ಯಾರೆಂದರೆ ಯಾರ ಆರಭಾರಕ್ಕೂ ನಿಲುಕದೇ ಕಾರುಬಾರು ನಡೆಸುವ ನೀರಿಗೆ ಈ ಪರಿ ತರಬೇತಿ ಕೊಟ್ಟು ಹೇಳಿದಂತೆ ಕೇಳಿಸುತ್ತ ಕೂರಿಸಿಕೊಂಡ ಆ ವ್ಯಕ್ತಿಯನ್ನು ಕಾಣಲೇಬೇಕೆಂದು ಗಂಗಾವತಿಯಿಂದ ಹತ್ತೇ ಹತ್ತು ಕಿಲೋ ಮೀಟರ್ ದೂರದಲ್ಲಿರುವ ಮಲ್ಲಾಪುರದ ಆ ಹೊಲಕ್ಕೆ ಹೋಗಿ ನಿಂತೆವು. ಹುಸೇನ್ ಸಾಬ್ ಪಟೇಲ್ ಎಂಬ ಆ ನೀರ ಮಿತ್ರ ಅಲ್ಲಿರಲಿಲ್ಲ. ಆದರೆ, ಆತ ಹೇಳಿ ಹೋದ ಕೆಲಸವನ್ನು ಮಾತ್ರ ನೀರು ನಿಯತ್ತಿನಿಂದ ಮಾಡುತ್ತ, ಇಡೀ ಹೊಲದ ತುಂಬ ಲಾಸ್ಯವಾಡುತ್ತ, ತುಳುಕುತ್ತ, ಬಳುಕುತ್ತ ನೆಲವನ್ನು ತೋಯಿಸುತ್ತಿತ್ತು. ಆಗಷ್ಟೇ ನೆರೆತು ನಿಂತಂತಿದ್ದ ಜೋಳದ ಕಡ್ಡಿಗಳು ನೀರ ಹನಿಗಳೊಂದಿಗೆ ಕೇಳಿಗೆ ಬಿದ್ದಿದ್ದವು. ಅವುಗಳ ಸಂಭ್ರಮವನ್ನು ಬೆರಗುಗಣ್ಣಿನಿಂದ ನೋಡುತ್ತ ಪಕ್ಕದ ಪಾತಿಗಳಲ್ಲೇ ಮೊಳೆಯುತ್ತಿದ್ದ ಉಳ್ಳಾಗಡ್ಡಿ ಗಿಡಗಳಿಗೆ ತಮ್ಮ ಸರದಿಯ ಕಾತರ. ದೊಡ್ಡ ಗಿಡಗಳ ಚೆಲ್ಲಾಟ ಕಂಡು ಆಗಲೇ ಅವುಗಳ ಕುಡಿ ನಾಚಿ ಕೆಂಪಗಾದಂತಿತ್ತು. ಒಂದು... ಎರಡು... ಮೂರು..... ಐದು ನಿಮಿಷ ಕಳೆದಿರಬಹುದು. ಪೈಪುಗಳಲ್ಲಿ ಜಾರಿ ಜಾರಿ ಕೆಳ ಬಂದ ಹನಿಗಳು ಉಳ್ಳಾಗಡ್ಡಿಯ ಬುಡಕ್ಕೂ ಸೋಕ ತೊಡಗಿದವು. ಅಷ್ಟೇ ಈಗವುಗಳ ಗಮನ ಥಟ್ಟನೆ ಬದಲಾಗಿ ಹೋಯಿತು. ಮೇಲಿಂದ ಪನ್ನೀರ ಸಿಂಚನದಂತೆ ಹಾರಿ ಬರುವ ಹನಿಗಳನ್ನು ಅನಾಮತ್ತಾಗಿ ಹೀರಿಕೊಂಡು ತಣಿಯುವ ತವಕ ಆ ಕುಬ್ಜ ಕನ್ನೆಯರದ್ದು. ನೋಡ ನೋಡುತ್ತಿದ್ದಂತೆಯೇ ಧೂಳಾಡುತ್ತ ಬಿದ್ದಿದ್ದ ಸುತ್ತಲ ಹತ್ತಾರು ಮಾರಿನ ನೆಲ ತೇವ ತೇವವಾಯಿತು. ಕಾದು ಕುಳಿತಿದ್ದ ಉಳ್ಳಾಗಡ್ಡಿ ಗಿಡಗಳಿಗೀಗ ಫುಲ್ ಖುಷ್. ಅಕ್ಕಪಕ್ಕಕ್ಕೆ ತೊನೆದು ತೂಗಾಡ ತೊಡಗಿದ್ದು ಕಂಡರೆ ಅವು ತಮ್ಮತಮ್ಮಲ್ಲೇ ಆಪ್ತ ಸಮಾಲೋಚನೆಗಿಟ್ಟುಕೊಂಡು, ಅನುಭವಗಳನ್ನು ಹಂಚಿಕೊಂಡು ಮುಸಿಮುಸಿ ನಗುತ್ತಿರುವಂತೆ ಕಾಣುತ್ತಿದ್ದವು.
