ಮನೆಯ ಹಿರಿಯ ಮಗ, ಕಾಲುವೆ ಕೊನೆಯ ರೈತ- ಇಬ್ಬರೂ ಒಂದು ರೀತಿಯಲ್ಲಿ ಸಮಾನ ದುಃಖಿಗಳು. ಹೌದು, ಹಿರಿಯ ಮಗ, ಕೊನೆಯ ರೈತ ಇಬ್ಬರಿಗೂ ಉಳಿದದ್ದನ್ನು ಹಂಚಿಕೊಳ್ಳುವ ಅನಿವಾರ್ಯತೆ. ಒಂದೊಮ್ಮೆ ಉಳಿಯಲಿಲ್ಲವೆಂದರೂ ಸಹಿಸಿಕೊಳ್ಳಬೇಕು. ಕಾಲುವೆಯಲ್ಲಿ ಉದ್ದಕ್ಕೂ ಹರಿದು ಬರುವ ನೀರನ್ನು ಆರಂಭದ ಪ್ರದೇಶದಲ್ಲಿ ಇರುವ ರೈತರು ಹಂಚಿಕೊಂಡು ಬಿಡುತ್ತಾರೆ. ಜತೆಗೆ ಸೋರಿಕೆ, ಕಳ್ಳತನ. ಒಟ್ಟಾರೆ ಅದು ಕೊನೆ ಮುಟ್ಟುವ ವೇಳೆಗೆ ಪಾಲಿಗೆ ಬಂದದ್ದೇ ಪಂಚಾಮೃತ ಎನ್ನುವ ಸ್ಥಿತಿ. ಎಷ್ಟೋ ವೇಳೆ ನೀರು ಕೊನೆ ತಲುಪುವುದೇ ಇಲ್ಲ.
ನೀರಿಗೇನು ಭೇದ; ಅದು ಅನುವಾದೆಡೆಗೆ ಆತುರ ತೋರಿ ನುಗ್ಗುತ್ತದೆ. ಒಂದು ರೀತಿಯಲ್ಲಿ ಬೆಂಗಳೂರಿನ ಸಿಗ್ನಲ್ಗಳಲ್ಲಿ ವಾಹನಗಳು ನುಗ್ಗಿದಂತೆ. ಹಸಿರು ದೀಪ ಬೀಳುವುದೇ ತಡ ಹಿಂದೆ ಮುಂದೆ ನೋಡದೇ ಮುನ್ನುಗ್ಗಿ ಹೋಗಿ ಬಿಡುತ್ತಾರೆ ವಾಹನ ಸವಾರರು. ಒಂದೊಮ್ಮೆ ಮುಂದೆಲ್ಲೋ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದರೆ...? ಒಂದೆರಡು ಸೆಕೆಂಡ್ ನಿಂತು ನೋಡುತ್ತಾರೆ. ಇನ್ನು ಮುಂದೆ ಹೋಗುವುದು ಸಾಧ್ಯವಿಲ್ಲ ಎಂದರೆ ಕಾಯುವ ತಾಳ್ಮೆ ಯಾರಲ್ಲೂ ಇರುವುದಿಲ್ಲ. ಅಕ್ಕ-ಪಕ್ಕ, ಚಿಕ್ಕಪುಟ್ಟ ರಸ್ತೆಗಳಲ್ಲಿ ಡೀವಿಯೇಶನ್ ತೆಗೆದುಕೊಳ್ಳುತ್ತಾರೆ. ಅದೂ ಇಲ್ಲ ಎಂದರೆ ಓಣಿ, ಫುಟ್ಪಾತ್ ಎಲ್ಲೆಂದರಲ್ಲಿ ವಾಹನ ನುಗ್ಗಿಸಿಕೊಂಡು ಹೊರಟುಬಿಡುವುದೇ. ಒಟ್ಟಾರೆ ಹೋಗುತ್ತಿರಬೇಕು. ಒಂಚೂರೂ ವ್ಯತ್ಯಾಸವಿಲ್ಲ, ಕಾಲುವೆ ನೀರೂ ಹಾಗೆಯೇ ಹರಿಯುತ್ತ ಹೋಗುವಾಗ ಎದುರಿಂದ ಸ್ಪಲ್ಪ ತಡೆ ಹಾಕಿದರೂ ಸಾಕು, ಪಕ್ಕಕ್ಕೆ ನುಗ್ಗುತ್ತದೆ. ಗಮ್ಯ ಹೀಗೆಯೇ, ಇಲ್ಲಿಯೇ ಇರಬೇಕೆಂದೇನೂ ಇಲ್ಲ.
ನೀರಿನ ಇಂಥ ಗುಣವನ್ನು ರೈತರೂ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಕಾಲುವೆಗೆ ನೀರು ಬಿಟ್ಟರೆಂದರೆ ಸಾಕು. ಎಲ್ಲಿಗೆ ಬೇಕೆಂದರಲ್ಲಿಗೆ ತಿರುಗಿಸಿಕೊಂಡು ಹೋಗುತ್ತಾರೆ. ಅದು ಅಗತ್ಯವಿದೆಯೋ, ಇಲ್ಲವೋ ಎಂಬುದು ನಂತರದ ಪ್ರಶ್ನೆ. ಮುಂದಿನವರಿಗೂ ಉಳಿಯಲಿ, ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಲಿ ಎಂಬ ಸಮಾಜವಾದ ಇಲ್ಲೆಲ್ಲ ಕೆಲಸಕ್ಕೆ ಬರುವುದಿಲ್ಲ. ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ದಮ್ಮೂರು ರೈತರಿಗೂ ಆದದ್ದು ಇದೇ. ಊರಿನಲ್ಲಿ ಇರುವುದು ಒಂದೇ ಕೆರೆ. ಅದರ ಅಚ್ಚುಕಟ್ಟು ಪ್ರದೇಶ ಒಟ್ಟು ೮೧ ಎಕರೆಗಳು. ಕೆರೆಯಿಂದ ಕಾಲುವೆಗೆ ಬಿಟ್ಟ ನೀರು ಅರ್ಧ ದಾರಿಗೆ ಬರುವಷ್ಟರಲ್ಲೇ ಅರ್ಧ ಹರಿವನ್ನು ಕಳೆದುಕೊಂಡು ಬಿಡುತ್ತಿತ್ತು. ಪುಕ್ಕಟೆ ಸಿಕ್ಕರೆ ನನಗೊಂದು, ನಮ್ಮಪ್ಪನಿಗೊಂದು ಎನ್ನುವ ಹಾಗೆ ಕಾಲುವೆ ಮೇಲ್ಭಾಗದ ರೈತರು ಮನಸ್ಸಿಗೆ ತೋಚಿದಂತೆ ನೀರನ್ನು ಬಳಸುವುದು ಸಾಮಾನ್ಯವಾಗಿತ್ತು. ಅಲ್ಲಿಂದ ಮುಂದೆ ಒಂದಷ್ಟು ಸೋರಿ, ಇನ್ನಷ್ಟು ಆರಿ....ಒಟ್ಟಾರೆ ಕೊನೆಯ ಭಾಗ ತಲುಪುವಷ್ಟರಲ್ಲಿ ರೈತನ ಗಂಟಲು ನೆನೆಸಿಕೊಳ್ಳಲು ನೀರುಳಿದರೆ ಅದು ಪುಣ್ಯ. ಆಡುವಂತಿಲ್ಲ ಅನುಭವಿಸುವಂತಿಲ್ಲ.
ದಿನಕ್ಕೊಂದು ಜಗಳ, ವಾರಕ್ಕೊಂದು ಪಂಚಾಯಿತಿ. ಬೀದಿಗೊಂದು ಪಂಗಡ, ಬಜಾರಿಗೊಂದು ಬಡಿದಾಟ. ಊರಿಗೆ ತಂಪೆರೆಯಬೇಕಿದ್ದ ನೀರು ಕೊನೆ ಕೊನೆಗೆ ದ್ವೇಷದ ದಳ್ಳುರಿಯನ್ನು ಹಬ್ಬಿಸಿಬಿಡುತ್ತದೆ. ನಂಬಬೇಕು ನೀವು; ಎಲ್ಲಕ್ಕೂ ಕಾರಣ ನೀರು. ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕಾದದ್ದಾಯಿತು, ಕಾಲುವೆ ಕಟ್ಟಿದ್ದಾಯಿತು. ಕೆರೆಯ ಕೊಳೆ ತೆಗೆದದ್ದಾಯಿತು....ಯಾವುದರಿಂದಲೂ ಪ್ರಯೋಜನವಿಲ್ಲ. ಅಂತೂ ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ, ಕಾಲುವೆ ಕೊನೆಗೆ ನೀರು ಬರುವುದಿಲ್ಲ.
ಎಷ್ಟು ದಿನ ಅಂತ ಹೀಗೆ ಕಳೆದಾರು ? ಮೇಲಿನ ರೈತರು ಕಣ್ಣೆದುರೇ ಎರಡು ಮೂರು ಬೆಳೆ ತೆಗೆದುಕೊಳ್ಳುತ್ತಿರುವಾಗ ತಮಗೆ ಒಂದನ್ನೂ ದಕ್ಕಿಸಿಕೊಳ್ಳಲಾಗುವುದಿಲ್ಲ ಎಂಬುದು ಜುಗುಪ್ಸೆ ಹುಟ್ಟಿಸದಿದ್ದೀತೆ ? ಹಾಗೆ ಇರುವಾಗಲೇ ಮೂಡಿ ಬಂದದ್ದು ಸಮುದಾಯ ಆಧಾರಿತ ನೀರಾವರಿ ಅಲಿಯಾಸ್ ಬೇಡಿಕೆ ಆಧಾರಿತ ನೀರಾವರಿ ಪದ್ಧತಿ. ಹೆಸರು ಕೇಳಿ ಇದೇನೋ ಭಾರೀ ಯೋಜನೆ ಇರಬೇಕೆಂದು ಭಾವಿಸಬೇಕಿಲ್ಲ. ತುಂಬ ಎಂದರೆ ತುಂಬ ಸರಳ, ಎಲ್ಲರಿಗೂ ಎಲ್ಲ ಕಾಲಕ್ಕೂ ಅಗತ್ಯಕ್ಕನುಗುಣ, ನೀರು ಒದಗಿಸಲು ಎಲ್ಲರೂ ಯೋಚಿಸುವುದೇ ಯೋಜನೆಯ ಹೂರಣ. ಇಲ್ಲಿ ನೀರಿನ ಮೂಲವನ್ನು ಸ್ವಚ್ಛಗೊಳಿಸುವ ಜತೆಗೆ ಕಟ್ಟ ಕಡೆಯ ರೈತನಿಗೂ ಸಮರ್ಥ ಹರಿವನ್ನು ಕಟ್ಟಿಕೊಡುವುದು ಮುಖ್ಯ ಉದ್ದೇಶ. ಜಲಗಾಂವ್ನ ಜೈನ್ ಇರಿಗೇಶನ್ನ ಮೂಲ ಕಲ್ಪನೆಯ ಯೋಜನೆಯಲ್ಲಿ ಪ್ರಮುಖವಾಗಿ ನಾಲ್ಕು ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳಲಾಯಿತು. ಮೊದಲನೆಯದು ನೀರಿನ ಲಭ್ಯತೆಯನ್ನು ಹೆಚ್ಚಿಸುವುದು. ನಂತರ ಅಚ್ಚುಕಟ್ಟಿನ ಎಲ್ಲ ರೈತರಿಗೆ ಸಮ ಪ್ರಮಾಣದ ಅಥವಾ ಅಗತ್ಯಕ್ಕನುಗುಣ ನೀರಿನ ಹಂಚಿಕೆ ಮಾಡುವುದು. ಸಮರ್ಥ ಬಳಕೆಯನ್ನು ಕಾಪಾಡುವುದು. ಕೊನೆಯದಾಗಿ, ಅತ್ಯಂತ ಮುಖ್ಯವಾಗಿ ಸುಸ್ಥಿರತೆಯ ಜತೆಗೆ ವೆಚ್ಚ ಕಡಿಮೆ ಮಾಡುವುದು.
ಇದಕ್ಕಾಗಿ ಮೊದಲು ಇಡೀ ಜಲಾನಯನ ಪ್ರದೇಶದ ಸಮೀಕ್ಷೆ ಮಾಡಲಾಯಿತು. ನಂತರ ಆ ಪ್ರದೇಶಕ್ಕೆ ಸರಿ ಹೊಂದುವ ಯೋಜನೆ ರೂಪುಗೊಂಡಿತು. ಸನ್ನಿವೇಶಕ್ಕನುಗುಣವಾಗಿ ತಕ್ಕ ಪಂಪಿಂಗ್ ಮತ್ತು ಗುರುತ್ವಾಕರ್ಷಣೆ ಆಧಾರಿತ ನೀರು ಪೂರೈಕೆ ವ್ಯವಸ್ಥೆಯ ಅನುಷ್ಠಾನಕ್ಕೆ ಮುಂದಾಗಲಾಯಿತು. ದಮ್ಮೂರಿನ ಜಮೀನಿಗೆ ಒಂದಷ್ಟು ದಮ್ಮು ಬಂದದ್ದೇ ಆಗ. ಹರಿ ನೀರಾವರಿ, ಹನಿ ನೀರಾವರಿ ತುಂತುರು ನೀರಾವರಿ ಎಂಬು ಮೂರು ವಿಂಗಡಣೆಯನ್ನು ಮಾಡಿ ಅದಕ್ಕೆ ತಕ್ಕ ಪೈಪ್ ಜೋಡಣೆ ಕಾರ್ಯ ಆರಂಭವಾದಾಗಲೇ ರೈತರಲ್ಲಿ ವಿಶ್ವಾಸ ಮೂಡ ತೊಡಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಕಾಲುವೆಯಲ್ಲಿ ಆಗುತ್ತಿದ್ದ ನೀರಿನ ಸೋರಿಕೆ ಮತ್ತು ಆವಿಯಾಗುವ ಪ್ರಮಾಣ ಪೈಪ್ ಜಾಲದಲ್ಲಿ ತಕ್ಷಣಕ್ಕೆ ನಿಯಂತ್ರಣಕ್ಕೆ ಬಂತು. ಇದರಿಂದ ಹರಿನೀರಾವರಿಯಲ್ಲಿ ಶೇ ೪೦ರಷ್ಟು ನಷ್ಟ ತಂತಾನೇ ಕಡಿಮೆಯಾಯಿತು. ಅದೇ ರೀತಿ ತುಂತುರು ನೀರಾವರಿಯಲ್ಲಿ ಶೇ. ೩೫ ಹಾಗೂ ಹನಿ ನೀರಾವರಿಯಲ್ಲಿ ಶೇ. ೭೫ರಷ್ಟು ನೀರಿನ ನಷ್ಟವನ್ನು ಕಡಿತಗೊಳಿಸಲು ಸಾಧ್ಯವಾದದ್ದು ಕಡಿಮೆ ಸಾಧನೆಯಲ್ಲ. ಇಷ್ಟಾದದ್ದೇ ಸಹಜವಾಗಿ ನೀರು ಕೊನೆ ಮುಟ್ಟ ತೊಡಗಿತ್ತು.
ಈ ಹಂತದಲ್ಲಿ ಊರಿನ ಎಲ್ಲ ರೈತರನ್ನು ಒಗ್ಗೂಡಿಸಿ ನೀರು ಲಭ್ಯತೆ ಹಾಗೂ ಅಗತ್ಯದ ಲೆಕ್ಕ ತೆಗೆಯಲಾಯಿತು. ಜಲದ ಲೆಕ್ಕಪರಿಶೋಧನೆ ಮುಗಿಯುತ್ತಿದ್ದಂತೆಯೇ ಮುಂದಿನ ಬಜೆಟ್ ಸಿದ್ಧವಾಯಿತು. ಒಟ್ಟು ೮೧ ಎಕರೆಯಲ್ಲಿ ೫೫ ಎಕರೆಗೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಲಾಯಿತು. ಉಳಿದ ಜಮೀನಿನಲ್ಲಿ ಬಹುತೇಕ ತುಂತುರು ನೀರಾವರಿಯನ್ನು ಆಯ್ದುಕೊಳ್ಳಲಾಗಿತ್ತು. ಬೆರಳೆಣಿಕೆಯಷ್ಟು ಜಮೀನಿನಲ್ಲಿ ಹರಿ ನೀರಾವರಿಯೂ ಇತ್ತು. ಸಮುದಾಯ ನೀರಾವರಿಯ ಚೊಚ್ಚಲ ಯೋಜನೆ ದಮ್ಮೂರಿನಲ್ಲಿ ಅನುಷ್ಠಾನ ಆಗಿ ಇದೀಗ ನಾಲ್ಕು ವರ್ಷ ಕಳೆದಿದೆ. ಒಂದು ಕ್ಯೂಸೆಕ್ ಸಾಮರ್ಥ್ಯದ ಊರಿನ ಕೆರೆ ಇತ್ತೀಚಿನ ಮೂವತ್ತು ವರ್ಷಗಳಲ್ಲಿ ಎರಡು ಬಾರಿ ಬಿಟ್ಟು ಉಳಿದೆಲ್ಲ ವರ್ಷ ಕೋಡಿ ಬಿದ್ದಿದೆ. ಇಷ್ಟಾಗಿಯೂ ಸಮುದಾಯ ಆಧಾರಿತ ನೀರಾವರಿ ಪರಿಚಯ ಆಗುವ ಮೊದಲು ೪೫ ಎಕರೆಯಷ್ಟು ಮಾತ್ರ ನೀರಾವರಿಗೆ ಒಳಪಟ್ಟಿತ್ತು. ಹೇಗೆ ಮಾಡಿದರೂ ಒಂದಕ್ಕಿಂತ ಹೆಚ್ಚು ಬೆಳೆಯನ್ನು ಪಡೆಯಲು ಆಗುತ್ತಿರಲಿಲ್ಲ. ಕೆಲವು ರೈತರು ಇದಕ್ಕೂ ಪರದಾಡಿದ ಉದಾಹರಣೆಗಳಿತ್ತು. ಇದೀಗ ಅದೇ ಕೆರೆಯಿಂದ ೩ ನೀರಾವರಿ ಆಗುತ್ತಿದೆ. ರೈತರು ಯಾವುದೇ ಗೊಂದಲವಿಲ್ಲದೇ ಮೂರು ಬೆಳೆಯನ್ನು ಪಡೆಯುತ್ತಿದ್ದಾರೆ ಎನ್ನುತ್ತಾರೆ ಜೈನ್ ಇರಿಗೇಶನ್ನ ನಿರ್ದೇಶಕರಲ್ಲೊಬ್ಬರಾದ ಅಜಿತ್ ಜೈನ್.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅನುಷ್ಠಾನಗೊಂಡ ಯೋಜನೆಗೆ ಒಟ್ಟು ೩೬ ಲಕ್ಷ ರೂ.ಗಳನ್ನು ಆರಂಭಿಕ ವೆಚ್ಚವಾಗಿ ವ್ಯಯಿಸಲಾಗಿದೆ. ಪ್ರಾಯೋಗಿಕ ಮಾದರಿ ಎಂಬ ಕಾರಣಕ್ಕೆ ಎಲ್ಲವನ್ನೂ ಸರಕಾರವೇ ಭರಿಸಿದೆ. ಕೆರೆಯಿಂದ ನೀರು ಪೂರೈಕೆಗೆ ತಲಾ ೨೫ ಎಚ್ಪಿಗಳ ಎರಡು ಮೋಟಾರ್ಗಳನ್ನು ಅಳವಡಿಸಲಾಗಿದೆ. ಎಲ್ಲಕ್ಕಿಂತ ವಿಶೇಷವೆಂದರೆ ದಮ್ಮೂರಿನಲ್ಲಿ ಅಳವಡಿಸಿರುವ ಕೇಂದ್ರೀಕೃತ ನೀರು ನಿರ್ವಹಣೆ ಪದ್ಧತಿಯದ್ದು. ವೇರಿಯೇಬಲ್ ಫ್ಲೋ ಡಿಸ್ಚಾರ್ಜ್ ಸಿಸ್ಟ್ಮ್( ವಿಎಫ್ಡಿ) ಎಂದು ಗುರುತಿಸಲಾಗುವ ಈ ಹೊಸ ಅನ್ವೇಷಣೆಯಲ್ಲಿ ಪೈಪ್ ಲೈನ್ನಲ್ಲಿ ನಿರಂತರ ಹರಿವಿದ್ದಾಗ್ಯೂ ಪ್ರತೀ ರೈತನ ಅಗತ್ಯಕ್ಕೆ ಅನುಗುಣವಾಗಿ ಅಷ್ಟಷ್ಟೇ ನೀರೊದಗಿಸಲು ಸಾಧ್ಯವಾಗುವಂತೆ ವಿಶೇಷ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಕೆರೆಯಿಂದ ಹೊರಬಿಡುವ ನೀರಿನ ಸಮತೋಲನವನ್ನು ಎಲ್ಲ ಕಾಲದಲ್ಲೂ ಕಾಪಾಡುವುದು ಈ ತಂತ್ರಜ್ಞಾನದ ಹೆಗ್ಗಳಿಕೆ. ಪೈಪ್ ಜಾಲಕ್ಕೂ ಕೆರೆಯ ತೂಬಿಗೂ ನಡುವೆ ಒಂದು ವಾಲ್ವ್ ಅಳವಡಿಸಲಾಗಿದ್ದು, ಪ್ರತಿ ಸೆಕೆಂಡಿಗೆ ೩೦ ಲೀಟರ್ ನೀರಿನ ಹೊರ ಹರಿವು ಇರುವಂತೆ ಇದು ನೋಡಿಕೊಳ್ಳುತ್ತದೆ. ನೀರನ್ನು ಹೊರಬಿಟ್ಟಾಗ ಇಷ್ಟು ಹರಿವು ಪೈಪ್ ಜಾಲದಲ್ಲಿ ನಿರಂತರವಾಗಿದ್ದರೂ ಆಯಾ ರೈತನಿಗೆ ಅಗತ್ಯವಿದ್ದಷ್ಟು ನೀರು ಮಾತ್ರ ಹಂಚಿಕೆಯಾಗುವುದು ಗಮನಾರ್ಹ ಸಂಗತಿ.
ಸಮುದಾಯ ಆಧಾರಿತ ನೀರು ಪೂರೈಕೆ ಯೋಜನೆಯಲ್ಲಿ ನೀರಿನ ನಷ್ಟ ಕಡಿತ, ಹೆಚ್ಚುವರಿ ಲಭ್ಯತೆ ಹಾಗೂ ಹೆಚ್ಚು ಉತ್ಪನ್ನದಿಂದಾಗಿ ಮೊದಲು ಐದು ವರ್ಷಗಳಲ್ಲೇ ಹೂಡಿಕೆಯ ಎಲ್ಲ ಮೊತ್ತವನ್ನು ಮರಳಿ ಗಳಿಸಲು ಸಾಧ್ಯ ಎಂಬ ವಿಶ್ವಾಸ ವ್ಯಕ್ತಪಡಿಸುವ ಅಜಿತ್ ಜೈನ್, ಈ ನಿಟ್ಟಿನಲ್ಲಿ ಶೇ.೯೦ರಷ್ಟು ಸಾಧನೆ ಈಗಾಗಲೇ ಸಾಧ್ಯವಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಿಜ ಸಮುದಾಯದ ಕಲ್ಪನೆ ಭಾರತೀಯ ಸನ್ನಿವೇಶಕ್ಕೆ ಹೊಸತೇನಲ್ಲ. ಮರೆತು ಹೋಗಿದ್ದ ಸಾಂಪ್ರದಾಯಿಕ ಪದ್ಧತಿಯೊಂದನ್ನು ಜೈನ್ ಸಮೂಹ ಮತ್ತೆ ಹೊಸ ಸ್ವರೂಪದಲ್ಲಿ ನೆನಪು ಮಾಡಿಕೊಟ್ಟಿದೆ. ಕವಿದ ವಿಸ್ಮೃತಿಯನ್ನು ಕಳೆದಿದೆ. ಅದು ಮುಂದುವರಿಯಬೇಕಷ್ಟೆ.
‘ಲಾಸ್ಟ್’ಡ್ರಾಪ್: ಮೋರ್ ಕ್ರಾಪ್ ಪರ್ ಡ್ರಾಪ್-ಹನಿ ನೀರಿಗೆ ಹೊರೆ ತೆನೆ...ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗೊಂದು ಸುಂದರ ಅನ್ವಯಿಕ ವಾಕ್ಯ.
ಸಮ್ಮನಸ್ಸಿಗೆ ಶರಣು
3 months ago
1 comment:
ಸಂಪೂರ್ಣ ಮಾಹಿತಿ .... ಜೀವನುಪಯುಕ್ತ ಸಾರ ಸಂಗ್ರಹ ಧನ್ಯವಾದಗಳು
Post a Comment