Saturday, December 27, 2008

ನೀರ ನೆಮ್ಮದಿಗೆ ಬೇಕು ರಾಷ್ಟ್ರೀಯ ನೀತಿ

ಜೀವನದ ಸಾಧ್ಯತೆಗಳ ವಿಸ್ತರಣೆಗೆ ತೀರಾ ಅಡ್ಡಿಯಾಗಿ ನಿಂತಿರುವ ಪ್ರಮುಖ ಸಂಗತಿಯೆಂದರೆ ನೀರು. ವಿಶ್ವ ಜನ ಸಮುದಾಯ ಎದುರಿಸುತ್ತಿರುವ ಬಡತನ, ಅನಕ್ಷರತೆ, ಸಾಂಕ್ರಾಮಿಕ ರೋಗಗಳು, ಭಯೋತ್ಪಾದನೆ, ಯುದ್ಧ ಭೀತಿಯಂಥ ಹತ್ತು ಹಲವು ಸಮಸ್ಯೆ ಆತಂಕಗಳನ್ನು ಮೀರಿ ನಿಂತಿರುವುದು ಇಂದು ನೀರಿನ ಕೊರತೆ. ಮೂಲಭೂತ ಮಾನವ ಸ್ವಾತಂತ್ರ್ಯಕ್ಕೇ ನೀರಿನ ಸಮಸ್ಯೆ ಧಕ್ಕೆ ತರುತ್ತಿದೆ ಎಂಬ ಸಂಗತಿ ನಮಗೆ ಅರ್ಥವಾಗುತ್ತಿದೆಯೇ ?
ನೀರಿನ ಸಮಸ್ಯೆಗೆ ಮಾನವೀಯ ಮುಖವೊಂದಿದೆ ಎಂಬುದನ್ನು ನಾವು ಮರೆತು ಬಿಡುತ್ತಿ ದ್ದೇವೆ. ನೀರನ್ನು ಪಕ್ಕದ ಬಡಾವಣೆಗೆ ಹೋಗಿಯಾ ದರೂ ತರಬಹುದಲ್ಲ. ಹಾಗಾದರೂ ಸಿಗುತ್ತದಲ್ಲ ಎಂದು ಹೇಳುವುದು ಸುಲಭ. ಆದರೆ ಹಾಗೆ ನೀರು ತರಲಿಕ್ಕಾಗಿಯೇ ಅದೆಷ್ಟೊ ಕೊಳಚೆ ಪ್ರದೇಶದ ಮಕ್ಕ ಳನ್ನು ಶಾಲೆಯಿಂದ ದೂರವಿಡಲಾಗುತ್ತಿದೆ. ಅದೆಷ್ಟೊ ಮಕ್ಕಳು ತಮ್ಮ ಮನೆಯವರಿಂದಲೇ "ಬಾಲ ಕಾರ್ಮಿಕರ’ ಪಟ್ಟ ಕಟ್ಟಿಸಿಕೊಂಡು ಶೋಷಣೆಗೊಳಗಾಗುತ್ತಿವೆ. ಇದನ್ನು ಪ್ರಶ್ನಿಸಿ ಹಿಂಸೆಯನ್ನನುಭವಿಸುತ್ತಿವೆ. ಇದು ನಿಜ ವಾಗಿ ಆ ಮಕ್ಕಳ ಮೂಲಭೂತ ಹಕ್ಕಿನ ಉಲ್ಲಂಘನೆ ಯಲ್ಲವೇ ? ಅದರ ಹೊಣೆ ಹೊರಲು ಸಮಾಜ, ಸರಕಾರಗಳು ಸಿದ್ಧವಿವೆಯೆ?
ನಂಬಲೇಬೇಕು. ಇಂದು ಜಗತ್ತಿನ ಎಷ್ಟೋ ಕೊಳೆಗೇರಿ, ಹಳ್ಳಿ, ನಗರದ ಅದೆಷ್ಟೋ ಬಡಾವಣೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಸರಾಸರಿ ಪ್ರತಿವ್ಯಕ್ತಿಗೆ, ಪ್ರತಿದಿನವೂ ಒಂದು ಬಕೆಟ್ ನೀರು ಸಿಗುವುದೂ ಕಷ್ಟ ಎಂಬಂಥ ಪರಿಸ್ಥಿತಿ ಇದೆ. ಈ ದೇಶದ ಬಡವರಿಗೆ ಹಸಿವನ್ನು ‘ಜಯಿಸಿ’ ಹೇಗೆ ಅಭ್ಯಾಸವಾಗಿ ಹೋಗಿದೆಯೋ ಹಾಗೆಯೇ ನೀರಿನ ಸಮಸ್ಯೆಯ ಜತೆಗೂ ಗುದ್ದಾಡಿ ರೂಢಿಯಾಗಿ ಬಿಟ್ಟಿದೆ. ಹೀಗಾಗಿ, ಅವರಾರೂ ದನಿಯೆತ್ತುತ್ತಿಲ್ಲ.
ಸಣ್ಣ ಲೆಕ್ಕಾಚಾರ. ಬೆಂಗಳೂರಿನ ಒಂದು ಕೊಳೆಗೇರಿಯಲ್ಲಿ ಐವತ್ತು ಮನೆಗಳಿವೆ ಎಂದುಕೊಳ್ಳೋಣ. ಪ್ರತಿ ಮನೆಯಲ್ಲಿ ಸರಾಸರಿ ಐದು ಮಂದಿಯೆಂದರೆ ಒಟ್ಟು ಇನ್ನೂರೈವತ್ತು ಮಂದಿ ಆ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಾರೆ. ಅಷ್ಟು ಜನಕ್ಕೆ ಕನಿಷ್ಠ ತಲಾ ೨೦ ಲೀಟರ್ ಎಂದರೆ ಪ್ರತಿ ದಿನ ೫ ಸಾವಿರ ಲೀಟರ್ ನೀರು ಆ ಬಡಾವಣೆಗೆ ಪೂರೈಕೆಯಾಗಬೇಕು. ಆದರೆ ಬೆಂಗಳೂರಿನ ಎಷ್ಟೊ ಕೊಳೆಗೇರಿಗೆ ನೀರಿನ ಸಂಪರ್ಕವೇ ಇಲ್ಲ. ಬೋರ್‌ವೆಲ್‌ಗಳು, ಬಾವಿಗಳಂತೂ ದೂರದ ಮಾತಾಯಿತು. ಇನ್ನು ಐದು ಸಾವಿರ ಲೀಟರ್ ನೀರು ಅವರಿಗೆ ಹೇಗೆ ದಕ್ಕೀತು?
‘ನೀರು’ ಮಾನವ ಅಭಿವೃದ್ಧಿಯ ಪಂಚಾಂಗ ಕಲ್ಲು ಇದ್ದಂತೆ. ನೀರಿನ ಕೊರತೆ ಎಂಬುದು ಕೇವಲ ಭೌತಿಕ ಸ್ವರೂಪದಲ್ಲಷ್ಟೇ ಉಳಿದಿಲ್ಲ. ಬದಲಾಗಿ ಅದು ಅಸಮಾನತೆ, ಬಡತನದಂಥ ಹತ್ತಾರು ಸಂಕಷ್ಟಗಳಿಗೆ ಪರೋಕ್ಷವಾಗಿ ನಮ್ಮನ್ನು ದೂಡುತ್ತಿದೆ. ವಿಶ್ವದ ಪ್ರತಿ ಆರು ಮಂದಿಯಲ್ಲಿ ಒಬ್ಬ, ಶುದ್ಧ ಹಾಗೂ ಅಗತ್ಯ ಪ್ರಮಾಣದ ನೀರಿನಿಂದ ವಂಚಿತನಾಗುತ್ತಿದ್ದಾನೆ.
ವಿಶ್ವದಲ್ಲಿ ಪ್ರತಿ ವರ್ಷ ೨ ದಶಲಕ್ಷ ಮಕ್ಕಳು ನೀರಿನಿಂದ ಬರುವ ಅತಿಸಾರದಂಥ ರೋಗಗಳಿಗೆ ತುತ್ತಾಗಿ ಸಾಯುತ್ತಿದ್ದಾರೆ. ಭಾರತವೊಂದರಲ್ಲೇ ವರ್ಷಕ್ಕೆ ೪.೫೦ ಲಕ್ಷ ಮಕ್ಕಳನ್ನು ಅತಿಸಾರ ಬಲಿ ತೆಗೆದುಕೊಳ್ಳುತ್ತಿದೆ. ವ್ಯಾಪಕ ನಗರೀಕರಣ, ಕೈಗಾರಿಕಾ ಬೆಳವಣಿಗೆ ನೀರಿಗಾಗಿನ ಪೈಪೋಟಿಯನ್ನು ಹೆಚ್ಚಿಸಿದೆ. ಇದೇ ಪರಿಸ್ಥಿತಿ ಮುಂದುವರಿದರೆ ೨೦೫೦ರ ವೇಳೆಗೆ ದಕ್ಷಿಣ ಏಷ್ಯಾದಲ್ಲಿನ ಕೃಷಿಯೇ ತರ ವಲಯದ ನೀರಿನ ಬೇಡಿಕೆ ಇಂದಿಗಿಂತ ಎಂಟು ಪಟ್ಟು ಹೆಚ್ಚಲಿದೆ.
ವಿಚಿತ್ರವೆಂದರೆ ನಗರ ಪ್ರದೇಶದ ಬಡವರ್ಗದವರು ಕಡಿಮೆ ನೀರನ್ನು ಪಡೆಯುತ್ತಿದ್ದರೂ ಅದಕ್ಕಾಗಿ ಹೆಚ್ಚಿನ ಹಣ ತೆರುತ್ತಿದ್ದಾರೆ. ಅತಿ ಹೆಚ್ಚು ಬಳಕೆ ಮಾಡುತ್ತಿರುವ ಶ್ರೀಮಂತ ವರ್ಗದ ಮಂದಿ ಅತಿ ಕಡಿಮೆ ಬೆಲೆಯಲ್ಲಿ ನೀರು ಪಡೆಯುತ್ತಿದ್ದಾರೆ. ಬೆಂಗಳೂರಿನ ನಿವಾಸಿಗಳ ಪೈಕಿ ಶೇ. ೨೦ರಷ್ಟಿರುವ ಶ್ರೀಮಂತರು ನೀರಿನ ಶುಲ್ಕದಲ್ಲಿ ಹೆಚ್ಚಿನ ಸಬ್ಸಿಡಿ (ಶೇ. ೩೦ರಷ್ಟು )ಯ ಫಲಾನುಭವಿಗಳು. ಆದರೆ ಶೇ. ೫೦ರಷ್ಟಿರುವ ಬಡವರ್ಗದ ಮಂದಿಗೆ ನೀರಿನ ಶುಲ್ಕದಲ್ಲಿ ಶೇ. ೧೦ರಷ್ಟು ಮಾತ್ರ ಸಹಾಯಧನ ದೊರೆಯುತ್ತಿದೆ.
