ತಪ್ಪು ಅವರದ್ದಲ್ಲ ಬಿಡಿ. ಏಕೆಂದರೆ ಅದು ಎಂದಿಗೂ ಚುನಾವಣೆಯ ವಿಷಯವಾಗುವುದೇ ಇಲ್ಲ. ಹಸಿರು, ನೀರು, ಪರಿಸರ ಎಂದೆಲ್ಲ ಬಡಬಡಿಸಿದರೆ ಜನ ಸುಮ್ಮನೆ ನಗುತ್ತಾರೆಯೇ ವಿನಾ, ಅವರಿಗೆ ಮತ ಹಾಕುವುದಿಲ್ಲ. ಈ ವಿಚಾರ ರಾಜಕಾರಣಿಗಳಿಗೂ ಚೆನ್ನಾಗಿ ಗೊತ್ತು. ಹಸಿರು ಸಮೃದ್ಧಿಯಾದರೆ ನಮ್ಮ ಮನೆಗೇನು ಲಾಭ, ನನಗೇನು ಸಿಕ್ಕೀತು ? ನೀರು ನಿರ್ಮಲವಾಗಿದ್ದರೆ ನಾನೇನು ಉದ್ಧಾರವಾಗುತ್ತೇನೆಯೇ? ಇಂಥ ಮನೋಭಾವವನ್ನು ಅರಿತಿರುವುದರಿಂದಲೇ ಪಕ್ಷಗಳು ೨-೩ ರೂಪಾಯಿಗೆ ಅಕ್ಕಿ, ಮನೆಗೊಂದು ಬಣ್ಣದ ಟೀವಿ, ಕೈಗೊಂದು ಮೊಬೈಲು ಹೀಗೆ ಆಮಿಷಗಳ ಪಟ್ಟಿಯನ್ನೇ ಮುಂದಿಡುತ್ತಾ ಹೋಗುತ್ತವೆ. ಅದಕ್ಕೂ ಮುಂದೆ ಹೋಗಿ ‘ನೀವು ಎಷ್ಟು ಬೇಕಾದರೂ ಸಾಲ ಮಾಡಿ, ಅದನ್ನು ತೀರಿಸಬೇಕಾಗಿಯೇ ಇಲ್ಲ. ಭಯ ಬೇಡ ನಾವು ಅಕಾರಕ್ಕೆ ಸಾಲ ಮನ್ನಾ ಮಾಡುತ್ತೇವೆ; ನಿಶ್ಚಿಂತೆಯಿಂದ ಇರಿ’ ಎನ್ನುತ್ತಾರೆ ನಮ್ಮ ನಾಯಕ ವರೇಣ್ಯರು. ಅಷ್ಟೇ ನೋಡಿ ಬೇಡಬೇಡವೆಂದರೂ ನಾವು ಪಕ್ಷಕ್ಕೇ ವೋಟು ಒತ್ತಿ ಬರುತ್ತೇವೆ.
ಇದನ್ನು ಬಿಟ್ಟು, ಜಾಗತಿಕ ತಾಪಮಾನ ನಿಯಂತ್ರಣಕ್ಕೆ ನಮ್ಮ ಪಕ್ಷ ಇಂಥ ಕಾರ್ಯಯೋಜನೆಯನ್ನು ಹಮ್ಮಿಕೊಂಡಿದೆ. ನೀರಿನ ಸಂರಕ್ಷಣೆಗೆ ನಾವು ಇಷ್ಟು ಯೋಜನೆಗಳನ್ನು ರೂಪಿಸಲಿದ್ದೇವೆ.....ನಾವು ಅಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಭಾರತದ ಎಲ್ಲ ನದಿಗಳನ್ನೂ ಮಾಲಿನ್ಯ ಮುಕ್ತಗೊಳಿಸುತ್ತೇವೆ....ಈ ಎಲ್ಲ ಭರವಸೆಗಳನ್ನು ಯಾವ ಅಭ್ಯರ್ಥಿಯೂ ಮುಂದಿಡುವುದೂ ಇಲ್ಲ. ಒಂದೊಮ್ಮೆ ಮುಂದಿಟ್ಟರೆ ಅದನ್ನು ನಂಬಿ ನಾವು ಮತ ಹಾಕಿ ಗೆಲ್ಲಿಸುವುದೂ ಇಲ್ಲ. ಬದಲಾಗಿ ಇಂಥ ಮಾತುಗಳನ್ನಾಡುತ್ತ ಚುನಾವಣೆಯಲ್ಲಿ ಮತ ಕೇಳಲು ಹೋದರೆ ನಮಗದು ಹಾಸ್ಯಾಸ್ಪದ ಅನ್ನಿಸುವುದೇ ಹೆಚ್ಚು. ‘ಎಂಥ ಭ್ರಮೆ ಈ ಮನುಷ್ಯನಿಗೆ...ಹೀಗೆಲ್ಲ ಹೇಳಿದರೆ ಗೆಲ್ಲಲು ಸಾಧ್ಯವೇ’ ಎಂದು ನಾವೇ ಅವನನ್ನು ಗೇಲಿ ಮಾಡುತ್ತೇವೆ. ಬೇಕಿದ್ದರೆ ಹಿಂದೊಮ್ಮೆ ನಮ್ಮೆಲ್ಲರ ಹೆಮ್ಮೆಯ ಕಾರಂತಜ್ಜ ಚುನಾವಣೆಗೆ ನಿಂತದ್ದನ್ನು ಒಮ್ಮೆ ನೆನಪಿಸಿಕೊಳ್ಳಿ. ಪರಿಸರ ಹೋರಾಟವನ್ನೇ ವಿಷಯವಾಗಿಸಿಕೊಂಡು ಸ್ವತಂತ್ರ ಅಭ್ಯರ್ಥಿಯಾಗಿ ಶಿವರಾಮ ಕಾರಂತರು ಚುನಾವಣಾ ಕಣಕ್ಕಿಳಿದಿದ್ದರು. ಹಾಗೆ ನೋಡಿದರೆ ಕಾರಂತರಿಗಿಂತ ಯೋಗ್ಯ ಅಭ್ಯರ್ಥಿ ನಮಗೆ ಬೇರಾರು ಸಿಗಲು ಸಾಧ್ಯ ? ಈ ದೇಶದ ದುರದೃಷ್ಟ, ಅಂಥ ಅಸೀಮ ಇಚ್ಛಾಶಕ್ತಿಯ, ಅತ್ಯಂತ ಮೇಧಾವಿ ವ್ಯಕ್ತಿಯೊಬ್ಬರ ಬೆನ್ನಿಗೆ ನಿಲ್ಲಲು ಯಾವುದೇ ಪ್ರಮುಖ ಪಕ್ಷಗಳೂ ಸಿದ್ಧವಿರಲಿಲ್ಲ. ಅಷ್ಟೇಕೆ ಅವರೆದುರು ಅಭ್ಯರ್ಥಿಗಳನ್ನು ಹಾಕದಿರುವ, ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಕಳುಹಿಸುವ ಸೌಜನ್ಯವೂ ನಮ್ಮ ಮುಖಂಡರಲ್ಲಿ ಇರಲಿಲ್ಲ. ಕೊನೇ ಪಕ್ಷ ಅಂಥವರೊಬ್ಬರನ್ನು ಚುನಾಯಿಸಿ ನಮ್ಮ ಪಾರ್ಲಿಮೆಂಟ್ನ ಘನತೆಯನ್ನು ಹೆಚ್ಚಿಸಬೇಕೆಂಬ ಯೋಚನೆಯೂ ಮತದಾರಪ್ರಭುವಿಗೆ ಬರಲಿಲ್ಲ. ದುರಂತ ಅವರು ಸೋತರು. ಕಾರಂತಜ್ಜನಂಥ ಸಂಭಾವಿತರು ರಾಜಕೀಯಕ್ಕೆ ಬರುವುದು ನಮಗೇ ಬೇಕಿರಲಿಲ್ಲ ಇರಬೇಕು. ನಂತರದ ದಿನಗಳಲ್ಲಿ ಅಂಥ ಸಂದಿಗ್ಧವೇ ನಮ್ಮ ಮುಂದೆ ಬರಲಿಲ್ಲ ಬಿಡಿ.
