Tuesday, April 28, 2009

ಭಯ ಬೇಡ, ಮಳೆ ಹುಯ್ಯುತ್ತಿದೆ !

ಕಾರಾತ್ಮಕವಾಗಿಯೇ ನೀರಿನ ಬಗ್ಗೆ ಯೋಚಿಸುವುದು ಏಕೊ ? ಈ ವಿಚಾರದಲ್ಲಿ ಅನಗತ್ಯ ಭಯವೊಂದು ನಮ್ಮಲ್ಲಿ ಮನೆ ಮಾಡಿದೆ. ಒಂದಂತೂ ಸತ್ಯ, ನೀರು ನಿರ್ವಹಣೆಯಲ್ಲಿನ ಸಮರ್ಥ ಸಮುದಾಯವೇ ಅಭಿವೃದ್ಧಿಯ ವ್ಯಾಖ್ಯಾನವನ್ನು ಬರೆಯುತ್ತದೆ. ನೀರನ್ನು ಸರಳ ಮತ್ತು ಪರಿಣಾಮಕಾರಿ ತಂತ್ರಜ್ಞಾನದ ಮೂಲಕ ಯಶಸ್ವಿಯಾಗಿ ಬಳಸಿಕೊಳ್ಳಲಾಗಿದ್ದರೆ ಆ ಪ್ರದೇಶ ಖಂಡಿತಾ ಹಿಂದುಳಿಯಲು ಸಾಧ್ಯವೇ ಇಲ್ಲ. ಇಲ್ಲಿ ನೀರು ನಿರ್ವಹಣೆ ಎಂದರೆ ಕೊರತೆ ಇದ್ದಾಗ ಸರಿದೂಗಿಸುವುದು ಮಾತ್ರವಲ್ಲ, ಹೆಚ್ಚಾದಾಗಲೂ ವ್ಯರ್ಥ ಮಾಡದಿರುವುದು. ಅಂದರೆ ಅತಿವೃಷ್ಟಿ ಮತ್ತು ಅನಾವೃಷ್ಟಿ ಗಳೆರಡೂ ಸಂದರ್ಭಗಳಲ್ಲಿ ತೋರುವ ಜಾಣ್ಮೆ ಹಾಗೂ ಅದರ ಜತೆಗಿನ ನೆಮ್ಮದಿಯ ಬದುಕು ನೈಜ ಅಭಿವೃದ್ಧಿ ಪರ ಮನೋಭಾವಕ್ಕೊಂದು ಸ್ಪಷ್ಟ ನಿದರ್ಶನ.
ಅದೃಷ್ಟಕ್ಕೆ ಇಂದಿಗೂ ನಮಗೆ ಮಳೆ ನೀರೊಂದೇ ಶುದ್ಧವಾಗಿ ಉಳಿದುಕೊಂಡಿದೆ. ಅದರ ಸಂಗ್ರಹ ಮತ್ತು ಸೇವನೆಯಿಂದ ಎಲ್ಲ ಸಮಸ್ಯೆಗಳಿಂದಲೂ ಪಾರಾಗಬಹುದು. ಇದರ ಹೊರತಾಗಿ ಇತರ ನೀರನ್ನು ಕುಡಿಯಲೇಬೇಕಾದ ಅನಿವಾರ್ಯತೆ ಬಂದರೆ ಅದಕ್ಕೂ ಮುನ್ನ ಒಂದಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದೊಳಿತು. ಯಾವುದೇ ನೀರನ್ನು ಆಟೋಕ್ಲೇವ್‌ನಿಂದ ಶುದ್ಧಗೊಂಡ ಬಾಟಲಿಯಲ್ಲಿ ಸಂಗ್ರಹಿಸಿ, ಆ ನೀರಿನ ಎಲ್ಲ ವಿವರ (ಸ್ಥಳ, ಸಂಗ್ರಹಿಸಿದ ಸಮಯ ಇತ್ಯಾದಿ)ಗಳೊಂದು ನಾಲ್ಕು ಗಂಟೆಯೊಳಗೆ ಪ್ರಯೋಗಾಲಯಕ್ಕೆ ಒಯ್ದರೆ ಪರೀಕ್ಷೆ ಸಾಧ್ಯ.
ಅವುಗಳೆಲ್ಲ ಹೇಗೇ ಇದ್ದರೂ ಚೆನ್ನಾಗಿ ಕುದಿಸಿ ಆರಿಸಿದ ನೀರು ಯೋಗ್ಯ. ಇಲ್ಲವೇ ಪಾರದರ್ಶಕ ಬಾಟಲಿ ಅಥವಾ ಪಾತ್ರೆಗಳಲ್ಲಿ ತುಂಬಿದ ನೀರನ್ನು ಆರರಿಂದ ಎಂಟು ಗಂಟೆಗಳ ಕಾಲ ಬಿಸಿಲಲ್ಲಿ ಇಟ್ಟು ನಂತರ ಯಾವುದೇ ಭೀತಿಯಿಲ್ಲದೇ ಕುಡಿಯಬಹುದು. ಎಲ್ಲಕ್ಕಿಂತ ಮುಖ್ಯವಾಗಿ "ಶುದ್ಧ ನೀರಿನ ಪ್ರಜ್ಞೆ’ ಮೊದಲು ಎಲ್ಲರ ಆದ್ಯತೆಯಾಗಲಿ. ಅದಿಲ್ಲದಿದ್ದರೆ ನಾವು ಅಪಾಯವನ್ನು ಆಹ್ವಾನಿಸಿಕೊಂಡಂತೆಯೇ ಸರಿ.
ಸಾಮಾನ್ಯವಾಗಿ ಬೃಹತ್ ಪ್ರಮಾಣದಲ್ಲಿ ನೀರು ಪೂರೈಕೆಯ ಸಂದರ್ಭದಲ್ಲಿ ಮರಳಿನ ಮೂಲಕ ಸೋಸುವುದೇ ಹೆಚ್ಚು. ನೈಸರ್ಗಿಕ ವಾಗಿ ಮಣ್ಣು, ಮರಳುಗಳಲ್ಲಿ ಜಿನುಗಿದಾಗ, ಸೂರ್ಯ ರಶ್ಮಿಯ ನೇರ ಸಂಪರ್ಕದಲ್ಲಿ ನೀರು ಶುದ್ಧಗೊಳ್ಳುತ್ತದೆ. ಇದಲ್ಲದೇ ನೀರನ್ನು ಪಟಕ (ಆಲಂ-ಬಣ್ಣ ರಹಿತವಾದ, ಸಾಮಾ ನ್ಯವಾಗಿ ಔಷಧಗಳಲ್ಲಿ ಬಳಸುವ ಒಂದು ಸಂಯುಕ್ತ ವಸ್ತು) ಜತೆ ಬೆರೆಸಿಯೂ ಸಂಸ್ಕರಿಸುವ ಪದ್ಧತಿ ಇದೆ. ಇದಾದ ಬಳಿಕ ಮರಳಿನ ಹಾಸಿನ ಮೂಲಕ ನೀರನ್ನು ಹಾಯಿಸಿ, ನಂತರ ಕ್ಲೋರೀನ್‌ಯುಕ್ತ ಅನಿಲ, ದ್ರಾವಣ ಗಳನ್ನು ಬೆರೆಸಿ ಕೊಳಾಯಿಗಳ ಮೂಲಕ ಪೂರೈಸಲಾಗು ತ್ತದೆ. ಇಷ್ಟಾದ ಮಾತ್ರಕ್ಕೆ ನೀರು ಶುದ್ಧವೆನ್ನಲಾಗದು. ಮೇಲ್ನೋಟಕ್ಕೆ ನೀರು ತಿಳಿಯಾಗಿ ಕಂಡರೂ ಅದರಲ್ಲಿ ಜೈವಿಕ, ರಾಸಾಯನಿಕ ಅಂಶ ಇರಬಹುದು. ಸಂಸ್ಕರಣಾ ಕೇಂದ್ರದಿಂದ ಪೂರೈಸಲಾದ ಬಳಿಕವೂ ನೀರು ಅಶುದ್ಧ ಗೊಳ್ಳುವ ಸಾಧ್ಯತೆಗಳಿವೆ.
ಒಬ್ಬ ಮನುಷ್ಯನ ತೂಕ ೭೦ ಕಿ.ಗ್ರಾಂ ಇದ್ದರೆ, ಆತನ ದೇಹದಲ್ಲಿ ೪೭ ಲೀಟರ್ ನೀರಿರುತ್ತದೆ. ನಮ್ಮ ದೇಹದ ಬಹುತೇಕ ಅಂಗಗಳಲ್ಲಿ ನೀರಿನ ಅಂಶವೇ ಅಕವಾಗಿ ಇರುವುದು. ಉದಾಹರಣೆಗೆ ತೆಗೆದುಕೊಂಡರೆ ಮಾಂಸಖಂಡಗಳಲ್ಲಿ ಶೇ. ೭೫ರಷ್ಟು, ಪಿತ್ತಜನಕಾಂಗ ಅಥವಾ ಯಕೃತ್ತಿನಲ್ಲಿ ಶೇ. ೭೦, ಮಿದುಳಿನಲ್ಲಿ ಶೇ. ೭೯, ಕಿಡ್ನಿಯಲ್ಲಿ ಶೇ. ೮೩ರಷ್ಟು ನೀರಿನ ಅಂಶವಿದೆ. ದೇಹಕ್ಕೂ ನೀರಿಗೂ ಇರುವ ಸಂಬಂಧವನ್ನು ನಾವು ಗಮನಿಸಿಕೊಂಡರೆ ಖಂಡಿತಾ ನೀರನ್ನು ನಿರ್ಲಕ್ಷಿಸುವುದಿಲ್ಲ.
ಆರೋಗ್ಯ ಶಾಸ್ತ್ರ ಹೇಳುವ ಪ್ರಕಾರ ದೇಹದ ಒಟ್ಟೂ ನೀರಿನಲ್ಲಿ ಅರ್ಧಕ್ಕಿಂತ ಹೆಚ್ಚು ಜೀವಕೋಶಗಳೊಳಗೆ ಅಡಕವಾಗಿದ್ದು, ಉಳಿದ ಭಾಗ ರಕ್ತದಲ್ಲಿ, ಅಂಗಾಂಶಗಳಲ್ಲಿ, ಮಿದುಳನ್ನು ಆವರಿಸಿರುವ ಸೆರಿಬ್ರೊಸ್ಟೈನಲ್ ದ್ರಾವಣದಲ್ಲಿ, ಕಣ್ಣಿನಲ್ಲಿ ಇರುತ್ತದೆ. ಯಾವ ಜೀವಕೋಶವೂ ನೀರಿಲ್ಲದೆ ಬದುಕಿರಲು ಸಾಧ್ಯವಿಲ್ಲ.
ತನ್ನಲ್ಲಿ ಅನೇಕ ವಸ್ತುಗಳನ್ನು ಕರಗಿಸಿಕೊಳ್ಳುವ ಶಕ್ತಿ ನೀರಿಗಿದೆ. ಹೀಗಾಗಿ ಒಂದು ಜೀವಕೋಶ ಮತ್ತೊಂದರಿಂದ ಅಥವಾ ಹೊರಗಿನ ಪರಿಸರದಿಂದ ಅಥವಾ ರಾಸಾಯನಿಕಗಳನ್ನು ಪಡೆಯಲು ಈ ಗುಣ ಬಹಳ ಅನುಕೂಲವಾಗಿದೆ. ದೇಹದಲ್ಲಿನ ರಾಸಾಯನಿಕ ಪ್ರಕ್ರಿಯೆಗಳಿಗೂ ನೀರು ತೀರಾ ಅಗತ್ಯ. ಜೀವಕೋಶಗಳಿಗೆ ಅನೇಕ ಉಪಯುಕ್ತ ವಸ್ತುಗಳು ಹೊರಗಿನಿಂದ ಬರುತ್ತವೆ. ಅದೇ ರೀತಿಯಲ್ಲಿ ಒಳಗಿನಿಂದ ಹೊರಗೂ ಹೋಗುತ್ತದೆ. ಹೀಗೆ ಬಂದು ಹೋಗಲು ನೀರು ಬೇಕು. ಇನ್ನು ಆಹಾರ ಜೀರ್ಣವಾಗಲು, ಅದರಲ್ಲಿನ ಪೋಷಕಾಂಶ ರಕ್ತ ಸೇರಲು, ಅವು ಮುಂದೆ ಜೀವಕೋಶಗಳನ್ನು ತಲುಪಲು ನೀರು ಬೇಕು. ನೀರಿನ ಅಯಾನುಗಳು, ಆ ವಸ್ತುಗಳನ್ನು ಪ್ರವೇಶಿಸಿ ಅವುಗಳನ್ನು ವಿಭಜಿಸಿ ಆ ಪ್ರಕ್ರಿಯೆಯನ್ನು ಸರಳೀಕರಿಸುತ್ತವೆ.
ಕರುಳಿನಿಂದ ಆಹಾರದ ಅಂಶಗಳನ್ನು ಹೀರಿಕೊಳ್ಳಲು, ಮೂತ್ರಪಿಂಡಗಳ ನಾನಾ ಪ್ರಕ್ರಿಯೆಗಳಿಗೆ ಮತ್ತು ಆಹಾರದ ಅಂಶಗಳು ದೇಹದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಸೂತ್ರವಾಗಿ ಸಾಗಲು ನೀರು ತೀರಾ ಅಗತ್ಯ. ಅಷ್ಟೇಕೆ ದೇಹದ ತ್ಯಾಜ್ಯ ಪದಾರ್ಥಗಳು ಹೊರಬೀಳಲು ನೀರು ಬೇಕೇಬೇಕು. ಜೀರ್ಣ ಕ್ರಿಯೆಗೆ ಅಗತ್ಯ ಹಲವು ಜೀರ್ಣರಸಗಳ ತಯಾರಿಕೆ ನೀರಿಲ್ಲದೇ ಆಗದು. ಬೇರೆ ಬೇರೆ ರಸದೂತಗಳು ನಿರ್ನಾಳ ಗ್ರಂಥಿಗಳಲ್ಲಿ ಉತ್ಪತ್ತಿಯಾಗಿ, ತಮ್ಮ ತಮ್ಮ ಕಾರ್ಯ-ಚಟುವಟಿಕೆಯ ಸ್ಥಾನಗಳಿಗೆ ಸಾಗಲು ನೀರು ಅಗತ್ಯ.
‘ಲಾಸ್ಟ್’ಡ್ರಾಪ್: ಆಹಾರವಿಲ್ಲದೇಯೂ ಮನುಷ್ಯ ಹಲವು ದಿನಗಳವರೆಗೆ ಬದುಕಿರಬಹುದು. ಆದರೆ ನೀರಿಲ್ಲದೇ ಬದುಕಿರಲು ಸಾಧ್ಯವಿಲ್ಲ. ಅದಕ್ಕಾಗಿಯೇ ನೀರನ್ನು ಜೀವದ್ರವ ಎನ್ನುವುದು.

No comments: