Friday, July 3, 2009

ಕಾವೇರಿ ಕಾನನದಲ್ಲಿ ಇಸ್ಕಾನ್‌ನ ಚೈತನ್ಯ ಕೃಷಿ

ಕಾವೇರಿ ತಟದ ಆ ಹಸಿರ ಮಡಿಲಲ್ಲಿ ಸಸ್ಯ ಶಾಮಲೆಯ ಹಾಸ, ಕೃಷ್ಣ ರಾಧೆಯರ ವಿಲಾಸ. ಕಾದು ಕಂಗೆಟ್ಟು ಹೋಗಿದ್ದ ಬಂಜರು ಮರುಭೂಮಿಯಲ್ಲಿ ಇಂದು ಹಸಿರ ಸಾಮ್ರಾಜ್ಯದ ವಿಕಾಸ. ನವನವೋನ್ಮೇಲಿತ ಶಾಲಿನಿಯಾಗಿ ನಲಿದಾಡುತ್ತಿರುವ ಪ್ರಕೃತಿಯ ನಟ್ಟ ನಡುವೆ ಶ್ಯಾಮನ ಇಂಪು, ಇಂಪು ಮುರಲೀಗಾನ ತೇಲಿ ಬರುತ್ತಿರುತ್ತದೆ. ಅಂಥ ಇನಿದನಿಗೆ ಮೇಳೈಸಿ ಕೇಳುವ ಕರುಗಳ ಕಿರುಗೆಜ್ಜೆಯ ನಾದ. ವನದ ತುಂಬೆಲ್ಲ ಕುಣಿದಾಡುವ ಕರಿಗಣ್ಣಿನ ಆ ಕರುವನ್ನು ಮಮತೆಯಿಂದ ಗೋ ಮಾತೆ ಅಂಬಾ...ಎಂದು ಕರೆವಾಗಲಂತೂ ಮಾತೃತ್ವವೇ ಮೈವೆತ್ತಿ ಬಂದು ನಿಂತ ಅನುಭವ.


ಅಲ್ಲಿ ಜೀವನ ಪ್ರೇಮದ ಆದರ್ಶವಿದೆ. ಸುಸ್ಥಿರ ಬದುಕನ್ನು ಕಟ್ಟಿಕೊಡುವ ವಿಶ್ವಾಸವಿದೆ. ಸಾಧನೆಗೆ ಅಡಿಗಲ್ಲಾಗುವ ಆತ್ಮ ಸ್ಥೈರ್ಯವಿದೆ. ಜೀವನ್ಮುಖಿ ಚೈತನ್ಯ ಧಾರೆಯ ಪ್ರವಾಹವೇ ಇದೆ. ಇಡೀ ಬದುಕನ್ನು ದೇಶೀಯ ತಳಹದಿಯಲ್ಲೇ ಕಟ್ಟಿಕೊಳ್ಳಬೇಕೆಂಬ ಹವಣಿಕೆಗೆ ಸೂಕ್ತ ಮಾರ್ಗದರ್ಶನವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲೆಲ್ಲೂ ಮಾರ್ದನಿಸುವ ಸಕಾರಾತ್ಮಕ ದನಿಯಿದೆ. ಅದೆಲ್ಲವನ್ನೂ ತನ್ನ ಕೊಳಲನಾದದ ಮೋಡಿಗೊಳಗಾಗಿಸಿಟ್ಟುಕೊಂಡಿರುವ ರಾಧಾರಮಣನಿದ್ದಾನೆ. ಒಟ್ಟಾರೆ ಶ್ರೀರಂಗಪಟ್ಟಣದ ಸಮೀಪದ ಮಹದೇವಪುರವೆಂಬ ಆ ಚಿಕ್ಕ ಹಳ್ಳಿ ಪಕ್ಕಾ ಬೃಂದಾವನದ ಪ್ರತಿರೂಪ.



ಒಂದು ಕಾಲದಲ್ಲಿ ಕಾವೇರಿಯ ಪ್ರವಾಹಕ್ಕೆ ಸಿಲುಕಿ ತನ್ನೆಲ್ಲ ಸ್ವಂತಿಕೆಯನ್ನು ನದಿಯ ಹರಿವಿಗರ್ಪಿಸಿಕೊಂಡು ಸಂಪೂರ್ಣ ಬೆತ್ತಲಾಗಿಹೋಗಿದ್ದ ಆ ನೆಲಕ್ಕೊಂದಿಷ್ಟು ಹಸಿರ ಉಡುಗೆಯನ್ನು ಉಡಿಸಿದ್ದು ಸುಲಭದ ಮಾತೇನಲ್ಲ. ಇಸ್ಕಾನ್ ಸಂಸ್ಥಾಪಕ ಶ್ರೀಲ ಪ್ರಭುಪಾದರ ಸಿದ್ಧಾಂತ ಪ್ರತಿಪಾದನೆಯೊಂದಿಗೆ ೧೯೯೪ ರಲ್ಲಿ ಅಲ್ಲಿಗೆ ಜಯಚೈತನ್ಯ ಪ್ರಭು ಎಂಬ ಕೃಷಿ ಮಾಂತ್ರಿಕ ಕಾಲಿಟ್ಟಾಗ, ಆ ೮೦ ಎಕರೆ ಪ್ರದೇಶದಲ್ಲಿ ಕಂಡದ್ದು ಬರೀ ಮರಳಿನ ರಾಶಿಯನ್ನೇ. ಅದು ಬಿಟ್ಟರೆ ಆಗಾಗ ಮೈಕಾಯಿಸಿಕೊಳ್ಳಲು ನದಿಯಿಂದ ಮೇಲೆದ್ದು ಬಂದು ದಡದ ಮೇಲೆ ಮಲಗಿರುತ್ತಿದ್ದ ಒಂದಷ್ಟು ಮೊಸಳೆಗಳಷ್ಟೇ. ಆ ನೆಲದಲ್ಲಿ ಇನ್ನೇನು ಬೆಳೆದೀತು ? ಪ್ರಶ್ನೆಯನ್ನಷ್ಟೇ ಕೇಳಿಕೊಂಡು ಜಯ ಚೈತನ್ಯ ಪ್ರಭು ಕುಳಿತಿದ್ದರೆ ಮಹದೇವಪುರ ಇಂದಿನ ಮಹತ್ತರ ಸಾಧನೆಗೆ ಸಾಕ್ಷಿಯಾಗಿರುತ್ತಿರಲಿಲ್ಲ.
ಅಲ್ಲಿದ್ದ ಮೊದಲ ಸವಾಲೆಂದರೆ, ರೋಗಪೀಡಿತವಾಗಿ ಹೋಗಿದ್ದ ನೀರು-ಮಣ್ಣಿಗೆ ಸಂಸ್ಕಾರ ಕೊಡುವುದು. ಸಮುದ್ರದ ನೆಂಟಸ್ತನ ಉಪ್ಪಿಗೆ ಬರ ಎಂಬ ಮಾತಿಲ್ಲವೇ-ಹಾಗೆಯೇ ಪಕ್ಕದಲ್ಲೇ ಕಾವೇರಿಯ ಹರಿವಿದೆ, ಆದರೆ ನೆಲಕ್ಕೆ ಹಾಯಿಸಿಕೊಳ್ಳಲು ವ್ಯವಸ್ಥೆಯಿಲ್ಲ. ವಿಶಾಲ ಭೂ ಪ್ರದೇಶವೇನೋ ಇದೆ. ಆದರೆ ಅದು ಸಂಪೂರ್ಣ ಫಲವತ್ತತೆಯನ್ನು ಕಳೆದುಕೊಂಡು ಬೆಂಗಾಡಾಗಿ ಪರಿವರ್ತನೆಯಾಗಿಹೋಗಿದೆ. ನೀರು-ಮಣ್ಣುಗಳ ಸುದೀರ್ಘ ಮೈಥುನದ ಫಲವಾಗಿ ಎರಡೂ ಜೀವ ಚೈತನ್ಯವನ್ನೇ ಕಳೆದುಕೊಂಡಿದ್ದವು. ಎರಡಕ್ಕೂ ವಿಚ್ಛೇದನ ಕೊಡಿಸಿ ಪ್ರತ್ಯೇಕವಾಗಿಯೇ ಅವೆರಡಕ್ಕೂ ಸ್ವಂತ ಅಸ್ತಿತ್ವವನ್ನು ದಕ್ಕಿಸಿಕೊಡಲು ಸಾಧ್ಯವಾದರೆ ಮಾತ್ರ ಅಂದುಕೊಂಡದ್ದನ್ನು ಸಾಸಬಹುದು ಎಂಬುದನ್ನು ಮನಗಂಡರು ಜಯಚೈತನ್ಯರು. ತಾವು ಮಾಡಬೇಕೆಂದುಕೊಂಡಿದ್ದಕ್ಕೆ ಇಸ್ಕಾನ್‌ನ ಮೂಲಕ ಒಂದು ಸಾಂಸ್ಥಿಕ ಸ್ವರೂಪವನ್ನು ಕೊಟ್ಟು ‘ಬಸಿಲ್’ (ಭಕ್ತಿವೇದಾಂತ ಅಕಾಡೆಮಿ ಫಾರ್ ಸಸ್ಟೆನೆಬಲ್ ಇಂಟಿಗ್ರೇಟೆಡ್ ಲಿವಿಂಗ್) ಅನ್ನು ಹುಟ್ಟುಹಾಕಿದರು. ಪ್ರಭುಪಾದರು ಪ್ರತಿಪಾದಿಸಿದ್ದ ಗೋವು ಮತ್ತು ಭೂ ಆಧಾರಿತ ಆರ್ಥಿಕತೆಗೊಂದು ಮಾದರಿಯನ್ನು ನಿಲ್ಲಿಸುವುದು ಸಂಸ್ಥೆಯ ಮೂಲ ಉದ್ದೇಶವಾಗಿತ್ತು.



ಪರಿಸರದ ನಡುವಿನ ಬದುಕನ್ನು ಅರ್ಥಮಾಡಿಕೊಳ್ಳಲು ಒಂದು ವಾರಗಳವರೆಗೆ ಆಲ್ಲೇ ವಾಸವಿದ್ದು ಅಧ್ಯಯನ ನಡೆಸಿದ ಜೆಸಿ ಪ್ರಭು ಅವರಿಗೆ, ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಪುನರುತ್ಥಾನವೇ ಆದ್ಯತೆಯಾಗಬೇಕೆಂಬುದನ್ನು ಅರಿಯಲು ತಡವಾಗಲಿಲ್ಲ. ಅತ್ಯಂತ ದುರ್ಬಲ ಮಣ್ಣಿಗೆ ಸಾವಯವ ಸಂಸ್ಕಾರ ನೀಡಲು ಮುಂದಾದರು. ಸೂರ್ಯನತ್ತ ನಿರ್ಭಿಡೆಯಿಂದ ಬೆತ್ತಲಾಗಿ ಅಂಗಾತ ಮಲಗಿದ್ದ ಭೂಮಿಗೆ ಒಂದಷ್ಟು ಸಂಕೋಚ ಕಲಿಸಬೇಕಾಗಿತ್ತು. ಅದಕ್ಕಾಗಿ ಗ್ಲಿರಿಸಿಡಿಯಾ (ಗೊಬ್ಬರದ ಗಿಡ)-ಬಾಳೆ ಸೇರಿದಂತೆ ಅತ್ಯಂತ ಸುಲಭದಲ್ಲಿ, ವೇಗವಾಗಿ ಬೆಳೆಯುವ ಸಸಿಗಳನ್ನು ಬೆಳೆಸಲಾಯಿತು. ಜತೆಗೊಂದಿಷ್ಟು ಬೆಂಬಲ ನೀಡಿದ್ದು ಗೋವಿನ ತ್ಯಾಜ್ಯ. ಮೊದಲೇ ಹೇಳಿದಂತೆ ಪಕ್ಕದಲ್ಲೇ ಕಾವೇರಿಯಿದ್ದಳೂ ಆಕೆಯ ಅನುಗ್ರಹ ಪಡೆಯಲು ಆರಂಭಿಕ ಐದು ವರ್ಷಗಳಲ್ಲಿ ವಿದ್ಯುತ್ ಸೌಲಭ್ಯವಿಲ್ಲ. ಎಲ್ಲವೂ ಏತದ ಮೂಲಕವೇ ಆಗಬೇಕು. ಜಮೀನಿನ ಎತ್ತರ ಪ್ರದೇಶಕ್ಕೆ ನೀರನ್ನು ಎತ್ತಿ ತುಂಬಿಸಿಕೊಂಡು ಅಲ್ಲಿಂದ ಗುರುತ್ವಾಕರ್ಷಣ ತತ್ತ್ವದಲ್ಲಿ ಎಲ್ಲೆಡೆಗೆ ಹನಿಹನಿಯಾಗಿ ಹನಿಸಲಾಗುತ್ತಿತ್ತು. ಈ ಹಂತದಲ್ಲಿ ಕಾಡಿದ್ದು ಮಣ್ಣು ಜನ್ಯ ರೋಗಗಳು. ಶಿಲೀಂಧ್ರ, ವೈರಸ್ ಮತ್ತಿತರ ಸೂಕ್ಷ್ಮಾಣುಗಳನ್ನು ನಿಯಂತ್ರಿಸಲು ಅನುಸರಿಸಿದ್ದು ಪರ್ಯಾಯ ಕ್ರಿಮಿನಾಶಕ ಪದ್ಧತಿಯನ್ನು. ಸ್ಥಳೀಯ ಕಳೆಗಳು, ಬೇವು, ಗೋಮೂತ್ರ, ಗೋಮಂi, ಬೂದಿ ಇತ್ಯಾದಿಗಳನ್ನೇ ಬಳಸಿ ರೋಗನಿವಾರಣೆ ಮಾಡಲಾಯಿತು. ಅಷ್ಟರಲ್ಲಾಗಲೇ ಮರಳ ರಾಶಿಯ ಮೇಲೊಂದಿಷ್ಟು ಮುಚ್ಚಿಗೆ ಬಂದು ಭೂಮಿ ಹಸಿರಾಗತೊಡಗಿತ್ತು. ಅಂದು ಆರಂಭವಾದ ಸ್ವಾವಲಂಬಿ ಮಂತ್ರ ಇಂದಿಗೂ ಅಲ್ಲಿನ ಕೃಷಿಯ ಬೀಜಮಂತ್ರವಾಗಿದೆ ಎನ್ನುತ್ತಾರೆ ಜೆಸಿ ಪ್ರಭು.



ಜೀವ ಚೈತನ್ಯ ಕೃಷಿಗೆ ಶುರುವಿಟ್ಟುಕೊಳ್ಳುವ ಹೊತ್ತಿಗೆ ಐದು ವಸಂತಗಳು ಸರಿದು ಹೋಗಿದ್ದವು. ಭಾರತೀಯ ಪರಂಪರಾನುಗತ, ಈ ನೆಲದ ಕೃಷಿ ನಂಬಿಕೆಗಳಿಗೆ ವೈಜ್ಞಾನಿಕ ಆಧಾರಗಳನ್ನು ಕೊಟ್ಟು ಅದರ ಬೇರುಗಳನ್ನು ಬಲಗೊಳಿಸುವ ಕೃಷಿ ಸಾಧ್ಯವಾಗುವುದಾದರೆ ಬಸಿಲ್‌ನ ಸ್ಥಾಪನೆಗೊಂದು ಅರ್ಥ ಬಂದೀತು ಎಂದುಕೊಂಡರಂತೆ ಜೆಸಿ ಪ್ರಭು. ಅದಕ್ಕಾಗಿ ಅವರು ಆರಂಭಿಸಿದ್ದು ಪಂಚಾಂಗ ಆಧಾರಿತ ಕೃಷಿಯನ್ನು. ಹುಣ್ಣಿಮೆಗೆದುರಾಗಿ ಬೀಜಗಳ ಬಿತ್ತನೆ, ಅಮಾವಾಸ್ಯೆ ಮುಂದಿಟ್ಟುಕೊಂಡು ಕೀಟನಾಶಕಗಳ ಸಿಂಪಡಣೆಗಳೇ ಮುಂತಾದ ಗ್ರಾಮೀಣ ಜನಜೀವನದಲ್ಲಿ ಇಂದಿಗೂ ಉಳಿದುಕೊಂಡು ಬಂದಿರುವ ನಂಬಿಕೆಗಳಿಗೆ ಶಾಸ್ತ್ರಾಧಾರದ ಬಲವನ್ನು ತುಂಬಿದರು. ಮಾತ್ರವಲ್ಲ ಅದನ್ನು ಪ್ರಯೋಗಳ ಮೂಲಕ ಸಾಬೀತು ಪಡಿಸಿದರು. ಕಾಸ್ಮಿಕ್ ಶಕ್ತಿಯನ್ನಾಧರಿಸಿದ ಕೃಷಿ ಇಂದಿಗೂ ಬಸಿಲ್‌ನ ಮೂಲಾಧಾರ. ಇಂಥ ಮಳೆ ನಕ್ಷತ್ರದಲ್ಲೇ ಬಿತ್ತನೆ ಮಾಡಬೇಕು. ಇಂಥ ರಾಶಿಯಲ್ಲೇ ಅದಕ್ಕೆ ಬೀಜೋಪಚಾರ ಮಾಡಬೇಕು. ಈ ತಿಥಿಯಂದೇ ನೆಲವನ್ನು ಹದಗೊಳಿಸಬೇಕು. ನಿಗದಿತ ವಾರಗಳಂದೇ ಭೂಮಿಯನ್ನು ಉತ್ತಬೇಕು ಎಂಬುದೂ ಸೇರಿದಂತೆ ‘ಕೃಷಿ ಧರ್ಮ’ಕ್ಕೊಂದು ಹೊಸ ವ್ಯಾಖ್ಯಾನವನ್ನು ಆಧುನಿಕ ಜಗತ್ತಿನಲ್ಲಿ ಕಟ್ಟಿಕೊಡುವ ಪ್ರಯತ್ನ ಆದದ್ದು ವಿಶೇಷ. ಪ್ರತಿಯೊಂದು ಗಿಡಕ್ಕೂ ಅದರದ್ದೇ ಆದ ಪ್ರಾಕೃತಿಕ ಧರ್ಮವನ್ನು ಬೆಸೆಯಲಾಯಿತು. ಹೀಗೆ ಆರಂಭ ವಾದ ಸ್ವಾವಲಂಬಿ, ಸುಸ್ಥಿರ ಕೃಷಿ ಕಾಯಕ ೧೯೯೮ರಿಂದ ೨೦೦೫ರ ಅವಯಲ್ಲಿ ಮಾದರಿಯಾಗಿ ರೂಪುಗೊಂಡಿತು.



ಇಂದು ಕಾವೇರಿ ತಟದ ಬಸಿಲ್ ಆವರಣದಲ್ಲಿ ಬೆಳೆಯದ ಬೆಳೆಗಳಿಲ್ಲ. ಮಂಡ್ಯ ಸುತ್ತ ಮುತ್ತಲ ಪ್ರದೇಶದ ಸಾಂಪ್ರದಾಯಿಕ ಬೆಳೆಗಳಾದ ಭತ್ತ, ಕಬ್ಬುಗಳಲ್ಲದೇ ಇತರೆಲ್ಲ ಪ್ರಯೋಗಗಳೂ ಯಶಸ್ವಿಯಾಗಿದೆ. ಹಣ್ಣು- ಹೂವು-ತರಕಾರಿಗಳು ಹೇರಳವಾಗಿವೆ. ತೆಂಗು-ಕಂಗುಗಳು ಕಂಗೊಳಿಸುತ್ತಿವೆ. ಎಲಕ್ಕಿ, ಲವಂಗ, ಜಾಯಿಕಾಯಿ, ಕಾಳು ಮೆಣಸುಗಳಿಂದ ಹಿಡಿದು, ವೆನಿಲ್ಲಾದವರೆಗೆ ಎಲ್ಲ ರೀತಿಯ ವಾಣಿಜ್ಯ ಬೆಳೆಗಳಿಗೂ ಆ ಭೂಮಿ ತವರಾಗಿದೆ. ಎಲ್ಲಕ್ಕಿಂತ ವಿಶೇಷವೆಂದರೆ ಈ ವರೆಗೆ ಇಡೀ ತೋಟದೊಳಕ್ಕೆ ಹೊರಗಿನ ಒಂದೇ ಒಂದು ಕಣಕ್ಕೂ ಪ್ರವೇಶ ನೀಡಿಲ್ಲ. ಅಲ್ಲಿ ಇದ್ದ, ಬಿದ್ದ ವಸ್ತುಗಳಿಂದಲೇ ಕೃಷಿ ಸಾಗುತ್ತಿದೆ. ಅಲ್ಲಿ ಯಾವುದೂ ತ್ಯಾಜ್ಯವೆಂಬುದಿಲ್ಲ. ಕೀಟನಾಶಕ, ರಸಗೊಬ್ಬರಗಳನ್ನು ಮುಟ್ಟಿಸಿಯೂ ಇಲ್ಲ.



ಇದೆಲ್ಲ ಒಂದು ಹಂತಕ್ಕೆ ಬಂದು ನಿಲ್ಲುವ ಹೊತ್ತಿಗೆ ಬಸಿಲ್‌ನ ಗುರಿ ಹೊರಳಿದ್ದು ರೈತರ ತರಬೇತಿಯೆಡೆಗೆ. ಪ್ರಯೋಗಗಳ ಫಲಿತಾಂಶ ರೈತರನ್ನು ತಲುಪದಿದ್ದರೆ ಅದಕ್ಕೆ ಅರ್ಥವೇ ಇಲ್ಲವೆಂದುಕೊಂಡು ಜೆಸಿ ಪ್ರಭು, ೨೦೦೧ರಲ್ಲಿ ರೈತರ ತರಬೇತಿ ಹಾಗೂ ಮಾಹಿತಿ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ೮ ವರ್ಷಗಳಲ್ಲಿ ದೇಶಾದ್ಯಂತದ ಅದರಲ್ಲೂ ಕರ್ನಾಟಕ, ತಮಿಳುನಾಡು, ಕೇರಳದ ೩೫೦೦ಕ್ಕೂ ಹೆಚ್ಚು ರೈತರು ತೋಟಕ್ಕೆ ಬಂದು ತರಬೇತಿ ಪಡೆದುಹೋಗಿದ್ದಾರೆ. ಹೊಸ, ಹೊಸ ಪ್ರಯೋಗಗಳು ಆಗಿವೆ. ಇಷ್ಟಕ್ಕೇ ಬಸಿಲ್ ಸೀಮಿತಗೊಂಡಿಲ್ಲ. ಇಲ್ಲಿ ತರಬೇತಿ ಪಡೆದು ಸಾವಯವ ಕೃಷಿಕರಾಗಿ ಹೊರಬಂದ ರೈತರಿಗೆ ಪ್ರಮಾಣಪತ್ರ ನೀಡುವ, ಆ ಮೂಲಕ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯನ್ನು ದೊರಕಿಸಿಕೊಡುವ ಕಾರ್ಯವನ್ನೂ ಮಾಡುತ್ತಿದೆ. ಬೆಂಗಳೂರು ಕೃಷಿ ವಿವಿ ಸೇರಿದಂತೆ ಇತರ ಅಂತಾರಾಷ್ಟ್ರೀಯ ಏಜೆನ್ಸಿಗಳ ಮೂಲಕವೂ ಪ್ರಮಾಣಿಕರಿಸಿ ರೈತರ ಶ್ರಮಕ್ಕೊಂದು ಗೌರವ ತಂದುಕೊಡಲಾಗುತ್ತಿದೆ. ರೈತರ ಗುಂಪುಗಳನ್ನು ರಚಿಸಿ ಅವರನ್ನು ಆರ್ಥಿಕವಾಗಿ ಸಬಲಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಸಾಸಲಾಗಿದೆ. ಸಬ್ಸಿಡಿ ಸಂಸ್ಕೃತಿಯನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಿ ರೈತರ ಬೆಳೆಗಳಿಗೆ ಸೂಕ್ತ, ನ್ಯಾಯ ಸಮ್ಮತ ಮಾರುಕಟ್ಟೆ ದೊರಕಿಸಿಕೊಟ್ಟು ಆ ಮೂಲಕ ಸ್ವಾವಲಂಬಿ ರೈತ ಸಮಾಜದ ನಿರ್ಮಾಣ ಮಾಡುವುದೇ ಬಸಿಲ್‌ನ ಗುರಿ ಎನ್ನುತ್ತಾರೆ ಜಯಚೈತನ್ಯ ಪ್ರಭು.



ಬೆಳೆಗಾರರು ಮತ್ತು ಬಳಕೆದಾರರ ನಡುವೆ ಸೇತುವೆಯೊಂದನ್ನು ನಿರ್ಮಿಸಿ ಹೊಸದೊಂದು ಪಥವನ್ನು ಪ್ರವರ್ತಿಸುವುದು ಮುಂದಿರುವ ಗುರಿ. ನೀರು- ಮಣ್ಣು- ಗಾಳಿ ಸೇರಿದಂತೆ ಪ್ರಕೃತಿಯನ್ನು ಅತಿ ಹೆಚ್ಚು ಮಾಲಿನ್ಯಕ್ಕೊಳಪಡಿಸುತ್ತಿರುವವರು ನಗರಿಗರೇ. ಹೀಗಾಗಿ ಅವರು ರೈತರ ಉತ್ಪನ್ನಗಳನ್ನು ಹೆಚ್ಚಿನ ಬೆಲೆಕೊಟ್ಟು ಕೊಂಡುಕೊಳ್ಳುವ ಮೂಲಕ ಇದಕ್ಕೆ ಪರಿಹಾರ ಒದಗಿಸಬೇಕೆಂಬ ಪ್ರತಿಪಾದನೆ ಅವರದ್ದು. ಮೊದಲಿಂದಲೂ ಕೃಷಿ ಆಧಾರಿತ ಕೈಗಾರಿಕೆಗಳು ಭಾರತದಲ್ಲಿ ಬರಲೇ ಇಲ್ಲ. ಇದರ ಪರಿಣಾಮ ಇಡೀ ಕೈಗಾರಿಕೀಕರಣವೇ ವೈಫಲ್ಯದ ಹಾದಿ ಹಿಡಿದಿದೆ ಎನ್ನುವ ಪ್ರಭುಜಿ, ಇದಕ್ಕಾಗಿಯೇ ಬಸಿಲ್ ನೂತನ ಸಮುದಾಯ ಬೆಂಬಲಿತ ಕೃಷಿಯನ್ನು ಪರಿಚಯಿಸುತ್ತಿದೆ ಎನ್ನುತ್ತಾರೆ. ಈ ಕಾರ್ಯಕ್ರಮದಲ್ಲಿ ಬಳಕೆದಾರರು ಹಾಗೂ ಬೆಳೆಗಾರರ ಗುಂಪುಗಳನ್ನು ಒಂದೇ ವೇದಿಕೆಯಡಿ ತರುವ ಪ್ರಯತ್ನ ಮಾಡಲಾಗುತ್ತಿದೆ. ಮೊದಲೇ ನಿಗದಿಪಡಿಸಿದ ಬೆಲೆಗೆ ಬಳಕೆದಾರರ ಬೇಡಿಕೆಗನುಗುಣ ಬೆಳೆಯನ್ನು ಬೆಳೆದು ಕೊಡುವ ಒಪ್ಪಂದವನ್ನು ರೈತ ಈ ವೇದಿಕೆಯಲ್ಲಿ ಮಾಡಿಕೊಳ್ಳುತ್ತಾನೆ. ಇದರಿಂದ ಬಳಕೆದಾರರಿಗೂ ಗುಣಮಟ್ಟದ ಉತ್ಪನ್ನಗಳು ದೊರೆಯುತ್ತವೆ. ಬೆಳೆಗಾರನೂ ಮಾರುಕಟ್ಟೆ ಅಸ್ಥಿರತೆಯಿಂದ ಹೊರಬಂದು ಉತ್ತಮ ಬೆಲೆಯನ್ನು ಪಡೆಯಲು ಸಾಧ್ಯ ಎಂಬುದು ಅವರ ಪ್ರತಿಪಾದನೆ. ಇಂಥ ಹತ್ತು ಹಲವು ಕ್ರಿಯಾಶೀಲತೆಗೆ ಆ ಮನಮೋಹಕ ಸಾವಯವ ತೋಟ ಮಾದರಿಯಾಗಿ ನಿಂತಿದೆ.



ಸ್ವಾವಲಂಬನೆಯ ಗೀತಾಸಾರವನ್ನು ಸಾರುತ್ತಾ ಕೃಷ್ಣ ಪರಮಾತ್ಮ ಮಾತ್ರ ಆ ಸುಂದರ ಬೃಂದಾವನದ ನೆತ್ತಿಯ ಮೇಲಿನ ಮಂದಿರದಲ್ಲಿ ರಾಧೆಯೊಡನೆ ಮುರಲೀಗಾನ ನಿರತನಾಗಿದ್ದಾನೆ. ತೋಟದ ಒಳಹೊಕ್ಕಾಕ್ಷಣ ಅಂಥ ದಿವ್ಯ ಅನುಭೂತಿ ಪ್ರತಿಯೊಬ್ಬರದೂ ಆಗುತ್ತದೆ. ನೀವೊಮ್ಮೆ ಅದನ್ನು ಅನುಭವಿಸಬೇಕೆಂದುಕೊಂಡರೆ ಯಾವುದಕ್ಕೂ ಇರಲಿ ದೂರವಾಣಿ ಬರೆದಿಟ್ಟುಕೊಳ್ಳಿ: ೦೮೨೩೬-೨೫೦೩೯೩



‘ಲಾಸ್ಟ್’ಡ್ರಾಪ್: ಭಾರತದಲ್ಲಿ ಕೃಷಿಯೆಂದರೆ ಅದು ಕೇವಲ ವೃತ್ತಿಯಲ್ಲ. ಅದು ಬದುಕಷ್ಟೇ ಅಲ್ಲ. ಅದೊಂದು ಜೀವನ ಧರ್ಮ. ಅದೇ ಇಲ್ಲಿನ ಸಂಸ್ಕೃತಿಯ ಮರ್ಮ. ಇಂದಿಗೂ ಭಾರತವೊಂದೇ ಜಗತ್ತಿಗೆ ಸ್ವಚ್ಛ ಹಾಗೂ ಸ್ವಾವಲಂಬಿ ಕೃಷಿಯ ಮಾದರಿಯಾಗಿ ನಿಲ್ಲುತ್ತದೆ.

3 comments:

Unknown said...

ಅಲ್ಲಿಯ ಎಲ್ಲವೂ ನಿಜವಾಗಿಯೂ ಅದ್ಬುತವೇ.
ಉತ್ತಮ ಲೇಖನ

ಶಶಿಧರ ಹೆಗಡೆ ನಂದಿಕಲ್ said...

ottare blog edde untu maaraayre...

ಸುಮ said...

'bettaleyada bhoomige naachike kalisabeku!!!'-suparb!!.nimma baravanigeya shaili,vishayada vistaara adhuta.