Sunday, July 19, 2009

ವರುಣನ ಒಲಿಸಲು ನೂರೆಂಟು ಆಚರಣೆ

ಮಳೆ ಎಂದರೇ ಹಾಗೆಯೇ. ಅದು ಬರಬೇಕಾದಾಗ ಬಂದರೇ ಸರಿ. ಇಲ್ಲದಿದ್ದರೆ ಸಂಕಷ್ಟ ಪರಿಪರಿ. ಹೀಗಾಗಿ ಏನಾದರೂ ಮಾಡಿ ಮಳೆಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಅದು ವೈಜ್ಞಾನಿಕವೋ, ನಂಬಿಕೆಯೋ ಎಂಬುದೆಲ್ಲ ನಗಣ್ಯ. ಒಮ್ಮೆ ಮಳೆ ಬಂದರೆ ಸಾಕು ಎಂದುಕೊಳ್ಳುತ್ತೇವೆ.
ಇಂಥ ಅನಿವಾರ್ಯತೆಯ ಪರಿಣಾಮವೇ, ಕಪ್ಪೆಗಳ ಮದುವೆ, ಕತ್ತೆಗಳ ಮೆರವಣಿಗೆ ಮತ್ತಿತರ ಗ್ರಾಮೀಣ ಆಚರಣೆಗಳು. ಮಳೆಗಾಲ ಸುಭಿಕ್ಷುವಾಗಲಿ ಎಂಬ ಕಾರಣಕ್ಕೆ ಹಳ್ಳಿಗಳಲ್ಲಿ ಆಚರಣೆಯಲ್ಲಿರುವ ಕೆಲ ಪದ್ಧತಿಗಳು ಸಾಕಷ್ಟು ಕುತೂಹಲ ಮೂಡಿಸುತ್ತವೆ.
ಜಾನಪದೀಯರಲ್ಲಿ ಬಹುಮುಖ್ಯ ಮಳೆ ಕರೆಯುವ ಆಚರಣೆಯೆಂದರೆ ಜೋಕುಮಾರನ ಆಹ್ವಾನ. ಇಂದಿಗೂ ಉತ್ತರ ಕರ್ನಾಟಕದ ಬಯಲು ಸೀಮೆಯ ಭಾಗದಲ್ಲಿ ಜೋಕುಮಾರ ಹುಟ್ಟಿದ ನಂತರವೇ ಮಳೆ ಬೀಳುತ್ತದೆ ಎಂಬ ನಂಬುಗೆ ಗಟ್ಟಿಯಾಗಿದೆ. ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಜೋಕುಮಾರ ಅಲ್ಲಿನ ಬದುಕಿನಲ್ಲಿ ಹಾಸು ಹೊಕ್ಕಾಗಿದ್ದಾನೆ. ಜೋಕುಮಾರನ ಪದಗಳಲ್ಲೇ ಇದು ಕಂಡು ಬರುತ್ತದೆ. ಜನರನ್ನು ಬರ ಇನ್ನಿಲ್ಲದೇ ಕಾಡುತ್ತಿರುವಾಗ, ಪೈರೆಲ್ಲ ಒಣಗಿ ನಿಂತಾಗ ಶಿವನ ಮೊರೆಯೊಂದೇ ದಾರಿಯಂತೆ. ಆಗ ಶಿವನಾದೇಶದಂತೆ ಜೋಕುಮಾರ ಕಚ್ಚೆ ಹಾಕಿ, ಮೀಸೆ ತಿರುವಿ, ಹೂವು ಮುಡಿದು, ನೀಲಿ ಕುದುರೆ ಹತ್ತಿ, ತನ್ನ ಶಲ್ಯವನ್ನು ಬೀಸುತ್ತಾ ಮಳೆಯನ್ನು ತನ್ನೊಂದಿಗೆ ಕರೆದುಕೊಂಡು ಬರುತ್ತಾನಂತೆ. ಶಿವನೊಲಿದರೆ ಅವನ ಜಟಾಬಂದಿಯಾಗಿರುವ ಗಂಗೆಯ ಕೃಪೆ ಧರೆಯಮೇಲಾದೀತು ಎಂಬ ನಿರೀಕ್ಷೆ ಹಳ್ಳಗರದ್ದು.
ನ್ಯಾಯ, ನೀತಿ, ಧರ್ಮಗಳು ಕಡಿಮೆಯಾಗಾದ ದೇವತೆಗಳು ಮುನಿದು ಧರೆಗೆ ಬರವನ್ನು ಶಾಪದ ರೂಪದಲ್ಲಿ ನೀಡುತ್ತಾನೆ ಎಂಬುದು ಜನಪದರ ಭಾವನೆ. ಹೀಗಾಗಿ ಇಂಥ ಸಂದರ್ಭದಲ್ಲಿ ದೇವರನ್ನೊಲಿಸಿಕೊಳ್ಳಲು ಪುಣ್ಯ ಕಾರ್ಯ, ದೇವತಾ ಪೂಜೆಗಳಲ್ಲಿ ತೊಡಗಿಕೊಳ್ಳುವುದು ಸಾಮಾನ್ಯ. ದಾನ, ಧರ್ಮ, ಅನ್ನ ಸಂತರ್ಪಣೆಯೂ ಇದರಲ್ಲಿ ಸೇರಿವೆ.
ಇನ್ನು ಕೆಲವೆಡೆ ವೈದಿಕ ಪರಂಪರೆಯಲ್ಲಿ ಮಹಾಭಾರತದ ವಿರಾಟಪರ್ವದ ಪಾರಾಯಣದ ಕ್ರಮವಿದೆ. ರಾತ್ರಿಯಿಡೀ ವಿರಾಟಪರ್ವ ಪ್ರಸಂಗದ ನಾಟಕಾಭಿನಯವೂ ಇರುತ್ತದೆ. ವಿರಾಟರಾಜನಿಗೆ ಧರ್ಮರಾಯ ಧರ್ಮ ಬೋಧನೆ ಮಾಡುವ ಭಾಗ ಅದರಲ್ಲಿರುವುದುರಿಂದ ಆ ಧರ್ಮೋಪದೇಶ ಮಳೆ ತರಿಸುತ್ತದೆ ಎಂಬ ಆಶಯ ಇದರ ಹಿಂದಿರಬಹುದು.
ಮತ್ತೊಂದು ವಿಚಿತ್ರ ನಂಬಿಕೆಯೆಂದರೆ ತೊನ್ನಿದ್ದವರನ್ನು ಹೂತರೆ ಮಳೆಯಾಗುವುದಿಲ್ಲ ಎಂಬುದು. ಬರ ಬಿದ್ದ ಸಂದರ್ಭದಲ್ಲಿ ಅಂಥ ಶವಗಳನ್ನು ಮತ್ತೆ ಹೊರತೆಗೆದು ಉಪ್ಪು ಹಾಕಿ ಹೂಳುತ್ತಾರೆ. ಉಪ್ಪು ಹಾಕಿದರೆ ಶವ ಬೇಗ ಕರಗುತ್ತದೆ. ತಕ್ಷಣ ಮಳೆಯಾಗುತ್ತದೆ ಎನ್ನಲಾಗುತ್ತದೆ. ಸಾವಿಗೆ ಸಂಬಂಸಿದ ಮತ್ತೊಂದು ಪದ್ಧತಿಯೆಂದರೆ ಸ್ಮಶಾನದಲ್ಲಿ ದೇವರ ಮೆರವಣಿಗೆ. ಕೆಲವೊಮ್ಮೆ ದೇವರ ಹೊರಡಿಸಿಕೊಂಡು ಸುಡುಗಾಡು ಗುಡ್ಡೆ ಸೋಸಿ ತೊನ್ನಿರುವವರ ಶವ ತೆಗೆದು ಸುಟ್ಟು ಹಿಂತಿರುಗುತ್ತಾರೆ. ಇದೇ ರೀತಿ ಬರಗಾಲ ಬಸಪ್ಪನನ್ನು ಊರಿಂದ ಓಡಿಸುವ ಕ್ರಮವೂ ಇದೆ.
ವಿಗ್ರಹಗಳನ್ನು ನೀರಿನಲ್ಲಿ ಮುಳುಗಿಸಿಡುವುದು, ದೇವರಿಗೆ ಪರ್ಜನ್ಯ ಮಾಡಿಸುವುದು ಇಂದಿಗೂ ಪ್ರಚಲಿತದಲ್ಲಿರುವ ಕ್ರಮ. ದೇವರ ಅಭಿಷೇಕದ ನೀರನ್ನು ಊರ ಮುಂದಿನ ಕೆರೆಗೆ ತಲುಪಿಸುವುದು, ಗ್ರಾಮದ ಓಣಿಗಳಲ್ಲೆಲ್ಲ ತೀರ್ಥ ಹರಿಸುವುದೂ ರೂಢಿಯಲ್ಲಿದೆ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇರಬಹುದು. ಕಾದ ಭೂಮಿಯ ಮೇಲೆ ನೀರು ಹರಿಯುವುದರಿಂದ ಅದು ಆವಿಯಾಗಿ ಉಷ್ಣತೆಯ ಪ್ರಮಾಣ ಕುಸಿಯುವುದಲ್ಲದೇ ಆವಿ ಮೇಲಕ್ಕೆ ಹೋಗಿ ಮೋಡ ತಂಪಾಗಿ ಮಳೆಯಾಗುವ ಸಾಧ್ಯತೆ ಇದೆ.
ಮಲೆನಾಡಿನ ಕೆಲ ಜನಾಂಗಗಳಲ್ಲಿ ಆಚರಣೆಯಲ್ಲಿರುವ ಮಳೆಮಲ್ಲಪ್ಪನ ಆಚರಣೆ ವಿಶೇಷವಾದದ್ದು. ಜೇಡಿ ಮಣ್ಣಿನಿಂದ ಮಳೆರಾಯನ ಮೂರ್ತಿ ಮಾಡಲಾಗುತ್ತದೆ. ಚಿಕ್ಕ ಹುಡುಗರು ಇದನ್ನು ಹೊತ್ತು ಮನೆ ಮನೆಗೆ ತೆರಳುತ್ತಾರೆ. ಮನೆಯೊಡತಿ ಆ ಬಾಲಕರ ತಲೆಗೆ ಒಂದು ಚಮಚ ಎಣ್ಣೆ ಹಾಕಿ, ಆತನ ತಲೆಯ ಮೇಲೆ ಒಂದು ಕೊಡ ನೀರು ಸುರಿದು, ಹಣ, ಅಕ್ಕಿ ಕೊಟ್ಟು ಕಳುಹಿಸುತ್ತಾಳೆ.
ಎಕ್ಕೆ ಎಲೆಗೆ ಎಣ್ಣೆ ಹಚ್ಚಿ ಕಾಯಿಸಿ, ನಂತರ ನೀರು ತುಂಬಿದ ತಾಮ್ರದ ಚೊಂಬಿನ ಬಾಯಿಗೆ ಅಂಟಿಸಿ ತಲೆಕೆಳಗಾಗಿ ಹಿಡಿದುಕೊಳ್ಳುವ ಆಚರಣೆಯೂ ಇದೆ. ಸಗಣಿ ಉಂಡೆ ಮಾಡಿ ಅದಕ್ಕೆ ಗರಿಕೆಯನ್ನು ಸಿಕ್ಕಿಸಿ ಪೂಜಿಸುವುದೂ ಇದೆ. ಇವೆಲ್ಲವೂ ಮಳೆರಾಯನ ಪ್ರತೀಕ. ಎಲ್ಲ ಸಂಪ್ರದಾಯಗಳು ಮುಗಿದ ಬಳಿಕ ಊರೆಲ್ಲ ಸುತ್ತಿ ಆದ ಮೇಲೆ ಮಲ್ಲಪ್ಪನನ್ನು ಬಾವಿಯಲ್ಲಿ ವಿಸರ್ಜಿಸುತ್ತಾರೆ.
ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಚಂದ್ರಾರಾಧನೆ ವಿಶೇಷ. ಹುಣ್ಣಿಮೆಯ ದಿನ ಅಂಗಳ ಸಾರಿಸಿ, ಕಲಶವಿಟ್ಟು ಅದರ ಸುತ್ತಲೂ ರಂಗುರಂಗಿನ ರಂಗೋಲಿಬಿಡಿಸಿ, ಸಾಕಷ್ಟು ವೈವಿಧ್ಯದ ಹೂವುಗಳಿಂದ ಪೂಜೆ ಮಾಡಲಾಗುತ್ತದೆ. ಪೂಜೆಯ ಬಳಿಕ ಪ್ರಸಾದವಾಗಿ ಅಕ್ಕಿ ಅಥವಾ ರಾಗಿಯ ರೊಟ್ಟಿಯನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ಯಾರಾದರೊಬ್ಬರು (ಸಾಮಾನ್ಯವಾಗಿ ಹುಡುಗರು) ರೊಟ್ಟಿಯನ್ನು ಕದ್ದು ಯಾರಿಗೂ ಸಿಗದಂತೆ ತಪ್ಪಿಸಿಕೊಂಡು ಓಡಿ ಹೋಗಿ ತಿಂದು ಬರುತ್ತಾರೆ. ನಂತರ ಸರತಿಯಲ್ಲಿ ಬಂದು ಪುನಃ ರೊಟ್ಟಿ ಸ್ವೀಕರಿಸುತ್ತಾರೆ. ‘ಕದ್ದ ರೊಟ್ಟಿ ಬೇರೆ, ದೇವರ ಪ್ರಸಾದ ಬೇರೆ’ ಎಂಬ ಗಾದೆ ಮಾತು ಇಲ್ಲಿಂದಲೇ ಹುಟ್ಟಿದ್ದು. ನಂತರ ಎಲ್ಲರೂ ಸೇರಿ ರಂಗವಲ್ಲಿಯ ಸುತ್ತ ಹಾಡಿಕೊಳ್ಳುತ್ತ ಕುಣಿಯುತ್ತಾರೆ. ಚಿಕ್ಕಮಕ್ಕಳ ಮದುವೆ ಆಟವೂ ನಡೆಯುತ್ತದೆ. ಈ ಆಚರಣೆ ಮುಗಿದ ಮರುದಿನ ಮಳೆ ಬಂದೇ ಬರುತ್ತದೆ ಎಂಬ ನಂಬಿಕೆ ಇದೆ.
ಇನ್ನು ಊರ ದೇವರ ಉತ್ಸವ ಮಾಡುವುದು, ವಿಶೇಷ ರಥೋತ್ಸವಗಳನ್ನು ಹಮ್ಮಿಕೊಳ್ಳುವುದು, ದೇವರಿಗೆ ಓಕುಳಿ ಮಾಡಿಸುವುದರಿಂದಲೂ ಮಳೆ ಬರುತ್ತದೆ ಎಂಬ ಲೋಕೋಕ್ತಿ ಇದೆ. ಒಟ್ಟಾರೆ ಮಳೆ ಕರೆಯುವುದರಲ್ಲಿ ಕಲ್ಯಾಣೋತ್ಸವಕ್ಕೆ ವಿಶೇಷ ಪ್ರಾಧಾನ್ಯ.
ಕತ್ತೆಯ ಮೆರವಣಿಗೆಯ ಹಿಂದೆ ಒಂದು ಸ್ವಾರಸ್ಯಕರ ಕಥೆಯೇ ಇದೆ. ಒಮ್ಮೆ ಊರವರೆಲ್ಲ ಕತ್ತೆಯ ಮೇಲೆ ಶಿವನ ವಿಗ್ರಹವಿಟ್ಟು ಮೆರವಣಿಗೆ ಮಾಡುತ್ತಿದ್ದರಂತೆ. ಜನ ಶಿವನಮೂರ್ತಿ ಹೊತ್ತ ಕತ್ತೆಗೆ ನಮಸ್ಕರಿಸುತ್ತಿದ್ದರು. ಜನರ ಭಕ್ತಿ ಶಿವನಿಗೆಂಬುದನ್ನರಿಯ ಗಾರ್ದಭ ಗರ್ವ ದಿಂದ ಹೊರಟಾಗ ಶಿವನ ವಿಗ್ರಹ ಕೆಳಗೆ ಬಿದ್ದುಹೋಯಿತಂತೆ. ಇದರಿಂದ ಕೆರಳಿದ ಶಿವ ಕತ್ತೆಗೆ ‘ನಿನ್ನದು ಹೀನಾಯ ಬದುಕಾಗಲಿ’ ಎಂದು ಶಾಪ ಕೊಟ್ಟು ಬಿಟ್ಟಿನಂತೆ. ಪಶ್ಚಾತ್ತಾಪದಿಂದ ಕತ್ತೆ ಪುನಃ ಶಿವನ ಮೊರೆಹೋದಾಗ ಕರುಣಾಳು ಶಿವ ಒಲಿದು ‘ಮಳೆ ಬಾರದಿದ್ದಾಗ ಒಂದು ಸಂದರ್ಭದಲ್ಲಿ ಮಾತ್ರ ಭೂಲೋಕದ ಜನ ನಿನ್ನ ಪೂಜಿಸುವಂತಾಗಲಿ’ ಎಂಬ ವರಕೊಟ್ಟನಂತೆ. ಅಂದಿನಿಂದ ಮಳೆಗಾಗಿ ಕತ್ತೆ ಮೆರವಣಿಗೆ ಪ್ರಚಲಿತಕ್ಕೆ ಬಂತು ಎನ್ನುತ್ತದೆ ಒಂದು ದಂತ ಕತೆ.
ಮಳೆ ಕೈಕೊಟ್ಟಾಗ ಆರಾಧನೆಯ ಪರಾಕಾಷ್ಠೆ ಎಂಬಂತೆ ವಿಚಿತ್ರ ನಡಾವಳಿಗಳು ರೂಢಿಯಲ್ಲಿವೆ. ಶಿವನಿಗೆ ಕಾರ ಹಚ್ಚುವುದು ಒಂದು ತೆರೆನಾದರೆ, ಮಳೆ ದೇವನನ್ನು ಮೂದಲಿಸುವ ಪರಿ ಇನ್ನೊಂದು. ಉತ್ತರ ಕರ್ನಾಟಕದ ಹಲವೆಡೆ ಮಳೆದೇವ ಮಲ್ಲಪ್ಪನನ್ನು ಬಿಸಿಲಲ್ಲಿ ಒಣಹಾಕುತ್ತಾರೆ. ಬಿಸಿಲ ತಾಪ ತಡೆಯಲಾರದೇ ದೇವ ಒಲಿದು ಮಳೆ ಸುರಿಸುತ್ತಾನೆಂಬ ನಂಬಿಕೆ ಇದರ ಹಿಂದಿರಬಹುದು. ಇನ್ನು ‘ಗುಳ್ಳವ್ವನ ಆಚರಣೆ ’ ಎಂಬುದರಲ್ಲಿ ಮುಳ್ಳುಕಂಟಿಯಲ್ಲಿ ಮಳೆದೇವರನ್ನು ಎಸೆದು ಬರಲಾಗುತ್ತದೆ. ಕೋಲಾರ ಜಿಲ್ಲೆಯ ಹಲವೆಡೆ ಕೆರೆಯ ಅದೇವತೆ ದುಗ್ಗಮ್ಮನಿಗೆ ಕಲ್ಲು ಹೊಡೆಯಲಾಗುತ್ತದೆ. ದೇಗುಲದ ಬಾವಿಗೆ ಸಗಣಿ ಕರಡುವುದು, ದೇವರ ವಿಗ್ರಹಕ್ಕೆ ತಿಗಣೆ, ಚೇಳುಗಳನ್ನು ಬಿಡುವ ಪರಮ ವಿಚಿತ್ರಗಳೂ ಇಂಥ ನಂಬಿಕೆಗಳ ಭಾಗವಾಗಿವೆ.
ಮಾಟ, ಮಂತ್ರಗಳ ಮೂಲಕ ಮಳೆ ಬರಿಸುವ ನಂಬಿಕೆಗಳೂ ಚಾಲ್ತಿಯಲ್ಲಿವೆ. ಮಾಟಗಾತಿಯ ಮನೆಯ ಮುಂದೆ ಕಲ್ಲು ರಾಶಿ ಹಾಕುವುದು, ಬಸುರಿ ಕಪ್ಪೆಯನ್ನು ಸಿಗಿದು ಊರ ಮುಂದೆ ನೇತಾಡಿಸುವುದು ಸಹ ಇವು ಗಳಲ್ಲಿ ಒಂದು. ಆಫ್ರಿಕಾದ ನೈಲ್ ನದಿಯ ಪ್ರದೇಶದಲ್ಲಿ ಮಾಂತ್ರಿಕರು ತೊಗಟೆ ಸುಲಿದ ಕೋಲಿನಿಂದ ಮಳೆ ತರಿಸುತ್ತಾರಂತೆ.
ನಮ್ಮಲ್ಲಿ ಹಲವೆಡೆ ಕೊಂಬು, ಕಹಳೆ, ತಮಟೆ ಬಾರಿಸಿ ಮಳೆ ಕರೆಯುವುದೂ ರೂಢಿಯಲ್ಲಿದೆ. ಏನೇ ಇರಲಿ, ಇಂಥವುಗಳ ಅಧ್ಯಯನ, ಸಂಶೋಧನೆಗಳು ಸಾಂಸ್ಥಿಕ ಮಟ್ಟದಲ್ಲಿ ನಡೆಯದಿರುವುದು ದುರಂತ. ಅಂಥ ಪ್ರಯತ್ನಗಳು ಮಳೆ ಕುರಿತಾದ ಇನ್ನಷ್ಟು ಹೊಸ ಹೊಳಹುಗಳನ್ನು ತೆರೆದಿಟ್ಟಾವು.

‘ಲಾಸ್ಟ್’ಡ್ರಾಪ್: ಭಾರತದಲ್ಲಿ ಕೃಷಿಯೆಂಬುದು ಮಳೆಯನ್ನೇ ಬಹುತೇಕ ಅವಲಂಬಿಸಿರುವುದೂ ಆಚರಣೆ, ನಂಬಿಕೆಗಳ ಹೆಚ್ಚಳಕ್ಕೆ ಕಾರಣವಿರಬಹುದು.

2 comments:

ಜಿ.ಎಸ್.ಬಿ. ಅಗ್ನಿಹೋತ್ರಿ said...

ಮಳೆ ಬರುವಿಕೆಗೆ ಏನೆಲ್ಲಾ ಆಚರಣೆಗಳು... ಸರ್ ಸಾಕಸ್ಟು ಮಾಹಿತಿ ನೀಡಿದ್ದೀರಿ. ಧನ್ಯವಾದಗಳು....

ರಾಧಾಕೃಷ್ಣ ಎಸ್.ಭಡ್ತಿ said...

Thank u Agnihotrigale....