Monday, March 22, 2010

ನೀರಿನ ನೆವದಲ್ಲಿ ಹಸಿರಿಗೆ ರಹದಾರಿ, ಬೇಟೆ ದುಬಾರಿ

ಕಂಜೂಸಿ ದಾನ್ ಸೆ ಜೀತೊ...
ಅಸತ್ಯ ಕೋ ಸತ್ಯಸೆ ಜೀತೊ...
ದ್ವೇಷ್-ಕ್ರೋಧ್ ಕೋ ಸದಾಚಾರ್ ಸೆ ಜೀತೊ...!


ಆ ಯೋಧರ ಪಡೆಯ ಮೂಲ ಮಂತ್ರಗಳಿವು. ಪ್ರಾರ್ಥನೆ ಹೀಗೆಯೇ ಸಾಗುತ್ತದೆ. ಇದೇನು ಹೊಸತಲ್ಲ ಬಿಡಿ. ನಮ್ಮ ದೇಶದ ದಾರ್ಶನಿಕರೆನಿಸಿಕೊಂಡವರೆಲ್ಲ ಬೋಸಿದ್ದು ಇದನ್ನೇ ಅಲ್ಲವೇ ? ಅಷ್ಟೇಕೆ ಭಾರತೀಯ ಮೂಲ ನಂಬಿಕೆಯೇ ಇದು. ಹೊಸತಿರುವುದು ಅದರ ಅನುಷ್ಠಾನದಲ್ಲಿ. ಹೇಗೆ ನೋಡಿದರೂ ಲಕ್ಷ್ಮಣ್ ಸಿಂಗ್‌ರಲ್ಲಿ ಒಬ್ಬ ಗಾಂ, ಒಬ್ಬ ಬುದ್ಧ, ಒಬ್ಬ ಮಹಾವೀರ, ಒಬ್ಬ ಧರ್ಮರಾಜ ಕಂಡರೆ ಅದಕ್ಕೆ ಕಾರಣ ಅವರು ಲಾಪೋಡಿಯಾದಲ್ಲಿ ತಾಲಾಬ್‌ಗಳ ಪುನರ್ ನಿರ್ಮಾಣ ಮಾಡಿದರು ಎಂಬುದಕ್ಕಲ್ಲ. ಅಲ್ಲಿ ನೀರಿನ ಸಮೃದ್ಧತೆಯನ್ನು ಮರಳಿ ತಂದರು ಎಂಬುದಕ್ಕಲ್ಲ. ಹಾದಿ ತಪ್ಪಿ ಹೋಗಿದ್ದ, ಬರಗೆಟ್ಟು ಬುಕಣಾಸಿಯಾಗಿ ಹೋಗಿದ್ದ ಲಾಪೋಡಿಯಾದ ಜನಜೀವನದಲ್ಲಿ ಧರ್ಮದ ಪುನರ್‌ಸ್ಥಾಪನೆ ಮಾಡಿದರು. ಅದು ಶುದ್ಧಾತಿಶುದ್ಧ ಮಾನವೀಯ ಧರ್ಮವಾಗಿತ್ತು. ಜೀವ ಧರ್ಮವಾಗಿತ್ತು. ಅಧರ್ಮವನ್ನು ಧರ್ಮ ಮಾರ್ಗದಿಂದ ಜಯಿಸಿದ್ದೇ ಲಕ್ಷ್ಮಣ್ ಸಾಹಸಗಾಥೆಗೆ ಇಟ್ಟ ಮುಕುಟ.
ಒಂದು ಕಾಲದಲ್ಲಿ ರಾಜಸ್ಥಾನದ ಆ ಪುಟ್ಟ ಹಳ್ಳಿಯ ಯುವಕರು ಅದೆಷ್ಟು ಪೋಲಿಬಿದ್ದು ಹೋಗಿದ್ದರೆಂದರೆ ಅವರಿವರನ್ನು ಟೀಕಿಸದಿದ್ದರೆ, ವ್ಯಂಗ್ಯ ಮಾಡದಿದ್ದರೆ ಅವರಿಗೆ ತಿಂದ ಅನ್ನವನ್ನು ಅರಗಿಸಿಕೊಳ್ಳಲು ಆಗುತ್ತಲೇ ಇರಲಿಲ್ಲ. ಅದು ಎಷ್ಟರಮಟ್ಟಿಗೆ ಅವರಿಗೆ ರೂಢಿಬಿದ್ದು ಹೋಗಿತ್ತೆಂದರೆ ಊರಿನವರನ್ನು ಹಾಗಿರಲಿ, ಊರಿಗೆ ಬರುತ್ತಿದ್ದ ಅತಿಥಿಗಳನ್ನು, ದಾರಿಹೋಕರನ್ನೂ ಅವರು ಬಿಡುತ್ತಿರಲಿಲ್ಲ. ಕೊನೇ ಪಕ್ಷ ಅವರಿಗೆ ಅದು ಬಿಟ್ಟರೆ ಬೇರೇನೂ ಉದ್ಯೋಗವೂ ಇರಲಿಲ್ಲ. ಹಾಗೆಂದು ಹೊಟ್ಟೆ ಕೇಳಬೇಕಲ್ಲಾ ? ಬದುಕಿಗೊಂದು ಮಾರ್ಗ ಬೇಕಿತ್ತಲ್ಲ ? ಅದಕ್ಕೆ ಸಿಕ್ಕಿದ್ದು ದಗಾ-ವಂಚನೆ-ಮೋಸ... ಕೊನೆಗೆ ಖೂನಿ- ಕೊಲೆಗಳಿಗೂ ಅವರು ಹೇಸಿದ್ದು ಸುಳ್ಳು. ಅಂಥ ವಾತಾವರಣದಲ್ಲಿ ಮನುಷ್ಯ ಜೀವನವೇ ನರಕವಾಗಿರುವಾಗ ಪ್ರಾಣಿ-ಪಕ್ಷಿಗಳು ನೆಮ್ಮದಿಯಿಂದ ಉಸಿರಾಡುವುದು, ಸ್ವಚ್ಛಂದವಾಗಿ ಬದುಕುವುದು ದೂರದ ಮಾತಾಗಿತ್ತು. ಹಕ್ಕಿಗಳ ಕಲರವವನ್ನು ಮರೆತು ಅದೆಷ್ಟೋ ಕಾಲವಾಗಿತ್ತು. ಅವಿದ್ದರೆ ತಾನೇ ಚಿಲಿಪಿಲಿಗುಟ್ಟಲು. ಬಹುತೇಕವನ್ನು ಕೊಂದು ತಿಂದಾಗಿತ್ತು. ಅಳಿದುಳಿದವು ನೀರು ಕಾಳು ಕಾಣದೇ ನೆರೆ ರಾಜ್ಯಗಳಿಗೆ ವಲಸೆ ಹೋಗಿದ್ದವು.


ಅಂಥ ವಾತಾವರಣದಲ್ಲಿ ಮತ್ತೆ ಜೀವ ಸಾಮ್ರಾಜ್ಯವನ್ನು ಪುನರ್‌ಸ್ಥಾಪಿಸುವುದೆಂದರೆ ಅದು ಕಟುಕನ ಬಳಿ ದಯೆಯ ಅರ್ಥ ಕೇಳಿದಂತಾಗಿತ್ತು. ಆದರೆ ಲಕ್ಷ್ಮಣ್ ನಿರ್ಧಾರ ಮಾಡಿಯಾಗಿತ್ತು. ಲಾಪೋಡಿಯಾದ ಹೆಸರನ್ನು ಬದಲಿಸಬೇಕು. ಅದು ಭೌತಿಕವಾಗಿಯಷ್ಟೇ ಅಲ್ಲ, ಊರಿನ ಜನರ ಅಂತರಂಗದಲ್ಲಿ ಅಂಥ ಬದಲಾವಣೆ ಇಣುಕಬೇಕು. ಅಲ್ಲಿಯೇ ಅದು ಮನೆ ಮಾಡಬೇಕು. ಆಗ ಮಾತ್ರವೇ ಲಾಪೋಡಿಯಾ ಮತ್ತೆ ಬಹದ್ದೂರ್ ನಗರವಾಗಿ ಪರಿವರ್ತನೆ ಹೊಂದಲು ಸಾಧ್ಯ- ಈ ಗುರಿಯೊಂದಿಗೇ ಲಕ್ಷ್ಮಣ್ ಗ್ರಾಮ ವಿಕಾಸ ನವಯುವಕ ಮಂಡಲವನ್ನು ಕಟ್ಟಿದರು. ಅಲ್ಲಿಯ ಪ್ರಾರ್ಥನೆಯೇ ಸಂಘಟನೆಯ ಇಡೀ ಉದ್ದೇಶವನ್ನು ವಿವರಿಸುತ್ತದೆ.


ಜಿಪುಣನನ್ನು ದಾನದಿಂದ ಗೆಲ್ಲು, ಅಸತ್ಯವನ್ನು ಸತ್ಯದಿಂದ ಗೆಲ್ಲು....ಹೀಗೆಯೇ ಸಾಗುತ್ತದೆ ಆ ಪ್ರಾರ್ಥನೆಯ ಸಾಲುಗಳು. ಅದು ಕೇವಲ ಸಾಲುಗಳಾಗಿರಲಿಲ್ಲ. ಅದರಲ್ಲಿ ಜೀವ ಶಕ್ತಿಯನ್ನು ತುಂಬಿದ್ದರು ಲಕ್ಷ್ಮಣ್ ಸಿಂಗ್. ಪ್ರಾರ್ಥನೆ ಹಾಡುತ್ತಲೇ ಅದರ ಅನುಷ್ಠಾನವನ್ನೂ ಸಾಸಿಬಿಟ್ಟರು ಅವರು. ಸ್ಥಳೀಯ ಪರಂಪರೆಯ ಅಧ್ಯಯನಕ್ಕೆ ಅವರು ಮೊದಲು ಮಾಡಿದರು. ಒಂದು ಕಾಲದಲ್ಲಿ ಶ್ರೀಮಂತವಾಗಿದ್ದ ದೇಸಿ ಸಂಸ್ಕೃತಿಯ ಸೊಗಡು ಅಷ್ಟಿಷ್ಟು ಊರಿನ ಹಳೆಯ ತಲೆಮಾರಿನಲ್ಲಿ ಉಳಿದಿತ್ತು. ಅದರ ನೆನಪುಗಳು ಅವರಲ್ಲಿನ್ನೂ ಹಸಿರಾಗಿತ್ತು. ಅಂಥ ನೆನಪುಗಳ ಹಸಿರು ಮಾಸುವ ಮೊದಲೇ ಜೀವ ಸಂಸ್ಕೃತಿಯನ್ನು ಚಿಗುರಿಸಿಬಿಡಬೇಕೆಂಬ ಎಚ್ಚರಿಕೆ ಮೂಡಿದ್ದು ಸಕಾಲಿಕವಾಗಿತ್ತು.


ಪಂಚಾಯಿತಿಗಳ, ಯುವಕ ಮಂಡಲಗಳ ಸಹಾಯದಿಂದ ಕೆಲ ಸಣ್ಣಪುಟ್ಟ ಸಂಪ್ರದಾಯಗಳನ್ನು ಊರಿನಲ್ಲಿ ಮತ್ತೆ ಜಾರಿಗೆ ತರಲಾಯಿತು. ಅದನ್ನು ನೀತಿ ನಿರೂಪಣೆಯನ್ನಾಗಿ ಪರಿವರ್ತಿಸಲಾಯಿತು. ಆರಂಭದಲ್ಲಿ ಇದಕ್ಕೆ ಎಂದಿನಂತೆಯೇ ವಿರೋಧ ವ್ಯಕ್ತವಾದರೂ ಯುವಕರ ಸಂಕಲ್ಪ ಶಕ್ತಿಯೆದುರು ಇದಾವುದೂ ನಿಲ್ಲಲಿಲ್ಲ. ನಿಯಮಗಳನ್ನು ಹೇರುವ ಬದಲು ಮನಪರಿವರ್ತನೆಯ ಮೂಲಕ ಅದನ್ನು ಅಳವಡಿಸಿಕೊಳ್ಳುವಂತೆ ಊರವರನ್ನು ಒಲಿಸಲಾಯಿತು. ಒಮ್ಮೆ ಮನೋಭಾವ ಬದಲಾದ ಮೇಲೆ ಮುಂದಿನದು ಕಷ್ಟವಾಗಲಿಲ್ಲ.


ನಿರುದ್ಯೋಗಿ ಕೈಗಳಿಗೆ ಉದ್ಯೋಗ, ಕಲಿಯುವ ಮನಸ್ಸಿಗೆ ಶಿಕ್ಷಣ- ಇವೆರಡಕ್ಕೆ ಅವಕಾಶವಾಗುತ್ತಿದ್ದಂತೆಯೇ ತನ್ನಿಂದ ತಾನೇ ಕ್ರಾಂತಿ ಇಣುಕಿತು. ಒಂದೆಡೆಯಲ್ಲಿ ಸುಶಿಕ್ಷಿತರು, ಯುವಕರ ಸಂಘಟನೆಯಾಗುತ್ತಿದ್ದರೆ ಇನ್ನೊಂದೆಡೆ ಊರಿನಲ್ಲಿದ್ದ ಶಾಲೆಯ ಅಭಿವೃದ್ಧಿ ಕಾರ್ಯ ಆರಂಭವಾಗಿತ್ತು. ಊರಿನ ಎಲ್ಲ ಮಕ್ಕಳೂ ಕಡ್ಡಾಯವಾಗಿ ಶಾಲೆಗೆ ಹೋಗಲೇಬೇಕೆಂಬ ನಿಯಮವನ್ನು ಜಾರಿಗೆ ತರಲಾಯಿತು ಎಂಬುದಕ್ಕಿಂತ ಊರವರು ಸ್ವಯಂ ಪ್ರೇರಿತರಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಮಾಡಲಾಯಿತು. ನಂತರದ್ದು ಅರಣ್ಯ ಸಂರಕ್ಷಣೆ. ಊರಿನ ಅರಣ್ಯ ಭೂಮಿಯಲ್ಲಿ ಯಾವುದೇ ಕಾರಣಕ್ಕೂ ಮನುಷ್ಯರು ಪ್ರವೇಶಿಸುವಂತಿಲ್ಲ. ಅಲ್ಲಿ ಸಸಿಗಳನ್ನು ಯಾರೂ ಉದ್ದೇಶಪೂರ್ವಕ ನೆಡುವುದು ಬೇಕಿಲ್ಲ. ಸ್ವಾಭಾವಿಕವಾಗಿಯೇ ಹುಟ್ಟುವ ಸಸ್ಯಗಳ ಜತೆಗೆ ಮಾನವನ ಹಸ್ತಕ್ಷೇಪ ಆಗದಿದ್ದಲ್ಲಿ ಮೂರು ವರ್ಷಗಳಲ್ಲಿ ತನ್ನಿಂದ ತಾನೇ ದಟ್ಟ ಹಸಿರು ಕಾಣಲಾರಂಭಿಸುತ್ತದೆ. ಒಮ್ಮೆ ಅರಣ್ಯ ಸೊಂಪಾಗಿಬಿಟ್ಟರೆ ಜೀವ ಸಂಕುಲಗಳ ಅಭಿವೃದ್ಧಿ ಕಷ್ಟದ ಕೆಲಸವಲ್ಲ. ಅದು ಸುಲಭದ ಮಾರ್ಗವಾಗಿತ್ತು. ಕೇವಲ ಉಪದೇಶದಿಂದ ಇದು ಸಾಧ್ಯವಾಗುವುದಲ್ಲ ಎಂಬ ಎಚ್ಚರಿಕೆಯೊಂದಿಗೆ ಕೆಲವು ನಿಬಂಧನೆಗಳನ್ನು ಜಾರಿಗೆ ತರಲಾಯಿತು. ಒಂದು ಮರ ಕಡಿದರೆ ಆ ವ್ಯಕ್ತಿ ಕನಿಷ್ಠ ಎರಡು ಸಸಿಗಳನ್ನು ಬೆಳೆಸುವುದು ಜತೆಗೆ ಒಂದು ೧೨ ಮಣ (ಒಂದು ಮಣ ಎಂದರೆ ೪೦ ಕೆ.ಜಿ.) ಧಾನ್ಯವನ್ನು ದಂಡ ರೂಪದಲ್ಲಿ ಕೊಡಬೇಕು ಎಂಬುದನ್ನು ಕಡ್ಡಾಯಗೊಳಿಸಲಾಯಿತು. ಹಾಗೆ ದಂಡದ ರೂಪದಲ್ಲಿ ಬಂದ ಧಾನ್ಯವನ್ನುಯುವಕ ಮಂಡಲದ ಸದಸ್ಯರು ಪ್ರತಿ ದಿನ ಮುಂಜಾವು ಮತ್ತು ಸಂಜೆಯ ವೇಳೆ ಊರಿನ ವ್ಯಾಪ್ತಿಯಲ್ಲಿ ಬೆಟ್ಟ ಗುಡ್ಡಗಳಲ್ಲಿ ಹೋಗಿ ಎರಚಿ ಬರುತ್ತಿದ್ದರು. ಹೀಗೆ ಎರಚಿದ ಕಾಳುಗಳಿಂದ ಆಕರ್ಷಿತವಾಗಿ ಹೆಚ್ಚು ಹೆಚ್ಚು ಪಕ್ಷಿಗಳು ಲಾಪೋಡಿಯಾದ ಕಡೆಗೆ ಬರಲು ಆರಂಭಿಸಿದವು. ಹಾಗೆ ಬಂದವು ಅಲ್ಲಿ ಕಣ್ಣು ಬಿಡಲಾರಂಭಿಸಿದ್ದ ಹಸಿರಿನ ಸಸಿಗಳಲ್ಲಿ ಆಶ್ರಯ ಪಡೆಯಲಾರಂಭಿಸಿದವು. ಆಗ ಊರಿನಲ್ಲಿ ಜಾರಿಗೆ ಬಂದದ್ದು ಪ್ರಾಣಿ-ಪಕ್ಷಿಗಳ ಬೇಟೆ ನಿಷೇಧ. ಒಂದು ಪ್ರಾಣಿ ಕೊಂದರೆ ಆತ ೫ ಸಾವಿರ ರೂ. ದಂಡ ಪಾವತಿಸುವಂತಾಯಿತು. ಹಕ್ಕಿಗಳಿಗೆ ಕಲ್ಲು ಹೊಡೆದವ ೫೦೦ ರೂ. ತೆರಬೇಕಾಯಿತು. ಊರಿನ ಹೊರಭಾಗದಲ್ಲಿ ಈ ಸಂಬಂಧ ಸೂಚನಾ ಫಲಕವನ್ನೇ ಬರೆಸಿ ಹಾಕಲಾಯಿತು.


ಇಷ್ಟೆಲ್ಲ ಆಗುವ ಹೊತ್ತಿಗೆ ಸರಕಾರಿ ಆಡಳಿತ ಯಂತ್ರ ಸುಮ್ಮನಿದ್ದೀತೆ ? ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಹಕ್ಕಿಲ್ಲ. ಎಲ್ಲರೂ ಸಂವಿಧಾನ ಬದ್ಧ ಕಾನೂನನ್ನೇ ಗೌರವಿಸಬೇಕೇ ಹೊರತು ಸ್ಥಳೀಯ ನಿಯಮಗಳಿಗೆ ಅವಕಾಶವಿಲ್ಲ ಎಂಬ ಆಕ್ಷೇಪ ತಹಸೀಲ್ದಾರರಿಂದ ಕೇಳಿಬಂತು. ಈ ಸಂಬಂಧ ಗ್ರಾಮ ಪಂಚಾಯಿತಿಗೆ ನೋಟಿಸ್ ಸಹ ಜಾರಿಯಾಯಿತು. ಆದರೆ ಅಷ್ಟರಲ್ಲಾಗಲೇ ಕಾನೂನು ಗೌರವಿಸುವ ಜನರ ಮನಪರಿವರ್ತನೆ ಆಗಿ ಬಿಟ್ಟಿತ್ತು. ಜನ ಸ್ಥಳೀಯ ನಿಯಮವನ್ನು ಸ್ವ ಸಂತೋಷದಿಂದ ಒಪ್ಪಿಕೊಂಡುಬಿಟ್ಟಿದ್ದರು. ಹೀಗಾಗಿ ಬೇರಾವುದೂ ಅವರ ಮೇಲೆ ಪರಿಣಾಮ ಬೀರಲಿಲ್ಲ. ಆದ್ದರಿಂದ ಲಾಪೋಡಿಯಾದಲ್ಲಿ ಗೋಚರ್(ನಮ್ಮ ಗೋಮಾಳ)ಗಳ ಸಂರಕ್ಷಣೆಗೆ ನಡೆದ ಆಂದೋಲನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಜೈವಿಕ-ಪರಿಸರ ವ್ಯವಸ್ಥೆಯ ಅಭಿವೃದ್ಧಿ, ಗೋಮಾಳಗಳ ಒತ್ತುವರಿ ತೆರವು ಮತ್ತು ನಿರ್ಬಂಧ, ಕೆರೆ ಸಂರಕ್ಷಣೆ, ತಾಲಾಬ್‌ಗಳ ಪುನಶ್ಚೇತನ, ಮಕ್ಕಳ ಶಿಕ್ಷಣ- ಹೀಗೆ ಎಲ್ಲವೂ ಒತ್ತೊಟ್ಟಿಗೇ ನಡೆದದ್ದು ಲಾಪೋಡಿಯಾದ ಚಿತ್ರಣವನ್ನೇ ೩೦ ವರ್ಷಗಳಲ್ಲಿ ಬದಲಿಸಿಬಿಟ್ಟಿತು. ಸಾರ್ವಜನಿಕ ಬದುಕು ಸುಂದರವಾಗಿಸಿದ ಲಕ್ಷ್ಮಣ್‌ಸಿಂಗ್ ಅಲ್ಲಿ ಅಭಿವೃದ್ಧಿಗೆ ಹೊಸ ವ್ಯಾಖ್ಯಾನ ಬರೆದಿದ್ದರು. ನಿಜವಾಗಿ ಸಹಭಾಗಿತ್ವದಿಂದ ವಿಕಾಸವಾಗಿತ್ತು. ಅಂಥ ವಿಕಾಸ ಶಾಂತಿಯನ್ನು ದಕ್ಕಿಸಿಕೊಟ್ಟಿತ್ತು.


ಲಾಸ್ಟ್‘ಡ್ರಾಪ್‘: ಚೌಕ ಪದ್ಧತಿ ದೇಶದ ಜಲ ಸಂರಕ್ಷಣಾ ವ್ಯವಸ್ಥೆಯಲ್ಲಿ ವಿನೂತನ ತಂತ್ರಜ್ಞಾನವಾಗಿ ಹೊರಹೊಮ್ಮಿದೆ. ಇದರ ತವರು ಲಾಪೋಡಿಯಾ.

Monday, March 15, 2010

ರಜಪೂತರ ಕುಡಿ ಕಟ್ಟಿದ ಜಲಯೋಧರ ಸೇನೆ

ನಮ್ಮೊಳಗೆ ನಾನೂ ಒಬ್ಬ. ಇದು ನನ್ನೊಬ್ಬನಿಂದಾದ ಕೆಲಸವಲ್ಲ. ಆದರೆ ಇದು ನಾನೇ ಮಾಡಬೇಕಾದದ್ದು. ನಾನಲ್ಲದೇ ಇದನ್ನು ಮಾಡುವವರು ಬೇರಾರೂ ಇಲ್ಲ. ನಾನೇ ಇದನ್ನು ಆರಂಭಿಸಬೇಕು. ಆದರೆ ನನ್ನಿಂದಲೇ ಆಗುತ್ತದೆ ಎಂದೇನೂ ಇಲ್ಲ. ನಾನಿಲ್ಲದಿದ್ದರೂ ಇದು ಆಗುವುದರಲ್ಲಿ ಅನುಮಾನವಿಲ್ಲ. ಅದರಲ್ಲಿ ’ನಾನು’ ಎಂಬುದು ತೀರಾ ನಗಣ್ಯ. ಹೀಗಿದ್ದೂ ನಾನು ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗುವುದಿಲ್ಲ. ನಾವೆಲ್ಲರೂ ಸೇರಿಯೇ ಇದನ್ನು ತಲೆ ಕಾಣಿಸಬೇಕು. ನನ್ನೊಬ್ಬನಿಗಾಗಿ ಇದನ್ನು ಮಾಡುವುದಲ್ಲ. ನಮ್ಮೆಲ್ಲರಿಗಾಗಿ ನಾನು ಮಾಡಬೇಕಾದದ್ದನ್ನು ಬೇರೆಯವರು ಮಾಡಲಿ ಎಂದು ಬಯಸುವುದು ಎಷ್ಟು ಸರಿ...
ಲಾಪೋಡಿಯಾದ ನೀರಸಾಧಕ ಲಕ್ಷ್ಮಣ್ ಸಿಂಗ್ ಹೇಳುತ್ತಾ ಹೋಗುತ್ತಿದ್ದರೆ ಅವರ ಕಣ್ಣುಗಳು ಹೊಳೆಯುತ್ತವೆ. ಅವರೊಳಗಿರಬಹುದಾದ ತತ್ತ್ವಜ್ಞಾನಿಯ ದರ್ಶನವಾಗುತ್ತದೆ. ಆತ ಬರೀ ಸಾಧಕನಲ್ಲ. ಮಹಾನ್ ತಪಸ್ವಿಯಾಗಿ ಗೋಚರಿಸುತ್ತಾರೆ. ಒಬ್ಬ ಯೋಗಿಯ ದೃಢತೆಗೆ ಪ್ರತೀಕವಾಗುತ್ತಾರೆ. ಶಾಂತಿಯ ಅವಧೂತನಂತೆ ಕಂಗೊಳಿಸುತ್ತಾರೆ. ಸತ್ಯ- ಅಹಿಂಸೆಗಳಿಗೆ ಮೂರ್ತ ಸ್ವರೂಪ ಕಟ್ಟಿಕೊಡುತ್ತಾರೆ. ಒಟ್ಟಾರೆ ಗಾಂ, ಬುದ್ಧ, ಪರಮಹಂಸ, ವಿವೇಕ ಇವೆಲ್ಲರ ತತ್ತ್ವಾಧಾರಿತ ಸಂಮಿಳಿತ ಸ್ವರೂಪದಲ್ಲಿ ಲಕ್ಷ್ಮಣ್ ನಿಲ್ಲುತ್ತಾರೆ. ಅವರನ್ನು ಭೇಟಿಯಾದರೆ, ಮಾತನಾಡಿಸಿದರೆ ಇದಾವುದೂ ಉತ್ಪ್ರೇಕ್ಷೆ ಅನ್ನಿಸುವ ಪ್ರಮೇಯವೇ ಇಲ್ಲ.
ಅದು ಯಾವುದೇ ಅಭಿವೃದ್ಧಿ ಇರಬಹುದು, ಜನರಿಂದ, ಅವರ ಸಹಭಾಗಿತ್ವದಿಂದ ನಡೆದಾಗಲೇ ಅದಕ್ಕೊಂದು ಅರ್ಥ. ಅದೇ ನಿಜವಾದ ಯಶಸ್ಸು- ಲಕ್ಷ್ಮಣ್‌ರ ಯಶಸ್ಸಿನ ಗುಟ್ಟೇ ಇದು. ‘ಜನರೂ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಬೇಕು. ಜನರಲ್ಲಿ ಇದು ನಮ್ಮದೇ ಕೆಲಸ, ಇದು ನಮಗಾಗಿ ನಾವು ಮಾಡಿಕೊಳ್ಳುವುದು, ಇದರ ಸಂಪೂರ್ಣ ಯಶಸ್ಸು ನಮಗೇ ಸಿಗಬೇಕು ನಮ್ಮ ಸ್ವ ಪ್ರಯತ್ನದಿಂದ ನಮ್ಮ ಊರು ಅಭಿವೃದ್ಧಿ ಹೊಂದಬೇಕು ಎಂಬ ಮನೋಭಾವ ನೆಲೆಗೊಂಡಲ್ಲಿ ಮಾತ್ರ ಸುಸ್ಥಿರತೆಯನ್ನು ಸಾಸಲಾಗುತ್ತದೆ ಎಂಬ ನಂಬಿಕೆಯೇ ಲಾಪೋಡಿಯಾದ ದಿಕ್ಕನ್ನೇ ಬದಲಿಸಿತು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಅವರು.
ನಮಗಾಗಿ ನಮ್ಮಿಂದ- ಪ್ರತಿಯೊಬ್ಬರೂ ಇಂಥ ಮನೋಭಾವದಿಂದಲೇ ಕಣಕ್ಕಿಳಿದಾಗ ಮಾತ್ರವೇ ಯಾವುದೇ ಸಾಧನೆ ಸಾಧ್ಯವಾಗುತ್ತದೆ. ಅಂಥ ವಿನೀತ ಭಾವದಿಂದಲೇ ಲಾಪೋಡಿಯಾದ ಸ್ಥಿತಿಯನ್ನು ಬದಲಿಸುವ ನಿರ್ಧಾರಕ್ಕೆ ಅಡಿ ಇಟ್ಟದ್ದು. ಅಲ್ಲಿನ ಜನರಿಗೆ ಹೇಳಿದ್ದೂ ಇದನ್ನೇ. ಮುಖ್ಯವಾಗಿ ಯುವಜನರ ಸಂಘಟನೆ ಮಾಡಿದ್ದು ಇದೇ ತತ್ತ್ವದ ಆಧಾರದ ಮೇಲೆಯೇ. ಅದೇನೂ ಸಣ್ಣ ಮಾತಾಗಿರಲಿಲ್ಲ. ಸಂಪೂರ್ಣ ದಾರಿದ್ರ್ಯಕ್ಕೆ ಒಳಗಾಗಿದ್ದ ಹಳ್ಳಿಗರ ಮನಃಸ್ಥಿತಿಯನ್ನು ಬದಲಿಸುವುದು ತಾಲಾಬ್‌ಗಳ ಪುನಶ್ಚೇತನಕ್ಕಿಂತ ಹೆಚ್ಚಿನ ದುಃಸ್ಸಾಹಸವಾಗಿತ್ತು.

ಹಾಗೆಂದು ಯಾವುದೋ ಹೊರಗಿನ ನೆರವನ್ನು ಪಡೆದೋ, ಸರಕಾರಿ ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡೋ ತಾಲಾಬ್ ಅನ್ನು ಕಟ್ಟಿಬಿಡುತ್ತೇನೆ, ಊರಿನ ಅಭಿವೃದ್ಧಿ ಮಾಡಿಬಿಡುತ್ತೇನೆ ಎಂಬುದು ಕೇವಲ ಭ್ರಮೆಯಾಗಿತ್ತು. ಹಾಗೊಮ್ಮೆ ಆಗುವುದಿದ್ದರೆ ಸ್ವಾತಂತ್ರ್ಯಾನಂತರದ ಇಷ್ಟು ವರ್ಷಗಳಲ್ಲಿ ಊರಿನ ಸ್ಥಿತಿ ಬದಲಾಗಿ ಯಾವುದೋ ಕಾಲವಾಗಿರುತ್ತಿತ್ತು. ಹಾಗಾಗಲಿಲ್ಲ ಎಂದರೆ ಅಲ್ಲಿ ಆಗಬೇಕಿದ್ದುದು ಬೇರೆಯೇ ಇತ್ತು. ನಿಜವಾಗಿ ನಾವಲ್ಲಿ ಕಟ್ಟಬೇಕಿದ್ದುದು ತಾಲಾಬ್ ಅನ್ನು ಮಾತ್ರವಲ್ಲ. ಮನಸ್ಸುಗಳನ್ನು ಕಟ್ಟಬೇಕಿತ್ತು. ಸಂಸ್ಕೃತಿಯನ್ನು ಜೋಡಿಸಬೇಕಿತ್ತು. ಬಂಜೆ ಭೂಮಿಯಲ್ಲಿ ಮತ್ತೆ ಬಯಕೆಯನ್ನು ಚಿಗುರಿಸಬೇಕಿತ್ತು. ಹಳ್ಳಹಿಡಿದಿದ್ದ ಪರಿಸರವನ್ನು ಪುನಶ್ಚೇತನಗೊಳಿಸಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಊರು ತೊರೆದು ಹೋದ ಪ್ರತೀ ಜೀವಿಯಲ್ಲೂ ‘ಇದು ನಮ್ಮೂರು’ ಎಂಬ ಮಮಕಾರವನ್ನು ಮೂಡಿಸಿ ಮರಳಿ ಕರೆತರಬೇಕಿತ್ತು. ಬದುಕಿನ ಅನಿಶ್ಚಿತತೆಯನ್ನು ಹೊಡೆದೋಡಿಸಬೇಕಿತ್ತು-ಲಕ್ಷ್ಮಣ್ ವಿವರಿಸುತ್ತಾ ಹೋಗುತ್ತಿದ್ದರೆ ಅಲ್ಲಿನ ಕರಾಳ ಚಿತ್ರಣ ತೆರೆದುಕೊಳ್ಳುತ್ತ ಹೋಗುತ್ತದೆ. ನೀರೊಂದು ಹಾದಿ ತಪ್ಪಿದರೆ ಇಡೀ ಬದುಕು ಹೇಗೆ ಹಳ್ಳ ಹಿಡಿದು ಹೋಗುತ್ತದೆ ಎಂಬುದಕ್ಕೆ ಲಾಪೋಡಿಯಾ ಪ್ರತ್ಯಕ್ಷ ಸಾಕ್ಷಿಯಾಗಿತ್ತು.
ಇವೆಲ್ಲದಕ್ಕಾಗಿ ಬದುಕು ಸವೆಸಲು ಒಂದಷ್ಟು ಮಂದಿ ಸಂಘಟಿತರಾಗಲೇಬೇಕಿತ್ತು. ಸಂಘಟನೆಗೆ ಮೂಲಾಧಾರವಾಗಬಹುದಾದದ್ದು ಜಾಗೃತಿ. ಜತೆಗೆ ಒತ್ತುವರಿ ಮತ್ತಿತರೆ ನೂರಾರು ಕಾರಣಗಳಿಂದ ಒಡೆದು ಹೋಗಿದ್ದ ಗ್ರಾಮದ ಮನಸ್ಸುಗಳನ್ನೂ ಒಂದುಗೂಡಿಸುವುದಕ್ಕೆ ವ್ಯವಸ್ಥಿತ ಸಾಂಸ್ಥಿಕ ಸ್ವರೂಪಗಳು ಮೈದಳೆಯುವುದು ಅತ್ಯವಶ್ಯಕ ಎನಿಸಿತು. ಸರಕಾರಿ ಛತ್ರದಡಿಯ ಪಂಚಾಯಿತಿಗಳು ಪರಿಸ್ಥಿತಿಯ ದುರ್ಲಾಭ ಪಡೆಯಲು ಹವಣಿಸುವ ಪಟ್ಟ ಭದ್ರರು, ಭ್ರಷ್ಟಾಚಾರಿಗಳ ತಾಣವಾಗಿತ್ತು. ನಮ್ಮ ಕೆಲಸ ಆರಂಭವಾಗುತ್ತಿದ್ದಂತೆಯೇ ವಿರೋಧ ಬಂದದ್ದೇ ಇಂಥವರಿಂದ. ಸ್ವಾಭಾವಿಕ ಅರಣ್ಯವನ್ನೂ ಬಿಡದೇ ಒತ್ತುವರಿ ಮಾಡಿಕೊಂಡಿದ್ದ ಮಂದಿ ಇವರ ಬೆಂಬಲಕ್ಕೆ ನಿಂತರು. ಇದಕ್ಕೆ ಪ್ರತ್ಯಸ್ತ್ರವಾಗಿ ಮೊದಲಿಗೆ ನಾವು ಪ್ರಯೋಗಿಸಿದ್ದು ಗ್ರಾಮ ಸಮಿತಿಗಳ ಬಲವೃದ್ಧಿ. ಸ್ಥಳೀಯರನ್ನು ಒಳಗೊಂಡ ನೈಜ ಪ್ರಜಾ ಪ್ರತಿನಿಗಳನ್ನು ಆಡಳಿತ ವ್ಯವಸ್ಥೆಗೆ ಎಲ್ಲ ಅಕಾರವನ್ನು ಹಸ್ತಾಂತರಿಸುವಂತೆ ಮಾಡಲಾಯಿತು. ಒಮ್ಮೆ ಗ್ರಾಮ ಸಮಿತಿಗಳು ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಶ್ರಮದಾನಕ್ಕೆ ಜನರನ್ನು ಒಗ್ಗೂಡಿಸುವ ಹೊಣೆಯನ್ನು ಅವುಗಳಿಗೊಪ್ಪಿಸಲಾಯಿತು. ಮುಂದಿನದು ಕಷ್ಟವಾಗಲಿಲ್ಲ- ಲಕ್ಷ್ಮಣ್ ಹಳೆಯ ಹರಸಾಹಸವನ್ನು ನೆನೆದು ಒಮ್ಮೆ ನಿಟ್ಟುಸಿರು ಬಿಟ್ಟರು.


ಮುಂದಿನ ಸವಾಲು ಊರಿನ ಯುವಬಲ ಸೂಕ್ತ ದಿಕ್ಕಿನಲ್ಲಿ ಹರಿಯುವಂತೆ ಮಾಡುವುದು. ಗ್ರಾಮೀಣ ಯುವಕರೇ ಅವರ ಒಟ್ಟಾರೆ ಯಶೋಗಾಥೆಯ ಸರದಾರರು. ಒಂದು ವರ್ಷದಲ್ಲಿ ೩೦ ಯುವಕ ಮಂಡಲಗಳನ್ನು ಲಕ್ಷ್ಮಣ್ ಸಿಂಗ್ ಅಸ್ತಿತ್ವಕ್ಕೆ ತಂದಿದ್ದರು. ಆನಂತರ ಸುತ್ತಲಿನ ೪೨ ಹಳ್ಳಿಗಳಿಗೆ ಅದು ವಿಸ್ತಾರಗೊಂಡಿತು. ಸುತ್ತಮುತ್ತಲ ಹಳ್ಳಿಗಳ ಇಂಥ ಯುವ ಮಂಡಲದ ಸ್ವಯಂ ಸೇವಾ ಸದಸ್ಯರನ್ನು ‘ಜಲಯೋಧರು’ ಎಂಬ ಸುಂದರ, ಉತ್ಸಾಹದಾಯಕ ಹೆಸರಿನಿಂದ ಕರೆದರು ಲಕ್ಷ್ಮಣ್. ಅಂಥ ಎಲ್ಲ ಯುವಮಂಡಲದ ಒಕ್ಕೂಟವನ್ನು ರಚಿಸಿ ೧೯೮೬ರಲ್ಲಿ ’ಲಾಪೋಡಿಯಾದ ಗ್ರಾಮೀಣ ವಿಕಾಸ ನವಯುವಕ ಮಂಡಲ(ಜಿವಿಎನ್‌ಎಂ)’ ಎಂಬ ಅಕೃತ ಸ್ವಯಂ ಸೇವಾ ಸಂಸ್ಥೆಯನ್ನು ಹುಟ್ಟುಹಾಕಿದರು.


ಇಂದು ಜಿವಿಎನ್‌ಎಂನಲ್ಲಿ ೭೦ ಮಂದಿ ಪೂರ್ಣಾವ ಕಾರ್ಯಕರ್ತರಿದ್ದಾರೆ. ೨೫೦ ನೌಕರರು ಸಂಸ್ಥೆಯ ದೈನಂದಿನ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ. ಜಲಯೋಧರ ಸಂಖ್ಯೆ ೮ ಸಾವಿರಕ್ಕೆ ಬೆಳೆದಿದೆ. ಲಾಪೋಡಿಯಾದಿಂದ ಪ್ರೇರಣೆ ಪಡೆದು ಇವತ್ತು ನಾಲ್ಕು ಜಿಲ್ಲೆಗಳಲ್ಲಿ ಬೃಹದಾಕಾರವಾಗಿ ಬೆಳೆದಿರುವ ಸಂಘಟನೆ ಅತ್ಯುತ್ಸಾಹದಿಂದ ಕೆಲಸ ಮಾಡುತ್ತಿದೆ. ೩೦ ವರ್ಷಗಳ ಅವಿರತ ಶ್ರಮದ ಫಲವಾಗಿ ಲಕ್ಷ್ಮಣ್‌ರ ಕನಸಿನ ನವ ವಿಕಾಸ ಮಂಡಲದ ಹೆಸರು ದೇಶ ವಿದೇಶಗಳಲ್ಲಿ ಮಾರ್ದನಿಸುತ್ತಿದೆ. ನೀವು ನಂಬಬೇಕು, ಈಗಿನ ಜಿವಿಎನ್‌ಎಂನ ವಾರ್ಷಿಕ ಬಜೆಟ್ ೪.೫ ದಶಲಕ್ಷ ರೂ.ಗಳು. ಹಳ್ಳಿಗಳ ಬಲವೃದ್ಧಿ, ಸ್ಥಳೀಯರ ಕೈಗೆ ಅಕಾರ, ಗ್ರಾಮ ಸ್ವರಾಜ್ಯದ ಗಾಂಜಿಯವರ ಸಿದ್ಧಾಂತ ಅನುಷ್ಠಾನದಲ್ಲಿ ಗ್ರಾಮವಿಕಾಸ ಮಂಡಲ ಮಹತ್ವದ ಪಾತ್ರವನ್ನು ವಹಿಸಿದೆ. ದುಡಿಯುವ ಕೈಗಳು ಸುಮ್ಮನೆ ಕೂರದಂತೆ ಮಾಡಿದೆ. ೪೨ ಸಾವಿರ ಕುಟುಂಬಗಳು ಇಂದು ಸ್ವಾವಲಂಬಿಯಾಗಿ ಬದುಕುತ್ತಿದೆ. ೨೦೦ ಹೆಕ್ಟೇರ್‌ನಷ್ಟು ಕೃಷಿ ಭೂಮಿ ನಳನಳಿಸುತ್ತಿದೆ. ಶೂನ್ಯವಿದ್ದ ಊರಿನ ಜನರ ತಲಾದಾಯ ೧೪ ಸಾವಿರ ರೂ.ಗಳಿಗೆ ಏರಿದೆ. ಇನ್ನೊಂದು ವಿಶೇಷವೆಂದರೆ ತಾಲಾಬ್‌ಗಳ ಮರು ನಿರ್ಮಾಣ ಸೇರಿದಂತೆ ಊರಿನಲ್ಲಿ ಕೈಗೊಂಡ ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ಸಂಪನ್ಮೂಲ ಒದಗಿಸಿದ್ದು ಸ್ಥಳೀಯರೇ. ಪ್ರತಿ ಕುಟುಂಬ, ಪ್ರತಿ ಹೊಸ ಯೋಜನೆಗೆ ತಲಾ ನೂರು ರೂ.ಗಳ ದೇಣಿಗೆ ನೀಡುವ ಸಂಪ್ರದಾಯ ಬೆಳೆದು ಬಂದಿದೆ. ಇಷ್ಟಕ್ಕೇ ಹೊಣೆಗಾರಿಕೆ ಮುಗಿಯುವುದಿಲ್ಲ. ಎಲ್ಲ ಯೋಜನೆಗಳಿಗೂ ಪ್ರತಿ ಕುಟುಂಬದಿಂದ ಒಬ್ಬನ ಶ್ರಮದಾನ ಕಡ್ಡಾಯ. ಹಣ ಕೊಡಲಾಗದಿದ್ದವರು ಅದಕ್ಕೆ ಪರಿಹಾರ ರೂಪದಲ್ಲಿ ಶ್ರಮದಾನಕ್ಕೆ ಹೆಚ್ಚುವರಿ ಆಳನ್ನು ಮೊದಲ ಸುಗ್ಗಿಯ ಬಳಿಕ ಮೂರು ತಿಂಗಳ (ಮೇನಿಂದ ಜುಲೈ) ಅವಗೆ ಕಳುಹಿಸಿಕೊಡಬೇಕು. ಹಾಗೆಂದು ಶ್ರಮದಾನಕ್ಕೆ ಇಂಥ ವಿನಾಯ್ತಿ ಇಲ್ಲ. ಆಳಿನ ಬದಲು ಹೆಚ್ಚುವರಿ ಹಣವನ್ನು ಕೊಡುತ್ತೇನೆ ಎನ್ನುವ ಪ್ರಶ್ನೆಯೇ ಇಲ್ಲ. ಗ್ರಾಮ ಸಮಿತಿಗಳು ಕೆಲಸ, ಹಣ ಹಾಗೂ ಮಾನವ ಸಂಪನ್ಮೂಲದ ನಿರ್ವಹಣೆ ಮಾಡುತ್ತದೆ. ಜತೆಗೆ ನೀರಿನ ನಿರ್ವಹಣೆಯನ್ನೂ ಅದೇ ನೋಡಿಕೊಳ್ಳುತ್ತದೆ. ಇದಕ್ಕಾಗಿ ಯುವಕರಿಗೆ ವಿಶೇಷ ತಾಂತ್ರಿಕ ತರಬೇತಿಯನ್ನು ಒದಗಿಸಲಾಗುತ್ತದೆ.


ಇದಲ್ಲವೇ ನಿಜವಾದ ಪ್ರಜಾಪ್ರಭುತ್ವ? ಇದಲ್ಲವೇ ಸೂಕ್ತ ಅಕಾರ ವಿಕೇಂದ್ರೀಕರಣ ? ಇದಲ್ಲವೇ ಪೂರ್ಣ ಸಮುದಾಯ ಸಹಭಾಗಿತ್ವ? ಒಬ್ಬ ಸಮರ್ಥ ಆಡಳಿತಗಾರ ತಾನೆಂಬುದನ್ನೂ ಈ ಮೂಲಕ ಲಕ್ಷ್ಮಣ್ ಸಿಂಗ್ ಸಾಬೀತು ಪಡಿಸಿದ್ದಾರೆ. ಎಷ್ಟಾದರೂ ಅವರು ರಜಪೂತ ರಾಜಮನೆತನದ ಕುಡಿಯಲ್ಲವೇ. ರಾಜಾ ಪ್ರತ್ಯಕ್ಷ ದೇವತಾಃ- ಎಂಬ ಪದಕ್ಕೆ ನಿಜ ಅರ್ಥದಲ್ಲಿ ಇಂದು ಲಕ್ಷ್ಮಣ್ ಭಾಜನರಾಗಿದ್ದಾರೆ. ಜಯ ಹೋ ಲಕ್ಷ್ಮಣ್.


‘ಲಾಸ್ಟ್‘ಡ್ರಾಪ್: ಪ್ರಾಣಿ- ಪಕ್ಷಿಗಳನ್ನು ದಂಡಿಸುವ ಮನುಷ್ಯ ಲಾಪೋಡಿಯಾದಲ್ಲಿ ಇಂದು ದಂಡ ತೆರಲೇಬೇಕು. ಅಂಥದ್ದೊಂದು ಕಠಿಣ ಕಟ್ಟಳೆ ಅಲ್ಲಿನ ಸ್ಥಳೀಯರಿಂದ ಸ್ವಯಂ ಪ್ರೇರಿತವಾಗಿ ಜಾರಿಗೊಂಡಿದೆ.

Sunday, March 7, 2010

ತಾಲಾಬ್‌ಗಳ ತೊಟ್ಟಿಲಲ್ಲಿ ಮತ್ತೆ ಹಸಿರಿನ ತೊನೆದಾಟ

ಡು ಕಂದು ಬಣ್ಣದ, ಮಿರಮಿರನೆ ಮಿಂಚುವ ತೊಗಲಿನ, ಉದ್ದ ಕಿವಿಯ, ಎದ್ದು ಕಾಣುವ ಭುಜದ ತುಂಬಿದ ಮೈಯ ಆ ಹಸು ನಡೆದು ಬರುತ್ತಿದ್ದರೆ ಅದೇನೋ ಎಂತೋ ತನ್ನಿಂದ ತಾನೇ ಭಕ್ತಿಭಾವ ಉಕ್ಕುತ್ತಿತ್ತು. ಆಕೆ ಗೋಮಾತೆ. ಆಕೆಯ ಮುಗ್ಧಮುಖ ಕಂಡರೆ ಸಾಕು ಎಂಥವರೂ ಒಮ್ಮೆ ಮೈದಡವಿ ಮುದ್ದಿಸುವಂತಿತ್ತು. ಅದಾದರೂ ಸಾಮಾನ್ಯದ್ದಲ್ಲ. ಲಾಪೋಡಿಯಾದ ರಾಜಮನೆತನದ ಗೋ ಮಾತೆ. ಒಂದು ಕಾಲದಲ್ಲಿ ಆ ‘ಗೋ ಮಾತೆ’ ಅಲ್ಲಿನ ನೀರನ್ನು ಕುಡಿಯುತ್ತಿರಲಿಲ್ಲ. ಕುಡಿಯುವುದು ಹಾಗಿರಲಿ ಮೂಸಿಯೂ ನೋಡುತ್ತಿರಲಿಲ್ಲ. ಉಳಿದೆಲ್ಲ ಜಾನುವಾರುಗಳೂ ಅ ಹೊಂಡಕ್ಕೆ ಬಂದು ಅಳಿದುಳಿದ ಕೆಸರು ನೀರನ್ನೇ ಕುಡಿದು ದಾಹ ತೀರಿಸಿಕೊಳ್ಳುತ್ತಿದ್ದವು. ಆದರೆ ಈಕೆ.... ಊಹುಂ...ಸರ್ವಥಾ ಇಲ್ಲ. ಜಹಗೀರರ ಮನೆಯದ್ದು ಎಂಬ ಕಾರಣಕ್ಕೆ ಅದು ಹೊಂಡದ ನೀರನ್ನು ಕುಡಿಯುತ್ತಿರಲಿಲ್ಲ ಎಂಬುದಕ್ಕಿಂತ ಅತ್ಯಂತ ಕುಶಾಗ್ರಮತಿಯಾದ ಆ ಹಸುವಿಗೆ ಲಾಪೋಡಿಯಾದ ಕಲುಷಿತ ನೀರನ್ನು ಕುಡಿಯುವ ಮನಸ್ಸಿರಲಿಲ್ಲ.

ಲಕ್ಷ್ಮಣ್ ಸಿಂಗ್ ಹೇಳುತ್ತ ಹೋಗುತ್ತಿದ್ದರೆ ಒಂದು ರೀತಿಯ ರೋಮಾಂಚನ. ‘ಕೊನೆಗೂ ಅನ್ನ ಸಾಗರವೆಂಬೋ ಅನ್ನ ಸಾಗರವನ್ನು ಕಟ್ಟಿ ನಿಲ್ಲಿಸುವವರೆಗೆ ಅದು ಅಲ್ಲಿನ ನೀರನ್ನು ಮುಟ್ಟಲಿಲ್ಲ. ಮಾತ್ರವಲ್ಲ. ಆ ಗೋಮಾತಾ ತಾಲಾಬ್‌ನ ಹತ್ತಿರವೆಲ್ಲೂ ಸುಳಿಯುತ್ತಿರಲಿಲ್ಲ. ಇವತ್ತು ಗೋಮಾತೆಯನ್ನು ನೀವು ನೋಡಬೇಕು. ಆಕೆಯ ಹರ್ಷ, ಸಂತಸಕ್ಕೆ ಪಾರವೇ ಇಲ್ಲ. ಪ್ರತಿ ದಿನ ೧.೫ ಕಿಮೀ ಉದ್ದದ ತಾಲಾಬ್‌ನ ಸುತ್ತ ೧೫ ಅಡಿ ಎತ್ತರಕ್ಕೆ ನಿರ್ಮಿಸಿದ ದಂಡೆಯ ಮೇಲೆ ಒಂದು ಸುತ್ತು ಬಂದೇ ಬರುತ್ತದೆ. ಅಲ್ಲಿಯೇ ಮೇಯುತ್ತಿರುತ್ತದೆ. ಅಲ್ಲಿನ ಸುಂದರ ಪರಿಸರಕ್ಕೆ ಸಾಕ್ಷಿಯಾಗುತ್ತದೆ. ಸುತ್ತಲಿನ ಹಕ್ಕಿಗಳ ಕಲರವಕ್ಕೆ ಕೊರಳಾಗುತ್ತದೆ. ಬಿಸಿಲಿಗೆ ಬೆವರುತ್ತದೆ. ಹಸಿರಿಗೆ ಮೈಯೊಡ್ಡಿ ಬೆರೆಯುತ್ತದೆ. ನೆರಳಿಗೆ ನಿಂತು ತಣಿಯುತ್ತದೆ. ಮಂದೆಯೊಳಗೊಂದಾಗಿ ಇದ್ದೂ ಮುಂದಾಗಿ ಕಾಣುತ್ತದೆ....ಒಟ್ಟಾರೆ ತಾಲಾಬ್ ತುಂಬಿನಿಂತ ಮೇಲೆ ಆಕೆಯ ಸಂಭ್ರಮ ಇಮ್ಮಡಿಸಿದೆ....’


ಅತ್ಯಂತ ಸೂಕ್ಷ್ಮ, ಸಂವೇದನಾಶೀಲ ಸ್ವಭಾವದ ಆ ಗೀರ್ ತಳಿಯ ಸರಿ ಸುಮಾರು ಮೂರು ತಲೆಮಾರಿನ ಜಾನುವಾರುಗಳು ಶುದ್ಧ ನೀರಿನಿಂದ ವಂಚಿತವಾಗಿತ್ತು. ಲಾಪೋಡಿಯಾದ ಪುರಾತನ ಆ ತಾಲಾಬ್ ಒಡ್ಡು ಕಳಚಿಕೊಂಡು ಗೊಡ್ಡು ಬಿದ್ದ ಮೇಲೆ ಮೂವತ್ತು ವರ್ಷಗಳ ಕಾಲ ಊರಿಗೆ ಊರೇ ನೀರಿನ ಕೊರತೆಯನ್ನು ಎದುರಿಸಿತ್ತು. ಬರಗಾಲ ಬಗಲಲ್ಲಿಟ್ಟುಕೊಂಡೇ ಅವರು ಬದುಕುತ್ತ ಬಂದಿದ್ದರು ಜನ. ಆವತ್ತು ಲಕ್ಷ್ಮಣ್‌ಸಿಂಗ್‌ಗೆ ಆ ಗೋ ಮಾತೆಯ ಗೋಳು ನೋಡಲಾಗಲಿಲ್ಲ. ಅದು ಸಂಕೇತವಾಗಿತ್ತು. ಬಹುತೇಕ ಊರಿನ ಶೇ. ೭೫ರಷ್ಟು ಜೀವ ಸಂಕುಲ ಅದಾಗಲೇ ಪಕ್ಕದ ಜಿಲ್ಲೆಗಳಿಗೆ ವಲಸೆ ಹೋಗಿದ್ದವು. ಯಾರು ಜತೆಗಿದ್ದಾರೋ ಇಲ್ಲವೋ ಎಂಬುದನ್ನು ನೋಡಲಿಲ್ಲ; ಅಂದು ಬೆಳಗ್ಗೆದ್ದವರೇ ಗುದ್ದಲಿ ಕೈಯಲ್ಲಿ ಹಿಡಿದು ತಾಲಾಬ್‌ನತ್ತ ನಡೆದೇ ಬಿಟ್ಟರು ಲಕ್ಷ್ಮಣ್‌ಸಿಂಗ್. ಮೊದಲ ಗುದ್ದಲಿ ಮಣ್ಣು ತಾಲಾಬ್‌ನ ಒಡಲಿಂದ ಹೊರ ಬೀಳುವವರೆಗಷ್ಟೇ ಎಂಥದ್ದೋ ಒಂದು ರೀತಿಯ ಆತಂಕ ಮನೆ ಮಾಡಿತ್ತು. ಕೆಲಸಕ್ಕೆ ಕೈಹಚ್ಚಿದ್ದಷ್ಟೇ, ಆಮೇಲೆ ತಲೆ ಎತ್ತಲೇ ಇಲ್ಲ. ಸ್ವಲ್ಪ ಹೊತ್ತು ಬಿಟ್ಟು ಏನೋ ಗದ್ದಲ ಕೇಳಿ ತಲೆ ಎತ್ತಿದರೆ ಅವರ ಅಕ್ಕ ಪಕ್ಕ ಇನ್ನೂ ಹತ್ತು ಕೈಗಳು ಕೆಲಸ ಮಾಡುತ್ತಿದ್ದವು. ಲಕ್ಷ್ಮಣ್ ಮತ್ತೆ ಕೆಲಸಕ್ಕೆ ತೊಡಗುವ ಮುನ್ನ ಹೇಳಿದ್ದಿಷ್ಟೇ- ‘ಇದು ನಮ್ಮೂರಿನ ಕೆಲಸ. ಇದನ್ನು ನಾವು ಮಾಡದೇ ಇನ್ನಾರೂ ಮಾಡಲು ಸಾಧ್ಯವಿಲ್ಲ. ಇಲ್ಲಿ ನೀರೊಡೆಯುವವರೆಗೆ ಊರಿನ ಜಮೀನುಗಳಲ್ಲಿ ಬೆಳೆಯ ಹೊಡೆಯೊಡೆಯುವುದು ಸಾಧ್ಯ ಇಲ್ಲ. ಅಂಥ ಹಸಿರು ಒಡಮೂಡದ ಹೊರತೂ ನಮ್ಮ ಉಸಿರು ಉಳಿಯಲು ಸಾಧ್ಯವಿಲ್ಲ. ಅದಕ್ಕಾಗಿಯಾದರೂ ಇಲ್ಲಿ ಮತ್ತೆ ತಾಲಾಬ್ ಅನ್ನು ಕಟ್ಟಿ ನಿಲ್ಲಿಸಬೇಕು.’


ಮುಂಜಾವಿನ ಆ ಎಳೆ ಬಿಸಿಲು ಹಿತವಾಗಿ ಮೈದಡವಬೇಕಿತ್ತು. ಆದರೆ ಅದು ರಾಜಸ್ಥಾನ. ಹಾಗೆನ್ನುವುದಕ್ಕಿಂತ ಬರಪೀಡಿತ ರಾಜ್ಯವೊಂದರ ಬರಪೀಡಿತ ಜಿಲ್ಲೆಯ ಅತ್ಯಂತ ಹೀನಾಯ ಸನ್ನಿವೇಶವನ್ನು ನೀರಿನ ವಿಚಾರದಲ್ಲಿ ಎದುರಿಸುತ್ತಿರುವ ಲಾಪೋಡಿಯಾದ ಮುಂಜಾವು ಅದಾಗಿತ್ತು. ಹಾಗಾಗಿ ಎಳೆಯ ಕಿರಣಗಳೂ ಚರ್ಮವನ್ನು ಚುರುಗುಡಿಸುತ್ತಿದ್ದವು. ಅಂಥ ಸುಡು ಬಿಸಿಲು ನೆತ್ತಿಯ ಮೇಲೆ ಬರುವವರೆಗೂ ಅಂದು ಕೆಲಸ ಸಾಗಿತ್ತು. ಅಷ್ಟೇ ದುಡಿದ ದೇಹದಲ್ಲಿ ಮೂಡಿದ ಬೆವರ ಹನಿಗಳು ತಾಲಾಬ್‌ನಲ್ಲಿ ಇಳಿದು ಮುತ್ತಾಗಿ ಕಟ್ಟಿನಿಲ್ಲಲು ಪ್ರೇರಣೆಯಾಯಿತು. ಊರಿನ ಮಂದಿಗೆ ಎರಡು ಪ್ರಮುಖ ಸಂಗತಿಗಳು ಅಲ್ಲಿ ಮನದಟ್ಟಾಗಿತ್ತು. ಉದ್ಯೋಗವಿಲ್ಲದೇ ಬಹುಕಾಲದಿಂದ ಜಡ್ಡುಗಟ್ಟಿಹೋಗಿದ್ದ ಮೈ ಮನಗಳು ಅಂದಿನ ಶ್ರಮದಾನದಿಂದ ಎಂಥದ್ದೋ ಉತ್ಸಾಹದಿಂದ ಪುಟಿಯುತ್ತಿದ್ದವು. ಇದು ಮುಂದುವರಿದರೆ ಇಷ್ಟರಲ್ಲೇ ತಮ್ಮ ಬದುಕು ದಡ ಹತ್ತುವಲ್ಲಿ ಅನುಮಾನ ಉಳಿದಿರಲಿಲ್ಲ. ಕೃಷಿಯೇ ಜೀವಾಳವಾಗಿದ್ದ ಸರಿ ಸುಮಾರು ೨೦೦ ಕುಟುಂಬಗಳ ಆ ಊರಿನ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವೇ ನೀರಾಗಿತ್ತು. ಅದು ತಾಲಾಬ್ ಅನ್ನು ಕಟ್ಟಿ ನಿಲ್ಲಿಸುವುದರೊಂದಿಗೆ ಕೊನೆಗೊಳ್ಳುತ್ತದೆ.


ಮತ್ತೊಂದು ವಿಶೇಷವೆಂದರೆ ತಮ್ಮ ರಾಜ(ವಂಶಸ್ಥ) ಲಕ್ಷ್ಮಣ್ ಸಿಂಗ್ ಸ್ವತಃ ತಾಲಾಬ್‌ನ ಪುನಶ್ಚೇತನಕ್ಕೆ ಟೊಂಕ ಕಟ್ಟಿ ಅಂಗಳಕ್ಕೆ ಇಳಿದಿದ್ದಾರೆ. ಅವರೊಂದಿಗೆ ಕೈ ಜೋಡಿಸುವುದು ಕರ್ತವ್ಯ ಎಂಬುದಕ್ಕಿಂತ ಅದು ಧರ್ಮ. ಎಷ್ಟೋ ವರ್ಷಗಳ ನಂತರ ಮೊದಲಬಾರಿಗೆ ಪ್ರಭುತ್ವ ಊರಿನ ಸಮಸ್ಯೆಯ ಬೇರು ಹುಡುಕಿ ಹೊರಟಿದೆ. ಅದು ಪರಿಹಾರ ಕಾಣುವ ಆಶಾ ಕಿರಣವೂ ಮೂಡಿದೆ. ಈ ಸಂದರ್ಭದಲ್ಲಿ ನಾವು ಜತೆಗೂಡದಿದ್ದರೆ ಇನ್ನೆಂದಿಗೂ ಊರು ಉದ್ಧಾರವಾಗಲು ಸಾಧ್ಯವೇ ಇಲ್ಲ ಎಂಬ ಸಂಗತಿ ಮನವರಿಕೆಯಾಗುತ್ತಿದ್ದಂತೆ ಒಬ್ಬೊಬ್ಬರೇ ಬಂದು ಸೇರಿಕೊಳ್ಳತೊಡಗಿದರು. ಅಂದು ಸಂಜೆ ಊರ ಮುಂದಿನ ಕಟ್ಟೆಯಲ್ಲಿ ಲಕ್ಷ್ಮಣ್ ಪುಟ್ಟ ಭಾಷಣವನ್ನು ಮಾಡಿದರು-‘ನಾವು ಕೃಷಿಯನ್ನೇ ಬದುಕಾಗಿ ಸ್ವೀಕರಿಸಿದವರು. ಅದಿಲ್ಲದೇ ನಮಗೆ ಬೇರೆ ದಿಕ್ಕಿಲ್ಲ. ಪೇಟೆಗೆ ಹೋಗಿ ಉದ್ಯೋಗ ಮಾಡಲು ಶಿಕ್ಷಣ ಬೇಕೇಬೇಕು. ಊರಲ್ಲಿದ್ದು ಉತ್ತಿಬಿತ್ತಲು ನೀರು ಬೇಕು. ಶಿಕ್ಷಣ ನಮಗೆ ಮರೀಚಿಕೆಯಾಗಿರುವುದು ಗೊತ್ತೇ ಇದೆ. ಅಂಥ ಆರ್ಥಿಕ ಶಕ್ತಿಯೂ ನಮ್ಮಲ್ಲಿ ಉಳಿದಿಲ್ಲ. ಅದನ್ನು ಗಳಿಸಿಕೊಳ್ಳಬೇಕಾದರೆ ನಾವು ಮೊದಲು ಕೃಷಿಯಲ್ಲಿ ತೊಡಗಿಕೊಳ್ಳುವುದು ಅನಿವಾರ್ಯ. ಅದಕ್ಕೆ ಅಗತ್ಯ ನೀರನ್ನು ಸೃಷ್ಟಿಸಿಕೊಳ್ಳುವುದು ನಮಗೆ ಗೊತ್ತಿದೆ. ಅದು ನಮ್ಮಿಂದ ಸಾಧ್ಯವೂ ಇದೆ. ಅದಿಲ್ಲದಿದ್ದರೆ ನಮ್ಮ ಬಡತನವನ್ನು ಲೇವಾದೇವಿಗಾರರು ಮತ್ತಿತರ ಪಟ್ಟಭದ್ರ ಹಿತಾಸಕ್ತಿಗಳು ದುರುಪಯೋಗಪಡಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಮಾತ್ರವಲ್ಲ ಈಗಾಗಲೇ ಒತ್ತೆ ಇಟ್ಟ ನಮ್ಮ ಜಮೀನುಗಳು ಮುಂದೊಂದು ದಿನ ಹಣವಂತರ ಪಾಲಾಗುತ್ತದೆ. ಅವತ್ತು ನಮ್ಮ ಜಮೀನಿನಲ್ಲಿ ನಾವೇ ಕೂಲಿಗಳಾಗಿ ಜೀತ ಮಾಡಬೇಕಾದ ಪರಿಸ್ಥಿತಿ ತಲೆದೋರುತ್ತದೆ. ಯೋಚಿಸಿ ನೋಡಿ, ಉತ್ತಮ ಬದುಕು ಬೇಕಿದ್ದರೆ ನಮ್ಮೊಂದಿಗೆ ಕೈಜೋಡಿಸಿ. ನಾವು ಕಟ್ಟುತ್ತಿರುವುದು ಕೇವಲ ಅನ್ನ ಸಾಗರವನ್ನಲ್ಲ. ಅದು ಜೀವ ಸಾಗರ. ಅದುಳಿದರೆ ಊರು ಉಳಿದೀತು. ಊರುಳಿದರೆ ಎಲ್ಲವೂ ಉಳಿದುಕೊಂಡೀತು. ಆಯ್ಕೆ ನಿಮಗೆ ಬಿಟ್ಟದ್ದು.’


ಅಷ್ಟು ಹೇಳಿ ಮನೆಗೆ ಹೊರಟ ಲಕ್ಷ್ಮಣ್‌ರನ್ನು ಮೂವತ್ತು ಮಂದಿಯ ಸಣ್ಣದೊಂದು ಪಡೆಯೇ ಹಿಂಬಾಲಿಸಿತ್ತು. ಅವತ್ತು ರಾತ್ರಿ ಯಾರೊಬ್ಬರೂ ಸರಿಯಾಗಿ ನಿದ್ರೆ ಮಾಡಲಿಲ್ಲ. ಅವತ್ತು ಅಂತಲೇ ಅಲ್ಲ. ಮುಂದಿನ ಒಂದು ತಿಂಗಳ ಕಾಲ ನಿದ್ದೆ ಮಾಡಲಿಲ್ಲ. ಪ್ರತಿ ದಿನ ಮುಂಜಾವು ಹತ್ಯಾರಗಳೊಂದಿಗೆ ಲಕ್ಷ್ಮಣ್ ಕೆರೆಯಂಗಳಕ್ಕೆ ಬಂದು ನಿಲ್ಲುವುದರೊಳಗೆ ಸ್ವಯಂಸೇವಕರ ದಂಡು ಅಲ್ಲಿ ನೆರೆದಿರುತ್ತಿತ್ತು. ಮಧ್ಯಾಹ್ನದವರೆಗೆ ದುಡಿತ. ತಾಲಾಬ್‌ನಲ್ಲಿ ತುಂಬಿದ್ದ ಹೂಳು ಹೊರಬಿದ್ದು ಸುತ್ತಲೂ ಏರಿಯಾಗಿ ಪೇರಿಸತೊಡಗಿತ್ತು. ಮಧ್ಯಾಹ್ನದ ನಂತರ ಮತ್ತೆ ಚರ್ಚೆ, ಜಾಗೃತಿ....ನಡೆದವು. ಮರು ದಿನ ಮತ್ತೊಂದಿಷ್ಟು ಜನ ಬಂದು ಸೇರಿಕೊಳ್ಳುತ್ತಿದ್ದರು. ಹೀಗೆಯೇ ಸಾಗಿತ್ತು.


ಅಲ್ಲಿ ಕೆಲಸ ನಡೆದಿರುವಾಗ ಇತ್ತ ಜನ ಮಾತನಾಡಿಕೊಳ್ಳತೊಡಗಿದರು. ಸುದ್ದಿ ಸುತ್ತಲೂ ಜನರಿಂದ ಜನರ ಕಿವಿಗೆ ಹಬ್ಬತೊಡಗಿತ್ತು. ಯೋಜನೆಯಂತೆ ಪ್ರತಿ ದಿನ ಕನಿಷ್ಠ ೬೦ ಸ್ವಯಂ ಸೇವಕರು ನಿರಂತರ ದುಡಿದರೆ ಮಾತ್ರ ಅಂದುಕೊಂಡಂತೆ ತಾಲಾಬ್ ನೀರಿನಿಂದ ತುಂಬಿಕೊಳ್ಳುವುದು ಸಾಧ್ಯವಿತ್ತು. ಅದಕ್ಕೆ ಹೆಚ್ಚು ದಿನ ತಾಲಾಬ್‌ನ ನೆಪದಲ್ಲಿ ನೀರೆಚ್ಚರ ಮೂಡಿಸುವಲ್ಲಿ ಲಕ್ಷ್ಮಣ್ ಯಶಸ್ವಿಯಾಗಿದ್ದರು. ಅದು ಅಲ್ಲಿಗೇ ನಿಲ್ಲಲಿಲ್ಲ. ಅನ್ನಸಾಗರದ ಬಳಿಕ ದೇವಸಾಗರ. ಅದರ ನಂತರ ಫೂಲ್ ಸಾಗರ...ಹೀಗೆ ಮೂರು ಬೃಹತ್ ತಾಲಾಬ್‌ಗಳು ಲಾಪೋಡಿಯಾದ ಮೂರು ದಿಕ್ಕಿನಲ್ಲಿ ನಳನಳಿಸತೊಡಗಿದ್ದವು. ಕೃಷಿಗೊಂದು, ಪೂಜಾ ಕೈಂಕರ್ಯ ಸೇರಿದಂತೆ ಧಾರ್ಮಿಕ ವಿವಿಧಾನಗಳಿಗೊಂದು, ನಿಸರ್ಗದ ಪ್ರಾಣಿ-ಪಕ್ಷಿಗಳಂಥ ಇತರ ಜೀವರಾಶಿಗಳಿಗೊಂದು ಹೀಗೆ ಮೂರು ತಾಲಾಬ್‌ಗಳೂ ಅನ್ವರ್ಥಕಗೊಂಡವು. ೩೦೦ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಹಸಿರು ಚಿಗುರಲಾರಂಭಿಸಿದ್ದೇ ತಡ ಗುಳೇ ಹೋಗಿದ್ದ ಕುಟುಂಬಗಳು ಒಂದೊಂದಾಗಿ ಮರಳಲಾರಂಭಿಸಿದವು; ಜತೆಗೆ ವಲಸೆ ಹೋಗಿದ್ದ ಜೀವರಾಶಿಗಳೂ ಸಹ. ಮತ್ತಲ್ಲಿ ಮೂಡಿತ್ತು ಹಿಂದಿನ ಕಲರವ. ಮರಳಿತ್ತು ಲಾಪೋಡಿಯಾದ ವೈಭವ. ಆ ಗೋ ಮಾತೆ ಮನದಲ್ಲಿ ಯಾವ ಕಳಂಕವಿಲ್ಲದೇ ನೆಮ್ಮದಿಯಿಂದ ದೇವ ಸಾಗರವನ್ನೊಮ್ಮೆ ಪ್ರದಕ್ಷಿಣೆ ಮಾಡಿ, ಅನ್ನ ಸಾಗರವನ್ನೊಮ್ಮೆ ಅವಲೋಕಿಸಿ ಫೂಲ್(ಹೂವು) ಸಾಗರಕ್ಕೆ ಬಂದು ಪ್ರತಿ ದಿನ ದಾಹ ತೀರಿಸಿಕೊಳ್ಳುತ್ತಿದ್ದಾಳೆ. ಅದರ ಫಲವಾಗಿ ಇಂದು ಲಾಪೋಡಿಯಾದಲ್ಲಿ ನೀರಿನದಷ್ಟೇ ಅಲ್ಲ, ಹಾಲಿನ ಹೊಳೆಯೂ ಹರಿಯುತ್ತಿದೆ.


‘ಲಾಸ್ಟ್’ ಡ್ರಾಪ್: ಲಕ್ಷ್ಮಣ್ ಸಿಂಗ್ ನಿರ್ಮಿಸಿದ ಮೂರು ತಾಲಾಬ್‌ಗಳು ಅವರು ನಂಬಿದ ಸಹಭಾಗಿತ್ವ, ವಿಕಾಸ ಮತ್ತು ಶಾಂತಿ- ಈ ಮೂರು ತತ್ತ್ವಗಳ ಪ್ರತೀಕವಾದದ್ದು ಕಾಕತಾಳೀಯವಲ್ಲ.

Wednesday, March 3, 2010

ನೀರ ಕಾರಣದಿಂದ ಊರು ದಾರಿಗೆ ಬಂತು

ವರದು ರಾಜಸ್ಥಾನದ ರಜಪೂತ ಮನೆತನ. ಹಾಗೆ ನೋಡಿದರೆ ಲಕ್ಷ್ಮಣ್ ಸಿಂಗ್ ಎಂಬ ರಾಜವಂಶಸ್ಥರ ಉತ್ತರಾಕಾರಿ ಕಾಲಮೇಲೆ ಕಾಲು ಹಾಕಿಕೊಂಡು ದರ್ಬಾರು ನಡೆಸಬಹುದಿತ್ತು. ಇವತ್ತು ಅವರನ್ನು ನೋಡಿದರೆ ಒಬ್ಬ ಸಾಮಾನ್ಯ ರೈತನಿಗಿಂತ ಹೆಚ್ಚೇನೂ ಆಡಂಬರವಿಲ್ಲದ ಅತ್ಯಂತ ಸರಳ ಬದುಕನ್ನು ಅವರು ಬದುಕುತ್ತಿದ್ದಾರೆ. ಅದು ಅವರ ಸ್ವಯಂ ನಿರ್ಧಾರದ ಆಯ್ಕೆ. ಲಾಪೋಡಿಯಾದ ಸುತ್ತಮುತ್ತಲಿನ ಬರೋಬ್ಬರಿ ೮೦ ಗ್ರಾಮಗಳ ಜಹಗೀರುದಾರಿಕೆ ಅವರ ಮನೆತನಕ್ಕಿತ್ತು. ತೀರಾ ಇತ್ತೀಚೆಗೆ ಸ್ವಾತಂತ್ರ್ಯ ಬಂದ ಆರಂಭದ ವರ್ಷಗಳವರೆಗೂ (೧೯೫೦ರವರೆಗೂ) ಅವರ ತಂದೆ ಜಹಗೀರರಾಗಿಯೇ ಇದ್ದವರು. ಇಂದಿಗೂ ಆ ಮನೆತನದ ಮಟ್ಟಿಗೆ ಸುತ್ತಮುತ್ತಲಿನ ಹಳ್ಳಿಗರಲ್ಲಿ ‘ನಮ್ಮ ಒಡೆಯರು’ ಎಂಬ ಸ್ವಾಮಿಭಕ್ತಿ ಮುಂದುವರಿದಿದೆ. ಹಾಗೆ ಪಾಳೇಗಾರಿಕೆ ಮಾಡಿಕೊಂಡು ಇದ್ದು ಬಿಡಲು ಲಕ್ಷ್ಮಣ್ ಸಿಂಗ್ ಮನಸ್ಸು ಅದೇಕೋ ಒಪ್ಪಲೇ ಇಲ್ಲ. ಮುಖದಲ್ಲಿ ಸದಾ ಸುಳಿದಾಡುತ್ತಿರುವ ಬಿಚ್ಚು ನಗೆ. ಅವರ ಮನಸ್ಸಿನಷ್ಟೇ ನಿರ್ಮಲವಾದ ಅಚ್ಚ ಬಿಳಿಯ ಒಂದು ಪಕ್ಕಾ ಖಾದಿಯ ಅಂಗಿ, ಅಂಥದೇ ಒಂದು ಪೈಜಾಮು ಇವು ಬಿಟ್ಟರೆ ಉಳಿದಾವ ಗತ್ತು ಗೈರತ್ತುಗಳೂ ಆ ಮುತ್ತಿನಂಥಾ ವ್ಯಕ್ತಿತ್ವದಲ್ಲಿ ಹುಡುಕಿದರೂ ನಿಮಗೆ ಸಿಗಲು ಸಾಧ್ಯವಿಲ್ಲ. ಆದರೆ ಆ ವ್ಯಕ್ತಿತ್ವ, ಅವರ ದಿಟ್ಟ ನಿಲುವು, ಅವರ ತತ್ವ ಸಿದ್ಧಾಂತ, ಸಂಘಟನಾ ಚಾತುರ್ಯ, ದೂರದರ್ಶಿತ್ವ, ಮಾನವೀಯ ಅಂಶಗಳು ಮಾತ್ರ ರಾಜವಂಶದ ಹೆಸರು ಹೇಳಿಸುತ್ತವೆ.

ಇಷ್ಟು ಹೇಳಿಬಿಟ್ಟರೆ ಅವರು ಎಂಥ ಮನೆತನದ ಹಿನ್ನೆಲೆಯುಳ್ಳವರು ಎಂಬುದು ಬಹುಶಃ ಸ್ಪಷ್ಟಗೊಳ್ಳಲಿಕ್ಕಿಲ್ಲ. ಅದು ಲಕ್ಷ್ಮಣ್ ಸಿಂಗ್‌ರ ಅಜ್ಜನ ಆಡಳಿತದ ಕಾಲ. ಲಾಪೋಡಿಯಾ ಮಧ್ಯಭಾಗದಲ್ಲೊಂದು ಭವ್ಯ ಅಂತಸ್ತಿನ ಕಟ್ಟಡ. ಜಹಗೀರುದಾರರು ಎಂದ ಮೇಲೆ ಹಾಗೂ ಇಲ್ಲದಿದ್ದರೆ. ಅದನ್ನವರು ರಾಜಸ್ಥಾನಿ ಭಾಷೆಯಲ್ಲಿ ಬಸ್ತಿಗಳು ಎನ್ನುತ್ತಾರೆ. ಅದು ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಹೀಗೆ ಯಾವುದೇ ಸಮಯವಿರಬಹುದು. ಜಹಗೀರುದಾರರು ಆಹಾರ ಸೇವನೆಗೆ ಹೋರಡುವ ಮುನ್ನ ಬಸ್ತಿಗಳ ಮೇಲೆ ಉಪ್ಪರಿಗೆಗೆ ಬಂದು ನಿಲ್ಲುತ್ತಿದ್ದರು. ಅಲ್ಲಿಂದ ನಿಂತು ಕೂಗಿದರೆ ಸರ್ವೇಸಾಮಾನ್ಯ ಇಡೀ ಊರಿಗೆ ಕೇಳುತ್ತಿತ್ತು. ಹಾಗೆ ಬಂದು ನಿಂತ ಜಹಗೀರುದಾರರು ‘ಕೋಯಿ ಭೂಕಾ ಹೈ...?’(ಯಾರಾದರೂ ಹಸಿದಿದ್ದೀರಾ ?) ಎಂದೊಮ್ಮೆ ಗಟ್ಟಿ ಸ್ವರದಲ್ಲಿ ಕೇಳುತ್ತಿದ್ದರು. ಯಾರಿಂದಲೂ ಹಸಿದ ಸ್ವರ ಕೇಳಿಸದಿದ್ದರೆ ಮಾತ್ರವೇ ಅವರು ಊಟಕ್ಕೆ ತೆರಳುತ್ತಿದ್ದುದು. ಒಂದೊಮ್ಮೆ ಯಾರೊಬ್ಬರು ಹಸಿದ ಹೊಟ್ಟೆಯಲ್ಲಿದ್ದರೂ ಅವರಿಗೆ ಉಣಬಡಿಸಿದ ಮೇಲೆಯೇ ಜಹಗೀರುದಾರರ ಊಟ. ಯಜಮಾನ ಎಂಬ ಪದಕ್ಕೆ ಇದಲ್ಲವೇ ಅನ್ವರ್ಥ ?


ಇಂಥ ಸಂಸ್ಕೃತಿಯನ್ನು ನೋಡಿಕೊಂಡೇ ಬೆಳೆದವರು ನಮ್ಮ ಹೀರೋ ಲಕ್ಷ್ಮಣ್ ಸಿಂಗ್. ಊರಿನಲ್ಲಾದರೂ ಅಷ್ಟೇ. ಯಾವುದಕ್ಕೂ ಕೊರತೆ ಇಲ್ಲ ಎನ್ನುವಂಥ ನೆಮ್ಮದಿ. ಸದಾ ಸಮೃದ್ಧಿಯಿಂದ ತುಂಬಿ ತುಳುಕುವ ತಾಲಾಬ್‌ಗಳು. ಬೀಳುವ ಸರಾಸರಿ ೩೦೦-೩೫೦ ಮಿಲಿಮೀಟರ್‌ನಷ್ಟು ಮಳೆಯನ್ನೇ ತಾಲಾಬ್‌ಗಳಲ್ಲಿ ಹಿಡಿದಿಟ್ಟುಕೊಂಡು ಇಡೀ ವರ್ಷ ನಿರ್ವಹಿಸಿಕೊಳ್ಳುವ ಜಾಣ್ಮೆ. ಇರುವ ಜಮೀನಿನಲ್ಲೇ ಮೈ ಮುರಿದು ತಿನ್ನುವ ಜಾಯಮಾನ. ಕೆರೆ ಕಟ್ಟೆಗಳು, ಅರಣ್ಯ ಗುಡ್ಡಗಳು, ಪ್ರಾಣಿಪಕ್ಷಿಗಳನ್ನೊಳಗೊಂಡು ನಿಸರ್ಗವೇ ದೇವರೆಂದು ಪೂಜಿಸುವ ಸಾಂಸ್ಕೃತಿಕ ಶ್ರೀಮಂತಿಕೆ. ಗೋವುಗಳೆಂದರೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಕಾಳಜಿ. ಎಲ್ಲಕ್ಕಿಂತ ಹೆಚ್ಚಾಗಿ ಸ್ವಾವಲಂಬಿ ಬದುಕನ್ನೇ ತತ್ತ್ವವನ್ನಾಗಿಸಿಕೊಂಡ ಸದಾಚಾರ ಇವು ಒಂದು ಕಾಲದ ಲಾಪೋಡಿಯಾ ಅಂದರೆ ನೆನಪಿಗೆ ಬರುತ್ತಿದ್ದ ಅಂಶಗಳು. ಅದನ್ನೇ ಮಾದರಿಯಾಗಿಟ್ಟುಕೊಂಡು ಬದುಕಿನ ಕಲ್ಪನೆಯನ್ನು ರೂಪಿಸಿಕೊಂಡಿದ್ದ ಲಕ್ಷ್ಮಣ್ ಸಿಂಗ್ ಜೈಪುರಕ್ಕೆ ವಿದ್ಯಾಭ್ಯಾಸಕ್ಕೆ ತೆರಳಿದ್ದವರು.


ಅದೇನು ದರಿದ್ರ ಗಳಿಗೆಯೋ ಇಡೀ ಲಾಪೋಡಿಯಾಕ್ಕೆ ಲಾಪೋಡಿಯಾದ ಬದುಕೇ ಬೋರಲು ಬಿದ್ದುಬಿಟ್ಟಿತು. ಸ್ವಾಂತಂತ್ರ್ಯಾನಂತರದ ಪ್ರಜಾಪ್ರಭುತ್ವದಲ್ಲಿ ಜಾಗೀರುದಾರಿಕೆ ಅರ್ಥ ಕಳೆದುಕೊಂಡಿತ್ತು. ಅದರ ಜತೆಯಲ್ಲೇ ಆ ಮನೆತನದಲ್ಲಿದ್ದ ನೈತಿಕತೆಯೂ ನೆಲಕಚ್ಚಿತ್ತು. ಹಿಂದೆಯೇ ಸಮುದಾಯದ ಕಲ್ಪನೆಯೂ ಸಾಯಲಾರಂಭಿಸಿತು. ಸ್ವಾವಲಂಬಿ ಗ್ರಾಮಗಳು ನಿಶ್ಯಕ್ತವಾಗತೊಡಗಿದವು. ಒಂದು ರೀತಿಯಲ್ಲಿ ಹಳ್ಳಿಗರ ಬದುಕು ಹಳ್ಳ ಹಿಡಿಯಿತು. ಅಪರಾಧ ಹೆಚ್ಚಿತು. ಕೊಲೆ ಸುಲಿಗೆಗಳು ಮನೆ ಮಾತಾಯಿತು. ಎಲ್ಲೆಲ್ಲೂ ಹಾಹಾಕಾರ, ಹಸಿವು. ಕಾದು ಕಂಗಾಲಾದ ಬದುಕಿನ ನಿರ್ವಹಣೆಯೇ ಸಾಧ್ಯವಾಗದ ಸ್ಥಿತಿಯಲ್ಲಿ ಜನ ಪಕ್ಕದ ಊರುಗಳಿಗೆ ಗುಳೇ ಹೊರಟರು. ಜಾನುವಾರುಗಳು ಎಲ್ಲೆಂದರಲ್ಲಿ ಸತ್ತುಬಿದ್ದವು. ಅಳಿದುಳಿದವನ್ನು ಸಾಕಲಾಗದ ಮಂದಿ ಅವನ್ನೇ ಮಾರಿ ಬಂದಷ್ಟು ದಿನ ಉಂಡು ತೇಗಿದರು. ಊರಿನ ಸುತ್ತಮುತ್ತಲ ಪ್ರದೇಶದಲ್ಲಿ ನೆಮ್ಮದಿಯನ್ನು ಕಂಡುಕೊಂಡಿದ್ದ ಶೇ.೭೫ರಷ್ಟು ಜೀವ ಸಮೂಹ ನೆರೆಯ ರಾಜ್ಯಗಳಿಗೆ ವಲಸೆ ಹೋಯಿತು. ಒಟ್ಟಾರೆ ಲಕಲಕಿಸುತ್ತಿದ್ದ ಲಾಪೋಡಿಯಾ ಎಂದರೆ ಸ್ಮಶಾನ ಸದೃಶತೆಗೆ ಸಾಕ್ಷಿಯಾಯಿತು. ಇವೆಲ್ಲಕ್ಕೂ ಮೂಲ ಕಾರಣ ಊರಿನ ಪ್ರಮುಖ ನೀರಾಧಾರವಾಗಿದ್ದ ಅನ್ನ ಸಾಗರ್ ಎಂಬ ಬೃಹತ್ ತಾಲಾಬ್ ಒಂದು ನಿರ್ವಹಣೆಯ ಕೊರತೆಯಿಂದ ಶಿಥಿಲಗೊಂಡ ಘಟನೆ ಎಂದರೆ ನೀವು ನಂಬುತ್ತೀರಾ ?
ಇದನ್ನು ನಂಬಿ ಬಿಡಿ, ಇಂಥ ಘೋರ ಸತ್ಯ ಲಕ್ಷ್ಮಣ್ ಸಿಂಗ್ ಮತ್ತವರ ಜಲಯೋಧರಿಗೆ ಮನವರಿಕೆಯಾದದ್ದರಿಂದಲೇ ಅವರು ಶಿಕ್ಷಣವನ್ನು ೧೦ನೇ ತರಗತಿಯಲ್ಲಿದ್ದಾಗಲೇ ಅರ್ಧಕ್ಕೇ ನಿಲ್ಲಿಸಿ ತಮ್ಮ ಬದುಕನ್ನೇ ನೀರಿನ ಕಾಯಕಕ್ಕೆ ಮುಡುಪಾಗಿಟ್ಟರು. ಇಡೀ ಊರಿನ ಸಾಂಸ್ಕೃತಿಕ ಪರಂಪರೆಗೆ, ನೆಮ್ಮದಿಗೆ ಬೇಲಿಯಾಗಿರಬೇಕಿದ್ದ ತಮ್ಮ ಮನೆತನದ ಹಿರಿಯರೇ ಅದಕ್ಕೆ ಕಂಟಕರಾದದ್ದನ್ನು ಲಕ್ಷ್ಮಣ್‌ಗೆ ಅರಗಿಸಿಕೊಳ್ಳಲಾಗಲಿಲ್ಲ.


ಅವತ್ತು ದೀಪಾವಳಿ, ಊರಿಗೆ ರಜೆಗೆಂದು ಬಂದಿದ್ದ ಲಕ್ಷ್ಮಣ್ ಸಿಂಗ್ ಗಮನ ಸೆಳೆದದ್ದು ಒಂದು ಪುಟ್ಟ ಘಟನೆ. ಹಬ್ಬದ ಸಡಗರದ ನಡುವೆಯೂ ಊರಿನ ಜಮೀನು ಒತ್ತುವರಿಯ ವ್ಯಾಜ್ಯವೊಂದು ಮನೆಯ ಜಗುಲಿ ಹತ್ತಿತ್ತು. ಜಹಗೀರದಾರರಾಗಿದ್ದ ಲಕ್ಷ್ಮಣ್‌ರ ತಂದೆ, ಪಂಚಾಯಿತಿ ನಡೆಸಿ ಒತ್ತುವರಿದಾರ ೨೦೦ ರೂ. ಪರಿಹಾರಧನವನ್ನು ಕೊಡಬೇಕೆಂದು ತೀರ್ಪ ನೀಡಿದರು. ಆತನೇನೋ ಅದನ್ನು ಕೆಲ ದಿನಗಳಲ್ಲೇ ಪಂಚಾಯಿತಿದಾರರಿಗೆ ಕೊಟ್ಟು ಬಿಟ್ಟ. ಆದರೆ ನಿಜವಾದ ಸಂತ್ರಸ್ತನಿಗೆ ತಲುಪಲೇ ಇಲ್ಲ. ದಿನಗಳು ಕಳೆಯುತ್ತಲೇ ಇತ್ತು. ವಾಯಿದೆಯಂತೆ ಪ್ರತಿ ಹತ್ತು ದಿನಗಳಿಗೊಮ್ಮೆ ಊರ ಹಿರಿಯರ ಮನೆ ಬಾಗಿಲಿಗೆ ಆತ ತಿರುಗುವದಾಯಿತೇ ವಿನಃ ಪ್ರಯೋಜನವಾಗಲಿಲ್ಲ. ಇದನ್ನು ಗಮನಿಸಿದ್ದ ಲಕ್ಷ್ಮಣ್ ಸಿಂಗ್ ತಾವೇ ಸ್ವತಃ ಪರಿಹಾರ ಮೊತ್ತವನ್ನು ಸಂತ್ರಸ್ತನಿಗೆ ಕೊಟ್ಟು, ವ್ಯವಸ್ಥೆಯ ವಿರುದ್ಧ ಸಿಡಿದು ನಿಂತರು. ಅವತ್ತು ಊರಿನ ಬದುಕಿನ ಪುನರ್‌ಸ್ಥಾಪನೆಯ ಪಣತೊಟ್ಟು ಹೊರಟರು.


೧೯೭೫ರಲ್ಲಿ ಐವರು ಯುವಕರ ಪುಟ್ಟ ಪಡೆ ಗ್ರಾಮೀಣ ವಿಕಾಸ ನವಯುವಕ ಮಂಡಲ ಲಾಪೋಡಿಯಾದಲ್ಲಿ ಅಸ್ತಿತ್ವಕ್ಕೆ ಬಂದಿತು. ಊರಿನ ಸಮಸ್ಯೆಯ ಬೇರುಗಳನ್ನು ಅರಿಯುವುದು ಮಂಡಲದ ಮೊದಲ ಆದ್ಯತೆಯಾಯಿತು. ಊರೂರು ಸುತ್ತಿದ ಲಕ್ಷ್ಮಣ್‌ಗೆ ನೀರಿನ ನಿರ್ವಹಣೆಯಲ್ಲಿ ಎಡವಿದ್ದೇ ಬದುಕು ಹಾದಿಬಿಟ್ಟಿದ್ದಕ್ಕೆ ಕಾರಣ ಎಂಬ ಅಂಶ ಗಮನಕ್ಕೆ ಬರಲು ಹೆಚ್ಚು ಸಮಯ ಹಿಡಿಯಲಿಲ್ಲ. ಸಮುದಾಯದ ಹಿಡಿತದಲ್ಲಿದ್ದ ನೀರು ನಿರ್ವಹಣಾ ವ್ಯವಸ್ಥೆ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಸರಕಾರಿ ವ್ಯವಸ್ಥೆಯಡಿ ಬಂದತ್ತು. ಅಲ್ಲಿಯೇ ದೋಷ ಇಣುಕಲಾರಂಭಿಸಿದ್ದು. ಇಡೀ ಊರಿನ ಜಲಾಶ್ರಯ ತಾಣವಾಗಿದ್ದ ಅನ್ನ ಸಾಗರ್ ಅದೊಂದು ಮಳೆಗಾಲದಲ್ಲಿ ಒಡ್ಡು ಒಡೆದು ಇಡೀ ಊರಿನ ಬದುಕೇ ಕೊಚ್ಚಿಕೊಂಡು ಹೋಗಿತ್ತು. ಅಂದಿನಿಂದ ಗ್ರಾಮಕ್ಕೆ ಕಾಲಿಟ್ಟ ದಾರಿದ್ರ್ಯವೇ ಇಂದಿಗೂ ತಾಂಡವವಾಡುತ್ತಿದೆ ಎಂಬುದನ್ನು ಮನಗಂಡ ಲಕ್ಷ್ಮಣ್‌ರ ಸಾರಥ್ಯದ ಜಲಯೋಧರ ಪಡೆ ಆ ತಾಲಾಬ್ ಅನ್ನು ಮರು ನಿರ್ಮಿಸುವುದರೊಂದಿಗೆ ಇಡೀ ಜನಜೀವನವನ್ನು ಪುನರ್ ನಿರ್ಮಿಸುವ ಸಂಕಲ್ಪಕ್ಕೆ ಬಂದಿತು.


ಗ್ರಾಮದಲ್ಲಿ ಮೊದಲಿದ್ದ ನೀರ ಸಂಸ್ಕೃತಿಯ ಆಧಾರದಲ್ಲೇ ಜೀವನ ಸಂಸ್ಕೃತಿಯನ್ನು ಚಿಗುರಿಸಬೇಕೆಂಬ ದೃಢ ನಿರ್ಧಾರ ಅವರದ್ದಾಗಿತ್ತು. ಇದಕ್ಕಾಗಿ ಹಳ್ಳಿಹಳ್ಳಿಗಳ ಮನೆಮನೆಯ ಬಾಗಿಲಿಗೆ ಹೋದರು. ಊರವರಲ್ಲಿ ಅದರಲ್ಲೂ ಯುವಕರಲ್ಲಿ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸಿದರು. ನಿಸರ್ಗವನ್ನು ಗೌರವಿಸದೇ ಬದುಕು ಹಸನಾಗಲು ಸಾಧ್ಯವೇ ಇಲ್ಲ. ಶಿಕ್ಷಣವಿಲ್ಲದೇ ಸಮಾಜದ ಸುಧಾರಣೆ ಕಾಣಲು ಆಗುವುದಿಲ್ಲ ಎಂಬ ಸತ್ಯವನ್ನು ಮನವರಿಕೆ ಮಾಡಿಕೊಟ್ಟರು. ಎಂದಿನಂತೆ ವಿರೋಧ ವ್ಯಕ್ತವಾಯಿತಾದರೂ ಮತ್ತೆ ಹಿಂದಿನ ನೆಮ್ಮದಿಯ ಕನಸು ಕಂಡ ಮನಸ್ಸುಗಳೆದುರು ಅದ್ಯಾವುದೂ ಲೆಕ್ಕಕ್ಕೆ ಬರಲಿಲ್ಲ. ಮೊದಲು ಐದಾರು ಗ್ರಾಮಗಳಲ್ಲಿ ಸುತ್ತಿದಾಗ ಇಂಥ ಕಹಿಘಟನೆಗಳು ಅನುಭವಕ್ಕೆ ಬಂದರೂ ಜಲಯೋಧರಲ್ಲಿನ ಪ್ರಾಮಾಣಿಕತೆಯಿಂದ ಅಂಥವು ಪುನರಾವರ್ತನೆ ಆಗಲಿಲ್ಲ. ಪಡೆ ಬೆಳೆಯುತ್ತ ಹೋಯಿತು. ಇಬ್ಬರಿದ್ದ ಪಡೆ ೭೦ಕ್ಕೆ ಏರಿತು. ಎಲ್ಲರೂ ಗುಂಪುಗಳಲ್ಲಿ ಪ್ರತಿದಿನ ಮುಂಜಾವು ಹೊರಟರೆ ಮನೆ ಸೇರುತ್ತಿದ್ದುದು ಹೊತ್ತು ಮುಳುಗಿದ ಮೇಲೆಯೇ. ಹೋದಲ್ಲೆಲ್ಲ ನೀರ ಸಂಸ್ಕೃತಿ ಬಿತ್ತುವ ಮಾತುಗಳಿಂದಲೇ ಬೋಧನೆ ಆರಂಭ. ರಾತ್ರಿ ಮುಂದಿನ ರೂಪುರೇಷೆಯ ಬಗೆಗೆ ಚರ್ಚೆ. ನಡುವೊಂದಿಷ್ಟು ಅಧ್ಯಯನ. ಬೇರೆ ಬೇರೆ ಯಶೋಗಾಥೆಗಳ ಅವಲೋಕನ. ಅಗತ್ಯವೆನಿಸಿದ ಸ್ಥಳಗಳಿಗೆ ಭೇಟಿ. ತಜ್ಞರೊಂದಿಗೆ ಚರ್ಚೆ. ಅದರ ಫಲವಾಗಿ ಸುತ್ತಲಿನ ೪೦ ಗ್ರಾಮಗಳಲ್ಲಿ ಸಂಘಟನೆಗಳಾದವು. ಜಲಯೋಧರ ಪಡೆಯಲ್ಲಿ ಈಗ ೨ ಸಾವಿರ ಸ್ವಯಂ ಸೇವಕರಿದ್ದರು. ಶ್ರಮದಾನದ ಮೂಲಕವೇ ತಾಲಾಬ್ ಅನ್ನು ಕಟ್ಟಿ ನಿಲ್ಲಿಸಲು ನಿರ್ಧಾರವಾಯಿತು. ನಾಲ್ಕು ಸಾವಿರ ಕೈಗಳು ಗುದ್ದಲಿ, ಪಿಕಾಸಿ ಹಿಡಿದು ಸಜ್ಜಾದವು. ಒಡೆದು ಹೋಗಿದ್ದ ಬೃಹತ್ ಅನ್ನ ಸಾಗರದ ಒಡ್ಡು ಸತತ ಮಾನವ ಶ್ರಮದಿಂದ ಮತ್ತೆ ಎದ್ದು ನಿಂತದ್ದು ಜಾದೂ ಆಲ್ಲ. ಅದು ಲಕ್ಷ್ಮಣ್ ಸಿಂಗ್ ಎಂಬ ಪ್ರಬಲ ಇಚ್ಛಾ ಶಕ್ತಿಯುಳ್ಳ ವ್ಯಕ್ತಿಯ ದೂರದೃಷ್ಟಿಯ ಪರಿಣಾಮ.


ಅಲ್ಲಿಂದ ಬದಲಾಗಲಾರಂಭಿಸಿದ ಲಾಪೋಡಿಯಾ ಇಂದು ಸಮುದಾಯ ಆಧಾರಿತ ನೀರು ನಿರ್ವಹಣಾ ವ್ಯವಸ್ಥೆಯಲ್ಲಿ ಜಗತ್ತಿಗೇ ಮಾದರಿಯಾಗಿ ನಿಂತಿದೆ.


‘ಲಾಸ್ಟ್’ಡ್ರಾಪ್: ಸಹಭಾಗಿತ್ವ, ವಿಕಾಸ ಹಾಗೂ ಶಾಂತಿ ಇವು ಲಾಪೋಡಿಯಾ ದ ವೀರ ಜಲಸೇನಾನಿ ಲಕ್ಷ್ಮಣ್‌ಸಿಂಗ್‌ರ ಯಶಸ್ಸಿನ ಮೂಲ ಮಂತ್ರ. ಗಾಂ ಹೇಳಿದ್ದೂ ಇದನ್ನೇ ಅಲ್ಲವೇ ?