ಅದಿಲ್ಲದಿದ್ದರೆ ಅತ್ಯಂತ ವೈಜ್ಞಾನಿಕ ಎಂದು ಹೇಳಿಕೊಳ್ಳುವ, ಕೋಟ್ಯಂತರ ರೂ.ಗಳನ್ನು ಸುರಿದು ಮಾಡುವ ಮೋಡಬಿತ್ತನೆಯಿಂದ ನಮಗೆ ಬೇಕೆಂದಾಗಲೆಲ್ಲ, ಬೇಕೆನಿಸಿದಲ್ಲೆಲ್ಲ ಮಳೆ ಸುರಿಸಿಕೊಳ್ಳಲು ಸಾಧ್ಯವಾಗಿಲ್ಲವೇಕೆ ? ಶತಮಾನಗಳಿಂದಲೂ ಮಳೆಯನ್ನು ಕಟ್ಟಿ ಕರೆತರುವ ನಿಟ್ಟಿನಲ್ಲಿ ಪ್ರಯತ್ನಗಳು ಆಗುತ್ತಲೇ ಇವೆ. ಒಂದೆರಡಲ್ಲ ಇಂಥ ನೂರಾರು ಪ್ರಯೋಗಗಳಿಗೆ ಈ ಭೂಮಂಡಲ ಸಾಕ್ಷಿಯಾಗಿದೆ. ಒಂದೊಮ್ಮೆ ಅವೆಲ್ಲವೂ ಸಾಕಾರಗೊಂಡಿದ್ದರೆ ಕಾರ್ಪೊರೇಷನ್ ವಾಲ್ವ್ ತಿರುಗಿಸಿಕೊಂಡು ನೀರು ಬಿಟ್ಟುಕೊಳ್ಳುವ ಹಾಗೆ ಆಗಸಕ್ಕೊಂದು ಪೈಪ್‌ಲೈನ್ ಎಳೆದು ಅಲ್ಲಿಂದ ಬೇಕಾದಾಗಲೆಲ್ಲ ಮಳೆ ನೀರನ್ನು ನಮ್ಮ ಮನೆಯಂಗಳಕ್ಕೆ ಮಾತ್ರ ಹಾಯಿಸಿಕೊಂಡು ಬಿಡುತ್ತಿದ್ದೆವೇನೋ. ಅಜ್ಜಿ ಪುಣ್ಯಕ್ಕೆ ಅದೊಂದು ಮಾತ್ರ ಅಜೀಬಾತ್ ದಕ್ಕದೇ ಹೋಗಿದೆ. ಇಲ್ಲದಿದ್ದರೆ ಅಂತರ್ಜಲಕ್ಕೆ ಒದಗಿರುವ ಸ್ಥಿತಿಯೇ ಇಂದು ನಭದ ನೀರಿನ ವಿಚಾರದಲ್ಲೂ ನಿರ್ಮಾಣವಾಗಿರುತ್ತಿತ್ತು. ಮೇಲಿಂದ ಮೋಡ, ಮಳೆಯುಳಿಸಿ ಎಂಬ ಅಭಿಯಾನಗಳೊಂದಿಗೆ ಒಂದಷ್ಟು ಎನ್‌ಜಿಒಗಳು ಹುಟ್ಟಿಕೊಂಡಿರುತ್ತಿದ್ದವು. ಅದಕ್ಕೆ ವಿಶ್ವಸಂಸ್ಥೆಯ ಮಟ್ಟದಲ್ಲೊಂದು ಜಾಗತಿಕ ಸಮ್ಮೇಳನವೇರ್ಪಟ್ಟಿರುತ್ತಿತ್ತು. ಭೀಷಣ ಭಾಷಣಗಳು ಎಲ್ಲೆಡೆ ಮೊಳಗಿರುತ್ತಿದ್ದವು. ಫಾರಿನ್ ಫಂಡ್‌ಗಳು ಎಲ್ಲೆಂದರಲ್ಲಿ ನೀರಿಗಿಂತ ಹೆಚ್ಚಾಗಿ ಹರಿದಾಡುತ್ತಿದ್ದವು...... ಸದ್ಯ, ಬಚಾವ್ ಆಗಿದ್ದೇವೆ, ಇವೆಲ್ಲ ಆಗಿಲ್ಲ ಬಿಡಿ.
ಆದರೆ, ೧೯೪೬ರಲ್ಲಿ ಮೊಟ್ಟ ಮೊದಲ ಬಾರಿಗೆ ನಡೆದ ಪ್ರಯೋಗವೊಂದು ಇಡೀ ವಿಶ್ವದ ಗಮನವನ್ನೇ ಸೆಳೆದದ್ದು ನಿಜ. ಅಮೆರಿಕದ ವಿನ್ಸೆಂಟ್ ಶೇಫರ್ ಎಂಬಾತ ಮೋಡಗಳನ್ನು ತಡೆದು ನಿಲ್ಲಿಸಿ ಮಳೆ ಸುರಿಸಿಕೊಳ್ಳುವ ತಾತ್ಕಾಲಿಕ ಪ್ರಯೋಗವೊಂದರಲ್ಲಿ ಸ್ವಲ್ಪ ಮಟ್ಟಿಗಿನ ಯಶಸ್ಸನ್ನು ಕಂಡುಕೊಂಡ. ಆಗಸವೆಂಬೋ ಬಯಲಲ್ಲಿ ಮೋಡಗಳ ಬೀಜ ಬಿತ್ತಿ ಮಳೆಯ ಬೆಳೆಯನ್ನು ತೆಗೆದ ಆತನ ಈ ಸಾಧನೆಯ ಹಿಂದೆ ಅತ್ಯಂತ ಕುತೂಹಲಕಾರಿ ಕಥೆಯೊಂದು ತೆರೆದುಕೊಳ್ಳುತ್ತದೆ. ಶೇಫರ್ ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯ. ಬಡ ಕುಟುಂಬದ ಹಿನ್ನೆಲೆಯಿಂದ ಬಂದವನು. ಹೆಚ್ಚಿಗೆ ಓದಲಾಗಲಿಲ್ಲ. ಅವನು ಓದಿದ್ದರೆ ಸೋದರಿಯರನ್ನು ಓದಿಸಲಾಗುತ್ತಿರಲಿಲ್ಲ. ಓದಿಗೂ, ಜ್ಞಾನಕ್ಕೂ, ಸಾಧನೆಗೂ ಅರ್ಥಾತ್ ಸಂಬಂಧವಿಲ್ಲ ಬಿಡಿ. ಶೇಫರ್ ವಿಚಾರದಲ್ಲೂ ಹೀಗೆಯೇ ಆದದ್ದು. ೧೫ನೇ ವರ್ಷಕ್ಕೆ ಶಾಲೆ ಬಿಟ್ಟವನು ಹೊಟ್ಟೆ ಪಾಡಿಗೆ ಸೇರಿಕೊಂಡದ್ದು ಎಲೆಕ್ಟ್ರಿಕಲ್ ಸಂಸ್ಥೆಯೊಂದರಲ್ಲಿ ಆಪರೇಟರ್ ಆಗಿ. ಬಿಡುವಿನ ವೇಳೆಯನ್ನು ಸುಮ್ಮನೆ ಕಳೆಯುವ ಜಾಯಮಾನದವನಲ್ಲ ಶೇಫರ್. ಹೂದೋಟ ಬೆಳೆಸುವುದು ನೆಚ್ಚಿನ ಹವ್ಯಾಸ. ಜತೆಗೊಂದಿಷ್ಟು ಓದು. ಒಂದು ರೀತಿಯಲ್ಲಿ ಆತ ಪುಸ್ತಕದ ಹುಳು. ಪುಸ್ತಕ ಇಲ್ಲದಿದ್ದರೆ ಮನೆಯ ಮುಂದಿನ ಚಿಕ್ಕ ಜಾಗದಲ್ಲಿ ಏನಾದರೊಂದು ಮಾಡುತ್ತ ಇದ್ದಾನೆಂದೇ ಅರ್ಥ. ಅಂತೂ ಹತ್ತಾರು ಬಗೆಯ ಹೂಗಿಡಗಳನ್ನು ಬೆಳೆಸಿದವನಿಗೆ ಅದಕ್ಕೆ ತಕ್ಕಷ್ಟು ನೀರೊದಗಿಸಲಾಗದ ಕೊರಗು ಇದ್ದೇ ಇತ್ತು. ಮಳೆ ಬಂದಾಗಲೆಲ್ಲ ಗಿಡಗಳು ಚಿಗಿತುಕೊಳ್ಳುತ್ತಿದ್ದವು. ಮಳೆ ಹೋದ ಮೇಲೆ ಮತ್ತದೇ ಕತೆ.
ಈತ ಕೆಲಸ ಮಾಡುತ್ತಿದ ಎಲೆಕ್ಟ್ರಿಕಲ್ ಸಂಸ್ಥೆಯಲ್ಲೇ ಖ್ಯಾತ ವಿಜ್ಞಾನಿ, ನೊಬೆಲ್ ಪುರಸ್ಕೃತ ಇರ್ವಿಂಗ್ ಮ್ಯುರ್ ಉನ್ನತ ಸಂಶೋಧನೆಯೊಂದರಲ್ಲಿ ತೊಡಗಿದ್ದರು. ಅವರು ಸದಾ ಪುಸ್ತಕದೊಳಗೆ ಮುಖ ತೂರಿಸಿಕೊಂಡಿರುತ್ತಿದ್ದುದು ಶೇಫರ್‌ನಲ್ಲಿ ಎಂಥದೋ ಅಸೂಯೆ ಹುಟ್ಟಿಸುತ್ತಿತ್ತು. ಯಾವಾಗಾದರೊಮ್ಮೆ ಈತ ಕತ್ತೆತ್ತಿ ತನ್ನನ್ನು ನೋಡಬಾರದೇ ? ತನ್ನನ್ನು ಜತೆಗೆ ಕರೆದು ಒಂದಷ್ಟು ಕೆಲಸ ಹೇಳಬಾರದೇ ಎನ್ನಿಸುತ್ತಿತ್ತು ಆತನಿಗೆ. ಕೊನೆಗೂ ಆ ದಿನ ಬಂತು. ಮ್ಯುರ್‌ಗೆ ಶೇಫರ್‌ನ ಕಾರ್ಯದಕ್ಷತೆ, ಪ್ರಾಮಾಣಿಕತೆ ಇಷ್ಟವಾಯಿತು. ಕೊನೆಯವರೆಗೂ ಮ್ಯುರ್ ಸಂಶೋಧನೆಗೆ ಉಪಕರಣಗಳನ್ನು ಒದಗಿಸಿದ್ದು ಶೇಫರ್‌ನೇ. ಕೊನೆಕೊನೆಗೆ ಎಷ್ಟರ ಮಟ್ಟಿಗೆ ಮ್ಯುರ್ ಆತನನ್ನು ಅವಲಂಬಿಸಿದರೆಂದರೆ ಅದು ಸಂಶೋಧನೆಯಿರಲಿ, ಮತ್ಯಾವುದೇ ಕೆಲಸವಿರಲಿ ಶೇಫರ್ ಬೆನ್ನ ಹಿಂದೆ ಇರಲೇಬೇಕು ಎನ್ನುವಂತಾಯಿತು.
ಈ ನಡುವೆ, ಎರಡನೇ ಮಹಾಯುದ್ಧ ಘೋಷಣೆಯಾಗಿ ಇಡೀ ವಿಶ್ವ ಇಬ್ಭಾಗವಾಗಿತ್ತು. ‘ಗ್ಯಾಸ್ ಮಾಸ್ಕ್’ ಗೆ ಎಲ್ಲೆಲ್ಲೂ ಬೇಡಿಕೆ. ಜತೆಗೊಂದಿಷ್ಟು ಕಾರ್ಯಾಚರಣೆಗಾಗಿ ಹೊಗೆಯುಗುಳುವ ರಾಸಾಯನಿಕಗಳ ಸೃಷ್ಟಿಗೆ ಸೇನೆ ಕೋರಿತ್ತು. ಮ್ಯುರ್, ಶೇಫರ್ ಇಬ್ಬರಿಗೂ ಕೆರೆದುಕೊಳ್ಳಲೂ ಪುರುಸೊತ್ತಿಲ್ಲ. ಜತೆ ಜತೆಯೇ ದುಡಿಯುತ್ತಿದ್ದರೂ ಶೇಫರ್‌ನ ತುಡಿತ, ತಾನೇ ಏನಾದರೂ ಸಾಸಬೇಕು; ಹೊಸತೊಂದನ್ನು ಮಾಡಿ ತೋರಿಸಿ ಭೇಷ್ ಎನ್ನಿಸಿಕೊಳ್ಳಬೇಕೆಂಬುದು. ಯೋಚನೆಗೇನೂ ಬರವಿರಲಿಲ್ಲ. ಆದರೆ, ಯುದ್ಧಭೂಮಿಯಲ್ಲಿ ಮನುಷ್ಯ ನಿರ್ಮಿತ ಭೀಕರ ಬರಗಾಲ. ಆಗಸದಲ್ಲಿ ಕಟ್ಟಿದ ಹಿಮವನ್ನು ಉದ್ದೇಶಪೂರ್ವಕ ನಿವಾರಿಸಲಾಗುತ್ತಿತ್ತು. ಹೀಗಾಗಿ, ಸುಡುಸುಡು ಸುಡುತ್ತಿತ್ತು ಭೂಮಿ. ಅಂಥ ತಾಪಮಾನದಲ್ಲಿ ಗಿಡಗಳ ಕತೆ ಏನಾಯಿತೋ ಎಂಬ ಚಿಂತೆಯೂ ನಡು ನಡುವೆ ಕಾಡುತ್ತಿತ್ತು. ಯುದ್ಧಭೂಮಿಗೆ ವಿಮಾನದಲ್ಲಿ ವೀಕ್ಷಣೆಗಾಗಿ ಮ್ಯುರ್ ಜತೆ ಹೋಗುತ್ತಿದ್ದಾಗಲೆಲ್ಲ ಹಾದು ಹೋಗುವ ಮೋಡಗಳನ್ನು ಕಂಡು ಹೊಟ್ಟೆ ಉರಿಸಿಕೊಳ್ಳುತ್ತಿದ್ದ ಶೇಫರ್. ಈ ಮೋಡಗಳೇಕೆ ಇಲ್ಲಿಯೇ ನಿಂತು ಮಳೆ ಸುರಿಸಬಾರದು. ತನ್ನ ಗಿಡಗಳಿಗೆ ನೀರುಣಿಸಬಾರದು ಎಂದುಕೊಳ್ಳುತ್ತಿದ್ದ. ‘ಎಲ್ಲಿ ಓಡುವಿರಿ, ನಿಲ್ಲಿ ಮೋಡಗಳೆ, ನಾಲ್ಕು ಹನಿಯ ಚೆಲ್ಲಿ’ ಎಂದು ಹಾಡಿಕೊಳ್ಳುತ್ತಿದ್ದನೇನೋ.
ಅಂಥದೇ ಒಂದು ದಿನ ಮ್ಯುರ್ ಜತೆ ವಿಮಾನದಲ್ಲಿ ಹೊರಟಿದ್ದ. ಎಂದಿನಂತೆ ಯುದ್ಧ ಭೂಮಿಯ ಮೇಲಿನ ಹಿಮ ನಿವಾರಣೆಯ ಕೆಲಸ ಮಾಡುತ್ತಿದ್ದರವರು. ಅದಿಲ್ಲದಿದ್ದರೆ ಸೈನಿಕರ ವೈಮಾನಿಕ ದಾಳಿಗೆ ಅದು ಅಡ್ಡಿ ಉಂಟು ಮಾಡುತ್ತಿತ್ತು. ಇಂಗಾಲದ ಡೈ ಆಕ್ಸೈಡ್ ಅವರ ಸಂಶೋಧನೆಯಲ್ಲಿ ಬಳಕೆಯಾಗುತ್ತಿತ್ತು. ಇಂಗಾಲದ ಡೈ ಆಕ್ಸೈಡ್ ಹಿಮವನ್ನು ಕರಗಿಸುತ್ತದಾದರೆ ಮೋಡಗಳನ್ನೇಕೆ ಕರಗಿಸಬಾರದು ಎಂಬ ಪ್ರಶ್ನೆ ಶೇಫರ್‌ನ ತಲೆಯಲ್ಲಿ ಸುಳಿದು ಹೋಯಿತು. ಸಮಯ ಸಿಕ್ಕಾಗ ತಣ್ಣಗೆ ಹೀಗೊಂದು ಪ್ರಯೋಗ ಮಾಡಿ ಬಿಡಬೇಕು ಎಂದು ಕಾಯುತ್ತಿದ್ದ. ಆವತ್ತು ಮೆಸಾಚ್ಯುಸೆಟ್ಸ್‌ನ ಪಶ್ಚಿಮದ ಗ್ರೆಲಾಕ್ ಪರ್ವತ ಶ್ರೇಣಿಯ ಮೇಲೆ ಹಾರುತ್ತಿತ್ತು ವಿಮಾನ. ಮೋಡಗಳು ಭರದಿಂದ ಓಡುತ್ತಿದ್ದವು. ಸುಮ್ಮನೆ ಕುಳಿತಿದ್ದ ಶೇಫರ್‌ಗೆ ಏನೋ ಚಡಪಡಿಕೆ. ಮ್ಯುರ್‌ರತ್ತ ನೋಡಿದ. ಅವರು ದೂರದರ್ಶಕದಿಂದ ಮೋಡಗಳತ್ತ ಕಣ್ಣು ನೆಟ್ಟು ಕುಳಿತಿದ್ದರು. ಇದೇ ಸುಸಮಯವೆಂದುಕೊಂಡ ಶೇಫರ್ ಸಂಶೋಧನೆಗಾಗಿ ಸಂಗ್ರಹಿಸಿಟ್ಟಿದ್ದ ಇಂಗಾಲದ ಡೈ ಆಕ್ಸೈಡ್ ಅನ್ನು ಓಡುವ ಮೋಡಗಳ ಮೇಲೆ ಚೆಲ್ಲಿಯೇ ಬಿಟ್ಟ. ಹತ್ತೇ ನಿಮಿಷ... ಮ್ಯುರ್ ನೋಡುತ್ತಲೇ ಇದ್ದರು. ಅದೇ ಮೋಡಗಳು... ಕರಗಿದವು. ಕರಕರಗಿ ಹನಿಗಳಾದವು. ಹನಿಗಳು ಹಾರುತ್ತಾ ಭೂಮಿಯತ್ತ ಭರದಿಂದ ನುಗ್ಗಿದವು. ಹೌದು, ಮಳೆ ಸುರಿದುಹೋಗಿತ್ತು. ಅದೇ ಮೋಡಬಿತ್ತನೆಯ ಸಂಶೋಧನೆಗೆ ಕಾರಣವಾಯಿತು.
ನಂತರದ ದಿನಗಳಲ್ಲಿ ಬರ್ನಾರ್ಡ್ ವೋನೆಗಟ್ ಎಂಬುವವರು ಇದನ್ನೇ ಉನ್ನತೀಕರಿಸಿ ಸಿಲ್ವರ್ ಅಯೋಡೈಡ್ ಬಳಕೆಯನ್ನು ಮೋಡಬಿತ್ತನೆಯಲ್ಲಿ ಜಾರಿಗೆ ತಂದರು. ಆ ಬಳಿಕ ಇಂಥ ಒಂದಿಲ್ಲೊಂದು ಪ್ರಯೋಗಗಳು ನಡೆಯುತ್ತಲೇ ಇವೆ. ಇದೀಗ ಮಳೆ ಬಾರದಿದ್ದರೂ ಮೋಡಬಿತ್ತನೆ ಮಾಡುತ್ತೇವೆ. ಕಾಳ್ಗಿಚ್ಚು, ಭೀಕರ ಅಗ್ನಿ ದುರಂತಗಳ ಸಂದರ್ಭದಲ್ಲೂ ಮೋಡಬಿತ್ತನೆಗೆ ಮುಂದಾಗಿದ್ದೇವೆ. ವಿಶ್ವದ ಸರಿಸುಮಾರು ಐವತ್ತಕ್ಕೂ ಹೆಚ್ಚು ದೇಶಗಳಲ್ಲಿ ಇಂಥ ತಾತ್ಕಾಲಿಕ ಮಳೆ ಸುರಿಸಿಕೊಳ್ಳುವಿಕೆ ನಡೆದೇ ಇದೆ. ಚೀನಾದಲ್ಲಂತೂ ಇದು ಎಷ್ಟು ಜನಪ್ರಿಯ ಎಂದರೆ ಒಂದು ಪ್ರಾಂತ್ಯದ ಮೋಡಗಳನ್ನು ಇನ್ನೊಂದು ಪ್ರಾಂತ್ಯದವರು ಕದ್ದು ಹೋಗುತ್ತಿದ್ದಾರೆ. ಅದಕ್ಕಾಗಿ ಕಾವಲು ಏರ್ಪಾಡೂ ನಡೆದಿದೆ. ಬಹುಶಃ ನಮ್ಮಲ್ಲಾಗಿದ್ದರೆ ಮೋಡಗಳಿಗೊಂದೊಂದು ಹೆಸರಿಟ್ಟು ಅದಕ್ಕಾಗಿ ಅಕ್ಕ ಪಕ್ಕದ ರಾಜ್ಯಗಳು ಕಿತ್ತಾಟಕ್ಕಿಳಿದು, ಇಷ್ಟರಲ್ಲಾಗಲೇ ನ್ಯಾಯಾಕರಣವೂ ರಚನೆಯಾಗಿರುತ್ತಿತ್ತೇನೋ. ಇಷ್ಟೆಲ್ಲ ಇದ್ದರೂ ಮೋಡ ಬಿತ್ತನೆ ಮಾಡಿದ ತಕ್ಷಣ ಇಂತಲ್ಲೇ, ಇಂತಿಷ್ಟೇ ಮಳೆ ಸುರಿದೇ ಬಿಡುತ್ತದೆಂಬ ಖಚಿತತೆ ಇಲ್ಲ. ಎಷ್ಟಾದರೂ ಅದು ಪ್ರಕೃತಿಯ ಭಾಗವಲ್ಲವೇ ? ಪ್ರಕೃತಿ ಎಂದಾದರೂ ತನ್ನ ಗುಟ್ಟು ಬಿಟ್ಟುಕೊಟ್ಟಿದ್ದಿದೆಯೇ?
‘ಲಾಸ್ಟ್’ಡ್ರಾಪ್: ಭಾರತದಲ್ಲಿ ಮೊದಲ ಬಾರಿಗೆ ಮೋಡ ಬಿತ್ತನೆಗಿಳಿದ ಹೆಗ್ಗಳಿಕೆ ಕರ್ನಾಟಕದ್ದು. ೨೦೦೩ರಲ್ಲಿ ಎಚ್.ಕೆ.ಪಾಟೀಲ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಆಪರೇಷನ್ ವರುಣ ಹೆಸರಲ್ಲಿ ಗದಗ, ಧಾರವಾಡ ಸುತ್ತಮುತ್ತ ಮೋಡಬಿತ್ತನೆ ನಡೆಯಿತಾದರೂ ಅಷ್ಟು ಯಶ ಕಂಡಿರಲಿಲ್ಲ.
No comments:
Post a Comment