ಅದು ಯಾರ ಬಳಿ ಪಂಥಕ್ಕೆ ಬಿದ್ದಿತ್ತೋ ಗೊತ್ತಿಲ್ಲ. ಅಥವಾ ಹೀಗಿದ್ದರೂ ಇರಬಹುದು, ಯಾರೋ ತಮ್ಮ ಸೆಣಸಿಗೆ ಪಣವಾಗಿ ಅದನ್ನು ಇಟ್ಟು ಕಳೆದುಕೊಂಡುಬಿಟ್ಟಿದ್ದರೇನೋ. ಅಂತೂ ನೂರಾರು ವರ್ಷಗಳಿಂದ ಆ ಕಗ್ಗಾಡಿನಲ್ಲದು ದಿವ್ಯ ಅಜ್ಞಾತವನ್ನು ಅನುಭವಿಸುತ್ತ ಕುಳಿತು ಬಿಟ್ಟಿತ್ತು; ಹಾಗೆ ಸುಮ್ಮನೆ. ಯಾರೆಂದರೆ ಯಾರಿಗೂ ಒಂದು ಪುಟ್ಟ ಸುಳಿವನ್ನೂ ಬಿಟ್ಟುಕೊಡದೇ ಕುಳಿತ ಅದರ ಬದುಕು ಇನ್ನೇನು ಹಾಗೆಯೇ ಕಳೆದು ಹೋಗಿಬಿಡುತ್ತಿತ್ತೇನೋ. ಪುಣ್ಯಕ್ಕೆ ಒಂದಷ್ಟು ಕಥೆಗಳ ಹಂದರ ಅದರ ಸುತ್ತ ಬೆಳೆದು, ಬಾಯಿಂದ ಬಾಯಿಗೆ ದಾಟಿಕೊಳ್ಳುತ್ತ, ತಲೆಮಾರಿನಿಂದ ತಲೆಮಾರಿಗೆ ಹರಿದು ಬರುತ್ತಿತ್ತು. ದೊಡ್ಡವರಿಗೆ ಅದೊಂದು ಕುತೂಹಲ, ಚಿಕ್ಕವರಿಗೆ ಅದನ್ನು ಕಾಣುವ ಹಂಬಲ. ಆದರೆ, ಬಹಳಷ್ಟು ವರ್ಷಗಳಿಂದ ಸುತ್ತಮುತ್ತಲಿನ ಹಳ್ಳಿಗರ ಪಾಲಿಗೆ ಅದು ಕಾಡಿನ ಕುಸುಮವೇ ಆಗಿತ್ತು.
ಅದಕ್ಕೂ ಕಾರಣಗಳಿಲ್ಲದಿಲ್ಲ. ಮೊದಲೇ ಹೇಳಿ ಆಯಿತಲ್ಲ, ಆ ಕೆರೆ ಇದ್ದ ತಾಣವೇ ಅಂಥದ್ದು. ಯಾರಿಗೂ ಕಾಣದಂಥ, ಕಂಡರೂ ಕಾಣದೇ ಹೋಗುವಂಥ ಗೌಪ್ಯ ತಾಣದಲ್ಲಿ ಅದು ನಿರ್ಮಾಣಗೊಂಡದ್ದು. ಕೆರೆಗೆ ಹೋಗಬೇಕೆಂಬ ಕಾರಣಕ್ಕೇ ದುರ್ಗಮ ಹಾದಿಯನ್ನು ಸವೆಸಿ ಅಲ್ಲಿಗೆ ಉದ್ದಿಶ್ಯ ಹೋಗಬೇಕೇ ವಿನಾ, ಅದನ್ನು ಬಿಟ್ಟರೆ ಬೇರೆ ಯಾವ ಕಾರಣಕ್ಕೂ ಅದರ ಬಳಿ ಸುಳಿಯುವ ವ್ಯರ್ಥ ಸಾಹಸವನ್ನು ಯಾರೂ ಮಾಡಲಿಕ್ಕಿಲ್ಲ. ಹಾಗಿದ್ದರೆ ಬಹುಶಃ ಗುಡ್ಡದ ಮರುಕಲಲ್ಲಿ ಗುಂಡಿ ಬಿದ್ದ ಜಾಗದಲ್ಲಿ ತಂತಾನೇ ಒಂದಷ್ಟು ನೀರು ನಿಂತುಕೊಂಡು ನಿಸರ್ಗ ಸಹಜವಾಗಿ ಆ ಕೆರೆ ನಿರ್ಮಾಣಗೊಂಡಿರಬಹುದು ಎಂದುಕೊಳ್ಳಲು ಸುತ್ತಲ ಪರಿಸರ ನೋಡಿದರೆ ಹಾಗೆ ಭಾವಿಸಲು ಸಾಧ್ಯವೇ ಇಲ್ಲ.
ಅದಾದರೂ ಎಂಥಾ ಕೆರೆಯಂತೀರಾ ? ನಿರಾಭರಣ ಸುಂದರಿಯಾಗಿಯೂ ಮೊದಲ ನೋಟದಲ್ಲೇ ರಸಿಕರ ಕಣ್ಮನಗಳಿಗೆ ಲಗ್ಗೆ ಇಕ್ಕಿ ಹಿಡಿದಿಟ್ಟುಕೊಳ್ಳುತ್ತದೆ. ಅಂದ ಮೇಲೆ ಸಂಸ್ಕಾರರಹಿತವಾಗಿ ಎಲ್ಲೋ ಹಾದಿ ಬೀದಿಯಲ್ಲಿ ಬಿದ್ದು ಬೆಳೆದು ಬದುಕಿದ್ದ ಕೆರೆಯಂತೂ ಅಲ್ಲವೇ ಅಲ್ಲ. ಅದರ ಮೈಕಟ್ಟೇ ಹಾಗಿದೆ. ಇಣುಕಿದರೆ ಒಂದಳೆತೆಗೆ ಸುಲಭದಲ್ಲಿ ಸಿಗುವುದಂತೂ ಅಸಾಧ್ಯ. ಚತುರ್ಬಾಹುಗಳನ್ನೂ ಇಷ್ಟಗಲಕ್ಕೆ ಚಾಚಿಕೊಂಡು ಸುತ್ತಲ ಸಾಮ್ರಾಜ್ಯವನ್ನು ವ್ಯವಸ್ಥಿತವಾಗಿ ತನ್ನದಾಗಿಸಿಕೊಂಡಿದೆ. ಸುತ್ತ ಒಪ್ಪ ಓರಣವಾಗಿ ಕಲ್ಲು ಪಾವಟಿಕೆಗಳನ್ನು ನಿರ್ಮಿಸಿರುವುದನ್ನು ನೋಡಿದರೆ ಗತ ವೈಭವದ ಕಲ್ಪನೆ ತಂತಾನೇ ಮೂಡುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಶಿಂಗುಮನೆ ಹತ್ತಿರದ ಗುಡ್ಡದ ಮೇಲೆ ಮಲಗಿದ್ದ ಇಂತಿಪ್ಪ ಕೆರೆಯನ್ನು ಎಲ್ಲರೂ ಮರೆತುಬಿಟ್ಟಿದ್ದಾಗಲೇ ವಾಜಗೋಡು ಗ್ರಾಮಪಂಚಾಯಿತಿಯ ಅಧ್ಯಕ್ಷ ಡಿ.ಜಿ.ಹೆಗಡೆಯವರಿಗೆ ಅದೇನು ಪ್ರೇರಣೆಯಾಯಿತೋ ಏನೋ, ಅಂತೂ ಕೆರೆಯನ್ನೊಮ್ಮೆ ನೋಡಿ ಬರಲೇಬೇಕು ಎಂದುಕೊಂಡು ಹೊರಟುಬಿಟ್ಟರು. ಅಜ್ಞಾತಕ್ಕೆ ಕುಳಿತದ್ದು ಸುಲಭಕ್ಕೆ ಕಂಡೀತೇ? ಮೊದಲೇ ಹೇಳಿಯಾಗಿದೆಯಲ್ಲಾ ಅದಿರುವುದು ಕಾಡಿನ ನಟ್ಟನಡುವಿನಲ್ಲಿ, ಬೆಟ್ಟದ ತುತ್ತ ತುದಿಯಲ್ಲಿ ಅಂತ. ಅಷ್ಟನ್ನು ಹರಸಾಹಸ ಮಾಡಿ ಹತ್ತಿಳಿದು ಅಂತೂ ಕೆರೆಯ ಹುಡುಕಾಟಕ್ಕೆ ಬಿದ್ದವರು ಬೇಸತ್ತು ಹಿಂದಿರಬೇಕೆನ್ನುವಾಗಲೂ ಒಂದಷ್ಟು ಮರಮಟ್ಟುಗಳ ಜತೆ ಯಾರೋ ಕೂಕಾಟ ಆಡುತ್ತಿದ್ದ ಅನುಭವ. ಕೆರೆಯ ಬೆನ್ನು ಹತ್ತಿ ಹೋದವರಿಗೂ ಒಮ್ಮೆ ತಾವೂ ಕೂಗು ಹಾಕಿಬಿಡುವ ಪ್ರೇರಣೆ ಅದ್ಯಾಕಾಯಿತೆಂದರೆ ಆ ತಾಣ ಹಾಗಿದೆ ಸ್ವಾಮಿ. ಹಗಲು ಹನ್ನೆರಡರ ಹೊತ್ತಿಗೂ ಇನ್ನೇನು ಗವ್ವನೆ ಕವಿದುಕೊಳ್ಳುಲು ಕತ್ತಲೇ ಸಜ್ಜಾಗುತ್ತಿರುವಂತೆ ಕಂಡರೆ ಅದು ಸುತ್ತಲೂ ಬೆಳೆದ ದಟ್ಟ ಗಿಡಮರಗಳ ಅಪರಾಧವಲ್ಲ. ಕೊನೆಗೂ ಕೆರೆ ಹುಡುಕಿಕೊಂಡು ಹೋದ ವಾಜಗೋಡಿನ ಅಧ್ಯಕ್ಷರು ತಮ್ಮ ತಂಡದೊಂದಿಗೆ ಒಂದು ಕೂಗು ಹಾಕಿದ್ದೇ ತಡ, ಒಂದಕ್ಕೆ ಹತ್ತಾಗಿ, ಹತ್ತಕ್ಕೆ ಮತ್ತೆರ ಇಮ್ಮಡಿಯಾಗಿ ಪ್ರತಿಧ್ವನಿಸಬೇಕಿತ್ತು. ಆದರೆ ಕಾದದ್ದೇ ಬಂತು. ಅಂತ ಕೂಗು ಕತ್ತಲೆಯಲ್ಲಿ ಕಳೆದು ಹೋಯಿತು ಅನ್ನುವುದಕ್ಕಿಂತ ಎಲ್ಲೋ ಆಳದಲ್ಲಿ ಹುದುಗಿಹೋದ ಅನುಭವ.
ಒಂದು ಲೆಕ್ಕದಲ್ಲಿ ಒಳ್ಳೆಯದೇ ಆಯಿತು. ಹಾಗೆ ಧ್ವನಿ ಹುದುಗಿಹೋದದ್ದಾದರೂ ಎಲ್ಲಿ ಎನ್ನುವ ಮತ್ತೊಂದು ಹುಡುಕಾಟವೇ ಕೆರೆಯನ್ನು ಪತ್ತೆ ಮಾಡಿಬಿಡಬೇಕೇ ? ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿತು ಅಂತೇನೋ ಹೇಳುತ್ತಾರಲ್ಲಾ, ಹಾಗೆ ಹುಡುಕುತ್ತಿದ್ದ ಕೆರೆಯೇ ಧ್ವನಿಯನ್ನು ನುಂಗಿಕೊಂಡದ್ದೆಂದು ಅರಿವಾಗಲು ಹೆಗಡೆಯವರಿಗೆ ಹೆಚ್ಚು ಕಾಲ ಹಿಡಿಯಲಿಲ್ಲ. ಫಕ್ಕನೆ ಗುರುತು ಸಿಗುವಂತಿರಲಿಲ್ಲ ಅದು. ಎಂಥಾ ಸ್ಥಿತಿಗೆ ದು ಬಂದು ತಲುಪಿತ್ತೆಂದರೆ ಇದೇ ಕೆರೆಯೆಂದರೆ ಯಾರೂ ನಂಬುವುದೇ ಇಲ್ಲ. ಬೇಕಿದ್ದರೆ ಬಯಲೆನ್ನಿ, ತಗ್ಗೆನ್ನಿ, ಇನ್ನೂ ಸಮಾಧಾನವಿಲ್ಲದಿದ್ದರೆ ಕಾಡಿನೊಂದು ಮಗ್ಗಲೇನೋ ಎಂದು ಸಂಶಯಿಸುವಷ್ಟು ದುಃಸ್ಥಿತಿಗೆ ತಲುಪಿತ್ತದು. ಎಷ್ಟೆಂದರೂ ನೂರಾರು ವರ್ಷಗಳ ಅಜ್ಞಾತದಲ್ಲಿದ್ದದ್ದಲ್ಲವೇ ?
ಕತೆ ಕೇಳಿ ಇಲ್ಲಿ. ಕೆರೆಯೆಂಬೋ ಆ ಕೆರೆ ಎಷ್ಟೋ ವರ್ಷಗಳ ನಂತರ ಹಾಗೆ ಅಜ್ಞಾತಕ್ಕೆ ಬಿದ್ದು, ದುಃಸ್ಥಿತಿಗೆ ಬಂದು ತಲುಪಿದ್ದಲ್ಲ ಎನ್ನುತ್ತದೆ ಸ್ಥಳೀಯ ಇತಿಹಾಸ. ಅದು ಹುಟ್ಟಿದ ದಿನದಿಂದಲೂ ಹಾಗೆ ಕಣ್ಣಾಮುಚ್ಚಾಲೆ ಆಡುತ್ತಲೇ ಬಂದ್ದದ್ದು. ಹಾಗೆಂದು ಕೆರೆಗೇನು ತಾನು ಹಾಗೆಯೇ ಇರಬೇಕೆಂದೇನೂ ಇರಲಿಲ್ಲ. ಆದರೆ ಅದನ್ನು ನಿರ್ಮಿಸಿದ ಉದ್ದೇಶವೇ ಅಂತದ್ದು. ಬೀಳಗಿಯೆಂಬ ರಾಜ ಮನೆತನದ ಕಾಲದಲ್ಲಿ ಸೈನಿಕ ಶಿಬಿರವೊಂದು ಆ ಕಾಡಿನಲ್ಲಿ ಇತ್ತು, ಮತ್ತು ಅಷ್ಟೂ ಸೈನಿಕರ ದಿನದ ದಾಹವನ್ನು ಇಂಗಿಸಲು ಅಲ್ಲಿಯೇ ಆ ಕೆರೆ ನಿರ್ಮಾಣ ಮಾಡಲಾಗಿತ್ತು ಎಂಬ ಅಂಬೋಣ ಸ್ಥಳೀಯರದ್ದು. ಈ ಬಗ್ಗೆ ನಿಖರ ದಾಖಲೆಗಳು ಸಿಗದಿದ್ದರೂ ಕತೆಯ ಬಗೆಗೆ ಇರುವ ಹತ್ತಾರು ಕಥೆಗಳಲ್ಲಿ ಇದು ಸಾಕಷ್ಟು ಸಾಮ್ಯತೆ ಪಡೆಯುತ್ತದೆ. ಏಕೆಂದರೆ ಬಿಳಗಿ ರಾಜರ ರಾಜಧಾನಿ ಸಹ ಇಲ್ಲಿಗೆ ಸುಮಾರು ೮ ಕಿ.ಮೀ. ದೂರದ ಐಸೂರು ಆಗಿತ್ತು. ಪಕ್ಕಾ ಸೈನಿಕರ ಅಡಗುದಾಣದಂತೆ ಕಾಣುವ ಕೆರೆಯ ಪ್ರದೇಶ ಸುಮಾರು ೩೦ ಎಕರೆ ವಿಸ್ತಾರವನ್ನು ಹೊಂದಿದ್ದು, ಗುಡ್ಡದ ಸುತ್ತಲೂ ಕಲ್ಲಿನ ಕಟ್ಟೆ ಕಟ್ಟಲಾಗಿದೆ. ಅದೇ ಗುಡ್ಡದ ಇನ್ನೊಂದು ಮಗ್ಗಲು ಕೆಳದಿ ಹಾಗೂ ಲಿಂಗನಮಕ್ಕಿ ರಾಜರ ಆಳ್ವಿಕೆಗೆ ಒಳಪಟ್ಟಿತ್ತು. ಹೀಗಾಗಿ ಗಡಿ ಕಾವಲು ಪಡೆಯ ತಂಗುದಾಣವಾಗಿರುವ ಎಲ್ಲ ಸಾಧ್ಯತೆ ಇದ್ದು, ಗುಡ್ಡದ ತುಂಬ ಕುದುರೆಯ ಓಡಾಟಕ್ಕೆ ಮಾಡದ್ದಿರಬಹುದಾದ ಪ್ರತ್ಯೇಕ ಮಾರ್ಗದ ಅವಶೇಷಗಳನ್ನು ಈಗಲೂ ಕಾಣಬಹುದು. ಕೋಟೇ ಕೆರೆಯೆಂದು ಕರೆಸಿಕೊಳ್ಳುವ ಈ ಕೆರೆ ಸರಿಸುಮಾರು ೬೦ ಚದರ ಅಡಿಯಷ್ಟು ವಿಸ್ತಾರವನ್ನು ಹೊಂದಿದೆ. ಸುಮಾರು ೩೦ ಎಕರೆ ವಿಸ್ತೀರ್ಣದ ಗುಡ್ಡದಲ್ಲಿ ಈ ಕೆರೆಗೆ ಪೂರಕವಾಗಿ ಇನ್ನೂ ೨೦ ಎಕರೆ ಪ್ರದೇಶಕ್ಕೆ ನೀರಿನ ಸಂಗ್ರಹಕ್ಕೆ ಅನುಕೂಲವಾಗುವಂತೆ ಕಲ್ಲಿನ ಏರಿಯನ್ನು ಕಟ್ಟಲಾಗಿದೆ. ಕೆರೆಗೆ ನೀರು ಕುಡಿಯಲು ಬರುವ ಪ್ರಾಣಿಗಳಿಗೆ ಪ್ರತ್ಯೇಕ ಮಾರ್ಗವನ್ನು ನಿರ್ಮಿಸಲಾಗಿದೆ. ಕೆರೆಯಲ್ಲಿ ಸಂಗ್ರಹಗೊಂಡ ನೀರು ನಾಲೆಯ ಮೂಲಕ ಹರಿದು ಕಾಡಿನ ಇತರ ಪ್ರದೇಶಗಳಿಗೂ ಪೂರೈಕೆಯಾಗುತ್ತದೆ. ಎಲ್ಲ ಕಡೆಗಳಲ್ಲೂ ಕಲ್ಲು ಕಟ್ಟಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಜಲಾನಯನವನ್ನು ವಿನ್ಯಾಸಗೊಳಿಸಲಾಗಿದೆ. ಒಟ್ಟಾರೆ ಅತ್ಯಂತ ವೈಜ್ಞಾನಿಕವಾಗಿ ನಿರ್ಮಿಸಿದ್ದ ಜಲಾಗಾರ ಇದಾಗಿತ್ತು ಎಂಬುದಕ್ಕೆ ಯಾವುದೇ ಅನುಮಾನವಿಲ್ಲ.
ಅದೆಲ್ಲ ಹಾಗಿರಲಿ, ಕೆರೆ ಹುಡುಕಿಕೊಂಡು ಹೋದ ನಮ್ಮ ಗ್ರಾ.ಪಂ. ಅಧ್ಯಕ್ಷರು ಮತ್ತವರ ತಂಡಕ್ಕೆ ನಿಯೇ ಸಿಕ್ಕ ಅನುಭವ. ಸಹಜವಲ್ಲವೇ? ಸುತ್ತಲ ನಾಲ್ಕಾರು ಹಳ್ಳಿಗಳಿಗೆ ಸಾಕಾಗುವಷ್ಟು ಜಲನಿ ಒಂದೇ ಕಡೆಯಲ್ಲಿ ದೊರೆಯುತ್ತದಾದರೆ ಅಭಿವೃದ್ಧಿ ಚಿಂತಕ ನೇತಾರನೊಬ್ಬನಿಗೆ ಅದಕ್ಕಿಂತ ಇನ್ನೇನು ಬೇಕು? ಸರಿ, ಹೂಳು ತುಂಬಿ ಪಾಳು ಬಿದ್ದ ಕೆರೆಯನ್ನು ಸ್ವಚ್ಛಗೊಳಿಸಿ ಇಲ್ಲಿಂದ ಊರವರೆಗೆ ನೀರು ಹರಿಸಿಕೊಂಡುಹೋಗಬೇಕೆಂಬ ಹೆಬ್ಬಯಕೆಯೇನೋ ಅವರಲ್ಲಿ ಮೂಡಿತು ನಿಜ. ಆದರೆ ರಸ್ತೆ ಸಂಪರ್ಕವೇ ಇಲ್ಲದ, ಗುಡ್ಡದ ನೆತ್ತಿಯ ಮೇಲಿರುವ ಆ ಕೆರೆ ಕಾಮಗಾರಿಗೆ ಅಗ್ತಯ ಸಲಕರಣೆಗಳು, ಕೆಲಸಗಾರರನ್ನು ಕರೆ ತರುವುದಾದರೂ ಹೇಗೆ ? ಪ್ರಶ್ನೆ ಕೇಳಿಕೊಳ್ಳುತ್ತ ಕುಳಿತಿದ್ದರೆ ಹೆಚ್ಚೆಂದರೆ ನಾವು ಜ್ಞಾತ ಕೋಟೆಕೆರೆಯನ್ನು ನೋಡಿ ಬಂದಿದ್ದೇವೆ, ಅಷ್ಟಗಲ, ಇಷ್ಟುದ್ದ ಇದೆಯೆಂದು ಬಣ್ಣಿಸಿ ಸಾಹಸ ಮೆರೆದವರಂತೆ ಪೋಸು ಕೊಡಬಹುದಿತ್ತಷ್ಟೆ. ಆದರೆ ಹೆಗಡೆಯವರ ಉದ್ದೇಶ ಅದಾಗಿರಲಿಲ್ಲ. ಏನಾದರೂ ಮಾಡಿ ಈ ಕೆರೆಯಿಂದಸುತ್ತಮುತ್ತಲಿನ ೩೦ ಮನೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು, ಐತಿಹಾಸಿಕ ಕೆರೆಯನ್ನು ಸಂರಕ್ಷಿಸಲೇಬೇಕೆಂಬ ಹಠಕ್ಕೆ ಬಿದ್ದದ್ದ ಅವರ ನೆರವಿಗೆ ಬಂದದ್ದು ಉದ್ಯೋಗಖಾತ್ರಿ ಯೋಜನೆ ಮತ್ತು ಸ್ಥಳೀಯರ ಉತ್ಸಾಹ. ಇಚ್ಛಾಶಕ್ತಿಯ ನಾಯಕತ್ವಕ್ಕೆ ಬೆಂಬಲವಾಗಿ ನಿಂತವರು ತಾಲೂಕು ಕಾರ್ಯನಿರ್ವಹಣಾಕಾರಿ ವಿ.ಎಸ್.ಹೆಗಡೆ.
ಸಾಂಪ್ರದಾಯಿಕ ನೀರಿನ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಯೋಜನೆ ರೂಪುಗೊಂಡಿತ್ತು. ಕೊನೆಗೊಂದು ಶುಭ ಮುಂಜಾವಿನಲ್ಲಿ ಡಿ.ಜಿ.ಹೆಗಡೆಯವರ ನೇತೃತ್ವದ ಉತ್ಸಾಹಿಗಳ ತಂಡ ನೆತ್ತಿಯ ಮೇಲೆ ಬುತ್ತಿ, ಹೆಗಲಲ್ಲಿ ಹಾರೆ ಪಿಕಾಸಿಗಳನ್ನು ಹೊತ್ತು ಗುಡ್ಡ ಹತ್ತಿಯೇಬಿಟ್ಟಿತು. ಅಲ್ಲಿ ಇಲ್ಲಿ ಕಥೆಯಾಗಿ ಜನರ ಬಾಯಲ್ಲಿ ಸುಳಿದಾಡುತ್ತಿದ್ದ ಕೋಟೆ ಕೆರೆ ಅವಸ್ಥಾಂತರಕ್ಕೆ ಸಜ್ಜಾಗಿಯೇ ಬಿಟ್ಟಿತು. ನೋಡ ನೋಡುತ್ತಿದ್ದಂತೆ ಮಂಕರಿಗಳಲ್ಲಿ ತುಂಬಿದ ಮಣ್ಣುನ ಕೆರೆಯ ಒಡಲಿಂದ ಹೊರ ಬರಲಾರಂಭಿಸಿತು. ಇಂದೂ ಕೆರೆ ಕಾಮಗಾರಿ ಪೂರ್ಣಗೊಂಡಿಲ್ಲದಿದ್ದರೂ ಊರವರಲ್ಲಿ ವಿಶ್ವಾಸ ಮೂಡಿದೆ. ನಮ್ಮದೇ ಕೆರೆಯನ್ನು ಅಜ್ಞಾತದಿಮದ ಮುಕ್ತಗೊಳಿಸಿ ಮೂಲಸ್ವರೂಪಕ್ಕೆ ತಂದೇ ತರುವ ಛಲ ಮೂಡಿದೆ. ಕೆಲಸ ಭರದಿಂದ ಸಾಗಿದೆ. ಇನ್ನೇನು ವಾರ, ತಿಂಗಳೊಪ್ಪತ್ತಿನಲ್ಲಿ ಕೋಟೆಕೆರೆಯ ನೀರು ಮನೆಮನೆಗೆ ಹರಿದು ಬಂದು ಸಮೃದ್ಧಿಯ ಹೊಸ ಶಕೆಯನ್ನು ಆರಂಭಿಸುತ್ತದೆ. ಅಪ್ಪ ಡಿ.ಜಿ.ಹೆಗಡೆಯವರ ಉತ್ಸಾಹಪೂರಿತ ಸತ್ಕಾರ್ಯವನ್ನು ಅತ್ಯುತ್ಸಾಹದಿಂದ ಬಣ್ಣಿಸಿಕೊಳ್ಳುತ್ತಿದ್ದಾನೆ, ಈಗಷ್ಟೇ ಧಾರವಾಡದಲ್ಲಿ ಮರಿ ಪತ್ರಕರ್ತನಾಗಿ ಮೂಡುತ್ತಿರುವ ರಾಜೀವ ಹೆಗಡೆ. ಶಿಂಗುಮನೆಯ ಎಲ್ಲ ಯುವಕರೂ ಇದೇ ಭಾವದಲ್ಲಿದ್ದಾರೆ. ಇಂಥದ್ದೊಂದು ನೀರಕಾಯಕಕ್ಕೆ, ಮತ್ತವರ ಉತ್ಸಾಹಕ್ಕೂ ನಾಲ್ಕಾರು ಒಳ್ಳೆಯ ಮಾತುಗಳ ನೀರೆರೆದು ಕಳುಹಿಸಲಾಗಿದೆ. ಎಲ್ಲ ಊರಿನಲ್ಲೂ ಹೀಗೆ ಅಜ್ಞಾತಕ್ಕೆ ಬಿದ್ದರುವ ಕೆರೆಗಳಿರಬಹುದು. ಅದನ್ನು ಹುಡುಕಿ ಬೆಳಕಿಗೆ ತರುವ ಗುಪ್ತಚರರು ಬೇಕಿದ್ದಾರೆ. ಎಲ್ಲಿದ್ದಿರಿ?
‘ಲಾಸ್ಟ್‘ಡ್ರಾಪ್: ಈ ನಾಡಿನ ಕೆರೆಗಳೆಲ್ಲವಕ್ಕೆ ಹಿಂದಿದ್ದ ಮರ್ಯಾದೆಯನ್ನು ಮರಳಿ ದೊರಕಿಸಿಕೊಟ್ಟರೆ ಸಾಕು. ನೀರಿನ ಕೊರೆತೆಯೆಂಬ ಪದವನ್ನು ನಿಘಂಟಿನಿಂದ ನಿಸ್ಸಂಶಯವಾಗಿ ತೆಗೆದು ಹಾಕಬಹುದು.
ಸಮ್ಮನಸ್ಸಿಗೆ ಶರಣು
3 months ago
No comments:
Post a Comment