ಅವತ್ತು ಏನಿಲ್ಲವೆಂದರೂ ೪೮ ಡಿಗ್ರಿ ಸೆಂಟಿಗ್ರೇಡ್‌ನಷ್ಟು ಬಿಸಿಲು ಬಾರಿಸುತ್ತಿತ್ತು. ಪಕ್ಕದಲ್ಲೇ ಸಮುದ್ರದ ಮೊರೆತ. ರಣ ಬಿಸಲಿಗೆ ಉಪ್ಪು ನೀರು ಆವಿಯಾಗಿ ಆಗಸದತ್ತ ಮೆರವಣಿಗೆ ಹೊರಟಿರುವುದು ಕಣ್ಣಿಗೆ ಕಾಣಿಸುವಷ್ಟು ಸ್ಪಷ್ಟವಾಗಿತ್ತು. ಸಮುದ್ರದ ಮೇಲೊಮ್ಮೆ ಹೀಗೆಯೇ ಕಣ್ಣಾಡಿಸಿದರೂ ಆವಿಯ ಸುರುಳಿ ಝಳ ಝಳ ಝಳಪಾಡುತ್ತಿತ್ತು. ದಂಡೆಯ ಮೇಲಿರುವ ಮರಳಂತೂ ಪಕ್ಕಾ ಅಗ್ನಿಕೊಂಡ. ಅದರ ಮೇಲೆ ಬೀಸಿ ಬಂದ ಬಿಸಿಗಾಳಿ ಸದ್ದಿಲ್ಲದೇ ಮಂದಿಯ ಮೈಯನ್ನು ಬೇಯಿಸುತ್ತಿತ್ತು. ಮೇಲೆ ಕೆಕ್ಕರಿಸುತ್ತಿರುವ ಸೂರ್ಯ, ಕೆಳಗೆ ಕಾದು ಕಂಗಾಲಾದ ನೆಲ, ನಡು ನಡುವೆ ಬೀಸುವ ಬಿಸಿಗಾಳಿ. ಏನಾಗಬೇಕು ಹೇಳಿ ಅಲ್ಲಿನ ಜನರ ಸ್ಥಿತಿ ? ಅಬ್ಬಾ, ನೆನೆಸಿಕೊಂಡರೇ ಗೊತ್ತಿಲ್ಲದಂತೆ ಬೆವರತೊಡಗುತ್ತೇವೆ.
ಇಷ್ಟು ಸಾಲದ್ದಕ್ಕೆ ಒರಿಸ್ಸಾದ ಆ ಪುಟ್ಟ ಪಟ್ಟಣಕ್ಕೆ ಅಂದು ದೇಶಾದ್ಯಂತದ ೨೦ ಲಕ್ಷಕ್ಕೂ ಅಕ ಮಂದಿ ಬಂದು ಸೇರಿದ್ದರು. ನಮ್ಮ ಬೆಂಗಳೂರಿನ ಕಾಲು ಭಾಗಕ್ಕಿಂತಲೂ ಕಡಿಮೆ ವಿಸ್ತಾರದ ಪುರಿಯಲ್ಲಿ ಒಟ್ಟು ಇದ್ದುದೇ ೫ ಲಕ್ಷ ಜನಸಂಖ್ಯೆ. ಅದಷ್ಟೇ ಮಂದಿಗೆ ಒಮ್ಮೆಲೆ ಬಾಯಾರಿತೆಂದರೆ ಮನದಣಿಯೆ ಕುಡಿಯಲು ನೀರು ಸಿಗುವುದು ಕಷ್ಟ ಅಲ್ಲಿ. ಹೀಗಿದ್ದಾಗ ಹೊರಗಿನಿಂದ ಅದರ ನಾಲ್ಕುಪಟ್ಟು ಜನ ಬಂದಿಳಿದರೆ ನೀರಿರಲಿ, ಬಹುಶಃ ಗಟ್ಟಿಯಾಗಿ ಉಸಿರೆಳೆದುಕೊಳ್ಳಲು ತಣ್ಣನೆ ಗಾಳಿ ಕೂಡ ಸಿಗಲಿಕ್ಕಿಲ್ಲ. ಫ್ಯಾನ್, ಏರ್‌ಕೂಲರ್, ಏರ್ ಕಂಡೀಷನರ್...ಯಾವುದೂ ಸತತ ಒಂದು ಗಂಟೆಗಿಂತ ಹೆಚ್ಚು ಕಾಲ ಮಾತನಾಡುವುದಿಲ್ಲ. ಕುಳಿತ ಕೊಠಡಿಯಲ್ಲೇ ಉಸಿರು ಕಟ್ಟಿದ ಅನುಭವವಾಗಿ ಹೊರಗೋಡಿ ಬರಲೇಬೇಕು. ಹೇಳಿ ಕೇಳಿ ಅದು ಸೂರ್ಯನ ಸಾಮ್ರಾಜ್ಯವೆನಿಸಿದ ರಾಜ್ಯ. ಅದಕ್ಕಾಗಿಯೇ ವೈಶಾಖದ ನಡು ಬಿಸಿಲದಿನಗಳಲ್ಲಿ ಒಂದುವಾರ ಸ್ವತಃ ಪುರಾಶ ಜಗನ್ನಾಥನೂ ದೇಗುಲದಿಂದ ಹೊರಬಂದು ಕುಳಿತಿರುತ್ತಾನೋ ಏನೋ ?
ಅಂತೂ ಪುರಿಯಲ್ಲಿ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಯ ಆ ಏಳು ದಿನಗಳೆಂದರೆ ಅದು ಅಕ್ಷರಶಃ ಬಾಣಲೆಯ ಮೇಲಿನ ಬದುಕು. ಹಾಗೆಂದು ರಥಯಾತ್ರೆ ಆರಂಭದ ಮುನ್ನಾದಿನ ಪಟ್ಟಣದಲ್ಲಿ ಹೇಳಿಕೊಳ್ಳುವಂಥ ಯಾವುದೇ ಗೌಜು, ಗದ್ದಲಗಳಿರುವುದಿಲ್ಲ. ರಾತ್ರೆ ೧೨ಕ್ಕೆ ಹೋದರೂ ಇದೇ ಜಾಗದಲ್ಲಿ ನಾಳೆ ಲಕ್ಷಾಂತರ ಮಂದಿ ಸೇರುವುದೇ? ಎನಿಸದಿರದು. ಅಷ್ಟೊಂದು ಖಾಲಿಖಾಲಿ ಇರುತ್ತದೆ ನಗರ. ಒಂದಷ್ಟು ಉತ್ಸವದ ಸಿದ್ಧತೆ, ದೀಪಾಲಂಕಾರಗಳನ್ನು ಬಿಟ್ಟರೆ ಬೇರಾವುದೇ ಗಡಿಬಿಡಿಗಳಿರುವುದಿಲ್ಲ. ಕತ್ತಲೆ ಜಾರುತ್ತ ಹೋಗುತ್ತಿದ್ದಂತೆಯೇ ಪಟ್ಟಣದಲ್ಲಿ ಜನ ದಟ್ಟಣೆ ಏರುತ್ತ ಸಾಗುತ್ತದೆ. ಚುಮುಚುಮು ಬೆಳಗು ಮೂಡುವ ಹೊತ್ತಿಗೆ ಎಂಟೂ ದಿಕ್ಕುಗಳೂ ಪುರಿಯತ್ತ ಬಂದು ಸೇರುತ್ತಿರುವಂತೆ ಭಾಸವಾಗ ತೊಡಗುತ್ತದೆ. ಅದೆಲ್ಲಿಂದ ಜನ ಆ ಪಾಟಿ ಹರಿದುಬರುತ್ತಾರೋ, ಅದೇನು ಭಕ್ತಿಯೋ, ಭಾವಾವೇಶವೋ. ಅಂತೂ ರಸ್ತೆಯುದ್ದಕ್ಕೂ ಜೈ ಜಗನ್ನಾಥ್, ಹರೇ ಕೃಷ್ಣ ...ಮೊದಲಾದ ಘೋಷಣೆಗಳನ್ನು ಕೂಗುತ್ತ ಗುಂಪು-ಗುಂಪಾಗಿ ಮಂದಿ ಬಂದು ಸೇರಲಾರಂಭಿಸುತ್ತಾರೆ.
ಪುರಿಯಲ್ಲಿ ಅಸಲೀ ಕುದಿ ಮರಳುವುದು ಹೊತ್ತು ಹನ್ನೆರಡಕ್ಕೆ ಏರುವಾಗ. ಭಕ್ತಿಯ ಭಾವಾವೇಶದಲ್ಲಿ ಬಿಸಿಲಿನ ಪರಿವೆಯನ್ನೂ ಲೆಕ್ಕಿಸದೇ ಮೈಲುಗಳವರೆಗೆ ನಡೆದೇ ಹಾದಿ ಸವೆಸಿಕೊಂಡು ಬರುವ ಜನಕ್ಕೆ ಇಲ್ಲಿನ ಬಿಸಿಲ ತಾಪದ ಅರಿವು ಜಗನ್ನಾಥನ ದರ್ಶನವಾದ ನಂತರ ಆರಂಭವಾಗುತ್ತದೆ. ಇಡೀ ಸಮುದ್ರವನ್ನೇ ಅಗಸ್ತ್ಯರ ರೀತಿಯಲ್ಲಿ ಆಪೋಷನ ತೆಗೆದುಕೊಂಡುಬಿಡಬೇಕೆಂಬಷ್ಟು ದಾಹ ಕಾಡಲಾರಂಭಿಸುತ್ತದೆ. ನೀರಿನ ಬಿಂದು ಸಿಕ್ಕರೂ ಸಾಕು ಒಮ್ಮೆ ತುಟಿಗೆ ಸವರಿಕೊಂಡು ಜೀವ ಉಳಿಸಿಕೊಂಡು ಬಿಡಬೇಕೆಂಬ ಆತುರ. ಇದಕ್ಕಾಗಿಯೇ ಒಂದಷ್ಟು ಸ್ವಯಂ ಸೇವಾ ಸಂಘಟನೆಗಳು, ಉದ್ಯಮಿಗಳು ನೀರು ಪೂರೈಕೆಯ ವ್ಯವಸ್ಥೆಗೆ ಟೊಂಕ ಕಟ್ಟಿ ನಿಂತಿರುತ್ತವೆ. ದೊಡ್ಡ ದೊಡ್ಡ ಟ್ಯಾಂಕರ್‌ಗಳಲ್ಲಿ ನೀರು ತುಂಬಿಸಿಕೊಂಡು ಬಂದು ಭಕ್ತರ ಬಾಯಾರಿಕೆ ತಣಿಸುವ ಕಾರ್ಯಕ್ಕೆ ಮುಂದಾಗಿರುತ್ತವೆ. ಪೌರ ಸಂಸ್ಥೆಗಳು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಬೃಹತ್ ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಟ್ಯಾಂಕರ್‌ಗಳನ್ನು ನಿಲ್ಲಿಸಿ ಜನರ ಮೇಲೆ ನೀರೆರಚಿ ಬಿಸಿಲಿನ ತಾಪ ತಣಿಸುವ ಪ್ರಯತ್ನ ಮಾಡುತ್ತವೆ.
ಇವೆಲ್ಲದರ ನಡುವೆ ಗಮನ ಸೆಳೆಯುವುದು ರಥಬೀದಿಯ ಇಕ್ಕೆಲದ ಮನೆಗಳ ಜಗುಲಿಯ ಮೇಲೆ, ಪುರಿಗೆ ಬಂದು ಸೇರುವ ಹೆದ್ದಾರಿ ಬದಿಯ ಮರದ ಕೆಳಗೆ ಕಾಣ ಸಿಗುವ ಪುಟ್ಟ ಪುಟ್ಟ ಗಡಿಗೆಗಳು. ಪಾವೋ ಎಂದೇ ಸ್ಥಳೀಯರು ಗುರುತಿಸುವ ಈ ಮಣ್ಣಿನ ಮಡಿಕೆಗಳು ಮಾಡುವ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಒಂದು ರೀತಿಯಲ್ಲಿ ಇವು ನಮ್ಮ ಅರವಟಿಗೆಗಳನ್ನು ನೆನಪಿಸುತ್ತವೆ. ಜಗನ್ನಾಥ ರಥಯಾತ್ರೆಯ ಸಂದರ್ಭದಲ್ಲಿ ಸ್ಥಳೀಯ ಬಡ ಜನರ ಶ್ರೀಮಂತ ಸೇವೆಯಿದು. ಅಲ್ಲಿನ ಮಂದಿಯ ದೃಷ್ಟಿಯಲ್ಲಿ ಜಗನ್ನಾಥನ ರಥ ಎಳೆಯುವುದಕ್ಕಿಂತಲೂ ಹೆಚ್ಚಿನ ಪುಣ್ಯಕಾರ್ಯ; ಭಕ್ತರಿಗೆ ಕುಡಿಯಲು ನೀರು ಕೊಡುವುದು. ಅತ್ಯಂತ ಆಸ್ಥೆಯಿಂದ ಮನೆಮನೆಗಳಲ್ಲಿ ನೀರು ಹಂಚಲಾಗುತ್ತದೆ. ಸ್ವಲ್ಪವೂ ಬೇಸರ ಮಾಡಿಕೊಳ್ಳದೇ ಮಕ್ಕಳು, ವೃದ್ಧರು ಎಂಬ ಭೇದವಿಲ್ಲದೇ ಬಾಯಾರಿದವರ ಬೊಗಸೆಗೆ ನೀರು ಹನಿಸಲು ನಿಂತಿರುತ್ತಾರೆ.
ತುಂಬಿ ತುಳುಕುವ ಬೀದಿಯ ಬದಿಯಲ್ಲಿ ಹಳೆಯ ಮನೆಗಳ ಎದುರು ಕಲ್ಲು ಹಾಸಿದ ಜಗುಲಿ. ಅದರ ತುದಿಯಲ್ಲೊಂದು ಕಟ್ಟೆ. ಅದರ ಮೇಲೆ ಉದ್ದಕ್ಕೂ ಜೋಡಿಸಿಟ್ಟ ಮಡಕೆಗಳು. ಅದರಲ್ಲಿ ತಣ್ಣಗೆ ಕುಳಿತ ನೀರು. ಕೆಲವು ಮನೆಗಳಲ್ಲಿ ಬಕೆಟ್, ಪಾತ್ರೆ, ಸ್ಟೀಲ್ ಡ್ರಮ್ ಗಳನ್ನು ಬಳಸುವುದೂ ಉಂಟು. ಅದರೆದುರು ಮನೆಯ ಸದಸ್ಯರೊಬ್ಬರು ಉದ್ದದ್ದ ಗುಂಡಿ ಸೌಟು ಹಿಡಿದು ಕುಕ್ಕರಗಾಲಲ್ಲಿ ಕುಳಿತಿರುತ್ತಾರೆ. ಬಂದವರಿಗೆಲ್ಲ ಪಾವೋದೊಳಗಿನ ನೀರನ್ನು ಮೊಗೆಮೊಗೆದು ಬೊಗಸೆಗೆ ಹನಿಸುವುದೇ ಅವರ ಕೆಲಸ. ಇದು ಬೆಳಗ್ಗಿನಿಂದ ಸಂಜೆಯ ವರೆಗೂ ಸಾಗುತ್ತಲೇ ಇರುತ್ತದೆ. ಒಬ್ಬರಿಗೆ ಆಯಾಸವಾದರೆ ಇನ್ನೊಬ್ಬರು ಬಂದು ಕುಳಿತುಕೊಳ್ಳುತ್ತಾರೆ. ದಟ್ಟಣೆ ಹೆಚ್ಚಾದರೆ ಇಬ್ಬರು-ಮೂವರು ಒಟ್ಟೊಟ್ಟಿಗೇ ನೀರು ಕೊಡುವ ಕೆಲಸಕ್ಕೆ ನಿಲ್ಲುತ್ತಾರೆ. ಕೆಲವೊಮ್ಮೆ ಪುಟ್ಟ ಹೂಜಿಗಳನ್ನೇ ಬಗ್ಗಿಸಿ ಒಬ್ಬರಾದಮೇಲೊಬ್ಬರಿಗೆ ನೀರು ಎರೆಯುತ್ತಾರೆ.
ಹಾಗೆ ಬಂದವರಿಗೆಲ್ಲ ನೀರು ಕೊಡುತ್ತಿದ್ದರೆ, ಆ ಮನೆಯವರ ಮುಖದಲ್ಲಿ ಹಣಕುವ ಸಂತೃಪ್ತಿಯನ್ನು ನೋಡಬೇಕು. ಇನ್ಯಾವ ಪೂಜೆ ಪುನಸ್ಕಾರದಿಂದಲೂ ಅಷ್ಟು ಸಮಾಧಾನ ಸಿಗಲಿಕ್ಕಿಲ್ಲ. ಅದನ್ನೇ ಹೇಳುತ್ತಾರೆ ಪಾವೋ ಸೇವೆಯಲ್ಲಿ ತೊಡಗಿದ್ದ ಮನೆಯೊಂದರ ಹಿರಿಯಜ್ಜಿ ರುಕುಮಾಯಿ. ವ್ಯಾಪಾರಿ ಕುಟುಂಬದವರಾದ ಅವರ ಮನೆಯಿಂದ ಪುರಿಯ ಮೂರು ಕಡೆಗಳಲ್ಲಿ ಇಂಥ ನೀರಿನ ವ್ಯವಸ್ಥೆ ಮಾಡಲಾಗಿದೆಯಂತೆ. ಮಾತ್ರವಲ್ಲ, ಭುವನೇಶ್ವರ ರಸ್ತೆಯಲ್ಲಿ, ಪುರಿಯಿಂದ ಮೂರು ಕಿಲೋಮೀಟರ್ ಹೊರಗೆ ಅವರ ಹೊಲದ ಪಕ್ಕದಲ್ಲಿಯೂ ದಾರಿ ಹೋಕರಿಗಾಗಿ ಪಾವೊ ವ್ಯವಸ್ಥೆ ಮಾಡಲಾಗಿದೆಯಂತೆ. ಜಾತ್ರಾ ಸಂದರ್ಭದಲ್ಲಿ ಒಂದೊಂದರಲ್ಲೂ ಏನಿಲ್ಲವೆಂದರೂ ದಿನಕ್ಕೆ ಮೂರ್‍ನಾಲ್ಕು ಸಾವಿರ ಮಂದಿಗೆ ನೀರು ಕೊಡಲಾಗುತ್ತದೆ ಎಂದು ವಿವರಿಸುತ್ತಾರವರು.
ಇದೆಲ್ಲಕ್ಕಿಂತ ವಿಶೇಷವೆಂದರೆ, ಅಷ್ಟೊಂದು ನೀರು ಸಂಗ್ರಹದ್ದು. ಒಂದು ವಾರ ಮುಂಚಿನಿಂದಲೇ ಮನೆಗಳಲ್ಲಿ ನೀರಿನ ಸಂಗ್ರಹ ಆರಂಭವಾಗಿರುತ್ತದಂತೆ. ಇಲ್ಲದಿದ್ದರೆ ಅಷ್ಟೊಂದು ಜನರಿಗೆ ನೀರು ಪೂರೈಸಲಾಗುವುದಿಲ್ಲ. ಮನೆಯ ಬಾವಿ, ನಗರ ನೀರು ಪೂರೈಕೆಯ ಕೊಳಾಯಿಯ ಸಹಾಯದಿಂದ ನಡುಮನೆಯಲ್ಲಿ ದೊಡ್ಡ ದೊಡ್ಡ ಕಡಾಯಿಗಳಲ್ಲಿ, ಪ್ಲಾಸ್ಟಿಕ್ ಡ್ರಮ್‌ಗಳಲ್ಲಿ ನೀರು ತುಂಬಿಟ್ಟುಕೊಂಡಿರುತ್ತಾರೆ. ನೀರು ತುಂಬಿಡುವಾಗಲೇ ಅದನ್ನು ಬಿಳೀ ಬಟ್ಟೆಯ ಮೂಲಕ ಸೋಸಿ ಶುದ್ಧತೆಯ ಬಗ್ಗೆ ಗಮನ ಹರಿಸಲಾಗುತ್ತದೆ. ಒಮ್ಮೆ ನೀರು ತುಂಬಿಟ್ಟ ಮೇಲೆ ನಡುಮನೆಗೆ ಸ್ನಾನ ಆಗದೇ ಪ್ರವೇಶವಿಲ್ಲ. ಯಾವ್ಯಾವುದೋ ಕೈಯಲ್ಲಿ ನೀರನ್ನು ಮೊಗೆಯುವಂತಿಲ್ಲ. ಸಂಗ್ರಹಿಸಿಟ್ಟ ನೀರನ್ನು ತೆಗೆಯುವುದೂ ನಿರ್ದಿಷ್ಟ ವ್ಯಕ್ತಿ ಮಾತ್ರ. ಆ ಜವಾಬ್ದಾರಿ ಸಾಮಾನ್ಯವಾಗಿ ಮನೆಯ ಯಜಮಾನನದ್ದೇ ಆಗಿರುತ್ತದೆ. ನೀರ ಕಟ್ಟೆಯ ಬಳಿಗೆ ಬರುವಾಗಲೂ ಪಾದರಕ್ಷೆಯನ್ನು ಹಾಕಿಕೊಂಡು ಹೋಗುವಂತಿಲ್ಲ. ಅಷ್ಟೊಂದು ಪಾವಿತ್ರ್ಯ ರಕ್ಷಣೆ.
ಒಟ್ಟಾರೆ ಇಂದಿನ ಬಾಟಲೀ ನೀರಿನ ವ್ಯಾಪಾರ ಭರಾಟೆಯ ನಡುವೆ ನೀರು ಹಂಚಿ ನೆಮ್ಮದಿ ಕಾಣುವ ಅಪರೂಪದ ಸಂಸ್ಕೃತಿ ಜಗನ್ನಾಥನ ಸನ್ನಿಯಲ್ಲಿ ಇನ್ನೂ ಉಳಿದುಕೊಂಡಿದೆ. ಇವೆಲ್ಲದರ ಮಧ್ಯೆಯೂ ಆಧುನಿಕತೆ ದಾಳಿ ಇಟ್ಟಿದೆ ಎಂಬುದು ಬೇಸರದ ಸಂಗತಿ. ರಥಯಾತ್ರೆಯ ಸಂದರ್ಭದಲ್ಲಿ ಸೇವೆಗೆ ನಿಲ್ಲುವ ಕೆಲ ಸಂಘ ಸಂಸ್ಥೆಗಳು ನೀರು ತುಂಬಿದ ಪ್ಲಾಸ್ಟಿಕ್ ತೊಟ್ಟೆಗಳನ್ನು ಹಂಚುತ್ತಿದ್ದುದೂ ಇತ್ತು. ರಥಯಾತ್ರೆಯ ಸಂದರ್ಭದಲ್ಲಿ ಸೇರುವ ಜನಸಾಗರ, ಮತ್ತವರ ದಾಹದ ಲಾಭ ಪಡೆಯಲು ಕೆಲ ಖಾಸಗೀ ಕಂಪನಿಗಳೂ ಮುಂದಾಗಿದ್ದುದೂ ಸ್ಪಷ್ಟವಾಗಿತ್ತ್ತು. ತಮ್ಮ ಕಂಪನಿಯ ಹೆಸರು ಮುದ್ರಿಸಿದ ತೊಟ್ಟೆಗಳನ್ನು ಸೇವೆಯ ಹೆಸರಲ್ಲಿ ಜನರಿಗೆ ಹಂಚಿ, ಪುರಿಯ ಕಸದ ರಾಶಿಗೆ ತಮ್ಮದೂ ಕೊಡುಗೆಯನ್ನು ನೀಡಿದ್ದರು. ಮರುದಿನ ನಗರದ ಬೀದಿಬೀದಿಗಳಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ಖಾಲಿ ತೊಟ್ಟೆಗಳು ಪಾವೋಗಳನ್ನು ಅಣಕಿಸಿದಂತೆ ಭಾಸವಾಗಿದ್ದರೆ ಅದು ವ್ಯವಸ್ಥೆಯ ದುರಂತ.
‘ಲಾಸ್ಟ್’ಡ್ರಾಪ್: ಪುರಿಯ ನೀರಿನ ದಾಹ ಹೇಗಿದೆ ಎಂದರೆ, ಅಲ್ಲಿನ ಜಗನ್ನಾಥ ದೇಗುಲ ಹಾಗೂ ಐತಿಹಾಸಿಕ ಗುಂಡೀಚಾ ದೇಗುಲದ ನಡುವೆ ಹರಿಯುತ್ತಿತ್ತೆನ್ನಲಾದ ನದಿ ಈಗ ನೆನಪು ಮಾತ್ರ. ಮಾತ್ರವಲ್ಲ ಕಲುಷಿತ ನೀರಿನಿಂದ ಹುಟ್ಟುವ ಎಲ್ಲ ರೋಗಗಳಿಗೂ ಪುರಿ ಆವಾಸ ಸ್ಥಾನ ಎನ್ನುತ್ತದೆ ಅಧ್ಯಯನ.
ಸಮ್ಮನಸ್ಸಿಗೆ ಶರಣು
4 months ago