ಅದಂತಲೇ ಅಲ್ಲ. ಸ್ವಾತಂತ್ರ್ಯೋತ್ತರ ಭಾರತದ ಈ ೧೫ ಚುನಾವಣೆಗಳಲ್ಲಿ ಒಮ್ಮೆಯೂ ಸಹ ಹಸಿರು, ಪರಿಸರ ಚುನಾವಣೆಯ ವಿಷಯವಾಗಲೇ ಇಲ್ಲ. ಕೊನೇ ಪಕ್ಷ ಯಾವುದೇ ಒಂದು ಪಕ್ಷವೂ ಇದನ್ನು ತನ್ನ ಪ್ರಣಾಳಿಕೆಯ ಭರವಸೆಗಳಲ್ಲಿ ಒಂದನ್ನಾಗಿಯೂ ಪರಿಗಣಿಸಲೇ ಇಲ್ಲ. ಹಾಗೆಂದು ವಿಷಯವನ್ನು ಪ್ರಸ್ತಾಪಿಸಿಯೇ ಇಲ್ಲವೆಂದಲ್ಲ. ಪರೋಕ್ಷವಾಗಿ ಅಲ್ಲೊಂದು ಇಲ್ಲೊಂದು ಪರಿಸರದ ವಿಷಯಗಳು ಒಮ್ಮೊಮ್ಮೆ ಇಣುಕುತ್ತವೆಯಾದರೂ ಅದಕ್ಕೆ ಹೇಳಿಕೊಳ್ಳುವ ಮಹತ್ವ ಇರುವುದಿಲ್ಲ. ಒಂದೊಮ್ಮೆ ಆ ಪಕ್ಷ ಅಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿನ ಪರಿಸರದ ಭರವಸೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಗಂಭೀರ ನಿರ್ಧಾರವನ್ನೆಂದೂ ತೆಗೆದುಕೊಂಡ ಉದಾಹರಣೆ ಇಲ್ಲ. ಇದು ಹೀಗೇಕೆ ? ಪರಿಸರ ಅಷ್ಟು ಸಣ್ಣ ಸಂಗತಿಯೇ ? ಪ್ರಶ್ನೆಗೆ ಉತ್ತರಿಸುವವರು ಯಾರು ?
ಈ ಚುನಾವಣೆಯಲ್ಲಿ ಸಹ ಕಾಂಗ್ರೆಸ್, ಬಿಜೆಪಿ, ತೃತೀಯ ರಂಗದ ಸದಸ್ಯ ಪಕ್ಷಗಳಲ್ಲದೇ ತೀರಾ ಸ್ಥಳೀಯ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳು...ಹೀಗೆ ಎಲ್ಲರೂ ತಮ್ಮದೇ ಅಜೆಂಡಾ ಇಟ್ಟುಕೊಂಡು ಕಣಕ್ಕಿಳಿದಿದ್ದಾರೆ. ಆದರೆ, ಹಚ್ಚ ಹಸಿರಿನ ಯೋಚನೆಯೊಂದು ಯಾರ ತಲೆಯಲ್ಲಿ ಸುಳಿದಾಡಿದೆ ? ಮೇಲ್ನೋಟಕ್ಕೆ ಎಲ್ಲ ಪಕ್ಷಗಳ ಪ್ರಣಾಳಿಕೆಯಲ್ಲೂ ಪರಿಸರದ ವಿಷಯ ಇಣುಕಿದೆ. ಭೂ ತಾಪಮಾನದಲ್ಲಿನ ಬದಲಾವಣೆ ಬಗ್ಗೆ ಪ್ರತಿ ಪಕ್ಷದ ಪ್ರಣಾಳಿಕೆಯಲ್ಲೂ ಉಲ್ಲೇಖವಿದೆ. ಪರಿಸರ ರಕ್ಷಣೆ ಬಗ್ಗೆ, ನದಿಗಳ ಮಾಲಿನ್ಯ ನಿಯಂತ್ರಣದ ಕುರಿತು ಹಾಗೂ ನವೀಕರಿಸಬಹುದಾದ ಸಂಪನ್ಮೂಲಗಳ ಮೇಲೆಯೇ ಬಂಡವಾಳ ಹೂಡುವ ಬಗ್ಗೆ ಕಾಂಗ್ರೆಸ್, ಬಿಜೆಪಿ ಮತ್ತು ಸಿಪಿಎಂಗಳು ತಮ್ಮ ಪ್ರಣಾಳಿಕೆಗಳಲ್ಲಿ ಬದ್ಧತೆ ವ್ಯಕ್ತಪಡಿಸಿವೆ. ಹುಲಿ ಹಾಗೂ ಇತರ ವನ್ಯಪ್ರಾಣಿಗಳ ಉಳಿವಿಗಾಗಿ ಶಾಶ್ವತ ಕಾರ್ಯಪಡೆಯೊಂದನ್ನು ರಚಿಸುವುದಾಗಿ ಬಿಜೆಪಿ ಹೇಳಿದೆ.
