ಲಕ್ಷ್ಮಣ್ ಸಿಂಗ್ ಹೇಳುತ್ತ ಹೋಗುತ್ತಿದ್ದರೆ ಒಂದು ರೀತಿಯ ರೋಮಾಂಚನ. ‘ಕೊನೆಗೂ ಅನ್ನ ಸಾಗರವೆಂಬೋ ಅನ್ನ ಸಾಗರವನ್ನು ಕಟ್ಟಿ ನಿಲ್ಲಿಸುವವರೆಗೆ ಅದು ಅಲ್ಲಿನ ನೀರನ್ನು ಮುಟ್ಟಲಿಲ್ಲ. ಮಾತ್ರವಲ್ಲ. ಆ ಗೋಮಾತಾ ತಾಲಾಬ್‌ನ ಹತ್ತಿರವೆಲ್ಲೂ ಸುಳಿಯುತ್ತಿರಲಿಲ್ಲ. ಇವತ್ತು ಗೋಮಾತೆಯನ್ನು ನೀವು ನೋಡಬೇಕು. ಆಕೆಯ ಹರ್ಷ, ಸಂತಸಕ್ಕೆ ಪಾರವೇ ಇಲ್ಲ. ಪ್ರತಿ ದಿನ ೧.೫ ಕಿಮೀ ಉದ್ದದ ತಾಲಾಬ್‌ನ ಸುತ್ತ ೧೫ ಅಡಿ ಎತ್ತರಕ್ಕೆ ನಿರ್ಮಿಸಿದ ದಂಡೆಯ ಮೇಲೆ ಒಂದು ಸುತ್ತು ಬಂದೇ ಬರುತ್ತದೆ. ಅಲ್ಲಿಯೇ ಮೇಯುತ್ತಿರುತ್ತದೆ. ಅಲ್ಲಿನ ಸುಂದರ ಪರಿಸರಕ್ಕೆ ಸಾಕ್ಷಿಯಾಗುತ್ತದೆ. ಸುತ್ತಲಿನ ಹಕ್ಕಿಗಳ ಕಲರವಕ್ಕೆ ಕೊರಳಾಗುತ್ತದೆ. ಬಿಸಿಲಿಗೆ ಬೆವರುತ್ತದೆ. ಹಸಿರಿಗೆ ಮೈಯೊಡ್ಡಿ ಬೆರೆಯುತ್ತದೆ. ನೆರಳಿಗೆ ನಿಂತು ತಣಿಯುತ್ತದೆ. ಮಂದೆಯೊಳಗೊಂದಾಗಿ ಇದ್ದೂ ಮುಂದಾಗಿ ಕಾಣುತ್ತದೆ....ಒಟ್ಟಾರೆ ತಾಲಾಬ್ ತುಂಬಿನಿಂತ ಮೇಲೆ ಆಕೆಯ ಸಂಭ್ರಮ ಇಮ್ಮಡಿಸಿದೆ....’