ಅಸಮರ್ಪಕ ವ್ಯವಸ್ಥೆ, ತಾಂತ್ರಿಕತೆಯಲ್ಲಿನ ಹಿನ್ನಡೆ, ನೀತಿ-ನಿರೂಪಣೆಯಲ್ಲಿನ ದೋಷ, ರಾಜಕೀಯ ಇಚ್ಛಾಶಕ್ತಿಯ ಕೊರತೆಗಳ ಫಲಿತಾಂಶ ಇದು. ನೀರಿನ ಬಳಕೆಗೆ ಸಂಬಂಸಿದಂತೆ ಈವರೆಗೂ ನಮ್ಮಲ್ಲಿ ಮಾದರಿ ಎನ್ನಬಹುದಾದ ಯಾವುದೇ ನೀತಿ ನಿಯಮಗಳು ರೂಪಿ ತವಾಗಿಲ್ಲದಿರುವುದು ಸಮಸ್ಯೆಗೆ ಇನ್ನಷ್ಟು ಕಾರಣವಾಗಿದೆ. ಅಂತರ್ಜಲ ಬಳಕೆಗೆ ಕಾನೂನು ನಿಯಂತ್ರಣದ ಕೊರತೆ, ಅನಗತ್ಯ ವಿದ್ಯುತ್ ಸಬ್ಸಿಡಿಯಂಥ ಕಾರಣಗಳಿಂದ ದೇಶದಲ್ಲಿಂದು ಶೇ. ೫೬ರಷ್ಟು ಮಂದಿ ನೀರಿನ ವಿಚಾರದಲ್ಲಿ ‘ಸುಸ್ತಿದಾರ’ರಾಗಿದ್ದಾರೆ. ಅಂತರ್ಜಲ ಠೇವಣಿಯನ್ನು ಹದ್ದು ಮೀರಿ ಬರಿದಾಗಿಸಿದ್ದಲ್ಲದೇ ಖಾತೆಯಲ್ಲಿ ‘ಓವರ್ ಡ್ರಾಫ್ಟ್’ ಸೌಲಭ್ಯವನ್ನೂ ಬಳಸಿ ‘ಜಲ ಬ್ಯಾಂಕ್’ ಅನ್ನೇ ದಿವಾಳಿಗೆ ತಲುಪಿಸಿದ್ದಾರೆ.
ದೇಶದಲ್ಲಿನ ‘ಸಬ್ಸಿಡಿ’ ನೀತಿಯೇ ನಮ್ಮ ನೀರು ಪೂರೈಕೆಯ ಅಸಮಾನತೆಗೆ ಬಹುತೇಕ ಕಾರಣ. ಭಾರತದ ರೈತರಲ್ಲಿ ಶೇ.೧೩ರಷ್ಟು ಮಂದಿ ನೀರಾವರಿ ಸೌಲಭ್ಯವನ್ನು ಅನುಭವಿಸುತ್ತಿದ್ದಾರೆ. ಈ ಪೈಕಿ ಮೂರನೇ ಒಂದು ಭಾಗದಷ್ಟು ರೈತರಿಗೆ ಗರಿಷ್ಠ ಶೇ. ೭೩ರಷ್ಟು ಸಹಾಯಧನ ದೊರೆಯುತ್ತಿದೆ. ಇವರು ವಿದ್ಯುತ್ ಸಬ್ಸಿಡಿಯಲ್ಲೂ ಪಾಲುದಾರರು. ಹೀಗಾಗಿ, ನೀರಿನ ಬಳಕೆ ವಿಚಾರದಲ್ಲಿ ಅವರಲ್ಲಿ ನಿಯಂತ್ರಣವೇ ಇಲ್ಲದಾಗಿದೆ. ಶ್ರೀಮಂತ ರೈತರು ಹೆಚ್ಚಿನ ಹಣ ತೊಡಗಿಸಿ ಆಳದವರೆಗೆ ಬೋರ್‌ವೆಲ್‌ಗಳನ್ನು ಕೊರೆದೂ ನೀರು ಪಡೆಯ ಬಲ್ಲರು. ಇದು ಸಣ್ಣ, ಅತಿಸಣ್ಣ ರೈತರ ನೀರಿನ ಹಕ್ಕನ್ನು ಕಸಿದುಕೊಳ್ಳುತ್ತಿದೆ.
ಹೀಗಾಗಿ, ಕಟ್ಟ ಕಡೆಯ ರೈತರು ನೀರಿನ ಕೊರತೆಯೊಂದಿಗೆ ಅನಿಶ್ಚಿತತೆಯನ್ನು ಅನುಭವಿಸುವಂತಾಗಿದೆ. ಕಾಲುವೆಗಳ ಮೂಲಕ ನೀರು ಪೂರೈಕೆ ವಿಷಯದಲ್ಲೂ ಇದೇ ಅಸಮಾನತೆ ಬಾಸುತ್ತದೆ. ಕಾಲುವೆಯ ಕೊನೆಯ ರೈತ ಕೆಲವೊಮ್ಮೆ ಹಣ ಖರ್ಚು ಮಾಡಿದರೂ (ಶುಲ್ಕ, ತೆರಿಗೆ ಪಾವತಿ) ನೀರು ಸಿಗದೇ ಪರದಾಡುತ್ತಾನೆ. ದುರಂತವೆಂದರೆ ಇಂಥ ‘ಕೊನೆಯ’ ರೈತ ಬಡತನ, ಉತ್ಪಾದನಾ ಕೊರತೆಯಂಥ ಸಮಸ್ಯೆಗಳಿಂದಲೂ ಬಳಲುತ್ತಿರುತ್ತಾನೆ.
ಹಾಗಾದರೆ ಇವಕ್ಕೆಲ್ಲ ಪರಿಹಾರವಿಲ್ಲವೇ ? ಖಂಡಿತಾ ಇದೆ. ನೀರಿನ ಸಮಸ್ಯೆ ಕೊನೆಯಿಲ್ಲದ್ದೇನೂ ಅಲ್ಲ. ಗುಜರಾತಿನಲ್ಲಿ ಇಂದು ೧೦ ಸಾವಿರ ಚೆಕ್‌ಡ್ಯಾಮ್‌ಗಳು ಸಮೃದ್ಧಿಯನ್ನು ಕಟ್ಟಿ ಕೊಡುತ್ತಿವೆ. ಅಲ್ಲಿ ನೀರಿಗಾಗಿ ಸರಿಸುಮಾರು ೫೦ ರೂ.ಗಳಷ್ಟು ಹೂಡಿಕೆ ಮಾಡುವ ರೈತ ಮೂರು ವರ್ಷಗಳಲ್ಲಿ ಒಂದೂವರೆ ಪಟ್ಟು ಹೆಚ್ಚು ಅಂದರೆ ೧೫೦ ರೂ.ಗಳಿಗೂ ಹೆಚ್ಚು ಲಾಭ ಪಡೆಯುತ್ತಿದ್ದಾನೆ. ಗುಜರಾತ್ ನೀರಾವರಿ ವ್ಯವಸ್ಥೆಯಲ್ಲಿನ ಸುಧಾರಣೆ ದೇಶದ ಕೃಷಿ ಉತ್ಪಾದಕತೆಯನ್ನು ಐದು ಪಟ್ಟು ಹೆಚ್ಚಿಸುತ್ತಿದೆ. ಆಂಧ್ರದಲ್ಲಿನ ಕಡಿಮೆ ವೆಚ್ಚದ ಹನಿನೀರಾವರಿ ಯೋಜನೆಗಳು ಉತ್ಪಾದನೆಯನ್ನು ದ್ವಿಗುಣಗೊಳಿಸಿವೆ. ಮಧ್ಯಪ್ರದೇಶ, ಮಹಾರಾಷ್ಟ್ರ ಗಳಲ್ಲೂ ಮಿತ ನೀರು ಬಳಕೆಯ ಕೃಷಿ ಪದ್ಧತಿಗಳು ಅಲ್ಲಿನ ರೈತರನ್ನು ಯಶಸ್ಸಿನೆಡೆಗೆ ಕೊಂಡೊಯ್ದಿವೆ.
ಈ ಎಲ್ಲ ಹಿನ್ನೆಲೆಯನ್ನು ಗಮನಿಸಿದಾಗ ‘ನೀರಿನ ರಾಷ್ಟ್ರೀಯ ನೀತಿ’ಯೊಂದರ ಅಗತ್ಯ ತೀರಾ ತುರ್ತಾ ಗಿದೆ. ಇದರೊಂದಿಗೆ ನೀರಿನ ಶುಲ್ಕ, ಸಬ್ಸಿಡಿ ಇತ್ಯಾದಿಗಳ ಬಗ್ಗೆ ನಮ್ಮ ಸರಕಾರಗಳು ಮರುವಿಮರ್ಶೆ ನಡೆಸುವು ದೊಳಿತು. ನೀರನ್ನು ಯಥೇಚ್ಛ ಬಳಸುತ್ತಿರುವ ಶ್ರೀಮಂತ ವರ್ಗದ ಮೇಲೆ ದುಬಾರಿ ದರ ವಿಸುವ ಮೂಲಕ ನಿಯಂತ್ರಿಸಬೇಕು. ಅದರಿಂದ ಸಂಗ್ರಹವಾಗುವ ಮೊತ್ತ ವನ್ನು ಬಡ ವರ್ಗದ ಜನಕ್ಕೆ ಪೂರಕ ಸಬ್ಸಿಡಿಯಾಗಿ ನೀಡಬೇಕು. ಆಗ ಮಾತ್ರ ಅಸಮಾನತೆ ಹೋಗಲಾಡಿ ಸಲು ಸಾಧ್ಯ.
ನೀರಿನ ವಿಚಾರದಲ್ಲಿ ಪಾರದರ್ಶಕತೆ ಹಾಗೂ ಲೆಕ್ಕಾ ಚಾರದ ಕೊರತೆ, ಸೂಕ್ತ ನಿರ್ವಹಣಾ ನಾಯಕತ್ವದ ಕೊರತೆ, ಮೂಲ ಸೌಕರ್ಯದ ಕೊರತೆ, ಬದ್ಧತೆಯ ಕೊರತೆ, ಯೋಜನೆ ಹಾಗೂ ವ್ಯವಸ್ಥಾಪನೆಯ ಕೊರತೆ ಯಿಂದಾಗಿ ನಮ್ಮಲ್ಲಿ ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ. ಇಷ್ಟೆಲ್ಲ ಕೊರತೆಗಳಿದ್ದೂ ಅತಿಮುಖ್ಯ ಅಗತ್ಯವಾದ ‘ನೀರಿಗೆ’ ನಮ್ಮ ಸರಕಾರಗಳು ಬಜೆಟ್‌ನಲ್ಲಿ ಅತಿ ಕಡಿಮೆ ಹಣ ಮೀಸಲಿಡುತ್ತಿವೆ.
ನಮ್ಮಲ್ಲಿ ನೀರಿಗೆ ಸಂಬಂಸಿದ ವಿಚಾರಗಳು ಹಲವು ಇಲಾಖೆಗಳ ಅಡಿಯಲ್ಲಿ ಹಂಚಿಹೋಗಿವೆ. ಆ ಇಲಾಖೆಗಳ ನಡುವೆ ಸಮನ್ವಯ ಸಾಧನೆ ಆಗುತ್ತಿಲ್ಲ. ಗಣಿ ಮತ್ತು ಭೂಗರ್ಭ ಇಲಾಖೆ, ಅರಣ್ಯ ಮತ್ತು ಪರಿಸರ ಇಲಾಖೆ, ನೀರಾವರಿ ಇಲಾಖೆ, ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ, ವಿದ್ಯುತ್ ಮಂಡಳಿ, ಕೃಷಿ ಇಲಾಖೆ ಹೀಗೆ ಸರಕಾರದ ಎಲ್ಲ ಸಾಂಸ್ಥಿಕ ಸ್ವರೂಪಗಳೂ ಒಗ್ಗೂಡಿ ಕೆಲಸ ಮಾಡುವುದು ‘ಸಮಗ್ರ ರಾಷ್ಟ್ರೀಯ ನೀತಿ’ಯಿಂದ ಮಾತ್ರ ಸಾಧ್ಯ.

‘ಲಾಸ್ಟ್’ಡ್ರಾಪ್: ಅದೆಷ್ಟೋ ಘೋರ ಕದನ ಸದ್ದಿಲ್ಲದೇ ನೀರಿಗಾಗಿ ನಡೆಯುತ್ತಲೇ ಇದೆ. ಶಾಂತಿಧೂತರಾಗಿ ಬರಲು ಎಷ್ಟು ಮಂದಿ ಸಿದ್ಧರಿದ್ದಾರೆ ?

No comments: