Saturday, January 17, 2009

ತಾಲಾಬ್: ನೀರಿನ ಸಮಸ್ಯೆಗೆ ಆದಿಲ್‌ಶಾಹಿಗಳ ಜವಾಬ್

ಲ್ಲಿಲ್ಲಿ ಪುಟ್ಟ ಗೋಪುರಗಳು, ಅರ್ಧಂಬರ್ಧ ಕುಸಿದು ಕುಳಿತಿರುವ ಕಟ್ಟಡದ ಅವಶೇಷಗಳು, ತೀರಾ ಹತ್ತಿರ ಹೋದರೆ ಕಂಡೂ ಕಾಣದಂತಿರುವ ಕಾಲುವೆ, ಸುರಂಗ ಇತ್ಯಾದಿ, ಮತ್ತೆಲ್ಲೋ ಹೋಗಿ ನೋಡಿದರೆ ಅತ್ತ ಕಟ್ಟಿದ ಕೆರೆಯೂ ಅಲ್ಲದ ಇತ್ತ ನೈಸರ್ಗಿಕ ಹೊಂಡವೂ ಅಲ್ಲದ ಮಾದರಿಗಳು... ಮತ್ತೆ ಅದರಿಂದ ಹೊರಟ ಕಾಲು ಹಾದಿಯ ನಮೂನೆ...ಕುತೂಹಲಕ್ಕೆ ಒಂದಷ್ಟು ನೀರು ತಂದು ಗೋಪುರದ ಬುಡದಲ್ಲೆಲ್ಲೋ ಸುರಿದರೆ ಒಂದಷ್ಟು ಹೊತ್ತಿನಲ್ಲಿ ಮಾಯವಾಗಿರುತ್ತದೆ. ಅದೆಲ್ಲಿ ಹೋಯಿತೆಂದು ಹುಡುಕುತ್ತ ಬೆನ್ನು ಹತ್ತಿ ಹೋದರೆ ಮತ್ತೆಲ್ಲೋ ಪುಟ್ಟ ಹೊಂಡಕ್ಕೆ ಬಂದು ನಿಂತಿರುತ್ತದೆ.
ಇದು ಒಟ್ಟಾರೆ ವಿಜಾಪುರದ ಐತಿಹಾಸಿಕ ನೀರು ಪೂರೈಕೆ ವ್ಯವಸ್ಥೆಗೆ ಕೊಡಬಹುದಾದ ವ್ಯಾಖ್ಯಾನ. ಮೇಲ್ನೋಟಕ್ಕೆ ಎಲ್ಲವೂ ಗೋಜಲು ಗೋಜಲೆನಿಸಿದರೂ, ಅತ್ಯಂತ ಕರಾರುವಾಕ್ ತಂತ್ರಜ್ಞಾನವಿದು. ನೀವು ಇಡೀ ವಿಜಾಪುರದ ಯಾವುದೇ ಭಾಗಕ್ಕೆ ಹೋದರೂ ಮುಸ್ಲಿಂ ವಾಸ್ತು ಶೈಲಿಯ ಒಂದಲ್ಲಾ ಒಂದು ರಚನೆ ಕಾಣ ಬರುತ್ತವೆ. ಯಾವುದೋ ಮಸೀದಿಯೋ, ಪ್ರಾರ್ಥನಾ ಸ್ಥಳವೋ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಈ ಪೈಕಿ ಕೆಲವೇ ಕೆಲವನ್ನು ಹೊರತುಪಡಿಸಿದರೆ ಬಹುತೇಕ ಎಲ್ಲವೂ ನೀರಿಗೆ ಸಂಬಂಸಿದ ನಿರ್ಮಾಣಗಳೇ.
ಬಾವಡಿಗಳಿಂದಲೇ ತುಂಬಿ ಹೋಗಿರುವ ವಿಜಾಪುರದಲ್ಲಿ ಅದು ಮಾತ್ರವಲ್ಲ, ಆದಿಲ್‌ಶಾಹಿಗಳ ನೀರ ಪ್ರೇಮಕ್ಕೆ ಸಾಕ್ಷಿಯಾಗಿರುವ ಬಾವಡಿಗಳ ಸಂಖ್ಯೆಯ ದುಪ್ಪಟ್ಟು ತಾಲಾಬ್‌ಗಳೂ ಗಮನ ಸೆಳೆಯುತ್ತವೆ. ಬಹುಶಃ ವಿಶ್ವದ ಯಾವ ಪುರಾತನ ನಗರದಲ್ಲೂ ಇಷ್ಟು ಸುವ್ಯವಸ್ಥಿತ ನೀರಾವರಿ ವ್ಯವಸ್ಥೆ ಇರಲು ಸಾಧ್ಯವೇ ಇಲ್ಲ. ಈ ಮಾತು ಬರೀ ಉತ್ಪ್ರೇಕ್ಷೆಯಲ್ಲ. ಏಕೆಂದರೆ ಸುತ್ತಮುತ್ತಲೇ ಒಂದಲ್ಲ, ಎರಡಲ್ಲ, ಐದು ನದಿಗಳು ಬೇಡಬೇಡವೆಂದರೂ ಮಳೆಗಾಲದಲ್ಲಿ ಉಕ್ಕೇರುತ್ತವೆ. ಆದರೇನು, ದ್ರಾಕ್ಷಿ ಸ್ವರ್ಗ ವಿಜಾಪುರದ ಮಂದಿಗೆ ಈ ನೀರು ಹುಳಿದ್ರಾಕ್ಷಿಯೇ ಸರಿ. ಅದು ಎಂದಿಗೂ ಕುಡಿಯಲು ಎಟುಕುವುದೇ ಇಲ್ಲ. ಇದರ ಜತೆಗೆ ಕಾಡುವ ರಣ ಬಿಸಿಲು, ಸದಾ ಶುಭ್ರವಾಗಿಯೇ ನಗುವ ಮುಗಿಲು. ಪರಿಣಾಮ ಒಣಗಿ ಬಾಯ್ದೆರೆದೇ ಇರುವ ನೆಲ.
ಇಂಥ ಭೌಗೋಳಿಕ ಲಕ್ಷಣ, ವಾತಾವರಣವನ್ನು ಹೊಂದಿರುವ ವಿಜಾಪುರಕ್ಕೆ ಕೊರತೆಯಾಗದಂತೆ ನೀರು ಪೂರೈಸುವುದು ಸಣ್ಣ ಮಾತೇನಲ್ಲ. ಅದೊಂದು ಸಾಹಸ. ಅಂಥ ಸಾಹಸ ಸಿದ್ಧಿಸುವುದು ನಿಖರ ಅಭ್ಯಾಸ, ನಿಶ್ಚಿತ ಮನೋಶಕ್ತಿ, ನಿರಂಕುಶ ಜ್ಞಾನದಿಂದ ಮಾತ್ರ. ಆದಿಲ್‌ಶಾಹಿ ಅರಸರಿಗೆ ಇದು ಸಿದ್ಧಿಸಿತ್ತು ಎನ್ನುವಾಗ ಎದುರಿಗೆ ಕಾಣುತ್ತವೆ. ಬಾವಡಿಗಳು, ತಾಲಾಬ್‌ಗಳು.
ಇದು ಬಾವಡಿಗಿಂತ ಭಿನ್ನವಾಗಿರುವ ನೀರಾವರಿ ವ್ಯವಸ್ಥೆ. ತಾಲಾಬ್ ಎಂದರೆ ಹಿಂದಿಯಲ್ಲಿ ಕೆರೆ ಎಂದರ್ಥ. ಆ ಕಾಲದಲ್ಲಿ ತಾಲಾಬ್‌ಗಳು ಅದೆಷ್ಟು ನವನವೀನ ತಂತ್ರಜ್ಞಾನದಿಂದ ನಿರ್ಮಾಣವಾಗಿದ್ದವೆಂಬುದಕ್ಕೆ ಇಂದಿಗೂ ಅವು ಅನ್ವಯವಾಗುವಂತೆಯೇ ಇದೆ. ಬೇಗಂ ತಾಲಾಬ್ ಒಂದನ್ನು ನೋಡಿದರೆ ಸಾಕು, ಅವರಲ್ಲಿದ್ದಿರಬಹುದಾದ ತಾಂತ್ರಿಕ ಪ್ರಗತಿ ಅರಿವಾಗುತ್ತದೆ.
ನಗರದಿಂದ ಸರಿಸುಮಾರು ನಾಲ್ಕೈದು ಕಿ.ಮೀ. ಸಾಗಿಹೋದರೆ ಸುಂದರ ಜಲರಾಶಿ ಕಣ್ಸೆಳೆಯುತ್ತದೆ. ಅನುಮಾನವೇ ಇಲ್ಲ, ಅಷ್ಟು ಸುಂದರವಾಗಿದೆ ಎಂದರೆ ಅದೇ ಬೇಗಂತಾಲಾಬ್. ಇತಿಹಾಸಕ್ಕೆ ಹೋದರೆ ಕ್ರಿ.ಶ. ೧೬೫೧ರಲ್ಲಿ ಮಹಮ್ಮದ ಆದಿಲ್‌ಷಾ ಇದನ್ನು ಕಟ್ಟಿಸಿದನಂತೆ. ಆಗಿನ ಅತ್ಯಾಧುನಿಕ ನೀರಾವರಿ ವ್ಯವಸ್ಥೆಯ ಮೊದಲ ಹೆಜ್ಜೆ ಇದೆನ್ನಬಹುದು. ಇದಕ್ಕಿಂತ ಮೊದಲು ಇವನ ತಾತ, ಮೊದಲ ಆಲಿ ಆದಿಲ್‌ಷಾ ‘ತೊರವಿ’ ಯೋಜನೆ ಅನುಷ್ಠಾನಗೊಳಿಸಿದ್ದ. ಹಾಗೆ ನೋಡಿದರೆ ಇದು ಸಹ ಅತ್ಯಂತ ಸಮರ್ಥ ವ್ಯವಸ್ಥೆಯೇ. ಆದರೆ ನಗರ ಬೆಳೆಯುತ್ತ ಹೋದಂತೆಲ್ಲ ನೀರಿನ ಬೇಡಿಕೆ ಪೂರೈಸಲು ದು ಸಾಲದಾಯಿತು. ಕೊನೆಗೆ ಮಹಮ್ಮದ ಆದಿಲ್‌ಷಾ ಬೇಗಂ ತಾಲಾಬ್ ಅನ್ನು ರೂಪಿಸಿದ. ಈ ಕೆರೆಗೆ ನೀರಿನ ಮೂಲವೂ ಅಷ್ಟೇ ಸದೃಢವಾಗಿದೆ. ಒಂದು ರೀತಿಯಲ್ಲಿ ಇದು ಸರಣಿ ನೀರಾವರಿ ವ್ಯವಸ್ಥೆ. ಸಾರವಾಡ ಮತ್ತು ಖ್ವಾಜಾಪುರದಿಂದ ಹಳ್ಳಗಳ ನೀರು ಹಂತಹಂತಗಳನ್ನು ದಾಟಿ ಈ ತಾಲಾಬ್‌ಗೆ ಬಂದು ಸೇರುತ್ತದೆ. ತಾಲ್‌ಬ್‌ನ ಬಲಮೂಲೆಯಲ್ಲಿ ಕಲ್ಲಿನ ಒಂದು ಚಿಕ್ಕ ಕೊಠಡಿಯ ಮಾದರಿ ಇದೆ. ಅದರ ಒಳಗೆ ಪ್ರವೇಶಿಸಿದರೆ ಕೆಳಗೊಂದು ನೆಲಮಾಳಿಗೆ ರೀತಿ ಇದೆ. ಯಾವುದಕ್ಕಾಗಿ ಇದರ ರಚನೆಯಾಗಿತ್ತು ಎಂಬುದು ಗೊತ್ತಾಗದಿದ್ದರೂ ಅದು ತಾಲಾಬ್‌ಗೆ ಬರುವ ಜಲಮಾರ್ಗವಾಗಿದ್ದರಬಹುದೆಂದು ಊಹಿಸಬಹುದು.