ಅತ್ಯಂತ ಸೂಕ್ಷ್ಮ, ಸಂವೇದನಾಶೀಲ ಸ್ವಭಾವದ ಆ ಗೀರ್ ತಳಿಯ ಸರಿ ಸುಮಾರು ಮೂರು ತಲೆಮಾರಿನ ಜಾನುವಾರುಗಳು ಶುದ್ಧ ನೀರಿನಿಂದ ವಂಚಿತವಾಗಿತ್ತು. ಲಾಪೋಡಿಯಾದ ಪುರಾತನ ಆ ತಾಲಾಬ್ ಒಡ್ಡು ಕಳಚಿಕೊಂಡು ಗೊಡ್ಡು ಬಿದ್ದ ಮೇಲೆ ಮೂವತ್ತು ವರ್ಷಗಳ ಕಾಲ ಊರಿಗೆ ಊರೇ ನೀರಿನ ಕೊರತೆಯನ್ನು ಎದುರಿಸಿತ್ತು. ಬರಗಾಲ ಬಗಲಲ್ಲಿಟ್ಟುಕೊಂಡೇ ಅವರು ಬದುಕುತ್ತ ಬಂದಿದ್ದರು ಜನ. ಆವತ್ತು ಲಕ್ಷ್ಮಣ್‌ಸಿಂಗ್‌ಗೆ ಆ ಗೋ ಮಾತೆಯ ಗೋಳು ನೋಡಲಾಗಲಿಲ್ಲ. ಅದು ಸಂಕೇತವಾಗಿತ್ತು. ಬಹುತೇಕ ಊರಿನ ಶೇ. ೭೫ರಷ್ಟು ಜೀವ ಸಂಕುಲ ಅದಾಗಲೇ ಪಕ್ಕದ ಜಿಲ್ಲೆಗಳಿಗೆ ವಲಸೆ ಹೋಗಿದ್ದವು. ಯಾರು ಜತೆಗಿದ್ದಾರೋ ಇಲ್ಲವೋ ಎಂಬುದನ್ನು ನೋಡಲಿಲ್ಲ; ಅಂದು ಬೆಳಗ್ಗೆದ್ದವರೇ ಗುದ್ದಲಿ ಕೈಯಲ್ಲಿ ಹಿಡಿದು ತಾಲಾಬ್‌ನತ್ತ ನಡೆದೇ ಬಿಟ್ಟರು ಲಕ್ಷ್ಮಣ್‌ಸಿಂಗ್. ಮೊದಲ ಗುದ್ದಲಿ ಮಣ್ಣು ತಾಲಾಬ್‌ನ ಒಡಲಿಂದ ಹೊರ ಬೀಳುವವರೆಗಷ್ಟೇ ಎಂಥದ್ದೋ ಒಂದು ರೀತಿಯ ಆತಂಕ ಮನೆ ಮಾಡಿತ್ತು. ಕೆಲಸಕ್ಕೆ ಕೈಹಚ್ಚಿದ್ದಷ್ಟೇ, ಆಮೇಲೆ ತಲೆ ಎತ್ತಲೇ ಇಲ್ಲ. ಸ್ವಲ್ಪ ಹೊತ್ತು ಬಿಟ್ಟು ಏನೋ ಗದ್ದಲ ಕೇಳಿ ತಲೆ ಎತ್ತಿದರೆ ಅವರ ಅಕ್ಕ ಪಕ್ಕ ಇನ್ನೂ ಹತ್ತು ಕೈಗಳು ಕೆಲಸ ಮಾಡುತ್ತಿದ್ದವು. ಲಕ್ಷ್ಮಣ್ ಮತ್ತೆ ಕೆಲಸಕ್ಕೆ ತೊಡಗುವ ಮುನ್ನ ಹೇಳಿದ್ದಿಷ್ಟೇ- ‘ಇದು ನಮ್ಮೂರಿನ ಕೆಲಸ. ಇದನ್ನು ನಾವು ಮಾಡದೇ ಇನ್ನಾರೂ ಮಾಡಲು ಸಾಧ್ಯವಿಲ್ಲ. ಇಲ್ಲಿ ನೀರೊಡೆಯುವವರೆಗೆ ಊರಿನ ಜಮೀನುಗಳಲ್ಲಿ ಬೆಳೆಯ ಹೊಡೆಯೊಡೆಯುವುದು ಸಾಧ್ಯ ಇಲ್ಲ. ಅಂಥ ಹಸಿರು ಒಡಮೂಡದ ಹೊರತೂ ನಮ್ಮ ಉಸಿರು ಉಳಿಯಲು ಸಾಧ್ಯವಿಲ್ಲ. ಅದಕ್ಕಾಗಿಯಾದರೂ ಇಲ್ಲಿ ಮತ್ತೆ ತಾಲಾಬ್ ಅನ್ನು ಕಟ್ಟಿ ನಿಲ್ಲಿಸಬೇಕು.’
ಮುಂಜಾವಿನ ಆ ಎಳೆ ಬಿಸಿಲು ಹಿತವಾಗಿ ಮೈದಡವಬೇಕಿತ್ತು. ಆದರೆ ಅದು ರಾಜಸ್ಥಾನ. ಹಾಗೆನ್ನುವುದಕ್ಕಿಂತ ಬರಪೀಡಿತ ರಾಜ್ಯವೊಂದರ ಬರಪೀಡಿತ ಜಿಲ್ಲೆಯ ಅತ್ಯಂತ ಹೀನಾಯ ಸನ್ನಿವೇಶವನ್ನು ನೀರಿನ ವಿಚಾರದಲ್ಲಿ ಎದುರಿಸುತ್ತಿರುವ ಲಾಪೋಡಿಯಾದ ಮುಂಜಾವು ಅದಾಗಿತ್ತು. ಹಾಗಾಗಿ ಎಳೆಯ ಕಿರಣಗಳೂ ಚರ್ಮವನ್ನು ಚುರುಗುಡಿಸುತ್ತಿದ್ದವು. ಅಂಥ ಸುಡು ಬಿಸಿಲು ನೆತ್ತಿಯ ಮೇಲೆ ಬರುವವರೆಗೂ ಅಂದು ಕೆಲಸ ಸಾಗಿತ್ತು. ಅಷ್ಟೇ ದುಡಿದ ದೇಹದಲ್ಲಿ ಮೂಡಿದ ಬೆವರ ಹನಿಗಳು ತಾಲಾಬ್‌ನಲ್ಲಿ ಇಳಿದು ಮುತ್ತಾಗಿ ಕಟ್ಟಿನಿಲ್ಲಲು ಪ್ರೇರಣೆಯಾಯಿತು. ಊರಿನ ಮಂದಿಗೆ ಎರಡು ಪ್ರಮುಖ ಸಂಗತಿಗಳು ಅಲ್ಲಿ ಮನದಟ್ಟಾಗಿತ್ತು. ಉದ್ಯೋಗವಿಲ್ಲದೇ ಬಹುಕಾಲದಿಂದ ಜಡ್ಡುಗಟ್ಟಿಹೋಗಿದ್ದ ಮೈ ಮನಗಳು ಅಂದಿನ ಶ್ರಮದಾನದಿಂದ ಎಂಥದ್ದೋ ಉತ್ಸಾಹದಿಂದ ಪುಟಿಯುತ್ತಿದ್ದವು. ಇದು ಮುಂದುವರಿದರೆ ಇಷ್ಟರಲ್ಲೇ ತಮ್ಮ ಬದುಕು ದಡ ಹತ್ತುವಲ್ಲಿ ಅನುಮಾನ ಉಳಿದಿರಲಿಲ್ಲ. ಕೃಷಿಯೇ ಜೀವಾಳವಾಗಿದ್ದ ಸರಿ ಸುಮಾರು ೨೦೦ ಕುಟುಂಬಗಳ ಆ ಊರಿನ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವೇ ನೀರಾಗಿತ್ತು. ಅದು ತಾಲಾಬ್ ಅನ್ನು ಕಟ್ಟಿ ನಿಲ್ಲಿಸುವುದರೊಂದಿಗೆ ಕೊನೆಗೊಳ್ಳುತ್ತದೆ.
ಮತ್ತೊಂದು ವಿಶೇಷವೆಂದರೆ ತಮ್ಮ ರಾಜ(ವಂಶಸ್ಥ) ಲಕ್ಷ್ಮಣ್ ಸಿಂಗ್ ಸ್ವತಃ ತಾಲಾಬ್‌ನ ಪುನಶ್ಚೇತನಕ್ಕೆ ಟೊಂಕ ಕಟ್ಟಿ ಅಂಗಳಕ್ಕೆ ಇಳಿದಿದ್ದಾರೆ. ಅವರೊಂದಿಗೆ ಕೈ ಜೋಡಿಸುವುದು ಕರ್ತವ್ಯ ಎಂಬುದಕ್ಕಿಂತ ಅದು ಧರ್ಮ. ಎಷ್ಟೋ ವರ್ಷಗಳ ನಂತರ ಮೊದಲಬಾರಿಗೆ ಪ್ರಭುತ್ವ ಊರಿನ ಸಮಸ್ಯೆಯ ಬೇರು ಹುಡುಕಿ ಹೊರಟಿದೆ. ಅದು ಪರಿಹಾರ ಕಾಣುವ ಆಶಾ ಕಿರಣವೂ ಮೂಡಿದೆ. ಈ ಸಂದರ್ಭದಲ್ಲಿ ನಾವು ಜತೆಗೂಡದಿದ್ದರೆ ಇನ್ನೆಂದಿಗೂ ಊರು ಉದ್ಧಾರವಾಗಲು ಸಾಧ್ಯವೇ ಇಲ್ಲ ಎಂಬ ಸಂಗತಿ ಮನವರಿಕೆಯಾಗುತ್ತಿದ್ದಂತೆ ಒಬ್ಬೊಬ್ಬರೇ ಬಂದು ಸೇರಿಕೊಳ್ಳತೊಡಗಿದರು. ಅಂದು ಸಂಜೆ ಊರ ಮುಂದಿನ ಕಟ್ಟೆಯಲ್ಲಿ ಲಕ್ಷ್ಮಣ್ ಪುಟ್ಟ ಭಾಷಣವನ್ನು ಮಾಡಿದರು-‘ನಾವು ಕೃಷಿಯನ್ನೇ ಬದುಕಾಗಿ ಸ್ವೀಕರಿಸಿದವರು. ಅದಿಲ್ಲದೇ ನಮಗೆ ಬೇರೆ ದಿಕ್ಕಿಲ್ಲ. ಪೇಟೆಗೆ ಹೋಗಿ ಉದ್ಯೋಗ ಮಾಡಲು ಶಿಕ್ಷಣ ಬೇಕೇಬೇಕು. ಊರಲ್ಲಿದ್ದು ಉತ್ತಿಬಿತ್ತಲು ನೀರು ಬೇಕು. ಶಿಕ್ಷಣ ನಮಗೆ ಮರೀಚಿಕೆಯಾಗಿರುವುದು ಗೊತ್ತೇ ಇದೆ. ಅಂಥ ಆರ್ಥಿಕ ಶಕ್ತಿಯೂ ನಮ್ಮಲ್ಲಿ ಉಳಿದಿಲ್ಲ. ಅದನ್ನು ಗಳಿಸಿಕೊಳ್ಳಬೇಕಾದರೆ ನಾವು ಮೊದಲು ಕೃಷಿಯಲ್ಲಿ ತೊಡಗಿಕೊಳ್ಳುವುದು ಅನಿವಾರ್ಯ. ಅದಕ್ಕೆ ಅಗತ್ಯ ನೀರನ್ನು ಸೃಷ್ಟಿಸಿಕೊಳ್ಳುವುದು ನಮಗೆ ಗೊತ್ತಿದೆ. ಅದು ನಮ್ಮಿಂದ ಸಾಧ್ಯವೂ ಇದೆ. ಅದಿಲ್ಲದಿದ್ದರೆ ನಮ್ಮ ಬಡತನವನ್ನು ಲೇವಾದೇವಿಗಾರರು ಮತ್ತಿತರ ಪಟ್ಟಭದ್ರ ಹಿತಾಸಕ್ತಿಗಳು ದುರುಪಯೋಗಪಡಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಮಾತ್ರವಲ್ಲ ಈಗಾಗಲೇ ಒತ್ತೆ ಇಟ್ಟ ನಮ್ಮ ಜಮೀನುಗಳು ಮುಂದೊಂದು ದಿನ ಹಣವಂತರ ಪಾಲಾಗುತ್ತದೆ. ಅವತ್ತು ನಮ್ಮ ಜಮೀನಿನಲ್ಲಿ ನಾವೇ ಕೂಲಿಗಳಾಗಿ ಜೀತ ಮಾಡಬೇಕಾದ ಪರಿಸ್ಥಿತಿ ತಲೆದೋರುತ್ತದೆ. ಯೋಚಿಸಿ ನೋಡಿ, ಉತ್ತಮ ಬದುಕು ಬೇಕಿದ್ದರೆ ನಮ್ಮೊಂದಿಗೆ ಕೈಜೋಡಿಸಿ. ನಾವು ಕಟ್ಟುತ್ತಿರುವುದು ಕೇವಲ ಅನ್ನ ಸಾಗರವನ್ನಲ್ಲ. ಅದು ಜೀವ ಸಾಗರ. ಅದುಳಿದರೆ ಊರು ಉಳಿದೀತು. ಊರುಳಿದರೆ ಎಲ್ಲವೂ ಉಳಿದುಕೊಂಡೀತು. ಆಯ್ಕೆ ನಿಮಗೆ ಬಿಟ್ಟದ್ದು.’
ಅಷ್ಟು ಹೇಳಿ ಮನೆಗೆ ಹೊರಟ ಲಕ್ಷ್ಮಣ್‌ರನ್ನು ಮೂವತ್ತು ಮಂದಿಯ ಸಣ್ಣದೊಂದು ಪಡೆಯೇ ಹಿಂಬಾಲಿಸಿತ್ತು. ಅವತ್ತು ರಾತ್ರಿ ಯಾರೊಬ್ಬರೂ ಸರಿಯಾಗಿ ನಿದ್ರೆ ಮಾಡಲಿಲ್ಲ. ಅವತ್ತು ಅಂತಲೇ ಅಲ್ಲ. ಮುಂದಿನ ಒಂದು ತಿಂಗಳ ಕಾಲ ನಿದ್ದೆ ಮಾಡಲಿಲ್ಲ. ಪ್ರತಿ ದಿನ ಮುಂಜಾವು ಹತ್ಯಾರಗಳೊಂದಿಗೆ ಲಕ್ಷ್ಮಣ್ ಕೆರೆಯಂಗಳಕ್ಕೆ ಬಂದು ನಿಲ್ಲುವುದರೊಳಗೆ ಸ್ವಯಂಸೇವಕರ ದಂಡು ಅಲ್ಲಿ ನೆರೆದಿರುತ್ತಿತ್ತು. ಮಧ್ಯಾಹ್ನದವರೆಗೆ ದುಡಿತ. ತಾಲಾಬ್‌ನಲ್ಲಿ ತುಂಬಿದ್ದ ಹೂಳು ಹೊರಬಿದ್ದು ಸುತ್ತಲೂ ಏರಿಯಾಗಿ ಪೇರಿಸತೊಡಗಿತ್ತು. ಮಧ್ಯಾಹ್ನದ ನಂತರ ಮತ್ತೆ ಚರ್ಚೆ, ಜಾಗೃತಿ....ನಡೆದವು. ಮರು ದಿನ ಮತ್ತೊಂದಿಷ್ಟು ಜನ ಬಂದು ಸೇರಿಕೊಳ್ಳುತ್ತಿದ್ದರು. ಹೀಗೆಯೇ ಸಾಗಿತ್ತು.
ಅಲ್ಲಿ ಕೆಲಸ ನಡೆದಿರುವಾಗ ಇತ್ತ ಜನ ಮಾತನಾಡಿಕೊಳ್ಳತೊಡಗಿದರು. ಸುದ್ದಿ ಸುತ್ತಲೂ ಜನರಿಂದ ಜನರ ಕಿವಿಗೆ ಹಬ್ಬತೊಡಗಿತ್ತು. ಯೋಜನೆಯಂತೆ ಪ್ರತಿ ದಿನ ಕನಿಷ್ಠ ೬೦ ಸ್ವಯಂ ಸೇವಕರು ನಿರಂತರ ದುಡಿದರೆ ಮಾತ್ರ ಅಂದುಕೊಂಡಂತೆ ತಾಲಾಬ್ ನೀರಿನಿಂದ ತುಂಬಿಕೊಳ್ಳುವುದು ಸಾಧ್ಯವಿತ್ತು. ಅದಕ್ಕೆ ಹೆಚ್ಚು ದಿನ ತಾಲಾಬ್‌ನ ನೆಪದಲ್ಲಿ ನೀರೆಚ್ಚರ ಮೂಡಿಸುವಲ್ಲಿ ಲಕ್ಷ್ಮಣ್ ಯಶಸ್ವಿಯಾಗಿದ್ದರು. ಅದು ಅಲ್ಲಿಗೇ ನಿಲ್ಲಲಿಲ್ಲ. ಅನ್ನಸಾಗರದ ಬಳಿಕ ದೇವಸಾಗರ. ಅದರ ನಂತರ ಫೂಲ್ ಸಾಗರ...ಹೀಗೆ ಮೂರು ಬೃಹತ್ ತಾಲಾಬ್‌ಗಳು ಲಾಪೋಡಿಯಾದ ಮೂರು ದಿಕ್ಕಿನಲ್ಲಿ ನಳನಳಿಸತೊಡಗಿದ್ದವು. ಕೃಷಿಗೊಂದು, ಪೂಜಾ ಕೈಂಕರ್ಯ ಸೇರಿದಂತೆ ಧಾರ್ಮಿಕ ವಿವಿಧಾನಗಳಿಗೊಂದು, ನಿಸರ್ಗದ ಪ್ರಾಣಿ-ಪಕ್ಷಿಗಳಂಥ ಇತರ ಜೀವರಾಶಿಗಳಿಗೊಂದು ಹೀಗೆ ಮೂರು ತಾಲಾಬ್‌ಗಳೂ ಅನ್ವರ್ಥಕಗೊಂಡವು. ೩೦೦ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಹಸಿರು ಚಿಗುರಲಾರಂಭಿಸಿದ್ದೇ ತಡ ಗುಳೇ ಹೋಗಿದ್ದ ಕುಟುಂಬಗಳು ಒಂದೊಂದಾಗಿ ಮರಳಲಾರಂಭಿಸಿದವು; ಜತೆಗೆ ವಲಸೆ ಹೋಗಿದ್ದ ಜೀವರಾಶಿಗಳೂ ಸಹ. ಮತ್ತಲ್ಲಿ ಮೂಡಿತ್ತು ಹಿಂದಿನ ಕಲರವ. ಮರಳಿತ್ತು ಲಾಪೋಡಿಯಾದ ವೈಭವ. ಆ ಗೋ ಮಾತೆ ಮನದಲ್ಲಿ ಯಾವ ಕಳಂಕವಿಲ್ಲದೇ ನೆಮ್ಮದಿಯಿಂದ ದೇವ ಸಾಗರವನ್ನೊಮ್ಮೆ ಪ್ರದಕ್ಷಿಣೆ ಮಾಡಿ, ಅನ್ನ ಸಾಗರವನ್ನೊಮ್ಮೆ ಅವಲೋಕಿಸಿ ಫೂಲ್(ಹೂವು) ಸಾಗರಕ್ಕೆ ಬಂದು ಪ್ರತಿ ದಿನ ದಾಹ ತೀರಿಸಿಕೊಳ್ಳುತ್ತಿದ್ದಾಳೆ. ಅದರ ಫಲವಾಗಿ ಇಂದು ಲಾಪೋಡಿಯಾದಲ್ಲಿ ನೀರಿನದಷ್ಟೇ ಅಲ್ಲ, ಹಾಲಿನ ಹೊಳೆಯೂ ಹರಿಯುತ್ತಿದೆ.
‘ಲಾಸ್ಟ್’ ಡ್ರಾಪ್: ಲಕ್ಷ್ಮಣ್ ಸಿಂಗ್ ನಿರ್ಮಿಸಿದ ಮೂರು ತಾಲಾಬ್‌ಗಳು ಅವರು ನಂಬಿದ ಸಹಭಾಗಿತ್ವ, ವಿಕಾಸ ಮತ್ತು ಶಾಂತಿ- ಈ ಮೂರು ತತ್ತ್ವಗಳ ಪ್ರತೀಕವಾದದ್ದು ಕಾಕತಾಳೀಯವಲ್ಲ.
No comments:
Post a Comment