Friday, September 26, 2008

ನೀರು: ನಗರ- ಹಳ್ಳಿಗಳ ನಡುವೆ ಏಕೀ ಏರುಪೇರು ?



ನಿಮಗೆ ಗೊತ್ತೇ ? ಇಂದು ಪ್ರಾಕೃತಿಕ ಸಂಪನ್ಮೂಲವೆಂಬುದು ಪಕ್ಕಾ ರಾಜಕೀಯ ವಸ್ತು. ಹೇಗೆ ನೋಡಿದರೂ ನೀರಿನಂಥ ಸಂಪನ್ಮೂಲ ಬಳಕೆಯೆಂಬುದು ಸಾಮಾಜಿಕ ಅಥವಾ ಸಾಮುದಾಯಿಕ ವಿಷಯವಾಗಬೇಕಿತ್ತು. ಹೆಚ್ಚೆಂದರೆ ಒಂದು ದೇಶದ ಆರ್ಥಿಕ ವಿಷಯವಾಗಿ ಪರಿಗಣನೆಯಾಗಬಹುದು. ಮೊನ್ನೆ ಮೊನ್ನೆಯವರೆಗೆ ಹಾಗೆಯೇ ಇತ್ತು ಸಹ.
ಆದರಿಂದು ಪರಿಸ್ಥಿತಿ ಬದಲಾಗಿದೆ. ನೀರಿನ ರಾಜಕೀಯ ಸರಕಾರವನ್ನೇ ಬದಲಿಸುತ್ತಿರುವುದು ಹೊಸದೇನಲ್ಲ. ತಮಿಳುನಾಡಿನಲ್ಲಿ ಚುನಾವಣೆ ಬಂತೆಂದರೆ ಒಂದಿಲ್ಲೊಂದು ಜಲ ವಿವಾದ ಹುಟ್ಟಿಕೊಳ್ಳುತ್ತದೆ. ಅದು ಇನ್ನೂ ಹೆಚ್ಚಾಗಿ ರಾಜತಾಂತ್ರಿಕ ವಿಷಯವಾಗಿ ಹೊರಹೊಮ್ಮಿದೆ. ಇದೇಕೆ ಹೀಗೆಂದು ಪ್ರಶ್ನಿಸಿಕೊಂಡರೆ ಮತ್ತದೇ ಬದಲಾದ ಭಾರತದ ಚಿತ್ರಣ ಕಣ್ಣ ಮುಂದೆ ಬಂದು ನಿಲ್ಲುತ್ತದೆ.
೧೯೪೭ರಲ್ಲಿ ಭಾರತದ ಜನಸಂಖ್ಯೆ ಸರಿಸುಮಾರು ೩೫ ಕೋಟಿಯಷ್ಟಿತ್ತು. ಇಂದು ಅದರ ಮೂರು ಪಟ್ಟು ಹೆಚ್ಚಳವಾಗಿದೆ. ಆದರೆ, ನೀರಿನಂಥ ಅಗತ್ಯ ಸೇವೆಯ ಬಳಕೆ ಪ್ರಮಾಣ ಐವತ್ತು ವರ್ಷಗಳಲ್ಲಿ ಏನಿಲ್ಲವೆಂದರೂ ಆಗಿನಕ್ಕಿಂತ ಹತ್ತು ಪಟ್ಟು ಹೆಚ್ಚಿದೆ. ಸಂಪನ್ಮೂಲ ಮಾತ್ರ ಹಿಮ್ಮುಖವಾಗಿ ಸಾಗಿದೆ. ಹೀಗಾಗಿ, ಕಾಳಜಿಯಲ್ಲಿ, ಮನೋಭಾವದಲ್ಲಿ ಬದಲಾವಣೆ ಎಂಬುದು ಕಾಣಲೇ ಇಲ್ಲ. ಬದಲಾಗಿ ಹೊಸ ಹೊಸ ಫ್ಯಾಷನ್‌ಗಳು ಹುಟ್ಟಿಕೊಂಡಿವೆ. ನೀರಿಗೊಂದು ದಿನಾಚರಣೆ, ಪರಿಸರಕ್ಕೊಂದು ಉತ್ಸವ... ಹೀಗೆ ಆಡಂಬರಗಳೇ ಅಂಬರಕ್ಕೇರುತ್ತಿವೆ.
ಭಾವನಾತ್ಮಕ ವಿಚಾರಗಳೇನೇ ಇರಲಿ, ನೀರಿನ ವಿಚಾರದಲ್ಲಿ ಭಾರತದ ಇಂದಿನ ವಾಸ್ತವ ಮಾತ್ರ ಅತ್ಯಂತ ಕರಾಳ ಚಿತ್ರಣವನ್ನು ಕಟ್ಟಿಕೊಡುತ್ತದೆ. ಒಂದೆಡೆ ಮೀತಿಮೀರಿ ಬೆಳೆದಿರುವ ಜನಸಂಖ್ಯೆ, ಅದಕ್ಕನುಗುಣವಾಗಿ ಬದಲಾಗಿರುವ ನಗರಗಳು, ಹೆಚ್ಚಿರುವ ಕೈಗಾರಿಕೆ, ಕೃಷಿ ಪ್ರದೇಶಗಳು, ಪರಿಣಾಮವಾಗಿ ಉದ್ಭವಿಸಿರುವ ಮೂಲ ಸೌಲಭ್ಯಗಳ ಕೊರತೆ. ಇನ್ನೊಂದೆಡೆ ಈ ಎಲ್ಲ ಸಮಸ್ಯೆಗಳನ್ನು ಮರೆತು ‘ಭರವಸೆಗಳ ಲೋಕ’ವನ್ನಷ್ಟೇ ನಿರ್ಮಿಸುತ್ತಿರುವ ಸರಕಾರ. ವಸಾಹತು ಧೋರಣೆಯ ನೆರಳಲ್ಲೇ ಬೆಳೆದ ಭಾರತಕ್ಕೆ ಖಂಡಿತಾ ಇಂದಿನ ಪರಿಸ್ಥಿತಿಯ ಪರಿಣಾಮವಾಗಲೀ, ಮುಂದಾಗಬಹುದಾದ ಅನಾಹುತಗಳ ಕಲ್ಪನೆಯಾಗಲೀ ನಿಲುಕದ ವಿಷಯವೇನಲ್ಲ.
ಇಲ್ಲಿ ನಾವುಣ್ಣುವ ಅನ್ನದ ತುತ್ತಿನ ಗಾತ್ರ ಎಷ್ಟಿರಬೇಕೆಂದು ಹೇಳುವುದರಿಂದಾರಂಭಿಸಿ ನಮ್ಮ ವಿದೇಶಾಂಗ ನೀತಿ ಯಾವ ರೀತಿ ಮಾರ್ಪಾಡು ಹೊಂದಬೇಕೆನ್ನುವವರೆಗೆ ಎಲ್ಲ ವಿಷಯಗಳನ್ನು ವಿಶ್ವಬ್ಯಾಂಕ್ ಅಥವಾ ಅದರ ಹಿಂದಿರುವ ಅಮೆರಿಕ ನಿರ್ಧರಿಸುವ ಮಟ್ಟಿಗೆ ನಾವು ದಾಸ್ಯಕ್ಕೆ ಒಳಗಾಗಿ ಬಿಟ್ಟಿದ್ದೇವೆ.
ಭೂಮಿ ಹುಟ್ಟಿದಾಗಿನಿಂದ ೧೯೧೭ರವರೆಗೆ ಯಾವ ಪ್ರಮಾಣದ ಕಾಡು ನಾಶವಾಗಿತ್ತೋ ಅದರ ಎರಡು ಪಟ್ಟು ಕಾಡು ನಂತರದ ೫೦ ವರ್ಷಗಳಲ್ಲಿ ನಾಶವಾಗಿದೆ. ಹಾಗಾದರೆ ಈ ಪ್ರಮಾಣದಲ್ಲಿ ಸಂಪನ್ಮೂಲದ ನಾಶಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ದೊರಕುವ ಉತ್ತರ ಇನ್ನೂ ಆಶ್ಚರ್ಯ ಹುಟ್ಟಿಸುತ್ತದೆ.
ಈ ಭೂಮಿಯ ಮೇಲೆ ನಡೆದ ಎರಡು ಮಹಾ ಯುದ್ಧಗಳು ಜಗತ್ತಿನ ಚಿತ್ರಣವನ್ನೇ ಬದಲಿಸಿದವು. ಈ ಸಂದರ್ಭದಲ್ಲಿ ಕೈಗಾರಿಕೆ ನಿರೀಕ್ಷೆ ಮೀರಿ ಬೆಳೆಯಿತು. ಆಯುಧಗಳಿಗಾಗಿ ಕಬ್ಬಿಣ ಮತ್ತು ಮರದ ಬಳಕೆಯೂ ಹೆಚ್ಚಿತು. ಇದು ಕಾಡುನಾಶಕ್ಕೆ ಮೂಲವಾಯಿತು. ಇಲ್ಲಿಂದಲೇ ನೈಸರ್ಗಿಕ ಸಂಪನ್ಮೂಲಗಳ ಕೊರತೆಯೂ ಮನುಷ್ಯನನ್ನು ಕಾಡಲಾರಂಭಿಸಿತು. ಮತ್ತು ಇಂಥ ಕೊರತೆಯ ಬಳಿಕವೇ ಸಮುದಾಯದ ಸಂಪನ್ಮೂಲವಾಗಿದ್ದ ನೀರಿನಂಥ ವಿಷಯ ರಾಜಕೀಯ, ಆರ್ಥಿಕ ಮಹತ್ವವನ್ನು ಪಡೆದುಕೊಂಡಿತು.
ಇಂದು ನೀರು ಪೂರೈಕೆಗೆ ಮಾನದಂಡ ನಗರ ಮತ್ತು ಅಲ್ಲಿನ ಹಣವಂತರು. ಬೆಂಗಳೂರಿನಂಥ ನಗರದಲ್ಲಿ ಒಂದು ದಿನ ನೀರು ಬರದಿದ್ದರೆ ಇಡೀ ಸರಕಾರವೇ ಕಾಳಜಿ ತೋರುತ್ತದೆ. ಅದರಲ್ಲೂ ಪ್ರತಿಷ್ಠಿತ ಬಡಾವಣೆಗಳಿಗೆ ನೀರು ಪೂರೈಕೆಯಾಗದಿದ್ದರೆ ಆಡಳಿತ ಕೇಂದ್ರವೇ ಅಲುಗಾಡುತ್ತದೆ. ಹಳ್ಳಿಗಳಲ್ಲಿ ವಾರಗಟ್ಟಲೆ ಮಳೆ ಬಾರದೇ ಬೆಳೆಗಳು ಒಣಗುತ್ತಿದ್ದರೂ ಅದು ಮಾಮೂಲಿನ ಸಂಗತಿಯಾಗಿ ಕಾಣುತ್ತದೆ.
ಹಣವಂತರನ್ನೇ ಮಾನದಂಡವಾಗಿಟ್ಟುಕೊಂಡು ಸಂಪನ್ಮೂಲ ಹಂಚಿಕೆ ಮಾಡುವ ನಮ್ಮ ಪ್ರವೃತ್ತಿ ಖಂಡಿತಾ ಅಪಾಯಕಾರಿ. ನೀವು ಬೇಕಿದ್ದರೆ ನೋಡಿ, ಹಣಕೊಟ್ಟರೆ ಎಷ್ಟು ಬೇಕಾದರೂ ನೀರು ಬಳಸಬಹುದು, ಅದಿಲ್ಲದಿದ್ದರೆ ನೀರು ಸಿಗದು ಎಂಬ ಸ್ಥಿತಿ ನಗರಗಳಲ್ಲಿದೆ. ನಮ್ಮ ಇಂಥ ಸಂಪನ್ಮೂಲ ಹಂಚಿಕೆ ನೀತಿ ಕೂಡ ರಾಜತಾಂತ್ರಿಕ ಹುನ್ನಾರದ ಭಾಗವೇ. ಅಮೆರಿಕ ಅದರ ಸೂತ್ರಧಾರ. ಹೀಗಾಗಿ, ವಿಶ್ವಬ್ಯಾಂಕ್, ವಿಶ್ವವ್ಯಾಪಾರ ಸಂಸ್ಥೆಗಳಂಥ ಏಜೆಂಟರ ಮೂಲಕ ಸಾಲ ಹಂಚುವ ಅದು ಸಾಲ ಪಡೆದ ದೇಶಗಳನ್ನು ಜಾಗತೀಕರಣದ ‘ತದ್ರೂಪಿ ತಯಾರಿಕಾ ಉಪಕರಣ’ವಾಗಿ ಮಾರ್ಪಡಿಸುತ್ತದೆ. ಇಂಥ ತದ್ರೂಪಿ ವೇದಿಕೆಯೇ ನೀರಿನ ಖಾಸಗೀಕರಣ. ಮತ್ತೆ ಇವೆಲ್ಲವೂ ನಗರ ಕೇಂದ್ರಿತ.
ಒಂದು ನಿಮಿಷ ಯೋಚಿಸಿ. ನಮ್ಮ ಗ್ರಾಮೀಣ ಪ್ರದೇಶದ, ರೈತ ಸಮುದಾಯದ ನೀರಿನ ಬಳಕೆ ಪ್ರಮಾಣದಲ್ಲಿ ಇನ್ನೂ ಹೇಳಿಕೊಳ್ಳುವ ಯಾವುದೇ ಬದಲಾವಣೆಗಳು ಆಗಿಲ್ಲ. ಹಾಗಾದರೆ ಬದಲಾಗಬೇಕಾದ್ದು ನಮ್ಮ ಮಟ್ಟಿಗೆ ನಿಜವಾಗಲೂ ಯಾವುದು ? ಆದರೆ ಬದಲಾದದ್ದು ಯಾವುದು ? ಕೃಷಿ ಅವಲಂಬಿತ ಪ್ರದೇಶದ ಬದಲಿಗೆ ಬದಲಾವಣೆಯೆಂಬುದು ಉತ್ಪಾದನಾ-ಸೇವಾ ವಲಯದ ಕಡೆಗೆ ಪ್ರವಹಿಸುತ್ತಿದೆ ಎಂಬುದು ಸತ್ಯ. ಅಲ್ಲಿ ಹಳ್ಳಿಗಳಿಗೆ ನೀರು ಬೇಕಿದ್ದಾಗಲೇ ಇಲ್ಲಿ ನಗರಗಳಲ್ಲಿ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಅನುಮಾನವೇ ಇಲ್ಲ. ಭಾರತದಲ್ಲಿ ನೀರಿನ ವಿಷಯದಲ್ಲಿ ಒಂದಷ್ಟು ಬದಲಾವಣೆ, ಕ್ರಾಂತಿ ಆಗಲೇಬೇಕಿದೆ. ಆದರೆ, ಅದು ಮೂಲಭೂತವಾಗಿ ನಮ್ಮ ಮನೋಭಾವದಲ್ಲಾಗಬೇಕಾದ್ದು. ನೀರನ್ನು ಪೋಲು ಮಾಡುವ ನಮ್ಮ ನಿರ್ಲಕ್ಷ್ಯತನದಲ್ಲಿ ಆಗಬೇಕಾದದ್ದು. ಸ್ವಚ್ಛ, ನಿರ್ದಿಷ್ಟ ನೀರು ಪೂರೈಕೆಯ ಶಿಸ್ತಿನಲ್ಲಿ ಆಗಬೇಕಿರುವುದು. ಆಗ ಮಾತ್ರ ನೀರಿನ ರಾಜಕೀಯ ನಿಲ್ಲಿಸಿ, ನಮ್ಮ ನೀರನ್ನು ನಾವೇ ಕುಡಿಯಲು ಬೇರೆಯವರ ನೀತಿ ನಿರೂಪಣೆಗಾಗಿ ಕಾಯಬೇಕಾದ ಪರಿಸ್ಥಿತಿಯಿಂದ ಹೊರಬರಲು ಸಾಧ್ಯ.

‘ಲಾಸ್ಟ್ ’ಡ್ರಾಪ್:
ಮಳೆಯನ್ನು ದೇವತೆಯೆಂದು ಪೂಜಿಸುವ ಈ ದೇಶದಲ್ಲಿ ೨ ಕೋಟಿಗೂ ಹೆಚ್ಚು ಬಾವಿಗಳು, ಕೊಳವೆ ಬಾವಿಗಳು ನಮ್ಮ ಕೃಷಿ ಸಾಮ್ರಾಜ್ಯವನ್ನು ಆಳುತ್ತಿವೆ. ಹೀಗಿದ್ದೂ ನಮ್ಮ ದೇವರು ಮುನಿಸಿಕೊಳ್ಳದೇ ಇದ್ದಾನೆಯೇ ?

No comments: