ಆ ಬೆಟ್ಟದ ನಟ್ಟ ನಡುವೆ ನೀಲಾಕಾಶವನ್ನೇ ನುಂಗಿಕೊಂಡಂತಿರುವ ವಿಶಾಲ ಜಲರಾಶಿಯ ವಜಾಯ ಮೊದಲ ನೋಟದಲ್ಲೇ ನಿಮ್ಮನ್ನು ಸಮ್ಮೋಹನಗೊಳಿಸದಿದ್ದರೆ ದೇವರಾಣೆ. ಕಣ್ಣರಳಿಸಿ ಕೆಕ್ಕರಿಸುವ ಸುಡು ಸೂರ್ಯನಿಗೂ ಸವಾಲೊಡ್ಡಿ ತಂಗಾಳಿಯನ್ನು ತೇಲಿಸಿಕೊಂಡು ಬಂದು ಮೈದಡವುತ್ತಿದ್ದರೆ...ಆಹ್, ಇರವೇ ಮರೆತುಹೋಗಿರುತ್ತದೆ. ಮೊದಲೇ ಮಧುರಾನುಭವ. ಅದಕ್ಕೊಂದು ಪುಟವಿಟ್ಟಂತೆ ಮೆರುಗು ತಂದದ್ದು ಆ ಕೊಳದ ಮೇಲರಳಿ ನಿಂತು ನಗು ಚೆಲ್ಲುವ ತಾವರೆಗಳ ಸಮೂಹ. ಕೊಳದಲ್ಲೇ ರಾಸಕ್ಕಿಳಿದ ಹಕ್ಕಿಗಳ ಹಿಂಡು. ಮೈಮರೆತು ಮಲಗಿರುವ ಪ್ರಕೃತಿಯ ಮಡಿಲಲ್ಲಿ ಮಗುವಾಗಿ ಹುದುಗಿ ಹೋದ ಭಾವನೆ.
ಹೆಸರೇ ತಾವರೆಗೆರೆ. ಮುಗಿಲಗಲಕ್ಕೆ ಪೈಪೋಟಿಗಿಳಿದ, ಬಾನೆತ್ತರಕ್ಕೆ ಏರಿ ನಿಂತ ಬೆಟ್ಟದ ನೆತ್ತಿಯಲ್ಲಿ ನಿಂತು ನಗುವ ಕಾವ್ಯಕನ್ನಿಕೆಯವಳು. ಅದೇ ವಿಶೇಷ. ಬೆಟ್ಟ ಸಾಲುಗಳ ಮೇಲೆ ಸುರಿದು, ಅವುಗಳ ಮೈಯ್ಯಗುಂಟ ಜಾರಿ ಬರುವ ಮಳೆ ಹನಿಗಳ ಹಾಯಗೊಡದೇ ತಟದಲ್ಲಿ ತಡೆದು ನಿಲ್ಲಿಸಿಕೊಂಡು ತನಿಯಾಗಿ ಎರೆಯುವ ಕೆರೆಗಳೇನೂ ನಮಗೆ ಹೊಸದಲ್ಲ. ತಲೆಗೆ ಸುರಿದದ್ದು ಕಾಲಿಗಿಳಿಯಲೇಬೇಕೆಂಬುದು ನಿಯಮ. ಆದರೆ ಅಂಥವೆಲ್ಲಕ್ಕೆ ಅಪವಾದ ಈ ತಾವರೆಗೆರೆ. ಶಿವನ ಜಟೆಯ ಜಡಕಲ್ಲಿ ಸಿಲುಕಿ, ಅಲ್ಲೇ ಬಂದಿಯಾಗಿ ಬಗ್ಗಿ ನೋಡುವ ಗಂಗೆಯಂತೆ, ಸುರಪುರದ ಮಗ್ಗುಲಿಗೇ ಇರುವ ಆ ಮೇರುವಿನ ಮೇಲೆ ತಣ್ಣನೆಯ ಸ್ವರ್ಗ ನಿರ್ಮಿಸಿದ ಜಲ ಹರವದು.
ಆ ಬೆಟ್ಟವಾದರೂ ಎಂಥದ್ದು ? ಏರಿದಷ್ಟೂ ಏದುಸಿರ ತರುವ ಅದರ ಬೃಹದಾಕಾರದೆದುರು ಮನುಷ್ಯ ಇನ್ನಿಲ್ಲದಂತೆ ಕುಬ್ಜನಾಗಿ ಹೋಗಿರುತ್ತಾನೆ. ಅದರ ನೆತ್ತಿಯ ಮೇಲೆ ಮೈದಾಳಿ ಮೈಲುಗಳವರೆಗೆ ಕಾಣಿಸಿಕೊಳ್ಳುವ ಐತಿಹಾಸಿಕ ಕೋಟೆ, ಒಮ್ಮೆ ಒಳಹೊಕ್ಕು ನೋಡಿಯೇ ಬರಬೇಕೆಂಬ ಅದಮ್ಯ ಬಯಕೆಯನ್ನು ಉದ್ದೀಪಿಸುತ್ತದೆ. ಹಾಗೊಮ್ಮೆ ನಿರ್ಧಾರಕ್ಕೆ ಬಂದು ಬೆವರೊರೆಸಿಕೊಳ್ಳುತ್ತ ಬುಡದಿಂದ ಕಾಲು ಹಾದಿಯಲ್ಲಿ ಹತ್ತಲಾರಂಭಿಸಿದರೆ ಉದ್ದಕ್ಕೂ ಜುಳು ಜುಳು ನಿನಾದ. ಕಂಡೂ ಕಾಣದಂತಿರುವ ನೀರ ಸೆಲೆ, ಕಲ್ಲುಗಳ ನಡುವೆ ನುಸುಳುತ್ತ, ಪುಟ್ಟ ಕುವರಿಯಂತೆ ಅಲ್ಲಲ್ಲಿ ನೆಗೆಯುತ್ತ, ಹಬ್ಬಿ ನಿಂತಿರುವ ಹಸಿರು ಕರವೀರದ ಪೊದೆಗಳಲ್ಲಿ ಕಣ್ಣಾಮುಚ್ಚಾಲೆಯಾಡುತ್ತ ಸಾಹಸಿಗರ ಆಯಾಸ ಮರೆಸುತ್ತದೆ. ತೀರಾ ಬಾಯಾರಿ ಬಸವಳಿದು ಬಂದಾಗ ಬೊಗಸೆಯೊಡ್ಡಿ ಹಿಡಿದು ಬಾಯಿಗಿಟ್ಟುಕೊಳ್ಳಬೇಕು. ಜೇನ ಹನಿಯನ್ನೂ ನಾಚಿಸುವ ಸವಿ ಎಂದರೆ, ಅದು ಖಂಡಿತಾ ಉತ್ಪ್ರೇಕ್ಷೆಯಲ್ಲ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಇಡೀ ಬೆಟ್ಟವನ್ನಾವರಿಸಿಕೊಂಡು ನಿಂತಿರುವ ಅಪರೂಪದ ಸಸ್ಯ ವೈವಿಧ್ಯ, ಕುರುಚಲು ಪೊದೆಗಳಲ್ಲಿ ಅಡಗಿ ಕುಳಿತಿರುವ ಔಷಯ ಅಂಶಗಳನ್ನು ಬಳಸಿಕೊಂಡು ಬರುವ ನೀರಿಗೆ ಅಂಥ ಅಮೃತದ ಗುಣ ಬಂದಿದ್ದರೆ ಅದು ಸಹಜ.
ಹಾಗೆ ಸಾವರಿಸಿಕೊಂಡು ಮತ್ತಷ್ಟು ದೂರ ಸಾಗಿದರೆ ಹಸಿವು ಕಾಡೀತು. ಚಿಂತೆ ಬೇಡವೇ ಬೇಡ. ಸೀತಾಫಲದ ಸಮೃದ್ಧ ಸೇವನೆಗೆ ನಯಾಪೈಸೆಯನ್ನೂ ಖರ್ಚು ಮಾಡಬೇಕಿಲ್ಲ. ನಿಸರ್ಗಮಾತೆಯ ನೈಜ ಆತಿಥ್ಯವದು. ಕಳಿತ ಹಣ್ಣುಗಳನ್ನು ಆಯ್ದು ಕೊಯ್ದುಕೊಳ್ಳುವುದೊಂದೇ ನಿಮಗಿರುವ ಕೆಲಸ. ತೊಳೆತೊಳೆಗಳ ಬಿಡಿಸಿ ಬಾಯ್ಗಿಟ್ಟುಕೊಳ್ಳುತ್ತ ಹತ್ತುವ ಹೊತ್ತಿಗೆ ತಂಗಾಳಿ ಅದೆಲ್ಲಿಂದಲೋ ಮೈದಡವಲಾರಂಭಿಸುತ್ತದೆ. ಅದರ ಬೆನ್ನು ಹತ್ತಿ ಮುಂದೆ ಇಣುಕಿದರೆ ಅದೇ, ಅದೇ ತಾವರೆಗೆರೆ.
ಸುತ್ತ ಒಮ್ಮೆ ಕಣ್ಣಾಡಿಸಿದರೆ ಎಷ್ಟು ಎತ್ತರಕ್ಕೆ ಏರಿ ಬಂದಿರಬಹುದೆಂಬ ಅಂದಾಜು ಸಿಗಲು ಹೆಚ್ಚು ಹೊತ್ತು ಬೇಕಾಗುವುದಿಲ್ಲ. ಬದುಕಿನ ಜಂಜಡಗಳೆಲ್ಲವನ್ನೂ ಮೀರಿ ಅಧ್ಯಾತ್ಮದಂಚಿಗೆ ಬಂದು ನಿಂತ ಅನುಭೂತಿ. ಜೀವದ ಅಣು ಅಣುಗಳಲ್ಲೂ ಅದೆಂಥದೋ ಅವ್ಯಕ್ತ ಸಂತಸ ಚಿಮ್ಮಲಾರಂಭಿಸುತ್ತದೆ. ಅದೇ ಕ್ಷಣದಲ್ಲಿ, ಅಷ್ಟು ಎತ್ತರದಲ್ಲಿ ಆ ಪರಿಯ ನೀರ ನಿರಕಿಸಿದ ಪಾರಂಪರಿಕ ಜ್ಞಾನದ ಬಗೆಗೊಂದು ಬೆರಗು ನಿಮಗೆ ಗೊತ್ತಿಲ್ಲದಂತೆಯೇ ನಿಮ್ಮ ಮನದಲ್ಲಿ ಸುಳಿದು ಹೋಗುತ್ತದೆ. ಅಬ್ಬಾ, ಅದೆಂಥ ಅದಮ್ಯ ವಿಶ್ವಾಸ, ಅದೆಷ್ಟು ಖಚಿತ ತಂತ್ರಜ್ಞಾನ, ಆ ಅಚ್ಚುಕಟ್ಟುತನ, ಆ ನೈಪುಣ್ಯ, ಅಂಥ ಸುಸ್ಥಿರತೆ, ಮುಂದಿನ ಹತ್ತು ತಲೆಮಾರುಗಳವರೆಗೂ ಅಳಿಯದೇ ಉಳಿಯಬೇಕೆಂಬ ದೂರಾಲೋಚನೆ... ಒಂದಕ್ಕಿಂತ ಒಂದು ಅಚ್ಚರಿಗಳ ಸಾಲು ಸಾಲು ಆಕ್ರಮಣಕ್ಕೆ ತೊಡಗುತ್ತದೆ. ಸೂಕ್ಷ್ಮ ಅವಲೋಕನಕ್ಕಿಳಿದರೆ ಆ ನೆಲಮೂಲದ ಜ್ಞಾನದ ಬಗ್ಗೆ ಹೆಮ್ಮೆ ಎನಿಸುತ್ತದೆ.
ಇಷ್ಟೆಲ್ಲ ಆಹ್ಲಾದ, ಆಸ್ವಾದ, ಅಚ್ಚರಿಗಳ ಮೂಲವಾಗಿ ನಿಂತವರು ಗುಲ್ಬರ್ಗ ಸಮೀಪದ ಸುರಪುರದ ಗೋಸಲು ವಂಶದ ಅರಸರು. ೧೬೩೬ರಿಂದ ೧೮೫೮ರ ವರೆಗೆ ಈ ಭಾಗದಲ್ಲಿ ಪುಟ್ಟ ಸಾಮ್ರಾಜ್ಯವನ್ನು ಕಟ್ಟಿ ಸಮರ್ಥವಾಗಿ ಆಳಿ ಹೋದ ಸಗರ ದೊರೆಗಳು ಕ್ಷಾತ್ರ ತೇಜಸ್ಸಿನಿಂದಲೂ ಸುಪ್ರಸಿದ್ಧ. ಅದಕ್ಕಿಂತಲೂ ಆ ಕಾಲದಲ್ಲೇ ಅವರು ಅಂಥ ಬಿರುಬಿಸಿಲ ನೆಲದಲ್ಲೂ ಅನುಷ್ಠಾನಗೊಳಿಸಿದ್ದ ಜಲ ಸಂರಕ್ಷಣಾ ಪದ್ಧತಿಗಳು ವಂಶದ ಹೆಸರನ್ನೇ ಹಸಿರಾಗಿಟ್ಟಿದೆ. ನೀರಿನ ಬಗೆಗೆ ಅವರಿಗಿದ್ದ ಅಪೂರ್ವ ಜ್ಞಾನಕ್ಕೆ ಜೋಡಿ ತಾವರೆಕೆರೆ, ಅದರ ಸನಿಹಕ್ಕೆ ಇರುವ ಸುರಪುರದ ಕೋಟೆಯೊಳಗಣ ಮೌನೇಶ್ವರ ಕೊಳ, ಮಂದಾಕಿನೀ ತೀರ್ಥ, ಆನೆ ಹೊಂಡಗಳೇ ಸಾಕ್ಷಿ.
ಗಡ್ಡಿ ಪಿಡ್ಡನಾಯಕನೆಂಬುವವನಿಂದ ಸ್ಥಾಪನೆಗೊಂಡ ಸಗರ ಸಾಮ್ರಾಜ್ಯದೆಲ್ಲೆಡೆ ಅತ್ಯುತ್ತಮ ನೀರಾವರಿ ವ್ಯವಸ್ಥೆಯಿದ್ದ ಕುರುಹುಗಳು ಕಂಡು ಬರುತ್ತವೆ. ಇಂದಿನ ಗುಲ್ಬರ್ಗ ಜಿಲ್ಲೆಗೆ ಸೇರಿದ ಸುರಪುರ, ಶಹಾಪುರ ಮತ್ತು ಜೇವರ್ಗಿ ಈ ಮೂರೂ ತಾಲೂಕುಗಳ ಗಡಿಯಾದ ಕೃಷ್ಣಾ, ಭೀಮಾ ನದಿಗಳ ಹರಿವಿನ ವ್ಯಾಪ್ತಿಯೊಳಗಿನ ಪ್ರದೇಶವನ್ನು ಸಗರ ನಾಡೆಂದು ಗುರುತಿಸಿದರೆ, ತಾವರೆಗೆರೆ ಹಾಗೂ ಪಕ್ಕದ ಕೋಟೆ ಅದರ ಉಚ್ಛ್ರಾಯ ಸ್ಥಿತಿಯ ದ್ಯೋತಕ. ಮೂಲತಃ ಬೇಡ ವಂಶದವರಾದ ಸಗರ ಅರಸರಲ್ಲಿ ಮುಮ್ಮಡಿ ಪಾಮನಾಯಕ ಹಾಗೂ ನಾಲ್ವಡಿ ವೆಂಕಟಪ್ಪ ನಾಯಕರು ಸುಪ್ರಸಿದ್ಧರು. ೧೬೩೬ರ ಸುಮಾರಿಗೆ ಸಾಮ್ರಾಜ್ಯ ಸ್ಥಾಪನೆಯ ಸಂದರ್ಭದಲ್ಲೇ ಕೋಟೆಯನ್ನು ಕಟ್ಟಿಸಿದ ದಾಖಲೆಗಳು ಸಿಗುತ್ತವಾದರೂ ಕೆರೆಯ ನಿರ್ಮಾಣದ ಬಗೆಗೆ ಖಚಿತತೆ ಇಲ್ಲ. ಆದರೂ ಕಿಲ್ಲೆಯೊಂದಿಗೇ ಕೆರೆಯ ನಿರ್ಮಾಣವೂ ಆಗಿರುವ ಸಾಧ್ಯತೆ ಇದೆ.
‘ವಾಗಿನಗಿರಿ’ಯೆಂಬ ಐತಿಹಾಸಿಕ ಹೆಸರಿನೊಂದಿಗೆ ಗುರುತಿಸುವ ಕೋಟೆಯೊಳಗೆ ವ್ಯವಸ್ಥಿತ ನಗರವಿದ್ದ ಕುರುಹುಗಳು ಇಂದಿಗೂ ಕಂಡುಬರುತ್ತದೆ. ವಿಶಾಲ ಅರಮನೆ ಗತವೈಭವದ ಪ್ರತೀಕ. ೫೦೦ ಕುದುರೆ, ೪ ಸಾವಿರ ಕಾಲಾಳುಗಳನ್ನೊಳಗೊಂಡ ಶಸ್ತ್ರ ಸಜ್ಜಿತ ಸೈನ್ಯ ಕೋಟೆಯ ಕಾವಲಿಗಿತ್ತೆನ್ನುತ್ತದೆ ಇತಿಹಾಸ. ರಾಜನ ಜತೆ ೩೭ ಪ್ರಮುಖರು, ೬ ಸಾವಿರ ಬೇಡರು, ೩ ಸಾವಿರ ಗೊಲ್ಲರು ಈ ಕೋಟೆಯೊಳಗಣ ನಗರದಲ್ಲಿದ್ದರೆನ್ನಲಾಗಿದೆ. ಇಷ್ಟೂ ಜನವಸತಿ, ಅವರ ಕುಟುಂಬದ ದೈನಂದಿನ ಬಳಕೆಗೆ ಬೆಟ್ಟದ ಮೇಲಿನ ಆ ಪುಟ್ಟ ಪ್ರದೇಶದಲ್ಲಿ ವರ್ಷವಿಡೀ ನೀರಿನ ಪೂರೈಕೆ ಸಣ್ಣ ಮಾತೇನೂ ಆಗಿರಲಿಲ್ಲ. ಆದರೆ ಆ ಕೆರೆಯ ಅಗಾಧತೆ, ಅದರ ನಿರ್ಮಾಣದಲ್ಲಿನ ಜಾಣ್ಮೆಯನ್ನು ಕಂಡಾಗ ಎಷ್ಟೇ ಜನರಿದ್ದರೂ, ಯಾವ ಕಾಲಕ್ಕೂ ನೀರು ಸಮಸ್ಯೆಯೇ ಅಲ್ಲವೆನ್ನುವುದು ದೃಢಗೊಳ್ಳುತ್ತದೆ. ಸುತ್ತಲಿನ ಬೆಟ್ಟ ಸಾಲುಗಳ ಮೇಲೆ ಬಿದ್ದ ಮಳೆ ನೀರೆಲ್ಲವೂ ಅನಾಯಾಸವಾಗಿ ಕೆರೆಯಂಗಳಕ್ಕೇ ಬಂದು ಸೇರುವಂತೆ ಎಚ್ಚರಿಕೆಯಿಂದ ಸೂಕ್ತ ಜಾಗದ ಆಯ್ಕೆ ಮಾಡಲಾಗಿದೆ. ಒಂದೊಮ್ಮೆ ವರ್ಷಗಳವರೆಗೆ ಮಳೆ ಬಾರದಿದ್ದಲ್ಲಿ ದೊಡ್ಡ ಕೆರೆಯ ಮೇಲ್ಭಾಗ ಒಣಗಿದರೂ ಅಂತರ್ಜಲಕ್ಕೆ ಧಕ್ಕೆಯಾಗದಂತೆ ಕೆರೆಯನ್ನು ಇಳಿಜಾರಾಗಿ ನಿರ್ಮಿಸಲಾಗಿದೆ. ಒಡಲಾಳದಲ್ಲಿ ಇಂಗಿದ ನೀರು ಗುಡ್ಡದ ಒಂದು ಪಕ್ಕಕ್ಕೆ ಜಾರಿ ಹಾದಿಯ ಉದ್ದಕ್ಕೂ ಪುಟ್ಟ ಸೆಲೆಯಾಗಿ ಜಿನುಗುತ್ತಿರುತ್ತದೆ. ಕೊನೆಯಲ್ಲಿ ಬೆಟ್ಟದ ತಪ್ಪಲಿನಲ್ಲಿ ಬಂದು ಶೇಖರಣೆಗೊಳ್ಳುತ್ತದೆ. ದೊಡ್ಡ ಕೆರೆಯ ಪಕ್ಕದಲ್ಲೇ ಇನ್ನೊಂದು, ತಾವರೆಗೆರೆಯ ಪುಟ್ಟ ಪ್ರತಿರೂಪವಿದೆ. ಆಪತ್ಕಾಲದ ನೀರಾಗಿ ಇದು ಬಳಕೆಯಾಗುತ್ತಿರುವ ಸಾಧ್ಯತೆ ಇದೆ.
ಇದಕ್ಕಿಂತಲೂ ಗಮನ ಸೆಳೆಯುವ ಅಂಶವೆಂದರೆ ಕೋಟೆಯೊಳಗೆ ಸಂಪೂರ್ಣ ಶಿಲಾಮಯವಾದ ಪ್ರದೇಶದಲ್ಲಿ ತಣ್ಣಗೆ ಕುಳಿತ ಮಂದಾಕಿನಿ ತೀರ್ಥ. ಬಂಡೆಯನ್ನೇ ಕೊರೆದು ಪುಟ್ಟ ಕೊಳದ ಆಕೃತಿಯನ್ನು ನಿರ್ಮಿಸಲಾಗಿದೆ. ಕೋಟೆಯ ಒಳಭಾಗದಲ್ಲಿ ಬಿದ್ದ ಮಳೆ ನೀರೆಲ್ಲವೂ ಬಂಡೆಗಳ ಸೂಕ್ಷ್ಮ ರಂಧ್ರಗಳಲ್ಲಿ ಇಂಗಿ ಈ ಕೊಳದ ಒಡಲಲ್ಲಿ ಶೇಖರಗೊಳ್ಳುವಂತೆ ಮಾಡಲಾಗಿದೆ. ಹೆಚ್ಚುವರಿ ನೀರು ಸಹ ಹೊರಗೆಲ್ಲೂ ಜಾರಿ ಹೋಗದಂತೆ ಜಾಗ್ರತೆ ವಹಿಸಲಾಗಿದೆ. ಪಕ್ಕದಲ್ಲೇ ಹನುಮಂತ ದೇವರಗುಡಿಯಿದ್ದು ನೀರಿನ ಪಾವಿತ್ರ್ಯವನ್ನು ಹೆಚ್ಚಿಸಿದೆ. ಇಂದಿಗೂ ಕೊಳದ ತುಂಬ ನೀರು ಲಾಸ್ಯವಾಡುತ್ತದೆ. ಇಷ್ಟೇ ಅಲ್ಲ. ಕೋಟೆಯ ಸುತ್ತಲೂ ಕಲ್ಲಿನ ಗೋಡೆಯ ಮೇಲೆ, ಬಂಡೆಗಳ ಗುಂಟ ಇಳಿದು ಬರುವ ನೀರು ವ್ಯರ್ಥವಾಗದಂತೆ ತಡೆದು ಅಲ್ಲಿ ಕೊರೆದು ಪುಟ್ಟ ಪುಟ್ಟ ಕಾಲುವೆಗಳನ್ನು ರಚಿಸಿ ಒಂದೆಡೆ ನಿಲ್ಲುವಂತೆ ಮಾಡಲಾಗಿದೆ. ಒಂದೇ, ಎರಡೇ... ಮಳೆ ನೀರುಕೊಯ್ಲಿನ ಸಮರ್ಥ ಮಾದರಿಯಾಗಿ ಇಡೀ ಕೋಟೆಯಾವರಣ ನಿಲ್ಲುತ್ತದೆ.
ಕೋಟೆಯೆಲ್ಲ ಸುತ್ತಾಡಿ ಬಂದರೆ ಒಂದು ಪಾರ್ಶ್ವದಲ್ಲಿ ಕಣ್ಸೆಳೆಯುವಂತೆ ಮಾಡುವುದು ಆನೆ ಹೊಂಡ. ಸೈನ್ಯದಲ್ಲಿದ್ದ ಸದೃಢ ಗಜ ದಳಕ್ಕೆ ನೀರು ಪೂರೈಸುವ ದೃಷ್ಟಿಯಿಂದಲೇ ಸುಮಾರು ಇಪ್ಪತ್ತು ಅಡಿ ಉದ್ದ ಹತ್ತು ಅಡಿ ಅಗಲದ ಕೊಳ ಮಾಡಲಾಗಿದೆ. ಮೂವತ್ತಕ್ಕೂ ಹೆಚ್ಚು ಅಡಿ ಆಳವಿರುವ ಈ ಕೊಳದಲ್ಲಿ ಇಂದಿಗೂ ಮುಕ್ಕಾಲುಭಾಗ ನೀರು ನಿಂತಿದೆ.
ಇಷ್ಟೆಲ್ಲಕ್ಕೂ ಜಲಮೂಲ ಮಳೆ ಎಂದರೆ ಅಚ್ಚರಿಪಡಬೇಕಿಲ್ಲ. ಆ ಪ್ರದೇಶದ ಮಳೆ ಸರಾಸರಿ, ಭೂ ಲಕ್ಷಣ ಇತ್ಯಾದಿ ಎಲ್ಲ ಅಂಶಗಳನ್ನು ಪರಿಗಣಿಸಿ ಕರಾರುವಾಕ್ ಲೆಕ್ಕಾಚಾರದಲ್ಲಿ ಈ ಎಲ್ಲವನ್ನೂ ನಿರ್ಮಿಸಿರುವುದು ಕಂಡಾಗ ಅಂದಿನ ಅರಸರಲ್ಲಿ ಇರಬಹುದಾದ ಜ್ಞಾನ ಸಂಪತ್ತಿನ ಬಗೆಗೆ ಹೆಮ್ಮೆ ಮೂಡದೇ ಇರದು. ಮೂರು ಶತಮಾನಗಳ ಬಳಿಕವೂ, ಇಂದಿನ ಬೃಹತ್ ನೀರಾವರಿ ಯೋಜನೆಗಳ ಅಬ್ಬರದ ನಡುವೆಯೂ ಸಾಟಿಯಿಲ್ಲದೇ ನಿಂತಿರುವ ಪಾರಂಪರಿಕ ಈ ನೀರ ಜ್ಞಾನವನ್ನು ಸಂರಕ್ಷಿಸಿಕೊಂಡು ಹೋಗುವುದರ ಜತೆಗೆ ಹೆಚ್ಚಿನ ಅಧ್ಯಯನಕ್ಕೆ ಮುಂದಾದಲ್ಲಿ ಗುಲ್ಬರ್ಗದಂಥ ಜಿಲ್ಲೆಗಳ ಹಲವು ಸಮಸ್ಯೆಗಳಿಗೆ ಪರಿಹಾರದ ಹೊಳಹು ಕಾಣುವುದರಲ್ಲಿ ಸಂಶಯವಿಲ್ಲ. ಹ್ಯಾಟ್ಸ್ ಆಫ್ ಸಗರ ನಾಯಕರೇ !
‘ಲಾಸ್ಟ್’ಡ್ರಾಪ್: ನೀರೆಂದರೆ ಅದು ಪ್ರೀತಿಯ ಸೆಲೆ. ಪ್ರವಹಿಸುವುದು ಅದರ ಹುಟ್ಟುಗುಣ. ಹಂಚಿದಷ್ಟೂ ಹೆಚ್ಚೀತು ಸವಿ. ಗೌರವಿಸಿದರೆ ಗರ್ವ. ನಿರ್ಲಕ್ಷಿಸಿದರೆ ನಿರ್ನಾಮ.
ಸಮ್ಮನಸ್ಸಿಗೆ ಶರಣು
3 months ago
1 comment:
ರಾಧಾಕೃಷ್ಣ ಅವರೆ ನಮ್ಮೂರ ತಾವರೆಕೆರೆಯ ಬಗ್ಗೆ ಬರೆದಿದ್ದೀರಿ ಓದಿ ಬಹಳ ಖುಷಿಯಾಯಿತು. ಬಾಲ್ಯದ ನೆನಪುಗಳು ಮರುಕಳಿಸಿದವು. ತಾವರೆಕೆರೆಯ ದಂಡೆಯ ಮೇಲೆ ಕುಳಿತು ಸೀತಾಫಲ ತಿಂದದ್ದು, ಊಟ ಮಾಡಿದ್ದು, ಪಿಕ್‌ನಿಕ್ ಹೋದ ನೆನಪು ಹಚ್ಚಹಸಿರು. ಬಳಸಿರುವ ಚಿತ್ರ ತಾವರೆಕೆರೆಯದ್ದೇ ನೀಡಿರುವ ವಿವರ ಕೂಡ. ಸ್ಥಳದ ವಿವರಣೆ ಕೂಡ ಶಹಾಪುರದ ಬೆಟ್ಟ, ಕೋಟೆಗಳನ್ನು ಹೋಲುತ್ತದೆಯೇ ಹೊರತು ಸುರಪುರದ್ದಲ್ಲ. ಶಹಾಪುರ- ಸುರಪುರ ಕನ್ ಫ್ಯೂಸ್ ಆಯಿತಾ?
ಅಫ್‌ಕೋರ್ಸ್ ಶಹಾಪುರ ಕೋಟೆಯ ಉಸ್ತುವಾರಿ ಸುರಪುರ ಅರಸರದ್ದು ಆಗಿತ್ತು.
ದೇವು ಪತ್ತಾರ
Post a Comment