ಬೇಕಿದ್ದರೆ ನೋಡಿ, ಜೀವನ ಎಂಬುದರ ಬಗ್ಗೆ ತಿಳಿಯುವಾಗ ಬದುಕಿಗೆ ಸಂಬಂಸಿ ಹಲವು ಸಂಗತಿಗಳನ್ನು ಅರಿಯಲೇಬೇಕಾಗುತ್ತದೆ. ಹಾಗೆಯೇ ನೀರು. ಅದು ಜೀವನದ ಮೂಲದ್ರವ್ಯ. ಜೀವನದ ಚೈತನ್ಯಾಧಾರ. ಹೀಗಾಗಿ ಜೀವನದ ಅರಿವಿಗೆ ನೀರಿನ, ಅದಕ್ಕೆ ಸಂಬಂಸಿದ ಹಲವು ಸಂಗತಿಗಳನ್ನು ನಾವು ಅರಿತುಕೊಳ್ಳುವುದು ಪ್ರಾಥಮಿಕ ಅಗತ್ಯವಾಗುವುದಿಲ್ಲವೇ ?
ನೀರಿನ ಬಗ್ಗೆ ಮಾತನಾಡುವಾಗ, ಅದರ ಕುರಿತ ಬರಹಗಳನ್ನು ಓದುವಾಗ, ತಜ್ಞರ ಮಾತುಗಳನ್ನು ಆಲಿಸುವಾಗ-ಹಲವು ಸಂದರ್ಭಗಳಲ್ಲಿ ಅನೇಕ ಪದಗಳು ಬಳಕೆಯಾಗುತ್ತಲೇ ಇರುತ್ತವೆ. ಅನೇಕ ಬಾರಿ ಅವುಗಳ ಸರಿಯಾದ ಅರ್ಥವೇ ನಮಗೆ ತಿಳಿದಿರುವುದಿಲ್ಲ. ಆದರೆ ಇವುಗಳಿಲ್ಲದೆ ನೀರಿನ ವಿಚಾರ ಮಾತನಾಡಲೂ ಆಗುವುದಿಲ್ಲ. ನೀರಿನ ಬಗೆಗೆ ತಿಳಿದುಕೊಳ್ಳುವ ಮೊದಲು ಅಂಥ ಹಲವು ನಿತ್ಯಬಳಕೆಯ ಹಾಗೂ ಪಾರಿಭಾಷಿಕ ಪದಗಳ ಕುರಿತು ಒಂದಷ್ಟು ಹೇಳುವ ಪ್ರಯತ್ನ ಈ ವಾರದ ಅಂಕಣದಲ್ಲಿದೆ.
ಮೇಲ್ಮಣ್ಣು: ಹೆಸರೇ ಸೂಚಿಸುತ್ತದೆ. ಮೇಲೆ ಇರುವ ಮಣ್ಣು. ಆದರೆ ಎಷ್ಟು ಮೇಲೆ ಎಂಬುದು ಪ್ರಶ್ನೆ. ಮಣ್ಣಿನ ಮೇಲು ಬದಿಯ ೧.೫ ಮೀಟರ್‌ನ ಪದರ. ಇದು ಹಳ್ಳಿ, ಕೃಷಿ ಜಮೀನುಗಳಲ್ಲಿ ಸರಿ. ಆದರೆ ನಗರಗಳ ವಿಚಾರಕ್ಕೆ ಬಂದಾಗ ಸರಿಹೊಂದದು. ನಗರಗಳಲ್ಲಿ ಕಟ್ಟಡ ನಿರ್ಮಾಣದ ಸಂದರ್ಭ ಸುತ್ತಮುತ್ತಲಿನ ಜಮೀನಿನ ಮೇಲ್ಮೈ ಮಣ್ಣು ಅವುಗಳ ಅವಶೇಷಗಳಿಂದ ತುಂಬಿರುತ್ತದೆ. ಹೀಗಾಗಿ ಇಲ್ಲಿ ಮೇಲ್ಮಣ್ಣನ್ನು ಗುರುತಿಸುವುದು ಕಷ್ಟ.
ಕೆಳ ಮಣ್ಣು: ನೆಲಮಟ್ಟಕ್ಕಿಂತ ೧.೫ ಮೀಟರ್ ನಂತರದ ಮಣ್ಣು. ಅದೇನೋ ಸರಿ ಇದನ್ನು ಗುರುತಿಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮರಳು, ಜೇಡಿ, ಆವೆ, ಸಣ್ಣಕಲ್ಲುಗಳು ಅಥವಾ ಬಂಡೆ ಇತ್ಯಾದಿಗಳ ಶೇಕಡಾವಾರು ಪ್ರಮಾಣಕ್ಕನುಸರಿಸಿ ಕೆಳಮಣ್ಣಿನ ರಚನೆ, ವೈವಿಧ್ಯ, ಗುಣವಿಂಗಡಣೆ ಸಾಧ್ಯ. ಸಾಮಾನ್ಯವಾಗಿ ಸ್ಥಳದಲ್ಲಿ ಕಟ್ಟಡ ನಿರ್ಮಿಸುವ ಮುನ್ನ, ಯಾವ ಬಗೆಯ ತಳಪಾಯ ಹಾಕಬೇಕು ಎಂಬುದನ್ನು ನಿರ್ಧರಿಸಲು ಈ ಪರೀಕ್ಷೆಯನ್ನು ೭ರಿಂದ ೧೦ ಮೀಟರ್ ಕೆಳಗಿನ ಮಣ್ಣಿನವರೆಗೂ ಮಾಡಲಾಗುತ್ತದೆ.
ಮೇಲ್ಮೈ ಜಲ: ಕೆಳಮಣ್ಣಿನಲ್ಲಿ ಉಂಟಾಗುವ ರಂಧ್ರಗಳಲ್ಲಿ ಶೇಖರವಾಗುವ, ಇನ್ನಷ್ಟು ತಳದವರೆಗೆ ಇಳಿಯಬಲ್ಲ, ಮೇಲ್ಮೈ ಹಂತದವರೆಗೆ ಒಸರುವ ನೀರು. ಇದನ್ನು ಬಾವಿ ಅಥವಾ ಬೋರ್‌ವೆಲ್‌ಗಳ ಮೂಲಕ ಸಂಗ್ರಹಿಸಬಹುದು.
ಜಲಜಶಿಲೆ: ಮೇಲ್ಮೈ ಮಣ್ಣಿಗಿಂತ ಕೆಳಗಿರುವ, ನೀರನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳುವ ಹಾಗೂ ನೀರಿನ ಸಂಚಾರಕ್ಕೆ ಹಾದಿ ಮಾಡಿಕೊಡುವ, ಹಾಗಾಗಿಯೇ ನೀರಿನ ಮೂಲ ಎನಿಸಿಕೊಂಡಿರುವ ಮಣ್ಣು ಅಥವಾ ಬಂಡೆಯ ಪದರ.
ಮೇಲ್ಮೈ ಜಲ ಮಟ್ಟ: ಕೆಳ ಮಣ್ಣಿನ ಮೇಲುಭಾಗದಲ್ಲಿರುವ ನೀರಿನ ಮಟ್ಟ. ಇದು ಒಂದು ಪ್ರದೇಶದಲ್ಲಿ ಎಲ್ಲ ಕಡೆಗೂ ಸಮಾನವಾಗಿರಬೇಕೆಂದೇನಿಲ್ಲ. ಕೆಳಮಣ್ಣಿನ ಗುಣಧರ್ಮ ಹಾಗೂ ನೀರಿನ ಬಳಕೆಯ ಪ್ರಮಾಣಕ್ಕನುಸರಿಸಿ ಇದು ಏರುಪೇರಾಗಬಹುದು.
ಬಾವಿ: ಮೇಲ್ಮೈ ಜಲ ಮಟ್ಟ ದೊರೆಯುವವರೆಗೆ ತೋಡಲಾದ ಗುಂಡಿ. ಮರಳು ಅಥವಾ ಜೇಡಿ ಮಣ್ಣಿನಲ್ಲಾದರೆ, ತೋಡಿದ ಬಾವಿಯ ಬದಿ ಕುಸಿಯದಂತೆ ಇಟ್ಟಿಗೆ ಅಥವಾ ಕಾಂಕ್ರೀಟ್‌ನ ರಿಂಗ್ ನಿರ್ಮಿಸುವುದು ಅಗತ್ಯ. ಕಲ್ಲು ಬಂಡೆ ಇದ್ದರೆ ಅಂಥ ರಿಂಗ್ ಅನಗತ್ಯ. ಸಾಮಾನ್ಯವಾಗಿ ಈ ಗುಂಡಿ ವೃತ್ತಾಕಾರದಲ್ಲಿದ್ದು, ೩ರಿಂದ ೧೨ ಅಡಿ ತ್ರಿಜ್ಯ ಹೊಂದಿರುತ್ತದೆ ಹಾಗೂ ೪೫ ಅಡಿಗಿಂತ ಆಳವಾಗಿರುವುದಿಲ್ಲ.
ಸಾಮಾನ್ಯವಾಗಿ, ಬಾವಿಯ ನೀರಿನ ಗುಣಮಟ್ಟ ಬೋರ್‌ವೆಲ್ ನೀರಿಗಿಂತ ಉತ್ತಮವಾಗಿರುತ್ತದೆ. ಆದರೆ ಕೆಲವೆಡೆ, ಬಂಡೆಗಳಿರುವ ಪ್ರದೇಶದಲ್ಲಿ ಬೋರ್‌ವೆಲ್ ನೀರು ಬಾವಿಯದಕ್ಕಿಂತ ಚೆನ್ನಾಗಿರುತ್ತದೆ. ಇದಕ್ಕೆ ‘ತೆರೆದ ಬಾವಿ’ ಅಂತ ಯಾಕೆನ್ನುತ್ತಾರೆ ಅಂದರೆ, ಪಂಪ್ ತಂತ್ರಜ್ಞಾನ ಆವಿಷ್ಕಾರವಾಗುವ ಮೊದಲು ರಾಟೆ-ಹಗ್ಗ ಬಳಸಿ ಬಾವಿಯಿಂದ ನೀರೆತ್ತುತ್ತಿದ್ದರು. ಕೆಲವೆಡೆ ಬಾವಿಯ ಬದಿಯಲ್ಲಿ ಸಣ್ಣ ಮೆಟ್ಟಲು ಅಳವಡಿಸಿ ಕೆಳಗಿಳಿದು ನೀರು ಹೊರುವುದೂ ಇತ್ತು. ಇಂದು ಎಲ್ಲ ಕಡೆ ಪಂಪ್ ಇರುವುದರಿಂದ, ಬಾವಿಗಳನ್ನು ತೆರೆದೇ ಇರಬೇಕಾದ ಅಗತ್ಯವೇನೂ ಇಲ್ಲ. ಇಂದು ಮನುಷ್ಯರ ಹಾಗೂ ವಾಹನಗಳ ಓಡಾಟಕ್ಕೆ ಭಂಗ ಬಾರದಂತೆ ಅವುಗಳ ಮೇಲೆ ಗಟ್ಟಿಯಾದ ಕವರ್ ಹೊದಿಸಬಹುದು.
ಕೊಳವೆ ಬಾವಿ: ಸಾಮಾನ್ಯವಾಗಿ ಬಾವಿಗಳಿಗಿಂತ ಹೆಚ್ಚು ಆಳಕ್ಕೆ ಮಣ್ಣಿನಲ್ಲಿ ಕೊರೆದಿರುವ, ೫ರಿಂದ ೧೦ ಇಂಚು ತ್ರಿಜ್ಯವಿರುವ ವೃತ್ತಾ ಕಾರದ ರಂಧ್ರ. ಇದು ಮಣ್ಣಿನ ನಾನಾ ಪದರಗಳಿಂದ ನೀರನ್ನು ಸಂಗ್ರಹಿಸಬಲ್ಲದು. ಸಾಮಾನ್ಯ ಮಣ್ಣಿನಲ್ಲಿ ಇವನ್ನು ರಿಗ್ ಬಳಸಿ, ಬಂಡೆಮಣ್ಣಿನಲ್ಲಿ ನ್ಯೂಮಾಟಿಕ್ ರಿಗ್ ಬಳಸಿ ಕೊರೆಯಲಾಗುತ್ತದೆ. ರಂಧ್ರದೊಳಗೆ ಮಣ್ಣು ಕುಸಿಯದಂತೆ ಪಿವಿಸಿ ಕೇಸಿಂಗ್ ಪೈಪ್ ಇಳಿಸಲಾಗುತ್ತದೆ. ಬಂಡೆಮಣ್ಣಿನಲ್ಲಿ ಕೇಸಿಂಗ್ ಅಗತ್ಯವಿಲ್ಲ. ನಾನಾ ಪದರಗಳಿಗೆ ತಕ್ಕಂತೆ ಈ ಕೇಸಿಂಗ್ ಪೈಪಿನಲ್ಲಿ ತೂತುಗಳಿರುತ್ತವೆ. ಹಿಂದೆ ಕಬ್ಬಿಣದ ಕೇಸಿಂಗ್ ಪೈಪ್‌ಗಳನ್ನು ಬಳಸಲಾಗುತ್ತಿತ್ತು.
ಟ್ಯೂಬ್‌ವೆಲ್: ಇದು ಕೂಡ ಬೋರ್‌ವೆಲ್. ಆದರೆ ಹೆಚ್ಚು ಆಳವಾಗಿರುವುದಿಲ್ಲ.
ಬಳಕೆ ಬಾವಿ/ಬಳಕೆ ಬೋರ್‌ವೆಲ್: ನೀರನ್ನು ಬಳಕೆಗೆ ಪಡೆಯಲಾಗುತ್ತಿರುವ ಬಾವಿ ಅಥವಾ ಕೊಳವೆಬಾವಿ.
ಮರುಪೂರಣ ಬಾವಿ: ಜಲ ಮಟ್ಟ ಬಾವಿಯ ತಳಕ್ಕಿಂತಲೂ ಇಳಿದುಹೋಗಿರುವುದರಿಂದ ನೀರು ಖಾಲಿಯಾಗಿ, ಬಳಕೆಗೆ ಉಪಯೋಗವಾಗದ ಬಾವಿ. ಹೀಗಾಗಿ ಇದರಲ್ಲಿ ಮಳೆ ನೀರು ಮಾತ್ರ ನಿಲ್ಲುತ್ತದೆ. ಕೆಲ ಕಾಲಾನಂತರ, ಜಲಮಟ್ಟ ಏರಿದಾಗ ಈ ಬಾವಿ ಬಳಕೆಯೋಗ್ಯವಾಗಬಹುದು.
ಇಂಗು ಗುಂಡಿ: ಮಳೆ ನೀರನ್ನು ಇಂಗಿಸಲು ಅನುಕೂಲ ಹಾಗೂ ಅಗತ್ಯಕ್ಕೆ ತಕ್ಕಷ್ಟು ಆಳಕ್ಕೆ ಹಾಗೂ ಅಗಲಕ್ಕೆ ಮಣ್ಣಿನಲ್ಲಿ ಕೊರೆದಿರುವ ಗುಂಡಿ. ಮಳೆ ನೀರು ಇಲ್ಲಿ ಸಂಗ್ರಹಗೊಂಡು, ನಿಂತು, ಇಂಗಿ ಜಲ ಮಟ್ಟವನ್ನು ತಲುಪುತ್ತದೆ. ಬಾವಿಗಿದ್ದಂತೆ ಇದಕ್ಕೂ ಇಟ್ಟಿಗೆ ಅಥವಾ ಕಾಂಕ್ರೀಟಿನ ಲೈನಿಂಗ್ ಇರಬಹುದು. ಅಗತ್ಯಬಿದ್ದಾಗ ಇದನ್ನೇ ಆಳಕ್ಕೆ ತೋಡಿ, ಬಾವಿಯಂತೆಯೂ ಬಳಸಲು ಸಾಧ್ಯ.
ಮರುಪೂರಣ ಕೊಳವೆ ಬಾವಿ: ಸಮರ್ಪಕವಾಗಿ ನಿರ್ಮಿಸಲಾದ ಕೊಳವೆ ಬಾವಿ- ಇದರ ಮುಖ್ಯ ಉದ್ದೇಶ ಕೆಳಮಣ್ಣಿಗೆ ಮಳೆ ನೀರನ್ನು ತಲುಪಿಸುವುದು. ಮರುಪೂರಣ ಬಾವಿಯಂತೆ ಇದು ಕೂಡ ಜಲ ಮಟ್ಟವನ್ನು ಮುಟ್ಟಿರಬಹುದು ಅಥವಾ, ಅದಕ್ಕೆ ನೀರೂಡಿಸಲು ಅಗತ್ಯವಾದ ಪದರದ ತನಕ ಇರಬಹುದು. ಕೆಲ ಕಾಲದ ಬಳಿಕ, ಜಲಮಟ್ಟವು ಇದರ ತಳಭಾಗವನ್ನು ದಾಟಿ ಮೇಲೆ ಬಂದರೆ ಆಗ ಇದನ್ನು ಬಳಕೆಯೋಗ್ಯವಾಗಿ ಮಾಡಬಹುದು.
ಇಂಗು ರಂಧ್ರ: ನೀರನ್ನು ಹೀರಿಕೊಳ್ಳಲು ಅಗತ್ಯವಾದಷ್ಟು ಆಳಕ್ಕೆ ಮಣ್ಣಿನಲ್ಲಿ ಕೊರೆಯಲಾದ ೫ರಿಂದ ೧೦ ಇಂಚು ತ್ರಿಜ್ಯವುಳ್ಳ ರಂಧ್ರ. ಚಿಕ್ಕ ಕಲ್ಲುಗಳು ಹಾಗೂ ಇದ್ದಲನ್ನು ಇದರಲ್ಲಿ ತುಂಬಿಸಲಾಗುತ್ತದೆ. ಇದರೊಳಗೆ ನೀರು ಕಲ್ಲು ಹಾಗೂ ಇದ್ದಿಲಿನ ನಡುವೆ ಹರಿದು ಇಂಗುತ್ತದೆ. ಕಲ್ಲುಗಳ ಬದಲು ರಂಧ್ರಗಳುಳ್ಳ ಪಿವಿಸಿ ಪೈಪನ್ನೂ ಬಳಸಬಹುದು. ರಂಧ್ರದ ಬಾಯಿ ೨-೩ ಅಡಿಯಷ್ಟು ಅಗಲವಿದ್ದಾಗ, ಶುದ್ಧ ಮರಳು ಹಾಕಿ ಮುಚ್ಚಬಹುದು.
ರೋಗ ಜೀವಾಣು: ಕೆಲ ನಮೂನೆಯ ಬ್ಯಾಕ್ಟೀರಿಯಾಗಳು ಹಾಗೂ ವೈರಸ್‌ಗಳು ಕುಡಿಯುವ ನೀರು ಶುದ್ಧವಾಗಿಲ್ಲದಿದ್ದಾಗ ಅವುಗಳ ಮೂಲಕ ಮಾನವನ ಜೀರ್ಣಾಂಗ ವ್ಯವಸ್ಥೆಯೊಳಗೆ ಪ್ರವೇಶಿಸಿ ರೋಗವನ್ನುಂಟುಮಾಡಬಲ್ಲವು. ಉದಾಹರಣೆಗೆ: ಕಾಲರಾ, ವಾಂತಿ ಭೇದಿ, ಟೈಫಾಯಿಡ್, ಜಾಂಡೀಸ್ ಇತ್ಯಾದಿ.
ಸೀವೇಜ್ (ಕಪ್ಪು ನೀರು): ನಮ್ಮ ಶೌಚಾಲಯಗಳಿಂದ ಕಲ್ಮಶಸಹಿತ ಹರಿಯುವ ನೀರು.
ಸಲ್ಲೇಜ್ (ಬೂದು ನೀರು): ನಾವು ಸ್ನಾನಕ್ಕೆ, ಬಟ್ಟೆ-ಪಾತ್ರೆ-ವಾಹನ- ನೆಲ ತೊಳೆಯಲು ಬಳಸಿದ ನೀರು. ಈ ನೀರು, ಸೀವೇಜ್‌ನಷ್ಟು ಹಾನಿಕಾರಕ ರೋಗ ಜೀವಾಣುಗಳನ್ನು ಹೊಂದಿರುವುದಿಲ್ಲ. ಆದ್ದರಿಂದ ಇದನ್ನು ಸಂಸ್ಕರಿಸುವುದು ಸುಲಭ.
ಸೀವರೇಜ್: ಇದು ಬಳಸಿದ ನೀರನ್ನು (ಸಾಮಾನ್ಯವಾಗಿ ಸೀವೇಜ್) ಸಂಸ್ಕರಣಾ ಘಟಕಕ್ಕೆ ಕೊಂಡೊಯ್ಯುವ, ಮನೆ-ರಸ್ತೆ-ಬೀದಿಯಲ್ಲಿ ಹಬ್ಬಿರುವ ಭೂಗತ ಪೈಪ್‌ಗಳ ಜಾಲ. ಇದು ಪಂಪಿಂಗ್ ಸ್ಟೇಶನ್‌ಗೆ, ಅಲ್ಲಿಂದ ಸೀವೇಜ್ ಸಂಸ್ಕರಣಾ ಘಟಕಕ್ಕೆ ಹರಿದು ನಂತರ ಸುರಕ್ಷಿತವಾಗಿ ಹರಿಯಬಿಡಲಾಗುತ್ತದೆ. ಇಂದು ಸಲ್ಲೇಜ್ ಕೂಡ ಸೀವೇಜ್ ಜತೆಗೆ ಸೇರಿಕೊಳ್ಳುತ್ತದೆ.
ಸವಳು ನೀರು: ಕುಡಿಯಲು ಬೇಕಾದ ಗುಣಮಟ್ಟಕ್ಕಿಂತ ಹೆಚ್ಚು ಪ್ರಮಾಣದ ಲವಣಾಂಶ ಕರಗಿರುವ ನೀರು. ತುಸು ಶುದ್ಧೀಕರಿಸಿದರೆ ಇದನ್ನು ಕುಡಿಯಲು, ಅಡುಗೆ ಮಾಡಲು ಬಳಸಬಹುದು.
ಸಲೈನ್ ವಾಟರ್: ಇದು ಸವಳು ನೀರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಲವಣಾಂಶ ಬೆರೆತಿರುವ ನೀರು. ಇದನ್ನು ಕುಡಿಯುವುದು, ಬಟ್ಟೆ ತೊಳೆಯುವುದು, ಅಡುಗೆ ಮಾಡುವುದು ಸಾಧ್ಯವಿಲ್ಲ.
‘ಲಾಸ್ಟ್’ಡ್ರಾಪ್: ನೀರು ಅಷ್ಟು ಸುಲಭದಲ್ಲಿ ಅರ್ಥವಾಗುವ ಸಂಗತಿಯಲ್ಲ. ಹೇಳಿ ಕೇಳಿ ಅದು ನೀರು. ಈವರೆಗೆ ಅದರ ಆಳ-ವಿಸ್ತಾರ ಗಳನ್ನು ಪೂರ್ತಿ ಅರಿತವರಿಲ್ಲ. ಒಂದಷ್ಟು ಹನಿಗಳನ್ನು ಗುಟುಕರಿಸಬಹುದಷ್ಟೇ.