ಇಷ್ಟಾದರೆ ಮುಗಿದು ಹೋಯಿತೇ ? ಹೇಳಿಕೇಳಿ ನಮ್ಮ ರಾಜಕಾರಣಿಗಳ ಭರವಸೆಗಳೆಂದರೆ ಅವು ಭರವಸೆಗಳಷ್ಟೇ. ಭಾರತದಂಥ ಸಮೃದ್ಧ ನಿಸರ್ಗ ಸಂಪನ್ಮೂಲದ ರಾಷ್ಟ್ರದಲ್ಲಿ ಪರಿಸರವನ್ನು ನಾವು ನೋಡುವ ದೃಷ್ಟಿಕೋನ ಇಷ್ಟಕ್ಕೇ ಸೀಮಿತವಾದರೆ ಸಾಕಾದೀತೆ ? ಹಾಗೆ ನೋಡಿದರೆ ಪರಿಸರದ ವಿಷಯಗಳನ್ನು ನಾವು ದೇಶದ ಇಂದಿನ ಅಭಿವೃದ್ಧಿ ಹಾಗೂ ಆರ್ಥಿಕ ಬದಲಾವಣೆಯ ವೇಗದೊಂದಿಗೆ ಸಮೀಕರಿಸದೇ ಬರೀ ‘ಜನಪ್ರಿಯತೆ’ಯ ಚೌಕಟ್ಟಿನೊಳಗೇಸೀಮಿತಗೊಳಿಸುತ್ತಿದ್ದೇವೆ ಎನ್ನಿಸುತ್ತದೆ. ಯಾಕೆಂದರೆ, ಪರಿಸರದ ಬಗ್ಗೆ ಮಾತಾಡುತ್ತಿರುವ ಪಕ್ಷಗಳೆಲ್ಲ ಅದಕ್ಕೂ ದೊಡ್ಡ ಧ್ವನಿಯಲ್ಲಿ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿವೆ. ಅಸಲಿಗೆ ಸಮಸ್ಯೆ ಇರುವುದೇ ಇಲ್ಲಿ. ಪರಿಸರಕ್ಕೆ ಪೂರಕ ಅಭಿವೃದ್ಧಿ ಎಂಬುದು ನಮ್ಮಲ್ಲಿ ದೂರದ ಮಾತಾಗಿದೆ. ಅವೆರಡೂ ಒಟ್ಟೊಟ್ಟಿಗೇ ಸಾಗಬೇಕೆಂಬ ಪರಿಕಲ್ಪನೆಯಿಂದಲೇ ನಾವಿನ್ನೂ ಬಹುದೂರ ಉಳಿದಿದ್ದೇವೆ. ಪರಿಸರ ಹಿತಾಸಕ್ತಿಯನ್ನು ಕಾಪಾಡಿಕೊಂಡು ಅಭಿವೃದ್ಧಿ ಸಾಸುವುದೇ ನಿಜವಾದ ಸವಾಲು.
ಮಾತೆತ್ತಿದರೆ ಪಾಶ್ಚಿಮಾತ್ಯ ರಾಷ್ಟ್ರಗಳ ಮಾದರಿಯನ್ನು ಪ್ರತಿಪಾದಿಸುವ ನಾವು ಇಂಥ ವಿಚಾರದಲ್ಲಿ ಮಾತ್ರ ಐರೋಪ್ಯ ದೇಶಗಳನ್ನು ಅನುಸರಿಸುವುದಿಲ್ಲ ಎಂಬುದೇ ಅರ್ಥವಾಗುವುದಿಲ್ಲ. ಎಲ್ಲಿಕ್ಕಿಂತ ಮಿಗಿಲಾಗಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯೇ ವೆಸ್ಟ್ಮಿನ್ಸ್ಟರ್ ಅನ್ನು ಆಧಾರವಾಗಿಟ್ಟುಕೊಂಡು ರೂಪುಗೊಂಡದ್ದು. ಯುರೋಪ್ನಲ್ಲಿ ಪ್ರಮುಖ ರಾಜಕೀಯ ಪಕ್ಷಗಳೆಲ್ಲ ಚುನಾವಣೆಯಲ್ಲಿ ಪರಿಸರ ವಿಷಯವನ್ನು ಬಲವಾಗಿ ಪ್ರತಿಪಾದಿಸುತ್ತವೆ. ಕಡಿಮೆ ಇಂಗಾಲದ ತಂತ್ರಜ್ಞಾನ ಹಾಗೂ ವಾತಾವರಣದಲ್ಲಿನ ಏರುಪೇರು ತಡೆ ಮತ್ತಿತರ ಘೋಷಣೆಗಳು ಅಲ್ಲಿ ಢಾಳಾಗಿ ಸಿಗುತ್ತವೆ. ಆದರೆ, ಐರೋಪ್ಯ ರಾಷ್ಟ್ರಗಳಲ್ಲಿ ಪರಿಸರ ಕುರಿತಾದ ಇಂಥ ಸಂಗತಿಗಳು ಹತ್ತರಲ್ಲಿ ಹನ್ನೊಂದನೆಯದ್ದಲ್ಲ. ಆದಾಗ್ಯೂ, ಒಮ್ಮೆ ಅಕಾರಕ್ಕೆ ಬಂದ ಮೇಲೆ ಪರಿಸರ ಸಂಬಂ ಭರವಸೆಗಳನ್ನು ಈಡೇರಿಸಲು ಅಲ್ಲಿನ ಪಕ್ಷಗಳು ಸೋಲುತ್ತಿವೆ ಎಂಬುದು ಬೇರೆ ಪ್ರಶ್ನೆ. ಸಿಕ್ಕಾಪಟ್ಟೆ ಹೊಗೆ ಹೊರಸೂಸುವ ಬೃಹತ್ ಕೈಗಾರಿಕೆಗಳಿಗೆ ಎಗ್ಗಿಲ್ಲದೇ ಪರವಾನಗಿ ನೀಡುತ್ತಿರುವ ಜರ್ಮನಿ ಸರಕಾರ, ಪರಿಸರ ಉಳಿಸುವ ಭರವಸೆಗಳಿಂದ ಹಿಂದೆ ಸರಿದಿದೆ. ಕಾರು ಹಾಗೂ ಹೊಸ ವಾಹನಗಳನ್ನು ಕೊಳ್ಳುವವರಿಗೆ ಸಬ್ಸಿಡಿ ನೀಡುವುದರಲ್ಲೂ ಸರಕಾರ ಹಿಂದೆ ಬಿದ್ದಿಲ್ಲ.
ಆಸ್ಟ್ರೇಲಿಯದಲ್ಲೂ ಇದೇ ಕತೆ. ಜಾನ್ ಹೋವರ್ಡ್ ಸರಕಾರದ ಪರಿಸರ ವಿರೋ ನೀತಿಗಳನ್ನು ವಿರೋಸುತ್ತಲೇ ಅಕಾರಕ್ಕೆ ಬಂದಿತ್ತು ಅಲ್ಲಿನ ಲೇಬರ್ ಪಾರ್ಟಿ. ಆದರೆ, ಪರಿಸರದ ಬಗ್ಗೆ ಸರಕಾರ ತಾಳಿರುವ ನಿರ್ಲಕ್ಷ್ಯ ನೋಡಿದರೆ ಅಕ್ಕಿ ತಿನ್ನುವವ ಹೋದ ಹೊಟ್ಟು ತಿನ್ನುವವ ಬಂದ ಎಂಬಂತಾಗಿದೆ ಅಲ್ಲಿನ ಪರಿಸ್ಥಿತಿ.
ಈ ಹಿನ್ನೆಲೆಯಲ್ಲಿ, ಭಾರತದಲ್ಲಿ ಹಸಿರಿನ ಭರವಸೆ ನೀಡುತ್ತಿರುವ ಪಕ್ಷಗಳ ಹಕೀಕತ್ ಆದರೂ ಏನು ? ವಾಸ್ತವ ಏನೆಂದರೆ, ನಮ್ಮ ದೇಶದ ಬಹುಪಾಲು ಜನಸಂಖ್ಯೆ ಪರಿಸರವನ್ನೇ ಅವಲಂಬಿಸಿ ಜೀವನ ರೂಪಿಸಿಕೊಂಡಿದೆ. ಅದು ಭೂಮಿ ಇರಬಹುದು, ನೀರು ಹಾಗೂ ಅರಣ್ಯವಿರಬಹುದು. ಹಾಗಾಗಿ, ಇವರು ಅವಲಂಬಿಸಿರುವ ನೈಸರ್ಗಿಕ ಸಂಪನ್ಮೂಲದ ಉತ್ಪಾದಕತೆ ಹೆಚ್ಚಿಸುವುದೇ ನಿಜವಾದ ಪರಿಸರದ ಇಶ್ಯೂ ಆಗಬೇಕು. ಇದರಿಂದ ಸ್ಥಳೀಯರು ನೈಸರ್ಗಿಕ ಸಂಪನ್ಮೂಲದ ಮೇಲೆ ಅವಲಂಬಿತವಾಗಿರುವ ಅರ್ಥವ್ಯವಸ್ಥೆಯನ್ನು ಬಲಪಡಿಸಿಕೊಂಡು ತಮ್ಮ ಜೀವನ ಸದೃಢಪಡಿಸಿಕೊಳ್ಳಲು ಸಹಾಯಕವಾಗುತ್ತದೆ. ಪರಿಸರದ ಮೇಲೆ ಸರಕಾರ ಹಾಕುವ ಬಂಡವಾಳದಿಂದ ಸ್ಥಳೀಯರ ಬದುಕು ಹಸನಾಗುವಂತಿರಬೇಕು.
ಕುಡಿಯುವ ಜೀವಜಲಕ್ಕೆ ಜನರು ಅವಲಂಬಿಸಿರುವ ನದಿಗಳು ಮಲಿನವಾಗಕೂಡದು. ಅಭಿವೃದ್ಧಿ ಯೋಜನೆಗಳ ಗತಿ ಬದಲಾಗಬೇಕು. ಏಕೆಂದರೆ, ಜನರ ವಾಸಸ್ಥಾನವನ್ನೇ ಅವು ನುಂಗುತ್ತ ಬದುಕು ಕಸಿಯುತ್ತಿವೆ. ಎಲ್ಲರಿಗೂ ಬಳಕೆಗೆ ಸಿಗುವ ರೀತಿಯಲ್ಲಿ ಜಲ ಸಂಪನ್ಮೂಲದ ವಿಕೇಂದ್ರೀಕರಣವಾಗಬೇಕು.
ಮೇಲ್ನೋಟಕ್ಕೆ ಮಧ್ಯಮ ವರ್ಗ ತಲೆದೂಗುವ ರೀತಿಯಲ್ಲಿ ಒಂದಿಷ್ಟು ಪರಿಸರದ ವಿಷಯಗಳನ್ನು ಪ್ರಸ್ತಾಪಿಸುವುದು ದೊಡ್ಡ ವಿಷಯವಲ್ಲ. ಆದರೆ ಹಾಗೆ ಕೈಗೆತ್ತಿಕೊಂಡ ವಿಷಯದ ಆಳವೆಷ್ಟು ? ಸ್ಥಳೀಯರಿಗೆ ಅಲ್ಲಿನ ಸಂಪನ್ಮೂಲಗಳ ಮೇಲೆ ಹಕ್ಕು ಸಿಗುವಂತೆ ವ್ಯವಸ್ಥೆ ಬಲವಾಗಬೇಕಿದೆ.
‘ಲಾಸ್ಟ್’ಡ್ರಾಪ್: ಪರಿಸರ, ಅಭಿವೃದ್ಧಿ ಎಂಬುದು ಎರಡು ವಿರುದ್ಧ ಧ್ರುವಗಳು ಎಂಬತಾಗಿಬಿಟ್ಟಿದೆ. ನಿಜವಾಗಿ ಈ ದೃಷ್ಟಿಯಿಂದ ನಮ್ಮ ಅಭಿವೃದ್ಧಿಯ ವ್ಯಾಖ್ಯಾನ ಬದಲಾಗುವ ಅಗತ್ಯವಿದೆ.
2 comments:
ಯಾವಾಗಲೂ ಜನಸಾಮಾನ್ಯರನ್ನು ಮತ್ತು ಕಾರ್ಪರೇಟುಗಳನ್ನು ಕಾಡುವ ವಿಚಾರಗಳನ್ನು ಬಿಂಬಿಸುವುದು ಮಾಧ್ಯಮದ ಕೆಲಸ. ನಮ್ಮ ಮಾಧ್ಯಮದಲ್ಲೇ ಹಸಿರಿನ ವಿಚಾರವಾಗಿ ಕಡಿಮೆ ಕವರೇಜ್ ಇದೆ ಅಂತ ನಂಗೆ ಅನಿಸ್ತಿದೆ. ಪರಿಸರಪ್ರಜ್ಞೆ ನಮ್ಮಲ್ಲಿ ಎಂದೂ ಒಂದು ಮಾಸ್ ಮೂವ್-ಮೆಂಟ್ ಆಗಿಯೇ ಇಲ್ಲ. ಅಲ್ಲೊಂದು ಇಲ್ಲೊಂದು ಒಂಟಿದನಿಯ ಕೂಗು ಬಿಟ್ಟರೆ, ನಮ್ಮ ಜನರಲ್ಲಿನ್ನೂ ಪರಿಸರದ ಉಳಿಸುವಿಕೆ ಅವಶ್ಯ ಎಂಬ ಪ್ರಜ್ಞೆ ಅಂತರಾಳದಿಂದ ಹುಟ್ಟಿಲ್ಲ. ಹಾಗಾಗಿ ರಾಜಕೀಯ ಪಕ್ಷಗಳು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಪ್ರಣಾಳಿಕೆಯಲ್ಲಿ ಹಸಿರಿಗೆ ಜಾಗ ಸಿಗುವುದು ಬಿಡಿ, ಇಂದಿನ ಯುಗದ ಪತ್ರಿಕೆಯೊಂದರಲ್ಲಿ ನಿಮ್ಮ ಹಸಿರು-ನೀರು-ಉಸಿರು ಪ್ರತಿಪಾದಿಸುವ ಈ ಕಾಲಂಗೆ ಜಾಗ ಸಿಕ್ಕಿದೆಯಲ್ಲ, ಅದು ನನಗೆ ಎಲ್ಲಕ್ಕಿಂತ ಗ್ರೇಟ್ ಆಗಿ ಕಾಣುತ್ತದೆ. ಹೀಗೇ ಮುಂದುವರಿಸಿ, ಒಳ್ಳೆಯದಾಗಲಿ.
Thank u 4 ur comment Mr.Shree.
-Bhadti
Post a Comment