Tuesday, November 17, 2009

ಕುಡಿಯೋ ನೀರಿಗಿನ್ನು ಕಾಸು ಕೊಡೋದು ಅನಿವಾರ್ಯ

ಆಂದ್ರ ಪ್ರದೇಶದ ಹಳ್ಳಿ ಜನತೆ ಇನ್ನು ಮುಂದೆ ಬಾಯಾರಿದಾಗ ಎಲ್ಲಿ ಬೇಕಾದರೂ ಪುಗಸಟ್ಟೆ ನೀರು ಕುಡಿಯುವಂತಿಲ್ಲ. ಲೀಟರ್‌ಗೆ ೧೦ ಪೈಸೆಯಂತೆ ಪಾವತಿಸಬೇಕು. ಅದೇನು ಮಹಾ, ನಾವು ಲೀಟರ್‌ಗೆ ೧೦ ರೂಪಾಯಿ ಕೊಟ್ಟು ಬಿಸ್ಲೇರಿ ನೀರು ಕುಡಿಯುತ್ತಿಲ್ಲವೆ ? ಎಂದು ಕೆಲವರು ಕೇಳಬಹುದು. ಅದರೆ ಹಾಗಲ್ಲ ಇದು. ಖಾಸಗಿ ಕಂಪನಿಗಳು ಗ್ರಾಮೀಣ ಜಲಮೂಲಗಳಿಂದಲೇ ಎತ್ತಿದ ಕಚ್ಚಾ ನೀರನ್ನು ಶುದ್ಧೀಕರಿಸಿ(?) ಕ್ಯಾನುಗಳಲ್ಲಿ ತುಂಬಿ ಜನರಿಗೆ ಮಾರುತ್ತವೆ. ಈಗಾಗಲೇ ಇಂಥ ಐದು ಕಂಪೆನಿಗಳ ಹೆಸರನ್ನು ಆಂಧ್ರ ಸರಕಾರ ಪಟ್ಟಿ ಮಾಡಿದೆ. ತಮ್ಮೂರಿನ ಜಲವನ್ನೇ ೨೦ ಲೀಟರ್‌ನ ಕ್ಯಾನ್‌ಗೆ ೧೦ ರೂಪಾಯಿಯಂತೆ ತೆತ್ತು ಕೊಂಡುಕೊಳ್ಳುವ ಹಣೆಬರಹ ಜನರದು.

ದೇಶದ ನಗರಗಳು ದಿನದಿಂದ ದಿನಕ್ಕೆ ಬೆಳೆಯುತ್ತಿದೆ, ಸಹಜವಾಗಿ ಅಲ್ಲಿನ ನೀರಿನ ಬೇಡಿಕೆ ಸಹ. ಇದನ್ನು ಪೂರೈಸಲು ನಾವು ಅದೆಷ್ಟೇ ಖರ್ಚಾಗಲಿ, ಅದೆಷ್ಟು ದೂರದಿಂದಲೇ ಆಗಲಿ ನೀರು ತಂದೇ ತರುತ್ತೇವೆಂಬ ಪಣ ತೊಟ್ಟು ಬಿಟ್ಟಿದ್ದೇವೆ. ಹೀಗಾಗಿಯೇ ಬೆಂಗಳೂರಿಗೆ ನಾವು ಸುಮಾರು ೧೦೦ ಕಿ.ಮೀ.ಗಿಂತಲೂ ದೂರದಿಂದ ಕಾವೇರಿಯನ್ನು ಎಳೆದು ತರುತ್ತಿದ್ದೇವೆ. ದಿಲ್ಲಿಗೆ ನೀರು ಪೂರೈಕೆಯಾಗುತ್ತಿರುವುದು ೩೦೦ ಕಿ.ಮೀ. ದೂರದ, ಹಿಮಾಲಯದ ತಪ್ಪಲಿನ ತೆಹ್ರಿ ಅಣೆಕಟ್ಟೆಯಿಂದ. ಹೈದರಾಬಾದ್‌ಗೆ ೧೦೫ ಕಿ.ಮೀ. ದೂರವಿರುವ, ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ನಾಗಾರ್ಜುನ ಸಾಗರ ದಿಂದ. ಉದಯಪುರಕ್ಕೆ ಜೈಸಮಂದ್ ಸರೋವರದಿಂದ ಪೂರೈಸಲಾಗುತ್ತಿತ್ತಾದರೂ ಅದೀಗ ಬತ್ತಿಹೋಗಿದೆ.


ವಿಚಿತ್ರವೆಂದರೆ ನಗರ ಪ್ರದೇಶದ ಬಡವರ್ಗದವರು ಕಡಿಮೆ ನೀರನ್ನು ಪಡೆಯುತ್ತಿದ್ದರೂ ಅದಕ್ಕಾಗಿ ಹೆಚ್ಚಿನ ಹಣ ತೆರುತ್ತಿದ್ದಾರೆ. ಅತಿ ಹೆಚ್ಚು ಬಳಕೆ ಮಾಡುತ್ತಿರುವ ಶ್ರೀಮಂತ ವರ್ಗದ ಮಂದಿ ಅತಿ ಕಡಿಮೆ ಬೆಲೆಯಲ್ಲಿ ನೀರು ಪಡೆಯುತ್ತಿದ್ದಾರೆ. ಬೆಂಗಳೂರಿನ ನಿವಾಸಿಗಳ ಪೈಕಿ ಶೇ. ೨೦ರಷ್ಟಿರುವ ಶ್ರೀಮಂತರು ನೀರಿನ ಶುಲ್ಕದಲ್ಲಿ ಹೆಚ್ಚಿನ ಸಬ್ಸಿಡಿ (ಶೇ. ೩೦ರಷ್ಟು )ಯ ಫಲಾನುಭವಿಗಳು. ಆದರೆ ಶೇ. ೫೦ರಷ್ಟಿರುವ ಬಡವರ್ಗದ ಮಂದಿಗೆ ನೀರಿನ ಶುಲ್ಕದಲ್ಲಿ ಶೇ. ೧೦ರಷ್ಟು ಮಾತ್ರ ಸಹಾಯಧನ ದೊರೆಯುತ್ತಿದೆ.
ಹಣವಂತರನ್ನೇ ಮಾನದಂಡವಾಗಿಟ್ಟುಕೊಂಡು ಸಂಪನ್ಮೂಲ ಹಂಚಿಕೆ ಮಾಡುವ ನಮ್ಮ ಪ್ರವೃತ್ತಿ ಖಂಡಿತಾ ಅಪಾಯಕಾರಿ. ನೀವು ಬೇಕಿದ್ದರೆ ನೋಡಿ, ಹಣಕೊಟ್ಟರೆ ಎಷ್ಟು ಬೇಕಾದರೂ ನೀರು ಬಳಸಬಹುದು, ಅದಿಲ್ಲದಿದ್ದರೆ ನೀರು ಸಿಗದು ಎಂಬ ಸ್ಥಿತಿ ನಗರಗಳಲ್ಲಿದೆ. ನಮ್ಮ ಇಂಥ ಸಂಪನ್ಮೂಲ ಹಂಚಿಕೆ ನೀತಿ ಕೂಡ ರಾಜತಾಂತ್ರಿಕ ಹುನ್ನಾರದ ಭಾಗವೇ. ಅಮೆರಿಕ ಅದರ ಸೂತ್ರಧಾರ. ಹೀಗಾಗಿ, ವಿಶ್ವಬ್ಯಾಂಕ್, ವಿಶ್ವವ್ಯಾಪಾರ ಸಂಸ್ಥೆಗಳಂಥ ಏಜೆಂಟರ ಮೂಲಕ ಸಾಲ ಹಂಚುವ ಅದು ಸಾಲ ಪಡೆದ ದೇಶಗಳನ್ನು ಜಾಗತೀಕರಣದ ‘ತದ್ರೂಪಿ ತಯಾರಿಕಾ ಉಪಕರಣ’ವಾಗಿ ಮಾರ್ಪಡಿಸುತ್ತದೆ. ಇಂಥ ತದ್ರೂಪಿ ವೇದಿಕೆಯೇ ನೀರಿನ ಖಾಸಗೀಕರಣ. ಮತ್ತೆ ಇವೆಲ್ಲವೂ ನಗರ ಕೇಂದ್ರಿತ.


ಒಂದು ನಿಮಿಷ ಯೋಚಿಸಿ. ನಮ್ಮ ಗ್ರಾಮೀಣ ಪ್ರದೇಶದ, ರೈತ ಸಮುದಾಯದ ನೀರಿನ ಬಳಕೆ ಪ್ರಮಾಣದಲ್ಲಿ ಇನ್ನೂ ಹೇಳಿಕೊಳ್ಳುವ ಯಾವುದೇ ಬದಲಾವಣೆಗಳೂ ಆಗಿಲ್ಲ. ಬದಲಾದದ್ದೆಂದರೆ ಅವರ ನೀರಿನ ಬವಣೆಯಲ್ಲಿ ಮಾತ್ರ. ಹಾಗೆಂದು ಅದು ತಪ್ಪಿದೆ ಎಂದಲ್ಲ. ಅದರ ಸ್ವರೂಪ ಬದಲಾಗಿದೆ. ಇದಕ್ಕೊಂದು ತಾಜಾ ಉದಾಹರಣೆಯೆಂದರೆ ಆಂಧ್ರಪ್ರದೇಶದ ಈ ಬೆಳವಣಿಗೆ. ಇದಕ್ಕೆ ಕಾರಣ ಅಲ್ಲಿನ ಗ್ರಾಮೀಣ ಜಲಮೂಲಗಳು ಸ್ವಚ್ಛವಾಗಿಲ್ಲದಿರುವುದು. ಹೆಚ್ಚಿನ ಕಡೆ ಜಲಮೂಲಗಳೇ ರೋಗರುಜಿನ, ಸಾಂಕ್ರಾಮಿಕಗಳ ತವರಾಗಿವೆ. ಶೇ.೬೦ ಭಾಗ ಗ್ರಾಮೀಣ ಜನತೆಗೆ ಪ್ರತಿದಿನ ಸ್ವಚ್ಛ ಕುಡಿಯುವ ನೀರು ದೊರೆಯುವುದೇ ಕಷ್ಟವಾಗಿದೆಯಂತೆ.


ಈಗ ಇಲ್ಲಿನ ಹಳ್ಳಿಗರ ಪರಿಸ್ಥಿತಿ ಹೇಗಿದೆ ನೋಡಿ: ಸಿಗುವ ಅತ್ಯಲ್ಪ ನೀರನ್ನು ನಿತ್ಯಕಾರ್‍ಯಗಳಿಗೆ ಉಪಯೋಗಿಸಬೇಕು. ಅದನ್ನೇ ಕುಡಿಯಬೇಕು. ಹಳ್ಳಿಯಲ್ಲಿ ಜಲಮೂಲ ಇಲ್ಲವಾದರೆ ಖಾಸಗಿಯವರು ಸರಬರಾಜು ಮಾಡುವ ನೀರನ್ನು ೨೦ ಲೀಟರ್‌ಗೆ ೧೦ ರೂ. ತೆತ್ತು ಕೊಂಡುಕೊಳ್ಳಬೇಕು. ಇದು ಕೂಡ ಶುದ್ಧವಾಗಿರುತ್ತದೆ ಎಂಬ ಭರವಸೆಯೇನಿಲ್ಲ. ಇದಕ್ಕಿಂತ ಹೊಸ ಯೋಜನೆ ಅನುಕೂಲಕರವಲ್ಲವೆ ? ಎಂದು ಸರಕಾರಿ ಅಕಾರಿಗಳು ಪ್ರಶ್ನಿಸುತ್ತಾರೆ. ಇದು ನಮ್ಮ ಉತ್ತರ ಕರ್ನಾಟಕದ ಹಳ್ಳಿಗರ ಪರಿಸ್ಥಿತಿಯಂತೆಯೇ ಕಾಣಿಸುತ್ತದೆ.


ಮೇಲ್ನೋಟಕ್ಕೆ ಈ ಯೋಜನೆ ಆಕರ್ಷಕವಾಗಿಯೇ ಇದೆ. ೨೦ ಲೀಟರ್ ಶುದ್ಧ ನೀರನ್ನು ೨ ರೂ.ಗೆ ಜನರಿಗೆ ನೀಡಲಾಗುತ್ತದೆ. ಪರಿಶಿಷ್ಟ ಜನಾಂಗದವರಿಗೆ ಇದರರ್ಧ ಬೆಲೆಗೆ. ಕೊಳಕು ನೀರಿನಿಂದ ಉಂಟಾಗುವ ತೊಂದರೆ ಇನ್ನಿಲ್ಲ.
ಆದರೆ ಯೋಜನೆಯ ಬಗ್ಗೆ ಅನುಮಾನದ ಅಲೆ ಎದ್ದಿದೆ. ಯೋಜನೆ ಜಾರಿಗೆ ಮುನ್ನ ಗ್ರಾಮ ಪಂಚಾಯತು, ನೀರಾವರಿ ತಜ್ಞರು, ನಾಗರಿಕ ಸಂಘಟನೆಗಳ ಜತೆ ಸಮಾಲೋಚಿಸಿಲ್ಲ. ಒಪ್ಪಂದ ಗ್ರಾಮ ಪಂಚಾಯತು ಹಾಗೂ ಖಾಸಗಿ ಕಂಪನಿಯ ನಡುವೆ ನಡೆಯಬೇಕು. ಇಲ್ಲಿ ಹಾಗಾಗಿಲ್ಲ. ಖಾಸಗಿ ಕಂಪೆನಿ ಇಲ್ಲಿ ಜನರಿಗೆ ನೇರವಾಗಿ ಉತ್ತರದಾಯಿಯಲ್ಲ.


ಇನ್ನು ಲೀಟರ್‌ಗೆ ೧೦ ಪೈಸೆ ಎಂಬ ದರ ಎಲ್ಲಿಯವರೆಗೆ ನಡೆಯುತ್ತದೆ ಎಂಬ ಬಗ್ಗೆ ಖಾತ್ರಿಯಿಲ್ಲ. ಒಪ್ಪಂದದಲ್ಲಿ, ದರ ಹಾಗೇ ಇರುತ್ತದೆಯೇ ಅಥವಾ ಹೆಚ್ಚಾಗುತ್ತದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಕಂಪನಿಗಳು ದರವನ್ನು ಸಿಕ್ಕಾಪಟ್ಟೆ ಏರಿಸಿದರೆ ಬಡಜನತೆ ಎಲ್ಲಿಗೆ ಹೋಗಬೇಕು ? ಜಲಶುದ್ಧೀಕರಣಕ್ಕೆ ಪ್ರಸ್ತಾವಿಸಲಾದ ರಿವರ್ಸ್ ಆಸ್ಮಾಸಿಸ್ ತಂತ್ರಜ್ಞಾನದ ಬಗ್ಗೆ ಕೂಡ ತಜ್ಞರಿಗೆ ಒಳ್ಳೆಯ ಅಭಿಪ್ರಾಯವಿಲ್ಲ. ಊರಿಗೊಂದು ಕೆರೆ- ಬಾವಿಯಿರಬೇಕು, ಅದನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ತಿಳಿವಳಿಕೆ ನಮಗಿಲ್ಲದೇ ಹೋದದ್ದೇ ಈಗ ನಮ್ಮ ಬುಡಕ್ಕೆ ಬಂದಿದೆ ನೋಡಿ. ನಮ್ಮ ರಾಜ್ಯದಲ್ಲೂ ಇಂಥ ಪರಿಸ್ಥಿತಿ ತಲೆದೋರಬಹುದೆ ?
ಇದಕ್ಕಿರುವ ಒಂದೇ ಪರಿಹಾರ-ನಮ್ಮ ಸಾಂಪ್ರದಾಯಿಕ ನೀರು ನಿರ್ವಹಣಾ ಶಾಸ್ತ್ರವನ್ನು ಆಧರಿಸಿ, ಆಧುನಿಕ ಅಗತ್ಯಕ್ಕನುಗುಣವಾಗಿ ನಮ್ಮದೇ ಮಾದರಿಯನ್ನು ರೂಪಿಸಿಕೊಳ್ಳುವುದು. ಮಾದರಿ ಎಂಬುದು ಬೇರೆ ಇಲ್ಲದಿದ್ದಾಗ ನಮಗೆ ಬೇಕಾದಂತೆ ನಾವು ಪದ್ಧತಿಗಳನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯ ಹೊಂದಿರುತ್ತೇವೆ. ಅದನ್ನು ಬಿಟ್ಟು ಬೇರೆ ದೇಶಗಳಲ್ಲಿ ವಿಫಲವಾಗಿರುವ ಖಾಸಗೀಕರಣದಂಥ ಪ್ರಯೋಗಗಳಿಗೆ ನಮ್ಮಲ್ಲಿ ವೇದಿಕೆ ಒದಗಿಸುವುದು ಎಷ್ಟು ಔಚಿತ್ಯ ಪೂರ್ಣ?
ಕೃಷಿಯಂಥ ಕ್ಷೇತ್ರದಲ್ಲೂ ನಾವು ನೀರು ಪೂರೈಕೆಗೆ ಸುಸ್ಥಿರವಲ್ಲದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಹೋಗಿ ತಪ್ಪು ಮಾಡಿದ್ದೇವೆ. ೨೦ ಕೋಟಿಗೂ ಹೆಚ್ಚು ಬಾವಿಗಳು, ಕೊಳವೆ ಬಾವಿಗಳು ನಮ್ಮ ಕೃಷಿ ಸಾಮ್ರಾಜ್ಯವನ್ನು ಆಳುತ್ತಿವೆ. ಕೃಷಿ ನೀರಾವರಿಗೆ ಬಹುತೇಕ ನಾವು ಅಂತರ್ಜಲವನ್ನೇ ಅವಲಂಬಿಸುವ ಪರಿಪಾಠ ಬೆಳೆಸಿಕೊಂಡು ಬಿಟ್ಟಿದ್ದೇವೆ. ಭೂಮಿಯ ಮೇಲ್ಜಲದ ಬಳಕೆ, ಅಂತರ್ಜಲ ಮಟ್ಟದಲ್ಲಿನ ಏರಿಕೆಯ ನಿಟ್ಟಿನಲ್ಲಿ ‘ಹೂಡಿಕೆ’ ಮಾಡುವ ಬದಲು ಯೋಜನೆ’ಗಳ ಮೇಲಿನ ವೆಚ್ಚವನ್ನು ಹೆಚ್ಚಿಸುತ್ತಿದ್ದೇವೆ. ವಿತರಣೆಯಲ್ಲಿನ ಸೋರಿಕೆ, ನಿರ್ವಹಣಾ ದೋಷವನ್ನು ನಿಯಂತ್ರಿಸುವ ಬದಲು ನೀರಿಗೆ ‘ಶುಲ್ಕ’ ಹಾಕಲು ಚಿಂತಿಸುತ್ತಿದ್ದೇವೆ. ಪರ್ಯಾಯ ಬೆಳೆ ಪದ್ಧತಿಯ ಬದಲಿಗೆ ಕೃಷಿ ಉತ್ಪಾದನೆ ಹೆಚ್ಚಿಸಲು ರಸಗೊಬ್ಬರ, ವಿದೇಶಿ ತಳಿಗಳ ಮೊರೆಹೋಗಿದ್ದೇವೆ.
ನೀರಿನ ಮೌಲ್ಯವರಿಯದೇ ಬಳಕೆಗಿಳಿದಿರುವ, ಪೋಲು ಮಾಡುತ್ತಿರುವ ನಮ್ಮ ಇಂಥ ಧೋರಣೆ ಬದಲಾಗಬೇಕು. ಅತಿ ಹೆಚ್ಚು ನೀರಿನ ಬಳಕೆ ಪ್ರದೇಶ ಅತಿ ಹೆಚ್ಚು ನೀರು ಪೋಲಾಗುವ ತಾಣವೆಂಬ ಸ್ಥಿತಿ ಬದಲಾಗಬೇಕು. ಫ್ರಾನ್ಸ್, ಬ್ರಿಟನ್‌ಗಳ ಖಾಸಗೀಕರಣದ ಬದಲು ತಲಾ ೨೦೦ ಲೀಟರ್ ನೀರು ಬಳಕೆಯಿದ್ದ ಪ್ರದೇಶದಲ್ಲಿ ತಲಾ ನೂರರಿಂದ ನೂರಾ ಹತ್ತು ಲೀ. ನೀರಿನ ಬಳಕೆಗೆ ತಗ್ಗಿಸುವ ನಗರಗಳು ಮಾದರಿಯಾಗಬೇಕು. ಅಂಥದೊಂದು ಕ್ರಾಂತಿಯ ಭೀಮನೆಗೆತ ಸಾಧ್ಯವಾದರೆ ಅದು ನಿಜವಾದ ಬದಲಾವಣೆ.


‘ಲಾಸ್ಟ್’ಡ್ರಾಪ್ :
ಆಧುನಿಕ ಸವಾಲಿನ ಹಿನ್ನೆಲೆಯಲ್ಲಿ ನೀರಿಗೆ ಬೆಲೆ ಕಟ್ಟಬೇಕಾದ್ದು ಅನಿವಾರ್ಯ. ಆದರೆ ಭೌತಿಕವಾಗಿ ನೀರನ್ನೇ ಆ ಬೆಲೆಗೆ ಕೊಂಡುಬಿಡುತ್ತೇವೆಂಬುದು ಖಂಡಿತಾ ದಾರ್ಷ್ಟ್ಯ.

No comments: