Sunday, August 2, 2009

ಧರಣಿಯ ಧಾರಣ ಶಕ್ತಿ ಹರಣ


ಒಂದಷ್ಟು ಬಟಾನು ಬಯಲು. ಅದರ ಹಿಂದೆ ಪೈಪೋಟಿಗೆ ಬಿದ್ದು ನಿಂತಿರುವ ಬಂಡೆಗಳ ಸಾಲು ಸಾಲು. ಅಲ್ಲಲ್ಲಿ ಒಂದಷ್ಟು ಕುರುಚಲು ಹಸಿರು. ಬಂಡೆಗಳಾದರೋ ಎಂಥವು, ರಸ್ತೆ ಬದಿಯಲ್ಲಿ ಜಲ್ಲಿ, ಬೌಲ್ಡರ್‌ಗಳನ್ನು ಸುರುವಿಟ್ಟು ಹೋದ ಹಾಗೆ. ಬಿಮ್ಮನೆ ರಾಶಿಯಾಗಿ ಬಿದ್ದಿರುತ್ತವೆ. ಒಂದೇ ವ್ಯತ್ಯಾಸವೆಂದರೆ ಇವು ಆಕಾರದಲ್ಲಿ ನೂರಾರುಪಟ್ಟು ದೊಡ್ಡವು.


ಅಂಥ ಬೃಹದಾಕಾರದ ಬಂಡೆಗಳ ನಡುವೆ, ಸುಮ್ಮನೆ ಕಿವಿಗೊಟ್ಟು ಆಲಿಸಿದರೆ, ಸಣ್ಣಗೆ ಜುಳುಜುಳು ನಿನಾದ. ಬಯಲು ದಾಟಿ, ಬಂಡೆಗಳ ನಡುವೆ ನುಸುಳುತ್ತ ಹೊರಟರೆ ಆ ಶಬ್ದ ಹತ್ತಿರವಾಗುತ್ತ ಬರುತ್ತದೆ. ಈಗ ನಿನಾದ ಸ್ಪಷ್ಟ. ಒಂದಷ್ಟು ದೂರ ಸಾಗಿದರೆ, ನೆಲ ತೇವ ತೇವ. ಅಲ್ಲಿಗೆ ನಿಲ್ಲದೇ ನುಗ್ಗುತ್ತ, ನುಸುಳುತ್ತ ಕವಲೊಡೆದ ಕಾಲು ಹಾದಿಯಲ್ಲೇ ಕನಲದೇ ಕೊನೆಯತ್ತ ಹೊರಟರೆ ನೀರಿನ ಸೆಲೆ ಬಲಗೊಳ್ಳುತ್ತ ಬರುತ್ತದೆ. ಮೊದಲು ಒದ್ದೆ ಒದ್ದೆ ಎನಿಸುವ ನೆಲದಲ್ಲಿ ಕಿರು ಧಾರೆ ಪ್ರತ್ಯಕ್ಷ್ಯಗೊಳ್ಳುತ್ತದೆ. ಅದೇ ದೊಡ್ಡದಾಗುತ್ತ ಆಗುತ್ತ... ಸದ್ದು ಶುದ್ಧವಾಗಿ ಕೇಳುವ ಹಂತದಲ್ಲಿ ನೋಡಿದರೆ ಅಲ್ಲೊಂದು ಪುಟ್ಟ ತೊರೆಯೇ ಲಾಸ್ಯವಾಡುತ್ತಿರುತ್ತದೆ. ಬಂಡೆಗಳ ಹತ್ತಿ, ಬಂಡೆಗಳಿಂದ ಧುಮುಕಿ, ಬಂಡೆಗಳ ನಡುನಡುವೆಯೇ ನುಸುಳಿಕೊಂಡು ಹರಿಯುವ ಆ ಸುಂದರ ಕಿರು ಕನ್ನಿಕೆ, ದೇಹಕ್ಕಷ್ಟೇ ಅಲ್ಲ, ಕಣ್ಮನಗಳಿಗೂ ತಂಪನ್ನೀಯುತ್ತಿರುತ್ತಾಳೆ.


ರಣ ಬಿಸಿಲಿನಲ್ಲಿ ಕಾದು ಕೆಂಪಾದ ನಿಷ್ಕರುಣಿ ಬಂಡೆಗಳ ರಾಶಿಯಲ್ಲಿ ಯಾವ ಸುಳಿವೂ ಇಲ್ಲದೇ ಈ ತಂಪು ತಂಪು ಧಾರೆ ಅದೆಲ್ಲಿಂದ ಬಂತು ಎಂಬುದು ತೋಚದೇ ದಿಗ್ಭ್ರಮೆಯಾಗುತ್ತದೆ. ಯಾರು ಬಂಡೆಗಳ ಮೇಲೆ ಈ ಪಾಟಿ ನೀರು ತಂದು ಸುರಿಯುತ್ತಿರಬಹುದು ? ಅದೂ ಈ ಬಟಾ ಬೇಸಿಗೆಯಲ್ಲಿ ಬಿಟ್ಟೂ ಬಿಡದೇ ಹರಿವನ್ನು ಕಾಪಿಟ್ಟುಕೊಳ್ಳುವಷ್ಟು ಅಗಾಧ ಸಮೃದ್ಧತೆಯಾದರೂ ಹೇಗೆ ಬಂತು ?ರಹಸ್ಯವೇನೂ ಇಲ್ಲ. ತಿಂಗಳ ಸಂಬಳದಲ್ಲಿ ಸಂಸಾರ ಸಂಭಾಳಿಸುವ ನೌಕರನಂತೆಯೇ; ಮಳೆಗಾಲದ ಮೂರ್‍ನಾಲ್ಕು ತಿಂಗಳು ಬಿದ್ದ ನೀರನ್ನು ಹಿಡಿದಿಟ್ಟುಕೊಳ್ಳುವ ಗುಡ್ಡದ ನೆತ್ತಿಯ ಮೇಲಿನ ನೆಲ ವರ್ಷವಿಡೀ ಧಾರಾಳಿಯಾಗಿ ವರ್ತಿಸುತ್ತದೆ. ಮಗ್ಗುಲಿಗೆ ಬಿದ್ದು ಓಡುವ ಮಳೆಯನ್ನು ತನ್ನೊಡಲಿಗೆ ಸೆಳೆದುಕೊಳ್ಳುವ ಬಂಡೆಗಳು ತನ್ನಡಿಗೆ ಸೆಳೆದೊಯ್ಯುತ್ತವೆ. ಅಲ್ಲಿ ಇಂಗಿದ್ದು ಮತ್ತೆಲ್ಲೋ ಮೇಲೆದ್ದು ಇಣುಕುತ್ತದೆ. ಅಲ್ಲೇ ಒರತೆ ಸೃಷ್ಟಿಯಾಗುತ್ತದೆ. ಕೆಳಗಿನ ಹೊಲಗದ್ದೆಗಳಲ್ಲಿ ನೀರಿನ ಕೊರತೆಯನ್ನು ಇಂಥ ಒರತೆಗಳೇ ನೀಗಿಸುತ್ತವೆ.


ಇಂಥ ಸಾಕಷ್ಟು ಜಲ ಸೆಲೆಗಳು ನಮ್ಮ ನಿಮ್ಮ ಊರುಗಳಲ್ಲೂ ಮಾಮೂಲಿ ಎಂಬಂಥಾಗಿತ್ತು. ಒಮ್ಮೆ ಹಳ್ಳಿಗರ ಕೇಳಿ ನೋಡಿ, ಹಿಂದೆಲ್ಲ, ಮಲ್ಲಯ್ಯನ ಗುಡ್ಡದಿಂದ ವರ್ಷಪ್ಪೊತ್ತಿಗೆ ಸಾಕಾಗುವಷ್ಟು ಕಾದ್ಗೆ ಹರಿಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಅದೂ ಬತ್ತಿ ಹೋಗಿದೆ. ಅದು ಹೋದದ್ದೇ ಹೋದದ್ದು, ಊರಿನ ಎಲ್ಲ ಬಾವಿಗಳೂ ಒಣಗಿ ಹೋಗಿವೆ. ಹೊಲದ ಹೂದಲು ಕಳೆದು ಎಷ್ಟೋ ದಿನಗಳಾದವು. ಹೆಚ್ಚೆಂದರೆ ಆಷಾಢದಲ್ಲಿ ಕಂಡೂ ಕಾಣಿಸದಂತೆ ಮೈದಾಳುವ ಕಾದ್ಗೆ , ಮಳೆಗಾಲ ಮುಗಿಯುವ ಹೊತ್ತಿಗೆ ಮರೆಯಾಗಿಬಿಡುತ್ತದೆ. ನೀರಿಗಾಗಿ ಕೊರೆದ ಬೋರ್‌ವೆಲ್‌ಗಳೂ ಬೋರಲು ಬಿದ್ದುಹೋಗಿವೆ...ಗಂಗವ್ವ ನಮ್ಮೂರಿಗೆ ಮುನಿಸಿಕೊಂಡುಬಿಟ್ಟಿದ್ದಾಳೆ.....


ಹೀಗೆ ಅಲವತ್ತುಕೊಳ್ಳುವುದು ಹೊಸದೇನಲ್ಲ. ಯಾವುದೋ ಒಂದೂರಿನ ಸ್ಥಿತಿಯೂ ಅಲ್ಲ. ಏನಾಗಿದ್ದಿರಬಹುದು? ಗಂಗೆ ಮುನಿಸು ತೋರಿದ್ದು ಒಂದು ಊರಿಗೆ ಮಾತ್ರವೇ ?ಗುಡ್ಡದ ಬುಡದಲ್ಲಿ ನೆಲದ ಮೇಲಿನ ಮರಳು ಬಗೆದರೆ ಸಾಕು, ಬುಳಬುಳನೆ ಉಕ್ಕುತ್ತಲಿದ್ದ ನೀರು ಹೋದದ್ದಾದರೂ ಎಲ್ಲಿಗೆ ? ಪ್ರಶ್ನೆಗಳ ಸುತ್ತ ಪ್ರಶ್ನೆಗಳಷ್ಟೇ ಗಿರಕಿ ಹೋಡೆಯುತ್ತವೆ; ಬಿಟ್ಟರೆ ಉತ್ತರಿಸುವ ಸಾಮರ್ಥ್ಯ ಯಾರಲ್ಲೂ ಇಲ್ಲವಾಗಿದೆ. ಎಷ್ಟೂ ಪ್ರದೇಶಗಳಲ್ಲಿ ಇಡೀ ಜನವಸತಿಯ ಎಲ್ಲ ನೀರಿನ ಅಗತ್ಯವನ್ನೂ ಗುಡ್ಡದಿಂದ ಇಳಿದು ಬರುವ ಇಂಥ ಸೆಲೆಗಳೇ ಪೂರೈಸುತ್ತಿದ್ದವು. ಮಲೆನಾಡಿನ ಪ್ರದೇಶಗಳಲ್ಲಿ ವರತೆ, ಅಬ್ಬೀ, ಹರಿಣಿ, ಒಗದೇ ನೀರು ಎಂದು ಗುರುತಿಸುವ ಜಲಸ್ರೋತಕ್ಕೆ ಬಯಲು ಪ್ರದೇಶಗಳಲ್ಲಿ ಒಂದೊಂದು ಕಡೆ ಒಂದೊಂದು ಹೆಸರಿದೆ. ಸೆಲೆ, ಝರಿ, ಝರಪಿ ಎಂದೂ ಇವು ಉತ್ತರ ಕರ್ನಾಟಕ ಭಾಗದಲ್ಲಿ ಚಿರಪರಿಚಿತ. ಮೈಸೂರು ಕರ್ನಾಟಕ ಭಾಗದಲ್ಲಿ ಇದರ ವಿಸ್ತೃತ ರೂಪವೇ ತಲಪರಿಕೆಗಳು. ಕರಾವಳಿ, ಮಂಗಳೂರು ಭಾಗದಲ್ಲಿ ಇದನ್ನೇ ನೀರ ಕಣಿ, ತೋಡು. ದಂಬೆ ಎಂಬ ಹೆಸರಿನಿಂದ ಗುರುತಿಸುತ್ತಾರೆ.


ಗುಡ್ಡದಿಂದ ಇಳಿದು ಬರುವ ಇಂಥ ನೀರನ್ನೇ ಮನೆಯಂಗಳದವರೆಗೂ ಹರಿಸಿಕೊಂಡು ಬಂದು ತುದಿಯಲ್ಲೊಂದು ಮರದ ತುಂಡನ್ನೋ, ಪೈಪ್ ಅನ್ನೋ ಜೋಡಿಸಿಕೊಂಡು ಬಳಸಲಾಗುತ್ತಿತ್ತು. ಶುದ್ಧ ಸಟಿಕದಂತೆ ಸುರಿಯುವ ಇಂಥ ಅಬ್ಬೀ ನೀರಿನ ಶುದ್ಧತೆ, ರುಚಿಗೆ ಸಾಟಿಯೆಂಬುದೇ ಇರುತ್ತಿರಲಿಲ್ಲ. ಯಾವ ಕಾರಣಕ್ಕೂ ಇಂಥ ಜಲಮೂಲ ಅಪವಿತ್ರಗೊಳ್ಳದಂತೆ, ಮಾಲಿನ್ಯಕ್ಕೊಳಗಾಗದಂತೆ ಹಳ್ಳಿಗರು ರಕ್ಷಿಸುತ್ತಿದ್ದರು. ಮಾತ್ರವಲ್ಲ, ಅದನ್ನು ವರ್ಷವಿಡೀ ಕಸ, ಕಡ್ಡಿಗಳಿಂದ ದೂರವಿಟ್ಟು ನಿರ್ವಹಿಸುತ್ತಿದ್ದರು.


ಇದು ಕೇವಲ ನೀರಿನ ಸೆಲೆಯಷ್ಟೇ. ಜನಜೀವನದ ಸೆಲೆಯಾಗಿಯೂ ಪೊರೆಯುತ್ತಿದ್ದವು. ಇಂಥ ಜೀವ ಸೆಲೆಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗಿ ಹೋಗಿವೆ ಎಂದರೆ ನಗರೀಕರಣದ ಅಪಸವ್ಯದ ಬಗ್ಗೆ ಆರೋಪ ಮಾಡದೇ ಇರಲಾದೀತೆ ? ನಿಜವಾಗಿ ಇಂಥ ಸೆಲೆ ಬತ್ತಿ ಹೋಗಿದ್ದಕ್ಕೆ ಮೂಲ ಕಾರಣ ಮಳೆಯ ಕೊರತೆಯಲ್ಲ. ಅಂಥದ್ದೊಂದು ಮಹಾಭ್ರಮೆ ನಮ್ಮಲ್ಲಿ ಮನೆ ಮಾಡಿದೆ. ಸುರಿವ ಮಳೆಯಲ್ಲಿ ಯಾವ ವ್ಯತ್ಯಾಸವೂ ಆಗಿಲ್ಲ. ಹೆಚ್ಚೆಂದರೆ ಒಂದಷ್ಟು ಸ್ಥಳಾಂತರ, ಸ್ಥಿತ್ಯಂತರವಾಗಿರಬಹುದು. ಆದರೆ ಅದನ್ನು ಹಿಡಿದಿಟ್ಟುಕೊಳ್ಳುವ ಧಾರಣಾಶಕ್ತಿ ಭೂಮಿಯಲ್ಲಿ ಕುಸಿದಿದೆ. ಮಳೆಗೆ ಮೈಯೊಡ್ಡಿ ನಿಲ್ಲುತ್ತಿದ್ದ ಬಂಡೆಗಳು ಪುಡಿಯಾಗಿ ಊರ ರಸ್ತೆಗಳನ್ನು ಸೇರಿವೆ. ಗ್ರಾನೈಟ್ ಹೆಸರಿನಲ್ಲಿ ನಾನಾ ಆಕಾರ ಪಡೆದು ಕಟ್ಟಡಗಳ ನೆಲದಲ್ಲಿ ಕಂಗೊಳಿಸಲಾರಂಭಿಸಿವೆ. ಹೀಗಾಗಿ ಗುಡ್ಡಗಳು ಬಯಲಾಗಿವೆ. ಅರಣ್ಯ ನಾಶವಾಗಿ ಭೂಮಿ ಬಕ್ಕಾಗಿ ಹೊಳೆಯುತ್ತಿದೆ. ಹೀಗಾಗಿ ಬಿದ್ದ ಮಳೆ ನೀರು ನಿಲ್ಲುವ ಪ್ರಮೇಯವೇ ಇಲ್ಲ. ದಕ್ಷಿಣದ ರಾಜ್ಯಗಳಲ್ಲಿ ಕಂಡು ಬರುವ ವಿಶೇಷ ಶಿಲಾವೃತ ಬೆಟ್ಟ ಸಾಲುಗಳಿಗೆ ನೀರನ್ನು ಇಂಗಿಸಿಕೊಳ್ಳುವ ವಿಶೇಷ ಶಕ್ತಿಯಿದ್ದಿತ್ತು. ಹೀಗೆ ಶಿಲಾಪದರದಲ್ಲಿ ಇಂಗಿದ ನೀರು ಬುಡಕ್ಕೆ ಹೋಗಿ ಇನ್ನೆಲ್ಲೋ ಒರತೆಯಾಗಿ ಉಕ್ಕುತ್ತಿತ್ತು. ಮಾತ್ರವಲ್ಲ. ಗುಡ್ಡದಗುಂಟ ಇಳಿದು ಬಂದು ಕೆಳಭಾಗದ ಕೆರೆ,ಕುಂಟೆಗಳಿಗೆ ಜಲಮೂಲವಾಗಿ ನಿಲ್ಲುತ್ತಿತ್ತು. ಸುತ್ತಮುತ್ತಲಿನ ಹಳ್ಳಿಗಳ ದಾಹ ಇಂಗಿಸುತ್ತಿದ್ದುದಷ್ಟೇ ಅಲ್ಲ, ತಂಪು ತನಿಯೆರೆಯುತ್ತಿತ್ತು.


ನಿರ್ವಹಣೆಯ ಕೊರತೆ, ನಿರ್ಲಕ್ಷ್ಯ, ನೀರಿನ ಬಗೆಗಿನ ನಿರ್ಲಜ್ಜತನ ಇಂದು ಅತ್ಯಪೂರ್ವ ಜಲ ಮೂಲವೊಂದಕ್ಕೆ ಧಕ್ಕೆ ತಂದಿದೆ ಎಂಬುದಂತೂ ಸತ್ಯ. ಇದರಿಂದ ಆದ ನಷ್ಟ ಒಂದೆರಡಲ್ಲ. ಪಾರಂಪರಿಕ ವ್ಯವಸ್ಥೆಯೊಂದನ್ನೇ ನಾಶ ಮಾಡಿದ್ದು ಮಾತ್ರವಲ್ಲ. ಅದರ ಹಿಂದಿದ್ದ ಸಾಂಸ್ಕೃತಿಕ ಬದುಕನ್ನು ಬುಡಮೇಲು ಮಾಡಿದೆ. ನಿಸರ್ಗದತ್ತವಾಗಿದ್ದ ಸಂಪನ್ಮೂಲವೊಂದನ್ನು ಕಸಿದುಕೊಂಡಿದೆ. ರೈತರಲ್ಲಿ, ಗ್ರಾಮೀಣರಲ್ಲಿ ಇದ್ದ ನೀರಿನ ಭದ್ರತೆಯನ್ನೇ ಕಿತ್ತುಕೊಂಡಿದೆ. ಕೃಷಿ ಬದುಕಿನ ನೆಮ್ಮದಿಗೆ ಭಂಗ ಬಂದಿದೆ. ಭಾವನೆಗಳ ಬೆಚ್ಚನೆಯ ಸುಖಕ್ಕೆ ತ್ಯಾಮಾನ ತಂದಿದೆ. ನಿಸರ್ಗದತ್ತ ಸೌಂದರ್ಯ ಮರೆಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನೀರಿನ ಬಗೆಗೆ ಇದ್ದ ತಾಯೆದೆಯ ಹಾಲಿನಂಥ ಸಮೃದ್ಧಿ, ಶುದ್ಧತೆಯ ನಂಬಿಕೆಯನ್ನು ಹುಸಿಯಾಗಿಸಿದೆ. ಮಾನವನ ಇಂಗದ ದಾಹಕ್ಕೆ ಇದ್ದ ಇಂಥದ್ದೊಂದು ನೈಜ ನೀರ ಸಾಂತ್ವನದ ಬದಲಾಗಿ ಕುಡಿಯುವ ನೀರೂ ಮಾರುಕಟ್ಟೆಯ ಕೃತಕ ಸರಕಾಗಿ ಮಾರ್ಪಟ್ಟಿದ್ದನ್ನು ಸಹಿಸಲಾದೀತೆ ? ಯೋಚಿಸಿ.


‘ಲಾಸ್ಟ್’ಡ್ರಾಪ್: ನಿಸರ್ಗದ ಮಡಿಲಲ್ಲಿ ಜುಳುಜುಳು ಹರಿಯುವ ತೊರೆಯ ಬುಡದಲ್ಲೊಮ್ಮೆ ಹೋಗಿ ನಿಂತು, ಬೊಗಸೆಯಲ್ಲಿ ಆ ಅಮೃತವನ್ನು ತುಂಬಿಕೊಂಡು ಮುಖಕ್ಕೆ ಎರಚಿಕೊಂಡು ನೋಡಿ. ಮತ್ತೊಂದು ಬೊಗಸೆ ಮೊಗೆದು ಗುಟುಕರಿಸಿ. ಆಹ್...ಅಮೃತಜನ್ಯ ಸಿಹಿಯ ಅನುಭವ, ಸಕಲ ಆಯಾಸ ಕಳೆದು ಸುಖದ ಶಿಖರವನ್ನು ಮೀಟಿದ ಅನುಭಾವ ನಿಮ್ಮದಾಗದಿದ್ದರೆ ಅಂಥ ಅರಸಿಕತೆಗೊಂದು ಕ್ಕಾರವಿರಲಿ.

No comments: