೆ. ಅದರಲ್ಲಿ ೭೦ ಲಕ್ಷ ರೂ. ಸಾಲವಿದೆ. ಏನಿಲ್ಲವೆಂದರೂ ಇನ್ನೂ ಹತ್ತು ಲಕ್ಷ ಬೇಕಾಗಬಹುದು. ಆದರೆ, ನೀರೊಂದಿದ್ದರೆ ಬಂಗಾರವನ್ನೇ ಬೆಳೆಯ ರೂಪದಲ್ಲಿ ಕೊಡುವ ಈ ಭೂತಾಯಿಯ ಕೃಪೆಯಿದ್ದರೆ ಮಾಡಿದ ಸಾಲ ತೀರಿಸುವುದು ಒಂದೆರಡು ವರ್ಷಗಳ ಮಾತು. ಖಂಡಿತಾ ಪ್ರೀತಿಸಿ ದುಡಿಯುವ ಮಂದಿಗೆ ಆಕೆ ಮೋಸ ಮಾಡುವುದಿಲ್ಲ’ ಎಂಬ ವಿಶ್ವಾಸದ ನುಡಿ ನಾಡಗೌಡರ ಬಾಯಿಂದ ಹೊರಡುತ್ತದೆ.
ಬಹುಶಃ ಅಂದುಕೊಂಡದ್ದೆಲ್ಲವೂ ಯೋಜಿತ ರೀತಿಯಲ್ಲೇ ಮುಗಿದರೆ ಇನ್ನೆರಡು ಮಳೆಗಾಲದ ಹೊತ್ತಿಗೆ ಜಾಲಗೇರಿಯಲ್ಲೊಂದು ಪುಟ್ಟ ಮಲೆನಾಡೇ ಸೃಷ್ಟಿಯಾಗಿರುತ್ತದೆ. ಮಾತ್ರವಲ್ಲ ನಾಡಗೌಡರ ಸಾಮ್ರಾಜ್ಯದಲ್ಲಿನ ಸಮೃದ್ಧಿಯ ಫಲ ಮುಂದಿನ ಮೂರ್‍ನಾಲ್ಕು ಕಿ.ಮೀ.ವರೆಗಿನ ಜಮೀನಿಗೂ ಸಿಗುವುದರಲ್ಲಿ ಅನುಮಾನವೇ ಇಲ್ಲ. ಅಂಥ ದಿನಗಳಿಗಾಗಿ ಗೌಡರು ಕಾಯುತ್ತಿದ್ದಾರೆ, ಇಂಥ ಇನ್ನೊಂದು ಯೋಜನೆ ಅನುಷ್ಠಾನಕ್ಕೆ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿದ್ದಿರಬೇಕು ಗ್ರಾಮಸೇವಕ ಕುಂಬಾರರು.


‘ಲಾಸ್ಟ್’ಡ್ರಾಪ್: ನಾಡಗೌಡರು ಕಟ್ಟಿದ ಹಸಿರು ಹೊನ್ನಿನ ಸಾಮ್ರಾಜ್ಯದ ಕಥೆಯನ್ನು ಅವರ ಬಾಯಲ್ಲೇ ಕೇಳಬೇಕೆಂದಿದ್ದರೆ ೯೪೪೮೧೨೮೩೯೯, ನಿಮ್ಮ ಮೊಬೈಲ್‌ನಲ್ಲಿ ಈ ಹತ್ತು ಅಂಕಿಗಳನ್ನು ಒತ್ತಿ ಹಲೋ ಎಂದರಾಯಿತು.

No comments: