Friday, October 17, 2008

ನಾಡ ಕೃಷಿ: ನಳನಳಿಸುವ ದ್ರಾಕ್ಷಿ




ನೀರು ನಿರ್ವಹಣೆಯೆಂಬುದು ಒಂದು ಕಲೆ. ಅದು ಎಲ್ಲರಿಗೂ ಸಿದ್ಧಿಸುವ ಜಾಣ್ಮೆಯಲ್ಲ. ಕೆಲವೇ ಕೆಲ ಮಂದಿ ಮಾತ್ರ ಅದನ್ನು ಕರಗತ ಮಾಡಿಕೊಳ್ಳಬಲ್ಲರು. ವಿಜಾಪುರ ಸಮೀಪದ ಜಾಲಗೇರಿಯ ದ್ರಾಕ್ಷಿ ತೋಟದ ಮಾಲೀಕ ಎಸ್.ಎಚ್. ನಾಡಗೌಡರು ಅಂಥ ಬನಿಜಾ (ಬರ ನಿರೋಧಕ ಜಾಣ್ಮೆ)ವನ್ನು ಸಿದ್ಧಿಸಿಕೊಂಡ ಅಪರೂಪದ ರೈತ.
ಮಳೆಯೆಂಬುದೇ ಅಪರೂಪದ ಅತಿಥಿ ಎಂಬಂಥ ಸನ್ನಿವೇಶದಲ್ಲಿ ಪೂರ್ತಿ ನಲವತ್ತು ಎಕರೆಯ ಅವರ ಒಣಭೂಮಿಯಲ್ಲಿ ಇಂದು ದ್ರಾಕ್ಷಿ ಬಳ್ಳಿ ನಲಿದಾಡುತ್ತಿದ್ದರೆ ಅದು ನಾಡಗೌಡರ ಇಚ್ಛಾಶಕ್ತಿ ಮತ್ತು ಕ್ರಿಯಾಶೀಲತೆಯ ಫಲ. ಆ ತೋಟದಿಂದ ದೇಶ ವಿದೇಶಗಳಿಗೆ ಇಂದು ದ್ರಾಕ್ಷಿ ರಫ್ತಾಗುತ್ತಿದೆ. ಪಕ್ಕದ ಇತರ ಹಲವು ತೋಟಗಳಿಗೆ ಹೋಲಿಸಿದರೆ ನಾಡಗೌಡರ ಕೃಷಿ ಹಲವು ರೀತಿಯಲ್ಲಿ ಭಿನ್ನವಾಗಿ ನಿಲ್ಲುತ್ತದೆ. ಅದು ನೀರು, ಗೊಬ್ಬರ, ಕೇಷಿ ಪದ್ಧತಿ ಯಾವುದೇ ಇರಬಹುದು. ಎಲ್ಲವೂ ವೈಶಿಷ್ಟ್ಯಪೂರ್ಣ. ನೀವು ನಂಬಲಿಕ್ಕಿಲ್ಲ. ನಾಡಗೌಡರ ತೋಟದಲ್ಲಿನ ದ್ರಾಕ್ಷಿ ಬಳ್ಳಿ ಈವರೆಗೆ ರಾಸಾಯನಿಕ ಗೊಬ್ಬರವನ್ನೇ ಕಂಡಿಲ್ಲ. ಆದರೂ ಇಳುವರಿಯ ವಿಚಾರದಲ್ಲಾಗಲೀ, ಹಣ್ಣಿನ ಗುಣಮಟ್ಟದ ವಿಚಾರದಲ್ಲಾಗಲಿ ಬೇರಾವುದಕ್ಕೂ ಸಾಟಿಯಿಲ್ಲ.
ಇದೆಲ್ಲ ಹೇಗೆ ಸಾಧ್ಯವಾಯಿತೆಂದು ಗೌಡರನ್ನು ಪ್ರಶ್ನಿಸಿದರೆ, ಎಲ್ಲವೂ ‘ಜೀವಾಮೃತದ ಮಹಿಮೆ’ ಎನ್ನುತ್ತಾರೆ. ಕುತೂಹಲದಿಂದ ಮತ್ತೆ ಮುಂದುವರಿದರೆ ನೀವು ತೋಟದಲ್ಲಿ ಅಲ್ಲಲ್ಲಿ ನಿರ್ಮಿಸಿರುವ ಪುಟ್ಟಪುಟ್ಟ ಕುಟೀರದ ಎದುರು ನುಮ್ಮನ್ನು ಕರೆದೊಯ್ದು ನಿಲ್ಲಿಸುತ್ತಾರೆ.
ಹೌದು, ನಾಡಗೌಡರ ಇಡೀ ತೋಟವನ್ನು ಪೊರೆಯುತ್ತಿರುವುದು ಅವರೇ ಕಂಡುಕೊಂಡಿರುವ ಅಪರೂಪದ ಮೈಕ್ರೋನ್ಯೂಟ್ರನ್ಸ್ ಟಾನಿಕ್ ‘ಜೀವಾಮೃತ’. ಹಾಗೆಂದು ಇದು ಯಾವುದೋ ಬಹುರಾಷ್ಟ್ರೀಯ ಕಂಪನಿಯಲ್ಲಿ ತಯಾರಾದದ್ದಲ್ಲ. ಗೌಡರು ತಮ್ಮದೇ ತೋಟದಲ್ಲಿ ಲಭ್ಯ ವಸ್ತುಗಳಿಂದ ರೂಪಿಸಿಕೊಂಡದ್ದು. ಇಡೀ ತೋಟಕ್ಕೆ ಇದೇ ಗೊಬ್ಬರ, ಇದೇ ಕೀಟನಾಶಕ ಮಾತ್ರವಲ್ಲ, ಇದೇ ಜೀವದ್ರವ್ಯ ಸಹ.
‘ಹಿತ್ತಲ ಗಿಡ ಮದ್ದಲ್ಲ’ ಎಂಬುದು ಗೌಡರ ಪಾಲಿಗೆ ಸುಳ್ಳಾದ ಗಾದೆ. ಇವರ ತೋಟದ ಹಿತ್ತಲ್ಲಿರುವ ಎಲ್ಲವೂ ಮದ್ದೇ. ಇಲ್ಲ ತ್ಯಾಜ್ಯವೆಂಬುದೇ ಇಲ್ಲ. ಕೊನೆಗೆ ತೋಟದ ಮೇಲ್ಭಾಗದಲ್ಲಿರುವ ಕೊಟ್ಟಿಗೆಯ ಸಗಣಿ, ಗೋಮೂತ್ರವೂ ಅತ್ಯಂತ ಉಪಯುಕ್ತ. ಇದೇ ಜೀವಾಮೃತದ ಮೂಲಧಾತು ಸಹ. ಗೌಡರ ಪ್ರಕಾರ ‘ರಸಗೊಬ್ಬರ ಮುಕ್ತ ಕೃಷಿ ನೀರಿನ ಬಳಕೆಯನ್ನು ಕನಿಷ್ಠ ಶೇ. ೪೦ರಷ್ಟು ಕಡಿಮೆ ಮಾಡಿದೆ. ತೋಟದಲ್ಲಿ ತಯಾರಾಗುವ ಜೀವಾಮೃತದ ಹೆಗ್ಗಳಿಕೆಯೇ ಇದು’ ಎನ್ನುತ್ತಾರೆ.
ಹಾಗಾದರೆ ಏನಿದು ಜೀವಾಮೃತ ? ಇದೊಂದು ರೀತಿಯ ವಿಶಿಷ್ಟ ಸಾವಯವ ದ್ರಾವಣ. ೧೦ ಲೀಟರ್ ನೀರು, ೧೦ ಕೆ.ಜಿ. ಗೋಮಯ, ೨ ಕೆ.ಜಿ.ಯಷ್ಟು ಹುರುಳಿ ಇತ್ಯಾದಿ ಯಾವುದೇ ದ್ವಿದಳ ಧಾನ್ಯದ ಹಿಟ್ಟು, ೧ ಕೆ.ಜಿ. ಮಣ್ಣು (ಹೆಪ್ಪು), ೨ ಕೆ.ಜಿ. ಕರಿಬೆಲ್ಲ....ಇವಿಷ್ಟಿದ್ದರೆ ಎಲ್ಲಿ ಬೇಕಾದರೂ ಜೀವಾಮೃತವನ್ನು ಸಿದ್ಧಗೊಳಿಸಿಕೊಳ್ಳಬಹದು. ತಯಾರಿಕೆಯ ವಿಧಾನವೂ ಅತ್ಯಂತ ಸುಲಭ. ಸುಮಾರು ೧೮೦ ಲೀಟರ್ ನೀರಿಗೆ ಇವಿಷ್ಟನ್ನೂ ಹಾಕಿ ಚೆನ್ನಾಗಿ ಗೋಟಾಯಿಸಿ ಇಟ್ಟರಾಯಿತು. ಒಂದು ವಾರ ಮತ್ತೆ ಅತ್ತ ತಲೆ ಹಾಕುವ ಅಗತ್ಯವಿರುವುದಿಲ್ಲ. ಏಳು ದಿನಗಳ ನಂತರ ಅತ್ಯುತ್ತಮ ಪೌಷ್ಟಿಕಾಂಶಯುಕ್ತ ಸಾವಯವ ಗೊಬ್ಬರ ದ್ರಾವಣ ಬಳಕೆಗೆ ಲಭ್ಯವಿರುತ್ತದೆ. ನಾಡಗೌಡರ ತೋಟದಲ್ಲಿ ಪ್ರತಿ ಹದಿನೈದು ಅಡಿಗೊಂದರಂತೆ, ದ್ರಾಕ್ಷಿ ಬಳ್ಳಿಯ ಸಾಲಿನ ಕೊನೆಯಲ್ಲಿ ಜೀವಾಮೃತ ಕುಟೀರ ಸ್ಥಾಪಿಸಲಾಗಿದೆ. ಸರದಿಯಂತೆ ಒಂದಾದರೊಂದು ಕುಟೀರದಲ್ಲಿ ನಿರಂತರ ಜೀವಾಮೃತ ತಯಾರಾಗುತ್ತಲೇ ಇರುತ್ತದೆ. ೧೫ ದಿನಕ್ಕೊಮ್ಮೆ ಒಂದು ಗಿಡಕ್ಕೆ ಒಂದು ಲೀಟರ್‌ನಂತೆ ಜೀವಾಮೃತದ ಪೂರೈಕೆಯಾಗುತ್ತದೆ.
ರಾಸಾಯನಿಕ ಗೊಬ್ಬರ ಬಳಸುವ ಬೆಳೆಗಳು ಸಹಜವಾಗಿ ನೀರನ್ನು ಹೆಚ್ಚು ಬೇಡುತ್ತವೆ. ಅದರಲ್ಲೂ ಬಯಲು ಸೀಮೆಯ ನೆಲದಲ್ಲಿ, ಇಲ್ಲಿನ ರಣ ಬಿಸಿಲಿನ ದಿನಗಳಲ್ಲಿ ಎಷ್ಟು ನೀರು ಪೂರೈಸಿದರೂ ಅದು ಕಡಿಮೆಯೇ. ಆದರೆ, ಸಾವಯವ ಗೊಬ್ಬರ ಹಾಗಲ್ಲ. ಅದರಲ್ಲಿ ಅಡ್ಡ ಪರಿಣಾಮಗಳೇ ಇರುವುದಿಲ್ಲ. ಜತೆಗೆ ಜೀವಾಮೃತದಲ್ಲಿ ಹೆಚ್ಚಿನಪಾಲು ನೀರೇ ಇರುವುದರಿಂದ ಗಿಡಗಳಿಗೆ ತಂಪು ಸಹಜವಾಗಿಯೇ ಸಿಕ್ಕಂತಾಗುತ್ತದೆ ಎಂಬದು ಗೌಡರ ವ್ಯಾಖ್ಯಾನ.
ಯಾವುದೇ ಕಾರಣಕ್ಕೂ ರಾಸಾಯನಿಕ ಅಂಶಗಳುಳ್ಳ, ಗೊಬ್ಬರವನ್ನಾಗಲೀ, ಕೀಟ ನಾಶಕವನ್ನಾಗಲೀ ತಮ್ಮ ತೋಟದೊಳಕ್ಕೆ ಪ್ರವೇಶಿಸಲೇ ಬಿಡಬಾರದೆಂಬ ಪ್ರತಿಜ್ಞೆ ಗೌಡರದ್ದು. ಇದು ಗೊಬ್ಬರದ ಕತೆಯಾದರೆ, ಇನ್ನು ಕೀಟ ನಾಶಕವಾಗಿ ಸಹ ಇಂಥದೇ ಮತ್ತೊಂದು ದ್ರಾವಣವನ್ನವರು ಕಂಡುಕೊಂಡಿದ್ದಾರೆ. ಸುತ್ತಮುತ್ತಲು ಸಿಗುವ ಕಹಿಬೇವಿನ ಎಲೆಯನ್ನು ಕಡಿದು ತಂದು ಗೋ ಮೂತ್ರದಲ್ಲಿ ೩೦ ದಿನಗಳ ಕಾಲ ನೆನೆಸಿಡುತ್ತಾರೆ. ನಂತರ ಅದನ್ನು ಚೆನ್ನಾಗಿ ಹಿಸುಕಿ, ಅದರಲ್ಲಿನ ಕಸ, ಕಡ್ಡಿ ಇತ್ಯಾದಿಗಳನ್ನೆಲ್ಲ ಪ್ರತ್ಯೇಕಿಸಿ ದ್ರಾಕ್ಷಿ ಬಳ್ಳಿಗಳಿಗೆ ಸಿಂಪಡಿಸುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ಇಡೀ ತೋಟಕ್ಕೆ ಇದನ್ನೇ ಪ್ರಯೋಗಿಸುತ್ತಿದ್ದು, ಯಾವುದೇ ಹೇಳಿಕೊಳ್ಳುವಂಥ ರೋಗ ತಮ್ಮ ಬೆಳೆಯನ್ನು ಬಾಸಿಲ್ಲ ಎಂಬುದು ಅವರ ಅನುಭವದ ಮಾತು.
ಇಷ್ಟಕ್ಕೇ ಗೌಡರ ಪ್ರಯೋಗಳು ಮುಗಿಯುವುದಿಲ್ಲ. ಒಣ ಭೂಮಿಯಲ್ಲಿ ತಂಪು ನಿಲ್ಲುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಾಗೆಂದು ಗೌಡರು ಸುಮ್ಮನೆ ಕುಳಿತುಕೊಂಡಿಲ್ಲ. ಯಾವಾಗಲೊಮ್ಮೆ ಭೂರೀ ಭೋಜನ ನೀಡುವ ಬದಲು, ನಿಯಮಿತವಾಗಿ ಸ್ವಲ್ಪ ಸ್ವಲ್ಪವೇ ತಿನ್ನುವುದು ಆರೋಗ್ಯ ಶಾಸ್ತ್ರದಲ್ಲಿ ಹೇಳಿದ ಪದ್ಧತಿ. ಅದನ್ನೇ ದ್ರಾಕ್ಷಿ ಬಳ್ಳಿಗಳಿಗೆ ಪೂರೈಸುವ ನೀರಿನ ವಿಚಾರಕ್ಕೂ ಅವರು ಅನ್ವಯಿಸಿದ್ದಾರೆ. ತಮ್ಮ ತೋಟದ ಮೇಲ್ಭಾಗದಲ್ಲಿ, ಸುಮಾರು ನಾಲ್ಕು ಲಕ್ಷ ಲೀಟರ್ ನೀರು ಹಿಡಿಯುವ ಬೃಹತ್ ಟ್ಯಾಂಕ್ ಒಂದನ್ನು ನಿರ್ಮಿಸಿದ್ದಾರೆ. ೩೮ ಅಡಿ ಅಗಲ, ೫೮ ಅಡಿ ಉದ್ದ, ೮ ಅಡಿ ಆಳದ ಈ ಬೃಹತ್ ಟ್ಯಾಂಕ್ ಎತ್ತರದಲ್ಲಿ ನಿರ್ಮಾಣಗೊಂಡಿರುವುದರಿಂದ ಸೈಫನ್ ಪದ್ಧತಿಯಲ್ಲಿ ತನ್ನಿಂದ ತಾನೇ ಯಾವುದೇ ಇಂಧನ ಖರ್ಚಿಲ್ಲದೇ ಇಡೀ ತೋಟಕ್ಕೆ ನೀರು ಪೂರೈಸುತ್ತದೆ. ಏನಿಲ್ಲವೆಂದರೂ ೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಟ್ಯಾಂಕಿಗೆ ಅಳವಡಿಸಿರುವ ಪೈಪ್‌ಗಳ ಮೂಲಕ ನಿರಂತರ ನೀರು ತೋಟದತ್ತ ಹರಿಯುತ್ತಲೇ ಇರುತ್ತದೆ. ಸಾಲುಗಳಿಗೆ ನಿಯಮಿತವಾಗಿ ನೀರು ತುಂತುರು ನೀರಾವರಿಯ ರೂಪದಲ್ಲಿ ಹಾಯುವುದರಿಂದ ಮೇಲ್ಮೈ ಸದಾ ತಂಪಿನಿಂದ ಕೂಡಿರುತ್ತದೆ. ಕೆಳಗೆ ತಾವೇ ನಿರ್ಮಿಸಿರುವ ಬೃಹತ್ ಕೃಷಿ ಹೊಂಡವೇ ( ಕಳೆದ ವಾರ ಈಬಗ್ಗೆ ಮಾಹಿತಿ ನೀಡಲಾಗಿತ್ತು) ಇದಕ್ಕೆ ನೀರಿನ ಆಧಾರ. ವಿದ್ಯುತ್ ಇದ್ದಾಗಲೆಲ್ಲ ಕೃಷಿ ಹೊಂಡದಿಂದ ನೀರು ಪಂಪ್ ಆಗುತ್ತಲೇ ಇರುತ್ತದೆ. ಹೀಗಾಗಿ ಒಂದೊಮ್ಮೆ ದಿನಗಟ್ಟಲೇ ವಿದ್ಯುತ್ ( ಕರ್ನಾಟಕದಲ್ಲಿ ಹೀಗಾಗುವುದು ಸಾಮಾನ್ಯ ಸಂಗತಿಯಾದ್ದರಿಂದ) ಇಲ್ಲದಿದ್ದರೂ ಗಿಡಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವುದಿಲ್ಲ.
ಇವಿಷ್ಟೇ ಅಲ್ಲ. ನಾಡಗೌಡರ ತೋಟಕ್ಕೆ ನೀರು ಗೊಬ್ಬರ ಮಾತ್ರವಲ್ಲ. ಯಾವುದೂ ಹೊರಗಿನಿಂದ ಪೂರೈಕೆಯಾಗುವುದಿಲ್ಲ. ಮಾತ್ರವಲ್ಲ, ತೋಟದ ಯಾವೊಂದು ವಸ್ತುವೂ ತ್ಯಾಜ್ಯವಾಗಿ ಹೊರಹೋಗುವುದಿಲ್ಲ. ಆವರಣದಲ್ಲಿ ಬಿದ್ದ ಮಳೆಯೆಲ್ಲವೂ ಕೃಷಿ ಹೊಂಡಕ್ಕೆ ಬಂದು ವಿರಮಿಸುತ್ತದೆ. ಕೃಷಿ ಹೊಂಡದಲ್ಲಿ ಸಂಗ್ರಹವಾಗುವ ಹೂಳು ಜೀವಾಮೃತಕ್ಕೆ ಹೆಪ್ಪು ಆಗಿ ಬಳಕೆಯಾಗುತ್ತದೆ. ಇನ್ನು ಗೌಡರು ನಿರ್ಮಿಸಿರುವ ಅತ್ಯಾಧುನಿಕ ಮಾದರಿ ಹಟ್ಟಿಯಲ್ಲಿ ಏನಿಲ್ಲವೆಂದರೂ ನಲವತ್ತಕ್ಕೂ ಹೆಚ್ಚಿನ ಹಸುಗಳು ಹಾಲಿನ ಹೊಳೆ ಹರಿಸುತ್ತಿವೆ. ತೋಟದಲ್ಲಿ ಬೆಳೆಯುವ ಕಳೆಯೇ ಅವಕ್ಕೆ ಸಮೃದ್ಧ ಮೇವು. ಅದರ ಸಗಣಿ, ಮೂತ್ರಗಳು ಜೀವಾಮೃತವಾಗಿ ತೋಟಕ್ಕೆ ಪೂರೈಕೆಯಾಗುತ್ತದೆ. ಹೆಚ್ಚಿನದ್ದು ಗೋಬರ್ ಪ್ಲಾಂಟ್ ಸೇರಿ ಅನಿಲ ಉತ್ಪಾದನೆಗೆ ಒದಗುತ್ತಿದೆ. ಉಳಿದಂತೆ ಇಲ್ಲಿನ ಕಸ ಕಡ್ಡಿಗಳೆಲ್ಲವೂ ಗೌಡರು ನಿರ್ಮಿಸಿರುವ ಎರೆಹುಳು ಗೊಬ್ಬರ ಘಟಕಕ್ಕೆ ಕಚ್ಚಾ ವಸ್ತು. ಇನ್ನೇನು ಬೇಕು ಸ್ವಾವಲಂಬಿ ಕೃಷಿ ಎನ್ನಿಸಿಕೊಳ್ಳಲು. ಹೌದು ಗೌಡರದ್ದು ನೂರಕ್ಕೆ ನೂರು ಸ್ವಾವಲಂಬಿ ಕೃಷಿ.

‘ಲಾಸ್ಟ್’ಡ್ರಾಪ್: ಇಚ್ಛಾಶಕ್ತಿ, ಪ್ರಯೋಗಶೀಲತೆಗಳಿದ್ದರೆ ಖಂಡಿತಾ ಎಂಥ ಸ್ಥಳದಲ್ಲೂ ಕೃಷಿಯಿಂದ ನಷ್ಟ ಎಂಬುದಿಲ್ಲ. ವ್ಯವಸಾಯವೆಂಬುದನ್ನು ಆರಾಧನೆ ಎಂದುಕೊಳ್ಳಬೇಕು. ಆಗ ಭೂದೇವಿ ಒಲಿದು ವರ ಕೊಟ್ಟೇ ಕೊಡುತ್ತಾಳೆ ಎಂಬುದಕ್ಕೆ ನಾಡಗೌಡರು ಪ್ರತ್ಯಕ್ಷ ಸಾಕ್ಷಿ.

1 comment:

Unknown said...

ದ್ರಾಕ್ಷಿಯ ಒಂದು ಫೋಟೋ ಹಾಕಿದ್ದರೆ ಎಟುಕದ ದ್ರಾಕ್ಷಿಯ ನೋಡಿಯಾದರೂ ಸಂತೋಷಪಟ್ಟುಕೊಳ್ಳಬಹುದಿತ್ತಲ್ಲ..!ಪ್ರಮೋಷನ್ ಅವರೆ