ಬಹುತೇಕ ಹೂಳಿನಿಂದ ತುಂಬಿ ಹೋಗಿರುವ ಈ ನೆಲಮಾಳಿಗೆಯಲ್ಲಿ ಅಲ್ಲಲ್ಲಿ ಮಣ್ಣಿನ ಕೊಳವೆಯ ಅವಶೇಷ ದೊರಕುತ್ತದೆ. ನಗರದೊಳಗೆ ನೀರು ಬಂದ ನಂತರ ಕೋಟೆಯ ಒಳಗೆ ಅದನ್ನು ಸಂಗ್ರಹಿಸಲು ಚೌಕೋನಾಕಾರದ, ಸುಮಾರು ೨೫ ರಿಂದ ೪೦ ಅಡಿ ಎತ್ತರದ ಗೋಪುರಗಳನ್ನು ಕಟ್ಟಿದ್ದರು. ಆದಿಲ್‌ಶಾಹಿಗಳ ಚತುರಮತಿಯನ್ನು ಎಷ್ಟು ಹೊಗಳಿದರೂ ಸಾಲದೆಂಬುದು ಇದಕ್ಕಾಗಿಯೇ. ಬರೀ ಕೆರೆ, ಕೊಳವೆಗಳನ್ನು ಕಟ್ಟಿ ಬಿಟ್ಟಿದ್ದರೆ ಸಾಕಿತ್ತು. ಆದರೆ ಅಷ್ಟಕ್ಕೇ ಬಿಡಲಿಲ್ಲ. ಅದನ್ನೊಂದಿಷ್ಟು ಚೆಂದ ಮಾಡಿದರು. ಮೇಲೊಂದು ಗೋಪುರವನ್ನಿಟ್ಟರು. ನೋಡಿದರೆ ಮನೆ ಸೆಳೆಯುವಂತೆ, ಪೂಜ್ಯ ಭಾವನೆ ಬರುವಂತೆ ರೂಪಿಸಿದರು. ಇದರಿಂದ ನೀರಿನ ಮಾಲಿನ್ಯವನ್ನು ತಡೆದರು. ಇಷ್ಟೇ ಇದರ ಹಿಂದಿನ ಉದ್ದೇಶವಲ್ಲ ಎಂಬುದು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ. ಎತ್ತರದಲ್ಲಿರುವ ಈ ಗೋಪುರಗಳು ಹೂಳನ್ನು ತಡೆಯಲು ಸಹಾಯಕವಾಗಿವೆ. ಮಣ್ಣಿನ ಕೊಳವೆಗಳಲ್ಲಿ ಕೆಸರು ತುಂಬಿ ನೀರಿನ ಹರಿವಿಗೆ ಧಕ್ಕೆ ಬಾರದಂತೆ, ಕೊಳವೆಗಳ ಮುಖಾಂತರ ಕೊಳೆ ಕೆಸರು ಬಂದರೂ ಅದು ತಳಭಾಗದಲ್ಲಿ ಉಳಿದು ತಿಳಿ ನೀರು ಎತ್ತರದಿಂದ ವಿತರಣೆ ಆಗುವಂತೆ ಇದನ್ನು ರೂಪಿಸಲಾಗಿದೆ. ಈ ಗೋಪುರಕ್ಕೆ ಸಂಪರ್ಕವಿರುವ ನಾಲೆ ಇನ್ನೂ ಜೀವಂತವಿದೆ ಎಂಬುದಕ್ಕೆ ತೀರಾ ಇತ್ತೀಚೆಗೆ ಅದಕ್ಕೆ ನಲ್ಲಿ ಜೋಡಿಸಿ ನೀರು ಪಡೆಯುತ್ತಿರುವುದೇ ನಿದರ್ಶನ.
ಸದ್ಯಕ್ಕೆ ಸಣ್ಣ ನೀರಾವರಿ ಇಲಾಖೆಗೆ ಈ ಕೆರೆ ಸೇರಿದ್ದು ನಿರ್ವಹಣೆಯಿಲ್ಲದೇ ಬೇಸಿಗೆಯಲ್ಲಿ ಆರುತ್ತಿದೆ. ಈ ನಡುವೆ ಒಮ್ಮೆ ಹೂಳು ತೆಗೆಸಿದ ಶಾಸ್ತ್ರ ಮಾಡಿದ್ದರೂ ಒಟ್ಟು ೨೩-೩೫ ಮಿಲಿಯನ್ ಕ್ಯುಸೆಕ್ ಸಾಮರ್ಥ್ಯವಿರುವ ಜಲಕೊಂಡದ ಪೂರ್ಣ ಪ್ರಯೋಜನ ಪಡೆದುಕೊಳ್ಳಾಗುತ್ತಿಲ್ಲ. ಇನ್ನೂ ನಗರ ವ್ಯವಸ್ಥೆಯ ಅಪಸವ್ಯಗಳು ಕೆರೆಯನ್ನು ಕುಲಗೆಡಿಸುತ್ತಿಲ್ಲ ಎಂಬುದೇ ಸಮಾಧಾನದ ಸಂಗತಿ.
ಏನೇ ಆದರೂ ಬಾವಡಿಗಳಂತೆಯೇ ತಾಲಾಬ್‌ಗಳ ಮಹತ್ವದ ಬಗ್ಗೆಯೂ ನಿರ್ಲಕ್ಷ್ಯ ಮನೆ ಮಾಡಿದ್ದು ಸತ್ಯ. ಯಾವರೀತಿಯಿಂದಲೂ ಸುಸ್ಥಿರವಲ್ಲದ, ಅಂತರ್ಜಲವನ್ನು ಆರಿಸುತ್ತಿರುವ ಕೊಳವೆ ಬಾವಿಗಳು, ಸಾವಿರಾರು ಕೋಟಿ ರೂ. ಸುರಿದು ರೂಪಿಸುವ ಅವೈಜ್ಞಾನಿಕ ನೀರಾವರಿ ಯೋಜನೆಗಳನ್ನು ಅವಲಂಬಿಸುವ ಬದಲು ಇಂಥ ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆಯ ಬಗೆಗಿನ ಅನಾದರ ಬಿಟ್ಟು, ಸಂರಕ್ಷಿಸಿಕೊಳ್ಳುವ ಆ ಮೂಲಕ ಮುಂದಿನ ತಲೆಮಾರಿಗೆ ಮಹದುಪಕಾರ ಮಾಡುವ ಬುದ್ಧಿ ನಮಗೆ ಬಂದರೆ ಅಷ್ಟು ಸಾಕು. ನೀರಿನ ವಿಚಾರದಲ್ಲಿ ಅದಕ್ಕಿಂತ ದೊಡ್ಡ ಕಾರ್ಯ ಮತ್ತೊಂದಿಲ್ಲ.

‘ಲಾಸ್ಟ್’ಡ್ರಾಪ್:
ನೀರನ್ನು ಕಂಡು ಉಲ್ಲಸಿತನಾಗದ ಜೀವಿ ಈ ಭೂಮಿಯ ಮೇಲೆ ಇಲ್ಲ. ಎಂಥ ರಚ್ಚೆ ಹಿಡಿದ ಮಗುವನ್ನೂ ಒಮ್ಮೆ ನೀರ ಬಳಿ ಕರೆದೊಯ್ದು ನಿಲ್ಲಿಸಿ. ಅದು ಅಳು ನಿಲ್ಲಿಸದಿದ್ದರೆ ದೇವರಾಣೆ. ಅದು ನೀರಿಗಿರುವ ಪ್ರೇಮ ಶಕ್ತಿ.

No comments: