Friday, January 9, 2009

ಬಾಡಿವೆ ಬಾವಡಿ: ಸಂರಕ್ಷಣೆಗೆ ಈಗಲಾದರೂ ಗಮನ ಕೊಡಿ


ಮ್ಮ ತಲೆಮಾರಿನ ಮಂದಿಗೆ ಏನಾಗಿದೆ ಎಂಬುದೇ ಅರ್ಥವಾಗುವುದಿಲ್ಲ. ಶತಮಾನಗಳಿಂದ ನಲುಗದೇ ನಿಂತಿದ್ದ ಅತ್ಯಪೂರ್ವ ಜಲನಿಯೊಂದರ ಬಗೆಗಿನ ನಮ್ಮ ದಿವ್ಯ ನಿರ್ಲಕ್ಷ್ಯವನ್ನು ಕಂಡಾಗ ಇಂಥದ್ದೊಂದು ವಿಷಾದದ ಸ್ವರ ತಂತಾನೇ ಹೋರಬೀಳುತ್ತದೆ.
ಇದನ್ನು ಏನೆಂದು ಅರ್ಥೈಸಬೇಕು ? ನಿರ್ಲಕ್ಷ್ಯವೋ, ನಿರ್ಲಜ್ಜತನವೋ, ನೀರ ನಿರಕ್ಷರತೆಯೋ? ಅಂತೂ, ತೀರಾ ಇತ್ತೀಚೆಗೆ ಅಂದರೆ ಕೇವಲ ಒಂದು ದಶಕದಲ್ಲಿ ನಾಡಿನ ಅನರ್ಘ್ಯ ರತ್ನ ವಿಜಾಪುರದ ಬಾವಡಿಗಳು ಅಕ್ಷರಶಃ ಬಾಡಿಹೋಗಲಾರಂಭಿಸಿವೆ. ಇದನ್ನು ಹೀಗೆ ಹೇಳಿದರೆ ಅರಿವಾಗುವುದಿಲ್ಲ. ಈ ಯುಗದಲ್ಲಿ ಅಂಥದೊಂದರ ಮರು ನಿರ್ಮಾಣ ಸಾಧ್ಯವೇ ಇಲ್ಲವೆಂಬ ಸನ್ನಿವೇಶದಲ್ಲಿ ಬಾವಡಿಗಳ ದುಸ್ಥಿತಿಯನ್ನು ಕಣ್ಣಾರೆ ಕಂಡರೆ ನಮ್ಮ ಅಜ್ಞಾನದ ಬಗ್ಗೆಯೇ ಮರುಕ ಹುಟ್ಟದಿರದು.
ವಿಜಾಪುರದ ದೊಡ್ಡ ಬಾವಡಿಗಳ ಪೈಕಿ ಚಾಂದ್ ಬಾವಡಿಯ ಮುಂದೆ ಹೋಗಿ ನಿಂತು ‘ಇದು ನಮ್ಮ ಐತಿಹಾಸಿಕ ನಿರ್ಮಾಣಗಳಲ್ಲಿ ಒಂದು. ಇಡೀ ನಗರಕ್ಕೆ ಇಲ್ಲಿಂದ ನೀರು ಪೂರೈಕೆಯಾಗುತ್ತಿತ್ತು. ಆದಿಲ್‌ಶಾಹಿ ಅರಸರ ದೂರದೃಷ್ಟಿ ಹಾಗೂ ಕ್ರೀಯಾಶೀಲತೆಗೆ ಇದು ಮಾದರಿ’ ಎಂಬರ್ಥದ ವ್ಯಾಖ್ಯಾನ ಕೊಡಲು ಮುಂದಾಗಿ ನೋಡೋಣ. ಖಂಡಿತಾ ಮೊದಲ ಬಾರಿಗೆ ಅದನ್ನು ಸಂದರ್ಶಿಸುತ್ತಿರುವವರ ಮುಖದಲ್ಲಿ ಪುಟ್ಟ ವ್ಯಂಗ್ಯ ಮಿಶ್ರಿತ ನಗೆ ತೇಲಿ ಹೋಗದಿದ್ದರೆ ಕೇಳಿ. ತಪ್ಪು ಸಂದರ್ಶಕರದ್ದಲ್ಲ. ಹಾಗೆಯೇ ಇದೆ ಇಂದಿನ ಚಾಂದ್ ಬಾವಡಿಯ ಸ್ಥಿತಿ. ಪಕ್ಕಾ ಪಾಲಿಕೆಯ ಕಸದ ತೊಟ್ಟಿ. ಒಂದು ಕಾಲದಲ್ಲಿ ತಿಳಿ ನೀರ ಕೊಳವಾಗಿ ಥಳಥಳಿಸುತ್ತಿದ್ದ ಬಾವಡಿಯಲ್ಲಿಂದು ಕಸ, ಕಡ್ಡಿ ಆದಿಯಾಗಿ ಸುತ್ತಲಿನ ಎಲ್ಲ ತ್ಯಾಜ್ಯ, ಹೊಲಸು ತುಂಬಿ ತುಳುಕುತ್ತಿದೆ. ಮೂರು ಶತಮಾನಗಳ ಕಾಲ ಜೀವಂತಿಕೆಯ ಸಂಕೇತವಾಗಿ ಹೆಮ್ಮೆಯಿಂದ ಬೀಗುತ್ತಿದ್ದ ನಿರ್ಮಾಣ ಕೊನೆಗೂ ದಿನ ಎಣಿಸುವ ಸ್ಥಿತಿಗೆ ಬಂದಿದ್ದರೆ ಅದು ನಾವೇ ಮಾಡುತ್ತಿರುವ ಕಗ್ಗೊಲೆ.
ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕಾಗಿದ್ದ, ಮುಂದಿನ ಹಲವು ತಲೆಮಾರುಗಳವರೆಗೆ ಅದನ್ನು ಕಾಪಿಟ್ಟು ಹೋಗಬೇಕಿದ್ದ ನಮ್ಮ ಸೋದರರೇ ಅದರ ಮೇಲೆ ಮನಬಂದಂತೆ ಅತ್ಯಾಚಾರವೆಸಗುತ್ತಿರುವಾಗಲೂ ಒಂದು ಪುಟ್ಟ ವಿಷಾದದ ಛಾಯೆಯೂ ನಮ್ಮ ಮನದಲ್ಲಿ ಸುಳಿದುಹೋಗುತ್ತಿಲ್ಲ ಎಂದರೆ ಅದೆಷ್ಟು ಭಂಡತನಕ್ಕೆ ಬಿದ್ದಿದ್ದೇವೆಂಬುದನ್ನು ಕಲ್ಪಿಸಿಕೊಳ್ಳಿ. ಅನುಮಾನವೇ ಇಲ್ಲ. ಇಷ್ಟಕ್ಕೆಲ್ಲ ಕಾರಣ ನಮ್ಮ ಮನೋಭಾವ. ಮನೆಯ ಬಾವಿಯನ್ನು ಮುಚ್ಚಿ ಬೋರ್‌ವೆಲ್‌ಗಳನ್ನು ಕೊರೆಯುತ್ತಿರುವಾಗ, ಕೆರೆಗಳನ್ನು ಕಂತಿಸಿ ಬಡಾವಣೆಗಳನ್ನು ಎಬ್ಬಿಸುತ್ತಿರುವಾಗ, ಹರಿಯುವ ನದಿ, ನಾಲೆಗಳನ್ನು ನಾಚಾರೆಬ್ಬಿಸಿಬಿಡುತ್ತಿರುವಾಗ ಬಾವಡಿಗಳಂಥವುಗಳ ಮೌಲ್ಯವಾದರೂ ಹೇಗೆ ಅರ್ಥವಾದೀತು ?
ವಾಸ್ತುಶಿಲ್ಪದ ದೃಷ್ಟಿಯಿಂದ ಅತ್ಯಂತ ಮಹತ್ವವೆನಿಸುವ ಬಾವಡಿಗಳು ಅದೊಂದೇ ಕಾರಣಕ್ಕೆ ಸಂರಕ್ಷಣೀಯ ಎನಿಸಿಕೊಳ್ಳುವುದಿಲ್ಲ. ಒಂದಿಡೀ ಆಡಳಿತಾವಯಲ್ಲಿನ ನೀರಾವರಿ ವ್ಯವಸ್ಥೆ, ಯಾವಜ್ಜೀವ ಜಲ ಸಂರಕ್ಷಣಾ ಪಾಠವಾಗಿ ಅವು ನಿಂತಿವೆ. ಎಲ್ಲಿ ಬಿದ್ದ ನೀರು ಎಲ್ಲಿಗೆ ಹರಿದು ಹೋದೀತು; ಎಲ್ಲಿ ಅದನ್ನು ಹಿಡಿದಿಟ್ಟುಕೊಂಡರೆ ಜೀವವ ಪೊರೆದೀತು; ಎಲ್ಲಿಂದೆಲ್ಲಿಗೆ ನೀರ ಸಂಪರ್ಕವನ್ನು ಕಲ್ಪಿಸಿದರೆ ಸುಸ್ಥಿರ ವ್ಯವಸ್ಥೆಯಾಗಿ ಉಳಿದೀತು ಎಂಬಿತ್ಯಾದಿ ಅತಿ ಸೂಕ್ಷ್ಮ ತಂತ್ರಜ್ಞಾನವನ್ನು ಆದಿಲ್‌ಶಾಹಿ ಅರಸರು ಬಾವಡಿಗಳ ಮೂಲಕ ಕಟ್ಟಿ ಕೊಟ್ಟಿದ್ದರು. ಅಂದು-ಇಂದಿನ ಪ್ರಶ್ನೆಯಲ್ಲ, ಎಂದೆಂದಿಗೂ ಅನ್ವಯವಾಗಬಲ್ಲ ಜಲ ಸಂರಕ್ಷಣಾ ಶಾಸ್ತ್ರವೊಂದನ್ನು ಅಳಿಸಿಹೋಗದಂಥ ಅಕ್ಷರಗಳಲ್ಲಿ ಬಾವಡಿಗಳೆಂಬ ಹೆಸರಲ್ಲಿ ಮೂಡಿಸಿಕೊಟ್ಟಿದ್ದರು. ಆದರೇನು ಪ್ರಯೋಜನ ? ಅಂಥದನ್ನು ಅಳಿಸಲೇಬೇಕೆಂಬ ಹಠಕ್ಕೆ ಬಿದ್ದವರಂತೆ ವರ್ತಿಸುತ್ತಿದ್ದೇವೆ. ವ್ಯಾಘ್ರ ನಖಕ್ಕೆ ಸಿಲುಕಿದ ಮಿಕ ನಲುಗದೇ ಉಳಿದೀತೇ ? ಸಾಕ್ಷೀಪ್ರಜ್ಞೆಯನ್ನೇ ಕಳೆದುಕೊಂಡ ಅಸ್ವಸ್ಥ ಮನಸ್ಸೊಂದಕ್ಕೆ ಎಂದಿಗೂ ಮಾನವೀಯತೆಯ ಬೋಧನೆ ರುಚಿಸುವುದಿಲ್ಲ. ಬಾವಡಿಗಳ ಸಂರಕ್ಷಣೆಯ ಬಗೆಗೆ ಹೇಳ ಹೊರಟರೆ ಬಹುಶಃ ನೂರಕ್ಕೆ ನೂರು ಇದೇ ಆದೀತು.
ಅವಾದರೂ ಒಂದೆರಡು ದಿನಗಳಲ್ಲಿ ನಿರ್ಮಾಣವಾದದ್ದಲ್ಲ. ಅಷ್ಟಕ್ಕೂ ಅವು ಕೇವಲ ಕಲ್ಲು ಮಣ್ಣುಗಳಿಂದಾದ ನಿರ್ಜೀವ ಕಟ್ಟಡವಲ್ಲ. ಒಂದೊಂದಕ್ಕೂ ಒಂದೊಂದು ಹಿನ್ನೆಲೆಯಿದೆ. ಒಂದೊಂದರ ಮುಂದೆ ಹೋಗಿ ನಿಂತರೂ ಒಂದೊಂದು ಕಥೆ ಬಿಚ್ಚಿಕೊಳ್ಳುತ್ತದೆ. ಪ್ರೀತಿಯ ಮಡದಿಯ ಮರೆಯಲಾಗದೇ ಮಂದಿಗೆ ಆಕೆಯ ಹೆಸರಲ್ಲಿ ತಂಪೆರೆಯಲು ನಿರ್ಧರಿಸಿದ್ದರಬಹುದು, ಜೀವನದಲ್ಲಿ ಹೊಸ ಜೀವವೊಂದು ಮೂಡಿಸಿದ ಸಂತೃಪ್ತಿಯ ಫಲವಾಗಿ ಸತ್ಕಾರ್ಯಕ್ಕೆ ಮನ ಮಾಡಿದ್ದಿರಬಹುದು, ಅನಿರೀಕ್ಷಿತವಾಗೆರಗಿದ ಆಘಾತದ ಸಂದರ್ಭದಲ್ಲಿ ಅಲ್ಲೋಲಕಲ್ಲೋಲಗೊಂಡ ಮನಕ್ಕೆ ಪುಟ್ಟ ಸಂತೈಕೆಯಾಗಿ ಬಾವಡಿಗಳು ನಿಂತಿದ್ದಿರಬಹುದು, ಆಡಳಿತಾರೂಢರ ಕರ್ತವ್ಯದ ಭಾಗವಾಗಿ, ಆಳ್ವಿಕೆಗೊಳಗಾದವರ ಆಗ್ರಹದ ಮೇರೆಗೆ, ಅಗತ್ಯ, ಅನಿವಾರ್ಯತೆ.... ಹೀಗೆ ಕಾರ್‍ಯಕಾರಣಗಳು ಏನೇ ಇದ್ದರೂ ಆದಿಲ್‌ಶಾಹಿಗಳು ಕಟ್ಟಿ ನಿಲ್ಲಿಸಿದ ಬಾವಡಿಗಳು ಮಾತ್ರ ಉದ್ದೇಶವನ್ನು ಮೀರಿ ಸಾರ್ಥಕ್ಯವನ್ನು ಮೆರೆದಿವೆ ಎಂಬುದು ಸತ್ಯ.
ಇಂಥ ಭಾವಖನಿಗಳನ್ನು ಇಷ್ಟು ನಿರ್ಭಾವುಕವಾಗಿ ನಾವು ಉಸಿರುಕಟ್ಟಿಸಿ ಕೊಲ್ಲುತ್ತಿದ್ದೇವೆಂದರೆ ಆಧುನಿಕತೆಯ ಕುಳಿರ್ಗಾಳಿಗೆ ಸಿಲುಕಿ ಮನಸುಗಳು, ಅದರೊಳಗಣ ವಿವೇಚನೆ, ಪ್ರಜ್ಞೆ, ಪ್ರಯತ್ನಶೀಲತೆಗಳು ಅದೆಷ್ಟು ಮರಗಟ್ಟಿಹೋಗಿದ್ದಿರಬಹುದು ?
ತಾಜ್‌ಬಾವಡಿ, ಚಾಂದ್‌ಬಾವಡಿ ಮತ್ತು ಇಬ್ರಾಹಿಂಪುರ ಬಾವಡಿ. ವಿಜಾಪುರ ಹೆಸರು ಹೇಳಿಸುವ ಮೂರು ಮುತ್ತುಗಳು. ಇದ್ದುದರಲ್ಲಿ ಇಬ್ರಾಹಿಂಪುರ ಬಾವಡಿ, ಲಂಗರ್ ಬಾವಡಿ, ಅಜಗರ್ ಬಾವಡಿ, ಮುಖಾರಿ ಮಸ್ಜಿದ್ ಬಾವಡಿ, ಮಾಸ್ ಬಾವಡಿ ಸ್ವಲ್ಪಮಟ್ಟಿಗೆ ಸುಸ್ಥಿತಿಯಲ್ಲಿವೆ ಎನ್ನಬಹುದು. ಇವುಗಳಲ್ಲಿ ಒಂದಷ್ಟು ನಿಸ್ವಾರ್ಥಿ ಜಲಚರಗಳು ಜೀವಂತವಾಗಿವೆ ಎಂಬ ಕಾರಣಕ್ಕೆ ಇಲ್ಲಿನ ನೀರು ಬಳಕೆಯೋಗ್ಯವೆನಿಸುತ್ತಿವೆ.
ಇಷ್ಟಕ್ಕೂ ಅಷ್ಟು ವರ್ಷದಿಂದ ದಿಟ್ಟವಾಗಿ ನಿಂತಿದ್ದ ಬಾವಡಿಗಳ ಬುಡದಲ್ಲಿ ಇಂದು ಆಗುತ್ತಿರುವುದೇನು ? ಯಾರೋ ಹೊರಗಿನಿಂದ ದಂಡೆತ್ತಿ ಬಂದು ದರಿದ್ರ ಸ್ಥಿತಿಯನ್ನು ಇಲ್ಲಿ ನಿರ್ಮಾಣ ಮಾಡುತ್ತಿಲ್ಲ. ಅಸೀಮ ಅಲಕ್ಷ್ಯ ಒಂದೆಡೆಯಾದರೆ ಅರಿವಿನ ಕೊರತೆ ಇನ್ನೊಂದೆಡೆ. ಬಾವಡಿಗಳ ಬುಡದಲ್ಲಿದ್ದವರೇ ದರೊಳಗಣ ನೀರನ್ನು ಬಗ್ಗಡಗೊಳಿಸುತ್ತಿದ್ದಾರೆ. ಒಂದು ಕಾಲದಲ್ಲಿ ಅತ್ಯಂತ ಪವಿತ್ರ ತಾಣವಾಗಿ ಗುರುತಿಸಿಕೊಂಡಿದ್ದ ಬಾವಡಿಯ ಸನ್ನಿಯಲ್ಲೇ ಇಂದು ಎಲ್ಲ ‘ಮಹತ್ಕಾರ್ಯ’ಗಳೂ ನಡೆಯುತ್ತಿವೆ ಎಂದರೆ ಇಂಥ ತಿಳಿಗೇಡಿತನಕ್ಕೆ ಏನೆನ್ನಬೇಕು.
ಅಲ್ಲಿಯೇ ಪಾತ್ರೆ, ಬಟ್ಟೆ ತೊಳೆಯಲಾಗುತ್ತಿದೆ. ಬೆಳ್ಳಬೆಳಗ್ಗೆ ಹೋಗಿ ನೋಡಿದರೆ ಕೆಲ ಬಾವಡಿಗಳ ಸುತ್ತ ಚಣ್ಣ ಬಿಟ್ಟು ಸಣ್ಣ ಮಕ್ಕಳು ಓಡಾಡುತ್ತಿರುತ್ತಾರೆ ಎಂದರೆ ಪರಿಸ್ಥಿತಿಯ ಅರ್ಥ ಆಗಬಹುದು. ಮನೆಯಲ್ಲಿ ತುಂಬಿದ ಕಸದ ಬುಟ್ಟಿಯಿಂದ ಹಿಡಿದು ಗಣೇಶ ವಿಗ್ರಹಗಳ ವಿಸರ್ಜನೆಯವರೆಗೆ ಎಲ್ಲಕ್ಕೂ ಬಾವಡಿಗಳೇ ಬಳಕೆಯಾಗುತ್ತಿವೆ. ಅಪರೂಪಕ್ಕೊಮ್ಮೆ ನಗರಾಡಳಿತಕ್ಕೆ ಎಚ್ಚರಾಗಿ ಹೂಳೆತ್ತಿಸುವ ಶಾಸ್ತ್ರವೂ ನಡೆಯುತ್ತದಾದರೂ ನಿರ್ವಹಣೆಯ ಬಗ್ಗೆ ಮತ್ತದೇ ನಿರ್ಲಕ್ಷ್ಯ.
ಎಲ್ಲಕ್ಕಿಂತ ಹೆಚ್ಚಾಗಿ ಸದಾ ತುಂಬಿರುತ್ತಿದ್ದ ಬಾವಡಿಗಳ ನೀರಿನ ಮಟ್ಟ ಇತ್ತೀಚಿನ ದಿನಗಳಲ್ಲಿ ಕುಸಿಯುತ್ತಿದೆ. ಇದಕ್ಕೆ ಮುಖ್ಯ ಕಾರಣ, ಬಾವಡಿಗಳಿಗೆ ನೀರು ಹರಿದು ಬರುತ್ತಿದ್ದ ಮಾರ್ಗವೇ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಬಹುತೇಕ ಕಡೆಗಳಲ್ಲಿ ಒತ್ತುವರಿ ಬಾಸುತ್ತಿದೆ. ಗುಡ್ಡ, ಬಯಲುಗಳಿಂದ ನೀರನ್ನು ಬಾಚಿ ತಂದು ಬಾವಡಿಗಳಿಗೆ ಬಿಡುತ್ತಿದ್ದ ಸುರಂಗಳೂ ನಿರ್ವಹಣೆಯಿಲ್ಲದೇ ಸೊರಗಿವೆ. ಇಂಥ ಎಷ್ಟೋ ವ್ಯವಸ್ಥೆಗಳು ಕಳೆದು ಹೋಗಿದೆ. ಜತೆಗೆ ಬಾವಡಿಗಳ ಪಕ್ಕದಲ್ಲೇ ಬೋರ್‌ವೆಲ್ ರಕ್ಕಸರ ಹಾವಳಿ ಹೆಚ್ಚಿದೆ. ಅಂಗೈನಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಹುಡುಕುವುದು ಎಂದರೆ ಇದೇ ಏನು ? ನಮ್ಮನ್ನು ಕವಿದ ವಿಚಿತ್ರ ವಿಸ್ಮೃತಿ ಇನ್ನಾದರೂ ಸರೀಯದಿದ್ದಲ್ಲಿ ಬಾವಡಿಗಳು ನೆನಪಿನಲ್ಲಷ್ಟೇ ಉಳಿಯುವ ದಿನಗಳು ದೂರವಿಲ್ಲ.

‘ಲಾಸ್ಟ್’ ಡ್ರಾಪ್: ಪ್ರಪಂಚದ ಪ್ರೀತಿಯ ದ್ಯೋತಕವೆನಿಸಿದ ತಾಜ್‌ಮಹಲು ನಮಗೆ ಅತ್ಯಮೂಲ್ಯ. ಅಂಥದೇ ಪ್ರೀತಿಯ ಮತ್ತೊಂದು ಪ್ರತೀಕ ನಮ್ಮ ತಾಜ್ ಬಾವಡಿ ಬಗೆಗೇಕಿಲ್ಲ ಅಂಥ ಕಾಳಜಿ ?


3 comments:

Pejathaya said...

ನೀರ್ ಸಾಧಕರ ಮಾತುಗಳನ್ನು ಓದಿ, ಓದದೇ ಇದ್ದ ಪಕ್ಷದಲ್ಲಿ , ಅವರ ಅಭಿಪ್ರಾಯದ ಬಗ್ಗೆ ಕೇಳಿಕೊಂಡಾದರೂ, ನಮ್ಮ ನೀರ್ ಅಭಿಮಾನ ಹೆಚ್ಚಲಿ! ಉತ್ತಮ ಲೇಖನ ಬರೆದಿದ್ದೀರಾ!
ತಮಗೆ ಧನ್ಯವಾದಗಳು.
- ಪೆಜತ್ತಾಯ ಎಸ್. ಎಮ್.

Unknown said...

ಭಡ್ತಿ,
ಪೆಜತ್ತಾಯರು ಕಾಮೆಂಟ್ ಬರೆದರೆಂದರೆ ಅದು ಅತ್ಯುತ್ತಮವಾಗಿದೆ ಎಂದು ಅರ್ಥ. ಒಮ್ಮೆ ಸಾಧ್ಯವಾದರೆ ಪರಿಚಯ ಮಾಡಿಕೊಳ್ಳಿ. ಅದ್ಬುತ ಮನುಷ್ಯ ಆತ. ನಿಮಗೆ ಇಷ್ಟವಾಗುತ್ತಾರೆ ಖಂಡಿತ

ರಾಧಾಕೃಷ್ಣ ಎಸ್.ಭಡ್ತಿ said...

ಧನ್ಯವಾದಗಳು ಶ್ರೀ ಪೆಜಿತ್ತಾಯ ಅವರೆ, ನಿಮ್ಮ ಅಭಿಪ್ರಾಯ ಓದಿ ತುಂಬ ಸಂತಸವಾಯಿತು. ಬದಲಾವಣೆಗಳ ಬಗೆಗೆ ಸಲಹೆ ನೀಡಿ.
ಗೆಳೆಯ ಶ್ರೀಶಂ, ಖಂಡಿತಾ ಒಮ್ಮೆ ಶ್ರೀ ಪೆಜಿತ್ತಾಯ ಅವರನ್ನು ಭೇಟಿ ಮಾಡುವೆ.
-ಭಡ್ತಿ.