ನೀರಿನ ಮರುಬಳಕೆ ಅಲ್ಲಿ ಸಾಮಾನ್ಯವಾಗಿ ಕಂಡು ಬರುವ ಅಂಶ. ಒಂದೇ ಉದ್ದೇಶಕ್ಕೆ ನೀರನ್ನು ಬಳಸುವ ಬದಲಾಗಿ ಅದರ ಪರ್ಯಾಯ ಪ್ರಯೋಜನಗಳ ಬಗ್ಗೆ ಜನ ಯೋಚಿಸುತ್ತಾರೆ. ಬಟ್ಟೆ ತೊಳೆದ ನೀರನ್ನು ಬಳಸಿ ಮನೆ ಹಿತ್ತಿಲಲ್ಲಿ ಒಂದಷ್ಟು ಸೊಪ್ಪು ಬೆಳೆಸಿಕೊಳ್ಳುವುದು, ಸ್ನಾನದ ನೀರನ್ನು ತೆಂಗಿನ ಗಿಡಕ್ಕೋ, ಸಣ್ಣಪುಟ್ಟ ಹಣ್ಣು ತರಕಾರಿಗಳ ಅಂಕಣಕ್ಕೋ ಹಾಯಿಸುವುದು, ಅಡುಗೆ ಮನೆಯಲ್ಲಿ ಬಳಸಿ ಬಿಟ್ಟ ನೀರಿನಲ್ಲೇ ಪುಟ್ಟ ಕೈ ತೋಟವೊಂದನ್ನು ಸಲಹುವುದು... ಇಂಥವು ತೀರಾ ಸಹಜ ಸಂಗತಿಗಳು.
ಹೀಗೆ ಯೋಚಿಸುತ್ತಿದ್ದಾಗ ಕೇರಳದ ಮುನ್ನಾರ್‌ನ ಸ್ನೇಹಿತ ಸಿ.ಕೆ. ಮೋಹನ್ ಯಾವಾಗಲೋ ಒಮ್ಮೆ ಹೇಳಿದ್ದ ‘ವೆಟಿವೇರ್’ eಪಕಕ್ಕೆ ಬಂತು. ‘ವೆಟಿವೇರ್’ ಯಾವುದೋ ಅಪರಿಚಿತ ಸಸ್ಯವೇನಲ್ಲ. ನಮ್ಮಲ್ಲಿ ತೀರಾ ಕೌಟುಂಬಿಕ ಸಸ್ಯವಾಗಿ, ಮನೆಮದ್ದಾಗಿ ಬಳಕೆಯಲ್ಲಿರುವ ಲಾವಂಚ ಅಥವಾ ರಾಮಂಚ ಎಂದು ಗುರುತಿಸುವ ಹುಲ್ಲಿನ ಜಾತಿಯ ಸಸ್ಯ. ರೇಷ್ಮೆ ಸೀರೆಗಳು, ಬಟ್ಟೆ ಹಾಳಾಗದಂತೆ, ಜಿರಳೆ ಇತ್ಯಾದಿಗಳು ಒಳಹೋಗದಂತೆ ರಕ್ಷಿಸಲು ಮನೆಯ ಕಬೋರ್ಡ್‌ಗಳಲ್ಲಿ, ಟ್ರಂಕ್‌ಗಳಲ್ಲಿ ನಮ್ಮ ಹಿಂದಿನವರು ಹಾಕಿಡುತ್ತಿದ್ದ ವಿಚಿತ್ರ ಸುವಾಸನೆ ಬೀರುವ ಬೇರುಗಳನ್ನು ನೀವು ನೋಡಿರಬಹುದು. ಸಿಕ್ಕುಸಿಕ್ಕಾಗಿ ಬಲೆಯೋಪಾದಿಯಲ್ಲಿ ಹೆಣೆದುಕೊಂಡಿರುವ ಬೇರುಗಳ ಸಮೂಹ ಪೆಟ್ಟಿಗೆ ತೆಗೆಯುತ್ತಿದ್ದಂತೆ ಘಂ ಎಂದು ಮೂಗಿಗೆ ರಾಚುತ್ತದೆ. ಈ ಕಾರಣಕ್ಕಾಗಿಯೇ ಇದನ್ನು ಕೆಲವೆಡೆ ‘ಮಡಿವಾಳ ಬೇರು’ ಎಂದೂ ಗುರುತಿಸುತ್ತಾರೆ. ಇಂಥದೊಂದು ಬೇರು ಕಲುಷಿತ ನೀರನ್ನು ಶುದ್ಧಗೊಳಿಸುತ್ತದೆ ಎಂಬ ಸಂಗತಿಯೂ ಹೊಸತೇನಲ್ಲ. ಆದರೆ, ತೊಂಬತ್ತರ ದಶಕದ ಆರಂಭದಲ್ಲಿ ಚೀನಾದಲ್ಲಿ ಬೃಹತ್ ಪ್ರಮಾಣದಲ್ಲಿ ನಡೆದ ವೆಟಿವೇರ್ ಪ್ರಯೋಗ ಇದರತ್ತ ಜಗತ್ತಿನ ಗಮನ ಸೆಳೆಯುವಂತಾಯಿತು.
ಹಾಗೆ ನೋಡಿದರೆ, ಭಾರತೀಯ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ, ಸ್ಮೃತಿ-ಪುರಾಣಗಳಲ್ಲಿ ವೆಟಿವೇರ್ ಚಿರಪರಿಚಿತ. ಅಸಲಿಗೆ ರಾಮಂಚ ಎಂಬ ಹೆಸರು ಬಂದದ್ದೇ ನಮ್ಮ ಶ್ರೀರಾಮನಿಂದ ಎನ್ನುತ್ತದೆ ಪೌರಾಣಿಕ ಲೋಕ. ಶ್ರೀರಾಮನ ವನವಾಸದ ಸಂದರ್ಭದಲ್ಲಿ ಆತ ಕುಡಿಯುವ ನೀರನ್ನು ಶುದ್ಧೀಕರಿಸಲು ವೆಟಿವೇರ್ ಹುಲ್ಲನ್ನೇ ಬಳಸಿದ ಪ್ರಸ್ತಾಪ ರಾಮಾಯಣದಲ್ಲಿ ಬರುತ್ತದೆ. ಸುರಪಾಲರ ವೃಕ್ಷಾಯುರ್ವೇದದಲ್ಲಿ ವೆಟಿವೇರ್ ಬಗ್ಗೆ ಸವಿವರವಾಗಿ ದಾಖಲಾಗಿದೆ. ಮಿಶ್ರ ಚಕ್ರಪಾಣಿಯ ‘ವಿಷವವಲ್ಲಭ’ದಲ್ಲಂತೂ ನೀರಿನ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಲಾವಂಚ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ವಿಷದವಾಗಿ ಉಲ್ಲೇಖಿಸಲಾಗಿದೆ. ಅಲ್ಲಿಂದ ಆರಂಭವಾದ ಇದರ ಬಳಕೆ ಗ್ರಾಮೀಣ ಬದುಕಿನಲ್ಲಿ ಹಾಸುಹೊಕ್ಕಾಗಿ ಬಂದಿದೆ. ಮಣ್ಣಿನ ಸವಕಳಿ ತಪ್ಪಿಸಲು ರೈತ ಸಮುದಾಯ ಇದನ್ನು ಪ್ರಬಲ ಅಸ್ತ್ರವಾಗಿ ಬಳಸುತ್ತದೆ. ನದಿ ತೀರದಲ್ಲಿ, ಇಳಿಜಾರು ಪ್ರದೇಶದಲ್ಲಿ, ಹಳ್ಳ-ಕೊಳ್ಳಗಳ ದಂಡೆಯ ಮೇಲೆ ಈ ಹುಲ್ಲಿನ ಪೊದೆ ಸಾಮಾನ್ಯವಾಗಿ ಕಂಡುಬರುತ್ತದೆ. ಕೇರಳ, ತಮಿಳುನಾಡುಗಳಲ್ಲಿ ಕುಡಿಯುವ ನೀರಿನ ಬೊಡ್ಡೆಗೆ ಲಾವಂಚದ ಬೇರಿನ ಒಂದೆರಡು ತುಣುಕುಗಳನ್ನು ಹಾಕುವುದು ಇಂದಿಗೂ ಇದೆ. ಆಯುರ್ವೇದದಲ್ಲಿ ಲಾವಂಚವನ್ನು ಔಷಯ ಸಸ್ಯವಾಗಿ ಬಳಸಲಾಗುತ್ತದೆ. ಇಷ್ಟಿದ್ದರೂ ಇದರ ಬಗ್ಗೆ ಹೇಳಿಕೊಳ್ಳುವಂಥ ಪ್ರಚಾರವೇ ಆಗಿರಲಿಲ್ಲ.
ವೆಟಿವೇರ್‌ನ ಬಗ್ಗೆ ಇಂಥದೊಂದು ಪ್ರಚಾರ ಆರಂಭವಾದದ್ದೇ ಈಗ್ಗೆ ಮೂರು ವರ್ಷಗಳ ಹಿಂದೆ; ಚೀನಾನದಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನವೊಂದರಲ್ಲಿ. ರಿಚರ್ಡ್‌ಗ್ರಿಮ್‌ಷಾ ಎಂಬ ಪ್ರಯೋಗಶೀಲ ಕೃಷಿ ತಜ್ಞನೊಬ್ಬ ಮೊಟ್ಟಮೊದಲ ಬಾರಿಗೆ ಈ ಸಮ್ಮೇಳನದಲ್ಲಿ ವೆಟಿವೇರ್‌ನ ಕ್ರಾಂತಿಕಾರಿಕ ಗುಣಗಳ ಕುರಿತು ಪ್ರಬಂಧ ಮಂಡಿಸಿದ್ದು ಇಷ್ಟಕ್ಕೆಲ್ಲ ನಾಂದಿಯಾಯಿತು. ಅದರ ಬೆಳಕಿನಲ್ಲೇ ಕ್ವೀನ್ಸ್ ಲ್ಯಾಂಡ್‌ನ ಗಣಿ ಮತ್ತು ನೈಸರ್ಗಿಕ ಸಂಪನ್ಮೂಲ ಇಲಾಖೆ ಕೈಗೊಂಡ ಪರಿಸರ ಸ್ನೇಹಿ ಜಲಶುದ್ಧೀಕರಣ ಪ್ರಯೋಗದಲ್ಲಿ ವೆಟಿವೇರ್ ಬಳಕೆ ವ್ಯಾಪಕವಾಗಿರುವುದು ಅರಿವಿಗೆ ಬಂತು. ಅತ್ಯಂತ ಸರಳ, ತೀರಾ ಕಡಿಮೆ ವೆಚ್ಚದಲ್ಲಿ ವೆಟಿವೇರ್ ಬಳಸಿ ನೀರನ್ನು ಶುದ್ಧೀಕರಿಸುವುದು ಕ್ವೀನ್ಸ್ ಲ್ಯಾಂಡ್‌ನ ವೈಶಿಷ್ಟ್ಯ.
ನಗರ ಪ್ರದೇಶದಲ್ಲ್ಲಿ ಉತ್ಪತ್ತಿಯಾಗುವ ಕೊಳಚೆಯನ್ನು ಒಂದೆಡೆ ಹರಿಯುವಂತೆ ಮಾಡಿ ಹೊರವಲಯದ ನಿರ್ದಿಷ್ಟ ಪ್ರದೇಶವೊಂದರಲ್ಲಿ ಬೆಳೆಸಲಾದ ಲಾವಂಚದ ಕಣಕ್ಕೆ ಅದನ್ನು ಹಾಯಿಸಲಾಗುತ್ತದೆ. ಅತ್ಯಂತ ದಟ್ಟವಾಗಿ ಹಬ್ಬಿರುವ ಲಾವಂಚದ ಬೇರುಗಳ ನಡುವೆ ಈ ಕೊಳಚೆ ನೀರು ಹರಿದು ಹೊರಬರುವಷ್ಟರಲ್ಲಿ ತನ್ನ ಬಹುತೇಕ ಕಲ್ಮಶಗಳಿಂದ ಮುಕ್ತವಾಗಿರುತ್ತದೆ. ಅತ್ಯಂತ ವೈeನಿಕವಾಗಿ ದೃಢಪಟ್ಟಿರುವ ಈ ಪ್ರಯೋಗ ಇದೀಗ ಆಸ್ಟ್ರೇಲಿಯಾ, ಚೀನಾ, ಥಾಯ್ಲೆಂಡ್, ವಿಯೆಟ್ನಾಂ ಹಾಗೂ ಸೆನೆಗಲ್‌ಗಳಲ್ಲೂ ಯಶಸ್ವಿಯಾಗಿದೆ.
‘ವೆಟಿವೇರಿಯಾ ಜಿಜನಿಯೋಡೆಸ್’ ಎಂಬ ವೈeನಿಕ ಹೆಸರಿನಲ್ಲಿ ಗುರುತಿಸಲಾಗಿರುವ ಇದು ಹುಲ್ಲಿನ ಜಾತಿಗೆ ಸೇರಿದೆ. ಇದರ ಬೇರುಗಳು ಸುಮಾರು ೩ ಮೀಟರ್ ಆಳಕ್ಕೆ ಇಳಿಯಬಹುದಾದ್ದರಿಂದ ಮಣ್ಣಿನ ಸವಕಳಿ ತಪ್ಪಿಸುವುದರೊಂದಿಗೆ ಅಂತರ್ಜಲ ಮಟ್ಟ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸರಾಸರಿ ೨೦೦ ಮಿ.ಮೀ.ನಿಂದ ೬೦೦೦ ಮಿ.ಮೀ. ಮಳೆ ಬೀಳುವ ಎಲ್ಲ ಪ್ರದೇಶಗಳಲ್ಲಿ ಇದು ಬೆಳೆಯಬಲ್ಲದು. ೪೫ ಡಿಗ್ರಿ ಸೆಲ್ಷಿಯಸ್ ಉಷ್ಣಾಂಶದಲ್ಲೂ ಒಣಗದೆ ಹಸಿರಿನಿಂದ ಕಂಗೊಳಿಸುವ ಲಾವಂಚದ ಬೇರುಗಳು ಚಾಪೆ, ಬೀಸಣಿಗೆ, ಗೃಹಾಲಂಕಾರ ವಸ್ತುಗಳಲ್ಲೂ ಬಳಕೆಯಾಗುತ್ತಿದೆ. ಹೀಗಾಗಿ ಇದು ಒಂದರ್ಥದಲ್ಲಿ ಬಹೂಪಯೋಗಿ.
ಬಹುಶಃ ನಮ್ಮ ಹಳ್ಳಿಗಳ ಇನ್ನೂ ಅದೇಷ್ಟೋ ಮನೆಗಳಲ್ಲಿ ಇಂಥ ಅಸಂಪ್ರದಾಯಿಕ ಪದ್ಧತಿಗಳು ಸದ್ದಿಲ್ಲದೇ ನಡೆದುಕೊಂಡು ಬಂದಿರಬಹುದು. ತೀರಾ ಸಣ್ಣಪುಟ್ಟ ಸಂಗತಿಗಳೂ ಅತ್ಯಂತ ದೊಡ್ಡ ವೈeನಿಕ ಕ್ರಾಂತಿಗೆ ಕಾರಣವಾಗಬಹುದು. ಅಂಥವನ್ನು ಹುಡುಕಿ, ಪ್ರೋತ್ಸಾಹಿಸಿ ವ್ಯಾಪಕ ಬಳಕೆಗೆ ಮುಂದಾಗದಿದ್ದರೆ ನಮ್ಮ ‘ಹಿತ್ತಲ ಗಿಡ ಮದ್ದಲ್ಲ’ ಎಂಬ ನಿರ್ಲಕ್ಷ್ಯ ಧೋರಣೆಯನ್ನು ಬಳಸಿ ನಮ್ಮದೇ ಇನ್ನಷ್ಟು ಸಸ್ಯ, ಪ್ರಯೋಗ, ಪದ್ಧತಿಗಳಿಗೆ ಅಮೆರಿಕದಂಥ ಬಂಡವಾಳಶಾಹಿಗಳು ಪೇಟೆಂಟ್ ಪಡೆಯುವಲ್ಲಿ ಅನುಮಾನವಿಲ್ಲ.
‘ಲಾಸ್ಟ್’ಡ್ರಾಪ್: ನಿಮ್ಮ ಮನೆಯ ತ್ಯಾಜ್ಯ ನೀರು ಹರಿಯುವ ಕಾಲುವೆಯ ನಡುವೆಯೂ ಒಂದೆರಡು ಲಾವಂಚದ ಸಸಿಯನ್ನು ತಂದು ಬಿಸಾಡಿ, ಸಾಕು. ಅದು ತನ್ನ ಪಾಡಿಗೆ ತಾನು ಬೃಹತ್ ಪೊದೆಯಾಗಿ ಬೆಳೆದು ಮನೆಮನೆಯಲ್ಲೂ ಪುಟ್ಟ ನೀರು ಶುದ್ಧೀಕರಣ ಘಟಕಗಳು ತಲೆಯೆತ್ತಬಹುದು. ಅಷ್ಟರ ಮಟ್ಟಿಗೆ ಅಂತರ್ಜಲದ ಮಾಲಿನ್ಯವನ್ನು ತಡೆಯಬಹುದು.