ಹೀಗೆ...ದಾಟುತ್ತ ದಾಟುತ್ತ ಹೋದಂತೆ... ನೆಲಗಡಲೆ, ತೊಗರಿಗಳ ಸಾಲುಗಳೂ ತೊಯ್ದು ತಂಪಾದವು. ಹೊಲದ ನೆತ್ತಿಯಿಂದ ಬುಡದ ಗುಂಟ ಹೆಬ್ಬಾವಿನಂತೆ ಮಲಗಿದ್ದ ರಬ್ಬರ್ ಪೈಪ್ನ ಮಧ್ಯೆ ಮಧ್ಯೆ ಅಲ್ಲಲ್ಲಿ ಸಾಲುನೇರ್ತ ಲಂಬಕ್ಕೆ ನಿಂತಿದ್ದ ಒಂಬತ್ತು ಕೋಲುಗಳ ತುದಿಯಲ್ಲಿ ಬಿಟ್ಟೂ ಬಿಡದಂತೆ ನೀರು ಸ್ಖಲಿಸುತ್ತಲೇ ಇತ್ತು. ಅದಾದರೂ ಎಂಥ ರಭಸ ? ಚಿಮ್ಮುವ ಧಾರೆಗೆ ಕೈಯ್ಯೊಡ್ಡಿದರೆ ಉರಿ ಹತ್ತುತ್ತದೆ. ಬಹುಶಃ ಒಂದೋ ಎರಡೋ ಎಚ್ಪಿ ಸಾಮರ್ಥ್ಯದ ಮೋಟಾರ್ ಅಳವಡಿಸಿರಬಹುದು. ಅದಿಲ್ಲದಿದ್ದರೆ ನೀರಿಗಿಷ್ಟು ರಭಸ, ಅದರಲ್ಲೂ ಒಂಬತ್ತು ತುದಿಗಳಲ್ಲೂ ಏಕಕಾಲಕ್ಕೆ ಇಷ್ಟು ದೂರಕ್ಕೆ ಚಿಮ್ಮುವ ಶಕ್ತಿ ಹೇಗೆ ಬಂದೀತು ? ಹೇಗೂ ಬರಡು ನೆಲ. ಮೇಲಕ್ಕೆ ನೀರು ಸಿಕ್ಕುವುದೂ ದೂರದ ಮಾತು. ಆಳದ ಬೋರ್ನಿಂದ ನೀರನ್ನೆತ್ತಿ ಚಿಮ್ಮಿಸಲು ಸಾಕಷ್ಟು ಸಬಲ ಮೋಟಾರನ್ನೇ ಅಳವಡಿಸಿರುತ್ತಾರೆ ಎಂಬ ಊಹೆ ಪೆಗ್ಗುಬೀಳಿಸಿತ್ತು. ಪೈಪು ಸಾಲನ್ನೇ ಬೆಂಬತ್ತಿ ಸಾಗಿದರೆ ಹೊಲದ ಅಂಚು ಸಿಕ್ಕಿತೇ ವಿನಾ ಪೈಪು ಕೊನೆಯಾಗಲಿಲ್ಲ. ಅದೆಲ್ಲಿಂದ ನೀರನ್ನು ತಂದು ಹೊಲಕ್ಕೆ ಹನಿ ನೀರಾವರಿಯ ವ್ಯವಸ್ಥೆ ಮಾಡಿದ್ದಿರಬಹುದು ? ಕುತೂಹಲ ನಿಲ್ಲಗೊಡಲಿಲ್ಲ. ಮುಂದಕ್ಕೆ ಸಾಗಿದರೆ ಪೈಪ್ನ ಮಾದರಿ ಬದಲಾಯಿತೇ ಹೊರತು, ಜಾಲದ ಕೊನೆ ಸಿಗಲಿಲ್ಲ. ಪ್ಲ್ಯಾಸ್ಟಿಕ್ ಪೈಪ್ ಇದ್ದದ್ದು ರಬ್ಬರ್ ಬಾಲವಾಗಿ ಬದಲಾಗಿತ್ತು. ಟ್ಯೂಬ್ನ ಉದ್ದದ ಚೂರು ಅವೆರಡೂ ಮಾದರಿಯನ್ನು ಬೆಸೆದಿತ್ತು. ಮತ್ತೆ ಸಾಗಿತು ಪಯಣ. ಈಗ ತುಸು ಏರು ಮುಖ. ಗುಡ್ಡದ ಹಾದಿ ಬಳಸಿ ಬಂಡೆಗಳ ಸಾಲುಗಳ ನಡುವೆ ಹೊರಟವರಿಗೆ ಪುಟ್ಟದೊಂದು ಮರುಕಲು ಎದುರಾಯಿತು. ನಾಲ್ಕಾರು ಬಂಡೆಗಳ ನಡುವೆ ಪೈಪ್ ತೂರಿ ಹೋದಂತಿತ್ತು. ಕುತೂಹಲ ಹೆಚ್ಚಿ ಬಂಡೆಗಳಾಚೆ ಏನಿದ್ದೀತು ಎಂದು ನೋಡಿಯೇಬಿಡಲು ನಿರ್ಧರಿಸಿ ಬಳಸಿ ಬಂದು ನಿಂತರೆ ನಿಜಕ್ಕೂ ಅಚ್ಚರಿ ಕಾದದ್ದು ಅಲ್ಲಿ. ನಾವಂದು ಕೊಂಡಂತೆ ಯಾವುದೇ ಬೋರ್ವೆಲ್ ಆಗಲೀ, ಆಳ ಬಾವಿಯಾಗಲೀ ನೀರು ಕಕ್ಕುತ್ತ ಅಲ್ಲಿ ನಿಂತಿರಲೇ ಇಲ್ಲ. ಅಲ್ಲಿದ್ದದ್ದು ಹೆಚ್ಚೆಂದರೆ ನಾಲ್ಕಾರು ಅಡಿ ಆಳದ ಗುಂಡಿಯೆಂದರೆ ಪೂರ್ತಿ ಗುಂಡಿಯೂ ಅಲ್ಲದ ರಚನೆ. ನೀರಿನ ಹರಿವಿಗೆ ಅಡ್ಡಲಾಗಿ ಎರಡು ಬಂಡೆಗಳ ನಡುವೆ ಬೆಸೆದು ಹಾಕಿದ್ದ ಮರಳಿನ ಚೀಲಗಳ ಒಡ್ಡು ಆ ತಾಣವನ್ನು ಪುಟ್ಟ ಗುಂಡಿಯಾಗಿ ಪರಿವರ್ತಿಸಿತ್ತು. ಮರಳಿನ ಚೀಲಗಳ ಮಧ್ಯದಿಂದ ಪೈಪು ತೂರಿ ಬಂದಿತ್ತು. ಅದರ ಕೊನೆಗೊಂದಿಷ್ಟು ಹಳೆ ಬಟ್ಟೆ, ಮತ್ತದೇ ಟ್ಯೂಬ್ನ ಚೂರುಗಳನ್ನು ಸೇರಿಸಿ ಕಟ್ಟಿಡಲಾಗಿತ್ತು. ಒಂದು ಬಾರಿ ನೀರು ಹೊಲದ ಗುಂಟ ಹಾರಿ ಮುಗಿಸಿದ್ದರಿಂದ ನೀರಿನ ಹರಿವನ್ನು ಕಟ್ಟಿ ನಿಲ್ಲಿಸಲು ಯುವಕನೊಬ್ಬ ಪ್ರಯತ್ನಿಸುತ್ತಿದ್ದ.
‘ಏನಿದು ? ಹೊಲಕ್ಕೆ ಸ್ಪ್ರಿಂಕ್ಲರ್ ಹಾಕಿದ್ದೀರಾ. ಮೋಟಾರ್ ಎಲ್ಲಿದೆ ?’ ಪ್ರಶ್ನೆಗೆ ಮುಗುಳ್ನಕ್ಕ ಯುವಕ, ‘ಮೋಟಾರ್, ಗೀಟಾರ್ ಏನಿಲ್ಲ ಸ್ವಾಮೀ, ಇದೇ ನೀರೇ ಹರಿದು ಹೋಗುತ್ತೆ. ಒಂದಷ್ಟು ಹೊತ್ತು ಕಟ್ಟಿ ಇಡ್ತೀವಿ. ಗುಂಡೀಲಿ ನೀರು ನಿಂತುಕೊಂಡ ಮೇಲೆ ಬೂಚು ತೆಗೀತೀವಿ. ಕೆಳಕ್ಕೆ ಹೋಗ್ತಾ, ಹೋಗ್ತಾ ಪ್ರೆಷರ್ ಜಾಸ್ತಿ ಆಗಿ ಸ್ಪ್ರಿಂಕ್ಲರ್ ಹಾರಲು ಶುರು ಆಗುತ್ತೆ...’ ಎಂದ. ಕೇವಲ ಹರಿವ ನೀರಿಗೆ ಒಡ್ಡುಕಟ್ಟಿ ಪೈಪ್ ಜೋಡಿಸಿ ತುಂತುರು ನೀರಾವರಿಯನ್ನು ಅಳವಡಿಸಿದ ಅವರ ಕ್ರಿಯಾಶೀಲತೆಗೆ ಬೇಡವೆಂದರೂ ಮೆಚ್ಚಿ ತಲೆದೂಗಲೇ ಬೇಕು. ಅಂಥ ಮೆಚ್ಚುಗೆಯೇ ಯುವಕನ ಜತೆ ಮಾತಿಗೆ ತೊಡಗಿಸಿತ್ತು. ಆತ ಅಜ್ಮೀರ್ ಸಾಬ್. ನಾವು ಬೇಟಿಯಾಗಲೇಬೇಕೆಂದು ಹೊರಟಿದ್ದ ಹುಸೇನ್ ಸಾಬ್ರ ಮಗ. ಆ ಹೊಲದಲ್ಲಿ ನಡೆಸುತ್ತಿದ್ದ ಕೈಚಳಕಕ್ಕೆ ಅಪ್ಪನೊಂದಿಗೆ ಅಜ್ಮೀರ್ನದ್ದೂ ಸಾಥ್ ಇದೆ. ಇಂದು ಯಾವುದೇ ಹೊರಗಿನ ತಂತ್ರಜ್ಞಾನದ ಬಳಕೆ ಇಲ್ಲದೇ, ಯಂತ್ರಗಳ ನೆರವಿಲ್ಲದೇ, ವಿದ್ಯುತ್-ಇಂಧನದ ಗೋಜಿಗೆ ಹೋಗದೇ ಪೂರ್ಣವೆಂದರೆ ಪೂರ್ಣ ನೈಸರ್ಗಿಕವಾಗಿ ಇಡೀ ಹೊಲಕ್ಕೆ ನೀರು ಹಾಯಿಸುತ್ತಿರುವ ಹುಸೇನ್ ಸಾಬ್ರ ಇಂಥ ಹುಚ್ಚು ಪ್ರಯೋಗಗಳಿಗೆಲ್ಲ ಜತೆಯಾಗಿ ನಿಂತವನು ಅಜ್ಮೀರ್.
ಇದಕ್ಕೂ ಮೊದಲು ಗುತ್ತಿಗೆಗೆ ಪಡೆದಿದ್ದ ಹೊಲಕ್ಕೆ ನೀರು ಹಾಯಿಸಿಕೊಳ್ಳುವುದೇ ಅಪ್ಪ-ಮಗನಿಗೆ ಒಂದು ಸವಾಲಾಗಿತ್ತು. ವಿತರಣಾ ಕಾಲುವೆಯಿಂದ ನೀರು ಪಡೆಯೋಣವೆಂದರೆ ಅವರ ಹೊಲವಿದ್ದುದು ಎಲ್ಲರ ಜಮೀನಿನ ನೆತ್ತಿಯ ಮೇಲಕ್ಕೆ. ಕೆಳಗಿನವರು ಬಳಸಿ ನೀರು ಮಿಗುವುದೂ ಇಲ್ಲ, ಮಿಕ್ಕರೂ ಅಲ್ಲಿಯವರೆಗೆ ಹತ್ತುವುದಿಲ್ಲ. ಮೋಟಾರು ಜೋಡಿಸಿಕೊಂಡು ತರೋಣವೆಂದರೆ ವೆಚ್ಚ ಭರಿಸುವ ಶಕ್ತಿಯಿಲ್ಲ. ಜತೆಗೆ ವಿದ್ಯುತ್ಅನ್ನು ನಂಬಿಕೊಳ್ಳುವಂತಿಲ್ಲ. ಹಾಗೆಂದು ಸುಮ್ಮನೆ ಕೂರುವ ಜಾಯಮಾನಕ್ಕೆ ಬಿದ್ದವರಲ್ಲ ಹುಸೇನ್ಸಾಬ್. ಸರಕಾರಿ ನೌಕರಿಯಿಂದ ನಿವೃತ್ತರಾದ ಬಳಿಕವೂ ಏನಾದರೊಂದು ಮಾಡುತ್ತಲೇ ಇರಬೇಕೆಂಬ ಪುಟಿಯುವ ಯುವ ಮನಸ್ಸದು. ಅದಕ್ಕಾಗಿ ಕೃಷಿಯನ್ನು ಆಯ್ಕೆ ಮಾಡಿಕೊಂಡರು. ಈ ವಯಸ್ಸಲ್ಲಿ ಎಂಥಾ ದುಡಿಮೆ ಎನ್ನುವ ಆಲಸ್ಯ ಅವರ ಬಳಿ ಸುಳಿಯಲಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ಅವರಿಗೆ ನಿವೃತ್ತಿಯ ಬಳಿಕವೂ ಸ್ವಂತ ಜಮೀನು ಖರೀದಿಸುವಷ್ಟು ಸಾಮರ್ಥ್ಯ ಇರಲಿಲ್ಲ. ಯಾರಿಗೂ ಬೇಡವಾದ, ಗುಡ್ಡದಂಚಿನ ಬಂಜರು ಭೂಮಿಯನ್ನೇ ಆಯ್ಕೆ ಮಾಡಿಕೊಂಡರು. ವಿಶೇಷವೆಂದರೆ ಅದು ಒಂದು ಕಾಲದಲ್ಲಿ ‘ಬಂಗಾರದ ತೇರು ಬೀದಿ’ಯಾಗಿ ಇತಿಹಾಸ ಪ್ರಸಿದ್ಧವಾಗಿದ್ದ ಜಾಗ. ಅಲ್ಲಿ ಹೊಸ ಪ್ರಯೋಗಗಳ ಮೂಲಕ ಬಂಗಾರದ ಬೆಳೆ ತೆಗೆಯಲು ಹೊರಟಿದ್ದರು ಹುಸೇನ್ ಸಾಬ್. ೩.೩ ಎಕರೆ ಭೂಮಿಯ ಬೆನ್ನಿಗೇ ಬೃಹದಾಕಾರದ ಬಂಡೆಗಳ ರಾಶಿಯಿದ್ದ ಗುಡ್ಡವಿತ್ತು. ಅಲ್ಲಿ ಬೀಳುವ ಮಳೆ ನೀರು ಇಂಗಿ, ಎಲ್ಲಾದರೊಂದು ಕಡೆ ಬಸಿದು ಬರಲೇಬೇಕೆಂಬುದನ್ನು ಮೊದಲ ನೋಟದಲ್ಲೇ ಗ್ರಹಿಸಿದರು ಹುಸೇನ್ಜಿ. ತುಸು ಹುಡುಕಾಟ ನಡೆಸುವಷ್ಟರಲ್ಲಿ ಅವರ ಊಹೆ ಹುಸಿಯಲ್ಲವೆಂಬದು ಖಚಿತವಾಯಿತು. ಅವರು ಆಯ್ದುಕೊಂಡಿದ್ದ ಜಮೀನಿನ ನೇರಕ್ಕೇ ಬೆಟ್ಟದ ನಟ್ಟನಡುವೆ ಊಟೆಯೊಂದು ಉಕ್ಕುತ್ತಿತ್ತು. ಅಲ್ಲಿಂದ ನೇರಕ್ಕೆ ಬಂಡೆಗಳ ನಡುವೆಯೇ ನೀರು ಬಸಿದು ಬರುತ್ತಿತ್ತು. ಊಟೆಯಿದ್ದ ಪ್ರದೇಶ, ಅಲ್ಲಿದ್ದ ಇಳಿಜಾರು ಗಮನಿಸಿದ ಹುಸೇನ್ ಸಾಬ್ರಿಗೆ ಮೊದಲ ನೋಟದಲ್ಲೇ ಆ ನೀರಿನ ಹರಿವಿಗೆ ಇರಬಹುದಾಗಿದ್ದ ಸಾಮರ್ಥ್ಯ ಅರಿವಿಗೆ ದಕ್ಕಿತ್ತು. ಯಾವ ಯಂತ್ರಗಳ ಸಹಾಯವಿಲ್ಲದೇ ಹೊಲಕ್ಕೆ ನೀರು ಚಿಮ್ಮಿಸಬಹುದೆಂದು ಲೆಕ್ಕ ಹಾಕಿದ್ದೇ ಆಯಕಟ್ಟಿನ ತಾಣವೊಂದರಲ್ಲಿ ಮರಳು ಚೀಲಗಳನ್ನು ಹಾಕಿ ಒಡ್ಡು ನಿರ್ಮಿಸಿದರು. ಅದರ ಬಾಯಿಗೆ ಪೈಪು ಜೋಡಿಸಿಕೊಂಡು ಬಂದು ತುಂತುರು ನೀರಾವರಿಯ ಉಪಕರಣಗಳನ್ನು ಜೋಡಿಸಿದರು. ಅವರ ಸಾಹಸ ಫಲ ನೀಡಿತ್ತು. ಎಲ್ಲವೂ ಒಂದು ಹಂತಕ್ಕೆ ಬಂದು ನಿಂತಾಗ ಒಂದಲ್ಲ ಎರಡಲ್ಲ... ಬರೋಬ್ಬರಿ ಒಂಬತ್ತು ಕಡೆಗಳಲ್ಲಿ ನೀರು ಸಿಂಚನಗೈಯ್ಯತೊಡಗಿತ್ತು.
ಪ್ರಾಯೋಗಿಕವಾಗಿ ಒಂದು ಎಕರೆಗೆ ಮಾಡಿದ್ದ ತುಂತುರು ನೀರಾವರಿ ವ್ಯವಸ್ಥೆ ಸಫಲವಾಗಿತ್ತು. ಒಂದೂಕಾಲು ಎಕರೆಯಲ್ಲಿ ಮೊದಲ ಯತ್ನದಲ್ಲೇ ೪೦ ಚೀಲ ಮೆಕ್ಕೆ ಜೋಳ, ೬೦ ಚೀಲಗಳಷ್ಟು ನೆಲಗಡಲೆಯನ್ನು ಬೆಳೆದು ತೋರಿಸಿದ್ದರು ಅವರು. ಮೊದಲಿಂದಲೂ ನೀರಿನ ಸಂರಕ್ಷಣೆ, ಮಿತಬಳಕೆಯ ಬಗ್ಗೆ ಅಪಾರ ಒಲವು ಹೊಂದಿದ್ದ ಹುಸೇನ್ ಸಾಬ್ ಇಂಥ ಪ್ರಯೋಗಗಳಿಂದಲೇ ಯಾವ ತಂತ್ರಜ್ಞರಿಗೂ ಕಡಿಮೆಯಿಲ್ಲದಂತೆ ಬೆಳೆದು ನಿಂತಿದ್ದಾರೆ. ಅವರ ಹೊಲವೀಗ ಅಕ್ಷರಶಃ ಬಂಗಾರದ ಫಸಲು ನೀಡುತ್ತಿದೆ. ಆ ಹೊಲಕ್ಕೆ ಹೋಗುವ ಹಾದಿಗೆ ಬಂಗಾರದ ತೇರ ಬೀದಿಯೆಂಬ ಹೆಸರು ಅನ್ವರ್ಥವಾಗಿದೆ.
ತೆಂಗಿನಕಾಯಿ ಹಿಡಿದು ಪಾರಂಪರಿಕ ಜಲಶೋಧಕರಾಗಿಯೂ ಕೆಲಸ ಮಾಡುವ ಹುಸೇನ್ ಸಾಬ್ರ ಮುಂದಿನ ಯೋಜನೆ ಈಗ ವಿದ್ಯುತ್ ಸ್ವಾವಲಂಬನೆಯತ್ತ ಹೊರಟಿದೆ. ಅದೇ ಹೊಲದ ಹಿಂದಿರುವ ಗುಡ್ಡಕ್ಕೆ ಇವರದ್ದೇ ದೇಸೀ ತಂತ್ರಜ್ಞಾನ ಬಳಸಿ ಪ್ರೊಪೆಲರ್ಗಳನ್ನು ಜೋಡಿಸಿ ಗಾಳಿ ಇಂಧನ ಉತ್ಪಾದನೆಯ ಬಗ್ಗೆ ಅವರು ಯೋಚಿಸುತ್ತಿದ್ದಾರೆ. ಖಂಡಿತಾ ಅದರಲ್ಲೂ ಯಶಸ್ವಿಯಾಗುವ ವಿಶ್ವಾಸ ಅವರದ್ದು. ಎಪ್ಪತ್ತರ ಆಸುಪಾಸಿನಲ್ಲಿರುವ ಅವರಲ್ಲಿ ಸಾಧನೆಯ ಛಲ ಇನ್ನೂ ಚಿಮ್ಮುತ್ತಲೇ ಇದೆ. ಹಾಗೆಯೇ ಹಸಿಹಸಿಯಾಗಿ ಉಳಿಯಲಿ ಎಂದು ಹಾರೈಸುವ.
‘ಲಾಸ್ಟ್’ಡ್ರಾಪ್: ಕೃಷಿಯೆಂಬುದು ನಿಂತ ನೀರಲ್ಲ. ಅದು ನಿರಂತರ ಪ್ರಯೋಗಗಳ ಹರಿವನ್ನು ಒಳಗೊಂಡರೆ ಖಂಡಿತಾ ಎಂದಿಗೂ ಗೆಲುವಿನ ಸಿಂಚನವನ್ನು ಎರೆಯುತ್ತಲೇ ಇರುತ್ತದೆ.
2 comments:
Nice...
http://youritzone.blogspot.com
http://onetechspot.blogspot.com
http://urtechguide.blogspot.com
http://onetechsite.blogspot.com
http://thecomputersight.blogspot.com
Thanks!
Hi,
Previously, occasionally I used to read the articles... and not comment. But on this one, I just could not resist ...I had to write something. Hats off to the efforts of Hussain Saab... and his son.
I really liked your lines in "Last Drop"
Thanks for the nice article
Post a Comment