ಊರೆಂದರೆ ಊರಪ್ಪ. ಅಲ್ಲಿ ಒಂದಷ್ಟು ಮನೆಗಳಿವೆ, ಮನೆ ಎಂದರೆ ಹಂಚಿನದ್ದು, ಹುಲ್ಲಿನದ್ದು, ತಾರಸಿ, ಆಸ್ಬೆಸ್ಟಾಸ್ ಶೀಟ್‌ನದ್ದು....ಎಲ್ಲ ರೀತಿಯದ್ದೂ ಇವೆ. ಒಂದೂರು ಅಂದರೆ ಎಲ್ಲ ರೀತಿಯ, ಎಲ್ಲ ವರ್ಗಗಳ ಮನೆಗಳೂ ಇರುತ್ತವಲ್ಲಾ; ಹಾಗೇ ಇವೆ. ಒಂದೇ ರೀತಿಯ ಮನೆಗಳಿರಲು ಅದೇನು ಆಶ್ರಯ ಕಾಲನಿಯೇ ? ಹಾಗೆಯೇ ಪಕ್ಕದಲ್ಲೇ ಒಂದು ಶಾಲೆಯಿದೆ, ಆಸ್ಪತ್ರೆಯಿದೆ, ಸಮುದಾಯ ಭವನವಿದೆ, ಕಾಕನ ಟೀ ಹೋಟೆಲ್ ಇದೆ, ಊರ ಮುಂದೊಂದು ಪುಟ್ಟ ದೇಗುಲ, ಮಂದಿರ, ಮಸೀದಿ.... ಅಯ್ಯೋ ರಾಮಾ, ಇದೊಳ್ಳೆ ಕತೆಯಾಯಿತಲ್ಲ. ಒಂದು ಹಳ್ಳಿ ಎಂದ ಮೇಲೆ ಇವೆಲ್ಲ ಇರಲೇ ಬೇಕು.
ಇಷ್ಟೇ ಅಲ್ಲ, ಒಂದಷ್ಟು ಹೊಲ ಗದ್ದೆಗಳಿವೆ. ಅದಕ್ಕೆ ಸುತ್ತ ಬೇಲಿ ಹಾಕಿದ್ದಾರೆ. ಆ ಹೊಲದ ನಟ್ಟ ನಡುವೆ ನೀರು ಹರಿಯುವ ಕಾಲುವೆಯಿದೆ. ಹೊಲಕ್ಕೆ ಹೋಗಲು ಪುಟ್ಟ ರಸ್ತೆಯಿದೆ. ಆ ರಸ್ತೆಯ ಪಕ್ಕದಲ್ಲಿ ದನಕರುಗಳು, ಕುರಿ ಮಂದೆ ಮೇಯುತ್ತಿರುತ್ತವೆ. ಹಾಗೆ ಮುಂದಕ್ಕೆ ಸಾಗಿದರೆ ಅಲ್ಲೊಂದು ಪುಟ್ಟ ಅಣೆಕಟ್ಟು, ಅದಕ್ಕೆ ನಾಲ್ಕಾರು ಬಾಗಿಲು, ಅದನ್ನೆತ್ತಿದರೆ ಒಡ್ಡಿನ ಒಳಗಿರುವ ನೀರು ಸೀದ ಹೊಲ ಗದ್ದೆಗಳತ್ತ ಓಡುತ್ತದೆ. ಹೊಲದ ಈ ಪಕ್ಕದಲ್ಲಿ ಒಂದು ಬಯಲು. ಅಲ್ಲೊಂದಿಷ್ಟು ರೈತಾಪಿ ಮಂದಿ ಬೆಳೆದ ಬೆಳೆಯನ್ನು ಒಕ್ಕುತ್ತಿರಬಹುದು....
ಓಹ್, ಯಾರೂ ಕಾಣದ ಊರೆಂದು ಇದನ್ನು ಬಣ್ಣಿಸಲಾಗುತ್ತಿದೆ ಎಂದುಕೊಳ್ಳಬೇಡಿ. ಎಲ್ಲ ಊರಲ್ಲೂ ಇವೆಲ್ಲವೂ ಇದ್ದೇ ಇರುತ್ತವೆ. ಈ ಊರಿನದ್ದು ವಿಶೇಷವೆಂದರೆ ಇದು ಊರೆಂದರೆ ಊರಲ್ಲ, ಮತ್ತೆ ಈ ಊರಿನ ಎಲ್ಲವೂ ಇರುವುದೇ ಇಪ್ಪತ್ತು ಗುಂಟೆ ಪ್ರದೇಶದಲ್ಲಿ !
ಗೋಜಲು ಗೋಜಲೆನಿಸಿದರೆ ತಲೆ ಕೆಡಿಸಿಕೊಳ್ಳಬೇಡಿ. ಮೊದಲೇ ಹೇಳಿದಂತೆ ಇದು ಊರೆಂದರೆ ಊರಲ್ಲ. ಒಂದೂರಿನಲ್ಲಿ ಏನೆಲ್ಲ ಇರಬಹುದೋ ಅವೆಲ್ಲದರ ಪ್ರತಿಕೃತಿಯನ್ನು ಪಕ್ಕಾ ಊರೆಂಬ ಕಲ್ಪನೆ ಬರುವ ಮಾದರಿಯಲ್ಲಿ ನಿರ್ಮಿಸಿಡಲಾಗಿದೆ ವಿಜಾಪುರ ಪಟ್ಟಣದಿಂದ ತುಸು ಹೊರಭಾಗದಲ್ಲಿ. ಹೀಗೆ ಪ್ರತಿಕೃತಿಯನ್ನು ನಿರ್ಮಿಸಿ ನಿಲ್ಲಿಸಲಾಗಿರುವ ಊರಿನ ಹೆಸರು ‘ನಿರ್ಮಿತಿ ಕೇಂದ್ರ’.
ಹೌದು, ಜಿಲ್ಲಾಡಳಿತದ ಇಚ್ಛಾ ಶಕ್ತಿಯ ಫಲವಾಗಿ ೨೦೦೫ರಲ್ಲಿ ಅಸ್ತಿತ್ವ ಪಡೆದ ಈ ನಿರ್ಮಿತಿ ಕೇಂದ್ರ ಇಡೀ ರಾಜ್ಯದಲ್ಲೇ ಇಂಥ ಮೊದಲ ಪ್ರಯತ್ನ. ಎಲ್ಲಕ್ಕಿಂತ ಹೆಚ್ಚಾಗಿ ಮಳೆ ನೀರು ಸಂಗ್ರಹದ ಎಲ್ಲ ಮಾದರಿಗಳೂ ಒಂದೇ ತೆಕ್ಕೆಗೆ ನೋಡ ಸಿಗುವಂತೆ ಮಾಡುವ ಪರಿಕಲ್ಪನೆ ಸಾಕಾರಗೊಂಡದ್ದು ಜಿಲ್ಲಾಕಾರಿ ಮಹಮದ್ ಮೋಸಿನ್ ಅವರ ಬೆಂಬಲದಿಂದಾಗಿ. ಅದಾಗ ವಿಜಾಪುರದಲ್ಲಿ ಅಂದಾಜು ೩ ಲಕ್ಷ ಜನಸಂಖ್ಯೆಗೆ ನೀರು ಪೂರೈಕೆಯಾಗುತ್ತಿದ್ದುದು ಪಟ್ಟಣದ ಸುತ್ತಲಿನ ಮೂರು ಬೃಹತ್ ಕೆರೆಗಳಿಂದ. ಅಲ್ಲಿನ ಮಳೆ ಪ್ರಮಾಣ, ವಾತಾವರಣವನ್ನು ಮತ್ತೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಒಟ್ಟಾರೆ ಒಂದು ಮಳೆಯಿದ್ದರೆ ಮತ್ತೊಂದು ಮಳೆಯಿಲ್ಲ ಎಂಬಂಥ ಪರಿಸ್ಥಿತಿಯಲ್ಲಿ ಇಡೀ ನಗರಕ್ಕೆ ನೀರು ಪೂರೈಕೆ ಸವಾಲಿನ ಸಂಗತಿ. ಇಂಥ ಸನ್ನಿವೇಶದಲ್ಲಿ ಮಳೆ ನೀರು ಸಂಗ್ರಹದಂಥ ಸುಲಭೋಪಾಯದಿಂದ ಪರಿಹಾರ ದೊರಕಬಹುದೆಂಬುದು ಗೊತ್ತಿದ್ದರೂ ಈ ಬಗ್ಗೆ ಜಾಗೃತಿಯ ಕೊರತೆ. ಈ ಬಗೆಗೆ ಅರಿವು ಮೂಡಿಸುವ ಕೆಲಸ ಮೊದಲಾಗಬೇಕೆಂದು ಜಿಲ್ಲಾಡಳಿತ ನಿರ್ಧರಿಸಿದ್ದು ಹೆಮ್ಮೆಯ ಸಂಗತಿ. ನಿರ್ಧಾರದ ಫಲವೇ ಅರ್ಧ ಎಕರೆಯಲ್ಲಿ ತಲೆ ಎತ್ತಿದ್ದು ಮಳೆ ನೀರು ನಿರ್ಮಿತಿ ಕೇಂದ್ರ.
ಯಾವ ದೃಷ್ಟಿಯಿಂದ ನೋಡಿದರೂ ಅದು ಪಕ್ಕಾ ಹಳ್ಳಿಯೇ. ಅಷ್ಟೊಂದು ಸುಂದರವಾಗಿ ಮತ್ತು ಅಷ್ಟೇ ನೈಜವಾಗಿ ಜನ ಜೀವನವೊಂದನ್ನು ಅಲ್ಲಿ ಚಿತ್ರಿಸಲಾಗಿದೆ. ಆರಂಭದಲ್ಲಿಯೇ ಎದುರಾಗುತ್ತದೆ ತಿರುವುಮುರುವಾಗಿ ಬಿಚ್ಚಿಕೊಂಡಿರುವ ಬೃಹತ್ ಛತ್ರಿ(ಞಚ್ಟಿಛ್ಝ್ಝಿZ). ಅದು ಮಳೆ ನೀರು ಕೊಯ್ಲಿನ ಸಂಕೇತ. ಸ್ವಾಗತ ಕಮಾನನ್ನೇ ಅಷ್ಟು ಅರ್ಥಪೂರ್ಣವಾಗಿ ನಿರ್ಮಿಸಲಾಗಿದೆ. ಅಲ್ಲಿ ಕೈ ಮಗಿದು ಪುಟ್ಟ ಅಚ್ಚರಿಯೊಂದಿಗೆ ಒಳ ಹೊಕ್ಕರೆ ಇಂಥ ಹತ್ತು ಹಲವು ಪುಟ್ಟ ಪುಟ್ಟ ಬೆರಗುಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಬಾಗಿಲಿನಲ್ಲೇ ಒಂದು ಸುಂದರ ಕೈತೋಟ. ಹಾಗೆ ಬಲಕ್ಕೆ ತಿರುಗಿಕೊಂಡರೆ ಈಗ ನಿಜವಾಗಿ ಊರೊಳಕ್ಕೆ ಕಾಲಿಟ್ಟಿರುತ್ತೀರಿ. ಊರ ಮುಂದೆ ದೇವಸ್ಥಾನದ ದರ್ಶನವೇ ಮೊದಲು. ಅಲ್ಲಿ ದೇವರೂ ಮಳೆ ಕೊಯ್ಲಿಗೆ ಸಾಕ್ಷಿ. ದೇಗುಲದ ಸೂರಿನ ಅಂಚಿಗೆ ಪೈಪ್‌ಗಳನ್ನು ಜೋಡಿಸಿ ಬೀಳುವ ಮಳೆಯನ್ನೇ ಹಿಡಿದಿಟ್ಟು ಅಭಿಷೇಕ ಮಾಡಬಾರದೇಕೆ ? ಎನ್ನುವಂತಿದೆ ಮಾದರಿ. ಸರಿ, ಚಿಕ್ಕ ಹಾದಿಯಲ್ಲಿ ಮುಂದೆ ಸಾಗಿದರೆ ಸಮುದಾಯ ಕೇಂದ್ರಿತ ಸೇವಾ ಸಂಸ್ಥೆಗಳ ಒಂದೊಂದೇ ಕಟ್ಟಡಗಳು ಎದುರಾಗುತ್ತವೆ. ಅದು ಆಸ್ಪತ್ರೆ, ಶಾಲೆ, ಬ್ಯಾಂಕ್, ಸೊಸೈಟಿ ಯಾವುದೇ ಇರಬಹುದು. ಎಲ್ಲವೂ ಅದದೇ ಶೈಲಿಯ, ಅದರದ್ದೇ ಕಲ್ಪನೆ ಮೂಡಿಸುವ ಆದರೆ, ಆಕಾರದಲ್ಲಿ ತುಸು ಚಿಕ್ಕದಾದ ಕಟ್ಟಡಗಳು. ಹೊರ ಊರಿಗೂ, ನಿರ್ಮಿತಿ ಕೇಂದ್ರದ ಒಳಗೂ ಇರುವ ಒಂದೇ ವ್ಯತ್ಯಾಸವೆಂದರೆ ಈ ಎಲ್ಲ ಕಟ್ಟಡಗಳ ಚಾವಣಿಯಂಚಿಗೆ ಸೀಳಿದ ಪೈಪುಗಳನ್ನು ಜೋಡಿಸಲಾಗಿದೆ. ಅವೆಲ್ಲವೂ ಒಂದೋ ಕೆಳಗಿರುವ ಟ್ಯಾಂಕ್‌ಗೋ, ಸಂಪ್‌ಗೋ, ಇಲ್ಲವೇ ಬೋರ್‌ವೆಲ್‌ನ ಬಾಯಿಗೋ ಸಂಪರ್ಕಿತವಾಗಿರುತ್ತವೆ.
ಇಷ್ಟರಲ್ಲಿ ಬೇಸರವಾಯಿತೋ ಚಿಂತೆ ಬೇಡ, ಎದುರಿರುವ ಕಾಕನ ಟೀ ಸ್ಟಾಲ್ ಹೊಕ್ಕರಾಯಿತು. ಅದು ಸಹ ಮಳೆ ನೀರು ಕೊಯ್ಲಿನ ಸಂದೇಶ ಸಾರುತ್ತ ನಿಂತಿದೆ. ದಣಿವಾರಿಸಿಕೊಂಡು ಮುಂದೆ ಹೊರಟರೆ, ಬೋರಜ್ಜ, ತಿಮ್ಮ, ಲಕುಮಿ, ಕಾಳ...ಹೀಗೆ ಒಬ್ಬೊಬ್ಬರದೇ ಮನೆಗಳು ಸಾಲಿಗೆ ಸಿಗುತ್ತವೆ. ಒಂದಕ್ಕಿಂತ ಒಂದು ಭಿನ್ನ. ಅವೆಲ್ಲವೂ ಅದೆಷ್ಟು ಸಹಜವಾಗಿದೆ ಎಂದರೆ ಒಮ್ಮೆ ಒಳ ಹೊಕ್ಕು ಬಂದು ಬಿಡೋಣ ಯಾರಾದರೂ ಇದ್ದಿರಬಹುದು, ಮಾತಾಡಿಸೋಣ ಎಂದುಕೊಳ್ಳಲೇ ಬೇಕು. ಒಂದು ಮನೆಯೆದುರು ಪುಟ್ಟ ಕರುವೊಂದು ಆಡುತ್ತಿದ್ದರೆ, ಮತ್ತೊಂದು ಮನೆಯ ಪಡಸಾಲೆಯಲ್ಲಿ ಕುಳಿತು ಅವುಗಳ ಆಟವನ್ನು ನೋಡುತ್ತಿದ್ದಾನೆ. ಎಲ್ಲದರಲ್ಲೂ ಎಷ್ಟೊಂದು ಜೀವಂತಿಕೆ ಇದೆಯೆಂದರೆ ಒಮ್ಮೆ ಮುಟ್ಟಿ ಖಚಿತಪಡಿಸಿಕೊಂಡು ಬಿಡೋಣ ಅನಿಸದಿರದು. ಅದಿರಲಿ, ಈ ಎಲ್ಲ ಮನೆಗಳಲ್ಲೂ ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಯಾವ್ಯಾವ ರೀತಿಯ ಚಾವಣಿಗಳಲ್ಲಿ ಹೇಗೆ ಹೇಗೆ ಮಳೆ ನೀರನ್ನು ಹಿಡಿದುಕೊಳ್ಳಬಹುದು ಎಂಬುದರ ಪ್ರಾತ್ಯಕ್ಷಿಕೆ ಇದರ ಉದ್ದೇಶ.
ನಂತರ ನಿಮ್ಮೆದುರು ತೆರೆದುಕೊಳ್ಳುವುದು ಜಲ ಸಂರಕ್ಷಣಾ ಕ್ರಮಗಳನ್ನು ಸಾರುವ ಬೇರೆ ಬೇರೆ ಮಾದರಿಗಳು. ಹೊಲಗಳಲ್ಲಿ ಬದು ಹೇಗಿರಬೇಕು, ಕೃಷಿ ಹೊಂಡದ ಉದ್ದ-ಅಗಲ-ಆಳ ಎಷ್ಟಿರಬೇಕು, ಚೆಕ್ ಡ್ಯಾಂ ಅಂದರೇನು, ಅದರಿಂದೇನು ಉಪಯೋಗ, ಬೋರ್‌ವೆಲ್ ಪುನಶ್ಚೇತನ ಹೇಗೆ ಸಾಧ್ಯ, ತೆರೆದ ಬಾವಿಗಳಿಂದ ಅಂತರ್ಜಲ ಸಂರಕ್ಷಣೆ ಹೇಗಾಗುತ್ತದೆ, ಕಾಲುವೆಗಳಲ್ಲಿ ನೀರಿಂಗಿಸಲು ಸಾಧ್ಯವೇ....ಹೀಗೆ ಬಹುತೇಕ ಎಲ್ಲವನ್ನೂ ಪ್ರಾಯೋಗಿಕವಾಗಿ ಮಾಡಿ ಅಲ್ಲಿ ತೋರಿಸಲಾಗಿದೆ. ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವ, ಕೌತುಕ ಹೆಚ್ಚಿಸಿ ಹಿಡಿದಿಟ್ಟುಕೊಳ್ಳುವಷ್ಟು ಆಕರ್ಷಣೀಯವಾಗಿ ನಿರ್ಮಿಸಿರುವುದು ವಿಶೇಷ.
ಇಷ್ಟಕ್ಕೇ ಮುಗಿಯುವುದಿಲ್ಲ, ಅಲ್ಲೊಂದು ಮಳೆ ನೀರ ನಾಯಕ ಶಿವನ ಸುಂದರ ಮೂರ್ತಿ ಎಲ್ಲದರ ಸಂಕೇತವಾಗಿ ನಿಂತಿದೆ. ಅದರ ಸಮ್ಮುಖ ವಿಶಾಲ ಹೊಲಗದ್ದೆಗಳ ಮಾದರಿ. ಅದರ ಮಗ್ಗುಲಲ್ಲೇ ಮತ್ತೊಂದು ವಿಜಾಪುರವನ್ನು ತಂದಿಟ್ಟಿರುವಂತೆ, ಸಮಗ್ರ ಚಿತ್ರಣ ನೀಡುವ ಮಾದರಿ. ಅಲ್ಲಿ ಗುಂಬಜ್ ಇದೆ, ತಾಲಾಬ್‌ಗಳಿವೆ, ಬಾವಡಿಗಳಿವೆ, ಕಾವಲು ಗೋಪುರ, ಹರಿನೀರ ಹಿಡಿದು ತರುವ ಕಾಲುವೆಗಳು, ಅವನ್ನು ಅಲ್ಲಲ್ಲಿಯೇ ಇಂಗಿಸುವ ಗುಂಡಿಗಳು, ಅಲ್ಲಿಂದ ಬಾವಡಿಗಳಿಗೆ ನೀರು ತಂದುಕೊಡುವ ಸುರಂಗ....ಒಟ್ಟಾರೆ ಅದರ ಮುಂದೆ ನಿಂತುಕೊಂಡರೆ ಆದಿಲ್‌ಶಾಹಿಗಳ ನೀರಾವರಿ ವ್ಯವಸ್ಥೆಯ ಪರಿಕಲ್ಪನೆ ಒಡಮೂಡದಿರದು.
ಅದರ ಪಕ್ಕದಲ್ಲೊಂದಿಷ್ಟು ಗೊಂಬೆಗಳು. ಕೆಲವು ಬಾನಿಗೆ ಬೊಗಸೆಯೊಡ್ಡಿ ನಿಂತಿದ್ದರೆ, ಇನ್ನು ನಾಲ್ಕಾರು ಮಹಿಳೆಯರು ಬೀಳುವ ಮಳೆ ಹಿಡಿಯಲು ಸೆರಗು ಮುಂದೆ ಮಾಡಿ ನಿಂತಿದ್ದಾರೆ. ಬೃಹತ್ ಕೊಡದ ಸುತ್ತ ನಿಂತಿರುವ ರೈತಾಪಿ ಮಂದಿ...ಎಲ್ಲವೂ ಚೆಂದ, ಚೆಂದ. ಉದ್ದಕ್ಕೂ ಅಲ್ಲಿಲ್ಲಿ ನೀರೆಚ್ಚರದ ಸಂದೇಶ ಸಾರುವ ಗೋಡೆ ಬರಹಗಳು. ನೀರಿನ ಈ ಲೋಕವನ್ನು ಸುತ್ತಿ ಮುಗಿಸುವ ಹೊತ್ತಿಗೆ ಮನವೆಲ್ಲ ತಣಿದಿರುತ್ತದೆ.
ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಜಿ.ಎನ್. ಮಲಜಿ ಅವರು ಹೇಳುವ ಪ್ರಕಾರ ‘ ೧೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ನಿರ್ಮಿತಿ ಕೇಂದ್ರ ಸಂಪೂರ್ಣ ನೀರ ಸ್ವಾವಲಂಬಿಯಾಗಿದೆ. ಇಲ್ಲಿನ ಕಟ್ಟಡಗಳ ಮೇಲೆ ಬಿದ್ದ ಮಳೆ ನೀರಿನಿಂದಲೇ ಇಲ್ಲಿನ ಬೋರ್‌ವೆಲ್ ಪುನಶ್ಚೇತನಗೊಂಡಿದೆ. ಪ್ರತಿದಿನ ಕನಿಷ್ಠ ೨೦೦ರಿಂದ ೩೦೦ ಮಂದಿ ಕೇಂದ್ರಕ್ಕೆ ಭೇಟಿ ಕೊಡುತ್ತಿದ್ದು, ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಲ್ಲಿ ಸಾಕಷ್ಟು ಯಶಸ್ಸು ಕಾಣಲಾಗಿದೆ.’
ಒಂದೆಡೆ ಬರ ಪೀಡಿತ ಪ್ರದೇಶ, ಇನ್ನೊಂದೆಡೆ ಸಮೃದ್ಧ ಗ್ರಾಮ- ಹೀಗೆ ಎರಡೂ ಕಲ್ಪನೆಗಳಿಗೆ ಇಲ್ಲಿ ರೂಪ ಕೊಡಲಾಗಿದೆ. ಮಾತ್ರವಲ್ಲ ಕೇಂದ್ರದ ಸುತ್ತಲಿನ ಖಾಲಿ ಜಾಗದಲ್ಲಿ ಪುಟ್ಟ ಪುಟ್ಟ ಒಡ್ಡುಗಳನ್ನು ನಿರ್ಮಿಸುವ ಮೂಲಕ ಪ್ರಾಯೋಗಿಕವಾಗಿಯೂ ಮಳೆ ನೀರು ಸಂಗ್ರಹವನ್ನು ಮಾಡಲಾಗುತ್ತಿದೆ. ಈ ಪ್ರದೇಶಗಳಲ್ಲಿ ಂದು ಮಳೆಗೆ ಕನಿಷ್ಠ ೨೦ ಲಕ್ಷ ಲೀಟರ್ ನೀರು ಸಂಗ್ರಹವಾಗುತ್ತಿದೆ. ಎನ್ನುತ್ತಾರೆ ಮಲಜಿ ಸಾಹೇಬರು.
ಇಲ್ಲಿ ಭೇಟಿ ನೀಡಿ ಹೋಗುವ ರೈತರಿಗೆ ಅವರ ಹೊಲಕ್ಕೇ ಹೋಗಿ ಮಳೆ ನೀರು ಕೊಯ್ಲಿನ ಅನುಷ್ಠಾನಕ್ಕೆ ಉಚಿತ ಸಲಹೆ, ತಾಂತ್ರಿಕ ಮಾರ್ಗದರ್ಶನವನ್ನು ಮಾಡಲಾಗುತ್ತದೆ. ಇಂಥ ಪ್ರಯತ್ನ ಬಾಗಲಕೋಟದಲ್ಲೂ ಆಗಿದ್ದು, ಪ್ರತಿ ಜಿಲ್ಲೆಯಲ್ಲೂ ಒಂದೊಂದು ಮಳೆ ನಿರ್ಮಿತಿ ಕೇಂದ್ರ ನಿರ್ಮಾಣವಾಗಬೇಕು ಎಂಬುದು ಮಲಜಿಯವರ ಆಶಯ. ಒಂದೇ ಮಾತಿನಲ್ಲಿ ಹೇಳುವುದಾದರೆ ಬಿದ್ದ ಮಳೆಯನ್ನು ಎಲ್ಲೆಲ್ಲಿ ಹೇಗೆಲ್ಲ ಹಿಡಿದಿಟ್ಟುಕೊಂಡು ಬಳಸಬಹುದು ಎಂಬುದರ ಸ್ಪಷ್ಟ ಚಿತ್ರಣ ದೊರೆಯಬೇಕೆಂದರೆ ವಿಜಾಪುರದ ಈ ಮಳೆ ನಿರ್ಮಿತಿ ಕೇಂದ್ರಕ್ಕೊಮ್ಮೆ ಭೇಟಿ ನೀಡಿದರೆ ಸಾಕು. ಉಳಿದೆಲ್ಲವನ್ನೂ ತಿಳಿಸಿಕೊಡಲು ಮಲಜಿಯವರು ನಿಮಗಾಗಿ ಕಾದಿರುತ್ತಾರೆ. ಹೋಗುವಾಗೊಮ್ಮೆ ಫೋನ್ ಮಾಡಿ ಹೋಗುವುದಾದರೆ ದೂರವಾಣಿ ಸಂಖ್ಯೆ ಬರೆದಿಟ್ಟುಕೊಳ್ಳಿ-೯೪೪೮೨೮೭೩೪೮.
‘ಲಾಸ್ಟ್’ಡ್ರಾಪ್: ನೀರೆನ್ನುವುದು ವಾಸ್ತವ. ಆದರೆ, ಅದರ ಸನ್ನಿಯಲ್ಲಿ ಹೋಗಿ ಕುಳಿತರೆ ಎಂಥ ಸುಂದರ ಕಲ್ಪನೆಗಳಿಗೆ ಬೇಕಾದರೂ ಅದು ವಸ್ತುವಾಗಬಹುದು.
ಸಮ್ಮನಸ್ಸಿಗೆ ಶರಣು
3 months ago